‘ಅಮ್ಮ’ ನನ್ನ ಪಾಲಿಗೆ ಮಹತ್ತರ ಕ್ಷಮತೆ. ನನ್ನೆಲ್ಲಾ ನಡೆಗಳ ಹಿಂದಿನ ಎಲುಬು. ನನ್ನ ಅಮ್ಮ, ಅಂಗನವಾಡಿ ಟೀಚರ್. ಹಾಗಾಗಿ, ನನ್ನ ಅಮ್ಮನೇ ನನಗೆ ಮನೆಯ ಮೊದಲ ಗುರುವೂ ಹೌದು, ಶಾಲೆಯ ಮೊದಲ ಟೀಚರ್ ಕೂಡ ಹೌದು. ನನಗೆ ಅಮ್ಮನನ್ನು ಎರಡು ಪಾತ್ರಗಳಲ್ಲಿ ನೋಡಿದ ಅನುಭವವಿದೆ.
ನನ್ನ ಬೆಳವಣಿಗೆಯಲ್ಲಿ ಅಮ್ಮನ ಪ್ರಭಾವ ದೊಡ್ಡದಿದೆ. ನಾನು ಪತ್ರಿಕೋದ್ಯಮದಲ್ಲಿ ಬದುಕು ಕಂಡುಕೊಳ್ಳಲು ಕನಸು ಕಂಡು ಹೊರಟವ. ಬಾಲ್ಯದಲ್ಲಿರುವಾಗಲೇ ಓದುವುದಕ್ಕೆ ಆಸಕ್ತಿ ಹುಟ್ಟಿಸಿದ್ದು ಅಮ್ಮ. ದಿನನಿತ್ಯ ಅಮ್ಮ ಸುದ್ದಿ ಪತ್ರಿಗಳನ್ನು ಹಿಡಿದು ತಾಸುಗಟ್ಟಲೆ ಕೂರುತ್ತಿದ್ದದ್ದು, ವಾರಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಬರುತ್ತಿದ್ದ ಕಥೆ, ಕಾದಂಬರಿಗಳನ್ನು ಬಿಡದೇ ಓದುತ್ತಿದ್ದದ್ದನ್ನು ನನ್ನ ಬಾಲ್ಯದ ಕಣ್ಣುಗಳು ಕಂಡಿದ್ದು ನೆನಪಿದೆ. ಹಾಗಾಗಿ, ನನ್ನ ಶಾಲಾ ದಿನಗಳಿಂದಲೇ ಪತ್ರಿಕೆಗಳ ಓದುವ ಚಟಕ್ಕೆ, ಕಥೆ, ಕಾದಂಬರಿಗಳ ಪುಸ್ತಕಗಳ ಓದುವ ಹುಚ್ಚಿಗೆ ಅಮ್ಮನೇ ಮೂಲ ಸ್ಫೂರ್ತಿ. ಆದ್ದರಿಂದ, ನನ್ನಮ್ಮ ನನಗೆ ದೈತ್ಯ ಶಕ್ತಿ.
ಬಂದ ಕಷ್ಟಗಳನ್ನು, ಎದುರಾದ ಕಷ್ಟಗಳನ್ನು ಒಂದಿನಿತೂ ತೋರಿಸಿಲ್ಲ. ಎಷ್ಟಿದ್ದರೂ ಅದೇ ಅಮ್ಮನ ಮಗ ಅಲ್ಲವೇ..?! ಅವಳ ಒಳನೋವು ಗೊತ್ತಿದೆ. ಆ ಎಲ್ಲಾ ನೋವುಗಳನ್ನು ದೂರ ಮಾಡುವ ಪ್ರಯತ್ನದಲ್ಲಿದ್ದೇನೆ. ನನಗೋ, ಅಮ್ಮ ಅಂದರೇ, ನನ್ನೆದೆಯ ಶಕ್ತಿಯಾಗಿ, ಬದುಕಿನ ಉಕ್ತಿಯಾಗಿ ಜೊತೆಗಿರುವ ಧೀ ಶಕ್ತಿ.
-ಶ್ರೀರಾಜ್ ವಕ್ವಾಡಿ


No comments:
Post a Comment