ನಾನೇನೂ ಪ್ರತಿಕ್ರಿಯಿಸಿಲ್ಲ. ಆಗ ರಾತ್ರಿಯ ಬಿಸಿಲಿನ ಝಳ ಹೆಚ್ಚಿತ್ತು. ಒಬ್ಬಾಕೆ ತಲೆಯ ಮೇಲೊಂದು ಬಿಳಿ ಚೀಲದ ದೊಡ್ಡದೊಂದು ಮೂಟೆ. ಕಂಕುಳಲ್ಲೊಂದು ಮಗು. ಮತ್ತಿಬ್ಬರು ಎಳೆಯ ಹುಡುಗಿಯರು ಆಕೆಯ ಜೊತೆಗೆ ಹೆಜ್ಜೆಯಿಡುತ್ತಿದ್ದಾರೆ. ಆ ಹೆಣ್ಮಕ್ಕಳಿಗೆ ಬಹುಶಃ ಹತ್ತು ಹನ್ನೆರಡು ವರ್ಷಗಳ ಆಸು ಪಾಸು ಇರಬೇಕು. ಈಕೆಗೊಂದು 38-4೦ ವರ್ಷಗಳಿರಬೇಕು.
ದೂರ ಹೊರಟಿದ್ದೀರಿ..?
ಊರಿಗೆ. ಆ ಧ್ವನಿಯಲ್ಲಿ ಆಯಾಸವಿತ್ತು.
ಯಾವ ಊರಿಗೆ..?
‘ಎಲ್ಲಿಂದ ಇಲ್ಲಿಗೆ ಬಂದಿದ್ದೇನೋ ಅಲ್ಲಿಗೆ..!’ ಇಲ್ಲಿ, ಆಕೆಯ ಧ್ವನಿ ನಿಶ್ಯಬ್ದದ ಕೂಗಿನಂತಿದ್ದಿತ್ತು. ಹೌದು, ಆಕೆ ಎಲ್ಲೋ ಆಕೆಯ ಊರಿಗೆ ಹೊರಟಿದ್ದಾಳೆ. ಜೊತೆಗೆ ಮೂರು ಹೆಣ್ಮಕ್ಕಳು. ಗಂಡ ಇಲ್ಲ. ಮೂರು ಹೆಣ್ಣು ಮಕ್ಕಳನ್ನು ಕೊಟ್ಟು ಸತ್ತು ಹೋಗಿದ್ದಾನೆ. ಮುಂದೆ ಹೊರಟು ಹೋದಳು.
ಕಾಲಂಶದ ದಾರಿ ಕೂಡ ಮುಗಿದಿರಲಿಲ್ಲ.
ಅಷ್ಟೊತ್ತಿಗಾಗಲೇ, ಆಕೆ ಬೆಂದು ಕರಗಿದ್ದಳು. ರಸ್ತೆ ಪಕ್ಕಗಳಲ್ಲಿ ಬಾಯ್ತೆರೆದು ಮಲಗಿದ್ದ ಚರಂಡಿಗಳೂ ಕೂಡ ಮಾತಾಡಲಿಲ್ಲ. ಗಿಡ ಮರಗಳು ತಂಪೆರೆಯಲಿಲ್ಲ. ಆಕೆಯ ಪಾಲಿಗೆ ನಿಜಕ್ಕೂ ಭಾರವಾದದ್ದೇನನ್ನೋ ಮೇಲಿಂದ ಯಾರೋ ಜಾರಿಸಿ ಬಿಟ್ಟಂಗಾಗಿತ್ತು.
ಒಡೆದ ಪಾದ, ಒಣ ಹೊಟ್ಟೆ. ಬೆವರಲ್ಲಿ ಮಿಂದ ಮೈ.
ಮುಂದೆ ಸಾಗುತ್ತಿದ್ದಾಳೆ.
ಏನೇನೂ ಇದ್ದಿರಲಿಲ್ಲ ಆಕೆಯಲ್ಲಿ. ಊರು ಸೇರಬೇಕೆಂಬುವುದೊಂದೇ, ಅವಳ ಎದೆಯಲ್ಲಿ ಅವಿತಿತ್ತು. ಹಾಗಾಗಿಯೇ, ಅವಳ ಪಾದಗಳು ಸುಟ್ಟು ಗಾಯವಾಗಿದ್ದರೂ, ಚುರುಕು ಹೆಜ್ಜೆಗಳನ್ನಿಡುತ್ತಿದ್ದವು.
ಆಕೆಯದ್ದೋ, ಗಾಳಿ ನುಂಗಿದ ಹೊಟ್ಟೆ. ಅವಳ ಬದುಕೋ, ಏನಿಲ್ಲದ ಶೂನ್ಯ. ಹಗಲು, ರಾತ್ರಿಗಳೆನ್ನದೆ ನಡೆದಿದ್ದಳು. ಊರಿನ್ನೂ ಬರಲಿಲ್ಲ. ಮಣ್ಣಾದ ಬದುಕು, ಉಳಿದಿದ್ದು ದೇಹವೊಂದೆ..! ‘ಪ್ಯಾರ್ ದೇಶ್ ವಾಸಿಯೋ’ ಅಂತಂದವರು ಮುಖ ತೋರಿಸಲಿಲ್ಲ. ಭ್ರಮೆ ಹುಟ್ಟಿಸಿ ಹೋದರು. ಆಕೆ ಇನ್ನೂ ದಾರಿಯಲ್ಲೇ ಇದ್ದಾಳೆ.
ಮೇಲೆ ಕಾಣುವ ಪದರವನ್ನೇ ‘ವಾಸ್ತವ’ ಅಂದುಕೊಂಡಿರುವವರಿಗೆ ಬದುಕೆಂದರೇ, ಹೇಗೆ ಗೊತ್ತಿರುವುದಕ್ಕೆ ಸಾಧ್ಯ..?
ಅದೆಷ್ಟೋ ಕ್ಲಿಷ್ಟ ಬದುಕು ಇನ್ನೂ ಕೂಡ ‘ಗೋಡೆ’ಯಾಚೆಗಿದೆ. ಜೊಡ್ಡು ಪಾಚಿ ಕೊಳಚೆಯಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವವರು, ಸಿಮೆಂಟ್ ನುಂಗಿ ನಡೆದು ಸಾಗುತ್ತಿರುವ ಲಕ್ಷ ಲಕ್ಷ ಪಾದಗಳ ಬದುಕುಗಳು ಎಂದಿಗೂ ನಿಕೃಷ್ಟ.
ಮತ್ತದೇ, ನೋಟದಲ್ಲಿ ಉರಿ ಸೂಸುತ್ತಿದೆ.
ಬದುಕುವುದೆಂದರೇ, ನಡೆದು ನಡೆದು ಒಣಗಿ ಮಣ್ಣಾಗುವುದು.
-ಶ್ರೀರಾಜ್ ವಕ್ವಾಡಿ

ಬಹಳ ಚೆನ್ನಾಗಿದೆ ಬರಹ
ReplyDeleteಥ್ಯಾಂಕ್ಯೂ ಸೋ ಮಚ್
Delete