Saturday, May 16, 2020

ವಾವ್ಹ್ ಅಂತೀರಿ.. | ಇಲ್ಲಿ ಎಲ್ಲವೂ ರೋಚಕ..!




ಇಲ್ಲಿ ಎಲ್ಲವೂ ರೋಚಕ ಮತ್ತು ಇಂಟ್ರೆಸ್ಟಿಂಗ್..!

ಹಾಗಂತ ನಾನು ಸ್ಪೆಷಲ್ ಆಗಿ ಹೇಳ್ಬೇಕಂತಿಲ್ಲ. ನಿಮಗೆ ಗೊತ್ತಿದೆ. ಬದುಕನ್ನು ಇಷ್ಟಿಷ್ಟೇ ನೋಡಿ ಸ್ವೀಕರಿಸಿದ ಮಹತ್ತರವಾದ ಅನುಭವ ನಿಮ್ಮ ಜೊತೆಗಿದೆ. ತೆರದುಕೊಳ್ಳುವಾಗ ಕೆಲವೊಂದಿಷ್ಟು ಒಮ್ಮೊಮ್ಮೆ ಒಡೆದು ಚೂರು ಚೂರಾಗಿ ಹೋಗುತ್ತವೆ. ಕೆಲವೊಮ್ಮೆ ಬಿಚ್ಚಿಕೊಳ್ಳುವುದೇ ಇಲ್ಲ. ಇನ್ನೊಮ್ಮೊಮ್ಮೆ ಆರಂಭವೇ ಅಂತ್ಯವಾಗುತ್ತದೆ.

ಅದಕ್ಕೆ ಹೇಳಿದ್ದು, ಇಲ್ಲಿ ಎಲ್ಲವೂ ರೋಚಕ ಅಂತ.

ನಿರೀಕ್ಷಿಸುವುದು ಮತ್ತು ಬಂದವುಗಳನ್ನು ಒಪ್ಪಿಕೊಳ್ಳುವುದು ಕಷ್ಟ ಅನ್ನಿಸಿದರೂ ಸಹ್ಯ.
ಸಮಾಧಾನವಾಗಿ ಅವುಗಳು ಒತ್ತಾಯಿಸುತ್ತವೆ. ನಾವು ದಕ್ಷತೆಯಲ್ಲಿ ಒಳಗೊಳ್ಳುತ್ತೇವೆ.

ಆಮೇಲಿನದ್ದೆಲ್ಲಾ ಇಂಟ್ರೆಸ್ಟಿಂಗ್ ಅಥವಾ ಅನ್‌ಇಂಟ್ರೆಸ್ಟಿಂಗ್.

ಬದುಕು, ನಮಗೆ ಕಾಣದ್ದನ್ನು ಮಾತ್ರ ಮುಂದಿಡುತ್ತದೆ. ನಾವು ಕಂಡದ್ದನ್ನೂ, ಕಾಣದೇ ಇರುವುದನ್ನೂ ಅನುಭವಿಸುತ್ತೇವೆ. ‘ಕಾಣುವುದರೊಳಗೆ ಕಾಣದೇ ಇರುವುದು, ಒಮ್ಮೆ ಕಂಡು ಮತ್ತೊಮ್ಮೆ ಕಾಣುವಷ್ಟರೊಳಗಾಗಿ ಕಾಣೆಯಾಗುವುದು’ ಎಲ್ಲಾ ಇಲ್ಲಿ ನಡೆದು ಹೋಗುವ, ಆಗಿಸಿಕೊಳ್ಳುವ, ತಂತಾನೆ ಮುಗಿದು ಹೋಗುವ ಭಾಗ.

ಭೋರ್ಗರೆಯುವ ಸಮುದ್ರದಲ್ಲಿ ಒಮ್ಮೊಮ್ಮೆ ಸಣ್ಣ ಅಲೆಗಳು ಕಿನಾರೆಗೆ ಪಪ್ಪಿ ಕೊಟ್ಟು ಹೋದರೇ, ಮತ್ತೊಮ್ಮೊಮ್ಮೆ ದೊಡ್ಡ ಅಲೆಗಳು ಬಡಿದು ಹೋಗುತ್ತವೆ.

ಬದುಕೆಂದರೇ, ಬಲಿಯಾಗುವ ಮತ್ತು ಪಾಲ್ಪಡೆಯುವ ಪಾತ್ರ.

ಏರಿಳಿತಗಳ ಪ್ರತಿ ಕಿರು ಮೌನದ ನಂತರ, ನೀವು ಎದುರು ಬಂದು ಮಾತಾಡಲಾರಂಭಿಸುತ್ತೀರಿ, ಖಾಲಿ ಹಾಳೆ ಹಿಡಿದು ನಿಮ್ಮ ಮೂರನೇ ಕಣ್ಣಿಗೆ ಕಂಡದ್ದನ್ನು ಚಿತ್ರಿಸುತ್ತೀರಿ. ವಾವ್ಹ್ ಅಂತೀರಿ.

ಯಾಕೆ ಗೊತ್ತಾ..? ಅಲ್ಲೊಂದು ಹುಣ್ಣಿಮೆ ಹೊಳೆಯುತ್ತಿರುತ್ತದೆ.

‘ನಡೀರಿ ಮುಂದಕ್ಕೆ.. ಕಲ್ಲು-ಮುಳ್ಳುಗಳು ಬದುಕಲ್ಲಿರದೇ, ನೈಸ್ ರೋಡ್ನಲ್ಲಿರುತ್ತದೇನ್ರೀ..?’ ಅಂತ ಗಟ್ಟಿ ಸ್ವರ ಮಾಡಿ ಧೈರ್ಯ ತುಂಬುವವರು ಬೇಕಷ್ಟೇ.
-ಶ್ರೀರಾಜ್ ವಕ್ವಾಡಿ

3 comments: