ಹೌದು, ಇಂದು ಮೇ 1, ಕಾರ್ಮಿಕರ ದಿನಾಚರಣೆ. ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ಲೇಬರ್ ಡೆ, ಮೇ ಡೆ, ವರ್ಕರ್ಸ್ ಡೆ ಎಂದೂ ಹೇಳಲಾಗುತ್ತದೆ.
ಸಮಾಜ ಹಾಗೂ ದೇಶದ ಆರ್ಥಿಕ ಸಮಸ್ಥಿತಿಗೆ ಕಾರ್ಮಿಕರ ಕೊಡುಗೆ ಅಪಾರವಾದದ್ದು. ಪ್ರತಿ ಹಳ್ಳಿ ಹಳ್ಳಿಯ ಗ್ರಾಮಗಳ ಆದಿಯಾಗಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕರ ದುಡಿಮೆ ಶಕ್ತಿ ಅತ್ಯವಶ್ಯಕ. ವಿಜ್ಞಾನ ಮತ್ತು ತಂತ್ರಜ್ಞಾನ ಅದೆಷ್ಟು ಮುಂದುವರೆದರೂ ಕಾರ್ಮಿಕ ಶಕ್ತಿ ಇಲ್ಲದೇ ಅವೆಲ್ಲವೂ ಶೂನ್ಯ ಎನ್ನುವುದು ಅಪ್ಪಟ ನಿಜ. ಆರ್ಥಿಕ ಪ್ರಗತಿಯ ಉನ್ನತಕ್ಕೇರಿಸಲು ಕಾರ್ಮಿಕರೇ ಪ್ರಮುಖ ಕಾರಣರಾಗುತ್ತಾರೆ.
ಪ್ರಪಂಚದ ಪ್ರತಿ ದೇಶಗಳ ಜನಸಂಖ್ಯಾ ಆಧಾರದ ಮೇಲೆ ಶೇಕಡಾ 60 ರಿಂದ 65 ರಷ್ಟು ಕಾರ್ಮಿಕ ವರ್ಗ ಕಂಡು ಬರುತ್ತದೆ ಎಂದು ಅಧ್ಯಯನವೊಂದು ತಿಳಿಸುತ್ತದೆ. ಮತ್ತು ಇಂತವರನ್ನು ಅನಿರ್ದಿಷ್ಟಾವಧಿವರೆಗೂ ದುಡಿಸಿಕೊಳ್ಳುವುದಕ್ಕೆ ಬಂಡವಾಳ ಶಾಹಿಗಳು ಎಂಬ ವರ್ಗವೊಂದಿದೆ.
ಕಾರ್ಮಿಕರ ದುಡಿಯುವ ಅವಧಿಯನ್ನು ಬೇಡಿಕೆಯಾಗಿಟ್ಟುಕೊಂಡು ಕಾರ್ಮಿಕರು ಅಮೇರಿಕದ ಚಿಕಾಗೋ ನಗರದಲ್ಲಿ ಮೇ 1. 1886 ರಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಂಡವಾಳ ಶಾಹಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದರು. ಇದರ ಫಲವಾಗಿ ನ್ಯಾಯಯುತವಾದ ಅವಧಿಯನ್ನು ಸೂಚಿಸಲಾಯಿತು. ಹಾಗಾಗಿ ಮೇ 1ನೇ ತಾರೀಕನ್ನು ಕಾರ್ಮಿಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ ಕಾರ್ಮಿಕರ ಸಂಘಟಿತ ಕಾರ್ಮಿಕರು, ಅಸಂಘಟಿತ ಕಾರ್ಮಿಕರೆಂದು ವಿಂಗಡಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದಡಿ ದುಡಿಯುವ ಕಾರ್ಮಿಕರಾಗಿದ್ದಾರೆ. ದೇಶದಲ್ಲಿ ಇದುವರೆಗೆ ಕೇಲವ 12-15 ರಷ್ಟು ಮಂದಿ ಮಾತ್ರ ಸಂಘಟಿತ ಕಾರ್ಮಿಕರು ಎಂದು ಗುರುತಿಸಿಕೊಂಡಿದ್ದಾರೆ. ಇನ್ನುಳಿದ 85% ದಷ್ಟು ಮಂದಿ ಅಸಂಘಟಿತ ಕಾರ್ಮಿಕರು. ಅಂತವರಿಗೆ ದಿನಗೂಲಿಯೇ ಆಶ್ರಯ. ತೀವ್ರ ಶೋಷಣೆ ಇವರ ಪಾಲಿಗೆ ಎಂದಿಗೂ ಇರುವ ವಿಷಯ. ಇನ್ನೊಂದೆಡೆ, ಆಶಾ ಕಾರ್ಯಕತೆಯರನ್ನು, ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತೆಯರನ್ನು, ಸಹಾಯಕಿಯರಿಗೆ, ಕಾರ್ಮಿಕರ ಸ್ಥಾನಮಾನ ನೀಡದೇ ಪುಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಯಾವ ವಿನಾಯಿತಿ ಇವರ ಪಾಲಿಗಿಲ್ಲ. ಅಸಂಘಟಿತ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು 1949ರಲ್ಲಿ ಕನಿಷ್ಟ ಕೂಲಿ ಕಾಯ್ದೆ ಜಾರಿಗೆ ತಂದಿದ್ದರೂ ಕೂಡ, ಪರಿಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ.
ದೇಶದ ಕಾರ್ಪೋರೇಟ್ ಮನೆತನಗಳಿಗೆ ತೆರಿಗೆ ವಿನಾಯಿತಿ ನೀಡುವ ಸರ್ಕಾರ, ಕಾರ್ಮಿಕರು ಮತ್ತು ಜನ ಸಾಮಾನ್ಯರ ನಿತ್ಯದ ಬವಣೆಗಳಾದ ಬೆಲೆಏರಿಕೆ, ಆರೋಗ್ಯ, ಶಿಕ್ಷಣ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎನ್ನುವುದೇ ವಿಪರ್ಯಾಸ.
ಕಳೆದ ಹತ್ತು ವರ್ಷಗಳಿಂದ ಕಾರ್ಪೋರೇಟ್ ಉದ್ಯಮಿಗಳಿಗೆ ಸುಮಾರು 60 ಲಕ್ಷ ಕೋಟಿಯಷ್ಟು ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ ಎನ್ನುವುದು ವರದಿ ಹೇಳುತ್ತದೆ. ಆದರೇ ದುಡಿಯುವ ವರ್ಗ ಸರ್ಕಾರಕ್ಕೆ ಕಾಣುವುದಿಲ್ಲ. ಮತ್ತೊಂದೆಡೆ 3.05 ಲಕ್ಷ ರೈತರು ತಾವು ಮಾಡಿಕೊಂಡ ಸಣ್ಣ ಸಾಲವನ್ನೂ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವೆಲ್ಲದಕ್ಕೂ ಈ ಹಿಂದೆ ಆಡಳಿತದಲ್ಲಿದ್ದ ಸರ್ಕಾರ ಮತ್ತು ಈಗ ಆಡಳಿತದಲ್ಲಿರುವ ಸರ್ಕಾರವೇ ನೇರ ಕಾರಣ. ಆರ್ಥಿಕ ನೀತಿಗಳಲ್ಲಿ ಯಾವುದೇ ಬದಲಾವಣೆಗಳ ವ್ಯತ್ಯಾಸಗಳು ಇಲ್ಲದಿರುವುದೇ ಕಾರಣ.
ಇಂತಹ ಶೋಷಣೆ ನಿಲ್ಲಿಸಲು ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಸದಾ ಶ್ರಮಿಸಬೇಕು. ಧನದಾಹಿ ವ್ಯವಸ್ಥೆಯನ್ನು ಕೊನೆಗಾಣಿಸಲು ಹಾಗೂ ಶೋಷಣೆ ಇಲ್ಲದ ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಲು ಭಾರತದ ಕಾರ್ಮಿಕ ವರ್ಗವು ಅಂತರಾಷ್ಟ್ರೀಯ ಕಾರ್ಮಿಕ ವರ್ಗದೊಂದಿಗೆ ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕು. ಅದಕ್ಕೆ ಕಾರ್ಮಿಕರ ತ್ಯಾಗ ಬಲಿದಾನಗಳ ಪ್ರತೀಕವಾದ 'ಮೇ ದಿನ' ಸ್ಫೂರ್ತಿಯಾಗಲಿ.
-----------------------------------
-ಶ್ರೀರಾಜ್ ವಕ್ವಾಡಿ


No comments:
Post a Comment