ಇವತ್ತು ಏನೂ ಬರೆಯಬಾರದೆಂದು ಕೂತಿದ್ದೆ. ಏನೂ ವಿಷಯವಿಲ್ಲದೇ ಬರೆದರೆ ಒತ್ತಾಯದಿಂದ ವಾಕರಿಕೆ ಮಾಡಿದಂತಾಗುತ್ತದೆ ಎಂದು ಇವತ್ತೊಂದಿನ ಆರಾಮವಾಗಿರೋಣ ಅಂತಿದ್ದೆ.
ಅಷ್ಟೊತ್ತಿಗಾಗಲೇ ‘ಧಡಾರ್..!’ ಎಂಬ ಸದ್ದು ಕೇಳಿದ ವರದಿ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಬೆಂಗಳೂರಿನ ಹತ್ತೂರಿಗೆ ಅದು ಕೇಳಿಸಿತಂತೆ, ಅಲ್ಯಾರೋ ಪಾಪದವರ ಮನೆಯ ಗೋಡೆ ಬಿರುಕು ಬಿಟ್ಟಿತ್ತಂತೆ, ಅಲ್ಲೊಬ್ಬರಿಗೆ ಮೂರು ಮೂರು ಭಾರಿ ಶಬ್ದ ಕೇಳಿಸಿತ್ತಂತೆ, ಮತ್ತೊಬ್ಬರಿಗೆ ಎರಡು ಸೆಂಕೆಂಡ್ಗಳಷ್ಟು ಸದ್ದು ಕೇಳಿಸಿತ್ತಂತೆ, ಮತ್ತೊಬ್ಬರು ಬಾಂಬ್ ಸ್ಫೋಟದಂತೆ ಕೇಳಿಸಿತು ಅಂದ್ರು, ಮೇಲಿಂದ ಮಹಡಿ ಮೇಲೆ ದೊಡ್ಡ ಬಂಡೆಯೊಂದು ಬಿದ್ದಂತಾಯಿತು ಅಂದ್ರು ಇನ್ನೊಬ್ರು. ಭೂಕಂಪವಂತೆ, ಈ ಅಂತೆ ಕಂತೆಗಳಲ್ಲಿ ಕನ್ನಡ ಸುದ್ದಿ ವಾಹಿನಿಗಳ ಪರದೆಗಳೆಲ್ಲಾ ‘ಗಡಗಡ’ ಅಲ್ಲಾಡುವುದಕ್ಕೆ ಆರಂಭವಾಗಿತ್ತು.
ಅಬ್ಬಬ್ಬಾ...! ಭೂಕಂಪ ಸೃಷ್ಟಿ ಮಾಡಿ ಬಿಡುವ ತಾಕತ್ತು ಕನ್ನಡ ಸುದ್ದಿ ವಾಹಿನಿಗಳಿಗೆ ಒಲಿದಿದ್ದು ಯಾವಾಗ ಅಂತ ಗೊತ್ತಾಗಲಿಲ್ಲ. ವಿಂಗ್ ಕಮಾಂಡರ್ ಸುದರ್ಶನ್ ಎನ್ನುವವರು ಸುಖೋಯ್ ಯುದ್ಧ ವಿಮಾನ 1230 ಕಿಲೋ ಮೀಟರ್ ವೇಗ ರೀಚ್ ಮಾಡಿ ಈ ಸೌಂಡ್ ಆಗಿದೆ ಅಂತ ಹೇಳಿದರು. ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ, ರಿಕ್ಟರ್ ಮಾಪಕದಲ್ಲಿ ಭೂಕಂಪವಾಗಿದ್ದು ದಾಖಲಾಗಿಲ್ಲ. ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ ಮೇಲೂ “ಎಲ್ಲಿಂದ ಬಂತು ಗೊತ್ತಿಲ್ಲ, ಹೇಗೆ ಬಂತು ಗೊತ್ತಿಲ್ಲ, ಯಾಕೆ ಬಂತು ಅಂತ ಗೊತ್ತಿಲ್ಲ ಪಕ್ಕದಲ್ಲೇ ಆಗಿರುವಂತೆ ಸೌಂಡ್ ಕೇಳಿಸಿದಂತೆ. ‘ಭಯಾನಕ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರು..!’, ಕೊರೋನಾ ಭಯದಲ್ಲಿ ಡೋಲಾಯಮಾನವಾಗಿದ್ದ ಬೆಂಗಳೂರು ಈ ನಿಗೂಢ ಸ್ಫೋಟದ ಸದ್ದಿಗೆ ಗಡಗಡ ನಡುಗುತ್ತಿದೆ” ಹಾಗೆ ಹೀಗೆ ಅಂತೆಲ್ಲಾ ಸುದ್ದಿ ವಾಹಿನಿಗಳ ನಿರೂಪಕರೊಬ್ಬಬ್ಬರು ಒಂದೊಂದು ರೀತಿಯಲ್ಲಿ ಬೊಬ್ಬೆ ಹಾಕುತ್ತಿದ್ದರು. ಸಾಲದಕ್ಕೆ ಪಬ್ಲಿಕ್ ಫೋನ್ ಇನ್ ಕಾಲ್ ತಗೊಂಡು, ಕಾಲ್ ಮಾಡಿದವರಲ್ಲಿ ಅದು ಹೇಗೆ ಸೌಂಡ್ ಆಯ್ತು..? ಸಿಡಿಲು ಬಡಿದಂತಾಯ್ತಾ..? ಧಮ್ ಅಂತಾ..? ಭೂಮಿ ನಡುಗಿದಂಗಾಯ್ತಾ..? ಹಿಂದೆ ಏನಾದ್ರು ಈ ಥರದ ಶಬ್ದ ಕೇಳಿಸಿಕೊಂಡಿದ್ದೀರಾ ..? ಸಿಲಿಂಡರ್ ಸ್ಫೋಟವಾಗುತ್ತಲಾ..ಅಂತ ಸ್ಫೋಟನಾ ಇದು..? ಅಬ್ಬಾ.. ಪುಂಖಾನುಪುಂಖ ತಲೆಬುಡವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೊರೋನಾ ಕೊರೋನಾ ಅಂತ ಹೇಳುತ್ತಿದ್ದ ಸುದ್ದಿ ವಾಹಿನಿಗಳಿಗೆ ಒಂದು ಹೊಸ ಸುದ್ದಿ ಸಿಕ್ಕಿಬಿಟ್ಟಿದ್ದೇ ತಡ, ಎಲ್ಲೂ ಇಲ್ಲದ ಎಕ್ಸ್ಕ್ಸೂಸೀವ್ ಮಾಹಿತಿ ನಮ್ಮಲ್ಲಿದೆ, ನಮ್ಮಲ್ಲೇ ಮೊದಲು ಅಂತ ಆ ‘ಸೌಂಡನ್ನು’ ಓಡಿಸಿದ್ದೇ ಓಡಿಸಿದ್ದು. ಆ ಸ್ಫೋಟಕ್ಕಿಂತ ತೀವ್ರತೆ ಇವರ ಧ್ವನಿ ಏರಿಳಿತಳದಲ್ಲೇ ಇತ್ತು ಎನ್ನುವುದು ಅಪ್ಪಟ ಸತ್ಯ. ಅದು ಯಾವುದೇ ವಿಷಯವಾಗಲಿ, ಸಾಮಾಜಿಕ ವಲಯದಲ್ಲಿ ಆ ವಿಷಯ ತಣ್ಣಗಾದರೂ ಸುದ್ದಿ ವಾಹಿನಿಗಳ ಪರದೆ ಮೇಲೆ ಧಗಧಗ ಉರಿಯುತ್ತಿರುತ್ತದೆ. ಇದು ವಿಷಾದವೋ, ವಿನೋದವೋ ಗೊತ್ತಿಲ್ಲ.
‘ತಬ್ಲಿಘಿ ವೈರಸ್’, ‘ಜಮಾತ್ ವೈರಸ್’ ಎಂದು ಬೊಬ್ಬೆ ಹಾಕಿದ ಕನ್ನಡ ಸುದ್ದಿ ವಾಹಿನಿಗಳು ಸದ್ಯ, “ಕೊರೋನಾ ವೈರಸ್ಸಿನಿಂದಲೇ ಸದ್ದು ಉಂಟಾಗಿರಬಹುದಾ..?” ಎಂದು ಕೇಳಿ “ಕೊರೋನಾ ಸೌಂಡು..!” ಅಂತ ಹೇಳಲಿಲ್ಲ ಎನ್ನುವುದೇ ಸಮಾಧಾನಕರ ವಿಷಯ. ನಮ್ಮ ಕನ್ನಡ ಸುದ್ದಿ ವಾಹಿನಿಗಳಿಗೆ ‘ಇರುವೆ ಹೋದರೇ, ಆನೆ ಹೋಯಿತು’ ಎನ್ನುವ ಬುದ್ಧಿ ಅದು ಯಾಕೋ ಗೊತ್ತಿಲ್ಲ. ಅದರಿಂದ ಲಾಭ ಏನಂತ ಕೂಡ ಗೊತ್ತಿಲ್ಲ. ಆ ಛಾಳಿ ಮಾತ್ರ ಬಿಡುವುದಿಲ್ಲ. ಭಾರತದಲ್ಲಿ ಜನರ ಮಾನಸಿಕ ಒತ್ತಡವನ್ನು ಹೆಚ್ಚಿಸುವುದಕ್ಕೆ ಏನಾದರೂ ಅವಾರ್ಡ್ಗಳನ್ನು ಕೊಡುವುದಿದ್ದರೇ, ಅಲ್ಲಿ ಕನ್ನಡದ ಸುದ್ದಿ ವಾಹಿನಿಗಳು ಮತ್ತು ಸುದ್ದಿ ವಾಚಕರು, ವಿಶ್ಲೇಷಕರು ನಾಮಿನೇಟ್ ಆಗುತ್ತಾರೆ ಎನ್ನುವುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಸಂತೆಗೆ ಹೋದರೇ, ‘ಹತ್ತು ರೂಪಾಯಿಗೆ ಎರಡು, ಹತ್ತು ರೂಪಾಯಿಗೆ ಎರಡು’ ಅಂತ ಕೂಗಾಡಿ ವ್ಯಾಪಾರ ಮಾಡುವ ಮಾರುಕಟ್ಟೆ ವ್ಯಾಪಾರಿಯಂತೆ ವರ್ತಿಸುವಂತಹ ಸ್ಥಿತಿ ಕನ್ನಡ ಸುದ್ದಿ ನಿರೂಪಕರಿಗೆ ಬಂತಲ್ಲಾ ಎನ್ನುವುದು ವಿಷಾದನಿಯ ಸಂಗತಿ. ಸುದ್ದಿ ವಾಹಿನಿಯವರು ಹೇಳುವ ಆ ‘ಭಯಾನಕ ಸ್ಫೋಟದ ಧ್ವನಿ’ ಅದೆಷ್ಟು ಜನರು ಕೇಳಿ ಬೆಚ್ಚಿ ಬಿದ್ದಿದ್ದಾರೋ ಗೊತ್ತಿಲ್ಲ. ಆದರೇ, ಇವರ ವಿಶ್ಲೇಷಣೆಯ ಸ್ಪಿರಿಟ್ ನೋಡಿಯಂತೂ ಬೆದರಿದ್ದಂತೂ ಸತ್ಯ.
ಪತ್ರಿಕೋದ್ಯಮದ ಜವಾಬ್ದಾರಿಯೇನು..? ಪತ್ರಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನೇ ಮರೆತಂತಿದೆ. ಇದು ಮಾಧ್ಯಮಪತಿಗಳ ಒತ್ತಡವೋ, ಟಿಆರ್ಪಿ ಸ್ಪರ್ಧೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಎಷ್ಟೋ ಜನ ಇಂತಹ ಕೆಲವು ಪಿಶಾಚಿ ಧ್ವನಿಗಳಿಂದಾಗಿ ಕೆಲವರು ಸುದ್ದಿ ವಾಹಿನಿಗಳನ್ನು ನೋಡುವುದನ್ನೇ ಬಿಟ್ಟಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದ್ದಲ್ಲ.
-ಶ್ರೀರಾಜ್ ವಕ್ವಾಡಿ.

True
ReplyDeleteThank you
DeleteSuper
Delete