Saturday, May 23, 2020

ನಿಶಾ



(ಸಣ್ಣ ಕಥೆ)

ತೋಳಿನೊಳಗೆ ಬಂಧಿಯಾಗಿದ್ದ ನಿಶಾಳ ಎಡಗೈಯನ್ನು ತಪ್ಪಿಸಿಕೊಂಡು ಆಕೆಯನ್ನು ದೂರ ಸರಿಸಿ ಮನೀಶ್ ಎದ್ದು ಬಂದು ಸ್ವಲ್ಪ ದೂರದಲ್ಲಿ ಸಪ್ಪೆ ಮೋರೆ ಮಾಡಿಕೊಂಡು ಕುಳಿತ. ಅವಳ ಮೃದು ತೆಳು ತೋಳನ್ನು ತಳ್ಳಿದ ನೋವು ಇವನಿಗಾದರೂ ತೋರಿಸಿಕೊಂಡಿರಲಿಲ್ಲ. ಸ್ವಲ್ಪ ಮೌನದ ನಂತರ, ನಿಶಾ ಎದ್ದು ಬಂದು ಮನೀಶ್‌ನ ಹೆಗಲಿಗೆ ತಲೆಯಾನಿಸಿ ಕುಳಿತಳು.

‘ನಿಶಾ...!’ ಮನೀಶ್‌ನ ಕಣ್ಗಳು ತುಸು ಕೆಂಪಾಗಿದ್ದವು.

ನಿಶ್ಚಲದಂತಿದ್ದ ಬಿಸಿಲಿಗೆ ಮತ್ತಷ್ಟು ಉರಿ ಸುರಿದಂತಾಯ್ತು. ನಿಶಾ, ಮನೀಶ್‌ನ ಹೆಗಲು ಬಿಟ್ಟಿರಲಿಲ್ಲ. ಅವನ ಎಡಗೈ ಅವಳ ಹಾಲ್ಗೆನ್ನೆಯನ್ನು ಹಿತವಾಗಿ ಸವರಿತು. ನಿಶಾಳ ಕಣ್ಗಳು ತುಂಬಿಕೊಂಡವು.

ನಿಶಾ.. ಇದೇನ್ ಹೀಗೆ..?

ಇಲ್ಲಾ, ನನ್ನಿಂದ ಆಗ್ತಿಲ್ಲ. ನಿನ್ನನ್ನು ಬಿಟ್ಟಿರುವುದಕ್ಕೆ ಸಾಧ್ಯವಿಲ್ಲ.

‘ನಿಶಾ, ಇದು ಈಗ ನೀನು ಹೇಳೋ ಮಾತಲ್ಲ. ನನ್ನಿಂದ ನಿನ್ನ ಭವಿಷ್ಯ ಹಾಳಾಗ್ಬರ‍್ದು. ನೀನೀಗ ನನ್ನನ್ನು ತೊರೆದು ಬದುಕಲೇ ಬೇಕು. ನಾವು ಎಡವಿದ್ದೇವೆ ನಿಜ. ಆದರೇ, ಇದೇ ಮೊದಲು, ಇದೇ ಕೊನೆ. ನಾನಿನ್ನು ನಿನ್ನ ಪಾಲಿಗೆ ‘ಪಾಸ್ಟ್’. ಆಗಷ್ಟೇ ಆ ಪ್ರೀತಿಗೆ ಮಬ್ಬು ಮುಸುಕು ಕವಿದಿತ್ತು.  ಯಾವುದರಿಂದ ಆವರಿಸಿಕೊಂಡು ನಿಶಾ ಮನೀಶ್‌ನನ್ನು ಹತ್ತಿರವಾಗಿಸಿಕೊಂಡಿದ್ದಳೋ, ಅದನ್ನೇ ಸರಿಸಿಕೊಳ್ಳಬೇಕಾದ ಕಾಲ ನಿಶಾಳ ಎದುರು ಬಂದು ನಿಂತಿತು.

ಐ’ಮ್ ಸ್ವಾರಿ. ನಿಶಾಳ ಧ್ವನಿ ಗದ್ಗದಿತವಾಗಿತ್ತು. ಮನೀಶ್ ಒಪ್ಪದ ಮನಸ್ಸಿಲ್ಲಿ ‘ಇಟ್ಸ್ ಓಕೆ’ ಅಂತಂದ.
ಮೊದಲೇ ಅಂದುಕೊಂಡಿದ್ವಿ. ‘ಪೇರೆಂಟ್ಸ್ ಗೆ ಇಷ್ಟವಿಲ್ಲದಿದ್ದರೇ, ಅವರ ಮನಸ್ಸಿಗೆ ನೋವು ಕೊಟ್ಟು, ಅವರಿಂದ ದೂರ ಹೋಗಿ ಇರುವ ಎಲ್ಲರ ಪ್ರೀತಿಯಂತೆ ನಮ್ಮ ಪ್ರೀತಿಯಾಗಬಾರದು’ ಅಂತ. ನಾವು ದೂರವಾಗುವ ಕಾಲ ಬಂದಿದೆ ಅಂತನ್ನಿಸುತ್ತಿದೆ. ಪ್ರೀತಿಯೆಂದರೇ, ಇನ್ಮೇಲಿನ ನನ್ನ ಮತ್ತು ನಿನ್ನ ನಡುವಿನ ದೂರ.

ನಿನ್ನ ಪ್ರತಿ ಸನಿಹ ನನಗೆ ನೂರು ಅಚ್ಚರಿ. ಆದರೇ, ಇನ್ಮೇಲೆ ಅದಿಲ್ಲದ ಶೂನ್ಯ.

ನಿಶಾ ಕರಗಿದ್ದಳು.

ಮನೀಶ್ ಬಿಕ್ಕಿದ. ನಿಶಾನೂ ಬಿಕ್ಕುವುದಕ್ಕಾರಂಭಿಸದಳು.

‘ಐ ಲವ್ ಯೂ’.  ಇಬ್ಬರಲ್ಲೂ ದೂರವಾಗುವ ಅಹಿತ ಭಾವ ಇಮ್ಮಡಿಸಿತ್ತು.

ಎರಡೂ ಮನಸ್ಸುಗಳು ಸಾವರಿಸಿಕೊಂಡವು.

ಪ್ರೀತಿಯೆಂದರೇ, ಕೊನೆಗೆ ಉಳಿಯುವ ಕಣ್ಣ ಹನಿಯ ಪಸೆ. ಇಬ್ಬರ ಹೆಜ್ಜೆಗಳು ವಿಮುಖವಾದವು. ತುಂಬಾ ದೂರ ಸ್ತಬ್ಧತೆಯ ಧ್ವನಿ ಹೆಗಲಾಯಿತು. ಇವನಿಗೆ ಅವಳಿಲ್ಲದ ಮೌನ. ಅವಳಿಗೆ ಇವನಿಲ್ಲದ ಮೌನ.

ಇನ್ನೂ ನಿಂತಿಲ್ಲ ತೊಟ್ಟಿಕ್ಕುವ ಹನಿ.
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)  
📱 : 8762723716 

4 comments: