Monday, May 18, 2020

ರಕ್ತ ಅಚ್ಚೆಬ್ಬಿಸಿದೆ | ನಾನು ಹೇಳಲೇ ಬೇಕು.. ‘ಇದು ನನ್ನ ಭಾರತ..!’



ಇದು ಬಹಳ ದೂರ ಕಾಡುತ್ತೆ.

ಹೋಗಹೋಗತ್ತಿದ್ದಂತೆ, ಅಲ್ಲಲ್ಲೇ ಬಾಡಿ ಉದುರಿದ ಜೀವಗಳ ದೃಶ್ಯ, ಇನ್ನಷ್ಟು ದೂರ ಖಂಡಿತ ಕಾಡುತ್ತದೆ. ಮೇಲ್ಸ್ತರದ ಸೂಟು ಬೂಟು ಬದುಕಿನ ಆಚೆ ದೇಶಿ ಸಂಕಥನಗಳು ಇನ್ನೂ ಬರಿಗಾಲಲ್ಲೇ ದಾರಿ ಸವೆಸುತ್ತಿವೆ ಎನ್ನುವುದು ದೊಡ್ಡ ದುರಂತ.

ಇದು ನನ್ನ ಭಾರತ..!

ಇದು ದೇಶದ ಕಾರ್ಮಿಕ ವರ್ಗ, ಒಂದೊಂದೆ ಹೆಣೆದು ಆಡಳಿತ ವರ್ಗದ ಕೊರಳಿಗೆ ಹಾಕಿದ ದುಃಖದ ಸರಮಾಲೆ. ಹಸಿವು ಮತ್ತು ಬಡತನ ಎಷ್ಟೊಂದು ಕ್ರೂರಿ..?! ಒಣ ಹೊಟ್ಟೆ ಬಗೆದು ನೋಡಿ ಗಹಗಹಿಸಿ ನಗುವಷ್ಟು ರಾಕ್ಷಸ ಪ್ರವೃತ್ತಿ ಅದರದ್ದು.

ಪತ್ರಿಕಾ ಗೋಷ್ಠಿಯಲ್ಲಿ ಹತ್ತಾರು ಮಾರಾಟವಾದ ಕ್ಯಾಮೆರಾ, ಪತ್ರಕರ್ತರ ಮುಂದೆ ಇಷ್ಟಿಷ್ಟು ಕೋಟಿ (ಎಂಟು ಕೋಟಿ) ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಲೆಕ್ಕ ಕೊಡ್ತಾರೆ ಅಷ್ಟೇ. ಕಾರ್ಪೋರೇಟ್ ವಲಯದ ಚೇತರಿಕೆಗೆ ಕೋಟಿ ಕೋಟಿ ಘೋಷಿಸುವಾಗ, ದೇಶದ ಜನರಿಗೆ ಏನೇನೋ ಹೇಳಿ ಭ್ರಮೆ ಹುಟ್ಟಿಸುವಾಗ ಅದನ್ನೇ ವಾಸ್ತವ ಅಂದುಕೊಂಡು ಜನ ಪಾಯಸ ಮಾಡಿ ತಿಂದು 'ಭಾರತ ಪ್ರಗತಿ ಕಾಣುತ್ತಿದೆ' ಅಂತ ವಾಟ್ಸ್ಯಾಪ್, ಫೆಸ್ಬುಕ್ ಇನ್ನಾವುದೋ ಇದ್ದಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರ್ಷ ವ್ಯಕ್ತ ಪಡಿಸುತ್ತಾರೆ. ಆದರೇ, ಬದುಕು ನಿರ್ಬಲವಾಗಿ ಗುಳೆ ಹೊರಟವರು ಮೂಟೆ ತಲೆ ಮೇಲೆ ಹೊತ್ತು ಸಾಗುತ್ತಾ ದಾರಿಯಲ್ಲೆಲ್ಲೋ ಅಸ್ವಸ್ಥರಾಗಿ ಬಿದ್ದು ಸಾಯುವಾಗ... ನಮಗೆ ಭಾರತದ ಬಗ್ಗೆ ಏನೂ ಅನ್ನಿಸುವುದಿಲ್ಲ...!

ನಿಜಾಂಶ, ವಾಸ್ತವಾಂಶ ಖಂಡಿತ ಯಾರಿಗೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಪಾಪ, ಸಿಮೆಂಟ್ ಮೆತ್ತಿಕೊಂಡು ದುಡಿವ ವರ್ಗವದು. ಊರು ತಲುಪಲು ಇನ್ನೂ ದಾರಿ ಮೇಲೆಯೇ ಇದ್ದಾರೆ. ಒಡೆದ ಪಾದಗಳಿಂದ ಸುರಿದ ರಕ್ತ ರಸ್ತೆಯುದ್ದಕ್ಕೂ ಅಚ್ಚೆಬ್ಬಿಸಿದೆ.

ಇದು ಇನ್ನೊಂದಿಷ್ಟು ಕಾಲ ಉಳಿಯುತ್ತದೆ. ಅಧಿಕಾರದ ನಿರ್ಲಕ್ಷ್ಯ ಧೋರಣೆಗೆ ಖಂಡಿತ ಬಲವಾದ ಚಾಟಿ  ಬೀಸುತ್ತದೆ.

ಗೊತ್ತಿಲ್ಲ, ತಲೆ ತಗ್ಗಿಸುತ್ತಾ ‘ಇದು ನನ್ನ ಭಾರತ’ ಅಂತ ಹೇಳಲೇ ಬೇಕಿದೆ.
-ಶ್ರೀರಾಜ್ ವಕ್ವಾಡಿ 

No comments:

Post a Comment