Wednesday, May 27, 2020

ಹೇಳತೀರದ ಬದುಕಿಗೆ ದೂರದಲ್ಲಿ ಹಿತ ನೀಡುವ ತೀರವಿದೆ..!




ಇನ್ನೂ ಕೂಡ ಅದೇಷ್ಟೋ ವಲಸೆ ಕಾರ್ಮಿಕರು ಅಲ್ಲಲ್ಲೇ ಇದ್ದಾರೆ. ನಡು ರಸ್ತೆಯಲ್ಲಿ, ಅದು ಯಾವುದೋ ಗೊತ್ತಿಲ್ಲದ ಊರಿನ ರೈಲ್ವೇ ಸ್ಟೇಷನ್‌ನಲ್ಲಿ ಇದ್ದು ತಮ್ಮ ಹುಟ್ಟೂರಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ವಲಸೆ ಕೂಲಿ ಕಾರ್ಮಿಕರ ಸಮಸ್ಯೆ ಹೇಳತೀರದು. ಸರ್ಕಾರ ಪ್ಯಾಕೇಜ್‌ಲ್ಲಿ ಸಾಫ್ಟ್ ಕಾರ್ನರ್ ಧೋರಣೆ ತೋರಿಸಿದ್ದು ಬಿಟ್ಟರೇ, ಇವರ ಪಾಲಿಗಾಗಲಿಲ್ಲ.

ನಡು ರಸ್ತೆಯಲ್ಲಿ ಶವವಾದವರು, ಬದುಕು  ಕಳೆದು ಕೊಂಡವರ ವಿಷಯವೆಲ್ಲಾ ಹಳೆಯದಾಗಿ ಹೋಗಿದೆ. ಅದೇಷ್ಟೋ ಕೂಲಿ ಕಾರ್ಮಿಕರು ದಾರಿಯಲ್ಲಿ ನಡೆದು ನಡೆದು ಸುಸ್ತಾಗಿ ಬಳಲಿ ಬೆಂಡಾಗಿ ಅಸುನೀಗಿದ್ದಾರೆ, ಕೊಳೆತ ಶವ ಪತ್ತೆಯಾದವು, ತೊಡೆ ಮೇಲೆ ತನ್ನ ಸ್ನೇಹಿತನ್ನು ಮಲಗಿಸಿಕೊಂಡು ಸಹಾಯ ಹಸ್ತ ಚಾಚುತ್ತಿರುವ ದೃಶ್ಯ ಕಂಡು ಬಂತು, ರಾತ್ರಿ ಬಸ್ ಸ್ಟ್ಯಾಂಡ್ನಲ್ಲಿ ಒಂಟಿ ವೃದ್ದೆಯೊಬ್ಬಳು  ‘ಜೇವಲಾ ದೆವುನ್ ಮಧತ್ ಕರಾ’ (ಊಟ ನೀಡಿ ಸಹಾಯ ಮಾಡಿ) ಅಂತ ಮರಾಠಿಯಲ್ಲಿ ಕೂಗಿ ಬೇಡಿದ ದೃಶ್ಯ ಕರುಳು ಹಿಚುಕಿಸಿತು. ರೈಲು ಚಲಿಸಲಾರಂಭಿಸಿದಾಗ ಮೆಟ್ಟಿಲಿಗೆ ಕಾಲಿಡಲಾಗದೇ ಅಲ್ಲಲ್ಲೇ ಉಳಿದುಕೊಂಡವರ ಪಾಡು ಮನ ಕಲುಕುವಂತೆ ಮಾಡಿತು. ಹೀಗೆ ಒಂದೇ ಎರಡೇ. ಲೆಕ್ಕಕ್ಕೆ ಸಿಕ್ಕವುಗಳೆಷ್ಟು..? ಸಿಗದೇ ಇದ್ದವುಗಳೆಷ್ಟು..? ವರದಿಯಾದವುಗಳೆಷ್ಟು..? ವರದಿಗೆ ಸಿಗದೇ ಉಳಿದವುಗಳೆಷ್ಟು..? ಉತ್ತರವಿಲ್ಲದ ಮೌನ.

ಅದೆಲ್ಲೋ ಹಳ್ಳಿ ಹಳ್ಳಿಗಳಲ್ಲಿ ಬದುಕು ಕಂಡುಕೊಳ್ಳುತ್ತಿದ್ದವರನ್ನು ನಗರಕ್ಕೆ ಕರೆತಂದಾತ ಇಲ್ಲಿ ನೀನು ಬೇಕಾದಷ್ಟು ಹಣ ಮಾಡಬಹುದೆಂದು ಭ್ರಮೆ ಹುಟ್ಟಿಸಿ ಅಲ್ಲೆಲ್ಲೋ ರಸ್ತೆ ಬದಿಗಳಲ್ಲಿ, ಚರಂಡಿಗಳ ಪಕ್ಕದಲ್ಲಿ, ಕೊಚ್ಚೆ ನೀರು ಹರಿಯುವ ಮೋರಿಗಳ ಅಕ್ಕಪಕ್ಕದಲ್ಲಿ ತಗಡು ಶೀಟು ಹಾಕಿ ವಾಸಕ್ಕೆ ನೆಲೆ ಮಾಡಿಕೊಟ್ಟು ಬೇಕಾದಾಗ ಬೇಕಾದ ಹಾಗೆ ದುಡಿಸಿಕೊಂಡ ಗುತ್ತಿಗೆದಾರ ಈಗ ಮಾತಾಡಿಸದೇ ಕೈ ತೊಳೆದುಕೊಂಡು ‘ನಾನು ನಿಮ್ಮ ಆಟದಲ್ಲಿ ಇಲ್ಲವೆಂದು’ ಹೊರನಡೆದ. ಆಡಳಿತ ಸರ್ಕಾರ ‘ಬಡವರ ಪರವಾಗಿ, ವಲಸೆ ಕಾರ್ಮಿಕರ ಪರವಾಗಿ ನಾವಿದ್ದೇವೆ’ ಅಂತ ಹೇಳಿದ್ದನ್ನು ರಸ್ತೆ ನಡುವೆ ಎಲ್ಲೋ ಶವವಾಗಿ ಹೋದವರೂ ಕೇಳಿಸಿಕೊಂಡಿದ್ದರು. ಯಾವ ಸರ್ಕಾರವೂ ಪ್ರಾಮಾಣಿಕವಾಗಿ ನೆರವಿಗೆ ಬಂದಿಲ್ಲ. ನಿರೀಕ್ಷೆ ಹುಟ್ಟಿಸಿ ಬದುಕನ್ನೇ ಕಿತ್ತುಕೊಂಡರು. ಅವರ ಭವಿಷ್ಯದ ಚಿಂತನೆಗೆ ಕಂಬನಿಯೊಂದೇ ಸದ್ಯಕ್ಕೆ ಕಾಣುತ್ತಿರುವ ಉತ್ತರ.

ಅವರ ಬೇಡಿಕೆಯೊಂದೇ, ಅವರವರ ಊರಿಗೆ ಹೋಗಬೇಕಾದದ್ದು ಅಷ್ಟೇ. ವಿದೇಶಗಳಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಲೋಹದ ಹಕ್ಕಿಯಲ್ಲಿ ಕರೆಸಿಕೊಂಡು ಸಕಲ ಸೌಲಭ್ಯಗಳೊಂದಿಗೆ ಕ್ವಾರಂಟೈನ್ ಮಾಡುವ ಸರ್ಕಾರಕ್ಕೆ ರಸ್ತೆಗಳಲ್ಲಿ ನಡೆದು ಹೋಗುತ್ತಾ ಪಾದದ ಚರ್ಮ ಸುಲಿಸಿಕೊಂಡ ವಲಸೆ ಕಾರ್ಮಿಕರ ಕಣ್ಣೀರು ಕಾಣಿಸುವುದೇ ಇಲ್ಲ. ‘ಸರ್ಕಾರ ಕಲ್ಪಿಸಿದ ಉಚಿತ ರೈಲು ಸೇವೆ ಅಂತ  ಶ್ರಮಿಕ ರೈಲಿನಲ್ಲಿ ತಮ್ಮೂರಿಗೆ ಮರಳುವ ಆಸೆಗಣ್ಣಿನಿಂದ ‘ಸೇವಾ ಸಿಂಧು’ವಿನಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡು, ಪೋಲೀಸ್ ಠಾಣೆಯಲ್ಲಿ ಫಾರ್ಮ್ ಸಲ್ಲಿಸಿದ್ದರೂ, ಅದನ್ನು ಎಷ್ಟೋ ಭಾರಿ ವಿಚಾರಿಸಿದ್ದರೂ, ಅಧಿಕಾರಿಗಳು ಹೇಳಿದ್ದೆಲ್ಲವನ್ನೂ ಮಾಡಿದರೂ ಕೂಡ ಪೋಲಿಸರು ದಬಾಯಿಸಿ ಕಳುಹಿಸಿದರು, ಹಾಗಾಗಿ ಅನಿವಾರ್ಯವಾಗಿ ನಾವು ನಡೆದುಕೊಂಡೇ ಊರಿಗೆ ಮರಳಲು ಮಂದಾದೆವು’ ಅಂತ ಅದೆಷ್ಟೋ ವಲಸೆ ಕಾರ್ಮಿಕರು ದಾರಿ ಮಧ್ಯದಲ್ಲಿ ಮಾಧ್ಯಮ ವರದಿಗಾರರು ಕ್ಯಾಮೇರಾ ಹಿಡಿದು, ಲೋಗೋ ಅವರ ಮುಖದೆದುರಿಗೆ ಇಟ್ಟಾಗ ಹೇಳಿಕೊಂಡಿದ್ದು ಸರ್ಕಾರದ ಅವ್ಯಸ್ಥೆಯನ್ನು ಬಯಲು ಮಾಡಿತು. ಸರ್ಕಾರ ಕೆಳವರ್ಗವನ್ನು ಯಾವ ಮಟ್ಟಿಗೆ ಕಂಡುಕೊಳ್ಳುತ್ತದೆ ಎನ್ನುವುದನ್ನು ಹೇಳುವುದಕ್ಕೆ ಇದೊಂದೇ ಉದಾಹರಣೆ ಸಾಕಲ್ಲವೇ..?

ಹೀಗೆ ನಡೆದುಕೊಂಡೇ ತಮ್ಮ ಊರಿನ  ನಿರೀಕ್ಷೆಯಲ್ಲಿರುವವರು ಅದೆಷ್ಟು ಮಂದಿಯಿದ್ದಾರೋ ಗೊತ್ತಿಲ್ಲ. ಬದುಕು ಕಳೆದು ಕೊಂಡವರು ಎಷ್ಟಿದ್ದಾರೋ ಗೊತ್ತಿಲ್ಲ. ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ,  ಪಾಟ್ನಾದ ಬಿಹಾರದ ಮುಝಫರಪುರ್ ರೈಲ್ವೇ ಸ್ಟೇಷನ್‌ನಲ್ಲಿ ಎಳೆಗೂಸೊಂದು ತನ್ನ ತಾಯಿ ಮೇಲೆ ಹೊದಿಸಿದ ಮಗ್ಗುಲ ಹಾಸಿಗೆಯನ್ನು ಎಳೆಯುತ್ತಾ ತನ್ನ ಅಮ್ಮನನ್ನು ಎಬ್ಬಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಮಿಕರ ಅತಂತ್ರ ದುಸ್ಥಿತಿಯನ್ನು ಈ ದೃಶ್ಯ ಕಣ್ಣಿಗೆ ಕುಕ್ಕಿ ಕುಕ್ಕಿ ಹೇಳುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಶನಿವಾರ (23.05.2020) ಗುಜರಾತ್‌ನಿಂದ ತನ್ನ ಮಗುವಿನೊಂದಿಗೆ ರೈಲು ಹತ್ತಿದ ಆಕೆ ಹಸಿವಿನಿಂದ ಬಳಲಿದ್ದಳು. ಸೋಮವಾರ (25.05.2020) ಬಿಹಾರದ ಮುಝಫರ್‌ಪುರ್ ರೈಲ್ವೇ ಸ್ಟೇಷನ್ ತಲುಪುವಾಗ ಆಕೆ ಕುಸಿದು ಬಿದ್ದು ಅಸುನೀಗಿದ್ದಾಳೆ. ಆಕೆಯ ಮೃತ ದೇಹವನ್ನು ಹಾಗೆಯೇ ರೈಲ್ವೇ ಸ್ಟೇಷನಲ್ಲಿನ ಫ್ಲಾಟ್‌ಫಾರ್ಮ್ನಲ್ಲಿ ದುಪ್ಪಟ್ಟೆ ಹಾಸಿ ಕೆಲ ಹೊತ್ತುಗಳ ಕಾಲ ಮಲಗಿಸಿಲಾಗಿತ್ತು. ಆ ವಿಷಯದ ಪರಿವೇ ಇಲ್ಲದ ಕೂಸು ಅಮ್ಮನನ್ನು ಎಬ್ಬಿಸುವಂತೆ ಆ ದುಪ್ಪಟ್ಟೆಯನ್ನು ಎಳೆಯುತ್ತಿತ್ತು ಎಂದು ಸುದ್ದಿ ಮೂಲಗಳು ಹೇಳುತ್ತಿವೆ. ಇಂತಹ ಅದೇಷ್ಟೋ ಘಟನೆಗಳು ನಡೆಯುತ್ತಲೇ ಇವೆ. ಹಸಿವು, ನೀರಡಿಕೆಯಿಂದ ಮೃತಪಟ್ಟ ವಲಸೆ ಕಾರ್ಮಿಕರ ಪಟ್ಟಿ ಮಾಡಲು ಮುಂದಾದರೇ, ಆ ಪಟ್ಟಿ ಮಾರುದ್ದ ಬೆಳೆಯಬಹುದೇನೋ. ಸರ್ಕಾರ ಇನ್ನೂ ವಲಸೆ ಕಾರ್ಮಿಕರ ಪಾಲಿಗೆ ದಿವ್ಯ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಿದೆ ಎನ್ನುವುದು ದೊಡ್ಡ ದುರಂತ.



ನಡೆದು ಸಾಗುತ್ತಿರುವವರಿಗೆ, ಅದೆಲ್ಲೋ ಗೊತ್ತಿಲ್ಲದ ಅರ್ಧ ಊರಿಗೆ ತಲುಪಿದವವರಿಗೆ, ಪಾದ ಸುಟ್ಟುಕೊಂಡವರಿಗೆ, ಆಹಾರಿಲ್ಲದೇ ಹೊಟ್ಟೆ ಬೆನ್ನಿಗಂಟಿಸಿಕೊಂಡವರಿಗೆ ಈ ಸರ್ಕಾರದ ಬಗೆಗಿರುವ ನಂಬಿಕೆಗಿಂತ ತಮ್ಮ ಕಾಲುಗಳ ಮೇಲೆ ಅಪಾರವಾಗಿ ನಂಬಿಕೆ ಹುಟ್ಟಿರಬಹುದು. ಹಾಗಾಗಿಯೇ, ತಮ್ಮೂರಿಗೆ ಮುಖ ಮಾಡಿ ಇನ್ನೂ ಸಾಗುತ್ತಿದ್ದಾರೆ..!
-ಶ್ರೀರಾಜ್ ವಕ್ವಾಡಿ  

3 comments: