Tuesday, May 19, 2020

ತೀರದ ‘ತೀರ ತಲುಪದ ಬದುಕು..!’



ಈ ಬಗ್ಗೆ ಮತ್ತೆ ಮತ್ತೆ ಯಾಕೆ ಬರೆಯುತ್ತೇನೆ ಅಂತ ಗೊತ್ತಾಗ್ತಿಲ್ಲ ನನಗೆ. ಬರೆದಷ್ಟು ಹೆಚ್ಚು ಹೆಚ್ಚು ಬರೆಯಬೇಕು ಅನ್ಸುತ್ತೆ. ಇನ್ನೂ ತೀರ ತಲುಪದ ಬದುಕಿನ ಕಥೆ ಕೇಳುವವರು ಯಾರೂ ಇಲ್ಲ.

ಈ ಭಾರತ ಸಮಬಾಳ್ವೆಯ ಭವ್ಯ ಭಾರತವಾಗಿ ನಿಲ್ಲಲಿ. ಉದ್ಯೋಗಪತಿಗಳಿಗೆ ರೆಡ್ ಕಾರ್ಪೇಟ್ ಹಾಸುವ ಧೋರಣೆಗೆ ಇಂದೇ ಕೊನೆ ಹಾಡುವಂತಾಗಲಿ. ಮೈಕ್ ಮುಂದೆ ಬೃಹನ್ನಾಟಕದ ಸಂಭಾಷಣೆ ಬಿಗಿಯುವ ದೇಶದ ಪ್ರಾಮುಖ್ಯ ಮಂತ್ರಿಗಳಿಗೆ ಇನ್ನಾದರೂ ಬುದ್ಧಿ ಬರಲಿ. ಉತ್ತರದಿಂದ ದಕ್ಷಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಇನ್ನೂ ಅದೆಷ್ಟೋ ಪಾದಗಳು ಹೆಜ್ಜೆ ಹಾಕುತ್ತಿವೆ. ದೇಶ ಇಂತಹ ಹತಭಾಗ್ಯದಿಂದ ಮುಕ್ತವಾಗಿ ಬೆಳೆಯಲಿ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಧನೋರಾ ಗ್ರಾಮದಲ್ಲಿ ಪುಣೆಯಿಂದ ಸುಮಾರು 250 ಕಿಲೋ ಮೀಟರ್‌ಗಳಷ್ಟು ದೂರ ನಡೆದು ಬಂದಿದ್ದ ಕಬ್ಬು ಕಟಾವು ಮಾಡುವ ಕಾರ್ಮಿಕನೊಬ್ಬನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿತು.  4-5 ದಿನಗಳ ಹಿಂದೆ ತಾಯಿಯೊಬ್ಬಳು ತನ್ನ ಮುಖಕ್ಕೆ ಸೆರಗು ಮುಚ್ಚಿಕೊಂಡು ತನ್ನ ಮಗುವನ್ನು ತಳ್ಳು ಬ್ಯಾಗಿನ ಮೇಲೆ ಮಲಗಿಸಿಕೊಂಡು ಪಂಜಾಬ್‌ನಿಂದ ಝಾನ್ಸಿಗೆ ಕಾಲ್ನಡಿಗೆ ಹೋಗುತ್ತಿರುವ ದೃಶ್ಯ ಕಂಡು ಬಂತು. ಕೊಪ್ಪಳದಲ್ಲಿ ಹತ್ತಾರು ಮಧ್ಯಪ್ರದೇಶದ ಕೂಲಿ ಕಾರ್ಮಿಕರು ತಮ್ಮ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತುಕೊಂಡು ನಮಗೆ ಹೊಟ್ಟೆಗ ತುತ್ತಿಲ್ಲ, ಮಾಡಲು ಕೆಲಸವಿಲ್ಲ ಹೇಗಾದರೂ ಮಾಡಿ ನಮ್ಮನ್ನು ಊರಿಗೆ ತಲುಪಿಸುವಂತೆ ಮಾಡಿ ಅಂತ ತಮ್ಮ ಅಳಲನ್ನು ಹೇಳಿಕೊಂಡದ್ದು ವರದಿಯಾಯಿತು. ಗುಜರಾತ್ ನಲ್ಲಿ ಲಾರಿ ಏರಿ ಹೊರಟಿದ್ದ ಕಾರ್ಮಿಕರನ್ನು ಇಳಿಸಿ ಪೋಲಿಸರು ಅಮಾನುಷವಾಗಿ ಹಲ್ಲೆ ಮಾಡುವ ವೀಡಿಯೋವೊಂದು ವೈರಲ್ ಆಯ್ತು. ಗುಜರಾತ್‌ನಲ್ಲಿನ ಸೂರತ್‌ನ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರಿಬ್ಬರು ಯಾಕೂಬ್ ಮತ್ತು ಅಮೃತ್ ಜೊತೆಯಾಗಿ ತಮ್ಮ ಊರು ಉತ್ತರಪ್ರದೇಶಕ್ಕೆ ಹೋಗುವ ದಾರಿ ಮಧ್ಯದಲ್ಲಿ ಯಾಕೂಬ್, ಜ್ವರ, ವಾಂತಿ ಎಂದು ಬಳಲುತ್ತಿರುವ ತನ್ನ ಸ್ನೇಹಿತ ಅಮೃತ್‌ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಹಾಯಕ್ಕಾಗಿ ಬೇಡುತ್ತಿರುವ ಕರಳು ಹಿಚುಕುವ ಸನ್ನಿವೇಶ ದೇಶವ್ಯಾಪಿ ಸುದ್ದಿ ಮಾಡಿತು. ಮೊನ್ನೆ ಮೊನ್ನೆಯಷ್ಟೇ, ಲೂದಿಯಾದಿಂದ 1300 ಕಿಲೋಮೀಟರ್ ದೂರದ ಮಧ್ಯಪ್ರದೇಶಕ್ಕೆ  ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ ಕುಟುಂಬವೊಂದರ ಬಾಲಕ ಗಾಯಗೊಂಡ ಕಾರಣದಿಂದ ಇಬ್ಬರು ಸ್ಟ್ರೆಚರ್‌ನಲ್ಲಿ ಹೊತ್ತು ಸಾಗಿದ ಹೃದಯ ವಿದ್ರಾವಕ ದೃಶ್ಯವೊಂದನ್ನು ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿ ವರದಿ ಮಾಡಿತು. ಉತ್ತರ ಪ್ರದೇಶದಲ್ಲಿ 23 ವಲಸೆ ಕಾರ್ಮಿಕರು ಟ್ರಕ್ ಅಪಘಾತದಲ್ಲಿ ಮರಣ ಹೊಂದಿದರು. ಉತ್ತರ ಪ್ರದೇಶದಿಂದ 500 ಕಿಲೋಮೀಟರ್ ದೂರದ ಛತ್ತೀಸ್‌ಘಡಕ್ಕೆ ತನ್ನ ಮಗುವಿನೊಂದಿಗೆ ಲಕ್ಷ್ಮೀ ಸಾಹು ಎಂಬ ಮಧ್ಯ ವಯಸ್ಸಿನ ಮಹಿಳೆ ಸೈಕಲ್ ಸವಾರಿ ಹೊಗುತ್ತಾಳೆ. ಔರಂಗಬಾದ್‌ನಲ್ಲಿ ರೈಲು ಹಳಿಗಳ ಮೇಲೆ ಮಲಗಿದ್ದ ಹದಿನಾಲ್ಕು ಮಂದಿ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲ್ ಹರಿದು ಮೃತರಾದ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಷಯ.

ಹೀಗೆ ಒಂದೇ ಎರಡೇ..? ವಲಸೆ ಕಾರ್ಮಿಕರ ಬವಣೆ ಹೇಳತೀರದು. ಇರಲು ಜಾಗವಿಲ್ಲ, ದುಡಿಮೆಯಿಲ್ಲ, ಹೊಟ್ಟೆಗೆ ತುತ್ತಿಲ್ಲ. ವಲಸೆ ಕಾರ್ಮಿಕರ ಗೋಳು ಕೇಳುವವರು ಯಾರಿಲ್ಲ. ಇನ್ನೂ ಸಾವಿರ ಸಾವಿರ ಮಂದಿ ರಸ್ತೆಯ ಮಧ್ಯೆದಲ್ಲಿ ದಾರಿ ಸವೆಸುತ್ತಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ, ಇಂತವರ ಬದುಕು ನೋಡಿದರೆ ಹೃದಯ ನಿಂತ ಹೋಗುತ್ತದೆ ಅಂತ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರಿಗೆ 5 ಕೆ.ಜಿ ಧಾನ್ಯ ಮತ್ತು 1 ಕೆ.ಜಿ ಬೇಳೆ ಕೋಡುತ್ತೇವೆ ಅಂತ ಹೇಳಿದ್ದು ಬಿಟ್ಟರೇ ಮತ್ತೇನೂ ಇಲ್ಲ.

ಒಣ ಹೊಟ್ಟೆಯನ್ನು ತಿವಿದು ಬಗೆದು ನೋಡುವಷ್ಟು ಕಾಲ ಕ್ರೂರಿಯಾಗಬಾರದಿತ್ತು. ಇದು ಭ್ರಮೆ ಹುಟ್ಟಿಸುತ್ತಿರುವ ರಾಜಕೀಯ ನಾಯಕರ ಕೊರಳಿಗೆ ಹಾಕಿದ ಶವಮಾಲೆ ಅಲ್ಲದೇ ಮತ್ತೇನು..? ಜನರು ಉದ್ಯಮಪತಿಗಳಿಗೆ, ಖಾಸಗೀಕರಣಕ್ಕೆ ಮಣೆ ಹಾಕುವ ಸರ್ಕಾರದ ಯೋಜನೆಗಳನ್ನು ವೈಭವೀಕರಿಸುತ್ತಾರೆ. ಬಡತನ, ಹಸಿವೆಯಲ್ಲಿ ಸಾಯುವ ಜನರ ಬಗ್ಗೆ ಏನೂ ಮಾತಾಡುವುದಿಲ್ಲ. ಭಾರತ ಯಾಕೆ ವಾಸ್ತವವನ್ನು ಗೋಡೆ ಕಟ್ಟಿ ಮುಚ್ಚಿ ಹಾಕುತ್ತದೆ..? ಆಡಳಿತ ವರ್ಗಕ್ಕೆ ಸತ್ಯಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಯಾಕೆ ಸಾಧ್ಯವಿಲ್ಲ..? ವಾಸ್ತವ ಅಂದರೇ, ಗೋಡೆಗೆ ಅಂಟಿರುವ ಬಣ್ಣ ಮಾತ್ರನಾ..?

ಅವರೆಲ್ಲರೂ ರಾತ್ರಿ ಹಗಲೆನ್ನದೆ ನಡೆಯುತ್ತಿದ್ದಾರೆ. ಇಲ್ಲಿ ಹಸಿದವರ ಬದುಕು ಎಂದಿಗೂ ನಿಕೃಷ್ಟವೇ ಇರಬೇಕು..! ಇದನ್ನು ‘ಇದು ನನ್ನ ಭಾರತ’ ಎಂದು ಹೇಳಿಕೊಳ್ಳುವ ನನಗೊಲಿದ ದೌರ್ಭಾಗ್ಯ ಎಂದು ಹೇಳದೇ ಮತ್ತೇನನ್ನು ಹೇಳಬೇಕು..?!


-ಶ್ರೀರಾಜ್ ವಕ್ವಾಡಿ 
 

3 comments: