Friday, May 15, 2020

ನೀವು ಖಂಡಿತ ಹೇಳುತ್ತೀರಿ..!? | ಕಂಗ್ರಾಜುಲೇಶನ್..!



ಈಗ ಮೊದಲಿನಂತಿಲ್ಲ. ಬಿಕ್ಕಿಗೆ ಚುಕ್ಕಿ ದೊರಕಿದೆ. ಆರ್ತ ಕೊನೆ ತಲುಪಿದೆ. ಮನಸ್ಸು ಮತ್ತೆ ಚಿಗುರು ಬಿಚ್ಚಲಾರಂಭಿಸುತ್ತಿದೆ. ಮೌನದ ಕಣ್ಕಟ್ಟುಗಳು ಉದುರಿ ಹೋಗಿ ಮಾತಾಡುವ ಶಕ್ತಿ ಈಗ ಬಂದಿದೆ.
ಮೋಡಗಳಿಂದ ಭರ್ತಿಯಾದ ಆಕಾಶದಿಂದ ಗುಡುಗು, ಮಿಂಚು, ಮಳೆ ಹನಿಯುವುದನ್ನು ನಿರೀಕ್ಷಿಸದೇ ಮತ್ತೇನು ನಿರೀಕ್ಷಿಸುತ್ತೀರಿ..?

ಬದುಕಿನಲ್ಲಿಯೂ ಹಾಗೆ.

ಇಲ್ಲಿ... ಸುಖ, ಸಂತೋಷ, ದುಃಖ, ದುಮ್ಮಾನ, ಸಂಕಟ ಮತ್ತು ಕೊನೆಗೊಂದು ನೆಮ್ಮದಿ ಬಿಟ್ಟರೇ, ಮಹತ್ತರವಾದದ್ದೇನು ಬಯಸುವುದಕ್ಕೆ ಸಾಧ್ಯ..? ಹೇಳಿ ಕೇಳಿ ಇದು ಬದುಕು ಅಷ್ಟೇ. ಅದಕ್ಕಿಂತ ಮಿಗಿಲಾದುದ್ದೇನಲ್ಲ. ಇಲ್ಲಿ ಇವುಗಳನ್ನೆಲ್ಲಾ ನಿರೀಕ್ಷಿಸದಿದ್ದರೂ ಬಂದಾಗ ಸ್ವೀಕರಿಸಿ ಅನುಭವಿಸಲೇ ಬೇಕು.

ಬದುಕೆನ್ನುವುದು ಈ ಸುಖ, ದುಃಖಗಳನ್ನು ಸೇರಿಸಿಕೊಂಡು ಹುಟ್ಟಿಕೊಳ್ಳುವ ವೃತ್ತಾಂತ ಅಷ್ಟೇ. ಅದರಿಂದ ದೊಡ್ಡ ಚರಿತ್ರೆ ನಿರ್ಮಿಸುವುದಕ್ಕೇನೂ ಆಗುವುದಿಲ್ಲ. ಒಂದು ವೇಳೆ ‘ಚರಿತ್ರೆ’ ಅಂತಹದ್ದೊಂದು ಸಾಹಸ ಮಾಡುವುದಕ್ಕೆ ಸಾಧ್ಯವಿದ್ದರೇ, ಅದು ನಿನ್ನಿಂದ ಮಾತ್ರ. ಬದುಕಿನಿಂದ ಖಂಡಿತ ಸಾಧ್ಯವಿಲ್ಲ. ಬದುಕು ನಿನ್ನ ಜೀವಿತಾವಧಿ. ಬದುಕು ನೀನಲ್ಲ. ನೀನು ಬದುಕಲ್ಲ.

ಅತ್ಯಂತ ಪ್ರೀತಿಯಿಂದ ಒಂದು ಥ್ಯಾಂಕ್ಸ್ ಹೇಳಿ.

ಯಾರಿಗೆ..?

‘ನಿಮ್ಮ ಬದುಕಿಗೆ’

ಯಾಕೆ..?

‘ನೀವು ನಡೆವ ದಾರಿಯುದ್ದಕ್ಕೂ ಬೇಕು ಎಂದಾಗ ಬೇಕಾದದ್ದನ್ನು ಕೊಡದೇ ಕಾಡಿಸಿದ್ದಕ್ಕೆ, ಕೇಳದೇ ಇದ್ದರೂ ಬೇಡವಾದದ್ದನ್ನು ಕೊಟ್ಟು ಸಂತೈಸಿದ್ದಕ್ಕೆ.’

ಒಮ್ಮೆ ಆಲೋಚನೆ ಮಾಡು. ಎಲ್ಲವೂ ಮುಗಿದ ಮೇಲೆ ‘ನೀವೀಗ ಎಷ್ಟೋ ನಿರಾಳರಾಗಿದ್ದಿರಿ..!’ ಎಸ್,  ಮತ್ತು ನೀವೀಗ ಹೇಳ್ತೀರಿ, ನಾನೀಗ ‘ಬದಲಾಗಿದ್ದೇನೆ’ ಎಂದು.

‘ಕಂಗ್ರಾಜುಲೇಶನ್’

‘ನೀವು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದೀರಿ ಎಂದು ಸಂತೋಷವಾಯ್ತು.’ ಈ ಬದಲಾವಣೆ ನಿಮ್ಮಿಂದಲೇ ಆಗಬೇಕಿತ್ತು, ಆಗುತ್ತಿದೆ. ಈ ಹಿಂದೆ ಎಷ್ಟು ದುಃಖಿಸಿವೆ ಅನ್ನುವುದಕ್ಕಿಂತ, ಮುಂದೆ ಎಷ್ಟು ಸುಖಿಸಲಿಕ್ಕಿವೆ ಅನ್ನುವುದು ಮುಖ್ಯ. ನಾಳೆಗಳಿಗೆ, ಕೈ ಕುಲುಕುವ ಮುನ್ನ, ಒಂದು ಅರ್ಥಪೂರ್ಣ ಸಂಕಲ್ಪ ಕೈಗೊಳ್ಳಿ. ಆ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ. ವಹಿಸಿಕೊಳ್ಳಿ.

ಆಗ ನೀವು ಖಂಡಿತ ಹೇಳುತ್ತೀರಿ.

ಏನು ಗೊತ್ತಾ..?

‘ನನ್ನ ಬದುಕು ನನ್ನನ್ನು ಏನು ಮಾಡಬೇಕಂದುಕೊಂಡಿತ್ತೋ, ಅದಕ್ಕಿಂತ ಉತ್ತಮವಾಗಿದ್ದೇನೆ’ ಎಂದು.

ಇಲ್ಲಿ... ಬದುಕೆಂದರೇ, ಆಗಬೇಕಾದ ಬದಲಾವಣೆ. ಪ್ರೀತಿಯೆಂದರೇ, ಕಳೆದುಕೊಳ್ಳಬೇಕಾದದ್ದನ್ನು ಕಳೆದುಕೊಂಡು, ಉಳಿದ ಭಾವನೆಗಳೊಂದಿಗೆ ಮಾತಾಡಿ ಗೆದ್ದು ನಿಲ್ಲುವ ಶಕ್ತಿ.
-ಶ್ರೀರಾಜ್ ವಕ್ವಾಡಿ 


1 comment: