Thursday, June 29, 2023

ನಿರಂಕುಶ ಆಡಳಿತದ ಕನಸಿನೆಡೆಗೆ ಡಬಲ್‌ ಎಂಜಿನ್‌ ಸರ್ಕಾರ್‌ !

 


ಏಕಪಕ್ಷೀಯ ಡಬಲ್‌ ಎಂಜಿನ್‌ ಗಳು ಎಷ್ಟು ಗೆದ್ದಿವೆ ? | ನಿಜಕ್ಕೂ ಡಬಲ್‌ ಎಂಜಿನ್‌ ಅಂದ್ರೇನು ?

ʼಡಬಲ್ ಇಂಜಿನ್ ಸರ್ಕಾರ್ʼ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೃಷ್ಟಿಸಿದ ಪದ. ಕೇಸರಿ ಪಕ್ಷವು ರಾಜ್ಯ ಮತ್ತು ಕೇಂದ್ರದಲ್ಲಿಯೂ ಆಡಳಿತ ಹೊಂದಿದ್ದರೆ ಅಭಿವೃದ್ಧಿಗೆ ಟರ್ಬೋಚಾರ್ಜ್ ಆಗುತ್ತದೆ ಎಂಬ ಕಲ್ಪನೆಯಲ್ಲಿ ಮತದಾರರ ತಲೆಗೆ ತುಂಬಿಸಿದ ಯೋಜಿತ ಅಂಶವಿದು. 

ಹಾಗಾದರೇ, ಇದು ಎಷ್ಟು ನಿಜ? ದೇಶದ ಈಶಾನ್ಯ  ರಾಜ್ಯ ಮಣಿಪುರ ಸಂಘರ್ಷದ ಹೊಗೆಯಲ್ಲಿ ಮುಳುಗುತ್ತಿದೆ. ಇದು ಡಬಲ್‌ ಇಂಜಿನ್‌ ಸರ್ಕಾರದ ಅಡಿಯಲ್ಲಿ ಆಡಳಿತ ಕಾಣುತ್ತಿರುವ ಒಂದು ರಾಜ್ಯದ ಕಟು ಉದಾಹರಣೆ. ಕಳೆದ ಹಲವು ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಸ್ತುತ ಹಿಂಸಾಚಾರದ ಅಂತರ್ಯುದ್ಧದ ಸ್ಥಿತಿಯಲ್ಲಿದೆ. ಹಲವು ಕಾರಣಗಳಿಂದ ಮಣಿಪುರ ಗುಡ್ಡಗಾಡಿನ ಸಮುದಾಯಗಳಲ್ಲಿ ಅಸಮಾಧಾನ ಕುದಿಯೊಡೆದಿದೆ. ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ವಿಚಾರಕ್ಕೆ ಆರಂಭವಾದ ವಿರೋಧ, ಹಿಂಸಾಚಾರ ಇಡೀ ದೇಶ ಮಣಿಪುರದ ವಾಸ್ತವ ಸ್ಥಿತಿಯತ್ತ ನೋಡುವ ಹಾಗೆ ಮಾಡಿದೆ. ಮಣಿಪುರದ ಎಸ್‌ ಟಿ ಸಮುದಾಯಗಳು ಈ ಮೈತಿ ಸಮುದಾಯವನ್ನು ಮೊದಲಿನಿಂದಲೂ ಎಸ್‌ ಟಿ ಸಮುದಾಯಗಳಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸುತ್ತಾ ಬಂದಿವೆ. ಮಣಿಪುರದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮೈತಿ ಸಮುದಾಯ ಎಸ್‌ ಟಿ ಪಂಗಡಕ್ಕೆ ಸೇರ್ಪಡೆಯಾದರೇ ಸರ್ಕಾರದ ಅನೂಕೂಲಗಳೆಲ್ಲಾ ಮೈತಿ ಸಮುದಾಯದ ಪಾಲಾಗಲಿವೆ ಎಂಬ ಆತಂಕವೇ ಈ ಹಿಂಸಾಚಾರಕ್ಕೆ ಕಾರಣ. ಮಣಿಪುರದ ೬೦ ವಿಧಾನಸಭಾ ಕ್ಷೇತ್ರಗಳ ಪೈಕಿ ೪೦ ಕ್ಷೇತ್ರಗಳು ಮೈತಿ ಸಮುದಾಯದ ಪ್ರಾಬಲ್ಯದಲ್ಲಿವೆ. ಹೀಗೆ ರಾಜಕೀಯ, ಸಾಮಾಜಿಕವಾಗಿ, ಆರ್ಥಿಕವಾಗಿ ಮೈತಿ ಸಮುದಾಯ ಮತ್ತಷ್ಟು ಅನುಕೂಲಗಳನ್ನು ಪಡೆಯುವ ಆತಂಕದಲ್ಲಿ ಈ ಹಿಂಸಾಚಾರ ತಾರರಕ್ಕೆ ಏರಿದೆ. ರಾಜ್ಯ ಸರ್ಕಾರವು ತನ್ನ ಪ್ರಮುಖ ಕೆಲಸವಾದ ಶಾಂತಿಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಮೋದಿ ಹೇಳುವ ಡಬಲ್‌ ಎಂಜಿನ್‌ ಸರ್ಕಾರ ಇಲ್ಲಿ ಕೆಲಸಕ್ಕೆ ಬಾರದಂತಾಗಿದೆ. 

ರಾಷ್ಟ್ರ ರಾಜಧಾನಿಯಲ್ಲೇ ಬಿಜೆಪಿಯ ಮಹತ್ವದ ಕಲ್ಪನೆ ಈ ʼಡಬಲ್‌ ಇಂಜಿನ್‌ ಸರ್ಕಾರ್‌ʼ ಇಲ್ಲ. ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು ಗೊತ್ತೇ ಇರುವ ವಿಷಯ. ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿಗಳನ್ನು ರಾಜಧಾನಿಯಲ್ಲಿಯೇ ಕಟ್ಟಿ ಹಾಕಿದ ಕೀರ್ತಿ ಕೇಜ್ರಿವಾಲ್‌ ಗೆ ಸಲ್ಲುತ್ತದೆ. ಕೇಜ್ರಿವಾಲ್‌ ಮೇಲೆ ಬಿಜೆಪಿಗೆ ದೊಡ್ಡ ಕಣ್ಣಿದೆ. ಕೇಜ್ರಿವಾಲ್ ವಿರುದ್ಧ ದೆಹಲಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸುವಂತೆ ಕೈಗೊಂಡ ಕಾರ್ಯತಂತ್ರಗಳೆಲ್ಲಾ ವಿಫಲವಾಗಿವೆ.‌ ಆಮ್‌ ಆದ್ಮಿ ಕೊಟ್ಟ ಯೋಜನೆಗೆ ದೆಹಲಿಯ ಜನ ಒಪ್ಪಿ ಮತ್ತೆ ಕೇಜ್ರಿವಾಲ್‌ ಅವರನ್ನೇ ಆಯ್ಕೆ ಮಾಡಿದ್ದು ಗೊತ್ತಿರುವ ವಿಷಯ. ಡಬಲ್‌ ಎಂಜಿನ್‌ ಸರ್ಕಾರ ಇರುವ ಎಲ್ಲಾ ಕಡೆ ಇಂತಹ ಜನಸ್ನೇಹಿ ಸರ್ಕಾರವಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಿ ಹೇಳಲು ಹೊರಟಿರುವ ವಿಷಯ. ಕೇಂದ್ರದಲ್ಲೊಂದು ರಾಜ್ಯದಲ್ಲೊಂದು ಸರ್ಕಾರವಿದ್ದೂ ಅಲ್ಲಿನ ಜನ ಒಂದು ಪಕ್ಷಕ್ಕೆ ನಿರಂತರವಾಗಿ ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸುತ್ತಿದ್ದಾರೆ ಎಂದರೇ ಅದಕ್ಕೆ ಉತ್ತಮ ಉದಾಹರಣೆ ದೆಹಲಿಯ ಆಮ್‌ ಆದ್ಮಿ ಪಾರ್ಟಿ ಸರ್ಕಾರ. ಮಣಿಪುರಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕೇಂದ್ರಲ್ಲಿಯೂ ಬಿಜೆಪಿ. ಮಣಿಪುರದಲ್ಲಿ ಮೋದಿ ಹೇಳುವ ಡಬಲ್‌ ಎಂಜಿನ್‌ ನಿಷ್ಕ್ರಿಯಗೊಂಡಿದೆ. ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಕಥೆ ಏನಾಗಿದೆ ಎನ್ನುವುದು ಗೊತ್ತಿರುವ ವಿಷಯ. ಒಟ್ಟಿನಲ್ಲಿ ಹಿಂದಿನಿಂದ ಈವರೆಗೆ ಈ ಡಬಲ್‌ ಎಂಜಿನ್‌ ಸರ್ಕಾರದ ಕಲ್ಪನೆ ತನ್ನ ಇಮೇಜ್‌ ಕಳೆದುಕೊಳ್ಳುತ್ತಲೆ ಬಂದಿದೆ. 

ಸ್ಕ್ರಾಲ್ ಡಾಟ್‌ ಇನ್ ಸುದ್ದಿ ಸಂಸ್ಥೆಯ ವರದಿ ಹೇಳುವ ಪ್ರಕಾರ ಕೇವಲ ಸದ್ಯ ೪೫ ಶೇಕಡಾದಷ್ಟು ಭಾರತೀಯರು ಡಬಲ್ ಇಂಜಿನ್ ಸರ್ಕಾರದ ಆಳ್ವಿಕೆಯ ಅಡಿಯಲ್ಲಿದ್ದಾರೆ.  ಕೆಲವೆಡೆ ಬಿಜೆಪಿ ರಾಜ್ಯ ಸರ್ಕಾರಗಳು ಆಪರೇಷನ್‌ ಕಮಲ, ರೆಸಾರ್ಟ್‌ ರಾಜಕಾರಣದ ಮೂಲಕ ಅಧಿಕ್ಕಾರಕ್ಕೇರಿವೆ. ಇಂತಹ ರಾಜ್ಯಗಳನ್ನು ಬಿಟ್ಟು ನೋಡುವುದಾದರೇ, ಡಬಲ್ ಇಂಜಿನ್ ಸರ್ಕಾರ್‌ ಆಡಳಿತದಲ್ಲಿ ಇರಲು ಮತ ಚಲಾಯಿಸಿದ ಭಾರತೀಯರ ಸಂಖ್ಯೆ ಕೇವಲ ೩೦ ಶೇಕಡಾ ಮಂದಿ ಅಷ್ಟೇ ಎನ್ನವುದು ಕಟು ಸತ್ಯ. 

ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಡಬಲ್ ಇಂಜಿನ್ ಸರ್ಕಾರಗಳು ವಾಸ್ತವವಾಗಿ ಪ್ರಬಲ ರಾಜಕೀಯ ಮಾದರಿಯಾಗಿತ್ತು. ೧೯೪೭ರಲ್ಲಿ ಬ್ರಿಟಿಷ್ ಸರ್ಕಾರ ಅಧಿಕಾರವನ್ನು ಹಸ್ತಾಂತರಿಸುವ ಸಮಯದಲ್ಲಿ, ಎಲ್ಲಾ ಪ್ರಾಂತ್ಯಗಳನ್ನು  ಆಗ ರಾಜ್ಯಗಳು ಎಂದು ಕರೆಯಲಾಗುತ್ತಿತ್ತು.  ಕೇಂದ್ರದಲ್ಲಿಯೂ ಸಹ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ರಾಜ್ಯದಲ್ಲಿಯೂ ಆಡಳಿತ ನಡೆಸಿತ್ತು. ಆದ್ದರಿಂದ ನೆಹರೂವಿಯನ್ ಅವಧಿಯು ʼಡಬಲ್-ಎಂಜಿನ್ ಸರ್ಕಾರ್‌ʼ ದ ಉಚ್ಛ್ರಾಯ ಸಮಯ. ಅದು ಪ್ರಾಬಲ್ಯ ಹೊಂದಿರುವ ಸರ್ಕಾರವಾಗಿದ್ದರಿಂದ ಅದಕ್ಕೆ ಹೆಸರೇ ಅಗತ್ಯವಿರಲಿಲ್ಲ. ಅದು ಸರಳ ಭಾರತೀಯ ರಾಜಕೀಯಕ್ಕೆ ಮಾದರಿಯಾಗಿತ್ತು. ವಿಪರ್ಯಾಸವೆಂದರೇ.  ಈ ಡಬಲ್‌ ಎಂಜಿನ್‌ ಕೂಡ ಕೆಲವು ರಾಜ್ಯಗಳಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿತ್ತು. 

ಪಶ್ಚಿಮ ಬಂಗಾಳದ ಪ್ರಕರಣವನ್ನೇ ತೆಗೆದುಕೊಳ್ಳಿ. ಬಂಗಾಳವು ೧೯೪೭ರವರೆಗೆ ಮುಸ್ಲಿಂ ಲೀಗ್ ಸರ್ಕಾರವನ್ನು ಹೊಂದಿದ್ದರೆ, ದೇಶ ವಿಭಜನೆಯ ನಂತರ, ಹೊಸದಾಗಿ ರಚಿಸಲಾದ ಪ್ರಾಂತ್ಯದ ಪಶ್ಚಿಮ ಅರ್ಧದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡಿತು. ಈ ಹಂತದಿಂದ ನೆಹರೂ ಅವರ ಸಾವಿನವರೆಗೂ ರಾಜ್ಯವನ್ನು ಕಾಂಗ್ರೆಸ್ ಆಡಳಿತ ನಡೆಸಿತು. ೧೯೭೧ ಅಗೊನಿ ಆಫ್ ವೆಸ್ಟ್ ಬೆಂಗಾಲ್ ಎಂಬ ಪುಸ್ತಕದಲ್ಲಿ ೧೯೪೭ರಿಂದ ದೇಶದ ಆರ್ಥಿಕ ಕುಸಿತದ ಸಂಪೂರ್ಣ ಪರಿಶೀಲನೆಯಲ್ಲಿ, ಆನಂದ ಬಜಾರ್ ಪತ್ರಿಕೆಯ ಪತ್ರಕರ್ತ, ರಣಜಿತ್ ರಾಯ್, ೧೯೪೭ರಿಂದ ೧೯೬೧ರ ಅವಧಿಯಲ್ಲಿ ಪಶ್ಚಿಮ ಬಂಗಾಳದ ಒಟ್ಟು ಕೈಗಾರಿಕಾ ಉತ್ಪಾದನೆಯು ಭಾರತದ ೨೭ಶೇಕಡಾದಿಂದ ೧೭ಶೇಕಡಾಕ್ಕೆ ಹೇಗೆ ಕುಸಿಯಿತು ಎಂಬುದನ್ನು ವಿವರಿಸಿದ್ದಾರೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ರಾಜ್ಯದ ಹೆಚ್ಚಿನ ಕೈಗಾರಿಕಾ ಅವನತಿಯು ಕಾಂಗ್ರೆಸ್‌ ನ "ಡಬಲ್-ಎಂಜಿನ್ ಸರ್ಕಾರ್" ಅವಧಿಯಲ್ಲಿ ನಡೆಯಿತು ಎನ್ನುವುದು ಇಲ್ಲಿ ಗಮನಾರ್ಹ. ಕೈಗಾರಿಕಾ ಉತ್ಪಾದನಾ ಕುಸಿತವು ಅದರ ಪ್ರಾಥಮಿಕ ಕಾರಣಕ್ಕಿಂತ ಹೆಚ್ಚಾಗಿ ಕಾರ್ಮಿಕರ ಅಶಾಂತಿಗೆ ಕಾರಣವಾಯಿತು. ಮತ್ತೆ ಕಾಂಗ್ರೆಸ್‌ ಪತನ. ರಾಜ್ಯದಲ್ಲಿ ಎಡಪಕ್ಷಗಳ ಉದಯಕ್ಕೆ ಕಾಂಗ್ರೆಸ್‌ ಪತನ ಕಾರಣವಾಯಿತು.  ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿ ನೇತೃತ್ವದ ಸರ್ಕಾರ ಇಲ್ಲಿ ಡಬಲ್ಎಂಜಿನ್ಸರ್ಕಾರದ ಕಲ್ಪನೆಯನ್ನು ಸ್ಥಾಪಿಸುವ ಪ್ರಯತ್ನದ ಹೊರತಾಗಿಯೂ ಅಲ್ಲಿನ ಜನ ಪ್ರಾದೇಶಿಕತೆಗೆ ಒತ್ತು ನೀಡಿದರು.  

ವಿಪರ್ಯಾಸವೆಂದರೆ, ಈ ಸಮಯದಲ್ಲಿ ಕೇಂದ್ರ ನೀತಿಗಳ ಮುಖ್ಯ ಫಲಾನುಭವಿಗಳಲ್ಲಿ ಒಂದಾದ ತಮಿಳುನಾಡು, ೧೯೬೦ರ ಹೊತ್ತಿಗೆ ಹಿಂದಿ ಹೇರಿಕೆಯ ವಿರುದ್ಧ ಹಿಂಸಾತ್ಮಕ ಆಂದೋಲನಗಳೊಂದಿಗೆ ರಾಜ್ಯವು ಎದ್ದು ನಿಂತಿತ್ತು. ೧೯೬೭ರ ವೇಳೆಗೆ ಇಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿಲ್ಲ. ಮಾತ್ರವಲ್ಲ, ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಿವೆ. ಇದು ಕೂಡ ಡಬಲ್‌ ಎಂಜಿನ್‌ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದ್ದಕ್ಕೊಂದು ಉದಾಹರಣೆ. ಇಡೀ ತಮಿಳುನಾಡಿನ ರಾಜಕೀಯವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸಿಕೊಂಡವು. ಆದಾಗ್ಯೂ, ತಮಿಳುನಾಡು ಸ್ವಾತಂತ್ರ್ಯದ ಸಮಯದಲ್ಲಿ ಹಿಂದುಳಿದಿದ್ದರೂ ಸಹ ಇಂದು ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ಇಂದು ತಮಿಳುನಾಡು ಉತ್ತರ ಪ್ರದೇಶಕ್ಕಿಂತ ದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎನ್ನುವುದು ಗಮನಾರ್ಹ.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವನ್ನು ಹೊಂದುವುದು, ಸಿದ್ಧಾಂತದಲ್ಲಿ ಅರ್ಥಾಥ್‌ ʼಡಬಲ್‌ ಎಂಜಿನ್‌ ಸರ್ಕಾರ್‌ʼ ಬಿಜೆಪಿ ಹೇಳಿಕೊಳ್ಳುವಂತೆ, ಸುಗಮ ಆಡಳಿತಕ್ಕೆ ಕಾರಣವಾಗಬೇಕು. ಪ್ರಾಮಾಣಿಕವಾಗಿ ರಾಜ್ಯದ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಪ್ರಾಯೋಗಿಕವಾಗಿ, ಇದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಬಹುದು, ಒಂದು ಪಕ್ಷದ ಹೈಕಮಾಂಡ್ ರಾಜಕೀಯ ಕಾರಣಗಳಿಗಾಗಿ, ರಾಜ್ಯದಿಂದ ನಿಜವಾದ ಬೇಡಿಕೆಗಳನ್ನು ನಿಗ್ರಹಿಸಲು ಬಯಸಬಹುದು. ಕೇಂದ್ರದಲ್ಲಿರುವ ಸರ್ಕಾರದ ವಿರೋಧ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೇ, ಆ ರಾಜ್ಯಕ್ಕೆ ಕೊಡಬೇಕಾದ ಸವಲತ್ತುಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯುವಂತಹದ್ದನ್ನೂ ಮಾಡಬಹುದು. ʼಡಬಲ್‌ ಎಂಜಿನ್‌ ಸರ್ಕಾರ್‌ʼ ಅಂದರೆ ದೆಹಲಿಯಲ್ಲಿ ತಾನು ಪ್ರಧಾನಮಂತ್ರಿಯಾಗಿದ್ದೇನೆ ರಾಜ್ಯದಲ್ಲಿ ತನ್ನ ಕೈಗೊಂಬೆಯಂತಿರುವ ಮುಖ್ಯಮಂತ್ರಿ ಬೇಕು ಎಂದರ್ಥವಲ್ಲ. ಇದು ನಮ್ಮ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿರಬಾರದು. ಈ ಡಬಲ್ ಇಂಜಿನ್ ಸರ್ಕಾರ ಎಂದರೆ ಯಾವ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ಬರುತ್ತದೆಯೋ ಅದು ನಿಜವಾದ ಡಬಲ್ ಇಂಜಿನ್ ಸರ್ಕಾರವಾಗುತ್ತದೆ.

ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ೧೯೮೪ರಲ್ಲಿ ಇಲ್ಲಿನ ಲೋಕಸಭೆ ಚುನಾವಣೆಯಲ್ಲಿ ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ೨೭ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು. ನಂತರ ೪ ತಿಂಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ೧೩೪ ಕ್ಷೇತ್ರಗಳಲ್ಲಿ ರಾಮಕೃಷ್ಣ ಹೆಗಡೆ ಅವರ ಜನತಾ ದಳಕ್ಕೆ ಅಧಿಕಾರ ಸಿಕ್ಕಿತು. ಮೊದಲ ಬಾರಿಗೆ ರಾಜ್ಯದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಬೇರೆ ಬೇರೆ ಪಕ್ಷಗಳಿಗೆ ಬಹುಮತ ಸಿಕ್ಕಿತು. ಅದೇ ನಿಜವಾದ ಡಬಲ್ ಎಂಜಿನ್. ನಿಜವಾದ ಡಬಲ್ ಎಂಜಿನ್ ಎಂದರೆ ಒಂದು ಎಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು ಆಗ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಹೇಳಬಹುದು. ಆದರೇ, ಈ ‌ʼಡಬಲ್ ಎಂಜಿನ್" ಹೊಸ ರೂಪಕವು ಬಹು ಪಕ್ಷದ ಪ್ರಜಾಪ್ರಭುತ್ವದ ತತ್ವವನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ ಮತ್ತು ಏಕಪಕ್ಷೀಯ ನಿರಂಕುಶ ಆಡಳಿತವನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. 

-ಶ್ರೀರಾಜ್‌ ವಕ್ವಾಡಿ   

Monday, June 19, 2023

ರಾಜಪ್ರಭುತ್ವದ ಹೇರಿಕೆಯ ಆತಂಕದಲ್ಲಿ ಪ್ರಜಾಪ್ರಭುತ್ವ ಭಾರತ !

( ಸಾಂದರ್ಭಿಕ ಚಿತ್ರ )

ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಒಳಗಿಂದೊಳಗೆ ಮೊಳಕೆ ಒಡೆಯುತ್ತಿವೆಯೇ ?

ತನ್ನ ಸಾಮರ್ಥ್ಯ, ಪರಾಕ್ರಮದಿಂದ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿಕೊಂಡ ಒಬ್ಬ ದೊರೆ ಇತರರನ್ನು ಕೇಳುವುದಕ್ಕೆ ಮುಂದಾಗುವುದಿಲ್ಲ. ಸರ್ವಾಧಿಕಾರದಿಂದಲೇ ಆಡಳಿತ ನಡೆಸುವುದಕ್ಕೆ ಮುಂದಾಗುತ್ತಾನೆ. ತನ್ನ ಆಡಳಿತದ ಅಡಿಯಲ್ಲಿ ಬರುವ ಎಲ್ಲಾ ವ್ಯವಸ್ಥೆಯನ್ನು ತನ್ನ ತೆಕ್ಕೆಯೊಳಗೆ ಇರುವಂತೆ ಮಾಡಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದ ವಿಸ್ತರಣೆ ಮಾಡುವುದಕ್ಕೆ ಸಲುವಾಗಿ ಆ ದೊರೆ ಯಾವುದಕ್ಕೂ ಅಂಜುವುದಿಲ್ಲ. ತಾನೊಬ್ಬ ಐಷಾರಾಮಿ ವ್ಯಕ್ತಿಯಾಗಿ ಮೆರೆದರಷ್ಟೇ ಸಾಕೆನ್ನುವ ಮನೋ ಧೋರಣೆಯಲ್ಲಿ ಸಾಮ್ರಾಜ್ಯ ಕಟ್ಟುವುದಕ್ಕೆ ಅಥವಾ ವಿಸ್ತರಿಸಿಕೊಳ್ಳುವುದಕ್ಕೆ ಸದಾ ಕಾಣುತ್ತಿರುತ್ತಾನೆ. ಅಲ್ಲಿನ ಎಲ್ಲಾ ವ್ಯವಸ್ಥೆಯನ್ನೇ ತನ್ನ ವಶದಲ್ಲಿರಿಸಿಕೊಂಡು ಆಡಳಿತ ಮಾಡುವುಕ್ಕೆ ಮುಂದಾಗುತ್ತಾನೆ. 

ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿಯೂ ಕೂಡ ಒಂದು ಹಂತದಲ್ಲಿ ರಾಜರ ಆಳ್ವಿಕೆಯಂತಹ ಸರ್ಕಾರ, ಆಡಳಿತ ಇಂದಿಗೂ ಜೀವಂತವಿದೆ. ಅಲ್ಲಿ ರಾಜರ ಆಳ್ವಿಕೆಯಲ್ಲಿ ಜನರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸದೇ ಇರುವ ವಾಡಿಕೆಯೇ ಪ್ರಧಾನವಾಗಿರುತ್ತದೆ. ಇಂತಹ ರಾಜಪ್ರಭುತ್ವದ ಧೋರಣೆ ಹೊಂದಿರುವ ಪ್ರಜಾಪ್ರಭುತ್ವದ ದೇಶಗಳ ನಾಯಕರು, ತಮಗೆ ಬಹು ಪರಾಕ್‌ ಹೇಳಿಸಿಕೊಳ್ಳುವುದಕ್ಕೆ, ತನ್ನ ದೇಹದ ಮೇಲೆ ಹೂವು ಚೆಲ್ಲಿಸಿಕೊಳ್ಳುವುದಕ್ಕೆ ಇಡೀ ವ್ಯವಸ್ಥೆಯ ಕಾರ್ಯಾಂಗವನ್ನೇ ಬಳಸಿಕೊಂಡಿರುವುದು ವಾಸ್ತವದ ಉದಾಹರಣೆಯೂ ಇದೆ ಎಂದರೇ ಆಶ್ಚರ್ಯವೇನಿಲ್ಲ. ಇಂತಹ ರಾಜಪ್ರಭುತ್ವದ ಧೋರಣೆಯಲ್ಲಿಯೇ ಪ್ರಜಾಪ್ರಭುತ್ವವನ್ನು ಕಾಣುತ್ತಿರುವ ಕೆಲವು ದೇಶಗಳ ನಾಗರಿಕರು ಇಂತಹ ವ್ಯವಸ್ಥೆಗೆ ಕುರುಡಾಗಿ ʼಜೈʼ ಎಂದು ಘೋಷಣೆ ಕೂಗಿದರು. ಗೋರಿಯೊಳಗೆ ಆಕಾಶಕ್ಕೆ ಮುಖ ಮಾಡಿ ಮಲಗಿದ್ದ ನಿರಂಕುಶ ಪ್ರಭುಗಳು ತಮ್ಮ ಉತ್ತರಾಧಿಕಾರಿಯೊಬ್ಬ ತನ್ನ ನೆಲದಲ್ಲಿಯೇ ಮರುಹುಟ್ಟು ಪಡೆದು ಆಳ್ವಿಕೆ ಮಾಡುತ್ತಿರುವುದನ್ನು ನೋಡಿ ಗೋರಿಯೊಳಗೇ ಸಮಾಧಾನದ ಉಸಿರು ಬಿಟ್ಟು ಮಗ್ಗಲು ಬದಲಾಯಿಸಿಕೊಂಡಿದ್ದರೇ ಅಚ್ಚರಿಯೇನಿಲ್ಲ. 

ʼಪ್ರಜಾಪ್ರಭುತ್ವದ ನಾಯಕ ರಾಜದಂಡವನ್ನು ಹಿಡಿಯಲಾರʼ. ಸ್ವೇಚ್ಛೆಯಿಂದ ಆಳುವ ರಾಜತ್ವ ಅಥವಾ ತನ್ನ ಮುಖಂಡತ್ವದ ಅಧೀನದಲ್ಲಿ ಸಮಗ್ರವಾದಿ ಸಿದ್ಧಾಂತವನ್ನು ತನ್ನ ಆಡಳಿತದಲ್ಲಿ ಕಾರ್ಯರೂಪಕ್ಕೆ ತರುವವ ಮಾತ್ರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಿಂತು ಆಡಳಿತ ನಡೆಸುತ್ತಾನೆ. ಆಳುವ ದೊರೆ ಯಾವ ಶಾಸನಕ್ಕಾಗಲಿ, ಸಂವಿಧಾನಕ್ಕಾಗಲಿ ಬದ್ಧನಾಗದೇ ತನ್ನ ಆಜ್ಞೆಯೇ ಶಾಸನವೆಂಬಂತೆ ಭಾವಿಸಿ ಅದನ್ನು ಜನತೆಯ ಮೇಲೆ ಬಲವಂತವಾಗಿ ಹೇರುವ ಆಡಳಿತ ಪದ್ಧತಿಯನ್ನು ಪಾಲಿಸುತ್ತಾನೆ. ಪ್ರಜಾಪ್ರಭುತ್ವದ ನಾಯಕ ಜನರೊಂದಿಗೆ ಬೆರೆತು ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಾನೆ.  

ರಾಜಪ್ರಭುತ್ವವು ರಾಜನ ಅಧಿಕಾರ ದೈವತ್ವವಾದದ್ದು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸುತ್ತದೆ. ಆತ ಎಷ್ಟೇ ಅಸಮರ್ಥನಾಗಿದ್ದರೂ, ಕ್ರೂರಿಯಾಗಿದ್ದರೂ ಜನರು ಅವನನ್ನು ಅವನ ಆಡಳಿತವನ್ನು, ಕ್ರೌರ್ಯವನ್ನು ದೈವಾಜ್ಙೆ ಎಂಬಂತೆ ಪಾಲಿಸುವಂತಹ ವಾತಾವರಣ ಸೃಷ್ಟಿ ಮಾಡುತ್ತಾನೆ. ಅಲ್ಲಿ ಹೇರುವ ಕ್ರೌರ್ಯತೆಗೆ ವಿದೇಯತೆ ತೋರಿಸುವುದೇ ಸ್ವಾತಂತ್ರ್ಯ ಎಂದು ಬಿಂಬಿಸಲಾಗುತ್ತದೆ. ಪ್ರಜಾಪ್ರಭುತ್ವದ ವಾದವನ್ನು ಈ ರಾಜಪ್ರಭುತ್ವ ತನ್ನ ವೈಭವೀಕರಣದಲ್ಲೇ ಮುಚ್ಚಿ ಹಾಕುವಂತೆ ಮಾಡುತ್ತದೆ. ಜನರನ್ನು ಭ್ರಮೆಯಲ್ಲೇ ರಂಜಿಸಿ ಸೆಳೆದುಕೊಂಡು ಆಳ್ವಿಕೆ ನಡೆಯುತ್ತದೆ. ಇಂತಹ ರಾಜಪ್ರಭುತ್ವದ ಧೋರಣೆಯನ್ನು ಪ್ರಜಾಪ್ರಭುತ್ವದ ದೇಶಗಳಲ್ಲಿ ಮಾಡಿದ ಅದೆಷ್ಟೋ ನಾಯಕರು ಆಗಿ ಹೋಗಿದ್ದಾರೆ. ಎಷ್ಟೋ ನಾಯಕರು ಇನ್ನೂ ಇದ್ದಾರೆ. ಹಾಗಾದರೇ, ಭಾರತದಂತಹ ಪ್ರಜಾಪ್ರಭುತ್ವ ದೇಶದ ವಾಸ್ತವ ಸ್ಥಿತಿ ಏನು ? ಪ್ರಸ್ತುತ ರಾಜಕಾರಣ ಹೇಗಿದೆ ? 

ದೇಶದಲ್ಲಿ ಬಿಜೆಪಿ ಸರ್ಕಾರ ಫ್ಯಾಸಿಸ್ಟ್‌ ಮನೋಧೋರಣೆಯಲ್ಲಿ ಆಡಳಿತ ನಡೆಸುತ್ತಿದೆ ಎಂಬ ವಿರೋಧಾಭಿಪ್ರಾಯವಿದೆ. ಈ ಫ್ಯಾಸಿಸ್ಟ್‌ ಎಂದರೇ ಮತ್ತೇನೋ ಅಲ್ಲ, ರಾಜಪ್ರಭುತ್ವ ಅಥವಾ ನಿರಂಕುಶ ಪ್ರಭುತ್ವದ ಸರ್ಕಾರ. ಇದೊಂದು ವಿಚಿತ್ರ ಪರಿಕಲ್ಪನೆಯಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಫ್ಯಾಸಿಸ್ಟ್‌ ಆರೆಸ್ಸೆಸ್‌ ನ ಒಂದು ವಿಭಾಗ ಎಂದು ಕರೆದರು. ಆದರೇ, ಬಿಜೆಪಿ ಈ ವಿರೋಧವನ್ನು ತಳ್ಳಿ ಹಾಕುತ್ತದೆ. ಬಿಜೆಪಿ ಸರ್ಕಾರದ ಆಡಳಿತವನ್ನು ಫ್ಯಾಸಿಸ್ಟ್‌ ಧೋರಣೆಯ ಪಕ್ಷ / ಸರ್ಕಾರ ಎಂದು ಕರೆದವರನ್ನು ʼಸ್ವತಂತ್ರ ಭಾರತದಲ್ಲಿʼ ಬಿಜೆಪಿ ಬಂಧಿಸಿದ ಉದಾಹರಣೆಯೂ ಇದೆ ಎನ್ನುವುದು ಇಲ್ಲಿ ಗಮನಾರ್ಹವಾದದ್ದು.    

ಅದೇನೇ ಇರಲಿ, ʼಒಡೆದು ಆಳುವʼ ನೀತಿ ಎಂಬ ವಿಷಕಾರಿ ರಾಜಕೀಯ ಅಸ್ತ್ರ ವಸಾಹತುಶಾಹಿ ದಬ್ಬಾಳಿಕೆಗಾರರು ಭಾರತದ ದೇಶ ಪ್ರೇಮಿ ನಾಗರಿಕರ ಮೇಲೆ ತಮ್ಮ ಅನಗತ್ಯ ಪ್ರಭಾವವನ್ನು ಅಥವಾ ಪ್ರಾಬಲ್ಯವನ್ನು ಬೀರಿದ್ದಿದೆ. ಆ ದಿನಗಳಿಂದ ಭಾರತದ ಜಾತ್ಯತೀತ ಮೌಲ್ಯಗಳು ಧಾರ್ಮಿಕ ಮೂಲಭೂತವಾದ ಶಕ್ತಿಗಳಿಂದ ಆಕ್ರಮಣಕ್ಕೆ ಒಳಗಾಯಿತು. ಇದು ರಾಜಕೀಯಕ್ಕೂ ಅಂಟಿತು. ಖಾಸಗೀಕರಣ, ಬಂಡವಾಳಶಾಹಿ, ವಸಾಹತುಶಾಹಿ ಧೋರಣೆಗಳನ್ನು ಮೆರೆಸುವ ಪ್ರವೃತ್ತಿಯಲ್ಲಿ ಆ ರಾಜಕೀಯ ಶಕ್ತಿ ಬೆಳೆಯಿತು. ಸರ್ಕಾರದ ಆಸ್ತಿಗಳನ್ನು ಹಣವಂತರಿಗೆ ಹಸ್ತಾಂತರಿಸಿ ದೇಶದ ಆಸ್ತಿಯನ್ನು ಶ್ರೀಮಂತ ವರ್ಗ ಕೂತು ಉಣ್ಣುವ ಹಾಗೆ ಮಾಡುವಲ್ಲಿ ಯಶಸ್ವಿ ಪಾತ್ರವನ್ನು ನಿಭಾಯಿಸಿತು ಎಂದರೇ ಅಚ್ಚರಿಯಿಲ್ಲ. 

ಇಲ್ಲಿ, ದೊಡ್ಡ ಆತಂಕವೆಂದರೇ, ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಒಳಗಿಂದೊಳಗೆ ಮೊಳಕೆ ಒಡೆಯುತ್ತಿವೆ ಎಂಬ ವಿಚಾರ. ಈ ದೇಶದ ಜನರು ಇಂತಹದ್ದೊಂದು ಕೆಟ್ಟ ಕಲ್ಪನೆಯನ್ನು ಇದುವರೆಗೆ ಅರ್ಥ ಮಾಡಿಕೊಳ್ಳದೇ ಇರುವುದೇ ಈ ದೇಶದ ದೊಡ್ಡ ದುರಂತಗಳಲ್ಲೊಂದು. 

ಸದ್ಯ, ದೇಶವನ್ನು ಆಳುತ್ತಿರುವ ಬಿಜೆಪಿ ಸರ್ಕಾರ ಗಣರಾಜ್ಯದ ಸ್ಥಾಪಕ ತತ್ವಗಳಿಗೆ ಕೇವಲ ಮೇಲ್ನೋಟದ ನಿಷ್ಠೆಯನ್ನು ಹೊಂದಿದೆ. ಬಿಜೆಪಿ ಸಂವಿಧಾನದ ಪ್ರಧಾನ ವಿಚಾರಗಳ ವಿರುದ್ಧ ಪದೇ ಪದೇ ದೇಶದಲ್ಲಿ ವಿಷ ಉಗುಳಿದೆ ಎಂದು ಕಾಂಗ್ರೆಸ್‌ ಅವ್ಯಾಹತವಾಗಿ ಗಂಭೀರ ಆರೋಪ ಮಾಡುತ್ತಿದೆ. ಭಾರತದ ಬಡವರನ್ನು ಆವರಿಸಿದ ಹಸಿವು ಹಾಗೂ ದುಃಖವು ಕಲ್ಪನೆಗೂ ಮೀರಿದೆ. ʼಸಬ್‌ ಕಾ ವಿಕಾಸ್‌ʼ ಹೆಸರಿನಲ್ಲಿ ಬಿಜೆಪಿ ಶ್ರೀಮಂತರ  ವಿಕಾಸ ಮಾಡುತ್ತಿದೆ ಎಂದು ಕೂಡ ಕಾಂಗ್ರೆಸ್‌ ಆರೋಪ  ಮಾಡುತ್ತಿದೆ. 

१९९०ರ ಹೊತ್ತಿಗೆ, ಭಾರತದಲ್ಲಿ 'ಹಿಂದುತ್ವ'ದ ಅಲೆ ಈ ವಿಷಯದ ತಾರಕಕ್ಕೆ ಏರಲು ಆರಂಭವಾಯಿತು. ಪಾಶ್ಚಿಮಾತ್ಯ ಪತ್ರಿಕೆಗಳು ಹಿಂದುತ್ವಕ್ಕೆ ‘ಹಿಂದೂ ರಾಷ್ಟ್ರೀಯತೆ’ ಪದವನ್ನು ಬಳಸುತ್ತವೆ. ಭಾರತೀಯ ವಿಮರ್ಶಕರು ಹಿಂದುತ್ವದ ಮನಸ್ಥಿತಿಯನ್ನು ವಿವರಿಸಲು 'ಬಹುತ್ವವಾದ' ಎಂಬ ಪದವನ್ನು ಕೆಲವೊಮ್ಮೆ ಬಳಸುತ್ತಾರೆ. ಅಂದರೆ, 'ಹಿಂದೂಗಳು ಮಾತ್ರ ಹಕ್ಕುಗಳನ್ನು ಹೊಂದಿರಬೇಕು ಮತ್ತು ಅವರು ಬಹುಮತವನ್ನು ರೂಪಿಸುವ ಕಾರಣ ಇದನ್ನು ಸಮರ್ಥಿಸಲಾಗುತ್ತದೆಂಬ ಅಭಿಪ್ರಾಯವಿದೆ.  

ಆರೆಸ್ಸೆಸ್ ಸದಸ್ಯರೂ ಆಗಿದ್ದ ವಾಜಪೇಯಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಬೇಕಾದ ಹಂತವನ್ನು ಬಿಜೆಪಿ ಹಾದುಹೋಯಿತು. ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈಗಿರುವಷ್ಟರ ಮಟ್ಟಿಗೆ ಮುಸ್ಲೀಂ ವಿರೋಧ ವಾತಾವರಣವಿರಲಿಲ್ಲ. ೨೦೦೪-೨೦೧೪ರಲ್ಲಿ ಕಾಂಗ್ರೆಸ್‌  ಅಧಿಕಾರ, ಹೆಚ್ಚಿನ ಆರ್ಥಿಕ ಬೆಳವಣಿಗೆಯ ಅವಧಿ, ಭಾರತವು ಮತ್ತೊಂದು ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬ ಕಲ್ಪನೆಗೆ ಕಾರಣವಾಯಿತು, ೨೦೦೪ರಲ್ಲಿ, ವಾಜಪೇಯಿ ಸರ್ಕಾರವು ರಾಷ್ಟ್ರೀಯ ಚುನಾವಣೆಯಲ್ಲಿ ಸೋತಿತು ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾದ ಸರ್ಕಾರ. ಅವರು ೨೦೦೪-೨೦೧೪ರ ಅವಧಿಯಲ್ಲಿ ಎರಡು ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿದ್ದರು ಮತ್ತು ಈ ಅವಧಿಯು ಭಾರತದ ಆರ್ಥಿಕತೆಯ ಸುವರ್ಣಯುಗವಾಗಿತ್ತು. ಡಾ. ಸಿಂಗ್ ಅವರ ಅಡಿಯಲ್ಲಿ, ಭಾರತದ ಆರ್ಥಿಕತೆಯು ೮-೧೦ ಶೇಕಡಾದಷ್ಟು ಬೆಳೆಯಿತು. ಚೀನಾಕ್ಕೆ ಭಾರತವು ಸವಾಲಾಗಿದೆ ಎಂದು ಪಾಶ್ಚಿಮಾತ್ಯ ಪತ್ರಿಕೆಗಳು ಸುದ್ದಿ ಪ್ರಕಟಿಸಿದವು. ಸಿಂಗ್ ನೇತೃತ್ವದ ಸರ್ಕಾರ ಆರ್ಥಿಕ ಬೆಳವಣಿಗೆ, ಅಭಿವೃದ್ಧಿಯ ಮೇಲೆ ಕೇಂದ್ರಿತವಾಗಿತ್ತು. ಹಿಂದೂ-ಮುಸ್ಲಿಂ ಘರ್ಷಣೆಗಳು ಹಿನ್ನಲೆಗೆ ಸರಿದವು. ಆರ್ಥಿಕ ಬೆಳವಣಿಗೆಯ ಹೊರತಾಗಿಯೂ, ಸಿಂಗ್ ವಿರುದ್ಧ ಮಾತ್ರವಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂತು. ಬಿಜೆಪಿಯು ಹಿಂದೂಗಳನ್ನು ಗೆಲ್ಲಲು ಭ್ರಷ್ಟಾಚಾರ ಮತ್ತು ಮುಸ್ಲಿಂ ವಿರೋಧಿ ಅಭಿಪ್ರಾಯವನ್ನು ಸಾಮಾಜಿಕ ವಲಯದಲ್ಲಿ ಸೃಷ್ಟಿಸಿ ೨೦೧೪ರಲ್ಲಿ ಅಧಿಕಾರ ಹಿಡಿಯಿತು. 

ವಾಜಪೇಯಿ ಕಾಲದ ನಂತರ, ಅಡ್ವಾಣಿಯವರನ್ನು ಬಿಜೆಪಿ ಪಕ್ಕಕ್ಕೆ ಸರಿಸಿದ ನಂತರ ಆರೆಸ್ಸೆಸ್ ಮತ್ತುಬಿಜೆಪಿ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಕಟ್ಟರ್ವಾದಿ ಮೋದಿಯವರನ್ನು ಪ್ರೊಜೆಕ್ಟ್‌ ಮಾಡಲಾಯಿತು. ಹಿಂದೂ ಪ್ರಬಲ ವ್ಯಕ್ತಿ ಎಂಬ ಅವರ ಖ್ಯಾತಿಯು ೨೦೧೪ರ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲವಿಗೆ ಕಾರಣವಾಯಿತು. ಅವರ ಮೊದಲ ಅವಧಿಯ ಆರ್ಥಿಕ ವೈಫಲ್ಯಗಳ ಹೊರತಾಗಿಯೂ, ಮೋದಿ ೨೦೧೯ರಲ್ಲಿ ಎರಡನೇ ಅವಧಿಗೆ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಗೆದ್ದರು. ಇದು ೨೦೧೯ರ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮೊದಲು ಸಂಭವಿಸಿದ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಗಡಿಯಾಚೆಗಿನ ವೈಮಾನಿಕ ದಾಳಿಯನ್ನು ಹಿಂದೂ ಬಹುಸಂಖ್ಯಾತರು ಯಶಸ್ವಿ ಕಾರ್ಯಾಚರಣೆ ಎಂದು ಭೇಷ್‌ ಎಂದರು. ಮತ್ತು ಇದು ಮುಸ್ಲಿಮರ ವಿರುದ್ಧ ನಿಲ್ಲುವ ಪ್ರಬಲ ಹಿಂದೂ ಎಂಬ ಮೋದಿಯವರ ಚಿತ್ರಣವನ್ನು ಬಲಪಡಿಸಿತು. ಈ ಎಲ್ಲಾ ಆರೋಪ, ಪ್ರತ್ಯಾರೋಪಗಳ ಹಿನ್ನಲೆಯಲ್ಲಿ ಅಧಿಕೃತವಾಗಿ ಮೋದಿ ಸರ್ಕಾರ ಮುಸ್ಲೀಮರನ್ನು ದ್ವೇಷಿಸುವ ವಾತಾವರಣ ಸೃಷ್ಟಿಸದಿದ್ದರೂ, ಸಾಮಾಜಿಕ ವಲಯದಲ್ಲಿ ಮುಸ್ಲೀಂ ದ್ವೇಷಕ್ಕೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಕೇಳಿ ಬಂತು. ಪ್ರಜಾಪ್ರಭುತ್ವದಲ್ಲಿ ಸನಾತನವಾದಿ ರಾಜಪ್ರಭುತ್ವದ ಹೇರಿಕೆಯನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ಸೇರಿ ಎಲ್ಲಾ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಬಲವಾದ ಆರೋಪ ಮಾಡಲಾರಂಭಿಸಿವೆ.    

ದೇಶದ ಜನರಿಗೆ ಈ ಸಿದ್ಧಾಂತದ ಅರಿವಿಲ್ಲದೇ ಏನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಕೆಟ್ಟ ತತ್ವದ ಬಗ್ಗೆ ದೇಶದ ಜನ ಅರ್ಥೈಸಿಕೊಂಡಿದ್ದಾರೆ. ಜನರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಮ್ಮ ಕರ್ತವ್ಯವೆಂದು ತಿಳಿದುಕೊಳ್ಳುವ ಅರಿವು ಆಗಬೇಕು. ಮತ್ತದನ್ನು ತಿಳಿ ಹೇಳುವ ಒಂದು ಪರ್ಯಾಯ ವ್ಯವಸ್ಥೆ ಬೇಕು. ಇದರಿಂದ ಮಾತ್ರ ಭಾರತ ಮತ್ತದರ ಜಾತ್ಯತೀತ ಪ್ರಜಾಪ್ರಭುತ್ವವನ್ನು ಉಳಿಸಬಹುದು. ಭಾರತ ಇದಕ್ಕೆ ತಯಾರಿದೆಯೇ ?  

-ಶ್ರೀರಾಜ್‌ ವಕ್ವಾಡಿ 


Tuesday, June 13, 2023

2024 : ವಿಶ್ವಗುರು ವರ್ಸಸ್‌ ಯಾರು ?

'ಜೂನಿಯರ್‌ ಇಂದಿರಾʼ ಪ್ರೊಜೆಕ್ಟ್‌ ಮಾಡಲು ಕಾಂಗ್ರೆಸ್‌ ಪಟ್ಟು ? ।ಪ್ರತಿಪಕ್ಷಗಳ 'ರಿಸರ್ವೇಶನ್‌ʼ !

ಕಾಂಗ್ರೆಸ್‌ ೨೦೨೪ರ ಚುನಾವಣೆಗಾಗಿ ಬಹಳ ಸ್ಪಷ್ಟವಾಗಿ ಹೆಜ್ಜೆಯಿಡುತ್ತಿದೆ. ಕರ್ನಾಟಕ ವಿಧಾನಸಭೆಯ ಭರ್ಜರಿ ಜಯ ಕಾಂಗ್ರೆಸ್‌ ಪಾಳಯದಲ್ಲಿ ವಿಶೇಷವಾದ ಆಶಾವಾದದ ಭಾವನೆಯನ್ನು ಮೂಡಿಸಿದೆ. ದಕ್ಷಿಣ ಭಾರತದ ಬಗ್ಗೆ ಹೊಸ ಭರವಸೆ ಕಾಂಗ್ರೆಸ್‌ ನಲ್ಲಿ ಹುಟ್ಟಿದೆ. ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್‌, ತನ್ನ ರಾಜಕೀಯ ತಂತ್ರಗಾರಿಕೆಯನ್ನು ಕೂಡ ಅಗತ್ಯಕ್ಕೆ ಬೇಕಾಗಿ ಬದಲಾಯಿಸಿಕೊಂಡಿದೆ. ಇಡೀ ದೇಶವನ್ನು ಕೆಲವು ದಶಕಗಳ ಕಾಲದವರೆಗೆ ಆಳಿದ ಒಂದು ರಾಷ್ಟ್ರೀಯ ಪಕ್ಷ, ಇಡೀ ದೇಶದಾದ್ಯಂತ ʼಹಿಂದುತ್ವʼ ಎನ್ನುವ ಸಿದ್ಧಾಂತದ ಅಲೆಯಲ್ಲಿ ಮುಳುಗಿ ಹೋಗಿ ಮತ್ತೆ ಚೇತರಿಸಿಕೊಂಡು, ಫಿನಿಕ್ಸ್‌ ಹಕ್ಕಿಯಂತೆ ಎದ್ದೇಳುತ್ತಿರುವ ಆರಂಭಿಕ ಗುರುತಿದು. ಇದು ದೇಶದ ಅತ್ಯಂತ ಹಿರಿಯ ಪಕ್ಷದ ಚುನಾವಣಾ ತಂತ್ರ. ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಚುನಾವಣಾ ನಿರೀಕ್ಷೆಗಳು/ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗಾಗಿ ಹಾಕಿಕೊಂಡ  ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೇ, ಒಂದು ರಾಜಕೀಯ ಪಕ್ಷ ಎಲ್ಲಿ ಮುಟ್ಟಿ ತಲುಪಬೇಕೋ ಅಲ್ಲಿ ತಲುಪುತ್ತಿದೆ ಎಂದೆನ್ನಿಸುತ್ತಿದೆ. ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರಯತ್ನದಲ್ಲಿ ರಾಜಕೀಯ ವಿರೋಧ ಒಕ್ಕೂಟವನ್ನು  ಸೃಷ್ಟಿಸಲು ಸೈದ್ಧಾಂತಿಕ ಮೈತ್ರಿಯೆಡೆಗೆ ಕಾಂಗ್ರೆಸ್‌ ಇಟ್ಟ ಹೆಜ್ಜೆ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತಿದೆ. 

ಕಾಂಗ್ರೆಸ್‌ ಜನರನ್ನು ತಲುಪುವುದಕ್ಕೆ ಅಂದಿನಿಂದ ಇಂದಿನವರೆಗೂ ಮಹತ್ವದ ಹೆಜ್ಜೆಯನ್ನಿಟ್ಟಿದೆ. ತನ್ನ ಹಳೆಯ ರಾಜಕೀಯ ಖದರ್‌, ವರ್ಚಸ್ಸನ್ನು ಕಳೆದುಕೊಂಡ ಒಂದು ರಾಜಕೀಯ ಪಕ್ಷ ಸಾರ್ವಜನಿಕ ಸಂಪರ್ಕವನ್ನು ಯಾವುದೇ ಪೂರ್ವ ನಿಯೋಜಿತ ʼರೋಬೋ ಆಡಿಯನ್ಸ್‌ʼ ಗಳಿಲ್ಲದೇ ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಮಾಡಿ ತೋರಿಸಿದೆ.  ೨೦೨೪ರ ಲೋಕಸಭಾ ಚುನಾವಣೆಯೊಳಗಾಗಿ ಕಾಂಗ್ರೆಸ್‌ ಮತ್ತೊಂದು ಭಾರತ್‌ ಜೋಡೋ ಯಾತ್ರೆಯನ್ನು ಕೈಗೊಳ್ಳಳಿದೆ ಎಂಬ ಮಾತು ಪಕ್ಷದ ಆಂತರಿಕ ವಲಯದಿಂದ ಕೇಳಿ ಬಂದಿದೆ. ಪಶ್ಚಿಮದಿಂದ ಪೂರ್ವಕ್ಕೆ ಅಥವಾ ಪೂರ್ವದಿಂದ ಪಶ್ವಿಮಕ್ಕೆ / ಪೋರ್‌ ಬಂದರ್‌ ನಿಂದ ಅರುಚಲಾ ಪ್ರದೇಶ್‌ ಗೆ ಅಥವಾ ಅರುಣಾಚಲ ಪ್ರದೇಶದಿಂದ ಪೋರ್‌ ಬಂದರ್‌ ಗೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಮತ್ತೊಂದು ಸಾರ್ವಜನಿಕ ಸಂಪರ್ಕ ಸಾಧಿಸುವ ಭಾರತ್‌ ಜೋಢೋ ಯಾತ್ರೆಯಂತಹ ಪಾದಯಾತ್ರೆಯನ್ನು ಕೈಗೊಳ್ಳುವುದು ಬಹುತೇಕ ನಿಶ್ಚಿತ ಎಂಬ ಮಾತು ಕಾಂಗ್ರೆಸ್‌ ಪಾಳಯದಲ್ಲಿದೆ. 

ಏನೇ ಆದರೂ ಕಾಂಗ್ರೆಸ್‌ ಅಥವಾ ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವ ಯಾರ ಹೆಗಲಿಗೇರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ರಾಹುಲ್‌ ಗಾಂಧಿ ಅನರ್ಹ ಸಂಸದ. ೨೦೧೯ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜನಪ್ರತಿನಿಧಿ ಕಾಯ್ದೆ ೧೯೫೧ರ ಪ್ರಕಾರ, ರಾಹುಲ್‌ ತಮ್ಮ ವಯನಾಡಿನ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈಗ ಸದ್ಯಕ್ಕೆ ರಾಹುಲ್‌ ನೇತೃತ್ವದಲ್ಲೇ ಪ್ರತಿಪಕ್ಷಗಳ ಒಕ್ಕೂಟಕ್ಕೆ ತಯಾರಿಯಾಗುತ್ತಿದೆ. ಒಕ್ಕೂಟ ಯಾರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರೊಜೆಕ್ಟ್‌ ಮಾಡಲಿದೆ ? ಅಥವಾ ಕಾಂಗ್ರೆಸ್‌ ಇಂದಿರಾ ಗಾಂಧಿಯಾದ ಮೇಲೆ ಮತ್ತೊಮ್ಮೆ ಮಹಿಳೆಯೋರ್ವರಿಗೆ ಸ್ಥಾನಮಾನ ನೀಡುವ ಉದ್ದೇಶದಲ್ಲಿ ಪ್ರಿಯಾಂಕ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರೊಜೆಕ್ಟ್‌ ಮಾಡುವುದಕ್ಕೆ ಪಟ್ಟು ಹಿಡಿಯಲಿದೆಯೇ ? ಇದಕ್ಕೆ ಒಕ್ಕೂಟದಲ್ಲಿರುವ ಉಳಿದ ಪಕ್ಷಗಳು ಒಪ್ಪುತ್ತವೆಯೇ ? ಎನ್ನುವುದು ಸದ್ಯದ ಪ್ರಶ್ನೆ. 

ವಿಶ್ವಗುರು, ಹಿಂದೂ ಹೃದಯ ಸಾಮ್ರಾಟ ಎಂಬುವುದೆಲ್ಲಾ ಭಾರತದ ಮಾಧ್ಯಮಗಳು ಪ್ರಧಾನಿ ಮೋದಿಯನ್ನು ವೈಭವೀಕರಿಸಿದ ಪರಿ ಅಷ್ಟೇ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚು ಈ ಬಾರಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ದೇಶದ ಉತ್ತರ ಭಾರತಕ್ಕಿಂತ ಹೆಚ್ಚು ದಕ್ಷಿಣ ಭಾರತದಲ್ಲಿ ಮೋದಿ ಆಡಳಿತಕ್ಕೆ ಜನ ಭ್ರಮನಿರಸನಗೊಂಡಿದ್ದಾರೆ. ಮಹಿಳಾ ಸುರಕ್ಷತೆಗೆ ಬೇಕಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಮೋದಿ ಸರ್ಕಾರ ವಿಫಲಗೊಂಡಿದೆ ಎನ್ನುವುದಕ್ಕೆ ರಾಷ್ಟ್ರದ ರಾಜಧಾನಿ ದೆಹಲಿ ಜಂತರ್‌ ಮಂತರ್‌ ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್‌ ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ತಿಂಗಳುಗಟ್ಟಲೆ ಮಾಡಿದ ಪ್ರತಿಭಟನೆಯೇ ಸಾಕ್ಷಿ. ಇವೆಲ್ಲವೂ ಕೂಡ ದೇಶದ ಮಹಿಳೆಯರಲ್ಲಿ ಸರ್ಕಾರದ ಮೇಲೆ ಅಪನಂಬಿಕೆಗೆ ಕಾರಣವಾಗಿದೆ. ಲೈಂಗಿಕ ದೌರ್ಜನ್ಯವೆಸಗಿರುವುದಕ್ಕೆ ಸಾಕ್ಷಿ ಕೊಡಿ ಎಂದು ಹೇಳುವಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ತನ್ನ ಕೀಳು ಅಭಿರುಚಿಯನ್ನು ಈ ಪ್ರಕರಣದಲ್ಲಿ ತೋರಿಸಿತು ಎನ್ನುವುದು ಇಲ್ಲಿ ಗಮನಾರ್ಹ. 

ಇನ್ನು, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಸಂಪುಟದ ಸಚಿವ ಮತ್ತು ಲೈಂಗಿಕ ದೌರ್ಜನ್ಯದ ಆರೋಪಿ ಸಂದೀಪ್ ಸಿಂಗ್ ಅವರನ್ನು ಸಮರ್ಥಿಸಿಕೊಂಡರು. ಮಹಿಳಾ ಪ್ರತಿಭಟನಾಕಾರರು ಅಲ್ಲಿ ತಮ್ಮ ದುಪಟ್ಟಾವನ್ನು ಅವರ ಪಾದಗಳತ್ತ ಎಸೆದು ಆಕ್ರೋಶ ವ್ಯಕ್ತ ಪಡಿಸಿದ್ದು ದೇಶದಾದ್ಯಂತ ದೊಡ್ಡ ಸುದ್ದಿಯಾಯಿತು. “ಆಪ್ ಮೇರಿ ನಹೀ ಸುನತೆ, ಕೋಯಿ ಬಾತ್ ನಹೀ. ಮೇರೆ ಪತಿ ಪರ್ ಜಾನ್ಲೇವಾ ಹಮ್ಲಾ ಹುವಾ ಥಾ. ಏಕ್ ಔರತ್ ಕಿ, ಏಕ್ ಹಿಂದೂಸ್ತಾನಿ ಔರತ್ ಕಿ ಇಜ್ಜತ್ ಉಸ್ಕೆ ದುಪ್ಪಟೆ ಮೇ ಹೋತೀ ಹೈ. ಯೇ ಲೋ ಇಸ್ಸೆ, ಯೇ ಹೈ ಏಕ್ ಹಿಂದೂಸ್ತಾನಿ ಔರತ್ ಕಾ ದುಪಟ್ಟಾ” (ನೀವು ನನ್ನ ಮಾತನ್ನು ಕೇಳುವುದಿಲ್ಲ, ಪರವಾಗಿಲ್ಲ. ನನ್ನ ಗಂಡನ ಮೇಲೆ ಹಲ್ಲೆ ಮಾಡಲಾಯಿತು. ಮಹಿಳೆಯ, ಭಾರತೀಯ ಮಹಿಳೆಯ ಗೌರವವು ಅವಳ ದುಪಟ್ಟಾದಲ್ಲಿದೆ. ಇದನ್ನು ತೆಗೆದುಕೊಳ್ಳಿ, ಇದು ಭಾರತೀಯ ಮಹಿಳೆಯ ದುಪಟ್ಟಾ) ". ಎಂಬ ಮಹಿಳಾ ಆಕ್ರೋಶಗಳೆಲ್ಲಾ ಮೋದಿ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಮುಖಭಂಗವಾಯಿತು. ʼಭೇಟಿ ಪಡಾವೋ, ಭೇಟಿ ಬಚಾವೋʼ ಎಂಬೆಲ್ಲಾ ಸರ್ಕಾರದ ಯೋಜನೆಗಳೆಲ್ಲಾ ಅನುಷ್ಠಾನಕ್ಕೆ ಬರದೆ ಉಳಿದವು.  

ಇವೆಲ್ಲಾ ಆಡಳಿತ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿವೆ. ವಿರೋಧ ಪಕ್ಷಗಳಿಗೆ ಇದೊಂದು ಅಸ್ತ್ರವಾಗಿ ದೊರಕಿತು. ಮೋದಿ ನೇತೃತ್ವದ ಸರ್ಕಾರದ ʼರಾಜಕೀಯ ಉದ್ದೇಶಿತʼ ಮಹಿಳಾ ಪರ ಯೋಜನೆಗಳಿದ್ದರೂ, ಕಳೆದ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮಹಿಳೆಯರ ಬೆಂಬಲ ಇಳಿಮುಖವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ೨೦೨೨ರ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ, ಲೋಕನೀತಿ-ಸಿಎಸ್‌ಡಿಎಸ್ ಪೋಸ್ಟ್-ಪೋಲ್ ಸಮೀಕ್ಷೆ ಹೇಳುವ ಪ್ರಕಾರ, ಬಿಜೆಪಿಗೆ ಮಹಿಳಾ ಮತದಾರರ ಬೆಂಬಲದಲ್ಲಿ ಶೇಕಡಾ ಆರರಷ್ಟು ಕುಸಿತ ಕಂಡಿದೆ. ಕರ್ನಾಟಕದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ ಎಂದು ದಿ ಇಂಡಿಯನ್ ಎಕ್ಸ್‌ ಪ್ರೆಸ್ ವರದಿಯಲ್ಲಿ ಹೇಳಿರುವುದನ್ನು ಖಂಡಿತವಾಗಿ ಅಲ್ಲಗಳೆಯುವಂತಿಲ್ಲ. 

ಮಹಿಳೆಯರು ಮುಂದಿನ ಲೋಕಸಭೆಯಲ್ಲಿಮತ ಚಲಾಯಿಸುವಾಗ ಇದೇ ಮನಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬ ವಾದವು ಮುಂದೆ ಬರಬಹುದು, ಆದರೆ ಕಾಂಗ್ರೆಸ್‌ ಗೆ ಈ ಬಗ್ಗೆ ಗಮನ ನೀಡುವುದಕ್ಕೆ ಸಾಕಷ್ಟು ಉತ್ತಮ ಅವಕಾಶವಿದೆ. ಮೋದಿ ಸಂಪುಟದ ೩೦ ಸಚಿವರಲ್ಲಿ ಇಬ್ಬರು ಮಾತ್ರ ಮಹಿಳೆಯರು. ಒಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇನ್ನೊಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ. ಪ್ರತಿಪಕ್ಷಗಳು ಮುಂದಿನ ಲೋಕಸಭೆಯಲ್ಲಿ ಇವೆಲ್ಲಾ ವಿಚಾರ ಮುಂದಿಟ್ಟುಕೊಂಡು ಮಹಿಳೆಯರನ್ನು ಪ್ರೊಜೆಕ್ಟ್‌ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ಮತದಾರರನ್ನು ಓಲೈಸಲು ಕಾಂಗ್ರೆಸ್ ಅಥವಾ ಪ್ರತಿಪಕ್ಷಗಳಿಗೆ ಅಲ್ಲಿ ಅವಕಾಶವಿದೆ. ಮಮತಾ ಬ್ಯಾನರ್ಜಿ ಅವರು ಇಡೀ ಪಶ್ಚಿಮ ಬಂಗಾಳವನ್ನೇ ತನ್ನ ಪರವಾಗಿ ಇರುವಂತೆ ಇಟ್ಟುಕೊಂಡಿದ್ದಾರೆ. ರಾಜ್ಯವನ್ನು ಮೀರಿ ಹೋಗುವ ಸಮರ್ಥರೂ ಹೌದು. ಆದರೆ, ಕಾಂಗ್ರೆಸ್ ಈ ವಿಚಾರದಲ್ಲಿ ಹಲವಾರು ʼರಿಸರ್ವೇಶನ್‌ʼ ಗಳನ್ನು ಹೊಂದಿದೆ. 

ಕಾಂಗ್ರೆಸ್‌ ಗೆ ಇಲ್ಲಿ ಪ್ರಿಯಾಂಕಾ ಗಾಂಧಿ ಮತ್ತೊಂದು ಆಯ್ಕೆಯಾಗುತ್ತಾರೆ. ಅವರು ಪ್ರಭಾರ ಪ್ರಧಾನ ಕಾರ್ಯದರ್ಶಿಯಾಗಿರುವ ಯುಪಿಯಿಂದ ಆಚೆಗೆ ತಮ್ಮ ಹೆಜ್ಜೆಗುರುತುಗಳನ್ನು ಮೌನವಾಗಿ ವಿಸ್ತರಿಸುತ್ತಿದ್ದಾರೆ. ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಕೆಯ ಪ್ರಚಾರ ಕರ್ನಾಟಕದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತು. ಕರ್ನಾಟಕ ಚುನಾವಣಾ ಪ್ರಚಾರ ಮುಗಿದ ಬೆನ್ನಲ್ಲೇ ಅವರು ತೆಲಂಗಾಣದಲ್ಲಿ ತಮ್ಮ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಂಡರು. ಈಗ ಅವರು ಮಧ್ಯಪ್ರದೇಶದ ತಂತ್ರಗಾರಿಕೆಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಚಾರಕಿ ಮತ್ತು ತಂತ್ರಗಾರ್ತಿಯಾಗಿ ಅವರ ಪ್ರೊಫೈಲ್ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಹಾಗಾಗಿ ಪ್ರಿಯಾಂಕರನ್ನು ʼಜೂನಿಯರ್‌ ಇಂದಿರಾʼ ಎಂಬಂತೆ ಪ್ರೊಜೆಕ್ಟ್‌ ಮಾಡುವ ಉದ್ದೇಶಕ್ಕೆ ಕಾಂಗ್ರೆಸ್‌ ಮುಂದಾಗಲಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. 

ಇನ್ನು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಶೇ ೧೭ರಷ್ಟು ದಲಿತ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಜಗಜೀವನ್ ರಾಮ್ ನಂತರ ಯಾವುದೇ ದಲಿತ ವ್ಯಕ್ತಿಗೆ ಪ್ರಧಾನಿ ಅಭ್ಯರ್ಥಿಯಾಗಿ ನಿಲ್ಲುವ ರಾಜಕೀಯ ಶಕ್ತಿ ಇರಲಿಲ್ಲ. ಅತಿದೊಡ್ಡ ವಿರೋಧ ಪಕ್ಷದ ಅಧ್ಯಕ್ಷರಾಗಿರುವ ಖರ್ಗೆ ಅವರು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿದ್ದರೂ, ಕಾಂಗ್ರೆಸ್ ಗಾಂಧಿ ಕುಟಂಬವನ್ನು ಮೀರಿ ನೋಡುವ ಸಾಧ್ಯತೆಯಿಲ್ಲ. ಇನ್ನು, ಜನಪ್ರಿಯತೆಯ ವಿಷಯದಲ್ಲಿ ಪ್ರಧಾನಿ ಮೋದಿಗೆ ನಿತೀಶ್ ಕುಮಾರ್, ಖರ್ಗೆ ಅಥವಾ ಪ್ರಿಯಾಂಕಾ ಸೇರಿ ಸದ್ಯಕ್ಕೆ ಯಾರೂ ಸರಿಸಾಟಿಯಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾದ ವಿಷಯ. ಹೀಗೆಲ್ಲಾ ಇರುವಾಗ ಪ್ರತಿಪಕ್ಷಗಳ ಮೈತ್ರಿ ಹೇಗೆ ರಚನೆಯಾಗುತ್ತದೆ ? ವಿಶ್ವಗುರುವಿನ ಎದುರು ಯಾರು ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಕುತೂಹಲ. 

-ಶ್ರೀರಾಜ್‌ ವಕ್ವಾಡಿ 


Tuesday, June 6, 2023

ಸುದೀರ್ಘ ದಾರಿ ಇರುವಾಗಲೇ ಲೋಕಸಭೆಗೆ ಅಣಿ

ರಾಜ್ಯದಲ್ಲಿ ಕಳೆದ ಕೆಲವು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯದ್ದೇ ಮೇಲುಗೈ !

ಇನ್ನು ೨೦೨೪ರ ಲೋಕಸಭಾ ಚುನಾವಣೆಗೆ ತಯಾರಿ. ಮುಂದಿನ ವರ್ಷ ನಡೆಯುವ ರಾಷ್ಟ್ರ ಚುನಾವಣಾ ಕದನಕ್ಕೆ ರಾಜಕೀಯ ವಲಯ ಸಜ್ಜಾಗುತ್ತಿದೆ. ಬಹುತೇಕ ಕಳೆದ ಒಂದು ದಶಕದಿಂದ ಹೆಚ್ಚು ಸೋಲನ್ನೇ ಕಂಡ ಕಾಂಗ್ರೆಸ್‌, ಕರ್ನಾಟಕ  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ರಾಜಕೀಯ ವಲಯದ ನಿರೀಕ್ಷೆಗೂ ಮೀರಿ ಗೆದ್ದು ಅಧಿಕಾರಕ್ಕೇರಿದ್ದು, ಕಾಂಗ್ರೆಸ್‌ ಪಾಳಯದಲ್ಲಿ ಹೊಸ ಹುಮ್ಮಸ್ಸನ್ನು ತಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರದರ್ಶನಗೊಂಡ ಜನಮತದ ಮನಸ್ಥಿತಿ ಲೋಕಸಭೆಯಲ್ಲಿಯೂ ಹಾಗೆಯೇ ಉಳಿಯಲಿದೆ ಅಥವಾ ಇರಲಿದೆ ಎಂಬುವುದನ್ನು ಖಂಡಿತವಾಗಿಯೂ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಮೋದಿ ವಾಕ್ಚಾತುರ್ಯಕ್ಕೆ ಮರುಳಾಗಿದ್ದ ರಾಜ್ಯದ ಜನರ ಎದುರಿಗೆ ಕಾಂಗ್ರೆಸ್‌ ಅಭಿವೃದ್ಧಿಯ ಸಂಕಲ್ಪದೊಂದಿಗೆ ಗೆದ್ದಿರುವುದು ಕಾಂಗ್ರೆಸ್‌ ಗೆ ಆಶಾವಾದ ಮೂಡಿಸಿದೆ. 

ಲೋಕಸಭೆಗೆ ಒಂದು ವರ್ಷದ ಸುದೀರ್ಘವಾದ ದಾರಿ ಇರುವ ಹೊತ್ತಿನಲ್ಲೇ ದೇಶದ ರಾಜಕೀಯ, ಆಡಳಿತ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಜನರಿಗೆ ಎತ್ತಿ ತೋರಿಸುವ ಪ್ರಯತ್ನದಲ್ಲಿ ನಿಧಾನಕ್ಕೆ ಕಾಂಗ್ರೆಸ್ ಯಶಸ್ಸು ಕಾಣುತ್ತಿದ್ದು, ಇದೇ ಸಂಕಲ್ಪದೊಂದಿಗೆ ಕಾಂಗ್ರೆಸ್‌ ೨೦೨೪ರ ಲೋಕಸಭಾ ಚುನಾವಣೆಗೂ ಮುನ್ನ ಬರಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಇದೇ ವೇಗದಲ್ಲಿ ಯಶಸ್ಸನ್ನು ಮುಟ್ಟಿ ತನ್ನ ಅಭಿವೃದ್ಧಿ ಸಂಕಲ್ಪದ ಮಹತ್ವದ ಆಶಾವಾದದ ಭಾವನೆಯ ಎತ್ತರವನ್ನು ಜನರ ಮನಸ್ಸಿನಲ್ಲಿ ನಿರ್ಮಿಸಬಹುದೇ ಎಂಬುವುದು ಸದ್ಯದ ಪ್ರಶ್ನೆಯಾಗಿದೆ.   

ರಾಷ್ಟ್ರ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಲೋಕಸಭಾ ಚುನಾವಣೆಗೂ ಮುನ್ನ ಉಳಿದಿರುವ ಐದೂ ವಿಧಾನ ಸಭಾ ಚುನಾವಣೆಗಳು (ಮಧ್ಯಪ್ರದೇಶ, ಛತ್ತಿಸ್‌ ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ) ಉತ್ತರ ಮತ್ತು ಪಶ್ಚಿಮ ಭಾಗದ ಬಿಜೆಪಿ ಪ್ರಾಬಲ್ಯ ಹೊಂದಿರುವ ರಾಜ್ಯಗಳಲ್ಲಿ ಆಗುತ್ತಿರುವ ಕಾರಣ, ಕಾಂಗ್ರೆಸ್‌ ಗೆ ತುಸು ಕಷ್ಟವೇ ಎಂಬ ಅಭಿಪ್ರಾಯವಿದೆ. ಕರ್ನಾಟಕ ಹಾಗಲ್ಲ, ಬಿಜೆಪಿಗೆ ಕರ್ನಾಟಕ ಇದುವರೆಗೆ ಬಹುಮತದಿಂದ ಆರಿಸಿದ ಉದಾಹರಣೆ ಇಲ್ಲ. ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಗುರುತಿಸಿಕೊಂಡು ಆಪರೇಷನ್‌ ಬಿಜೆಪಿ, ರೆಸಾರ್ಟ್‌ ರಾಜಕಾರಣ ಮಾಡಿ ಅಧಿಕಾರಕ್ಕೆ ಏರಿದ ಉದಾಹರಣೆ ಅಷ್ಟೇ. ದಕ್ಷಿಣ ಭಾರತದಲ್ಲಿ ಬಿಜೆಪಿ ಒಂದಿಷ್ಟು ಭರವಸೆ ಹೊಂದಿರುವ ಏಕೈಕ ರಾಜ್ಯವೆಂದರೇ, ಅದು ಕರ್ನಾಟಕ. ಆದರೇ, ಈವರೆಗೆ ಬಿಜೆಪಿಯನ್ನು ಜನ ಇಲ್ಲಿ ಬಹುಮತದಿಂದ ಆರಿಸಿ ಅಧಿಕಾರಕ್ಕೇರಿಸಿಲ್ಲ ಎಂಬ ವಿಚಾರ ಗಮನಾರ್ಹ.   

ಕರ್ನಾಟಕದ ಜನ ಆಗಾಗ ತಮ್ಮ ತೀರ್ಪನ್ನು ಆಡಳಿತ ಪಕ್ಷದ ವಿರುದ್ಧವಾಗಿ ಕೊಟ್ಟಿದ್ದಾರೆ. ೧೯೯೯ ರಲ್ಲಿ ಕಾಂಗ್ರೆಸ್‌ ಗೆ ಬಹುಮತಕೊಟ್ಟು ಗೆಲ್ಲಿಸಿದರೇ, ೨೦೦೪ರಲ್ಲಿ ಬಿಜೆಪಿಯನ್ನು ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಜನಮತ ಹೊರಹೊಮ್ಮಿಸಿತು (ಜೆಡಿಎಸ್‌, ಕಾಂಗ್ರೆಸ್ ಮೈತ್ರಿ ಸರ್ಕಾರ ), ೨೦೦೮ರಲ್ಲಿ ಮತ್ತೆ ಬಿಜೆಪಿಗೆ ಒಲವು ತೋರಿಸಿ ಮತ್ತೆ ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಹೊರಹೊಮ್ಮಿತು. ೧೧೦ ಸ್ಥಾನ, ಅಧಿಕಾರಕ್ಕೇರುವುದಕ್ಕೆ ಇನ್ನು ಕೇವಲ ಮೂರು ಸ್ಥಾನಗಳ ಅಗತ್ಯವಿತ್ತು, ಪೂರ್ಣ ಬಹುಮತದಿಂದ ಅಧಿಕಾರ ಹಿಡಿಯುವುದಕ್ಕೆ ಆಗಲಿಲ್ಲ.  ಯಡಿಯೂರಪ್ಪರ ರಾಜಕೀಯ ತಂತ್ರಗಾರಿಕೆಯಿಂದ ಆಪರೇಷನ್‌ ಕಮಲ, ಉಪಚುನಾವಣೆಯ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂತು), ೨೦೦೮ ರಿಂದ ೨೦೧೩ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ, ಹಗರಣ, ಯಡಿಯೂರಪ್ಪ ರಾಜೀನಾಮೆ, ಬಿಎಸ್ ವೈ ಜೈಲು, ಮೂರು ಮುಖ್ಯಮಂತ್ರಿಗಳ ಆಡಳಿತ, ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ ಸ್ಥಾಪನೆ, ಆಡಳಿತ ವಿರೋಧಿ ಅಲೆಯಂತಹ ಹಲವು ಕಾರಣದಿಂದಾಗಿ ೨೦೧೩ರಲ್ಲಿ ಕಾಂಗ್ರೆಸ್‌ ಗೆ ೧೨೨ ಸ್ಥಾನಗಳನ್ನು ನೀಡುವುದರ ಮೂಲಕ ರಾಜ್ಯದ ಜನ ಅಧಿಕಾರ ಕೊಟ್ಟರು, ೨೦೧೮ರಲ್ಲಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯ ಕಾರಣದಿಂದಾಗಿ ಆಡಳಿತ ವಿರೋಧಿ ಅಲೆಯೆದ್ದಿತು. ಮತ್ತೆ ಬಿಜೆಪಿ ೧೦೪ ಸ್ಥಾನಗಳೊಂದಿಗೆ ಸಿಂಗಲ್ ಲಾರ್ಜೆಸ್ಟ್‌ ಆಗಿ ಹೊರಹೊಮ್ಮಿದರೂ, ೨೦೦೪ರ ರಾಜಕೀಯ ಬೆಳವಣಿಗೆ ಮತ್ತೆ ಮರುಕಳಿಸಿತು. ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಸುಮ್ಮನಿರದ ಬಿಜೆಪಿ ೨೦೧೯ರ ಜುಲೈ ೨೬ರಂದು ಮೈತ್ರಿ ಸರ್ಕಾರದ ೧೭ ಶಾಸಕರನ್ನು ಓಲೈಸಿಕೊಂಡು ಮೈತ್ರಿ ತೊರೆಯುವಂತೆ ಮಾಡಿತ್ತು, ಶಾಸಕರ ಅನರ್ಹತೆ, ಉಪಚುನಾವಣೆ ಹೀಗೆ ಎಲ್ಲಾ ಹೈಡ್ರಾಮಗಳ ನಂತರ ಮತ್ತೆ ಬಿಜೆಪಿ ಅಧಿಕಾರ ಹಿಡಿಯಿತು. ೨೦೨೩ ರಲ್ಲಿ ಮತ್ತೆ ಹಣದುಬ್ಬರ, ಬೆಲೆ ಏರಿಕೆ, ೪೦% ಕಮಿಷನ್‌ ಹೀಗೆ ಹಲವು ಆಡಳಿತದ ವಿರೋಧಿ ಅಲೆಯ ಕಾರಣದಿಂದಾಗಿ ಜನ ಮತ್ತೆ ಕಾಂಗ್ರೆಸ್‌ ಗೆ ೧೩೬ ಸ್ಥಾನಗಳ ಭರ್ಜರಿ ತೀರ್ಪಿನ ಮೂಲಕ ಅಧಿಕಾರ ಕೊಟ್ಟಿದೆ. ಹೀಗೆ ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲಿ ಜನರ ಭಿನ್ನ ತೀರ್ಪನ್ನು ಗಮನಿಸಬಹುದು.‌ ಇನ್ನು, ಮತದಾರರು ತಮ್ಮ ಮತಗಳನ್ನು ವಿಧಾನಸಭಾ ಚುನಾವಣೆಗಳಿಗಿಂತ ಲೋಕಸಭಾ ಚುನಾವಣೆಗಳಲ್ಲಿ ವಿಭಿನ್ನವಾಗಿ ಚಲಾಯಿಸುತ್ತಾರೆ. ಕರ್ನಾಟಕದಲ್ಲಿ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಂದಿಗೂ ಬಹುಮತವನ್ನು ಗೆದ್ದಿಲ್ಲ, ಆದರೆ ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಚ್ಚಿನ ಸಂಸದೀಯ ಸ್ಥಾನಗಳನ್ನು ಗೆದ್ದಿದೆ ಎನ್ನುವುದು ಉಲ್ಲೇಖಾರ್ಹ.  

ಕಾಂಗ್ರೆಸ್ ನ ನಡೆ ಪ್ರಸ್ತುತದೆಡೆಗೆ  :

ನಾಲ್ಕು ವರ್ಷಗಳ ಹಿಂದೆ  ರಾಜ್ಯದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರ ಹೆಸರಿನ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿದ್ದಕ್ಕಾಗಿ ಮಾರ್ಚ್‌ ನಲ್ಲಿ ರಾಹುಲ್ ಗಾಂಧಿ ತಪ್ಪಿತಸ್ಥರೆಂದು ತೀರ್ಪು ಬಂದ ನಂತರ ಕರ್ನಾಟಕ ಚುನಾವಣೆಯು ಕಾಂಗ್ರೆಸ್‌ ಗೆ ಮೊದಲ ಪರೀಕ್ಷೆಯಾಗಿತ್ತು. ಬಿಜೆಪಿ ಮತ್ತು ಮೋದಿ ಭಾರತದಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಮತದಾರರಿಗೆ ಹೇಳುವ ಮೂಲಕ ಕಾಂಗ್ರೆಸ್ ಈ ಪ್ರಕರಣವನ್ನು ತನ್ನ ಪ್ರಚಾರದ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿತು. ಚುನಾವಣೆಗೂ ಮೊದಲು ರಾಹುಲ್ ದಕ್ಷಿಣ ಭಾರತದಿಂದ ಉತ್ತರಕ್ಕೆ ೨,೧೭೦ ಮೈಲಿ ಭಾರತ್‌ ಜೋಡೋ ಪಾದಯಾತ್ರೆ ಮಾಡುವುದರ ಮೂಲಕ ರಾಹುಲ್ ʼಜನ ನೇತಾʼ ಎಂದು ಗುರುತಿಸಿಕೊಂಡರು. ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ಬಿಜೆಪಿ ವಿರುದ್ಧದ ಟೀಕೆಗಿಂತ ಜನರ ಕಷ್ಟಗಳಿಗೆ ಧ್ವನಿಯಾಗುವ ಪ್ರಯತ್ನದಲ್ಲಿ ಸಾಗಿತ್ತು. 

ಇನ್ನು, ಕಾಂಗ್ರೆಸ್ ಎರಡು ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸೋಲುಗಳನ್ನು ಅನುಭವಿಸಿದೆ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಗೆಲುವಿಗಿಂತ ಹೆಚ್ಚು ಸೋಲನ್ನು ಕಂಡಿದೆ. ಮೋದಿಯನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳನ್ನು ಒಂದು ಸುಸಂಬದ್ಧ ಒಕ್ಕೂಟಕ್ಕೆ ಸೇರಿಸಬಹುದೇ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಎದುರಿಸುತ್ತಿರುವಾಗ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಕಾಂಗ್ರೆಸ್‌ ಒಂದು ಹಂತದಲ್ಲಿ ಹೆಣಗಾಡುತ್ತಿದೆ. ಪ್ರಸ್ತುತತೆಗೆ ಧ್ವನಿಯಾಗುವುದಕ್ಕೆ ಕಾಂಗ್ರೆಸ್‌ ಅಕ್ಷರಶಃ ಪ್ರಯತ್ನಶೀಲವಾಗಿದೆ. 

ನಡೆಯದ ಧರ್ಮ ರಾಜಕಾರಣ :
ಬಹುಸಂಖ್ಯಾತ ಹಿಂದೂಗಳನ್ನು ಆಕರ್ಷಿಸುವ ಬಿಜೆಪಿಯ ತಂತ್ರವು ಮತದಾರರ ಮೇಲೆ ಈ ಬಾರಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿಲ್ಲ.  ಹಿಜಾಬ್‌, ನಮಾಜ್‌, ಅಜಾನ್, ಹಲಾಲ್‌, ಉರಿ ಗೌಡ, ನಂಜೇ ಗೌಡ, ಟಿಪ್ಪು ಸುಲ್ತಾನ್‌, ದಿ ಕೇರಳ ಸ್ಟೋರಿ, ಜೈ ಬಜರಂಗಬಲಿ ಯಾವುದಕ್ಕೂ ಜನ ಕಿವಿಗೊಡಲಿಲ್ಲ. ಜನ ಈ ತಂತ್ರಗಾರಿಕೆಯ ವಿರುದ್ಧವಾಗಿ ತೀರ್ಪು ಕೊಟ್ಟರು. ಪ್ರಚಾರದ ಸಮಯದಲ್ಲಿ, ಧರ್ಮ ಆಧಾರಿತ ದ್ವೇಷವನ್ನು ಉತ್ತೇಜಿಸುವುದಕ್ಕಾಗಿ, ಸಂವಿಧಾನದ ವಿಧಿ ಉಲ್ಲಂಘಿಸಿದರೇ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಹಿಂದೂ ಬಲಪಂಥೀಯ ಸಂಘಟನೆಯಾದ ಬಜರಂಗದಳ ಹಾಗೂ ಪಾಪ್ಯುಲರ್‌ ಫ್ರಂಟ್‌ ಆಫ ಇಂಡಿಯಾದಂತಹ ಯಾವುದೇ ಸಂಘಟನೆ, ವ್ಯಕ್ತಿ ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಪ್ರತಿಜ್ಞೆ ಮಾಡಿತ್ತು. ಅದು ಕಾಂಗ್ರೆಸ್‌ ಗೆ ಕೆಲವು ಕಡೆ ಮೈನಸ್‌ ಆಯ್ತು. 

ಹಣದುಬ್ಬರ, ಬೆಲೆ ಏರಿಕೆ ಮತ್ತು ನಿರುದ್ಯೋಗ, ಆರ್ಥಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ಆಗಾಗ್ಗೆ ಧರ್ಮ ರಾಜಕಾರಣವನ್ನು ಬಳಸುತ್ತದೆ. ಕಾಂಗ್ರೆಸ್ ವೈವಿಧ್ಯತೆಯನ್ನು ಪ್ರತಿಪಾದಿಸುತ್ತದೆ, ರಾಷ್ಟ್ರದ ೧.೪ ಶತಕೋಟಿ ಜನರಿಗೆ ಧರ್ಮ, ಜಾತಿ, ಭಾಷೆ ಮತ್ತು ಇತರ ಭಿನ್ನಾಭಿಪ್ರಾಯಗಳ ಮೇಲೆ ಒಡೆದು ಆಳುತ್ತಿರುವ ಸರ್ಕಾರದ ಧೋರಣೆಯ ವಿರುದ್ಧ ಒಗ್ಗೂಡಬೇಕೆಂದು ರಾಹುಲ್ ಗಾಂಧಿ ರಾಷ್ಟ್ರಕ್ಕೆ ಕರೆ ನೀಡಿದರು.‌ ಇವೆಲ್ಲಾ ಇತ್ತೀಚೆಗೆ ರಾಹುಲ್‌ ಮೇಲೆ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. 

೨೦೨೪ರ ಚಾಲೆಂಜ್‌ : 
ಈಗ ಇರುವ ಚಾಲೆಂಜ್‌ ಮುಂಬರುವ ಲೋಕಸಭೆ ಚುನಾವಣೆ. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಪ್ರಸ್ತುತ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎನ್ನುವುದು ಇದರಲ್ಲಿ ಸ್ಪಷ್ಟವಾಗುತ್ತದೆ. ಆದರೆ, ಪ್ರತಿಪಕ್ಷಗಳನ್ನು ಒಗ್ಗೂಡಿಸುವುದು ಮಾತ್ರವಷ್ಟೇ  ಸಾಕಾಗುವುದಿಲ್ಲ 'ಕಾಂಗ್ರೆಸ್‌ ಗೆ ಬಿಜೆಪಿಗೆ ಪರ್ಯಾಯವಾದಂತಹ ದೃಷ್ಟಿ ಬೇಕು' ಎಂಬುವುದನ್ನು ರಾಹುಲ್‌ ಗಾಂಧಿ ಅರಿತುಕೊಂಡಂತಿದೆ. 

ಕಾಂಗ್ರೆಸ್‌ ನ ದೃಷ್ಟಿಯಲ್ಲಿ ʼಭಾರತ ಜೋಡೋ ಯಾತ್ರೆʼಯು ಅಂತಹ ದೃಷ್ಟಿಕೋನವನ್ನು ಪ್ರತಿಪಾದಿಸುವ ಮೊದಲ ಹೆಜ್ಜೆಯಾಗಿರಬಹುದು. ಕಾಂಗ್ರೆಸ್‌ ನ ಸಿದ್ಧಾಂತವನ್ನು ಒಪ್ಪುವ ದೇಶದ ಇತರ ರಾಜಕೀಯ ಪ್ರಾದೇಶಿಕ ಪಕ್ಷಗಳು ರಾಹುಲ್‌ ಭಾರತ್‌ ಜೋಡೋ ಯಾತ್ರೆಯನ್ನು ಒಪ್ಪಿದವು. ಪ್ರಾದೇಶಿಕ ಪಕ್ಷಗಳ ಹಲವು ನಾಯಕರು ರಾಹುಲ್‌ ಜೊತೆ ಹೆಜ್ಜೆ ಇಟ್ಟರು. ಪ್ರತಿಪಕ್ಷಗಳ ಒಕ್ಕೂಟಕ್ಕೆ ಪ್ರಯತ್ನಿಸಿ ಹಲವು ಬಾರಿ ಕಾಂಗ್ರೆಸ್‌ ಸೋತಿದೆ. ಈ ಬಾರಿ ಮೋದಿ ವಿರುದ್ಧ ತಮ್ಮ ಎಲ್ಲಾ ಸಿದ್ಧಾಂತಗಳನ್ನು ಬದಿಗಿಟ್ಟು ಹೊಸ ದೃಷ್ಟಿಕೋನದಲ್ಲಿ ಪ್ರತಿಪಕ್ಷಗಳ ಒಕ್ಕೂಟದೊಂದಿಗೆ ಲೋಕಸಭೆಗೆ ಮುಂದಾಗಬೇಕು ಎಂಬ ನಿರ್ಧಾರಕ್ಕೆ ಬಂದಂತಿದೆ. ಭಾರತ್‌ ಜೋಡೋ ಯಾತ್ರೆಯಾದ ಮೇಲೆ ರಾಹುಲ್‌ ಗಾಂಧಿ ವರ್ಚಸ್ಸು ದೊಡ್ಡ ಪ್ರಮಾಣದಲ್ಲಿಯೇ ವೃದ್ಧಿಸಿದೆ. ಈಗ ಸದ್ಯಕ್ಕಿರುವ ಚಾಲೆಂಜ್‌ ಒಂದೇ ʼ೨೦೨೪ʼ. ಹೇಗಿರಲಿದೆ  ? ಕಾದು ನೋಡೋಣ. 

-ಶ್ರೀರಾಜ್‌ ವಕ್ವಾಡಿ 





Thursday, June 1, 2023

ರಾಗಾ ʼಮೊಹಬತ್‌ ಕಾ ಶರ್ಬತ್‌ʼ ದೇಶದ ಜನ ಸ್ವೀಕರಿಸುವರೆ ?!

 


ದ್ವೇಷ ವರ್ಸಸ್‌ ಪ್ರೀತಿಯ ರಾಜಕಾರಣದ ನಡುವೆ ಯಾರ ಒಲವು ಯಾರ ಕಡೆಗೋ !  

ರಾಹುಲ್‌ ಗಾಂಧಿಯವರಲ್ಲಿರುವ ಹೊಸ ವೈಚಾರಿಕ ಆದರ್ಶಗಳನ್ನು ಕಾಂಗ್ರೆಸ್‌ ಪಕ್ಷದ ಗಾಂಧಿಗಿರಿ ೨.೦ ಎಂದು ಕರೆಯೋಣವೇ ? ಪ್ರೀತಿಯಿಂದ ಮಾತ್ರ ದೇಶವನ್ನು ಜೋಡಿಸುವುದಕ್ಕೆ ಸಾಧ್ಯ ಎಂದು ನಂಬಿರುವ ರಾಹುಲ್‌, ಹೊಸ ಸಾಧ್ಯತೆಗಳತ್ತ ಇತ್ತೀಚೆಗಿನ ವರ್ಷಗಳಲ್ಲಿ ಪರಿಣಾಮಕಾರಿಯಾಗಿ ತನ್ನನ್ನು ತಾನು ತೆರೆದುಕೊಂಡಿರುವುದು ಕಾಂಗ್ರೆಸ್‌ ನ ಪಾಲಿನ ಹೊಸ ರೂಪಾಂತರಕ್ಕೆ ನಾಂದಿ ಹಾಡಿದಂತಿದೆ. ದೇಶದಾದ್ಯಂತ ʼದ್ವೇಷದ ಮಾರುಕಟ್ಟೆʼಯನ್ನು ಮುಚ್ಚಿ ʼಪ್ರೀತಿಯ ಅಂಗಡಿʼಗಳನ್ನು   ತೆರೆಯಲು ಮುಂದಾಗಿರುವ ಸನ್‌ ಆಫ್‌ ರಾಜೀವ್‌ ಗಾಂಧಿಗೆ ಭಾರತೀಯರು ಈ ಸಂದರ್ಭದಲ್ಲಿ ಕೈ ಹಿಡಿಯುತ್ತಾರೆಯೇ, ರಾಹುಲ್‌ ನೀಡುವ ʼಮೊಹಬತ್‌ ಕಾ ಶರ್ಬತ್‌ʼ ಅನ್ನು ಕುಡಿಯುತ್ತಾರೆಯೇ ? ಎನ್ನುವುದು ಸದ್ಯದ ಪ್ರಶ್ನೆ. 

ದ್ವೇಷ ವರ್ಸಸ್ ಪ್ರೀತಿ :

ಕರ್ನಾಟಕ ವಿಧಾಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಹಾಗೂ ಬಿಜೆಪಿ ಉಭಯ ಪಕ್ಷಗಳಿಗೂ ದೊಡ್ಡ ಪರಿಣಾಮ ಬೀರಿದೆ. ಕಾಂಗ್ರೆಸ್‌ ನಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಬಿಜೆಪಿಗೆ ಪಾಠ ಕಲಿಸಿದೆ. ಆದಾಗ್ಯೂ, ರಾಜ್ಯ ವಿಧಾನಸಭಾ ಚುನಾವಣೆಯು ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸೈದ್ಧಾಂತಿಕ ಮುಖಾಮುಖಿಗೆ ಸಾಕ್ಷಿ ವೇದಿಕೆಯಾಯಿತು. ಇಲ್ಲಿ ಪಂಥೀಯ ಭಾವೋದ್ರೇಕಗಳನ್ನು ಪ್ರಚೋದಿಸುವ ಅವರ ಪ್ರಯತ್ನಗಳು ಯಶಸ್ವಿಯಾಗಿಲ್ಲ ಎಂದು ದ್ವಯರೂ ಅರ್ಥ ಮಾಡಿಕೊಂಡರು. ದ್ವೇಷ ಕಾರುವ ಭಾಷಣಗಳು ಸೋತವು, ಪ್ರೀತಿ ಗೆದ್ದು ಹೊರಹೊಮ್ಮಿತು. 

ʼಸಂವಿಧಾನ ವಿಧಿಯನ್ನು ಉಲ್ಲಂಘಿಸುವ ಬಜರಂಗಧಳ, ಪಾಪ್ಯುಲರ್‌  ಫ್ರಂಟ್‌ ಆಫ್‌ ಇಂಡಿಯಾ ಸೇರಿ ಯಾವುದೇ ಸಂಘಟನೆ, ವ್ಯಕ್ತಿಯ ಮೇಲೆ ಕಠಿಣ ಕ್ರಮʼ ತೆಗೆದುಕೊಳ್ಳುವುದಾಗಿ ಹೇಳಿದ್ದ ಕಾಂಗ್ರೆಸ್‌ ಪ್ರಣಾಳಿಕೆಯ ವಿರುದ್ಧ ಚುನಾವಣಾ ಪ್ರಚಾರಗಳಲ್ಲಿ ಪಾಲಿಟಿಕಲ್‌ ಮೈಲೇಜ್‌ ತೆಗೆದುಕೊಳ್ಳುವುದಕ್ಕೆ ಮೋದಿ ಪ್ರಯತ್ನಿಸಿದರು. ʼಜೈ ಬಜರಂಗಬಲಿ ಭಾಷಣʼ ಮತ್ತು ಮತ ಚಲಾಯಿಸುವಾಗ ʼಜೈ ಬಜರಂಗಬಲಿಯನ್ನು ಪಠಿಸುವುದನ್ನು ಮರೆಯದಿರಿʼ ಎಂಬ ಬೇಡಿಕೆ, ಹನುಮಾನ್‌ ಮಂದಿರಗಳಲ್ಲಿ ಹನುಮಾನ್‌ ಚಾಲೀಸ್‌ ಪಠಣ ಯಾವುದೂ ಮತಗಳಾಗಿ ಪರಿವರ್ತನೆಯಾಗಿಲ್ಲ. ಮಾತ್ರವಲ್ಲದೇ, ʼದಿ ಕೇರಳ ಸ್ಟೋರಿʼ ಎಂಬ ಪ್ರೊಪಗಂಡಾ ಆಧಾರಿತ ಸಿನೆಮಾದ ಮೂಲಕ ಕಾಂಗ್ರೆಸ್‌ ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದಕ್ಕೆ ಪ್ರಯತ್ನ ಮಾಡಲಾಯಿತಾದರೂ ಫಲಿಸಲಿಲ್ಲ. ಬಿಜೆಪಿಯ ಇನ್ನಿತರ ರಾಜಕೀಯ ಟೂಲ್‌ ಗಳಾದ ʼಹಲಾಲ್‌, ಹಿಜಾಬ್‌, ನಮಾಜ್‌ ಆಜಾನ್‌, ಟಿಪ್ಪು ಸುಲ್ತಾನ್‌, ಉರಿ ಗೌಡ, ನಂಜೇ ಗೌಡʼ ದಂತಹ ಪ್ರಯೋಗ ಪರೀಕ್ಷಿತ ʼಸಂಸ್ಕೃತಿ ಯುದ್ಧʼದ ಪರಿಣಾಮಕಾರಿತ್ವಗಳು ಕುಸಿಯುತ್ತಿರುವುದಕ್ಕೆ ಕಾಂಗ್ರೆಸ್‌ ನ ೧೩೬ ಸ್ಥಾನಗಳ ಬಹುಮತದ ಜಯವೇ ಸಾಕ್ಷಿ. 

ವಿಕಾಸವಿಲ್ಲದ ದ್ವೇಷ ಭಾಷಣಕ್ಕೆ ಜೈ :

ಪ್ರಧಾನಿ ದೇಶದಾದ್ಯಂತ ಹೋದಲ್ಲೆಲ್ಲಾ ʼಸಬ್ ಕಾ ಸಾಥ್‌, ಸಬ್‌ ಕಾ ವಿಕಾಸ್‌ʼ ಇದು ಕೇವಲ ಬಿಜೆಪಿಯ ಘೋಷಣೆಯಲ್ಲ, ಇದು ನಮ್ಮ ಬದ್ಧತೆ ಎಂದು ನೆನಪಿಸುತ್ತಲೇ ಇರುತ್ತಾರೆ. ಆದರೇ, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ಈ ಭರವಸೆಯನ್ನು ಅನುಮಾನಿಸಿ ನೋಡುವಂತೆ ಮಾಡಿದೆ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಹೇಳುವ ಪ್ರಕಾರ ದೇಶದ ನಿರುದ್ಯೋಗ ಮಟ್ಟ ಮಾರ್ಚ್‌ ತಿಂಗಳಿಗಿಂತ ಏಪ್ರಿಲ್‌ ತಿಂಗಳಿನಲ್ಲಿ ಏರಿಕೆಯಾಗಿದೆ (ಮಾರ್ಚ್‌ ೨೦೨೩ರಲ್ಲಿ ಶೇ. ೭.೮ ಮತ್ತು ಏಪ್ರಿಲ್‌ ನಲ್ಲಿ ಶೇ. ೮.೧೧).  ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಜೊತೆಗೆ ೨೦೨೩ರ ವಿಶ್ವ ಪತ್ರಿಕಾ ಸ್ವಾತ್ರಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ೧೮೦ ದೇಶಗಳ ಪೈಕಿ ೧೬೧ಕ್ಕೆ ಕುಸಿದಿದೆ. ಮಾತ್ರವಲ್ಲದೇ ಇಡೀ ದೇಶದ ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದು ʼವಿಕಾಸ್‌ʼ ಪಕ್ಷ ಬಿಜೆಪಿಯ ಇಮೇಜ್‌ ಗೆ ಕಳಂಕಪ್ರಾಯವಾಗಿದೆ.  

ಇತ್ತೀಚಿನ ವರ್ಷಗಳಲ್ಲಿ ದ್ವೇಷ ರಾಜಕಾರಣವೂ ಹೆಚ್ಚುತ್ತಿದೆ. "ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳು ಮೂಲಭೂತವಾಗಿ ಭಾರತದ ಸಂವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್‌ ಸೈಟ್ ಹೇಳುತ್ತದೆ. "ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಕಾರಣಕ್ಕೆ" ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ಎ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳು - ಏಳು ವರ್ಷಗಳಲ್ಲಿ ೩೨೩ ಪ್ರಕರಣಗಳಿಂದ ಸುಮಾರು ೫೦೦ ಶೇಕಡಾ ದಾಖಲೆಯ ಏರಿಕೆಯ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುವ  ಪ್ರಕಾರ, ೨೦೧೪ ರಿಂದ ೨೦೨೦ ರವರೆಗೆ ಸುಮಾರು ೧೮೦೪ ಪ್ರಕರಣಗಳು ದಾಖಲಾಗಿವೆ. ಜನ ಇಲ್ಲಿ ವಿಕಾಸಕ್ಕಿಂತ ದ್ವೇಷಕ್ಕೆ ಜೈ ಎಂದಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕೆ ? ಗೊತ್ತಿಲ್ಲ. 

ಭಾರತ್ ಜೋಡೋ ಮತ್ತು ರಾಹುಲ್ ಗಾಂಧಿ :

ಬಿಜೆಪಿ ಬಹಳ ಹಿಂದಿನಿಂದಲೂ ಗಾಂಧಿ ಕುಟುಂಬವನ್ನು ವಂಶಪಾರಂಪರ್ಯ ಕುಟುಂಬ ರಾಜಕಾರಣ ಎಂದು ಹೇಳುತ್ತಲೇ ಬಂದಿದೆ. ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿಗೆ ಬಿಜೆಪಿ ನೆಪೋ-ಕಿಡ್‌ ಎಂದು ಹಿಯಾಳಿಸಿದ್ದೂ ಇದೆ. ಇಡೀ ದೇಶ ರಾಹುಲ್‌ ಗಾಂಧಿಯನ್ನು ʼಪಪ್ಪುʼ ಎಂದು ಸಂಭೋಧಿಸುವಂತೆ ಬಿಜೆಪಿ ಮಾಡಿತು. ಆದರೇ, ರಾಹುಲ್‌ ಗಾಂಧಿ ಈ ಎಲ್ಲಾ ಅಪಪ್ರಚಾರವನ್ನು ಮೀರುವುದಕ್ಕೆ ಪ್ರಯತ್ನ ಮಾಡಿ ಮುನ್ನಡೆದರು. ಒಬ್ಬ ಪ್ರಬುದ್ಧ ರಾಜಕಾರಣಿ ಮಾತ್ರ ಜನ ಸಂಪರ್ಕ ಯಾತ್ರೆಗಳನ್ನು ಕೈಗೊಂಡು ಜನರ ಕಷ್ಟಗಳಿಗೆ ಧ್ವನಿಯಾಗಬಲ್ಲ. ಅದನ್ನು ಅಕ್ಷರಶಃ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯ ಮೂಲಕ ದೇಶದ ಉದ್ದಗಲ ಕೈಗೊಂಡು ಮಾಡಿ ತೋರಿಸಿದರು. ಭಾರತ್‌ ಜೋಡೋ ಯಾತ್ರೆಯ ಕಾರಣದಿಂದಾಗಿ ಇಡೀ ಭಾರತದ ಜನರಲ್ಲಿ ರಾಹುಲ್‌ ಗಾಂಧಿ ಮೇಲೆ ಇದ್ದ ಅಭಿಪ್ರಾಯವನ್ನು ಬಹಳ ದೊಡ್ಡ ಮಟ್ಟಿಗೆ ಅಲ್ಲದಿದ್ದರೂ, ದೊಡ್ಡ ಮಟ್ಟಿಗೆಯೇ ಬದಲಾಯಿಸಿತು. ಯಾರು ರಾಹುಲ್‌ ಗಾಂಧಿಯನ್ನು ʼಪಪ್ಪುʼ ಎಂದು ಕರೆಯುತ್ತಿದ್ದರೋ ಅವರಿಂದಲೇ ʼಜನ ನೇತಾʼ ಎಂಬಂತೆ ಗುರುತಿಸಿಕೊಂಡರು / ಕರೆಸಿಕೊಂಡರು. ದೇಶದುದ್ದಕ್ಕೂ ಮಳೆ, ಚಳಿ, ಬಿಸಿಲು ಎನ್ನದೇ ದೇಶದ ಉದ್ದಗಲಕ್ಕೂ ನಡೆದು, ಸಾರ್ವಜನಿಕ ಸಂಪರ್ಕಗಳನ್ನು ಸಾಧಿಸಿ, ಪಾದಯಾತ್ರೆಯ ಉದ್ದಕ್ಕೂ ತನ್ನೆಡೆಗೆ ಬಂದ ಎಲ್ಲರನ್ನು ಯಾವುದೇ ಅಂಜಿಕೆಯಿಲ್ಲದೆ ತನ್ನ ಬಾಹುಗಳಿಂದ ಅಪ್ಪಿಕೊಳ್ಳುವುದಲ್ಲದೇ ಅವರ ಕಷ್ಟಗಳಿಗೆ ಧ್ವನಿಯಾದರು. “ಪತ್ರಿಕಾಗೋಷ್ಠಿಗಳನ್ನು ಕರೆದು ಮಾಧ್ಯಮದವರ / ವರದಿಗಾರರ ಮೈಕ್‌, ಲೇಖನ, ಕ್ಯಾಮೆರಾಗಳಿಗೆ ಅಂಜದೆ ಸಮರ್ಥವಾಗಿ ಎದುರಿಸಿದರು”.

ಬಿಜೆಪಿಯನ್ನು ಎದುರು ಹಾಕಿಕೊಳ್ಳುವುದಕ್ಕೆ ಅಥವಾ ವಿರೋಧಿಸುವುದಕ್ಕೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮಾಡಬೇಕೆಂದಿರಲಿಲ್ಲ. ಕಾಂಗ್ರೆಸ್‌ ನ ಉದ್ದೇಶ ದೇಶವನ್ನು ಜೋಡಿಸುವುದು ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದಾಗಿತ್ತು. ಜೋಡೋ ಯಾತ್ರೆ ದ್ವೇಷಕ್ಕಲ್ಲ, ಪ್ರೀತಿಗಾಗಿ ಅಷ್ಟೇ ಎಂದು ಸಾರಿ ಹೇಳಿದರು. ಈ ಮೂಲಕ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯವರ ಬ್ರ್ಯಾಂಡ್‌ ಇಮೇಜ್‌ ಕೂಡ ವೃದ್ಧಿಯಾಯಿತು. ರಾಹುಲ್‌ ಗಾಂಧಿ ಒಬ್ಬ ಪಪ್ಪು ಆಗಿದ್ದರೇ, ಅಥವಾ ವಿಫಲ ರಾಜಕಾರಣಿಯಾಗಿದ್ದರೇ, ಮೋದಿ ಯಾಕೆ ಸದಾ ರಾಹುಲ್‌ ರನ್ನು ಟೀಕೆ ಮಾಡುತ್ತಿದ್ದರು ? ಬಿಜೆಪಿ ಯಾಕೆ ರಾಹುಲ್‌ ನಡೆದಲ್ಲೆಲ್ಲಾ ಕಾಲೆಳೆಯುತ್ತಿತ್ತು ? ʼಮೋದಿ ಹೆಸರಿನವರೆಲ್ಲರೂ ಕಳ್ಳರೆʼ ಎಂದು ಹೇಳಿದ್ದಕ್ಕಷ್ಟೇ ನ್ಯಾಯಾಂಗವನ್ನು ಬಳಸಿಕೊಂಡು ಒಬ್ಬ ಸಂಸದನನ್ನು ಅನರ್ಹಗೊಳಿಸಿದರು. ಇವೆಲ್ಲವೂ ಕೂಡ ರಾಹುಲ್‌ ರಾಜಕೀಯ ವರ್ಚಸ್ಸು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. 

ಮೋದಿಯೇ ಜನಪ್ರಿಯ :

ಹೌದು, ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್‌ ಡಿ ಟಿವಿ ಹಾಗೂ ಲೋಕನೀತಿ ದಿ ಸೆಂಟರ್‌ ಫಾರ್ ದಿ ಸ್ಟಡಿ ಆಫ್‌ ಡೆವಲಪ್ಪಿಂಗ್‌ ಸೊಸೈಟೀಸ್‌ ಮಾಡಿದ ಸಮೀಕ್ಷೆ ಹೇಳುವ ಪ್ರಕಾರ, ಈಗ, ಅಂದರೇ, ಇಂದೇ ಲೋಕಸಭಾ ಚುನಾವಣೆ ಕೈಕೊಂಡರೇ, ಯಾರು ಪ್ರಧಾನ ಮಂತ್ರಿಯಾಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮೀಕ್ಷೆಯಲ್ಲಿ ಫಾಲ್ಗೊಂಡ ಶೇಕಡಾ ೪೩ರಷ್ಟು ಮಂದಿ ಮೋದಿಯೇ ಪ್ರಧಾನಿಯಾಗುತ್ತಾರೆ, ಅವರೇ ಪ್ರಧಾನಿಯಾದರೇ ಸೂಕ್ತ ಎಂದು ಅಭಿಪ್ರಾಯ ಪಟ್ಟರೇ, ಶೇಕಡಾ ೨೭ರಷ್ಟು ಮಂದಿ ರಾಹುಲ್‌ ಗಾಂಧಿ ಆದರೆ ಸೂಕ್ತವೆಂದಿದ್ದಾರೆ, ಇನ್ನು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಾರ್ಟಿಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್‌ ಗೆ ತಲಾ ಶೇಕಡಾ ೪ರಷ್ಟು ಮಂದಿ ಪ್ರಧಾನಿಯಾದರೇ ಒಳಿತು ಎಂದರೇ, ಶೇಕಡಾ ೩ರಷ್ಟು ಮಂದಿ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌, ಶೇಕಡಾ ೧ರಷ್ಟು ಮಂದಿ ಸಂಯುಕ್ತಾ ಜನತಾದಳ ಪಕ್ಷದ ನಿತೀಶ್‌ ಕುಮಾರ್‌ ಪ್ರಧಾನಿಯಾದರೇ ಉತ್ತಮ ಎಂದಿದ್ದಾರೆ. ಮಾತ್ರವಲ್ಲದೇ ಮೋದಿ ನಡತೆಯ ಬಗ್ಗೆ ಶೇಕಡಾ ೪೦ರಷ್ಟು ಮಂದಿ ಒಲವು ತೋರಿಸಿದರೇ, ಶೇ. ೨೩ರಷ್ಟು ಮಂದಿ ಮೋದಿಯ ವಾಕ್ಚಾತುರ್ಯಕ್ಕೆ ಮರುಳಾಗಿದ್ದಾರೆ. ಅಷ್ಟಲ್ಲದೇ, ಶೇ. ೩೪ರಷ್ಟು ಮಂದಿ ರಾಹುಲ್‌ ಗಾಂಧಿ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ವಿರೋಚಿತ ಹೋರಾಟ ಕೊಡಬಲ್ಲರು ಎಂದಿದ್ದಾರೆಂದು, ಶೇ. ೪೧ರಷ್ಟು ಮಂದಿ ರಾಹುಲ್‌ ಗಾಂಧಿಯವರ ಇತ್ತೀಚೆಗಿನ ನಡೆಯನ್ನು(ಭಾರತ್‌ ಜೋಡೋ ಸೇರಿ) ಇಷ್ಟಪಟ್ಟಿದ್ದಾರೆಂದು ಸಮೀಕ್ಷಾ ವರದಿ ಹೇಳಿದೆ.  

-ಶ್ರೀರಾಜ್ ವಕ್ವಾಡಿ 


 

   


Saturday, May 27, 2023

'ಡೇರ್ ಡೆವಿಲ್ ಮುಸ್ತಾಫಾ' ಸಿನೆಮಾದ ಉದ್ದೇಶ ಸಮಾಜವನ್ನು ತಲುಪಲಿ !


'ಡೇರ್ ಡೆವಿಲ್ ಮುಸ್ತಾಫಾ' ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ‌. ಅಬಚೂರು ಎಂಬ ಊರಿನ ಮನಸ್ಥಿತಿಯನ್ನು ತೆರೆಯ ಮೇಲೆ ಸೊಗಸಾಗಿ ಕಟ್ಟಿಕೊಟ್ಟುವುದಕ್ಕೆ ಚಿತ್ರ ನಿರ್ದೇಶಕ  ಶಶಾಂಕ್ ಸೋಗಲ್ ಪ್ರಯತ್ನಿಸಿದ್ದಾರೆ. 

ಪೂರ್ತಿ ಹಿಂದೂ ಧರ್ಮದ ಹುಡುಗರೇ ಓದುತ್ತಿದ್ದ ಕಾಲೇಜೊಂದಕ್ಕೆ ಏಕೈಕ ಮುಸ್ಲಿಂ ಧರ್ಮದ ಹುಡುಗ ಪ್ರವೇಶ ಪಡೆಯುತ್ತಿದ್ದಂತೆ ಮುಸ್ಲಿಂ ರ ಮೇಲಿರುವ ಅಪನಂಬಿಕೆ, ಊಹಾಪೋಹಗಳು, ಪೂರ್ವಾಗ್ರಹಗಳನ್ನೆಲ್ಲಾ ಆ ಕಾಲೇಜಿನಲ್ಲಿ ಓದುತ್ತಿದ್ದ ಎಲ್ಲಾ ಹಿಂದೂ ಧರ್ಮದ ಹುಡುಗರೊಳಗೆ ಬೇರೂರಿ ಹೋದ ಮಾತೆಂಬಂತೆ ಗ್ರಾಫಿಕ್ಸ್ ನ ಮೂಲಕ ಕಥೆಗೆ ತೆರೆದುಕೊಳ್ಳುವ ಸಿನೆಮಾ, ಈ ಸಮಾಜದ ಮನಸ್ಸನ್ನು ಆವರಿಸಿರುವ ಭಿನ್ನಾಭಿಪ್ರಾಯಗಳು, ಅಪನಂಬಿಕೆ, ಯಾವನೋ ಒಬ್ಬ ಮಾಡಿದ ತಪ್ಪಿಗೆ ಆ ಸಮುದಾಯದ ಎಲ್ಲರನ್ನೂ ತಪ್ಪಿತಸ್ಥ ಎಂದು ಕಾಣುವ ಮನೋಭಾವನೆಗಳ ಬಗ್ಗೆ ಗಂಭೀರವಾಗಿ ಚಿಂತನೆಗೊಡ್ಡುತ್ತದೆ.

ಕಾಲೇಜಿನಲ್ಲಿ ಮುಸ್ತಾಫಾ ಎಂಬ ಹುಡುಗ ಮುಸ್ಲಿಂ ಎಂಬ ಕಾರಣಕ್ಕೆ ಉಳಿದವರೆಲ್ಲಾ ಆತನ ಮೇಲೆ ಇರುವ ಕೆಟ್ಟ ಅಭಿಪ್ರಾಯದಿಂದ ಅವನಿಗೆ ಮಾಡುವ ಸಮಸ್ಯೆಗಳಿಂದ ಸಿನೆಮಾದ ಕಥೆ ಬಹಳ ಹೊತ್ತು ಆಚೆಗೆ ಬರುವುದಿಲ್ಲ. ಕಾಲೇಜು, ಕಾಲೇಜಿನ ಮುಸ್ತಾಫಾ, ಅಯ್ಯಂಗಾರಿ ರಾಮಾನುಜ, ಮತ್ತವನ ಸ್ನೇಹಿತರ ಬಳಗದ ಸುತ್ತಲೇ ಸುತ್ತುವ ಕಥೆ ವಾಸ್ತವಾಗಿ ಗಂಭೀರತೆಯಿಂದ ಕೂಡಿದ್ದರೂ, ಒಂದು ರೀತಿಯಲ್ಲಿ ಕಾಲೇಜು ಹುಡುಗರ ಲೋಕದಲ್ಲಿನ ಒಂದು ತೆರನಾದ ಸಾಮಾನ್ಯ ಸಮಸ್ಯೆ ಎಂಬಂತೆಯೇ ಅಲ್ಲಲ್ಲಿ ಕಾಣಿಸುತ್ತದೆ. 

ಆ ಭಾಗದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಉಂಟಾದ ಧಾರ್ಮಿಕ ಸಂಘರ್ಷ, ಹಿಂದೂ ಹುಡುಗಿಯೊಬ್ಬಳ ಮುಸ್ಲಿಂ ಯುವಕನೊಂದಿಗಿನ ಪ್ರೇಮ ಪ್ರಕರಣದ ನಂತರ ಅಲ್ಲಿನ ಜನರ ಮನಸ್ಥಿತಿಯಲ್ಲಾದ ಬದಲಾವಣೆಯನ್ನು ಹೇಳಲುಹೊರಟಿರುವ ಕಥೆ ಇದು‌. 

ಶಿವಮೊಗ್ಗದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾದ ವೈಯಕ್ತಿಕ ಅನುಭವವೂ ಇದೆ ನನಗೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳು ಆ ಕೇರಿಯ/ ಗಲ್ಲಿಯನ್ನು ದಾಟಿ ಬರುವಾಗ ದರ್ಗಾ / ಮಸೀದಿಗಳ ಸುತ್ತಮುತ್ತ ಬಿಗಿ ಪೋಲೀಸ್ ಪಡೆಗಳನ್ನು ರಕ್ಷಣೆಗಾಗಿ ನಿಯೋಜನೆ ಮಾಡಿರುವ ಪ್ರತ್ಯೇಕ್ಷ ನೋಟವನ್ನು ತೀರಾ ಇತ್ತೀಚಿಗೆ ನಾನು ಕಂಡಿದ್ದೇನೆ. ಶಿವಮೊಗ್ಗದಂತಹ ನಗರದಲ್ಲಿ ಕೋಮು ವೈಷಮ್ಯ ಹೇಗಿದೆ ಅಂತಂದರೇ, ನಗರದ ಒಂದು ಕಡೆಯಿಂದ ಒಂದು ಸಂಘಟನೆ ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತಾ ತಮ್ಮ ಶಕ್ತಿ ಪ್ರದರ್ಶಿಸಿದರೇ, ಇನ್ನೊಂದು ಕಡೆಯಿಂದ ಇನ್ನೊಂದು ಸಮುದಾಯಕ್ಕೆ ಸೇರಿದ ಗುಂಪೊಂದು ಗಲ್ಲಿ ಗಲ್ಲಿ ಮೆ ಟಿಪ್ಪು ನಗರ್ ಎಂದು ಘೋಷಣೆ ಹಾಕುತ್ತಾ ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ತಮ್ಮ ಶಕ್ತಿ ಪ್ರದರ್ಶನ ಮಾಡುವಷ್ಟರ ಮಟ್ಟಿಗಿದೆ. ಇದನ್ನೇ ತೇರೆಯ ಮೇಲೆ ಬಹಳ ಸೂಕ್ಷ್ಮವಾಗಿ ಹೇಳಿ, ಇದು ಸ್ವಾಸ್ಥ್ಯ ಸಮಾಜದ ದುರಂತಗಳಲ್ಲೊಂದು ಎಂಬಂತೆ ತೋರಿಸುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ. 

ಸಿನೆಮಾ, ಸಿನೆಮಾ ಅಂತಂದ ಮೇಲೆ ಅಲ್ಲೊಂದಿಷ್ಟು ಮಿತಿ, ಅಲ್ಲೊಂದು ಚೌಕಟ್ಟು ಎಲ್ಲವೂ ಇರುವ ಕಾರಣದಿಂದ, ಕಾಲೇಜಿನ ವಾತಾವರಣದಲ್ಲೇ ಧಾರ್ಮಿಕ ವಿಚಾರಕ್ಕೆ ಸಂಘರ್ಷಗಳಾಗುವಾಗ ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಎಲ್ಲರೂ ದೊಡ್ಡವರಾಗಿ ಇದು ತಮ್ಮದಲ್ಲ ಎಂಬಂತೆ ಮೌನವಾಗಿ ಪ್ರತಿಕ್ರಿಯಿಸುವಂತಹ ಕೆಲವು ದೃಶ್ಯಗಳು ಸಿನೆಮಾಗೆ ಸ್ವಲ್ಪ ಹಿನ್ನಡೆಯೆನ್ನಿಸುತ್ತದೆ. ಮತ್ತೆ ಅದೇ ವಿಚಾರ ಸಮಾಜದ ಮೌನ ಪ್ರತಿಕ್ರಿಯೆಯ ಬಗ್ಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ಮಾಡುತ್ತದೆ. 

ಮಾನವ ಸಂಬಂಧಗಳು ಪವಿತ್ರ ಎಂಬ ಭಾವನೆಗಳಿಂದ ದೂರ ಓಡಿ ಹೋಗುತ್ತಿರುವ ಕಾಲದಲ್ಲಿ ಇಂತಹದ್ದೊಂದು ಸಿನೆಮಾ ಗಂಭೀರ ಚಿಂತನೆಗೆ ನೋಡುಗಗನ್ನು ತೆರೆದುಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯ ಹೆಸರು ನೋಡಿ ಆತ ಇಂತಹ ಜಾತಿಗೆ, ಧರ್ಮಕ್ಕೆ ಸೇರಿದವನು ಅಂತ ತಿಳಿದು ಆತನನ್ನು ದೂರ ಇಡುವ ಮನಸ್ಥಿತಿ ಈ ಸಮಾಜದಲ್ಲಿದೆ ಎಂಬುವುದು ದುರಂತದ ಸಂಗತಿ. ಜಾತಿ,‌ ಧರ್ಮ, ಮತಗಳ ನಡುವೆ ಯುದ್ಧ, ಹೊಡಿಬಡಿ, ಕೊಲ್ಲು, ಕೊಚ್ಚು, ಮಚ್ಚು, ತಲ್ವಾರು, ಸಂಘರ್ಷ ಇವೇ ಅವ್ಯಾಹತವಾಗಿ ಆಗುತ್ತಿರುವ ಸಮಾಜದಲ್ಲಿ ಪ್ರೀತಿ ಗೆಲ್ಲುವುದೆಲ್ಲಿ..? ಸಮಾಜದಲ್ಲಿ ಇಂತಹ ಮಾನಸಿಕತೆಗಳಿಂದ ಎದ್ದಿರುವ ಗೋಡೆಗಳನ್ನು ಒಡೆಯುವುದಕ್ಕೆ ಈ ಸಮಾಜ ಮುಂದಾಗದಿದ್ದರೇ ದ್ವೇಷಗಳಿಂದ ಯುದ್ಧವೇ ನಡೆದೀತು. 

ಡಾ. ಜಿ‌.ಎಸ್ ಶಿವರುದ್ರಪ್ಪ ಅವರ ಕಾವ್ಯದ ಸಾಲೊಂದು ಎಷ್ಟು ಅರ್ಥ ಗರ್ಭಿತವಾಗಿದೆ..? "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?". ಈ ಸಮಾಜ ತುರ್ತಾಗಿ ಪ್ರೀತಿ ಮಾಡುವುದನ್ನು ಕಲಿಯಬೇಕಿದೆ. ಈ ಸಿನೆಮಾ ಅದನ್ನೇ ವಿಶೇಷ ನಿರೂಪಣೆಯೊಂದಿಗೆ ಹೇಳುವುದಕ್ಕೆ ಹೋಗಿ ಗೆದ್ದಿದೆ‌. 

ಇನ್ನು, ಪ್ರೊಪಾಗಂಡಾ  ಆಧಾರಿತ, ಭ್ರಮಾಸತ್ಯಗಳನ್ನೇ ತುಂಬಿಕೊಂಡಿರುವ, ರಾಜಕೀಯ ಪ್ರೇರಿತವಾದ ಸಿನೆಮಾಗಳಿಗೆ ನಮ್ಮ ಸರ್ಕಾರಗಳು ತೆರಿಗೆ ವಿನಾಯಿತಿ ಮಾಡಿ ಪ್ರೋತ್ಸಾಹಿಸುತ್ತವೆ. ಇಂತಹ ಕೋಮು ಸಾಮರಸ್ಯ ಬೆಸೆಯುವ ಸಿನೆಮಾಗಳಿಗೆ ಸರ್ಕಾರಗಳ ಪ್ರೋತ್ಸಾಹವೂ ಇಲ್ಲ, ಜನ ಕೂಡ ಬರುವುದಿಲ್ಲ. ಏನೇ ಇರಲಿ. ಸಿನೆಮಾ ತಂಡ ಸಮಾಜಕ್ಕೆ ಒಳ್ಳೆಯದ್ದೊಂದು ಪಾಠ ಹೇಳುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. 

ಪಾತ್ರಗಳ ಬಗ್ಗೆ ಹೇಳುವುದಾದರೇ, ಮುಸ್ತಾಫನ ಪಾತ್ರದಲ್ಲಿ ನಟ ಶಿಶಿರ್‌ ಬೈಕಾಡಿ, ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ನಟ ನಾಗಭೂಷಣ್‌ ಕನ್ನಡ ಪ್ರಾಧ್ಯಾಪಕರಾಗಿ, ದೈಹಿಕ ಶಿಕ್ಷಕರಾಗಿ ವಿಜಯ್‌ ಶೋಭರಾಜ್‌ ಮನೋಜ್ಞ ಅಭಿನಯಕ್ಕಾಗಿ ಇಷ್ಟವಾಗುತ್ತಾರೆ. ಮಂಡ್ಯ ರಮೇಶ್‌, ಉಮೇಶ್‌ ಸಹಜವಾಗಿ, ಸಾಮಾನ್ಯವಾಗಿ ನಟನೆಯಲ್ಲಿ ಗೆದ್ದಿದ್ದಾರೆ. ಉಳಿದ ಎಲ್ಲಾ ನಟ, ನಟಿಯರೂ ಕೂಡ ಪಾತ್ರಕ್ಕೆ ಬೇಕಾಗುವಷ್ಟು ಜೀವ ತುಂಬಿಸಿದ್ದಾರೆ. ಹಾಡುಗಳು, ಗ್ರಾಫಿಕ್ಸ್ ಚೆನ್ನಾಗಿ ಮೂಡಿಬಂದಿವೆ. 'ಡೇರ್ ಡೆವಿಲ್ ಮುಸ್ತಾಫಾ' ದಂತಹ ಸಾಮಾಜಿಕ ಕಳಕಳಿ ಇರುವ ಸಿನೆಮಾವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿ, ಮತ್ತೆ ಕನ್ನಡ ಸಿನೆಮಾ ರಂಗದಲ್ಲಿ ಭರವಸೆ ಮೂಡಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ. ಇಂತಹ ಸಿನೆಮಾಗಳು ಮತ್ತೆ ಮತ್ತೆ ಬರಲಿ, ಸಿನೆಮಾಗಳು ಸಮಾಜವನ್ನು ಪ್ರಭಾವಿಸುವಂತಾಗಲಿ. 

-ಶ್ರೀರಾಜ್ ವಕ್ವಾಡಿ 

Thursday, May 25, 2023

'ದೇಶಕ್ಕೆ ಮೋದಿ ಬೇಕು' ಎಂಬ ಅಭಿಪ್ರಾಯವನ್ನು ಮೀರಿದರಷ್ಟೇ ಕಾಂಗ್ರೆಸ್‌ ಗೆ ಲಾಭ

ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ರಾಜ್ಯ ವಿಧಾನಸಭಾ ತೀರ್ಪು !

ರಾಜ್ಯದಲ್ಲಿ ನೂತನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌ ನನ್ನು ಪ್ರಚಂಡ ಬಹುಮತದೊಂದಿಗೆ ಜನ ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಏರಿಸಿದೆ. ಅಧಿಕಾರದಲ್ಲಿದ್ದ ಬಿಜೆಪಿಗೆ ನಾಡಿನ ಜನ ಹೀನಾಯ ಸೋಲಿನ ರುಚಿ ತೋರಿಸುವುದರ ಮೂಲಕ ಪ್ರತಿ ಪಕ್ಷದಲ್ಲಿ ಕೂರುವಂತೆ ಮಾಡಿದ್ದಾರೆ. ಉಭಯ ಪಕ್ಷಗಳಿಗೆ ಸವಾಲಿರುವುದು ಇನ್ನು ಮುಂದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಗಾಗಿ ಪಕ್ಷಗಳು ತಯಾರಾಗಬೇಕಿದೆ. 

ಕಾಂಗ್ರೆಸ್  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ರಾಜಕೀಯ ತಂತ್ರಗಳು ಮುಂದಿನ ವರ್ಷ ಬರಲಿರುವ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಲ್ಲಿದ್ದರೇ ಬಹುಶಃ ಎಲ್ಲವೂ ಮೇಲೆ-ಕೆಳಗಾಗಬಹುದು. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ರಾಜ್ಯದಲ್ಲಿ ತೀವ್ರ ಮುಖಭಂಗಕ್ಕೊಳಗಾದರೂ, ಕೇಂದ್ರದಲ್ಲಿ ತನ್ನದೇ ಸರ್ಕಾರವಿರುವ ಕಾರಣಕ್ಕೆ ರಾಜ್ಯದಲ್ಲಿರುವ ಅಷ್ಟೂ ಸಂಸದೀಯ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಇದೆ. ಹಾಗಾಗಿ ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಅಲ್ಲೇ ಕಟ್ಟಿಹಾಕುವಂತೆ ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯಬೇಕಿದೆ. 

ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಮೋದಿ ತಮ್ಮ ರೋಡ್‌ ಶೋಗಳಲ್ಲಿ ಯಾವುದೇ ಸ್ಥಳೀಯ ವಿಧಾನಸಭಾ ಅಭ್ಯರ್ಥಿಗಳನ್ನು ಅಥವಾ ರಾಜ್ಯ ಸಚಿವರನ್ನು ಕರೆದುಕೊಂಡು ಹೋಗಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಗೆ ತಾಲೀಮು ಎಂಬಂತೆ ತೋರಿತ್ತು. ಒಂದು ವೇಳೆ ಕರ್ನಾಟಕದಲ್ಲಿ ಪಕ್ಷದ ವೈಫಲ್ಯವು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ, ಪರಿಣಾಮ ಬೀರಿದರೇ, ಅದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೈಫಲ್ಯವೆಂದು ಬಿಂಬಿತವಾಗುವುದು ಸಹಜ. ಆ ವಿಷಯದಲ್ಲಿನ ಆಪಾದನೆಯ ಯಾವುದೇ ಭಾಗವನ್ನು ಪ್ರಧಾನಿ ಮೇಲೆ ಹಾಕುವುದಕ್ಕೆ ಬಿಜೆಪಿ ಮುಂದಾಗುವುದಿಲ್ಲ. ೨೦೧೯ರ ಲೋಕಸಭಾ ಚುನಾವಣೆ ರಾಜ್ಯದಲ್ಲಂತೂ ಮೋದಿ ವರ್ಸಸ್‌ ಸಿದ್ದರಾಮಯ್ಯ ಎಂಬಂತೆ ಬಿಂಬಿತವಾಗಿತ್ತು. ಸಿದ್ದರಾಮಯ್ಯ ಮೋದಿ ಎದುರು ನಿಲ್ಲಬಹುದಾದ ಸಮರ್ಥ ನಾಯಕನೆಂಬಂತೆ ಬಿಂಬಿತಗೊಂಡರೇ ಹೊರತು ಮೋದಿಗೆ ಆ ಪ್ರಚಾರದಲ್ಲಿ ಅಷ್ಟೊಂದು ವರ್ಚಸ್ಸು ತಂದುಕೊಡಲಿಲ್ಲ. ಅದೇ ಪ್ರಯೋಗವನ್ನು ಬಿಜೆಪಿಯ ಹೈಕಮಾಂಡ್‌ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮಾಡಿತ್ತಾದರೂ, ಇಲ್ಲಿ ಯಾವುದೇ ರೀತಿಯ ವರ್ಕೌಟ್‌  ಆಗಲಿಲ್ಲ. ಪ್ರಧಾನಿ ಮೋದಿ ಮಾಡಿದ ಚುನಾವಣಾ ಪ್ರಚಾರ ಹಾಗೂ ರೋಡ್‌ ಶೋ ನಡೆಸಿದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದ್ದು, ಪ್ರಧಾನಿ ಮೋದಿಯವರ ರಾಜಕೀಯ ವರ್ಚಸ್ಸಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತರುವಂತೆ ಮಾಡಿದೆ. ಇದು ಬಿಜೆಪಿಗೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. 

ರಾಜ್ಯದಲ್ಲಿ ತನ್ನ ಗೆಲುವಿನಿಂದ ಬೀಗಿ ಅಧಿಕಾರಕ್ಕೇರಿದ ಕಾಂಗ್ರೆಸ್ ಲೋಕಸಭೆಗೆ ತನ್ನ ತಂತ್ರವನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ಕಾಂಗ್ರೆಸ್‌ ನ ಸ್ಥಳೀಯ ನಾಯಕರ ಪ್ರಚಾರ ಎಷ್ಟರಮಟ್ಟಿಗೆ ಸಾಗಿತ್ತೆಂದರೆ, ಪ್ರಚಾರದ ಕೊನೆಯ ದಿನದಂದು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಆದರೆ ಫಲಿತಾಂಶಗಳು ಹೊರಬಿದ್ದ ಕೂಡಲೇ ಗಾಂಧಿಯವರಿಗೆ ಮನ್ನಣೆ ನೀಡುವತ್ತ ಗಮನ ಹರಿಸಲಾಯಿತು. ರಾಹುಲ್ ಗಾಂಧಿಯವರ ʼಭಾರತ್ ಜೋಡೋ ಯಾತ್ರೆʼ ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು  ಗಮನಸೆಳೆಯುವ ಯಶಸ್ವಿ ಪ್ರಯತ್ನ ಮಾಡಿ, ಮೋದಿಗೆ ಟಕ್ಕರ್‌ ಕೊಡುವಲ್ಲಿ ಯಶಸ್ವಿಯಾಯಿತು.  ೨೦೧೮ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದು, ಮತ್ತು ರಾಜ್ಯ, ರಾಷ್ಟ್ರ ರಾಜಕೀಯ ವಲಯ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಬಹುಮತದೊಂದಿಗೆ ಅಧಿಕಾರಕ್ಕೇರದ್ದು ʼಭಾರತ್ ಜೋಡೋ ಯಾತ್ರೆʼಯ “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ” ಎಂಬ ಕಾಂಗ್ರೆಸ್‌ ನ ಸಂದೇಶವನ್ನು ಮುನ್ನೆಲೆಗೆ ತರುವ ಸಹಜ, ಸ್ವಾಭಾವಿಕ ಯತ್ನ ಮಾಡಿ ಸೆಲ್ಫ್‌ ಕ್ರೆಡಿಟ್‌ ತೆಗೆದುಕೊಂಡಿತು. ಅದನ್ನು ಜನ ಕೂಡ ಒಪ್ಪಿದರು.  

ಆದಾಗ್ಯೂ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಅಧಿಕಾರಕ್ಕಾಗಿ ಅಭ್ಯರ್ಥಿ ಆಧಾರಿತವಾಗಿ, ಜಾತಿ ಆಧಾರಿತವಾಗಿ, ಪಕ್ಷ ಆಧಾರಿತವಾಗಿ ಮತ ಹಾಕುವ ಕರ್ನಾಟಕದ ಜನರ ಮನಸ್ಥಿತಿಯನ್ನು ಬದಲಾಯಿಸುವುದಕ್ಕೆ ಅಥವಾ ರಾಜ್ಯದ ಪ್ರಜಾಮತವನ್ನು ಕಾಂಗ್ರೆಸ್‌ ಗೆ ಸೆಳೆದು ಬಹುಮತವನ್ನಾಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಗೆ ʼಗಾಂಧಿʼ ಕುಟುಂಬವನ್ನು ಬಿಂಬಿಸುವುದಷ್ಟೇ ಸಾಕಾಗುವುದಿಲ್ಲ. ೧೯೮೫ ರಲ್ಲಿ, ರಾಜ್ಯವು ಸಂಸತ್ತಿನ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಗೆ ಅದ್ಭುತ ವಿಜಯವನ್ನು ನೀಡಿತ್ತು. ನಂತರ ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಪರವಾಗಿ ಅಷ್ಟೇ ಪ್ರಬಲವಾದ ತೀರ್ಪು ಬಂದಿತ್ತು ಎನ್ನುವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ. 

ಈ ಸುತ್ತಿನಲ್ಲಿಯೂ ಹಾಗೆ, ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯನ್ನು ಬಹುಮತದಲ್ಲಿ ಗೆದ್ದಿದೆ ಎಂಬ ಕಾರಣಕ್ಕೆ ಓವರ್‌ ಕಾನ್ಫಿಡೆನ್ಸ್‌ನಲ್ಲಿ ಮುಂದೆ ಹೋದರೇ ಕಾಂಗ್ರೆಸ್‌ ಮುಖಭಂಗಕ್ಕೊಳಗಾಗಬಹುದು. ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗದಂತೆ ಕಾಂಗ್ರೆಸ್ ಖಚಿತಪಡಿಸಿಕೊಳ್ಳಲು, ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರದೊಂದಿಗೆ ತನ್ನ ಯಶಸ್ವಿ ಸ್ಥಳೀಯ ವಿಷಯಗಳ ನಿರೂಪಣೆಯನ್ನು ಸಿಂಕ್ರೊನೈಸ್ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎಂದಾಗ ʼರಾಷ್ಟ್ರೀಯವಾದʼ, ʼದೇಶಭಕ್ತಿʼ ಎಂಬ ವಿಷಯವನ್ನು ಮೋದಿ ನೇತೃತ್ವದ ಸರ್ಕಾರ ಜನರ ತಲೆಯೊಳಗೆ ಬಿತ್ತಿದೆ. ಅಷ್ಟೇ ಅಲ್ಲದೇ, ʼರಾಜ್ಯದಲ್ಲಿ ಓಕೆ, ದೇಶಕ್ಕೆ ಮೋದಿ ಬೇಕುʼ ಎಂಬ ಜನರ ಅಭಿಪ್ರಾಯವನ್ನು ಮೀರಿಸುವಂತೆ ಕಾಂಗ್ರೆಸ್‌ ತಯಾರಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ. 

ಕರ್ನಾಟಕ ಚುನಾವಣೆಯಲ್ಲಿ ತನಗೆ ಉತ್ಕೃಷ್ಟ ಲಾಭಾಂಶವನ್ನು ತಂದುಕೊಟ್ಟ ತನ್ನ ಭರವಸೆಯ ಗುಣಮಟ್ಟವನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಕಾಂಗ್ರೆಸ್ ಬಯಸಿದರೆ, ತನ್ನ ರಾಷ್ಟ್ರೀಯ ನಾಯಕತ್ವವನ್ನು ಮತ್ತಷ್ಟು ಪ್ರಬಲಗೊಳಿಸಿಕೊಳ್ಳಬೇಕಾಗುತ್ತದೆ. ಇದನ್ನು ಕಾಂಗ್ರೆಸ್ ಸಾಧಿಸಿದರೂ ಸಹ, ಇತರೆ ಅಗತ್ಯಗಳನ್ನು ಒಂದು ಸುಸಂಬದ್ಧವಾದ ರಾಷ್ಟ್ರೀಯ ವಿಧಾನಕ್ಕೆ ಪ್ಯಾಕಿಂಗ್ ಮಾಡುವ ಸವಾಲನ್ನು ಎದುರಿಸಬೇಕಾಗುತ್ತದೆ.  ದೇಶದ ೫೪೩ ಸಂಸದೀಯ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಾಗುವ ಸ್ಥಳೀಯವಾಗಿ ಪ್ರಭಾವ ಹೊಂದಿರುವ ನಾಯಕರ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಶಕ್ತವಾಗಿರಬೇಕಾಗುತ್ತದೆ. 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನ ಮತ ಚಲಾಯಿಸಿದಂತೆಯೇ ಮುಂದಿನ ವರ್ಷ ನಡೆಯುವ ಸಂಸತ್ತಿನ ಚುನಾವಣೆಯಲ್ಲೂ ಮತ ಚಲಾಯಿಸುವಂತೆ ಮಾಡುವುದು ಸುಲಭದ ಕೆಲಸವಲ್ಲ. ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಕಾಂಗ್ರೆಸ್ ಮಾಡಿಕೊಳ್ಳಲೇಬೇಕಿದೆ. 

ಇನ್ನು, ಭ್ರಷ್ಟಾಚಾರ ಎಷ್ಟೋ ಸರ್ಕಾರಗಳನ್ನು ಚುನಾವಣೆಗಳಲ್ಲಿ ಸೋಲುವಂತೆ ಮಾಡಿದೆ., ೧೯೮೯ ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ನನ್ನು ಬೋಫೋರ್ಸ್ ಹಗರಣವು ಅಧಿಕಾರದಿಂದ ಕೆಳಗಿಳಿಸಿತ್ತು  ಎನ್ನವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ(ರಾಜೀವ್ ಗಾಂಧಿ ಅವರನ್ನು ಅವರ ಮರಣದ ನಂತರ ನ್ಯಾಯಾಲಯವು ನಿರ್ದೋಷಿ ಎಂದು ಘೋಷಿಸಿತು). ಆದರೆ ಕರ್ನಾಟಕದಲ್ಲಿ ಈ ಬಾರಿ ನಡೆದದ್ದೇ ಬೇರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಅವರ ಸಹೋದ್ಯೋಗಿಗಳು ಒಳಗೊಂಡ ಯಾವುದೇ ನಿರ್ದಿಷ್ಟ ಹಗರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿಲ್ಲ. ಬದಲಾಗಿ, ಇಡೀ ಸರ್ಕಾರಿ ಯಂತ್ರವು ಕೆಳಗಿನಿಂದ ಮೇಲಿನವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕಾರಣಕ್ಕೆ ಜನ ಬಿಜೆಪಿಯ ವಿರುದ್ಧವಾದ ತೀರ್ಪನ್ನು ಕೊಟ್ಟರು. 

ನಿಜ, ಭ್ರಷ್ಟಾಚಾರವೊಂದೇ ಕರ್ನಾಟಕದಲ್ಲಿ ಬಿಜೆಪಿಯನ್ನು ಕೆಳಗಿಳಿಸಿದ ವಿಷಯವಲ್ಲ. ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಜನರ ಅಸಹನೆಯನ್ನು ಹೆಚ್ಚಿಸಿತು. ರಾಷ್ಟ್ರಮಟ್ಟದ ಸಮಸ್ಯೆಗಳು ಕರ್ನಾಟಕದ ಮೂಲಕ ಮೊಟ್ಟ ಮೊದಲ ಬಾರಿಗೆ ಉಗ್ರವಾಗಿಯೇ ಹೊರಹೊಮ್ಮಿತು. "ಡಬಲ್-ಎಂಜಿನ್ ಸರ್ಕಾರ"ದ ಆಡಳಿತ ಜನರಲ್ಲಿ ನಿಜಕ್ಕೂ ಭ್ರಮನಿರಸನ ಮೂಡಿಸಿತು. ಕೇಂದ್ರದಲ್ಲಿ "ಕಳೆದ ಒಂಬತ್ತು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ನ ಬೆಲೆಯು ಮೂರು ಪಟ್ಟು ಹೆಚ್ಚಳಕ್ಕೆ ಇದೇ ಮೋದಿ ನೇತೃತ್ವದ ಸರ್ಕಾರ ಕಾರಣ ಎಂಬ ವಿಚಾರ ಜನರಿಗೆ ಮನವರಿಕೆಯಾಯಿತು. 

ಜಾತಿ ಕಾರಣದಿಂದಾಗಿ ಬಿಜೆಪಿ ಭಾರೀ ಬೆಲೆ ತೆರಬೇಕಾಯಿತು. ರಾಜ್ಯದಲ್ಲಿ ಬಿಜೆಪಿಯ ಪ್ರಬಲ ಸ್ಥಳೀಯ ನಾಯಕರ ಕೊರತೆಯಿಂದಾಗಿ, ಪಕ್ಷವು ಗೆಲುವನ್ನು ತರಲು ಸಂಪೂರ್ಣವಾಗಿ ಮೋದಿಯವರ ವರ್ಚಸ್ಸಿನ ಮೇಲೆ ಅವಲಂಬಿತವಾಯಿತು. ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸಲು ಪಕ್ಷದ ಅವಿರತ ಪ್ರಯತ್ನಗಳು ಮತ್ತು ಬಹುಸಂಖ್ಯಾತ ಸಮುದಾಯದ ಮತಗಳನ್ನು ಗಳಿಸಲು ಪ್ರಯತ್ನಿಸಲು ಮತ್ತು ತನ್ನ ಕಟುವಾದ ಹಿಂದುತ್ವದ ಮನವಿಯನ್ನು ಬಳಸಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಜನರಿಗೆ ಪ್ರಗತಿಪರ ಆಡಳಿತಕ್ಕೆ ಜನರು ಒಲವು ಮೂಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದರೇ, ಬಜರಂಗದಳದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಕಾಂಗ್ರೆಸ್ ನ ಪ್ರಣಾಳಿಕೆಗೆ ವಿರುದ್ಧವಾಗಿ ಮತ ಚಲಾಯಿಸುವಾಗ ಜೈ ಭಜರಂಗ ಬಲಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಗೆ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡು ಮತ್ತೆ ಹಿಂದೂ ಧರ್ಮದ ವಿಚಾರ ಮುಂದೆ ತಂದು ಭಾವನಾತ್ಮಕವಾಗಿ ಸೆಳೆದುಕೊಳ್ಳುವುದಕ್ಕೆ ಮೋದಿ ಸೇರಿ ಇಡಿ ಬಿಜೆಪಿ ಮಾಡಿದ ಪ್ರಯತ್ನಕ್ಕೆ ಜನ ಬಗ್ಗಲಿಲ್ಲ.  

ಇನ್ನು, ಚುನಾವಣಾ ಲಾಭಕ್ಕಾಗಿ ಬಿಜೆಪಿಗೆ "೪೦% ಕಮಿಷನ್" ಮೇಲೆ ದಾಳಿ ಮಾಡುವುದು ಕಾಂಗ್ರೆಸ್‌ ಗೆ ಸುಲಭದ ಕೆಲಸವಾಗಿತ್ತು. ಆದರೇ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಕಾಂಗ್ರೆಸ್‌ ಗೆ ಇನ್ನಿರುವ ದೊಡ್ಡ ಸವಾಲು. ಉನ್ನತ ಮಟ್ಟದ ಪಾರದರ್ಶಕತೆ ಮತ್ತು ಜನ ಇಟ್ಟ ವಿಶ್ವಾಸವನ್ನು ವ್ಯವಸ್ಥಿತ ಸುಧಾರಣೆಗಳ ಮೂಲಕ ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ತಯಾರಾಗಿದೆ ಎನ್ನುವುದು ಮುಖ್ಯ.  ರಾಜ್ಯ ಬಿಜೆಪಿಯ ವಿಚಾರವನ್ನಷ್ಟೇ ಅಲ್ಲದೇ, ದೇಶಕ್ಕೆ ಬಿಜೆಪಿ ಸರ್ಕಾರದಿಂದಾದ ಸಮಸ್ಯೆಗಳನ್ನು ತಿಳಿಸುವುದರ ಜೊತೆಗೆ ಒಂದಿಷ್ಟು ಹೊಸ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಅಗತ್ಯವಾಗಿ ಲೋಕಸಭಾ ಚುನಾವಣೆಯೊಳಗೆ ರಾಜ್ಯದಲ್ಲಿ ಮಾಡಿಕೊಳ್ಳಬೇಕಿದೆ. ಬಿಜೆಪಿಯ ಎಲ್ಲಾ ಮೈನಸ್ ಗಳನ್ನು ಕಾಂಗ್ರೆಸ್‌ ಹಠ ಹಿಡಿದು ಪ್ಲಸ್ ಮಾಡಿಕೊಂಡಲ್ಲಿ ಬದಲಾವಣೆ ಸಾಧ್ಯ. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಜನರ ತೀರ್ಪು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಮುಂದೇನಾಗುತ್ತದೆ ? ಕಾದು ನೋಡೋಣ.  

-ಶ್ರೀರಾಜ್‌ ವಕ್ವಾಡಿ




Friday, May 19, 2023

ದಕ್ಷಿಣದ ಹೃದಯವು ಉತ್ತರದ ಹೃದಯಕ್ಕಿಂತ ಭಿನ್ನವೆಂದ ಮತದಾರ

ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ ನನ್ನು ಕಾಂಗ್ರೆಸ್‌ ಬೆಳೆಸಲಿ । ಕೆಲಸಕ್ಕೆ ಬರಲಿಲ್ಲ ಮೋದಿ ವರ್ಚಸ್ಸು !

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರ ಮೂಲಕ ಮತ್ತೆ ಇಡೀ ದೇಶದಾದ್ಯಂತ ಕಾಂಗ್ರೆಸ್‌ ಮರು ಜೀವ ಪಡೆದಂತಾಗಿದೆ. ಕಾಂಗ್ರೆಸ್ ಸಂಭ್ರಮಿಸಲು ಕಾರಣವಿದೆ. ಬಿಜೆಪಿಯ ದೊಡ್ಡ ಮಟ್ಟದ ಅಪಪ್ರಚಾರದ ಪ್ರೊಪಗಂಡಾದ ನಡುವೆಯೂ ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ವಿರುದ್ಧವಾಗಿ ಬಂದ ನಿರ್ಣಾಯಕ ತೀರ್ಪು ಕಾಂಗ್ರೆಸ್‌ ನ ಪಾಳಯದಲ್ಲಿ ಹೊಸ ಹುಮ್ಮಸ್ಸು ತಂದಿದೆ. 

ಕಾಂಗ್ರೆಸ್‌ ನ "ವಾಯ್ಸ್‌ ಫಾರ್‌ ಲೋಕಲ್‌ / ಸ್ಥಳೀಯ ಪರ ಧ್ವನಿ" ಪ್ರಚಾರವು ಮೇಲುಗೈ ಸಾಧಿಸಿತು. ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಗುತ್ತಿಗೆದಾರರ ಸಂಘ ಮತ್ತು ಶಾಲಾ ಆಡಳಿತ ಮಂಡಳಿಗಳ ಲಂಚದ ಆರೋಪದ ನಂತರ "೪೦% ಸರ್ಕಾರ" ಅಂಟಿಕೊಂಡಿದ್ದೆಲ್ಲಾ ಕಾಂಗ್ರೆಸ್‌ ಗೆ ಅನುಕೂಲವಾಯಿತು. ರಾಜ್ಯದ ಜನ ಬಿಜೆಪಿಯ ದುರಾಡಳಿತದಲ್ಲಿ ಬೇಸತ್ತು ಹೋದರು. 

ಚುನಾವಣೆಯು ಸ್ಥಳೀಯ ಸಮಸ್ಯೆಗಳ ಮೇಲೆ ನಿಂತಿತ್ತು. ಬಿಜೆಪಿಯ ಯಾವುದೇ ರೋಡ್‌ ಶೋ, ಪ್ರಚಾರ ಸಭೆ, ಅಪಪ್ರಚಾರ, ಗುಜರಾತ್‌ ಮಾಡೆಲ್‌ ಕಾರ್ಯರೂಪಕ್ಕೆ ತರುವ ಯಾವುದೇ ಪ್ರಯತ್ನ ಇಲ್ಲಿ ಫಲ ಕೊಟ್ಟಿಲ್ಲ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಆಗುವ ಸಂದರ್ಭದಲ್ಲಿ ಅಯ್ಯೋ ʼಈವಯ್ಯ ಏನ್‌ ಮಾಡ್ತಾನಪ್ಪಾ ?ʼ ಎಂಬ ಮಾತು ರಾಜ್ಯದಲ್ಲಿತ್ತು. ಆದರೇ, ಕೆಳವರ್ಗದವರನ್ನೂ ತಲುಪಿದ ಭಾರತ್‌ ಜೋಡೋ ಯಾತ್ರೆ ಕೂಡ ಇಲ್ಲಿ ಕಾಂಗ್ರೆಸ್‌ ಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪಕ್ಷದ ಪ್ರಬಲ ಪ್ರಾದೇಶಿಕ ನಾಯಕತ್ವ, ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಮಾಡಿಕೊಂಡ ನಿರ್ಧಾರ ಸ್ಪಷ್ಟವಾಗಿದ್ದಕ್ಕೆ ಇವೆಲ್ಲವೂ ಸಾಕಾರವಾಯ್ತು. ಇನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ವಿಮರ್ಶೆಯು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರಚಾರವನ್ನು ನಿರ್ಲಕ್ಷಿಸುವುದಿಲ್ಲ, ಅವರು ಮಹಿಳೆಯರು ಮತ್ತು ಯುವ ಮತದಾರರನ್ನು ತಲುಪುವ ಸಂದರ್ಭದಲ್ಲಿ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದು ಕೂಡ ಗೆಲುವಿನ ಒಂದು ಭಾಗ.  

ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪನವರ ವರ್ಚಸ್ಸು ಈ ಬಾರಿಯ ಚುನಾವಣೆಯಲ್ಲಿ ಕೆಲಸಕ್ಕೆ ಬಾರದಿರುವುದು ಬಿಜೆಪಿ ತಂತ್ರಜ್ಞರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳೆದುಕೊಂಡ ರಾಜ್ಯದ ಬಗ್ಗೆ ಬಿಜೆಪಿ ಹೈಕಮಾಂಡ್‌ ಮರಳಿ ಪಡೆಯುವುದಕ್ಕೆ ಮುಂದೆ ಯಾರಿಗೆ ನೇತೃತ್ವ ನೀಡಬೇಕು ಎಂಬ ವಿಚಾರದಲ್ಲೀಗ ತಲೆಕೆಡಿಸಿಕೊಂಡಂತಿದೆ. ಮೋದಿ ಮತ್ತು ಶಾ ಅವರ ʼರೋಬೋ ಆಡಿಯನ್ಸ್‌ʼ ರೋಡ್‌ ಶೋ, ಚುನಾವಣಾ ಪ್ರಚಾರ ಸಭೆಗಳು ಮತ್ತೆ ಮತ್ತೆ ಸೋಲುತ್ತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಈ ಸೋಲು ಬಿಜೆಪಿಗೆ ಚಿಂತನಾರ್ಹವಾಗಿದೆ. ಈ ಸೋಲಿನಿಂದಾಗಿ, ಇಲ್ಲಿ ಮಾತ್ರವಲ್ಲದೇ, ಜೈರಾಮ್ ಠಾಕೂರ್ (ಹಿಮಾಚಲ ಪ್ರದೇಶ), ರಘುಬರ್ ದಾಸ್ (ಜಾರ್ಖಂಡ್), ಮನೋಹರಲಾಲ್ ಖಟ್ಟರ್ (ಹರಿಯಾಣ) ಅಥವಾ ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ) ಅವರಂತಹವರನ್ನು ಪ್ರಯೋಗಿಸುವ ಆಲೋಚನೆಯನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಮರುಪರಿಶೀಲಿಸಬೇಕಾಗಬಹುದು.

ಬಿಜೆಪಿಯ ಪ್ರಚಾರವು "ಡಬಲ್ ಇಂಜಿನ್" ಸರ್ಕಾರ, ರಾಷ್ಟ್ರೀಯತೆ, ಹಿಂದುತ್ವ, ಭಜರಂಗಬಲಿ ಮತ್ತು ನರೇಂದ್ರ ಮೋದಿಯವರ ರಾಜಕೀಯ ವರ್ಚಸ್ಸಿನ ಜನಪ್ರಿಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಕಾಂಗ್ರೆಸ್‌ ನ ಪ್ರಚಾರವು ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚು ಬೇರೂರಿತ್ತು. ರಾಹುಲ್ ಗಾಂಧಿ ಮತ್ತು  ಕಾಂಗ್ರೆಸ್‌ ನ ಕೇಂದ್ರ ನಾಯಕತ್ವವು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡರೆ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಂತಹ ರಾಜ್ಯ ನಾಯಕರು ತಾರಾ ಪ್ರಚಾರಕರಾಗಿ ಕಾಣಿಸಿಕೊಂಡಿದ್ದು ವಿಶೇಷ.

ರಾಜ್ಯದಲ್ಲಿ ಕಾಂಗ್ರೆಸ್‌ ನ ಯಶಸ್ಸು ಎರಡೂ ಪಕ್ಷಗಳಿಗೆ ಪ್ರಮುಖ ಪಾಠಗಳನ್ನು ಹೇಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿಗೆ, ಇದು ರಾಜ್ಯ ಚುನಾವಣೆಗೆ ಬಂದಾಗ ಕೇಂದ್ರೀಕೃತ ಪ್ರಚಾರ ಮತ್ತು ನರೇಂದ್ರ ಮೋದಿಯನ್ನು ಅವಲಂಬಿಸುವ ಅವಶ್ಯಕತೆಗಳ ಮಿತಿಗಳನ್ನು ಒತ್ತಿ ಹೇಳುತ್ತದೆ. ಕಾಂಗ್ರೆಸ್‌ ನ ದೃಷ್ಟಿಕೋನದಿಂದ, ಯಶಸ್ಸು ರಾಜ್ಯ ಮಟ್ಟದ ನಾಯಕತ್ವವನ್ನು ಸಶಕ್ತಗೊಳಿಸುವ ಮಹತ್ವವನ್ನು ತೋರಿಸುತ್ತದೆ. ಮತ್ತು ಇನ್ನಾದರೂ ಕಾಂಗ್ರೆಸ್ ಈ ಐದು ವರ್ಷಗಳ ಆಡಳಿತಾವಧಿಯಲ್ಲಿ ತನ್ನ ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ / ಎರಡನೇ ಹಂತದ ನಾಯಕತ್ವವನ್ನು ಬಲಗೊಳಿಸಿಕೊಳ್ಳಬೇಕಿದೆ. 

ದಕ್ಷಿಣದಲ್ಲಿ ಯಶಸ್ಸು ಪಡೆಯದ ಉತ್ತರದ ತಂತ್ರ : 

ಮೇ ೬ ಮತ್ತು ೭ ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ವ್ಯಾಪಕ ಪ್ರಚಾರದ ರೋಡ್‌ ಶೋನೊಂದಿಗೆ ಬಿಜೆಪಿಯ ಪ್ರಚಾರವು ತಾರಕಕ್ಕೆ ತಲುಪಿತು. ರೋಡ್‌ ಶೋ ಚೆನ್ನಾಗಿಯೇ ಯೋಜಿಸಲಾಗಿತ್ತು. ನಗರದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರಿ ವ್ಯವಸ್ಥೆಯ ಕಾರ್ಯಾಂಗವನ್ನೇ ಬಳಸಿಕೊಂಡಿತ್ತು. ಪ್ರಧಾನ ಮಂತ್ರಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಬಿಂಬಿಸಿ ಒಂದೆಡೆ ಪ್ರಚಾರವಾದರೇ, ಇನ್ನೊಂದೆಡೆ ಇದಕ್ಕೆ ತದ್ವಿರುದ್ಧ. ಎಷ್ಟೇ ಪ್ರಯತ್ನ ಮಾಡಿದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ತೋರಿದ ಪ್ರಾಬಲ್ಯವನ್ನು ಬಿಜೆಪಿಗೆ ಈ ಚುನಾವಣೆಯಲ್ಲಿ ತೋರಿಸಲು ಸಾಧ್ಯವಾಗಿಲ್ಲ. ಪ್ರಧಾನಿಯವರ  ʼಜೈ ಭಜರಂಗಬಲಿ ಭಾಷಣʼವೂ ಕೂಡ ಹೆಚ್ಚಿನ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವಲ್ಲಿ ಸಫಲವಾಗಲಿಲ್ಲ. 

ಪಿಎಂ ಮೋದಿ ಜನಪ್ರಿಯವಾಗಿದ್ದರೂ, ಅದು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತಗಳಾಗಿ ಬದಲಾಗಲಿಲ್ಲ. ಕೇಂದ್ರ ನಾಯಕತ್ವ ಮತ್ತು ರಾಷ್ಟ್ರೀಯ ಮಟ್ಟದ ಸಮಸ್ಯೆಗಳಿಗಿಂತ ರಾಜ್ಯ ಮಟ್ಟದ ನಾಯಕರು ಮತ್ತು ಸ್ಥಳೀಯ ಸಮಸ್ಯೆಗಳು ಇಲ್ಲಿ ಮುಖ್ಯವಾದವು. ಬೊಮ್ಮಾಯಿ ನೇತೃತ್ವದ ಬಿಜೆಪಿಯ "೪೦% ಕಮಿಷನ್ ಸರ್ಕಾರ" ಮತದಾರರನ್ನು ಬಡಿದೆಬ್ಬಿಸಿತು. ಪ್ರಧಾನಿಯವರ ನಿರಂತರ ಜನಪ್ರಿಯತೆ ಕೂಡ ಅದನ್ನು ಮೀರಿಸಲು ಸಾಧ್ಯವಾಗಲಿಲ್ಲ.

ಉತ್ತರದ ರಾಜ್ಯಗಳಲ್ಲಿ ತೋರಿಸಿಕೊಂಡು ಬಂದ ಬಿಜೆಪಿಯ ಧೋರಣೆ ದಕ್ಷಿಣದಲ್ಲಿ ಕೆಲಸ ಮಾಡಲಿಲ್ಲ. ʼದಕ್ಷಿಣದ ಹೃದಯವು ಉತ್ತರದ/ಹಿಂದಿಯ ಹೃದಯಕ್ಕಿಂತ ಭಿನ್ನವಾಗಿದೆʼ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾಡುವಂತೆ ದಕ್ಷಿಣದಲ್ಲಿ ಮತ ಧ್ರವೀಕರಣ ಮಾಡಬಹುದೆಂದು ತಿಳಿದಿದ್ದ ಬಿಜೆಪಿಗೆ ಇಲ್ಲಿ ನಿರಾಸೆ ಆಯ್ತು. 

ತಿಂಗಳುಗಟ್ಟಲೆ ಪತ್ರಿಕಾ ಮಾಧ್ಯಮಗಳಲ್ಲಿ ಬ್ಯಾನರ್‌ ಹೆಡ್‌ ಲೈನ್‌ ಅಡಿಯಲ್ಲಿ ಸುದ್ದಿಯಾದ ಹಿಜಾಬ್ ಪ್ರಕರಣ, ಚುನಾವಣಾ ಪ್ರಚಾರಗಳಲ್ಲಿ ಅಷ್ಟೇನೂ ಉಲ್ಲೇಖಿಸಲ್ಪಡದಿರುವುದು ಆಶ್ಚರ್ಯವೇನಿಲ್ಲ. 'ದಿ ಕೇರಳ ಸ್ಟೋರಿ' ಮತ್ತು ಭಜರಂಗದಳ ನಿಷೇಧದಂತಹ ವಿವಾದಗಳಲ್ಲಿ ಎದ್ದಿರುವ ವಿಷಯಗಳು ಬಿಜೆಪಿಗೆ ಮತ ತಂದುಕೊಡಲಿಲ್ಲ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಗಳಿಂದ ಬಿಜೆಪಿ ನಾಯಕರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು, ಆದರೆ ಮತದಾರರ ತೀರ್ಪು ಬಿಜೆಪಿಯು ಪ್ರಧಾನಿ ಮೋದಿಯವರ ಮೈಲೇಜ್‌, ಹಿಂದು ಧಾರ್ಮಿಕ ಭಾವನೆಗಳ ಮೇಲೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಕೊಟ್ಟಿರುವುದು ಬಿಜೆಪಿಗೆ ಆಘಾತವಾಗಿದೆ.

ರಾಜ್ಯದಲ್ಲಿ ಅಭಿವೃದ್ಧಿಯ ವಿಭಿನ್ನ ವ್ಯಾಖ್ಯಾನ :

ರಾಜ್ಯ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ರಾಜ್ಯ ಮಟ್ಟದ ನಾಯಕತ್ವದ ಮಹತ್ವವನ್ನು ಒತ್ತಿ ಹೇಳುತ್ತದೆ. ಯಡಿಯೂರಪ್ಪ ಬಿಟ್ಟರೇ, ಬಿಜೆಪಿಗೆ ರಾಜ್ಯ ಮಟ್ಟದ ಪ್ರಬಲ ನಾಯಕತ್ವ ಇರಲಿಲ್ಲ. ಒಂದಿಷ್ಟು ಗಂಟಲು ಹರಿದುಕೊಳ್ಳುತ್ತಿರುವವರು ʼಉರಿ ನಂಜುʼ, ಹಿಜಾಬ್‌, ಲವ್‌ ಜಿಹಾದ್‌ ಅಂತಲೇ ಕಾಲ ಕಳೆದರು. ಅದು ಸಾಸಿವೆ ಕಾಳಷ್ಟೂ ಉಪಯೋಗಕ್ಕೆ ಬರಲಿಲ್ಲ. ಬೊಮ್ಮಾಯಿ ಸರ್ಕಾರದ ನಕಾರಾತ್ಮಕ ಚಿತ್ರಣ, ದುರಾಡಳಿತದಿಂದಾಗಿ ರಾಜ್ಯದಲ್ಲಿ ಜನ ಬೇಸತ್ತು ಹೋದರು.  

೨೦೨೧ ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯ ರಾಷ್ಟ್ರೀಯ ಮಟ್ಟದ ನಾಯಕತ್ವವು ಚುನಾವಣೆಯ ಸಂದರ್ಭದಲ್ಲಿ ಹಲವಾರು ರೋಡ್‌ ಶೋ ಗಳನ್ನು ನಡೆಸಿತು. ಮತ್ತದೆ ಹಿಂದುತ್ವ. ಇದರ ಹೊರತಾಗಿಯೂ, ತೃಣಮೂಲ ಕಾಂಗ್ರೆಸ್ ಪರವಾಗಿ ಜನ ನಿಂತರು.  ಮಮತಾ ಬ್ಯಾನರ್ಜಿಯವರ ನಿರ್ಣಾಯಕ ಪಾತ್ರಕ್ಕೆ ಪಶ್ಚಿಮ ಬಂಗಾಳ ಅಸ್ತು ಅಂದಿತ್ತು. ಕರ್ನಾಟಕದಲ್ಲಿಯೂ ಈಗ ಅಂಥದ್ದೇ ಚಿತ್ರಣ ಹೊರಬಿದ್ದಿದೆ. ಅಭಿವೃದ್ಧಿ ಇಲ್ಲದ ಪ್ರಚಾರಕ್ಕೆ, ದುರಾಡಳಿತಕ್ಕೆ ಜನ ಪಾಠ ಕಲಿಸಿ, ಇಲ್ಲಿ ಅಭಿವೃದ್ಧಿಗೆ ವಿಭಿನ್ನವಾದ ವಾಖ್ಯಾನವಿದೆ ಎಂದು ಹೇಳಿದ್ದಾರೆ.

೨೦೨೪ರ ಆಟವು ವಿಭಿನ್ನವಾಗಿದೆ : 

ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ನಾಯಕರ ಮೇಲೆ ಪಣತೊಟ್ಟಿತು ಮತ್ತು ಕರ್ನಾಟಕದ ಅಧಿಕಾರ ಪಡೆಯಿತು. ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದ ಒಂದು ವಿಷಯವನ್ನು ಕಾಂಗ್ರೆಸ್ ಉಲ್ಲೇಖಿಸಲಿಲ್ಲ. ನಿಸ್ಸಂಶಯವಾಗಿ, ಇದು ಸಂಸತ್ತಿಗೆ ಮತ್ತು ದೇಶಕ್ಕೆ ಮಾತ್ರವಲ್ಲದೆ ಕಾಂಗ್ರೆಸ್‌ ಗೂ ಒಳ್ಳೆಯದು. ಪ್ರತಿಪಕ್ಷಗಳು ಆಗಾಗ್ಗೆ ಇವಿಎಂಗಳನ್ನು ಮ್ಯಾನಿಪ್ಯುಲೇಟ್ ಮಾಡಿದ ವಿಷಯವನ್ನು ಪ್ರಸ್ತಾಪಿಸುತ್ತವೆ. ಆದರೆ ಇಲ್ಲಿ ಯಾರಿಗೂ ಇವಿಎಂಗಳಲ್ಲಿ ಯಾವುದೂ ತಪ್ಪಿರಲಿಲ್ಲ. ಇವಿಎಂ ಬಗ್ಗೆ ದೂರುತ್ತಾ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ಆಗಾಗ ಹೇಳುತ್ತಿದ್ದ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಆಚರಿಸುತ್ತಿದೆ. ಅವರು ಸರಿಯಾದ ವಿಷಯಗಳನ್ನು ಪ್ರಸ್ತಾಪಿಸಿ, ಸ್ಥಳೀಯ ನಾಯಕರಿಗೂ ಆದ್ಯತೆ ನೀಡಿ, ರಾಜ್ಯದಲ್ಲಿ ಶ್ರಮಿಸಿದರೆ ಮತ್ತೆ ಅವಕಾಶವಿದೆ ಎನ್ನುವುದನ್ನು ಅರಿತಂತಿದೆ. ೨೦೨೪ರ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್‌ ಗೆ ಈ ವಿಜಯದ ಅಗತ್ಯವಿತ್ತು, ಆದರೆ ಈ ಸಣ್ಣ ಔಷಧಿ ಪ್ರಮಾಣವನ್ನು ಬೂಸ್ಟರ್ ಶಾಟ್ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ೨೦೨೪ರ ಆಟವು ವಿಭಿನ್ನವಾಗಿದೆ ಎನ್ನುವುದನ್ನು ಕಾಂಗ್ರೆಸ್‌ ಅರಿತುಕೊಂಡು ಮುನ್ನಡೆಯಬೇಕಿದೆ. 

-ಶ್ರೀರಾಜ್‌ ವಕ್ವಾಡಿ