ದ್ವೇಷ ವರ್ಸಸ್ ಪ್ರೀತಿಯ ರಾಜಕಾರಣದ ನಡುವೆ ಯಾರ ಒಲವು ಯಾರ ಕಡೆಗೋ !
ರಾಹುಲ್ ಗಾಂಧಿಯವರಲ್ಲಿರುವ ಹೊಸ ವೈಚಾರಿಕ ಆದರ್ಶಗಳನ್ನು ಕಾಂಗ್ರೆಸ್ ಪಕ್ಷದ ಗಾಂಧಿಗಿರಿ ೨.೦ ಎಂದು ಕರೆಯೋಣವೇ ? ಪ್ರೀತಿಯಿಂದ ಮಾತ್ರ ದೇಶವನ್ನು ಜೋಡಿಸುವುದಕ್ಕೆ ಸಾಧ್ಯ ಎಂದು ನಂಬಿರುವ ರಾಹುಲ್, ಹೊಸ ಸಾಧ್ಯತೆಗಳತ್ತ ಇತ್ತೀಚೆಗಿನ ವರ್ಷಗಳಲ್ಲಿ ಪರಿಣಾಮಕಾರಿಯಾಗಿ ತನ್ನನ್ನು ತಾನು ತೆರೆದುಕೊಂಡಿರುವುದು ಕಾಂಗ್ರೆಸ್ ನ ಪಾಲಿನ ಹೊಸ ರೂಪಾಂತರಕ್ಕೆ ನಾಂದಿ ಹಾಡಿದಂತಿದೆ. ದೇಶದಾದ್ಯಂತ ʼದ್ವೇಷದ ಮಾರುಕಟ್ಟೆʼಯನ್ನು ಮುಚ್ಚಿ ʼಪ್ರೀತಿಯ ಅಂಗಡಿʼಗಳನ್ನು ತೆರೆಯಲು ಮುಂದಾಗಿರುವ ಸನ್ ಆಫ್ ರಾಜೀವ್ ಗಾಂಧಿಗೆ ಭಾರತೀಯರು ಈ ಸಂದರ್ಭದಲ್ಲಿ ಕೈ ಹಿಡಿಯುತ್ತಾರೆಯೇ, ರಾಹುಲ್ ನೀಡುವ ʼಮೊಹಬತ್ ಕಾ ಶರ್ಬತ್ʼ ಅನ್ನು ಕುಡಿಯುತ್ತಾರೆಯೇ ? ಎನ್ನುವುದು ಸದ್ಯದ ಪ್ರಶ್ನೆ.
ದ್ವೇಷ ವರ್ಸಸ್ ಪ್ರೀತಿ :
ಕರ್ನಾಟಕ ವಿಧಾಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿ ಉಭಯ ಪಕ್ಷಗಳಿಗೂ ದೊಡ್ಡ ಪರಿಣಾಮ ಬೀರಿದೆ. ಕಾಂಗ್ರೆಸ್ ನಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಬಿಜೆಪಿಗೆ ಪಾಠ ಕಲಿಸಿದೆ. ಆದಾಗ್ಯೂ, ರಾಜ್ಯ ವಿಧಾನಸಭಾ ಚುನಾವಣೆಯು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸೈದ್ಧಾಂತಿಕ ಮುಖಾಮುಖಿಗೆ ಸಾಕ್ಷಿ ವೇದಿಕೆಯಾಯಿತು. ಇಲ್ಲಿ ಪಂಥೀಯ ಭಾವೋದ್ರೇಕಗಳನ್ನು ಪ್ರಚೋದಿಸುವ ಅವರ ಪ್ರಯತ್ನಗಳು ಯಶಸ್ವಿಯಾಗಿಲ್ಲ ಎಂದು ದ್ವಯರೂ ಅರ್ಥ ಮಾಡಿಕೊಂಡರು. ದ್ವೇಷ ಕಾರುವ ಭಾಷಣಗಳು ಸೋತವು, ಪ್ರೀತಿ ಗೆದ್ದು ಹೊರಹೊಮ್ಮಿತು.
ʼಸಂವಿಧಾನ ವಿಧಿಯನ್ನು ಉಲ್ಲಂಘಿಸುವ ಬಜರಂಗಧಳ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿ ಯಾವುದೇ ಸಂಘಟನೆ, ವ್ಯಕ್ತಿಯ ಮೇಲೆ ಕಠಿಣ ಕ್ರಮʼ ತೆಗೆದುಕೊಳ್ಳುವುದಾಗಿ ಹೇಳಿದ್ದ ಕಾಂಗ್ರೆಸ್ ಪ್ರಣಾಳಿಕೆಯ ವಿರುದ್ಧ ಚುನಾವಣಾ ಪ್ರಚಾರಗಳಲ್ಲಿ ಪಾಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವುದಕ್ಕೆ ಮೋದಿ ಪ್ರಯತ್ನಿಸಿದರು. ʼಜೈ ಬಜರಂಗಬಲಿ ಭಾಷಣʼ ಮತ್ತು ಮತ ಚಲಾಯಿಸುವಾಗ ʼಜೈ ಬಜರಂಗಬಲಿಯನ್ನು ಪಠಿಸುವುದನ್ನು ಮರೆಯದಿರಿʼ ಎಂಬ ಬೇಡಿಕೆ, ಹನುಮಾನ್ ಮಂದಿರಗಳಲ್ಲಿ ಹನುಮಾನ್ ಚಾಲೀಸ್ ಪಠಣ ಯಾವುದೂ ಮತಗಳಾಗಿ ಪರಿವರ್ತನೆಯಾಗಿಲ್ಲ. ಮಾತ್ರವಲ್ಲದೇ, ʼದಿ ಕೇರಳ ಸ್ಟೋರಿʼ ಎಂಬ ಪ್ರೊಪಗಂಡಾ ಆಧಾರಿತ ಸಿನೆಮಾದ ಮೂಲಕ ಕಾಂಗ್ರೆಸ್ ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದಕ್ಕೆ ಪ್ರಯತ್ನ ಮಾಡಲಾಯಿತಾದರೂ ಫಲಿಸಲಿಲ್ಲ. ಬಿಜೆಪಿಯ ಇನ್ನಿತರ ರಾಜಕೀಯ ಟೂಲ್ ಗಳಾದ ʼಹಲಾಲ್, ಹಿಜಾಬ್, ನಮಾಜ್ ಆಜಾನ್, ಟಿಪ್ಪು ಸುಲ್ತಾನ್, ಉರಿ ಗೌಡ, ನಂಜೇ ಗೌಡʼ ದಂತಹ ಪ್ರಯೋಗ ಪರೀಕ್ಷಿತ ʼಸಂಸ್ಕೃತಿ ಯುದ್ಧʼದ ಪರಿಣಾಮಕಾರಿತ್ವಗಳು ಕುಸಿಯುತ್ತಿರುವುದಕ್ಕೆ ಕಾಂಗ್ರೆಸ್ ನ ೧೩೬ ಸ್ಥಾನಗಳ ಬಹುಮತದ ಜಯವೇ ಸಾಕ್ಷಿ.
ವಿಕಾಸವಿಲ್ಲದ ದ್ವೇಷ ಭಾಷಣಕ್ಕೆ ಜೈ :
ಪ್ರಧಾನಿ ದೇಶದಾದ್ಯಂತ ಹೋದಲ್ಲೆಲ್ಲಾ ʼಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಇದು ಕೇವಲ ಬಿಜೆಪಿಯ ಘೋಷಣೆಯಲ್ಲ, ಇದು ನಮ್ಮ ಬದ್ಧತೆ ಎಂದು ನೆನಪಿಸುತ್ತಲೇ ಇರುತ್ತಾರೆ. ಆದರೇ, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ಈ ಭರವಸೆಯನ್ನು ಅನುಮಾನಿಸಿ ನೋಡುವಂತೆ ಮಾಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಹೇಳುವ ಪ್ರಕಾರ ದೇಶದ ನಿರುದ್ಯೋಗ ಮಟ್ಟ ಮಾರ್ಚ್ ತಿಂಗಳಿಗಿಂತ ಏಪ್ರಿಲ್ ತಿಂಗಳಿನಲ್ಲಿ ಏರಿಕೆಯಾಗಿದೆ (ಮಾರ್ಚ್ ೨೦೨೩ರಲ್ಲಿ ಶೇ. ೭.೮ ಮತ್ತು ಏಪ್ರಿಲ್ ನಲ್ಲಿ ಶೇ. ೮.೧೧). ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಜೊತೆಗೆ ೨೦೨೩ರ ವಿಶ್ವ ಪತ್ರಿಕಾ ಸ್ವಾತ್ರಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ೧೮೦ ದೇಶಗಳ ಪೈಕಿ ೧೬೧ಕ್ಕೆ ಕುಸಿದಿದೆ. ಮಾತ್ರವಲ್ಲದೇ ಇಡೀ ದೇಶದ ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದು ʼವಿಕಾಸ್ʼ ಪಕ್ಷ ಬಿಜೆಪಿಯ ಇಮೇಜ್ ಗೆ ಕಳಂಕಪ್ರಾಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದ್ವೇಷ ರಾಜಕಾರಣವೂ ಹೆಚ್ಚುತ್ತಿದೆ. "ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳು ಮೂಲಭೂತವಾಗಿ ಭಾರತದ ಸಂವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ಹೇಳುತ್ತದೆ. "ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಕಾರಣಕ್ಕೆ" ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ಎ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳು - ಏಳು ವರ್ಷಗಳಲ್ಲಿ ೩೨೩ ಪ್ರಕರಣಗಳಿಂದ ಸುಮಾರು ೫೦೦ ಶೇಕಡಾ ದಾಖಲೆಯ ಏರಿಕೆಯ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುವ ಪ್ರಕಾರ, ೨೦೧೪ ರಿಂದ ೨೦೨೦ ರವರೆಗೆ ಸುಮಾರು ೧೮೦೪ ಪ್ರಕರಣಗಳು ದಾಖಲಾಗಿವೆ. ಜನ ಇಲ್ಲಿ ವಿಕಾಸಕ್ಕಿಂತ ದ್ವೇಷಕ್ಕೆ ಜೈ ಎಂದಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕೆ ? ಗೊತ್ತಿಲ್ಲ.
ಭಾರತ್ ಜೋಡೋ ಮತ್ತು ರಾಹುಲ್ ಗಾಂಧಿ :
ಬಿಜೆಪಿ ಬಹಳ ಹಿಂದಿನಿಂದಲೂ ಗಾಂಧಿ ಕುಟುಂಬವನ್ನು ವಂಶಪಾರಂಪರ್ಯ ಕುಟುಂಬ ರಾಜಕಾರಣ ಎಂದು ಹೇಳುತ್ತಲೇ ಬಂದಿದೆ. ರಾಜೀವ್ ಗಾಂಧಿ, ರಾಹುಲ್ ಗಾಂಧಿಗೆ ಬಿಜೆಪಿ ನೆಪೋ-ಕಿಡ್ ಎಂದು ಹಿಯಾಳಿಸಿದ್ದೂ ಇದೆ. ಇಡೀ ದೇಶ ರಾಹುಲ್ ಗಾಂಧಿಯನ್ನು ʼಪಪ್ಪುʼ ಎಂದು ಸಂಭೋಧಿಸುವಂತೆ ಬಿಜೆಪಿ ಮಾಡಿತು. ಆದರೇ, ರಾಹುಲ್ ಗಾಂಧಿ ಈ ಎಲ್ಲಾ ಅಪಪ್ರಚಾರವನ್ನು ಮೀರುವುದಕ್ಕೆ ಪ್ರಯತ್ನ ಮಾಡಿ ಮುನ್ನಡೆದರು. ಒಬ್ಬ ಪ್ರಬುದ್ಧ ರಾಜಕಾರಣಿ ಮಾತ್ರ ಜನ ಸಂಪರ್ಕ ಯಾತ್ರೆಗಳನ್ನು ಕೈಗೊಂಡು ಜನರ ಕಷ್ಟಗಳಿಗೆ ಧ್ವನಿಯಾಗಬಲ್ಲ. ಅದನ್ನು ಅಕ್ಷರಶಃ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದ ಉದ್ದಗಲ ಕೈಗೊಂಡು ಮಾಡಿ ತೋರಿಸಿದರು. ಭಾರತ್ ಜೋಡೋ ಯಾತ್ರೆಯ ಕಾರಣದಿಂದಾಗಿ ಇಡೀ ಭಾರತದ ಜನರಲ್ಲಿ ರಾಹುಲ್ ಗಾಂಧಿ ಮೇಲೆ ಇದ್ದ ಅಭಿಪ್ರಾಯವನ್ನು ಬಹಳ ದೊಡ್ಡ ಮಟ್ಟಿಗೆ ಅಲ್ಲದಿದ್ದರೂ, ದೊಡ್ಡ ಮಟ್ಟಿಗೆಯೇ ಬದಲಾಯಿಸಿತು. ಯಾರು ರಾಹುಲ್ ಗಾಂಧಿಯನ್ನು ʼಪಪ್ಪುʼ ಎಂದು ಕರೆಯುತ್ತಿದ್ದರೋ ಅವರಿಂದಲೇ ʼಜನ ನೇತಾʼ ಎಂಬಂತೆ ಗುರುತಿಸಿಕೊಂಡರು / ಕರೆಸಿಕೊಂಡರು. ದೇಶದುದ್ದಕ್ಕೂ ಮಳೆ, ಚಳಿ, ಬಿಸಿಲು ಎನ್ನದೇ ದೇಶದ ಉದ್ದಗಲಕ್ಕೂ ನಡೆದು, ಸಾರ್ವಜನಿಕ ಸಂಪರ್ಕಗಳನ್ನು ಸಾಧಿಸಿ, ಪಾದಯಾತ್ರೆಯ ಉದ್ದಕ್ಕೂ ತನ್ನೆಡೆಗೆ ಬಂದ ಎಲ್ಲರನ್ನು ಯಾವುದೇ ಅಂಜಿಕೆಯಿಲ್ಲದೆ ತನ್ನ ಬಾಹುಗಳಿಂದ ಅಪ್ಪಿಕೊಳ್ಳುವುದಲ್ಲದೇ ಅವರ ಕಷ್ಟಗಳಿಗೆ ಧ್ವನಿಯಾದರು. “ಪತ್ರಿಕಾಗೋಷ್ಠಿಗಳನ್ನು ಕರೆದು ಮಾಧ್ಯಮದವರ / ವರದಿಗಾರರ ಮೈಕ್, ಲೇಖನ, ಕ್ಯಾಮೆರಾಗಳಿಗೆ ಅಂಜದೆ ಸಮರ್ಥವಾಗಿ ಎದುರಿಸಿದರು”.
ಬಿಜೆಪಿಯನ್ನು ಎದುರು ಹಾಕಿಕೊಳ್ಳುವುದಕ್ಕೆ ಅಥವಾ ವಿರೋಧಿಸುವುದಕ್ಕೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಬೇಕೆಂದಿರಲಿಲ್ಲ. ಕಾಂಗ್ರೆಸ್ ನ ಉದ್ದೇಶ ದೇಶವನ್ನು ಜೋಡಿಸುವುದು ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದಾಗಿತ್ತು. ಜೋಡೋ ಯಾತ್ರೆ ದ್ವೇಷಕ್ಕಲ್ಲ, ಪ್ರೀತಿಗಾಗಿ ಅಷ್ಟೇ ಎಂದು ಸಾರಿ ಹೇಳಿದರು. ಈ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಬ್ರ್ಯಾಂಡ್ ಇಮೇಜ್ ಕೂಡ ವೃದ್ಧಿಯಾಯಿತು. ರಾಹುಲ್ ಗಾಂಧಿ ಒಬ್ಬ ಪಪ್ಪು ಆಗಿದ್ದರೇ, ಅಥವಾ ವಿಫಲ ರಾಜಕಾರಣಿಯಾಗಿದ್ದರೇ, ಮೋದಿ ಯಾಕೆ ಸದಾ ರಾಹುಲ್ ರನ್ನು ಟೀಕೆ ಮಾಡುತ್ತಿದ್ದರು ? ಬಿಜೆಪಿ ಯಾಕೆ ರಾಹುಲ್ ನಡೆದಲ್ಲೆಲ್ಲಾ ಕಾಲೆಳೆಯುತ್ತಿತ್ತು ? ʼಮೋದಿ ಹೆಸರಿನವರೆಲ್ಲರೂ ಕಳ್ಳರೆʼ ಎಂದು ಹೇಳಿದ್ದಕ್ಕಷ್ಟೇ ನ್ಯಾಯಾಂಗವನ್ನು ಬಳಸಿಕೊಂಡು ಒಬ್ಬ ಸಂಸದನನ್ನು ಅನರ್ಹಗೊಳಿಸಿದರು. ಇವೆಲ್ಲವೂ ಕೂಡ ರಾಹುಲ್ ರಾಜಕೀಯ ವರ್ಚಸ್ಸು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಮೋದಿಯೇ ಜನಪ್ರಿಯ :
ಹೌದು, ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್ ಡಿ ಟಿವಿ ಹಾಗೂ ಲೋಕನೀತಿ ದಿ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪ್ಪಿಂಗ್ ಸೊಸೈಟೀಸ್ ಮಾಡಿದ ಸಮೀಕ್ಷೆ ಹೇಳುವ ಪ್ರಕಾರ, ಈಗ, ಅಂದರೇ, ಇಂದೇ ಲೋಕಸಭಾ ಚುನಾವಣೆ ಕೈಕೊಂಡರೇ, ಯಾರು ಪ್ರಧಾನ ಮಂತ್ರಿಯಾಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮೀಕ್ಷೆಯಲ್ಲಿ ಫಾಲ್ಗೊಂಡ ಶೇಕಡಾ ೪೩ರಷ್ಟು ಮಂದಿ ಮೋದಿಯೇ ಪ್ರಧಾನಿಯಾಗುತ್ತಾರೆ, ಅವರೇ ಪ್ರಧಾನಿಯಾದರೇ ಸೂಕ್ತ ಎಂದು ಅಭಿಪ್ರಾಯ ಪಟ್ಟರೇ, ಶೇಕಡಾ ೨೭ರಷ್ಟು ಮಂದಿ ರಾಹುಲ್ ಗಾಂಧಿ ಆದರೆ ಸೂಕ್ತವೆಂದಿದ್ದಾರೆ, ಇನ್ನು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಗೆ ತಲಾ ಶೇಕಡಾ ೪ರಷ್ಟು ಮಂದಿ ಪ್ರಧಾನಿಯಾದರೇ ಒಳಿತು ಎಂದರೇ, ಶೇಕಡಾ ೩ರಷ್ಟು ಮಂದಿ ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್, ಶೇಕಡಾ ೧ರಷ್ಟು ಮಂದಿ ಸಂಯುಕ್ತಾ ಜನತಾದಳ ಪಕ್ಷದ ನಿತೀಶ್ ಕುಮಾರ್ ಪ್ರಧಾನಿಯಾದರೇ ಉತ್ತಮ ಎಂದಿದ್ದಾರೆ. ಮಾತ್ರವಲ್ಲದೇ ಮೋದಿ ನಡತೆಯ ಬಗ್ಗೆ ಶೇಕಡಾ ೪೦ರಷ್ಟು ಮಂದಿ ಒಲವು ತೋರಿಸಿದರೇ, ಶೇ. ೨೩ರಷ್ಟು ಮಂದಿ ಮೋದಿಯ ವಾಕ್ಚಾತುರ್ಯಕ್ಕೆ ಮರುಳಾಗಿದ್ದಾರೆ. ಅಷ್ಟಲ್ಲದೇ, ಶೇ. ೩೪ರಷ್ಟು ಮಂದಿ ರಾಹುಲ್ ಗಾಂಧಿ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ವಿರೋಚಿತ ಹೋರಾಟ ಕೊಡಬಲ್ಲರು ಎಂದಿದ್ದಾರೆಂದು, ಶೇ. ೪೧ರಷ್ಟು ಮಂದಿ ರಾಹುಲ್ ಗಾಂಧಿಯವರ ಇತ್ತೀಚೆಗಿನ ನಡೆಯನ್ನು(ಭಾರತ್ ಜೋಡೋ ಸೇರಿ) ಇಷ್ಟಪಟ್ಟಿದ್ದಾರೆಂದು ಸಮೀಕ್ಷಾ ವರದಿ ಹೇಳಿದೆ.
-ಶ್ರೀರಾಜ್ ವಕ್ವಾಡಿ
.jpeg)
No comments:
Post a Comment