( ಸಾಂದರ್ಭಿಕ ಚಿತ್ರ )
ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಒಳಗಿಂದೊಳಗೆ ಮೊಳಕೆ ಒಡೆಯುತ್ತಿವೆಯೇ ?
ತನ್ನ ಸಾಮರ್ಥ್ಯ, ಪರಾಕ್ರಮದಿಂದ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿಕೊಂಡ ಒಬ್ಬ ದೊರೆ ಇತರರನ್ನು ಕೇಳುವುದಕ್ಕೆ ಮುಂದಾಗುವುದಿಲ್ಲ. ಸರ್ವಾಧಿಕಾರದಿಂದಲೇ ಆಡಳಿತ ನಡೆಸುವುದಕ್ಕೆ ಮುಂದಾಗುತ್ತಾನೆ. ತನ್ನ ಆಡಳಿತದ ಅಡಿಯಲ್ಲಿ ಬರುವ ಎಲ್ಲಾ ವ್ಯವಸ್ಥೆಯನ್ನು ತನ್ನ ತೆಕ್ಕೆಯೊಳಗೆ ಇರುವಂತೆ ಮಾಡಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದ ವಿಸ್ತರಣೆ ಮಾಡುವುದಕ್ಕೆ ಸಲುವಾಗಿ ಆ ದೊರೆ ಯಾವುದಕ್ಕೂ ಅಂಜುವುದಿಲ್ಲ. ತಾನೊಬ್ಬ ಐಷಾರಾಮಿ ವ್ಯಕ್ತಿಯಾಗಿ ಮೆರೆದರಷ್ಟೇ ಸಾಕೆನ್ನುವ ಮನೋ ಧೋರಣೆಯಲ್ಲಿ ಸಾಮ್ರಾಜ್ಯ ಕಟ್ಟುವುದಕ್ಕೆ ಅಥವಾ ವಿಸ್ತರಿಸಿಕೊಳ್ಳುವುದಕ್ಕೆ ಸದಾ ಕಾಣುತ್ತಿರುತ್ತಾನೆ. ಅಲ್ಲಿನ ಎಲ್ಲಾ ವ್ಯವಸ್ಥೆಯನ್ನೇ ತನ್ನ ವಶದಲ್ಲಿರಿಸಿಕೊಂಡು ಆಡಳಿತ ಮಾಡುವುಕ್ಕೆ ಮುಂದಾಗುತ್ತಾನೆ.
ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿಯೂ ಕೂಡ ಒಂದು ಹಂತದಲ್ಲಿ ರಾಜರ ಆಳ್ವಿಕೆಯಂತಹ ಸರ್ಕಾರ, ಆಡಳಿತ ಇಂದಿಗೂ ಜೀವಂತವಿದೆ. ಅಲ್ಲಿ ರಾಜರ ಆಳ್ವಿಕೆಯಲ್ಲಿ ಜನರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸದೇ ಇರುವ ವಾಡಿಕೆಯೇ ಪ್ರಧಾನವಾಗಿರುತ್ತದೆ. ಇಂತಹ ರಾಜಪ್ರಭುತ್ವದ ಧೋರಣೆ ಹೊಂದಿರುವ ಪ್ರಜಾಪ್ರಭುತ್ವದ ದೇಶಗಳ ನಾಯಕರು, ತಮಗೆ ಬಹು ಪರಾಕ್ ಹೇಳಿಸಿಕೊಳ್ಳುವುದಕ್ಕೆ, ತನ್ನ ದೇಹದ ಮೇಲೆ ಹೂವು ಚೆಲ್ಲಿಸಿಕೊಳ್ಳುವುದಕ್ಕೆ ಇಡೀ ವ್ಯವಸ್ಥೆಯ ಕಾರ್ಯಾಂಗವನ್ನೇ ಬಳಸಿಕೊಂಡಿರುವುದು ವಾಸ್ತವದ ಉದಾಹರಣೆಯೂ ಇದೆ ಎಂದರೇ ಆಶ್ಚರ್ಯವೇನಿಲ್ಲ. ಇಂತಹ ರಾಜಪ್ರಭುತ್ವದ ಧೋರಣೆಯಲ್ಲಿಯೇ ಪ್ರಜಾಪ್ರಭುತ್ವವನ್ನು ಕಾಣುತ್ತಿರುವ ಕೆಲವು ದೇಶಗಳ ನಾಗರಿಕರು ಇಂತಹ ವ್ಯವಸ್ಥೆಗೆ ಕುರುಡಾಗಿ ʼಜೈʼ ಎಂದು ಘೋಷಣೆ ಕೂಗಿದರು. ಗೋರಿಯೊಳಗೆ ಆಕಾಶಕ್ಕೆ ಮುಖ ಮಾಡಿ ಮಲಗಿದ್ದ ನಿರಂಕುಶ ಪ್ರಭುಗಳು ತಮ್ಮ ಉತ್ತರಾಧಿಕಾರಿಯೊಬ್ಬ ತನ್ನ ನೆಲದಲ್ಲಿಯೇ ಮರುಹುಟ್ಟು ಪಡೆದು ಆಳ್ವಿಕೆ ಮಾಡುತ್ತಿರುವುದನ್ನು ನೋಡಿ ಗೋರಿಯೊಳಗೇ ಸಮಾಧಾನದ ಉಸಿರು ಬಿಟ್ಟು ಮಗ್ಗಲು ಬದಲಾಯಿಸಿಕೊಂಡಿದ್ದರೇ ಅಚ್ಚರಿಯೇನಿಲ್ಲ.
ʼಪ್ರಜಾಪ್ರಭುತ್ವದ ನಾಯಕ ರಾಜದಂಡವನ್ನು ಹಿಡಿಯಲಾರʼ. ಸ್ವೇಚ್ಛೆಯಿಂದ ಆಳುವ ರಾಜತ್ವ ಅಥವಾ ತನ್ನ ಮುಖಂಡತ್ವದ ಅಧೀನದಲ್ಲಿ ಸಮಗ್ರವಾದಿ ಸಿದ್ಧಾಂತವನ್ನು ತನ್ನ ಆಡಳಿತದಲ್ಲಿ ಕಾರ್ಯರೂಪಕ್ಕೆ ತರುವವ ಮಾತ್ರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಿಂತು ಆಡಳಿತ ನಡೆಸುತ್ತಾನೆ. ಆಳುವ ದೊರೆ ಯಾವ ಶಾಸನಕ್ಕಾಗಲಿ, ಸಂವಿಧಾನಕ್ಕಾಗಲಿ ಬದ್ಧನಾಗದೇ ತನ್ನ ಆಜ್ಞೆಯೇ ಶಾಸನವೆಂಬಂತೆ ಭಾವಿಸಿ ಅದನ್ನು ಜನತೆಯ ಮೇಲೆ ಬಲವಂತವಾಗಿ ಹೇರುವ ಆಡಳಿತ ಪದ್ಧತಿಯನ್ನು ಪಾಲಿಸುತ್ತಾನೆ. ಪ್ರಜಾಪ್ರಭುತ್ವದ ನಾಯಕ ಜನರೊಂದಿಗೆ ಬೆರೆತು ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಾನೆ.
ರಾಜಪ್ರಭುತ್ವವು ರಾಜನ ಅಧಿಕಾರ ದೈವತ್ವವಾದದ್ದು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸುತ್ತದೆ. ಆತ ಎಷ್ಟೇ ಅಸಮರ್ಥನಾಗಿದ್ದರೂ, ಕ್ರೂರಿಯಾಗಿದ್ದರೂ ಜನರು ಅವನನ್ನು ಅವನ ಆಡಳಿತವನ್ನು, ಕ್ರೌರ್ಯವನ್ನು ದೈವಾಜ್ಙೆ ಎಂಬಂತೆ ಪಾಲಿಸುವಂತಹ ವಾತಾವರಣ ಸೃಷ್ಟಿ ಮಾಡುತ್ತಾನೆ. ಅಲ್ಲಿ ಹೇರುವ ಕ್ರೌರ್ಯತೆಗೆ ವಿದೇಯತೆ ತೋರಿಸುವುದೇ ಸ್ವಾತಂತ್ರ್ಯ ಎಂದು ಬಿಂಬಿಸಲಾಗುತ್ತದೆ. ಪ್ರಜಾಪ್ರಭುತ್ವದ ವಾದವನ್ನು ಈ ರಾಜಪ್ರಭುತ್ವ ತನ್ನ ವೈಭವೀಕರಣದಲ್ಲೇ ಮುಚ್ಚಿ ಹಾಕುವಂತೆ ಮಾಡುತ್ತದೆ. ಜನರನ್ನು ಭ್ರಮೆಯಲ್ಲೇ ರಂಜಿಸಿ ಸೆಳೆದುಕೊಂಡು ಆಳ್ವಿಕೆ ನಡೆಯುತ್ತದೆ. ಇಂತಹ ರಾಜಪ್ರಭುತ್ವದ ಧೋರಣೆಯನ್ನು ಪ್ರಜಾಪ್ರಭುತ್ವದ ದೇಶಗಳಲ್ಲಿ ಮಾಡಿದ ಅದೆಷ್ಟೋ ನಾಯಕರು ಆಗಿ ಹೋಗಿದ್ದಾರೆ. ಎಷ್ಟೋ ನಾಯಕರು ಇನ್ನೂ ಇದ್ದಾರೆ. ಹಾಗಾದರೇ, ಭಾರತದಂತಹ ಪ್ರಜಾಪ್ರಭುತ್ವ ದೇಶದ ವಾಸ್ತವ ಸ್ಥಿತಿ ಏನು ? ಪ್ರಸ್ತುತ ರಾಜಕಾರಣ ಹೇಗಿದೆ ?
ದೇಶದಲ್ಲಿ ಬಿಜೆಪಿ ಸರ್ಕಾರ ಫ್ಯಾಸಿಸ್ಟ್ ಮನೋಧೋರಣೆಯಲ್ಲಿ ಆಡಳಿತ ನಡೆಸುತ್ತಿದೆ ಎಂಬ ವಿರೋಧಾಭಿಪ್ರಾಯವಿದೆ. ಈ ಫ್ಯಾಸಿಸ್ಟ್ ಎಂದರೇ ಮತ್ತೇನೋ ಅಲ್ಲ, ರಾಜಪ್ರಭುತ್ವ ಅಥವಾ ನಿರಂಕುಶ ಪ್ರಭುತ್ವದ ಸರ್ಕಾರ. ಇದೊಂದು ವಿಚಿತ್ರ ಪರಿಕಲ್ಪನೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಫ್ಯಾಸಿಸ್ಟ್ ಆರೆಸ್ಸೆಸ್ ನ ಒಂದು ವಿಭಾಗ ಎಂದು ಕರೆದರು. ಆದರೇ, ಬಿಜೆಪಿ ಈ ವಿರೋಧವನ್ನು ತಳ್ಳಿ ಹಾಕುತ್ತದೆ. ಬಿಜೆಪಿ ಸರ್ಕಾರದ ಆಡಳಿತವನ್ನು ಫ್ಯಾಸಿಸ್ಟ್ ಧೋರಣೆಯ ಪಕ್ಷ / ಸರ್ಕಾರ ಎಂದು ಕರೆದವರನ್ನು ʼಸ್ವತಂತ್ರ ಭಾರತದಲ್ಲಿʼ ಬಿಜೆಪಿ ಬಂಧಿಸಿದ ಉದಾಹರಣೆಯೂ ಇದೆ ಎನ್ನುವುದು ಇಲ್ಲಿ ಗಮನಾರ್ಹವಾದದ್ದು.
ಅದೇನೇ ಇರಲಿ, ʼಒಡೆದು ಆಳುವʼ ನೀತಿ ಎಂಬ ವಿಷಕಾರಿ ರಾಜಕೀಯ ಅಸ್ತ್ರ ವಸಾಹತುಶಾಹಿ ದಬ್ಬಾಳಿಕೆಗಾರರು ಭಾರತದ ದೇಶ ಪ್ರೇಮಿ ನಾಗರಿಕರ ಮೇಲೆ ತಮ್ಮ ಅನಗತ್ಯ ಪ್ರಭಾವವನ್ನು ಅಥವಾ ಪ್ರಾಬಲ್ಯವನ್ನು ಬೀರಿದ್ದಿದೆ. ಆ ದಿನಗಳಿಂದ ಭಾರತದ ಜಾತ್ಯತೀತ ಮೌಲ್ಯಗಳು ಧಾರ್ಮಿಕ ಮೂಲಭೂತವಾದ ಶಕ್ತಿಗಳಿಂದ ಆಕ್ರಮಣಕ್ಕೆ ಒಳಗಾಯಿತು. ಇದು ರಾಜಕೀಯಕ್ಕೂ ಅಂಟಿತು. ಖಾಸಗೀಕರಣ, ಬಂಡವಾಳಶಾಹಿ, ವಸಾಹತುಶಾಹಿ ಧೋರಣೆಗಳನ್ನು ಮೆರೆಸುವ ಪ್ರವೃತ್ತಿಯಲ್ಲಿ ಆ ರಾಜಕೀಯ ಶಕ್ತಿ ಬೆಳೆಯಿತು. ಸರ್ಕಾರದ ಆಸ್ತಿಗಳನ್ನು ಹಣವಂತರಿಗೆ ಹಸ್ತಾಂತರಿಸಿ ದೇಶದ ಆಸ್ತಿಯನ್ನು ಶ್ರೀಮಂತ ವರ್ಗ ಕೂತು ಉಣ್ಣುವ ಹಾಗೆ ಮಾಡುವಲ್ಲಿ ಯಶಸ್ವಿ ಪಾತ್ರವನ್ನು ನಿಭಾಯಿಸಿತು ಎಂದರೇ ಅಚ್ಚರಿಯಿಲ್ಲ.
ಇಲ್ಲಿ, ದೊಡ್ಡ ಆತಂಕವೆಂದರೇ, ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಒಳಗಿಂದೊಳಗೆ ಮೊಳಕೆ ಒಡೆಯುತ್ತಿವೆ ಎಂಬ ವಿಚಾರ. ಈ ದೇಶದ ಜನರು ಇಂತಹದ್ದೊಂದು ಕೆಟ್ಟ ಕಲ್ಪನೆಯನ್ನು ಇದುವರೆಗೆ ಅರ್ಥ ಮಾಡಿಕೊಳ್ಳದೇ ಇರುವುದೇ ಈ ದೇಶದ ದೊಡ್ಡ ದುರಂತಗಳಲ್ಲೊಂದು.
ಸದ್ಯ, ದೇಶವನ್ನು ಆಳುತ್ತಿರುವ ಬಿಜೆಪಿ ಸರ್ಕಾರ ಗಣರಾಜ್ಯದ ಸ್ಥಾಪಕ ತತ್ವಗಳಿಗೆ ಕೇವಲ ಮೇಲ್ನೋಟದ ನಿಷ್ಠೆಯನ್ನು ಹೊಂದಿದೆ. ಬಿಜೆಪಿ ಸಂವಿಧಾನದ ಪ್ರಧಾನ ವಿಚಾರಗಳ ವಿರುದ್ಧ ಪದೇ ಪದೇ ದೇಶದಲ್ಲಿ ವಿಷ ಉಗುಳಿದೆ ಎಂದು ಕಾಂಗ್ರೆಸ್ ಅವ್ಯಾಹತವಾಗಿ ಗಂಭೀರ ಆರೋಪ ಮಾಡುತ್ತಿದೆ. ಭಾರತದ ಬಡವರನ್ನು ಆವರಿಸಿದ ಹಸಿವು ಹಾಗೂ ದುಃಖವು ಕಲ್ಪನೆಗೂ ಮೀರಿದೆ. ʼಸಬ್ ಕಾ ವಿಕಾಸ್ʼ ಹೆಸರಿನಲ್ಲಿ ಬಿಜೆಪಿ ಶ್ರೀಮಂತರ ವಿಕಾಸ ಮಾಡುತ್ತಿದೆ ಎಂದು ಕೂಡ ಕಾಂಗ್ರೆಸ್ ಆರೋಪ ಮಾಡುತ್ತಿದೆ.
१९९०ರ ಹೊತ್ತಿಗೆ, ಭಾರತದಲ್ಲಿ 'ಹಿಂದುತ್ವ'ದ ಅಲೆ ಈ ವಿಷಯದ ತಾರಕಕ್ಕೆ ಏರಲು ಆರಂಭವಾಯಿತು. ಪಾಶ್ಚಿಮಾತ್ಯ ಪತ್ರಿಕೆಗಳು ಹಿಂದುತ್ವಕ್ಕೆ ‘ಹಿಂದೂ ರಾಷ್ಟ್ರೀಯತೆ’ ಪದವನ್ನು ಬಳಸುತ್ತವೆ. ಭಾರತೀಯ ವಿಮರ್ಶಕರು ಹಿಂದುತ್ವದ ಮನಸ್ಥಿತಿಯನ್ನು ವಿವರಿಸಲು 'ಬಹುತ್ವವಾದ' ಎಂಬ ಪದವನ್ನು ಕೆಲವೊಮ್ಮೆ ಬಳಸುತ್ತಾರೆ. ಅಂದರೆ, 'ಹಿಂದೂಗಳು ಮಾತ್ರ ಹಕ್ಕುಗಳನ್ನು ಹೊಂದಿರಬೇಕು ಮತ್ತು ಅವರು ಬಹುಮತವನ್ನು ರೂಪಿಸುವ ಕಾರಣ ಇದನ್ನು ಸಮರ್ಥಿಸಲಾಗುತ್ತದೆಂಬ ಅಭಿಪ್ರಾಯವಿದೆ.
ಆರೆಸ್ಸೆಸ್ ಸದಸ್ಯರೂ ಆಗಿದ್ದ ವಾಜಪೇಯಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಬೇಕಾದ ಹಂತವನ್ನು ಬಿಜೆಪಿ ಹಾದುಹೋಯಿತು. ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈಗಿರುವಷ್ಟರ ಮಟ್ಟಿಗೆ ಮುಸ್ಲೀಂ ವಿರೋಧ ವಾತಾವರಣವಿರಲಿಲ್ಲ. ೨೦೦೪-೨೦೧೪ರಲ್ಲಿ ಕಾಂಗ್ರೆಸ್ ಅಧಿಕಾರ, ಹೆಚ್ಚಿನ ಆರ್ಥಿಕ ಬೆಳವಣಿಗೆಯ ಅವಧಿ, ಭಾರತವು ಮತ್ತೊಂದು ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬ ಕಲ್ಪನೆಗೆ ಕಾರಣವಾಯಿತು, ೨೦೦೪ರಲ್ಲಿ, ವಾಜಪೇಯಿ ಸರ್ಕಾರವು ರಾಷ್ಟ್ರೀಯ ಚುನಾವಣೆಯಲ್ಲಿ ಸೋತಿತು ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾದ ಸರ್ಕಾರ. ಅವರು ೨೦೦೪-೨೦೧೪ರ ಅವಧಿಯಲ್ಲಿ ಎರಡು ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿದ್ದರು ಮತ್ತು ಈ ಅವಧಿಯು ಭಾರತದ ಆರ್ಥಿಕತೆಯ ಸುವರ್ಣಯುಗವಾಗಿತ್ತು. ಡಾ. ಸಿಂಗ್ ಅವರ ಅಡಿಯಲ್ಲಿ, ಭಾರತದ ಆರ್ಥಿಕತೆಯು ೮-೧೦ ಶೇಕಡಾದಷ್ಟು ಬೆಳೆಯಿತು. ಚೀನಾಕ್ಕೆ ಭಾರತವು ಸವಾಲಾಗಿದೆ ಎಂದು ಪಾಶ್ಚಿಮಾತ್ಯ ಪತ್ರಿಕೆಗಳು ಸುದ್ದಿ ಪ್ರಕಟಿಸಿದವು. ಸಿಂಗ್ ನೇತೃತ್ವದ ಸರ್ಕಾರ ಆರ್ಥಿಕ ಬೆಳವಣಿಗೆ, ಅಭಿವೃದ್ಧಿಯ ಮೇಲೆ ಕೇಂದ್ರಿತವಾಗಿತ್ತು. ಹಿಂದೂ-ಮುಸ್ಲಿಂ ಘರ್ಷಣೆಗಳು ಹಿನ್ನಲೆಗೆ ಸರಿದವು. ಆರ್ಥಿಕ ಬೆಳವಣಿಗೆಯ ಹೊರತಾಗಿಯೂ, ಸಿಂಗ್ ವಿರುದ್ಧ ಮಾತ್ರವಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂತು. ಬಿಜೆಪಿಯು ಹಿಂದೂಗಳನ್ನು ಗೆಲ್ಲಲು ಭ್ರಷ್ಟಾಚಾರ ಮತ್ತು ಮುಸ್ಲಿಂ ವಿರೋಧಿ ಅಭಿಪ್ರಾಯವನ್ನು ಸಾಮಾಜಿಕ ವಲಯದಲ್ಲಿ ಸೃಷ್ಟಿಸಿ ೨೦೧೪ರಲ್ಲಿ ಅಧಿಕಾರ ಹಿಡಿಯಿತು.
ವಾಜಪೇಯಿ ಕಾಲದ ನಂತರ, ಅಡ್ವಾಣಿಯವರನ್ನು ಬಿಜೆಪಿ ಪಕ್ಕಕ್ಕೆ ಸರಿಸಿದ ನಂತರ ಆರೆಸ್ಸೆಸ್ ಮತ್ತುಬಿಜೆಪಿ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಕಟ್ಟರ್ವಾದಿ ಮೋದಿಯವರನ್ನು ಪ್ರೊಜೆಕ್ಟ್ ಮಾಡಲಾಯಿತು. ಹಿಂದೂ ಪ್ರಬಲ ವ್ಯಕ್ತಿ ಎಂಬ ಅವರ ಖ್ಯಾತಿಯು ೨೦೧೪ರ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲವಿಗೆ ಕಾರಣವಾಯಿತು. ಅವರ ಮೊದಲ ಅವಧಿಯ ಆರ್ಥಿಕ ವೈಫಲ್ಯಗಳ ಹೊರತಾಗಿಯೂ, ಮೋದಿ ೨೦೧೯ರಲ್ಲಿ ಎರಡನೇ ಅವಧಿಗೆ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಗೆದ್ದರು. ಇದು ೨೦೧೯ರ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮೊದಲು ಸಂಭವಿಸಿದ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಗಡಿಯಾಚೆಗಿನ ವೈಮಾನಿಕ ದಾಳಿಯನ್ನು ಹಿಂದೂ ಬಹುಸಂಖ್ಯಾತರು ಯಶಸ್ವಿ ಕಾರ್ಯಾಚರಣೆ ಎಂದು ಭೇಷ್ ಎಂದರು. ಮತ್ತು ಇದು ಮುಸ್ಲಿಮರ ವಿರುದ್ಧ ನಿಲ್ಲುವ ಪ್ರಬಲ ಹಿಂದೂ ಎಂಬ ಮೋದಿಯವರ ಚಿತ್ರಣವನ್ನು ಬಲಪಡಿಸಿತು. ಈ ಎಲ್ಲಾ ಆರೋಪ, ಪ್ರತ್ಯಾರೋಪಗಳ ಹಿನ್ನಲೆಯಲ್ಲಿ ಅಧಿಕೃತವಾಗಿ ಮೋದಿ ಸರ್ಕಾರ ಮುಸ್ಲೀಮರನ್ನು ದ್ವೇಷಿಸುವ ವಾತಾವರಣ ಸೃಷ್ಟಿಸದಿದ್ದರೂ, ಸಾಮಾಜಿಕ ವಲಯದಲ್ಲಿ ಮುಸ್ಲೀಂ ದ್ವೇಷಕ್ಕೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಕೇಳಿ ಬಂತು. ಪ್ರಜಾಪ್ರಭುತ್ವದಲ್ಲಿ ಸನಾತನವಾದಿ ರಾಜಪ್ರಭುತ್ವದ ಹೇರಿಕೆಯನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಸೇರಿ ಎಲ್ಲಾ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಬಲವಾದ ಆರೋಪ ಮಾಡಲಾರಂಭಿಸಿವೆ.
ದೇಶದ ಜನರಿಗೆ ಈ ಸಿದ್ಧಾಂತದ ಅರಿವಿಲ್ಲದೇ ಏನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಕೆಟ್ಟ ತತ್ವದ ಬಗ್ಗೆ ದೇಶದ ಜನ ಅರ್ಥೈಸಿಕೊಂಡಿದ್ದಾರೆ. ಜನರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಮ್ಮ ಕರ್ತವ್ಯವೆಂದು ತಿಳಿದುಕೊಳ್ಳುವ ಅರಿವು ಆಗಬೇಕು. ಮತ್ತದನ್ನು ತಿಳಿ ಹೇಳುವ ಒಂದು ಪರ್ಯಾಯ ವ್ಯವಸ್ಥೆ ಬೇಕು. ಇದರಿಂದ ಮಾತ್ರ ಭಾರತ ಮತ್ತದರ ಜಾತ್ಯತೀತ ಪ್ರಜಾಪ್ರಭುತ್ವವನ್ನು ಉಳಿಸಬಹುದು. ಭಾರತ ಇದಕ್ಕೆ ತಯಾರಿದೆಯೇ ?
-ಶ್ರೀರಾಜ್ ವಕ್ವಾಡಿ

No comments:
Post a Comment