'ಜೂನಿಯರ್ ಇಂದಿರಾʼ ಪ್ರೊಜೆಕ್ಟ್ ಮಾಡಲು ಕಾಂಗ್ರೆಸ್ ಪಟ್ಟು ? ।ಪ್ರತಿಪಕ್ಷಗಳ 'ರಿಸರ್ವೇಶನ್ʼ !
ಕಾಂಗ್ರೆಸ್ ೨೦೨೪ರ ಚುನಾವಣೆಗಾಗಿ ಬಹಳ ಸ್ಪಷ್ಟವಾಗಿ ಹೆಜ್ಜೆಯಿಡುತ್ತಿದೆ. ಕರ್ನಾಟಕ ವಿಧಾನಸಭೆಯ ಭರ್ಜರಿ ಜಯ ಕಾಂಗ್ರೆಸ್ ಪಾಳಯದಲ್ಲಿ ವಿಶೇಷವಾದ ಆಶಾವಾದದ ಭಾವನೆಯನ್ನು ಮೂಡಿಸಿದೆ. ದಕ್ಷಿಣ ಭಾರತದ ಬಗ್ಗೆ ಹೊಸ ಭರವಸೆ ಕಾಂಗ್ರೆಸ್ ನಲ್ಲಿ ಹುಟ್ಟಿದೆ. ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್, ತನ್ನ ರಾಜಕೀಯ ತಂತ್ರಗಾರಿಕೆಯನ್ನು ಕೂಡ ಅಗತ್ಯಕ್ಕೆ ಬೇಕಾಗಿ ಬದಲಾಯಿಸಿಕೊಂಡಿದೆ. ಇಡೀ ದೇಶವನ್ನು ಕೆಲವು ದಶಕಗಳ ಕಾಲದವರೆಗೆ ಆಳಿದ ಒಂದು ರಾಷ್ಟ್ರೀಯ ಪಕ್ಷ, ಇಡೀ ದೇಶದಾದ್ಯಂತ ʼಹಿಂದುತ್ವʼ ಎನ್ನುವ ಸಿದ್ಧಾಂತದ ಅಲೆಯಲ್ಲಿ ಮುಳುಗಿ ಹೋಗಿ ಮತ್ತೆ ಚೇತರಿಸಿಕೊಂಡು, ಫಿನಿಕ್ಸ್ ಹಕ್ಕಿಯಂತೆ ಎದ್ದೇಳುತ್ತಿರುವ ಆರಂಭಿಕ ಗುರುತಿದು. ಇದು ದೇಶದ ಅತ್ಯಂತ ಹಿರಿಯ ಪಕ್ಷದ ಚುನಾವಣಾ ತಂತ್ರ. ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಚುನಾವಣಾ ನಿರೀಕ್ಷೆಗಳು/ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗಾಗಿ ಹಾಕಿಕೊಂಡ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೇ, ಒಂದು ರಾಜಕೀಯ ಪಕ್ಷ ಎಲ್ಲಿ ಮುಟ್ಟಿ ತಲುಪಬೇಕೋ ಅಲ್ಲಿ ತಲುಪುತ್ತಿದೆ ಎಂದೆನ್ನಿಸುತ್ತಿದೆ. ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರಯತ್ನದಲ್ಲಿ ರಾಜಕೀಯ ವಿರೋಧ ಒಕ್ಕೂಟವನ್ನು ಸೃಷ್ಟಿಸಲು ಸೈದ್ಧಾಂತಿಕ ಮೈತ್ರಿಯೆಡೆಗೆ ಕಾಂಗ್ರೆಸ್ ಇಟ್ಟ ಹೆಜ್ಜೆ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತಿದೆ.
ಕಾಂಗ್ರೆಸ್ ಜನರನ್ನು ತಲುಪುವುದಕ್ಕೆ ಅಂದಿನಿಂದ ಇಂದಿನವರೆಗೂ ಮಹತ್ವದ ಹೆಜ್ಜೆಯನ್ನಿಟ್ಟಿದೆ. ತನ್ನ ಹಳೆಯ ರಾಜಕೀಯ ಖದರ್, ವರ್ಚಸ್ಸನ್ನು ಕಳೆದುಕೊಂಡ ಒಂದು ರಾಜಕೀಯ ಪಕ್ಷ ಸಾರ್ವಜನಿಕ ಸಂಪರ್ಕವನ್ನು ಯಾವುದೇ ಪೂರ್ವ ನಿಯೋಜಿತ ʼರೋಬೋ ಆಡಿಯನ್ಸ್ʼ ಗಳಿಲ್ಲದೇ ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಾಡಿ ತೋರಿಸಿದೆ. ೨೦೨೪ರ ಲೋಕಸಭಾ ಚುನಾವಣೆಯೊಳಗಾಗಿ ಕಾಂಗ್ರೆಸ್ ಮತ್ತೊಂದು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳಳಿದೆ ಎಂಬ ಮಾತು ಪಕ್ಷದ ಆಂತರಿಕ ವಲಯದಿಂದ ಕೇಳಿ ಬಂದಿದೆ. ಪಶ್ಚಿಮದಿಂದ ಪೂರ್ವಕ್ಕೆ ಅಥವಾ ಪೂರ್ವದಿಂದ ಪಶ್ವಿಮಕ್ಕೆ / ಪೋರ್ ಬಂದರ್ ನಿಂದ ಅರುಚಲಾ ಪ್ರದೇಶ್ ಗೆ ಅಥವಾ ಅರುಣಾಚಲ ಪ್ರದೇಶದಿಂದ ಪೋರ್ ಬಂದರ್ ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೊಂದು ಸಾರ್ವಜನಿಕ ಸಂಪರ್ಕ ಸಾಧಿಸುವ ಭಾರತ್ ಜೋಢೋ ಯಾತ್ರೆಯಂತಹ ಪಾದಯಾತ್ರೆಯನ್ನು ಕೈಗೊಳ್ಳುವುದು ಬಹುತೇಕ ನಿಶ್ಚಿತ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿದೆ.
ಏನೇ ಆದರೂ ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವ ಯಾರ ಹೆಗಲಿಗೇರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ರಾಹುಲ್ ಗಾಂಧಿ ಅನರ್ಹ ಸಂಸದ. ೨೦೧೯ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜನಪ್ರತಿನಿಧಿ ಕಾಯ್ದೆ ೧೯೫೧ರ ಪ್ರಕಾರ, ರಾಹುಲ್ ತಮ್ಮ ವಯನಾಡಿನ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈಗ ಸದ್ಯಕ್ಕೆ ರಾಹುಲ್ ನೇತೃತ್ವದಲ್ಲೇ ಪ್ರತಿಪಕ್ಷಗಳ ಒಕ್ಕೂಟಕ್ಕೆ ತಯಾರಿಯಾಗುತ್ತಿದೆ. ಒಕ್ಕೂಟ ಯಾರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರೊಜೆಕ್ಟ್ ಮಾಡಲಿದೆ ? ಅಥವಾ ಕಾಂಗ್ರೆಸ್ ಇಂದಿರಾ ಗಾಂಧಿಯಾದ ಮೇಲೆ ಮತ್ತೊಮ್ಮೆ ಮಹಿಳೆಯೋರ್ವರಿಗೆ ಸ್ಥಾನಮಾನ ನೀಡುವ ಉದ್ದೇಶದಲ್ಲಿ ಪ್ರಿಯಾಂಕ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡುವುದಕ್ಕೆ ಪಟ್ಟು ಹಿಡಿಯಲಿದೆಯೇ ? ಇದಕ್ಕೆ ಒಕ್ಕೂಟದಲ್ಲಿರುವ ಉಳಿದ ಪಕ್ಷಗಳು ಒಪ್ಪುತ್ತವೆಯೇ ? ಎನ್ನುವುದು ಸದ್ಯದ ಪ್ರಶ್ನೆ.
ವಿಶ್ವಗುರು, ಹಿಂದೂ ಹೃದಯ ಸಾಮ್ರಾಟ ಎಂಬುವುದೆಲ್ಲಾ ಭಾರತದ ಮಾಧ್ಯಮಗಳು ಪ್ರಧಾನಿ ಮೋದಿಯನ್ನು ವೈಭವೀಕರಿಸಿದ ಪರಿ ಅಷ್ಟೇ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚು ಈ ಬಾರಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ದೇಶದ ಉತ್ತರ ಭಾರತಕ್ಕಿಂತ ಹೆಚ್ಚು ದಕ್ಷಿಣ ಭಾರತದಲ್ಲಿ ಮೋದಿ ಆಡಳಿತಕ್ಕೆ ಜನ ಭ್ರಮನಿರಸನಗೊಂಡಿದ್ದಾರೆ. ಮಹಿಳಾ ಸುರಕ್ಷತೆಗೆ ಬೇಕಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಮೋದಿ ಸರ್ಕಾರ ವಿಫಲಗೊಂಡಿದೆ ಎನ್ನುವುದಕ್ಕೆ ರಾಷ್ಟ್ರದ ರಾಜಧಾನಿ ದೆಹಲಿ ಜಂತರ್ ಮಂತರ್ ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್ ನ ಅಧ್ಯಕ್ಷ ಬ್ರಿಜ್ ಭೂಷಣ್ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ತಿಂಗಳುಗಟ್ಟಲೆ ಮಾಡಿದ ಪ್ರತಿಭಟನೆಯೇ ಸಾಕ್ಷಿ. ಇವೆಲ್ಲವೂ ಕೂಡ ದೇಶದ ಮಹಿಳೆಯರಲ್ಲಿ ಸರ್ಕಾರದ ಮೇಲೆ ಅಪನಂಬಿಕೆಗೆ ಕಾರಣವಾಗಿದೆ. ಲೈಂಗಿಕ ದೌರ್ಜನ್ಯವೆಸಗಿರುವುದಕ್ಕೆ ಸಾಕ್ಷಿ ಕೊಡಿ ಎಂದು ಹೇಳುವಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ತನ್ನ ಕೀಳು ಅಭಿರುಚಿಯನ್ನು ಈ ಪ್ರಕರಣದಲ್ಲಿ ತೋರಿಸಿತು ಎನ್ನುವುದು ಇಲ್ಲಿ ಗಮನಾರ್ಹ.
ಇನ್ನು, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಸಂಪುಟದ ಸಚಿವ ಮತ್ತು ಲೈಂಗಿಕ ದೌರ್ಜನ್ಯದ ಆರೋಪಿ ಸಂದೀಪ್ ಸಿಂಗ್ ಅವರನ್ನು ಸಮರ್ಥಿಸಿಕೊಂಡರು. ಮಹಿಳಾ ಪ್ರತಿಭಟನಾಕಾರರು ಅಲ್ಲಿ ತಮ್ಮ ದುಪಟ್ಟಾವನ್ನು ಅವರ ಪಾದಗಳತ್ತ ಎಸೆದು ಆಕ್ರೋಶ ವ್ಯಕ್ತ ಪಡಿಸಿದ್ದು ದೇಶದಾದ್ಯಂತ ದೊಡ್ಡ ಸುದ್ದಿಯಾಯಿತು. “ಆಪ್ ಮೇರಿ ನಹೀ ಸುನತೆ, ಕೋಯಿ ಬಾತ್ ನಹೀ. ಮೇರೆ ಪತಿ ಪರ್ ಜಾನ್ಲೇವಾ ಹಮ್ಲಾ ಹುವಾ ಥಾ. ಏಕ್ ಔರತ್ ಕಿ, ಏಕ್ ಹಿಂದೂಸ್ತಾನಿ ಔರತ್ ಕಿ ಇಜ್ಜತ್ ಉಸ್ಕೆ ದುಪ್ಪಟೆ ಮೇ ಹೋತೀ ಹೈ. ಯೇ ಲೋ ಇಸ್ಸೆ, ಯೇ ಹೈ ಏಕ್ ಹಿಂದೂಸ್ತಾನಿ ಔರತ್ ಕಾ ದುಪಟ್ಟಾ” (ನೀವು ನನ್ನ ಮಾತನ್ನು ಕೇಳುವುದಿಲ್ಲ, ಪರವಾಗಿಲ್ಲ. ನನ್ನ ಗಂಡನ ಮೇಲೆ ಹಲ್ಲೆ ಮಾಡಲಾಯಿತು. ಮಹಿಳೆಯ, ಭಾರತೀಯ ಮಹಿಳೆಯ ಗೌರವವು ಅವಳ ದುಪಟ್ಟಾದಲ್ಲಿದೆ. ಇದನ್ನು ತೆಗೆದುಕೊಳ್ಳಿ, ಇದು ಭಾರತೀಯ ಮಹಿಳೆಯ ದುಪಟ್ಟಾ) ". ಎಂಬ ಮಹಿಳಾ ಆಕ್ರೋಶಗಳೆಲ್ಲಾ ಮೋದಿ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಮುಖಭಂಗವಾಯಿತು. ʼಭೇಟಿ ಪಡಾವೋ, ಭೇಟಿ ಬಚಾವೋʼ ಎಂಬೆಲ್ಲಾ ಸರ್ಕಾರದ ಯೋಜನೆಗಳೆಲ್ಲಾ ಅನುಷ್ಠಾನಕ್ಕೆ ಬರದೆ ಉಳಿದವು.
ಇವೆಲ್ಲಾ ಆಡಳಿತ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿವೆ. ವಿರೋಧ ಪಕ್ಷಗಳಿಗೆ ಇದೊಂದು ಅಸ್ತ್ರವಾಗಿ ದೊರಕಿತು. ಮೋದಿ ನೇತೃತ್ವದ ಸರ್ಕಾರದ ʼರಾಜಕೀಯ ಉದ್ದೇಶಿತʼ ಮಹಿಳಾ ಪರ ಯೋಜನೆಗಳಿದ್ದರೂ, ಕಳೆದ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮಹಿಳೆಯರ ಬೆಂಬಲ ಇಳಿಮುಖವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ೨೦೨೨ರ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ, ಲೋಕನೀತಿ-ಸಿಎಸ್‌ಡಿಎಸ್ ಪೋಸ್ಟ್-ಪೋಲ್ ಸಮೀಕ್ಷೆ ಹೇಳುವ ಪ್ರಕಾರ, ಬಿಜೆಪಿಗೆ ಮಹಿಳಾ ಮತದಾರರ ಬೆಂಬಲದಲ್ಲಿ ಶೇಕಡಾ ಆರರಷ್ಟು ಕುಸಿತ ಕಂಡಿದೆ. ಕರ್ನಾಟಕದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ಹೇಳಿರುವುದನ್ನು ಖಂಡಿತವಾಗಿ ಅಲ್ಲಗಳೆಯುವಂತಿಲ್ಲ.
ಮಹಿಳೆಯರು ಮುಂದಿನ ಲೋಕಸಭೆಯಲ್ಲಿಮತ ಚಲಾಯಿಸುವಾಗ ಇದೇ ಮನಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬ ವಾದವು ಮುಂದೆ ಬರಬಹುದು, ಆದರೆ ಕಾಂಗ್ರೆಸ್ ಗೆ ಈ ಬಗ್ಗೆ ಗಮನ ನೀಡುವುದಕ್ಕೆ ಸಾಕಷ್ಟು ಉತ್ತಮ ಅವಕಾಶವಿದೆ. ಮೋದಿ ಸಂಪುಟದ ೩೦ ಸಚಿವರಲ್ಲಿ ಇಬ್ಬರು ಮಾತ್ರ ಮಹಿಳೆಯರು. ಒಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇನ್ನೊಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ. ಪ್ರತಿಪಕ್ಷಗಳು ಮುಂದಿನ ಲೋಕಸಭೆಯಲ್ಲಿ ಇವೆಲ್ಲಾ ವಿಚಾರ ಮುಂದಿಟ್ಟುಕೊಂಡು ಮಹಿಳೆಯರನ್ನು ಪ್ರೊಜೆಕ್ಟ್ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ಮತದಾರರನ್ನು ಓಲೈಸಲು ಕಾಂಗ್ರೆಸ್ ಅಥವಾ ಪ್ರತಿಪಕ್ಷಗಳಿಗೆ ಅಲ್ಲಿ ಅವಕಾಶವಿದೆ. ಮಮತಾ ಬ್ಯಾನರ್ಜಿ ಅವರು ಇಡೀ ಪಶ್ಚಿಮ ಬಂಗಾಳವನ್ನೇ ತನ್ನ ಪರವಾಗಿ ಇರುವಂತೆ ಇಟ್ಟುಕೊಂಡಿದ್ದಾರೆ. ರಾಜ್ಯವನ್ನು ಮೀರಿ ಹೋಗುವ ಸಮರ್ಥರೂ ಹೌದು. ಆದರೆ, ಕಾಂಗ್ರೆಸ್ ಈ ವಿಚಾರದಲ್ಲಿ ಹಲವಾರು ʼರಿಸರ್ವೇಶನ್ʼ ಗಳನ್ನು ಹೊಂದಿದೆ.
ಕಾಂಗ್ರೆಸ್ ಗೆ ಇಲ್ಲಿ ಪ್ರಿಯಾಂಕಾ ಗಾಂಧಿ ಮತ್ತೊಂದು ಆಯ್ಕೆಯಾಗುತ್ತಾರೆ. ಅವರು ಪ್ರಭಾರ ಪ್ರಧಾನ ಕಾರ್ಯದರ್ಶಿಯಾಗಿರುವ ಯುಪಿಯಿಂದ ಆಚೆಗೆ ತಮ್ಮ ಹೆಜ್ಜೆಗುರುತುಗಳನ್ನು ಮೌನವಾಗಿ ವಿಸ್ತರಿಸುತ್ತಿದ್ದಾರೆ. ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಕೆಯ ಪ್ರಚಾರ ಕರ್ನಾಟಕದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತು. ಕರ್ನಾಟಕ ಚುನಾವಣಾ ಪ್ರಚಾರ ಮುಗಿದ ಬೆನ್ನಲ್ಲೇ ಅವರು ತೆಲಂಗಾಣದಲ್ಲಿ ತಮ್ಮ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಂಡರು. ಈಗ ಅವರು ಮಧ್ಯಪ್ರದೇಶದ ತಂತ್ರಗಾರಿಕೆಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಚಾರಕಿ ಮತ್ತು ತಂತ್ರಗಾರ್ತಿಯಾಗಿ ಅವರ ಪ್ರೊಫೈಲ್ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಹಾಗಾಗಿ ಪ್ರಿಯಾಂಕರನ್ನು ʼಜೂನಿಯರ್ ಇಂದಿರಾʼ ಎಂಬಂತೆ ಪ್ರೊಜೆಕ್ಟ್ ಮಾಡುವ ಉದ್ದೇಶಕ್ಕೆ ಕಾಂಗ್ರೆಸ್ ಮುಂದಾಗಲಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.
ಇನ್ನು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಶೇ ೧೭ರಷ್ಟು ದಲಿತ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಜಗಜೀವನ್ ರಾಮ್ ನಂತರ ಯಾವುದೇ ದಲಿತ ವ್ಯಕ್ತಿಗೆ ಪ್ರಧಾನಿ ಅಭ್ಯರ್ಥಿಯಾಗಿ ನಿಲ್ಲುವ ರಾಜಕೀಯ ಶಕ್ತಿ ಇರಲಿಲ್ಲ. ಅತಿದೊಡ್ಡ ವಿರೋಧ ಪಕ್ಷದ ಅಧ್ಯಕ್ಷರಾಗಿರುವ ಖರ್ಗೆ ಅವರು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿದ್ದರೂ, ಕಾಂಗ್ರೆಸ್ ಗಾಂಧಿ ಕುಟಂಬವನ್ನು ಮೀರಿ ನೋಡುವ ಸಾಧ್ಯತೆಯಿಲ್ಲ. ಇನ್ನು, ಜನಪ್ರಿಯತೆಯ ವಿಷಯದಲ್ಲಿ ಪ್ರಧಾನಿ ಮೋದಿಗೆ ನಿತೀಶ್ ಕುಮಾರ್, ಖರ್ಗೆ ಅಥವಾ ಪ್ರಿಯಾಂಕಾ ಸೇರಿ ಸದ್ಯಕ್ಕೆ ಯಾರೂ ಸರಿಸಾಟಿಯಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾದ ವಿಷಯ. ಹೀಗೆಲ್ಲಾ ಇರುವಾಗ ಪ್ರತಿಪಕ್ಷಗಳ ಮೈತ್ರಿ ಹೇಗೆ ರಚನೆಯಾಗುತ್ತದೆ ? ವಿಶ್ವಗುರುವಿನ ಎದುರು ಯಾರು ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಕುತೂಹಲ.
-ಶ್ರೀರಾಜ್ ವಕ್ವಾಡಿ

No comments:
Post a Comment