Friday, November 13, 2020

ಮಣ್ಣ ಹಣತೆಯ ಭವ್ಯ ಶಕ್ತಿ



ದೀಪಾವಳಿ ಬಂತಲ್ಲ

ಹೊಳಪಾಗಿ, ಬೆಳಕಾಗಿ

ಚೆಲುವಾಗಿ, ನಲಿವಾಗಿ


ಮಣ್ಣ ಹಣತೆಯ

ಭವ್ಯ ಶಕ್ತಿಯ

ರಮ್ಯತೆಯ

ದಿವ್ಯಾನುಬಂಧದಲಿ

ಅOತರOಗದ ಕಾವ್ಯ

ರಾಗ ಹೆಣೆದುಕೊಳ್ಳಲಿ


ನನ್ನ, ನಿಮ್ಮ ಹಣತೆ

ಶ್ರುತಿಶ್ರಾವ್ಯದಲಿ

ಮತ್ತೆ ಸಂಭ್ರಮದಲಿ

ಎದೆಯೂರ ಬೀದಿಗಳಲಿ

ಮತ್ತೆ ಮತ್ತೆ ಜ್ವಲಿಸಲಿ


ಬಾ..

ಹಣತೆಯ

ಧ್ಯಾನ ಶೋಭೆಯಲಿ

ನನ್ನ ನೀ, ನಿನ್ನ ನಾ

ತುಂಬೊಲವ ಅನುರಾಗದಲಿ

ಕಣ್ತುಂಬಿಸಿಕೊಳ್ಳುವ..!


ದೀಪಾವಳಿ ಬಂತಲ್ಲ..

ಬೆಳಕೆOದರೇ..

ಕೇವಲ ಸಡಗರವಲ್ಲ,

ಹೊಸತೊಂದರ

ಅರುಣೋದಯ..!

-ಕಾವ್ಯ ಬೈರಾಗಿ

(ಶ್ರೀರಾಜ್ ವಕ್ವಾಡಿ)

Monday, October 12, 2020

‘ಕೊರೋನ ನಂತರದ ಗ್ರಾಮ ಭಾರತ’ದೊಳಗೆ ನಿತ್ಯ ಸತ್ಯ


ದೇರ್ಲ ಅವರೇ ಹೇಳುವ ಹಾಗೆ “ಬರೀ ಕನಸನ್ನಷ್ಟೇ ಅಲ್ಲ, ವಾಸ್ತವ ಬದುಕನ್ನೇ ಕೊರೋನಾ ಕಸಿದುಕೊಂಡಿದೆ”. ಕೊರೋನಾ ಇಡಿಯ ವ್ಯವಸ್ಥೆಯನ್ನು ಅಡಿಮೇಲಾಗಿ ಮಾಡಿ ಮಾನವನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಮತ್ತವನ ಮನಸ್ಸನ್ನೂ.

‘ಕೊರೋನಾ ನಂತರದ ಗ್ರಾಮಭಾರತ’ ಹಲವು ಆಯಾಮಗಳಲ್ಲಿ ಹಳ್ಳಿ ಬದುಕನ್ನು ಪುಟ ಪುಟವಾಗಿ ತೆರೆದಿಡುತ್ತದೆ. 

ನಾನು ಸಾಮಾನ್ಯವಾಗಿ ಪುಸ್ತಕಗಳ ಓದಿನ ಅನಿಸಿಕೆಯನ್ನು ಹಂಚಿಕೊಳ್ಳುವುದಿಲ್ಲ ಅಥವಾ ಬರೆಯುವುದಕ್ಕೆ ಮುಂದಾಗಿದ್ದು, ಮುಂದಾಗುವುದು ಬಹಳ ಕಡಿಮೆ. ಈ ಕೃತಿಯ ಕುರಿತಾಗಿ ನಾಲ್ಕಕ್ಷರ ಬರೆಯುವುದಕ್ಕೆ ಹೊರಟಿರುವ ಕಾರಣ, ಕೃತಿಕಾರ ನರೇಂದ್ರ ರೈ ದೇರ್ಲ ಅವರ ಬರಹಗಳಲ್ಲಿನ ನಾಳೆಯ ಭಾರತದ ಕನಸುಗಳು, ಗ್ರಾಮ ಭಾರತದ ಸೊಗಡು, ಹಳ್ಳಿಯ ಇನ್ನೊಂದು ಗಂಭೀರ ಮುಖ, ಹಳ್ಳಿ ಬದುಕಿನ ಸಮಸ್ಯೆ, ‘ನಗರಗಳು ಕುಲಕೆಟ್ಟ ವೇಗದಲ್ಲೇ ಗ್ರಾಮಗಳು ಬದಲಾದರೇ ಉಳಿಯುವುದೇನು..?’ ಎಂಬ ದೇರ್ಲ ಅವರೊಳಗಿನ ಆತಂಕ. 

ಹಳ್ಳಿಗಳನ್ನು ಬಿಟ್ಟು ನಗರವೇ ಚೆಂದ ಅಂದ ಎಂದು ಹೋಗಿದ್ದ ಮಂದಿಯೆಲ್ಲಾ ಮೂಟೆ ಹೊತ್ತು ಮರಳಿ ಗೂಡಿಗೆ ಎಂಬ0ತೆ ಮತ್ತದೇ ಹೊರಟಲ್ಲೇ ನೆಲೆ ಕಾಣಲು ಮುಖ ಮಾಡಿದ್ದು ಕೊರೋನಾ ನಂತರದ ದಿನಮಾನಗಳು. ಮರಳಿ ಬಂದವರಿಗೆ ಹಳ್ಳಿ ನೀಡಿದ ಸ್ವಾಗತ ಮತ್ತು ಆಶ್ರಯ ಅಚ್ಚರಿಯೇ ಸರಿ.

ಎಲ್ಲೋ ದೂರದ ಮಹಾ ನಗರಗಳಲ್ಲಿ ಬದುಕು ಕಂಡುಕೊ0ಡು ಈ ಕೊರೋನಾ ಎಂಬ ಕಾಯಿಲೆಗೆ ಹೆದರಿ ಹಳ್ಳಿಗೆ ಹಿಂತಿರುಗಿದಾಗ ಈ ಹಿಂದೆಲ್ಲಾ ಮದುವೆ ಮುಂಜಿಗೆ0ದು ಬಂದು ಹೋಗುತ್ತಿದ್ದಾಗಿದ್ದ ಆತಿಥ್ಯ, ಇಲ್ಲಿಯೇ ಹೊಸ ಬದುಕು ಕಾಣಬೇಕು ಎಂದು ಹೊರಟು ಬಂದಿರುವವರ ಬಗ್ಗೆ ಬದಲಾದ ಭಾವನೆಯ ಬಗೆಯನ್ನು ದೇರ್ಲ ಅವರು ಚೆನ್ನಾಗಿ ವಿವರಿಸಿದ್ದಾರೆ. ‘ಇಲ್ಲಿರುವವರಿಗೇ ಕಷ್ಟ, ಈಗ ಇವನೊಬ್ಬ ಮತ್ತೆ ವಕ್ಕರಿಸಿದ’ ಎಂಬುವುದು ಸಹಜವಾಗಿ ಹಳ್ಳಿ ಬದುಕನ್ನು ಕಂಡವರಿಗೆ ಒಪ್ಪಿಕೊಳ್ಳಲಾಗದ ವಾಸ್ತವದ ನಿಜ ಮುಖದ ಅಧ್ಯಯನ ದೇರ್ಲರದ್ದು. 

ಸೆಗಣಿ, ಕೆಸರು, ಗಂಜಲ, ನಮ್ಮದು ಇಪ್ಪತ್ತನಾಲ್ಕು ಗಂಟೆ ಎ.ಸಿ ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸಿ ನಗರದೆಡೆಗೆ ಮುಖ ಮಾಡಿ ಹೋದವರು ಈಗ ಹಳ್ಳಿಗೆ ಬಂದು, ಹಳ್ಳಿಯ ಪಡಸಾಲೆಯಲ್ಲಿ ಕೂತು ವರ್ಕ್ ಫ್ರಂ ಹೋಮ್ ಮಾಡಿ, ಉಳಿದ ಸಮಯದಲಿ ಕೈ ಕಾಲು ಕೆಸರು ಮಾಡಿಕೊಂಡು ಕೃಷಿ ಮಾಡುತ್ತಿರುವಾಗ, ‘ನಮ್ಮದಾದದ್ದು ಆಯ್ತು ಬಿಡಿ, ನೀವು ಮಣ್ಣಿಗಿಳಿಯುವುದು ಬೇಡ’ ಅಂದ ಹಿರಿಯವರೇ ಮುಸಿ ಮುಸಿ ನಗುವಂತೆ ಕೊರೋನಾ ಮಾಡಿ ಬಿಟ್ಟಿದೆ ಅಂತ ಲೇಖಕರು ಬಹಳ ಮಾರ್ಮಿಕವಾಗಿ ಹಳ್ಳಿ ಬದುಕಿನ ಗಟ್ಟಿತನವನ್ನು, ಹಳ್ಳಿ ಬದುಕಿನ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಸತ್ಯದ ಕಹಿ ರಾಚಿ ಹೊಡೆಯುವಂತೆ ಹೇಳಿರುವುದು ನಮ್ಮನ್ನು ಕೃತಿ ಒಳಗೆ ಮತ್ತಷ್ಟು ಎಳೆದುಕೊಳ್ಳುತ್ತದೆ. 

ಇನ್ನು, ಸ್ವದೇಶೀಯತೆ. 

ಚೀನಾದಿಂದ ಆಮದಾಗುವ ಕಳೆಕೊಚ್ಚುವ ಯಂತ್ರ. ಯಂತ್ರದ ಬ್ಲೇಡ್ ನ ಫಿನಿಶಿಂಗ್ ಆಧಾರದಲ್ಲಿ ನಮ್ಮ ರೈತರನ್ನು ತಲುಪುವ ಮತ್ತು ಈಗೀಗ ನಮ್ಮ ರೈತರಿಗೆ ಬೇಕಾಗುವುದು ಕೂಡ ಅದೇ. ಆ ಯಂತ್ರದ ಹರಿತವಾದ ಬ್ಲೇಡ್. ಚೀನಾ ಕಂಪೆನಿಯ ಮಾಲಿಕತ್ವ. ವಾಸ್ತವಾಂಶವೆ0ದರೇ, ಆ ಯಂತ್ರದ ಹರಿತವಾದ ಬ್ಲೇಡ್ ನಮ್ಮ ದೇಶದಿಂದಲೇ ಚೀನಾಗೆ ರಫ್ತಾದ ಕಬ್ಬಿಣದಿಂದಲೇ ತಯಾರಿಸಿದ್ದು. ಇದು, ವರ್ತಮಾನದ ಗಡಿಬಿಡಿಯ ಆರ್ಥಿಕ ಸ್ಥಿತಿ ಗತಿಯ ಹಪಹಪಿಯ ಸ್ವದೇಶಿಯತೆಯನ್ನು ಕಟುವಾಗಿ ಟೀಕಿಸುವಂತೆ ಮಾಡುತ್ತದೆ. 

ಈ ಎಲ್ಲದರ ಆಚೆಯಲ್ಲಿ... ದೇರ್ಲರ ಆಳ, ವಿಸ್ತಾರ ನೋಟ ಅವರ ಅಧ್ಯಯನಶೀಲತೆಯಲ್ಲಿ ಇಲ್ಲಿ ಕಾಣಸಿಗುವುದು ಭವಿಷ್ಯದ ಗ್ರಾಮ ಭಾರತ. ‘ಸಾಲ, ಬಡತನ, ಮಣ್ಣಿನ ಮನೆ, ಕಾಲಿನ ಕೆಸರು, ಗಂಜಲದ ವಾಸನೆ, ಬರಿಗಾಲ ಓಡಾಟ ಇವೆಲ್ಲಾ ಅವಮಾನವಲ್ಲ ಎಂಬ ಅರಿವು ಮೂಡಬೇಕು. ಶುದ್ಧ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಾಲು, ತರಕಾರಿ, ಅನ್ನ, ನಿರ್ಮಲ ಸಂಪನ್ನ ಪ್ರೀತಿಯೇ ವರ್ತಮಾನದ ಬಹುದೊಡ್ಡ ಸುಖ ಎಂಬ ಅರಿವು ಬರಬೇಕು’ ಎಂಬ ಅವರ ಮಾತುಗಳಲ್ಲಿ ನಾಳೆಯ ಭಾರತದ ಶಿಖರದೆತ್ತರದ ಆಶಯಗಳಿವೆ ಎನ್ನುವುದು ಅಪ್ಪಟ ಸತ್ಯ.

ಸರಳ ಜೀವನಕ್ಕೆ ಕೊರೋನ, ಹಳ್ಳಿಯಲ್ಲಿ ತೋರಿಸಿದ ಹಲವು ದಾರಿಗಳನ್ನು, ಹಳ್ಳಿಯ ಅವಕಾಶಗಳನ್ನು ‘ಯುಗಧರ್ಮವನ್ನು ಪಾಲಿಸುವುದು ಆಯಾಯ ಕಾಲದ ಧರ್ಮ’ ಎಂದು ಹೇಳಿ ಹಳೆಯ ತಲೆಮಾರಿನವರ ಬಾಯಿ ಮುಚ್ಚಿಸುವ ಹೊಸ ತಲೆಮಾರಿನವರಿಗೆ ಈ ಕೃತಿ ಅನೇಕ ಆಯಾಮಗಳಲ್ಲಿ ಕನ್ನಡಿ ಹಿಡಿದು ಇಲ್ಲೇ ಇದೆ ನಿತ್ಯ ಸತ್ಯ ಎನ್ನುವುದನ್ನು  ತೋರಿಸಿಕೊಟ್ಟಿದೆ. 

ಈ ಓದು ಖುಷಿ ಕೊಟ್ಟಿದೆ. 

-ಕಾವ್ಯ ಬೈರಾಗಿ

 (ಶ್ರೀರಾಜ್ ವಕ್ವಾಡಿ) 


 






Sunday, August 23, 2020

ಕೋವಿಡ್ ಮೆಡಿಕಲ್ ಮಾಫಿಯಾ..!!!


“ಕೋವಿಡ್” ಅದೊಂದು ಮಾರಕ ಸೋಂಕಲ್ಲ, ಅದು ಆಳುವವರ ಮಾಫಿಯಾ ಎನ್ನುವುದು ಸತ್ಯವಾಗ್ತಿದೆ. ಕೋವಿಡ್ ಹೆಸರಿಲ್ಲಿ ಕೋಟಿ ಗಟ್ಟಲೆ ನುಂಗಿ ತೇಗುತ್ತಿರುವವರ ಅಸಲಿ ಮುಖ ಬಯಲಾಗ್ತಿದೆ. ಹೆಣದ ಮುಂದಿಟ್ಟುಕೊಂಡು ದಂಧೆ ನಡೆಸುತ್ತಿರುವ ವಿಷಯ ನಿಧಾನವಾಗಿ ಒಂದೊಂದಗಿ ಹೊರ ಬರುತ್ತಿದೆ. 

ಕೋವಿಡ್ ಇಂದ ಮೃತರಾದವರನ್ನು ಸತ್ತ ನಾಯಿ, ನರಿಗಳನ್ನು ಮಣ್ಣು ಮಾಡಿದ ಅಮಾನುಷ ಘಟನೆಗಳನ್ನೆಲ್ಲಾ ಕಂಡು ಹಳಸಿ ಹೋಗಿ ಆಯ್ತು. ಈಗ ಯಾರದ್ದೋ ಹೆಸರಿನಲ್ಲಿ ಇನ್ಯಾರದ್ದೋ ಶವ ಕಳುಹಿಸಿ ಉಡುಪಿಯ ಕೋವಿಡ್ ಆಸ್ಪತ್ರೆಯೊಂದು ಯಡವಟ್ಟು ಮಾಡಿಕೊಂಡಿರುವ ವಿಚಾರ ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸೋಂಕು ದಂಧೆಯಾಗಿ ಬದಲಾಗಿದ್ದು ನೇರಾನೇರವಾಗಿ ಕಾಣಸಿಗುತ್ತಿದೆ. 

ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಈಗ ಅಮಾಯಕರ ಬದುಕಿನೊಂದಿಗೆ ಆಟ ಆಡುತ್ತಿವೆ. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಜಿಲ್ಲಾಧಿಕಾರಿಗಳು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದಾದರೂ ಇನ್ನೂ ಸಾಲದೇನೋ.. 

ಈಗ ಕೋವಿಡ್ ಹೆಸರಿನಲ್ಲಿ ಯರ‍್ಯಾರದ್ದೋ ಶವ ಕಳುಹಿಸಿಕೊಡುವುದು ಆರಂಭವಾಗಿದೆ. ಇಷ್ಟೆಲ್ಲಾ ಯಡವಟ್ಟು ಮಾಡುವ ಆಸ್ಪತ್ರೆಗಳು.. ಪಿಪಿಇ ಕಿಟ್ ಅಲ್ಲಿ ಪ್ಯಾಕ್ ಮಾಡಲಾಗುವ, “ಕೋವಿಡ್‌ನಿಂದ ಮೃತರಾದವರ ಶವ ಎಂದು ಹೇಳಲಾಗುವ” ಆ ಮೃತ ದೇಹದ ಅಂಗಾಂಗಗಳನ್ನು ಕದ್ದಿರಲು ಸಾಧ್ಯವಿಲ್ಲವೇ..? ಎನ್ನುವ ಆತಂಕಕಾರಿಯಾದ ಪ್ರಶ್ನೆ ಈಗ ಕಾಡ್ತಿದೆ. ಆ್ಯಂಬುಲೆನ್ಸ್ನಲ್ಲಿ ಪಿಪಿಇ ಕಿಟ್‌ಗಳಿಂದ ಕವರ್ ಮಾಡಿ ಯಾವುದೋ ಲಾರಿಗಳಲ್ಲೋ, ಗೂಡ್ಸ್ ವಾಹನಗಳಲ್ಲೋ ಪಾರ್ಸೆಲ್ ಕಳುಹಿಸದ ಹಾಗೆ ಸ್ಮಶಾನಕ್ಕೆ ಹೆಣ ಕಳುಹಿಸಿ, ಕುಟುಂಬದವರಿಗೆ ಸರಿಯಾಗಿ ನೋಡುವುದಕ್ಕೂ ಬಿಡದೇ ಮಣ್ಣು ಮಾಡಲಾಗುವ ಆ ದೇಹದಲ್ಲಿನ ಎಷ್ಟು ಅಂಗಾಂಗಗಳನ್ನು ಕದ್ದು, ಮಾರಿ ಹಣ ಮಾಡಿರಲಿಕ್ಕಿಲ್ಲ..? ನಿಜ, ದೊಡ್ಡದೊಂದು ಮೆಡಿಕಲ್ ಮಾಫಿಯ ನಡೆಯುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.

ಸುಳ್ಳು ಬರೀ ಸುಳ್ಳು, ಎಲ್ಲವೂ ಹಸಿ ಹಸಿ ಸುಳ್ಳು. ಕೋವಿಡ್ “ಮಾಫಿಯಾ” ಹೊರತಾಗಿ ಬೇರೇನೂ ಅಲ್ಲ. ಇದು ವೈದ್ಯಕೀಯ ವರ್ಗದೊಂದಿಗೆ ಆಳುವವರ ದೊಡ್ಡ ದಂಧೆ ಎನ್ನುವುದರಲ್ಲಿ ಯಾವುದೇ ಸಂದೇಹ ಪಡಬೇಕಾಗಿಲ್ಲ. ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟದ ಕಾಲದಲ್ಲಿ ಬಡ, ನಿರ್ಗತಿಕರ, ಮಧ್ಯಮವರ್ಗದವರ ಸುಲಿಗೆಯಲ್ಲಿ ತೊಡಗಿವೆ ಎನ್ನುವುದಕ್ಕೆ ಇದು ಅಪ್ಪಟ ಸಾಕ್ಷಿ. ಕ್ಯಾರೇ ಇಲ್ಲದಂತೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಅಸಲಿ ಮುಖ ಇದು. ಇಡಿಯ ದೇಶದಲ್ಲಿ ಬಿಳಿ ಕೋಟಿನ ಲೂಟಿಕೋರರ ಹಾವಳಿ ಅತಿಯಾಗಿದೆ ಎನ್ನುವುದರಲ್ಲಿ ನೋ ಡೌಟ್ಸ್.  

ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್‌ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಲ್ಲವನ್ನೂ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ. 

ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್‌ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ. 

ಮೃತರಾದವರ ಶವವನ್ನೇ ಬದಲು ಮಾಡಿ ಕಳುಹಿಸುವುದೆಂದರೇ ಏನು..? ಇದು ಬೇಜವಾಬ್ದಾರಿಯ ಪರಮಾವದಿ ಅಲ್ಲದೇ ಮತ್ತೇನಲ್ಲ. ಕೊರೋನಾ ನಿಯಂತ್ರಿಸುವಲ್ಲಿ ಎಲ್ಲಾ ಸೌಲಭ್ಯವಿದೆ, ಎಲ್ಲವನ್ನೂ ಮುತುವರ್ಜಿಯಿಂದ ಮಾಡ್ತಿದ್ದೇವೆ ಅಂತ ಪುಂಗಿ ಊದುತ್ತಿದ್ದ ಆಳುವವರು, ಜಿಲ್ಲಾಧಿಕಾರಿಗಳು, ವೈಧ್ಯಾಧಿಕಾರಿಗಳು ಯಾರದ್ದೋ ಶವದ ಬದಲಾಗಿ ಇನ್ಯಾರದ್ದೋ ಶವವನ್ನು ಕಳುಹಿಸಿಕೊಡುವಾಗ ಎಲ್ಲಿ ಹೋಗಿದ್ದಾರೆ..? 

ಕೋವಿಡ್ ಹೆಸರಿನಲ್ಲಿ ಆಗುತ್ತಿರುವ ದಂಧೆ ಮತ್ತು ಅವ್ಯವಸ್ಥೆ ಈಗ ಬಟಾಬಯಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಒತ್ತಾಯ ಪೂರ್ವಕವಾಗಿ ಕೊರೋನಾ ಚಿಕಿತ್ಸೆ ಮಾಡಿ ಹಣ ಕೊಳ್ಳೆಹೊಡೆಯುತ್ತಿರುವ, ಸುಳ್ಳು ಸುಳ್ಳು ಟೆಸ್ಟಿಂಗ್ ರಿಪೋರ್ಟ್ ನೀಡಿ ಮಾಫಿಯಾ ನಡೆಸುತ್ತಿರುವ, ಹೆಣಗಳ ಮುಂದೆ ಕೋವಿಡ್ ಡ್ರಾಮ ಮಾಡುವ ಬಿಳಿಕೋಟಿನ ದಂಧೆಕೋರರ ಧೋರಣೆ ಇಡೀಯ ಸಾಮಾಜಿಕ ವಲಯವನ್ನೇ ಆತಂಕಕ್ಕೊಳಪಡಿಸಿದೆ. 

ಅಮಾಯಕರ ಹೆಣ ಮುಂದಿಟ್ಟುಕೊಂಡು ಹೇಸಿಗೆ ತಿನ್ನುವ ಕೆಲಸಕ್ಕೆ ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿರುವ ರಾಜಕೀಯ ನಾಯಕರಿಗೆ ಆರಿಸಿ ಕುರ್ಚಿ ಸಿಗುವಂತೆ ಮಾಡಿದವರೇ ಮುಂದಿನ ಸಾಲಿನಲ್ಲಿ ಸರಿಯಾದದ್ದನ್ನೇ ಪಾಠ ಕಲಿಸಬೇಕಿದೆ.     

-ಶ್ರೀರಾಜ್ ವಕ್ವಾಡಿ


Sunday, August 16, 2020

ದನಿ..!

 

ಗೋವಿನ 

ಕೊರಳಲ್ಲಾಡುವ ಘಂಟೆ 

ದನಿಮಾಡುತ್ತಿದೆ 

ಆ ಸಂಭ್ರಮಕ್ಕೆ 

ಪೂರ್ತಿ ಪಾಲ್ಪಡೆಯಲಾಗ್ತಿಲ್ಲ..! 


ಕ್ಷಮಿಸಿ 

ನಿಶೆಯ ಕತ್ತಲೆಯ

ಸಡಗರಕ್ಕಿನ್ನು 

ಕೊನೆಯಾಗಿಲ್ಲ ಎಂದು 

ಹೇಳಲ್ಹೊರಟೆ ಅಷ್ಟೇ...! 


ಬದುಕೆಂದರೇ, 

ನನ್ನ ಕಣ್ಣಿನ ಬಿಂದುವಿನಲಿ 

ನಾನೇ ಕಾಣುವ ನನ್ನದೇ ಬಿಂಬ..! 


ನಾಳೆಗಳಿಲ್ಲದ ಇಂದು 

ವಿಷಾದ ಹಾಡುತ್ತಿದೆ...! 


ಇಂದು ಇಲ್ಲದ ನಿನ್ನೆ 

ಮತ್ತದೇ ಬಣ್ಣವಿಲ್ಲದ

ಕಾವ್ಯಕ್ಕೆ ರಾಗ ಹಾಕುತ್ತಿದೆ...! 


ನೀವು ಏನೇ ಹೇಳಿ 

ಇದು ದನಿಯಿಲ್ಲದ ದನಿ..! 

-ಕಾವ್ಯ ಬೈರಾಗಿ 

(ಶ್ರೀರಾಜ್ ವಕ್ವಾಡಿ)

Sunday, June 7, 2020

ತಿರುವು..!




ಬೇಗ ಮುಗಿದು 
ಹೋಗಲಿ 
ಕಾಣದೆ ತಿರುಗುವ 
ತಿರುವು ..! 

ಹೇಗೋ ಇದ್ದಿದ್ದರೇ
ಹೇಗೋ ಉಳಿದು 
ಬಿಡಬಹುದಿತ್ತು..!
ಹೇಗೆಲ್ಲಾ ಇರಲು 
ಒಪ್ಪಲಿಲ್ಲ 
ಆಗೆಲ್ಲಾ ಹಾಗೆ 
ಆಗಲಿಲ್ಲ..! 

ಏನೂ ತೋಚದ ಮೇಲೆ 
ಬೇಗ ಕೊನೆಯಾಗಿ 
ಹೋರಡಲಿ...! 

ಸೇರಬಹುದಾದ
ದಿಗಂತ್ಯಗಳು 
ಕ್ಷಮಿಸಲಿ..! 

ನಾಳೆ ಕಳೆದು 
ಹೋಗುವುದು 
ಇಂದಾದರೇನು...?

ಹಾಗೆಲ್ಲಾ ಹಿತವಿಲ್ಲ...!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ) 


Thursday, June 4, 2020

ಶಾಲೆಗಳು ಮತ್ತೆ ಮಾತಾಡುತ್ತಿವೆ..!


(ಸಾಂದರ್ಭಿಕ ಚಿತ್ರ)

ಇಡೀ ಜಗತ್ತನ್ನು ಆವರಿಸಿಕೊಂಡಿರುವ ಕೊರೋನಾ ಮುಂದೆ ಯಾವ ಮಟ್ಟಕ್ಕೆ ಹೋಗಿ ತಲುಪಬಹುದೆಂಬುದನ್ನು ಯಾರಿಗೂ ಊಹಿಸುವುದಕ್ಕೆ ಸಾಧ್ಯವಿಲ್ಲ. ಕೊರೋನಾ ಪೂರ್ಣ ಮಟ್ಟದಲ್ಲಿ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲಾಗಿಸಿಬಿಟ್ಟಿದೆ. ಈ ನಡುವೆ ರಾಜ್ಯ ಸರ್ಕಾರ ಆರಂಭದಲ್ಲಿ ಅತ್ಯಂತ ಯಶಸ್ವಿಯಾಗಿ ಸೋಂಕು ನಿಯಂತ್ರಿಸಲು ನಿರ್ಧಾರಗಳನ್ನು ಕೈಗೊಂಡಿದ್ದರೂ ಈಗೀಗ ಪದೇ ಪದೇ ವಿವಾದಾತ್ಮಕ ನಿರ್ಧಾರಗಳನ್ನು ತರಾತುರಿಯಲ್ಲಿ ಕೈಗೊಳ್ಳುತ್ತಿರುವುದು ಭ್ರಮನಿರಸ ಹುಟ್ಟಿಸುತ್ತಿದೆ.

ಬಹಳ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ತುಂಬಾ ಗೊಂದಲವುಂಟುಮಾಡುತ್ತಿವೆ. ಕೇಂದ್ರ ಸರ್ಕಾರ ಸೂಚಿಸಿದ ನಿರ್ಬಂಧಗಳನ್ನು ಸಡಿಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸದರಿ ಮಾರ್ಗಸೂಚಿಯಲ್ಲಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೊಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳ ಪುನರಾರಂಭ ಮಾಡುವುದಕ್ಕೆ ದಿನಾಂಕವನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಭಾರಿ ವಿರೋಧವೂ ಬಂತು. ಕೊರೋನಾ ಸೋಂಕು ದಿನನಿತ್ಯ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಶಾಲೆಗಳನ್ನು ಆರಂಭಿಸುತ್ತಿರುವುದಕ್ಕೆ ದಿನಾಂಕ ಸೂಚಿಸಿದ್ದು ಒಂದು ಯಡವಟ್ಟಾದರೇ, ದಿನಾಂಕ ಘೋಷಿಸಿ ಆದ ಮೇಲೆ ಪೋಷಕರ ಅಭಿಪ್ರಾಯ ಕೇಳುತ್ತೇವೆ ಅಂತ ಹೇಳುತ್ತಿರುವುದು ಮತ್ತೊಂದು ಯಡವಟ್ಟು. ಹೀಗೆ ಗಂಟೆಗೊಂದು ತರಾತುರಿಯಲ್ಲಿ ಯಾವುದೇ ಪೂರ್ವ ಯೋಜನೆಗಳಿಲ್ಲದೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ.

ಈಗಾಗಲೇ, ಫ್ರಾನ್ಸ್ನಲ್ಲಿ ಶಾಲೆ ಆರಂಭ ಮಾಡಿದ ಮೇಲೆ ಸುಮಾರು ಎಪ್ಪತ್ತು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಅಲ್ಲಿನ ಸರ್ಕಾರ ಪುನಃ ಶಾಲೆಗಳನ್ನು ಮುಚ್ಚಿಸಿತು. ದಕ್ಷಿಣ ಕೋರಿಯಾದಲ್ಲಿಯೂ ಇದೇ ಸ್ಥಿತಿ. ಶಾಲೆಗಳು ಪ್ರಾರಂಭವಾದ ಮೇಲೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡದ್ದರಿಂದ ಐನೂರಕ್ಕೂ ಹೆಚ್ಚು ಶಾಲೆಗಳನ್ನು ಮತ್ತೆ ಮುಚ್ಚಿಸಿದೆ ಅಲ್ಲಿನ ಸರ್ಕಾರ. ಇಂತೆಲ್ಲಾ ಉದಾಹರಣೆಗಳು ಮುಂದೆ ಇದ್ದರೂ ಕೂಡ ಶಿಕ್ಷಣ ಇಲಾಖೆ ಶಾಲೆ ಆರಂಭಿಸುವುದಕ್ಕೆ ಮುಂದಾಗುತ್ತಿರುವುದನ್ನು ನೋಡಿದರೇ, ಶಿಕ್ಷಣ ಇಲಾಖೆ ಮತ್ತು ಸರ್ಕಾರ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿದೆಯಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಕಾಡುತ್ತಿದೆ.

‘ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕುವುದಿಲ್ಲ. ವಿದ್ಯಾರ್ಥಿಗಳ ಸುರಕ್ಷಣಾ ಹೊಣೆಗಾರಿಕೆ ನಮ್ಮದು’ ಎಂದು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಬಹಳ ಧೈರ್ಯದಿಂದ ಹೇಳುತ್ತಿವೆ. ಆದರೇ, ಇದು ಭಾಗಶಃ ಯಶಸ್ವಿಯಾಗಬಹುದಷ್ಟೇ. ಉದಾಹರಣೆಗೆ, ಒಂದು ಹಿರಿಯ ಪಾಥಮಿಕ ಶಾಲೆಯಲ್ಲಿ ಏಳು ತರಗತಿಗೆ ಸಾಮಾನ್ಯವಾಗಿ ಏಳು ತರಗತಿ ಕೋಣೆಗಳಿರುತ್ತವೆ. ಒಂದೊಂದು ತರಗತಿಯಲ್ಲಿ ಐವತ್ತು ವಿದ್ಯಾರ್ಥಿಗಳಿದ್ದರೇ, ಒಂದು ತರಗತಿ ಕೋಣೆಯಲ್ಲಿ ಸಾಮಾನ್ಯವಾಗಿ ಇರುವ ಹತ್ತು ಡೆಸ್ಕ್ ಬೆಂಚುಗಳಲ್ಲಿ ಹೇಗೆ ಸಾಮಾಜಿಕ ಅಂತರ ಕಾಯ್ದಿರಿಸಿ ಆ ವಿದ್ಯಾರ್ಥಿಗಳನ್ನು ಪಾಠ ಕೇಳಿ ಅಂತ ಕೂರಿಸುತ್ತಾರೆ..? ಸ್ಯಾನಿಟೈಸ್, ಸಾಮಾಜಿಕ ಅಂತರ, ಸ್ಕ್ರೀನಿಂಗ್ , ಕ್ಲೀನಿಂಗ್ ಮಾಡಿ ವಿದ್ಯಾರ್ಥಿಗಳ ಕ್ಷೇಮ ಪಾಲನೆ ಮಾಡುತ್ತೇವೆ ಅಂತ ಹೇಳುವ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಹೇಗೆ ವಿದ್ಯಾರ್ಥಿಗಳನ್ನು ನಿಭಾಯಿಸುತ್ತದೆ ಎನ್ನುವುದೇ ದೊಡ್ಡ ತಲೆನೋವಿನ ಪ್ರಶ್ನೆಯಾಗಿದೆ.

ಮತ್ತೊಂದು ವಿಚಾರ, ಕರ್ನಾಟಕ ಸರ್ಕಾರದ ಕೋವಿಡ್19 ಇನ್‌ಫರ‍್ಮೇಶನ್  ಪೊರ‍್ಟಲ್ ಆಫಿಶಿಯಲ್ ವೆಬ್ಸೆಟ್ ಅಲ್ಲಿ ಈಗ ಲಭ್ಯ ಇರುವ ಮಾಹಿತಿಯ ಪ್ರಕಾರ ಕರ್ನಾಟಕದಾದ್ಯಂತ 246 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಬಹುತೇಕ ಎಲ್ಲವೂ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು, ಬಿಸಿಎಮ್ ಹಾಸ್ಟೇಲ್‌ಗಳಾಗಿವೆ. ಈಗ, ಇನ್ನೂ ಕೂಡ ಬೇರೆ ಬೇರೆ ಊರುಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಹೊರನಾಡಿನಿಂದ ಬಂದವರನ್ನು ಕ್ವಾರಂಟೈನ್ ಅಲ್ಲಿ ಇಡಲು ನಿಯೋಜಿಸಲಾಗುತ್ತಿದೆ. ಅವುಗಳು ರಾಜ್ಯ ಸರ್ಕಾರದ ಈ ಅಧಿಕೃತ ವೆಬ್ಸೆಟ್ ಹೇಳುತ್ತಿರುವ ಲೆಕ್ಕದ ಹೊರಗಿನವುಗಳು ಎಂಬುವುದು ಬಹಳ ಮುಖ್ಯ. ಶಿಕ್ಷಣ ಇಲಾಖೆ ಈ ಶಾಲೆಗಳಲ್ಲಿ ಹೇಗೆ ತರಗತಿಗಳನ್ನು ಪ್ರಾರಂಭಿಸುತ್ತದೆ..? ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಗಳ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಆಳವಾದ ಆಲೋಚನೆಯನ್ನು ಮಾಡಿದಂತೆ ಕಾಣುತ್ತಿಲ್ಲ.

ಶಿಕ್ಷಣ ಇಲಾಖೆ ಕೈಗೊಳ್ಳುತ್ತಿರುವ ಎಲ್ಲಾ ನಿರ್ಧಾರಗಳನ್ನು ಗಮನಿಸುತ್ತಿರುವಾಗ ವಿದ್ಯಾರ್ಥಿಗಳನ್ನು ಬೆಂಕಿಯೊಂದಿಗೆ ಸರಸವಾಡುವುದಕ್ಕೆ ಮುಂದೂಡುವ ದುಸ್ಸಾಹಸಕ್ಕೆ ಮುಂದಾಗುತ್ತಿದೆಯಾ ಎಂಬ ಚಿಂತೆ ಹೆಚ್ಚಾಗುತ್ತಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು ಹಿಂದೆ ಮುಂದೆ ನೋಡದೇ, ಮಕ್ಕಳ ಮತ್ತು ಶಿಕ್ಷಕರ ಹಿತ ಗಮನಿಸದೇ ತೆಗೆದುಕೊಳ್ಳುತ್ತಿರುವ ಸರ್ಕಾರದ ಆತುರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


( ಸಾಂದರ್ಭಿಕ ಚಿತ್ರ )

ಕರ್ನಾಟಕದಾದ್ಯಂತ 44,615 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 5,240 ಸರ್ಕಾರಿ ಪ್ರೌಢ ಶಾಲೆಗಳಿವೆ. ಹಾಗೂ 1,229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜುಲೈಯಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುತ್ತೇವೆ ಅಂತ ಒಂದೆಡೆ ಹೇಳಿದರೇ, ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಂಡು ಶಾಲೆಗಳನ್ನು ತೆರೆಯುತ್ತೇವೆ ಅಂತ ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಉತ್ತರಿಸುತ್ತಾರೆ. 44,615ಸರ್ಕಾರಿ ಪ್ರಾಥಮಿಕ ಶಾಲೆಗಳನ್ನೊಳಗೊಂಡು  ಒಟ್ಟು 6,469 ಪ್ರೌಢ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷ ಲಕ್ಷ ವಿದ್ಯಾರ್ಥಿಗಳನ್ನು ಕೊರೊನಾ ವೈರಸ್ ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ಹೇಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ಮಾಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಶಾಲೆ ಪುನರಾರಂಭವನ್ನು ವಿರೋಧಿಸಿ ‘ಪೇರೇಂಟ್ಸ್ ಅಸೋಶಿಯೇಶನ್’ ದೇಶಾದ್ಯಂತ ನಡೆಸಲಾದ ಆನ್‌ಲೈನ್ ಸಮೀಕ್ಷೆಯಲ್ಲಿ ಲಕ್ಷೋಪಲಕ್ಷ ಮಂದಿ ಪೋಷಕರು ಸೋಂಕಿಗೆ ಲಸಿಕೆ ಸಿಗುವವರೆಗೆ ‘ನೋ ಸ್ಕೂಲ್’ ಅಂತ ಹೇಳಿದ್ದಾರೆ ಎನ್ನುವುದು ಅಚ್ಚರಿಯ ವಿಷಯ. ವಿದ್ಯಾರ್ಥಿಗಳ ಹಿತಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಕೂಡ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು, ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಉತ್ತೇಜಿಸುತ್ತಿದೆ. ಹಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಆದರೇ, ಅದಕ್ಕೆ ಬೇಕಾದ ವ್ಯವಸ್ಥೆಗಳಿಂದ ಎಷ್ಟೋ ಹಳ್ಳಿ ಹಳ್ಳಿಯ ವಿದ್ಯಾರ್ಥಿಗಳು ಹೊರಗಿದ್ದಾರೆ ಎನ್ನುವುದರ ಬಗ್ಗೆ ತುರ್ತಾಗಿ ಸರ್ಕಾರ ಗಮನ ನೀಡಬೇಕಾಗಿದೆ. 

ಇತ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮತ್ತು ಪಿಯುಸಿಯ ಬಾಕಿ ಉಳಿದ ಇಂಗ್ಲೀಷ್ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡಿದೆ. ಸೋಂಕಿನ ಬಗ್ಗೆ ವೈದ್ಯಕೀಯ ಕ್ಷೇತ್ರ ಸ್ಪಷ್ಟವಾದ ನಿಲುವಿಗೆ ಬಾರದೆ ಇರುವಾಗಲೇ ಶಿಕ್ಷಣ ಇಲಾಖೆ ಪರೀಕ್ಷೆಗೆ ಮುಂದಾಗಿರುವುದರಿಂದ ಆ ನಿರ್ಧಾರವೂ ಕೂಡ ತೀವ್ರ ಚರ್ಚೆಗೆ ಒಳಗಾಗಿದೆ. ಆದರೂ ಶಿಕ್ಷಣ ಇಲಾಖೆ ಸುರಕ್ಷತೆ ವಹಿಸಿ ಪರೀಕ್ಷೆ ನಡೆಸಿಯೇ ನಡೆಸುತ್ತೇವೆ ಎಂಬ ದೃಢ ನಿರ್ಧಾರವನ್ನು ಬಿಟ್ಟುಕೊಡುತ್ತಿಲ್ಲ. ಶಾಲೆ ಪುನರಾರಂಭಿಸುವುದಕ್ಕೆ ಮತ್ತು ಪರೀಕ್ಷೆ ನಡೆಸುವುದಕ್ಕೆ, ಸಾಮಾಜಿಕ ಹಿತಕ್ಕಾಗಿ, ವಿದ್ಯಾರ್ಥಿಗಳ ಹಿತಕ್ಕಾಗಿ ವಿರೋಧಗಳು ಕೇಳಿ ಬರುತ್ತಿರುವಾಗ ಪರೀಕ್ಷೆ ಎದುರಿಸಲಿರುವ ಎಸ್.ಎಸ್.ಎಲ್.ಸಿ ಸೇರಿ ಪಿಯುಸಿ ವಿದ್ಯಾರ್ಥಿಗಳಲ್ಲಿ ಮತ್ತೆ ಯಾವಾಗ ಶಿಕ್ಷಣ ಇಲಾಖೆ ಪರೀಕ್ಷೆ ಮುಂದೂಡುತ್ತದೋ ಅಥವಾ ಇನ್ನು ಯಾವ ಗೊಂದಲದ ನಿರ್ಣಯ ಕೈಗೊಳ್ಳುತ್ತದೋ ಎಂಬುವುದರ ಬಗ್ಗೆ ಚಿಂತೆ ಕಾಡುತ್ತಿರುವುದಂತೂ ಸುಳ್ಳಲ್ಲ.

ಒಟ್ಟಿನಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಉಲ್ಬಣಿಸುತ್ತಿರುವ ಅನೇಕ ಗೊಂದಲಗಳಿಗೆ ತಾರ್ಕಿಕ ಅಂತ್ಯ ನೀಡಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಸಮಾಧಾನವುಂಟು ಮಾಡುವ ಸೂಕ್ತ ನಿರ್ಧಾರವನ್ನು ಶಿಕ್ಷಣ ಇಲಾಖೆ ಮತ್ತು ಸರ್ಕಾರ ಕೈಗೊಳ್ಳಲಿ ಎನ್ನುವುದೇ ಈ ಲೇಖನದ ಆಶಯ.
-ಶ್ರೀರಾಜ್ ವಕ್ವಾಡಿ 


Tuesday, June 2, 2020

ಸರ್ಕಾರದ ಹೊಣೆಗೇಡಿ ನಿರ್ಧಾರಗಳಿಗೆ ಏನನ್ನಬೇಕು..?!



ದೇಶಕ್ಕೆ ಕೊರೋನಾ ಗಂಡಾಂತರ ತಪ್ಪಿದಂತೆ ಕಾಣುತ್ತಿಲ್ಲ. ಲಾಕ್ಡೌನ್ ಸಡಿಲಿಕೆ ಆದ ಮೇಲೆಯೇ ಸೋಂಕಿತರ ಪಟ್ಟಿ ಉದ್ದಕ್ಕೆ ಬೆಳೆಯುತ್ತಿದೆ. ಈ ನಡುವೆ ರೈಲು, ವಿಮಾನ, ಬಸ್‌ಗಳ ಮೂಲಕ ಕೊರೋನಾ ಸೋಂಕನ್ನು ಆಮದು ರಫ್ತು ಮಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

ಭಾರತದಲ್ಲಿ ಅರ್ಧದಷ್ಟು ಕೊರೋನಾ ಸೋಂಕು ದೃಢಗೊಂಡಿದ್ದು ಲಾಕ್ಡೌನ್ ಸಡಿಲಿಕೆಯಾದ ಮೇಲೆಯೇ ಎನ್ನುವುದು ಒಪ್ಪಲೇ ಬೇಕಾದ ವಿಚಾರ. ಅದನ್ನು ಸ್ವತಃ ಕೇಂದ್ರ ಆರೋಗ್ಯ ಇಲಾಖೆಯೇ ಹೇಳುತ್ತದೆ. ಮತ್ತೊಂದು ಅಚ್ಚರಿ ಹುಟ್ಟಿಸುವ ವಿಷಯವೇನೆಂದರೇ, ದೇಶದಲ್ಲಿ ಲಾಕ್ಡೌನ್ ಘೋಷಿಸುವ ಮುಂಚೆಯೇ ಸುಮಾರು 512 ಮಂದಿಗೆ ಕೊರೋನಾ ಸೋಂಕು ಹರಡಿವೆಯಂತೆ. ಮೊದಲ ಹಂತದ ಲಾಕ್ಡೌನ್ ಅಲ್ಲಿ  10,877 ಕೊರೋನಾ ಸೋಂಕುಗಳು ಪತ್ತೆಯಾಗಿದ್ದ ಭಾರತದಲ್ಲಿ, ನಾಲ್ಕನೇ ಹಂತದ ಲಾಕ್ಡೌನ್ (ಸಡಿಲಿಕೆಯ ಲಾಕ್ಡೌನ್)  ಮುಗಿಯುವ ವೇಳೆಗೆ ಬರೋಬ್ಬರಿ 1 ಲಕ್ಷದ 83 ಸಾವಿರಕ್ಕಿಂತಲೂ ಹೆಚ್ಚು ಸೋಂಕು ಪತ್ತೆಯಾಗಿವೆ. ಪ್ರತಿ ದಿನ ಅತಿ ಹೆಚ್ಚು ಸೋಂಕು ದೃಢಗೊಳ್ಳುತ್ತಿರುವ ಜಗತ್ತಿನ ಇತರೆ ದೇಶಗಳ ಪಟ್ಟಿಯಲ್ಲಿ ಭಾರತ ಈಗ ಮೂರನೇ ಸ್ಥಾನದಲ್ಲಿ ಇದೆ. ಕೊರೋನಾ ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ ಎನ್ನುವುದನ್ನು ತಲೆಕೆಳಗೆ ಮಾಡಿ ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆಲ್ಲಾ ಲಾಕ್ಡೌನ್ ಸಡಿಲಿಕೆಯೇ ಕಾರಣವೆನ್ನುವುದು ಸತ್ಯಾಂಶ.

ಈಗ ದೇಶದಲ್ಲಿ ದಿನವೊಂದಕ್ಕೆ 8000ಕ್ಕೂ ಅಧಿಕ ಸೋಂಕು ದಢಗೊಳ್ಳುತ್ತಿರುವ ಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೋಂಕಿನೊಂದಿಗೆ ಬದುಕಲು ಕಲಿಯಬೇಕು ಎಂಬ ಪಾಠ ಹೇಳಿಕೊಡುತ್ತಿರುವುದು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ತಂದೊಡ್ಡಿದೆ. ದೇಶದಾದ್ಯಂತ ಈಗಾಗಲೇ 200 ರೈಲುಗಳ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇನ್ನೂ ಕೂಡ ವಿದೇಶಗಳಲ್ಲಿರುವ ಭಾರತದ ಮೂಲ ವಾಸಿಗಳಿಗೆ ಲೋಹದ ಹಕ್ಕಿಗಳ ವಿಶೇಷ ಹಾರಾಟಕ್ಕೆ  ಅನುಮತಿ ನೀಡಲಾಗುತ್ತಿದೆ. ಬಸ್‌ಗಳ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಟ್ರಾವೆಲಿಂಗ್ಸ್ನಿಂದ ಸೋಂಕನ್ನು ಸರ್ಕಾರಗಳು ತಮ್ಮ ತಮ್ಮ ರಾಜ್ಯ, ಜಿಲ್ಲೆಗಳಿಗೆ  ಉಚಿತವಾಗಿ ಆಮದು, ರಫ್ತು ಮಾಡಿಕೊಳ್ಳುತ್ತಿವೆಯಾ..? ಎಂಬ ಆತಂಕ ಜನರಲ್ಲಿ ಹೆಚ್ಚಾಗಿದೆ.

ಇತ್ತ, ರಾಜ್ಯ ಸರ್ಕಾರದಲ್ಲಿ ಮಹಾರಾಷ್ಟ್ರದಿಂದ ಬರುವವರನ್ನು ಹೊರತು ಪಡಿಸಿ ಯಾರಿಗೂ ಸರ್ಕಾರಿ ಕ್ವಾರಂಟೈನ್ ಮಾಡಲಾಗುವುದಿಲ್ಲ, ಹೋಮ್ ಕ್ವಾರಂಟೈನ್ ಅಲ್ಲಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ, ಸರ್ಕಾರಿ ಕ್ವಾರಂಟೈನ್ ಕೂಡ ಏಳು ದಿನಗಳಿಗೆ ಇಳಿಸಲಾಗಿದೆ. ಈಗಾಗಲೇ, ಹಲವೆಡೆ ವರದಿಗಳು ಬರುವ ಮುನ್ನವೇ ಏಳುದಿನಗಳ ಸರ್ಕಾರಿ ಕ್ವಾರಂಟೈನ್ ಪೂರೈಸಿದ ಅಂತರಾಜ್ಯ, ಅಂತರಾಷ್ಟ್ರದಿಂದ ಬಂದ ನಾಡಿನ ಮೂಲ ವಾಸಿಗಳನ್ನು ಮನೆಗೆ ಕಳುಹಿಸಿದ ಮರುದಿನ ಸೋಂಕು ದೃಢಗೊಂಡ ಕಾರಣದಿಂದ ಅವರಿರುವ  ಊರು ಕೇರಿಗಳನ್ನು ಸೀಲ್ ಡೌನ್ ಮಾಡಿದ ಸಾಕಷ್ಟು ಉದಾಹರಣೆಗಳೂ ಕಂಡು ಬಂದಿವೆ. ಸ್ಥಳಿಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೀಗೆ, ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಕೂಡ ದಿನಕ್ಕೊಂದು ಯಡವಟ್ಟು ಸೃಷ್ಟಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ನಡುವೆ ಸೋಂಕಿನ ಪತ್ತೆ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲವೇ..? ವರದಿಗಳನ್ನು ಮುಚ್ಚಿ ಹಾಕಲಾಗುತ್ತಿದೆಯೆ..? ರೋಗ ಹರಡುತ್ತಿರುವ ಮೂಲ ಕಾರಣವನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ, ಆರೋಗ್ಯ ಇಲಾಖೆ ವಿಫಲವಾಗಿವೆಯೇ ಎಂಬೆಲ್ಲಾ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡಲಾರಂಭಿಸಿವೆ.

ಈಗ ತನ್ನ ಕೈ ಸುಟ್ಟುಕೊಂಡ ಮೇಲೆ ‘ಲಿವಿಂಗ್ ವಿಥ್ ಕೊರೋನಾ’ ಎಂದು ಹೇಳುತ್ತಿರುವ ಸರ್ಕಾರಕ್ಕೆ ಲಾಕ್ಡೌನ್ ಯಾಕೆ ಘೋಷಿಸುವ ಅಗತ್ಯ ಆರಂಭದಲ್ಲಿತ್ತು..? ಹಸಿವು, ಬಡತನದಲ್ಲಿ ಒಂದಿಷ್ಟು ಮಂದಿ ಹೆಣವಾಗಲಿ ಎಂಬ ಕಾರಣಕ್ಕಾ..? ಆರ್ಥಿಕ ಸಮಸ್ಥಿತಿ ತರುವುದಕ್ಕೆ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಸರ್ಕಾರಕ್ಕೆ ಯಾವ ಘನತೆ ಇದೆ..? ಎಂಬುವುದನ್ನು ಕೇಳುವಂತಾಗಿದೆ. ಕ್ವಾರಂಟೈನ್, ಲಾಕ್ಡೌನ್ ನ ಮೂಲ ಆಶಯವನ್ನೇ ಅಡಿಮೇಲು ಮಾಡಿದ ಸರ್ಕಾರದ ಹೊಣೆಗೇಡಿ ಚಾಣಾಕ್ಷತನಕ್ಕೆ ಏನನ್ನಬೇಕು..?
-ಶ್ರೀರಾಜ್ ವಕ್ವಾಡಿ


Sunday, May 31, 2020

ಶಿಕ್ಷಣ ಇಲಾಖೆಯ ಯಡವಟ್ಟುಗಳು ಮತ್ತು ವಿದ್ಯಾರ್ಥಿಗಳು..!



ಕೊರೋನಾ ವೈರಸ್ ಇಡೀ ವಿಶ್ವಕ್ಕೆ ವಿಶ್ವವನ್ನೇ ಹೈರಾಣಾಗಿಸಿದೆ. ಶಾಲಾ, ಕಾಲೇಜು ಆರಂಭ ಮತ್ತು ಬಾಕಿ ಉಳಿದಿರುವ ಪರೀಕ್ಷೆಗಳ ಬಗ್ಗೆ ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅಕ್ಷರಶಃ ವಿದ್ಯಾರ್ಥಿಗಳ, ಉಪನ್ಯಾಸಕರ ಪಾಲಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈಗಾಗಲೇ ಶೈಕ್ಷಣಿಕ ಪರಿವರ್ತನೆಯ ಬಗ್ಗೆ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಗಮನಕ್ಕೆ ಶಿಕ್ಷಣ ತಜ್ಞರು ಗಮನಕ್ಕೆ ತಂದಿದ್ದಾರೆ. ಆದರೂ ಶಿಕ್ಷಣ ಇಲಾಖೆ ತೆಗೆದುಕೊಳ್ಳುತ್ತಿರುವ ಧಾವಂತದ ನಿರ್ಧಾರಗಳು ವಿದ್ಯಾರ್ಥಿಗಳಿಗೆ ಒತ್ತಡ ಅನ್ನಿಸುತ್ತಿರುವುದಂತೂ ಅಪ್ಪಟ ಸತ್ಯ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಳು ಗೊಂದಲದಿಂದ ಕಾರ್ಯ ನಿರ್ವಹಿಸುತ್ತಿದೆ ಅಂತನ್ನಿಸುತ್ತಿದೆ. ಶೈಕ್ಷಣಿಕ ವಲಯದಲ್ಲಿ ಇದು ಅತಿ ಸಹಜವಾದ ಚರ್ಚೆಗೆ ಒಳಗಾಗಿದೆ ಮತ್ತು ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

80% ಪಾಠ ಆಗಿದ್ದು ಮಾಧ್ಯಮಗಳ ಕ್ಯಾಮೆರಾಕ್ಕೆ ಮಾತ್ರ..!
ಮಾರ್ಚ್ ತಿಂಗಳ ಅಂತ್ಯದಲ್ಲೇ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ ಅಶ್ವಥ್ ನಾರಾಯಣ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಸಿಲೇಬಸ್ ಈಗಾಗಲೇ ಶೇಕಡಾ 80 ರಷ್ಟು ಮುಗಿದಿದೆ ಎಂದು ಹೇಳುತ್ತಿದ್ದರು. ಆದರೇ, ವಾಸ್ತವ ಬೇರೆಯೇ ಆಗಿತ್ತು. ರಾಜ್ಯದ ಉನ್ನತ ಶಿಕ್ಷಣ ಸಚಿವರು ನೀಡುತ್ತಿರುವ ಹೇಳಿಕೆಗಳು ಮಾಧ್ಯಮಗಳ ಕ್ಯಾಮೆರಾಗಳಿಗಾಗಿ ಇತ್ತು ಎನ್ನುವುದು ಆಮೇಲೆ ಬೆಳಕಿಗೆ ಬಂತು. ‘ಯೂನಿವರ್ಸಿಟಿಗಳ ಒತ್ತಡದಿಂದ ಕಾಲೇಜಿನ ಆಡಳಿತ ಸಂಸ್ಥೆಗಳು 80% ಪಾಠ ಮುಗಿದಿದೆ ಅಂತ ಸುಳ್ಳು ಹೇಳುತ್ತಿದೆ. ಇನ್ನೂ ಕೂಡ 50% ಸಿಲೇಬಸ್ ಕಂಪ್ಲೀಟ್ ಆಗಬೇಕಿದೆ’ ಎಂದು ಟಿವಿ ಮಾಧ್ಯಮಗಳಲ್ಲಿ ರಾಜ್ಯಾ ವ್ಯಾಪಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿರುವ ಉದಾಹರಣೆ ನಮ್ಮ ಮುಂದಿದೆ.

ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ
ವಿದ್ಯಾಭ್ಯಾಸದಲ್ಲಿ  ಆಸಕ್ತಿ ಹೊಂದಿದ  ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಹಲವಾರು ವಿದ್ಯಾರ್ಥಿಗಳು ಉಪನ್ಯಾಸಕರ ಸಲಹೆಗಳನ್ನು ವೇದವಾಕ್ಯದಂತೆ ಪರಿಪಾಲಿಸುವ ಮನಸ್ಥಿತಿ ಹೊಂದಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರನ್ನೇ ಅವಲಂಭಿಸಿ ಇರುತ್ತಾರೆ. ಪ್ರತ್ಯಕ್ಷ ಸಲಹೆ, ಮಾರ್ಗದರ್ಶನಕ್ಕಾಗಿ ಹೊಂದಿಕೊಂಡವರಾಗಿರುತ್ತಾರೆ. ಹಾಗಿರುವ ಸಂದರ್ಭದಲ್ಲಿ, ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುವುದು, ಕಾಲೇಜು ಆರಂಭದ ಮತ್ತು ಪರೀಕ್ಷೆಯ ಸಮಯ ನಿಗದಿ ಮಾಡುವುದು, ಮತ್ತೆ ಮುಂದೆ ದೂಡುವುದು, ಮತ್ತೆ ಅದರಲ್ಲಿ ಗೊಂದಲ ಸೃಷ್ಟಿ ಮಾಡುವುದು ನಿರಂತರವಾದಾಗ ವಿದ್ಯಾರ್ಥಿಗಳು ವಿಚಲಿತರಾಗುವುದು ಸಹಜ.



ಆನ್‌ಲೈನ್ ತರಗತಿಗಳು ಹರಕೆ ಬಲಿ ಸಂದಾಯ..!
ಆನ್‌ಲೈನ್ ತರಗತಿಗಳಿಗೆ ಇಂಟರ್‌ನೆಟ್ ಸೇವೆಯ ಲಭ್ಯತೆಯ ನಿಖರತೆ ಇಲ್ಲ. ಸಿಲೇಬಸ್ ಕಂಪ್ಲೀಟ್ ಮಾಡುವ ತರಾತುರಿಯಲ್ಲಿ ಕೆಲವು ಉಪನ್ಯಾಸಕರು ಶಾಸ್ತçಕ್ಕೆ ಹರಕೆ ಬಲಿ ಸಂದಾಯ ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ತಲುಪಿದೆ..? ಅರ್ಥವಾಗಿದೆಯಾ..? ಎಂಬ ಪ್ರಶ್ನೆಗಳು ಗಾಳಿಗೆ ತೂರಿ ಬಿಟ್ಟಂತಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡಲು ಬಯಸಿದ ಯಾವುದೇ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರಾಯೋಗಿಕ ತರಗತಿಗಳು ಮತ್ತು ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳ ಸ್ಥಿತಿ..?
ವಿಜ್ಞಾನ ವಿಷಯಗಳ ಪ್ರಾಯೋಗಿಕ ತರಗತಿಗಳು ಕೆಲವಂಶ ನಿಂತುಹೋಗಿವೆ. ಶಿಕ್ಷಣ ಇಲಾಖೆ ಆನ್‌ಲೈನ್ ಅಲ್ಲಿ ಮಾಡಿ ಪೂರೈಸಿ ಎನ್ನುತ್ತಿದೆ. ತರಗತಿ ಕೋಣೆಯಲ್ಲಿ ಕುಳಿತು ಪಾಠ ಕೇಳುವಾಗಲೇ ಅರ್ಥೈಸಿಕೊಳ್ಳಲಾಗದ ವಿದ್ಯಾರ್ಥಿಗಳ ಸ್ಥಿತಿ ಏನ..?
ಇನ್ನು, ಅಂತಿಮ ವರ್ಷದ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲಾ ವಿಷಯಗಳ ವಿದ್ಯಾರ್ಥಿಗಳಿಗೆ ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳು ಅರ್ಧರ್ಧಕ್ಕೆ ನಿಂತು ಹೋಗಿವೆ. ಅವುಗಳ ಸ್ಥಿತಿಗತಿಗಳು ಏನು..? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಶಿಕ್ಷಣ ಇಲಾಖೆಗೆ ಏನು ಸಾಧ್ಯ..?
ಅಂತಿಮ ಘಟ್ಟದಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಭವಿಷ್ಯವನ್ನು ಖಾಲಿ ಖಾಲಿಯಾಗಿ ಕಾಣಿಸುವಂತೆ ಮಾಡಿದೆ ಎನ್ನುವುದು ಪದಶಃ ಹೌದು. ಈ ಹಂತದಲ್ಲಿರುವ ಎಷ್ಟೋ ವಿದ್ಯಾರ್ಥಿಗಳು ಈಗ ಉದ್ಯೋಗ ಕಂಡುಕೊಳ್ಳುವುದಕ್ಕೆ ತುದಿಗಾಲಲ್ಲಿ ಇದ್ದಾರೆ. ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಜಾಬ್ ವೇಕನ್ಸಿಗಳನ್ನು ನೋಡಿಕೊಂಡು ಭವಿಷ್ಯ ಕಂಡುಕೊಳ್ಳುತ್ತಿದ್ದರು. ಆದರೇ, ಈ ಕೊರೋನಾ ವೈರಸ್‌ನ ಕಾರಣವಾಗಿ ಎಲ್ಲವೂ ಅಡಿಮೇಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇನ್ನೂ ಸಂಪೂರ್ಣವಾಗಿ ಲಾಕ್ಡೌನ್ ತೆರವು ಮಾಡುವುದಕ್ಕೆ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿ, ದಿನೇ ದಿನೇ ಕೊರೋನಾ ಸೋಂಕು ದೃಢಗೊಂಡವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಅತಂತ್ರ ಸ್ಥಿತಿಯಲ್ಲಿಯೂ ಶಿಕ್ಷಣ ಇಲಾಖೆ, ಬರುವ ತಿಂಗಳಲ್ಲಿ ಪರೀಕ್ಷೆ ಮಾಡುತ್ತೇವೆ ಅಂತ ಹೇಳುತ್ತಾ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಕೊಲೆ ಮಾಡಿದಷ್ಟೇ ಅಪರಾಧ ಎನ್ನುವುದರಲ್ಲಿ ಏನೂ ತಪ್ಪಿಲ್ಲ.

ಒಂದೇ ಆ ಎಲ್ಲಾ ವಿದ್ಯಾರ್ಥಿಗಳ ಈ ಹಿಂದಿನ ಪರೀಕ್ಷೆಗಳಲ್ಲಿನ ಕಾರ್ಯಕ್ಷಮತೆ ನೋಡಿ ಉತ್ತೇಜಿಸಬಹುದು. ಅಥವಾ ಒಂದು ವೇಳೆ ಪರೀಕ್ಷೆ ನಡೆಸಲೇ ಬೇಕು ಅಂತಾದರೇ ಪರೀಕ್ಷೆಗಳ ಮಾದರಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ. ಅಥವಾ ಓಪನ್ ಬುಕ್ ಎಕ್ಸಾಂ ಮಾಡುವುದು ಉತ್ತಮ. ಇದು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಏನೋ ಒಂದು ರೀತಿಯಲ್ಲಿ ಉತ್ತೇಜಿಸಿದಂತಾಗುತ್ತದೆ.



 ಸದ್ಯಕ್ಕೆ ಜುಲೈ ತನಕ ಶಾಲಾ ಕಾಲೇಜು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಟ್ಟಿನಲ್ಲಿ ಭವಿಷ್ಯದ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಇಲಾಖೆ ಇನ್ನು ಮುಂದಾದರೂ ಯಡವಟ್ಟು ಸೃಷ್ಟಿಸದೇ, ಸಮಾಧಾನ ಉಂಟು ಮಾಡುವ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ.
-ಶ್ರೀರಾಜ್ ವಕ್ವಾಡಿ