ದೇಶಕ್ಕೆ ಕೊರೋನಾ ಗಂಡಾಂತರ ತಪ್ಪಿದಂತೆ ಕಾಣುತ್ತಿಲ್ಲ. ಲಾಕ್ಡೌನ್ ಸಡಿಲಿಕೆ ಆದ ಮೇಲೆಯೇ ಸೋಂಕಿತರ ಪಟ್ಟಿ ಉದ್ದಕ್ಕೆ ಬೆಳೆಯುತ್ತಿದೆ. ಈ ನಡುವೆ ರೈಲು, ವಿಮಾನ, ಬಸ್‌ಗಳ ಮೂಲಕ ಕೊರೋನಾ ಸೋಂಕನ್ನು ಆಮದು ರಫ್ತು ಮಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.
ಭಾರತದಲ್ಲಿ ಅರ್ಧದಷ್ಟು ಕೊರೋನಾ ಸೋಂಕು ದೃಢಗೊಂಡಿದ್ದು ಲಾಕ್ಡೌನ್ ಸಡಿಲಿಕೆಯಾದ ಮೇಲೆಯೇ ಎನ್ನುವುದು ಒಪ್ಪಲೇ ಬೇಕಾದ ವಿಚಾರ. ಅದನ್ನು ಸ್ವತಃ ಕೇಂದ್ರ ಆರೋಗ್ಯ ಇಲಾಖೆಯೇ ಹೇಳುತ್ತದೆ. ಮತ್ತೊಂದು ಅಚ್ಚರಿ ಹುಟ್ಟಿಸುವ ವಿಷಯವೇನೆಂದರೇ, ದೇಶದಲ್ಲಿ ಲಾಕ್ಡೌನ್ ಘೋಷಿಸುವ ಮುಂಚೆಯೇ ಸುಮಾರು 512 ಮಂದಿಗೆ ಕೊರೋನಾ ಸೋಂಕು ಹರಡಿವೆಯಂತೆ. ಮೊದಲ ಹಂತದ ಲಾಕ್ಡೌನ್ ಅಲ್ಲಿ 10,877 ಕೊರೋನಾ ಸೋಂಕುಗಳು ಪತ್ತೆಯಾಗಿದ್ದ ಭಾರತದಲ್ಲಿ, ನಾಲ್ಕನೇ ಹಂತದ ಲಾಕ್ಡೌನ್ (ಸಡಿಲಿಕೆಯ ಲಾಕ್ಡೌನ್) ಮುಗಿಯುವ ವೇಳೆಗೆ ಬರೋಬ್ಬರಿ 1 ಲಕ್ಷದ 83 ಸಾವಿರಕ್ಕಿಂತಲೂ ಹೆಚ್ಚು ಸೋಂಕು ಪತ್ತೆಯಾಗಿವೆ. ಪ್ರತಿ ದಿನ ಅತಿ ಹೆಚ್ಚು ಸೋಂಕು ದೃಢಗೊಳ್ಳುತ್ತಿರುವ ಜಗತ್ತಿನ ಇತರೆ ದೇಶಗಳ ಪಟ್ಟಿಯಲ್ಲಿ ಭಾರತ ಈಗ ಮೂರನೇ ಸ್ಥಾನದಲ್ಲಿ ಇದೆ. ಕೊರೋನಾ ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ ಎನ್ನುವುದನ್ನು ತಲೆಕೆಳಗೆ ಮಾಡಿ ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆಲ್ಲಾ ಲಾಕ್ಡೌನ್ ಸಡಿಲಿಕೆಯೇ ಕಾರಣವೆನ್ನುವುದು ಸತ್ಯಾಂಶ.
ಈಗ ದೇಶದಲ್ಲಿ ದಿನವೊಂದಕ್ಕೆ 8000ಕ್ಕೂ ಅಧಿಕ ಸೋಂಕು ದಢಗೊಳ್ಳುತ್ತಿರುವ ಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೋಂಕಿನೊಂದಿಗೆ ಬದುಕಲು ಕಲಿಯಬೇಕು ಎಂಬ ಪಾಠ ಹೇಳಿಕೊಡುತ್ತಿರುವುದು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ತಂದೊಡ್ಡಿದೆ. ದೇಶದಾದ್ಯಂತ ಈಗಾಗಲೇ 200 ರೈಲುಗಳ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇನ್ನೂ ಕೂಡ ವಿದೇಶಗಳಲ್ಲಿರುವ ಭಾರತದ ಮೂಲ ವಾಸಿಗಳಿಗೆ ಲೋಹದ ಹಕ್ಕಿಗಳ ವಿಶೇಷ ಹಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಬಸ್‌ಗಳ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಟ್ರಾವೆಲಿಂಗ್ಸ್ನಿಂದ ಸೋಂಕನ್ನು ಸರ್ಕಾರಗಳು ತಮ್ಮ ತಮ್ಮ ರಾಜ್ಯ, ಜಿಲ್ಲೆಗಳಿಗೆ ಉಚಿತವಾಗಿ ಆಮದು, ರಫ್ತು ಮಾಡಿಕೊಳ್ಳುತ್ತಿವೆಯಾ..? ಎಂಬ ಆತಂಕ ಜನರಲ್ಲಿ ಹೆಚ್ಚಾಗಿದೆ.
ಇತ್ತ, ರಾಜ್ಯ ಸರ್ಕಾರದಲ್ಲಿ ಮಹಾರಾಷ್ಟ್ರದಿಂದ ಬರುವವರನ್ನು ಹೊರತು ಪಡಿಸಿ ಯಾರಿಗೂ ಸರ್ಕಾರಿ ಕ್ವಾರಂಟೈನ್ ಮಾಡಲಾಗುವುದಿಲ್ಲ, ಹೋಮ್ ಕ್ವಾರಂಟೈನ್ ಅಲ್ಲಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ, ಸರ್ಕಾರಿ ಕ್ವಾರಂಟೈನ್ ಕೂಡ ಏಳು ದಿನಗಳಿಗೆ ಇಳಿಸಲಾಗಿದೆ. ಈಗಾಗಲೇ, ಹಲವೆಡೆ ವರದಿಗಳು ಬರುವ ಮುನ್ನವೇ ಏಳುದಿನಗಳ ಸರ್ಕಾರಿ ಕ್ವಾರಂಟೈನ್ ಪೂರೈಸಿದ ಅಂತರಾಜ್ಯ, ಅಂತರಾಷ್ಟ್ರದಿಂದ ಬಂದ ನಾಡಿನ ಮೂಲ ವಾಸಿಗಳನ್ನು ಮನೆಗೆ ಕಳುಹಿಸಿದ ಮರುದಿನ ಸೋಂಕು ದೃಢಗೊಂಡ ಕಾರಣದಿಂದ ಅವರಿರುವ ಊರು ಕೇರಿಗಳನ್ನು ಸೀಲ್ ಡೌನ್ ಮಾಡಿದ ಸಾಕಷ್ಟು ಉದಾಹರಣೆಗಳೂ ಕಂಡು ಬಂದಿವೆ. ಸ್ಥಳಿಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೀಗೆ, ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಕೂಡ ದಿನಕ್ಕೊಂದು ಯಡವಟ್ಟು ಸೃಷ್ಟಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.
ಈ ನಡುವೆ ಸೋಂಕಿನ ಪತ್ತೆ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲವೇ..? ವರದಿಗಳನ್ನು ಮುಚ್ಚಿ ಹಾಕಲಾಗುತ್ತಿದೆಯೆ..? ರೋಗ ಹರಡುತ್ತಿರುವ ಮೂಲ ಕಾರಣವನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ, ಆರೋಗ್ಯ ಇಲಾಖೆ ವಿಫಲವಾಗಿವೆಯೇ ಎಂಬೆಲ್ಲಾ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡಲಾರಂಭಿಸಿವೆ.
ಈಗ ತನ್ನ ಕೈ ಸುಟ್ಟುಕೊಂಡ ಮೇಲೆ ‘ಲಿವಿಂಗ್ ವಿಥ್ ಕೊರೋನಾ’ ಎಂದು ಹೇಳುತ್ತಿರುವ ಸರ್ಕಾರಕ್ಕೆ ಲಾಕ್ಡೌನ್ ಯಾಕೆ ಘೋಷಿಸುವ ಅಗತ್ಯ ಆರಂಭದಲ್ಲಿತ್ತು..? ಹಸಿವು, ಬಡತನದಲ್ಲಿ ಒಂದಿಷ್ಟು ಮಂದಿ ಹೆಣವಾಗಲಿ ಎಂಬ ಕಾರಣಕ್ಕಾ..? ಆರ್ಥಿಕ ಸಮಸ್ಥಿತಿ ತರುವುದಕ್ಕೆ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಸರ್ಕಾರಕ್ಕೆ ಯಾವ ಘನತೆ ಇದೆ..? ಎಂಬುವುದನ್ನು ಕೇಳುವಂತಾಗಿದೆ. ಕ್ವಾರಂಟೈನ್, ಲಾಕ್ಡೌನ್ ನ ಮೂಲ ಆಶಯವನ್ನೇ ಅಡಿಮೇಲು ಮಾಡಿದ ಸರ್ಕಾರದ ಹೊಣೆಗೇಡಿ ಚಾಣಾಕ್ಷತನಕ್ಕೆ ಏನನ್ನಬೇಕು..?
-ಶ್ರೀರಾಜ್ ವಕ್ವಾಡಿ

No comments:
Post a Comment