ಎಲ್ಲವೂ ನಿರೀಕ್ಷಿಸಿದಂತೆ ಆಗಿದ್ದರೇ, ಇಂದಿಗೆ ದೇಶದಾದ್ಯಂತ ಲಾಕ್ಡೌನ್ ತೆರವುಗೊಳ್ಳಬೇಕಿತ್ತು. ಆದರೇ ಈಗ ಐತಿಹಾಸಿಕ 21 ದಿನಗಳ ಲಾಕ್ಡೌನ್ ವಿಸ್ತರಣೆಗೊಂಡು ಎರಡನೇ ಹಂತದ ಲಾಕ್ಡೌನ್ ಹೇಗಿರಲಿದೆ ಎಂಬುವುದಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆಯೇ ಏಪ್ರಿಲ್ ಅಂತ್ಯದೊರೆಗೂ ಲಾಕ್ಡೌನ್ ಮುಂದುವರಿಯುತ್ತದೆ ಎಂಬುವುದು ಬಹುತೇಕ ಖಚಿತಗೊಂಡಿತ್ತು. ಆದರೇ, ಈಗ ಮೇ 3ರ ತನಕ ಲಾಕ್ಡೌನ್ ವಿಸ್ತರಣೆಗೊಂಡಿದೆ.
‘ಜಾನ್ ಭೀ ಜಹನ್ ಭೀ’(ಜನರೂ ಮುಖ್ಯ, ಆರ್ಥಿಕತೆಯೂ ಮುಖ್ಯ) ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾಡಿದ ವಿಡೀಯೋ ಕಾನ್ಫರೆನ್ಸ್ನಲ್ಲಿ ಪ್ರಧಾನ ಮಂತ್ರಿ ಹೇಳಿದ್ದರು. ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮ ಸಡಲಿಕೆ ಮಾಡಬಹುದು, ವಲಯಗಳನ್ನಾಗಿ ಮಾಡಿ ನಿಯಮ ಸಡಲಿಕೆ ನೀಡಬಹುದು, ಉತ್ಪಾದನಾ ಕ್ಷೇತ್ರಗಳಿಗೆ ವಿನಾಯಿತಿ ದೊರಕಬಹುದೆಂಬ ನಿರೀಕ್ಷೆಗಳಿದ್ದವು, ಎರಡನೇ ಹಂತದ ಲಾಕ್ಡೌನ್‌ಲ್ಲಿ ಕಟ್ಟುನಿಟ್ಟಿನ ಸುರಕ್ಷಾ ನಿಯಮಗಳೊಂದಿಗೆ ಎಲೆಕ್ಟ್ರಾನಿಕ್, ಆಟೋಮೊಬೈಲ್ ಕ್ಷೇತ್ರಗಳನ್ನು ಒಳಗೊಂಡು ಕೆಲವು ಕ್ಷೇತ್ರಗಳಿಗೆ ಸಡಲಿಕೆ ನೀಡಬಹುದೆಂಬ ನಿರೀಕ್ಷೆಗಳಿದ್ದವು. ಆದರೇ, ಈಗ ಅವೆಲ್ಲದಕ್ಕೂ ಭ್ರಮನಿರಸನವುಂಟಾಗಿದೆ.
ಏಪ್ರಿಲ್ 20ರ ನಂತರ ಪರಿಸ್ಥಿತಿ ಗಮನಿಸಿ ಸರ್ಕಾರ ಸೂಕ್ತ ನಿಯಮಗಳನ್ನು ಕೈಗೊಳ್ಳಲಿದೆ. ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ. ಬಡವರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಮತ್ತು ಈ ಎರಡನೇ ಹಂತದ ಲಾಕ್ಡೌನ್ ಹೇಗೆ ಇರಬೇಕು ಎಂಬುವುದಕ್ಕೆ ಸರ್ಕಾರ ಮಾರ್ಗಸೂಚಿಯನ್ನು ನಾಳೆ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಭಾಷಣದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಎನ್ನುವಲ್ಲಿಗೆ, ಆರೋಗ್ಯದ ಸ್ಥಿತಿಗಿಂತ, ಆರ್ಥಿಕ ಸ್ಥಿತಿ ಮುಖ್ಯವಲ್ಲ ಎನ್ನುವ ದೃಷ್ಟಿಯಲ್ಲಿ ದೇಶದ ಆರೋಗ್ಯದ ಸುಧಾರಣೆಗೆ ಪ್ರಧಾನಿ ಹೆಚ್ಚು ಒತ್ತು ನೀಡಿದಂತೆ ಕಾಣುತ್ತಿದೆ.
ಕೋವಿಡ್ 19ಗೆ ಸಂಬಂಧಿಸಿ ಪ್ರಧಾನಿ ಮಾಡಿದ 4ನೇ ಭಾಷಣದ ಮುಖ್ಯಾಂಶಗಳು
•
ಕೊರೊನಾ ವಿರುದ್ಧ ಭಾರತದ ಹೋರಾಟ ಅದ್ಭುತವಾಗಿ ನಡೆದಿದೆ.
•
ಜನರ ತ್ಯಾಗದಿಂದಾಗಿ ದೇಶ ಸುರಕ್ಷಿತವಾಗಿದೆ.
•
ಕೊರೊನಾ ಹಿನ್ನೆಲೆಯಲ್ಲಿ ಎಲ್ಲರ ತಾಳ್ಮೆ ಮೆಚ್ಚುವಂತದ್ದು.
•
ಇಂದು ಅಂಬೆಡ್ಕರ್ ಜಯಂತಿ. ದೇಶದ ಬಗ್ಗೆ ನಾವು ಮಾಡುವ ಸಂಕಲ್ಪವೇ ನಿಜಕ್ಕೂ ಅಂಬೆಡ್ಕರ್ ಅವರಿಗೆ ಸಲ್ಲುವ ಶ್ರದ್ಧಾಂಜಲಿ.
•
ಜನ ನಿಯಮ ಪಾಲಿಸಿದ ರೀತಿ ಅನನ್ಯ.
•
ಈಗ ವಿಶ್ವವೇ ಸಂಕಷ್ಟದಲ್ಲಿದೆ. ಸಂಕಷ್ಟದ ಸ್ಥಿತಿಯಲ್ಲಿ ಯಾವ ದೇಶಗಳಿಗೂ ಭಾರತವನ್ನು ಹೋಲಿಸಬಾರದು.
•
ಬಲಿಷ್ಠ ರಾಷ್ಟ್ರಗಳ ಹೋಲಿಕೆಯಲ್ಲಿ ಭಾರತ ಒಳ್ಳೆಯ ಸ್ಥಾನದಲ್ಲಿದೆ. ಯಾವುದೇ ಹೋಲಿಕೆ ಮಾಡಬಾರದು. ಮತ್ತು ಸತ್ಯಗಳನ್ನು ತಳ್ಳಿ ಹಾಕಬಾರದು.
•
ಕೊರೊನಾ ಪೀಡಿತ ದೇಶಗಳಿಂದ ಬಂದವರನ್ನು ಮುತುವರ್ಜಿಯಿಂದ ಪರೀಕ್ಷಿಸಿದ್ದೇವೆ.
•
ಕ್ವಾರೆಂಟೈನ್‌ಲ್ಲಿ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ.
•
ತ್ವರಿತ ನಿರ್ಣಯಗಳನ್ನು ಕೈಗೊಳ್ಳದಿದ್ದರೇ, ಭಾರತದ ಇಂದಿನ ಸ್ಥಿತಿಯನ್ನು ಊಹಿಸಿಕೊಳ್ಳಲಾಗುತ್ತಿರಲಿಲ್ಲ.
•
ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಒಳಿತಿಗಾಗಿ, ಮೇ 3ರ ತನಕ ಲಾಕ್ಡೌನ್ ವಿಸ್ತರಿಸುತ್ತಿದ್ದೇವೆ.
•
ಈ ಸಂದರ್ಭ ಸಾಮಾಜಿಕ ಅಂತರ ಅತ್ಯಂತ ಮುಖ್ಯ.
•
ಬಹುತೇಕ ಎಲ್ಲಾ ರಾಜ್ಯಗಳಿಂದಲೂ ಲಾಕ್ಡೌನ್ ಮುಂದುವರಿಕೆಗೆ ಬೆಂಬಲ ದೊರಕಿದೆ.
•
ಮೇ 3ರ ತನಕ ಕಠೀಣ ಕ್ರಮ ಕೈಗೊಳ್ಳಲಾಗುತ್ತದೆ.
•
ಹಾಟ್‌ಸ್ಪಾಟ್‌ಗಳಲ್ಲಿ ಎಚ್ಚರಿಕೆಯ ಕಣ್ಣು ಅಗತ್ಯ.
•
ಕೊರೊನಾದಿಂದಾಗುತ್ತಿರುವ ಪ್ರತಿ ಸಾವು ಸರ್ಕಾರವನ್ನು ಮತ್ತಷ್ಟು ಚಿಂತೆಗೊಳಪಡಿಸುತ್ತಿದೆ.
•
ಪ್ರತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಎಚ್ಚರಿಕೆ ವಹಿಸಲಾಗುತ್ತದೆ.
•
ಸರ್ಕಾರದಿಂದ ಈ ಬಗ್ಗೆ ಸಂಪೂರ್ಣ ಮಾರ್ಗಸೂಚಿಗಳನ್ನು ನಾಳೆ ನೀಡುತ್ತದೆ.
•
ಬಡವರ ತೊಂದರೆಗಳನ್ನು ನಿವಾರಿಸುವುದೇ ನನ್ನ ಆಧ್ಯತೆ.
•
ಏಪ್ರಿಲ್ 20ರ ತನಕ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ. ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳಗಾಗುತ್ತದೆ.
•
ಬಡವರ ಜೀವನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶೀಘ್ರವಾಗಿ ಮುಂದಿನ ಕ್ರಮಕೈಗೊಳ್ಳುತ್ತದೆ.
•
ನಮ್ಮಲ್ಲಿ ಮೂಲ ಸೌಕರ್ಯ ಕಡಿಮೆಯಿರಬಹುದು. ಮಾನವ ಕಲ್ಯಾಣಕ್ಕಾಗಿ, ವಿಶ್ವ ಕಲ್ಯಾಣಕ್ಕಾಗಿ ಮುಂದೆ ಬನ್ನಿ.
•
ದೇಶದಲ್ಲಿ ಸದ್ಯಕ್ಕೆ 600ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗಿದೆ.
•
ಆರೋಗ್ಯ ಸೇತು ಮೊಬೈಲ್ ಆ್ಯಪ್ ಅಳವಡಿಸಿಕೊಳ್ಳಿ.
•
ಹಿರಿಯರ ಬಗ್ಗೆ, ಅನಾರೋಗ್ಯದಿಂದ ಬಳಲುತ್ತಿರುವವರ ಬಗ್ಗೆ ಕಾಳಜಿ ವಹಿಸಿ.
•
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
• ಕಡ್ಡಾಯವಾಗಿ ಮಾಸ್ಕ್ ಧರಿಸಿ.
•
ವೈದ್ಯರು, ನರ್ಸ್, ಪೋಲೀಸರಿಗೆ ಗೌರವ ನೀಡಿ.
•
ಬಡವರಿಗೆ ನೆರವಾಗಿ.
ಒಟ್ಟಿನಲ್ಲಿ, ನಿರೀಕ್ಷೆಗಳನ್ನು ಮೀರಿ ದೇಶದಲ್ಲಿ ಈಗ ಲಾಕ್ಡೌನ್ ಮುಂದುವರಿದಿದೆ. ದೇಶದಲ್ಲಿ ದಿನನಿತ್ಯ ಲಾಕ್ಡೌನ್‌ನ ಪರಿಣಾಮದಿಂದಾಗಿ ಸುಮಾರು 35000 ಕೋಟಿ ನಷ್ಟವಾಗುತ್ತಿದೆ ಎಂದು ಅಕ್ಯುಟ್ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆ ಅಂದಾಜಿಸಿದೆ. ಎನ್ನುವಲ್ಲಿಗೆ 21 ದಿನಗಳಲ್ಲಿ ಬರೋಬ್ಬರಿ 7.35 ಲಕ್ಷ ಕೋಟಿ ರೂಪಾಯಿನಷ್ಟು ನಷ್ಟವಾಗಿದೆ. ಈಗ ಮತ್ತೆ ದೇಶದಾದ್ಯಂತ ಲಾಕ್ಡೌನ್ ಮುಂದುವರಿದಿದೆ. ದೇಶ ಇನ್ನಷ್ಟು ಆರ್ಥಿಕ ಸ್ಥಿತಿಯಲ್ಲಿ ಕುಗ್ಗುವುದು ಖಚಿತ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
--------------------------------
-ಶ್ರೀರಾಜ್ ವಕ್ವಾಡಿ