Thursday, April 9, 2020

ಮಕ್ಕಳಿಗೆ ಕೋರೋನಾ ನೀಡಿದೆ ಬಂಪರ್ ಕೊಡುಗೆ | ಮಕ್ಕಳ ದನಿಯಾಗಿ ಇದೆ ‘ಮಕ್ಕಳ ಸಾಹಿತ್ಯ’ | ಓದಿಗೆ ಇದು ಪ್ರೈಮ್ ಟೈಮ್..!


ಒಂದು ಸಾಹಿತ್ಯ ಕೃತಿಯಾಗಿ ಮಾತ್ರವಲ್ಲದೇ ಅತ್ಯಂತ ಪ್ರಭಾವಶಾಲಿಯಾಗಿ ಮನೋರಂಜನೆಯನ್ನು ಮತ್ತು ಸಾಮಾಜಿಕ ಪರಿವರ್ತನೆಗಳೆರಡನ್ನೂ ಏಕಕಾಲದಲ್ಲಿ ಸಾಧಿಸಬಲ್ಲ ಅದ್ಭುತ ಶಕ್ತಿಯನ್ನು ಮಕ್ಕಳ ಸಾಹಿತ್ಯ ಹೊಂದಿದೆಯೆಂಬ ಸತ್ಯವನ್ನು ನಾವೀಗಾಗಲೇ ಮನಗಂಡಿದ್ದೇವೆ. ಉಗಮದಿಂದ ತೊಡಗಿ ಇಲ್ಲಿಯ ತನಕವೂ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿ, ಹಲವು ಪ್ರಕಾರಗಳಿಗೆ ಹೊಂದಿ ಬೆಳೆಯುತ್ತಾ ಬಂದಿರುವ ಸಾಹಿತ್ಯವೇ ಮಕ್ಕಳ ಸಾಹಿತ್ಯ.
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹಾಗೂ ಸಹಜ ಪ್ರತಿಭೆಗಳು ಸುಪ್ತವಾಗಿ ಅಡಗಿರುತ್ತವೆ. ಹೊಸದನ್ನು ಅರಿತುಕೊಳ್ಳುವ ಹುಮ್ಮಸ್ಸು, ರಹಸ್ಯಗಳನ್ನು ಪ್ರಶ್ನೆಗಳ ಮೂಲಕ ಕೆದುಕುವ ಕುತೂಹಲ ಹಾಗೂ ಕಲಿಯುವ ಅದಮ್ಯ ತುಡಿತಗಳು ಮಕ್ಕಳಲ್ಲಿ ಇರುತ್ತದೆ. ಈ ಪ್ರಕಾರದ ಸಾಹಿತ್ಯಗಳ ಮೂಲಕ ಸೂಕ್ತ ಅವಕಾಶಗಳನ್ನು, ಹೊಸತನಗಳನ್ನು ಮಕ್ಕಳಿಗೆ ನೀಡಿದಾಗ ಸಾಹಿತ್ಯಾಸಕ್ತಿ ತಾನಾಗಿಯೇ ಹೊರಬರುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಮಕ್ಕಳಿಗೆ ಸಾಹಿತ್ಯದ ಪಾತ್ರವೇನೆಂಬುವುದು ತಿಳಿಯುತ್ತದೆ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಬಹಳ ಕಾಲದಿಂದಲೂ ಇದ್ದಿತ್ತಾದರೂ ಅದಕ್ಕೆ ಸ್ಪಷ್ಟ ರೂಪ ಕಂಡುಕೊಂಡಿದ್ದು ಆಧುನಿಕ ಶಿಕ್ಷಣದಲ್ಲಿ ಮತ್ತು ನವೋದಯ ಸಾಹಿತ್ಯ ಪ್ರಕಾರ ಆರಂಭವಾದ ಸಂದರ್ಭದಲ್ಲಿ ಎನ್ನಬಹುದು. ಜಾನಪದ ಸಾಹಿತ್ಯದಿಂದಲೇ ಮಕ್ಕಳ ಸಾಹಿತ್ಯಗಳು ಬೆಳಕಿಗೆ ಬಂದವು ಎನ್ನುವುದನ್ನು ಅಜ್ಜಿ ಹೇಳುತ್ತಿದ್ದ ಆಶುಕಥೆಗಳು, ಅಮ್ಮಂದಿರ ಲಾಲಿ ಹಾಡುಗಳು, ಒಗಟುಗಳು, ಗಾದೆಮಾತುಗಳು, ಪಂಚತಂತ್ರ ಕಥೆಗಳ ಮೂಲಕ ಕಾಣಬಹುದು. ಆಧುನಿಕ ದಿನಮಾನಗಳಲ್ಲಿ ಮುದ್ರಣ ಸಾಮರ್ಥ್ಯ ಮತ್ತು ಅಡಕ ಮುದ್ರಣಗಳ ಮೂಲಕ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು. ಹಾಗಾಗಿ ಕವಿತೆಗಳು, ಸಣ್ಣ ಕಥೆಗಳು, ನಾಟಕ, ವಿಜ್ಞಾನ ಬರಹಗಳು ಹೀಗೆ ಅನೇಕ ಪ್ರಕಾರಗಳು ಮಕ್ಕಳ ಸಾಹಿತ್ಯದಲ್ಲಿ ಬಂದವು.
ಜಾನಪದ ಪರಂಪರೆಯ ‘ಗೋವಿನ ಹಾಡು’, ಹದಿನೈದನೇ ಶತಮಾನದಲ್ಲಿ ಷಡಕ್ಷರಿಯ ‘ತಿರುಕನ ಕನಸು’, ಹದಿನಾರನೇ ಶತಮಾನದ ಸಂದರ್ಭದಲ್ಲಿ ಆಂಗ್ಲ ಸಾಹಿತ್ಯಗಳ ತರ್ಜುಮೆಗಳು ಮಕ್ಕಳ ಸಾಹಿತ್ಯವನ್ನು ಬೆಳೆಸಿದವು ಎಂದರೆ ತಪ್ಪಾಗಲಾರದು. ಹೀಗೆ ಹಂತಹಂತವಾಗಿ ಮಕ್ಕಳ ಸಾಹಿತ್ಯ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಸಾಹಿತ್ಯದಲ್ಲಿ ಅದರಲ್ಲೂ ಕಾವ್ಯ ಸಾಹಿತ್ಯದಲ್ಲಿ ಬಹಳ ಪ್ರಯೋಗವನ್ನು ಮಾಡಲಾಯಿತು. ಅವುಗಳು ಮಕ್ಕಳ ಅಭಿರುಚಿಗಳನ್ನು ಇಮ್ಮಡಿಗೊಳಿಸಿದವು.

‘ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವ
ಹರಿ ಹರಿ ಗೋವು ನಾನು’

 ಇಂತಹ ಸುಲಭ ಗ್ರಾಹ್ಯ ಆದರ್ಶ ಮೌಲ್ಯಗಳನ್ನು ಹೊಂದಿರುವ ಸಾಹಿತ್ಯ ಪ್ರಕಾರಗಳನ್ನು ಎಮ್. ಎಸ್. ಪುಟ್ಟಣ್ಣನವರು, ಎಸ್. ಜಿ ನರಸಿಂಹಾಚಾರ್ಯರು ಶಾಂತಕವಿಗಳು ಮುಂತಾದವರು ಪಠ್ಯ ಪುಸ್ತಕಗಳಾಗಿ ರಚಿಸಿ ಸಾಹಿತ್ಯದ ಕಡೆ ಮಕ್ಕಳಿಗೆ ಒಲವು ಮೂಡಿಸುವಂತೆ ಮಾಡಿದರು. ಅನಂತರದಲ್ಲಿ ಪಂಜೆ ಮಂಗೇಶರಾಯರು ಮಕ್ಕಳ ಸೂಕ್ಷ್ಮ ಮನಸ್ಸಿನ ಸಂವೇದನೆಯನ್ನು ಅರ್ಥೈಸಿಕೊಂಡು ಸರಳ ಸುಂದರವಾದ ಮಕ್ಕಳನ್ನು ಕುಣಿಸಿ, ತಣಿಸಬಲ್ಲ ಗೀತೆಗಳನ್ನು ರಚಿಸಿದರು. ಸಾಹಿತ್ಯ ಕ್ಷೇತ್ರ ಅವರನ್ನು ‘ಶಿಶು ಸಾಹಿತ್ಯದ ಜನಕ’ರೆಂದೇ ಗುರುತಿಸಿತು.

ಮೂಡುವನು ರವಿ ಮೂಡುವನು
ಕತ್ತಲೊಳಗೆ ಜಗಳಾಡುವನು
ಮೂಡಣ ರಂಗಸ್ಥಳದಲ್ಲಿ ನೆತ್ತರು ಮಾಡುವನು
ಕುಣಿದಾಡುವನು’...

ಇಂತಹ ಕವಿತೆಗಳಲ್ಲಿನ ಲಯ, ಶ್ರಾವ್ಯ ಗುಣಗಳಿಂದ ಮಕ್ಕಳನ್ನು ಮತ್ತಷ್ಟು ಸಾಹಿತ್ಯಾಸಕ್ತಿಯತ್ತ ಬೆಳೆಸುವುದಕ್ಕೆ ಉತ್ತೇಜನ ನೀಡಿತು.
ಜಿ ಪಿ ರಾಜರತ್ನಂ ರವರ ‘ಬಣ್ಣದ ತಗಡಿನ ತುತ್ತೂರಿ’, ಡಾ, ಕೋಟ ಶಿವರಾಮ ಕಾರಂತರು ‘ಬಾಲವನ’ದ ಮೂಲಕ ಮಕ್ಕಳ ಸಾಹಿತ್ಯಕ್ಕೆ ಮಾಡಿದ ಪ್ರಯೋಗಗಳು, ಕುವೆಂಪುರವರ ‘ಕಿಂದರ ಜೋಗಿ’ ನಾಟಕದಲ್ಲಿನ ಶಿಶುಗೀತೆಗಳು, ಹೀಗೆ ಇದೇ ಸಾಲಿನಲ್ಲಿ ಸಿದ್ದಯ್ಯ ಪುರಾಣಿಕರ ‘ ಅಜ್ಜನ ಕೋಲಿದು ನನ್ನಯ ಕುದುರೆ’, ಎನ್. ಶ್ರೀನಿವಾಸ ಉಡುಪರ ‘ಕುಂಬಕರ್ಣನ ನಿದ್ರೆ’, ಡಾ. ಎನ್. ಎಸ್ ಲಕ್ಷ್ಮಿನಾರಾಯಣ ಭಟ್ಟರ, ಎಚ್. ಎಸ್ ವೆಂಕಟೇಶ ಮೂರ್ತಿಯವರ ಕವಿತೆಗಳು ‘ಬಾಳ ಒಳ್ಳೇವ್ರು ನಮ್ಮಿಸ್ಸು, ಏನ್ ಹೇಳಿದ್ರೂ ಎಸ್ ಎಸ್ಸೂ’, ‘ಗೇರ್ ಗೇರ್ ಮಂಗಣ್ಣ’ ಇಂತಹುಗಳು ಮಕ್ಕಳ ಸಾಹಿತ್ಯದ ಉನ್ನತಿಗೆ ಹೊಸ ಶಕ್ತಿಯನ್ನು ನೀಡಿದವು ಎಂದರೆ ತಪ್ಪಿಲ್ಲಾ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳೇ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಿರುವ ಹೊಸ ವಿದ್ಯಮಾನವನ್ನು ನೋಡುತ್ತಿದ್ದೇವೆ. ಅವರ ಕಲ್ಪನೆಗಳ ಹರಿವಿನ ಮೂಲಕ ಕಥೆ, ಕಾವ್ಯ ಕಟ್ಟುವ ಸರಳ, ಮುಗ್ಧತೆಯ ಸಾಹಿತ್ಯಾಸಕ್ತಿ ಬೆರಗು ಹುಟ್ಟಿಸುವಂತಹದ್ದು. ಆದರೇ, ಇಂದು ಬೆರಳುಗಳಂಚಿನಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುವ ಕಾಲಮಾನದಲ್ಲಿ ಈ ಓದು, ಬರಹ, ಸಾಹಿತ್ಯ ಎಲ್ಲೋ ಒಂದು ಕಡೆ ಮರೆಯಾಗುತ್ತಿವೆ ಎಂದೆನ್ನಿಸುತ್ತಿದೆ. ಅಂತಹುಗಳೇ ಉತ್ಕೃಷ್ಟವಾದ ಮನೋರಂಜನೆಗಳನ್ನು ಕೊಡುವ ಮಾಧ್ಯಮಗಳೆಂದು ತಿಳಿದಿರುವ ಕೆಲವು ಎಳೆಯರ ಚಿತ್ತವನ್ನು ಸಾಹಿತ್ಯದತ್ತ ಸೆಳೆಯುವ  ಕಾರ್ಯ ತುರ್ತು ಎಂದೆನ್ನಿಸುತ್ತದೆ.


ಮಕ್ಕಳ ಸಾಹಿತ್ಯಕ್ಕೆ ಪತ್ರಿಕಾ ಮಾಧ್ಯಮಗಳು, ಬೇಸಿಗೆ ರಜೆಗಳ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಸಾಹಿತ್ಯ, ಕಲೆಗಳ ಶಿಬಿರಗಳನ್ನು ಏರ್ಪಡಿಸುತ್ತಿದ್ದರೂ ಅಲ್ಲಿ ಭಾಗವಹಿಸುವ ಸಂಖ್ಯೆ ಇಳಿಮುಖವಾಗುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ.

ಈ ಭಾರಿಯಂತೂ ಮಕ್ಕಳ ಕೊರೋನಾ ವೈರಸ್ ಬಂಪರ್ ಕೊಡುಗೆಯನ್ನೇ ನೀಡಿದೆ. ಪರೀಕ್ಷೆಗಳಿಲ್ಲದೇ ಒಂದರಿಂದ ಒಂಬತ್ತನೇ ತರಗತಿಯವೊರೆಗಿನ ವಿದ್ಯಾರ್ಥಿಗಳನ್ನು ಸರ್ಕಾ ತೇರ್ಗಡೆ ಮಾಡಿದೆ. ಈ ರಜೆಯಲ್ಲಿ ಮಕ್ಕಳನ್ನು ಒಂದಿಷ್ಟು ಸಮಯ ಸಾಹಿತ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸೂಕ್ತ. ಆ ಬಗ್ಗೆ ಮನೆಯವರೂ ಆಸಕ್ತಿ ತೋರುವುದರ ಮೂಲಕ ಮಕ್ಕಳಲ್ಲಿ ಒಂದಿಷ್ಟು ಸಾಹಿತ್ಯದ ಓದಿನಲ್ಲಿ ಪಾಲ್ಪಡೆಯುವುದಕ್ಕೆ ಸಹಕರಿಸಿದರೇ ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯ.
-ಶ್ರೀರಾಜ್ ವಕ್ವಾಡಿ.   




3 comments: