ಸಾಮಾನ್ಯ ಒಂದು ಗ್ರಾಮೀಣ ಪ್ರತಿಭೆಗೂ ಒಬ್ಬ ನಿರ್ದೇಶಕನಾಗುವುದಕ್ಕೆ, ನಟನಾಗುವುದಕ್ಕೆ ಅವಕಾಶ ಕೊಟ್ಟಿದ್ದು ಕಿರುಚಿತ್ರ ಅಂತ ಹೇಳಿದರೆ ತಪ್ಪಿಲ್ಲ. ಇದು, ಕೆಲವು ಪ್ರಚಾರದ ಗೀಳಿಗೆ ಬಿದ್ದವರಿಗೂ ಅವಕಾಶ ಒದಗಿಸಿಕೊಟ್ಟಿದ್ದರಿಂದ, ಏನೇನೋ ತಲೆಬುಡವಿಲ್ಲದ್ದು, ಅರ್ಥವಿಲ್ಲದ್ದು ಕಿರುಚಿತ್ರಗಳೆನ್ನಿಸಿಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ‘ಕಿರುಚಿತ್ರ’ ಎಂದುಕೊಂಡು ಸಾವಿರ ಸಾವಿರ ಚಿತ್ರಗಳು ಬಂದಿವೆ. ಆದರೇ, ನಿಜಕ್ಕೂ ಕಿರುಚಿತ್ರವಾಗಿ, ಗಟ್ಟಿ ಕಥೆಯೊಂದಿಗೆ ಉಳಿದಿದ್ದು ಕೆಲವೇ ಕೆಲವುಗಳು ಮಾತ್ರ. ಅಂತಹುಗಳಲ್ಲಿ ರಂಗಕರ್ಮಿ ನಾಗರಾಜ್ ಸೋಮಯಾಜಿ ನಿರ್ದೇಶನದ “ದಿ ಬೆಸ್ಟ್ ಆ್ಯಕ್ಟರ್” ಕೂಡ ಒಂದು.
ಫೋನ್ ಸಂಭಾಷಣೆಯ ಮೂಲಕ ಕಥೆ ಆರಂಭವಾಗುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಸಂದರ್ಶನದೊಂದಿಗೆ ಕಥೆ ಮುಂದೆ ಸಾಗುತ್ತದೆ. ಸಂದರ್ಶಕ ಕೇಳುವ “ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ನಟ ಯಾರು..? ಹಾಗೂ ನಿಮ್ಮ ಪಾಲಿನ ‘ದಿ ಬೆಸ್ಟ್ ಆ್ಯಕ್ಟರ್’ ಯಾರು..?” ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವುದೊರೊಂದಿಗೆ ಚಿತ್ರ ಕರಾವಳಿ ಕರ್ನಾಟಕದ 90ರ ದಶಕದ ಜೀವನ ಶೈಲಿಯನ್ನು ತೆರೆದಿಡಲಾರಂಭಿಸುತ್ತದೆ.
ಕಥೆಯ ಮುಖ್ಯಪಾತ್ರಧಾರಿ ಮಹಾಬಲ, ಸೈಕಲ್ ಸವಾರಿ ಮಾಡುತ್ತಾ ಆ ಕಾಲದಲ್ಲಿನ ಹಾಗೂ ಇನ್ನೂ ಕರಾವಳಿಯ ಕೆಲವೆಡೆಯಿರುವ ಹಳ್ಳಿಯ ಚಹಾದ ಹೋಟೇಲು, ಬಯಲು, ಆಟ ಇತ್ಯಾದಿಗಳನ್ನೊಳಗೊಂಡು ಜೀವನ ಪದ್ಧತಿ.. ಹೀಗೆ ಒಂದೊಂದಾಗಿ ಎಲ್ಲವನ್ನೂ ಪರಿಚಯ ಮಾಡಿಕೊಡುವ ಹಾಗೆ ದೃಶ್ಯ ವೇಗ ಕಂಡುಕೊಳ್ಳುತ್ತದೆ.
ಮಹಾಬಲ ಸಾಮಾನ್ಯ ಬಡ ಕುಟುಂಬದವ. ಹೆಂಡತಿ, ಮಗನೊಂದಿಗೆ ಜೀವನ ನೂಕುತ್ತಿರುವ ಮಹಾಬಲನಿಗೆ ಯಕ್ಷಗಾನದ ಮೇಲೆ ಅಪಾರ ಆಸಕ್ತಿ. ತಾನು ಯಕ್ಷಗಾನದಲ್ಲಿ ಬಣ್ಣ ಹಚ್ಚಬೇಕು ಎಂಬ ತವಕದೊಂದಿಗೆ ಸಾಗುವ ಮಹಾಬಲ ಎದುರುಗಾಣುವ ಅನುಭವವನ್ನು, ಭರವಸೆಯನ್ನು ಹಾಗೂ ಕೊನೆಗೆ ಕಾಣುವ ನೋವನ್ನು ನಿರ್ದೇಶಕರು ಮನೋಜ್ಙವಾಗಿ ತೋರಿಸಿದ್ದಾರೆ. ಆಸೆ, ಹಂಬಲ, ಎಲ್ಲವೂ ನಿರ್ಲಕ್ಷಿಸುವವರೆದುರು, ಈ ಹಿಂದೆ ಇದ್ದಷ್ಟೇ ಆಸಕ್ತಿಯೊಂದಿಗೆ ಸೋತು ಹೋಗುವ ಕಥೆಯನ್ನು ನಿರ್ದೇಶಕರು ತೆರೆ ಮೇಲೆ ಮನಸ್ಸಿಗೆ ನಾಟುವಂತೆ ತೋರಿಸಿದ್ದಾರೆ.
ತನ್ನ ಅಪ್ಪನ ಅಪರಿಮಿತ ಕಲಾಸಕ್ತಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮಗ ರಾಷ್ಟ್ರ ಪ್ರಶಸ್ತಿ ವಿಜೇತ ನಟನಾಗಿ ಬೆಳೆದು ಸಂದರ್ಶನವೊಂದರಲ್ಲಿ ತನ್ನ ಅಪ್ಪನನ್ನು ನೆನಪಿಸಿಕೊಳ್ಳುವುದರ ಮೂಲಕ.. ಅಪ್ಪನ ಜೀವನಾಸಕ್ತಿ, ಕಲಾಸಕ್ತಿ, ಅವನಲ್ಲಿನ ನಿಷ್ಠೆ, ಬಡತನ... ಹೀಗೆ, ಎಲ್ಲವನ್ನೂ ಸಹಿಸಿಯಾದ ಮೇಲೆ ದಕ್ಕದ ಅವಕಾಶವನ್ನು ಎಳೆಎಳೆಯಾಗಿ ತೋರಿಸಿಕೊಡುವ ಕಥೆ ಇದು.
ಕಥೆಯ ಮುಖ್ಯಪಾತ್ರ ಮಹಾಬಲ, ತನ್ನಲ್ಲಿ ಪ್ರತಿಭೇಯಿದ್ದರೂ.. ಬೇರೆ ಬೇರೆ ಕಾರಣಗಳಿಂದಾಗಿ ಅವಕಾಶ ವಂಚಿತನಾಗುವುದನ್ನು ಅದೆಷ್ಟೋ ಇಂತಹ ವಂಚನೆಗೊಳಗಾದ ಕಲಾಸಕ್ತಿ ಹೊಂದಿದವರ ಬದುಕಿಗೆ ಉದಾಹರಣೆಯಾಗಿ ನಿರ್ದೇಶಕರು ಹೆಣೆದಿದ್ದಾರೆ.
ಚಿತ್ರದಲ್ಲಿ ಸಾಮಾನ್ಯದ್ದೊಂದು ಬಡ ಸಂಸಾರ, ಆ ಸೂರಿನಡಿಯಲ್ಲಿನ ಜೀವನವನ್ನು ತೋರಿಸುವ ಪ್ರಯತ್ನ ಮಾರ್ಮಿಕವಾಗಿ ಮೂಡಿಬಂದಿದೆ. ಚಿತ್ರದುದ್ದಕ್ಕೂ ಉಳಿದುಕೊಳ್ಳುವುದು ಪ್ರಾದೇಶಿಕತೆ. ಚಿತ್ರ, ಕುಂದಾಪುರ ಹಾಗೂ ಸಾಲಿಗ್ರಾಮ ಸುತ್ತಮುತ್ತ ಚಿತ್ರಿಕರಣಗೊಂಡಿದ್ದು ಅಲ್ಲಿನ ಪ್ರಾದೇಶಿಕ ಭಾಷೆಯನ್ನೇ ಕಥೆಗೆ ಬಳಸಿಕೊಂಡಿದ್ದಾರೆ. ಅಲ್ಲಲ್ಲಿ ಕೆಲವು ಕಡೆ ಕುಂದಾಪುರ ಕನ್ನಡದೊಂದಿಗೆ ಶುದ್ಧ ಕನ್ನಡ ಬಂದದ್ದನ್ನು ಹೊರತಾಗಿ, ಮತ್ತೆಲ್ಲವೂ ಚೆನ್ನಾಗಿ ಬಂದಿವೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ರಂಗಭೂಮಿ ಹಾಗೂ ಸಿನೆಮಾ ನಟ ಮಾಧವ ಕಾರ್ಕಡ, ಪ್ರತಿಮಾ ನಾಯಕ್, ಶಿಶಿರ್ ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ.. ಚಿತ್ರ ನೋಡಿಯಾದ ಮೇಲೂ ಕೆಲ ಹೊತ್ತು ಕಣ್ಮುಂದೆ ಬಂದು ಹೋಗುತ್ತಿರುತ್ತಾರೆ ಎನ್ನುವುದು ಅವರೆಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ ಎನ್ನುವ ಅರ್ಥ.
ಈ ಚಿತ್ರಕ್ಕೆ, ಕಥೆಗಾರ ಶ್ರೀಧರ ಬನವಾಸಿಯವರ ಸಣ್ಣ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕರು ಚಿತ್ರಕತೆ ರೂಪಿಸಿ ಯಶಸ್ವಿಯಾಗಿದ್ದಾರೆ. ಭಾಸ್ಕರ ಬಂಗೇರ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿನ ಕೆಲವು ಸಂಭಾಷಣೆಗಳು ಬದುಕಿಗೆ ಸಾಕ್ಷಿಪ್ರಜ್ಙೆಯಾಗಿ ನಿಲ್ಲುತ್ತದೆ. ಎಸ್ ಕೆ. ರಾವ್ ಅವರ ಛಾಯಾಗ್ರಹಣ, ಬಿ. ಎಸ್ ಸಂಕೇತ್ ಅವರ ಸಂಕಲನ, ಹಾಗೂ ಅರ್ಜುನ್ ರಾಮ್ ಅವರ ಹಿನ್ನೆಲೆ ಸಂಗೀತ ಕಥೆಯನ್ನು ಮತ್ತಷ್ಟು ಗಟ್ಟಿಯಾಗಿಸಿವೆ.
ಒಟ್ಟಿನಲ್ಲಿ, ತುಡಿತ, ನಿಷ್ಠೆ, ಆಸೆ, ಕನಸು, ಶ್ರಮಕ್ಕೆ ಈ ಚಿತ್ರ ಕನ್ನಡಿಯಾಗಿ ತೆರೆತೆರೆದಿದೆ ಎನ್ನುವುದು ಪದಶಃ ಸತ್ಯ.
-ಶ್ರೀರಾಜ್ ವಕ್ವಾಡಿ
No comments:
Post a Comment