ಕೊರೋನಾ ಬಿಕ್ಕಟ್ಟಿನ ಪರಿಣಾಮದಿಂದಾಗಿ ಹೂಡಿದ ಲಾಕ್ಡೌನ್ ಕಾರಣದಿಂದಾಗಿ ದೇಶದ ನಿರುದ್ಯೋಗ ಸಮಸ್ಯೆ ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿಗಾವಹಿಸುವ ಮುಂಬೈ ಮೂಲದ ಖಾಸಗಿ ಸಂಸ್ಥೆ ಸಿಎಮ್‌ಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಅಚ್ಚರಿ ಹುಟ್ಟಿಸುವ ಮಾಹಿತಿಯೊಂದನ್ನು ಹೊರಹಾಕಿದೆ.
ಮಹಾಮಾರಿ ವೈರಸ್ಸನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಮಾಡಿದ್ದೆಂದು ಎಲ್ಲರಿಗೂ ತಿಳಿದಿರುವ ವಿಷಯ. ಬಹುತೇಕ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಈ ನಡುವೆ ಸಿಎಮ್‌ಐಇ ನೀಡಿದ ಈ ಮಾಹಿತಿ ಕೇಂದ್ರ ಸರ್ಕಾರವನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸಿದೆ ಎಂಬುವುದರಲ್ಲಿ ಸಂಶಯವಿಲ್ಲ. ಮಾರ್ಚ್ ತಿಂಗಳಲ್ಲಿ ನಿರುದ್ಯೋಗದ ಪ್ರಮಾಣ ಐತಿಹಾಸಿಕವಾಗಿ ಏರಿಕೆ ಕಂಡಿದೆ ಎಂದು ಸಿಎಮ್‌ಐಇ ಹೇಳಿದೆ. ದೇಶದಲ್ಲಿ, ನಿರುದ್ಯೋಗ ಪ್ರಮಾಣ ಶೇಕಡಾ 23.4 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ.
ನಿರುದ್ಯೋಗ ಸಮಸ್ಯೆ ಭಾರತ ದೇಶದ ಸಮಸ್ಯೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಬಾಧೆಯಾಗಿ ಕಾಡಿದೆ ನಿರುದ್ಯೋಗ. ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಏರಿಕೆಯಾಗುತ್ತಲೇ ಇದೆ. ಈ ನಡುವೆ, ಭಾರತದಲ್ಲಿ ಸುಮಾರು 40 ಕೋಟಿಯಷ್ಟು ಮಂದಿ ಬಡತನಕ್ಕೊಳಗಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಾತ್ರವಲ್ಲದೇ ದೇಶದಲ್ಲಿ, ಕೊರೋನಾ ಸೋಂಕಿತರ ಪಟ್ಟಿ ಕ್ಷಣಕ್ಷಣಕ್ಕೆ ವಿಸ್ತಾರಗೊಳ್ಳುತ್ತಲೇ ಇದೆ. ಸರ್ಕಾರದ ಮಟ್ಟದಲ್ಲಿ ವೈರಸ್ಸನ್ನು ನಿಯಂತ್ರಣಕ್ಕೆ ತರುವ ಬಗೆಗಿನ ಹೊಸ ಯೋಜನೆಗಳನ್ನು ಮತ್ತು ಲಾಕ್ಡೌನ್ ಮುಂದುವರಿಸುವುದರ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ವೇಳೆ ಲಾಕ್ಡೌನ್ ಮುಂದುವರಿದರೇ ಈ ಸಮಸ್ಯೆಗಳೆಲ್ಲಾ ದುಪ್ಪಟ್ಟಾಗುವುದರಲ್ಲಿ ಏನೂ ಸಂದೇಹವಿಲ್ಲ ಎನ್ನುವುದನ್ನು ಸ್ವತಃ ತಜ್ಞರೇ ವಿಶ್ಲೇಷಿಸುತ್ತಿದ್ದಾರೆ.
ಈಗಾಗಲೇ ಕೋಟಿ ಕೋಟಿ ಮಂದಿ ದಿನಗೂಲಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿ ಹೇಳತೀರದ ಪರಿಸ್ಥಿತಿ ಬಂದೊದಗಿದೆ. ಬಡತನದ ನಿವಾರಣೆ ಹೇಗೆ..? ಆರ್ಥಿಕ ಸ್ಥಿತಿಗತಿಗಳೇನು..? ನಿರುದ್ಯೋಗದ ಸಮಸ್ಯೆ ಬಗೆಹರಿಸುವುದು ಹೇಗೆ..? ಜೊತೆಗೆ, ಕಳೆದ ಜನವರಿ ಹಾಗು ಮಾರ್ಚ್ ತಿಂಗಳುಗಳ ನಡುವೆ ದೇಶಕ್ಕೆ ಪರದೇಶದಿಂದ ಬಂದಿಳಿದವರ ಸಂಖ್ಯೆ ಬರೋಬ್ಬರಿ 15 ಲಕ್ಷ. ಅವರ ಪಾಡೇನು..? ಎಂಬ ಪ್ರಶ್ನೆಗಳು ಸರ್ಕಾರದೆದುರಿಗಿದೆ. ಈ ಎಲ್ಲಾ ಸಮಸ್ಯೆಯನ್ನು, ಬಾಧೆಗಳನ್ನು ನಿವಾರಿಸುವುದಕ್ಕೆ ಶಿಘ್ರವಾಗಿ ಸರ್ಕಾರ ಕಾರ್ಯತಂತ್ರ ರೂಪಿಸಬೇಕಾಗಿದೆ. ಈ ಸಮಸ್ಯೆ ಅಷ್ಟು ಸುಲಭವಾಗಿ ಎದುರಿಸುವ ಸಮಸ್ಯೆಯಂತೂ ಅಲ್ಲ. ಇದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಬಡವರ, ನಿರುದ್ಯೋಗಿಗಳ ಹಾಗೂ ಮಧ್ಯಮ ವರ್ಗದವರ ಬದುಕು ಕತ್ತಿ ಅಲಗಿನ ಮೇಲೆ ನಿಂತದ್ದಂತೂ ಅಪ್ಪಟ ಸತ್ಯ. ಒಟ್ಟಿನಲ್ಲಿ ಸರ್ಕಾರ ಹೇಗೆ ಈ ಬಾಧೆಗಳನ್ನೆಲ್ಲಾ ನಿಭಾಯಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
-----------------------------------------------
-ಶ್ರೀರಾಜ್ ವಕ್ವಾಡಿ.




No comments:
Post a Comment