Saturday, February 29, 2020

ನದಿ ಜೋಡಣೆಯಲ್ಲಿನ ಸವಾಲುಗಳು


ಅಟಲ್ ಇಹಾರಿ ವಾಜಪೇಯಿಯವರ ಕಸಿ ಯೋಜನೆಯಾದ ರಾಷ್ಟ್ರೀಯ ನದಿ ಯೋಜನೆ ಒಂದು ನದಿ ಪಾತ್ರದಲ್ಲಿರುವ ಹೆಚ್ಚುವರಿ ನೀರನ್ನು ಅಗತ್ಯವಿರುವ ಇನ್ನೊಂದು ನದಿ ಪಾತ್ರಕ್ಕೆ ಪೂರೈಸುವ ಯೋಜನೆಯಾಗಿದೆ.
ಭಾರತದಲ್ಲಿ ರಾಷ್ಟಿಯ ನದಿ ಜೋಡಣೆ ಯೋಜನೆಯನ್ನು ೩ ಮುಖ್ಯ ವಿಧಗಳನ್ನಾಗಿ ಮಾಡಲಾಗಿದೆ.
೧. ಹಿಮಾಲಯ ಭಾಗ
೨. ರ‍್ಯಾಯ ದ್ವೀಪ ಅಥವಾ ಪೆನಿನ್ಸುಲಾರ್
೩. ಆಂತರಿಕ ನದಿ ಘಟಕಗಳು.
ಈ ಯೋಜನೆಗಳೆಲ್ಲವನ್ನೂ ಭಾರತದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಜಲ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತದೆ. ಹಿಮಾಲಯನ್ ಘಟಕಕ್ಕಗಿ ೧೪ ಅಂತರ್ ಜೋಡಣೆ ಯೋಜನೆಗಳು, ಪೆನಿನ್ಸುಲಾರ್ ಘಟಕಕ್ಕಾಗಿ ೧೬ ಅಂತರ್ ಜೋಡಣೆ ಯೋಜನೆಗಳು, ಮತ್ತು ಇತರೆ ಆಂತರಿಕ ನದಿ ಘಟಕಗಳಿಗಾಗಿ ೩೭ ನದಿಗಳ ಸಂರ‍್ಕ ಯೋಜನೆಗಳನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ ಡಬ್ಲ್ಯೂ ಡಿ ಎ) ರೂಪಿಸಿದೆ. ಮಾನ್ಸೂನ್ ಮಳೆ ನೀರಿನ ಸಂಪತ್ತನ್ನು ಸಂರಕ್ಷಿಸಿ ಜಲಾಶಯಗಳಲ್ಲಿ ಶೇಕರಿಸುವುದು ಹಾಗೂ ಈ ನೀರನ್ನು ನದಿಗಳು , ಅಂತರ್  ಸಂರ‍್ಕ ಕಾಲುವೆಗಳ ಮೂಲಕ ದೇಶದ ಉದ್ದಗಲಕ್ಕೂ ವಿತರಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶ.
ನದಿ ಜೋಡಣೆ ಕಲ್ಪನೆಯು ೧೮೫೮ ರಲ್ಲಿ ಮೊದಲು ಕಲ್ಪನೆಗೆ ಬಂದದ್ದು. ಕೃಷ್ಣಾ ಹಾಗೂ ಗೋದಾವರಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿದ ಬ್ರಿಟಿಷ್ ಅಧಿಕಾರಿ ಸರ್ ಅರ್ಥರ್ ಕಾಟನ್ ಎಂಬಾತ ಹೇಳಿಕೊಟ್ಟ ಕಲ್ಪನೆಯದು. ಹೆಚ್ಚು ನೀರಿನ ಹರಿವಿದ್ದ ನದಿಗಳನ್ನು ಕಡಿಮೆ ನೀರಿನ ಹರಿವಿರುವ ನದಿಗಳೊಡನೆ ಕಾಲುವೆಗಳ ಮೂಲಕ ಜೋಡಿಸುವುದು ಆತನ ಕಲ್ಪನೆಯಾಗಿತ್ತು.  ಆತ ಇಂಗ್ಲೆಂಡ್ ಮತ್ತು ಯುರೋಪ್ ನದಿಗಳ ಅನುಭವವನ್ನು ಹೊತ್ತು ಬಂದಿದ್ದ, ಆದರೇ ಅಲ್ಲಿನ ನದಿಗಳು ಭಾರತೀಯ ನದಿಗಳಿಗಿಂತ ಭಿನ್ನ, ಅಂದರೇ ಯುರೋಪ್ ನದಿಗಳಲ್ಲಿನ ನೀರಿನ ಮಟ್ಟವು ವಾರ್ಷಿಕ ಕಾಲಘಟ್ಟದಲ್ಲಿ ಗುರುತರವಾದ ಏರಿಳಿತಗಳನ್ನು ಕಾಣುವುದಿಲ್ಲ.
ಉಷ್ಣ ವಲಯದ ಪ್ರದೇಶದಲ್ಲಿರುವ ದೇಶಗಳಲ್ಲಿ ಹೆಚ್ಚು ನೀರಿನ ಹರಿವಿರುವ ನದಿ ಹಾಗೂ ಕಡಿಮೆ ನೀರಿನ ಹರಿವಿರುವ ನದಿ ಎಂಬ ಪರಿಕಲ್ಪನೆಯೇ ಇಲ್ಲ. ಅಲ್ಲಿ ಮಳೆ ಬಂದರೇ ಪ್ರವಾಹ ಉಂಟಾಗುತ್ತದೆ, ಇಲ್ಲವಾದರೇ ನೀರೇ ಕಾಣ ಸಿಗುವುದಿಲ್ಲ. ಚೆಕ್ ಡ್ಯಾಮ್‌ಗಳನ್ನು ಕಟ್ಟಿಸುವುದು, ಮಳೆ ನೀರ ಶೇಖರಣೆಗಾಗಿ ಇಂಗುಗುಂಡಿ ನರ‍್ಮಿಸುವುದು ತಕ್ಷಣಕ್ಕೆ ಕಂಡುಕೊಳ್ಳಬಹುದಾದ ಪರಿಹಾರ.
ನದಿ ಜೋಡಣೆಗೆ ಬೃಹತ್ತಾದ ರ‍್ಥಿಕ  ಅಗತ್ಯತೆಯೂ ಬೇಕಾಗುತ್ತದೆ, ವಿಶೇಷವಾಗಿ ಸರಾಸರಿ ೩೫ ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಾಪಮಾನ ಹೊಂದಿರುವ ನಮ್ಮ ದೇಶದಲ್ಲಿ, ಒಂದು ನದಿಯನ್ನು ಮತ್ತೊಂದು ನದಿಗೆ ಜೋಡಿಸಲು ಸಾವಿರಾರು ಕಿ,ಮೀ ನಷ್ಟು ಕಾಲುವೆಗಳನ್ನು ಕಟ್ಟಿಸುವುದೇ ಆದರೆ, ನದಿಯಲ್ಲಿನ ಬಹುಪಾಲು ನೀರು ಆವಿಯಾಗಿಯೇ ಹೋಗುತ್ತದೆ. ಮೇಲಾಗಿ ಭೂಮಿಯೂ ಕೂಡ ಕಾದಿರುತ್ತದೆ.
ನೀರಿನಲ್ಲಿ ಉಪ್ಪಿನಂಶವು ೬೦ ಕಿ.ಮೀ ನಷ್ಟು ಒಳನಾಡು ಆವರಿಸಿದೆ. ಭಾರತವು ೭೪೦೦ ಕಿ.ಮೀ ನಷ್ಟು ಸಮುದ್ರ ತೀರವನ್ನು ಹೊಂದಿದೆ. ಸಮೀಕ್ಷೆಯೊಂದರ ಪ್ರಕಾರ, ನದಿಯ ನೀರು ಹರಿದು ಸಮುದ್ರವನ್ನು ಸಏರಿದ್ದಲ್ಲಿ ಲವಣಯುಕ್ತ ನೀರು ೧೦೦ ರಿಂದ ೧೩೦ ಕಿ ಮೀ ನಷ್ಟು ಒಳನುಗ್ಗುತ್ತದೆ. ಹಾಗಾದಲ್ಲಿ ಭಾರತದ ಮೂರರ ಒಂದು ಭಾಗದಷ್ಟು ಭೌಗೋಳಿಕ ಪ್ರದೇಶವನ್ನು ಲವಣಯುಕ್ತ ನೀರಿನಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ.



ಪರಿಸರದ ಮೇಲೆ ಪ್ರಭಾವ
ನದಿಗಳ ಜೋಡಣೆಯು ಪರಿಸರದ ಮೇಲೆ ವ್ಯಾಪಕವಾದ ಪರಿಣಾಮವನ್ನು ಬೀರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ದೊಡ್ಡ ಮಟ್ಟದ ಅರಣ್ಯ ನಾಶಕ್ಕೆ ಕಾರಣವಾಗಬಹುದಾದ ಯೋಜನೆಯೂ ಹೌದು. ಆದ್ದರಿಂದ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿಗಳ ಸ್ವಾಭಾವಿಕ ವಾಸಸ್ಥಾನ ಅಥವಾ ಅನಿಮಲ್ ಕಾರಿಡಾರ್ ನಾಶವಾಗುತ್ತಿದೆ. ಈ ದೊಡ್ಡ ಮಟ್ಟದ ಪರಿಸರ ಹಾನಿಯೂ ಮಳೆಯಾಗುವುದರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಹಾಗೂ ನದಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಜೀವವೈವಿಧ್ಯವನ್ನು ನಾಶಮಾಡುತ್ತದೆ. ಮಾತ್ರವಲ್ಲದೇ ಈ ನದಿ ಜೋಡಣೆಯಿಂದಾಗಿ ಹಲವಾರು ಪ್ರಾಯೋಗಿಕ ಹಾಗೂ ವ್ಯವಸ್ಥಾಪಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಎತ್ತಿನ ಹೊಳೆ ಯೋಜನೆಯ ವಿವರ, ಸವಾಲು ಮತ್ತು ಪರಿಣಾಮ



ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನರ‍್ಮಿಸಲಾಗಿದೆ. ಅಲ್ಲಿಂದ ವಿದುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್ಗಳ ಮೂಲಕ ನೀರನ್ನು ಮೇಲಕ್ಕೆ ಎತ್ತಿ ಸಕಲೇಶಪುರ ತಾಲೂಕಿನ ಹರವನಹಳ್ಳಿ ಬಳಿಯಲ್ಲಿ ನರ‍್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುತ್ತದೆ. ಈ ಯೋಜನೆಗೆ ಅರಣ್ಯದೊಳಗೆ ೧೨೦ ಅಡಿ ಅಗಲದ ಜಾಗವನ್ನು ತೆರವುಗೊಳಿಸಬೇಕಾಗುತ್ತದೆ. ಕನಿಷ್ಟ ೬೦ ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನಿ ಸಮತಟ್ಟುಗೊಳಿಸಿ ಭೂಮಿಯ ಒಳಭಾಗದಲ್ಲಿ ಬೃಹದಾಕಾರದ ಕೊಳವೆಗಳನ್ನು ಅಳವಡಿಸಲಾಗುತ್ತದೆ. ಈ ಯೋಜನೆಯ ಕಾರಣದಿಂದಾಗಿ ೪೦೦ ಎಕರೆಯಷ್ಟು ಅರಣ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ : ರಾಜ್ಯದ ಪರ‍್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ರ‍್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮುಕೂತು ಜಿಲ್ಲೆಗಳಿಗೆ ಪೂರಯಸಲು ನರ‍್ಧರಿಸಲಾಗಿದೆ.
ಈ ಎತ್ತಿನ ಹೊಳೆ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ ೪, ಕಾಡುಮನೆ ಹೊಳೆಗೆ ೨, ಕೇರಿ ಹೊಳೆಗೆ ೧, ಹೊಂಗಡ ಹಳ್ಳಕ್ಕೆ ೧, ಒಟ್ಟು ೮ ಬ್ಯಾರೇಜ್‌ಗಳ ಮೂಲಕ ಮೇಲಕ್ಕೆತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನಬಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮರ‍್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಅಳವಡಿಸಲಾಗುವ ಪೈಪ್‌ಗಳ ಮುಖಾಂತರ ಸಕಲೇಶಪುರ ತಾಲೂಕಿನ ಹರವಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುತ್ತದೆ.

ನೇತ್ರಾವತಿ ಯೋಜನೆಗೆ ವಿರೋಧವೇ ಹೆಚ್ಚು  : ಈ ಯೋಜನೆಗೆ ಬಹಳ ಪ್ರಮುಖವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಲ್ಲದೇ, ನೇತ್ರಾವತಿಯ ಪ್ರಮುಖ ಎಂಟು ಉಪದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ನೀರೆತ್ತುವ ಈ ಯೋಜನೆ ರ‍್ಕಾರದ ಸುಳ್ಳು ಕಥೆಯಷ್ಟೇ ಎಂದು ನೇತ್ರಾವತಿ ಹೋರಾಟಗಾರರು ಆಕ್ರೋಶ ಪಡುತ್ತಿದ್ದಾರೆ. ಕೃಷಿ ಮತ್ತು ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವ ಹುನ್ನಾರವೂ ಅಡಗಿದೆ. ಮಾತ್ರವಲ್ಲದೇ, ಕೋಲಾರ, ಚಿಕ್ಕಬಳ್ಳಾಪುರವನ್ನು ಒಳಗೊಂಡು ಹಾಸನ, ಚಿಕ್ಕಮಗಳೂರು, ಚಿತ್ರದರ‍್ಗ, ರಾಮನಗರ, ಕನಕಪುರ, ಬೆಂಗಳೂರಿಗೂ ನೀರು ಹರಿಸುವ ಯೋಜನೆಯೆಂದು ನೇತ್ರಾವತಿ ನದಿ ತಿರುವು ಸಮಗ್ರ ಯೋಜನಾ ವರದಿಯಲ್ಲಿ ಉಲ್ಲೇಖಿಸಿರುವುದು ಮೂಲ ನದಿ ಪಾತ್ರದ ಜನರ ಆಕ್ರೋಶಕ್ಕೆ ಅಕ್ಷರಶಃ ಕಾರಣವಾಗಿದೆ. ಎಂಟು ಅಣೆಕಟ್ಟು, ನೂರಾರು ಕಿಲೋ ಮೀಟರ್ ಉದ್ದದ ಪೈಪ್ ಲೈನ್, ಪವರ್ ಹೌಸ್, ವಿದ್ಯುತ್ ಸರಬರಾಜು ವ್ಯವಸ್ಥೆಗಳು ಸೇರಿ ಹತ್ತಾರು ಕಾಮಗಾರಿಗಳು ಈ ನದಿ ತಿರುವಿಗೆ ಆಗಬೇಕಾಗಿರುವುದರಿಂದ ಪಶ್ಚಿಮಘಟ್ಟ ಬಹುತೇಕ ನಾಶವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ, ಮಳೆ ಪ್ರಮಾಣ, ನೀರಿನ ಹರಿವಿನ ಸಾಂದ್ರತೆ, ಅನುಕೂಲ ಮತ್ತು ಅನಾನುಕೂಲವನ್ನು ಅಧ್ಯಯನ ಮಾಡದೇ ರ‍್ಕಾರ ಯೋಜನೆ ರೂಪಿಸಿದ್ದು ಸ್ಪಷ್ಟವಾಗುತ್ತದೆ.

ಹಸಿರು ಪೀಠ ಗ್ರೀನ್ ಸಿಗ್ನಲ್ :ಎತ್ತಿನಹೊಳೆ ನದಿ ತಿರುವು ಜಾರಿಯಿಂದಾಗಿ ಪಶ್ಚಿಮ ಘಟ್ಟದಲ್ಲಿನ ಪರಿಸರ, ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದನೀ ಹಿಂದೆ ಬೆಂಗಳೂರಿನ ಕೆ. ಎನ್ ಸೋಮಶೇಖರ್ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಲ್ಲಿಸಿದ್ದ ರ‍್ಜಿಗಳನ್ನು ಹಸಿರು ನ್ಯಾಯ ಮಂಡಳಿ, ಇದು ಕೇವಲ ಕುಡಿಯುವ ನೀರಿನ ಯೋಜನೆ ಯೋಜನೆಗಳಲ್ಲಿ ತೊಡಕುಗಳಿಲ್ಲ ಎನ್ನುವುದನನ್ನು ಪರಿಶೀಲಿಸಿ ತಿರಸ್ಕರಿಸಿತ್ತು. ನಂತರ ಸುಪ್ರೀಂ ಕರ‍್ಟಿನಲ್ಲಿಯೂ ಕೂಡ ಈ ರ‍್ಜಿಗಳನ್ನು ತಿರಸ್ಕರಿಸಿ, ರ‍್ಕಾರಕ್ಕೆ ಕೆಲವು ಷರತ್ತುಗಳನ್ನು ನೀಡಿತು. ಇದು ಪರಿಸರವಾದಿಗಳ ಪಾಲಿಗೆ ಹಿನ್ನೆಡೆಯಾಗಿದೆ ಎನ್ನುವುದು ಅಪ್ಪಟ ಸತ್ಯ.

ಅಧಿಕ ಮಟ್ಟದ ಅನಿಶ್ಚಿತತೆ
ಇಂತಹ ಯೋಜನೆಗಳ ಸಂಭವನೀಯ ಪರಿಣಾಮದ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದರೂ, ಇದು ವಾಸ್ತವದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಯಾರೂ ಊಹಿಸಲಾಗುವುದಿಲ್ಲ. ಜೀವನೋಪಾಯದ ನಷ್ಟದಿಂದ ಹಿಡಿದು ಮಣ್ಣಿನ ಗುಣಮಟ್ಟದ ಬದಲಾವಣೆಯಂತಹ ಹಲವಾರು ಅನೀರೀಕ್ಷಿತ ಪರಿಣಾಮಗಳಾಗವ ಹೆಚ್ಚಿನ ಸಾಧ್ಯಸಾಧ್ಯತೆಗಳಿವೆ.  ನದಿ ಜೋಡಣೆಯ ಉದ್ದೇಶದ ಹಿನ್ನೆಲೆಯು ಒಳ್ಳೆಯದಾಗಿದ್ದರೂ ಅದರಿಂದ ಅಪಾಯಗಳು ಬಹಳ ಇವೆ ಎನ್ನುವುದನ್ನು ಮರೆಯುವಂತಿಲ್ಲ.
-ಶ್ರೀರಾಜ್ ವಕ್ವಾಡಿ 

ರಾಜಕಾರಣಿಗಳನ್ನು ಬಿಟ್ಬಿಡಿ ಸ್ವಾಮಿ, ಅವ್ರು ಸುಳ್ಳ್ ಹೇಳ್ತಿದ್ದಾರೆ... ನೀವು ಸತ್ಯ ಮಾತಾಡಿ – ಜಯಪ್ರಕಾಶ್ ಶೆಟ್ಟಿ



ಕನ್ನಡ ದೃಶ್ಯ ಮಾಧ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಹೊಸ ಹೆಜ್ಜೆಗಳನ್ನು ಪತ್ರಿಕೋದ್ಯಮಕ್ಕೆ ಪರಿಚಯಿಸಿ, ಸಮಾಜದ ತಪ್ಪುಗಳನ್ನು ನೇರವಾಗಿ ಪ್ರಶ್ನಿಸುವ ಛಾತಿ ಹೊಂದಿ, ಗಟ್ಟಿಧ್ವನಿಯಾಗಿ, ನಿರಾಶ್ರಿತರ ಪಾಲಿಗೆ ಬೆಳಕಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ದೃಶ್ಯ ಮಾಧ್ಯಮ ಲೋಕದ ಮುಂಪಂಕ್ತಿಯ ನಿರೂಪಕರೆನ್ನಿಸಿಕೊಂಡವರು. ೨೦೧೯ರ ಸಾಲಿನ ರಾಷ್ಟ್ರಮಟ್ಟದ ಸೌತ್ ಇಂಡಿಯನ್ ಬೆಸ್ಟ್ ಆ್ಯಂಕರ್ ಅವಾರ್ಡ್ ಪಡೆದು, ಹುತಾತ್ಮ ಯೋಧರಿಗೆ ಅರ್ಪಿಸಿ ತನ್ನ ಹೆಚ್ಚುಗಾರಿಕೆ ಮೆರೆದ ಸುವರ್ಣ ಸುದ್ದಿ ವಾಹಿನಿಯ ಪ್ರಚಲಿತ ವಿದ್ಯಾಮಾನಗಳ ಸುದ್ದಿ ಸಂಪಾದಕ ಜಯಪ್ರಕಾಶ ಶೆಟ್ಟಿಯವರ ಆತ್ಮ ದರ್ಶನ ಈ ಚಿಕ್ಕ ಸಂದರ್ಶನದ ಮೂಲಕ ನಿಮಗಾಗಿ...



‘ಪತ್ರಿಕೋದ್ಯಮ’ ಆಯ್ಕೆಯಲ್ಲಿನ ನಿಮ್ಮ ಸ್ಫೂರ್ತಿಯೇನು..?
ಸ್ಫೂರ್ತಿ ಅಂತ ಏನಿಲ್ಲ. ನಾನು ಫಾರ್ಮಸಿ ಮಾಡಿದ್ದು, ಮೆಡಿಕಲ್ ರೆಪ್ ಮಾಡಿದೆ, ಆ ಕಾಲದಲ್ಲಿ ತುಳು ನಾಟಕಗಳನ್ನು ಮಾಡುವ ಅಭ್ಯಾಸ, ಹವ್ಯಾಸ ಇತ್ತು. ಕನ್ನಡದ ಬಗ್ಗೆ ತುಂಬಾ ಅಭಿಮಾನ, ಆಸಕ್ತಿ ಇದ್ದುದ್ದರಿಂದ ಈ ಕ್ಷೇತ್ರಕ್ಕಾಗಿ ಬರುವುದಕ್ಕೆ ಸಾಧ್ಯವಾಯ್ತು. ರಂಗರಾವ್ ಅಂತವರು ವಾರ್ತೆಗಳನ್ನು ಓದುತ್ತಿದ್ದನ್ನು ಗಮನಿಸುತ್ತಿದ್ದೆ. ಆ ಟೈಮ್‌ನಲ್ಲಿ ಈಟಿವಿಯಲ್ಲಿ ವಾರ್ತಾವಾಚಕರು ಬೇಕಾಗಿದ್ದಾರೆ ಎನ್ನುವ ಕರೆ ಬಂದಿತ್ತು, ಅಲ್ಲಿಗೆ ಹೋದೆ, ನಾನು ನನ್ನ ಪ್ರೆಸೆಂಟೇಶನ್ ಕೊಟ್ಟೆ, ಅವರು ಇಂಪ್ರೆಸ್ ಆದ್ರು, ಆಗ ಕೆಲಸ ಬೇಕಿತ್ತು,  ಸೇರ‍್ಕೊಂಡೆ, ಕೆಲಸ ಮಾಡ್ದೆ ಟಿವಿಯಲ್ಲಿರ‍್ತಿದ್ದೆ... ಖುಷಿಯಾಗ್ತಿತ್ತು. ಹೀಗೆ ನಾನು ಪತ್ರಿಕೋದ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡೆ ಅಷ್ಟೇ.

‘ಪತ್ರಕರ್ತ’ನಿಗೆ ಕ್ಯಾಮೆರಾದ ಮುಂದೆ ಒಂದು ಸಿದ್ದಾಂತ, ಕ್ಯಾಮರೆದಾ ಆಚೆ ಇನ್ನೊಂದು ಸಿದ್ದಾಂತ ಅಂತ ಇದೆಯಾ..?
ವ್ಯವಸ್ಥೆಯನ್ನು ಮೀರಿ ಬದುಕುವುದಕ್ಕೆ ಪರ್ತಕರ್ತನಿಗೆ ಸಾಧ್ಯವಿಲ್ಲ. ಮಾಹಿತಿ, ಚರ್ಚೆಗಳನ್ನು ಯಾವುದು ಬೇಕು, ಯಾವುದು ಬೇಡ ಎನ್ನುವುದನ್ನು ಪರಿಶೀಲಿಸಿ ಪರ್ತಕರ್ತನಾದವನು ಕಾರ್ಯನಿರ್ವಹಿಸಬೇಕಾಗುತ್ತದೆ, ಅದನ್ನು ಪ್ರೆಸೆಂಟ್ ಮಾಡಬೇಕಾಗುತ್ತದೆ. ಎಲ್ಲವನ್ನೂ ವಿದೌಟ್ ಫಿಲ್ಟರ್ ಕ್ಯಾಮೆರಾದ ಮುಂದೆ ಮಾತಾನಾಡುವುದಕ್ಕೆ ಸಾಧ್ಯವಿಲ್ಲ. ಪತ್ರಿಕೋದ್ಯಮಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಕ್ಯಾಮೆರಾದ ಮುಂದೊಂದು, ಆಚೆಗೊಂದು ಅಂತಲ್ಲ. ಕ್ಯಾಮೆರಾದ ಮುಂದೆ ಪತ್ರಿಕೋದ್ಯಮದ ನೀತಿ ನಿಯಮಗಳನ್ನು ಮೀರುವುದಕ್ಕಾಗುವುದಿಲ್ಲ, ಕ್ಯಾಮೆರಾದ ಆಚೆ ನಮ್ಮ ಅಭಿವ್ಯಕ್ತಿಯನ್ನು ಸ್ವಾತಂತ್ರ್ಯವನ್ನು ಬಳಸಿಕೊಳ್ಳಬಹುದು.

ಮಾಧ್ಯಮದ ವ್ಯವಸ್ಥೆಯ ಚೌಕಟ್ಟಿನೊಳಗೆ ಪತ್ರಕರ್ತನಾದವನು ತನ್ನ ನಿಜವಾದ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದ್ದಾನಾ..?
ಈ ಪ್ರಶ್ನೆ ಕೇಳುತ್ತಿರುವುದರಲ್ಲೇ ಉತ್ತರವಿದೆ. ಈ ಪ್ರಶ್ನೆಯೊಳಗಿನ ಟಿಕೆ, ಟಿಪ್ಪಣಿಗಳು, ವಿಮರ್ಶೆಗಳು ಒಬ್ಬ ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವಂತಹ ಶಕ್ತಿ ಇದೆ. ಸತ್ಯವನ್ನು ಹೊರತಾಗಿ ಇರುವವನು ಪತ್ರಕರ್ತನೇ ಅಲ್ಲ. ಸಾಮಾಜಿಕ ಜವಾಬ್ದಾರಿಯನ್ನು ಇಲ್ಲದೇ ಇರುವವನು ಪರ್ತಕರ್ತನಾಗುವುದಕ್ಕೆ ಸಾಧ್ಯವೇ ಇಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯಗಳನ್ನೇ ಮಾಧ್ಯಮಗಳಲ್ಲಿ ಸುದ್ದಿಯಾಗಿ ತೆಗೆದುಕೊಳ್ಳಲಾಗುತ್ತಿದೆ.. ಈ ಬಗ್ಗೆ ನಿಮ್ಮ ಅಭಿಪ್ರಾಯ..?
ಅಕ್ಷರಶಃ ಸತ್ಯ. ಅದು ಈಗಿನ ಟ್ರೆಂಡ್. ಯಾವುದನ್ನು ಜನ ಹೆಚ್ಚಾಗಿ ನೋಡುತ್ತಿದ್ದಾರೋ ಅದನ್ನೇ ಸುದ್ದಿಯಾಗಿ ತೆಗೆದುಕೊಳ್ಳುವ ಅನಿವಾರ್ಯ, ಅಗತ್ಯತೆ ಮಾಧ್ಯಮಕ್ಕೆ ಇದೆ. ಕೆಲವೊಮ್ಮೆ ಅಭಾಸವಾಗುವುದು ಕೂಡ ಇದೆ. ಎಚ್ಚರಿಕೆ ಅಗತ್ಯ.

ಮಾಧ್ಯಮಗಳು ಬಳಕೆಯಾಗ್ತಿವೆಯಾ..? ‘ಪೇಯ್ಡ್ ಮಾಧ್ಯಮ’ ಎಂಬ ಮಾತಿಗೆ ನೀವು ಏನ್ ಹೇಳ್ತೀರಿ..? 
ಜನ ಮೂರ್ಖರಲ್ಲ. ಆಯ್ಕೆ ಮಾಡುವುದು ಜನ. ಸಿದ್ದಾಂತಗಳನ್ನು ನನ್ನ ಪ್ರಕಾರ ಹೇರುವುದಕ್ಕೆ ಸಾಧ್ಯವಿಲ್ಲ. ಹೇರುವಂತಹ ಪ್ರಯತ್ನವನ್ನು ಮಾಡುತ್ತಿವೆ ಎನ್ನುವುದು ಒಪ್ಪಲೇಬೇಕು. ರಾಜಕೀಯ ಪಕ್ಷಗಳು ತಮ್ಮ ಸಿದ್ದಾಂತಗಳನ್ನು ಹೇಳಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿರುವುದು ಹೌದು. ಹಾಗಂತ ಮಾಧ್ಯಮಗಳು ಬಳಕೆಯಾಗುತ್ತಿವೆ ಅಂತಲ್ಲ. ನಾನು ಇದುವರೆಗೆ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಕಾರ್ಯಕ್ರಮ ನಿರೂಪಿಸಿದವನಲ್ಲ. ಮಾಧ್ಯಮಗಳನ್ನು ಬಳಕೆ ಮಾಡುವ ಪ್ರಯತ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತವೆ. ಮಾಧ್ಯಮಗಳು ಪೇಯ್ಡ್ ಆಗುವುದಕ್ಕೆ ಸಾಧ್ಯವಿಲ್ಲ. ಪೇಯ್ಡ್ ಆದ್ರೆ ಜನ ನೋಡುವುದಿಲ್ಲ. ನೋಡುಗರೇ ಅಂತಿಮ.

ಪತ್ರಕರ್ತ ‘ಸರ್ವಸ್ವತಂತ್ರ’ನಾಗುತ್ತಿದ್ದಾನೆ ಎನ್ನುವುದಕ್ಕೆ ಏನ್ ಹೇಳ್ತೀರಿ..?
ಸರ್ವಸ್ವತಂತ್ರನಾದ ಪತ್ರಕರ್ತನಿಗೆ ಹೆಚ್ಚುಕಾಲ ಬದುಕುವುದಕ್ಕೆ ಮಾಧ್ಯಮಗಳೂ ಬಿಡುವುದಿಲ್ಲ, ಜನರೂ ಬಿಡುವುದಿಲ್ಲ. ಎಲ್ಲವನ್ನೂ ಪರಾಮರ್ಶಿಸುವಂತಹ ಗುಣ ಪತ್ರಕರ್ತನಿಗಿರಬೇಕು. ಎಲ್ಲಾ ವಿಚಾರಗಳ ಸತ್ಯಾಸತ್ಯತೆಯನ್ನು ಮಾತಾನಾಡುವವನಾಗಬೇಕು. ಸಮಾಜದ ಅಂಕುಡೊಂಕುಗಳನ್ನು ಪ್ರಶ್ನೆ ಮಾಡುವವನಾಗಬೇಕೇ ಹೊರತು ಅವನ ವೈಯಕ್ತಿಕ ಯೋಚನೆಗಳನ್ನು, ಚಿಂತನಗಳನ್ನು ನೋಡುಗರ ತಲೆಗೆ ತುಂಬಿಸುವಂತಹ ಸರ್ವಸ್ವತಂತ್ರನಾದರೇ ಅವನಿಗೆ ಖಂಡಿತ ಪತ್ರಿಕೋದ್ಯಮದಲ್ಲಿ ಬಾಳುವುದಕ್ಕೆ ಸಾಧ್ಯವಿಲ್ಲ. ರಾಜಕಾರಣಿಗಳನ್ನು ಬಿಟ್ಬಿಡಿ ಸ್ವಾಮಿ ಅವರು ಸುಳ್ಳ್ ಹೇಳ್ತಿದ್ದಾರೆ... ಅವರನ್ನು ಓಲೈಸಿಕೊಂಡು ಮಾತಾಡುವುದು ಬಿಡಿ. ಸತ್ಯ ಮಾತಾಡಿ.

ಕೋಮು ಗಲಭೆಗಳಿಗೆ ಮಾಧ್ಯಮಗಳು, ಪತ್ರಕರ್ತರೇ ಪ್ರಚೋದನೆ ನೀಡ್ತಾರೆ ಎನ್ನುವ ಮಾತು ಸಾಮಾಜಿಕ ವಲಯದಲ್ಲಿದೆ... ಈ ಬಗ್ಗೆ ಹೇಳುವುದಾದರೆ..
ನಿರೂಪಕನಿಗೆ ಈ ಸಂದರ್ಭದಲ್ಲಿ ಒತ್ತಡ ಇರುತ್ತದೆ. ಮಾಧ್ಯಮಗಳು, ಪರ್ತಕರ್ತರು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ಮಾಧ್ಯಮಕ್ಕೆ ಬಹಳ ದೊಡ್ಡ ತಾಕತ್ತಿದೆ. ಅದು ಸಾಮಾಜಿಕ ಸ್ವಾಸ್ಥ್ಯ ಉಳಿಸುವುದಕ್ಕಾಗಿ ಕೆಲಸ ಮಾಡುತ್ತದೆ ಹೊರತಾಗಿ ಗಲಭೆಗಳಿಗೆ ಪ್ರಚೋದನೆ ಮಾಡುವ ಕೆಲಸ ಮಾಡುವುದಿಲ್ಲ.

ಎಡ, ಬಲ ಸಿದ್ದಾಂತಗಳನ್ನು ಪಾಲಿಸುವವರ ಅತಿರೇಕದ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು..?
ಅವರ ಸಿದ್ದಾಂತಗಳನ್ನು ಸ್ವೀಕರಿಸುವ ಅಗತ್ಯ ನಮಗಿಲ್ಲ. ನಮಗೆ ನಮ್ಮದೇ ಸಿದ್ದಾಂತ ಬೇಕು. ನನ್ನದು ಜರ್ನಲಿಸಂ ಸಿದ್ದಾಂತ. ರಾಜಕೀಯ, ಧರ್ಮ ಪ್ರೇರಿತ ಸಿದ್ದಾಂತಗಳು ನಮ್ಮನ್ನು ಪ್ರಚೋದಿಸುತ್ತವೆ. ಎಲ್ಲಾ ಸಿದ್ದಾಂತಗಳ ಬಗ್ಗೆ ಅರಿವಿರಬೇಕು. ಸಿದ್ದಾಂತಗಳು ಅವರವರ ಅಭಿವ್ಯಕ್ತಿಗೆ ಬಿಟ್ಟಿದ್ದು.

ಸಿಎಎ’ ಮತ್ತು ‘ಎನ್‌ಆರ್‌ಸಿ’ಯಿಂದಾಗಿ ದೇಶದೆಲ್ಲೆಡೆ ದೊಡ್ಡ ಮಟ್ಟದ ಪರ ವಿರೋಧ ಪ್ರತಿಭಟನೆ ನಡೆಯುತ್ತಿದೆ, ಹಲವು ಸಾವು, ನೋವು ಕೂಡ ಆಗಿವೆ. ಈ ಬಗ್ಗೆ ಏನ್ ಹೇಳ್ತೀರಿ..?
ಸಿಎಎ, ಎನ್‌ಆರ್‌ಸಿ ಈ ಹಿಂದೆ ಕೂಡ ಇತ್ತು. ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಯುತ್ತಿದೆ ಎಂತಾದರೇ ಅದನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಎಲ್ಲರೂ ಬಳಸಿಕೊಳ್ಳಬೇಕು. ಒಬ್ಬ ಪ್ರಜೆ ಒಂದು ಯೋಜನೆಯ ಬಗ್ಗೆ ಆತಂಕದಲ್ಲಿದ್ದಾನೆ ಎಂದಾಗ ಅಥವಾ ಗೊಂದಲದಲ್ಲಿದ್ದಾನೆ ಎಂದಾಗ, ಆ ಗೊಂದಲಗಳನ್ನು. ಆತಂಕಗಳನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು. ಆ ಯೋಜನೆಯ ಬಗ್ಗೆ ವಿವರವಾಗಿ ಸ್ಪಷ್ಟಪಡಿಸಬೇಕಾದದ್ದು ಕೇಂದ್ರ ಸರ್ಕಾರದ ಜವಾಬ್ದಾರಿ, ಆದ್ಯ ಕರ್ತವ್ಯ ಕೂಡ. ಆದರೇ, ಅದು ಆಗ್ತಿಲ್ಲ. ದೇಶದಲ್ಲಿ ಇರುವವರೆಲ್ಲಾ ನಮ್ಮವರೇ. ಆ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವುದಾದರೇ ಜನರಿಗೆ ಮನದಟ್ಟು ಮಾಡಿ ಹೇಳುವುದಕ್ಕೆ ಕೇಂದ್ರ ಸರ್ಕಾರ ಯಾಕೆ ಮುಂದಾಗಲ್ಲ..? ಎನ್ನುವುದೇ ವಿಪರ್ಯಾಸ.

ಪತ್ರಕರ್ತನಾಗಬೇಕಾದರೇ ನಾನು ಏನು ಮಾಡ್ಬೇಕು..? ಬೊಬ್ಬೆ ಹಾಕ್ಬೇಕಾ..? ವಿಚಾರ ಮಾತಾಡ್ಬೇಕಾ..?
ವಿಚಾರವೇ ಮುಖ್ಯ. ವಿಚಾರದೊಂದಿಗೆ ಗಟ್ಟಿಯಾಗಿ ಮಾತಾಡುವುದು ಅಗತ್ಯವಿದೆ. ಖಾಲಿ ಬೊಬ್ಬೆಯೇ ಆದರೆ ಕೇಳುವವರೂ ಇಲ್ಲ, ನೋಡುವವರೂ ಇಲ್ಲ. ಪತ್ರಕರ್ತನಾಗಬಯಸುವವನು ಎಲ್ಲದಕ್ಕಿಂತ ಮೊದಲು ವಿಚಾರ, ವಿಷಯಗಳ ಬಗ್ಗೆ ತಿಳುವಳಿಕೆ ಹೊಂದಿದವನಾಗಿರಬೇಕು. ಓದು ಮತ್ತು ಅದನ್ನು ಅಭಿವ್ಯಕ್ತಿಸುವ ಶಕ್ತಿ ಪತ್ರಕರ್ತನಿಗೆ ಬೇಕೆಬೇಕು.
-ಶ್ರೀರಾಜ್ ವಕ್ವಾಡಿ

Wednesday, February 26, 2020

ಆಪ್ ಮಾಡೆಲ್..!


ದೆಹಲಿ ರಾಜಕಾರಣದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ಈಗಾಗಲೇ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ದೆಹಲಿ ಮುಖ್ಯಮಂತ್ರಿ ಯಾವುದೇ ಖಾತೆಯು ತನ್ನೊಂದಿಗೆ ಇಟ್ಟುಕೊಳ್ಳದೆ ಮತ್ತಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ದೇಹಲಿಯಲ್ಲಿ ಮೂರನೇ ಬಾರಿ ರಾಜಧಾನಿಯ ಸಿಂಹಾಸನ ಏರಿರುವ ಅರವಿಂದ ಕೇಜ್ರಿವಾಲ್ ರಾಜಕೀಯ, ಸಿದ್ದಾಂತ, ಮತೀಯತೆಗಳಿಂದ ಪ್ರಕ್ಷುಬ್ಧಗೊಂಡಿರುವ ದೆಹಲಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದರಲ್ಲಿ ಕುತೂಹಲ ಮೂಡಿಸಿದೆ. ಇತ್ತ...  ಸಾಮಾಜಿಕ ವಲಯದಲ್ಲಿ, ಸತತ ಮೂರು ಭಾರಿ ಅಧಿಕಾರ ವಹಿಸಿಕೊಂಡ ಆಪ್ ಪಕ್ಷ ಆಡಳಿತರೂಢ ಬಿಜೆಪಿಗೆ ಹಾಗೂ ಕಾಣದಂತೆ ಮಾಯವಾಗುತ್ತಿರುವ ಕಾಂಗ್ರೇಸ್‌ಗೆ ಮುಳುವಾಗುತ್ತದಾ ಎಂಬ ಪ್ರಶ್ನೆ ಕೇಳಿಬರುತ್ತಿದೆ.
೨೦೧೯ರ ಲೋಕಸಭಾ ಚುನಾವಣೆಯ ಬಳಿಕ ಹರ‍್ಯಾಣ, ಮಹಾರಾಷ್ಟ್ರ, ಜಾರ್ಖಾಂಡ್‌ಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು, ಆ ಮೂರು ರಾಜ್ಯಗಳಲ್ಲಿಯೂ ಅಧಿಕಾರರೂಢ ಬಿಜೆಪಿ ಪಟ್ಟ ಏರುವುದರಲ್ಲಿ ವಿಫಲ ಕಂಡಿತ್ತು. ಈಗ ಆ ಸಾಲಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಹೀನಾಯ ಸೋಲನುಭವಿಸಿದೆ ಎನ್ನುವುದು ಅಚ್ಚರಿ. ೨೦೧೪ ಹಾಗೂ ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ್ದ ದೆಹಲಿಯ ದೊಡ್ಡ ಮತದಾರರ ವರ್ಗವೊಂದು ೨೦೧೫ ಹಾಗೂ ೨೦೨೦ರ ವಿಧಾನ ಸಭೆ ಚುನಾವಣೆಗಳಲ್ಲಿ ಆಪ್ ಪರ ಮತ ಚಲಾಯಿಸಿದ್ದು ದೆಹಲಿಯ ಮತದಾರರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ಇದು ಕೇಂದ್ರಾಡಳಿತರೂಢ ಬಿಜೆಪಿಗೆ ಬಹು ದೊಡ್ಡ ಎಚ್ಚರಿಕೆಯೂ ಹೌದು.
ಕೇಜ್ರಿವಾಲ್‌ರ ‘ಕಾಮ್ ಕಿ ರಾಜನೀತಿ’ ರಾಜಕಾರಣಕ್ಕೇನೂ ಹೊಸ ಮಾತಲ್ಲ. ದೆಹಲಿಯಲ್ಲಿ ಅದು ಗಟ್ಟಿಯಾಗುವುದಕ್ಕೆ ಆಪ್ ಮಾಡಿದ ಅಭಿವೃದ್ಧಿಯೇ ಕಾರಣ. ಅಧಿಕಾರದ ಅನುಭವವೇ ಇಲ್ಲದ ಒಂದು ಪ್ರಾದೇಶಿಕ ಪಕ್ಷ ರಾಷ್ಟ್ರದ ರಾಜಧಾನಿಯಲ್ಲಿ ಜಯ ಗಳಿಸಿದ್ದೇ ಐತಿಹಾಸಿಕ. ಈಗ ಸತತ ಮೂರನೇ ಭಾರಿ ಚುನಾವಣೆಯಲ್ಲಿ ಅಧಿಕಾರ ಹಿಡಿದದ್ದು ಆಪ್ ಮಾಡಿದ ಅಭಿವೃದ್ಧಿಯ ಹಲವು ಗಹನವಾದ ವಿಚಾರಗಳನ್ನು ಕಣ್ಮುಂದೆ ತರಿಸುತ್ತದೆ.
ಶಾಹಿನ್ ಬಾಗ್, ಜೆಎನ್‌ಯು, ಜಾಮಿಯಾಗಳಲ್ಲಿ ನಡೆದ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ಇಲ್ಲಿ ಚುನಾವಣೆಗೆ ವಿಷಯವೇ ಆಗಿಲ್ಲ ಎನ್ನುವುದು ದೆಹಲಿಯ ಮತದಾರರ ಬುದ್ಧಿ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ರಸ್ತೆ, ಸಾರಿಗೆ, ಸಡಕ್-ಬಿಜಿಲಿ-ಪಾನಿ(ನೀರು ಸರಬರಾಜು), ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣವೇ ಮತದಾರರಿಗೆ ಚುನಾವಣೆಯ ನಿಲುವಾಗಿ ಕಂಡಿದ್ದು ಆಪ್ ಯಶಸ್ಸಿಗೆ ಕಾರಣವಾಗಿದೆ ಎನ್ನುವುದು ಅಕ್ಷರಶಃ ಸತ್ಯ.
೧೯೯೮ರಲ್ಲಿ ಸುಷ್ಮಾ ಸ್ವರಾಜ್ ಸಾರಥ್ಯದ ಸರ್ಕಾರ ಅಧಿಕಾರ ಕಳೆದುಕೊಂಡ ದಿನದಿಂದ ಬಿಜೆಪಿ ಮತ್ತೆ ಮರಳಿ ಅಧಿಕಾರ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ ಎನ್ನುವುದನ್ನು ಅರಿಯಬೇಕಿದೆ. ಭಾವನಾತ್ಮಕ ಹೇರಿಕೆಗಳನ್ನು ಒಪ್ಪುವಷ್ಟರ ಮಟ್ಟಿಗೆ ಮತದಾರರು ಮೂರ್ಖರಲ್ಲ, ಆ ಧೋರಣೆ ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಆಡಳಿತ ನಡೆಸಿದಾಗ ಮಾತ್ರ ಅಧಿಕಾರ ನಡೆಸಲು ಸಾಧ್ಯವೆಂಬುವುದನ್ನು ಬಿಜೆಪಿ ಸೇರಿ ಕಾಂಗ್ರೇಸ್ ಕೂಡ ಮನಗಾಣಬೇಕಾಗಿದೆ. ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಗದೊಮ್ಮೆ ಆಮ್ ಆದ್ಮಿ ಪಕ್ಷ ಮೂರನೇ ಭಾರಿ ಹಿಡಿತ ಸಾಧಿಸಿ, ಅಭಿವೃದ್ದಿ ಕಾರ್ಯಗಳಿಗೆ ದೇಶದಲ್ಲಿಯೇ ಮಾದರಿ ಪಕ್ಷವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
-ಶ್ರೀರಾಜ್ ವಕ್ವಾಡಿ 

Tuesday, February 25, 2020

ಪ್ರೀತಿಯಲಿ ನಿಲ್ಲುವವಳು...!


ಕಣ್ಣಳತೆಯೊಳಗೇ
ಇದ್ದವಳು ಹತ್ಯಾಚಾರಕ್ಕೆ
ಬಲಿಯಾದಳು
ನಾನೋ, 
ಅಸಹಾಯಕಳಾಗಿ ನಿಂತಿದ್ದೆ..!

ನಂಗೊತ್ತು ಅವಳೀಗ 
ಬೆಂದು ಸುಟ್ಟು
ಇನ್ನೆಲ್ಲೋ ಚಿಗುರಲೆತ್ನಿಸುತ್ತಿದ್ದಾಳೆ..!
ಅಮೂರ್ತಗಳು 
ಕತ್ತಿ ಮಸೆಯುತ್ತಿವೆ...!
ಅವಳೀಗ ಮಣ್ಣಿನೊಳಗಿನಿಂದ
ಕೈ ಹೊರಚಾಚಿ ಬೆರಳು ತೋರಿ
ಹೇಳುತ್ತಿದ್ದಾಳೆ.... 
'ನನ್ನ ನಂತರ ನಿನ್ನದೇ ಸರದಿ'

ಹೌದು..
ಅವಳೀಗ 
ಕೆಲವರ ಮುಷ್ಟಿಯೊಳಗಿನ 
ಪ್ರೀತಿಯಲಿ ನಿಲ್ಲುವವಳು...! 
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)

Friday, February 21, 2020

ಟ್ರಂಪ್ ಬರುತ್ತಿದ್ದಾರೆ...!




ಟ್ರಂಪ್ ಬರುತ್ತಿದ್ದಾರೆ 
ಗೋಡೆ ನಿಂತಿದೆ...! 
ಸ್ಲಂ, ಬಡತನ, ಹಸಿವು 
ಗೋಡೆಯಾಚೆಗೆ..!

ಟ್ರಂಪ್ ಬರುತ್ತಿದ್ದಾರೆ‌
ನಗರ ನಾಗರಿಕತೆ,
ಸ್ಲಂ ನಡುವೆ ಗೋಡೆಯೆದ್ದಿದೆ...!
ಗೋಡೆಯಾಚೆ ಕೊಳಚೆ ಹರಿದಿದೆ...! 
ಆಗದ ಅಭಿವೃದ್ಧಿ ಗೋಡೆಯ
ಮೇಲೆ ಸಾಲು ಸಾಲು ಬರೆದಿದೆ..!

ಅಂದು ಇಂದಿರಾಸುತ 
ಸ್ಲಂ ಗುಡಿಸಲುಗಳ ಮೇಲೆ 
ಬುಲ್ಡೋಜ್ಹರ್ ಹಲ್ಲುಗಳನ್ನಿರಿಸಿದರು.. 
ಇಂದು ನಮೋ ಗೋಡೆ ಕಟ್ಟಿಸಿದರು...!

ಗೋಡೆಯಾಚೆಗೆ 
ಬಡತನ, ಹಸಿವು, ನಿರುದ್ಯೋಗ, 
ಸ್ಲಂ... ಬೀದಿ ಹೆಣಗಳಾಗಿವೆ...!
ಟ್ರಂಪ್ ಬರುತ್ತಿದ್ದಾರೆ..!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ) 




Wednesday, February 19, 2020

ಕತ್ತಲ ಸೀಳಿ ಬೆಳಕಿನತ್ತ ಒಯ್ಯುವ 'ಕೆಂಪು ಕೊರಳ ಹಕ್ಕಿ’



 ‘ಕಾವ್ಯ ಬೈರಾಗಿ’ ಎಂಬ ಹೆಸರಿನಲ್ಲಿ ಈಗಾಗಲೇ  ‘ಕೆಂಪು ಕೊರಳ ಹಕ್ಕಿ’ ಎಂಬ ತಮ್ಮ ಮೂರನೆಯ ಕವನ  ಸಂಕಲನವನ್ನು ಪ್ರಕಟಿಸಿರುವ ಯುವ ಪ್ರತಿಭೆ ಶ್ರೀರಾಜ್ ಎಸ್.ಆಚಾರ್ಯ ಬಹಳ ಸೂಕ್ಷ್ಮ ಸಂವೇದನೆಯ ಕವಿಯಾಗಿ ಬೆಳೆದಿದ್ದಾರೆ ಎಂಬುದಕ್ಕೆ  ಸಂಕಲನದೊಳಗಿರುವ , ೬೬ ಕವಿತೆಗಳೇ ಸಾಕ್ಷಿ.   ಕವಿ ಮನಸ್ಸಿನ ಭಾವನಾತ್ಮಕತೆಯೊಂದಿಗೆ ವೈಚಾರಿಕತೆ ಮತ್ತು ಸಮಾಜ ಮುಖಿ ಚಿಂತನೆಗಳಿಗೂ  ಮುಖವಾಣಿಯಾಗುವ  ಈ ಕವನಗಳು ಕಾವ್ಯಾಸಕ್ತರ ಮನಸ್ಸನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗುತ್ತವೆ.
 ಈ ಕವಿಗೆ ಭೂತ-ವರ್ತಮಾನ-ಭವಿಷ್ಯತ್ ಕಾಲಗಳೆಲ್ಲವೂ ಮುಖ್ಯವಾಗುತ್ತವೆ. ಗತ ಕಾಲದಲ್ಲಿ ಕಣ್ಣ ಮುಂದೆ ನಡೆದ ದುರ್ಘಟನೆಗಳು ಮನಸ್ಸನ್ನು ಕದಡಿಸಿ ಕಂಗೆಡುವಂತೆ ಮಾಡಿದರೆ ವರ್ತಮಾನದ ತುರ್ತಿಗೂ ಅವರು ಗಾಢವಾಗಿ ಸ್ಪಂದಿಸುತ್ತಾರೆ. ಅವರ ಕಾವ್ಯಸೃಷ್ಟಿಯು ಅವರು ಜಗತ್ತನ್ನು ಪರಿಗ್ರಹಿಸುವ ರೀತಿಯನ್ನು ಪ್ರತಿನಿಧಿಸುತ್ತದೆ. ಮೊದಲ ಸಂಕಲನ ‘ರಿಕ್ತ ನಕ್ಷತ್ರ’ ದ ನಂತರ   ಈ ಮೂರು ವರ್ಷಗಳಲ್ಲಿ ಅವರ ಲೋಕ ಗ್ರಹಿಕೆಯಲ್ಲಿ ಸಾಕಷ್ಟು ಪರಿಷ್ಕಾರವಾಗಿದೆ. ಅವರ  ಕಾವ್ಯಚಿಂತನೆಯ ಹಿಂದಿನ ತಾತ್ವಿಕ ನಿಲುವುಗಳು ಗೊಂದಲಗಳಿಂದ ಮುಕ್ತವಾಗಿ ಸ್ಪಷ್ಟತೆಯನ್ನು ಪಡೆದಿವೆ.  ಕಂಡದ್ದನ್ನು ಕಂಡಂತೆ ನೇರವಾದ ಶಬ್ದಗಳಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದೆ.
ಮೊದಲ ಕವನ ‘ಕವನ ಪಕ್ಷಿ’ಯೇ ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿ. ಕಾವ್ಯ ರಚನೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಕವಿಯ ಹೊಣೆ.  ಅಂತೆಯೇ, ಹಾಡಿನ ಮೂಲಕ ಜನರಿಗೆ ಸಂತೋಷ ನೀಡುವುದು ಪಕ್ಷಿಯ ಕೆಲಸ. ಇಲ್ಲಿ ಪಕ್ಷಿಯೇ ಒಂದು ಪ್ರತಿಮೆಯಾಗಿದೆ. ಇಂದು ಆ ಪಕ್ಷಿಗೆ ಹಾಡುವ ಮನಸ್ಸಿಲ್ಲ.  ಮನಸ್ಸಿಗೆ ಸಂತೋಷವಿಲ್ಲ.  ಯಾಕೆಂದರೆ ಸಮಾಜದಲ್ಲಿ ಬದಲಾವಣೆ ತರಬಲ್ಲ ಪವಾಡ ಪುರುಷರ ಶಕ್ತಿ ಎಲ್ಲೋ ಕಳೆದು ಹೋಗಿದೆ. ಬದುಕಿಸುವ ಮಾತುಗಳು ‘ಕೋಮಿನ ಅಫೀಮು ಸೇವಿಸಿದಂತೆ’ ಹಾದಿ ತಪ್ಪಿವೆ. ಮುನ್ನಡೆಯ ಬೇಕಾದ ಹಾದಿಯಲ್ಲೆಲ್ಲ ಅಡತಡೆಗಳು ತುಂಬಿವೆ. ಇಂಥ ಸ್ಥಿತಿಯಲ್ಲಿ ಕವನ ಪಕ್ಷಿ ಹೇಗೆ ತಾನೇ ಹಾಡೀತು ? ಇದು ಕವಿಯ ಅಸಹಾಯಕತೆ ಕೂಡಾ ಆಗಿದೆ.
 ಕವಿಗೆ ತನ್ನ ವೈಯಕ್ತಿಕ ಬದುಕು ಸಹ್ಯವೆನ್ನಿಸಿದರೂ ಸಾಮಾಜಿಕ ಬದುಕಿನಲ್ಲಿ ಧಗಧಗಿಸಿ ಉರಿಯುತ್ತಿರುವ ಕೋಮು ದ್ವೇಷದ ಕಿಚ್ಚನ್ನು – ‘ಗುಡಿ-ಚರ್ಚು- ಮಸೀದಿಗಳಿಗೆ ಹೇಸಿಗೆ ಅಂಟಿದ್ದನ್ನು’ -ನೋಡಲಾಗುವುದಿಲ್ಲ. ಧರ್ಮದ ಹೆಸರಿನಲ್ಲಿ  ರಕ್ತದ ಕೋಡಿ  ಹರಿಸುತ್ತಿರುವುವವರನ್ನು ನೋಡಿದರೆ ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹ ಹುಟ್ಟುತ್ತದೆ. (  ಎಲ್ಲಿ ಹುಡುಕಲಿ...ಪು.೯) ಆದರೂ ಕವಿಯದ್ದು ಬಹಳ ಗಟ್ಟಿ ಮನಸ್ಸು. ಬಂಡೆಗೆ ಅಂಟಿದ ಪಾಚಿಯಂತೆ ಎಷ್ಟೇ ಕಷ್ಟಗಳು ಬಂದರೂ ಎಲ್ಲಿಯೂ ಬೆಳೆಯಬಲ್ಲೆ ಎಂಬ ಆತ್ಮ ವಿಶ್ವಾಸ ಆತನಲ್ಲಿದೆ. ( ಬಂಡೆಗೆ ಅಂಟಿದ ಪಾಚಿ. ಪು.೧೧) ಆದ್ದರಿಂದ ಕತ್ತಲಲ್ಲಿ ಅನುಭವಿಸಿದ ಸೋಲನ್ನು ಮರೆಸಲೆತ್ನಿಸುತ್ತ ಆತ ಬೆಳಕಿನ ನಿರೀಕ್ಷೆಯಲ್ಲಿ ಕಾಯುತ್ತಾನೆ  :
ಬಯಕೆ ಹೊತ್ತ ಬದುಕು/ ಸೋತು ಬಿದ್ದಿದೆ./ಕತ್ತಲು ಮೆಟ್ಟಿದ ದಾರಿಯಲ್ಲಿ/ ಕಲ್ಯಾಣದ ದನಿ/ ಬೆಳಕನ್ನೆಬ್ಬಿಸ ಬೇಕಿದೆ ( ಕತ್ತಲು ಮೆಟ್ಟಿದ ದಾರಿ. ಪು.೧೨)
 ಭಾವದರಮನೆಯಲ್ಲಿ ವಿಹರಿಸಿ, ಕಲ್ಪನೆಗಳಿಗೆ ನವ್ಯ ಭಾವ ಭಾಷೆಯಲ್ಲ್ತಿ ಅಭಿವ್ಯಕ್ತಿ ನೀಡಿ, ಕಾವ್ಯ  ವೀಣೆಯ ತಂತಿಯನ್ನು ಸಹನೆಯಿಂದ ಮೀಟುತ್ತ ಖುಷಿ ಪಡುತ್ತಿದ್ದಂತೆ (  ಶ್ರುತಿ ರಸ ತುಂಬಿ ಪು.೧೬) ದೀಪದ ತೈಲ ಬತ್ತಿಯೇ ಹೋಯಿತೇನೋ ಎಂಬಂತೆ ಬರಿದಾದ ಭೂಮಿ, ಬತ್ತಿದ ನದಿ,  ಮೋಡಗಳ ಕಟ್ಟದ ಗಾಳಿ, ಮಳೆ ಸುರಿಸದ ಆಕಾಶಗಳ ಮಧ್ಯೆ  ಕವಿಯ ಬಯಕೆ ಒಮ್ಮೆ ನಲುಗಿ ಚಡಪಡಿಸಿದರೆ (ಹನಿ ತೈಲವಿರುವ ದೀಪ, ಪು.೧೮ ) ಬದುಕಿನ ಬಣ್ಣ-ಭಾವಗಳನ್ನು ಸ್ವೀಕರಿಸುವ ಮನಸ್ಸಿನ ವೀಣೆಯ ತಂತಿ ಶ್ರುತಿ ತಪ್ಪಿ ವ್ಯಸನಗೀತೆ ಹಾಡುತ್ತದೆ (ಹಾಡು ಹಕ್ಕಿಗೆ ದನಿಗೂಡಿಸುತ್ತಿಲ್ಲ, ಪು.೨೦). ಕತ್ತಲೆಯ ಮೌನವೂ ಪಾಚಿಗಟ್ಟಿ ಬೆಳಕಿಲ್ಲದ ಬೆಂಕಿ ನೀಲಿ ರಂಗೇರಿ ಬಾನೆತ್ತರಕ್ಕೆ ಮುಟ್ಟುತ್ತ ಭಾವವನ್ನು ಮಂಕಾಗಿಸುತ್ತದೆ (ನೀಲಿ ರಂಗೇರಿ, ಪು.೬೭). ಕವಿತೆ ಬರೆಯುವುದರ ಮೂಲಕ ಕಂಬನಿಗೊಂದು ಪರಿಹಾರ ಹುಡುಕಲೆತ್ನಿಸಿದರೆ ದೇವರ ವೇಷದ ಮಾನವ-ದಾನವರು ನಿಷ್ಕರುಣರಾಗಿ ‘ಕೆಂಪು ಕವಿತೆ’ ಕಟ್ಟುತ್ತಾರೆ ( ಕೆಂಪು ಕವಿತೆ, ಪು.೨೨)
 ಆದರೂ ಕವಿಯ ಕಲ್ಪನೆಯ  ಕೆಂಪು ಕೊರಳ ಹಕ್ಕಿ  ಸೋಲುವುದಿಲ್ಲ.  ಏನೇ ಆದರೂ ಕತ್ತಲೆಗೆ ಹೊಂದಿಕೊಂಡು  ಅದನ್ನು ಸವಾಲಾಗಿ ಸ್ವೀಕರಿಸಿಕೊಳ್ಳುತ್ತೇನೆಂದು ನಿರ್ಧರಿಸಿ ಆಕ್ರಂದನವನ್ನು ಅದುಮಿಟ್ಟು ಬಯಸಿದ್ದನ್ನು ಹುಡುಕುತ್ತ  ಭಯ-ಬೇಗುದಿಗಳ ನಡುವೆ  ಹಾಡುತ್ತಲೇ ಇದೆ :
 ‘ಬತ್ತಿದ ನದಿಯಲ್ಲಿ/ಹುಟ್ಟಿಲ್ಲದ ದೋಣಿಯಲಿ/ನಾಳೆಯ ಬಯಸಿ/ ಹೊಸ ಕನಸುಗಳನ್ನಪ್ಪಿ / ತಬ್ಬಿ ಸಾಗುತ್ತಿದೆ.’
ಇಲ್ಲಿನ ಸಾಲುಗಳು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿಕೊಂಡು ಭವಿಷ್ಯದ ಬಗ್ಗೆ ಹೊಸ ಕನಸುಗಳನ್ನು ಹೆಣೆಯುವ  ಚಿತ್ರವು  ಬದುಕಿನಲ್ಲಿ ಎದುರಾಗುವ ಅಹಿತಕರ ಸನ್ನಿವೇಶಗಳನ್ನು ಸವಾಲಾಗಿ ಸ್ವೀಕರಿಸುವ  ಕವಿಯ ದಿಟ್ಟತನದ ಪ್ರತೀಕವಾಗಿ ಕಾಣುತ್ತದೆ. ಇದು ಸಂಕಲನದ ಒಂದು ಸುಂದರ ಕವನವೂ ಹೌದು.


ಸಂಕಲನದ  ಎಲ್ಲ ಕವನಗಳೂ ಕತ್ತಲು-ಬೆಳಕುಗಳ ನಡುವೆ ಹೊಯ್ದಾಡಿದರೂ ಸೋಲಿನ ಹತಾಶ ಭಾವ ಎಲ್ಲೂ ಕಾಣಿಸುವುದಿಲ್ಲ. ಗತದಲ್ಲಿ ಶಶಿಮಾಮನನ್ನು ನೋಡುತ್ತ ನಕ್ಷತ್ರವಾಗಿ ಮಿನುಗುತ್ತಿದ್ದ ಬಾಲ್ಯದ ನೆನಪುಗಳ ಸಕ್ಕರೆಯ ಸಿಹಿ ಸ್ವಾದವು ಭವಿಷ್ಯದ ಹೊಸ ಭರವಸೆಯ ಧ್ರುವತಾರೆಯಾಗುವ ಪರಿ( ಸಕ್ಕರೆಯ ಸಿಹಿಸ್ವಾದ.ಪು.೨೫), ಕತ್ತಲೆಯ ಹೊಲಸಳಿಸಿ ಹೋಗಿ ಹರ್ಷವನು ಮೊಗೆಮೊಗೆದು ನೀಡುವ ದೀಪಾವಳಿಯ ವೈಭವ,  (ಜ್ವಲಿಸಿದ ಪ್ರಣತಿ.ಪು.೬೫), ಕತ್ತಲೆಯ ಅಪಶ್ರುತಿ ದಹಿಸಿ ಹೋಗಿ ಮನಸ್ಸು ಉಲ್ಲಾಸದಿಂದ ಆಶಾವಾದದ ಬೆನ್ನೇರಿ ಬೆಳಗುವ ಕಲ್ಪನೆ (ಹೊಸತನ ಬಾಚಿಕೊಳ್ಳುತ್ತಿದೆ ಪು.೩೭), ಭಾವಕಾವ್ಯದ ಭೋರ್ಗರೆತ ನಿಂತು ಶಾಂತವಾಗಿ  ತೊಟ್ಟಿಕ್ಕುತ್ತಿರುವ ಹನಿಯ ತಂಪಾದ ಭಾವ ( ಹನಿ ಈಗ ತೊಟ್ಟಿಕ್ಕುತ್ತಿದೆ ಪು.೩೮),ಇರುಳು ಕವಿದ ಕಾಡದಾರಿಯ ಪಯಣಕ್ಕೆ ಮೌನದ ಮೂಲಕವೇ  ಸಂತಸದ ಸಂವಹನ ( ಮೌನ ಸರಿಗಮ ಹಾಡಿದೆ ಪು.೪೦) ಎಲ್ಲೆಡೆ ಸುಳಿದಾಡುತ್ತಿರುವ ಶುಭಕಾಮನೆಯ ಬಣ್ಣದ ಅಕ್ಕರೆಯ ಕನ್ನಡಿಯು ಪ್ರೀತಿಯ  ಮುನ್ನುಡಿ ಬರೆದು ಭವಿಷ್ಯದ ದೀಪ ಬೆಳಗುವುದು ( ತರ ತರ ಬಣ್ಣದ ಅಕ್ಕರೆಯ ಕನ್ನಡಿ.ಪು.೩೧) ಹಾರುವ ಚಿಟ್ಟೆಯಾಗಿ ಪಡೆಯುವ ರೋಮಾಚಕ ಅನುಭವ (ಪು.೩೫)-ಈ ಎಲ್ಲ ಚಿತ್ರಗಳೂ ಕವಿಯ ಧನಾತ್ಮಕ ಚಿಂತನೆಯನ್ನು ಬಿಂಬಿಸುತ್ತವೆ.
ಬಣ್ಣಗಳೆಲ್ಲವೂ ನಶ್ವರ ಎನ್ನುವ ಕವಿ ಪ್ರೀತಿಯ ಬಣ್ಣಕ್ಕೆ ಸೋಲುತ್ತಾನೆ. ದಾರಿ ಕಾಣದೆ ಕಂಗೆಡುವ ಕವಿಗೆ ಪ್ರೀತಿಯೊಂದೇ ಭರವಸೆಯ ಬೆಳಕಾಗಿ ಕಾಣುವುದು ಬದುಕಿನಲ್ಲಿ ಕವಿ ಕಾಣುವ ಸೌಂದರ್ಯದ ಪ್ರತೀಕವಾಗಿ ಕಾಣುತ್ತದೆ. ಹೀಗೆ ಸಮಾಜವನ್ನು ತುಂಬುವ ದ್ವೇಷ-ದೌರ್ಜನ್ಯ ರಕ್ತಪಾತಗಳನ್ನು ನೋಡಿ ನೊಂದ ಹಕ್ಕಿಯ ಕೊರಳು ಕೇಂಪಾದರೂ ಭವಿಷ್ಯದ ಹೊಂಗನಸನ್ನು ನನಸು ಮಾಡಲೆಂದು ನಿರಂತರವಾಗಿ ದಣಿವಿಲ್ಲದೆ  ಕಾವ್ಯ ಬೈರಾಗಿಯಂತೆ ಹಾಡುತ್ತಲೇ ಇರುವ ಹಕ್ಕಿಯನ್ನು ನಾವಿಲ್ಲಿ ಕಾಣುತ್ತೇವೆ.
 -ಡಾ. ಪಾರ್ವತಿ ಜಿ.ಐತಾಳ್


ಕೆಂಪು ಕೊರಳ ಹಕ್ಕಿ 
ಲೇ : ಕಾವ್ಯ ಬೈರಾಗಿ 
ಪ್ರ : ಜಾನಕಿರಾಮ ಪಬ್ಲಿಷರ್ಸ್
ವಕ್ವಾಡಿ, ಕುಂದಾಪುರ
8762723716
  

ಸಿಮ್ ರಾದ್ದಾಂತ...!



“ನಿನ್ನೆ ತಡರಾತ್ರಿ ಕಾಲ್ ಮಾಡಿ ಮಾತಾಡಿದ್ದೆ, ಇಂಟರ್‌ನೆಟ್ ಯ್ಯೂಸ್ ಮಾಡಿ ಮಲಗಿದ್ದೆ. ಬೆಳಿಗ್ಗೆ ನೋಡಿದ್ರೆ ನೋ ಸರ್ವಿಸ್ ಅಂತ ರ‍್ತಿದೆ, ಇನ್ನೊಬ್ಬ ಕಸ್ಟಮರ್, ಇವತ್ತು ಅರ‍್ಜೆಂಟ್ ಕಾಲ್ ಮಾಡೋದಕ್ಕೆ ನೋಡಿದ್ರೆ ಎಮರ‍್ಜೆನ್ಸಿ ಕಾಲ್ ಓನ್ಲಿ ಅಂತ ರ‍್ತಿದೆ. ಏನಾಗಿದೆ ಅಂತ ಸ್ವಲ್ಪ ನೋಡಿ..! ಇನ್ನೂ ಕೆಲವರು ಸಿಮ್‌ಗೆ ಏನಾಗಿದೆ ಎಂದು ತೆಗೆದು ನೋಡುವಾಗ ಸಿಮ್‌ನ ನೆಟ್‌ವರ್ಕ್ ಚಿಪ್ ಕಿತ್ತು ಬರುತ್ತಿದೆ, ಸಿಮ್ ಕಟ್ ಆಗ್ತಿದೆ.. ಎಂದು ಹೇಳುತ್ತಿದ್ದಾರೆ...”
ಇದು ಸರಿಸುಮಾರು ಒಂದು ತಿಂಗಳುಗಳಿಂದ ಕಸ್ಟಮರ್ ಕಡೆಯಿಂದ ಬರುತ್ತಿರುವ ಕಂಪ್ಲೆಂಟ್ ಎಂದು ಹೆಚ್ಚಿನ ಮೋಬೈಲ್ ಅಂಗಡಿಯ ಮಾಲಿಕರು ಆಡಿಕೊಳ್ಳುತ್ತಿರುವ ಮಾತುಗಳು.
ಹೌದು, ಇದು ಬೇರೆ ಯಾವುದೇ ಸಿಮ್‌ನ ಕಥೆಯಲ್ಲ. ಭಾರತದ ಅಗ್ರಗಣ್ಯ ಮೊಬೈಲ್ ನೆಟ್‌ವರ್ಕ್ ಏರ್‌ಟೆಲ್ ಸಿಮ್‌ನ ಬಗೆಗಿರುವ ಬಳಕೆದಾರರ ಕಂಪ್ಲೆಂಟ್.
ದೇಶದಲ್ಲಿ 4ಜಿ ನೆಟ್‌ವರ್ಕ್, ಬಳಕೆಗೆ ಬಂದು ವರ್ಷ ಕಳೆಯಿತು. ಆದರೂ ಇನ್ನೂ ೩ಜಿ ಸಿಮ್‌ಗಳನ್ನೇ ಬಳಸುತ್ತಿದ್ದಾರೆ. ಇನ್ನು ಕೆಲವರು 3ಜಿ ಸಿಮ್‌ಗಳನ್ನು 4ಜಿ ಗೆ ಕನ್ವರ್ಟ್ ಮಾಡಿಕೊಂಡಿದ್ದಾರೆ. 4ಜಿ ನೆಟ್‌ವರ್ಕ್ಗಳಿಗೆ ಸಿಮ್‌ನ್ನು ಅಪ್‌ಗ್ರೇಡ್ ಮಾಡುವ ಧಾವಂತದಲ್ಲಿ ಸಿಮ್‌ನ ಗುಣಮಟ್ಟಕ್ಕೆ ಏರ್‌ಟೆಲ್ ಹೆಚ್ಚು ಗಮನಕೊಟ್ಟಿಲ್ಲದಂತೆ ಕಾಣುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ತನ್ನೆಲ್ಲಾ ಕಾಲ್, ಮೆಸೆಜ್ ಹಾಗೂ ಇಂಟರ್‌ನೆಟ್ ಸೇವೆಗಳ ದರವನ್ನು ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್ ಈಗ ತನ್ನ ಕಳಪೆ ಗುಣಮಟ್ಟದ ಸಿಮ್ ಕಾರ್ಡ್ ಹಾಗೂ ನೆಟ್‌ವರ್ಕ್ನ ಸೇವೆಗಳಿಂದ ಬಳಕೆದಾರರ ಆಕ್ರೋಶಕ್ಕೆ ತುತ್ತಾಗಿದೆ ಎನ್ನುವುದಕ್ಕೆ ಏರ್‌ಟೆಲ್ ಬಳಕೆದಾರರಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಕಂಪ್ಲೆಂಟ್ ಸಾಕ್ಷಿ.
ಈಗಾಗಲೇ ದೇಶದ ಕೆಲವು ಕಡೆ ಏರ್‌ಟೆಲ್ ತನ್ನ 3ಜಿ ನೆಟ್‌ವರ್ಕ್ನ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಭಾರ್ತಿ ಏರ್‌ಟೆಲ್ ಕಂಪೆನಿ ತನ್ನ ಬಳಕೆದಾರರಿಗೆ ಸಿಮ್ ಅಪ್‌ಗ್ರೇಡ್ ಮಾಡಿಕೊಳ್ಳಿ ಎಂಬ ಸೂಚನೆಯನ್ನೂ ಮೊದಲೇ ನೀಡಿದೆ ಆದರೂ, ತನ್ನ 4ಜಿ ಹೊಸ ಸೇವೆಗಳಿಗೆ ನೀಡುತ್ತಿರುವ ಸಿಮ್ ಕಾರ್ಡ್ಗಳು, ನೆಟ್‌ವರ್ಕ್ಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ ಎನ್ನುವುದು ಏರ್‌ಟೆಲ್ ಕಸ್ಟರ‍್ಸ್ ಅಳಲಾಗಿದೆ. ತನ್ನ ಸೇವೆಯ ದರವನ್ನು ಹೆಚ್ಚಳ ಮಾಡಿ ಸಾಮಾನ್ಯ ವರ್ಗದವರ ಕಣ್ಣೀರಿಗೆ ಕಾರಣವಾದ ಏರ್‌ಟೆಲ್ ಕಂಪೆನಿ, ಈಗ ಇಂತಹ ತೊಂದರೆಗಳಿಂದ ಬಳಕೆದಾರರಿಗೆ ಭ್ರಮನಿರಸನ ಉಂಟು ಮಾಡಿದೆ. ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಭಾರ್ತಿ ಏರ್‌ಟೆಲ್ ಕಂಪೆನಿ ಸೋತರೇ, ತನ್ನ ಬಳಕೆದಾರರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದರಲ್ಲಿ ಏನೂ ಸಂದೇಹವಿಲ್ಲ. ಇನ್ನಾದರೂ ಕಂಪೆನಿ ತನ್ನ ನೆಟ್‌ವರ್ಕ್ ಹಾಗೂ ಸಿಮ್ ಕಾರ್ಡ್ನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ.
-ಶ್ರೀರಾಜ್ ವಕ್ವಾಡಿ.        

Saturday, February 15, 2020

ಅವಳು ಪವಿತ್ರ...!



ಅವಳು ನೆತ್ತರನ್ನು
ಹರಿಯ ಬಿಟ್ಟಿದ್ದಳು 
ನಾವೆಲ್ಲಾ ಆ ನೆತ್ತರಿನಲಿ 
ತೇಲಿ ಬಂದಿದ್ದೇವೆ...! 
ಅವಳನ್ನು ಪವಿತ್ರ 
ಎಂದವರು
ಒಳ ಉಡುಪನ್ನು 
ಬಿಚ್ಚಿ ನೋಡುತ್ತಿದ್ದಾರೆ...!


ದೇವರನ್ನು ಪ್ರವೇಶಿಸಲು 
ಬೇಡವೇ ಅವಳು...!? 
ನನ್ನೊಳಗೆ ನನ್ನೇ
ನಾ ಕಾಣಲು ಬೇಡವೇ 
ಅವಳು...! 
ಅವಳಿಗೋ, ನೋವೆಂದರೇ
ಸಿಹಿ ಭಕ್ಷ್ಯ..!

ಬೇಕಾದವಳು, 
ಬಂಧಿಯಾದವಳು,
ಒಳಗೊಳಗೆ ಬಿಕ್ಕಿದವಳು,
ಅದೆಂಥೆಂಥದ್ದೋ 
ಸಂಸ್ಕೃತಿಯಲಿ 
ಹೊರಗುಳಿದವಳು,
ಕತ್ತಲೆಯ ನುಂಗಿ 
ದೀಪ ಜ್ವಲಿಸಿದವಳು..! 
ತಿಂಗಳ ಮುಟ್ಟಿನಲ್ಲಿ 
ಬೆಂದವಳು...! 
ಬೆಳಕಾಗಿ ನಿಂತವಳು...!


ಅವಳು ಪವಿತ್ರಳಾಗಿದ್ದಳು.
ಅವಳ ತಿಂಗಳ ಋತುಸ್ರಾವವನ್ನು 
ನಾನೂ ಸ್ಪರ್ಶಿಸಿ ಬಂದಿದ್ದೇನೆ...! 
ಅವಳಿಂದ...
ನಾನೂ ಪವಿತ್ರನಾಗಿದ್ದೇನೆ...!


ಅವಳು ಅಂದು ಇಂದು 
ಎಂದಿಗೂ ಪವಿತ್ರಳೇ..‌
ಆದರಿಂದು ಅವಳ 
ಒಳ ಉಡುಪು ಬಿಚ್ಚಿ
ನೋಡುತ್ತಿದ್ದಾರೆ...!
ಕಣ್ಣ ತುದಿಯಲ್ಲಿ
ಹನಿ ಹನಿಯುವಾಗಲೂ
ಸಹಿಸಿಕೊಂಡಿದ್ದಾಳೆ
ಅವಳು ನಿಜಕ್ಕೂ ಪವಿತ್ರಳೆ..!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)