‘ಪತ್ರಿಕೋದ್ಯಮ’ ಆಯ್ಕೆಯಲ್ಲಿನ ನಿಮ್ಮ ಸ್ಫೂರ್ತಿಯೇನು..?
ಸ್ಫೂರ್ತಿ ಅಂತ ಏನಿಲ್ಲ. ನಾನು ಫಾರ್ಮಸಿ ಮಾಡಿದ್ದು, ಮೆಡಿಕಲ್ ರೆಪ್ ಮಾಡಿದೆ, ಆ ಕಾಲದಲ್ಲಿ ತುಳು ನಾಟಕಗಳನ್ನು ಮಾಡುವ ಅಭ್ಯಾಸ, ಹವ್ಯಾಸ ಇತ್ತು. ಕನ್ನಡದ ಬಗ್ಗೆ ತುಂಬಾ ಅಭಿಮಾನ, ಆಸಕ್ತಿ ಇದ್ದುದ್ದರಿಂದ ಈ ಕ್ಷೇತ್ರಕ್ಕಾಗಿ ಬರುವುದಕ್ಕೆ ಸಾಧ್ಯವಾಯ್ತು. ರಂಗರಾವ್ ಅಂತವರು ವಾರ್ತೆಗಳನ್ನು ಓದುತ್ತಿದ್ದನ್ನು ಗಮನಿಸುತ್ತಿದ್ದೆ. ಆ ಟೈಮ್‌ನಲ್ಲಿ ಈಟಿವಿಯಲ್ಲಿ ವಾರ್ತಾವಾಚಕರು ಬೇಕಾಗಿದ್ದಾರೆ ಎನ್ನುವ ಕರೆ ಬಂದಿತ್ತು, ಅಲ್ಲಿಗೆ ಹೋದೆ, ನಾನು ನನ್ನ ಪ್ರೆಸೆಂಟೇಶನ್ ಕೊಟ್ಟೆ, ಅವರು ಇಂಪ್ರೆಸ್ ಆದ್ರು, ಆಗ ಕೆಲಸ ಬೇಕಿತ್ತು, ಸೇರ‍್ಕೊಂಡೆ, ಕೆಲಸ ಮಾಡ್ದೆ ಟಿವಿಯಲ್ಲಿರ‍್ತಿದ್ದೆ... ಖುಷಿಯಾಗ್ತಿತ್ತು. ಹೀಗೆ ನಾನು ಪತ್ರಿಕೋದ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡೆ ಅಷ್ಟೇ.
‘ಪತ್ರಕರ್ತ’ನಿಗೆ ಕ್ಯಾಮೆರಾದ ಮುಂದೆ ಒಂದು ಸಿದ್ದಾಂತ, ಕ್ಯಾಮರೆದಾ ಆಚೆ ಇನ್ನೊಂದು ಸಿದ್ದಾಂತ ಅಂತ ಇದೆಯಾ..?
ವ್ಯವಸ್ಥೆಯನ್ನು ಮೀರಿ ಬದುಕುವುದಕ್ಕೆ ಪರ್ತಕರ್ತನಿಗೆ ಸಾಧ್ಯವಿಲ್ಲ. ಮಾಹಿತಿ, ಚರ್ಚೆಗಳನ್ನು ಯಾವುದು ಬೇಕು, ಯಾವುದು ಬೇಡ ಎನ್ನುವುದನ್ನು ಪರಿಶೀಲಿಸಿ ಪರ್ತಕರ್ತನಾದವನು ಕಾರ್ಯನಿರ್ವಹಿಸಬೇಕಾಗುತ್ತದೆ, ಅದನ್ನು ಪ್ರೆಸೆಂಟ್ ಮಾಡಬೇಕಾಗುತ್ತದೆ. ಎಲ್ಲವನ್ನೂ ವಿದೌಟ್ ಫಿಲ್ಟರ್ ಕ್ಯಾಮೆರಾದ ಮುಂದೆ ಮಾತಾನಾಡುವುದಕ್ಕೆ ಸಾಧ್ಯವಿಲ್ಲ. ಪತ್ರಿಕೋದ್ಯಮಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಕ್ಯಾಮೆರಾದ ಮುಂದೊಂದು, ಆಚೆಗೊಂದು ಅಂತಲ್ಲ. ಕ್ಯಾಮೆರಾದ ಮುಂದೆ ಪತ್ರಿಕೋದ್ಯಮದ ನೀತಿ ನಿಯಮಗಳನ್ನು ಮೀರುವುದಕ್ಕಾಗುವುದಿಲ್ಲ, ಕ್ಯಾಮೆರಾದ ಆಚೆ ನಮ್ಮ ಅಭಿವ್ಯಕ್ತಿಯನ್ನು ಸ್ವಾತಂತ್ರ್ಯವನ್ನು ಬಳಸಿಕೊಳ್ಳಬಹುದು.
ಮಾಧ್ಯಮದ ವ್ಯವಸ್ಥೆಯ ಚೌಕಟ್ಟಿನೊಳಗೆ ಪತ್ರಕರ್ತನಾದವನು ತನ್ನ ನಿಜವಾದ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದ್ದಾನಾ..?
ಈ ಪ್ರಶ್ನೆ ಕೇಳುತ್ತಿರುವುದರಲ್ಲೇ ಉತ್ತರವಿದೆ. ಈ ಪ್ರಶ್ನೆಯೊಳಗಿನ ಟಿಕೆ, ಟಿಪ್ಪಣಿಗಳು, ವಿಮರ್ಶೆಗಳು ಒಬ್ಬ ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವಂತಹ ಶಕ್ತಿ ಇದೆ. ಸತ್ಯವನ್ನು ಹೊರತಾಗಿ ಇರುವವನು ಪತ್ರಕರ್ತನೇ ಅಲ್ಲ. ಸಾಮಾಜಿಕ ಜವಾಬ್ದಾರಿಯನ್ನು ಇಲ್ಲದೇ ಇರುವವನು ಪರ್ತಕರ್ತನಾಗುವುದಕ್ಕೆ ಸಾಧ್ಯವೇ ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯಗಳನ್ನೇ ಮಾಧ್ಯಮಗಳಲ್ಲಿ ಸುದ್ದಿಯಾಗಿ ತೆಗೆದುಕೊಳ್ಳಲಾಗುತ್ತಿದೆ.. ಈ ಬಗ್ಗೆ ನಿಮ್ಮ ಅಭಿಪ್ರಾಯ..?
ಅಕ್ಷರಶಃ ಸತ್ಯ. ಅದು ಈಗಿನ ಟ್ರೆಂಡ್. ಯಾವುದನ್ನು ಜನ ಹೆಚ್ಚಾಗಿ ನೋಡುತ್ತಿದ್ದಾರೋ ಅದನ್ನೇ ಸುದ್ದಿಯಾಗಿ ತೆಗೆದುಕೊಳ್ಳುವ ಅನಿವಾರ್ಯ, ಅಗತ್ಯತೆ ಮಾಧ್ಯಮಕ್ಕೆ ಇದೆ. ಕೆಲವೊಮ್ಮೆ ಅಭಾಸವಾಗುವುದು ಕೂಡ ಇದೆ. ಎಚ್ಚರಿಕೆ ಅಗತ್ಯ.
ಮಾಧ್ಯಮಗಳು ಬಳಕೆಯಾಗ್ತಿವೆಯಾ..? ‘ಪೇಯ್ಡ್ ಮಾಧ್ಯಮ’ ಎಂಬ ಮಾತಿಗೆ ನೀವು ಏನ್ ಹೇಳ್ತೀರಿ..?
ಜನ ಮೂರ್ಖರಲ್ಲ. ಆಯ್ಕೆ ಮಾಡುವುದು ಜನ. ಸಿದ್ದಾಂತಗಳನ್ನು ನನ್ನ ಪ್ರಕಾರ ಹೇರುವುದಕ್ಕೆ ಸಾಧ್ಯವಿಲ್ಲ. ಹೇರುವಂತಹ ಪ್ರಯತ್ನವನ್ನು ಮಾಡುತ್ತಿವೆ ಎನ್ನುವುದು ಒಪ್ಪಲೇಬೇಕು. ರಾಜಕೀಯ ಪಕ್ಷಗಳು ತಮ್ಮ ಸಿದ್ದಾಂತಗಳನ್ನು ಹೇಳಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿರುವುದು ಹೌದು. ಹಾಗಂತ ಮಾಧ್ಯಮಗಳು ಬಳಕೆಯಾಗುತ್ತಿವೆ ಅಂತಲ್ಲ. ನಾನು ಇದುವರೆಗೆ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಕಾರ್ಯಕ್ರಮ ನಿರೂಪಿಸಿದವನಲ್ಲ. ಮಾಧ್ಯಮಗಳನ್ನು ಬಳಕೆ ಮಾಡುವ ಪ್ರಯತ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತವೆ. ಮಾಧ್ಯಮಗಳು ಪೇಯ್ಡ್ ಆಗುವುದಕ್ಕೆ ಸಾಧ್ಯವಿಲ್ಲ. ಪೇಯ್ಡ್ ಆದ್ರೆ ಜನ ನೋಡುವುದಿಲ್ಲ. ನೋಡುಗರೇ ಅಂತಿಮ.
ಪತ್ರಕರ್ತ ‘ಸರ್ವಸ್ವತಂತ್ರ’ನಾಗುತ್ತಿದ್ದಾನೆ ಎನ್ನುವುದಕ್ಕೆ ಏನ್ ಹೇಳ್ತೀರಿ..?
ಸರ್ವಸ್ವತಂತ್ರನಾದ ಪತ್ರಕರ್ತನಿಗೆ ಹೆಚ್ಚುಕಾಲ ಬದುಕುವುದಕ್ಕೆ ಮಾಧ್ಯಮಗಳೂ ಬಿಡುವುದಿಲ್ಲ, ಜನರೂ ಬಿಡುವುದಿಲ್ಲ. ಎಲ್ಲವನ್ನೂ ಪರಾಮರ್ಶಿಸುವಂತಹ ಗುಣ ಪತ್ರಕರ್ತನಿಗಿರಬೇಕು. ಎಲ್ಲಾ ವಿಚಾರಗಳ ಸತ್ಯಾಸತ್ಯತೆಯನ್ನು ಮಾತಾನಾಡುವವನಾಗಬೇಕು. ಸಮಾಜದ ಅಂಕುಡೊಂಕುಗಳನ್ನು ಪ್ರಶ್ನೆ ಮಾಡುವವನಾಗಬೇಕೇ ಹೊರತು ಅವನ ವೈಯಕ್ತಿಕ ಯೋಚನೆಗಳನ್ನು, ಚಿಂತನಗಳನ್ನು ನೋಡುಗರ ತಲೆಗೆ ತುಂಬಿಸುವಂತಹ ಸರ್ವಸ್ವತಂತ್ರನಾದರೇ ಅವನಿಗೆ ಖಂಡಿತ ಪತ್ರಿಕೋದ್ಯಮದಲ್ಲಿ ಬಾಳುವುದಕ್ಕೆ ಸಾಧ್ಯವಿಲ್ಲ. ರಾಜಕಾರಣಿಗಳನ್ನು ಬಿಟ್ಬಿಡಿ ಸ್ವಾಮಿ ಅವರು ಸುಳ್ಳ್ ಹೇಳ್ತಿದ್ದಾರೆ... ಅವರನ್ನು ಓಲೈಸಿಕೊಂಡು ಮಾತಾಡುವುದು ಬಿಡಿ. ಸತ್ಯ ಮಾತಾಡಿ.
ಕೋಮು ಗಲಭೆಗಳಿಗೆ ಮಾಧ್ಯಮಗಳು, ಪತ್ರಕರ್ತರೇ ಪ್ರಚೋದನೆ ನೀಡ್ತಾರೆ ಎನ್ನುವ ಮಾತು ಸಾಮಾಜಿಕ ವಲಯದಲ್ಲಿದೆ... ಈ ಬಗ್ಗೆ ಹೇಳುವುದಾದರೆ..
ನಿರೂಪಕನಿಗೆ ಈ ಸಂದರ್ಭದಲ್ಲಿ ಒತ್ತಡ ಇರುತ್ತದೆ. ಮಾಧ್ಯಮಗಳು, ಪರ್ತಕರ್ತರು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ಮಾಧ್ಯಮಕ್ಕೆ ಬಹಳ ದೊಡ್ಡ ತಾಕತ್ತಿದೆ. ಅದು ಸಾಮಾಜಿಕ ಸ್ವಾಸ್ಥ್ಯ ಉಳಿಸುವುದಕ್ಕಾಗಿ ಕೆಲಸ ಮಾಡುತ್ತದೆ ಹೊರತಾಗಿ ಗಲಭೆಗಳಿಗೆ ಪ್ರಚೋದನೆ ಮಾಡುವ ಕೆಲಸ ಮಾಡುವುದಿಲ್ಲ.
ಎಡ, ಬಲ ಸಿದ್ದಾಂತಗಳನ್ನು ಪಾಲಿಸುವವರ ಅತಿರೇಕದ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು..?
ಅವರ ಸಿದ್ದಾಂತಗಳನ್ನು ಸ್ವೀಕರಿಸುವ ಅಗತ್ಯ ನಮಗಿಲ್ಲ. ನಮಗೆ ನಮ್ಮದೇ ಸಿದ್ದಾಂತ ಬೇಕು. ನನ್ನದು ಜರ್ನಲಿಸಂ ಸಿದ್ದಾಂತ. ರಾಜಕೀಯ, ಧರ್ಮ ಪ್ರೇರಿತ ಸಿದ್ದಾಂತಗಳು ನಮ್ಮನ್ನು ಪ್ರಚೋದಿಸುತ್ತವೆ. ಎಲ್ಲಾ ಸಿದ್ದಾಂತಗಳ ಬಗ್ಗೆ ಅರಿವಿರಬೇಕು. ಸಿದ್ದಾಂತಗಳು ಅವರವರ ಅಭಿವ್ಯಕ್ತಿಗೆ ಬಿಟ್ಟಿದ್ದು.
‘ಸಿಎಎ’ ಮತ್ತು ‘ಎನ್‌ಆರ್‌ಸಿ’ಯಿಂದಾಗಿ ದೇಶದೆಲ್ಲೆಡೆ ದೊಡ್ಡ ಮಟ್ಟದ ಪರ ವಿರೋಧ ಪ್ರತಿಭಟನೆ ನಡೆಯುತ್ತಿದೆ, ಹಲವು ಸಾವು, ನೋವು ಕೂಡ ಆಗಿವೆ. ಈ ಬಗ್ಗೆ ಏನ್ ಹೇಳ್ತೀರಿ..?
ಸಿಎಎ, ಎನ್‌ಆರ್‌ಸಿ ಈ ಹಿಂದೆ ಕೂಡ ಇತ್ತು. ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಯುತ್ತಿದೆ ಎಂತಾದರೇ ಅದನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಎಲ್ಲರೂ ಬಳಸಿಕೊಳ್ಳಬೇಕು. ಒಬ್ಬ ಪ್ರಜೆ ಒಂದು ಯೋಜನೆಯ ಬಗ್ಗೆ ಆತಂಕದಲ್ಲಿದ್ದಾನೆ ಎಂದಾಗ ಅಥವಾ ಗೊಂದಲದಲ್ಲಿದ್ದಾನೆ ಎಂದಾಗ, ಆ ಗೊಂದಲಗಳನ್ನು. ಆತಂಕಗಳನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು. ಆ ಯೋಜನೆಯ ಬಗ್ಗೆ ವಿವರವಾಗಿ ಸ್ಪಷ್ಟಪಡಿಸಬೇಕಾದದ್ದು ಕೇಂದ್ರ ಸರ್ಕಾರದ ಜವಾಬ್ದಾರಿ, ಆದ್ಯ ಕರ್ತವ್ಯ ಕೂಡ. ಆದರೇ, ಅದು ಆಗ್ತಿಲ್ಲ. ದೇಶದಲ್ಲಿ ಇರುವವರೆಲ್ಲಾ ನಮ್ಮವರೇ. ಆ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವುದಾದರೇ ಜನರಿಗೆ ಮನದಟ್ಟು ಮಾಡಿ ಹೇಳುವುದಕ್ಕೆ ಕೇಂದ್ರ ಸರ್ಕಾರ ಯಾಕೆ ಮುಂದಾಗಲ್ಲ..? ಎನ್ನುವುದೇ ವಿಪರ್ಯಾಸ.
ಪತ್ರಕರ್ತನಾಗಬೇಕಾದರೇ ನಾನು ಏನು ಮಾಡ್ಬೇಕು..? ಬೊಬ್ಬೆ ಹಾಕ್ಬೇಕಾ..? ವಿಚಾರ ಮಾತಾಡ್ಬೇಕಾ..?
ವಿಚಾರವೇ ಮುಖ್ಯ. ವಿಚಾರದೊಂದಿಗೆ ಗಟ್ಟಿಯಾಗಿ ಮಾತಾಡುವುದು ಅಗತ್ಯವಿದೆ. ಖಾಲಿ ಬೊಬ್ಬೆಯೇ ಆದರೆ ಕೇಳುವವರೂ ಇಲ್ಲ, ನೋಡುವವರೂ ಇಲ್ಲ. ಪತ್ರಕರ್ತನಾಗಬಯಸುವವನು ಎಲ್ಲದಕ್ಕಿಂತ ಮೊದಲು ವಿಚಾರ, ವಿಷಯಗಳ ಬಗ್ಗೆ ತಿಳುವಳಿಕೆ ಹೊಂದಿದವನಾಗಿರಬೇಕು. ಓದು ಮತ್ತು ಅದನ್ನು ಅಭಿವ್ಯಕ್ತಿಸುವ ಶಕ್ತಿ ಪತ್ರಕರ್ತನಿಗೆ ಬೇಕೆಬೇಕು.
-ಶ್ರೀರಾಜ್ ವಕ್ವಾಡಿ


Good one bro. Informative article
ReplyDeleteThank you so much bro
Delete