Thursday, February 1, 2024

ಬರೀ ʼಹಿಂದುತ್ವವೇ ರಾಜಕಾರಣʼ ಅಲ್ಲ ಎನ್ನುವ ಅರಿವು ಮೋದಿಗೂ, ಬಿಜೆಪಿಗೂ ಇದೆ !


ಬದುಕು ಕೊಡದ ಆಡಳಿತವನ್ನು ಜನ ಸುದೀರ್ಘ ಕಾಲದವರೆಗೆ ಪೊರೆದ ಇತಿಹಾಸ ಇಲ್ಲಿಲ್ಲ…

ರಾಜಕೀಯದಲ್ಲಿ ಹತ್ತು ವರ್ಷಗಳು ಅಂತಂದ್ರೆ ಸುದೀರ್ಘ ಅವಧಿ. ಈ ಸಮಯದಲ್ಲಿ ಭಾರತ ಹೊಸ ರಾಜಕೀಯ ಮಾದರಿಗೆ ಸಾಕ್ಷಿಯಾಗಿದೆ. ವಸಾಹತುಶಾಹಿ ಶಕ್ತಿಗಳಿಂದ ಮುಕ್ತಗೊಂಡ ನಂತರ ಆಧುನಿಕ ಭಾರತವು ಜಾತ್ಯತೀತತೆ, ಆಧುನಿಕತೆ, ಫೆಡರಲಿಸಂ, ಪ್ರಜಾಪ್ರಭುತ್ವ, ಪ್ರಗತಿಪರ ಚಿಂತನೆ ಮತ್ತು ಬಹುತ್ವದಂತಹ  ತತ್ವಗಳ ಆಧಾರಗಳಿಂದ ದೇಶ ಆಡಳಿತ ಕಂಡಿದೆ. ಭಾರತ ಬಹು ಸಂಸ್ಕೃತಿಗಳ ತಾಣ ಮತ್ತು ಒಂದು ನಿರ್ದಿಷ್ಟ ನಂಬಿಕೆ ಅಥವಾ ಪದ್ಧತಿಯ ಅನುಯಾಯಿಗಳ ಪ್ರಬಲ ಆಚರಣೆಯ ಕಾರಣದಿಂದಾಗಿ ಅಧೀನತೆಯನ್ನು ಎದುರಿಸಬೇಕಾದೀತು ಎಂಬ ಭಯ ಎಂದಿಗೂ ಇರಲಿಲ್ಲ. ಆದರೇ, 2014ರಿಂದ, ಭಾರತ ಹೊಸ ಸೈದ್ಧಾಂತಿಕ ಮಾದರಿಗೆ ಒಳಗೊಂಡಿದೆ ಮತ್ತು ಹಿಂದುತ್ವಕ್ಕೆ ಒಳಗೊಂಡಿದೆ. 2014ಲೋಕಸಭಾ ಚುನಾವಣೆಯ ಪೂರ್ವದಲ್ಲಿ, ಬಿಜೆಪಿ ಹಿಂದುತ್ವವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರಲಿಲ್ಲ. ಆರ್ಥಿಕ ಅಭಿವೃದ್ಧಿಯ 'ಗುಜರಾತ್ ಮಾಡೆಲ್'ನ್ನು ಕಾಂಗ್ರೆಸ್‌ನ ಭ್ರಷ್ಟಾಚಾರದ ಆಡಳಿತಕ್ಕೆ ಪರ್ಯಾಯ ಅಸ್ತ್ರವೆಂಬಂತೆ  ದೇಶದ ಜನರ ಎದುರಿಗಿಟ್ಟಿತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಹಿಂದುತ್ವ ಮೋದಿ ವರ್ಚಸ್ಸಿನ ಜೊತೆಗೆ ಚುನಾವಣೆಗಳನ್ನು ಗೆಲ್ಲಲು ಅಸಾಧಾರಣ ಸಾಧನವಾಗಿ ರಾಜಕೀಯದಲ್ಲಿ ಸ್ಥಾನ ಪಡೆಯಿತು. ಹಿಂದುತ್ವ ಒಂದು ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ತಂದುಕೊಟ್ಟಿತು, ಈಗ ಮರಳಿ ಚುನಾವಣೆಯ ಮತ್ತೊಂದು ಸುತ್ತು ಬಂದಿದೆ. ರಾಮ ಮಂದಿರದ ಉನ್ಮಾದದ ನಡುವೆ ಈಗ ಹಿಂದುತ್ವ ಒಂದೇ ಸಾಲದು ಎನ್ನುವ ಅರಿವು ಸ್ವತಃ ಬಿಜೆಪಿಗೆ ಅರಿವಾಗಿದೆ ಎಂದು ಕಾಣಿಸುತ್ತಿದೆ.

ʼಉಚಿತʼಗಳು ಭಾರತದಲ್ಲಿ ಸಾಮಾನ್ಯವಾದಂತಿದೆ. ಭಾರತೀಯ ರಾಜಕೀಯದಲ್ಲಿ ಮತದಾರರಿಗೆ ʼಉಚಿತʼ ಯೋಜನೆಗಳೇನು ಹೊಸಲ್ಲ. ತಮಿಳುನಾಡು ಎರಡು ದಶಕಗಳಿಗೂ ಹೆಚ್ಚು ಕಾಲ  ಈ ತಂತ್ರವನ್ನು ಪ್ರಯೋಗಿಸಿದೆ. ಉತ್ತರ ಭಾರತ ಚುನಾವಣೆಗಳನ್ನು ಗೆಲ್ಲುವಲ್ಲಿಯೂ ʼಉಚಿತʼ ಕೆಲಸ ಮಾಡಿದೆ. ʼಶ್ರೇಯʼ ಅರವಿಂದ್ ಕೇಜ್ರಿವಾಲ್ ಅವರಿಗೆ ಸಲ್ಲಬೇಕು. ದೆಹಲಿಯಲ್ಲಿ 2013ರಲ್ಲಿ ಆಮ್ ಆದ್ಮಿ ಪಾರ್ಟಿಯ(ಎಎಪಿ) ಅಭೂತಪೂರ್ವ ಯಶಸ್ಸಿಗೆ ದೆಹಲಿ ಮತದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್  ಮತ್ತು ಅರ್ಧ ಬೆಲೆಗೆ ನೀರು ಸರಬರಾಜು ಭರವಸೆ ನೀಡಲಾಯಿತು. ಆಪ್‌ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಕೇಜ್ರಿವಾಲ್ ಎರಡೂ ಯೋಜನೆಗಳನ್ನು ಜಾರಿಗೆ ತಂದರು. ಅದು ಆಪ್‌ನ ಟ್ರೇಡ್‌ ಮಾರ್ಕ್‌ ಆಗಿ ಬದಲಾಯಿತು. ಮತ್ತೆ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರ ತಂದುಕೊಟ್ಟಿತು.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಗ್ಯಾಸ್ ಸ್ಟೌವ್ (ಚುಲ್ಹಾ) ನೀಡಲು ʼಉಜ್ವಲ ಯೋಜನೆʼಯನ್ನು ಪ್ರಾರಂಭಿಸಿದರು. ಆದರೆ ಈ ರೀತಿಯ ಯೋಜನೆಗಳು ಮತ್ತು ಇತರ ಹಲವು ಯೋಜನೆಗಳನ್ನು ಕಲ್ಯಾಣ ಯೋಜನೆಗಳೆಂದು ವರ್ಗೀಕರಿಸಲಾಯಿತು. ಮೋದಿಯವರ ಹಿಂದುತ್ವ ಮತ್ತು ಅಭಿವೃದ್ಧಿಯ ಸಂಯೋಜನೆಯನ್ನೊಳಗೊಂಡ ರಾಜಕೀಯವನ್ನು ಎದುರಿಸಲು ವಿರೋಧ ಪಕ್ಷಗಳು ಹೆಣಗಾಡಿದವು.

ಬಿಜೆಪಿಯು ತಮ್ಮನ್ನು ʼಹಿಂದೂ ವಿರೋಧಿʼ ಮತ್ತು ʼಮುಸ್ಲಿಂ ಪರʼ ಎಂದು ಬಣ್ಣಿಸಿದೆ ಎಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಅರಿತುಕೊಂಡಿವೆ. ಶೇಕಡ 80ಕ್ಕಿಂತ ಹೆಚ್ಚು ಹಿಂದೂಗಳಿರುವ ದೇಶದಲ್ಲಿ ಯಾವುದೇ ಪಕ್ಷ ಹಿಂದೂ ವಿರೋಧಿಯಾಗಿ ಕಾಣುವುದು ಅಪಾಯಕಾರಿ ಭವಿಷ್ಯವಾಗಿತ್ತು. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಉತ್ಸಾಹದಿಂದ ದೇವಸ್ಥಾನಗಳಿಗೆ ಭೇಟಿ ನೀಡಿದರು. ಅದು ಸ್ವಲ್ಪ ಫಲ ನೀಡಿತು ಕೂಡ. ಕಾಂಗ್ರೆಸ್ನನು ದೂರವಿಡಲು ಮತ್ತು ಗುಜರಾತ್ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹರಸಾಹಸ ಮಾಡಿತು. ಬಿಜೆಪಿ ಕರ್ನಾಟಕದಲ್ಲಿ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಕಳೆದುಕೊಂಡಿತು. ಪುಲ್ವಾಮಾ ದಾಳಿ ಮತ್ತು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತದ ಪ್ರತೀಕಾರದ ವೈಮಾನಿಕ ದಾಳಿ ಮೋದಿ 2019ರಲ್ಲಿ ಹೊಸ ವರ್ಚಸ್ಸಿನಲ್ಲಿ ಅಧಿಕಾರಕ್ಕೆ ಏರಲು ಸಾಧ್ಯಮಾಡಿಕೊಟ್ಟಿತು. ಉಳಿದದ್ದು ಇತಿಹಾಸ.

ಪ್ರಬಲ ಸಮುದಾಯವೊಂದು ಒಂದು ವರ್ಗದ ಮೇಲೆ ಎದ್ದು ನಿಲ್ಲುತ್ತಿರುವ ಕಾಲವಿದು. ಅದು ಇತಿಹಾಸದ ಪ್ರತಿಕಾರವೂ ಹೌದು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ವೈಷಮ್ಯಕ್ಕೂ ಕಾರಣವಾಯಿತು. ಇದೇ ಕಾರಣಕ್ಕೆ ಹಿಂದುತ್ವದ ರಾಜಕೀಯವನ್ನು ಓವರ್‌ಟೇಕ್‌ ಮಾಡಿಕೊಳ್ಳಲು  ಪ್ರತಿಪಕ್ಷಗಳ ಪ್ರಯತ್ನವೂ ನಡೆಯಿತು. ಅರವಿಂದ್ ಕೇಜ್ರಿವಾಲ್ ದೀಪಾವಳಿ ಪೂಜೆಯನ್ನು ನೇರಪ್ರಸಾರ ಮಾಡಿಸಿದರು. ಹನುಮಾನ್ ಚಾಲೀಸಾವನ್ನು ಪಠಿಸಿದರು, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಗಾಯತ್ರಿ ಮಂತ್ರವನ್ನು ಪಠಿಸಿದರು. ಮೊನ್ನಮೊನ್ನೆ ಜಾತ್ಯಾತೀತ ನಾಯಕ ಎಂದು ಗುರುತಿಸಿಕೊಂಡ ಸಿದ್ದರಾಮಯ್ಯ ʼಜೈ ಶ್ರೀರಾಮ್‌ʼ ಘೋಷಣೆ ಕೂಗಿದರು. ಹಿಂದುತ್ವವನ್ನು, ರಾಮ ಭಕ್ತಿಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದಿದರ ಅರ್ಥವೇ ? ರಾಹುಲ್, ಕೇಜ್ರಿವಾಲ್ ಅಥವಾ ಮಮತಾ, ಸಿದ್ದರಾಮಯ್ಯ ಎಲ್ಲರೂ ತಮ್ಮನ್ನು ತಾವು ಹೆಮ್ಮೆಯ ಹಿಂದೂಗಳು ಎಂದು ಘೋಷಿಸಿಕೊಂಡರು. ವೆಲ್ಲಾ ಎಡ ಉದಾರವಾದಿಗಳ ಒಂದು ವರ್ಗದಿಂದ ಟೀಕೆಗೆ ಗುರಿಯಾಯಿತು, ಅವರು ಹಿಂದುತ್ವ ರಾಜಕಾರಣವನ್ನು ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೊಸ ರಾಜಕೀಯ ನಿರೂಪಣೆ ತಲೆ ಎತ್ತುತ್ತಿತ್ತು. ಬಿಜೆಪಿಯ ಹಿಂದುತ್ವದ ನಡುವೆ ʼಉಚಿತʼಗಳು ಮೇಲೆದ್ದವು. 300ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ (18 ರಿಂದ 60 ವರ್ಷ ವಯಸ್ಸಿನವರು) ಪ್ರತಿ ತಿಂಗಳು 1,500 ರೂ.ಗಳ ಭರವಸೆ, ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆ ಮಾಡುವ ಭರವಸೆಯಂತಹ ಯೋಜನೆಗಳು ಹಿಮಾಚಲ ಪ್ರದೇಶದಲ್ಲಿ ಸೋಲಿನಲ್ಲಿದ್ದ ಕಾಂಗ್ರೆಸ್ ಗೆಲುವಿನ ರುಚಿ ತೋರಿಸಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಇದೇ ರೀತಿಯ ಭರವಸೆಗಳನ್ನು ಮುಂದಿಟ್ಟಿತು. ಬಿಜೆಪಿಯ ಹನುಮಾನ್‌ ಚಾಲೀಸದಂತಹ ಹಿಂದುತ್ವದ ಉನ್ಮಾದದ ನಡುವೆಯೂ ಕಾಂಗ್ರೆಸ್‌ಗೆ ʼಉಚಿತʼ ಗ್ಯಾರಂಟಿ ಯೋಜನೆಗಳು ಗೆಲುವು ತಂದುಕೊಟ್ಟಿತು. 200ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ 2,000 ರೂ., ರಾಜ್ಯದ ಬಡ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ಪದವಿಧರನಿಗೆ 1,500ರೂ. ನೀಡುವ ʼಗ್ಯಾರಂಟಿ ಯೋಜನೆʼಗಳನ್ನು ಘೋಷಿಸಿತು. ರಾಜ್ಯದ ಬೊಕ್ಕಸಕ್ಕೆ ಅಂದಾಜು 62,000 ಕೋಟಿ ರೂ. ತಗಲುತ್ತದೆ. ಇವು ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಪ್ರಮುಖ ಪಾತ್ರವಹಿಸಿತ್ತು. ಕರ್ನಾಟಕದ ಗೆಲುವು ಕಾಂಗ್ರೆಸ್‌ಗೆ ಹೊಸ ಮಾದರಿಯನ್ನು ಸೃಷ್ಟಿಸಿದೆ. ಇದು ಬಿಜೆಪಿಗೆ ಸವಾಲೆಸಿದಿತ್ತು. ಪಿಎಂ ಮೋದಿ ʼಫ್ರೀಬಿಸ್ ಸಂಸ್ಕೃತಿʼಯನ್ನು "ಅಭಿವೃದ್ಧಿಗೆ ಅಪಾಯಕಾರಿ" ಎಂದು ಟೀಕಿಸಿದರು.

ಆದರೆ, ಇದೇ ಮೋದಿ ನೇತೃತ್ವದ ಬಿಜೆಪಿ ಕಳೆದ ಐದು ರಾಜ್ಯಗಳ ಚುನಾವಣೆಗಳಲ್ಲಿ ಫ್ರೀಬಿಸ್‌ ಸಂಸ್ಕೃತಿಯನ್ನೇ ಅನುಸರಿಸಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಹಿಳೆಯರಿಗೆ ಪ್ರತಿ ತಿಂಗಳು , 1500 ರೂ. ಹಾಗೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದಾಗ, ಬಿಜೆಪಿ "ಲಾಡ್ಲಿ ಬೆಹನಾ ಯೋಜನೆ" ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 1,250 ರೂ. ಮತ್ತು 450 ರೂ.ಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತು. ಹಿಮಾಚಲ ಮತ್ತು ಕರ್ನಾಟಕದಂತೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 100 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತು.

ರಾಜಸ್ಥಾನದಲ್ಲಿ ಕುತೂಹಲಕಾರಿ ಸಂಗತಿಯೆಂದರೆ, 500 ರೂ.ಗೆ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ನೀಡಿದ ಭರವಸೆಯನ್ನು ಎದುರಿಸಲು ಬಿಜೆಪಿ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಿದಾಗ, ಕಾಂಗ್ರೆಸ್ ತನ್ನದೇ ಭರವಸೆಯನ್ನು ಪರಿಷ್ಕರಿಸಿ 400 ರೂ.ಗೆ ಅಡುಗೆ ಅನಿಲ ನೀಡುವುದಾಗಿ ಘೋಷಿಸಿತು. ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯುವ ಪದವೀಧರರಿಗೆ ಲ್ಯಾಪ್‌ಟಾಪ್ ಮತ್ತು ಹುಡುಗಿಯರಿಗೆ ಉಚಿತ ಮೊಬೈಲ್ ಫೋನ್‌ಗಳನ್ನು ನೀಡುವುದಾಗಿ ಘೋಷಿಸಿದಾಗ, ಬಿಜೆಪಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಮತ್ತು ಛತ್ತೀಸ್‌ಗಢದ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿಯವರೆಗೆ ಉಚಿತ ಶಿಕ್ಷಣದ ಕಾಂಗ್ರೆಸ್ ಭರವಸೆಯನ್ನೇ ಬಿಜೆಪಿ ಘೋಷಿಸಿತು. ರಾಜಸ್ಥಾನದಲ್ಲಿ "ಕೆಜಿ ಟು ಪಿಜಿ ಉಚಿತ" ಮಾಡುವುದಾಗಿ ಭರವಸೆ ನೀಡಿತು.

ಪ್ರಧಾನಿ ಹೇಳಿದಂತೆ ʼಬಿಟ್ಟಿ ಸಂಸ್ಕೃತಿ/ಯೋಜನೆಗಳಿಂದೇಶ ಅಪಾಯಕರಿಯಾಗಿದೆ ಎಂದು ಊಹಿಸುವ ಸ್ಥಿತಿಯಲ್ಲಿ ಇಂದು ಒಬ್ಬ ಸಾಮಾನ್ಯನಿಲ್ಲ. ಆದರೇ, ಅವು ಮತಗಳಾಗಿ ಪರಿವರ್ತನೆಯಾಗಿದ್ದಂತೂ ಸತ್ಯ. ಈ ʼಉಚಿತʼಗಳ ನಡುವೆ ರಾಮ ಮಂದಿರ ಎದ್ದು ನಿಂತಿದೆ. ʼಉಚಿತʼ ಗಳು ಬಿಜೆಪಿಗೆ ಹಿನ್ನೆಡೆಯಾಗಬಹುದು ಎಂಬ ಚರ್ಚೆಗಳು ಇದ್ದಾಗಲೇ, ಬಿಜೆಪಿಯ ʼಉಚಿತʼ ಯೋಜನೆಗಳು ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡಗಳಲ್ಲಿ ಕೈ ಹಿಡಿದವು. ಮತ್ತು ರಾಮ ಮಂದಿರದ ಉನ್ಮಾದ ಸದ್ಯಕ್ಕಂತೂ ಯಾವುದೇ ಕಾರಣಕ್ಕೂ ಕಡಿಮೆಯಾಗುವ ಲಕ್ಷಣವೇ ಇಲ್ಲ ಎಂಬಷ್ಟರ ಮಟ್ಟಿಗೆ ಬೆಳೆದಿದೆ. ಬಿಜೆಪಿಗೆ ರಾಮ ಮಂದಿರ ಒಂದೇ ಸಾಕಾಗುವುದಿಲ್ಲ ಎನ್ನುವುದೂ ಕೂಡ ಅರಿವಿಗಿದೆ ಎನ್ನುವುದು ಇಲ್ಲಿ ಗಮನಾರ್ಹ. ಕಾಂಗ್ರಸ್‌ ಕೇಂದ್ರ ಬಿಜೆಪಿಯ ಬುಡ ಬಡಿಯುವ ಉದ್ದೇಶದಿಂದ ಉಚಿತ ʼಗ್ಯಾರಂಟಿʼಗಳ ಭರವಸೆ ನೀಡಿತು. ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್‌ ಯೋಜನೆಗಳನ್ನೇ ಓವರ್‌ಟೇಕ್‌ ಮಾಡಿಕೊಂಡು ಗೆದ್ದಿತು. ಮೋದಿ ಅಧಿಕಾರಕ್ಕೆ ಬಂದಿದ್ದೇ ಇಂತಹ ಭರವಸೆಗಳಿಂದಲೇ(ಪತ್ಯೇಕಿಸಿ ಹೇಳಬೇಕೆಂದಿಲ್ಲ). ʼದೇಶಕ್ಕೆ ಒಂದೇ ಒಂದು ಗ್ಯಾರಂಟಿ, ಅದು ಮೋದಿ ಗ್ಯಾರಂಟಿʼ ಹೆಸರಲ್ಲಿ ಈಗ ಲೋಕಸಭಾ ಪ್ರಚಾರಕ್ಕೆ ಇಳಿದಿದೆ ಕೂಡ. ಕಾಂಗ್ರೆಸ್‌ ಇನ್ನೂ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಅದರ ನೇತೃತ್ವದ ʼಇಂಡಿಯಾʼ ಮೈತ್ರಿ ಕೂಡ. 

ಇನ್ನು, ʼಹಿಂದುತ್ವ ರಾಜಕಾರಣʼಕ್ಕೆ ಬಹಳ ದೊಡ್ಡ ಜೀವಿತಾವಧಿ ದೆ ಎಂದು ನನಗಂತೂ ಅನ್ನಿಸುತ್ತಿಲ್ಲ. ಬರೀ ʼಹಿಂದುತ್ವವೇ ರಾಜಕಾರಣʼ ಅಲ್ಲ ಎನ್ನುವ ಅರಿವು ಮೋದಿಗೂ, ಬಿಜೆಪಿಗೂ ಇದೆ. ಆದರೇ, ಹಿಂದುತ್ವದ ಉನ್ಮಾದವೇ ಸಾಕು ಎಂದು ತಿಳಿದಿದ್ದರೇ ಬಹುಷ ಬುಡ ಮೇಲಾಗುವ ಭವಿಷ್ಯವನ್ನೇ ಕಾಣಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬದುಕು ಕೊಡದ ಆಡಳಿತವನ್ನು ಜನ ಸುದೀರ್ಘ ಕಾಲದವರೆಗೆ ಪೊರೆದ ಇತಿಹಾಸ ಈ ಭಾರತದಲ್ಲಿಲ್ಲ. ಬಹುಷಃ ಎಲ್ಲಿಯೂ ಇಲ್ಲ. ಹಿಂದುತ್ವ, ಸೆಕ್ಯುಲರಿಸಂ ಅಥವಾ ಮತ್ತೊಂದು, ಮಗದೊಂದು ರಾಜಕೀಯವನ್ನು ಪೊರೆದಿರಬಹುದು. ಆದರೇ, ಜನರ ಧ್ವನಿಯಾಗಿ ಉಳಿಯದೇ ಇರುವ ಆಡಳಿತವನ್ನು ಜನರು ಹೊರ ಹಾಕಿದ್ದಾರೆ ಎನ್ನುವುದು ಎಲ್ಲಾ ರಾಜಕೀಯ ಪಕ್ಷಗಳು ನೆನಪಿನಲ್ಲಿಟ್ಟುಕೊಳ್ಳಬೇಕು.

ರಾಜಕೀಯ ಪಕ್ಷಗಳಿಗೆ ಸಾಮಾಜಿಕ-ರಾಜಕೀಯ ಮತ್ತು ರಾಜಕೀಯ-ಆರ್ಥಿಕ ಕಾರ್ಯತಂತ್ರವನ್ನು ರೀ-ಓರಿಯಂಟ್ ಮಾಡುವ ಸಮಯವಿದು. ಇದು ಕೃತಕ ಬುದ್ಧಿಮತ್ತೆಯ ಯುಗ, ಆದರೆ ಭಾರತೀಯ ಮತದಾರನ ಮನಸ್ಸು ಕೃತಕವಲ್ಲ. ಜನರ ಧ್ವನಿಗೆ ಸ್ಪಂದಿಸದೇ ಇದ್ದರೇ ʼರಾಮ ಮಂದಿರʼ, ʼಉಚಿತʼ ಎಲ್ಲವೂ ಮತದಾರರ ಪಾಲಿಗೆ ಗೌಣವಾಗಿಯೇ ಕಾಣಿಸುತ್ತವೆ. ಉಳಿದದ್ದು ನಿಮ್ಮ ನಿಮ್ಮ ಯೋಚನೆಗಳಿಗೆ ಮೀಸಲಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ   

Thursday, January 25, 2024

ನೆಹರೂ ಸರಿಯೋ ಅಥವಾ ಮೋದಿ ಸರಿಯೋ…

 


ಮೋದಿ ಎಂದೂ ʼಹಿಂದೂ ನಾಯಕʼನೆಂದು ಕರೆಸಿಕೊಳ್ಳಲು ಹಿಂಜರಿಯಲಿಲ್ಲ !

ರಥಯಾತ್ರೆಯಿಂದ ಆರಂಭಗೊಂಡು ಪ್ರಾಣ ಪ್ರತಿಷ್ಠೆಯವರೆಗೆ ಒಂದು ರಾಜಕೀಯ ಪಕ್ಷವನ್ನು ಹಂತಹಂತವಾಗಿ ʼರಾಮ ಮಂದಿರʼ ಪೊರೆಯುತ್ತಲೇ ಬಂದಿದೆ. ʼರಾಮ ಮಂದಿರʼವನ್ನು ದೇಶದ ರಾಜಕೀಯಕ್ಕೆ ಉರುಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಕೀರ್ತಿ ಎಲ್.ಕೆ.ಅಡ್ವಾಣಿಯವರಿಗೆ ಸಲ್ಲುವುದಾದರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ.

ಅಡ್ವಾಣಿಯವರ ರಥಯಾತ್ರೆಯ ಮೊದಲು, ರಾಜಕೀಯದಲ್ಲಿ ಧರ್ಮದ ಕಲ್ಪನೆಯು ಎಂದಿಗೂ ಮುಖ್ಯವಾಹಿನಿಗೆ ಬಂದಿರಲಿಲ್ಲ, ಆದರೂ ಕೆಲವು ರಾಜಕಾರಣಿಗಳಿಂದ ಮತ್ತು ಪಕ್ಷಗಳಿಂದ ಚುನಾವಣಾ ಉದ್ದೇಶಗಳಿಗಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆದಿತ್ತು. ಅದು ಬೇರೆಯ ವಿಷಯ. ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಮಾಡುತ್ತದೆ ಎಂಬ ದೂಷಣೆಗೆ ಕೆಲವು ದಶಕಗಳ ಇತಿಹಾಸವಿದೆ. ಇದು ಸುಸ್ಥಾಪಿತವಾದ ಆರೋಪ ಎಂಬ ಮಾತು ರಾಜಕೀಯ ವಲಯದಲ್ಲೇ ಇದೆ. ಮೋದಿ ಯುಗದಲ್ಲಿ, ಧರ್ಮವು ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಅದನ್ನು ನಿರ್ಲಕ್ಷಿಸಲು ಯಾವುದೇ ಪಕ್ಷವು ಶಕ್ತವಿಲ್ಲ. ಬಿಜೆಪಿ ತನ್ನ ಸಿದ್ಧಾಂತವೇ ಹಿಂದುತ್ವ ಹಾಗೂ ಧರ್ಮ ಪಾಲನೆ ಎಂದು ಹೇಳಿಕೊಳ್ಳುತ್ತದೆ. ಆದರೇ, ಕಾಂಗ್ರೆಸ್‌ ಸೇರಿ ಉಳಿದ ಪಕ್ಷಗಳ ಸೈದ್ಧಾಂತಿಕ ನಿಲುವಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.  

ಧರ್ಮವೇ ರಾಜಕೀಯವನ್ನು ನಿರ್ದೇಶಿಸುವಷ್ಟರ ಮಟ್ಟಿಗೆ ಇಂದಿನ ರಾಜಕೀಯ ಬೆಳೆದಿದೆ. ಇದು ಇವತ್ತಿನ ರಾಜಕೀಯದ ವಾಸ್ತವ ಸ್ಥಿತಿ.  ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್  ಸೋಮನಾಥ ದೇಗುಲದ ಪ್ರತಿಷ್ಠಾಪನೆಗೆ ಹಾಜರಾಗುವ ಬಗ್ಗೆ ಭಿನ್ನ ವ್ಯಕ್ತ ಪಡಿಸಿದ್ದರು. ಆದರೇ, ಪ್ರಜಾಪ್ರಭುತ್ವದ ಪ್ರಧಾನಿಯಾಗಿ ಮೋದಿ  ಹಿಂದೂ ದೇವಾಲಯಗಳಿಗೆ ಹೆಮ್ಮೆಯಿಂದ ಭೇಟಿ ನೀಡುವುದರೊಂದಿಗೆ ತಮ್ಮನ್ನು ತಾವು ನಿಷ್ಠಾವಂತ ʼಹಿಂದೂ ನಾಯಕʼ ಎಂದು ಕರೆಸಿಕೊಳ್ಳಲು ಎಂದೂ ಹಿಂಜರಿಯಲಿಲ್ಲ. ಆ ದೈರ್ಯವೇ ರಾಜಕೀಯದಲ್ಲಿ ಮೋದಿಯವರನ್ನು ಅಪಾರ ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಿಲ್ಲ. ಅಪಾರ ಜನ ಸಮೂಹವನ್ನು ಗೆಲ್ಲುವಲ್ಲಿ ಈ ಮೂಲಕವೇ ಮೋದಿ ಯಶಸ್ವಿಯಾದರು.

ನೆಹರೂ ಸರಿಯೋ ಅಥವಾ ಮೋದಿ ಸರಿಯೋ ಎಂದು ಇತಿಹಾಸವೇ ನಿರ್ಣಯಿಸಬೇಕು/ನಿರ್ಣಯಿಸುತ್ತದೆ. ಆಧುನಿಕ ಭಾರತದಲ್ಲಿ ಭಿನ್ನ ನಂಬಿಕೆಗಳನ್ನು ಹೊಂದಿರುವ ಬಹು ಸಂಸ್ಕೃತಿಯ ಸಮಾಜದಲ್ಲಿ, ದೇಶದ ರಾಜಕೀಯವು ಯಾವುದೇ ಒಂದು ನಿರ್ದಿಷ್ಟ ಧರ್ಮದ ಪರವಾಗಿ ಗುರುತಿಸಿಕೊಳ್ಳಬಾರದು ಎಂದು ನೆಹರೂ ದೃಢವಾದ ಅಭಿಪ್ರಾಯವನ್ನು ಹೊಂದಿದ್ದರು. ದೇವರು ಮತ್ತು ನಂಬಿಕೆಗಳು ವ್ಯಕ್ತಿಯೊಬ್ಬನಲ್ಲಿ ಖಾಸಗಿಯಾಗಿ ಉಳಿಯಬೇಕು. ಅಂತವರನ್ನು ಸೆಕ್ಯುಲರಿಸಂ ಎಂದರೆ ಅದು ಧರ್ಮದ ನಿರಾಕರಣೆ ಎಂದರ್ಥವಲ್ಲ, ಸೆಕ್ಯುಲರಿಸಂ ಎಂದರೆ ಎಲ್ಲ ಧರ್ಮಗಳಿಗೂ ನೀಡುವ ಗೌರವವೆಂದು ಅವರು ನಂಬಿದ್ದರು. ನೆಹರೂ ಧರ್ಮದ ವಿರೋಧಿ ಎನ್ನುವುದು ತಪ್ಪು ಗ್ರಹಿಕೆ. ಅವರೊಬ್ಬ ವೈಯಕ್ತಿಕವಾಗಿ ಆಧ್ಯಾತ್ಮಿಕ ಚಿಂತನೆಯುಳ್ಳವರಾಗಿದ್ದರು. ಆದರೇ, ಅವರು ರಾಜಕೀಯದಲ್ಲಿ ಧಾರ್ಮಿಕತೆಯನ್ನು ಎಂದಿಗೂ ಒಪ್ಪುತ್ತಿರಲಿಲ್ಲ.

"ಧರ್ಮ ಎಂದರೇನು?" ಎಂಬ ಪ್ರಶ್ನೆಗೆ ನೆಹರೂ ಅವರೇ ಉತ್ತರ ಕಂಡುಕೊಳ್ಳುವುದಕ್ಕೆ  ಪ್ರಯತ್ನಿಸುತ್ತಾರೆ. "ಬಹುಶಃ ಇದು ವ್ಯಕ್ತಿಗಳ ಆಂತರಿಕ ಬೆಳವಣಿಗೆಯನ್ನು ಒಳಗೊಂಡಿದೆ, ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಅವನ ಪ್ರಜ್ಞೆಯ ವಿಕಸನವನ್ನು ಒಳಗೊಂಡಿದೆ, ಅದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಧರ್ಮವು ಈ ಆಂತರಿಕ ವಿಕಸನಕ್ಕೆ ಮಹತ್ವದ್ದನ್ನು ನೀಡುತ್ತದೆ. ಅದು  ಪ್ರದರ್ಶನದ ವಸ್ತು ಅಲ್ಲ” ಎಂದು ಅವರು ನಂಬಿದ್ದರು. ಇಂದು, ಧರ್ಮವು ಪ್ರದರ್ಶನದ ಅಸ್ತ್ರವಾಗಿದೆ. ಧಾರ್ಮಿಕ ಅಸ್ತವಾಗಿ ಬೆಳೆದಿದೆ. ಧರ್ಮಕ್ಕೆ ರಾಜಕೀಯ ಅಂಟಿರುವುದೇ ಇದಕ್ಕೆ ಮೂಲ ಕಾರಣ.

ಮಹಾತ್ಮಾ ಗಾಂಧಿ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುವುದನ್ನು ವಿರೋಧಿಸಲಿಲ್ಲ ಎಂದು ಆಗಾಗ್ಗೆ ಹೇಳಲಾಗುತ್ತದೆ. ಇದು ಭಾಗಶಃ ನಿಜ. "ಧರ್ಮಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವವರಿಗೆ ಧರ್ಮದ ಅರ್ಥವೇನೆಂದು ತಿಳಿದಿಲ್ಲ ಎಂದು ನಾನು ಸ್ವಲ್ಪವೂ ಹಿಂಜರಿಕೆಯಿಲ್ಲದೆ ಮತ್ತು ವಿನಮ್ರತೆಯಿಂದ ಹೇಳಬಲ್ಲೆ" ಎಂದು ಗಾಂಧಿ ಹೇಳಿದ್ದರು. ಆದರೆ, ಗಾಂಧಿಯವರಿಗೆ ಧರ್ಮವೆಂದರೆ ಈಗ ರಾಜಕೀಯದಲ್ಲಿ ಪ್ರಚಲಿತದಲ್ಲಿರುವ ಧರ್ಮ ಅಲ್ಲ. ʼರಾಜಕೀಯದಲ್ಲಿ ಧರ್ಮ ಎಂದರೆ, ರಾಜಕೀಯದಲ್ಲಿ ನೈತಿಕತೆ ಮತ್ತು ನೈತಿಕ ಮೌಲ್ಯಗಳಿಗೆ ನೀಡುವ ಪ್ರಾಧಾನ್ಯತೆ. ರಾಜಕೀಯ ಗಾಂಧೀಜಿ ಅವರಿಗೆ ಸತ್ಯದ ಹುಡುಕಾಟವಾಗಿತ್ತು. ‘ಸತ್ಯದ ಮೇಲಿನ ನನ್ನ ಭಕ್ತಿಯೇ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಸೆಳೆದಿದೆ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಅದು ಅವರು ನೀಡುವ ʼಧರ್ಮ ರಾಜಕೀಯʼದ ವ್ಯಾಖ್ಯಾನ.

ಈಗಿನ ರಾಜಕೀಯವು ನೈತಿಕ ಮತ್ತು ನೈತಿಕ ಮೌಲ್ಯಗಳಿಲ್ಲದ ಸತ್ಯದ ಹುಡುಕಾಟವನ್ನು ಹೊರತುಪಡಿಸಿ ಎಲ್ಲವೂ ಆಗಿದೆ. ಚುನಾವಣಾ ಲಾಭಕ್ಕಾಗಿ ಅಷ್ಟೇ ಆಗಿ ರಾಜಕೀಯ ಉಳಿದು ಹೋಗಿದೆ. ಆ ಪಕ್ಷ, ಈ ಪಕ್ಷ ಎನ್ನದೇ ಲಾಭ ದೃಷ್ಟಿಯಲ್ಲಷ್ಟೇ ಎಲ್ಲಾ ಪಕ್ಷಗಳು ಧರ್ಮವನ್ನು ರಾಜಕೀಯಕ್ಕೆ ಅಂಟಿಸಿಕೊಂಡಿವೆ.

ಬಹಳ ಪ್ರಮುಖವಾಗಿ ನಾವು ಯೋಚಿಸಬೇಕು. ಆಶ್ಚರ್ಯವೆಂದರೆ, ಬಾಳಾಸಾಹೇಬ್ ದೇವರಸ್ ಆರ್‌ಎಸ್‌ಎಸ್‌ ನ ಸರಸಂಘಚಾಲಕ್‌ ಆಗುವ ಮೊದಲು, ಬಿಜೆಪಿ/ಜನಸಂಘ ರಾಜಕೀಯದ ಧಾರ್ಮಿಕ ಆಯಾಮವನ್ನು ಕಂಡುಕೊಳ್ಳುವುದಕ್ಕೆ ಹಿಂಜರಿಯುತ್ತಿತ್ತು. ಆ ಉದ್ದೇಶವೇ ಆಗ ಇರಲಿಲ್ಲ. ಆರ್‌ಎಸ್‌ಎಸ್‌ನ ಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಹಿಂದೂಗಳು ಶತಮಾನಗಳಿಂದ ಇತರರಿಂದ ಆಳಲ್ಪಟ್ಟಿದ್ದಾರೆ ಎಂದು ಅವರು ನಂಬಿದ್ದರು.  ಹಿಂದೂಗಳನ್ನು ಒಗ್ಗೂಡಿಸುವುದೇ ಅವರ ಆಶಯವಾಗಿತ್ತು. ಇನ್ನೊಬ್ಬರನ್ನು ದ್ವೇಷಿಸುವ ಉದ್ದೇಶ ಅವರಲ್ಲಿರಲಿಲ್ಲ. ಮುಖ್ಯವಾಗಿ ಶಿಸ್ತು ಮತ್ತು ಸಂಘಟನೆಯ ಮೇಲೆ ಅವರು ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಆರ್‌ಎಸ್‌ಎಸ್‌ನ ಎರಡನೆಯ ಸರಸಂಘಚಾಲಕ್‌ ಮಾಧವ ಸದಾಶಿವ ಗೋಲ್ವಾಲ್ಕರ್ ಹಿಂದುತ್ವದ ವಿಚಾವರನ್ನು ದೇಶದಾದ್ಯಂತ ಪಸರಿಸಿದರು. ಆಧುನಿಕ ಕಾಲದಲ್ಲಿ ಗಾಂಧೀಜಿ ನಂತರ ಲಕ್ಷಾಂತರ ಜನರ ಮೇಲೆ ತಮ್ಮ ವ್ಯಕ್ತಿತ್ವದಿಂದ ಪ್ರಭಾವ ಬೀರಿದ್ದರು. ಅವರು ಪ್ರತಿಪಾದಿಸಿದದ ʼಹಿಂದು ರಾಷ್ಟ್ರʼ ಮತೀಯವಾಗಿರದೆ ತಿಳಿದು ಅದರ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರುವ ಎಲ್ಲಾ ಭಾರತೀಯರೂ ಹಿಂದೂಗಳೇ ಎಂಬುವುದು ಅವರ ವಿಚಾರವಾಗಿತ್ತು. ರಾಜಕೀಯವು ಅವರ ಪ್ರಬಲ ಅಂಶವಾಗಿರಲಿಲ್ಲ. 1975ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಂಘಕ್ಕೆ ನಿಷೇಧ ಹೇರಿದರು. ಎಂಐಎಸ್ಎ ನಂತಹ ಕಾನೂನಿನ ಅಡಿಯಲ್ಲಿ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಜೈಲಿನಲ್ಲಿರಿಸಲಾಯಿತು. ಬಾಳಾಸಾಹೇಬ ದೇವರಸ್ ಮಾರ್ಗದರ್ಶನದಲ್ಲಿ ಬೃಹತ್ ಸತ್ಯಾಗ್ರಹ ನಡೆಯಿತು. ಇದೇ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದ ತುರ್ತು ಪರಿಸ್ಥಿತಿ ವಿರೋಧಿ "ಜೆಪಿ ಚಳವಳಿ"ಗೆ ಆರ್ ಎಸ್ ಎಸ್  ಬೆಂಬಲ ಘೋಷಿಸಿತು. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಹಾಗೂ ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಇಲ್ಲಿಂದ ಆರ್‌ಎಸ್‌ಎಸ್‌ನ ʼಧರ್ಮ ರಾಜಕೀಯʼ ಆರಂಭವಾಯಿತು.

1980ರ ದಶಕದ ಆರಂಭದಲ್ಲಿ, ಬಿಜೆಪಿಯು ಸೈದ್ಧಾಂತಿಕ ಸ್ಪಷ್ಟತೆಗಾಗಿ ಹೆಣಗಾಡುತ್ತಿರುವಾಗ, ʼರಾಮʼ ಒಂದು ಶಕ್ತಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೂ ಬಾಬರಿ ಮಸೀದಿ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇವರಸ್ ವಿಶ್ವ ಹಿಂದೂ ಪರಿಷತ್‌ಗೆ(ವಿಎಚ್‌ಪಿ) ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದವರು. ವಾಸ್ತವವಾಗಿ, ಅಯೋಧ್ಯೆ ವಿಷಯ ಹಿಂದೂಗಳ ಕಲ್ಪನೆಯನ್ನು ಸೆರೆಹಿಡಿಯಬಹುದು ಎಂದು ಆರ್‌ಎಸ್‌ಎಸ್‌ಗೆ ಮೊದಲು ಖಚಿತವಾಗಿರಲಿಲ್ಲ. ವಿಎಚ್‌ಪಿಯ ʼಏಕಾತ್ಮತಾ ಯಾತ್ರೆʼಯ ಯಶಸ್ಸು ಅಯೋಧ್ಯೆ ಚಳವಳಿಗೆ ನಾಂದಿ ಹಾಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಏಪ್ರಿಲ್ 1984ರಲ್ಲಿ, ಧರ್ಮ ಸಂಸದ್ ನ್ನು ಕರೆಯಲಾಯಿತು, ಅಲ್ಲಿ ಮೂರು ಧಾರ್ಮಿಕ ಸ್ಥಳಗಳಾದ ಅಯೋಧ್ಯೆ, ಕಾಶಿ ಮತ್ತು ಮಥುರಾವನ್ನು ಮರುಸ್ಥಾಪಿಸುವ ಸಂಕಲ್ಪ ಮಾಡಲಾಯಿತು. ಜೂನ್ 1984ರಲ್ಲಿ, ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯನ್ನು ರಚಿಸಲಾಯಿತಾದರೂ, 1990ರಲ್ಲಿ ಅಡ್ವಾಣಿಯವರು ತಮ್ಮ ರಥಯಾತ್ರೆಯನ್ನು ಪ್ರಾರಂಭಿಸಿದ ನಂತರವೇ ರಾಮ ಮಂದಿರದ ವಿಚಾರ ಹಿಂದೂಗಳನ್ನು ಬಡಿದೆಬ್ಬಿಸಿತು.

ರಥಯಾತ್ರೆಯ ನಂತರ, ಅಡ್ವಾಣಿ ನೇತೃತ್ವದ ಬಿಜೆಪಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿತು. ಬಿಜೆಪಿ ಮತ್ತೆ ಹಿಂತಿರುಗಿ ನೋಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಮತ್ತು ಅದರ ಕ್ಷೇತ್ರಗಳು ಅನೇಕ ಪಟ್ಟು ಬೆಳೆಯಿತು. 1984ರಲ್ಲಿ ಕೇವಲ ಎರಡು ಕ್ಷೇತ್ರಗಳನ್ನು ಹೊಂದಿದ್ದ ಬಿಜೆಪಿ 1989ರ ಲೋಕಸಭಾ ಚುನಾವಣೆಯಲ್ಲಿ 85 ಕ್ಷೇತ್ರಗಳನ್ನು ಪಡೆದುಕೊಂಡಿತು. 1991ರಲ್ಲಿ ಬಿಜೆಪಿ 120 ಕ್ಷೇತ್ರಗಳನ್ನು ಪಡೆದುಕೊಂಡಿತು.

1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿತ್ತು. ಕೇವಲ 13 ದಿನಗಳ ಕಾಲ ಪ್ರಧಾನಿಯಾಗಿದ್ದರು. 1998 -2004ರ ತನಕ ರಾಜಕೀಯ.  ಉಳಿದದ್ದು ಇತಿಹಾಸ. ಬಿಜೆಪಿಯ ಬೆಳವಣಿಗೆ ಅದ್ಭುತವಾಗಿದೆ. 1984ರಲ್ಲಿ ಎರಡು ಕ್ಷೇತ್ರಗಳಿಂದ ಆರಂಭಿಸಿದ ರಾಜಕೀಯ ಪರ್ವ 2019ರಲ್ಲಿ 303 ಕ್ಷೇತ್ರಗಳವರೆಗೆ ಬಂದು ತಲುಪಿದೆ. ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್‌ನ ಭಾರೀ ಅವನತಿಗೆ ಮೂಲ ಕಾರಣವಾಗಿ ಬಿಜೆಪಿ ʼಧರ್ಮ ರಾಜಕೀಯʼದೊಂದಿಗೆ ಬೆಳೆದು ಹೆಮ್ಮರವಾಗುತ್ತಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಪಣತೊಟ್ಟರು, ಸದ್ಯ ʼಅಪೂರ್ಣ ದೇವಾಲಯʼ ಎಂಬ ಆರೋಪಗಳ ನಡುವೆಯೇ ಅದ್ಧೂರಿಯಾಗಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಲೋಕಸಭಾ ಚುನಾವಣೆಗೆ ಕೇವಲ ಮೂರು ತಿಂಗಳುಗಳು ಬಾಕಿ ಉಳಿದಿವೆ. ʼರಾಮ ಮಂದಿರʼ ಈ ಬರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಪೊರೆಯುವುದರಲ್ಲಿ ಸಂಶಯವಿಲ್ಲ. ಒಂದು ʼರಾಮ ಮಂದಿರʼದ ಕಾರಣದಿಂದಾಗಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಹಣದುಬ್ಬರದಂತಹ ಜ್ವಲಂತ ಸಮಸ್ಯೆಗಳು ಮರೆಯಾಗಿ ಹೋಗಿವೆ. ರಾಮ ಮಂದಿರದ ಉನ್ಮಾದದ ಎದುರು ಪ್ರತಿಪಕ್ಷಗಳ ಧ್ವನಿ ಅಕ್ಷರಶಃ ಗೌಣವಾಗಿದೆ. ಅಯೋಧ್ಯೆಯ ರಾಮ ಮಂದಿರವನ್ನು ಪ್ರಶ್ನಿಸಿದರೆ "ರಾಮ ವಿರೋಧಿ ಮತ್ತು ಹಿಂದೂ ವಿರೋಧಿ" ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಿದೆ. ಒಂದೆಡೆ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಎತ್ತುವ ಧ್ವನಿ ಅಮುಖ್ಯ ಎಂದೆನ್ನಿಸಿಕೊಳ್ಳುತ್ತಿದ್ದರೇ, ಇನ್ನೊಂದೆಡೆ ರಾಮ ಮಂದಿರದ ವಿರುದ್ಧ ಮಾತನಾಡದೇ ಇರುವಂತಹ ಸ್ಥಿತಿಯಲ್ಲಿ ಪ್ರತಿಪಕ್ಷಗಳಿವೆ. ಇವೆಲ್ಲದದರ ʼಶ್ರೇಯʼ ತಲುಪಬೇಕಾಗಿರುವುದು ಪ್ರಧಾನಿ ಮೋದಿ ಅವರಿಗೆ.  

ಹೇಳುವುದಕ್ಕೆ ಹೊರಟಿರುವ ವಿಷಯ ಏನೆಂದರೇ, ರಾಜಕೀಯದಲ್ಲಿ ಧರ್ಮಕ್ಕೆ ಕೇಂದ್ರ ಸ್ಥಾನವನ್ನು ಮೋದಿ ಹಾಗೂ ಬಿಜೆಪಿ ಒದಗಿಸಿದೆ. ರಾಮ ಮಂದಿರದ ಲೋಕಾರ್ಪಣೆಯ ಮೂಲಕ ಧರ್ಮ ರಾಜಕೀಯದ ಶಕೆ ಅಧಿಕೃತವಾಗಿ ಆರಂಭ ಪಡೆದಿದೆ. ಬಿಜೆಪಿ ತನ್ನ ಸಿದ್ಧಾಂತವನ್ನು ಸರಿಯಾಗಿ ಪಾಲಿಸುವುದರೊಂದಿಗೆ ಮತ್ತೊಂದು ಸುತ್ತಿನ ಲೋಕಸಭೆ ಚುನಾವಣೆಯನ್ನು ತನ್ನ ತೆಕ್ಕೆಯೊಳಗೆ ಹಾಕಿಕೊಳ್ಳಲು ಸಿದ್ಧವಾಗಿದೆ. ಈ ಉನ್ಮಾದ ಸದ್ಯದಲ್ಲಿ ಕಡಿಮೆ ಆಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಉಳಿದದ್ದು ನಿಮಗೆ, ನಿಮ್ಮ ಯೋಚನೆಗೆ ಬಿಟ್ಟಿದ್ದು.  

-ಶ್ರೀರಾಜ್‌ ವಕ್ವಾಡಿ  

Thursday, January 18, 2024

ರಾಮ ಮಂದಿರಕ್ಕೆ ಅಡ್ವಾಣಿಯವರ ʼಯೋಗದಾನʼದ ಮುಂದೆ ಉಳಿದವರದ್ದೆಲ್ಲಾ ಶೂನ್ಯ !

 

ಮಂತ್ರಾಕ್ಷತೆಯ ಭಾವನಾತ್ಮಕ ನಂಟಿನ ಎದುರು ಕಾಂಗ್ರೆಸ್ ಈಗ ಯಾತ್ರೆ ಆರಂಭಿಸಿದೆ…

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ʼಅಪೂರ್ಣ ದೇವಾಲಯʼ ಲೋಕಾರ್ಪಣೆಗೆ ಸಜ್ಜಾಗುತ್ತಿದೆ. ಲೋಕಸಭಾ ಚುನಾವಣೆಯೂ ಬರುವ ಮಾರ್ಚ್‌ ಅಥವಾ ಏಪ್ರಿಲ್‌ ನಲ್ಲೇ ಇರುವುದರಿಂದ ಬಿಜೆಪಿಗೆ  ಶ್ರೀರಾಮ ಮಂದಿರ ಲೋಕಸಭಾ ಚುನಾಣೆಗೆ ಪೂರಕವಾದ ನಾಂದಿ ಸಿಕ್ಕಂತಾಗಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಒಂದು ಬಹುದೊಡ್ಡ ರಾಜ್ಯವನ್ನೇ (ಉತ್ತರ ಪ್ರದೇಶ) ಅನಾಯಾಸವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ. ರಾಮ, ರಾಮ ಮಂದಿರವನ್ನೇ ತಮ್ಮ ರಾಜಕಾರಣಕ್ಕಾಗಿಯೇ ಬಳಸಿಕೊಂಡ ಬಿಜೆಪಿಗೆ ಈ ಲೋಕಸಭಾ ಚುನಾವಣಾ ಸರಧಿಯಲ್ಲಿ ಮಹತ್ತರವಾದ ರಾಜಕೀಯ ಮೈಲೇಜ್‌ ದೊರಕುವುದಂತೂ ನಿಶ್ಚಿತ.

ರಾಮ ಮಂದಿರ ಲೋಕಾರ್ಪಣೆ ಸಜ್ಜಾಗುತ್ತಿರುವ ಹೊತ್ತಲ್ಲೇ ಹೊಸ ರೀತಿಯ ವಿವಾದಗಳು ತಲೆ ಎತ್ತುತ್ತಿವೆ. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಬಹುತೇಕ ಅಂಗ ಪಕ್ಷಗಳು ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮದಿಂದ ದೂರ ಸರಿದಿವೆ. ಇದು ಸಂಪೂರ್ಣ ರಾಜಕೀಯ ವಿಚಾರ. ಆದರೆ, ಧಾರ್ಮಿಕ ರಂಗದ ಕೆಲವರೂ ರಾಮ ಮಂದಿರ ಲೋಕಾರ್ಪಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಎರಡು ಪ್ರಮುಖ ಶಂಕರಾಚಾರ್ಯ ಸ್ಥಾಪಿತ ಪೀಠದ ಮಠಾಧೀಶರು ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮದ ವಿಧಿವಿಧಾನವನ್ನೇ ಪ್ರಶ್ನಿಸಿದ್ದಾರೆ.  

ಬದರಿನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ರಾಮ ಮಂದಿರ ಲೋಕಾರ್ಪಣ ಕಾರ್ಯಕ್ರಮದ ವಿಧಿವಿಧಾನಗಳನ್ನು ಪ್ರಶ್ನಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಗರ್ಭ ಗುಡಿಯಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾದದ್ದುಎಂದು ಎರಡೂ ಮಠಗಳು ಹೇಳಿದ್ದು, ತಾವು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಇದೇ ಕಾರಣ ಎಂದಿದ್ಧಾರೆ. ಧರ್ಮ ಪಾಲನೆ ಆಗುವಂತೆ ನೋಡಿಕೊಳ್ಳುವುದೇ ಶಂಕರಾಚಾರ್ಯರ ಕರ್ತವ್ಯ. ಆದರೆ, ಮಂದಿರ ಲೋಕಾರ್ಪಣೆ ವೇಳೆ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಾವು ಮೌನವಾಗಿ ಇರುವುದಕ್ಕೆ ಸಾಧ್ಯ ಆಗುತ್ತಿಲ್ಲ ಎಂದಿರುವ ಸ್ವಾಮೀಜಿಗಳು, ತಾವು ಮೋದಿ ವಿರೋಧಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ಧಾರೆ. ಇನ್ಯಾರೋ ಹೇಳಿರುವುದೋ, ಕಾಂಗ್ರೆಸ್‌ ಹೇಳಿರುವುದೋ ಅಥವಾ ವಿಪಕ್ಷಗಳು ʼಅಜೀರ್ಣ ದೇವಾಲಯದʼ ಬಗ್ಗೆ ಮಾತನಾಡಿರುವುದನ್ನು ಒಪ್ಪಿಕೊಳ್ಳುವುದು ಬಿಡಿ, ಹೇಳಿರುವುದು ಶಂಕರಾಚಾರ್ಯ ಸ್ಥಾಪಿತ ಪೀಠಗಳ ಸ್ವಾಮೀಜಿಗಳು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಎಂದು ಹೇಳಲಾಗುತ್ತದೆ. ಶಂಕರಾಚಾರ್ಯರು ಬದುಕುಳಿದಿದ್ದು ಕೇವಲ ಮೂವತ್ತೆರಡು ವರ್ಷಗಳು. ಬದುಕಿದ ಈ ಅಲ್ಪಾವಧಿ ಕಾಲದಲ್ಲೇ ದೇಶದ ಮೂಲೆ ಮೂಲೆಗಳಿಗೆ ಸಂಪರ್ಕಿಸಿ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶಂಕರಾಚಾರ್ಯರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು ಶಂಕರಾಚಾರ್ಯರು  ಎಂಬೆಲ್ಲದರ ಬಗ್ಗೆ ಸುದೀರ್ಘವಾದ ಇತಿಹಾಸವಿದೆ. ಅಂತಹ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಪೈಕಿ ಬದರಿನಾಥ ಜ್ಯೋತಿರ್ಮಠ ಹಾಗೂ ಪುರಿಯ ಗೋವರ್ಧನ ಪೀಠದ ಪೀಠಾಧ್ಯಕ್ಷರು ರಾಮನ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ನೀಡಿರುವ ಹೇಳಿಕೆಗಳನ್ನು ನಿಧಾನವಾಗಿ ಮರೆಮಾಡುವಲ್ಲಿಯೂ ಬಿಜೆಪಿ ತನ್ನ ತೋಳಲ್ಲಾಡುವ ಮಾಧ್ಯಮಗಳ ಮೂಲಕ ಪರೋಕ್ಷವಾಗಿ ಪ್ರಯತ್ನಿಸಿರುವುದನ್ನು ಗಮನಿಸಿದರಷ್ಟೇ ಸಾಕು, ಬಿಜೆಪಿ ಎಷ್ಟರ ಮಟ್ಟಿಗೆ ʼಸನಾತನ ಧರ್ಮʼಕ್ಕೆ ಗೌರವಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ʼರಾಮ ಮಂದಿರ ಪೂರ್ಣಗೊಳ್ಳುವುದಕ್ಕೇ ಇನ್ನೂ ಎರಡು ಮೂರು ವರ್ಷಗಳು ಆಗಬಹುದುʼ ಎಂದು ಮೊದಲಿಗೆ ಹೇಳಿರುವುದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಒಂದು ʼಅಜೀರ್ಣ ದೇವಸ್ಥಾನʼದಲ್ಲಿ ದೇವರ ಪ್ರತಿಷ್ಠಾಪನೆ ಮಾಡುವಂತಿಲ್ಲ ಎನ್ನುವ ನಂಬಿಕೆ, ಸಂಪ್ರದಾಯ ಸನಾತನ ಹಿಂದೂ ಧರ್ಮದಲ್ಲಿದೆ. ಆದರೇ, ಬಿಜೆಪಿ ತನಗೆ ಲಾಭ ಮಾಡಿಕೊಳ್ಳುವ ದೃಷ್ಟಿಯಲ್ಲಿ ರಾಮ ಮಂದಿರದ ಲೋಕಾರ್ಪಣೆಗೆ ʼಅನುಕೂಲ ಶಾಸ್ತ್ರʼ ಅನುಸರಿಸುತ್ತಿರುವುದು ಸನಾತನ ಧರ್ಮಕ್ಕೆ ಮಾಡುತ್ತಿರುವ ಧಕ್ಕೆ, ದೇವಸ್ಥಾನದ ಕಾರ್ಯ ಪೂರ್ಣಗೊಳ್ಳದೆ ರಾಮನ ಪ್ರತಿಷ್ಠಾಪನೆ ಮಾಡುವ ಅಗತ್ಯ ಏನಿತ್ತು ಎಂದು ಬಿಜೆಪಿಯನ್ನು, ಮೋದಿ ಅವರನ್ನು ಪ್ರಶ್ನೆ ಮಾಡುವುದಕ್ಕೆ ʼಮಾತೆತ್ತಿದರೇ ಹಿಂದೂ ಧರ್ಮ, ಸನಾತನ ಸಂಸ್ಕೃತಿ ಪಾಲನೆ ಮಾಡಬೇಕುʼ ಎಂದೆಲ್ಲಾ ಭಾಷಣ ಬಿಗಿಯುವವರು ಒಬ್ಬರೇ ಒಬ್ಬರು ಇಲ್ಲದೇ ಇರುವುದು ಈ ದೇಶದ ದುರಂತಗಳಲ್ಲೊಂದು.  

1990ರ ದಶಕದಿಂದಲೂ  ರಾಮ ಮಂದಿರ ನಿರ್ಮಾಣವನ್ನು ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಬಂದಿದ್ದ ಬಿಜೆಪಿಗೆ ರಾಮ ಮಂದಿರ ಪ್ರತಿಷ್ಠಾಪನೆ ಒಂದು ಮಹತ್ತರವಾದ ಮೈಲಿಗಲ್ಲು ಎನ್ನುವುದರಲ್ಲಿ ಸಂಶಯವಿಲ್ಲ. ಈ ಮೂಲಕ ವಿರೋಧಿ ಬಣವನ್ನು ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆಯಲ್ಲಿ ಮೂಲೆಗೆ ಸರಿಸುವ ಮಹಾ ಸಂಕಲ್ಪಕ್ಕೆ ಬಿಜೆಪಿ ಅನಾಯಾಸ ಮಾರ್ಗ ಸೃಷ್ಟಿಸಿಕೊಂಡಂತಾಗಿದೆ. ಭಾವನಾತ್ಮಕವಾಗಿ ರಾಜಕೀಯಕ್ಕೆ ಧುಮುಕಿದ ರಾಮ ಮಂದಿರದ ವಿಚಾರ ಈವರೆಗೂ ಬಿಜೆಪಿ ಪಕ್ಷದ ರಾಜಕೀಯ ಏಳ್ಗೆಗೆ ಮೂಲ ಕಾರಣವಾಗುತ್ತಾ ಬಂದಿದೆ. ಬಿಜೆಪಿ ಪಕ್ಷವೂ ಕೂಡ ʼರಾಮ ಮಂದಿರʼ ವಿಚಾರವನ್ನು ಚೆನ್ನಾಗಿಯೇ ಬಳಸಿಕೊಂಡಿದೆ.

ರಾಮ ಮಂದಿರಕ್ಕೆ ಅಡ್ವಾಣಿಯವರ ಯೋಗದಾನ !

1992ರ ಡಿಸೆಂಬರ್‌ 6 ರಂದು ಬಾಬರಿ ಮಸಿದಿ ಧ್ವಂಸ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೊಂಚ ಹಿನ್ನೆಡೆಯಾಗಿತ್ತು. ರಾಮ ಮಂದಿರಕ್ಕಾಗಿ ರಥಯಾತ್ರೆಯ ನೇತೃತ್ವ ವಹಿಸಿಕೊಂಡ ಎಲ್‌. ಕೆ ಅಡ್ವಾಣಿ ಮುಂಚೂಣಿಗೆ ಬಂದರು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗುವವರೆಗೆ ಅಡ್ವಾಣಿ ಬೆಳೆದರು. ಆದರೇ, ರಾಮ ಮಂದಿರದ ಹೋರಾಟ, ರಥಯಾತ್ರೆ ಯಾವುದೂ ಅಡ್ವಾಣಿ ಅವರಿಗೆ  ಶ್ರೇಯ ತಂದುಕೊಟ್ಟಿಲ್ಲ. ಬಿಜೆಪಿಯ ಪ್ರಭಾವಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ನಿಧಾನಕ್ಕೆ ಮೂಲೆಗೆ ಸರಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಹಾಗೂ ಮೈತ್ರಿಕೂಟದ ಎದುರು ಬಿಜೆಪಿ ಸೋಲನುಭವಿಸಿತ್ತು. ಸೋನಿಯಾ ವಿದೇಶದವರು ಎಂಬ ತೆಗಳಿಕೆಯನ್ನು ಬಿಜೆಪಿ ಬಲವಾಗಿ ಮಾಡಿತ್ತು. ಪ್ರಧಾನಿ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ಸೋನಿಯಾ ಪ್ರಧಾನಿ ಹುದ್ದೆಗೆ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರನ್ನು ಆಯ್ಕೆ ಮಾಡಿ ಸತತ ಎರಡು ಅವಧಿಯವರೆಗೆ ದೇಶ ಆಳಿದರು.

ಶಬಾನೋ ಪ್ರಕರಣ, ರಾಜೀವ್‌ ಗಾಂಧಿ ನೇತೃತ್ವದ ಆಡಳಿತ, ರಾಜೀವ್‌ ನೇತೃತ್ವದ ಸರ್ಕಾರದಿಂದ ಮುಸ್ಲೀಂ ತುಷ್ಟೀಕರಣ ರಾಜಕಾರಣ ಎಂಬ ಆರೋಪ, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ರಾಜೀವ್‌ ಗಾಂಧಿಗೆ ಹಿಂದೂ ಮತಗಳು ಬೇರೆಡೆ ವಾಲುತ್ತಿರುವುದು ಗೊತ್ತಾಗಿ ರಾಮ ಮಂದಿರದ ಬೀಗ ತೆಗೆಸಿ ಪೂಜೆಗೆ ಅವಕಾಶ, ರಾಜಕೀಯ ಲಾಭಕ್ಕಾಗಿ ಸದ್ಭಾವನಾ ಯಾತ್ರೆ ಇವೆಲ್ಲಾ ರಾಮ ಮಂದಿರ ವಿಚಾರದಲ್ಲಿ ನಡೆದ ಸುದೀರ್ಘ ರಾಜಕೀಯ. ಅಂದು ಲೋಕಸಭಾ ಪ್ರತಿಪಕ್ಷ ನಾಯಕರಾಗಿದ್ದ ಎಲ್‌. ಕೆ. ಅಡ್ವಾಣಿ ರಾಮ ಮಂದಿರದ ವಿಚಾರವನ್ನು ಬಡಿದೆಬ್ಬಿಸಿದರು.

1990ರಲ್ಲಿ, ರಾಮ ಜನ್ಮಭೂಮಿ ಆಂದೋಲನಕ್ಕೆ ಅಡ್ವಾಣಿ ʼರಾಮ ರಥ ಯಾತ್ರೆʼಯನ್ನು ಕೈಗೊಂಡರು. ಗುಜರಾತ್‌ನ ಸೋಮನಾಥದಿಂದ ಪ್ರಾರಂಭವಾದ ಯಾತ್ರೆ ಅಯೋಧ್ಯೆಗೆ ಮುಟ್ಟಿತು. 1991ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿಯು ಕಾಂಗ್ರೆಸ್ ನಂತರ ಎರಡನೇ ದೊಡ್ಡ ಪಕ್ಷವಾಗಿ ಬೆಳೆಯಿತು. ಅಡ್ವಾಣಿ ಗಾಂಧಿನಗರದಿಂದ ಎರಡನೇ ಬಾರಿಗೆ ಗೆದ್ದು ಮತ್ತೊಮ್ಮೆ ವಿರೋಧ ಪಕ್ಷದ ನಾಯಕರಾದರು. 1992ರಲ್ಲಿ, ಅಡ್ವಾಣಿಯವರು ಬಾಬರಿ ಮಸೀದಿ ಧ್ವಂಸಗೊಳಿಸುವುದಕ್ಕೆ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂಬ ಆರೋಪ ಹೇರಲಾಯಿತು. 30 ಸೆಪ್ಟೆಂಬರ್ 2020 ರಂದು ಸಿಬಿಐ ವಿಶೇಷ ನ್ಯಾಯಾಲಯ ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು  ಖುಲಾಸೆಗೊಳಿಸಲಾಯಿತು.  

ವಿರೋಧ ಪಕ್ಷದ ನಾಯಕರಾಗಿದ್ದ ಅಡ್ವಾಣಿ ಜೂನ್ 2005ರಲ್ಲಿ, ಕರಾಚಿಗೆ ಭೇಟಿ ನೀಡಿದಾಗ, ಮೊಹಮ್ಮದ್ ಅಲಿ ಜಿನ್ನಾ ಅವರನ್ನು "ಜಾತ್ಯತೀತ" ನಾಯಕ ಎಂದು ಬಣ್ಣಿಸಿದರು, ಇದು ಆರ್‌ಎಸ್‌ಎಸ್ ನಿಂದ ಟೀಕೆಗೆ ಕಾರಣವಾಯಿತು. ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಬಾರಿ ದೊಡ್ಡ ಮಟ್ಟದಲ್ಲಿ ಕೇಳಿಬಂತು. ಅಡ್ವಾಣಿ ಬಿಜೆಪಿ ಬಗ್ಗೆ ಮುನಿಸಿಕೊಂಡು ರಾಜೀನಾಮೆ ಕೊಟ್ಟರು. ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿರುವ ಬಿಜೆಪಿ 2014ರ ಲೋಕಸಭಾ ಚುನಾವಣೆಗೂ ಮುನ್ನಾ ಅಡ್ವಾಣಿ ಅವರನ್ನು ಮೂಲೆಗೆ ಸರಿಸಿತು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಿತು. ಅಡ್ವಾಣಿ, ಮುರುಳಿ ಮನೋಹರ್‌ ಜೋಶಿ ಹಾಗೂ ಉಮಾಭಾರತಿ ಅಂತವರೆಲ್ಲಾ ಮುಂದಿದ್ದು ಹೋರಾಡಿದ್ದ ರಾಮ ಮಂದಿರದ ವಿಚಾರವನ್ನು ಮೋದಿ ಓವರ್‌ ಟೇಕ್ ಮಾಡಿಕೊಂಡರು. ತಮ್ಮ ರಾಜಕೀಯ ವರ್ಚಸ್ಸನ್ನು ಬೆಳೆಸಿಕೊಂಡರು. ರಾಮ ಮಂದಿರದ ಸಂಪೂರ್ಣ ‘ಶ್ರೇಯ’ ತನ್ನ ಹೆಸರಿಗೆ ಬರುವಲ್ಲಿಯವರೆಗೆ ರಾಮ ಮಂದಿರದ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡರು.

ಬಿಜೆಪಿ ಒಂದು ಹೆಮ್ಮರವಾಗಿ ಬೆಳೆಯುವುದಕ್ಕೆ ರಾಮ ಮಂದಿರವೇ ಮೂಲ ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳನ್ನಷ್ಟೇ ಗೆದ್ದಿದ್ದ ಬಿಜೆಪಿ, ರಾಮ ಮಂದಿರದ ವಿಷಯವನ್ನೇ ಮುಂದಿಟ್ಟುಕೊಂಡು 1989ರ ಲೋಕಸಭಾ ಚುನಾವಣೆಯಲ್ಲಿ 85 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ರಾಮ ಮಂದಿರವನ್ನು ಬಿಜೆಪಿಗೆ ಒಂದು ಅಸ್ತ್ರವಾಗಿ ಕೊಟ್ಟವರೇ ಅಡ್ವಾಣಿ. ಅಡ್ವಾಣಿಯವರಿಂದ ರಾಮ ಮಂದಿರ, ರಾಮ ಮಂದಿರದಿಂದ ಬಿಜೆಪಿ. ಹೀಗೆ ರಾಮ, ರಾಮ ಮಂದಿರ ಬಿಜೆಪಿಯನ್ನು ಪೊರೆಯುತ್ತಲೇ ಬಂದಿದೆ. ನಿಜಕ್ಕೂ ರಾಮ ಮಂದಿರದ ಹೋರಾಟಕ್ಕೆ ಅಡ್ವಾಣಿ ಕೊಡುಗೆ ಅಪಾರವಾದದ್ದು. ಮೋದಿ, ಅಡ್ವಾಣಿಯವರ ಪ್ರತಿಮೆಯೊಂದನ್ನು ರಾಮ ಮಂದಿರದ ಆವರಣದಲ್ಲಿ ನಿಲ್ಲಿಸಿದರೂ ತಪ್ಪಿಲ್ಲ. ರಾಮ ಮಂದಿರ ನಿರ್ಮಾಣದ ʼಶ್ರೇಯʼ ಮೋದಿ ತೆಗೆದುಕೊಳ್ಳುವ ಬದಲು ಅಡ್ವಾಣಿಯವರಿಗೆ ಒಪ್ಪಿಸಲಿ. ರಾಮ ಮಂದಿರಕ್ಕೆ ಅಡ್ವಾಣಿಯವರ ʼಯೋಗದಾನʼದ ಮುಂದೆ ಉಳಿದವರದ್ದೆಲ್ಲಾ ಶೂನ್ಯ, ಮೋದಿಯವರದ್ದೂ. ಮೋದಿಗೆ ಎರಡೆರಡು ಬಾರಿ, ಈಗ ಮತ್ತೊಮ್ಮೆ ಪ್ರಧಾನಿ ಆಗುವ ತನಕ ʼರಾಮ ಮಂದಿರʼ ಸಹಕರಿಸಿದ ಹಾಗೆ ಅಡ್ವಾಣಿ ಅವರಿಗೆ ಸಹಕರಿಸಿಲ್ಲ. ಹೆಚ್ಚೆಂದರೇ ದೇಶದ ಉಪ ಪ್ರಧಾನಿ ಆಗುವವರೆಗೆ ಅಡ್ವಾಣಿ ಅವರಿಗೆ ಯಶಸ್ಸು ದೊರಕಿಸಿತು ಅಷ್ಟೆ.  

ಇನ್ನು, ಮೋದಿ ಎದುರಾಳಿ ಯಾರೂ ಇಲ್ಲವೇ ಇಲ್ಲ ಎಂಬ ಲೆಕ್ಕಕ್ಕೆ ಇಂದಿನ ರಾಜಕೀಯ ವಲಯ ನಿರ್ಧಾರಕ್ಕೆ ಬಂದು ಬಿಟ್ಟಿದೆ. ರಾಹುಲ್‌ ಈಗ ಮತ್ತೊಂದು ಸುತ್ತಿನ ಯಾತ್ರೆಯಲ್ಲಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಹೋರಾಟ ಎಂದು ಕಾಂಗ್ರೆಸ್‌ ಆ ಯಾತ್ರೆಯನ್ನು ಕರೆದಿದೆ. ಭಾವನಾತ್ಮಕವಾಗಿ ದೇಶದಾದ್ಯಂತ ಜನರನ್ನು ಬಿಜೆಪಿ ಸೆಳೆದುಕೊಂಡು ಬಿಟ್ಟಿದೆ. ಯಾವ ʼನ್ಯಾಯ ಯಾತ್ರೆʼಗೂ ಜನ ಮನಸ್ಸು ಬದಲಾಯಿಸದೇ ಇರುವಂತೆ ಬಿಜೆಪಿ ಮನೆ ಮನೆಗೆ ರಾಮ ಮಂದಿರದ ಹೆಸರಿನಲ್ಲಿ ʼಮಂತ್ರಾಕ್ಷತೆʼ ಹಂಚಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಹೆಸರಿನಲ್ಲಿ ಗ್ರಾಮ ಗ್ರಾಮಗಳನ್ನು ತಲುಪಿದೆ. ಒಂದೆಡೆ ಭಾವನಾತ್ಮಕ ನಂಟು, ಜೊತೆಗೆ ಯೋಜನೆಗಳನ್ನು ತಳಮಟ್ಟದವರೆಗೆ ತಲುಪಿಸುವ ಪ್ರಯತ್ನದ ಎದುರು ಕಾಂಗ್ರೆಸ್‌ ಈಗ ʼಯಾತ್ರೆʼ ಆರಂಭಿಸಿದೆ. ಮುಂದಿದ್ದು ನಿಮ್ಮ ಯೋಚನೆಗೆ ಮೀಸಲಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ

Thursday, January 11, 2024

ಮೈತ್ರಿಕೂಟದ ʼಲೀಡರ್‌ ಪಾರ್ಟಿʼ ಇರುಸು ಮುರುಸಿನ ಸ್ಥಿತಿಯಿಂದ ಹೊರಬರದಿದ್ದರೆ...

 


ಸೀಟು ಹಂಚಿಕೆಯ ಚೌಕಾಶಿಯಲ್ಲಿ ʼಇಂಡಿಯಾʼ ಮೈತ್ರಿಕೂಟ | ಗೆಲ್ಲುವ ಭ್ರಮೆ !

ನಿರುದ್ಯೋಗ, ಹಣದುಬ್ಬರ, ಆರ್ಥಿಕ ದುಸ್ಥಿತಿಯಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಒಂದು ಜನವಿರೋಧಿ ವಾತಾವರಣವನ್ನು ಸೃಷ್ಟಿ ಮಾಡುವುದಕ್ಕೆ ಪ್ರತಿಪಕ್ಷಗಳು  ಎಷ್ಟೇ ಪ್ರಯತ್ನಗಳನ್ನು ಮಾಡಿಯೂ ಬಿಜೆಪಿ ಎದರು ಸೋಲುತ್ತಿವೆ.

ಕಾಂಗ್ರೆಸ್‌ ದೇಶದಾದ್ಯಂತ ಇರುವುದನ್ನೆಲ್ಲಾ ಕಳೆದುಕೊಂಡು ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾತ್ರವೇ ಅಧಿಕಾರದಲ್ಲಿದೆ. ಹಿಂದಿನ ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ಹಾಗೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳನ್ನು ತುಲನಾತ್ಮಕವಾಗಿ ಗಮನಿಸುವುದಾದರೇ, ಬಿಜೆಪಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ರಾಜ್ಯಗಳನ್ನು ತನ್ನದಾಗಿಸಿಕೊಂಡಿದೆ. ದೇಶದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ ಕಳೆದ ಕೆಲವು ವರ್ಷಗಳಿಂದ ಕಂಡ ಹಾಗೂ ಕಾಣುತ್ತಿರುವ ಹೀನಾಯ ಸೋಲು ಮತ್ತು ಹಿನ್ನಡೆ ಈಗ ʼಇಂಡಿಯಾʼ ಮೈತ್ರಿಕೂಟದ ಸಹಾಯದಿಂದ ಮರಳಿ ಪಡೆಯುವುದಕ್ಕೆ ಸಾದ್ಯವಿದೆಯೆ? ಎಂಬ ಪ್ರಶ್ನೆ ಕೇಳಿಕೊಂಡಾಗ, ಗೆಲ್ಲುವ ಅಥವಾ ಜನರು ಕಾಂಗ್ರೆಸ್‌ ಮತ್ತು ಮೈತ್ರಿಕೂಟ ಪರವಾಗಿ ನಿಲ್ಲುವ ಸಾಧ್ಯತೆ ತೀರಾ ಕಡಿಮೆ ಇದೆ ಎಂಬ ಉತ್ತರವೇ ಹೆಚ್ಚಾಗಿ ಕಾಣಿಸುತ್ತಿದೆ. ಬಿಜೆಪಿ ಕಳೆದ ಎರಡು ಅಧಿಕಾರವಧಿಯಲ್ಲಿ ದೇಶದಾದ್ಯಂತ ಜನರನ್ನು  ಭಾವನಾತ್ಮಕವಾಗಿ ಕಟ್ಟಿ ಹಾಕಿದೆ ಎನ್ನುವುದೇ ಇದಕ್ಕೆ ಕಾರಣ.

ಕಾಂಗ್ರೆಸ್‌ ಪ್ರಯತ್ನ ಬಿಟ್ಟುಕೊಟ್ಟಿಲ್ಲ. ಆದರೇ, ಕಾಂಗ್ರೆಸ್‌ ನ ತಂತ್ರಗಾರಿಕೆ ಈ ಕಾಲಮಾನಕ್ಕೆ ಸೂಕ್ತವಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇತ್ತೀಚೆಗೆ ನಡೆದ ಮೂರು ಹಿಂದಿ ಭಾಷಿಕರ ರಾಜ್ಯಗಳಾದ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಿತಿ ಏನಾಯ್ತೆಂಬುವುದು ಗೊತ್ತಿರುವ ವಿಷಯ. ಬಿಜೆಪಿ ನೇತೃತ್ವದ ಆಡಳಿತವನ್ನು ಅವ್ಯಾಹತವಾಗಿ ವಿರೋಧಿಸುವ ಕಾಂಗ್ರೆಸ್‌ ಪಕ್ಷ ಸಂಘಟನೆಯ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ʼಇಂಡಿಯಾʼ ಮೈತ್ರಿ ರಚನೆಯಾಗಿತ್ತು. ಈ ಮೇಲಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿದಾಗಲೇ ಮೈತ್ರಿ ಪಕ್ಷಗಳ ಅಸಮಾಧಾನವನ್ನು ಎದುರಿಸಬೇಕಾಗಿ ಬಂತು. ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಒಂದು ಬಲಿಷ್ಠವಾದ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಪ್ರಾದೇಶಿಕವಾಗಿ ಗುರುತಿಸಿಕೊಂಡಿದ್ದ ಪಕ್ಷಗಳನ್ನು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಒಂದಿಷ್ಟು ಸೀಟು ಹಂಚಿ ಬಿಟ್ಟಿದ್ದಿದ್ದರೇ ಚುನಾವಣೆಗಳಲ್ಲಿ ಒಂದಿಷ್ಟು ಪ್ರಯೋಜನವಾಗುತ್ತಿತ್ತೇನೋ. ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಅಕ್ಷರಶಃ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಅಂತಹ ಒಬ್ಬ ನಾಯಕನಿಂದ ಎಲ್ಲವನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಹಲವು ದಶಕಗಳ ಅನುಭವಿ ನಾಯಕರು ಕಾಂಗ್ರೆಸ್‌ನಲ್ಲಿ ಹೇರಳವಾಗಿ ಇರಬಹದು, ಆದರೇ, ಬಿಜೆಪಿಯಂತಹ ಪ್ರಬಲ ಪಕ್ಷದ ಎದುರು ಮಾಡಬೇಕಾಗಿರುವ ತಂತ್ರಗಾರಿಕೆಯನ್ನು ಹೆಣೆಯುವ ಅಥವಾ ಬಿಜೆಪಿ ಅಭ್ಯರ್ಥಿ ಎದುರು ಸರಿಸಮಾನವಾಗಿ ನಿಲ್ಲುವ ನಾಯಕರು ತೀರಾ ಕಡಿಮೆ ಇದ್ದಾರೆ.

ಈ ಮೇಲಿನ ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ ಎರಡು ರಾಜ್ಯಗಳಲ್ಲಾದರೂ ಗೆದ್ದು ಅಧಿಕಾರ ಹಿಡಿದಿದ್ದರೇ, ಕಾಂಗ್ರೆಸ್‌ ತನ್ನ ಹೆಚ್ಚುಗಾರಿಕೆಯನ್ನು ʼಇಂಡಿಯಾʼ ಮೈತ್ರಿಯಲ್ಲಿಯೂ ಉಳಿಸಿಕೊಳ್ಳುವ ಹೇರಳವಾದ ಅವಕಾಶವಿತ್ತು. ಆದರೇ, ಕಾಂಗ್ರೆಸ್‌ಗೆ ಇಲ್ಲೇ ದೊಡ್ಡ ಹಿನ್ನಡೆಯಾಗಿದ್ದು. ಎಲ್ಲಿಯವರೆಗೆ ಕಾಂಗ್ರೆಸ್‌ ಈ ದೇಶದಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರೆ, ಬಿಜೆಪಿಗೆ ಪರ್ಯಾಯ ಕಾಂಗ್ರೆಸ್‌ ಅಲ್ಲವೇ ಅಲ್ಲ ಎನ್ನುವಷ್ಟರ ಮಟ್ಟಿಗೆ. ಕಾಂಗ್ರೆಸ್‌ನ ಈ ಸ್ಥಿತಿ ಈ ದೇಶದ ಒಂದು ದುರಂತಗಳಲ್ಲೊಂದು. ಈ ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಬಹಳ ದೊಡ್ಡದಿದೆ. ʼಬಹುಶಃ ಜನ ಅದನ್ನು ಮರೆತಿಲ್ಲ ಎಂದರೇ ತಪ್ಪಾಗಲಿಕ್ಕಿಲ್ಲʼ.

ನತದೃಷ್ಟತೆ ರಾಹುಲ್‌ ಗಾಂಧಿ ಅವರ ಈಗಿನ ಚುರುಕಿಗೆ ಬಹಳ ದೊಡ್ಡ ತಡೆಯಾಗಿಯೇ ಪರಿಣಮಿಸುತ್ತಿದೆ. ರಾಹುಲ್‌ ಗಾಂಧಿ ಇತ್ತೀಚಿಗಿನ ವರ್ಷಗಳಲ್ಲಿ ಒಬ್ಬ ಪ್ರಭಾವಿ ನಾಯಕರಾಗಿ ಸುಮಾರಷ್ಟು ಬೆಳೆದಿದ್ದಾರೆ. ಮೋದಿ ಹಾಗೂ ಬಿಜೆಪಿ ಬೆಳೆಸಿಕೊಂಡ ಪ್ರಭಾವದ ಎದುರು ಅದು ಗಣನೆಗೂ ಯೋಗ್ಯವಲ್ಲ ಎಂಬಂತಾಗಿದೆ ಎನ್ನುವುದು ಸತ್ಯ. ಅದು ರಾಜಕೀಯದ ಸೃಷ್ಟಿಯಾದರೂ, ವಾಸ್ತವವೂ ಹೌದು. ಇನ್ನು, ಕಾಂಗ್ರೆಸ್‌ ? ಪ್ರಶ್ನೆಯಾಗಿಯೇ ಉಳಿದಿದೆ. ಮೋದಿ ನೇತೃತ್ವದ ಸರ್ಕಾರ ಬಹುತೇಕ ಎಲ್ಲಾ ವೈಫಲ್ಯಗಳನ್ನು ಎತ್ತಿ ಹಿಡಿದಿದ್ದು ಕಾಂಗ್ರೆಸ್‌ ಎನ್ನುವುದು ಶ್ಲಾಘನೀಯ. ಕಾಂಗ್ರೆಸ್‌ನಂತಹ ಒಂದು ರಾಷ್ಟ್ರೀಯ ಪಕ್ಷ ಇಲ್ಲದೇ ಹೋಗಿದ್ದರೇ, ಈ ದೇಶದ ಜನರ ಸ್ಥಿತಿ ಇನ್ನೂ ಗಂಭೀರವಾಗಿರುತ್ತಿತ್ತು. ಆದರೇ ಅದರ ಆಚೆಗೂ ಬಿಜೆಪಿ ತಳಮಟ್ಟದಲ್ಲಿ ಒಂದು ಪ್ರಬಲವಾದ, ಭಾವನಾತ್ಮಕವಾದ ನಂಟನ್ನು ಸೃಷ್ಟಿಸಿಕೊಂಡಿದೆ. ಆ ನಂಟು ಸದ್ಯಕ್ಕೆ ಬಿಚ್ಚಿಕೊಳ್ಳಲಾಗದೆ ಇರುವಷ್ಟರ ಮಟ್ಟಿಗೆ ಭದ್ರವಾಗಿರುವುದೇ ಕಾಂಗ್ರೆಸ್‌ ರಾಜಕೀಯ ಓಟದ ಹಿನ್ನಡೆಗೆ ಪ್ರಮುಖ ಕಾರಣವಾಗುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಪ್ರಮುಖ ಕೆಲವು ರಾಜ್ಯಗಳ ಸೀಟು ಹಂಚಿಕೆಯ ಲೆಕ್ಕಚಾರ, ಕಾಂಗ್ರೆಸ್‌ ಬೇಡಿಕೆ :

ಮುಂಬರುವ ಲೋಕಸಭೆ ಚುನಾವಣೆಗೆ ಮಿತ್ರಪಕ್ಷಗಳೊಂದಿಗೆ ಸಂಭಾವ್ಯ ವೈಮನಸ್ಸು ಉಂಟಾಗಬಹುದಾದ ರಾಜ್ಯಗಳಲ್ಲಿ ಸ್ಪರ್ಧಿಸಲು ಬಯಸುವ ಕ್ಷೇತ್ರಗಳ ಸಂಖ್ಯೆಯನ್ನು ಕಾಂಗ್ರೆಸ್ ನಾಯಕರು ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ಬಿಟ್ಟುಕೊಟ್ಟಿರುವುದನ್ನು ರಾಷ್ಟ್ರೀಯ ಸುದ್ದಿ ಮಾದ್ಯಮಗಳು ವರದಿ ಮಾಡಿದ್ದವು. ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕರು ತಮ್ಮ ಆಕಾಂಕ್ಷೆಗಳನ್ನು ಹೇಳಿಕೊಂಡಿದ್ದರು ಮತ್ತು ʼಇಂಡಿಯಾʼ ಮೈತ್ರಿಕೂಟದೊಂದಿಗೆ ಈ ಸೀಟು ಹಂಚಿಕೆ ವಿಚಾರದಲ್ಲಿ ಮುಂದೆ ಲೋಕಸಭೆಗಾಗಿ ಮಾತುಕತೆಗೆ ಕೂತಾಗ ಪಕ್ಷವು ಎಷ್ಟು ಕ್ಷೇತ್ರಳಿಗೆ ಬೇಡಿಕೆ ಇಡಬಹುದು ಎಂಬುವುದರ ಬಗ್ಗೆ ಚರ್ಚೆಯಾಯಿತು. ಆದರೇ, ಮೈತ್ರಿಕೂಟದ ಎದುರು ಕಾಂಗ್ರೆಸ್‌ ಇಡುವ ಬೇಡಿಕೆಗೆ ʼಇಂಡಿಯಾʼ ಮೈತ್ರಿಕೂಟ ಒಪ್ಪುತ್ತದೆಯೆ ಎನ್ನುವುದು ಎನ್ನುವ ಯಕ್ಷಪ್ರಶ್ನೆಯೊಂದು ಮುಂದಿದೆ. ಅಷ್ಟಾಗಿಯೂ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇಟ್ಟರೆ ಮಾತ್ರ ಹೊಂದಾಣಿಕೆ ಸೂತ್ರ ರೂಪಿಸಲು ಸಾಧ್ಯ’ ಎಂಬ ಅಭಿಪ್ರಾಯವನ್ನು ಹಿರಿಯ ಮುಖಂಡರು ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೇ, ಕಾಂಗ್ರೆಸ್‌ಗೆ ಇರುಸು ಮುರುಸಿನ ಸ್ಥಿತಿಯಾಗಿ ಪರಿಣಮಿಸಿದೆ.

ಬಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಘಟಕದ ನಾಯಕರು ಎಡಪಕ್ಷಗಳ ಸಹಯೋಗದಲ್ಲಿ 25 ಕ್ಷೇತ್ರಗಳಿಗೆ ಬೇಡಿಕೆಯಿಟ್ಟರೆ ಒಟ್ಟು 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 10-12 ಕ್ಷೇತ್ರಗಳನ್ನು ಪಡೆಯಬಹುದು ಎಂಬ ಲೆಕ್ಕಚಾರ ಈ ರಾಜ್ಯದಲ್ಲಿದೆ. ಜೆಡಿ(ಯು) ಮತ್ತು ಆರ್‌ಜೆಡಿ ಯ ಆದ್ಯತೆಗಳ ಆಧಾರದ ಮೇಲೆ ಸೀಟು ಹಂಚಿಕೆಯನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ.  ಜಾರ್ಖಂಡ್‌ನ ರಾಜ್ಯ ಘಟಕದ ಕಾಂಗ್ರೆಸ್ ನಾಯಕರು ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 12 ಕ್ಷೇತ್ರಗಳ ಬೇಡಿಕೆ ಮುಂದಿಡಬೇಕಾಗುತ್ತದೆ.ಳು ಕ್ಷೇತ್ರಗಳಿಗಿಂತ ಕಡಿಮೆಗೆ ಒಪ್ಪಿಕೊಳ್ಳಲೇ ಬಾರದು. ಎಂಬ ಅಭಿಪ್ರಾಯ ಹೊರಬಂತು ಆದರೇ, ಜಾರ್ಖಂಡ್‌ನಲ್ಲಿ ಈಗ ಜಾರ್ಖಂಡ್‌ ಮುಕ್ತಿ ಮೋರ್ಚಾ ಅಧಿಕಾರದಲ್ಲಿದೆ. ಆಡಳಿತದಲ್ಲಿರುವ ಪಕ್ಷ ಕಾಂಗ್ರೆಸ್‌ನ ಈ ಬೇಡಿಕೆಗೆ ಒಪ್ಪಿಕೊಳ್ಳುತ್ತದೆಯೇ ?

ಉತ್ತರ ಪ್ರದೇಶದಲ್ಲಿ 40 ಕ್ಷೇತ್ರಗಳ ಬೇಡಿಕೆಯನ್ನು ಮುಂದಿಡುವ ನಿರ್ಧಾರಕ್ಕೆ ಕಾಂಗ್ರೆಸ್‌ ಮುಂದಾದರೆ ಸಮಾಜವಾದಿ ಪಕ್ಷ ಒಪ್ಪುತ್ತದೆಯೇ ಎಂಬ ಪ್ರಶ್ನೆ ಮುಂದಿಟ್ಟುಕೊಂಡು 20 ಕ್ಷೇತ್ರಳಿಗೆ ಒಪ್ಪಿಕೊಳ್ಳುವ ಅಂತಿಮ ನಿರ್ಧಾರಕ್ಕೆ ಬಂತು ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿವೆ. ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಏನೇ ಕಸರತ್ತು ಮಾಡಿದರೂ ಮೈತ್ರಿ ಗೆಲ್ಲುವುದು ಕಷ್ಟವೇ ಎಂಬ ಮಾತಿದೆ.

 ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ  ಟಿಎಂಸಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಿತಿ ಎಲ್ಲಿಗೆ ಹೋಗಿ ತಲುಪಿತ್ತು ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಅಷ್ಟಾಗಿಯೂ ಕಾಂಗ್ರೆಸ್ ನಾಯಕರು ಆರು ಕ್ಷೇತ್ರಗಳಿಗೆ ಬೇಡಿಕೆಯಿಡಲು ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಬಹುಶಃ ಟಿಎಂಸಿ ಕನಿಷ್ಠ 4 ಕ್ಷೇತ್ರಳನ್ನು ನೀಡುವುದಕ್ಕೆ ಒಪ್ಪಬಹುದೆಂಬ ಮಾತಿತ್ತು. ಆದರೇ, ಟಿಎಂಸಿ ಕೇವಲ ಎರಡು ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡಿದೆ ಎಂಬ ಮಾಹಿತಿ ಇದೆ.

ಪಂಜಾಬ್‌ನ ರಾಜ್ಯ ಘಟಕದ ನಾಯಕರು ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲು ಬಯಸುತ್ತಿರುವ ಎಎಪಿ ನಿರ್ಧಾರ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದು, ಪಂಜಾಬ್‌ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಆಪ್‌ ಅಧಿಕಾರ ಹಿಡಿದಿರುವುದರಿಂದ ಮತ್ತು ಹೊಸ ಭರವಸೆ ಮೂಡಿಸಿರುವುದರಿಂದ ಆಪ್‌ ಇಲ್ಲಿ ಕಾಂಗ್ರೆಸ್‌ ಬೇಡಿಕೆಗೆ ಒಪ್ಪಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ.  

ಕಾಂಗ್ರೆಸ್‌ನ ಸ್ಥಿತಿ ಮೈತ್ರಿಕೂಟದಲ್ಲಿಯೂ ಶೋಚನೀಯವಾಗಿದೆ ಎನ್ನುವುದಕ್ಕೇ ಈ ಸೀಟು ಹಂಚಿಕೆಯ ಚೌಕಾಶಿಯೇ ಸಾಕ್ಷಿ. ಬಹು ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಆಗಿರುವುದರಿಂದ ಮೈತ್ರಿಕೂಟದ ಮುಂದಾಳತ್ವವನ್ನು ಕಾಂಗ್ರೆಸ್‌ಗೆ ಅಷ್ಟು ಸುಲಭದಲ್ಲಿ ಬಿಡುವ ಮನಸ್ಸು ಮಾಡುವುದು ಕೂಡ ಕಷ್ಟವಿದೆ. ಇನ್ನು, ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಂತೆ ಮಮತಾ ಬ್ಯಾನರ್ಜಿ ಹಾಗೂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಅಭಿಪ್ರಾಯ ಮುಂದಿಟ್ಟ ಮೇಲೆ ರಾಹುಲ್‌ ಗಾಂಧಿ ಅವರೇ ಅದರ ನಾಯಕತ್ವ ವಹಿಸಿಕೊಳ್ಳುತ್ತಾರೆ ಅಂತ ಇದ್ದ ಅಭಿಪ್ರಾಯ ದೂರ ಸರಿದಂತಾಗಿದೆ. ರಾಹುಲ್‌ ಗಾಂಧಿಗೆ ಭಾರತ್‌ ಜೋಡೋ ಯಾತ್ರೆಯಿಂದ ಬಂದ ವರ್ಚಸ್ಸು ಈ ಲೋಕಸಭೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಮನವರಿಕೆಯನ್ನು ಸ್ವತಃ ಕಾಂಗ್ರೆಸ್‌ ಮಾಡಿಕೊಂಡಂತಿದೆ.  ರಾಹುಲ್‌ ಮತ್ತು ಕಾಂಗ್ರೆಸ್‌ ಈಗ ಮತ್ತೊಂದು ಹಂತದ ʼಭಾರತ್‌ ಜೋಡೋ ನ್ಯಾಯ್ ಯಾತ್ರೆʼಗೆ ಮುಂದಾಗಿದೆ.

ದಕ್ಷಿಣದಲ್ಲಿ ಅಧಿಕಾರ ಹಿಡಿದ ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಲೋಕಸಭೆಗೆ ಮೋದಿಜಿನೇ ಸೂಕ್ತ ಎಂಬ ಅಭಿಪ್ರಾಯ ಹೆಚ್ಚಾಗಿ ಕೇಳಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ  ಜೆಡಿಎಸ್‌ ಮೈತ್ರಿ ಲೋಕಸಭೆಯನ್ನು ಎದುರಿಸುತ್ತಿದ್ದು ಕಾಂಗ್ರೆಸ್‌ ನಿರೀಕ್ಷೆಗಳನ್ನು ಹುಸಿಯಾಗಿಸುವ ಪ್ರಯತ್ನ ಮಾಡುತ್ತಿವೆ. ಆದಾಗ್ಯೂ ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಾಧನೆ ಕೇವಲ ಒಂದು ಕ್ಷೇತ್ರ. ಮಾತ್ರವಲ್ಲದೇ, ಕಳೆದ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡಿದೆ. ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿ ದಾಟಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ತೆಲಂಗಾಣದಲ್ಲಿ ಈಗಷ್ಟೆ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಪಡೆದುಕೊಳ್ಳುತ್ತದೆ ಎಂಬ ಅಭಿಪ್ರಾಯ ತೀರಾ ಕಡಿಮೆ ಇದೆ.

ಒಟ್ಟಿನಲ್ಲಿ ಕಾಂಗ್ರೆಸ್‌ ತನ್ನ ಒಳ ಒಡಕುಗಳಿಂದ ಮುಕ್ತವಾಗಬೇಕಿದೆ. ಮೈತ್ರಿಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ. ಕಾಲಹರಣ ಮಾಡುವ ಹೊತ್ತು ಕಾಂಗ್ರೆಸ್‌ಗಾಗಲಿ, ಮೈತ್ರಿಕೂಟಕ್ಕಾಗಲಿ ಖಂಡಿತ ಮೀರಿ ಹೋಗಿದೆ. ಬಿಜೆಪಿಯ ತಂತ್ರಗಾರಿಕೆ ಏನೆಂದು ತಿಳಿದು ಅದಕ್ಕೆ ಪ್ರತಿತಂತ್ರ ಹೂಡುವ ತುರ್ತಿದೆ. ಮೈತ್ರಿಕೂಟದ ʼಲೀಡರ್‌ ಪಾರ್ಟಿʼ ತನಗಿದ್ದ ಇರುಸು ಮುರುಸಿನ ಸ್ಥಿತಿಯಿಂದ ಪಾರುಗೊಳ್ಳಲೇಬೇಕಿದೆ. ಅದಾಗದೇ ಇದ್ದಲ್ಲಿ ಗೆಲ್ಲುವುದಿರಲಿ, ಒಂದಿಷ್ಟು ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಬೇಕೆನ್ನುವ ನಿರೀಕ್ಷೆಯೂ ಭ್ರಮೆಯಷ್ಟೇ ಆಗಿ ಉಳಿಯಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್‌ ವಕ್ವಾಡಿ

Thursday, January 4, 2024

ಬಿಜೆಪಿ ಕಾಂಗ್ರೆಸ್‌ನನ್ನು ಒಂದು ರಾಷ್ಟ್ರೀಯ ಪಕ್ಷವೆಂಬುವುದನ್ನು ಮರೆಯುವ ಕಾಲ ಬಂತೆ ?!

 

ಒಂದು ಬಲಿಷ್ಠ ವಿರೋಧ ಪಕ್ಷವನ್ನು ಜನ ಅಪೇಕ್ಷಿಸುತ್ತಿರುವುದನ್ನಾದರೂ ಕಾಂಗ್ರೆಸ್‌ ಅರಿಯಲಿ !

2024ಲೋಕಸಭಾ ಚುನಾವಣಾ ಲೆಕ್ಕಾಚಾರದಲ್ಲಿ ದೇಶದ ಅತ್ಯಂತ ಹಿರಿಯ ಪಕ್ಷ, ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವೆಂದೆಲ್ಲಾ ಕರೆಸಿಕೊಳ್ಳುವ ಕಾಂಗ್ರೆಸ್, ದೀರ್ಘ ಕಾಲದ ರಾಜಕೀಯದ ಆಯಾಸದಿಂದ ಬಳಲುತ್ತಿದೆ ಎಂಬಂತೆ ಕಾಣಿಸುತ್ತಿದೆ. ರಾಹುಲ್‌ ಗಾಂಧಿ ಅವರ ʼಭಾರತ್‌ ಜೋಡೋ ಯಾತ್ರೆʼ ಅಂತಹ ಯಶಸ್ವಿ ಪಾದಯಾತ್ರೆ ಮಾಡಿದರೂ, ಅದಾದ ಮೇಲೆ ನಡೆದ ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿಲ್ಲ. 2014 ರಿಂದ ಬಿಜೆಪಿ ಆಡಳಿತ, ಹಿಂದುತ್ವದ ಅಲೆ ಹಾಗೂ ಮೋದಿ ರಾಜಕೀಯ ವರ್ಚಸ್ಸಿನ ಎದುರು ಪಾತಾಳಕ್ಕೆ ಕುಸಿದ ಕಾಂಗ್ರೆಸ್‌ ರಾಜಕೀಯ ವರ್ಚಸ್ಸನ್ನು ಹತ್ತು ವರ್ಷಗಳಾದರೂ ಮತ್ತೆ ಮರಳಿ ಪಡೆಯುವುದಕ್ಕೆ ಕಾಂಗ್ರೆಸ್‌ನಿಂದ ಆಗಿಲ್ಲ ಎನ್ನುವುದು ವಿಷಾದನೀಯ. ಭರವಸೆಯ ವಿಧಾನಸಭಾ ಚುನಾವಣೆಗಳೇ ಕಾಂಗ್ರೆಸ್‌ಗೆ ಕೈಕೊಟ್ಟವು. ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಯಿತು. ಬಿಜೆಪಿಯ ಧಾರ್ಮಿಕವಾಗಿ ಮತದಾರರುಗಳನ್ನು ಸೆಳೆದುಕೊಂಡಿತು. ಯುವ ಜನಾಂಗ ಧರ್ಮಕ್ಕಾಗಿ ಬಿಜೆಪಿಯನ್ನು ಒಪ್ಪಿಕೊಂಡು ಮತ ಹಾಕಿತು. ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ನಿರುದ್ಯೋಗ ಸಮಸ್ಯೆಯನ್ನೂ ಬಲವಾಗಿ ಎತ್ತಿ ಹಿಡಿಯುವಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ ವೈಫಲ್ಯ ಕಂಡಿದ್ದು ಈ ದೇಶ ದುರಿತ ಕಾಲದಲ್ಲಿದೆ ಎನ್ನುವುದಕ್ಕೆ ಸಾಕ್ಷಿ ಎಂದರೇ ತಪ್ಪಲ್ಲ.

ಬಿಜೆಪಿ ಲೋಕಸಭಾ ಚುನಾವಣೆಗಾಗಿ ತನ್ನ ತಂತ್ರಗಾರಿಕೆಗಳೊಂದಿಗೆ ವೇಗವಾಗಿ ಓಡುತ್ತಿರುವುದನ್ನು ನೋಡಿದರೇ, ಕಾಂಗ್ರೆಸ್‌ಗೆ ಗೋಲ್ಡನ್‌ ಟೈಮ್‌ ಹತ್ತಿರದಲ್ಲಂತೂ ಇಲ್ಲವೇ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಬಿಜೆಪಿಯ ಹಿಂದುತ್ವದ ಸ್ಟ್ರ್ಯಾಟಜಿಗೆ ಪ್ರತಿಯಾಗಿ ಕಾಂಗ್ರೆಸ್‌ ಮೃದು ಹಿಂದುತ್ವ ಧೋರಣೆಯನ್ನು ಅನುಸರಿಸುತ್ತಿರುವುದು ಕೂಡ ಕಾಂಗ್ರೆಸ್‌ ಪಾಳಯದಲ್ಲೇ ಸೈದ್ಧಾಂತಿಕ ಪ್ರಶ್ನೆಯನ್ನು ಎಬ್ಬಿಸಿದೆ. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ವರ್ಚಸ್ಸು ವೃದ್ಧಿಸುತ್ತದೆ, ಇದು ಕಾಂಗ್ರೆಸ್‌ಗೆ ಬಹಳ ದೊಡ್ಡ ಲಾಭವನ್ನು ತಂದುಕೊಡಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂತು. ಆದರೇ, ಹೇಳುವಷ್ಟರ ಮಟ್ಟಿಗೆ ಕಾಂಗ್ರೆಸ್‌ಗಾಗಲಿ ಅಥವಾ ಸ್ವತಃ ರಾಹುಲ್‌ಗಾಗಲಿ ಲಾಭವನ್ನೇನೂ ತಂದುಕೊಟ್ಟಿಲ್ಲ. ರಾಹುಲ್‌ ಅವರಿಗಿದ್ಧ ʼಪಪ್ಪುʼ ಪಟ್ಟವನ್ನು ಕಳೆದುಕೊಳ್ಳುವುದಕ್ಕೆ ಜೋಡೋ ಯಾತ್ರೆಯಿಂದ ಸಾಧ್ಯವಾಯಿತು ಅಷ್ಟೆ. ಕಾಂಗ್ರೆಸ್‌ ರಾಹುಲ್‌ ಅವರ ಜೋಡೋ ಯಾತ್ರೆಯಿಂದ ಬಹಳ ದೊಡ್ಡದ್ದನ್ನೇ  ಬಹುಶಃ ನಿರೀಕ್ಷಿಸಿತ್ತು. ಯಾವುದೇ ಪೂರ್ವಾಗ್ರಹಗಳಿಲ್ಲದೇ ಯಾರು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರೋ ಅವರಲ್ಲಿ ರಾಹುಲ್‌ ಮೇಲೆ ದೊಡ್ಡ ಭರವಸೆಯೇ ಮೂಡಿತ್ತು ಕೂಡ. ನಿಮಗೆ ನೆನಪಿರಬಹುದು ರಾಹುಲ್‌ ಗಾಂಧಿ ಹಿಂದೆ 2014ಕ್ಕೂ ಮುಂಚೆ ಬಹಳ ದೊಡ್ಡದೊಂದು ಯುವ ಸಮುದಾಯ ಇದ್ದಿತ್ತು. ಆದರೇ, ಕೇಂದ್ರದಲ್ಲಿನ ಕಾಂಗ್ರೆಸ್‌ ಆಡಳಿತ ಜನರಿಗೆ ಭ್ರಮನಿರಸನ ಮೂಡಿಸಿತ್ತು. ಬಿಜೆಪಿಯ ಹಿಂದುತ್ವ, ಕಪೋಲಕಲ್ಪಿತ ಗುಜರಾತ್‌ ಮಾಡೆಲ್‌, ಆಗಷ್ಟೇ ರಾಷ್ಟ್ರಮಟ್ಟದಲ್ಲಿ ಬೀಸುವುದಕ್ಕೆ ಆರಂಭಿಸಿದ್ದ ಮೋದಿ ಹವಾ ಕಾಂಗ್ರೆಸ್‌ನನ್ನು ಎಳುವುದಕ್ಕೆ ಬಿಡಲಾರದಷ್ಟು ಒಂದು ದೊಡ್ಡ ಮರ್ಮಾಘಾತವನ್ನೇ ಕೊಟ್ಟಿತ್ತು. ಕಾಂಗ್ರೆಸ್‌ನ ಇತ್ತೀಚೆಗಿನ ಧೋರಣೆಗಳು ಬಿಜೆಪಿ ವಿರುದ್ಧದ ಚಳುವಳಿಯನ್ನು ದುರ್ಬಲಗೊಳಿಸಿವೆ ಎಂಬ ಮಾತುಗಳು ಕಾಂಗ್ರೆಸ್‌ನ ಕೆಲವು ಮಿತ್ರ ಪಕ್ಷಗಳಿಂದಲೇ ಕೇಳಿಬಂತು. ಎಲ್ಲಿಯವರೆಗೆ ಅಂದರೇ, ಬಿಜೆಪಿ ಕಾಂಗ್ರೆಸ್‌ನನ್ನು ಗಂಭೀರವಾಗಿ ಪರಿಗಣಿಸದೇ ಇರುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಸಂಕಷ್ಟದಲ್ಲಿದೆ. ಬಿಜೆಪಿ ಕಾಂಗ್ರೆಸ್‌ನನ್ನು ಒಂದು ರಾಷ್ಟ್ರೀಯ ಪಕ್ಷವೆಂಬುವುದನ್ನು ಮರೆತು ಬಿಡುವುದಕ್ಕೆ ಕಾಲ ಸನಿಹದಲ್ಲಿದೆ ಅನ್ನಿಸುತ್ತಿದೆ.  ಬಿಜೆಪಿಯ ಈ ಪರಿಯ ಏಳ್ಗೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿಯೇ ಪರಿಣಮಿಸುತ್ತಿದೆ.   

2024ರ ಏಪ್ರಿಲ್ ಅಥವಾ ಮೇ ವೇಳೆಗೆ ಲೋಕಸಭೆ ಚುನಾವಣೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದ ಹೊರತಾಗಿ ದೇಶಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್, ಒಂದು ಫಿನಿಕ್ಸ್‌ ಹಕ್ಕಿಯಂತೆ ರೂಪ ತಾಳಲೇ ಬೇಕಿದೆ. ಆ ದೃಷ್ಟಿಯಲ್ಲಿ ಕಾಂಗ್ರೆಸ್‌ ತನ್ನನ್ನು ತಾನು ಮರಳಿ ಸಮರ್ಥವಾಗಿ ವೃದ್ಧಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ. ವಿಶೇಷವಾಗಿ ತನ್ನ ಹಣಕಾಸು ಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 138 ವರ್ಷಗಳಷ್ಟು ಹಳೆಯ ಪಕ್ಷವು ಡಿ.18ರಿಂದ ಕ್ರೌಡ್ ಫಂಡಿಂಗ್ ಮೂಲಕ 'ದೇಶಕ್ಕಾಗಿ ದೇಣಿಗೆ' ಅಭಿಯಾನ ಆರಂಭಿಸಿರುವುದು ಮಾತ್ರವಲ್ಲದೇ, ನಾವು ಸಿದ್ಧರಿದ್ದೇವೆ (ಹೈ ತಯ್ಯರ್ ಹಮ್)ಪ್ರಚಾರ ಆರಂಭಿಸಿರುವುದು ಕಾಂಗ್ರೆಸ್‌ನ ಆತ್ಮ ವಿಶ್ವಾಸವನ್ನು ಮೆಚ್ಚಿಕೊಳ್ಳಲೇ ಬೇಕಿದೆ. ಮತ್ತೆ ಮರಳಿ ರಾಹುಲ್‌ ನೇತೃತ್ವದಲ್ಲಿ ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಡೆಯಲಿರುವ "ಭಾರತ್ ನ್ಯಾಯ್ ಯಾತ್ರೆ" ಸ್ವಾಗತಾರ್ಹ. ಇದು ರಾಹುಲ್‌ ವರ್ಚಸ್ಸು ವೃದ್ಧಿಸುವುದಕ್ಕಷ್ಟೇ ಆಗದೇ ಕಾಂಗ್ರೆಸ್‌ನ ರಾಜಕೀಯ ವರ್ಚಸ್ಸನ್ನು ವೃದ್ಧಿಸುವಂತಾಗಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 272 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ  ಭರವಸೆಯನ್ನು ಯಾರೂ ಕೊಡುವುದಕ್ಕೆ ಮುಂದಾಗುತ್ತಿಲ್ಲ. ಪ್ರಬಲವಾದ ಆಶಾವಾದಿಂದ ಕಾಂಗ್ರೆಸ್‌ ಸದ್ಯಕ್ಕೆ ಇರಲೇ ಬೇಕಿದೆ. ಕ್ಷೇತ್ರಗಳು ಹಾಗೂ ಮತ ಹಂಚಿಕೆಯ ಪ್ರಮಾಣದಲ್ಲಿನ ಗಣನೀಯ ಹೆಚ್ಚಳವು ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್‌ನನ್ನು ಬಲಪಡಿಸಬಹುದು. 

ಲೋಕಸಭೆಯಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂಬುದು ಕೂಡ ಮುಖ್ಯವಾಗಿದೆ. ಪ್ರತಿಯೊಂದು ಕ್ಷೇತ್ರ, ಪ್ರತಿ ಮತವು ಕಾಂಗ್ರೆಸ್‌ ಪಾಲಿಗೆ ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ 2024ರ ಚುನಾವಣೆಯನ್ನು ಕಾಂಗ್ರೆಸ್ ತನ್ನಲ್ಲಿರುವ ಪಕ್ಷದ ಆತ್ಮವಿಶ್ವಾಸ ಮತ್ತು ಗೆಲ್ಲುವ ಹುಮ್ಮಸ್ಸಿನಿಂದ ಎದುರಿಸಬೇಕಾಗಿದೆ. ʼಭಾರತ್ ನ್ಯಾಯ್ ಯಾತ್ರೆʼಯು ಹಲವಾರು ಕಾರಣಗಳಿಗಾಗಿ ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ, ಕಾರ್ಯಕರ್ತರನ್ನು ಎಚ್ಚರಿಸುವ ದೃಷ್ಟಿಯಿಂದ ಇದೊಂದು ಒಳ್ಳೆಯ ನಿರ್ಧಾರವೇ ಹೌದು. ಲೋಕಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಹಾಗೂ ತನ್ನ ರಾಷ್ಟ್ರೀಯ ಆಕರ್ಷಣೆಯನ್ನು ಚೇತರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಆತ್ಮವಿಶ್ವಾಸವು ಅರ್ಧದಷ್ಟು ಗೆಲ್ಲಿಸಿಕೊಟ್ಟರೆ, ಇನ್ನರ್ಧಕ್ಕೆ ಯೋಜನೆ ಅಗತ್ಯವಿದೆ.

ಎಲ್ಲಾ ನಿರ್ಧಾರಗಳಿಗೆ ʼಇಂಡಿಯಾʼವನ್ನು ಅಲಂಭಿಸಿರುವ ಅಗತ್ಯವಿಲ್ಲ :

ಸಾರ್ವಜನಿಕ ಗ್ರಹಿಕೆಯಲ್ಲಿ, ʼಇಂಡಿಯಾʼ ಮೈತ್ರಿಯು ಕಾಂಗ್ರೆಸ್ ಚುನಾವಣಾ ತಂತ್ರ ಹಾಗೂ ಪ್ರಚಾರದ ಒಂದು ಭಾಗವಾಗಿರಬೇಕು ಅಷ್ಟೆ. ಕಾಂಗ್ರೆಸ್ ತನ್ನದೇ ಆದ ಸ್ವತಂತ್ರ ಗುರುತನ್ನು ಪ್ರತಿಪಾದಿಸಬೇಕಾಗಿದೆ. ʼಭಾರತ್ ನ್ಯಾಯ್ ಯಾತ್ರೆʼ ಇದಕ್ಕೆ ನೆರವಾಗಲಿದೆ. ಕಾಂಗ್ರೇಸ್ ಎಷ್ಟು ಬಲಿಷ್ಠವೋ, ʼಇಂಡಿಯಾʼ ಮೈತ್ರಿಯೂ ಅಷ್ಟೇಲಿಷ್ಠವಾಗಿ ಕಾಣಿಸುತ್ತದೆ. ಈ ಮೈತ್ರಿ ಬಣ ಕಾಂಗ್ರೆಸ್‌ಗೆ ಸದ್ಯಕ್ಕೆ ಪ್ರಮುಖ ಮತ್ತು ಉಪಯುಕ್ತವಾಗಿದೆ ಆದರೆ, ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್‌ ತಾನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ʼಇಂಡಿಯಾʼ ಮೈತ್ರಿಯನ್ನು ತೀರಾ ಅಲಂಭಿಸಿರುವ ಅಗತ್ಯವಿಲ್ಲ.

ಸ್ಪಷ್ಟವಾದ ನಿಲುವನ್ನು ತೋರಿಸಿಕೊಡಬೇಕಿದೆ :

ಲೋಕಸಭಾ ಚುನಾವಣೆಗೆ ಕೇವಲ ಮೂರ್ನಾಲ್ಕು ತಿಂಗಳಿರುವಾಗ, ಕಾಂಗ್ರೆಸ್ ನೇತೃತ್ವದಲ್ಲಿಯೇ ʼಇಂಡಿಯಾʼ ರಚನೆಯಾಗಿರುವುದರಿಂದ ಕಾಂಗ್ರೆಸ್‌ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಜೊತೆಗೆ ತನ್ನ ಕಾರ್ಯ ಯೋಜನೆಗಳು, ಭರವಸೆಗಳನ್ನು ನೀಡಬೇಕಾಗಿದೆ. ಪ್ರಣಾಳಿಕೆ ಸಮಿತಿಯನ್ನು  ಕಾಂಗ್ರೆಸ್‌ ಈಗಾಗಲೇ  ರಚಿಸಿಯಾಗಿದೆ. 2019ರಲ್ಲಿ ಆದ ತಪ್ಪನ್ನು ಕಾಂಗ್ರೆಸ್‌ ತಿದ್ದಿಕೊಳ್ಳಬೇಕಿದೆ. ಕಾಂಗ್ರೆಸ್ ಪಕ್ಷದ 2024ರ ಚುನಾವಣಾ ಪ್ರಚಾರದ ಪ್ರಮುಖ ಭರವಸೆಗಳನ್ನು ಆದಷ್ಟು ಬೇಗ ನಿರ್ಧರಿಸಬೇಕು ಮತ್ತು ಘೋಷಿಸಬೇಕು. ಮಾತ್ರವಲ್ಲದೇ, ಅದು ಜನರನ್ನು ತಲುಪುವವರೆಗೆ ಕಾಂಗ್ರೆಸ್‌ ಶ್ರಮಿಸಬೇಕಿದೆ.

ನಿರುದ್ಯೋಗದ ಸಮಸ್ಯೆಯನ್ನೇ ಕಾಂಗ್ರೆಸ್‌ ಎತ್ತಿ ಹಿಡಿಯಬೇಕಿದೆ :

ದೇಶದ ಪ್ರಮುಖ ಸಮಸ್ಯೆಗಳಲ್ಲೊಂದಾದ ನಿರುದ್ಯೋಗ ಸಮಸ್ಯೆಯನ್ನು ಕಾಂಗ್ರೆಸ್‌ ಬಲವಾಗಿ ಎತ್ತಿ ಹಿಡಿಯಬೇಕಿದೆ. ಈಗಾಗಲೇ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿರುವುದರ ವಿರುದ್ಧ ʼಬೀದಿಯಿಂದ ಸಂಸತ್ತಿಗೆʼ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಯುವಕರಿಗೆ ರಾಹುಲ್‌ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಆದರೇ ಈ ವಿಷಯ ರಾಷ್ಟ್ರೀಯ ಮಾಧ್ಯಮಗಳು ಎಲ್ಲೂ ದೊಡ್ಡ ಮಟ್ಟದ ಸುದ್ದಿಯೇ ಮಾಡಲಿಲ್ಲ. ರಾಹುಲ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡರು. ಇದು ಇನ್ನಷ್ಟು ಗಟ್ಟಿಯಾಗಿ ಹೊಮ್ಮಬೇಕಿದೆ. ಯುವಕರನ್ನು ಆಕರ್ಷಿಸುವ ದೃಷ್ಟಿಯಿಂದ ಕಾಂಗ್ರೆಸ್‌ ಇನ್ನಷ್ಟು ಕೆಲಸ ಮಾಡಬೇಕಿದೆ. ಕೋವಿಡ್‌ ಕಾಲಘಟ್ಟದಲ್ಲಿ ಪದವಿ ಪಡೆವರ ಶೈಕ್ಷಣಿಕ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಆಶ್ವಾಸನೆ ನೀಡಲಿ. ನಿರುದ್ಯೋಗದ ಮೇಲೆ ಉದ್ದೇಶಿತ, ಏಕೀಕೃತ ಗಮನವನ್ನು ಕಾಂಗ್ರೆಸ್‌ ನೀಡಲಿ. ಒಂದು ದೊಡ್ಡ ಯುವ ಸಮುದಾಯವೇ ಕಾಂಗ್ರೆಸ್‌ನ ಚುನಾವಣಾ ಪ್ರಚಾರಕರಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಈ ಮೂಲಕ ಹೆಚ್ಚಿವೆ.

ಆರ್ಥಿಕ ದುಸ್ಥಿತಿಯನ್ನು ಎತ್ತಿ ಹಿಡಿಯಲಿ :

ಶೇ. 54ರಷ್ಟು ಕುಟುಂಬಗಳು ಆರ್ಥಿಕವಾಗಿ ಯತಾಸ್ಥಿತಿ ಕಾಯ್ದುಕೊಂಡಿದೆ ಅಂದರೇ ಮೊದಲಿನಂತೆ ಇದೆ, ಇನ್ನು ಶೇ.16ರಷ್ಟು ಕುಟುಂಬಗಳ ಸ್ಥೀತಿ ಅತ್ಯಂತ ಶೋಚನೀಯವಾಗಿದೆ ಎಂದು ಇತ್ತೀಚೆಗೆ ಇಂಡಿಯಾʼಸ್‌ ಪಲ್ಸ್‌ ಪರ್ಸನಲ್‌ ಫೈನಾನ್ಸ್‌ ಸಮೀಕ್ಷೆ 2023-24ರ ವರದಿ ಬಿಡುಗಡೆ ಮಾಡಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬ ಮಾತನ್ನು ಆಡಳಿತ ಪಕ್ಷ ಪದೇ ಪದೆ ಹೇಳುತ್ತಾ ತನ್ನ ಆಡಳಿತವನ್ನು ಸಮರ್ಥಿಸಿಕೊಳ್ಳುತ್ತದೆ. ಆದರೆ ಮೇಲೆ ವರದಿಯನ್ನು ಉಲ್ಲೇಖಿಸಿ ಹೇಳಿರುವ ಹಾಗೆ ದೇಶದ ಅರ್ಧದಷ್ಟು ಜನರ ಆರ್ಥಿಕ ಸ್ಥಿತಿ ಇನ್ನೂ ಹಾಗಯೇ ಇದೆ.  2004ರ ಪ್ರಶ್ನೆಯನ್ನು ಮತ್ತೊಮ್ಮೆ ಕೇಳುವ ಸಮಯ ಬಂದಿದೆ. ʼಆಮ್ ಆದ್ಮಿ ಕೋ ಕ್ಯಾ ಮಿಲಾ?ʼ ಎಂಬ ಪ್ರಶ್ನೆಯನ್ನು ಕೇಳುವ ಕಾಲ ಬಂದಿದೆ. ನಿರುದ್ಯೋಗ ಒಂದು ಸಮಸ್ಯೆಯಾಗಿದ್ದರೂ, ಆರ್ಥಿಕ ಅಸಮಾನತೆಯ ಬಗ್ಗೆಯೂ ಗಮನಹರಿಸಬೇಕು. ʼಭಾರತ್ ನ್ಯಾಯ್ ಯಾತ್ರೆʼಯು ಆರ್ಥಿಕ ದುಸ್ಥಿತಿಯನ್ನು ಎತ್ತಿ ಹಿಡಿಯಬೇಕಿದೆ.

ಪಕ್ಷದ ಸಂಘಟನೆಯನ್ನು ರೀಚಾರ್ಜ್ ಮಾಡಿ :

ಪಕ್ಷವು ಕಾರ್ಯಕರ್ತರನ್ನು ಹುರಿದುಂಬಿಸಬೇಕು, ಅದರಲ್ಲೂ ವಿಶೇಷವಾಗಿ ಇಂದು ಕಾರ್ಯಕರ್ತರು ಹತಾಶರಾಗಿದ್ದಾರೆ. ಭಾರತ್ ನ್ಯಾಯ್ ಯಾತ್ರೆಯು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಮೊದಲು ಪಕ್ಷದ ಕಾರ್ಯಕರ್ತರನ್ನು ಬಡಿದೆಬ್ಬಿಸುವಂತೆ ಮಾಡಬೇಕಿದೆ. ಬಿಜೆಪಿಯ ತಂತ್ರಗಾರಿಕೆಯಂತೆ ಕಾಂಗ್ರೆಸ್ ಪಕ್ಷವು ಕಾರ್ಯಕರ್ತರ ಕೊಡುಗೆಯನ್ನು ಗೌರವಿಸುತ್ತದೆ ಎಂಬುದನ್ನು ತೋರಿಸಿಕೊಡಬೇಕಿದೆ. ಎಷ್ಟು ಕಾರ್ಯಕರ್ತರು  ಸಕ್ರಿಯರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹೊಸ ಸದಸ್ಯತ್ವ ಡ್ರೈವ್‌ಗೆ ಇದು ಸರಿಯಾದ ಸಮಯವಲ್ಲ ಎಂದು ಕೆಲವರು ಹೇಳುತ್ತಾರೆ. ಕರ್ನಾಟಕದಲ್ಲಿ ಹೊಸ ಸದಸ್ಯತ್ವವನ್ನು ಮಾಡುವುದರ ಮೂಲಕ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದೆ. ದೇಶದಲ್ಲಿ ಈ ಬಗ್ಗೆ ಕಾಂಗ್ರೆಸ್‌ ಯೋಚಿಸಬೇಕಿದೆ. ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸದೇ ಇದ್ದರೇ ಕಾಂಗ್ರೆಸ್‌ಗೆ ಬಹಳ ಕಷ್ಟವಿದೆ.

ಸಾಮಾಜಿಕ ಮಾಧ್ಯಮಗಳ ಪ್ರಚಾರ :

ಸಾಮಾಜಿಕ ಮಾಧ್ಯಮ ಯುಗದಲ್ಲಿ ನಾವಿದ್ದೇವೆ. ಡಿಜಿಮೀಡಿಯಾಗಳನ್ನು ರಾಜಕೀಯ ಪ್ರಚಾರಕ್ಕಾಗಿ ಉತ್ತಮವಾಗಿ ಬಳಸಿಕೊಳ್ಳಬೇಕು. ಬಿಜೆಪಿ 2014ರಲ್ಲಿ ಬಳಸಿದ ಆನ್‌ಲೈನ್‌ ಪ್ರಚಾರವನ್ನು ಕಾಂಗ್ರೆಸ್‌ ಇತ್ತೀಚೆಗೆ ಅಂದರೇ, ರಾಹುಲ್‌ರ ʼಭಾರತ್‌ ಜೋಡೋ ಯಾತ್ರೆʼಯ ಸಂದರ್ಭದಲ್ಲಿ ಬಳಸುವುದಕ್ಕೆ ಆರಂಭಿಸಿದೆ. ಬಿಜೆಪಿ ಈಗ ಒಂದು ಹಂತ ಮುಂದೆ ತಲುಪಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳನ್ನೇ ಸತ್ಯ ಮಾಡುವ ಬಿಜೆಪಿಯ ತಂತ್ರಗಾರಿಕೆಯನ್ನೂ ಪಾಲಿಸಬೇಕಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವನ್ನು ಕಾಂಗ್ರೆಸ್‌ ಇನ್ನೂ ಅಳವಡಿಸಿಕೊಳ್ಳದೇ ಇದ್ದರೇ, ಇನ್ನು ಅಧಿಕಾರ ಹಿಡಿಯುವ ಆಸೆಯನ್ನು ಮರೆತು ಬಿಡುವುದೇ ಲೇಸು.

ಒಟ್ಟಿನಲ್ಲಿ, ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲ್ಲುವುದು ಬಿಡಿ, ಒಂದು ಬಲಿಷ್ಠವಾದ ವಿರೋಧ ಪಕ್ಷವನ್ನು ಜನ ಅಪೇಕ್ಷಿಸುತ್ತಿರುವುದನ್ನಾದರೂ ಕಾಂಗ್ರೆಸ್‌ ತುರ್ತಾಗಿ ಅರ್ಥ ಮಾಡಿಕೊಳ್ಳಬೇಕಿದೆ. ರಾಮ ಮಂದಿರ, ಆರ್ಟಿಕಲ್‌ 370, ಮಥುರಾ ಕೃಷ್ಣ ಜನ್ಮಭೂಮಿ ವಿವಾದಗಳೆಲ್ಲವೂ ಬಿಜೆಪಿ ಪರವಾಗಿಯೇ ಇರುವಾಗ ಕಾಂಗ್ರೆಸ್‌ ಇನ್ನಾದರೂ ಯೋಚಿಸಬೇಕಿದೆ.

-ಶ್ರೀರಾಜ್‌ ವಕ್ವಾಡಿ