ಬದುಕು ಕೊಡದ ಆಡಳಿತವನ್ನು ಜನ ಸುದೀರ್ಘ ಕಾಲದವರೆಗೆ ಪೊರೆದ ಇತಿಹಾಸ ಇಲ್ಲಿಲ್ಲ…
ರಾಜಕೀಯದಲ್ಲಿ ಹತ್ತು ವರ್ಷಗಳು ಅಂತಂದ್ರೆ ಸುದೀರ್ಘ
ಅವಧಿ. ಈ ಸಮಯದಲ್ಲಿ ಭಾರತ ಹೊಸ ರಾಜಕೀಯ ಮಾದರಿಗೆ ಸಾಕ್ಷಿಯಾಗಿದೆ. ವಸಾಹತುಶಾಹಿ ಶಕ್ತಿಗಳಿಂದ ಮುಕ್ತಗೊಂಡ ನಂತರ ಆಧುನಿಕ ಭಾರತವು ಜಾತ್ಯತೀತತೆ, ಆಧುನಿಕತೆ,
ಫೆಡರಲಿಸಂ, ಪ್ರಜಾಪ್ರಭುತ್ವ, ಪ್ರಗತಿಪರ ಚಿಂತನೆ
ಮತ್ತು ಬಹುತ್ವದಂತಹ ತತ್ವಗಳ ಆಧಾರಗಳಿಂದ ದೇಶ ಆಡಳಿತ ಕಂಡಿದೆ. ಭಾರತ ಬಹು ಸಂಸ್ಕೃತಿಗಳ ತಾಣ ಮತ್ತು ಒಂದು
ನಿರ್ದಿಷ್ಟ ನಂಬಿಕೆ ಅಥವಾ ಪದ್ಧತಿಯ ಅನುಯಾಯಿಗಳ ಪ್ರಬಲ ಆಚರಣೆಯ
ಕಾರಣದಿಂದಾಗಿ ಅಧೀನತೆಯನ್ನು ಎದುರಿಸಬೇಕಾದೀತು ಎಂಬ
ಭಯ ಎಂದಿಗೂ ಇರಲಿಲ್ಲ. ಆದರೇ, 2014ರಿಂದ, ಭಾರತ ಹೊಸ ಸೈದ್ಧಾಂತಿಕ ಮಾದರಿಗೆ ಒಳಗೊಂಡಿದೆ ಮತ್ತು ಹಿಂದುತ್ವಕ್ಕೆ
ಒಳಗೊಂಡಿದೆ. 2014ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ,
ಬಿಜೆಪಿ ಹಿಂದುತ್ವವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರಲಿಲ್ಲ. ಆರ್ಥಿಕ
ಅಭಿವೃದ್ಧಿಯ 'ಗುಜರಾತ್
ಮಾಡೆಲ್'ನನ್ನು ಕಾಂಗ್ರೆಸ್‌ನ
ಭ್ರಷ್ಟಾಚಾರದ ಆಡಳಿತಕ್ಕೆ ಪರ್ಯಾಯ ಅಸ್ತ್ರವೆಂಬಂತೆ ದೇಶದ ಜನರ ಎದುರಿಗಿಟ್ಟಿತು. ಬಿಜೆಪಿ
ಅಧಿಕಾರಕ್ಕೆ ಬಂದ ನಂತರ, ಹಿಂದುತ್ವ
ಮೋದಿ ವರ್ಚಸ್ಸಿನ ಜೊತೆಗೆ ಚುನಾವಣೆಗಳನ್ನು ಗೆಲ್ಲಲು ಅಸಾಧಾರಣ ಸಾಧನವಾಗಿ ರಾಜಕೀಯದಲ್ಲಿ
ಸ್ಥಾನ ಪಡೆಯಿತು. ಹಿಂದುತ್ವ ಒಂದು ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ತಂದುಕೊಟ್ಟಿತು, ಈಗ ಮರಳಿ
ಚುನಾವಣೆಯ ಮತ್ತೊಂದು ಸುತ್ತು ಬಂದಿದೆ. ರಾಮ ಮಂದಿರದ ಉನ್ಮಾದದ ನಡುವೆ ಈಗ ಹಿಂದುತ್ವ ಒಂದೇ ಸಾಲದು
ಎನ್ನುವ ಅರಿವು ಸ್ವತಃ ಬಿಜೆಪಿಗೆ ಅರಿವಾಗಿದೆ ಎಂದು ಕಾಣಿಸುತ್ತಿದೆ.
ʼಉಚಿತʼಗಳು ಭಾರತದಲ್ಲಿ ಸಾಮಾನ್ಯವಾದಂತಿದೆ. ಭಾರತೀಯ ರಾಜಕೀಯದಲ್ಲಿ
ಮತದಾರರಿಗೆ ʼಉಚಿತʼ ಯೋಜನೆಗಳೇನು ಹೊಸತಲ್ಲ. ತಮಿಳುನಾಡು ಎರಡು ದಶಕಗಳಿಗೂ ಹೆಚ್ಚು ಕಾಲ ಈ ತಂತ್ರವನ್ನು ಪ್ರಯೋಗಿಸಿದೆ.
ಉತ್ತರ ಭಾರತ ಚುನಾವಣೆಗಳನ್ನು ಗೆಲ್ಲುವಲ್ಲಿಯೂ ʼಉಚಿತʼ ಕೆಲಸ ಮಾಡಿದೆ. ಈ ʼಶ್ರೇಯʼ ಅರವಿಂದ್ ಕೇಜ್ರಿವಾಲ್ ಅವರಿಗೆ ಸಲ್ಲಬೇಕು. ದೆಹಲಿಯಲ್ಲಿ 2013ರಲ್ಲಿ ಆಮ್
ಆದ್ಮಿ ಪಾರ್ಟಿಯ(ಎಎಪಿ) ಅಭೂತಪೂರ್ವ ಯಶಸ್ಸಿಗೆ ದೆಹಲಿ ಮತದಾರರಿಗೆ 200 ಯೂನಿಟ್‌ಗಳವರೆಗೆ
ಉಚಿತ ವಿದ್ಯುತ್ ಮತ್ತು ಅರ್ಧ ಬೆಲೆಗೆ ನೀರು
ಸರಬರಾಜು ಭರವಸೆ ನೀಡಲಾಯಿತು. ಆಪ್ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ
ಕೇಜ್ರಿವಾಲ್ ಎರಡೂ ಯೋಜನೆಗಳನ್ನು ಜಾರಿಗೆ ತಂದರು. ಅದು ಆಪ್‌ನ ಟ್ರೇಡ್ ಮಾರ್ಕ್ ಆಗಿ ಬದಲಾಯಿತು. ಮತ್ತೆ ದೆಹಲಿ ಹಾಗೂ ಪಂಜಾಬ್‌ನಲ್ಲಿ
ಅಧಿಕಾರ ತಂದುಕೊಟ್ಟಿತು.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಡತನ ರೇಖೆಗಿಂತ ಕೆಳಗಿರುವ
ಜನರಿಗೆ ಉಚಿತ ಗ್ಯಾಸ್ ಸ್ಟೌವ್ (ಚುಲ್ಹಾ) ನೀಡಲು ʼಉಜ್ವಲ ಯೋಜನೆʼಯನ್ನು
ಪ್ರಾರಂಭಿಸಿದರು. ಆದರೆ ಈ ರೀತಿಯ ಯೋಜನೆಗಳು ಮತ್ತು ಇತರ ಹಲವು ಯೋಜನೆಗಳನ್ನು ಕಲ್ಯಾಣ
ಯೋಜನೆಗಳೆಂದು ವರ್ಗೀಕರಿಸಲಾಯಿತು. ಮೋದಿಯವರ ಹಿಂದುತ್ವ ಮತ್ತು ಅಭಿವೃದ್ಧಿಯ
ಸಂಯೋಜನೆಯನ್ನೊಳಗೊಂಡ ರಾಜಕೀಯವನ್ನು ಎದುರಿಸಲು ವಿರೋಧ
ಪಕ್ಷಗಳು ಹೆಣಗಾಡಿದವು.
ಬಿಜೆಪಿಯು ತಮ್ಮನ್ನು ʼಹಿಂದೂ ವಿರೋಧಿʼ ಮತ್ತು ʼಮುಸ್ಲಿಂ ಪರʼ ಎಂದು ಬಣ್ಣಿಸಿದೆ ಎಂದು ಕಾಂಗ್ರೆಸ್ ನೇತೃತ್ವದ
ಪ್ರತಿಪಕ್ಷಗಳು ಅರಿತುಕೊಂಡಿವೆ. ಶೇಕಡ 80ಕ್ಕಿಂತ
ಹೆಚ್ಚು ಹಿಂದೂಗಳಿರುವ ದೇಶದಲ್ಲಿ ಯಾವುದೇ ಪಕ್ಷ ಹಿಂದೂ ವಿರೋಧಿಯಾಗಿ ಕಾಣುವುದು ಅಪಾಯಕಾರಿ
ಭವಿಷ್ಯವಾಗಿತ್ತು. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಉತ್ಸಾಹದಿಂದ
ದೇವಸ್ಥಾನಗಳಿಗೆ ಭೇಟಿ ನೀಡಿದರು. ಅದು ಸ್ವಲ್ಪ ಫಲ ನೀಡಿತು
ಕೂಡ. ಕಾಂಗ್ರೆಸ್ನನು ದೂರವಿಡಲು ಮತ್ತು ಗುಜರಾತ್ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹರಸಾಹಸ ಮಾಡಿತು. ಬಿಜೆಪಿ ಕರ್ನಾಟಕದಲ್ಲಿ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಮಧ್ಯಪ್ರದೇಶ, ರಾಜಸ್ಥಾನ ಮತ್ತು
ಛತ್ತೀಸ್‌ಗಢವನ್ನು ಕಳೆದುಕೊಂಡಿತು. ಪುಲ್ವಾಮಾ ದಾಳಿ ಮತ್ತು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ
ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತದ ಪ್ರತೀಕಾರದ ವೈಮಾನಿಕ ದಾಳಿ ಮೋದಿ 2019ರಲ್ಲಿ ಹೊಸ ವರ್ಚಸ್ಸಿನಲ್ಲಿ
ಅಧಿಕಾರಕ್ಕೆ ಏರಲು ಸಾಧ್ಯಮಾಡಿಕೊಟ್ಟಿತು. ಉಳಿದದ್ದು ಇತಿಹಾಸ.
ಪ್ರಬಲ ಸಮುದಾಯವೊಂದು ಒಂದು ವರ್ಗದ ಮೇಲೆ ಎದ್ದು ನಿಲ್ಲುತ್ತಿರುವ ಕಾಲವಿದು. ಅದು ಇತಿಹಾಸದ ಪ್ರತಿಕಾರವೂ
ಹೌದು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ವೈಷಮ್ಯಕ್ಕೂ ಕಾರಣವಾಯಿತು. ಇದೇ
ಕಾರಣಕ್ಕೆ ಹಿಂದುತ್ವದ ರಾಜಕೀಯವನ್ನು ಓವರ್‌ಟೇಕ್ ಮಾಡಿಕೊಳ್ಳಲು ಪ್ರತಿಪಕ್ಷಗಳ ಪ್ರಯತ್ನವೂ ನಡೆಯಿತು. ಅರವಿಂದ್ ಕೇಜ್ರಿವಾಲ್ ದೀಪಾವಳಿ ಪೂಜೆಯನ್ನು ನೇರಪ್ರಸಾರ ಮಾಡಿಸಿದರು. ಹನುಮಾನ್ ಚಾಲೀಸಾವನ್ನು ಪಠಿಸಿದರು, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ
ಗಾಯತ್ರಿ ಮಂತ್ರವನ್ನು ಪಠಿಸಿದರು. ಮೊನ್ನಮೊನ್ನೆ ಜಾತ್ಯಾತೀತ ನಾಯಕ ಎಂದು ಗುರುತಿಸಿಕೊಂಡ ಸಿದ್ದರಾಮಯ್ಯ
ʼಜೈ ಶ್ರೀರಾಮ್ʼ ಘೋಷಣೆ ಕೂಗಿದರು. ಹಿಂದುತ್ವವನ್ನು, ರಾಮ ಭಕ್ತಿಯನ್ನು ನಿಯಂತ್ರಿಸಲು ಯಾರಿಂದಲೂ
ಸಾಧ್ಯವಿಲ್ಲ ಎನ್ನುವುದಿದರ ಅರ್ಥವೇ ? ರಾಹುಲ್, ಕೇಜ್ರಿವಾಲ್
ಅಥವಾ ಮಮತಾ, ಸಿದ್ದರಾಮಯ್ಯ ಎಲ್ಲರೂ ತಮ್ಮನ್ನು ತಾವು ಹೆಮ್ಮೆಯ ಹಿಂದೂಗಳು ಎಂದು
ಘೋಷಿಸಿಕೊಂಡರು. ಇವೆಲ್ಲಾ ಎಡ ಉದಾರವಾದಿಗಳ
ಒಂದು ವರ್ಗದಿಂದ ಟೀಕೆಗೆ ಗುರಿಯಾಯಿತು, ಅವರು ಹಿಂದುತ್ವ
ರಾಜಕಾರಣವನ್ನು ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸ ರಾಜಕೀಯ ನಿರೂಪಣೆ ತಲೆ ಎತ್ತುತ್ತಿತ್ತು. ಬಿಜೆಪಿಯ ಹಿಂದುತ್ವದ
ನಡುವೆ ʼಉಚಿತʼಗಳು ಮೇಲೆದ್ದವು. 300ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ (18 ರಿಂದ 60 ವರ್ಷ
ವಯಸ್ಸಿನವರು) ಪ್ರತಿ ತಿಂಗಳು 1,500 ರೂ.ಗಳ
ಭರವಸೆ, ಹಳೆಯ
ಪಿಂಚಣಿ ಯೋಜನೆಯ ಮರುಸ್ಥಾಪನೆ ಮಾಡುವ ಭರವಸೆಯಂತಹ ಯೋಜನೆಗಳು ಹಿಮಾಚಲ ಪ್ರದೇಶದಲ್ಲಿ
ಸೋಲಿನಲ್ಲಿದ್ದ ಕಾಂಗ್ರೆಸ್ ಗೆಲುವಿನ ರುಚಿ ತೋರಿಸಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಇದೇ ರೀತಿಯ ಭರವಸೆಗಳನ್ನು ಮುಂದಿಟ್ಟಿತು. ಬಿಜೆಪಿಯ
ಹನುಮಾನ್ ಚಾಲೀಸದಂತಹ ಹಿಂದುತ್ವದ ಉನ್ಮಾದದ ನಡುವೆಯೂ ಕಾಂಗ್ರೆಸ್‌ಗೆ ʼಉಚಿತʼ ಗ್ಯಾರಂಟಿ ಯೋಜನೆಗಳು
ಗೆಲುವು ತಂದುಕೊಟ್ಟಿತು. 200ಯೂನಿಟ್
ಉಚಿತ ವಿದ್ಯುತ್, ಪ್ರತಿ
ಕುಟುಂಬದ ಯಜಮಾನಿಗೆ 2,000 ರೂ., ರಾಜ್ಯದ ಬಡ
ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ
ಉಚಿತ ಅಕ್ಕಿ, ನಿರುದ್ಯೋಗಿ
ಪದವೀಧರರಿಗೆ ಮಾಸಿಕ 3,000 ರೂ.
ಮತ್ತು ಡಿಪ್ಲೊಮಾ ಪದವಿಧರನಿಗೆ 1,500ರೂ. ನೀಡುವ ʼಗ್ಯಾರಂಟಿ
ಯೋಜನೆʼಗಳನ್ನು ಘೋಷಿಸಿತು. ರಾಜ್ಯದ ಬೊಕ್ಕಸಕ್ಕೆ ಅಂದಾಜು 62,000 ಕೋಟಿ ರೂ. ತಗಲುತ್ತದೆ. ಇವು ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಪ್ರಮುಖ ಪಾತ್ರವಹಿಸಿತ್ತು. ಕರ್ನಾಟಕದ ಗೆಲುವು ಕಾಂಗ್ರೆಸ್‌ಗೆ ಹೊಸ ಮಾದರಿಯನ್ನು ಸೃಷ್ಟಿಸಿದೆ. ಇದು ಬಿಜೆಪಿಗೆ ಸವಾಲೆಸಿದಿತ್ತು. ಪಿಎಂ ಮೋದಿ ʼಫ್ರೀಬಿಸ್ ಸಂಸ್ಕೃತಿʼಯನ್ನು "ಅಭಿವೃದ್ಧಿಗೆ
ಅಪಾಯಕಾರಿ" ಎಂದು ಟೀಕಿಸಿದರು.
ಆದರೆ,
ಇದೇ ಮೋದಿ ನೇತೃತ್ವದ ಬಿಜೆಪಿ ಕಳೆದ ಐದು ರಾಜ್ಯಗಳ ಚುನಾವಣೆಗಳಲ್ಲಿ ಫ್ರೀಬಿಸ್
ಸಂಸ್ಕೃತಿಯನ್ನೇ ಅನುಸರಿಸಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಹಿಳೆಯರಿಗೆ
ಪ್ರತಿ ತಿಂಗಳು , 1500 ರೂ. ಹಾಗೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದಾಗ, ಬಿಜೆಪಿ
"ಲಾಡ್ಲಿ ಬೆಹನಾ ಯೋಜನೆ" ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 1,250 ರೂ. ಮತ್ತು 450 ರೂ.ಗೆ ಗ್ಯಾಸ್
ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತು. ಹಿಮಾಚಲ ಮತ್ತು ಕರ್ನಾಟಕದಂತೆ, ಮಧ್ಯಪ್ರದೇಶದಲ್ಲಿ
ಕಾಂಗ್ರೆಸ್ 100
ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತು.
ರಾಜಸ್ಥಾನದಲ್ಲಿ ಕುತೂಹಲಕಾರಿ ಸಂಗತಿಯೆಂದರೆ, 500 ರೂ.ಗೆ
ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ನೀಡಿದ ಭರವಸೆಯನ್ನು ಎದುರಿಸಲು ಬಿಜೆಪಿ 450 ರೂ.ಗೆ ಗ್ಯಾಸ್
ಸಿಲಿಂಡರ್ ನೀಡುವುದಾಗಿ ಘೋಷಿಸಿದಾಗ,
ಕಾಂಗ್ರೆಸ್ ತನ್ನದೇ ಭರವಸೆಯನ್ನು ಪರಿಷ್ಕರಿಸಿ 400 ರೂ.ಗೆ ಅಡುಗೆ ಅನಿಲ ನೀಡುವುದಾಗಿ ಘೋಷಿಸಿತು. ರಾಜಸ್ಥಾನದ ಅಶೋಕ್
ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯುವ ಪದವೀಧರರಿಗೆ ಲ್ಯಾಪ್‌ಟಾಪ್ ಮತ್ತು ಹುಡುಗಿಯರಿಗೆ
ಉಚಿತ ಮೊಬೈಲ್ ಫೋನ್‌ಗಳನ್ನು ನೀಡುವುದಾಗಿ ಘೋಷಿಸಿದಾಗ,
ಬಿಜೆಪಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಮತ್ತು ಛತ್ತೀಸ್‌ಗಢದ ಎಲ್ಲಾ
ವಿದ್ಯಾರ್ಥಿಗಳಿಗೆ ಪದವಿಯವರೆಗೆ ಉಚಿತ ಶಿಕ್ಷಣದ ಕಾಂಗ್ರೆಸ್ ಭರವಸೆಯನ್ನೇ ಬಿಜೆಪಿ ಘೋಷಿಸಿತು. ರಾಜಸ್ಥಾನದಲ್ಲಿ "ಕೆಜಿ ಟು ಪಿಜಿ ಉಚಿತ" ಮಾಡುವುದಾಗಿ ಭರವಸೆ ನೀಡಿತು.
ಪ್ರಧಾನಿ ಹೇಳಿದಂತೆ ʼಬಿಟ್ಟಿ ಸಂಸ್ಕೃತಿ/ಯೋಜನೆಗಳಿಂದ ದೇಶ ಅಪಾಯಕರಿಯಾಗಿದೆ ಎಂದು ಊಹಿಸುವ ಸ್ಥಿತಿಯಲ್ಲಿ
ಇಂದು ಒಬ್ಬ ಸಾಮಾನ್ಯನಿಲ್ಲ.
ಆದರೇ,
ಅವು ಮತಗಳಾಗಿ ಪರಿವರ್ತನೆಯಾಗಿದ್ದಂತೂ ಸತ್ಯ. ಈ ʼಉಚಿತʼಗಳ ನಡುವೆ ರಾಮ ಮಂದಿರ ಎದ್ದು ನಿಂತಿದೆ.
ʼಉಚಿತʼ ಗಳು ಬಿಜೆಪಿಗೆ ಹಿನ್ನೆಡೆಯಾಗಬಹುದು ಎಂಬ ಚರ್ಚೆಗಳು ಇದ್ದಾಗಲೇ, ಬಿಜೆಪಿಯ ʼಉಚಿತʼ ಯೋಜನೆಗಳು
ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡಗಳಲ್ಲಿ ಕೈ ಹಿಡಿದವು. ಮತ್ತು ರಾಮ ಮಂದಿರದ ಉನ್ಮಾದ ಸದ್ಯಕ್ಕಂತೂ
ಯಾವುದೇ ಕಾರಣಕ್ಕೂ ಕಡಿಮೆಯಾಗುವ ಲಕ್ಷಣವೇ ಇಲ್ಲ ಎಂಬಷ್ಟರ ಮಟ್ಟಿಗೆ ಬೆಳೆದಿದೆ. ಬಿಜೆಪಿಗೆ ರಾಮ ಮಂದಿರ
ಒಂದೇ ಸಾಕಾಗುವುದಿಲ್ಲ ಎನ್ನುವುದೂ ಕೂಡ ಅರಿವಿಗಿದೆ ಎನ್ನುವುದು ಇಲ್ಲಿ ಗಮನಾರ್ಹ. ಕಾಂಗ್ರಸ್ ಕೇಂದ್ರ
ಬಿಜೆಪಿಯ ಬುಡ ಬಡಿಯುವ ಉದ್ದೇಶದಿಂದ ಉಚಿತ ʼಗ್ಯಾರಂಟಿʼಗಳ ಭರವಸೆ ನೀಡಿತು. ಬಿಜೆಪಿ ಒಂದು ಹೆಜ್ಜೆ
ಮುಂದೆ ಹೋಗಿ ಕಾಂಗ್ರೆಸ್ ಯೋಜನೆಗಳನ್ನೇ ಓವರ್‌ಟೇಕ್ ಮಾಡಿಕೊಂಡು ಗೆದ್ದಿತು. ಮೋದಿ ಅಧಿಕಾರಕ್ಕೆ
ಬಂದಿದ್ದೇ ಇಂತಹ ಭರವಸೆಗಳಿಂದಲೇ(ಪತ್ಯೇಕಿಸಿ ಹೇಳಬೇಕೆಂದಿಲ್ಲ). ʼದೇಶಕ್ಕೆ ಒಂದೇ ಒಂದು ಗ್ಯಾರಂಟಿ,
ಅದು ಮೋದಿ ಗ್ಯಾರಂಟಿʼ ಹೆಸರಲ್ಲಿ ಈಗ ಲೋಕಸಭಾ ಪ್ರಚಾರಕ್ಕೆ ಇಳಿದಿದೆ ಕೂಡ. ಕಾಂಗ್ರೆಸ್ ಇನ್ನೂ ಅನಿಶ್ಚಿತತೆಯನ್ನು
ಎದುರಿಸುತ್ತಿದೆ. ಅದರ ನೇತೃತ್ವದ ʼಇಂಡಿಯಾʼ ಮೈತ್ರಿ ಕೂಡ.
ಇನ್ನು, ʼಹಿಂದುತ್ವ ರಾಜಕಾರಣʼಕ್ಕೆ ಬಹಳ
ದೊಡ್ಡ ಜೀವಿತಾವಧಿ ಇದೆ ಎಂದು ನನಗಂತೂ ಅನ್ನಿಸುತ್ತಿಲ್ಲ.
ಬರೀ ʼಹಿಂದುತ್ವವೇ ರಾಜಕಾರಣʼ ಅಲ್ಲ ಎನ್ನುವ ಅರಿವು ಮೋದಿಗೂ, ಬಿಜೆಪಿಗೂ ಇದೆ. ಆದರೇ, ಹಿಂದುತ್ವದ
ಉನ್ಮಾದವೇ ಸಾಕು ಎಂದು ತಿಳಿದಿದ್ದರೇ ಬಹುಷ ಬುಡ ಮೇಲಾಗುವ ಭವಿಷ್ಯವನ್ನೇ ಕಾಣಬೇಕಾಗುತ್ತದೆ ಎನ್ನುವುದರಲ್ಲಿ
ಅನುಮಾನವಿಲ್ಲ.
ಬದುಕು ಕೊಡದ ಆಡಳಿತವನ್ನು ಜನ ಸುದೀರ್ಘ ಕಾಲದವರೆಗೆ ಪೊರೆದ ಇತಿಹಾಸ ಈ ಭಾರತದಲ್ಲಿಲ್ಲ. ಬಹುಷಃ
ಎಲ್ಲಿಯೂ ಇಲ್ಲ. ಹಿಂದುತ್ವ, ಸೆಕ್ಯುಲರಿಸಂ ಅಥವಾ ಮತ್ತೊಂದು, ಮಗದೊಂದು ರಾಜಕೀಯವನ್ನು ಪೊರೆದಿರಬಹುದು.
ಆದರೇ, ಜನರ ಧ್ವನಿಯಾಗಿ ಉಳಿಯದೇ ಇರುವ ಆಡಳಿತವನ್ನು ಜನರು ಹೊರ ಹಾಕಿದ್ದಾರೆ ಎನ್ನುವುದು ಎಲ್ಲಾ ರಾಜಕೀಯ
ಪಕ್ಷಗಳು ನೆನಪಿನಲ್ಲಿಟ್ಟುಕೊಳ್ಳಬೇಕು.
ರಾಜಕೀಯ ಪಕ್ಷಗಳಿಗೆ ಸಾಮಾಜಿಕ-ರಾಜಕೀಯ ಮತ್ತು ರಾಜಕೀಯ-ಆರ್ಥಿಕ
ಕಾರ್ಯತಂತ್ರವನ್ನು ರೀ-ಓರಿಯಂಟ್ ಮಾಡುವ ಸಮಯವಿದು. ಇದು ಕೃತಕ ಬುದ್ಧಿಮತ್ತೆಯ ಯುಗ,
ಆದರೆ ಭಾರತೀಯ ಮತದಾರನ ಮನಸ್ಸು ಕೃತಕವಲ್ಲ. ಜನರ ಧ್ವನಿಗೆ ಸ್ಪಂದಿಸದೇ ಇದ್ದರೇ ʼರಾಮ ಮಂದಿರʼ, ʼಉಚಿತʼ ಎಲ್ಲವೂ ಮತದಾರರ
ಪಾಲಿಗೆ ಗೌಣವಾಗಿಯೇ ಕಾಣಿಸುತ್ತವೆ. ಉಳಿದದ್ದು ನಿಮ್ಮ ನಿಮ್ಮ ಯೋಚನೆಗಳಿಗೆ
ಮೀಸಲಿಟ್ಟಿದ್ದು.
-ಶ್ರೀರಾಜ್ ವಕ್ವಾಡಿ

No comments:
Post a Comment