ಒಂದು ಬಲಿಷ್ಠ ವಿರೋಧ ಪಕ್ಷವನ್ನು ಜನ ಅಪೇಕ್ಷಿಸುತ್ತಿರುವುದನ್ನಾದರೂ ಕಾಂಗ್ರೆಸ್ ಅರಿಯಲಿ !
2024ರ ಲೋಕಸಭಾ ಚುನಾವಣಾ ಲೆಕ್ಕಾಚಾರದಲ್ಲಿ ದೇಶದ ಅತ್ಯಂತ ಹಿರಿಯ ಪಕ್ಷ, ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವೆಂದೆಲ್ಲಾ
ಕರೆಸಿಕೊಳ್ಳುವ ಕಾಂಗ್ರೆಸ್, ದೀರ್ಘ ಕಾಲದ ರಾಜಕೀಯದ ಆಯಾಸದಿಂದ ಬಳಲುತ್ತಿದೆ ಎಂಬಂತೆ ಕಾಣಿಸುತ್ತಿದೆ.
ರಾಹುಲ್ ಗಾಂಧಿ ಅವರ ʼಭಾರತ್ ಜೋಡೋ ಯಾತ್ರೆʼ ಅಂತಹ ಯಶಸ್ವಿ ಪಾದಯಾತ್ರೆ ಮಾಡಿದರೂ, ಅದಾದ ಮೇಲೆ
ನಡೆದ ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿಲ್ಲ.
2014 ರಿಂದ ಬಿಜೆಪಿ ಆಡಳಿತ,
ಹಿಂದುತ್ವದ ಅಲೆ ಹಾಗೂ ಮೋದಿ ರಾಜಕೀಯ ವರ್ಚಸ್ಸಿನ ಎದುರು ಪಾತಾಳಕ್ಕೆ ಕುಸಿದ ಕಾಂಗ್ರೆಸ್ ರಾಜಕೀಯ
ವರ್ಚಸ್ಸನ್ನು ಹತ್ತು ವರ್ಷಗಳಾದರೂ ಮತ್ತೆ ಮರಳಿ ಪಡೆಯುವುದಕ್ಕೆ ಕಾಂಗ್ರೆಸ್‌ನಿಂದ ಆಗಿಲ್ಲ ಎನ್ನುವುದು
ವಿಷಾದನೀಯ. ಭರವಸೆಯ ವಿಧಾನಸಭಾ ಚುನಾವಣೆಗಳೇ ಕಾಂಗ್ರೆಸ್‌ಗೆ ಕೈಕೊಟ್ಟವು. ಯುವಕರನ್ನು ವಿಶ್ವಾಸಕ್ಕೆ
ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಯಿತು. ಬಿಜೆಪಿಯ ಧಾರ್ಮಿಕವಾಗಿ ಮತದಾರರುಗಳನ್ನು
ಸೆಳೆದುಕೊಂಡಿತು. ಯುವ ಜನಾಂಗ ಧರ್ಮಕ್ಕಾಗಿ ಬಿಜೆಪಿಯನ್ನು ಒಪ್ಪಿಕೊಂಡು ಮತ ಹಾಕಿತು. ದೇಶದ ಪ್ರಮುಖ
ಸಮಸ್ಯೆಗಳಲ್ಲಿ ಒಂದಾದ ನಿರುದ್ಯೋಗ ಸಮಸ್ಯೆಯನ್ನೂ ಬಲವಾಗಿ ಎತ್ತಿ ಹಿಡಿಯುವಲ್ಲಿ ವಿರೋಧ ಪಕ್ಷ ಕಾಂಗ್ರೆಸ್
ವೈಫಲ್ಯ ಕಂಡಿದ್ದು ಈ ದೇಶ ದುರಿತ ಕಾಲದಲ್ಲಿದೆ ಎನ್ನುವುದಕ್ಕೆ ಸಾಕ್ಷಿ ಎಂದರೇ ತಪ್ಪಲ್ಲ.
ಬಿಜೆಪಿ ಲೋಕಸಭಾ ಚುನಾವಣೆಗಾಗಿ ತನ್ನ ತಂತ್ರಗಾರಿಕೆಗಳೊಂದಿಗೆ ವೇಗವಾಗಿ
ಓಡುತ್ತಿರುವುದನ್ನು ನೋಡಿದರೇ, ಕಾಂಗ್ರೆಸ್‌ಗೆ ಗೋಲ್ಡನ್ ಟೈಮ್ ಹತ್ತಿರದಲ್ಲಂತೂ ಇಲ್ಲವೇ ಇಲ್ಲ
ಎಂಬುವುದು ಸ್ಪಷ್ಟವಾಗುತ್ತಿದೆ. ಬಿಜೆಪಿಯ ಹಿಂದುತ್ವದ ಸ್ಟ್ರ್ಯಾಟಜಿಗೆ ಪ್ರತಿಯಾಗಿ ಕಾಂಗ್ರೆಸ್
ಮೃದು ಹಿಂದುತ್ವ ಧೋರಣೆಯನ್ನು ಅನುಸರಿಸುತ್ತಿರುವುದು ಕೂಡ ಕಾಂಗ್ರೆಸ್ ಪಾಳಯದಲ್ಲೇ ಸೈದ್ಧಾಂತಿಕ
ಪ್ರಶ್ನೆಯನ್ನು ಎಬ್ಬಿಸಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ವರ್ಚಸ್ಸು ವೃದ್ಧಿಸುತ್ತದೆ,
ಇದು ಕಾಂಗ್ರೆಸ್‌ಗೆ ಬಹಳ ದೊಡ್ಡ ಲಾಭವನ್ನು ತಂದುಕೊಡಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ
ಬಂತು. ಆದರೇ, ಹೇಳುವಷ್ಟರ ಮಟ್ಟಿಗೆ ಕಾಂಗ್ರೆಸ್‌ಗಾಗಲಿ ಅಥವಾ ಸ್ವತಃ ರಾಹುಲ್‌ಗಾಗಲಿ ಲಾಭವನ್ನೇನೂ
ತಂದುಕೊಟ್ಟಿಲ್ಲ. ರಾಹುಲ್ ಅವರಿಗಿದ್ಧ ʼಪಪ್ಪುʼ ಪಟ್ಟವನ್ನು ಕಳೆದುಕೊಳ್ಳುವುದಕ್ಕೆ ಜೋಡೋ ಯಾತ್ರೆಯಿಂದ
ಸಾಧ್ಯವಾಯಿತು ಅಷ್ಟೆ. ಕಾಂಗ್ರೆಸ್ ರಾಹುಲ್ ಅವರ ಜೋಡೋ ಯಾತ್ರೆಯಿಂದ ಬಹಳ ದೊಡ್ಡದ್ದನ್ನೇ ಬಹುಶಃ ನಿರೀಕ್ಷಿಸಿತ್ತು. ಯಾವುದೇ ಪೂರ್ವಾಗ್ರಹಗಳಿಲ್ಲದೇ
ಯಾರು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರೋ ಅವರಲ್ಲಿ ರಾಹುಲ್ ಮೇಲೆ ದೊಡ್ಡ ಭರವಸೆಯೇ ಮೂಡಿತ್ತು
ಕೂಡ. ನಿಮಗೆ ನೆನಪಿರಬಹುದು ರಾಹುಲ್ ಗಾಂಧಿ ಹಿಂದೆ 2014ಕ್ಕೂ ಮುಂಚೆ ಬಹಳ ದೊಡ್ಡದೊಂದು ಯುವ ಸಮುದಾಯ ಇದ್ದಿತ್ತು. ಆದರೇ, ಕೇಂದ್ರದಲ್ಲಿನ ಕಾಂಗ್ರೆಸ್
ಆಡಳಿತ ಜನರಿಗೆ ಭ್ರಮನಿರಸನ ಮೂಡಿಸಿತ್ತು. ಬಿಜೆಪಿಯ ಹಿಂದುತ್ವ, ಕಪೋಲಕಲ್ಪಿತ ಗುಜರಾತ್ ಮಾಡೆಲ್,
ಆಗಷ್ಟೇ ರಾಷ್ಟ್ರಮಟ್ಟದಲ್ಲಿ ಬೀಸುವುದಕ್ಕೆ ಆರಂಭಿಸಿದ್ದ ಮೋದಿ ಹವಾ ಕಾಂಗ್ರೆಸ್‌ನನ್ನು ಎಳುವುದಕ್ಕೆ
ಬಿಡಲಾರದಷ್ಟು ಒಂದು ದೊಡ್ಡ ಮರ್ಮಾಘಾತವನ್ನೇ ಕೊಟ್ಟಿತ್ತು. ಕಾಂಗ್ರೆಸ್‌ನ ಇತ್ತೀಚೆಗಿನ ಧೋರಣೆಗಳು
ಬಿಜೆಪಿ ವಿರುದ್ಧದ ಚಳುವಳಿಯನ್ನು ದುರ್ಬಲಗೊಳಿಸಿವೆ ಎಂಬ ಮಾತುಗಳು ಕಾಂಗ್ರೆಸ್‌ನ ಕೆಲವು ಮಿತ್ರ ಪಕ್ಷಗಳಿಂದಲೇ
ಕೇಳಿಬಂತು. ಎಲ್ಲಿಯವರೆಗೆ ಅಂದರೇ, ಬಿಜೆಪಿ ಕಾಂಗ್ರೆಸ್‌ನನ್ನು ಗಂಭೀರವಾಗಿ ಪರಿಗಣಿಸದೇ ಇರುವಷ್ಟರ
ಮಟ್ಟಿಗೆ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಬಿಜೆಪಿ ಕಾಂಗ್ರೆಸ್‌ನನ್ನು ಒಂದು ರಾಷ್ಟ್ರೀಯ ಪಕ್ಷವೆಂಬುವುದನ್ನು
ಮರೆತು ಬಿಡುವುದಕ್ಕೆ ಕಾಲ ಸನಿಹದಲ್ಲಿದೆ ಅನ್ನಿಸುತ್ತಿದೆ. ಬಿಜೆಪಿಯ ಈ ಪರಿಯ ಏಳ್ಗೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿಯೇ
ಪರಿಣಮಿಸುತ್ತಿದೆ.
2024ರ ಏಪ್ರಿಲ್ ಅಥವಾ ಮೇ ವೇಳೆಗೆ
ಲೋಕಸಭೆ ಚುನಾವಣೆ. ಕರ್ನಾಟಕ, ತೆಲಂಗಾಣ,
ಹಿಮಾಚಲ ಪ್ರದೇಶದ ಹೊರತಾಗಿ ದೇಶಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್, ಒಂದು
ಫಿನಿಕ್ಸ್ ಹಕ್ಕಿಯಂತೆ ರೂಪ ತಾಳಲೇ ಬೇಕಿದೆ. ಆ ದೃಷ್ಟಿಯಲ್ಲಿ ಕಾಂಗ್ರೆಸ್ ತನ್ನನ್ನು ತಾನು ಮರಳಿ
ಸಮರ್ಥವಾಗಿ ವೃದ್ಧಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು
ನಡೆಸುತ್ತಿದೆ. ವಿಶೇಷವಾಗಿ ತನ್ನ ಹಣಕಾಸು ಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 138 ವರ್ಷಗಳಷ್ಟು ಹಳೆಯ ಪಕ್ಷವು ಡಿ.18ರಿಂದ ಕ್ರೌಡ್ ಫಂಡಿಂಗ್ ಮೂಲಕ 'ದೇಶಕ್ಕಾಗಿ ದೇಣಿಗೆ'
ಅಭಿಯಾನ ಆರಂಭಿಸಿರುವುದು ಮಾತ್ರವಲ್ಲದೇ, ನಾವು ಸಿದ್ಧರಿದ್ದೇವೆ (ಹೈ ತಯ್ಯರ್ ಹಮ್)ಪ್ರಚಾರ ಆರಂಭಿಸಿರುವುದು ಕಾಂಗ್ರೆಸ್‌ನ ಆತ್ಮ ವಿಶ್ವಾಸವನ್ನು
ಮೆಚ್ಚಿಕೊಳ್ಳಲೇ ಬೇಕಿದೆ. ಮತ್ತೆ ಮರಳಿ ರಾಹುಲ್ ನೇತೃತ್ವದಲ್ಲಿ ಮಣಿಪುರದಿಂದ
ಮಹಾರಾಷ್ಟ್ರದವರೆಗೆ ನಡೆಯಲಿರುವ "ಭಾರತ್ ನ್ಯಾಯ್ ಯಾತ್ರೆ"
ಸ್ವಾಗತಾರ್ಹ. ಇದು ರಾಹುಲ್ ವರ್ಚಸ್ಸು ವೃದ್ಧಿಸುವುದಕ್ಕಷ್ಟೇ ಆಗದೇ ಕಾಂಗ್ರೆಸ್‌ನ ರಾಜಕೀಯ
ವರ್ಚಸ್ಸನ್ನು ವೃದ್ಧಿಸುವಂತಾಗಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ
272 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ಭರವಸೆಯನ್ನು ಯಾರೂ ಕೊಡುವುದಕ್ಕೆ ಮುಂದಾಗುತ್ತಿಲ್ಲ.
ಪ್ರಬಲವಾದ ಆಶಾವಾದಿಂದ ಕಾಂಗ್ರೆಸ್ ಸದ್ಯಕ್ಕೆ ಇರಲೇ ಬೇಕಿದೆ. ಕ್ಷೇತ್ರಗಳು ಹಾಗೂ ಮತ ಹಂಚಿಕೆಯ ಪ್ರಮಾಣದಲ್ಲಿನ
ಗಣನೀಯ ಹೆಚ್ಚಳವು ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್‌ನನ್ನು ಬಲಪಡಿಸಬಹುದು.
ಲೋಕಸಭೆಯಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂಬುದು ಕೂಡ ಮುಖ್ಯವಾಗಿದೆ. ಪ್ರತಿಯೊಂದು ಕ್ಷೇತ್ರ, ಪ್ರತಿ ಮತವು ಕಾಂಗ್ರೆಸ್ ಪಾಲಿಗೆ ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ 2024ರ
ಚುನಾವಣೆಯನ್ನು ಕಾಂಗ್ರೆಸ್ ತನ್ನಲ್ಲಿರುವ ಪಕ್ಷದ ಆತ್ಮವಿಶ್ವಾಸ ಮತ್ತು ಗೆಲ್ಲುವ
ಹುಮ್ಮಸ್ಸಿನಿಂದ ಎದುರಿಸಬೇಕಾಗಿದೆ. ʼಭಾರತ್ ನ್ಯಾಯ್ ಯಾತ್ರೆʼಯು
ಹಲವಾರು ಕಾರಣಗಳಿಗಾಗಿ ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ, ಕಾರ್ಯಕರ್ತರನ್ನು ಎಚ್ಚರಿಸುವ ದೃಷ್ಟಿಯಿಂದ
ಇದೊಂದು ಒಳ್ಳೆಯ ನಿರ್ಧಾರವೇ ಹೌದು.
ಲೋಕಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ
ಹಾಗೂ ತನ್ನ ರಾಷ್ಟ್ರೀಯ ಆಕರ್ಷಣೆಯನ್ನು ಚೇತರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಆತ್ಮವಿಶ್ವಾಸವು ಅರ್ಧದಷ್ಟು ಗೆಲ್ಲಿಸಿಕೊಟ್ಟರೆ, ಇನ್ನರ್ಧಕ್ಕೆ
ಯೋಜನೆ ಅಗತ್ಯವಿದೆ.
ಎಲ್ಲಾ ನಿರ್ಧಾರಗಳಿಗೆ ʼಇಂಡಿಯಾʼವನ್ನು
ಅಲಂಭಿಸಿರುವ ಅಗತ್ಯವಿಲ್ಲ :
ಸಾರ್ವಜನಿಕ ಗ್ರಹಿಕೆಯಲ್ಲಿ, ʼಇಂಡಿಯಾʼ ಮೈತ್ರಿಯು
ಕಾಂಗ್ರೆಸ್ ಚುನಾವಣಾ ತಂತ್ರ ಹಾಗೂ ಪ್ರಚಾರದ ಒಂದು ಭಾಗವಾಗಿರಬೇಕು ಅಷ್ಟೆ. ಕಾಂಗ್ರೆಸ್ ತನ್ನದೇ ಆದ ಸ್ವತಂತ್ರ ಗುರುತನ್ನು ಪ್ರತಿಪಾದಿಸಬೇಕಾಗಿದೆ. ʼಭಾರತ್ ನ್ಯಾಯ್ ಯಾತ್ರೆʼ ಇದಕ್ಕೆ ನೆರವಾಗಲಿದೆ. ಕಾಂಗ್ರೇಸ್
ಎಷ್ಟು ಬಲಿಷ್ಠವೋ,
ʼಇಂಡಿಯಾʼ ಮೈತ್ರಿಯೂ ಅಷ್ಟೇ ಬಲಿಷ್ಠವಾಗಿ ಕಾಣಿಸುತ್ತದೆ. ಈ ಮೈತ್ರಿ ಬಣ ಕಾಂಗ್ರೆಸ್‌ಗೆ ಸದ್ಯಕ್ಕೆ ಪ್ರಮುಖ ಮತ್ತು ಉಪಯುಕ್ತವಾಗಿದೆ ಆದರೆ, ಹಾಗೆಂದ ಮಾತ್ರಕ್ಕೆ
ಕಾಂಗ್ರೆಸ್ ತಾನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ʼಇಂಡಿಯಾʼ ಮೈತ್ರಿಯನ್ನು ತೀರಾ
ಅಲಂಭಿಸಿರುವ ಅಗತ್ಯವಿಲ್ಲ.
ಸ್ಪಷ್ಟವಾದ ನಿಲುವನ್ನು ತೋರಿಸಿಕೊಡಬೇಕಿದೆ :
ಲೋಕಸಭಾ ಚುನಾವಣೆಗೆ ಕೇವಲ ಮೂರ್ನಾಲ್ಕು ತಿಂಗಳಿರುವಾಗ,
ಕಾಂಗ್ರೆಸ್ ನೇತೃತ್ವದಲ್ಲಿಯೇ ʼಇಂಡಿಯಾʼ ರಚನೆಯಾಗಿರುವುದರಿಂದ ಕಾಂಗ್ರೆಸ್ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಜೊತೆಗೆ ತನ್ನ ಕಾರ್ಯ ಯೋಜನೆಗಳು, ಭರವಸೆಗಳನ್ನು ನೀಡಬೇಕಾಗಿದೆ. ಪ್ರಣಾಳಿಕೆ ಸಮಿತಿಯನ್ನು ಕಾಂಗ್ರೆಸ್
ಈಗಾಗಲೇ ರಚಿಸಿಯಾಗಿದೆ. 2019ರಲ್ಲಿ ಆದ ತಪ್ಪನ್ನು ಕಾಂಗ್ರೆಸ್ ತಿದ್ದಿಕೊಳ್ಳಬೇಕಿದೆ. ಕಾಂಗ್ರೆಸ್
ಪಕ್ಷದ 2024ರ
ಚುನಾವಣಾ ಪ್ರಚಾರದ ಪ್ರಮುಖ ಭರವಸೆಗಳನ್ನು ಆದಷ್ಟು ಬೇಗ ನಿರ್ಧರಿಸಬೇಕು ಮತ್ತು
ಘೋಷಿಸಬೇಕು. ಮಾತ್ರವಲ್ಲದೇ, ಅದು ಜನರನ್ನು ತಲುಪುವವರೆಗೆ ಕಾಂಗ್ರೆಸ್ ಶ್ರಮಿಸಬೇಕಿದೆ.
ನಿರುದ್ಯೋಗದ
ಸಮಸ್ಯೆಯನ್ನೇ ಕಾಂಗ್ರೆಸ್ ಎತ್ತಿ ಹಿಡಿಯಬೇಕಿದೆ :
ದೇಶದ ಪ್ರಮುಖ ಸಮಸ್ಯೆಗಳಲ್ಲೊಂದಾದ ನಿರುದ್ಯೋಗ ಸಮಸ್ಯೆಯನ್ನು ಕಾಂಗ್ರೆಸ್
ಬಲವಾಗಿ ಎತ್ತಿ ಹಿಡಿಯಬೇಕಿದೆ. ಈಗಾಗಲೇ ನಿರುದ್ಯೋಗ ಪ್ರಮಾಣ
ಏರಿಕೆಯಾಗುತ್ತಿರುವುದರ ವಿರುದ್ಧ ʼಬೀದಿಯಿಂದ
ಸಂಸತ್ತಿಗೆʼ ಎಂಬ
ಶೀರ್ಷಿಕೆಯಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಯುವಕರಿಗೆ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಆದರೇ ಈ ವಿಷಯ ರಾಷ್ಟ್ರೀಯ ಮಾಧ್ಯಮಗಳು ಎಲ್ಲೂ ದೊಡ್ಡ
ಮಟ್ಟದ ಸುದ್ದಿಯೇ ಮಾಡಲಿಲ್ಲ. ರಾಹುಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡರು. ಇದು ಇನ್ನಷ್ಟು
ಗಟ್ಟಿಯಾಗಿ ಹೊಮ್ಮಬೇಕಿದೆ. ಯುವಕರನ್ನು ಆಕರ್ಷಿಸುವ ದೃಷ್ಟಿಯಿಂದ ಕಾಂಗ್ರೆಸ್ ಇನ್ನಷ್ಟು ಕೆಲಸ ಮಾಡಬೇಕಿದೆ.
ಕೋವಿಡ್ ಕಾಲಘಟ್ಟದಲ್ಲಿ ಪದವಿ ಪಡೆವರ ಶೈಕ್ಷಣಿಕ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅದನ್ನು ಯಶಸ್ವಿಯಾಗಿ
ಕಾರ್ಯಗತಗೊಳಿಸುವ ಆಶ್ವಾಸನೆ ನೀಡಲಿ. ನಿರುದ್ಯೋಗದ ಮೇಲೆ ಉದ್ದೇಶಿತ, ಏಕೀಕೃತ ಗಮನವನ್ನು ಕಾಂಗ್ರೆಸ್
ನೀಡಲಿ. ಒಂದು ದೊಡ್ಡ ಯುವ ಸಮುದಾಯವೇ ಕಾಂಗ್ರೆಸ್‌ನ ಚುನಾವಣಾ ಪ್ರಚಾರಕರಾಗಿ ಪರಿವರ್ತನೆಯಾಗುವ ಸಾಧ್ಯತೆಗಳು
ಈ ಮೂಲಕ ಹೆಚ್ಚಿವೆ.
ಆರ್ಥಿಕ
ದುಸ್ಥಿತಿಯನ್ನು ಎತ್ತಿ ಹಿಡಿಯಲಿ :
ಶೇ. 54ರಷ್ಟು ಕುಟುಂಬಗಳು ಆರ್ಥಿಕವಾಗಿ
ಯತಾಸ್ಥಿತಿ ಕಾಯ್ದುಕೊಂಡಿದೆ ಅಂದರೇ ಮೊದಲಿನಂತೆ ಇದೆ, ಇನ್ನು ಶೇ.16ರಷ್ಟು ಕುಟುಂಬಗಳ ಸ್ಥೀತಿ ಅತ್ಯಂತ
ಶೋಚನೀಯವಾಗಿದೆ ಎಂದು ಇತ್ತೀಚೆಗೆ ಇಂಡಿಯಾʼಸ್
ಪಲ್ಸ್ ಪರ್ಸನಲ್ ಫೈನಾನ್ಸ್ ಸಮೀಕ್ಷೆ 2023-24ರ ವರದಿ
ಬಿಡುಗಡೆ ಮಾಡಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ
ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬ ಮಾತನ್ನು ಆಡಳಿತ ಪಕ್ಷ ಪದೇ ಪದೆ ಹೇಳುತ್ತಾ ತನ್ನ ಆಡಳಿತವನ್ನು
ಸಮರ್ಥಿಸಿಕೊಳ್ಳುತ್ತದೆ. ಆದರೆ ಮೇಲೆ ವರದಿಯನ್ನು
ಉಲ್ಲೇಖಿಸಿ ಹೇಳಿರುವ ಹಾಗೆ ದೇಶದ ಅರ್ಧದಷ್ಟು ಜನರ ಆರ್ಥಿಕ ಸ್ಥಿತಿ ಇನ್ನೂ ಹಾಗಯೇ ಇದೆ. 2004ರ ಪ್ರಶ್ನೆಯನ್ನು
ಮತ್ತೊಮ್ಮೆ ಕೇಳುವ ಸಮಯ ಬಂದಿದೆ. ʼಆಮ್ ಆದ್ಮಿ ಕೋ ಕ್ಯಾ
ಮಿಲಾ?ʼ ಎಂಬ ಪ್ರಶ್ನೆಯನ್ನು
ಕೇಳುವ ಕಾಲ ಬಂದಿದೆ. ನಿರುದ್ಯೋಗ ಒಂದು ಸಮಸ್ಯೆಯಾಗಿದ್ದರೂ, ಆರ್ಥಿಕ
ಅಸಮಾನತೆಯ ಬಗ್ಗೆಯೂ ಗಮನಹರಿಸಬೇಕು. ʼಭಾರತ್
ನ್ಯಾಯ್ ಯಾತ್ರೆʼಯು ಆರ್ಥಿಕ ದುಸ್ಥಿತಿಯನ್ನು ಎತ್ತಿ ಹಿಡಿಯಬೇಕಿದೆ.
ಪಕ್ಷದ ಸಂಘಟನೆಯನ್ನು ರೀಚಾರ್ಜ್ ಮಾಡಿ :
ಪಕ್ಷವು ಕಾರ್ಯಕರ್ತರನ್ನು
ಹುರಿದುಂಬಿಸಬೇಕು, ಅದರಲ್ಲೂ
ವಿಶೇಷವಾಗಿ ಇಂದು ಕಾರ್ಯಕರ್ತರು ಹತಾಶರಾಗಿದ್ದಾರೆ. ಭಾರತ್ ನ್ಯಾಯ್ ಯಾತ್ರೆಯು ಸಾರ್ವಜನಿಕರನ್ನು
ಉದ್ದೇಶಿಸಿ ಮಾತನಾಡುವ ಮೊದಲು ಪಕ್ಷದ ಕಾರ್ಯಕರ್ತರನ್ನು ಬಡಿದೆಬ್ಬಿಸುವಂತೆ ಮಾಡಬೇಕಿದೆ. ಬಿಜೆಪಿಯ ತಂತ್ರಗಾರಿಕೆಯಂತೆ ಕಾಂಗ್ರೆಸ್ ಪಕ್ಷವು ಕಾರ್ಯಕರ್ತರ ಕೊಡುಗೆಯನ್ನು ಗೌರವಿಸುತ್ತದೆ ಎಂಬುದನ್ನು ತೋರಿಸಿಕೊಡಬೇಕಿದೆ. ಎಷ್ಟು ಕಾರ್ಯಕರ್ತರು ಸಕ್ರಿಯರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹೊಸ ಸದಸ್ಯತ್ವ ಡ್ರೈವ್‌ಗೆ ಇದು ಸರಿಯಾದ ಸಮಯವಲ್ಲ ಎಂದು ಕೆಲವರು ಹೇಳುತ್ತಾರೆ.
ಕರ್ನಾಟಕದಲ್ಲಿ ಹೊಸ ಸದಸ್ಯತ್ವವನ್ನು ಮಾಡುವುದರ ಮೂಲಕ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದೆ. ದೇಶದಲ್ಲಿ
ಈ ಬಗ್ಗೆ ಕಾಂಗ್ರೆಸ್ ಯೋಚಿಸಬೇಕಿದೆ. ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸದೇ ಇದ್ದರೇ
ಕಾಂಗ್ರೆಸ್‌ಗೆ ಬಹಳ ಕಷ್ಟವಿದೆ.
ಸಾಮಾಜಿಕ
ಮಾಧ್ಯಮಗಳ ಪ್ರಚಾರ :
ಸಾಮಾಜಿಕ ಮಾಧ್ಯಮ ಯುಗದಲ್ಲಿ ನಾವಿದ್ದೇವೆ. ಡಿಜಿಮೀಡಿಯಾಗಳನ್ನು ರಾಜಕೀಯ ಪ್ರಚಾರಕ್ಕಾಗಿ ಉತ್ತಮವಾಗಿ ಬಳಸಿಕೊಳ್ಳಬೇಕು. ಬಿಜೆಪಿ 2014ರಲ್ಲಿ
ಬಳಸಿದ ಆನ್‌ಲೈನ್ ಪ್ರಚಾರವನ್ನು ಕಾಂಗ್ರೆಸ್ ಇತ್ತೀಚೆಗೆ ಅಂದರೇ, ರಾಹುಲ್‌ರ ʼಭಾರತ್ ಜೋಡೋ ಯಾತ್ರೆʼಯ
ಸಂದರ್ಭದಲ್ಲಿ ಬಳಸುವುದಕ್ಕೆ ಆರಂಭಿಸಿದೆ. ಬಿಜೆಪಿ ಈಗ ಒಂದು ಹಂತ ಮುಂದೆ ತಲುಪಿಯಾಗಿದೆ. ಸಾಮಾಜಿಕ
ಮಾಧ್ಯಮಗಳಲ್ಲಿ ಸುಳ್ಳನ್ನೇ ಸತ್ಯ ಮಾಡುವ ಬಿಜೆಪಿಯ ತಂತ್ರಗಾರಿಕೆಯನ್ನೂ ಪಾಲಿಸಬೇಕಿದೆ. ಮುಳ್ಳನ್ನು
ಮುಳ್ಳಿನಿಂದಲೇ ತೆಗೆಯುವ ತಂತ್ರವನ್ನು ಕಾಂಗ್ರೆಸ್ ಇನ್ನೂ ಅಳವಡಿಸಿಕೊಳ್ಳದೇ ಇದ್ದರೇ, ಇನ್ನು ಅಧಿಕಾರ
ಹಿಡಿಯುವ ಆಸೆಯನ್ನು ಮರೆತು ಬಿಡುವುದೇ ಲೇಸು.
ಒಟ್ಟಿನಲ್ಲಿ, ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲ್ಲುವುದು
ಬಿಡಿ, ಒಂದು ಬಲಿಷ್ಠವಾದ ವಿರೋಧ ಪಕ್ಷವನ್ನು ಜನ ಅಪೇಕ್ಷಿಸುತ್ತಿರುವುದನ್ನಾದರೂ ಕಾಂಗ್ರೆಸ್ ತುರ್ತಾಗಿ
ಅರ್ಥ ಮಾಡಿಕೊಳ್ಳಬೇಕಿದೆ. ರಾಮ ಮಂದಿರ, ಆರ್ಟಿಕಲ್ 370, ಮಥುರಾ ಕೃಷ್ಣ ಜನ್ಮಭೂಮಿ ವಿವಾದಗಳೆಲ್ಲವೂ ಬಿಜೆಪಿ ಪರವಾಗಿಯೇ ಇರುವಾಗ ಕಾಂಗ್ರೆಸ್
ಇನ್ನಾದರೂ ಯೋಚಿಸಬೇಕಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment