Thursday, May 25, 2023

'ದೇಶಕ್ಕೆ ಮೋದಿ ಬೇಕು' ಎಂಬ ಅಭಿಪ್ರಾಯವನ್ನು ಮೀರಿದರಷ್ಟೇ ಕಾಂಗ್ರೆಸ್‌ ಗೆ ಲಾಭ

ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ರಾಜ್ಯ ವಿಧಾನಸಭಾ ತೀರ್ಪು !

ರಾಜ್ಯದಲ್ಲಿ ನೂತನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌ ನನ್ನು ಪ್ರಚಂಡ ಬಹುಮತದೊಂದಿಗೆ ಜನ ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಏರಿಸಿದೆ. ಅಧಿಕಾರದಲ್ಲಿದ್ದ ಬಿಜೆಪಿಗೆ ನಾಡಿನ ಜನ ಹೀನಾಯ ಸೋಲಿನ ರುಚಿ ತೋರಿಸುವುದರ ಮೂಲಕ ಪ್ರತಿ ಪಕ್ಷದಲ್ಲಿ ಕೂರುವಂತೆ ಮಾಡಿದ್ದಾರೆ. ಉಭಯ ಪಕ್ಷಗಳಿಗೆ ಸವಾಲಿರುವುದು ಇನ್ನು ಮುಂದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಗಾಗಿ ಪಕ್ಷಗಳು ತಯಾರಾಗಬೇಕಿದೆ. 

ಕಾಂಗ್ರೆಸ್  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ರಾಜಕೀಯ ತಂತ್ರಗಳು ಮುಂದಿನ ವರ್ಷ ಬರಲಿರುವ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಲ್ಲಿದ್ದರೇ ಬಹುಶಃ ಎಲ್ಲವೂ ಮೇಲೆ-ಕೆಳಗಾಗಬಹುದು. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ರಾಜ್ಯದಲ್ಲಿ ತೀವ್ರ ಮುಖಭಂಗಕ್ಕೊಳಗಾದರೂ, ಕೇಂದ್ರದಲ್ಲಿ ತನ್ನದೇ ಸರ್ಕಾರವಿರುವ ಕಾರಣಕ್ಕೆ ರಾಜ್ಯದಲ್ಲಿರುವ ಅಷ್ಟೂ ಸಂಸದೀಯ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಇದೆ. ಹಾಗಾಗಿ ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಅಲ್ಲೇ ಕಟ್ಟಿಹಾಕುವಂತೆ ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯಬೇಕಿದೆ. 

ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಮೋದಿ ತಮ್ಮ ರೋಡ್‌ ಶೋಗಳಲ್ಲಿ ಯಾವುದೇ ಸ್ಥಳೀಯ ವಿಧಾನಸಭಾ ಅಭ್ಯರ್ಥಿಗಳನ್ನು ಅಥವಾ ರಾಜ್ಯ ಸಚಿವರನ್ನು ಕರೆದುಕೊಂಡು ಹೋಗಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಗೆ ತಾಲೀಮು ಎಂಬಂತೆ ತೋರಿತ್ತು. ಒಂದು ವೇಳೆ ಕರ್ನಾಟಕದಲ್ಲಿ ಪಕ್ಷದ ವೈಫಲ್ಯವು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ, ಪರಿಣಾಮ ಬೀರಿದರೇ, ಅದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೈಫಲ್ಯವೆಂದು ಬಿಂಬಿತವಾಗುವುದು ಸಹಜ. ಆ ವಿಷಯದಲ್ಲಿನ ಆಪಾದನೆಯ ಯಾವುದೇ ಭಾಗವನ್ನು ಪ್ರಧಾನಿ ಮೇಲೆ ಹಾಕುವುದಕ್ಕೆ ಬಿಜೆಪಿ ಮುಂದಾಗುವುದಿಲ್ಲ. ೨೦೧೯ರ ಲೋಕಸಭಾ ಚುನಾವಣೆ ರಾಜ್ಯದಲ್ಲಂತೂ ಮೋದಿ ವರ್ಸಸ್‌ ಸಿದ್ದರಾಮಯ್ಯ ಎಂಬಂತೆ ಬಿಂಬಿತವಾಗಿತ್ತು. ಸಿದ್ದರಾಮಯ್ಯ ಮೋದಿ ಎದುರು ನಿಲ್ಲಬಹುದಾದ ಸಮರ್ಥ ನಾಯಕನೆಂಬಂತೆ ಬಿಂಬಿತಗೊಂಡರೇ ಹೊರತು ಮೋದಿಗೆ ಆ ಪ್ರಚಾರದಲ್ಲಿ ಅಷ್ಟೊಂದು ವರ್ಚಸ್ಸು ತಂದುಕೊಡಲಿಲ್ಲ. ಅದೇ ಪ್ರಯೋಗವನ್ನು ಬಿಜೆಪಿಯ ಹೈಕಮಾಂಡ್‌ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮಾಡಿತ್ತಾದರೂ, ಇಲ್ಲಿ ಯಾವುದೇ ರೀತಿಯ ವರ್ಕೌಟ್‌  ಆಗಲಿಲ್ಲ. ಪ್ರಧಾನಿ ಮೋದಿ ಮಾಡಿದ ಚುನಾವಣಾ ಪ್ರಚಾರ ಹಾಗೂ ರೋಡ್‌ ಶೋ ನಡೆಸಿದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದ್ದು, ಪ್ರಧಾನಿ ಮೋದಿಯವರ ರಾಜಕೀಯ ವರ್ಚಸ್ಸಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತರುವಂತೆ ಮಾಡಿದೆ. ಇದು ಬಿಜೆಪಿಗೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. 

ರಾಜ್ಯದಲ್ಲಿ ತನ್ನ ಗೆಲುವಿನಿಂದ ಬೀಗಿ ಅಧಿಕಾರಕ್ಕೇರಿದ ಕಾಂಗ್ರೆಸ್ ಲೋಕಸಭೆಗೆ ತನ್ನ ತಂತ್ರವನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ಕಾಂಗ್ರೆಸ್‌ ನ ಸ್ಥಳೀಯ ನಾಯಕರ ಪ್ರಚಾರ ಎಷ್ಟರಮಟ್ಟಿಗೆ ಸಾಗಿತ್ತೆಂದರೆ, ಪ್ರಚಾರದ ಕೊನೆಯ ದಿನದಂದು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಆದರೆ ಫಲಿತಾಂಶಗಳು ಹೊರಬಿದ್ದ ಕೂಡಲೇ ಗಾಂಧಿಯವರಿಗೆ ಮನ್ನಣೆ ನೀಡುವತ್ತ ಗಮನ ಹರಿಸಲಾಯಿತು. ರಾಹುಲ್ ಗಾಂಧಿಯವರ ʼಭಾರತ್ ಜೋಡೋ ಯಾತ್ರೆʼ ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು  ಗಮನಸೆಳೆಯುವ ಯಶಸ್ವಿ ಪ್ರಯತ್ನ ಮಾಡಿ, ಮೋದಿಗೆ ಟಕ್ಕರ್‌ ಕೊಡುವಲ್ಲಿ ಯಶಸ್ವಿಯಾಯಿತು.  ೨೦೧೮ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದು, ಮತ್ತು ರಾಜ್ಯ, ರಾಷ್ಟ್ರ ರಾಜಕೀಯ ವಲಯ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಬಹುಮತದೊಂದಿಗೆ ಅಧಿಕಾರಕ್ಕೇರದ್ದು ʼಭಾರತ್ ಜೋಡೋ ಯಾತ್ರೆʼಯ “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ” ಎಂಬ ಕಾಂಗ್ರೆಸ್‌ ನ ಸಂದೇಶವನ್ನು ಮುನ್ನೆಲೆಗೆ ತರುವ ಸಹಜ, ಸ್ವಾಭಾವಿಕ ಯತ್ನ ಮಾಡಿ ಸೆಲ್ಫ್‌ ಕ್ರೆಡಿಟ್‌ ತೆಗೆದುಕೊಂಡಿತು. ಅದನ್ನು ಜನ ಕೂಡ ಒಪ್ಪಿದರು.  

ಆದಾಗ್ಯೂ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಅಧಿಕಾರಕ್ಕಾಗಿ ಅಭ್ಯರ್ಥಿ ಆಧಾರಿತವಾಗಿ, ಜಾತಿ ಆಧಾರಿತವಾಗಿ, ಪಕ್ಷ ಆಧಾರಿತವಾಗಿ ಮತ ಹಾಕುವ ಕರ್ನಾಟಕದ ಜನರ ಮನಸ್ಥಿತಿಯನ್ನು ಬದಲಾಯಿಸುವುದಕ್ಕೆ ಅಥವಾ ರಾಜ್ಯದ ಪ್ರಜಾಮತವನ್ನು ಕಾಂಗ್ರೆಸ್‌ ಗೆ ಸೆಳೆದು ಬಹುಮತವನ್ನಾಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಗೆ ʼಗಾಂಧಿʼ ಕುಟುಂಬವನ್ನು ಬಿಂಬಿಸುವುದಷ್ಟೇ ಸಾಕಾಗುವುದಿಲ್ಲ. ೧೯೮೫ ರಲ್ಲಿ, ರಾಜ್ಯವು ಸಂಸತ್ತಿನ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಗೆ ಅದ್ಭುತ ವಿಜಯವನ್ನು ನೀಡಿತ್ತು. ನಂತರ ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಪರವಾಗಿ ಅಷ್ಟೇ ಪ್ರಬಲವಾದ ತೀರ್ಪು ಬಂದಿತ್ತು ಎನ್ನುವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ. 

ಈ ಸುತ್ತಿನಲ್ಲಿಯೂ ಹಾಗೆ, ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯನ್ನು ಬಹುಮತದಲ್ಲಿ ಗೆದ್ದಿದೆ ಎಂಬ ಕಾರಣಕ್ಕೆ ಓವರ್‌ ಕಾನ್ಫಿಡೆನ್ಸ್‌ನಲ್ಲಿ ಮುಂದೆ ಹೋದರೇ ಕಾಂಗ್ರೆಸ್‌ ಮುಖಭಂಗಕ್ಕೊಳಗಾಗಬಹುದು. ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗದಂತೆ ಕಾಂಗ್ರೆಸ್ ಖಚಿತಪಡಿಸಿಕೊಳ್ಳಲು, ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರದೊಂದಿಗೆ ತನ್ನ ಯಶಸ್ವಿ ಸ್ಥಳೀಯ ವಿಷಯಗಳ ನಿರೂಪಣೆಯನ್ನು ಸಿಂಕ್ರೊನೈಸ್ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎಂದಾಗ ʼರಾಷ್ಟ್ರೀಯವಾದʼ, ʼದೇಶಭಕ್ತಿʼ ಎಂಬ ವಿಷಯವನ್ನು ಮೋದಿ ನೇತೃತ್ವದ ಸರ್ಕಾರ ಜನರ ತಲೆಯೊಳಗೆ ಬಿತ್ತಿದೆ. ಅಷ್ಟೇ ಅಲ್ಲದೇ, ʼರಾಜ್ಯದಲ್ಲಿ ಓಕೆ, ದೇಶಕ್ಕೆ ಮೋದಿ ಬೇಕುʼ ಎಂಬ ಜನರ ಅಭಿಪ್ರಾಯವನ್ನು ಮೀರಿಸುವಂತೆ ಕಾಂಗ್ರೆಸ್‌ ತಯಾರಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ. 

ಕರ್ನಾಟಕ ಚುನಾವಣೆಯಲ್ಲಿ ತನಗೆ ಉತ್ಕೃಷ್ಟ ಲಾಭಾಂಶವನ್ನು ತಂದುಕೊಟ್ಟ ತನ್ನ ಭರವಸೆಯ ಗುಣಮಟ್ಟವನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಕಾಂಗ್ರೆಸ್ ಬಯಸಿದರೆ, ತನ್ನ ರಾಷ್ಟ್ರೀಯ ನಾಯಕತ್ವವನ್ನು ಮತ್ತಷ್ಟು ಪ್ರಬಲಗೊಳಿಸಿಕೊಳ್ಳಬೇಕಾಗುತ್ತದೆ. ಇದನ್ನು ಕಾಂಗ್ರೆಸ್ ಸಾಧಿಸಿದರೂ ಸಹ, ಇತರೆ ಅಗತ್ಯಗಳನ್ನು ಒಂದು ಸುಸಂಬದ್ಧವಾದ ರಾಷ್ಟ್ರೀಯ ವಿಧಾನಕ್ಕೆ ಪ್ಯಾಕಿಂಗ್ ಮಾಡುವ ಸವಾಲನ್ನು ಎದುರಿಸಬೇಕಾಗುತ್ತದೆ.  ದೇಶದ ೫೪೩ ಸಂಸದೀಯ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಾಗುವ ಸ್ಥಳೀಯವಾಗಿ ಪ್ರಭಾವ ಹೊಂದಿರುವ ನಾಯಕರ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಶಕ್ತವಾಗಿರಬೇಕಾಗುತ್ತದೆ. 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನ ಮತ ಚಲಾಯಿಸಿದಂತೆಯೇ ಮುಂದಿನ ವರ್ಷ ನಡೆಯುವ ಸಂಸತ್ತಿನ ಚುನಾವಣೆಯಲ್ಲೂ ಮತ ಚಲಾಯಿಸುವಂತೆ ಮಾಡುವುದು ಸುಲಭದ ಕೆಲಸವಲ್ಲ. ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಕಾಂಗ್ರೆಸ್ ಮಾಡಿಕೊಳ್ಳಲೇಬೇಕಿದೆ. 

ಇನ್ನು, ಭ್ರಷ್ಟಾಚಾರ ಎಷ್ಟೋ ಸರ್ಕಾರಗಳನ್ನು ಚುನಾವಣೆಗಳಲ್ಲಿ ಸೋಲುವಂತೆ ಮಾಡಿದೆ., ೧೯೮೯ ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ನನ್ನು ಬೋಫೋರ್ಸ್ ಹಗರಣವು ಅಧಿಕಾರದಿಂದ ಕೆಳಗಿಳಿಸಿತ್ತು  ಎನ್ನವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ(ರಾಜೀವ್ ಗಾಂಧಿ ಅವರನ್ನು ಅವರ ಮರಣದ ನಂತರ ನ್ಯಾಯಾಲಯವು ನಿರ್ದೋಷಿ ಎಂದು ಘೋಷಿಸಿತು). ಆದರೆ ಕರ್ನಾಟಕದಲ್ಲಿ ಈ ಬಾರಿ ನಡೆದದ್ದೇ ಬೇರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಅವರ ಸಹೋದ್ಯೋಗಿಗಳು ಒಳಗೊಂಡ ಯಾವುದೇ ನಿರ್ದಿಷ್ಟ ಹಗರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿಲ್ಲ. ಬದಲಾಗಿ, ಇಡೀ ಸರ್ಕಾರಿ ಯಂತ್ರವು ಕೆಳಗಿನಿಂದ ಮೇಲಿನವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕಾರಣಕ್ಕೆ ಜನ ಬಿಜೆಪಿಯ ವಿರುದ್ಧವಾದ ತೀರ್ಪನ್ನು ಕೊಟ್ಟರು. 

ನಿಜ, ಭ್ರಷ್ಟಾಚಾರವೊಂದೇ ಕರ್ನಾಟಕದಲ್ಲಿ ಬಿಜೆಪಿಯನ್ನು ಕೆಳಗಿಳಿಸಿದ ವಿಷಯವಲ್ಲ. ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಜನರ ಅಸಹನೆಯನ್ನು ಹೆಚ್ಚಿಸಿತು. ರಾಷ್ಟ್ರಮಟ್ಟದ ಸಮಸ್ಯೆಗಳು ಕರ್ನಾಟಕದ ಮೂಲಕ ಮೊಟ್ಟ ಮೊದಲ ಬಾರಿಗೆ ಉಗ್ರವಾಗಿಯೇ ಹೊರಹೊಮ್ಮಿತು. "ಡಬಲ್-ಎಂಜಿನ್ ಸರ್ಕಾರ"ದ ಆಡಳಿತ ಜನರಲ್ಲಿ ನಿಜಕ್ಕೂ ಭ್ರಮನಿರಸನ ಮೂಡಿಸಿತು. ಕೇಂದ್ರದಲ್ಲಿ "ಕಳೆದ ಒಂಬತ್ತು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ನ ಬೆಲೆಯು ಮೂರು ಪಟ್ಟು ಹೆಚ್ಚಳಕ್ಕೆ ಇದೇ ಮೋದಿ ನೇತೃತ್ವದ ಸರ್ಕಾರ ಕಾರಣ ಎಂಬ ವಿಚಾರ ಜನರಿಗೆ ಮನವರಿಕೆಯಾಯಿತು. 

ಜಾತಿ ಕಾರಣದಿಂದಾಗಿ ಬಿಜೆಪಿ ಭಾರೀ ಬೆಲೆ ತೆರಬೇಕಾಯಿತು. ರಾಜ್ಯದಲ್ಲಿ ಬಿಜೆಪಿಯ ಪ್ರಬಲ ಸ್ಥಳೀಯ ನಾಯಕರ ಕೊರತೆಯಿಂದಾಗಿ, ಪಕ್ಷವು ಗೆಲುವನ್ನು ತರಲು ಸಂಪೂರ್ಣವಾಗಿ ಮೋದಿಯವರ ವರ್ಚಸ್ಸಿನ ಮೇಲೆ ಅವಲಂಬಿತವಾಯಿತು. ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸಲು ಪಕ್ಷದ ಅವಿರತ ಪ್ರಯತ್ನಗಳು ಮತ್ತು ಬಹುಸಂಖ್ಯಾತ ಸಮುದಾಯದ ಮತಗಳನ್ನು ಗಳಿಸಲು ಪ್ರಯತ್ನಿಸಲು ಮತ್ತು ತನ್ನ ಕಟುವಾದ ಹಿಂದುತ್ವದ ಮನವಿಯನ್ನು ಬಳಸಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಜನರಿಗೆ ಪ್ರಗತಿಪರ ಆಡಳಿತಕ್ಕೆ ಜನರು ಒಲವು ಮೂಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದರೇ, ಬಜರಂಗದಳದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಕಾಂಗ್ರೆಸ್ ನ ಪ್ರಣಾಳಿಕೆಗೆ ವಿರುದ್ಧವಾಗಿ ಮತ ಚಲಾಯಿಸುವಾಗ ಜೈ ಭಜರಂಗ ಬಲಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಗೆ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡು ಮತ್ತೆ ಹಿಂದೂ ಧರ್ಮದ ವಿಚಾರ ಮುಂದೆ ತಂದು ಭಾವನಾತ್ಮಕವಾಗಿ ಸೆಳೆದುಕೊಳ್ಳುವುದಕ್ಕೆ ಮೋದಿ ಸೇರಿ ಇಡಿ ಬಿಜೆಪಿ ಮಾಡಿದ ಪ್ರಯತ್ನಕ್ಕೆ ಜನ ಬಗ್ಗಲಿಲ್ಲ.  

ಇನ್ನು, ಚುನಾವಣಾ ಲಾಭಕ್ಕಾಗಿ ಬಿಜೆಪಿಗೆ "೪೦% ಕಮಿಷನ್" ಮೇಲೆ ದಾಳಿ ಮಾಡುವುದು ಕಾಂಗ್ರೆಸ್‌ ಗೆ ಸುಲಭದ ಕೆಲಸವಾಗಿತ್ತು. ಆದರೇ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಕಾಂಗ್ರೆಸ್‌ ಗೆ ಇನ್ನಿರುವ ದೊಡ್ಡ ಸವಾಲು. ಉನ್ನತ ಮಟ್ಟದ ಪಾರದರ್ಶಕತೆ ಮತ್ತು ಜನ ಇಟ್ಟ ವಿಶ್ವಾಸವನ್ನು ವ್ಯವಸ್ಥಿತ ಸುಧಾರಣೆಗಳ ಮೂಲಕ ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ತಯಾರಾಗಿದೆ ಎನ್ನುವುದು ಮುಖ್ಯ.  ರಾಜ್ಯ ಬಿಜೆಪಿಯ ವಿಚಾರವನ್ನಷ್ಟೇ ಅಲ್ಲದೇ, ದೇಶಕ್ಕೆ ಬಿಜೆಪಿ ಸರ್ಕಾರದಿಂದಾದ ಸಮಸ್ಯೆಗಳನ್ನು ತಿಳಿಸುವುದರ ಜೊತೆಗೆ ಒಂದಿಷ್ಟು ಹೊಸ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಅಗತ್ಯವಾಗಿ ಲೋಕಸಭಾ ಚುನಾವಣೆಯೊಳಗೆ ರಾಜ್ಯದಲ್ಲಿ ಮಾಡಿಕೊಳ್ಳಬೇಕಿದೆ. ಬಿಜೆಪಿಯ ಎಲ್ಲಾ ಮೈನಸ್ ಗಳನ್ನು ಕಾಂಗ್ರೆಸ್‌ ಹಠ ಹಿಡಿದು ಪ್ಲಸ್ ಮಾಡಿಕೊಂಡಲ್ಲಿ ಬದಲಾವಣೆ ಸಾಧ್ಯ. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಜನರ ತೀರ್ಪು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಮುಂದೇನಾಗುತ್ತದೆ ? ಕಾದು ನೋಡೋಣ.  

-ಶ್ರೀರಾಜ್‌ ವಕ್ವಾಡಿ




Friday, May 19, 2023

ದಕ್ಷಿಣದ ಹೃದಯವು ಉತ್ತರದ ಹೃದಯಕ್ಕಿಂತ ಭಿನ್ನವೆಂದ ಮತದಾರ

ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ ನನ್ನು ಕಾಂಗ್ರೆಸ್‌ ಬೆಳೆಸಲಿ । ಕೆಲಸಕ್ಕೆ ಬರಲಿಲ್ಲ ಮೋದಿ ವರ್ಚಸ್ಸು !

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರ ಮೂಲಕ ಮತ್ತೆ ಇಡೀ ದೇಶದಾದ್ಯಂತ ಕಾಂಗ್ರೆಸ್‌ ಮರು ಜೀವ ಪಡೆದಂತಾಗಿದೆ. ಕಾಂಗ್ರೆಸ್ ಸಂಭ್ರಮಿಸಲು ಕಾರಣವಿದೆ. ಬಿಜೆಪಿಯ ದೊಡ್ಡ ಮಟ್ಟದ ಅಪಪ್ರಚಾರದ ಪ್ರೊಪಗಂಡಾದ ನಡುವೆಯೂ ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ವಿರುದ್ಧವಾಗಿ ಬಂದ ನಿರ್ಣಾಯಕ ತೀರ್ಪು ಕಾಂಗ್ರೆಸ್‌ ನ ಪಾಳಯದಲ್ಲಿ ಹೊಸ ಹುಮ್ಮಸ್ಸು ತಂದಿದೆ. 

ಕಾಂಗ್ರೆಸ್‌ ನ "ವಾಯ್ಸ್‌ ಫಾರ್‌ ಲೋಕಲ್‌ / ಸ್ಥಳೀಯ ಪರ ಧ್ವನಿ" ಪ್ರಚಾರವು ಮೇಲುಗೈ ಸಾಧಿಸಿತು. ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಗುತ್ತಿಗೆದಾರರ ಸಂಘ ಮತ್ತು ಶಾಲಾ ಆಡಳಿತ ಮಂಡಳಿಗಳ ಲಂಚದ ಆರೋಪದ ನಂತರ "೪೦% ಸರ್ಕಾರ" ಅಂಟಿಕೊಂಡಿದ್ದೆಲ್ಲಾ ಕಾಂಗ್ರೆಸ್‌ ಗೆ ಅನುಕೂಲವಾಯಿತು. ರಾಜ್ಯದ ಜನ ಬಿಜೆಪಿಯ ದುರಾಡಳಿತದಲ್ಲಿ ಬೇಸತ್ತು ಹೋದರು. 

ಚುನಾವಣೆಯು ಸ್ಥಳೀಯ ಸಮಸ್ಯೆಗಳ ಮೇಲೆ ನಿಂತಿತ್ತು. ಬಿಜೆಪಿಯ ಯಾವುದೇ ರೋಡ್‌ ಶೋ, ಪ್ರಚಾರ ಸಭೆ, ಅಪಪ್ರಚಾರ, ಗುಜರಾತ್‌ ಮಾಡೆಲ್‌ ಕಾರ್ಯರೂಪಕ್ಕೆ ತರುವ ಯಾವುದೇ ಪ್ರಯತ್ನ ಇಲ್ಲಿ ಫಲ ಕೊಟ್ಟಿಲ್ಲ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಆಗುವ ಸಂದರ್ಭದಲ್ಲಿ ಅಯ್ಯೋ ʼಈವಯ್ಯ ಏನ್‌ ಮಾಡ್ತಾನಪ್ಪಾ ?ʼ ಎಂಬ ಮಾತು ರಾಜ್ಯದಲ್ಲಿತ್ತು. ಆದರೇ, ಕೆಳವರ್ಗದವರನ್ನೂ ತಲುಪಿದ ಭಾರತ್‌ ಜೋಡೋ ಯಾತ್ರೆ ಕೂಡ ಇಲ್ಲಿ ಕಾಂಗ್ರೆಸ್‌ ಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪಕ್ಷದ ಪ್ರಬಲ ಪ್ರಾದೇಶಿಕ ನಾಯಕತ್ವ, ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಮಾಡಿಕೊಂಡ ನಿರ್ಧಾರ ಸ್ಪಷ್ಟವಾಗಿದ್ದಕ್ಕೆ ಇವೆಲ್ಲವೂ ಸಾಕಾರವಾಯ್ತು. ಇನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ವಿಮರ್ಶೆಯು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರಚಾರವನ್ನು ನಿರ್ಲಕ್ಷಿಸುವುದಿಲ್ಲ, ಅವರು ಮಹಿಳೆಯರು ಮತ್ತು ಯುವ ಮತದಾರರನ್ನು ತಲುಪುವ ಸಂದರ್ಭದಲ್ಲಿ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದು ಕೂಡ ಗೆಲುವಿನ ಒಂದು ಭಾಗ.  

ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪನವರ ವರ್ಚಸ್ಸು ಈ ಬಾರಿಯ ಚುನಾವಣೆಯಲ್ಲಿ ಕೆಲಸಕ್ಕೆ ಬಾರದಿರುವುದು ಬಿಜೆಪಿ ತಂತ್ರಜ್ಞರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳೆದುಕೊಂಡ ರಾಜ್ಯದ ಬಗ್ಗೆ ಬಿಜೆಪಿ ಹೈಕಮಾಂಡ್‌ ಮರಳಿ ಪಡೆಯುವುದಕ್ಕೆ ಮುಂದೆ ಯಾರಿಗೆ ನೇತೃತ್ವ ನೀಡಬೇಕು ಎಂಬ ವಿಚಾರದಲ್ಲೀಗ ತಲೆಕೆಡಿಸಿಕೊಂಡಂತಿದೆ. ಮೋದಿ ಮತ್ತು ಶಾ ಅವರ ʼರೋಬೋ ಆಡಿಯನ್ಸ್‌ʼ ರೋಡ್‌ ಶೋ, ಚುನಾವಣಾ ಪ್ರಚಾರ ಸಭೆಗಳು ಮತ್ತೆ ಮತ್ತೆ ಸೋಲುತ್ತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಈ ಸೋಲು ಬಿಜೆಪಿಗೆ ಚಿಂತನಾರ್ಹವಾಗಿದೆ. ಈ ಸೋಲಿನಿಂದಾಗಿ, ಇಲ್ಲಿ ಮಾತ್ರವಲ್ಲದೇ, ಜೈರಾಮ್ ಠಾಕೂರ್ (ಹಿಮಾಚಲ ಪ್ರದೇಶ), ರಘುಬರ್ ದಾಸ್ (ಜಾರ್ಖಂಡ್), ಮನೋಹರಲಾಲ್ ಖಟ್ಟರ್ (ಹರಿಯಾಣ) ಅಥವಾ ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ) ಅವರಂತಹವರನ್ನು ಪ್ರಯೋಗಿಸುವ ಆಲೋಚನೆಯನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಮರುಪರಿಶೀಲಿಸಬೇಕಾಗಬಹುದು.

ಬಿಜೆಪಿಯ ಪ್ರಚಾರವು "ಡಬಲ್ ಇಂಜಿನ್" ಸರ್ಕಾರ, ರಾಷ್ಟ್ರೀಯತೆ, ಹಿಂದುತ್ವ, ಭಜರಂಗಬಲಿ ಮತ್ತು ನರೇಂದ್ರ ಮೋದಿಯವರ ರಾಜಕೀಯ ವರ್ಚಸ್ಸಿನ ಜನಪ್ರಿಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಕಾಂಗ್ರೆಸ್‌ ನ ಪ್ರಚಾರವು ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚು ಬೇರೂರಿತ್ತು. ರಾಹುಲ್ ಗಾಂಧಿ ಮತ್ತು  ಕಾಂಗ್ರೆಸ್‌ ನ ಕೇಂದ್ರ ನಾಯಕತ್ವವು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡರೆ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಂತಹ ರಾಜ್ಯ ನಾಯಕರು ತಾರಾ ಪ್ರಚಾರಕರಾಗಿ ಕಾಣಿಸಿಕೊಂಡಿದ್ದು ವಿಶೇಷ.

ರಾಜ್ಯದಲ್ಲಿ ಕಾಂಗ್ರೆಸ್‌ ನ ಯಶಸ್ಸು ಎರಡೂ ಪಕ್ಷಗಳಿಗೆ ಪ್ರಮುಖ ಪಾಠಗಳನ್ನು ಹೇಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿಗೆ, ಇದು ರಾಜ್ಯ ಚುನಾವಣೆಗೆ ಬಂದಾಗ ಕೇಂದ್ರೀಕೃತ ಪ್ರಚಾರ ಮತ್ತು ನರೇಂದ್ರ ಮೋದಿಯನ್ನು ಅವಲಂಬಿಸುವ ಅವಶ್ಯಕತೆಗಳ ಮಿತಿಗಳನ್ನು ಒತ್ತಿ ಹೇಳುತ್ತದೆ. ಕಾಂಗ್ರೆಸ್‌ ನ ದೃಷ್ಟಿಕೋನದಿಂದ, ಯಶಸ್ಸು ರಾಜ್ಯ ಮಟ್ಟದ ನಾಯಕತ್ವವನ್ನು ಸಶಕ್ತಗೊಳಿಸುವ ಮಹತ್ವವನ್ನು ತೋರಿಸುತ್ತದೆ. ಮತ್ತು ಇನ್ನಾದರೂ ಕಾಂಗ್ರೆಸ್ ಈ ಐದು ವರ್ಷಗಳ ಆಡಳಿತಾವಧಿಯಲ್ಲಿ ತನ್ನ ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ / ಎರಡನೇ ಹಂತದ ನಾಯಕತ್ವವನ್ನು ಬಲಗೊಳಿಸಿಕೊಳ್ಳಬೇಕಿದೆ. 

ದಕ್ಷಿಣದಲ್ಲಿ ಯಶಸ್ಸು ಪಡೆಯದ ಉತ್ತರದ ತಂತ್ರ : 

ಮೇ ೬ ಮತ್ತು ೭ ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ವ್ಯಾಪಕ ಪ್ರಚಾರದ ರೋಡ್‌ ಶೋನೊಂದಿಗೆ ಬಿಜೆಪಿಯ ಪ್ರಚಾರವು ತಾರಕಕ್ಕೆ ತಲುಪಿತು. ರೋಡ್‌ ಶೋ ಚೆನ್ನಾಗಿಯೇ ಯೋಜಿಸಲಾಗಿತ್ತು. ನಗರದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರಿ ವ್ಯವಸ್ಥೆಯ ಕಾರ್ಯಾಂಗವನ್ನೇ ಬಳಸಿಕೊಂಡಿತ್ತು. ಪ್ರಧಾನ ಮಂತ್ರಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಬಿಂಬಿಸಿ ಒಂದೆಡೆ ಪ್ರಚಾರವಾದರೇ, ಇನ್ನೊಂದೆಡೆ ಇದಕ್ಕೆ ತದ್ವಿರುದ್ಧ. ಎಷ್ಟೇ ಪ್ರಯತ್ನ ಮಾಡಿದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ತೋರಿದ ಪ್ರಾಬಲ್ಯವನ್ನು ಬಿಜೆಪಿಗೆ ಈ ಚುನಾವಣೆಯಲ್ಲಿ ತೋರಿಸಲು ಸಾಧ್ಯವಾಗಿಲ್ಲ. ಪ್ರಧಾನಿಯವರ  ʼಜೈ ಭಜರಂಗಬಲಿ ಭಾಷಣʼವೂ ಕೂಡ ಹೆಚ್ಚಿನ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವಲ್ಲಿ ಸಫಲವಾಗಲಿಲ್ಲ. 

ಪಿಎಂ ಮೋದಿ ಜನಪ್ರಿಯವಾಗಿದ್ದರೂ, ಅದು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತಗಳಾಗಿ ಬದಲಾಗಲಿಲ್ಲ. ಕೇಂದ್ರ ನಾಯಕತ್ವ ಮತ್ತು ರಾಷ್ಟ್ರೀಯ ಮಟ್ಟದ ಸಮಸ್ಯೆಗಳಿಗಿಂತ ರಾಜ್ಯ ಮಟ್ಟದ ನಾಯಕರು ಮತ್ತು ಸ್ಥಳೀಯ ಸಮಸ್ಯೆಗಳು ಇಲ್ಲಿ ಮುಖ್ಯವಾದವು. ಬೊಮ್ಮಾಯಿ ನೇತೃತ್ವದ ಬಿಜೆಪಿಯ "೪೦% ಕಮಿಷನ್ ಸರ್ಕಾರ" ಮತದಾರರನ್ನು ಬಡಿದೆಬ್ಬಿಸಿತು. ಪ್ರಧಾನಿಯವರ ನಿರಂತರ ಜನಪ್ರಿಯತೆ ಕೂಡ ಅದನ್ನು ಮೀರಿಸಲು ಸಾಧ್ಯವಾಗಲಿಲ್ಲ.

ಉತ್ತರದ ರಾಜ್ಯಗಳಲ್ಲಿ ತೋರಿಸಿಕೊಂಡು ಬಂದ ಬಿಜೆಪಿಯ ಧೋರಣೆ ದಕ್ಷಿಣದಲ್ಲಿ ಕೆಲಸ ಮಾಡಲಿಲ್ಲ. ʼದಕ್ಷಿಣದ ಹೃದಯವು ಉತ್ತರದ/ಹಿಂದಿಯ ಹೃದಯಕ್ಕಿಂತ ಭಿನ್ನವಾಗಿದೆʼ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾಡುವಂತೆ ದಕ್ಷಿಣದಲ್ಲಿ ಮತ ಧ್ರವೀಕರಣ ಮಾಡಬಹುದೆಂದು ತಿಳಿದಿದ್ದ ಬಿಜೆಪಿಗೆ ಇಲ್ಲಿ ನಿರಾಸೆ ಆಯ್ತು. 

ತಿಂಗಳುಗಟ್ಟಲೆ ಪತ್ರಿಕಾ ಮಾಧ್ಯಮಗಳಲ್ಲಿ ಬ್ಯಾನರ್‌ ಹೆಡ್‌ ಲೈನ್‌ ಅಡಿಯಲ್ಲಿ ಸುದ್ದಿಯಾದ ಹಿಜಾಬ್ ಪ್ರಕರಣ, ಚುನಾವಣಾ ಪ್ರಚಾರಗಳಲ್ಲಿ ಅಷ್ಟೇನೂ ಉಲ್ಲೇಖಿಸಲ್ಪಡದಿರುವುದು ಆಶ್ಚರ್ಯವೇನಿಲ್ಲ. 'ದಿ ಕೇರಳ ಸ್ಟೋರಿ' ಮತ್ತು ಭಜರಂಗದಳ ನಿಷೇಧದಂತಹ ವಿವಾದಗಳಲ್ಲಿ ಎದ್ದಿರುವ ವಿಷಯಗಳು ಬಿಜೆಪಿಗೆ ಮತ ತಂದುಕೊಡಲಿಲ್ಲ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಗಳಿಂದ ಬಿಜೆಪಿ ನಾಯಕರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು, ಆದರೆ ಮತದಾರರ ತೀರ್ಪು ಬಿಜೆಪಿಯು ಪ್ರಧಾನಿ ಮೋದಿಯವರ ಮೈಲೇಜ್‌, ಹಿಂದು ಧಾರ್ಮಿಕ ಭಾವನೆಗಳ ಮೇಲೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಕೊಟ್ಟಿರುವುದು ಬಿಜೆಪಿಗೆ ಆಘಾತವಾಗಿದೆ.

ರಾಜ್ಯದಲ್ಲಿ ಅಭಿವೃದ್ಧಿಯ ವಿಭಿನ್ನ ವ್ಯಾಖ್ಯಾನ :

ರಾಜ್ಯ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ರಾಜ್ಯ ಮಟ್ಟದ ನಾಯಕತ್ವದ ಮಹತ್ವವನ್ನು ಒತ್ತಿ ಹೇಳುತ್ತದೆ. ಯಡಿಯೂರಪ್ಪ ಬಿಟ್ಟರೇ, ಬಿಜೆಪಿಗೆ ರಾಜ್ಯ ಮಟ್ಟದ ಪ್ರಬಲ ನಾಯಕತ್ವ ಇರಲಿಲ್ಲ. ಒಂದಿಷ್ಟು ಗಂಟಲು ಹರಿದುಕೊಳ್ಳುತ್ತಿರುವವರು ʼಉರಿ ನಂಜುʼ, ಹಿಜಾಬ್‌, ಲವ್‌ ಜಿಹಾದ್‌ ಅಂತಲೇ ಕಾಲ ಕಳೆದರು. ಅದು ಸಾಸಿವೆ ಕಾಳಷ್ಟೂ ಉಪಯೋಗಕ್ಕೆ ಬರಲಿಲ್ಲ. ಬೊಮ್ಮಾಯಿ ಸರ್ಕಾರದ ನಕಾರಾತ್ಮಕ ಚಿತ್ರಣ, ದುರಾಡಳಿತದಿಂದಾಗಿ ರಾಜ್ಯದಲ್ಲಿ ಜನ ಬೇಸತ್ತು ಹೋದರು.  

೨೦೨೧ ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯ ರಾಷ್ಟ್ರೀಯ ಮಟ್ಟದ ನಾಯಕತ್ವವು ಚುನಾವಣೆಯ ಸಂದರ್ಭದಲ್ಲಿ ಹಲವಾರು ರೋಡ್‌ ಶೋ ಗಳನ್ನು ನಡೆಸಿತು. ಮತ್ತದೆ ಹಿಂದುತ್ವ. ಇದರ ಹೊರತಾಗಿಯೂ, ತೃಣಮೂಲ ಕಾಂಗ್ರೆಸ್ ಪರವಾಗಿ ಜನ ನಿಂತರು.  ಮಮತಾ ಬ್ಯಾನರ್ಜಿಯವರ ನಿರ್ಣಾಯಕ ಪಾತ್ರಕ್ಕೆ ಪಶ್ಚಿಮ ಬಂಗಾಳ ಅಸ್ತು ಅಂದಿತ್ತು. ಕರ್ನಾಟಕದಲ್ಲಿಯೂ ಈಗ ಅಂಥದ್ದೇ ಚಿತ್ರಣ ಹೊರಬಿದ್ದಿದೆ. ಅಭಿವೃದ್ಧಿ ಇಲ್ಲದ ಪ್ರಚಾರಕ್ಕೆ, ದುರಾಡಳಿತಕ್ಕೆ ಜನ ಪಾಠ ಕಲಿಸಿ, ಇಲ್ಲಿ ಅಭಿವೃದ್ಧಿಗೆ ವಿಭಿನ್ನವಾದ ವಾಖ್ಯಾನವಿದೆ ಎಂದು ಹೇಳಿದ್ದಾರೆ.

೨೦೨೪ರ ಆಟವು ವಿಭಿನ್ನವಾಗಿದೆ : 

ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ನಾಯಕರ ಮೇಲೆ ಪಣತೊಟ್ಟಿತು ಮತ್ತು ಕರ್ನಾಟಕದ ಅಧಿಕಾರ ಪಡೆಯಿತು. ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದ ಒಂದು ವಿಷಯವನ್ನು ಕಾಂಗ್ರೆಸ್ ಉಲ್ಲೇಖಿಸಲಿಲ್ಲ. ನಿಸ್ಸಂಶಯವಾಗಿ, ಇದು ಸಂಸತ್ತಿಗೆ ಮತ್ತು ದೇಶಕ್ಕೆ ಮಾತ್ರವಲ್ಲದೆ ಕಾಂಗ್ರೆಸ್‌ ಗೂ ಒಳ್ಳೆಯದು. ಪ್ರತಿಪಕ್ಷಗಳು ಆಗಾಗ್ಗೆ ಇವಿಎಂಗಳನ್ನು ಮ್ಯಾನಿಪ್ಯುಲೇಟ್ ಮಾಡಿದ ವಿಷಯವನ್ನು ಪ್ರಸ್ತಾಪಿಸುತ್ತವೆ. ಆದರೆ ಇಲ್ಲಿ ಯಾರಿಗೂ ಇವಿಎಂಗಳಲ್ಲಿ ಯಾವುದೂ ತಪ್ಪಿರಲಿಲ್ಲ. ಇವಿಎಂ ಬಗ್ಗೆ ದೂರುತ್ತಾ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ಆಗಾಗ ಹೇಳುತ್ತಿದ್ದ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಆಚರಿಸುತ್ತಿದೆ. ಅವರು ಸರಿಯಾದ ವಿಷಯಗಳನ್ನು ಪ್ರಸ್ತಾಪಿಸಿ, ಸ್ಥಳೀಯ ನಾಯಕರಿಗೂ ಆದ್ಯತೆ ನೀಡಿ, ರಾಜ್ಯದಲ್ಲಿ ಶ್ರಮಿಸಿದರೆ ಮತ್ತೆ ಅವಕಾಶವಿದೆ ಎನ್ನುವುದನ್ನು ಅರಿತಂತಿದೆ. ೨೦೨೪ರ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್‌ ಗೆ ಈ ವಿಜಯದ ಅಗತ್ಯವಿತ್ತು, ಆದರೆ ಈ ಸಣ್ಣ ಔಷಧಿ ಪ್ರಮಾಣವನ್ನು ಬೂಸ್ಟರ್ ಶಾಟ್ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ೨೦೨೪ರ ಆಟವು ವಿಭಿನ್ನವಾಗಿದೆ ಎನ್ನುವುದನ್ನು ಕಾಂಗ್ರೆಸ್‌ ಅರಿತುಕೊಂಡು ಮುನ್ನಡೆಯಬೇಕಿದೆ. 

-ಶ್ರೀರಾಜ್‌ ವಕ್ವಾಡಿ 



Tuesday, May 9, 2023

ಸಿದ್ದರಾಮಯ್ಯ : ಮೋಸ್ಟ್‌ ಫೇವರೆಟ್‌ ಸಿಎಂ

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗಿಲ್ಲ ಜನಮತ । ಸರ್ಕಾರ ಬದಲಾವಣೆ ಬಯಸಿದ ಕರ್ನಾಟಕ 

ಎಲ್ಲಾ ರಾಜಕೀಯ ಪಕ್ಷಗಳ ಕನಸು, ಭರವಸೆ, ಆಶ್ವಾಸನೆ, ಜನಾಭಿಮತದ ಮೂಲಕ ಸದ್ಯ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ  ಮುಕ್ತಾಯಗೊಂಡಿದ್ದು, ಈಗ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ಜೆಡಿಎಸ್‌ ನ ಹೊರತಾಗಿ ಕಾಂಗ್ರೆಸ್‌ ಅಥವಾ ಬಿಜೆಪಿಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ ಹಿಡಿದರೂ ಕೂಡ ಯಾರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲಭರಿತವಾದಂತಹ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಜಾತಿ ಲೆಕ್ಕಾಚಾರದಲ್ಲಿ, ಅನುಭವದ ಆಧಾರದಲ್ಲಿ, ವಯಸ್ಸಿನ ಕಾರಣದಲ್ಲಿ, ರಾಜಕೀಯ ವರ್ಚಸ್ಸು ಮತ್ತು ರಾಜ್ಯ ರಾಜಕಾರಣದಲ್ಲಿ ಬೆಳೆಸಿಕೊಂಡ ಪ್ರಭಾವದಲ್ಲಿ ಈ ಹಿಂದೆ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮತ್ತೊಂದಿಷ್ಟು ವಿವಾದಗಳೂ ಆಗಿದ್ದಿವೆ. ಕಾಂಗ್ರೆಸ್‌ ನಲ್ಲಂತೂ ಈ ಬಗ್ಗೆ ಸಣ್ಣ ಬಣ ಸೃಷ್ಟಿಯಾಗಿ, ಚುನಾವಣೆಯ ದೃಷ್ಟಿಯಲ್ಲಿ ಅದು ಸ್ವಲ್ಪ ಮರೆವೆಗೆ ಸಂದಿದೆ.  ಈ ಹಿನ್ನೆಲೆಯಲ್ಲಿ ಈಗ ಸದ್ಯಕ್ಕೆ ಒಂದು ಸಮೀಕ್ಷೆ ಹೊರಬಂದಿದ್ದು, ಅದರ ಬಗ್ಗೆ ಚರ್ಚೆ ಆರಂಭವಾಗಿದೆ. 

ರಾಷ್ಟ್ರೀಯ ಸುದ್ದಿವಾಹಿನಿ ಎನ್‌ ಡಿ ಟಿವಿ ವಿಶೇಷ ಸಮೀಕ್ಷೆ ಹಾಗೂ ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತ ಎಂಬ ದೃಷ್ಟಿಕೋನದಲ್ಲಿ ನಡೆಸಲಾದ "ಪಬ್ಲಿಕ್ ಒಪಿನಿಯನ್" ಸಮೀಕ್ಷೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಜನಪ್ರಿಯತೆ ಇದ್ದು, ಹಾಲಿ ಮುಖ್ಯಮಂತ್ರಿ ಬಸಸವರಾಜ್‌ ಬೊಮ್ಮಾಯಿ ಆಡಳಿತದ ಬಗ್ಗೆ ಜನ ಅಷ್ಟಾಗಿ ತೃಪ್ತರಾಗಿಲ್ಲ ಎಂಬ ವರದಿ ಹೊರಬಂದಿದ್ದು ರಾಜಕೀಯ ವಲಯದಲ್ಲಿ ಹೊಸ ದಿಕ್ಕಿನೆಡೆಗೆ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ. 

ಮೇ ೧೦ ರಂದು ನಡೆದ ರಾಜ್ಯ  ವಿಧಾನಸಭಾ ಚುನಾವಣೆ ಮತ್ತು ಮೂರು ದಿನಗಳ ನಂತರ ಬರಲಿರುವ ಫಲಿತಾಂಶಕ್ಕೂ ಮುನ್ನ ಈ ಬಗ್ಗೆ ವ್ಯಾಪಕವಾದ ಚರ್ಚೆ ಹುಟ್ಟಿಕೊಂಡಿದ್ದು, ಕರ್ನಾಟಕದಲ್ಲಿ ಸಾರ್ವಜನಿಕರ ಚಿತ್ತ ಎತ್ತ ಕಡೆಯಿದೆ ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಅಳೆಯಲು ಸಮೀಕ್ಷೆಯು ಪ್ರಯತ್ನಿಸಿದೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಿರಿಯ ಮತದಾರರಲ್ಲಿ ಸ್ವಲ್ಪ ಹೆಚ್ಚು ಜನಪ್ರಿಯರಾಗಿದ್ದಾರೆ, ಬಸವರಾಜ್‌ ಬೊಮ್ಮಾಯಿ ಅವರನ್ನು ಕಿರಿಯ ಮತದಾರರು ಬಿಜೆಪಿ ಎನ್ನುವ ಕಾರಣಕ್ಕೆ ಆದ್ಯತೆ ನೀಡಿ ಅವರ ಪರವಾಗಿ ಒಲವು ತೋರಿಸಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. 

ಜನತಾದಳ ಸೆಕ್ಯುಲರ್ (ಜೆಡಿಎಸ್) ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೂರನೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್‌ ನ ಮತ್ತೋರ್ವ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಂತರದ ಸ್ಥಾನದಲ್ಲಿದ್ದಾರೆ.

ರಾಜ್ಯದಲ್ಲಿ ಬರೋಬ್ಬರಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿ, ಒಂದು ಅವಧಿಯನ್ನು ಕೂಡ ಪೂರ್ಣಗೊಳಿಸದ ಬಿಜೆಪಿಯ ಹಿರಿಯ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡುವುದಕ್ಕೆ ಜನ ಅಷ್ಟರ ಮಟ್ಟಿಗೆ ಒಪ್ಪದೇ ಇರುವುದು ಆಶ್ಚರ್ಯಕರವಾಗಿದೆ. ಸಮೀಕ್ಷೆ ಹೇಳುವ ಪ್ರಕಾರ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಕೇವಲ ಶೇಕಡಾ ೫ರಷ್ಟು ಮಂದಿ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತವೆಂಬ ಇಂಗಿತ ವ್ಯಕ್ತಪಡಿಸಿದ್ದಾರೆಂಬುವುದು ತಿಳಿದು ಬಂದಿದೆ. ಒಂದೆಡೆ ಬಿಜೆಪಿ ರಾಜ್ಯದಲ್ಲಿ ಯಡಿಯೂರಪ್ಪರನ್ನು ಪ್ರಶ್ನಾತೀತ ನಾಯಕ ಎಂಬಂತೆಲ್ಲಾ ಬಿಂಬಿಸಿ  ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೇ, ಯಡಿಯೂರಪ್ಪರ ಪರವಾಗಿ ಸಮೀಕ್ಷೆಯಲ್ಲಿ ಇಂತದ್ದೊಂದು ವರದಿ ಹೊರ ಬಂದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಭ್ರಷ್ಟಾಚಾರದ ಆರೋಪ, ವಯಸ್ಸಿನ ಕಾರಣಗಳ ನಡುವೆ ೨೦೨೧ ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರನ್ನು ಹುದ್ದೆಯಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಯಡಿಯೂರಪ್ಪ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ತಮ್ಮ ಕ್ಷೇತ್ರವನ್ನು ಮಗ ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಯಡಿಯೂರಪ್ಪರ ಮೇಲೆ ಈಗ ರಾಜ್ಯ ವಿಧಾನ ಸಭಾ ಚುನಾವಣಾ ಗೆಲುವಿನ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್‌ ಹೊರಿಸಿದೆ. ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೇ, ನಿಸ್ಸಂಶಯವಾಗಿ ಮೋದಿ ರೋಡ್‌ ಶೋ, ಪಾಲಿಟಿಕಲ್‌ ಕ್ಯಾಂಪೆನ್‌ ಗಳಿಗೆ ಜೈಕಾರ ಸಲ್ಲುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಯಡಿಯೂರಪ್ಪರ ಮೇಲೆ ಕಟ್ಟುವುದು ಬಿಜೆಪಿಯ ಹಿಡೆನ್‌ ಅಜೆಂಡಾ. ಸೋತರೇ, ಯಾವುದೇ ಮುಲಾಜಿಲ್ಲದೇ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿಬಿಡಬಹುದು ಎಂಬುವುದು ಬಿಜೆಪಿ ಹೈಕಮಾಂಡ್‌ ನ ಲೆಕ್ಕಾಚಾರ.  

ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು (೫೬%) ಮತ್ತು ೩೮% ರಷ್ಟು ಮಂದಿ ಪಕ್ಷಕ್ಕಿಂತ ಕ್ಷೇತ್ರದಲ್ಲಿನ ಉತ್ತಮ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಹೇಳಿದರು. ಶೇಕಡಾ ೪ ರಷ್ಟು ಮಂದಿ ಮಾತ್ರ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ರಾಜಕೀಯ ವರ್ಚಸ್ಸು ನೋಡಿಕೊಂಡು  ಮತ ಹಾಕುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಅಥವಾ ಜೆಡಿಎಸ್ ಅನ್ನು ಬೆಂಬಲಿಸುವ ಮತದಾರರು ಹೆಚ್ಚಾಗಿ ಪಕ್ಷವನ್ನು ದೊಡ್ಡ ಅಂಶವೆಂದು ಪರಿಗಣಿಸುತ್ತಾರೆ. ಆದರೆ ಈ ವಿಷಯದಲ್ಲಿ ಬಿಜೆಪಿ ಮತದಾರರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಪಕ್ಷಕ್ಕಿಂತ ಹೆಚ್ಚಾಗಿ ʼಹಿಂದುತ್ವʼ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪರವಾಗಿ ಇರುವ ಮತದಾರರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ, ಹಿಂದೂ ಧರ್ಮ ರಕ್ಷಣೆಯಾಗುತ್ತದೆ, ಬಿಜೆಪಿ ಹೊರತಾಗಿ ಉಳಿದ ಯಾವುದೇ ಪಕ್ಷ ಅಧಿಕಾರಕ್ಕೇರಿದರೇ ಹಿಂದೂ ಧರ್ಮದ ವಿರುದ್ಧ ಆಡಳಿತ ಇರುತ್ತದೆ ಎಂಬ ಒಂದು ಪೂರ್ವಾಗ್ರಹದ ಅಭಿಪ್ರಾಯವಿದೆ. ಇನ್ನು, ಪ್ರಮುಖ ಮೆಟ್ರಿಕ್‌ಗಳ ಬಗ್ಗೆ ಮತದಾರರ ಗ್ರಹಿಕೆಗೆ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮವಾಗಿದೆ ಎಂದು ಸಮೀಕ್ಷೆ ಹೇಳಿದೆ. 

ಹೆಚ್ಚು ಪ್ರತಿಕ್ರಿಯಿಸಿದವರು (೫೯%) ಬಿಜೆಪಿಯನ್ನು ಕಾಂಗ್ರೆಸ್ (೩೫%) ಮತ್ತು ಜೆಡಿಎಸ್ (೩%) ಗಿಂತ ಹೆಚ್ಚು ಭ್ರಷ್ಟ ಸರ್ಕಾರ ಎಂದು  ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷಗಳ ಐಟಿ ಸೆಲ್‌ ಗಳು ಎಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇನ್ನಿತರ ಪ್ಲಾಟ್‌ ಫಾರ್ಮ್‌ ಗಳಲ್ಲಿ ತಮಗೆ ಬೇಕಾದ ಹಾಗೆ ಪ್ರಚಾರ ಗಿಟ್ಟಿಸಿಕೊಳ್ಳಬಹುದು, ಅಂತಿಮವಾಗಿ ಜನರ ತೀರ್ಪಿಗೆ ತಲೆ ಬಾಗಲೇಬೇಕು ಎಂಬುವುದಕ್ಕೆ ಇದೊಂದೇ ಉದಾಹರಣೆ ಸಾಕು. 

 ಕುಟುಂಬ ರಾಜಕಾರಣದ ವಿರುದ್ಧ ರಾಷ್ಟ್ರವ್ಯಾಪಿ ಹರಿಹಾಯ್ದ, ಅದರಲ್ಲೂ ಕಾಂಗ್ರೆಸ್‌ ಪಕ್ಷವನ್ನು ಈ ವಿಚಾರದಲ್ಲಿ ಎಂದಿಗೂ ಟೀಕೆ ಮಾಡುತ್ತಿದ್ದ ಪಕ್ಷಕ್ಕೆ ಅನಿರೀಕ್ಷಿತವಾಗಿ,  ಸ್ವಜನಪಕ್ಷಪಾತದ ವಿಚಾರದಲ್ಲಿ  ಬಿಜೆಪಿಯು (೫೯%) ಕಾಂಗ್ರೆಸ್ (೩೦%) ಮತ್ತು ಜೆಡಿಎಸ್ (೮%) ಗಿಂತ ಅಗ್ರಸ್ಥಾನದಲ್ಲಿದೆ ಎಂದು ಈ ಸಮೀಕ್ಷೆ ತಿಳಿಸುತ್ತದೆ. ಮಾತ್ರವಲ್ಲದೇ, ಗುಂಪುಗಾರಿಕೆ ಅಥವಾ ಬಣ ರಾಜಕೀಯದಲ್ಲಿಯೂ ಬಿಜೆಪಿ (೫೫%) ಕಾಂಗ್ರೆಸ್‌ (೩೦%) ಮತ್ತು ಜೆಡಿಎಸ್‌ (೧೨%) ಗಿಂತ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ. 

ಇನ್ನು, ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್‌ ಗೆ ೪೭%, ಬಿಜೆಪಿಗೆ ೩೭% ಮತ್ತು ಜೆಡಿಎಸ್‌ ಗೆ ೧೪% ಜನರು ಬೆಸ್ಟ್‌ ಎಂದಿದ್ದಾರೆ  ಮತ್ತು ಕೋಮು ಸೌಹಾರ್ದತೆ ಕಾಪಾಡುವಲ್ಲಿ ಕಾಂಗ್ರೆಸ್‌ ೪೯% , ಬಿಜೆಪಿಗೆ  ೩೪% ಮತ್ತು ಜೆಡಿಎಸ್‌ ಗೆ ೧೪% ರಷ್ಟು ಮಂದಿ ಅತ್ಯುತ್ತಮ ಎಂದು ಶ್ರೇಯಾಂಕ ನೀಡಿದ್ದಾರೆ.ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ನಿಭಾಯಿಸುವಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ರೇಟಿಂಗ್ (೪೦%) ಹಂಚಿಕೊಳ್ಳುತ್ತವೆ ಮತ್ತು ಜೆಡಿಎಸ್  ಗೆ ೧೪% ರಷ್ಟು ಜನ ಬೆಸ್ಟ್‌ ಎಂದಿದ್ದಾರೆ. 

ಇನ್ನು, ರಾಜ್ಯದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಮತಗಳು ಮೂರು ಪಕ್ಷಗಳಿಗೆ ಎಷ್ಟರಮಟ್ಟಿಗೆ ವಿಭಜನೆಯಾಗಿ ಹೋಗಲಿದೆ ಎಂಬ ವಿಚಾರದ ಬಗ್ಗೆಯೂ ತಿಳಿಯಲು ಪ್ರಯತ್ನಿಸಿದ್ದು, 

ಶೇಕಡಾ ೩೪ರಷ್ಟು ಒಕ್ಕಲಿಗರು ಕಾಂಗ್ರೆಸ್ ಗೆ ಮತ ಹಾಕುತ್ತೇವೆ ಎಂದರೇ, ಶೇ. ೩೬ರಷ್ಟು ಒಕ್ಕಲಿಗ ಮತದಾರರು ಜೆಡಿಎಸ್ ಪರ ಒಲವು ತೋರಿದ್ದಾರೆ, ಶೇಕಡಾ ೬೭ರಷ್ಟು ಲಿಂಗಾಯತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದರೇ, ಶೇಕಡಾ ೫೯ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್‌ ಗೆ ಬೆಂಬಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಬಾರಿ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಚರ್ಚೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಕೆಳ ವರ್ಗದ ಮತದಾರರು ಬಿಜೆಪಿಗಿಂತ (೨೩%) ಕಾಂಗ್ರೆಸ್ ಗೆ ಹೆಚ್ಚು (೫೦%) ಒಲವು ತೋರಿಸಿದ್ದನ್ನು ಮತ್ತು ಮೇಲ್ವರ್ಗದ ಮತದಾರರು ಸಹಜವೆಂಬಂತೆ ಧಾರ್ಮಿಕ ಭಾವನೆ, ಹಿಂದುತ್ವದ ಆಧಾರದಲ್ಲಿ ಕಾಂಗ್ರೆಸ್ (೩೧%) ಗಿಂತ ಬಿಜೆಪಿ (೪೬%) ಹೆಚ್ಚು ಒಲವು ತೋರಿರುವುದನ್ನು ಈ ಸಮೀಕ್ಷೆಯಲ್ಲಿ ಕಾಣಬಹುದಾಗಿದೆ.

ಒಟ್ಟಿನಲ್ಲಿ, ರಾಜ್ಯದ ಜನ ಒಂದಿಷ್ಟು ಬದಲಾವಣೆ ಬಯಸಿದ್ದಾರೆ ಎಂಬುವುದನ್ನು ಈ ಸಮೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಇನ್ನು, ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರುವ ಮತದಾರರ ಒಲವು ಯಾರ ಕಡೆ ಇದೆ ಎನ್ನುವುದು ಗೊತ್ತಿಲ್ಲ. ಒಂದಿಷ್ಟು ಜಿದ್ದಾಜಿದ್ದಿನ ಹೋರಾಟವಂತೂ ಹಿಂದೆಂದಿಗಿಂತಲೂ ಈ ಬಾರಿ ಸೃಷ್ಟಿಯಾಗಿದೆ. ಏನಾಗಲಿದೆ ಎನ್ನುವುದು ಸದ್ಯದ ಕುತೂಹಲ. ಕಾದು ನೋಡೋಣ. ಏನ್‌ ಅಂತೀರಿ ..?

-ಶ್ರೀರಾಜ್‌ ವಕ್ವಾಡಿ 


Thursday, May 4, 2023

ನಾ ಮುಖ್ಯಮಂತ್ರಿ : ಸಿದ್ದು, ಡಿಕೆಶಿ


ಕಾಂಗ್ರೆಸ್‌ ಅಧಿಕಾರಕ್ಕೇರಿದರೇ, ಯಾರನ್ನು ಸಮಾಧಾನ ಪಡಿಸಲಿದೆ ಹೈಕಮಾಂಡ್‌ ? 

ಒಂದೆಡೆ ಕಾಂಗ್ರೆಸ್‌ ನ ʼಗ್ಯಾರಂಟಿʼಗಳು ಹೊಸ ಭರವಸೆಯನ್ನು ಮೂಡಿಸುತ್ತಿದೆ. ಇನ್ನೊಂದೆಡೆ ಬಿಜೆಪಿ ಸಹಜವೆಂಬಂತೆ ಅದರ ಸಾಮಾನ್ಯವಾದ ಪ್ರಚಾರ ಶೈಲಿಯಲ್ಲಿ ಮುಂದುವರಿಯುತ್ತಿದೆ. ಇಲ್ಲಿ ಈ ಬಾರಿ ಬಹಳ ಕುತೂಹಲಕರಿಯಾದ ಮತ್ತೊಂದು ವಿಚಾರವೇನೆಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ, ಯಾರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬುವುದೇ ಆಗಿದೆ. ಹಿಂದೆಂದಿಗಿಂತಲೂ ಈ ಬಾರಿ ಕಾಂಗ್ರೆಸ್‌ ಪಾಳಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅದರ ಎರಡು ಪ್ರಭಾವಿಗಳಾದ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೆಸರು ಕೇಳಿಬಂದಿತ್ತು ಮತ್ತು ಅದು ಆಡಳಿತ ಪಕ್ಷಕ್ಕೆ ಒಂದು ರೀತಿಯಲ್ಲಿ ಅನಾಯಸ ಗ್ರಾಸವಾಗಿಯೂ ದೊರಕಿತ್ತು, ಮತ್ತದನ್ನು ಕಾಂಗ್ರೆಸ್‌ ವಿರುದ್ಧದ ಟೀಕೆಗೆ ಬಿಜೆಪಿ ಚೆನ್ನಾಗಿಯೇ ಬಳಸಿಕೊಂಡಿತ್ತು. ಕಾಂಗ್ರೆಸ್‌ ಏನೋ ಸದ್ಯಕ್ಕೆ ಚುನಾವಣೆ ಗೆಲ್ಲುವುದೇ ಪರಮ ಗುರಿ, ಮುಖ್ಯಮಂತ್ರಿ ಯಾರಾಗುವುದೆಂದು ಗೆದ್ದ ಮೇಲೆ ನೋಡಿಕೊಂಡರಾಯ್ತು ಎಂಬ ಮನಸ್ಥಿತಿಯಲ್ಲಿದ್ಧ ಹಾಗಿದೆ. ಆದರೂ, ಕಾಂಗ್ರೆಸ್‌ ಅಧಿಕಾರ ಹಿಡಿದರೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದರ ಬಗ್ಗೆ ಸಾಮಾಜಿಕ ವಲಯದಲ್ಲಿ ಒಂದು ಕುತೂಹಲ ಹುಟ್ಟಿಕೊಂಡಿದೆ.  

ಕಾಂಗ್ರೆಸ್‌ ಪಕ್ಷ ದೇಶದೆಲ್ಲೆಡೆ ಸೋಲು ಅನುಭವಿಸುತ್ತಿದೆ. ಆದರೇ, ಕಾಂಗ್ರೆಸ್ ಪಕ್ಷ ಇನ್ನೂ ಒಂದು ಹಂತದಲ್ಲಿ ಗಮನಾರ್ಹ ಹಿಡಿತ ಮತ್ತು ಅಸ್ತಿತ್ವವನ್ನು ಹೊಂದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಎರಡು ಪ್ರಭಾವಿ ನಾಯಕರ ಹೆಸರು ಉಲ್ಲೇಖಿಸಲ್ಪಟ್ಟಿದ್ದವು. ಉಭಯ ನಾಯಕರ ಬೆಂಬಲಿಗರ ವಲಯದಲ್ಲಿ ಒಂದು ಹಂತದಲ್ಲಿ ʼಸಾಫ್ಟ್‌ ವೈಷಮ್ಯವೂʼ ಮೂಡಿತ್ತು. ಸಿದ್ದರಾಮಯ್ಯ ಹೋದ ಕೆಲವೆಡೆ ಬೆಂಬಲಿಗರು ʼಭವಿಷ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯʼ ಎಂದು ಘೋಷಣೆ ಕೂಗಿದರು, ಡಿಕೆಶಿ ತಮ್ಮ ಸಮುದಾಯದವರಲ್ಲಿ ಎರಡೆರಡು ಬಾರಿ ತಮ್ಮನ್ನು ಮುಖ್ಯಮಂತ್ರಿಯಾಗಿ ಮಾಡುವುದಕ್ಕೆ ಮತ ನೀಡುವುದರ ಮೂಲಕ ಅವಕಾಶ ಕೊಟ್ಟು ಸಹಕರಿಸಿ ಎಂದು ಅಕ್ಷರಶಃ ಅಂಗಲಾಚಿ ಬೇಡಿಕೊಂಡರು. ಇನ್ನು , ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ತೀವ್ರ ಪೈಪೋಟಿ ನಡುವೆ ಡಿಕೆಶಿ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ್‌ ಖರ್ಗೆ ಹೆಸರನ್ನು ಮುಖ್ಯಮಂತ್ರಿ ಹುದ್ದೆಯ ರೇಸ್‌ ಗೆ ತರುವುದಕ್ಕೆ ಪ್ರಯತ್ನಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿತ್ತು. ಖರ್ಗೆ ಅವರನ್ನು ಅನುಮೋದಿಸುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ನಡೆ ಪಕ್ಷದ ಒಳಗೆ  ʼದಲಿತ ಸಿಎಂʼ ಹಾಗೂ ʼಸ್ಥಳೀಯ ವರ್ಸಸ್‌ ವಲಸಿಗʼ ಎಂಬ ಚರ್ಚೆಯನ್ನು ಮುನ್ನೆಲೆಗೆ ತರುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯವನ್ನು ಚೆಕ್‌ ಮೇಟ್‌ ಮಾಡುವ ಪ್ರಯತ್ನವೆಂಬ ರಾಜಕೀಯ ಚರ್ಚೆಗೂ ಕಾರಣವಾಯ್ತು. 

ಕಾಂಗ್ರೆಸ್‌ ಪಾಳಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಪ್ರಭಾವಿ ನಾಯಕರು. ಉಭಯ ನಾಯಕರು ತಮ್ಮದೇ ಆದ ರಾಜಕೀಯ ವರ್ಚಸ್ಸನ್ನು ರಾಜ್ಯದಲ್ಲಿ ಹೊಂದಿದ್ದಾರೆ. ಖರ್ಗೆ ಈಗ ರಾಷ್ಟ್ರ ರಾಜಕಾರಣದಲ್ಲಿದ್ದಾರೆ. ಅವರಿಗೆ ಈಕಡೆ ಬರುವ ಯೋಚನೆ ಇಲ್ಲದಿರಬಹುದು. ಆದರೇ, ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರಿಗೂ ಬೇಸರವಾಗದಂತೆ ನೋಡಿಕೊಳ್ಳುವುದಕ್ಕೆ ಕಾಂಗ್ರೆಸ್‌ ಗೆದ್ದರೇ, ʼಖರ್ಗೆ ಸಾಬ್‌ʼ ನೀವು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಎಂದು ವಾಪಾಸ್‌ ರಾಜ್ಯಕ್ಕೆ ಕಳುಹಿಸಿ ಎಐಸಿಸಿ ಯನ್ನು ಮತ್ತೆ ಗಾಂಧಿ ಕುಟುಂಬದ ತೆಕ್ಕೆಯೊಳಗೆ ತೆಗೆದುಕೊಳ್ಳುವ ಪ್ರಯತ್ನವೊಂದು ಕಾಂಗ್ರೆಸ್‌ ನಲ್ಲಿ ನಡೆದರೂ ಅಚ್ಚರಿಯಿಲ್ಲ. ಈ ಸಾಧ್ಯತೆ ತೀರಾ ಕಡಿಮೆ ಇದ್ದರೂ, ಇಂತಹದ್ದೊಂದು ಚರ್ಚೆಯನ್ನು ಸಲೀಸಾಗಿ ತಳ್ಳಿ ಹಾಕುವುದಕ್ಕಾಗಲ್ಲ.  ಇನ್ನು, ಸಿದ್ದರಾಮಯ್ಯ, ಡಿಕೆಶಿ ಪ್ರಬಲ ಬೆಂಬಲದ ನೆಲೆಯನ್ನು ಹೊಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪಷ್ಟತೆಯೊಂದಿಗೆ ಕಾಂಗ್ರೆಸ್‌ ಇಲ್ಲದಿರಲು ಬಹುಶಃ ಇದು ಕೂಡ ಒಂದು ಕಾರಣವಿರಬಹುದು. 

೭೫ರ ವಯಸ್ಸಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್‌ ನ ಮುಖ್ಯಮಂತ್ರಿಯಾಗಿ ಯಶಸ್ವಿ ಅಧಿಕಾರ ನಡೆಸಿದವರು. ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆಯಾಗಿದ್ದು, ಈ ಅವಧಿ ಮುಗಿದ ಮೇಲೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ರಾಜ್ಯದಲ್ಲಿ ಕಾಂಗ್ರೆಸ್‌ ನನ್ನು ಹಿಂದಿನ ವರ್ಚಸ್ಸನ್ನು ಪಡೆದುಕೊಳ್ಳುವುದಕ್ಕೆ ಬೇಕಾಗಿ ಸಾಕಷ್ಟು ಒದ್ದಾಡಿದ್ದಾರೆ. ಆದರೇ, ಡಿಕೆಶಿ ಮುಂದೆ ಇನ್ನೂ ರಾಜಕೀಯದಲ್ಲಿ ಹಲವು ವರ್ಷಗಳ ಅವಕಾಶಗಳಿವೆ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಎಂಬ ದೃಷ್ಟಿಯಲ್ಲಿ ಪಕ್ಷ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡಲಿದೆಯೇ ? ಅಥವಾ ೬೧ ವರ್ಷದ ಪವರ್‌ ಫುಲ್‌ ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ಕೊಡಲಿದೆಯೇ ? ಎಂಬ ಪ್ರಶ್ನೆಗಳು ಎದ್ದಿವೆ. 

ಶಿವಕುಮಾರ್‌ ನಿಸ್ಸಂದೇಹವಾಗಿ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ೨೦೧೮ರಲ್ಲಿ ಪಕ್ಷ ಬಹುಮತಗಳಿಸದೇ ಇದ್ದಾಗ ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಸುವುದಕ್ಕೆ ಬೇಕಾಗಿ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಹಾಗೂ ೨೦೧೯ರಲ್ಲಿ ಇದೇ ಮೈತ್ರಿ ಸರ್ಕಾರದ ಸುಮಾರು ೧೭ ಮಂದಿ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಸೇರುವುದಕ್ಕೆ ಮುಂದಾದಾಗ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರವನ್ನು ರಕ್ಷಿಸಲು ಅವರು ಪ್ರಯತ್ನಿಸಿದರಾದರು. ಪಕ್ಷಾಂತರಿಗಳನ್ನು ಭೇಟಿ ಮಾಡಲು, ಅವರ ಮನವೊಲಿಸಲು ಮುಂಬೈಗೆ ಹಾರಿದರಾದರೂ ಬಿಜೆಪಿ ತೆಕ್ಕೆಯಲ್ಲಿದ್ದ ೧೭ ಶಾಸಕರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಆದರೂ, ಡಿಕೆಶಿ ರಾಜಕೀಯ ಚರ್ಚೆಯನ್ನು ಇನ್ನೊಂದು ಹಂತಕ್ಕೆ ದೂಡುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲದೇ ೨೦೦೧ರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌ ಗಿದ್ದ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಕೆಶಿ ಹೈಕಮಾಂಡ್‌ ನಾಯಕತ್ವಕ್ಕೆ ಸಹಾಯ ಮಾಡಿದ್ದರು, ೨೦೧೭ರಲ್ಲಿ ಪಕ್ಷಾಂತರಕ್ಕೆ ಮುಂದಾಗಿದ್ದ ಗುಜರಾತ್‌ ನ ಸುಮಾರು ೪೨ ಶಾಸಕರನ್ನು ಬೆಂಗಳೂರಿನ ತಮ್ಮ ರೆಸಾರ್ಟ್‌ ನಲ್ಲಿ ಇರಿಸಿಕೊಂಡು ಪಕ್ಷಾಂತರ ಆಗದಂತೆ ನೋಡಿಕೊಂಡರು. ಹೀಗೆ ಪಕ್ಷದ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಕೆಶಿ ನಿರ್ಣಾಯಕ ಪಾತ್ರ ವಹಿಸಿದ್ದರು. 

ಡಿಕೆಶಿ ಮೂಲದಿಂಧ ಕಾಂಗ್ರೆಸಿಗ, ಆದರೇ, ಸಿದ್ದರಾಮಯ್ಯ ಹಾಗಲ್ಲ. ಸಿದ್ದರಾಮಯ್ಯ ಈ ಹಿಂದೆ ಜನತಾ ಪಾರ್ಟಿ ( ಆಮೇಲೆ ಅದು ಜನತಾದಳ ಆಯ್ತು)ಯಲ್ಲಿ ಹೆಚ್‌. ಡಿ ದೇವೇಗೌಡರ ಗರಡಿಯಲ್ಲಿ ಬೆಳೆದವರು. ಹಿರಿಗೌಡರ ನಡುವೆ ಇದ್ದ ಸಣ್ಣ ವೈಷಮ್ಯದ ಕಾರಣದಿಂದಾಗಿ ೨೦೦೫ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆಗೊಂಡರು. ಕಾಂಗ್ರೆಸ್‌ ನಲ್ಲಿ ʼವಲಸಿಗʼನಾಗಿಯೂ ಹೇರಳವಾದ ಅವಕಾಶವನ್ನು ಪಡೆದುಕೊಂಡರು. ಎಲ್ಲಿಯವರೆಗೆ ಅಂದರೇ, ಪಕ್ಷಾಂತರಗೊಂಡು ಬಂದ ಒಬ್ಬ ನಾಯಕ, ಕಾಂಗ್ರೆಸ್‌ ಪಕ್ಷದ ಪ್ರಭಾವಿಯಾಗಿ, ಮುಖ್ಯಮಂತ್ರಿಯಾಗುವವರೆಗೂ ಕಾಂಗ್ರೆಸ್‌ ನಲ್ಲಿ ಅವಕಾಶ ಪಡೆದರು. 

ಶಿವಕುಮಾರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ. ೧೯೮೯ರಿಂದಲೂ ಶಿವಕುಮಾರ್ ಕಾಂಗ್ರೆಸ್‌  ನ ಒಕ್ಕಲಿಗ ಅಭ್ಯರ್ಥಿ. ಹಂತಹಂತವಾಗಿ ಆ ಸಮುದಾಯದ, ಪಕ್ಷದ ಪ್ರಭಾವಿ ನಾಯಕರಾಗಿ ಶಿವಕುಮಾರ್ ಬೆಳೆದರು.‌  

ಉಭಯ ನಾಯಕರು ರಾಜ್ಯದ ಪ್ರಭಾವಿ ನಾಯಕರು. ರಾಜ್ಯದ ಕಾಂಗ್ರೆಸ್‌ ನ ದೊಡ್ಡ ಶಕ್ತಿಗಳು. ಔಋ ಕಾಲದ ನಂತರ ಯಾರನ್ನು ಮುಂದೆ ತರಲಿದೆ ಎನ್ನುವುದು ಯಕ್ಷ ಪ್ರಶ್ನೆ. ಕಾಂಗ್ರೆಸ್‌ ಎರಡನೇ ಹಂತದ ನಾಯಕರನ್ನು ಬಿಜೆಪಿಯಂತೆ ಬೆಳಸಿಲ್ಲ. ಆ ಕೊರಗು ಕಾಂಗ್ರೆಸ್‌ ಗಿದೆ. ಹಾಗಾಗಿಯೇ ಸದಾ ಬಿಜೆಪಿ ಈ ಉಭಯ ನಾಯಕರನ್ನೇ ಹೆಚ್ಚಾಗಿ ಟಾರ್ಗೇಟ್‌ ಮಾಡುವುದು. ಸಿದ್ದರಾಮಯ್ಯ ಮಾತುಗಳಲ್ಲಿ ಕೆಲವೊಮ್ಮೆ ಎಡವುತ್ತಾರೆ. ವಿವಾದಕ್ಕೂ ಕಾರಣರಾಗುತ್ತಾರೆ. ಅದು ಪಕ್ಷದ ಇಮೇಜ್‌ ಗೆ ಒಂದಿಷ್ಟು ಡ್ಯಾಮೇಜ್‌ ಕೂಡ ಆದದ್ದಿದೆ. ಇನ್ನು, ಡಿಕೆಶಿ ಪಕ್ಷದ ಮತ್ತು ರಾಷ್ಟ್ರದ ಶ್ರೀಮಂತ ರಾಜಕಾರಣಿಗಳಲ್ಲೊಬ್ಬರು. ಅವರು ಇನ್ನೂ ಭ್ರಷ್ಟಾಚಾರದ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಡಿಕೆಶಿಗೆ ಜೈಲು ಶಿಕ್ಷೆಯೂ ಆಗಿತ್ತು. ಶಿವಕುಮಾರ್‌ ವಿರುದ್ಧದ ತನಿಖೆ ಹಾಗೂ ಐಟಿ ದಾಳಿಗಳ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ೨೦೧೭ರಲ್ಲಿ ಪಕ್ಷಾಂತರಗೊಳ್ಳುವುದಕ್ಕೆ ಮುಂದಾಗಿದ್ದ ೪೨ ಗುಜರಾತ್‌ ನ ಶಾಸಕರನ್ನು ತಮ್ಮ ಬೆಂಗಳೂರಿನ ರೆಸಾರ್ಟ್‌ ನಲ್ಲಿ ಉಳಿಸಿಕೊಂಡು ಪಕ್ಷಾಂತರ ಆಗುವುದನ್ನು ತಡೆದ ಡಿಕೆಶಿ ಪಕ್ಷದ ಹೈಕಮಾಂಡ್‌ ಗೆ ಸಹಾಯ ಮಾಡಿದ್ದೇ ಇದಕ್ಕೆ ಕಾರಣ ಎಂಬ ಚರ್ಚೆಯೂ ಇದೆ. ಆದರೇ ಎಲ್ಲಿಯೂ ಡಿಕೆಶಿ ಕುಗ್ಗಲಿಲ್ಲ. ʼಜೈಲು ಶಿಕ್ಷಗೆ ಕಾರಣರಾದವರನ್ನು ಕಾಲ ಬಂದಾಗ ಜನ್ಮ ಜಾಲಾಡ್ತೇನೆʼ ಎಂಬ ಧೈರ್ಯ ಅವರಿಗೆ ಬಂದಿದೆ. ಆದರೂ ಇವೆಲ್ಲಾ ಕೆಲವೊಮ್ಮೆ ಪಕ್ಷದ ವರ್ಚಸ್ಸನ್ನು ಕುಗ್ಗಿಸಿದ್ದೂ ಇದೆ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ವಿಷಯ. 

ಇನ್ನು, ಕಾಂಗ್ರೆಸ್‌ ಗೆದ್ದರೆ ಮುಖ್ಯಮಂತ್ರಿಯನ್ನಾಗಿ ಈ ಉಭಯ ನಾಯಕರುಗಳಲ್ಲಿ ಯಾರನ್ನು ಆಯ್ಕೆ ಮಾಡುತ್ತದೆ ? ಎನ್ನುವುದು ಕುತೂಹಲ. ಇತ್ತೀಚೆಗೆ ʼದಿ ಪ್ರಿಂಟ್‌ʼ ಎಂಬ ಸುದ್ದಿ ಸಂಸ್ಥೆಗೆ ಕೊಟ್ಟ ಸಂದರ್ಶನದಲ್ಲಿ ʼಖರ್ಗೆ ಒಪ್ಪುವುದಾದರೇ ನಾನು ಯಾವುದೇ ತಕರಾರಿಲ್ಲದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇನೆʼ ಎಂದು ಡಿಕೆಶಿ ಹೇಳಿಕೊಂಡಿದ್ದರು. ಇದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದು ತಮಗೆ ಇಷ್ಟವಿಲ್ಲ ಎಂಬ ವಿಚಾರವನ್ನು ಮತ್ತೆ ಪರೋಕ್ಷವಾಗಿ ಡಿಕೆಶಿ ಹೇಳಿಕೊಂಡರೇ ಎಂಬ ಚರ್ಚೆಗೂ ಕಾರಣವಾಯ್ತು.  

ಒಟ್ಟಿನಲ್ಲಿ, ಸಿದ್ದರಾಮಯ್ಯ, ಡಿಕೆಶಿ ನಡುವೆ ಇಂದಿಗೂ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಇರುವುದು ಸ್ಪಷ್ಟ. ಇಬ್ಬರೂ ಆ ರಾಜಕೀಯ ಎಕ್ಸ್‌ ಫ್ಯಾಕ್ಟರ್‌, ನಾಯಕತ್ವದ ಗುಣಮಟ್ಟವನ್ನು ಹೊಂದಿದ್ದಾರೆ. ಪಕ್ಷಕ್ಕೆ ಈ ವಿಚಾರದಲ್ಲಿ ಆಯ್ಕೆಗಳಿರುವುದು ಒಂದು ಹಂತದಲ್ಲಿ ಪ್ಲಸ್‌ ಪಾಯಿಂಟ್‌ ಆದರೇ, ಮತ್ತೊಂದು ಹಂತದಲ್ಲಿ ಕಠಿಣವೂ ಹೌದು. ಉಭಯ ನಾಯಕರ ನಡುವೆ ಪೈಪೋಟಿಯಂತೂ ಇದೆ. ಏನಂತೀರಿ ?

-ಶ್ರೀರಾಜ್‌ ವಕ್ವಾಡಿ 



Thursday, April 27, 2023

"ಆಯಾ ರಾಮ್ ಗಯಾ ರಾಮ್" ಪಾಲಿಟಿಕ್ಸ್‌

( ಸಾಂದರ್ಭಿಕ ಚಿತ್ರ )

ಚುನಾವಣಾ ಕಣದಲ್ಲಿ ʼಲಿಂಗಾಯತ ಸಮುದಾಯ ನಾಯಕʼನ ಪ್ರಭಾವ .!

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ್ದು ದೊಡ್ಡ ಪಾತ್ರ. ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಮುಂದುವರಿದರೇ, ಫಲಿತಾಂಶವೇ ಅದಲು ಬದಲಾಗುತ್ತದೆ ಎಂಬಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿದೆ.  ಒಟ್ಟು ಸುಮಾರು ೧೭ ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯ ರಾಜ್ಯದ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಈ ಸಮುದಾಯ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಲಿಂಗಾಯತ ಸಮುದಾಯಗಳ ಪಾತ್ರ ಮಹತ್ವದ್ದು. ಬಹಳ ಪ್ರಮುಖವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಈ ಸಮುದಾಯದ ಕೊಡುಗೆ ದೊಡ್ಡದಿದೆ. ಈ ಭಾರಿ ಚುನಾವಣೆಗೆ ಬರೋಬ್ಬರಿ ೬೮ ಮಂದಿ ಲಿಂಗಾಯತ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೇ, ಇತ್ತ ಕಾಂಗ್ರೆಸ್‌ ೫೧ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಲಿಂಗಾಯತ ಸಮುದಾಯ ರಾಜಕೀಯದಲ್ಲಿ ಉಳಿಸಿಕೊಂಡಿರುವ ಪ್ರಭಾವಕ್ಕೆ ಸಾಕ್ಷಿ. 

ಆದರೇ, ಈ ಬಾರಿಯ ರಾಜಕೀಯದ ವಾತಾವರಣ ತುಸು ಬದಲಾದ ಹಾಗೆ ಕಾಣಿಸುತ್ತಿದೆ.  ಕರ್ನಾಟಕದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡಿದ್ದು, ಹಿರಿಯ ಕೆಲವು ಪ್ರಮುಖ ನಾಯಕರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡದಿರುವ ಕಾರಣದಿಂದಾಗಿ ಬಂಡಾಯವನ್ನು ಎದುರಿಸುತ್ತಿದೆ. ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೀಸಲಾತಿ ಸೇರಿ ಹಲವು ತಂತ್ರಗಳನ್ನು ಹೂಡಿದ್ದರು ಕೂಡ ಅದು ಸಮಧಾನದ ಪರಿಹಾರ ಎಂಬುವುದು ಆ ಸಮುದಾಯಕ್ಕೆ ಮನದಟ್ಟಾದಂತಿದೆ. ಲಿಂಗಾಯತ ಸಮುದಾಯಕಕ್ಕೆ ಸೇರಿದ ಹಿರಿಯ ಪ್ರ,ಮುಖ ನಾಯಕರುಗಳ ರಾಜೀನಾಮೆ ಹಾಗೂ ಪಕ್ಷಾಂತರ ಪರ್ವ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ ಬಿಜೆಪಿ ಎದುರಿಸಿದ ವಿರೋಧದ ಅಲೆಯನ್ನು ಈ ರಾಜ್ಯ ಕಂಡಿದೆ. ಈಗ ಅದರ ಮತ್ತೊಂದು ಹಂತ. ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ಮುಖಂಡರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಟಿಕೇಟ್‌ ಸಿಗದೇ ಇರುವ ಕಾರಣದಿಂದಾಗಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಸೇರಿಕೊಂಡು ಟಿಕೇಟ್‌ ಗಿಟ್ಟಿಸಿಕೊಂಡಿದ್ದಾರೆ. ಆಡಳಿತ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಉಭಯ ಲಿಂಗಾಯತ ನಾಯಕರ ಈ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಈ ನಾಯಕರು ಈಗ ನೆಲೆ ಬದಲಾಯಿಸಿಕೊಂಡಿದ್ದು, ಚುನಾವಣಾ ಕಣದ ಕುತೂಹಲವನ್ನು ಹೆಚ್ಚಿಸಿದೆ. 

ಆರ್‌ ಎಸ್‌ ಎಸ್‌ ನೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದ ಈ ಉಭಯ ಹಿರಿಯ ನಾಯಕರು ಪಕ್ಷ ತೊರೆದು, ಕಾಂಗ್ರೆಸ್‌ ಸಿದ್ಧಾಂತಕ್ಕೆ ಒಪ್ಪಿ ಬಿಜೆಪಿ ತೊರೆದಿದ್ದು ಇದು ಬಿಜೆಪಿಗೆ ಒಂದು ರೀತಿಯಲ್ಲಿ ಮುಜುಗರ ಉಂಟುಮಾಡಿದೆ. ಆಡಳಿತ ವಿರೋಧಿ, ಭ್ರಷ್ಟಾಚಾರ ಆರೋಪಗಳ ಜೊತೆಜೊತೆಗೆ ಈ ಸಲ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉತ್ಸಾಹದಿಂದ ಇರುವ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಿರುವ ಬಿಜೆಪಿಗೆ ಈ ವಿಚಾರ ಮತ್ತೊಂದು ಸವಾಲಾಗಿದೆ.  ಜಗದೀಶ್ ಶೆಟ್ಟರ್‌, ಲಕ್ಷ್ಮಣ್‌ ಸವದಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಬಂದಿದ್ದಾರೆ ಎಂದ ಮಾತ್ರಕ್ಕೆ ಅವರ ಬೆಂಬಲಿಗರೆಲ್ಲಾ ಈ ಕಡೆ ಸಂಪೂರ್ಣವಾಗಿ ಮುಖ ಮಾಡುತ್ತಾರೆ ಎಂಬುವುದಕ್ಕೆ ಸಾಧ್ಯವಿಲ್ಲ.  ವ್ಯತ್ಯಾಸ ತರುವುದಂತೂ ನಿಶ್ಚಿತವಾಗಿದೆ. ಇನ್ನು, “ಇಬ್ಬರೂ ಬಿಜೆಪಿಯ ಪ್ರಭಾವಿ ನಾಯಕರುಗಳ ಸಾಲಿನಲ್ಲಿದ್ದಿದ್ರು, ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರ ಹಾಗೆ ಒಬ್ಬ ಸಮುದಾಯದ ನಾಯಕರಾಗಿ ಬೆಳೆಯದಿದ್ದರೂ ಇಬ್ಬರೂ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದವರು” ಎನ್ನುವುದು ಇಲ್ಲಿ ಮುಖ್ಯ. 

ಈ ಸಮುದಾಯ  ಬಿಜೆಪಿಯನ್ನು ಚುನಾವಣೆಯಲ್ಲಿ ಹೆಚ್ಚು ಪೊರೆಯುತ್ತಾ ಬಂದಿದೆ.  ಲಿಂಗಾಯತ ಸಮುದಾಯ  ಕರ್ನಾಟಕಕ್ಕೆ ಎಂಟು ಮುಖ್ಯಮಂತ್ರಿಗಳನ್ನು ಕೊಟ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ೨೦೧೮ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೫೨ ವಿಜೇತ ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸಾಮಾನ್ಯವಾಗಿ ತನ್ನ ಚುನಾವಣಾ ಟಿಕೆಟ್‌ ಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಲಿಂಗಾಯತರಿಗೆ ಮೀಸಲಿಡುತ್ತದೆ.

ರಾಜ್ಯದ ೨೨೪ ಸ್ಥಾನಗಳಲ್ಲಿ ಮುಖ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಸುಮಾರು ೭೦ ಕ್ಷೇತ್ರಗಳಲ್ಲಿ ಈ ಸಮುದಾಯವು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ೨೦೦೮ ಮತ್ತು ೨೦೧೮ ರಲ್ಲಿ ಬಿಜೆಪಿ ಈ ಭಾಗಗಳಲ್ಲಿ ಶೇಕಡಾ ೪೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ೨೦೧೩ರಲ್ಲಿ  ಬಿ. ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮವಾಗಿ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಗೆ ಹಂಚಿ ಹೋಯಿತು ಎನ್ನುವುದು ಇಲ್ಲಿ ಪ್ರಮುಖಾಂಶ. ಇನ್ನು, ಪಕ್ಷ ತೊರೆದ ನಾಯಕರು ಸಮುದಾಯದ ನಾಯಕರಲ್ಲ ಎಂದು ಬಿಜೆಪಿ ಹೇಳುತ್ತಿದ್ದರೆ, ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ "ಅವಮಾನ" ಎಂದು ಬಿಂಬಿಸಿ ಲಾಭ ಬಾಚುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಭವಿಷ್ಯಕ್ಕೆ ಎಷ್ಟು ಪರಿಣಾಮ ಬೀರಲಿದೆ ಎಂಬುವುದು ಕುತೂಹಲ. ಇನ್ನು, ಕಾಂಗ್ರೆಸ್‌ ಗೆ ಇದೇ ಅಸ್ತ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಉಲ್ಟಾ ಹೊಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. 

ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ. ಜುಲೈ ೨೦೨೧ ರಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಆದರೆ ಅವರಿಗೆ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಲ್ಲಿ ಅವಕಾಶ ನೀಡಲಾಯಿತು. ಬಸವರಾಜ ಬೊಮ್ಮಾಯಿ ಅವರನ್ನು ಲಿಂಗಾಯತ ಸಮುದಾಯದ ಅವರ ಉತ್ತರಾಧಿಕಾರಿ ಎಂಬಂತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೇ, ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು ಬಿಜೆಪಿಯರಿಗೇ ಅಸಮಾಧಾನವಿದೆ. 

ಯಡಿಯೂರಪ್ಪ ಮತ್ತು ಬಿಜೆಪಿ ಬಹಳ ವಿಚಿತ್ರವಾದ ಮತ್ತು ದುರ್ಬಲವಾದ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಯಡಿಯೂರಪ್ಪ ಅವರು ತಮ್ಮ ಮಗನನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಾಗ, ವಂಶ ರಾಜಕೀಯವನ್ನು ಧಿಕ್ಕರಿಸುವ ಪಕ್ಷದಲ್ಲಿ ಅವರ ವಿನಂತಿಗಳನ್ನು ನಿರ್ಲಕ್ಷಿಸಲಾಯಿತು. ಪುತ್ರ ವಿಜಯೇಂದ್ರಗೆ ಅವರು  ಶಿಕಾರಿಪುರವನ್ನು ಬಿಟ್ಟುಕೊಟ್ಟರು. ಇನ್ನು, ಈ ವಿಷಯದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆ ಮಾಜಿ ಮುಖ್ಯಮಂತ್ರಿಗಳ  ಒಳಜಗಳ ಗುಟ್ಟಾಗಿ ಉಳಿದಿಲ್ಲ ಎನ್ನುವುದಿಲ್ಲಿ ಮುಖ್ಯ. 

೧೯೯೦ರಲ್ಲಿ ಲಿಂಗಾಯತ ಸಮುದಾಯದ ನಾಯಕರಾಗಿದ್ದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಅವರು ಅಮಾನುಷವಾಗಿ ವಜಾ ಮಾಡಿದ್ದರು ಎಂಬ ವಿಚಾರ ಕಾಂಗ್ರೆಸ್‌ ಮೇಲೆ ಲಿಂಗಾಯತರ ವಿಶ್ವಾಸ ಕಡಿಮೆಯಾಯಿತು. ಈಗ ಲಿಂಗಾಯತರ ವಿಶ್ವಾಸವನ್ನು ಮರಳಿ ಪಡೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೮ರ ಚುನಾವಣೆಗೆ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಘೋಷಿಸಿದ್ದರು, ಆದರೆ ಅದು ಹಿನ್ನಡೆಯಾಯಿತು. ಈ ಬಾರಿ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ, ಈಗ ಇಬ್ಬರು ಬಿಜೆಪಿ ಮಾಜಿ ಲಿಂಗಾಯತ ನಾಯಕರ ಕಾಂಗ್ರೆಸ್ ಪ್ರವೇಶದಿಂದಾಗಿ ಲಿಂಗಾಯತರ ವಿಚಾರದಲ್ಲಿ ಕಾಂಗ್ರೆಸ್‌ ಹೊಸ ಹುರುಪಿನಲ್ಲಿದೆ.

ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಖಂಡಿತವಾಗಿಯೂ ರಾಜ್ಯಾದ್ಯಂತ ಪ್ರಭಾವ ಬೀರದಿದ್ದರೂ, ಅವರ ನಿರ್ಗಮನವು ಅವರ ತವರು ಕ್ಷೇತ್ರಗಳಾದ ಹುಬ್ಬಳ್ಳಿ-ಧಾರವಾಡ (ಧಾರವಾಡ) ಮತ್ತು ಅಥಣಿ (ಬೆಳಗಾವಿ) ಮತ್ತು ಸುತ್ತಮುತ್ತಲಿನ ಎಂಟರಿಂದ ಹತ್ತು ಸ್ಥಾನಗಳಲ್ಲಿ ಖಂಡಿತವಾಗಿಯೂ ಪರಿಣಾಮ ಬೀರಬಹುದು ಎಂಬ ರಾಜಕೀಯ ವಲಯದ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ. 

ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡದಿಂದ ಆರು ಬಾರಿ ಶಾಸಕರಾಗಿದ್ದರೆ, ಸವದಿ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದಾರೆ, ಆದರೂ ಅವರು ೨೦೧೮ ರಲ್ಲಿ ಚುನಾವಣೆಯಲ್ಲಿ ಸೋತಿದ್ದರು. ಪಕ್ಷಾಂತರಗೊಂಡ ಮೇಲೆ ಬಿಜೆಪಿ ಬೆಂಬಲಿಗರು ಈ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ದತ್ತಾಂಶವು ೨೦೧೬ ಮತ್ತು ೨೦೨೦ ರ ನಡುವೆ ಪಕ್ಷಾಂತರಗೊಂಡ ೪೩೩ ಶಾಸಕರು ಮತ್ತು ಸಂಸದರಲ್ಲಿ ೫೨ ಪ್ರತಿಶತದಷ್ಟು ಮಂದಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಹೇಳುತ್ತದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ "ಆಯಾ ರಾಮ್ ಗಯಾ ರಾಮ್" ರಾಜಕೀಯ ಜೋರಾಗಿ ನಡೆದಿದೆ. ಇಂತಹ ಪಕ್ಷಾಂತರಗೊಂಡವರಿಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ? ಅವರು ಅವಕಾಶವಾದಿಗಳೇ ? ಸೈದ್ಧಾಂತಿಕ ನಿಲುವು ? ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

ಶೆಟ್ಟರ್ ಮತ್ತು ಸವದಿ ಅವರನ್ನು ಕೈಬಿಡಲು ಬಿಜೆಪಿ ಕೊಟ್ಟ ಕಾರಣ, ಹೊಸ ಮುಖಗಳಿಗೆ ಅವಕಾಶ ನೀಡುವುದು. ಆದಾಗ್ಯೂ, ಇಲ್ಲಿ ಒಂದು ವಿರೋಧಾಭಾಸವಿದೆ. ʼಹಳೆಯ ಯುದ್ಧ ಕುದುರೆʼ ಯಡಿಯೂರಪ್ಪ ಇನ್ನೂ ಬಬಿಜೆಪಿಯ ಪ್ರಚಾರದ ಮುಖವಾಗಿಯೇ ಉಳಿದುಕೊಂಡಿದ್ದಾರೆ. ಕಾರಣ ಯಡಿಯೂರಪ್ಪ ಲಿಂಗಾಯತ ʼಸಮುದಾಯದ ನಾಯಕʼ. ಆದರೇ, ಸ್ಪರ್ಧಾ ಕಣದಲ್ಲಿ ಅವರಿಲ್ಲ.  ಶೆಟ್ಟರ್‌, ಸವದಿ ಕಾಂಗ್ರೆಸ್‌ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಲಿಂಗಾಯತರ ಮತಗಳು ಯಾವ ಕಡೆಗೆ ಹೋಗುತ್ತವೆ ? ಮೇ ೧೩ರವರೆಗೆ ಕಾದು ನೋಡೋಣ. ಏನಂತೀರಿ ? 

-ಶ್ರೀರಾಜ್‌ ವಕ್ವಾಡಿ


Wednesday, April 19, 2023

ಒಕ್ಕಲಿಗ ಸಾಂಪ್ರದಾಯಿಕ ಮತಗಳನ್ನು ವಿಭಜಿಸಲಿದೆಯೆ ʼಉರಿನಂಜುʼ ?


ಹಳೆಮೈಸೂರಿಗಾಗಿ ತ್ರಿಪಕ್ಷಗಳ ಹೋರಾಟ । ಭಾವನಾತ್ಮಕ ಅಸ್ತ್ರಕ್ಕಿಲ್ಲಿ ಫಲ ?

ಒಂದು ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಒಳಪಡುತ್ತಿದ್ದ ಹಳೆ ಮೈಸೂರು ಭಾಗವು ಈಗ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ರಾಜಕೀಯ ಕಣಗಳಲ್ಲಿ ಒಂದಾಗಿದೆ. ರಾಜ್ಯ ಶಾಸಕಾಂಗದ ಅರ್ಧದಷ್ಟು ಶಾಸಕರನ್ನು ಹೊಂದಿರುವ ಈ ಭಾಗವು ಒಂದು ಹಂತದಲ್ಲಿ ನಿರ್ಣಾಯಕ ರಾಜಕೀಯ ಕಣವಾಗಿಯೂ ಬದಲಾಗಿದೆ. ಸಾಂಪ್ರದಾಯಿಕವಾಗಿ ಇದು ಕಾಂಗ್ರೆಸ್‌ ಹಾಗೂ ಜನತಾದಳದ ಭದ್ರ ಕೋಟೆಯಾಗಿತ್ತು. 

ಕಳೆದ ಎರಡು ದಶಕಗಳಿಂದ ಬಿಜೆಪಿ ಈ ಭಾಗಗಳ ಮೇಲೆ ಹೆಚ್ಚು ಗಮನಹರಿಸಿಕೊಂಡಿದ್ದು, ಬಿಜೆಪಿಯೂ ಕೂಡ ಈ ಭಾಗದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಚುನಾವಣೆಯಲ್ಲಿ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದಾಗ ಬಿಜೆಪಿಗೆ ಈ ಭಾಗದಲ್ಲಿ ನುಸುಳುವುದಕ್ಕೆ ಅಪಾರವಾದ ಅವಕಾಶವನ್ನು ಮಾಡಿಕೊಟ್ಟಿತು. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆ ಅಂಟಿಕೊಂಡಿದ್ದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೇ, ಬಿಜೆಪಿ ಉಳಿದೆಡೆ ಮಹತ್ತರವಾದ ಸಾಧನೆಯನ್ನೇ  ಮಾಡಿದೆ ಎಂದು ಹೇಳಬಹುದಾಗಿದೆ.  

ಪ್ರಬಲವಾದ ಒಕ್ಕಲಿಗ ಜಾತಿಯ ಮತಗಳು, ಹಿಂದುಳಿದ ಜಾತಿಗಳು, ದಲಿತ ಮತಗಳು ಇಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಈ ಜಾತಿಗಳ ಪ್ರಾಬಲ್ಯವಿಲ್ಲದೇ ಯಾವುದೇ ಚುನಾವಣಾ ಲೆಕ್ಕಾಚಾರ ಪೂರ್ಣಗೊಳ್ಳುವುದಿಲ್ಲ ಎಂಬ ವಿಚಾರ ಕರ್ನಾಟಕ ರಾಜ್ಯ ರಾಜಕಾರಣದ ಬಿಡಾರದಲ್ಲಿ ಸಾಮಾನ್ಯವಾದದ್ದು. ಇನ್ನು, ಪ್ರತಿ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕವನ್ನು ಕೇಂದ್ರೀಕರಿಸಿಕೊಂಡು ತಂತ್ರ ಹೂಡುತ್ತಿದ್ದ ಬಿಜೆಪಿ ಈ ಬಾರಿ ಹಳೆ ಮೈಸೂರುನತ್ತೆ ಹೆಚ್ಚು ಫೋಕಸ್‌ ಮಾಡಿದೆ ಅಂತನ್ನಿಸುತ್ತಿದೆ. 

ಇತ್ತೀಚಿಗಿನ ವರ್ಷಗಳಲ್ಲಿ ಈ ಭಾಗದ ಒಕ್ಕಲಿಗ ಮತಗಳು ಕಾಂಗ್ರೆಸ್, ಜೆಡಿಎಸ್‌ ಅಷ್ಟೇ ಅಲ್ಲದೇ, ಈಗ ಬಿಜೆಪಿಯಲ್ಲಿಯೂ ಹಂಚಿಹೋಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಬಿಜೆಪಿ ಕಡೆಗೂ ಮತ ವಿಭಜನೆಯಾಗಿ ಹೋಗುತ್ತಿರುವುದರಿಂದ ಇಲ್ಲಿ ಸಾಂಪ್ರದಾಯಿಕವಾಗಿ ಪಾರುಪತ್ಯ ಉಳಿಸಿಕೊಂಡು ಬಂದಿರುವ ಕಾಂಗ್ರೆಸ್‌, ಜೆಡಿಎಸ್‌ ಗೆ ಒಂದಿಷ್ಟು ರಾಜಕೀಯ ಹೊಡೆತವನ್ನು ನೀಡಿದೆ.  ಇನ್ನು, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳ ವಿಭಜನೆಯಿಂದಾಗಿ ಬಿಜೆಪಿ ಇಲ್ಲಿ ಅಸಾಧಾರಣ ಸಾಧನೆ ಮಾಡಿತ್ತು ಎನ್ನುವುದು ಉಲ್ಲೇಖಿಸಬಹುದಾದ ವಿಷಯ. 

ಬಹುಮತ ಸಾಧಿಸುವುದಕ್ಕೆ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದರಿಂದ ನಿರ್ಣಾಯಕ ಫಲಿತಾಂಶವನ್ನು ನಿರೀಕ್ಷಿಸಬಹುದೆಂದು ಆಡಳಿತ ಪಕ್ಷ ಇಲ್ಲಿ ಅರಿತುಕೊಂಡಿದೆ. ಇದಕ್ಕೆ ಪೂರಕವೆಂಬಂತೆ ತನ್ನ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರುಗಳನ್ನು ಈ ಭಾಗಗಳಲ್ಲಿ ಪ್ರಚಾರದ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಬೆಂಗಳೂರು, ಮಂಡ್ಯ, ತುಮಕೂರು, ಮಂಡ್ಯ ಮತ್ತು ಹಾಸನದ ಮೇಲೆ ಪಕ್ಷ ಸೂಕ್ಷ್ಮ ಕಣ್ಣಿಟ್ಟಿರುವುದನ್ನು ಈ ಹಿನ್ನಲೆಯಲ್ಲಿ ನೋಡಬೇಕಿದೆ. 

ಎಲ್ಲರಿಗೂ ಗೊತ್ತಿರುವ ಹಾಗೆ ಜೆಡಿಎಸ್‌ ಪ್ರಸ್ತುತತೆಗೆ ಬರುವುದಕ್ಕೆ ಮೂಲ ಕಾರಣವೇ ಒಕ್ಕಲಿಗ ಮತಗಳು. ಜೆಡಿಎಸ್‌ ನಾಯಕತ್ವವೂ ಕೂಡ ಈ ಸಮುದಾಯದ ಹಿನ್ನಲೆಯಿಂದಲೇ ಬಂದಿದ್ದಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದೆ. ಪಕ್ಷದಲ್ಲಿದ್ದ ಆಂತರಿಕ ಸಮಸ್ಯೆಗಳ ಹೊರತಾಗಿಯೂ ಜೆಡಿಎಸ್‌ ಈ ಭಾಗದಲ್ಲಿ ಪ್ರಭಾವವನ್ನು ಹೊಂದಿದೆ. ಆದರೇ, ಕಾಂಗ್ರೆಸ್‌ ನೊಂದಿಗೆ ೨೦೧೯ರಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದಾಗ ಭಾರಿ ಹಿನ್ನಡೆ ಅನುಭವಿಸಿತ್ತು. ಸ್ವತಃ ಜೆಡಿಎಸ್‌ ನ ಹೈ ಕಮಾಂಡರ್‌ ಎಸ್‌ ಡಿ ದೇವೇಗೌಡ್ರು ಒಕ್ಕಲಿಗ ಭದ್ರಕೋಟೆ ಎಂದು ಪರಿಗಣಿಸಲ್ಪಡುವ ತುಮಕೂರು ಕ್ಷೇತ್ರವನ್ನು ಕಳೆದುಕೊಂಡರು. ಈಗ ವಿಧಾನ ಸಭಾ ಚುನಾವಣೆ ಬರುತ್ತಿದೆ ಮತ್ತು ಬರುವ ವರ್ಷ ಲೋಕಸಭಾ ಚುನಾವಣೆ, ಈ ಹೊತ್ತಿನಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಪುನಶ್ಚೇತನಗೊಳಿಸಿಕೊಳ್ಳುವ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಿದೆ. 

ಇತ್ತ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವುದಕ್ಕೆ ಕಾಂಗ್ರೆಸ್‌ ಸರ್ವ ಪ್ರಯತ್ನ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಡಿ. ಕೆ ಶಿವಕುಮಾರ್‌ ಪ್ರಬಲ ಸಮುದಾಯದ ಮತಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದಕ್ಕೆ ಭಾವನಾತ್ಮಕವಾಗಿ ಪ್ರಚಾರ ಸಭೆಗಳಲ್ಲಿ ಮಾತಾಡಿದ್ದನ್ನು, ಅಕ್ಷರಶಃ ಅಂಗಲಾಚಿ ಮತ ಬೇಡಿದಂತೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿದ್ದನ್ನು ಈ ರಾಜ್ಯ ಕಂಡಿದೆ. ಬಿಜೆಪಿಯೊಂದಿಗಿನ ನೇರ ಸ್ಪರ್ಧೆಯಲ್ಲಿ ಪಕ್ಷವು ಪ್ರಜ್ಞಾಪೂರ್ವಕವಾಗಿ ತನ್ನ ಉನ್ನತ ನಾಯಕತ್ವದ ಸ್ಪೆಕ್ಟ್ರಮ್‌ ನಲ್ಲಿ ಒಕ್ಕಲಿಗ ಮುಖವನ್ನೇ ಮುಂದೆ ತಂದಿದೆ. ಕಾಂಗ್ರೆಸ್‌ ಗೆ ಡಿ. ಕೆ ಶಿವಕುಮಾರ್‌ ತಂದು ಕೊಡುವ ಒಕ್ಕಲಿಗ ಮತಗಳು ಅವರ ಮತ್ತು ಕಾಂಗ್ರೆಸ್‌ ನ ಭವಿಷ್ಯಕ್ಕೆ ನಿರ್ಣಾಯಕವಾಗಿರಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇತ್ತ ಬಿಜೆಪಿ ಒಬಿಸಿ ಕೋಟಾದಡಿಯಲ್ಲಿ ಮುಸ್ಲೀಮರಿಗಿದ್ದ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಮತ್ತು ಅವರನ್ನು ಬೇರೆ ಪೂಲ್‌ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್‌ ನ ನಿರ್ಧಾರವು ತನ್ನ ರಾಜಕೀಯ ಅಜೆಂಡಾದ ನಿರೂಪಣೆಯನ್ನು ಸೃಷ್ಟಿಸುವ ನಿರ್ಣಾಯಕ ಪ್ರಯತ್ನ ಮಾಡಿದ್ದು, ಇದೇ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದೇ ಆಗಿದೆ. ಮುಸ್ಲೀಮರಿಗಿದ್ದ ಶೇಕಡಾ ೪ರಷ್ಟು ಮೀಸಲಾತಿಯನ್ನು ತೆಗೆದು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯವೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡಾ ಎರಡರಂತೆ ಹಂಚಿಕೆ ಮಾಡಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಅಧಿಕಾರದಿಂದ ಕ್ಲೆವರ್‌ ಗೇಮ್‌ ಆಡಿದೆ.  

೧೯೭೦ರ ದಶಕದಲ್ಲಿ ಡಿ, ದೇವರಾಜ್‌ ಅರಸ್‌ ಅವರು ರಾಜಕೀಯದಲ್ಲಿ ಮುಂಪಂಕ್ತಿಗೆ ಬಂದಾಗಿನಿಂದ ರಾಜ್ಯದಲ್ಲಿ ಧ್ವನಿಯಿಲ್ಲದ ಹಿಂದುಳಿದ ವರ್ಗದವರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಸ್ಥಾನಮಾನ ನೀಡಬೇಕು ಎಂಬ ಕೂಗು ಹೆಚ್ಚಿತು. ಅದಕ್ಕೆ ಮಹತ್ತರವಾದ ಕೊಡುಗೆ ನೀಡಿದವರು ದೇವರಾಜ್‌ ಅರಸ್.‌ ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ದೊರಕಿಸುವ ಸಲುವಾಗಿ ಅರಸು ಮಾಡಿದ ಸೇವೆ ಅಮೋಘ. ಇಡೀ ದೇಶದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯ ದೇವರಾಜ ಅರಸು ಅವರದ್ದು. ಅಂದಿನಿಂದ ರಾಜಕೀಯದಲ್ಲಿ ಹಿಂದುಳಿದ ವರ್ಗಕ್ಕೆ ಸ್ಥಾನಮಾನ ಸಿಗುತ್ತಿದೆ. ಮುಂದೆ ರಾಜಕೀಯದಲ್ಲಿ ಇದೇ ವಿಷಯ ರಾಜಕೀಯ ಸಿದ್ಧಾಂತವಾಗಿ ಬದಲಾಗಿದೆ ಕೂಡ. ೨೦೧೩ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ʼಅಹಿಂದʼ ಚಳುವಳಿ (ಹಿಂದುಳಿದ ವರ್ಗಗಳ ಮತ್ತು ದಲಿತರ ಒಕ್ಕೂಟ) ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಪ್ರಧಾನ ಪಾತ್ರ ವಹಿಸಿತ್ತು. ೨೦೧೮ರಲ್ಲಿ ಸಿದ್ದರಾಮಯ್ಯರವರನ್ನು ʼಅಹಿಂದ ನಾಯಕʼ ಎಂದೆಲ್ಲಾ ಬಿಂಬಿಸುವುದಕ್ಕೆ ಪಕ್ಷ ಪ್ರಯತ್ನ ಪಟ್ಟಿತ್ತಾದರೂ, ಇದೇ ರಾಜಕೀಯ ಅಸ್ತ್ರದ ಮೂಲಕ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಹುರುಪಿನಲ್ಲಿತ್ತಾದರೂ ಕಾಂಗ್ರೆಸ್‌ ಗೆ ʼಅಹಿಂದʼ ವರ್ಕೌಟ್‌ ಆಗಿಲ್ಲ. 

ಈಗ ಬಿಜೆಪಿ ಈ ಅಸ್ತ್ರವನ್ನು ಹಿಡಿದುಕೊಂಡಿದೆ. ಹಲವು ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನ ವಿರುದ್ಧವಾಗಿ ಆಕ್ರಮಣಕಾರಿಯಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಮೀಸಲಾತಿ ವಿಸ್ತರಿಸುವುದು ಮತ್ತು ಪಕ್ಷದ ಅತಿ ದೊಡ್ಡ ರಾಜಕೀಯ ಅಜೆಂಡಾದೊಂದಿಗೆ ಈ ವಿಷಯವನ್ನು ನಿರೂಪಿಸಿ, ಹಿಂದುಳಿದ ವರ್ಗ, ದಲಿತರಿಗೆ ಬಿಜೆಪಿ ಕೊಟ್ಟಷ್ಟು ಸ್ಥಾನಮಾನ ಬೇರೆ ಯಾವ ಪಕ್ಷವೂ ನೀಡಿಲ್ಲ ಎಂಬಂತೆ ಸ್ವಯಂ ಪ್ರಶಂಸೆ ತೆಗೆದುಕೊಳ್ಳುತ್ತಿದೆ. ಬಿಜೆಪಿ ಲಿಂಗಾಯತರಲ್ಲಿ ಸಾಂಪ್ರದಾಯಿಕವಾಗಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಈ ಮೀಸಲಾತಿ ವಿಸ್ತರಿಸಿದ್ದೇನೋ ಆಯ್ತು, ಇದು ಚುನಾವಣೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎನ್ನುವುದು ಬಹಳ ಮುಖ್ಯ. ಬಿಜೆಪಿಯ ಈ ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವು ಸಂಭಾವ್ಯ ಸವಾಲುಗಳನ್ನು ಬಹುಷಃ ಎದರುಸಿಬೇಕಾದೀತು ಎಂದು ಕಾಣಿಸುತ್ತಿದೆ. ಈ ಸಂಖ್ಯೆ ಲೆಕ್ಕಾಚಾರದಲ್ಲಿಯೇ ಈ ನಿರ್ಣಾಯಕ ಸಮುದಾಯಗಳ ಒಂದು ಭಾಗವನ್ನು ಗೆಲ್ಲುವುದೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ಪರಮ ಗುರಿಯಾಗಿದೆ.

ಭಾವನಾತ್ಮಕವಾಗಿ ಜನರನ್ನು ಹಿಡಿದಿಟುಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಹೂಡುವಲ್ಲಿ ಬಿಜೆಪಿ ಎತ್ತಿದ ಕೈ. ಈಗಾಗಲೇ ಮೈಸೂರು ट्ट ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ ಪ್ರೆಸ್‌ ರೈಲಿಗೆ ʼಒಡೆಯರ್‌ʼ ಎಂದು ಮರುನಾಮಕರಣ,  ಮೈಸೂರು ट्ट ತಾಳಗುಪ್ಪ ರೈಲಿಗೆ ರಾಷ್ಟ್ರಕವಿ ಕುವೆಂಪು ಹೆಸರನ್ನು ಮರು ನಾಮಕರಣ ಮಾಡಿದೆ. ಇತ್ತ, ಶ್ರೀರಂಗಪಟ್ಟಣದಲ್ಲಿ ಹನುಮಾನ್‌ ದೇವಸ್ಥಾನವನ್ನು ಧ್ವಂಸಗೊಳಿಸಿ ಟಿಪ್ಪು ಸುಲ್ತಾನ್‌ ಮಸೀದಿ ಕಟ್ಟಿದ್ದ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆಯು ಮತ್ತೆ ಅದೇ ಸ್ಥಳದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದೆ, ಇನ್ನೊಂದೆಡೆ ರಾಮನಗರದ ರಾಮ ದೇವರ ಬೆಟ್ಟದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ, ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ೫೦೦ ಕೋಟಿ ಅನುದಾನ ಘೋಷಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಒಕ್ಕಲಿಗ ಮೀಸಲು, ಬಿಜೆಪಿ ಸೃಷ್ಟಿಯ ʼಉರಿನಂಜುʼ (ಟಿಪ್ಪುವನ್ನು ಕೊಂದ್ದದ್ದು ಉರಿಗೌಡ, ನಂಜೇಗೌಡ ವಿಷಯವನ್ನು ಸೃಷ್ಟಿಸಿ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ) ಹೀಗೆ ಒಂದೇ ಎರಡೇ..? ಭಾವನಾತ್ಮಕವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಒಕ್ಕಲಿಗರ ಮತ ಸೆಳೆಯುವುದಕ್ಕೆ ಇಷ್ಟೆಲ್ಲಾ ರಣತಂತ್ರ ಹೂಡಿದೆ. ಇಷ್ಟೆಲ್ಲಾ ಆಗಿಯೂ ಒಕ್ಕಲಿಗ ಮತಗಳು ಯಾವ ಕಡೆ ವಾಲುತ್ತದೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಒಕ್ಕಲಿಗರ ಒಲವು ಬಿಜೆಪಿಗೋ ಅಥವಾ ಸಾಂಪ್ರದಾಯಿಕವಾಗಿ ಬಂದಂತೆ ಮತ್ತೆ ಜೆಡಿಎಸ್‌, ಕಾಂಗ್ರೆಸ್‌ ಗೆ ಹಂಚಿ ಹೋಗಲಿದೆಯೋ ಎಂಬುವುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ   


  


Thursday, April 13, 2023

ನಕ್ಸಲ್ ಗ್ಯಾಂಗ್ ಕಟ್ಟಿದ 'ರೈಲುಭೂತ' ಕಥೆ !

ಕ್ರಾಂತಿಕಾರಿ ಸಿದ್ಧಾಂತಗಳನ್ನು ನಂಬುವ ನಕ್ಸಲಿಸಂ, ಅದು ನೆಲೆನಿಂತ ಕಡೆಗಳಲ್ಲಿ ನಂಬಿಕೆಗಳನ್ನು ದುರುಪಯೋಗ ಮಾಡಿಕೊಂಡಿರುವ ವಿಚಾರ ಹೋಸತೇನಲ್ಲ. ಕೋವಿ, ಕತ್ತಿ ರಕ್ತಪಾತಗಳಲ್ಲಿಯೇ ಹೆಚ್ಚು ನಂಬಿಕೆ ಇಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು, ಅನ್ಯಾಯಗಳನ್ನೇ ಉಸಿರಾಡುತ್ತಿರುವ ನಕ್ಸಲ್ ಗ್ಯಾಂಗ್ ಗಳು ನಡೆಸಿದ ಉಪಟಳವನ್ನು ಈ ದೇಶ, ನಾಡು ಕಂಡಿದೆ. ಸಮಾಜದ್ರೋಹಿ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟಿದೆಯಾದರೂ ಅಲ್ಲಲ್ಲಿ ಇನ್ನೂ ತಲೆ ಎತ್ತಿಕೊಂಡೇ ಇವೆ ಎನ್ನುವುದು ಈ ವ್ಯವಸ್ಥೆಯ ದುರಂತಗಳಲ್ಲಿ ಒಂದು. 

ತಮ್ಮ ಹಿತಾಸಕ್ತಿಗಳಿಗಾಗಿ ರಕ್ತಪಾತ ನಡೆಸುವುದಕ್ಕೂ ತಯಾರಿರುವ ಧೋರಣೆ ಹೊಂದಿರುವ ಹೀನ ದರಿದ್ರ ಮನಸ್ಥಿತಿಯ ನಕ್ಸಲಿಸಂ ಈ ನಾಗರಿಕ ಸಮಾಜಕ್ಕೆ ಮಾರಕ ಶಕ್ತಿಯಿದ್ದಂತೆ. ಉಗ್ರಗಾಮಿತ್ವದ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದದ್ದು ಈ ವ್ಯವಸ್ಥೆಯ ಒಳಗೆಯೇ ಇದ್ದವರು ಎನ್ನುವುದು ಮತ್ತೊಂದು ವಿಷಾದನೀಯ ಸಂಗತಿ. 

ಕಾನೂನಿನ ವಿರುದ್ಧ ವಿಚ್ಚಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಒಂದು ಸಮಾಜದ್ರೋಹಿ ನಕ್ಸಲ್ ಗ್ಯಾಂಗ್ ಹೂಡುವ ಸಮಾಜದ್ರೋಹಿ ಕೆಲಸವನ್ನು ಬಟಾಬಯಲುಗೊಳಿಸುವ ರೋಚಕ ಕಥೆಯಾಧಾರಿತ ನಾಟಕ 'ರೈಲುಭೂತ'( ಮೂಲ : ಅರ್ನಾಲ್ಡ್ ರಿಡ್ಲೆ, ಕನ್ನಡ ರೂಪಾಂತರ : ಡಾ. ಪಾರ್ವತಿ ಜಿ‌. ಐತಾಳ್ ). 

ಇತ್ತೀಚೆಗೆ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ನಾಟಕೋತ್ಸವದಲ್ಲಿ ಅಮೋಘ (ರಿ.) ಹಿರಿಯಡಕ ತಂಡ ಈ ನಾಟಕವನ್ನು ಅಮೋಘವಾಗಿಯೇ ಪ್ರಸ್ತುತ ಪಡಿಸಿದೆ ಎನ್ನುವುದು ಅತಿಶಯೋಕ್ತಿಯಲ್ಲ. 'ಬದುಕೊಂದು ಭಾವನೆಗಳ ಬಂಡಿ' ಎಂಬ ಶೀರ್ಷಿಕೆ ಗೀತೆಯೊಂದಿಗೆ, ನಿಸ್ತೇಜ ಸಣ್ಣ ಹಳ್ಳಿಯೊಂದರ ನಿರ್ಜನ ರೈಲ್ವೆ ಸ್ಟೇಷನ್ ನ  ರೈಲು ಬರುವ ಸಮಯದ ಅನೌನ್ಸ್ ಮೆಂಟ್ ನೊಂದಿಗೆ ತೆರೆದುಕೊಳ್ಳುವ ನಾಟಕ, ಆರಂಭದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.  

ಬೇರೆ ಬೇರೆ ಹಿನ್ನಲೆಯುಳ್ಳ ಐದಾರು ಪ್ರಯಾಣಿಕರು ಈ ನಿರ್ಜನ ಪಾಳುಬಿದ್ದ ರೈಲ್ವೆ ಸ್ಟೇಷನ್ ನಲ್ಲಿ ಕಳೆಯುವ ಒಂದು ರಾತ್ರಿಯಲ್ಲಿ ಎದುರಿಸುವ ಭಯಾನಕ ರೈಲುಭೂತ ಕಥೆ ಹಾಗೂ ಸ್ಮಗ್ಲಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಕ್ಸಲ್ ಗ್ಯಾಂಗ್ ಮಾಡುವ ಕುತಂತ್ರದಿಂದಾಗಿ ಸೃಷ್ಟಿಯಾಗುವ ಅಹಿತಕರ ಘಟನೆಗಳು ಎದುರಿಸುತ್ತಾ ಅಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರಾಗುತ್ತಾರೆ. ಒಂದೆಡೆ ಮದುವೆಯಾಗಿ ಹೊಸತರಲ್ಲಿರುವ ಜೋಡಿ, ಇನ್ನೊಂದೆಡೆ ಮದುವೆಯಾಗಿ ವಿಚ್ಛೇದನದೊರೆಗೂ ಹೋಗಿ ಮತ್ತೆ ಒಂದಾಗುವ ಜೋಡಿ, ಈ ನಕ್ಸಲ್ ಗ್ಯಾಂಗ್ ನ ಬೆನ್ನು ಹತ್ತಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹಾಸ್ಯಪ್ರಜ್ಞೆಯುಳ್ಳವನಂತೆ ನಟಿಸುವ ಸಿಐಡಿ, ಹಾಸ್ಯಕ್ಕೆ ಬೇಕಾಗಿ ಡೊಳ್ಳು ಹೊಟ್ಟೆಯ ಮತ್ತೊಂದು ಪಾತ್ರ, ಸ್ಟೇಷನ್ ಮಾಸ್ಟರ್ ನಡುವೆ ಈ ಗ್ಯಾಂಗ್ ಹೆಣೆಯುವ ಕುತಂತ್ರದ ಸುತ್ತ ಒಂದು ರೀತಿಯಲ್ಲಿ ಪತ್ತೇದಾರಿಯಂತೆ ಸಾಗುವ ನಾಟಕದ ವಸ್ತು ಗಂಭೀರತೆಯಿಂದ ಕೂಡಿದ್ದರೂ ಆರಂಭದಿಂದ ಕೊನೆಯವರಗೂ ಹಾಸ್ಯದ ಜೊತೆಜೊತೆಗೆ ಸಾಗುತ್ತದೆ. 

ಕಥೆಗೆ ಬೇಕಾದ ರಂಗಸಜ್ಜಿಕೆ, ಬೆಳಕು, ಸಂಗೀತ ಎಲ್ಲವೂ ನಿಜಕ್ಕೂ ವೀಕ್ಷಕನೊಬ್ಬನ ಮನ ತಟ್ಟುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿಯವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ. ಕಥೆಯಲ್ಲಿ ಪಾಲ್ಪಡೆದ ಎಲ್ಲಾ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ನಾಟಕದ ಮೂಲ ಕಥೆ ನೂರಾರು ವರ್ಷಗಳ ಹಿಂದಿನದ್ದಾದರೂ ಇಂದಿಗೂ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ ಎನ್ನುವುದು ನಾಟಕದ ಹೆಚ್ಚುಗಾರಿಕೆ. ಮೂಲವನ್ನು ರೂಪಾಂತರಿಸಿ ಇನ್ನೊಂದು ಭಾಷಗೆ ತರುವುದು ಸುಲಭದ ಕೆಲಸವಲ್ಲ. ಹಿರಿಯ ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕನ್ನಡ ರಂಗಭೂಮಿಗೆ ನೀಡಿದ ಉತ್ತಮ ಕೊಡುಗೆಗಳಲ್ಲಿ 'ರೈಲುಭೂತ' ನಾಟಕವೂ ಒಂದು. ಕಥೆಯನ್ನು ರಂಗಕ್ಕೆ ತರುವುದು ಕೂಡ ಸುಲಭವಿಲ್ಲ, ರಂಗದಲ್ಲಿ ಎಲ್ಲೂ ಭ್ರಮನಿರಸನ ಮೂಡಿಸದೆ ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕರು ಮತ್ತು ಇಡೀ ಅಮೋಘ ತಂಡ ಯಶಸ್ವಿಯಾಗಿದೆ. ರಂಗಾಸಕ್ತರನ್ನು ಇನ್ನಷ್ಟು ಈ ನಾಟಕ ತಲುಪುವಂತಾಗಲಿ. 

-ಕಾವ್ಯ ಬೈರಾಗಿ

#ShreerajVakwady 


ಚಿತ್ರಗಳು : ಛಾಯಾ ಕುಂದಾಪುರ 


ಡಿಯರ್‌ ಮಾಮಾ ಪರ ಸುದೀಪ್‌ ಮತ ಬೇಟೆ !

ರಾಜ್ಯದಲ್ಲಿ ಮತಗಳಾಗಿ ಪರಿವರ್ತಿತವಾದ ಸಿನೆಮಾ ವರ್ಚಸ್ಸುಗಳು... 


ಚುನಾವಣೆಯ ಸಂದರ್ಭದಲ್ಲಿ ಸ್ಟಾರ್‌ ಪ್ರಚಾರಕರನ್ನು ತಮ್ಮ ಪಕ್ಷಕ್ಕೆ ರಾಯಭಾರಿಯಂತೆ ಖರೀದಿಸುವುದು ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತೀರಾತಿಸಹಜ. ರಾಜ್ಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗ ಅವರ ಪ್ರೀತಿಯ ಮಾಮ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದು ಈಗ  ವಿವಾದಕ್ಕೆ ಕಾರಣವಾಗಿದೆ. ಸಿನೆಮಾ ನಟರ ರಾಜಕೀಯ ಪ್ರವೇಶ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ತಮ್ಮ ಸಿನೇಮಾ ರಂಗದಲ್ಲಿನ ವರ್ಚಸ್ಸಿನಿಂದ ರಾಜಕೀಯಕ್ಕೆ ಪ್ರವೇಶಿಸಿದವರು ಹಲವರಿದ್ದಾರೆ.    

ಆಂಧ್ರಪ್ರದೇಶದಲ್ಲಿ ಎನ್ ಟಿ ಆರ್ ರಾಜಕೀಯದಲ್ಲಿ ಸೃಷ್ಟಿಸಿದ ಹವಾದ ಬಗ್ಗೆ ಇಡೀ ದೇಶ ಮಾತನಾಡುತ್ತದೆ. ತಮಿಳುನಾಡಿನಲ್ಲಿ ಎಂಜಿಆರ್ ಮತ್ತು ಅಮ್ಮಾ ಜಯಲಲಿತಾ ಮಾಡಿದ ರಾಜಕೀಯ ಮೋಡಿಯದ್ದು ದೊಡ್ಡ ಇತಿಹಾಸ. ಜಯಲಲಿತಾ ಬಗ್ಗೆ ಇವತ್ತಿಗೂ ತಮೀಳರಲ್ಲಿ ಒಂದು ಕೃತಜ್ಞತಾ ಭಾವವಿದೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈ ಪವರ್‌ ಹೌಸ್ ಸ್ಟಾರ್‌ ಗಳು ಬಾಕ್ಸ್ ಆಫೀಸ್‌ ನಲ್ಲಿ ಆ ಕಾಲದಲ್ಲಿ ಧೂಳ್‌ ಎಬ್ಬಿಸಿದ್ದರು. ಸಿನೆಮಾ ತೆರೆಯಲ್ಲಿ ಜನಮನ ಗೆದ್ದಿದ್ದ ಇಬ್ಬರೂ ರಾಜಕೀಯದಲ್ಲಿಯೂ  ದೊಡ್ಡ ಯಶಸ್ಸು ಪಡೆದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಹತ್ತರವಾದ ಪಾತ್ರ ಪಡೆದು ಅಜರಾಮರಾದರು.  ಸಿನೆಮಾ ಕ್ಷೇತ್ರದ ವರ್ಚಸ್ಸಿನ ಮೂಲಕವೇ ರಾಜಕೀಯ ಪ್ರವೇಶ ಕಂಡಿದ್ದ ಅವರು ಸಿನೆಮಾ ಕ್ಷೇತ್ರದಲ್ಲಿ ತಮಗಿದ್ದ ಅಭಿಮಾನವನ್ನು ರಾಜಕೀಯದಲ್ಲಿ ಮತಗಳಾಗಿ, ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದರು. ತಮ್ಮದೇ ಆದ ಸಿನೆಮಾ ವರ್ಚಸ್ಸಿನ ಮೂಲಕ ರಾಜಕೀಯದಲ್ಲಿ ಮೈಲೇಜ್‌ ಪಡೆದುಕೊಂಡರು. 

ರಾಜಕೀಯದಲ್ಲಿ ಇದೊಂದು ತಾರ್ಕಿಕ ಹೆಜ್ಜೆ ಎಂದು ಕಾಣಿಸುತ್ತದೆ. ಚಿತ್ರರಂಗದ ಶ್ರೇಷ್ಠ ಮಾನ್ಯರ ಹೆಸರುಗಳು ಮತ್ತು ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸುವುದು ರಾಜಕೀಯದ ತಂತ್ರಗಳಲ್ಲಿ ಒಂದಾಗಿ ಬಿಟ್ಟಿದೆ. ಈ ದೇಶ ಸಿನೆಮಾ ನಟ ನಟಿಯರ ಮೇಲೆ ಯಾವ ರೀತಿಯ ಹುಚ್ಚು ಅಭಿಮಾನ ಹೊಂದಿದೆ ಎಂದರೇ, ಅಭಿಮಾನದ ಪರಾಕಾಷ್ಠೆಯಲ್ಲಿ ಇಲ್ಲಿ ಸಿನೆಮಾ ತಾರೆಯರಿಗೆ (ಖುಷ್ಬು) ದೇವಸ್ಥಾನ ಕಟ್ಟಿದ ಉದಾಹರಣೆಯೂ ಇದೆ.

ಕರ್ನಾಟಕದಲ್ಲಿ, ಸಿನಿಮಾ ತಾರೆಯರು ಮತ್ತು ರಾಜಕೀಯದ ನಡುವಿನ ಸಂಪರ್ಕವು ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ ಎಂದು ತೋರುತ್ತದೆ. ಈ ದಕ್ಷಿಣ ರಾಜ್ಯದಲ್ಲಿ ಸಿನೇಮಾ ತಾರೆಯರ ಮೇಲೆ ಇರುವ ಆರಾಧನೆಯು ಕಡಿಮೆಯೇನಲ್ಲ. ಅಭಿಮಾನಿಗಳ ಸಂಘಗಳು ಮತ್ತು ದೈತ್ಯ ಕಟೌಟ್‌ ಗಳು ಮತ್ತು ಅವರ ಸ್ಟ್ಯಾಚ್ಯೂಗಳು, ಈಗೀಗ ಅಂತೂ ಸೋಶಿಯಲ್‌ ಮೀಡಿಯಾಗಳಲ್ಲಿ ಸೋ ಕಾಲ್ಡ್‌ ʼಫ್ಯಾನ್ಸ್‌ ಕ್ಲಬ್‌ʼ ಇತ್ಯಾದಿ ಇತ್ಯಾದಿಗಳು ಹುಚ್ಚು ಅಭಿಮಾನದ ಗುರುತುಗಳು. ಆದರೆ ಇವೆಲ್ಲವೂ ನಡೆಯುವುದು ಸಿನೇಮಾ ಕಾರಣಕ್ಕಾಗಿಯೇ ಹೊರತು, ಅವರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಅಲ್ಲ. 

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್, ಮೇರು ನಟ ಡಾ. ರಾಜ್‌ ಕುಮಾರ್. ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರು. ಡಾ. ರಾಜ್‌ ಪಕ್ಷಾತೀತವಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಸಿನೇಮಾ ಕ್ಷೇತ್ರದ ಜೊತೆಜೊತೆಗೆ ರಾಜ್‌ ಕನ್ನಡದ ನಾಡು ನುಡಿ, ಜಲಕ್ಕಾಗಿ ಕೆಲಸ ಮಾಡಿದ್ದರು. ಕನ್ನಡದ ಉಳಿವು ಮತ್ತು ಬಳಕೆಯ ಆಶಯದ ಬಗ್ಗೆ ತಮ್ಮ ನಿಲುವಿನಲ್ಲಿ ಅವರಲ್ಲಿ ಸ್ಪಷ್ಟತೆ ಇತ್ತು. ಮತ್ತು ನೆರೆಯ ರಾಜ್ಯಗಳೊಂದಿಗೆ ಕಾವೇರಿ ನೀರು ಹಂಚಿಕೆಯ ವಿಷಯ ಬಂದಾಗ ಕರ್ನಾಟಕದ ಹಿತಾಸಕ್ತಿಗೆ ಪರವಾಗಿ ದುಡಿದ್ದರು. ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟವಾಗಲಿ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲುವುದಾಗಲಿ, ಯಾವುದೇ ರಾಜಕೀಯ ನಾಯಕರಿಗೆ ಪರೋಕ್ಷವಾಗಲಿ ಅಥವಾ ಪ್ರತ್ಯಕ್ಷವಾಗಲಿ ಬೆಂಬಲ ಸೂಚಿಸುವುದಾಗಲಿ, ಚುನಾವಣಾ ಪ್ರಚಾರಗಳಲ್ಲಿ ಎಂದೂ ಭಾಗಿಯಾದವರಲ್ಲ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ರಾಜಕೀಯಕ್ಕೆ ಪ್ರವೇಶಿಸಿದ್ದರೇ ರಾಜ್ಯದ ಯಾವುದೇ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದರೂ, ಯಾವುದೇ ಪಕ್ಷದಿಂದಲೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಗೆಲ್ಲಬಹುದಿತ್ತು. ಇನ್ನು, ಅವರ ಮೂವರು ಪುತ್ರರು ಕೂಡ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಹಿರಿಯ ಮಗ ಶಿವ ರಾಜ್‌ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ವಿವಾಹವಾದರು. ರಾಜ್‌ ಕುಟುಂಬಕ್ಕೆ ಶಿವ ರಾಜ್‌ ಕುಮಾರ್‌ ವಿವಾಹದಿಂದಾಗಿ, ರಾಜಕೀಯದ ಸ್ಪರ್ಶ ಹೊಂದಿತ್ತಾದರೂ, ಡಾ. ರಾಜ್‌ ಆಗಲಿ, ಅವರ ಮಕ್ಕಳಾಗಲಿ ರಾಜಕೀಯ ಪ್ರವೇಶವನ್ನು ಬಯಸಲಿಲ್ಲ ಎನ್ನುವುದು ಗಮನಾರ್ಹ ವಿಚಾರ. 

ಕನ್ನಡದ ಮತ್ತೊಬ್ಬ ಸೂಪರ್‌ ಸ್ಟಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರಾದರೂ, ಅವರು ಕೂಡ ರಾಜಕೀಯ ಮತ್ತು ರಾಜಕೀಯ ಪಕ್ಷಗಳಿಂದ ದೂರವಿದ್ದರು.

ಕರ್ನಾಟಕದ ಇತರ ನಟರು ರಾಜ್ಯದಲ್ಲಿ ರಾಜಕೀಯ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಖಂಡಿತವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಹಾಗೆ ಅವರ ಉದ್ಯಮದ ಸಹೋದ್ಯೋಗಿಗಳ ಪ್ರಭಾವದಿಂದ ಅಲ್ಲ.

ಇತ್ತೀಚೆಗಷ್ಟೆ ರಾಜಕೀಯದ ನೀರಲ್ಲಿ ಮುಳುಗಿರುವ ಸ್ಟಾರ್  ನಟ ಕಿಚ್ಚ ಸುದೀಪ್, ಇಂದು ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬಿಜೆಪಿ ಪ್ರಚಾರಕ್ಕೆ ಅವರ ಬೆಂಬಲದ ಘೋಷಣೆ ಹಲವು ಮೂಲಗಳಿಂದ ಬಂದಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಅಂತಿಮವಾಗಿ ಅವರೇ ಖುದ್ದಾಗಿ ಅವರ ಪ್ರೀತಿಯ ಮಾಮಾ ಬೊಮ್ಮಾಯಿ ಅವರು ಹೇಳಿದೆಡೆ ಪ್ರಚಾರ ಮಾಡುವುದಾಗಿ ಘೋಷಿಸಿದರು. ಅವರ ಮೇಲಿನ ಅಭಿಮಾನಕ್ಕಾಗಿ ಹೊರತು ಹಣಕ್ಕಾಗಿ ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದರು. ಐಟಿ ದಾಳಿಗೆ ಹೆದರಿ ಸುದೀಪ್‌ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂಬ ಚರ್ಚೆಯೂ ರಾಜಕೀಯದಲ್ಲಿ ಸೃಷ್ಟಿಯಾಯಿತು (೨೦೧೯ರ ಜನವರಿಯಲ್ಲಿ ಸುದೀಪ್‌ ಮನೆ ಮೇಲೆ ಐಟಿ ದಾಳಿ ನಡೆಸಿತ್ತು). ಇನ್ನು, ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನು ಸುದೀಪ್‌ ಭೇಟಿ ಮಾಡಿದಾಗ ಸುದೀಪ್‌ ಈ ಬಾರಿ ಕಾಂಗ್ರೆಸ್‌ ಪರ ಪ್ರಚಾರ ಮಾಡಬಹುದೇನೋ ಎಂಬ ಚರ್ಚೆಯಾಗಿತ್ತು. ಮಾತ್ರವಲ್ಲದೇ, ಸುದೀಪ್‌ ೨೦೧೮ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು, ಅಂದು ಕೂಡ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ಗೌರವಕ್ಕಾಗಿ ಪ್ರಚಾರ ಮಾಡಲು ಒಪ್ಪಿದ್ದೇನೆ, ಹಣಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದರು ಸುದೀಪ್.    

ಸುದೀಪ್ ಎಷ್ಟೇ ಪ್ರೀತಿ, ಗೌರವ, ಅಭಿಮಾನದಿಂದಷ್ಟೇ ಪ್ರಚಾರ ಮಾಡುತ್ತಿದ್ದೇನೆ ಅಂದರೂ ಅದರ ಹಿಂದೆ ಬೇರೆ ವಿಷಯವೇ ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದಂತೂ ಸತ್ಯ, ಸುದೀಪ್‌ ಪೂರ್ಣ ಮನಸ್ಸಿನಿಂದ ಯಾವ ಪಕ್ಷವನ್ನು ಒಪ್ಪಿದಂತೆ ಕಾಣಿಸುತ್ತಿಲ್ಲ. 

೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಜಿಏಫ್ ಖ್ಯಾತಿಯ ಯಶ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡಿದರು. ಅಭ್ಯರ್ಥಿಯೇ ಮುಖ್ಯ, ಪಕ್ಷವಲ್ಲ ಎಂದು 'ರಾಕಿಂಗ್ ಸ್ಟಾರ್' ಹೇಳಿದ್ದರು. ಇದು ಮತ್ತೊಂದು ಥರದಲ್ಲಿ ಚರ್ಚೆಯಾಗಿತ್ತು.  

ನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು. ೨೦೧೯ ರಲ್ಲಿ ಚುನಾಯಿತರಾದಾಗ, ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ ನಿಂದ ಪಕ್ಷ ಸೇರ್ಪಡೆಗೆ ಪ್ರಯತ್ನಗಳು ಅಂದು ನಡೆದಿತ್ತಾದರೂ ಸುಮಲತಾ ಒಪ್ಪಿರಲಿಲ್ಲ. ಅದೇನೇ ಇದ್ದರೂ, ಅವರ ಪತಿ, 'ರೆಬೆಲ್ ಸ್ಟಾರ್' ಅಂಬರೀಶ್, ಬಹುಶಃ ಕನ್ನಡ ಚಲನಚಿತ್ರ ತಾರೆಯರಲ್ಲಿ ಮಹತ್ವದ ರಾಜಕೀಯ ವೃತ್ತಿಜೀವನವನ್ನು ಹೊಂದಿರುವ ದೊಡ್ಡ ಹೆಸರು. ಅಂಬರೀಶ್ ಅವರು ಕಾಂಗ್ರೆಸ್ ಮತ್ತು ಜನತಾದಳದೊಂದಿಗೆ ರಾಜಕೀಯದಲ್ಲಿದ್ದು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು ಮತ್ತು ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ (೨೦೧೩) ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು. 

ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಅನಂತ್ ನಾಗ್ ಅವರು ರಾಜ್ಯದಲ್ಲಿ ಜೆ.ಎಚ್.ಪಟೇಲ್ ಅವರ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೇ, ಈಗ ಅನಂತ ನಾಗ್‌ ರಾಜಕೀಯದ ಸಿದ್ಧಾಂತ ಬದಲಾಯಿಸಿಕೊಂಡಿದ್ದು, ನೇರನೇರವಾಗಿ ತಾವು ಮೋದಿ ಮತ್ತು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿಕೊಳ್ಳುತ್ತಾರೆ. 

ಇತ್ತೀಚೆಗಿನ ವರ್ಷಗಳಲ್ಲಿ, ಹಲವು ಇತರ ನಟರು ವಿವಿಧ ಹಂತದ ಯಶಸ್ಸಿನೊಂದಿಗೆ ರಾಜ್ಯದಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದಾರೆ - 'ಮುಖ್ಯಮಂತ್ರಿ' ಚಂದ್ರು, ಉಮಾಶ್ರೀ ಮತ್ತು ಕುಮಾರ್ ಬಂಗಾರಪ್ಪ (ಎಸ್ ಬಂಗಾರಪ್ಪ ಅವರ ಪುತ್ರ), ನಿಖಿಲ್ ಕುಮಾರ್‌ ಸ್ವಾಮಿ ( ಅವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದರು - ಸುಮಲತಾ ವಿರುದ್ಧ ಸೋತರು) ಮಂಡ್ಯದ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ), ಉಪೇಂದ್ರ ( ಅವರು ರಾಜಕೀಯ ಎಂದು ಹೇಳಿಕೊಳ್ಳುವುದಕ್ಕೆ ತಯಾರಿಲ್ಲದಿದ್ದರೂ ಒಂದು ರೀತಿಯಲ್ಲಿ ಅವರದ್ದು ʼಪ್ರಜಾಕೀಯʼದ ಮೂಲಕ ರಾಜಕೀಯ ಪ್ರವೇಶವೇ ಹೌದು ಅಂತಂದುಕೊಳ್ಳಬಹುದು)  ಹಾಗೂ ಇನ್ನಿತರ ಪ್ರಮುಖರನ್ನು ಕಾಣಬಹುದು.     

ಒಟ್ಟಾರೆಯಾಗಿ, ಚಲನಚಿತ್ರ ತಾರೆಯರು ರಾಜಕೀಯ ಪ್ರವೇಶಿಸಿದಾಗ ಒಂದಿಷ್ಟು ಕುತೂಹಲ ರಾಜಕೀಯವಾಗಿ ಸೃಷ್ಟಿಯಾಗುವುದು ಸಹಜ. ಸುದೀಪ್‌ ಈ ಚುನಾವಣೆಯಲ್ಲಿ ಸುದ್ದಿಯಲ್ಲಿದ್ದಾರೆ. ಸುದೀಪ್‌ ರಿಂದ ಏನು ರಾಜಕೀಯವಾಗಿ ಬದಲಾಗಬಹುದು..? ಬಿಜೆಪಿಗೆ ಲಾಭವೇ ನಷ್ಟವೇ..? ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ