ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗಿಲ್ಲ ಜನಮತ । ಸರ್ಕಾರ ಬದಲಾವಣೆ ಬಯಸಿದ ಕರ್ನಾಟಕ
ಎಲ್ಲಾ ರಾಜಕೀಯ ಪಕ್ಷಗಳ ಕನಸು, ಭರವಸೆ, ಆಶ್ವಾಸನೆ, ಜನಾಭಿಮತದ ಮೂಲಕ ಸದ್ಯ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಈಗ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ಜೆಡಿಎಸ್ ನ ಹೊರತಾಗಿ ಕಾಂಗ್ರೆಸ್ ಅಥವಾ ಬಿಜೆಪಿಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ ಹಿಡಿದರೂ ಕೂಡ ಯಾರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲಭರಿತವಾದಂತಹ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಜಾತಿ ಲೆಕ್ಕಾಚಾರದಲ್ಲಿ, ಅನುಭವದ ಆಧಾರದಲ್ಲಿ, ವಯಸ್ಸಿನ ಕಾರಣದಲ್ಲಿ, ರಾಜಕೀಯ ವರ್ಚಸ್ಸು ಮತ್ತು ರಾಜ್ಯ ರಾಜಕಾರಣದಲ್ಲಿ ಬೆಳೆಸಿಕೊಂಡ ಪ್ರಭಾವದಲ್ಲಿ ಈ ಹಿಂದೆ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮತ್ತೊಂದಿಷ್ಟು ವಿವಾದಗಳೂ ಆಗಿದ್ದಿವೆ. ಕಾಂಗ್ರೆಸ್ ನಲ್ಲಂತೂ ಈ ಬಗ್ಗೆ ಸಣ್ಣ ಬಣ ಸೃಷ್ಟಿಯಾಗಿ, ಚುನಾವಣೆಯ ದೃಷ್ಟಿಯಲ್ಲಿ ಅದು ಸ್ವಲ್ಪ ಮರೆವೆಗೆ ಸಂದಿದೆ. ಈ ಹಿನ್ನೆಲೆಯಲ್ಲಿ ಈಗ ಸದ್ಯಕ್ಕೆ ಒಂದು ಸಮೀಕ್ಷೆ ಹೊರಬಂದಿದ್ದು, ಅದರ ಬಗ್ಗೆ ಚರ್ಚೆ ಆರಂಭವಾಗಿದೆ.
ರಾಷ್ಟ್ರೀಯ ಸುದ್ದಿವಾಹಿನಿ ಎನ್ ಡಿ ಟಿವಿ ವಿಶೇಷ ಸಮೀಕ್ಷೆ ಹಾಗೂ ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತ ಎಂಬ ದೃಷ್ಟಿಕೋನದಲ್ಲಿ ನಡೆಸಲಾದ "ಪಬ್ಲಿಕ್ ಒಪಿನಿಯನ್" ಸಮೀಕ್ಷೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಜನಪ್ರಿಯತೆ ಇದ್ದು, ಹಾಲಿ ಮುಖ್ಯಮಂತ್ರಿ ಬಸಸವರಾಜ್ ಬೊಮ್ಮಾಯಿ ಆಡಳಿತದ ಬಗ್ಗೆ ಜನ ಅಷ್ಟಾಗಿ ತೃಪ್ತರಾಗಿಲ್ಲ ಎಂಬ ವರದಿ ಹೊರಬಂದಿದ್ದು ರಾಜಕೀಯ ವಲಯದಲ್ಲಿ ಹೊಸ ದಿಕ್ಕಿನೆಡೆಗೆ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ.
ಮೇ ೧೦ ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಮೂರು ದಿನಗಳ ನಂತರ ಬರಲಿರುವ ಫಲಿತಾಂಶಕ್ಕೂ ಮುನ್ನ ಈ ಬಗ್ಗೆ ವ್ಯಾಪಕವಾದ ಚರ್ಚೆ ಹುಟ್ಟಿಕೊಂಡಿದ್ದು, ಕರ್ನಾಟಕದಲ್ಲಿ ಸಾರ್ವಜನಿಕರ ಚಿತ್ತ ಎತ್ತ ಕಡೆಯಿದೆ ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಅಳೆಯಲು ಸಮೀಕ್ಷೆಯು ಪ್ರಯತ್ನಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಿರಿಯ ಮತದಾರರಲ್ಲಿ ಸ್ವಲ್ಪ ಹೆಚ್ಚು ಜನಪ್ರಿಯರಾಗಿದ್ದಾರೆ, ಬಸವರಾಜ್ ಬೊಮ್ಮಾಯಿ ಅವರನ್ನು ಕಿರಿಯ ಮತದಾರರು ಬಿಜೆಪಿ ಎನ್ನುವ ಕಾರಣಕ್ಕೆ ಆದ್ಯತೆ ನೀಡಿ ಅವರ ಪರವಾಗಿ ಒಲವು ತೋರಿಸಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಜನತಾದಳ ಸೆಕ್ಯುಲರ್ (ಜೆಡಿಎಸ್) ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೂರನೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ನ ಮತ್ತೋರ್ವ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಂತರದ ಸ್ಥಾನದಲ್ಲಿದ್ದಾರೆ.
ರಾಜ್ಯದಲ್ಲಿ ಬರೋಬ್ಬರಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿ, ಒಂದು ಅವಧಿಯನ್ನು ಕೂಡ ಪೂರ್ಣಗೊಳಿಸದ ಬಿಜೆಪಿಯ ಹಿರಿಯ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡುವುದಕ್ಕೆ ಜನ ಅಷ್ಟರ ಮಟ್ಟಿಗೆ ಒಪ್ಪದೇ ಇರುವುದು ಆಶ್ಚರ್ಯಕರವಾಗಿದೆ. ಸಮೀಕ್ಷೆ ಹೇಳುವ ಪ್ರಕಾರ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಕೇವಲ ಶೇಕಡಾ ೫ರಷ್ಟು ಮಂದಿ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತವೆಂಬ ಇಂಗಿತ ವ್ಯಕ್ತಪಡಿಸಿದ್ದಾರೆಂಬುವುದು ತಿಳಿದು ಬಂದಿದೆ. ಒಂದೆಡೆ ಬಿಜೆಪಿ ರಾಜ್ಯದಲ್ಲಿ ಯಡಿಯೂರಪ್ಪರನ್ನು ಪ್ರಶ್ನಾತೀತ ನಾಯಕ ಎಂಬಂತೆಲ್ಲಾ ಬಿಂಬಿಸಿ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೇ, ಯಡಿಯೂರಪ್ಪರ ಪರವಾಗಿ ಸಮೀಕ್ಷೆಯಲ್ಲಿ ಇಂತದ್ದೊಂದು ವರದಿ ಹೊರ ಬಂದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಭ್ರಷ್ಟಾಚಾರದ ಆರೋಪ, ವಯಸ್ಸಿನ ಕಾರಣಗಳ ನಡುವೆ ೨೦೨೧ ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರನ್ನು ಹುದ್ದೆಯಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಯಡಿಯೂರಪ್ಪ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ತಮ್ಮ ಕ್ಷೇತ್ರವನ್ನು ಮಗ ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಯಡಿಯೂರಪ್ಪರ ಮೇಲೆ ಈಗ ರಾಜ್ಯ ವಿಧಾನ ಸಭಾ ಚುನಾವಣಾ ಗೆಲುವಿನ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಹೊರಿಸಿದೆ. ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೇ, ನಿಸ್ಸಂಶಯವಾಗಿ ಮೋದಿ ರೋಡ್ ಶೋ, ಪಾಲಿಟಿಕಲ್ ಕ್ಯಾಂಪೆನ್ ಗಳಿಗೆ ಜೈಕಾರ ಸಲ್ಲುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಯಡಿಯೂರಪ್ಪರ ಮೇಲೆ ಕಟ್ಟುವುದು ಬಿಜೆಪಿಯ ಹಿಡೆನ್ ಅಜೆಂಡಾ. ಸೋತರೇ, ಯಾವುದೇ ಮುಲಾಜಿಲ್ಲದೇ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿಬಿಡಬಹುದು ಎಂಬುವುದು ಬಿಜೆಪಿ ಹೈಕಮಾಂಡ್ ನ ಲೆಕ್ಕಾಚಾರ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು (೫೬%) ಮತ್ತು ೩೮% ರಷ್ಟು ಮಂದಿ ಪಕ್ಷಕ್ಕಿಂತ ಕ್ಷೇತ್ರದಲ್ಲಿನ ಉತ್ತಮ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಹೇಳಿದರು. ಶೇಕಡಾ ೪ ರಷ್ಟು ಮಂದಿ ಮಾತ್ರ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ರಾಜಕೀಯ ವರ್ಚಸ್ಸು ನೋಡಿಕೊಂಡು ಮತ ಹಾಕುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಅಥವಾ ಜೆಡಿಎಸ್ ಅನ್ನು ಬೆಂಬಲಿಸುವ ಮತದಾರರು ಹೆಚ್ಚಾಗಿ ಪಕ್ಷವನ್ನು ದೊಡ್ಡ ಅಂಶವೆಂದು ಪರಿಗಣಿಸುತ್ತಾರೆ. ಆದರೆ ಈ ವಿಷಯದಲ್ಲಿ ಬಿಜೆಪಿ ಮತದಾರರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಪಕ್ಷಕ್ಕಿಂತ ಹೆಚ್ಚಾಗಿ ʼಹಿಂದುತ್ವʼ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪರವಾಗಿ ಇರುವ ಮತದಾರರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ, ಹಿಂದೂ ಧರ್ಮ ರಕ್ಷಣೆಯಾಗುತ್ತದೆ, ಬಿಜೆಪಿ ಹೊರತಾಗಿ ಉಳಿದ ಯಾವುದೇ ಪಕ್ಷ ಅಧಿಕಾರಕ್ಕೇರಿದರೇ ಹಿಂದೂ ಧರ್ಮದ ವಿರುದ್ಧ ಆಡಳಿತ ಇರುತ್ತದೆ ಎಂಬ ಒಂದು ಪೂರ್ವಾಗ್ರಹದ ಅಭಿಪ್ರಾಯವಿದೆ. ಇನ್ನು, ಪ್ರಮುಖ ಮೆಟ್ರಿಕ್‌ಗಳ ಬಗ್ಗೆ ಮತದಾರರ ಗ್ರಹಿಕೆಗೆ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಹೆಚ್ಚು ಪ್ರತಿಕ್ರಿಯಿಸಿದವರು (೫೯%) ಬಿಜೆಪಿಯನ್ನು ಕಾಂಗ್ರೆಸ್ (೩೫%) ಮತ್ತು ಜೆಡಿಎಸ್ (೩%) ಗಿಂತ ಹೆಚ್ಚು ಭ್ರಷ್ಟ ಸರ್ಕಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷಗಳ ಐಟಿ ಸೆಲ್ ಗಳು ಎಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇನ್ನಿತರ ಪ್ಲಾಟ್ ಫಾರ್ಮ್ ಗಳಲ್ಲಿ ತಮಗೆ ಬೇಕಾದ ಹಾಗೆ ಪ್ರಚಾರ ಗಿಟ್ಟಿಸಿಕೊಳ್ಳಬಹುದು, ಅಂತಿಮವಾಗಿ ಜನರ ತೀರ್ಪಿಗೆ ತಲೆ ಬಾಗಲೇಬೇಕು ಎಂಬುವುದಕ್ಕೆ ಇದೊಂದೇ ಉದಾಹರಣೆ ಸಾಕು.
ಕುಟುಂಬ ರಾಜಕಾರಣದ ವಿರುದ್ಧ ರಾಷ್ಟ್ರವ್ಯಾಪಿ ಹರಿಹಾಯ್ದ, ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು ಈ ವಿಚಾರದಲ್ಲಿ ಎಂದಿಗೂ ಟೀಕೆ ಮಾಡುತ್ತಿದ್ದ ಪಕ್ಷಕ್ಕೆ ಅನಿರೀಕ್ಷಿತವಾಗಿ, ಸ್ವಜನಪಕ್ಷಪಾತದ ವಿಚಾರದಲ್ಲಿ ಬಿಜೆಪಿಯು (೫೯%) ಕಾಂಗ್ರೆಸ್ (೩೦%) ಮತ್ತು ಜೆಡಿಎಸ್ (೮%) ಗಿಂತ ಅಗ್ರಸ್ಥಾನದಲ್ಲಿದೆ ಎಂದು ಈ ಸಮೀಕ್ಷೆ ತಿಳಿಸುತ್ತದೆ. ಮಾತ್ರವಲ್ಲದೇ, ಗುಂಪುಗಾರಿಕೆ ಅಥವಾ ಬಣ ರಾಜಕೀಯದಲ್ಲಿಯೂ ಬಿಜೆಪಿ (೫೫%) ಕಾಂಗ್ರೆಸ್ (೩೦%) ಮತ್ತು ಜೆಡಿಎಸ್ (೧೨%) ಗಿಂತ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ.
ಇನ್ನು, ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್ ಗೆ ೪೭%, ಬಿಜೆಪಿಗೆ ೩೭% ಮತ್ತು ಜೆಡಿಎಸ್ ಗೆ ೧೪% ಜನರು ಬೆಸ್ಟ್ ಎಂದಿದ್ದಾರೆ ಮತ್ತು ಕೋಮು ಸೌಹಾರ್ದತೆ ಕಾಪಾಡುವಲ್ಲಿ ಕಾಂಗ್ರೆಸ್ ೪೯% , ಬಿಜೆಪಿಗೆ ೩೪% ಮತ್ತು ಜೆಡಿಎಸ್ ಗೆ ೧೪% ರಷ್ಟು ಮಂದಿ ಅತ್ಯುತ್ತಮ ಎಂದು ಶ್ರೇಯಾಂಕ ನೀಡಿದ್ದಾರೆ.ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ನಿಭಾಯಿಸುವಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ರೇಟಿಂಗ್ (೪೦%) ಹಂಚಿಕೊಳ್ಳುತ್ತವೆ ಮತ್ತು ಜೆಡಿಎಸ್ ಗೆ ೧೪% ರಷ್ಟು ಜನ ಬೆಸ್ಟ್ ಎಂದಿದ್ದಾರೆ.
ಇನ್ನು, ರಾಜ್ಯದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಮತಗಳು ಮೂರು ಪಕ್ಷಗಳಿಗೆ ಎಷ್ಟರಮಟ್ಟಿಗೆ ವಿಭಜನೆಯಾಗಿ ಹೋಗಲಿದೆ ಎಂಬ ವಿಚಾರದ ಬಗ್ಗೆಯೂ ತಿಳಿಯಲು ಪ್ರಯತ್ನಿಸಿದ್ದು,
ಶೇಕಡಾ ೩೪ರಷ್ಟು ಒಕ್ಕಲಿಗರು ಕಾಂಗ್ರೆಸ್ ಗೆ ಮತ ಹಾಕುತ್ತೇವೆ ಎಂದರೇ, ಶೇ. ೩೬ರಷ್ಟು ಒಕ್ಕಲಿಗ ಮತದಾರರು ಜೆಡಿಎಸ್ ಪರ ಒಲವು ತೋರಿದ್ದಾರೆ, ಶೇಕಡಾ ೬೭ರಷ್ಟು ಲಿಂಗಾಯತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದರೇ, ಶೇಕಡಾ ೫೯ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ ಗೆ ಬೆಂಬಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಚರ್ಚೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಕೆಳ ವರ್ಗದ ಮತದಾರರು ಬಿಜೆಪಿಗಿಂತ (೨೩%) ಕಾಂಗ್ರೆಸ್ ಗೆ ಹೆಚ್ಚು (೫೦%) ಒಲವು ತೋರಿಸಿದ್ದನ್ನು ಮತ್ತು ಮೇಲ್ವರ್ಗದ ಮತದಾರರು ಸಹಜವೆಂಬಂತೆ ಧಾರ್ಮಿಕ ಭಾವನೆ, ಹಿಂದುತ್ವದ ಆಧಾರದಲ್ಲಿ ಕಾಂಗ್ರೆಸ್ (೩೧%) ಗಿಂತ ಬಿಜೆಪಿ (೪೬%) ಹೆಚ್ಚು ಒಲವು ತೋರಿರುವುದನ್ನು ಈ ಸಮೀಕ್ಷೆಯಲ್ಲಿ ಕಾಣಬಹುದಾಗಿದೆ.
ಒಟ್ಟಿನಲ್ಲಿ, ರಾಜ್ಯದ ಜನ ಒಂದಿಷ್ಟು ಬದಲಾವಣೆ ಬಯಸಿದ್ದಾರೆ ಎಂಬುವುದನ್ನು ಈ ಸಮೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಇನ್ನು, ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರುವ ಮತದಾರರ ಒಲವು ಯಾರ ಕಡೆ ಇದೆ ಎನ್ನುವುದು ಗೊತ್ತಿಲ್ಲ. ಒಂದಿಷ್ಟು ಜಿದ್ದಾಜಿದ್ದಿನ ಹೋರಾಟವಂತೂ ಹಿಂದೆಂದಿಗಿಂತಲೂ ಈ ಬಾರಿ ಸೃಷ್ಟಿಯಾಗಿದೆ. ಏನಾಗಲಿದೆ ಎನ್ನುವುದು ಸದ್ಯದ ಕುತೂಹಲ. ಕಾದು ನೋಡೋಣ. ಏನ್ ಅಂತೀರಿ ..?
-ಶ್ರೀರಾಜ್ ವಕ್ವಾಡಿ

No comments:
Post a Comment