ಮ್ಯಾಜಿಕ್ ಫಿಗರ್ ಸಾಧಿಸಲು ಪಕ್ಷಾಂತರ ಮಾಡುವವರಿಗೆ ಫುಲ್ ಡಿಮ್ಯಾಂಡ್.!
ರಾಜ್ಯ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಇಟ್ಟಾಗಿದೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ರಾಜಕೀಯ ಪಕ್ಷಗಳು ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಬಹುತೇಕ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ. ಈಗಾಗಲೇ ಹಠಾತ್ತನೆ ಬಣ್ಣ ಬದಲಾಯಿಸಿಕೊಂಡು, ನೆಲೆ ಬದಲಾಯಿಸಿಕೊಂಡು ತಮ್ಮೆಡೆಗೆ ಬಂದ ಪ್ರಭಾವಿ ನಾಯಕರುಗಳನ್ನು ಎಲ್ಲಾ ಪಕ್ಷಗಳು ಸ್ವಾಗತಿಸುತ್ತಿವೆ. ಇದು ಎಲ್ಲಾ ರಾಜ್ಯಗಳ, ಎಲ್ಲಾ ಚುನಾವಣೆಗಳಲ್ಲಿ ಸಹಜವೇ ಆಗಿದ್ದರೂ, ಕರ್ನಾಟಕದ ವಿಚಾರದಲ್ಲಿ ಮಾತ್ರ ಹೆಚ್ಚು ಗಮನಾರ್ಹ ವಿಚಾರವಾಗಿದೆ.
ಪಕ್ಷಾಂತರದ ವಿಷ್ಯ : ಈ ಪಕ್ಷಾಂತರ ಮಾಡುವವರಲ್ಲಿಯೂ ಎರಡು ಮೂರು ವಿಧಗಳಿವೆ. ಪಕ್ಷ ತಮಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರಾಕರಿಸಬಹುದು ಎಂಬ ಕಾರಣಕ್ಕೆ, ಇನ್ನೊಂದು ಪಕ್ಷದಿಂದ ಟಿಕೆಟ್ ನೀಡುವ ಭರವಸೆ ಕೊಟ್ಟ ಕಾರಣಕ್ಕೆ ಪಕ್ಷಾಂತರ ಮಾಡುವವರು, ಪಕ್ಷದೊಳಗಿನ ಬಣಗಳ ಪೈಪೋಟಿಯಿಂದ ಬೇಸತ್ತುಅಥವಾ ರಾಜ್ಯ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದ ಪರಿಣಾಮದಿಂದಾಗಿ ಪಕ್ಷ ಬದಲಿಸುವ ನಿರ್ಧಾರಕ್ಕೆ ಬರುವುದು, ಮೂರನೇಯದು, ಪಕ್ಷದ ಬೆಳವಣಿಗೆ ಹಿತವೆನ್ನಿಸದೇ ಇರುವಾಗ ಪಕ್ಷ ತೊರೆಯುವ ನಿರ್ಧಾರಕ್ಕೂ ಬರಬಹುದು. ಇವೆಲ್ಲವೂ ಕೂಡ ವೈಯಕ್ತಿಕ ಲಾಭದ ಉದ್ದೇಶವೇ ಆಗಿರಲಿದೆ ಎನ್ನುವುದು ಮುಖ್ಯಾಂಶ. ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದಾಗ ಮತ್ತು ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಬೇರೆ ಯಾವುದಾದರೂ ಪಕ್ಷದೊಂದಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸುವುದಕ್ಕಾಗಿ ಪಕ್ಷಾಂತರ ಮಾಡುವ ಮತ್ತೊಂದು ಅಂಶವೂ ಕೂಡ ಇದೆ. ಇದು ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.
ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಆದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಪ್ರಮುಖ ಸಾಕ್ಷಿಗಳಲ್ಲೊಂದು. ೨೦೧೮ರಲ್ಲಿ ಅತಿ ಹೆಚ್ಚು ಸ್ಥಾನಗಳನ್ನು(೧೦೪) ಗಳಿಸಿದ ಪಕ್ಷವೆಂದು ಬಿಜೆಪಿ ಹೊರಹೊಮ್ಮಿದರೂ ಕೂಡ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ಬಿಜೆಪಿ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಆದರೇ ೨೦೧೯ರಲ್ಲಿ ಆದ ರಾಜಕೀಯ ಹೈಡ್ರಾಮ, ಪ್ರಮುಖ ನಾಯಕರ ರಾಜೀನಾಮೆ ಪರ್ವ, ಪಕ್ಷಾಂತರ, ನಾಯಕರ ಅನರ್ಹತೆಯ ಹೈಡ್ರಾಮ, ಉಪ ಚುನಾವಣೆಗಳು ರಾಜ್ಯ ರಾಜಕಾರಣದ ಒಂದು ನೋಟವನ್ನೇ ಬದಲಾಯಿಸಿ ಬಿಟ್ಟಿತು. ಬಹುಮತ ಗಳಿಸಲು ಸಾಧ್ಯವಾಗದ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಸರ್ಕಾರದಲ್ಲಿ ಬೇಸತ್ತ ಬಂಡಾಯಗಾರರ ಬೆಂಬಲದೊಂದಿಗೆ ಅಧಿಕಾಕ್ಕೇರಿತು. ರಾಜ್ಯ ರಾಜಕಾರಣದಲ್ಲಿ ಇದು ಇತ್ತೀಚೆಗಂತೂ ತೀರಾ ಸಾಮಾನ್ಯದಂತಾಗಿ ಬಿಟ್ಟಿದೆ. ರಾಜ್ಯ ಕ್ಯಾಬಿನೆಟ್ ನ ಮೂರನೇ ಒಂದು ಭಾಗದಷ್ಟು ಜನ ಮೊದಲು ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಗಳಾಗಿ ಆಯ್ಕೆಯಾದ ನಾಯಕರನ್ನು ಒಳಗೊಂಡಿತ್ತು. ನಂತರ ಅವರು ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಅಧಿಕಾರಕ್ಕೇರಿದರು.
ಆಶ್ಚರ್ಯಕರವಾದ ವಿಷಯವೇನೆಂದರೇ, ಜನತಾದಳದಿಂದ ಪಕ್ಷಾಂತರವಾಗಿ ಕಾಂಗ್ರೆಸ್ ಗೆ ಸೇರಿಕೊಂಡ ಸಿದ್ದರಾಮಯ್ಯ ಕಾಂಗ್ರೆಸ್ ನ ಅಧಿಕಾರಾವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದರು, ಮತ್ತು ಬಿಜೆಪಿಗೆ ಸೇರಿಕೊಂಡ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜೀನಾಮೆಯ ಫಲದಿಂದಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಕ್ಷಾಂತರವಾಗಿ ಬಂದವರು ಮುಖ್ಯಮಂತ್ರಿ ಸ್ಥಾನವನ್ನೂ ಏರಿದ ಉದಾಹರಣೆ ಈ ರಾಜ್ಯದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ.
ಇನ್ನೂ ಕೆಲವು ಡೇಟಾ ಪಾಯಿಂಟ್ ಗಳು ಹೇಳುವ ಪ್ರಕಾರ, ಕರ್ನಾಟಕ ವಿಧಾನ ಸಭೆಯ ಪ್ರತಿ ಆರು ಶಾಸಕರಲ್ಲಿ ಒಬ್ಬರು ತಮ್ಮ ಚುನಾವಣಾ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷದ ಟಿಕೆಟ್ ಗಳಲ್ಲಿ ಚುನಾಯಿತರಾಗಿದ್ದಾರೆ. ಪ್ರಸ್ತುತ ಬಿಜೆಪಿ ಶಾಸಕರಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು (೧೧೯ ರಲ್ಲಿ ೨೮) ಹಿಂದೆ ಬೇರೆ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹತ್ತು ಪ್ರತಿಶತ ಕಾಂಗ್ರೆಸ್ ಶಾಸಕರು (೭೫ ರಲ್ಲಿ ೭) ಈ ಹಿಂದೆ ಬೇರೆ ರಾಜಕೀಯ ಪಕ್ಷದಿಂದ ಶಾಸಕರಾಗಿದ್ದರು. ಈ ಬೆಳವಣಿಗೆಗಳು ರಾಜಕೀಯ ಪಕ್ಷಗಳು ತೀವ್ರವಾಗಿ ಬಣ ಹೊಂದಿವೆ ಎಂಬ ಅಂಶಕ್ಕೆ ಸಂಬಂಧಿಸಿವೆ ಮತ್ತು ಪ್ರತಿಯೊಬ್ಬ ನಾಯಕನ ನಿರ್ಗಮನವು ಅವರ ಬೆಂಬಲಿಗರ ವಲಸೆಯನ್ನು ಸಹ ಪ್ರಚೋದಿಸುತ್ತದೆ.
೨೦೦೪ ರ ರಾಜ್ಯ ವಿಧಾನ ಸಭಾ ಚುನಾವಣೆಯ ಈಚೆಗಿನ ರಾಜಕೀಯ ಬೆಳವಣಿಗೆಗಳು ಏನೆಲ್ಲಾ ಆಗಿವೆ ಎನ್ನುವುದು ಗೊತ್ತಿರುವ ವಿಷಯ. ಇದೇ ಪಕ್ಷಾಂತರದ ಕಾರಣದಿಂದಾಗಿಯೇ ಯಾವ ಪಕ್ಷವೂ ಬಹುಮತವಿಲ್ಲದೇ ರಾಜಕೀಯದಲ್ಲಿ ಅತಂತ್ರ ಸ್ಥೀತಿ ಸೃಷ್ಟಿಯಾದದ್ದಿದೆ ಮತ್ತು ಕೆಲವು ರಾಜಕೀಯ ಪಕ್ಷಗಳ ಆಂತರಿಕ ಬಿರುಕಿನ ಕಾರಣದಿಂದಾಗಿ, ಪ್ರಭಾವಿ ನಾಯಕರು ಪಕ್ಷ ತೊರೆದು ಹೋದ ಫಲವಾಗಿ ಒಂದು ಪಕ್ಷಕ್ಕೆ ಪೂರ್ಣ ಬಹುಮತ(೨೦೧೩-ಕಾಂಗ್ರೆಸ್) ತಂದುಕೊಟ್ಟ ಉದಾಹರಣೆಯೂ ಇದೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಈ ʼಪಕ್ಷಾಂತರದ ವಿಷ್ಯʼ ಹೆಚ್ಚು ಕುತೂಹಲಕಾರಿಯಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ.
ಗಮನಕ್ಕೆ ಅರ್ಹವಾದ ಮತ್ತೊಂದು ವಾದವಿದೆ. ೨೦೧೯ರಲ್ಲಿ ಉಪಚುನಾವಣೆಗಳು ನಡೆದ ಕ್ಷೇತ್ರಗಳ ಮತದಾರರು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಸ್ಥಿರತೆಯನ್ನು ನೋಡಿದ್ದಾರೆ ಮತ್ತು ಉಳಿದ ಅವಧಿಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಸ್ಪಷ್ಟ ಗೆಲುವನ್ನು ಬಯಸಿರಬಹುದು. ಆದರೂ ರಾಜಕೀಯ ಸ್ಥಿರತೆ ಕೇವಲ ಆಡಳಿತ ಪಕ್ಷದ ಉಳಿವಿಗಾಗಿ ಅಲ್ಲ. ಅದರ ಆಂತರಿಕ ವಿರೋಧಾಭಾಸಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತದೆ ಎಂಬುದರ ಬಗ್ಗೆಯೂ ಆಗಿದೆ ಎನ್ನುವುದು ಇಲ್ಲಿ ಪ್ರಮುಖ ಅಂಶ.
ಒಂದು ಉದಾಹರಣೆಯೊಂದಿಗೆ ವಿವರಿಸುವುದಾದರೇ, ಅವಿಭಕ್ತ ಕುಟುಂಬದಲ್ಲಿ ಹೊಸ ಸೊಸೆ ಮನೆಗೆ ಬಂದರೆ ಎಲ್ಲರ ಗಮನ ಆಕೆ ಸಹಜವಾಗಿ ಸೆಳೆಯುತ್ತಾಳೆ. ಅದು ಆ ಸಂದರ್ಭದ ವಾಸ್ತವತೆ ಕೂಡ. ಈಗಾಗಲೇ ಮನೆಯಲ್ಲಿ ಇರುವ ಸೊಸೆಯಂದಿರ ಕೊಡುಗೆಯನ್ನು ಮರೆಯುವ ಪ್ರವೃತ್ತಿಗೂ ಇದು ಕಾರಣವಾಗಬಹುದು. ಈ ʼಪಕ್ಷಾಂತರದ ವಿಷ್ಯʼ ನೂ ಹೀಗೆಯೇ. ಹೊಸಬರು ಬಂದಾಗ ಮೊದಲಿನಿಂದ ಇದ್ದವರು ಮೂಲೆಗೆ ಸರಿಯುವ ಸಾಧ್ಯತೆ ಹೆಚ್ಚಿದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಭರವಸೆ ಕೊಟ್ಟು ಸೆಳೆದುಕೊಂಡವರಿಗೆ ಪ್ರಾಶಸ್ಯ ನೀಡಲೇ ಬೇಕಾಗಿರುವ ಕಾರಣದಿಂದ ಮೂಲದಿಂದಲೂ ಇದ್ದವರು ಮುನಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದೇ ವಿಷಯ ಪಕ್ಷವನ್ನು ಒಡೆದು ಹಾಕುವಲ್ಲಿಯೂ ಕೆಲಸ ಮಾಡಿದ್ದಿದೆ, ಆಂತರಿಕ ಸ್ವಾಸ್ಥ್ಯ ಕಳೆಯುವಲ್ಲಿ ಕೆಲಸ ಮಾಡಿದ್ದಿದೆ. ದಾರಿಯುದ್ದಕ್ಕೂ ಮಾಡಬೇಕಾದ ಹೊಂದಾಣಿಕೆಗಳನ್ನು ಲೆಕ್ಕಿಸದೆ, ಸರಳ ಬಹುಮತದ ಮ್ಯಾಜಿಕ್ ಫಿಗರ್ ಸಾಧಿಸಲು ಮಾಡಬೇಕಾದ ತಯಾರಿಯಲ್ಲಿ ಎಲ್ಲಾ ಪಕ್ಷಗಳು ಇದರೆಡೆಗೆ ಒಲವು ತೋರಿಸುವುದು ರಾಜಕಾರಣದಲ್ಲಿ ಸಹಜ ವಿಷಯ.
ಮೀಸಲಾತಿ ವಿಷ್ಯ : ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗಿದ್ದ ಶೇಕಡಾ ನಾಲ್ಕು ಮೀಸಲಾತಿಯನ್ನು ತೆಗೆದುಹಾಕಿ ಮತ್ತು ಅವರನ್ನು ಬೇರೆ ಪೂಲ್ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್ ನ ನಿರ್ಧಾರವು ತನ್ನ ಜಾತಿಗಣಿತದ ಮೇಲೆ ಹಿಂದುತ್ವದ ನಿರೂಪಣೆಯನ್ನು ರಚಿಸುವುದು ಬಿಜೆಪಿಯ ನಿರ್ಣಾಯಕ ಪ್ರಯತ್ನವೆನ್ನುವುದರಲ್ಲಿ ಅನುಮಾನವೇ ಇಲ್ಲ. ಮತ ಧ್ರುವೀಕರಣವು ಕರ್ನಾಟಕಕ್ಕೆ ಹೊಸ ವಿಷಯವಲ್ಲ. ಚುನಾವಣೆಯ ಸಂಧರ್ಭಗಳಲ್ಲಿ ಇಲ್ಲಿ ಧಾರ್ಮಿಕ ವಿಚಾರಗಳು, ಜಾತಿ ವಿಚಾರಗಳು ಮತ ಧ್ರಮೀಕರಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈಗೀಗ ಅಂತೂ ಕೋಮು ನಿರೂಪಣೆಯು ಅತ್ಯಂತ ಸರಳ, ವಿರಳವಾದ ಚುನಾವಣೆಯ ವಿಷಯವಾಗಿ ಬಿಟ್ಟಿದೆ. ಈ ಮೀಸಲಾತಿ ವಿಷಯವನ್ನು ಕರ್ನಾಟಕದಲ್ಲಿ ಹಿಂದುತ್ವದ ನಿರೂಪಣೆಯಾಗಿ ಪ್ರಾರಂಭಿಸಲು ಬಿಜೆಪಿ ನಿರ್ಧಾರವನ್ನು ತೆಗೆದುಕೊಂಡಿದೆಯೇ ? ಹಾಗಿದ್ದಲ್ಲಿ, ಯಾಕೆ?
ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಒಬಿಸಿ ಒಕ್ಕಲಿಗ ಜಾತಿ. ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕೃತವಾಗಿರುವ ಎರಡನೇ ಅತಿ ದೊಡ್ಡ ಜನಸಂಖ್ಯೆಯಿರುವ ಸಮುದಾಯ. ಕಳೆದ ಎರಡು ದಶಕಗಳಲ್ಲಿ ಗೌಡ ಕುಟುಂಬ ನೇತೃತ್ವದ ಜೆಡಿಎಸ್ ದೃಢವಾಗಿ ಬಲವರ್ಧನೆಗೊಂಡಿದೆ. ಎರಡನೆಯದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಪ್ರತಿಯಾಗಿ ನಿರ್ಮಿಸಲಾದ ʼಅಹಿಂದʼ ಎಂಬ ಎಲ್ಲಾ ಮತದಾರ ಗುಂಪುಗಳ ಸಮಯ ಪರೀಕ್ಷಿತ ಸಾಮಾಜಿಕ ಒಕ್ಕೂಟ ಬೆಳೆದು ನಿಂತಿದೆ. ಬಿಜೆಪಿಯ ಲಿಂಗಾಯತ ಹಿಡಿತ ಅಥವಾ ಹಳೆಯ ರಾಜಕೀಯ ಅಸ್ತ್ರ ದುರ್ಬಲವಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ನಿರಂತರವಾಗಿ ಅಟ್ಟಕ್ಕೇರಿಸುವ ಪ್ರಯತ್ನದಲ್ಲಿದ್ದಾರೆ. ಅದೇ ಸಮಯದಲ್ಲಿ, ಮೀಸಲಾತಿಯಂತಹ ವಿಷಯ ತನ್ನ ಹಳೆಯ ರಾಜಕೀಯ ಅಸ್ತ್ರವನ್ನು ಬಲಗೊಳ್ಳಿಸಿಕೊಳ್ಳುವ ವಿಚಾರವೇ ಆಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದು ಒಂದು ರೀತಿಯಲ್ಲಿ ಹಳೆಯ ಅಡಿಪಾಯದ ಮೇಲೆ ಹೊಸ ನಿರೂಪಣೆಯಂತಾಗಿದೆ. ಇಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಏನೆಂದರೇ, ಮುಸ್ಲೀಮರ ಮೀಸಲಾತಿ ತೆಗೆದು ಲಿಂಗಾಯತ, ಒಕ್ಕಲಿಗರ ಪಾಲಿಗೆ ಕೊಟ್ಟು ಮೂಗಿಗೆ ತುಪ್ಪಾ ಸುರಿಸುವ ಕೆಲಸ ಮಾಡಿತೇ..?
ಮುಸ್ಲಿಮರಿಗಿದ್ದ ಶೇಕಡ ೪ರಷ್ಟು ಮೀಸಲಾತಿಯನ್ನು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯಗಳೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಮತ್ತು ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡ ಎರಡರಂತೆ ಹಂಚಿಕೆ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಹಾಗಾಗಿ, ಈ ನಿರ್ಧಾರವು ರಾಜಕೀಯವಾಗಿ ಮೂರು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದು ಹಿಂದುತ್ವದ ನಿರೂಪಣೆಯನ್ನು ಸೃಷ್ಟಿಸುವುದು, ಎರಡನೇಯದು ಪಕ್ಷದ ಸಾಂಪ್ರದಾಯಿಕ ವೀರಶೈವ ಲಿಂಗಾಯತ ಮತಗಳನ್ನು ಸಮಾಧಾನಪಡಿಸಿಟ್ಟುಕೊಳ್ಳುವುದು, ಮೂರನೇಯದು ಮತ್ತು ಕೊನೆಯದು ಹಳೇ ಮೈಸೂರು ಭಾಗಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹೋಗುವ ಒಕ್ಕಲಿಗ ಮತಗಳನ್ನು ಒಡೆಯುವುದಾಗಿದೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.
ಈ ಮೀಸಲಾತಿ ಹಂಚಿಕೆಯ ಕಾರಣದಿಂದಾಗಿ ಪರಿಣಾಮಕಾರಿಯಾಗಿ ಮತಗಳು ಬಿಜೆಪಿಯತ್ತ ಸಂಪೂರ್ಣವಾಗಿ ವಾಲುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಇದು ʼಸಮಧಾನದ ಪರಿಹಾರʼ ಎನ್ನುವುದು ಏರಡೂ ಸಮುದಾಯಗಳಿಗೂ ಗೊತ್ತಿದೆ. ಇತ್ತ ಈ ಮೀಸಲಾತಿ ವಿಷಯ ಬಿಜೆಪಿಗೆ ವರದಾನವಾಗಲಿದೆ ಎಂಬ ಚರ್ಚೆಯನ್ನೂ ಅಲ್ಲಗಳೆಯುವಂತಿಲ್ಲ. ಕಾದು ನೋಡೋಣ.
-ಶ್ರೀರಾಜ್ ವಕ್ವಾಡಿ







.jpeg)