Tuesday, October 25, 2022

ಕಾಂಗ್ರೆಸ್ ಚಕ್ರಾಧಿಪತ್ಯಕ್ಕೆ ಮುದಿ ಮುತ್ಸದ್ಧಿ ಸಾರಥಿ

 

ರಾಜಕೀಯ ಅಸ್ತಿತ್ವಕ್ಕಾಗಿ ಖರ್ಗೆ ಕಾಂಗ್ರೆಸ್‌ನ ‘ಅಪ್ಪರ್ ಕ್ಲಾಸ್’ ಮನೋಧೋರಣೆಗೆ ಹೊಂದಿಕೊಂಡಿದ್ದರು..!

ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರೀಯ ಕಾಂಗ್ರೆಸ್ ಪಾಳಯದಲ್ಲಿ ‘ಪ್ರಕಾಶಮಾನವಾಗಿ ಮಿನುಗಲು ಆರಂಭಿಸಿದ ತಾರೆ’. ಕಾಂಗ್ರೆಸ್‌ಗೆ ಅದರಲ್ಲೂ ಗಾಂಧಿ ಕುಟುಂಬದ ಮೇಲೆ ಖರ್ಗೆಯವರಲ್ಲಿ ಇರುವಷ್ಟು ವಿದೇಯತೆ ಕಾಂಗ್ರೆಸ್ ಪಕ್ಷದಲ್ಲಿ ಹಲವರಲ್ಲಿ ಇಲ್ಲ ಎನ್ನುವುದು ಸತ್ಯ. ಹಾಗಾಗಿಯೇ ಸೋನಿಯಾ ಗಾಂಧಿಗೆ ಮಲ್ಲಿಕಾರ್ಜುನ ಖರ್ಗೆಯವರೇ ಅಧ್ಯಕ್ಷರಾದರೆ ಒಳ್ಳೆಯದಾಗಿತ್ತು. ಮತ್ತು ಈಗ ಸೋನಿಯಾ ಗಾಂಧಿಯವರ ಆ ಸಂಕಲ್ಪ ಈಡೇರಿದೆ. 

ಕಾಂಗ್ರೆಸ್ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿದ ಆದಿಯಿಂದ ಕಾಂಗ್ರೆಸ್ ಬಳಗದಲ್ಲಿ ಗಾಂಧಿ ಕುಟುಂಬದ ಆಪ್ತ ಬಳಗದದಲ್ಲಿ ಒಬ್ಬನಾಗಿ, ಆಪ್ತ ಬಂಧುವಾಗಿ, ಹಿರಿಯ ನಾಯಕರಾಗಿ, ಅನುಭವಿಯಾಗಿ, ಕಾಂಗ್ರೆಸ್ ಜೊತೆಗಿದ್ದು ಶಾಸಕನಾಗಿ, ಸಂಸದನಾಗಿ, ರಾಜ್ಯ, ಕೇಂದ್ರ ಸರ್ಕಾರಗಳ ಸಚಿವರಾಗಿ, ಪಕ್ಷದ ಉನ್ನತ ಹುದ್ದೆಗಳನ್ನು ಏರಿ ನಿಭಾಯಿಸಿ ಅನುಭವಿಯಾಗಿ-ಹೀಗೆ ಎಲ್ಲವೂ ಆಗಿರುವ ಖರ್ಗೆ ಗಾಂಧಿ ಕುಟುಂಬದ ಪಾಲಿಗೆ ಎಂದಿಗೂ ಅತ್ಯಂತ ಪ್ರಿಯರಾಗಿಯೇ ಕಾಣುವವರು. ಮುಖ್ಯಮಂತ್ರಿಯಂತಹ ದೊಡ್ಡ ದೊಡ್ಡ ಹುದ್ದೆಗಳೂ ಕೂಡ ಖರ್ಗೆಯವರಿಗೆ ‘ಕೈಗೆ ಬಂದಿದ್ದು, ಬಾಯಿಗೆ ಬಂದಿಲ್ಲ’ ಎಂಬಂತೆ ಬಂದು ಹೋಗಿದ್ದವು. ಈಗ, ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಅನುಭವ, ರಾಜಕೀಯ ತಾಳ್ಮೆಯ ನಂತರ ಖರ್ಗೆ ಪಾಲಿಗೆ ಅದೃಷ್ಟದ ಜೊತೆಜೊತೆಗೆ ಪರೀಕ್ಷೆಯ ಮಹಾದ್ವಾರ ತೆರೆದುಕೊಂಡಿದೆ. ಇಡೀ ದೇಶದಾದ್ಯಂತ ಹೇಳಹೆಸರಿಲ್ಲದಂತಾಗಿರುವ ಕಾಂಗ್ರೆಸ್‌ನನ್ನು ಮುನ್ನೆಲೆಗೆ ತರುವ ಹೊರೆ ಖರ್ಗೆ ಎಂಬ ಮುದಿ ವಯಸ್ಸಿನ ನಾಯಕನ ಮೇಲಿರುವುದು ಕಾಂಗ್ರೆಸ್ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿಸಿದೆ. 

ಕಾಂಗ್ರೆಸ್ ಪಾಳಯದಲ್ಲಿ ಕೆಲವು ದಶಕಗಳ ಅನುಭವನ್ನು ಹೊಂದಿರುವ ಖರ್ಗೆ ‘ಅಸ್ಪೃಶ್ಯ’ರಾಗಿಯೇ ಉಳಿದಿದ್ದರು. ಕಾಂಗ್ರೆಸ್ ಪಕ್ಷವನ್ನು ಮೇಲ್ಪಂಕ್ತಿಯ ಹಿಡಿತದಿಂದ ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ  ಅಥವಾ ಈ ಮೇಲ್ಪಂಕ್ತಿಯ ರಾಜಕೀಯ ನಾಯಕರ ಕಾರಣದಿಂದಾಗಿಯೇ ಪಕ್ಷದ ಉನ್ನತ ಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ಸಣ್ಣ ಕೊರಗು ಅವರಲ್ಲಿತ್ತು. ಅದು ೧೯೯೪ರಲ್ಲಿ ಖರ್ಗೆ ವಿಧಾನಸಭೆಯ ಪ್ರತಿಪಕ್ಷನಾದ ಮೇಲೆ ಸಣ್ಣ ಮಟ್ಟಿಗೆ ಬದಲಾಯಿತಾದರೂ, ರಾಜಕೀಯದಲ್ಲಿ ಇದ್ದವ ಸನ್ಯಾಸಿ ಅಲ್ಲವಲ್ಲ. ೧೯೯೯ರ ಸಂದರ್ಭದಲ್ಲಿ ಖರ್ಗೆ ಹೆಸರು ಮುಖ್ಯಮಂತ್ರಿ ರೇಸ್‌ಗೆ ಪ್ರವೇಶಿಸಿತ್ತು, ಖರ್ಗೆಗೆ ಅಡ್ಡ ಬಂದಿದ್ದು ‘ದಲಿತ’ ಮತ್ತು ಪಕ್ಷದೊಳಗಿನ ‘ಅಪ್ಪರ್ ಕ್ಲಾಸ್’ ಹಿಡಿತ. ಇವೆಲ್ಲಾ ಖರ್ಗೆಗಾದ ಒಂದು ರೀತಿಯ ಮುಖಭಂಗವೂ ಹೌದು. ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೇ ನೋವು ಅನುಭವಿಸಿದ್ದರೂ ಖರ್ಗೆ ಒಮ್ಮೆಯೂ ಪಕ್ಷಾಂತರ ಚಿಂತನೆ ಮಾಡಿದವರಲ್ಲ. ಅದು ಖರ್ಗೆಯವರ ಹೆಚ್ಚುಗಾರಿಕೆ. ಅದು ಖರ್ಗೆಯವರ ರಾಜಕೀಯ ಜೀವನದ ಪಾಲಿಗೆ ಅನಿವಾರ್ಯದ ಸಂಕಟ ಆಗಿತ್ತೋ ಏನೋ ಗೊತ್ತಿಲ್ಲ, ಇಂತಹ ಸಂಕಟಗಳ ನಡುವೆಯೇ, ಪರೀಕ್ಷೆಗಳ ನಡುವೆಯೇ ಇದ್ದು ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರರಾಗಿ ಬೆಳೆದು ಪಕ್ಷದ ಮೇರು ಸ್ಥಾನಕ್ಕೆ ಏರಿದವರು. ಖರ್ಗೆಯವರಿಗೆ ಈಗ ಸಿಕ್ಕಿರುವ ಸ್ಥಾನ ಹಿಂದೆ ಖರ್ಗೆ ರಾಜಕೀಯ ಜೀವನದಲ್ಲಿ ಮೋಡಗಳಂತೆ ಇದ್ದವರಿಗೆ ಆಶ್ಚರ್ಯ ಎನ್ನಿಸಿರಬಹುದು. 

ಎಂದೂ ಇತರೆ ರಾಜಕೀಯ ನಾಯಕರೊಂದಿಗೆ ರಾಜಕೀಯ ಸಂಘರ್ಷಕ್ಕೆ ಇಳಿಯದ ಖರ್ಗೆ, ತಮ್ಮ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ನೊಳಗಿನ ‘ಅಪ್ಪರ್ ಕ್ಲಾಸ್’  ಮನೋಧೋರಣೆಗೆ ಹೊಂದಿಕೊಂಡು ಬೆಳೆದರು. ಇದು ಅವರ ರಾಜಕೀಯ ಭವಿಷ್ಯಕ್ಕೆ ಅಗತ್ಯವಾದ ಸೂತ್ರವೂ ಆಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಇದು ಖರ್ಗೆ ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡು ‘ಮ್ಯೂಚುವಲ್ ರಾಜಿ’ ಎಂಬಂತೆ ಕಾಣಿಸಿದರೂ, ಅದು ಹಾಗೆ ಅಲ್ಲ ಎಂಬಂತೆ ಕಾಂಗ್ರೆಸ್ ಬಿಂಬಿಸಿತ್ತು. ವರ್ಷ ಕಳೆದಂತೆ ಖರ್ಗೆ ಗಾಂಧಿ ಕುಟುಂಬದ ಭಜಕರ ವೃಂದದಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಕೆಲವು ವರ್ಷಗಳ ಗಾಂಧಿ ಕುಟುಂಬದ ಭಜನೆಯ ನಂತರ ದೇಶ ಕಂಡ ಹಿರಿಯ ಪಕ್ಷದ ಸಾರಥಿಯ ಸ್ಥಾನ ದೊರಕಿದೆ, ಮತ್ತು ಇದು ದೊಡ್ಡ ಸವಾಲಿನ ಭವಿಷ್ಯವನ್ನು ಹೊಸೆದಿದೆ. 

ಕಾಂಗ್ರೆಸ್‌ನ ರಾಜಕೀಯ ವಿರೋಧಿ ಪಕ್ಷ ಕಾಂಗ್ರೆಸ್‌ನನ್ನು ದೇಶ ವಿರೋಧಿ ಪಕ್ಷ ಎಂದು ಬಿಂಬಿಸಿರುವ ಕಾಲಘಟ್ಟದಲ್ಲಿ ಹೇಗೆ ಆ ಪಟ್ಟದಿಂದ ಪಕ್ಷವನ್ನು ಹೊರಗೆ ತರುವಲ್ಲಿ ಪ್ರಯತ್ನಿಸುತ್ತಾರೆ ಎನ್ನುವುದು ಖರ್ಗೆ ಮುಂದಿರುವ ಸವಾಲು. ‘ಅಧ್ಯಕ್ಷರಾಗುವ ಮುನ್ನ ಗಾಂಧಿ ಕುಟುಂಬದ ಸಲಹೆ ಸೂಚನೆ ಪಡೆದುಕೊಳ್ಳುವುದರಲ್ಲಿ ತಪ್ಪೇನಿದೆ’ ಎಂದು ಅಭಿಪ್ರಾಯ ಪಟ್ಟಿದ್ದ ಖರ್ಗೆ ರಬ್ಬರ್ ಸ್ಟ್ಯಾಂಪ್ ಅಧ್ಯಕ್ಷರಾಗದೇ ಪಕ್ಷವನ್ನು ಮುನ್ನೆಡೆಸುವ ತುರ್ತು ಕಾಂಗ್ರೆಸ್‌ಗೆ ಬಹಳ ಇದೆ. 

ದೆಹಲಿಗೆ ಬಂದು ಮೆರೆದ ಖರ್ಗೆ : ರಾಜ್ಯ ರಾಜಕಾರಣದಲ್ಲಿ ಮೂರ್ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಸತತ ಹನ್ನೊಂದು ಬಾರಿ ಚುನಾವಣೆಗಳಲ್ಲಿ ಗೆದ್ದು ಬೀಗಿದರೂ ರಾಜ್ಯ ಕಾಂಗ್ರೆಸ್‌ನಲ್ಲಿ ಖರ್ಗೆ ಉಳಿದವರು ಮಾಡಿಕೊಂಡಷ್ಟು ಹೆಸರು ಮಾಡಿಕೊಂಡಿರಲಿಲ್ಲ. ಖರ್ಗೆ ಎಂಬ ಕಾಂಗ್ರೆಸ್ ಪಾಳಯದ ಅಜಾತ ಶತ್ರುವಿನ ನಿಜವಾದ ಅದೃಷ್ಟದ ಬಾಗಿಲು ತೆರೆದಿದ್ದು ಗುಲಬರ್ಗಾ ಕ್ಷೇತ್ರದಿಂದ ಎರಡನೇ ಭಾರಿ ಗೆದ್ದು ಲೋಕಸಭೆಗೆ ಆಯ್ಕೆಯಾದ ಮೇಲೆ. ಹೌದು, ಖರ್ಗೆ ಹಸ್ತ ಪಾಳಯಕ್ಕೆ ೨೦೧೪ರಲ್ಲಿ ಅಧಿಕೃತ ಲೋಕಸಭಾ ನಾಯಕರಾಗಿ ಆಯ್ಕೆಯಾಗಿದ್ದೇ ಅದೃಷ್ಟದ ಬಾಗಿಲು ತೆರೆದಿದ್ದದ್ದು. ಗಾಂಧಿ ಕುಟುಂಬಕ್ಕೆ ಆಪ್ತರಾಗಿ ಅದರಲ್ಲೂ ಸೋನಿಯಾ ಗಾಂಧಿ ಅವರ ಪರಮಾಪ್ತ ಬಳದಲ್ಲಿ ಅಗ್ರಪಂಕ್ತಿಯ ಸ್ಥಾನಗಳಿಸಿ, ಪಕ್ಷಕ್ಕೆ ಹಾಗೂ ಸೋನಿಯಾ ಗಾಂಧಿಯವರಿಗೆ ವಿದೇಯರಾಗಿದ್ದ ಖರ್ಗೆ ದೆಹಲಿ ರಾಜಕರಾಣದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಳ್ಳುವುದಕ್ಕೆ ಆರಂಭಿಸಿದರು. ಕರ್ನಾಟಕದ ವಿಷಯದಲ್ಲಂತೂ ಖರ್ಗೆ ತೀರ್ಮಾನಕ್ಕೆ ಸೋನಿಯಾ ಅಸ್ತು ಎನ್ನುವಷ್ಟರ ಮಟ್ಟಿಗೆ ಬೆಳೆದರು. ಖರ್ಗೆ ‘ಕಾಂಗ್ರೆಸ್ ಹಾಗೂ ಸೋನಿಯಾರ ಮೇಲೆ ಬೆಳೆಸಿಕೊಂಡಿದ್ದ ವಿದೇಯತೆ’ ರಾಜ್ಯಸಭೆಗೆ ಆಯ್ಕೆಯಾಗಿ, ರಾಜ್ಯಸಭಾ ಪ್ರತಿಪಕ್ಷದ ನಾಯಕನಾಗುವಂತೆ ಮಾತ್ರವಲ್ಲದೇ ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪರಮೋಚ್ಛ ನಾಯಕನ ಸ್ಥಾನದವರೆಗೆ ತಲುಪುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ ಖರ್ಗೆ ನಿಜಕ್ಕೂ ಮೆರೆದಿದ್ದು ದೆಹಲಿಗೆ ಪ್ರವೇಶಿದ ಮೇಲೆಯೇ. 

ಸೋನಿಯಾ ಕೃಪಾಕಟಾಕ್ಷದ ಹಾಗೂ ಪಕ್ಷದ ಸಹಕಾರದಿಂದ ಅಧ್ಯಕ್ಷ ಹುದ್ದೆಗೇರಿದ ಖರ್ಗೆ ಮುಂದೆ ಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಚೇತರಿಕೆಯ ಫಲಿತಾಂಶವನ್ನು ತಂದುಕೊಡುವಲ್ಲಿ ಪ್ರಯತ್ನಿಸುವುದು ದೊಡ್ಡ ಸವಾಲು. ಲೋಕಸಭಾ ಚುನಾವಣೆಗೂ ಮುನ್ನ ಆರು ರಾಜ್ಯಗಳಲ್ಲಿ ಎದುರಿಸಬೇಕಾದ ವಿಧಾನಸಭಾ ಚುನಾವಣೆಗಳಲ್ಲಿ ಇಂಪ್ಯಾಕ್ಟ್ ಮಾಡಬೇಕಿದೆ. ಇಡೀ ದೇಶದಾದ್ಯಂತ ಕಾಂಗ್ರೆಸ್ ಹೊಂದಿರುವ ಪೂರ್ಣ ಪ್ರಮಾಣದ ಸರ್ಕಾರ ಎರಡೇ ಎರಡು ರಾಜ್ಯಗಳಲ್ಲಿ. ಇನ್ನು ಕೆಲವು ಮೈತ್ರಿ ಸರ್ಕಾರಗಳು. ಹೀಗಿರುವಾಗ ಲೋಕಸಭೆಗೂ ಮುಂಚಿತವಾಗಿ ಎದುರಾಗುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯದೇ ಇದ್ದಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಖರ್ಗೆಗೆ ಇರುವ ಸವಾಲು ಏನೆಂದರೇ, ಈ ವರ್ಷದ ಅಂತ್ಯದಲ್ಲಿ ಎದುರಿಸಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ, ೨೦೨೩ರ ಮೇ ಆಸುಪಾಸಿನಲ್ಲಿ ಎದುರಿಸಲಿರುವ ಕರ್ನಾಟಕ, ೨೦೨೩ರ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳು. ಖರ್ಗೆ ಈ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳನ್ನು ಪಕ್ಷದ ಅಳಿವಿನಂಚಿನ ಸ್ಥಿತಿಯಲ್ಲಿ ಎದುರಿಸುವುದಕ್ಕೆ ಸಮರ್ಥರಿದ್ದಾರೆಯೇ ಎನ್ನುವುದು ಯಕ್ಷ ಪ್ರಶ್ನೆ. 

ಕರ್ನಾಟಕದ ಬಗ್ಗೆ ಖರ್ಗೆ ನಿಲುವೇನು ? : ಡಿ ಕೆ ಶಿವಕುಮಾರ್ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿದ್ದು ಸೌಂಡ್ ಮಾಡಿರುವುದು ಇಡೀ ರಾಜಕೀಯ ವಲಯಕ್ಕೆ ಗೊತ್ತಿದೆ. ಈ ಬೆಳವಣಿಗೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಪ್ರಮುಖ ನಾಯಕರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನವಿತ್ತು. ಈ ವೈಮನಸ್ಸು ಇಂದಿಗೂ ಖರ್ಗೆಯರಲ್ಲಿ ಬೂದಿ ಮುಚ್ಚಿದ ಕೆಂಡ. ಡಿಕೆಶಿ ಪಕ್ಷದ ಕಾರ್ಯಕ್ಕಿಂತ ಹೆಚ್ಚು ಸ್ವ ಪ್ರಚಾರಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವ ಆರೋಪವನ್ನು ಮೊದಲು ಎತ್ತಿದವರೇ ಖರ್ಗೆ. ಈ ಆರೋಪವನ್ನು ಖರ್ಗೆ ಹೈಕಮಾಂಡ್‌ಗೆ ಒಪ್ಪಿಸುತ್ತಿದ್ದಂತೆ ಅಂದಿನ ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಪರವಾಗಿ ಕೆಲಸ ಮಾಡುತ್ತಿದ್ದ ಟೀಮ್‌ನನ್ನು ಹೊರಗೆ ಕಳುಹಿಸಿತ್ತು. ಸಿದ್ದರಾಮಯ್ಯ ಅವರ ಮೇಲೂ ಖರ್ಗೆಯವರಲ್ಲಿ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿಲ್ಲ. ೨೦೦೮ರಲ್ಲಿ ಸಿದ್ದು ಮತ್ತೆ ಖರ್ಗೆಯವರ ನಡುವೆ ನಡೆದ ಜಿದ್ದಿ ಗೊತ್ತಿರುವ ವಿಷಯ. ಆದರೇ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸೇರ್ಪಡೆಗೆ ದೊಡ್ಡ ಪ್ರಮಾಣದಲ್ಲಿ ವಿರೋಧವಿದ್ದರೂ, ಸಿದ್ದರಾಮಯ್ಯ ಪ್ರಿಯಾಂಕ್ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆ ಸಣ್ಣ ಋಣ ಸಿದ್ದರಾಮಯ್ಯ ಅವರ ಮೇಲೆ ಖರ್ಗೆಯವರಿಗೆ ಇದೆ. ಅಷ್ಟು ಬಿಟ್ಟರೇ, ಕಾಂಗ್ರೆಸ್‌ನ ಮುಖ್ಯಮಂತ್ರಿಗಳ ಅಭ್ಯರ್ಥಿಗಳು ಎಂದು ಪ್ರಾಜೆಕ್ಟ್ ಆಗುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಮೇಲೂ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಖರ್ಗೆಯವರಲ್ಲಿಲ್ಲ. ಇನ್ನು, ತಮ್ಮ ಅಧಿಕಾರದ ಬಲದಿಂದಾಗಿ ಕರ್ನಾಟಕದಲ್ಲಿ ಮಗ ಪ್ರಿಯಾಂಕ್ ಅವರನ್ನು ಮುಂದೆ ಬಿಟ್ಟು ಮತ್ತೊಂದು ಬಣ ರಾಜಕೀಯಕ್ಕೆ ಮುಂದಾಗುತ್ತಾರೆಯೇ ಎನ್ನುವ ಹೊಸ ಚರ್ಚೆ ಆರಂಭವಾಗಿದೆ. ಹಾಗೆ ಆಗುವುದಿಲ್ಲ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಇದ್ದರೂ, ಈ ವಿಷಯವನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಸೋನಿಯಾ ಹಾಗೂ ರಾಹುಲ್ ಒತ್ತಡಕ್ಕೆ ಮಣಿದರೇ, ಖರ್ಗೆಯವರ ಕರ್ನಾಟಕದ ವಿಚಾರದಲ್ಲಿ ಹೇಗೆ ನಿರ್ಧಾರವಿರಲಿದೆ ಎನ್ನುವುದು ಕುತೂಹಲ. 

ಒಟ್ಟಿನಲ್ಲಿ, ರಾಷ್ಟç ರಾಜಕಾರಣದ ಅಗ್ರಸ್ಥಾನಕ್ಕೆ ಏರಿದ ಖರ್ಗೆಗೆ ಭವಿಷ್ಯದಲ್ಲಿ ಎದುರಾಳಿಯಾಗಿರುವುದು ಕೇವಲ ಬಿಜೆಪಿಯಲ್ಲ. ಇಡೀ ದೇಶದಾದ್ಯಂತ ‘ಮಾಸ್ ಬ್ರೈನ್ ಜನಪ್ರಿಯತೆ’ ಹೊಂದಿರುವ ಪ್ರಧಾನಿ ಮೋದಿ ಕೂಡ ಹೌದು. ೨೦೧೪ರಿಂದ ಮೋದಿ ಎದುರು ಕಾಂಗ್ರೆಸ್‌ನ ಲೋಕಸಭೆಯ ನಾಯಕರಾಗಿ ಖರ್ಗೆಗೆ ಅನುಭವವಿದ್ದರೂ ಅಷ್ಟೊಂದು ಇಂಪ್ಯಾಕ್ಟ್ ಖರ್ಗೆ ಮಾಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ವಿರೋಧ ಪಕ್ಷದ ನಾಯಕನಾಗಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುವುದಕ್ಕೆ ವ್ಯತ್ಯಾಸವಿದೆ. ಜವಾಬ್ದಾರಿಯೂ ಹೆಚ್ಚಿದೆ. ನೋಡೋಣ, ದೇಶದಾದ್ಯಂತ ಅಳಿವಿನಂಚಿನಲ್ಲಿರುವ ಕಾಂಗ್ರೆಸ್ ಚಕ್ರಾಧಿಪತ್ಯಕ್ಕೆ ಮುದಿ ಮುತ್ಸದ್ಧಿಯ ನಡೆ ಹೇಗಿರಲಿವೆ ಎನ್ನುವುದು ಸದ್ಯದ ರಾಜಕೀಯದ ಅಚ್ಚರಿ. 

-ಶ್ರೀರಾಜ್ ವಕ್ವಾಡಿ       

               


Sunday, October 23, 2022

ಹಣತೆಯಾದರೂ ಸಾಕು..!

 



ಮೊರೆಯುತ್ತಿದೆ ನಿಶೆಯ ಪ್ರವಾಹ 

ಹಣತೆಯಾದರೂ ಸಾಕು

ಹಚ್ಚೋಣ ಬಾ 


ಅನೂಹ್ಯ ಅಟವಿಯ ಕತ್ತಲೆ

ನಿರ್ದಯ ಕೇಕೆ

ಅನಂತತೆಗೆ ಬೆಳೆಯುವ ಮುನ್ನ 

ಹಣತೆಯಾದರೂ ಸರಿ 

ಪಕ್ವತೆಗೆ ಹಚ್ಚೋಣ


ಮುಂದೆ ತೋರುವ 

ದಿವ್ಯ ಮೌನದ ಒಡಲು 

ಸೀಳಿ ತೋರಿದ ಬರಡು 

ಸವೆದು ಹೋಗಲಿ


ಜ್ವಲಿಸುವ ದೀಪವೇ 

ನೀನಾಗು ಪರಿಪಕ್ವ ಪೂರ್ಣ 

ಮೀರಿ ವಿಸ್ತಾರಕೆ 

ಆವಳಿಯೇ ಹೆಣೆಯಲಿ 

ಕ್ಷಣಕ್ಕೊಂದು ಪ್ರೀತಿ

ಹಣತೆಯ ರೀತಿ 


ಒಂದು ಕಾನನ ಸುರಿದ 

ಬೆಳಕು ಗೆಲ್ಲುವ ಭಾವ 

ಬಲ ಪಡೆಯಬೇಕು

ಹಣತೆ ಹಚ್ಚೋಣ ಬಾ


ಮತ್ತೆ ದೀಪಾವಳಿ

ಕಾಳಕತ್ತಲೆಯ ನುಂಗಲಿ 

ಹಣತೆಯಾದರೂ ಸರಿ 

ನೀನೇ ಹಚ್ಚು ಬಾ..!

#ಕಾವ್ಯಬೈರಾಗಿ 

#ShreerajVakwady

Thursday, October 20, 2022

ಬಿಜೆಪಿಯಿಂದಲೇ ಸಿದ್ದರಾಮಯ್ಯ ಹೀರೋ ಆಗ್ತಾರೆ..!

 


ಬಿಎಸ್‌ವೈ ಮತ್ತೆ ಮೋಸ ಹೋಗ್ತಾರೆ | ಸಿದ್ದು ‘ಇಂಟ್ರೆಸ್ಟಿಂಗ್ ಸಬ್ಜೆಕ್ಟ್’ ಯಾಕೆ ಗೊತ್ತಾ ?

ಯಾತ್ರೆ ಸದ್ಯದ ಕರ್ನಾಟಕದ ರಾಜಕಾರಣ. ಒಂದು ಸಾತ್ವಿಕ ಹೋರಾಟದ ಯಾತ್ರೆಯಾದರೇ, ಇನ್ನೊಂದೆಡೆ ಆ ಪಕ್ಷದ ಹುಟ್ಟುಗುಣ ಎಂದೇ ಹೇಳಲಾಗುವ ಅಬ್ಬರ, ಗರ್ಜನೆ, ಟೀಕೆಯ ರಾಜಕಾರಣ. ಈ ನಡುವೆ ಮೋಸ ಹೋಗುತ್ತಿರುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಬಿಜೆಪಿ ಮಾಡುತ್ತಿರುವ ಮೋಸದ ಬಗ್ಗೆ ಯಡಿಯೂರಪ್ಪರಿಗೆ ಗೊತ್ತಿಲ್ಲದೇ ಏನಿಲ್ಲ. ಹೋರಾಟದ ಒಂದು ದೊಡ್ಡ ಹಿನ್ನೆಲೆಯಿಂದ ಬಂದ ಬಿಎಸ್‌ವೈ ನೇರಾನೇರವಾಗಿ ಖಡಕ್ ಆಗಿಯೇ ಎಲ್ಲದಕ್ಕೂ ಪ್ರತಿಕ್ರಿಯಿಸುವವರು. ಅದು ಹೈಕಮಾಂಡ್‌ಗೂ ಕೂಡ. ಒಂದು ರೀತಿಯಲ್ಲಿ ರೆಬಲ್ ಲೀಡರ್. ೨೦೧೧ರ ಸಂದರ್ಭದಲ್ಲಿ ಬಿಜೆಪಿಯೊಂದಿನ ವೈಮನಸ್ಸಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷ ತೊರೆದು ತನ್ನದೇ ರಾಜಕೀಯ ಪ್ರಭಾವದಿಂದ ಹೊಸದೊಂದು ರಾಜಕೀಯ ಪಕ್ಷ ಕೆಜೆಪಿಯನ್ನು ಸ್ಥಾಪಿಸಿ, ಶಿಕಾಪುರದಿಂದ ಕೆಜೆಪಿ ಅಭ್ಯರ್ಥಿಯಾಗಿಯೆ ಚುನಾವಣೆಗೆ ನಿಂತು ಗೆದ್ದವರು, ಆ ಸಂದರ್ಭದಲ್ಲಿ ಕೆಜೆಪಿ ಕೇವಲ ಎಂಟು ಕ್ಷೇತ್ರಗಳನ್ನು ಗೆದ್ದಿದ್ದಾದರೂ, ಯಡಿಯೂರಪ್ಪ ಬಿಜೆಪಿ ತೊರೆದಿದ್ದು ಬಿಜೆಪಿಗೆ ದೊಡ್ಡ ನಷ್ಟವೇ ಆಗಿತ್ತು. ಇದು ಸಿದ್ದು ಮುಖ್ಯಮಂತ್ರಿಯಾಗುವುದಕ್ಕೂ ಸುಲಭ ದಾರಿ ಹಾಕಿಕೊಟ್ಟಿತ್ತು. ಮತ್ತೆ ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾದದ್ದು, ಬಹುಮತವಿಲ್ಲದೇ ಏಕ್ ದಿನ್ ಕಾ ಮುಖ್ಯಮಂತ್ರಿಯಾಗಿದ್ದು ಎಲ್ಲವೂ ದೊಡ್ಡ ಕಥೆ. ಅಂದರೇ, ಯಡಿಯೂರಪ್ಪರ ಹೋಲ್ಡ್ ಅಷ್ಟೊಂದಿದೆ ಅಂತರ್ಥ. ತಮಗೆ ಪದೆ ಪದೆ ಪಕ್ಷದಿಂದ ಮೋಸವಾಗುತ್ತಿದ್ದರೂ ಸುಮ್ಮನಿದ್ದ ಯಡಿಯೂರಪ್ಪರ ಉದ್ದೇಶ ಏನು ಎಂಬುವುದೇ ಸ್ಪಷ್ಟವಾಗುತ್ತಿಲ್ಲ.

ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದ ನಂತರ ಯಡಿಯೂರಪ್ಪ ನಡೆದುಕೊಂಡ ರೀತಿ ಈ ರಾಜ್ಯ ಕಂಡಿದೆ. ಅದು ದೇಶಕ್ಕೂ ಗೊತ್ತಿದೆ. ಯಡಿಯೂರಪ್ಪ ಒಬ್ಬರು ಈ ದೇಶ ಗುರುತಿಸುವಷ್ಟರ ಮಟ್ಟಿಗಿನ ಮಾಸ್ ಲೀಡರ್ ಅಲ್ಲದೇ ಇದ್ದರೂ, ರಾಜ್ಯದ ಮಟ್ಟಿಗೆ ತಮ್ಮದೇ ಆದ ಛಾಪು ಇಟ್ಟುಕೊಂಡವರು, ಸಂಘಟನಾ ಶಕ್ತಿ, ಸಮುದಾಯದ ಬೆಂಬಲ, ತಮ್ಮದೇ ಆದ ಬಲವಾದ ರಾಜಕೀಯ ಆಪ್ತ ಬಳಗ ಇಟ್ಟುಕೊಂಡು ಕರ್ನಾಟಕ ಬಿಜೆಪಿ ಪಾಲಿಗೆ ಒಂದು ರೀತಿಯಲ್ಲಿ ಹೈಕಮಾಂಡ್ ಇದ್ದಂತೆಯೇ ಇರುವವರು. ಯಡಿಯೂರಪ್ಪ ಅವರ ಪ್ರಭಾವವನ್ನು ಬಿಜೆಪಿ ಅಕ್ಷರಶಃ ಬಳಸಿಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದು ಬಿಜೆಪಿಯಂತಹ ರಾಜಕೀಯ ಪಕ್ಷದ ಜಾಣ್ಮೆಯೂ ಹೌದು. ಹಾಗೆ ನೋಡುವುದಕ್ಕೆ ಹೋದರೇ ಇಂತಹ ಮನಸ್ಥಿತಿ ಕಾಂಗ್ರೆಸ್ ನಂತಹ ಹಿರಿಯ ರಾಜಕೀಯ ಪಕ್ಷದಲ್ಲಿ ಇಲ್ಲ. 

ಯಡಿಯೂರಪ್ಪ ಅವರ ಹುಟ್ಟು ಈ ರಾಜ್ಯದ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ಸಮುದಾಯವೇ ಎಂದು ಕರೆಯಲ್ಪಡುವ ಪ್ರಭಾವಿ ಲಿಂಗಾಯತ ಸಮುದಾಯ. ಸಮಾಜದ ಮೇಲ್ಪಂಕ್ತಿಯ ಸಮುದಾಯದಲ್ಲಿ ಹುಟ್ಟಿದವರಾಗಿದ್ದರಿಂದ ಅವರ ಹುಟ್ಟು ಒಂದು ಹೊರಲಾಗದ ಹೊರೆ ಎಂಬಂತೆ ಇರಲಿಲ್ಲವಾದರೂ, ಯಡಿಯೂರಪ್ಪ ರಾಜಕೀಯ, ಸಾಮಾಜಿಕ ಹೋರಾಟದಲ್ಲಿ ‘ಸೈಕಲ್ ಹೊಡೆದೇ’ ಮೇಲೆ ಬಂದವರು. ಸೈಕಲ್ ಹಿಡಿದು ತಮ್ಮ ಬೆಂಬಲಿಗರೊಂದಿಗೆ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ವಿಧಾನ ಸಭೆಯೊರೆಗೆ ತಂದು ನಿಲ್ಲಿಸುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಯಡಿಯೂರಪ್ಪ ಅವರ ಚಾರ್ಮಿಂಗ್ ವ್ಯಕ್ತಿತ್ವವನ್ನು ಕಂಡು ಶಿಕಾರಿಪುರದ ವಿಧಾನ ಸಭೆಗೆ ಚುನಾವಣಾ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇ ಒಂದು ರಾಜ್ಯ ಬಿಜೆಪಿ ಪಾಲಿಗೆ ದಕ್ಕಿದ ಪರ್ವ ಕಾಲ. ಕಾಂಗ್ರೆಸ್‌ನಿಂದ ಸತತವಾಗಿ ಗೆದ್ದು ಬೀಗಿತ್ತಿದ್ದ ಮಾಜಿ ಸಚಿವ ಯಂಕಟಪ್ಪ ಅವರ ಎದುರು ಶಿಕಾರಿಪುರದಲ್ಲಿ ‘ಯಡಿಯೂರಪ್ಪ ಎದುರು ಯಾರೇ ನಿಂತರೂ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ’ ಎಂಬಂತೆ ಬೆಳೆದು ನಿಂತರು. ಅಂದಿನಿಂದ ಬಿಜೆಪಿಯ ದೆಸೆ ಕರ್ನಾಟಕದಲ್ಲಿ ಬದಲಾಯಿತು. ಹೇಳ ಹೆಸರಿಲ್ಲದ ಬಿಜೆಪಿಯನ್ನು ಕರ್ನಾಟಕದಲ್ಲಿ ಗುರುತಿಸುವ ಹಾಗೆ ಮಾಡಿದ್ದೇ ಯಡಿಯೂರಪ್ಪ ಎಂದರೇ ಅತಿಶಯೋಕ್ತಿಯಲ್ಲ. 

ಲಿಂಗಾಯತ ಮಠಗಳು, ಸ್ವಾಮಿಗಳು ಎಂದೇ ಸದಾ ಅದರದ್ದೇ ಧ್ಯಾನದಲ್ಲಿದ್ದ ಯಡಿಯೂರಪ್ಪ, ಲಿಂಗಾಯತ ಸಮುದಾಯದ ಪ್ರಬಲ, ಪ್ರಭಾವಿ ನಾಯಕರಾಗಿ ಬೆಳೆದರು. ಇಡೀ ಲಿಂಗಾಯತ ಸಮುದಾಯದ ಮತಗಳು ಬಿಜೆಪಿಯತ್ತ ವಾಲುವತ್ತ ಮಾಡಿದ್ದೇ ಯಡಿಯೂರಪ್ಪ. ಲಿಂಗಾಯತ ಸಮುದಾಯವೇ ‘ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶದ ಮಟ್ಟಿಗೆ ನಿರ್ಣಾಯಕ ಸಮುದಾಯ’ ಎಂಬಷ್ಟರ ಮಟ್ಟಿಗೆ ಬೆಳೆಸಿದ್ದು, ಮಾಡಿದ್ದು ಯಡಿಯೂರಪ್ಪ. ಅವರಿಗೆ ಸರಿಸಮಾನರಾಗಿ ನಿಲ್ಲುವವರು ಲಿಂಗಾಯತ ಸಮುದಾಯದಲ್ಲಿ ಈವರೆಗೆ ಯಾರೂ ಇಲ್ಲ. ಆ ಮಟ್ಟಿಗೆ ಯಡಿಯೂರಪ್ಪ ಅವರನ್ನು ಮೆಚ್ಚಲೇ ಬೇಕು. ಬಿಜೆಪಿ ಉಸಿರಾಡುವ ಹಾಗೆ ಆಗುವಲ್ಲಿ ಯಡಿಯೂರಪ್ಪ ಅವರ ಬೆವರು ಖಂಡಿತ ಇದೆ. ಅವರ ರಾಜಕೀಯ ಚಿಂತನೆ, ಅನುಭವ ಮಹತ್ವದ್ದು. ಆದರೇ, ಯಡಿಯೂರಪ್ಪ ಅವರ ಇತ್ತೀಚೆಗಿನ ರಾಜಕೀಯ ಠೀವಿ ಸಂಪೂರ್ಣವಾಗಿ ಬದಲಾಗಿದೆ. ಅದು ಬಲವಂತ ಬದಲಾವಣೆ ಎಂದೇ ಕಾಣಿಸುತ್ತಿದೆ. ಬಿಜೆಪಿಯ ಪರಮೋಚ್ಛ ಅಧಿಕಾರವಿರುವ ಸಂಸದೀಯ ಮಂಡಳಿಯ ಸದಸ್ಯತ್ವ  ಹಾಗೂ ವಿವಿಧ ಚುನಾವಣೆಗಳ ಟಿಕೇಟ್ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವ ಸಿಕ್ಕಿರುವುದು ಮತ್ತು ಮೋದಿ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಟಾರ್ಗೇಟ್ ನೀಡಿರುವುದೇ ಇದಕ್ಕೆಲ್ಲ ಕಾರಣವೆಂದೇ ಕಾಣಿಸುತ್ತಿದೆ. ಇದರೊಂದಿಗೆ ಮಗನ ಭವಿಷ್ಯ ರೂಪಿಸುವ ಒಂದು ಜವಾಬ್ಧಾರಿಯೂ ಇದೆ. ಅಭಿವೃದ್ಧಿ ಇಲ್ಲದೇ ಇರುವಾಗ ಯಡಿಯೂರಪ್ಪ ಅವರಿಗೂ ಉಳಿದ ಬಿಜೆಪಿ ಹರುಕು ಬಾಯಿ ಸೋ ಕಾಲ್ಡ್ ನಾಯಕರ ಬುದ್ಧಿಯೇ ಬಂದೊದಗಿದೆ ಎಂದೆನ್ನಿಸುತ್ತಿದೆ. ಯಡಿಯೂರಪ್ಪ ಕೂಡ ಈಗ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿ ವಾಗ್ಪçಹಾರ ನಡೆಸುತ್ತಿರುವುದು ಬಿಜೆಪಿಯ ಬಡತನವನ್ನು ತೋರಿಸುತ್ತದೆ. ಪಾಪ ಇವೆಲ್ಲಾ ನೋಡಿ ಬೇಸರವಾಗಿಯೋ ಏನೋ ಸಿದ್ದರಾಮಯ್ಯನವರು “ಸಿದ್ದರಾಮಯ್ಯ ಅವರ ಹೆಸರಿಲ್ಲದೇ ಐದು ನಿಮಿಷ ಭಾಷಣ ಮಾಡಿ” ಎಂದು ಹೇಳಿರುವುದು. ಬಿಜೆಪಿ ಕಾಂಗ್ರೆಸ್ ವಿರುದ್ಧ ಚುನಾವಣಾ ಹೋರಾಟಕ್ಕೆ ಇಳಿಯುವ ಬದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಚುನಾವಣೆ ಎದುರಿಸುತ್ತಿರುವಂತೆ ವರ್ತಿಸುತ್ತಿರುವುದು ಸಿದ್ದರಾಮಯ್ಯ ಅವರಿಗೆ ಲಾಭ ತಂದುಕೊಡಲಿದೆಯೇ ಹೊರತಾಗಿ ತಮಗಲ್ಲ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಯಲ್ಲಿ ಇಲ್ಲದಿರುವುದು ಕರ್ನಾಟಕ ಬಿಜೆಪಿ ಎದುರಿಸುತ್ತಿರುವ ಬಡತನ. 

ಹಾಗೆ ನೋಡಿದರೇ ಸಿದ್ದರಾಮಯ್ಯ ಅವರನ್ನು ದೇಶವೇ ಮಾತನಾಡುವ ಹಾಗೆ ಮಾಡಿ, ಮಾಸ್ ಲೀಡರ್ ಎಂಬಂತೆ ಮಾಡಿದ್ದೇ ಬಿಜೆಪಿ. ೨೦೧೮ರ ಚುನಾವಣೆಯಲ್ಲಿ ಸಿದ್ದಾರಾಮಯ್ಯ ಅವರನ್ನು ತೆಗಳುವ ಬರದಲ್ಲಿ ಸಿದ್ದರಾಮಯ್ಯ ಅವರು ರಾಷ್ಟçಮಟ್ಟದ ನಾಯಕನಂತೆ ಗುರುತಿಸಿಕೊಂಡಿದ್ದು ಬಿಜೆಪಿಗೆ ಗೊತ್ತೇ ಆಗಿಲ್ಲ. ಆ ಚುನಾವಣೆ ಸಿದ್ದರಾಮಯ್ಯ ವರ್ಸಸ್ ಮೋದಿ ಎಂಬಂತ್ತಾಗಿತ್ತು. ಯಡಿಯೂರಪ್ಪ ಸೋತರು. ಆಮೇಲಿನ ‘ವಲಸೆ ಕೃಪಾಪೋಷಿತ ಸರ್ಕಾರದ ಅಧಿಕಾರ’ ಎಲ್ಲವೂ ರಾಜಕೀಯದ ದೊಡ್ಡ ನಾಟಕ. ಈಗ ಮತ್ತೆ ಸಿದ್ದರಾಮಯ್ಯ ಬೇಡ ಎನ್ನುತ್ತಿದ್ದರೂ ಕೂಡ ಬಿಜೆಪಿ ಸಿದ್ದರಾಮಯ್ಯ ಅವರನ್ನು ಹೀರೋ ಮಾಡುವುದಕ್ಕೆ ಹೊರಟಿರುವುದು, ಆ ಕೆಲಸದಲ್ಲಿ ಯಡಿಯೂರಪ್ಪರಂತಹ ನಾಯಕ ಮತ್ತೆ ಮೋಸ ಹೋಗುತ್ತಿರುವುದು ರಾಜಕೀಯದ ದುರಂತ. 

ಕಳೆದ 4-5 ವರ್ಷಗಳಿಂದ ಬಿಜೆಪಿ ಮಾಡಿದ್ದೇನು ಕೇಳಿದರೇ, ಗಂಟಲು ಬಲವುಳ್ಳ ಸಮಾಜದ ಜನ ಸಮೂಹ ಸಿದ್ದರಾಮಯ್ಯ ಎಂಬ ಅಪಾರ ರಾಜಕೀಯ ಅನುಭವುಳ್ಳ ವಿರೋಧ ಪಕ್ಷದ ನಾಯಕನ ವಿರುದ್ಧ ನಿಂದೆಯ ಬೆಂಕಿ ಮಳೆ ಸುರಿಸುವುದಕ್ಕೆ ಬೇಕಾದ ಎಲ್ಲಾ ಮಾಧ್ಯಮಗಳಿಗೆ ಬಿಜೆಪಿ ಕೃಪಾ ಪೋಷಣೆ ಮಾಡಿದ್ದಷ್ಟೇ. ಜನತಾ ಪಕ್ಷ, ಜನತಾದಳದಿಂದ ಕಾಂಗ್ರೆಸ್‌ಗೆ ಬಂದು ರಾಜಕೀಯ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇ ಈ ವ್ಯಕ್ತಿಯ ಮಹಾ ಅಪರಾಧ ಎಂಬಷ್ಟರ ಮಟ್ಟಿಗೆ ಬಿಜೆಪಿ ಅಪವಾದ ಮಾಡಿತ್ತು. ಬೇರೆ ಏನೂ ಅಪಾವಾದ ಮಾಡುವುದಕ್ಕೆ ದಾರಿ ಇಲ್ಲದೇ ಇರುವಾಗ ಸಿದ್ದರಾಮಯ್ಯ ಹಾಕುವ ವಾಚ್, ಕನ್ನಡಕಗಳ ಮೇಲೆಯೂ ಬಾಯಿ ಬಲವುಳ್ಳ ಬಿಜೆಪಿ ಪ್ರಶ್ನೆ ಎತ್ತುವುದಕ್ಕೆ ಮುಂದಾಗಿದ್ದು ಬಿಜೆಪಿಯ ಕೀಳು ಮಟ್ಟದ ರಾಜಕೀಯ. ಪತ್ರಿಕಾ, ಮಾಧ್ಯಮ ರಂಗ, ಸಮಾಜಿಕ ಮಾಧ್ಯಮಗಳು ಸಿದ್ದರಾಮಯ್ಯ ವಿರುದ್ಧ ಹೊರಿಸಿದ ದೂಷಣೆಯ ನಡುವೆಯೂ ಆ ವ್ಯಕ್ತಿ ಇಂದೂ ಮತ್ತೆ ಪುಟಿದು ನಿಲ್ಲುವ ರಾಜಕೀಯ ಪ್ರಭಾವ ಬೆಳೆಸಿಕೊಂಡಿದ್ದಾರೆ. ಇದೇ ಒಂದು ಕಾರಣದಿಂದಾಗಿ ಸಿದ್ದರಾಮಯ್ಯ ಈ ಕಾಲದ ರಾಜಕೀಯದ ಇಂಟ್ರೆಸ್ಟಿಂಗ್ ಸಬ್ಜೆಕ್ಟ್. 

ಬಿಜೆಪಿ ಯಡಿಯೂರಪ್ಪರ ರಾಜಕೀಯ ಅನುಭವ ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಬಿಜೆಪಿಗೆ ಯಡಿಯೂರಪ್ಪ ಬೇಕಾಗಿರುವುದು ಲಿಂಗಾಯತ ಮತಗಳಿಗಾಗಿ ಅಷ್ಟೇ. ಮತ್ತೆ ಬಿಜೆಪಿಯಿಂದ ಬಿಎಸ್‌ವೈ ಮೋಸ ಹೋಗುತ್ತಿರುವುದು ರಾಜಕೀಯ ವಲಯವೂ ಇಷ್ಟ ಪಡುವುದಿಲ್ಲ. ಕರ್ನಾಟಕ ಬಿಜೆಪಿ ರಾಜಕಾರಣಿಗಳ ಪೈಕಿಯಲ್ಲಿ ಯಡಿಯೂರಪ್ಪರವರಷ್ಟು ರಾಜಕೀಯ ಸಾಮರ್ಥ್ಯ ಇರುವ ಹಲವರು ಇರಲಾರರು. ಆದರೇ, ಹೈಕಮಾಂಡ್ ಯಡಿಯೂರಪ್ಪರನ್ನು ಆಡಳಿತ ಸಮರ್ಥನಾಗುವ ಹಾಗೆ ದುಡಿಸಿಕೊಂಡಿಲ್ಲ. ಬರಿ ಚುನಾವಣೆಗೆ ಬೇಕಾಗಿ ಅಷ್ಟೇ ದುಡಿಸಿಕೊಂಡಿತ್ತು. ಅದು ಕೂಡ ಅತ್ಯಂತ ಕೀಳಾಗಿ ಎನ್ನುವುದು ಇಲ್ಲಿ ಗಮನಾರ್ಹ. ಬಹುಷಃ ಇಂದಿನ ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರಿಗೆ ಇರುವಷ್ಟು ಆಡಳಿತ ಸಾಮರ್ಥ್ಯ ಹಲವರಿಗೆ ಇಲ್ಲ. ಹಾಗಾಗಿಯೇ ಸಿದ್ದು ಬಿಜೆಪಿಯ ಟಾರ್ಗೇಟ್. ಬಿಜೆಪಿ ಯಡಿಯೂರಪ್ಪರಿಂದ ಸಿದ್ದರಾಮಯ್ಯರನ್ನು ಅಲುಗಾಡಿಸುವ ತಂತ್ರಗಾರಿಕೆಗೆ ಬಳಸಿಕೊಳ್ಳುತ್ತಿದೆ ಅಷ್ಟೇ.

ಒಂದು ಆಡಳಿತ ಪಕ್ಷ ವಿರೋಧ ಪಕ್ಷಕ್ಕಿಂತಲೂ ಹೆಚ್ಚಾಗಿ ಒಬ್ಬ ಪ್ರಭಾವಿ ವಿರೋಧ ಪಕ್ಷದ ನಾಯಕನ ವಿರುದ್ಧ ನಡೆಸಿದ ಸತತ ಅಪವಾದಗಳಲ್ಲಿ ಬೇರೆ ಯಾರೇ ಆಗಿದ್ದರೂ ಮೂಲೆ ಗುಂಪಾಗುತ್ತಿದ್ದರು. ಆದರೇ, ಸಿದ್ದು ಮತ್ತೆ ಕಾಂಗ್ರೆಸ್‌ನನ್ನು ಗೆಲ್ಲಿಸುವ ಹಠ ಹಿಡಿದಿದ್ದಾರೆ. ಕಾಂಗ್ರೆಸ್‌ನಲ್ಲಿಯೇ ಸಿದ್ದು ಜನಪ್ರೀಯತೆ ನೋಡಿ ಹೊಟ್ಟೆ ಉರಿದುಕೊಳ್ಳುವವರ ದೊಡ್ಡ ಹಿಂಡಿದೆ.  ಬಿಜೆಪಿಗೂ ಸಿದ್ದು ಜನಪ್ರಿಯತೆಯ ಬಗ್ಗೆ ಆತಂಕವಿದೆ. ಅದಕ್ಕೆ ಮತ್ತೆ ಮತ್ತೆ ಸಿದ್ದು ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಸಿದ್ದರಾಮಯ್ಯ ಸೋಲಬಹುದು, ಬಿಜೆಪಿ ಗೆಲ್ಲಬಹುದು. ಅಥವಾ ಎಲ್ಲವೂ ಅದಲು ಬದಲಾಗಬಹುದು. ಸಿದ್ದು ಹೀರೋ ಆಗ್ತಾರೆ, ಬಿಎಸ್‌ವೈ ಮೋಸ ಹೋಗ್ತಾರೆ. ಉಳಿದ ವಿಮರ್ಶೆ ಮಾಡಿಕೊಳ್ಳಿ. 

-ಶ್ರೀರಾಜ್ ವಕ್ವಾಡಿ          


Thursday, October 13, 2022

ಪ್ರಚಾರದ ಎರಡನೇ ನಾಲಿಗೆಯನ್ನು ಬಳಸುತ್ತಿರುವ ಬಿಜೆಪಿ..!

 


ಅಥಾರಿಟೆರಿಯನ್ ಥಿಯರಿಗೆ ಒಳಗಾದ ಮಾಧ್ಯಮಗಳು | ಟೀಕೆಯೇ ಅಭಿವೃದ್ಧಿಯೇ ? 

ಅಭಿವೃದ್ಧಿಯ ಹೆಸರೇ ಗೊತ್ತಿಲ್ಲದೆ ಇರುವಾಗ ಎದುರಾಳಿಯನ್ನು ಮಣಿಸಲು ಇರುವುದು ‘ಟೀಕೆ’ ಎಂಬವುದೊಂದೆ ಅಸ್ತ್ರ. ಕುಸಿದು ಬೀಳುತ್ತಿರುವ ಗೋಡೆಗೆ ಬಣ್ಣ ಹಚ್ಚುವುದಷ್ಟೇ ಅಭಿವೃದ್ಧಿಯಲ್ಲ, ಈ ದೇಶದ ಸಮಗ್ರ ಅಭಿವೃದ್ಧಿಯತ್ತ ಚಿತ್ತ ಹರಿಸದವರ 'ಸ್ಟ್ಯಾಚ್ಯೂ' ಗಗನಕ್ಕೆ ಮುಟ್ಟುವ ಹಾಗೆ ನಿರ್ಮಾಣ ಮಾಡಿ ಅವರ ಹಾದಿಯಲ್ಲಿ ನಡೆಯುವುದು ನಮ್ಮ ಸರ್ಕಾರದ ಕರ್ತವ್ಯ ಎನ್ನುವುದಷ್ಟೇ ಅಭಿವೃದ್ಧಿಯಲ್ಲ, ಭರವಸೆಯಷ್ಟೇ ಅಭಿವೃದ್ಧಿಯಲ್ಲ, ಭಾಷಣಗಳಷ್ಟೇ ಅಭಿವೃದ್ಧಿಯಲ್ಲ. ಅಭಿವೃದ್ಧಿ ಎಂದರೇ ಒಂದು ಕಾರ್ಯದ ಕಾರ್ಯಗತಗೊಳಿಸುವಿಕೆ ಅಥವಾ ಪರಿಕಲ್ಪನೆಯೊಂದರ ಸಾಕ್ಷಾತ್ಕಾರದ ರೂಪ. ಅದೊಂದು ಸಾರ್ವತ್ರಿಕ ವಿದ್ಯಮಾನವಾಗಿದೆ. ಅದು ಬಾಯಿ ಮಾತಿಗಷ್ಟೇ ಸೀಮಿತವಾಗಿರಬಾರದು, ಅದೊಂದು ಡಯಾಕ್ರೋನಿಕ್ ಪ್ರಕ್ರಿಯೆ, ಅರ್ಥಾತ್ ಅದೊಂದು ಪ್ರಗತಿಯ ಪ್ರಕ್ರಿಯೆ. ಆ ಸೋರ್ಸ್ ಇಲ್ಲದವ ತನ್ನನ್ನು ಉಳಿಸಿಕೊಳ್ಳುವುದಕ್ಕೆ, ತನ್ನ ವಿರೋಧಿಯನ್ನು ಮಣಿಸುವುದಕ್ಕೆ ಟೀಕೆಯೊಂದನ್ನೇ ಅಸ್ತçವಾಗಿ ಬಳಸಿಕೊಳ್ಳುತ್ತಾನೆ. ಈಗ ಭಾರತೀಯ ರಾಜಕೀಯದಲ್ಲಿಯೂ ಅದೇ ಆಗಿರುವುದು. 

ರಾಜಕೀಯದಲ್ಲಿ ಅಭಿವೃದ್ಧಿಯ ಮುಖೇನ ತನ್ನ ವಿರೋಧಿಯನ್ನು ಸೋಲಿಸುವುದಕ್ಕೆ ಸಾಧ್ಯವಾಗದವ ಟೀಕೆ ಇತ್ಯಾದಿ ಮಾರ್ಗವನ್ನು ಸುಲಭವಾಗಿ ಹಿಡಿದು ಪಿತೂರಿ ಮಾಡಿ ಗೆಲ್ಲುತ್ತಾನೆ. ಆ ದಾರಿ ಸುಖವೇ ಆಗಬಹುದು. ಅದು ಹೆಚ್ಚು ದೂರದ ಅಥವಾ ಕಾಲದ ದಾರಿಯಲ್ಲ. ಹಾಗೆ ಮಾಡಿದವ ಭವಿಷ್ಯದ ಆಸೆಯನ್ನು ಬಿಟ್ಟು ಮುನ್ನಡೆಯಬೇಕಾಗುತ್ತದೆ. 

ಈ ದೇಶದ ಜನರು ಬಯಸಿದ್ದು, ಅಹಿಂಸಾತ್ಮಕ ಅಭಿವೃದ್ಧಿ. ಉಳ್ಳವರ ಅಭಿವೃದ್ಧಿಯನ್ನಲ್ಲ, ಸಮಸ್ಯೆಗಳ ಅಭಿವೃದ್ಧಿಯನ್ನಲ್ಲ, ಸಾಮಾನ್ಯನ ಬದುಕನ್ನು ಹಿಂಸಿಸುತ್ತಿರುವ ಬೆಲೆ ಏರಿಕೆಗಳ ಅಭಿವೃದ್ಧಿಯನ್ನಲ್ಲ. ಅಭಿವೃದ್ಧಿಯ ಕನಸು ಬಿತ್ತಿದವರು, ಭರವಸೆ ನೀಡಿದವರು ಭಾಷಣಗಳ ಎಕ್ಸ್ಪರ್ಟ್ಗಳಷ್ಟೇ ಆಗಿ ಹೋಗುತ್ತಿರುವುದು ಈ ದೇಶದ ದುರಂತ. ಟೀಕಾಕಾರನೋರ್ವನಿಗೆ ಅಭೀವೃದ್ಧಿ ವಿಚಾರದಲ್ಲಿ ಏನೂ ಆಕ್ಷೇಪಗಳು ಸಿಗದೇ ಇರುವಷ್ಟು ಪ್ರಬುದ್ಧ ನಡೆಯಲ್ಲಿ ಒಬ್ಬ ನಡೆಯುವಾಗ ವೈಯಕ್ತಿಕ ಟೀಕೆಗಳು ಬಾಲ ಬಿಚ್ಚುವುದು ಸಾಮಾನ್ಯ. ಇದನ್ನೇ ಈಗ ಬಿಜೆಪಿ ಕಾಂಗ್ರೆಸ್ ಮೇಲೆ ಮಾಡುತ್ತಿದೆ. ಇಂತಹ ಧೋರಣೆ ಕಾಂಗ್ರೆಸ್ ಬಿಜೆಪಿ ಮೇಲೆ ತೋರಿಸಿಲ್ಲವೆಂದಲ್ಲ. ಇಂತಹ ಟೀಕೆಗಳು ಯಾರೇ ಮಾಡಿದರೂ ತಪ್ಪು ಎನ್ನುವುದು ಇಲ್ಲಿ ಮುಖ್ಯಾಂಶ. 

ಅದೇನೇ ಇರಲಿ, ಸದ್ಯ ಈ ದೇಶದ ರಾಜಕೀಯಕ್ಕೆ ಹೊಸತನದ ಸ್ಪರ್ಶ ಬೇಕಾಗಿದೆ. ಉದ್ಯಮ ಪತಿಗಳನ್ನು ಪೋಷಿಸುವ, ಭಾಷಣಗಳನ್ನು ಗಂಟಲು ಹರಿಯುವಷ್ಟು ಬಿಗಿಯುವ, ಧರ್ಮ ರಾಜಕಾರಣವನ್ನು ಬೆಂಬಲಿಸುವ ಅತ್ಯಂತ ಕೆಟ್ಟ ರಾಜಕಾರಣ ಈ ಕಾಲಕ್ಕೆ ಅಪ್ರಸ್ತುತ. ಜನತಂತ್ರ ಈಗ ಬಯಸುತ್ತಿರುವುದು ಒಂದು ಸಾರ್ವಜನಿಕ ಸಂಪರ್ಕ. ಅದರ ಪ್ರಬುದ್ಧ ಹೆಜ್ಜೆ ಕಾಂಗ್ರೆಸ್ ಈಗ ಇಟ್ಟಂತೆ ಕಾಣಿಸುತ್ತಿದೆ. ‘ಭಾರತ್ ಜೋಡೋ ಯಾತ್ರೆ’  ದಿನ ಕಳೆದಂತೆ ಹೊಸ ಭವಿಷ್ಯವನ್ನು ತೋರಿಸುತ್ತಿದೆ. ಧಾರ್ಮಿಕ ಕೋಲಾಹಲದ ಬೆಂಕಿಯಲ್ಲಿ ಬೆಂದು ಹೋದ ದೇಶ ಪ್ರಶಾಂತತೆಯ ಕನಸು ಕಾಣುತ್ತಿದೆ. ಜನತಂತ್ರ ದೇಶವೊಂದರಲ್ಲಿ ಕೇವಲ ಒಂದು ಧಾರ್ಮಿಕ ಸಂಘಟನಾ ಶಕ್ತಿಯೊಂದಿಗೆ ಬೆಳೆದು ಅಧಿಕಾರಕ್ಕೆ ಏರಿದ ರಾಜಕೀಯ ಪಕ್ಷದ ಆಡಳಿತದ ಮೇಲೆ ಈ ದೇಶದ ಜನರ ನಂಬಿಕೆ ಕಡಿಮೆಯಾಗುತ್ತಿದೆ. ಹಾಗೆಂದ ಮಾತ್ರಕ್ಕೆ ವಿರೋಧ ಪಕ್ಷದೆಡೆಗೆ ಜನರ ಒಲವು ಸಂಪೂರ್ಣವಾಗಿ ತಿರುಗಿದೆ ಎಂದರ್ಥವಲ್ಲ. ಆಡಳಿತ ಪಕ್ಷದ ಮೇಲಿನ ವಿಶ್ವಾಸ ಕುಸಿದಿದೆ ಎನ್ನುವುದಂತೂ ಸ್ಪಷ್ಟ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಂಪರ್ಕ ರಾಜಕೀಯ ವಲಯವನ್ನು ಬೆಚ್ಚಿ ಬೀಳುವಂತೆ ಮಾಡುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕಾಂಗ್ರೆಸ್ ಈ ‘ಭಾರತ್ ಜೋಡೋ ಯಾತ್ರೆ’ಯೊಂದಿಗೆ ಒಂದು ಪ್ರಬುದ್ಧ ರಾಜಕಾರಣದ ಹೆಜ್ಜೆ ಹಾಕುತ್ತಿದೆ ಎಂದೆನ್ನಿಸುತ್ತಿದೆ. ಒಂದು ಹಿರಿಯ ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಕಾಂಗ್ರೆಸ್, ಈ ದೇಶದ ಮೇಲಿನ ಜವಾಬ್ದಾರಿಯನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ಸಾದ್ಯ ಮಾಡಿಕೊಂಡ ದಾರಿ ಶ್ರೇಷ್ಠವಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದು ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕ ಸಾರ್ವಜನಿಕ ಸಂಪರ್ಕದಲ್ಲಿ ಊಹೆಗೂ ಮೀರಿ ಜನರ ಬೆಂಬಲ ಪಡೆಯಿತು/ಪಡೆದ ಎಂದರೇ, ಭಾಗಶಃ ಜನರ ಒಲವನ್ನು ಪಡೆದುಕೊಂಡಿತು/ಪಡೆದುಕೊಂಡ ಎಂದೇ ಅರ್ಥ. ಇನ್ನು, ಈ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ವ್ಯವಹಾರಗಳಿಗೆ ಸಮಸ್ಯೆಗಳಾಗುತ್ತಿರುವುದು ಈವರೆಗೆ ಎಲ್ಲಿಯೂ ಕಂಡು ಬಂದಿಲ್ಲ. ಅದು ಈ ಯಾತ್ರೆಯ ಹೆಚ್ಚುಗಾರಿಕೆ. ರಾಹುಲ್ ಗಾಂಧಿಯವರ ಪ್ರಬುದ್ಧ ರಾಜಕೀಯದ ನಡೆ ಅವರನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದೇ ಅನ್ನಿಸುತ್ತಿದೆ. ಒಬ್ಬ ರಾಜಕೀಯ ನಾಯಕ ಈ ಮಟ್ಟಿಗೆ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುತ್ತಿರುವುದನ್ನು ಈ ದೇಶ ಹಿಂದೆAದೂ ಕಂಡಿರಲಿಕ್ಕಿಲ್ಲ ಮತ್ತು ಮುಂದೆಯೂ ಕಾಣುವುದಕ್ಕೆ ಸಾಧ್ಯವಿಲ್ಲ ಎಂದೆನ್ನಿಸುತ್ತಿದೆ. 

ಈ ಯಾತ್ರೆಯು ಒಂದು ರಾಜಕೀಯ ಆಯಾಮ ಇರುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯ ಐಡಿಯಾಲಜಿಯ ಮೇಲೆ ನಡೆಯುತ್ತಿರುವುದರಿಂದ ಇದು ಇತರೆ ಪಕ್ಷಗಳಿಗೂ ಕೂಡ ಆತಂಕ ಸೃಷ್ಟಿ ಮಾಡುತ್ತಿದೆ. ಸಾರ್ವಜನಿಕರು ಹಾಗೂ ರಾಜಕೀಯದ ನಡುವೆ ಸಂಪರ್ಕ ಕೊಂಡಿ ಕಳಚಿರುವ ಹೊತ್ತಿನಲ್ಲಿ ಜನರನ್ನು ಅರ್ಥೈಸಿಕೊಳ್ಳುವುದಕ್ಕೆ ಕಾಂಗ್ರೆಸ್ ಇಟ್ಟ ಹೆಜ್ಜೆ ರಾಜಕೀಯವಾಗಿ, ಸಾಮಾಜಿಕವಾಗಿ ಪಕ್ಷಕ್ಕೆ ಒಂದು ದೊಡ್ಡ ಅನುಭವನ್ನು ನೀಡಲಿದೆ. ಇದೇ ಕಾಂಗ್ರೆಸ್‌ಗೆ ರಾಜಕೀಯ ಲಾಭವೂ ಕೂಡ ಹೌದು. ಆದರೇ, ಇಂತಹದ್ದೊಂದು ಉದ್ದೇಶವಿರುವ ಯಾತ್ರೆಗೆ ಮಾಧ್ಯಮಗಳು ಪ್ರಚಾರ ನೀಡುತ್ತಿಲ್ಲ ಎನ್ನುವುದು ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಕೊರತೆ ಉಂಟಾಗುತ್ತಿದ್ದರೂ ಕೂಡ, ‘ಸಾರ್ವಜನಿಕ ಪ್ರಚಾರ’ ಕಾಂಗ್ರೆಸ್‌ನೊಂದಿಗೆ ಇದೆ. ಪ್ರಚಾರದ ಬಗ್ಗೆ ಕಾಂಗ್ರೆಸ್ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. 

ಪ್ರಚಾರಕ್ಕೆ ಎರಡು ನಾಲಿಗೆಗಳಿವೆ. ಒಂದು ಸತ್ಯವನ್ನು ಹೇಳುವ ನಾಲಿಗೆ, ಇನ್ನೊಂದು ಸುಳ್ಳನ್ನು ಹೇಳುವ ನಾಲಿಗೆ. ಕಾಂಗ್ರೆಸ್‌ಗೆ ಈಗ ಮುಳುವಾಗುತ್ತಿರುವುದು ಸುಳ್ಳನ್ನು ಹೇಳುತ್ತಿರುವ ನಾಲಿಗೆ. ಬಿಜೆಪಿಯಂತಹ ಪಕ್ಷದ ರಾಜಕೀಯ ಧೋರಣೆ ಇಡೀ ದೇಶಕ್ಕೆ ಕಳೆದ ಎಂಟು ಹತ್ತು ವರ್ಷಗಳಲ್ಲಿ ಚೆನ್ನಾಗಿ ಗೊತ್ತಾಗಿದೆ. ತನ್ನ ರಾಜಕೀಯದ ಅಧಿಕಾರದುದ್ದಕ್ಕು ಹೆಚ್ಚು ಸುಳ್ಳನ್ನೇ ಹೇಳಿಕೊಂಡು ಆಡಳಿತ ನಡೆಸಿದ ಪಕ್ಷ. ಹೆಚ್ಚೇಕೆ, ಸಂವಿಧಾನದ ನಾಲ್ಕನೇ ಸ್ತಂಬ ಎಂದು ಕರೆಯಲ್ಪಡುವ ಮಾಧ್ಯಮಗಳನ್ನು ತನ್ನ ಮಡಿಲಿನ ಕೂಸುಗಳಂತೆ ಮಾಡಿಕೊಂಡ ಪಕ್ಷ. ‘ಅಥಾರಿಟೆರಿಯನ್ ಥಿಯರಿ’ಯನ್ನು ತನ್ನ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಂಡ ಪಕ್ಷ. ಮಾಧ್ಯಮಗಳು ತಾನು ನಿರ್ದೇಶಿಸಿದಂತೆ ನಡೆದುಕೊಳ್ಳಬೇಕು ಎಂಬ ವಾತಾವರಣವನ್ನು ಸೃಷ್ಟಿ ಮಾಡಿ ವಿರೋಧ ಪಕ್ಷಗಳ ವಿರುದ್ಧ ರಾಜಕೀಯ ದ್ವೇಷ ಕಾರುವುದಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟರ ಮಟ್ಟಿಗೆ ಮಾಧ್ಯಮಗಳನ್ನು ಬಳಸಿಕೊಂಡ ಪಕ್ಷ. ಎಷ್ಟರ ಮಟ್ಟಿಗೆ ಎಂದರೇ, ಒಂದು ಜವಾಬ್ದಾರಿಯುತ ಮಾಧ್ಯಮ ಕ್ಷೇತ್ರವನ್ನು ತನ್ನ ಲಾಭಕ್ಕಾಗಿ ಎಂಥಹ ಕೆಟ್ಟ ರೀತಿಯಲ್ಲಿಯೂ ಬಳಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದೆ. ಅಪಪ್ರಚಾರದ ವಿಚಾರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚು ಮಾಧ್ಯಮಗಳ ಕ್ಯಾಮೆರಾಗಳ ಮೇಲೆ ಅಪನಂಬಿಕೆ ಇದೆ. ಹಾಗಾಗಿಯೇ, ಇತ್ತೀಚೆಗೆ ತುಮುಕೂರಿನ ತುರುವೆಕರೆಯಲ್ಲಿ ರಾಹುಲ್ ಗಾಂಧಿ ನಡೆಸಿದ್ದ ಮಾಧ್ಯಮಗೋಷ್ಠಿಯಲ್ಲಿ ಸ್ವತಃ ರಾಹುಲ್ ಗಾಂಧಿ, ಮಾಧ್ಯಮಗಳ ಕ್ಯಾಮೆರಗಳನ್ನು ತೋರಿಸುತ್ತಾ, ‘ಕ್ಯಾಮೆರಾಸ್ ಆರ್ ಡಿಸ್‌ಹಾನೆಸ್ಟ್’ (ಕ್ಯಾಮೆರಾಗಳಲ್ಲಿ ಪ್ರಾಮಾಣಿಕತೆಯಿಲ್ಲ) ಎಂದು ರೇಷ್ಮೆ ಬಟ್ಟೆಯಲ್ಲಿ ಚಪ್ಪಲಿ ಸುತ್ತಿ ಹೊಡೆದಿದ್ದು. ಬಿಜೆಪಿ ಎಷ್ಟು ಕೀಳು ಮಟ್ಟದ ರಾಜಕಾರಣ ಮಾಡುತ್ತದೆ ಎಂದರೇ, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವುದಕ್ಕೆ ಮಾಧ್ಯಮಗಳಿಗೆ ಕೋಟಿ ಕೋಟಿ ವ್ಯಯಿಸುತ್ತಿದೆ. ಇತ್ತೀಚೆಗಷ್ಟೇ ಒಬ್ಬನೇ ಸಂಪಾದಕ, ಒಬ್ಬನೇ ಪೇಜ್ ಡಿಸೈನರ್, ಒಂದೇ ರೌಂಡ್ ಟೇಬಲ್ ಮೀಟಿಂಗ್‌ನಲ್ಲಿ ಸಮನಾದ ಪೇಮೆಂಟ್ ಮೂಲಕ ಎಂಬಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕನ್ನಡದ ಪ್ರಮುಖ ನಾಲ್ಕು ದಿನಪತ್ರಿಕೆಗಳ ಮೂಲಕ ಜಾಹೀರಾತು ಮುದ್ರಣ ಮಾಡಿಸಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಎಂತದ್ದೇ ಮಾಡಲಿ, ನಾವು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುತ್ತೇವೆ, ಜನರ ಕಷ್ಟಗಳಿಗೆ ಧ್ವನಿಯಾಗುತ್ತೇವೆ ಎಂದು ಮಾಧ್ಯಮಗಳ (ಸಮಾಜದ ಪ್ರತಿಬಿಂಬ ಎಂದು ಕರೆಯಲ್ಪಡುವ ಕ್ಷೇತ್ರ) ಮುಂದೆ ಹೇಳುವ ವಿರೋಧ ಪಕ್ಷದ ಮುಖಂಡ ರಾಹುಲ್‌ಗೆ ಇದ್ದಷ್ಟು ಧೈರ್ಯ ಪ್ರಧಾನಿಗೆ ಇಲ್ಲ ಎನ್ನುವುದು ಈ ದೇಶದ ಶ್ರೀಮಂತ ರಿಕ್ತತೆ. 

ಮಹಾತ್ಮ ಗಾಂಧಿಜಿಯವರ ಆತ್ಮ ಕಥೆಯ ಪುಸ್ತಕದಲ್ಲಿ ಬರುವ ‘ಇಂಡಿಯನ್ ಒಪಿನಿಯನ್’ ಎಂಬ ಒಂದು ಭಾಗದಲ್ಲಿ ಅಥವಾ ಲೇಖನದಲ್ಲಿ ಅವರು ಬರೆಯುತ್ತಾ ಹೋಗುತ್ತಾರೆ... “ಇಂಡಿಯನ್ ಒಪಿನಿಯನ್’ ಆರಂಭವಾದ ಸಂದರ್ಭದಲ್ಲಿ ಪತ್ರಿಕಾ ರಂಗದ ಪ್ರಧಾನ ಗುರಿ ‘ಸೇವೆ’ ಎಂದೆ ಗ್ರಹಿಸಿಕೊಂಡಿದ್ದೆ. ಪತ್ರಿಕಾ ರಂಗ ಒಂದು ದೊಡ್ಡ ಶಕ್ತಿ. ತಡೆರಹಿತ ನೀರಿನ ರಭಸ ಪ್ರವಾಹವು ಇಡೀ ದೇಶವನ್ನು ಮುಳುಗಿಸುವುದಲ್ಲದೇ, ಬೆಳೆಯನ್ನೂ ನಾಶ ಮಾಡುವಂತೆ, ಹತೋಟಿ ಇಲ್ಲದ ಲೇಖನಿ ಒಳ್ಳೆಯದನ್ನು ಮಾಡದೇ ಎಲ್ಲವನ್ನು ನಾಶ ಮಾಡುತ್ತದೆ ಎಂದು ಗ್ರಹಿಸಿಕೊಂಡೆ. ನಿಯಂತ್ರಣವು ಹೊರಗಡೆಯಿಂದ ಬಂದಾಗ ಅದು ಹತೋಟಿ ಎನ್ನುವುದಕ್ಕಿಂತಲೂ ಹೆಚ್ಚು ವಿಷಪೂರಿತವಾಗಿರುತ್ತದೆ. ಪತ್ರಿಕಾ ರಂಗದ ಒಳಗಿನಿಂದಲೇ ನಿಯಂತ್ರಣವನ್ನು ಸಾಧಿಸಿದರೇ ಅದು ಉಪಯುಕ್ತವಾಗಬಲ್ಲದು. ಈ ತರ್ಕವನ್ನು ಸರಿ ಎಂದು ಹೇಳುವುದಾದರೇ ಜಗತ್ತಿನಲ್ಲಿರುವ ಎಷ್ಟು ಮಂದಿ ಪತ್ರಕರ್ತರು ಪರೀಕ್ಷೆಯನ್ನು ಎದುರಿಸಬಲ್ಲರು? ಅಪ್ರಯೋಜಕರಾಗಿರುವವರನ್ನು ಯಾರು ತಡೆದು ನಿಲ್ಲಿಸಬಲ್ಲರು? ಯಾರು ತೀರ್ಪು ನೀಡುವ ನ್ಯಾಯಾಧೀಶರಾಗಬೇಕು..? ಪ್ರಯೋಜನಕ್ಕೆ ಬರುವಂತದ್ದು ಹಾಗೂ ಪ್ರಯೋಜಕ್ಕೆ ಬಾರದಿರುವುದು, ಒಳ್ಳೆಯತನ ಮತ್ತು ದುಷ್ಟತನದಂತೆ ಸಾಮಾನ್ಯವಾಗಿ ಒಟ್ಟಿಗೆ ಸಾಗುತ್ತಲಿರುತ್ತವೆ. ಮನುಷ್ಯ ತನಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬೇಕು”. ಇದು ಈ ಸಂದರ್ಭಕ್ಕೆ ಪ್ರಸ್ತುತ ಎಂದನ್ನಿಸುತ್ತಿದೆ. ವಿಮರ್ಶೆ ಮಾಡಿಕೊಳ್ಳಿ. 

-ಶ್ರೀರಾಜ್ ವಕ್ವಾಡಿ  


Thursday, October 6, 2022

ಕಾಂಗ್ರೆಸ್‌ನ ‘ಜೋಡೋ ಯಾತ್ರೆ’ ಇವತ್ತಿಗಲ್ಲ, ನಾಳೆಗೆ..!

ತಿಂದ ಪೆಟ್ಟು ದೆಸೆ ಬದಲಾಯಿಸಲಿದೆಯೇ ? | ಸಮಾಜದ ನೋವಿಗೆ ಕಾಂಗ್ರೆಸ್ ಕಿವಿ..!   

ವಿರೋಧಿಸುವುದು ಸುಲಭವೇ ಆಗಿದ್ದರೂ, ಮೋದಿ ಕಳೆದ ಎಂಟು - ಹತ್ತು ವರ್ಷಗಳಲ್ಲಿ ಭಾರತದಾದ್ಯಂತ ಸೃಷ್ಟಿಸಿದ ಅಲೆಯ ಎದುರಾಗಿಸಿಕೊಳ್ಳುವ ವಿಚಾರ ಬಂದಾಗ ರಾಹುಲ್ ಗಾಂಧಿ ಅಸಾಹಯಕರಾಗಿಯೇ ಉಳಿದು ಬಿಡುತ್ತಾರೆ. ನಿಜಕ್ಕೂ ರಾಹುಲ್ ಗಾಂಧಿಗೆ ವಿರೋಧ ಪಕ್ಷದ ನಾಯಕನಾಗಿ ದೇಶದ ಅತ್ಯಂತ ಹಿರಿಯ ಪಕ್ಷ ಕಾಂಗ್ರೆಸ್‌ನನ್ನು ಮುನ್ನಡೆಸುವುದು ಅಷ್ಟು ಸುಲಭದಲ್ಲಿರಲಿಲ್ಲ. ನಾಯಕತ್ವ ಸೋನಿಯಾ ಗಾಂಧಿಯಲ್ಲಿ ಇದ್ದರೂ ಅಥವಾ ಹಿರಿಯ ಮುಖಂಡರೂ ಬೇಕಾದಷ್ಟು ಮಂದಿ ಇದ್ದರೂ ಕೂಡ ‘ಗಾಂಧಿ ಕುಟುಂಬ’ದ ಕುಡಿಯೊಂದು ಮುಂದಾಳತ್ವವನ್ನು ವಹಿಸುವುದನ್ನು ಸ್ವತಃ ಕಾಂಗ್ರೆಸ್ ಕೂಡ (ಭಿನ್ನ ಧ್ವನಿಗಳನ್ನು ಹೊರತಾಗಿ) ಬಯಸಿತ್ತು. ರಾಹುಲ್ ಗಾಂಧಿ ರಾಜಕೀಯದ ಕುಟುಂಬದ ಹಿನ್ನೆಲೆಯಿಂದ ಬಂದಿರಬಹುದು ಆದರೇ, ರಾಜಕೀಯವನ್ನು ಹೇಗೆ ನಡೆಸಬೇಕೆಂಬ ವಿಚಾರ ರಾಹುಲ್‌ಗೆ ಎಂಟು ಹತ್ತು ವರ್ಷಗಳ ಹಿಂದೆ ಅಷ್ಟಾಗಿ ಗೊತ್ತಿರಲಿಲ್ಲ. ಅನುಭವದ ಕೊರತೆ. ಆದರೇ, ರಾಹುಲ್ ರಾಜಕೀಯದ ಸೂತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿಕೊಂಡವರು. ಈ ದೇಶದ ಬಹುತ್ವವನ್ನು ಅರ್ಥೈಸಿಕೊಂಡವರು. ಜೊತೆಗೆ ಹೇಗೆ ಅನ್ವಯಿಸಬೇಕು ಎಂದು ತಿಳಿದುಕೊಂಡವರು. ಆದರೇ, ಒಂದು ಪಕ್ಷ ಅಥವಾ ಸಂಘಟನೆಯನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಅಥವಾ ಅಳವಡಿಸಿಕೊಳ್ಳುವುದರಲ್ಲಿ ಸೋತವರು. ಬಹುಶಃ ಇದನ್ನು ಸ್ವತಃ ರಾಹುಲ್ ಗಾಂಧಿ ಕೂಡ ಒಪ್ಪಿಕೊಳ್ಳುತ್ತಾರೆ ಎಂದೆನ್ನಿಸುತ್ತದೆ. ಅಂತಹ ಮನಸ್ಸು ಅವರಲ್ಲಿದೆ ಎನ್ನುವುದು ಅವರ ಇತ್ತೀಚೆಗಿನ ಬೆಳವಣಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೇ, ಅರ್ಥವಾಗುತ್ತದೆ. 

ಬಲವಂತವಾಗಿ ವಾಟ್ಸಾಪ್‌ನಂತಹ ಸೋಶಿಯಲ್ ಮೀಡಿಯಾಗಳ ಯೂನಿವರ್ಸಿಟಿಗಳಿಂದ ಪದವಿ ಪಡೆದ ಸೋ ಕಾಲ್ಡ್ ದೇಶಪ್ರೇಮಿಗಳಿಗೆ ಈ ಎಲ್ಲಾ ವಿಚಾರ ತಿಳಿಯುವುದಿಲ್ಲ. ಕಂಪ್ಯೂಟರೈಸ್ಡ್ ಮೈಂಡ್‌ಗಳನ್ನು ಪೋಷಣೆ ಮಾಡುತ್ತಿರುವ ರಾಹುಲ್ ವಿರೋಧಿ ರಾಜಕೀಯ ಶಕ್ತಿ ಈ ಸಮಾಜದಲ್ಲಿ ಸತ್ಯವನ್ನು, ಹಕ್ಕುಗಳನ್ನು ಪ್ರಶ್ನಿಸುವ ಬಾಯಿಗೆ ಕೋಲು ತುರುಕಿಸಿ ಬಿಟ್ಟಿತ್ತು. ವ್ಯವಸ್ಥೆಯ ತಪ್ಪುಗಳನ್ನು ಮುಚ್ಚಿ, ಬಣ್ಣ ಹಚ್ಚಿ ಸಮಾಜದ ನೈಜ ಧ್ವನಿಯ ಕೊರಳು ಹಿಸುಕುವ ಪ್ರಯತ್ನ ಮಾಡಿತ್ತು. ಹಾಗಂತ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ದೂಷಿಸುವುದಲ್ಲ. ಕಾಂಗ್ರೆಸ್ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎನ್ನುವಂತಹ ರಾಜಕೀಯಕ್ಕೆ ಇಳಿದಿಲ್ಲ ಎನ್ನುವುದೇ ಇಲ್ಲಿನ ಪ್ರಧಾನ ದೂಷಣೆ.

ಕಾಂಗ್ರೆಸ್ ೨೦೧೪ರಲ್ಲಿ ತಿಂದ ಬಲವಾದ ರಾಜಕೀಯ ಪೆಟ್ಟಿನಿಂದ ಚೇತರಿಸಿಕೊಂಡು ಮತ್ತೆ ರಾಜಕೀಯದ ಪಾಠ ಹೊಸದಾಗಿ ಕಲಿಯುವುದಕ್ಕೆ ಆರಂಭಿಸುವಾಗ ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿ ಸಂಶಯಗಳಿAದ ಹಾಗೂ ಆಂತಂಕಗಳಿಂದ ಛಿದ್ರಛಿದ್ರವಾಗಿತ್ತು. ಈಗ ಅದನ್ನು ಜೋಡಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಕೆಲಸ ಅಷ್ಟು ಸುಲಭವಲ್ಲ ಎಂಬ ಅರಿವು ಸ್ವತಃ ಕಾಂಗ್ರೆಸ್‌ಗೂ ಕೂಡ ಇದೆ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಈವರೆಗೆ ಅಂದರೇ ೨೦೧೪ರಿಂದ ಈವರೆಗೆ ಮಾಡಿದ ಒಂದು ದೊಡ್ಡ ತಪ್ಪೆಂದರೇ, ತಾನು ಮಾಡಬೇಕಾಗಿರುವ ಕೆಲಸವನ್ನು ಅತ್ಯಂತ ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಕಂಡಿದ್ದು. ಕಾಂಗ್ರೆಸ್ ಸಮಾಜದ ಬಗ್ಗೆ ಹಾಗೂ ತನ್ನ ರಾಜಕೀಯದ ಅಸ್ತಿತ್ವದ ಬಗ್ಗೆ ಔದರ‍್ಯವನ್ನು ಈ ಹಿಂದೆಯೇ ತೋರಿಸಬೇಕಿತ್ತು. ಅದರಿಂದಲೇ ಕಾಂಗ್ರೆಸ್ ತನ್ನನ್ನು ತಾನು ಕಾಪಾಡಿಕೊಳ್ಳಬೇಕಿತ್ತು. ಆದರೇ, ಮೊದಲೇ ಮಾಡಬೇಕಾಗಿರುವುದನ್ನು ಮಾಡದೇ ಸೋಲು ಉಣ್ಣಬೇಕಾದ ಪರಿಸ್ಥಿತಿ ಕಾಂಗ್ರೆಸ್ ಬಂದೊದಗಿತ್ತು. ಈಗ ಕಾಂಗ್ರೆಸ್‌ಗೆ ಕಾಲ, ಸ್ಥಿತಿ, ಸಂಬಂಧಗಳ ಅರಿವಾಗಿದೆ. ಕಾಂಗ್ರೆಸ್‌ನ ಮನಸ್ಸು ಈ ವಿಷಯಗಳ ವಿವೇಚನೆಯಲ್ಲಿ ತೊಡಗಿ ಸಾಕಷ್ಟು ಔದರ‍್ಯ ಮೆರೆಯುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಇದಕ್ಕಿಂತ ಉತ್ತಮವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗದು ಎಂದು ಯೋಚಿಸುತ್ತಿದೆ. ಇಂತಹ ಚಿಂತನೆಯಿAದಾಗಿ ತಾನು ಮಾಡುವ ಯಾವುದೇ ಕೆಲಸವನ್ನು ತೀರಾ ಕಡಿಮೆ ಬೆಲೆಯುಳ್ಳದ್ದು ಎಂದು ಭಾವಿಸದೇ ಜನರ ಸಂಪರ್ಕ ಸಾಧಿಸುವ ಮುಖವಾಗಿ ಕಾಂಗ್ರೆಸ್ ಹೆಜ್ಜೆ ಇಡುತ್ತಿರುವುದು ಶ್ಲಾಘನೀಯ. ಕಾಂಗ್ರೆಸ್ ಈ ‘ಜೋಡೋ’ ಅಥವಾ ಐಕ್ಯತಾ ಯಾತ್ರೆ ಮಾಡಿದ ತಕ್ಷಣವೇ ಏಕಾಏಕಿಯಾಗಿ ಜನರೆಲ್ಲಾ ತನ್ನತ್ತ ತಿರುಗಿ ಅಧಿಕಾರ ಬಂದು ಬಿಡುತ್ತದೆ ಎಂಬ ಭ್ರಮೆಯಲ್ಲಿಯೂ ಇಲ್ಲ. ಇದು ಇವತ್ತಿಗಲ್ಲ ನಾಳೆಗೆ. 

ಕಾಂಗ್ರೆಸ್‌ಗೆ ಈಗ ತನ್ನ ಕಮಿಟ್‌ಮೆಂಟ್ ಬಗ್ಗೆ ಸ್ಪಷ್ಟತೆ ದೊರಕಿದೆ. ಅಧಿಕಾರಕ್ಕೆ ಬರುತ್ತದೋ ಇಲ್ಲವೋ, ಈ ಯಾತ್ರೆ ಮುಗಿಯುವುದರೊಳಗೆ ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾಗಬೇಕಾದ ಬದಲಾವಣೆಯನ್ನು ಖಂಡಿತ ತಂದೇ ತರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ರಾಜಕೀಯ ವ್ಯವಸ್ಥೆಯಲ್ಲಿ ಬದುಕಿ ಉಳಿಯಲು ಸಾಕಾಗುವಷ್ಟನ್ನು ಸಂಪಾದಿಸಿಕೊಳ್ಳಲು ತಾನು ಶಕ್ತನೇ ಎಂಬ ತೀವ್ರ ಆಂತರಿಕ ಅಳುಕು ಈಗ ಕಾಣಿಸುತ್ತಿಲ್ಲ. ಇನ್ನು, ಅಧಿಕಾರಕ್ಕಿಂತ ಮೊದಲು ಬಿಜೆಪಿಯತ್ತ ತೆರಳಿದ್ದ ತನ್ನ ಓಟ್‌ಗಳನ್ನು ಮೊದಲು ಸೆಳೆದುಕೊಳ್ಳುವ ಪ್ರಯತ್ನದಲ್ಲಿಯೇ ಕಾಂಗ್ರೆಸ್ ಇದೆ ಎನ್ನುವುದು ಸ್ಪಷ್ಟವಾಗುವುದು ಎಲ್ಲಿ ಕೇಳಿದರೇ ರಾಹುಲ್ ಗಾಂಧಿ ಅವರ ಮಾತುಗಳಲ್ಲಿ. ರಾಹುಲ್ ಯಾತ್ರೆಯ ಸಂದರ್ಭದಲ್ಲಿ ಎಲ್ಲಿಯೂ ಉಗ್ರವಾಗಿ ತನ್ನ ರಾಜಕೀಯ ವಿರೋಧಿಯ ಬಗ್ಗೆ ಮಾತಾಡಿಲ್ಲ. ಜನರ ಧ್ವನಿ ಕೇಳುವ, ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಪ್ರಯತ್ನದಲ್ಲಿಯೇ ಇದ್ದಾರೆ. ಮಳೆ, ಬಿಸಿಲು, ಚಳಿ ಎನ್ನದೇ ಪಾದಯಾತ್ರೆಯಲ್ಲಿ ಸಾಗುತ್ತಿರುವ ‘ಭಾರತ್ ಜೋಡೋ ಯಾತ್ರೆ’ ರಾಜಕೀಯವಾಗಿ ಸದ್ಯಕ್ಕೆ ದೊಡ್ಡ ಮಟ್ಟದ ಇಂಪ್ಯಾಕ್ಟ್ ಮಾಡದೇ ಹೋದರು ಕೂಡ ಇದು ಕಾಂಗ್ರೆಸ್ ಇತಿಹಾಸದಲ್ಲಿ, ದೇಶದ ಇತಿಹಾಸದಲ್ಲಿ ಮಹತ್ತರದ್ದಾಗಿ ಉಳಿಯಲಿದೆ ಎನ್ನುವುದು ಸ್ಪಷ್ಟ. 

ಕಾಂಗ್ರೆಸ್ ಒಂದು ಹಂತದಲ್ಲಿ ಭಾರಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಆಯೋಜಿಸುತ್ತಿದೆ. ಅದರ ವಿಸ್ತೃತ ಸಿದ್ಧತೆಯ ಬಗ್ಗೆ ಕಾಂಗ್ರೆಸ್‌ಗೆ ಆಳವಾದ ಅರಿವು ಇದೆ ಎಂದನ್ನಿಸುತ್ತಿದೆ. ಅದರಲ್ಲಿ ಭವಿಷ್ಯ ಭಾರತದ ಕನಸಿದೆ. ಈ ಎರಡೂ ನಿರೀಕ್ಷೆಗಳನ್ನು ಒಂದುಗೂಡಿಸುವುದು ಉತ್ತಮವೆಂದು ರಾಹುಲ್ ಈ ಜೋಡೋ ಯಾತ್ರೆ ಆರಂಭಿಸಿದ್ದಾರೆ ಎಂದನ್ನಿಸುತ್ತಿದೆ. ಬಹಳ ಸ್ಪಷ್ಟವಾಗಿ ಇಲ್ಲಿ ಸಾರ್ವಜನಿಕನೊಬ್ಬ ಗಮನಿಸಲೇ ಬೇಕಾದ ವಿಷಯವೇನೆಂದರೇ, ಕಾಂಗ್ರೆಸ್ ಪ್ರತ್ಯಕ್ಷವಾಗಿ ಎಂದೂ ಎಲ್ಲಿಯೂ ಬಿಜೆಪಿಯನ್ನು ದೂಷಿಸುತ್ತಿಲ್ಲ. ಜನರ ಮಾತುಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಈ ದೇಶದವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದೆ. ಅದೇ ಹಳೆಯ ತಂತ್ರಗಾರಿಕೆ, ಆಡಳಿತ ಪಕ್ಷ ವಿರುದ್ಧದ ಭಾಷಣ, ಅಭಿಯಾನ ಮೊದಲಾದವುಗಳನ್ನು ಮಾಡಿದ್ದೇ ಆಗಿದ್ದರೇ ಅದು ತೀರಾ ಸಾಮಾನ್ಯವಾಗಿಯೇ ಇತರೆ ಪಾದಯಾತ್ರೆಗಳಂತೆಯೇ ಆಗಿ ಬಿಡುತ್ತಿತ್ತು. ಆದರೇ, ಇಲ್ಲಿ ಒಂದಿಷ್ಟು ಕಾಂಗ್ರೆಸ್‌ನ ನೈಜ ಉದ್ದೇಶದೊಂದಿಗೆ ಸಮಾಜಕ್ಕೆ ಕಿವಿಯಾಗುವ ಅತ್ಯಾಸೆಯೂ ಕಾಣಿಸುತ್ತಿರುವುದು ಈ ಜೋಡೋ ಯಾತ್ರೆಯ ಬಗ್ಗೆ ಗಮನ ಹರಿಸುವಂತೆ ಮಾಡುತ್ತಿದೆ. 

ಇದು ಕಾಂಗ್ರೆಸ್‌ನ ಸತ್ಯಶೋಧನೆಯ ಕಥೆ. ಕಾಂಗ್ರೆಸ್‌ಗೆ ದೇಶದಲ್ಲಿ ತನ್ನ ಇರುವಿಕೆಯ ಸದ್ಯದ ಸ್ಥಿತಿಯ ಬಗ್ಗೆ ತುಂಬಾ ಚೆನ್ನಾಗಿಯೇ ತಿಳಿದಿದೆ. ಅದರ ಸದ್ಯದ ಸ್ಥಿತಿ ವಿಷದಷ್ಟು ಕಹಿ. ಆದರೇ, ಕಾಂಗ್ರೆಸ್ ಅದನ್ನು ನುಂಗಲೇ ಬೇಕಾದ ಪರಿಸ್ಥಿತಿಯಲ್ಲಿದೆ. ಅವಮಾನವನ್ನು ಮುಚ್ಚಿಕೊಂಡು ನಡೆಯಬೇಕಿದೆ. ಇಂತಹ ಸ್ಥಿತಿಯನ್ನು ಮತ್ತೆ ತಂದುಕೊಳ್ಳುವುದಿಲ್ಲ ಎಂಬ ಮನವರಿಕೆ ಕಾಂಗ್ರೆಸ್‌ಗೆ ಆಗಿದೆ ಎಂದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಕಳೆದ ಎಂಟು ಹತ್ತು ವರ್ಷಗಳಲ್ಲಿ ತಿಂದ ಬಲವಾದ ರಾಜಕೀಯದ ಪೆಟ್ಟು ಅದರ ದೆಸೆ ಬದಲಿಸುವುದಕ್ಕೆ ಸಾಧ್ಯವಿದೆ. ಅದರ ನಾಂದಿಯೇ ಈ ಯಾತ್ರೆ ಎಂದನ್ನಿಸುತ್ತಿದೆ. ಅದರಿಂದಲೇ ಲಾಭ ಪಡೆದುಕೊಳ್ಳಬೇಕಿದೆ. ಗಣತಂತ್ರ ಸರ್ವಾಧಿಕಾರ ಅಥವಾ ವಸಾಹತುಶಾಹಿ ಧೋರಣೆಯ ರಾಜಕೀಯಕ್ಕೆ ಒಳಗಾಗಬಾರದು ಎನ್ನುವುದು ಕಾಂಗ್ರೆಸ್‌ನ ಉದ್ದೇಶವೆಂದು ಜನರಿಗೆ ಮನವರಿಕೆ ಮಾಡುತ್ತಿದೆ. ಕಾಂಗ್ರೆಸ್‌ನ ಧ್ವನಿ ಬಿಜೆಪಿಯ ವಿರುದ್ಧವಲ್ಲ. ಬಿಜೆಪಿ ಪಾಲಿಸುತ್ತಿರುವ ಅಥವಾ ವಸಾಹತುಶಾಹಿ ಧೋರಣೆಯ ರಾಜಕೀಯದ ವಿರುದ್ಧ ಎನ್ನುವುದು ರಾಜಕೀಯ ಪಡಸಾಲೆ ಗಮನಿಸುತ್ತಿದೆ. ಇದು ಸ್ವತಃ ಬಿಜೆಪಿಗೂ ಆತಂಕ ಸೃಷ್ಟಿಸಿದೆ. ಯಾಕೆಂದರೇ, ಕಾಂಗ್ರೆಸ್ ಈ ಯಾತ್ರೆ ಮೂಲಕ ಎಂದೂ ವೈಯಕ್ತಿಕ ಟೀಕೆ ಅಥವಾ ಒಂದು ಪಕ್ಷದ ವಿರುದ್ಧ ಘೋಷಣೆ ಕೂಗುವುದೋ ಅಥವಾ ಭಾಷಣ ಮಾಡುವುದೋ ಮಾಡುತ್ತಿಲ್ಲ. ಅಂತಹ ಕೀಳು ಮಟ್ಟದ ರಾಜಕೀಯದ ಆವೃತ್ತಿ ಬದಲಾಗಿದೆ ಎಂದು ಕಾಂಗ್ರೆಸ್‌ಗೆ ಗೊತ್ತಾಗಿದೆ ಎನ್ನುವುದು ಕಾಂಗ್ರೆಸ್ ಬದಲಾಗಿದೆ ಎನ್ನುವುದನ್ನು ಸೂಚಿಸುತ್ತಿದೆ. 

ಇನ್ನು, ತಾನು ಎದುರಿಸಬೇಕಾದ ತೀವ್ರ ಕಷ್ಟದ ಹಾದಿಗಳನ್ನು ಸುಲಭ ಮಾಡಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ. ಯಾವುದೇ ಸುಳ್ಳು ಭರವಸೆ ನೀಡುತ್ತಿಲ್ಲ, ತಾವು ಹೀಗೆ ಮಾಡಿದ್ದೇವೆ, ಹಾಗೆ ಮಾಡಿದ್ದೇವೆ ಎಂದು ತನ್ನನ್ನು ತಾನು ವೈಭವೀಕರಿಸಿಕೊಳ್ಳುತ್ತಿಲ್ಲ. ಈ ಸ್ವಾಸ್ಥ್ಯ ಸಮಾಜದ ಕನಸನ್ನು ಬಿತ್ತುವ ಪ್ರಯತ್ನ ಮಾಡುತ್ತಿದೆ. ಬಂಡಾಯವೇಳುತ್ತಿಲ್ಲ. ಇದು ದೇಶದ ಅವ್ಯವಸ್ಥೆಯ ವಿರುದ್ಧ ಸಾತ್ವಿಕ ಕೋಪ. ಬಂಡಾಯಕ್ಕಿಂತ ಸಾತ್ವಿಕ ಕೋಪಕ್ಕೆ ಹೆಚ್ಚು ಶಕ್ತಿ. ಒಟ್ಟಿನಲ್ಲಿ, ಯಾತ್ರೆ ಮುಂದುವರಿಯುತ್ತಿದೆ. ಎಲ್ಲಿಯವರಗೆ ಮುಟ್ಟಲಿದೆ..? ಏನು ಬದಲಾವಣೆ ತರಲಿದೆ..? ಹೊಸ ರಾಜಕೀಯ ಕ್ರಾಂತಿಗೆ ನಾಂದಿಯಾಗಲಿದೆಯೇ, ಕಾಂಗ್ರೆಸ್‌ನ ಸಾತ್ವಿಕ ಕೋಪದ ಅಂತಿಮ ಫಲಿತಾಂಶ ಹೇಗಿರಲಿದೆ ಎನ್ನುವುದರ ಬಗ್ಗೆ ಪ್ರತಿದಿನ ಕುತೂಹಲ ಹೆಚ್ಚುತ್ತಿದೆ. 

-ಶ್ರೀರಾಜ್ ವಕ್ವಾಡಿ       


Thursday, September 29, 2022

ಸುಳ್ಳುಗಳು, ಐಟಿ ಸೆಲ್‌ಗಳು, ಮಾಸ್ ಬ್ರೈನ್‌ಗಳು..!

‘ಡಿಜಿಟಲೀಕರಣ’ ಬಿಜೆಪಿಯ ರಾಜಕೀಯ ಅಸ್ತ್ರ | ಪ್ರಚಾರ ರಾಜಕೀಯದಲ್ಲಿ ಸೋತ ಕಾಂಗ್ರೆಸ್.!

ಸತ್ಯವನ್ನು ಸುಳ್ಳು ಮಾಡುವ ಮತ್ತು ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಏಕೈಕ ಸಾಧನವೆಂದರೇ, ಅದು ರಾಜಕೀಯ. ಸುಳ್ಳುಗಳು ಇಲ್ಲಿ ಪಟ್ಟವನ್ನು ಏರಿಸುತ್ತವೆ. ಸತ್ಯಕ್ಕಿಂತ ಸುಳ್ಳು ಇಲ್ಲಿ ಬೇಗ ಆಕರ್ಷಣೆಗೆ ಒಳಗಾಗುತ್ತದೆ. ಅದು ರಾಜಕೀಯದ ಲಕ್ಷಣ ಮತ್ತು ಇಂದಿನ ರಾಜಕಾರಣ. ರಾಜಕೀಯದ ‘ಸಣ್ಣತನ’ದಿಂದ ರೋಸಿ ಹೋದ ಸಾಮಾನ್ಯ ಜನರಿಗೆ ಇವು ಗೊತ್ತಾಗದೇ ಹೋಗುವುದು ಈ ಕಾಲಮಾನದ ದುರಂತ. 

‘ಮಾಸ್ ಬ್ರೈನ್’ ಬಳಸಿಕೊಂಡಿತ್ತು ಬಿಜೆಪಿ : ಸಾಮಾಜಿಕ ಸಿದ್ಧಾಂತವೇ ಹಾಗೆ. ಅಧಿಕಾರದಲ್ಲಿರುವವ ಅಥವಾ ಸಮಾಜದ ಮುಂಪಕ್ತಿಯಲ್ಲಿರುವವ ತನ್ನದೇ ಆದ ಹೊಸ ಸಿದ್ಧಾಂತವನ್ನೋ, ಯೋಜನೆಯನ್ನೋ, ಐಡಿಯಾಲಜಿಯನ್ನೋ ತಯಾರು ಮಾಡಿ ಅದನ್ನು ಸಮಾಜಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟರಮಟ್ಟಿಗೆ ಪ್ರಚಾರ/ಪ್ರಸಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾನೆ. ಅದು ಸತ್ಯವೋ, ಸುಳ್ಳೊ ಅಥವಾ ಅದರಲ್ಲಿ ಸ್ಪಷ್ಟತೆಯಿದೆಯೋ, ಇಲ್ಲವೋ ಎನ್ನುವುದು ಅದರ ಮತ್ತೊಂದು ಮಜಲು. ಅದರ ಮರ್ಜಿ ಬೇರೆಯದೇ ಇದೆ. ತಾನು ತಯಾರಿಸಿದ ಅಥವಾ ರೂಪಿಸಿದ ಹೊಸ ಸಿದ್ಧಾಂತ/ಯೋಜನೆಯನ್ನು ಪ್ರಚಾರ/ಪ್ರಸಾರ ಮಾಡುವುದರ ಮೂಲಕ ಸಮಾಜದ ‘ಮಾಸ್ ಬ್ರೈನ್’ಗೆ ತುಂಬಿ ತನ್ನತ್ತ ಸೆಳೆದುಕೊಳ್ಳುತ್ತಾನೆ. ವೈಯಕ್ತಿಕ ಬುದ್ಧಿಗೆ, ಚಿಂತನೆಗೆ ಒಳಗಾಗದಂತೆ ಆತ ಹಿಡಿದಿಟ್ಟುಕೊಂಡಿರುತ್ತಾನೆ. ‘ಮಾಸ್ ಬ್ರೈನ್’/‘ಸಾಮೂಹಿಕ ಬುದ್ಧಿ’ ಇಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಸಮಾಜದಲ್ಲಿರುವವ ಸಾಮಾನ್ಯನೊಬ್ಬ ಏನಿದು ? ಯಾಕಿದು ? ಇದರ ಉದ್ದೇಶವೇನು..? ಎಂಬೆಲ್ಲದರ ಬಗ್ಗೆ ಚಿಂತನೆಗೆ ಹೋಗದೆ ಅಥವಾ ತಲೆ ಕೆಡಿಸಿಕೊಳ್ಳದೇ, ಎಲ್ಲರೊಂದಿಗೆ ತನ್ನದೂ ಒಂದು ಇರಲಿ ಎಂಬ ದೃಷ್ಟಿಯಲ್ಲಿ ಇರುತ್ತಾನೆ. ಈ ದೇಶದಲ್ಲಿರುವ ಎಲ್ಲಾ ಸಿದ್ಧಾಂತಗಳು, ಐಡಿಯಾಲಜಿಗಳು ಹೀಗೆಯೇ ಹುಟ್ಟಿಕೊಂಡಿರುವವುಗಳು. ಯಾವನೋ ಒಬ್ಬ ತಯಾರು ಮಾಡಿ ಸಮಾಜದ ತನ್ನ ‘ಟಾರ್ಗೇಟ್ ಗ್ರೂಪ್’ಗೆ ಪ್ರಚಾರ ಮಾಡಿದ, ಸಮಾಜ ಅದರ ಪ್ರಭಾವಕ್ಕೆ ಒಳಗಾಯ್ತು. ಈ ರೀತಿಯಲ್ಲಿ ‘ಮಾಸ್ ಬ್ರೈನ್’ನನ್ನು ಬಳಸಿಕೊಂಡ ಐಡಿಯಾಲಜಿಗಳು ಸಮಾಜದಲ್ಲಿ ಹೊಸದೊಂದು ಶಕ್ತಿಯ ಉಗಮಕ್ಕೂ ಸಾಕ್ಷಿಯಾಗಿದ್ದೂ ಇವೆ, ಸಮಾಜವನ್ನು ಬಲಿತೆಗೆದುಕೊಂಡ ಉದಾಹರಣೆಗಳೂ ಇವೆ. 

ಕಳೆದ ಎಂಟು ಹತ್ತು ವರ್ಷಗಳಿಂದ ಈ ದೇಶದಲ್ಲಿ ಬಿಜೆಪಿ ಪಾಲಿಸಿಕೊಂಡು ಬಂದಿದ್ದು ಇದೇ ಸೈದ್ಧಾಂತಿಕ ತಂತ್ರಗಾರಿಕೆ. ದೇಶದಲ್ಲಿ ಎಂಥಹ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಆಡಳಿತದ ವಿರುದ್ಧ ಅಸಮಾಧಾನ ಇದ್ದಾಗಲೂ ಬಿಜೆಪಿಯ ಕೈ ಹಿಡಿದಿದ್ದು ಇದೇ ‘ಮಾಸ್ ಬ್ರೈನ್’. ಬಿಜೆಪಿ ಅಧಿಕಾರ ಹಿಡಿದಿದ್ದೇ ಈ ‘ಮಾಸ್ ಬ್ರೈನ್’ ತಂತ್ರಗಾರಿಕೆಯನ್ನು ಬಳಸಿಕೊಂಡು ಎನ್ನುವುದು ಅಕ್ಷರಶಃ ಸತ್ಯ. ಬಿಜೆಪಿಗೆ ತನ್ನ ಟಾರ್ಗೇಟ್ ಗ್ರೂಪ್‌ನ ಬಗ್ಗೆ ಸ್ಪಷ್ಟವಾದ ನೀಲಿ ನಕ್ಷೆ ಇದ್ದಿತ್ತು. ಒಂದು ಸಾಮೂಹಿಕ ವಲಯ ಈ ಮಾಸ್ ಬ್ರೈನ್ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾದರೇ, ಅದರಿಂದ ಹೊರಗೆ ಬರುವುದು ಅಷ್ಟು ಸುಲಭವಿಲ್ಲ. ಅದು ಬಿಜೆಪಿಯಂತಹ ಪಕ್ಷಕ್ಕೆ ಗೊತ್ತಿತ್ತು. ಅದರ ಆಧಾರದಲ್ಲಿಯೇ ಈ ದೇಶದಲ್ಲಿ ಬಿಜೆಪಿ ಈ ತಂತ್ರಗಾರಿಕೆಯನ್ನು ಬಳಸಿಕೊಂಡು ಇಡೀ ಭಾರತದ ತನ್ನ ಟಾರ್ಗೇಟ್ ಗ್ರೂಪ್ (ಯುವ ಸಮುದಾಯ, ಹಿಂದೂ ಸಮುದಾಯ)ನನ್ನು ವಶ ಪಡಿಸಿಕೊಂಡಿತ್ತು. ಅದರ ಫಲವಾಗಿಯೇ ತನ್ನ ಆಡಳಿತದ ವಿರುದ್ಧ ಎಂಥಹ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ಮತ್ತೆ ಅಧಿಕಾರ ಹಿಡಿಯುತ್ತಿರುವುದು ಎನ್ನುವುದು ಇಲ್ಲಿ ಚಿಂತನಾರ್ಹ ವಿಷಯ. ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡ ಈ ಸೈದ್ಧಾಂತಿಕ ತಂತ್ರಗಾರಿಕೆಯನ್ನು ಉಳಿದ ಯಾವುದೇ ರಾಜಕೀಯ ಪಕ್ಷಗಳು, ಅದರಲ್ಲೂ ಪ್ರಮುಖವಾಗಿ ದೇಶದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಬಳಸಿಕೊಂಡಿಲ್ಲ. 

ಬಿಜೆಪಿ-ಕಾಂಗ್ರೆಸ್ ನಡುವೆ ಡಿಜಿಟಲ್ ಡಿವೈಡ್ : ಉಳಿದೆಲ್ಲಾ ಪಕ್ಷಗಳನ್ನು ಬಿಟ್ಟು ಯೋಚಿಸುವುದಾದರೇ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇರುವುದು ‘ಡಿಜಿಟಿಲ್ ಡಿವೈಡ್’. ಈ ಡಿಜಿಟಲ್ ಡಿವೈಡ್ ಅಂದರೇ, ಡಿಜಿಟಲ್ ತಂತ್ರಜ್ಞಾನವನ್ನು ಯಾರು ಹೊಂದಿರುವವರು ಅಥವಾ ಯಾರೂ ಅತ್ಯಂತ ಸಕ್ರಿಯವಾಗಿ ಬಳಸಿಕೊಳ್ಳುವವರು ಮತ್ತು ಹೊಂದಿರದವರು, ಬಳಸಿಕೊಳ್ಳದವರ ನಡುವೆ ಇರುವ ಅಂತರವನ್ನು ಡಿಜಿಟಲ್ ಡಿವೈಡ್ ಎಂದು ಹೇಳಲಾಗುತ್ತದೆ. ಇದು ಕೇವಲ ಕಂಪ್ಯೂಟರ್, ಇಂಟರ್‌ನೆಟ್‌ಗಳಿಗೆ ಮಾತ್ರ ಸೀಮಿತವಲ್ಲ. ಮಾಹಿತಿ ಹಾಗೂ ಸಂವಹನಗಳಿಗೂ ಕೂಡ ಇದು ವಿಸ್ತಾರಗೊಂಡಿದೆ. ಇದು ಜನಸ್ನೇಹಿಯೂ ಹೌದು ಮತ್ತು ಸಾರ್ವಜನಿಕ ವಲಯಕ್ಕೆ ಒಂದು ರೀತಿಯಲ್ಲಿ ಮಾರಕವೂ ಹೌದು. ಈ ಡಿಜಿಟಲ್ ಎಂಬ ಸಾಧನವನ್ನು ತನ್ನ ರಾಜಕೀಯವಾಗಿ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಒಂದು ಪಕ್ಷ ಈ ದೇಶದಲ್ಲಿದೆ ಎಂತಾದರೇ ಅದು ಬಿಜೆಪಿ ಪಕ್ಷ. ತಾನು ಅಧಿಕಾರ ಹಿಡಿದಾಗಿನಿಂದ ಹೇಳುತ್ತಾ ಬಂದಿರುವ ‘ಡಿಜಿಟಲೀಕರಣ ಅಥವಾ ಡಿಜಿಟಲೈಸೇಶನ್’ನ ಮೂಲಕವೇ ಉಳಿದ ಪಕ್ಷಗಳು ಇದರ ಹಿಂದೆ ರಾಜಕೀಯದ ಘನ ಉದ್ದೇಶವಿದೆ ಎಂದು ತಿಳಿದುಕೊಳ್ಳಬೇಕಿತ್ತು. ಆದರೇ, ಈ ದೇಶದ ಪ್ರತಿಪಕ್ಷಗಳು, ಈ ದೇಶದ ಸಾರ್ವಜನಿಕ ವಲಯ ಅದನ್ನು ಅರ್ಥೈಸಿಕೊಳ್ಳದಿರದಷ್ಟು ಬೌದ್ಧಿಕ ಬಡಸ್ಥಿಕೆಯಲ್ಲಿದ್ದವು ಎಂದರೇ, ಅದು ನಿಜಕ್ಕೂ ವಿಷಾದನೀಯವೇ ಸರಿ. 

ಅದು ಡಿಜಿಟಲ್ ತಂತ್ರಜ್ಞಾನ ವ್ಯಾಪಕವಾಗಿ ಹರಡಿದ್ದ ಪಕ್ವ ಕಾಲ. ಆ ಸಂದರ್ಭದಲ್ಲಿ ಜನರನ್ನು ತನ್ನತ್ತ ಸೆಳೆದುಕೊಳ್ಳಬೇಕೆಂದರೇ, ಡಿಜಿಟಲ್ ಎಂಬ ‘ಮಾಯಾ ಜಾಲ’ ಒಂದೇ ಒಂದು ಸಾಧನ ಎಂದು ಸೂಕ್ಷö್ಮವಾಗಿ ಅರ್ಥೈಸಿಕೊಂಡ ಪಕ್ಷವೊಂದಿದ್ದರೇ ಅದು ಬಿಜೆಪಿ ಮಾತ್ರ. ಡಿಜಿಟಲ್ ಇಂಡಿಯಾ ಎಂಬ ಒಂದು ಯೋಜನೆಯ ಮೂಲಕ ೨೦೧೫ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ ಕೋಟಿ ಅನುಮೋದನೆ ಹೊರಡಿಸಿ, ಭಾರತೀಯರ ಡಿಜಿಟಲ್ ಸಬಲೀಕರಣ, ಮಾಹಿತಿ ಡಿಜಿಟಲೀಕರಣದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಆರಂಭಿಸಿದ ಡಿಜಿಟಲ್ ಇಂಡಿಯಾ ಒಂದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೇ, ಬಿಜೆಪಿಯಂತಹ ಪಕ್ಷದ ಜಾಣ್ಮೆ ಅಷ್ಟಕ್ಕೇ ನಿಂತಿರಲಿಲ್ಲ. ಇದೇ ಡಿಜಿಟಲ್ ಸಾಧನವನ್ನೇ ಬಳಸಿಕೊಂಡು ತನ್ನ ಪಕ್ಷದ ಐಟಿ ಸೆಲ್‌ಗಳನ್ನು ಬಲ ಪಡಿಸಿಕೊಂಡಿತು. ೨೦೧೪ರ ಆದಿಯಾಗಿ ಡಿಜಿಟಲ್ ಮೀಡಿಯಾಗಳ ಮೂಲಕ ಐಟಿ ಸೆಲ್‌ನೊಂದಿಗೆ ‘ಮಾಸ್ ಬ್ರೈನ್' ಸೈದ್ಧಾಂತಿಕ ತಂತ್ರಗಾರಿಕೆ’ಯನ್ನು ತನ್ನ ರಾಜಕೀಯ ಮೇಲಾಟಗಳಿಗೆ ಬಳಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿತ್ತು. ಅದು ಪ್ರತಿಪಕ್ಷಗಳಿಗೆ ಬೃಹತ್ ಡಿಜಿಟಲ್ ಅಟ್ಯಾಕ್ ಎಂಬಂತಾಗಿತ್ತು. ಡಿಜಿಟಲ್ ಮಾಧ್ಯಮಗಳನ್ನು ಅಥವಾ ಸಾಮಾಜಿಕ ಜಾಲತಾಣಗಳನ್ನು ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುವುದರ ಮೂಲಕ ತನ್ನ ಅಧಿಕಾರ ಪರ್ವವನ್ನು ಬಿಜೆಪಿ ಆರಂಭ ಮಾಡಿತ್ತು. ತನ್ನ ರಾಜಕೀಯ ಮೇಲಾಟಗಳಿಗಾಗಿ ಡಿಜಿಟಲ್ ಎಕ್ಸ್ ಪರ್ಟ್ ಗಳನ್ನು ನೇಮಕ ಮಾಡಿಕೊಂಡು ವಾಟ್ಸಾಪ್, ಫೇಸ್ ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧ ಪಕ್ಷಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಪುಂಖಾನುಪುಂಖವಾಗಿ ಹರಡಿಸಲಾರಂಭಿಸಿತ್ತು. ಜನ ಅವನ್ನೇ ಮರುಳಾಗಿ ನಂಬಿದರು. ಜನರು ಈ ವಾಟ್ಸಾಪ್, ಫೇಸ್ ಬುಕ್ ಯೂನಿವರ್ಸಿಟಿಗಳು ಹೇಳಿಕೊಡುತ್ತಿರುವ ಪಾಠವನ್ನೇ ಕೇಳಿ ಅವುಗಳಿಗೆ ವಿದೇಯ ವಿದ್ಯಾರ್ಥಿಗಳಾದರು. ಸತ್ಯಾಂಶದ ಬಗ್ಗೆ ಗಮನವೂ ಕೊಡಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಇದು ‘ಸತ್ಯವಲ್ಲ ಸುಳ್ಳು’ ಎಂದು ಸಮಾಜಕ್ಕೆ ತಿಳಿಸುವುದಕ್ಕೆ ಪ್ರಯತ್ನಪಟ್ಟರೂ ಕೂಡ ಸಮಾಜ ಅದನ್ನು ಕೇಳಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಜನ ಬಿಜೆಪಿ ಹೆಣೆದ ‘ಮಾಸ್ ಬ್ರೈನ್’ ಸೈದ್ಧಾಂತಿಕ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾಗಿದ್ದರು. ಕಾಂಗ್ರೆಸ್ ಬಿಜೆಪಿಯ ಈ ಡಿಜಿಟಲ್ ದಾಳಿಯ ಎದುರು ಅಸಮರ್ಥವಾಗಿ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿಯನ್ನು ಕಂಡಿದ್ದು ಇಡೀ ದೇಶಕ್ಕೆ ಗೊತ್ತಿದೆ. ಈಗ ಲೋಕಸಭಾ ಚುನಾವಣೆ ಬರುತ್ತಿದೆ, ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ, ಬಿಜೆಪಿ ೨೦೧೪ರಲ್ಲಿ ರಾಜಕೀಯಕ್ಕೆ ಬಳಸಿದ ಡಿಜಿಟಲ್ ಅಸ್ತçವನ್ನು ಕಾಂಗ್ರೆಸ್ ಈಗ ಬಳಸುತ್ತಿರುವುದು ನೋಡಿದರೇ, ‘ಹಲ್ಲಿಲ್ಲದವನಿಗೆ ಕಡಲೆಕಾಯಿ ಮೇಲಾಸೆ’ ಎಂಬಂತಾಗಿದೆ. 

ಐಟಿ ಸೆಲ್‌ಗಳು, ಸುಳ್ಳುಗಳು : ಇನ್ನು, ಬಿಜೆಪಿ ಡಿಜಿಟಲ್ ಮಾಧ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರಮಟ್ಟಿಗೆ ಬಳಸಿಕೊಂಡಿತ್ತೆಂದರೇ, ಅದನ್ನು ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ. ಟೆಕ್ ಫಾಗ್ ಎಂಬ ಅಪ್ಲಿಕೇಶನ್ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ದ್ವೇಷವನ್ನು ಹರಡಲು ಪ್ರಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಗಳನ್ನು ಟೀಕೆ ಮಾಡಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯೊಂದನ್ನು ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಬಹಿರಂಗಪಡಿಸಿತ್ತು. ಸುಳ್ಳು ಸುದ್ದಿಗೆ ಬಿಜೆಪಿ ಐಟಿ ಸೆಲ್ ಖ್ಯಾತಿ ಪಡೆದಿದೆ. ಮೋದಿ ನಿಂತರೇ, ಕೂತರೇ, ಈ ಜಗತ್ತಿನ ಉದ್ಧಾರಕ ಎಂದು ಬಿಂಬಿಸುವ ಬಿಜೆಪಿ ಪ್ರಾಯೋಜಿತ ಡಿಜಿಟಲ್ ಮಾಧ್ಯಮಗಳು ಎಷ್ಟು ವಿಡಂಬನೆಗೆ ಒಳಗಾಗಿವೆ ಎನ್ನುವುದು ಗೊತ್ತೇ ಇದೆ. ಕಳೆದ ವರ್ಷ ಕ್ವಾಡ್ ಸಮ್ಮೇಳನದಲ್ಲಿ ಭಾಗವಹಿಸಿ ಮೋದಿ ಅಮೇರಿಕಾದಿಂದ ಭಾರತಕ್ಕೆ ವಾಪಾಸ್ಸಾಗುವ ದಿನ(ಸೆಪ್ಟೆಂಬರ್ ೨೬, ೨೦೨೧) ಅಮೆರಿಕಾದ ಪ್ರತಿಷ್ಠಿತ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ನ ಮುಖಪುಟದಲ್ಲಿ ಪ್ರಕಟಗೊಂಡಿದ್ದು ಎಂದು ಹೇಳಲಾದ ಮೋದಿ ಭಾವಚಿತ್ರವಿರುವ ಪಿಡಿಎಫ್ ಪ್ರತಿಯೊಂದು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನೇ ಮರುಳಾಗಿ ನಂಬಿ ಮೋದಿಯನ್ನು ಈ ದೇಶದ ಜನ ‘ಅವತಾರ ಪುರುಷ’ ಎಂದು ಬಿಂಬಿಸಿದ ಉದಾಹರಣೆಯೂ ಇದೆ. ಆದರೇ, ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ‘ಆಲ್ಟ್ ನ್ಯೂಸ್’ ಹಾಗೂ ‘ಐಬಿ ಟೈಮ್ಸ್’ ಸೇರಿ ಇತ್ಯಾದಿ ಜಾಗತಿಕ ಸುದ್ದಿ ಸಂಸ್ಥೆಗಳು ಖಚಿತ ಪಡಿಸಿದವು. ಮಾತ್ರವಲ್ಲದೇ, ಅಮೇರಿಕಾದ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಕೂಡ ಈ ಸುದ್ದಿಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಇವಿಷ್ಟೇ ಅಲ್ಲ, ಬಿಜೆಪಿ ಈ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಹರಡಿದ ಸುಳ್ಳಿನ ಪಟ್ಟಿ ದೊಡ್ಡದಿದೆ. ಹೀಗಿರುವಾಗ ಕಾಂಗ್ರೆಸ್ ಈಗಷ್ಟೆ ‘ಡಿಜಿಟಲ್’ನೊಂದಿಗೆ ತನ್ನ ರಾಜಕೀಯ ತಂತ್ರ ಹೆಣೆಯಲಾರಂಭಿಸಿದೆ. ಬಿಜೆಪಿ ಈಗ ಮತ್ತಷ್ಟು ದೂರ ಕ್ರಮಿಸಿರಬಹುದು, ಅದರ ಪ್ರತಿದಾಳಿಗೆ ಕಾಂಗ್ರೆಸ್ ಸಿದ್ಧವಾಗದಿದ್ದರೇ, ಮತ್ತೆ ಹೀನಾಯ ಸೋಲಿನ ರುಚಿಯನ್ನೇ ಉಣ್ಣಬೇಕು ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ.   

 

  


Thursday, September 22, 2022

ವಸಾಹತುಶಾಹಿ ಧೋರಣೆಯ ವಿರುದ್ಧ ಜನರನ್ನು ಒಗ್ಗೂಡಿಸಲಿ ‘ಭಾರತ್ ಜೋಡೋ’

 

ಭಾರತದ ರಾಜಕೀಯ ಪಾದಯಾತ್ರೆಗಳು | ಕಾಂಗ್ರೆಸ್‌ಗೂ ‘ಜೋಡೋ’ ತುರ್ತಿತ್ತು..!

ಈ ದೇಶದ ಇತಿಹಾಸದಲ್ಲಿ ರಾಜಕೀಯ ಪ್ರೇರಿತ, ಸಾಮಾಜಿಕ ಉದ್ದೇಶಿತ ಪಾದಯಾತ್ರೆಗಳು, ಧಾರ್ಮಿಕ ಸ್ಪರ್ಶವಿರುವ ರಥಯಾತ್ರೆಗಳು, ಪಾದಯಾತ್ರೆಗಳು, ರಥಯಾತ್ರೆಗಳ ಈ ದೇಶದ ರಾಜಕೀಯದುದ್ದಕ್ಕೂ ಸುದೀರ್ಘವಾದ ಪಾತ್ರವನ್ನು ವಹಿಸಿವೆ. ದೇಶದ ರಾಜಕೀಯದಲ್ಲಿ ಈ ಯಾತ್ರೆಗಳು ಹಾಸುಕೊಕ್ಕಾಗಿವೆ. ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ಅಥವಾ ದಾಂಡಿ ಯಾತ್ರಿ ಈ ದೇಶ ಕಂಡುಕೊಂಡು ಬಂದ ‘ಪಾದಯಾತ್ರೆಗಳ ಸುದೀರ್ಘವಾದ ಸರಧಿ’ಗೆ ನಾಂದಿ ಹಾಡಿತ್ತು. ಪ್ರತಿ ಪಾದಯಾತ್ರೆಗಳು ಜನರನ್ನು ಬೆಸೆಯುವ ಕೆಲಸ ಮಾಡಿವೆ. 

ಪಾದಯಾತ್ರೆಗಳಿಗೆ ನಾಂದಿ ಹಾಡಿದ ದಾಂಡಿ ಯಾತ್ರೆ :  ಬ್ರಿಟಿಷ್ ಸರ್ಕಾರದ ಆಡಳಿತದ ಸಂದರ್ಭದಲ್ಲಿ, ಉಪ್ಪಿನ ಮೇಲೆ ವಿಧಿಸಿದ್ದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ದೇಶದುದ್ದಕ್ಕೂ ಸಂಚಲನ ಮೂಡಿಸಿತ್ತು. ಸಹನಶೀಲದಿಂದಲೇ ಇದರ ವಿರುದ್ಧವಾಗಿ ಹೋರಾಡಬೇಕು ಎಂಬ ಬಯಕೆ ಮಹಾತ್ಮ ಗಾಂಧಿಗೆ ಇದ್ದಿತ್ತು. ಬ್ರಟೀಷ್ ಸರ್ಕಾರದ ಆಡಳಿದಲ್ಲಿ ಸಮುದ್ರ ತಟಭಾಗದಲ್ಲಿದ್ದ ನಾಗರಿಕರಿಗೆ ಉಪ್ಪು ಪುಕ್ಕಟೆಯಾಗಿ ದೊರೆಯುತ್ತಿದ್ದರೂ ಕೂಡ ಅವರು ಸರ್ಕಾರದಿಂದ ಖರೀದಿ ಮಾಡಬೇಕಾಗಿತ್ತು. ಜನಸಾಮಾನ್ಯರಿಗೆ ದಿನನಿತ್ಯ ಬೇಕಾಗುವ ಅತ್ಯಗತ್ಯ ವಸ್ತುಗಳ ಮೇಲೂ ಸರ್ಕಾರ ವಿಪರೀತ ತೆರಿಗೆ ವಿಧಿಸಿ ವಸಾಹತುಶಾಹಿ ಧೋರಣೆ ಮೆರೆದಿತ್ತು. ಇವೆಲ್ಲವೂ ನಾಗರಿಕರ ಪಾಲಿಗೆ ದುಬಾರಿಯಾಗಿತ್ತು. ಹೀಗಾಗಿ ಈ ತೆರಿಗೆ ಅಥವಾ ಕರದ ವಿರುದ್ಧವಾಗಿ ಜಾತಿ, ಧರ್ಮ, ಮತಗಳ ಬೇಧ ಭಾವವಿಲ್ಲದೆ ಮಹಾತ್ಮ ಗಾಂಧಿ ನೇತ್ರತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಸಬರಮತಿ ಆಶ್ರಮದಿಂದ ಆರಂಭಗೊಂಡ ಯಾತ್ರೆ ದಾಂಡಿ ತಲುಲುವರೆಗೆ ಸೌಮ್ಯವಾಗಿಯೇ ಇದ್ದ ಗಾಂಧೀಜಿಯವರಲ್ಲಿ ಈಗ ನಿಜಕ್ಕೂ ಬ್ರಿಟೀಷರ ವಿರುದ್ಧದ ಕೋಪ ಎದ್ದು ಕಾಣಿಸುತ್ತಿತ್ತು. ಸಮುದ್ರದ ತಟದಲ್ಲಿ ಒಂದು ಹಿಡಿ ಉಪ್ಪನ್ನು ಹಿಡಿದು ‘ಈ ಮೂಲಕ ನಾವು ಬ್ರಿಟೀಷರ ಸಾಮ್ರಾಜ್ಯದ ಅಡಿಪಾಯವನ್ನು ತಲೆ ಬುಡ ಅಲುಗಾಡಿಸುತ್ತಿದ್ದೇವೆ’ ಎಂದು ಘೋಷಿಸಿದ್ದರು, ಮಾತ್ರವಲ್ಲದೇ, ಅಲ್ಲಿಯೇ ಉಪ್ಪು ತಯಾರಿಸಿದರು. ತಮ್ಮೊಂದಿಗೆ ಚಳುವಲ್ಲಿ ಭಾಗಿಯಾಗಿದ್ದ ಅನುಯಾಯಿಗಳಿಗೆ ‘ಎಲ್ಲಿ ಸಾಧ್ಯವಾಗುತ್ತೋ ಅಲ್ಲಿ ಉಪ್ಪನ್ನು ತಯಾರಿಸಿ’ ಎಂದು ಹೇಳುವ ಮೂಲಕ ಬ್ರಿಟೀಷರ ವಿರುದ್ಧ ಸೌಮ್ಯ ಆಕ್ರೋಶ ಹೊರ ಹಾಕುವುದರೊಂದಿಗೆ ಸ್ವಾತಂತ್ರ್ಯ ಹೋರಾಟದ ದೇಶದ ಶಕ್ತಿಯನ್ನು ಬ್ರಿಟಷರಿಗೆ ಪರೋಕ್ಷವಾಗಿ ಹೇಳಿದ್ದರು ಗಾಂಧಿ. ಈ ಪರಿಣಾಮವಾಗಿ ಈ ಚಳುವಳಿ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಬ್ರಿಟೀಷರ ವಿರುದ್ಧ ಎದೆಯೇರಿಸಿ ನಿಲ್ಲುವ ಹಾಗೆ ಗಾಂಧಿ ಅಂದು ಪರೋಕ್ಷ ಸೂಚನೆ ನೀಡಿರುವುದಕ್ಕಾಗಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವವಾದ ತಿರುವು ಸಿಕ್ಕಿತು. ಬ್ರಿಟೀಷ್ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿದ ಹಾಗೂ ಮಾರಿದ ಗಾಂಧೀಜಿಯವರ ಹಿಂದೆ ಇದ್ದ ಸಹಸ್ರಾರು ಮಂದಿ ಹೋರಾಟಗಾರರನ್ನು ಬ್ರಿಟೀಷ್ ಸರ್ಕಾರ ಬಂಧಿಸಿತ್ತು. ಮಾತ್ರವಲ್ಲದೇ ಮಹಾತ್ಮ ಗಾಂಧಿಯವರನ್ನೂ ಕೂಡ ಬಂಧಿಸುವಂತೆ ಅಂದಿನ ವೈಸರಾಯ್ ಆದೇಶಿಸಿದರು. ನಿದ್ರಾಮಗ್ನರಾಗಿದ್ದ ಗಾಂಧೀಜಿಯರನ್ನು ಬ್ರಿಟೀಷ್ ಸರ್ಕಾರ ಬಂಧಿಸಿತ್ತು. ಈ ಪರಿಣಾಮವಾಗಿ ಉಪ್ಪಿನ ಸತ್ಯಾಗ್ರಹವು ದೇಶದ ಸಹಸ್ರಾರು ಜನರನ್ನು ತನ್ನಡೆಗೆ ಸೆಳೆಯಿತು. ಮಾತ್ರವಲ್ಲದೇ, ಇಡೀ ವಿಶ್ವದ ಗಮನವನ್ನೇ ಸೆಳೆಯುವಂತೆ ಮಾಡಿತು. ಇದಾದ ನಂತರ ಬ್ರಿಟೀಷ್ ಸರ್ಕಾರ ಗಾಂಧಿಜೀಯವರನ್ನು ಬಿಡುಗಡೆಗೊಳಿಸಿತ್ತು. ಮತ್ತೆ ಸ್ವಾತಂತ್ರ್ಯ ಹೋರಾಟದ ಮುಂದಾಳತ್ವವನ್ನು ಗಾಂಧಿ ವಹಿಸಿದರು. ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಮುಂದಾಳತ್ವದಲ್ಲಿ ನಡೆದ ಈ ದಾಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಒಂದು ಮಹತ್ವಪೂರ್ಣ ತಿರುವನ್ನು ತಂದುಕೊಟ್ಟಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಈ ದೇಶದಲ್ಲಿ ಆದ ಮತ್ತು ಆಗುತ್ತಿರುವ ಪಾದಯಾತ್ರೆಗಳು ಅಥವಾ ಯಾತ್ರೆಗಳು ಬಹಳ ದೊಡ್ಡ ಬದಲಾಯವಣೆಯನ್ನು ತಂದಿವೆ/ತರಲಿವೆ ಎನ್ನುವುದು ಇಲ್ಲಿ ಗಮನಾರ್ಹ.

ಪಾದಯಾತ್ರೆಗಳ ಸರಧಿ ಇಂತಿವೆ : ಇದಾದ ನಂತರವೂ ಈ ದೇಶದಲ್ಲಿ ಅನೇಕ ಪಾದಯಾತ್ರೆಗಳು ನಡೆದಿವೆ. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರ ನೇತೃತ್ವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಉದ್ದೇಶದಿಂದ ನಡೆದ ಸುಮಾರು ಹತ್ತು ಸಾವಿರ ಕಿಲೋಮೀಟರ್ ದೂರ ನಡೆದ ರಥಯಾತ್ರೆ ಅಥವಾ ಶ್ರೀರಾಮ ರಥಯಾತ್ರೆ (೧೯೯೦) ಇಂದಿಗೂ ವಿಶ್ವದಲ್ಲೇ ಒಂದು ಪಕ್ಷ(ಬಿಜೆಪಿ) ಸ್ಥಾಪಿಸಿದ ಎಂಬತ್ತು ತಿಂಗಳಲ್ಲಿ ಅಧಿಕಾರ ಪಡೆಯುವ ಹಾಗೆ ಮಾಡಿತ್ತು ಎನ್ನುವುದು ವಿಶೇಷ, ಇದು ಬಿಜೆಪಿಯಲ್ಲಿ ಪಾದಯಾತ್ರೆಗಳ ರಾಜಕಾರಣ ಎಲ್ಲೆಡೆ ಪಸರಿಸುವಂತೆ ಮಾಡಿತ್ತು. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ಮಾಡಿದ ‘ಗುಜರಾತ್ ಗೌರವ್ ಯಾತ್ರೆ’ ಗಳು ಪದೆ ಪದೆ ಗುಜರಾತ್‌ನಲ್ಲಿ ಮೋದಿ ಅಧಿಕಾರ ಹಿಡಿಯುವ ಹಾಗೆ ಮಾಡಿತ್ತು. ಇನ್ನು, ಜನಾದೇಶ ಯಾತ್ರೆ (೧೯೯೩), ಸ್ವರ್ಣ ಜಯಂತಿ ರಥಯಾತ್ರೆ (೧೯೯೭), ಲೋಕಸಭಾ ಚುನಾವಣೆಗಾಗಿ ಕೈಗೊಂಡಿದ್ದ ಭಾರತ್ ಉದಯ್ ಯಾತ್ರೆ (೨೦೦೪), ಜನಚೇತನಾ ಯಾತ್ರೆ (೨೦೧೧). ೧೯೯೨ರಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಮುರುಳಿ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ‘ಏಕತೆ ಯಾತ್ರೆ’. ಇನ್ನು, ೨೦೧೮ರಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆಗಾಗಿ ಅಂದಿನ ಸಿಎಂ ಆಗಿದ್ದ ವಸುಂಧರಾ ರಾಜೆ ನೇತೃತ್ವದಲ್ಲಿ ನಡೆದ ‘ಸುರಾಜ್ ಗೌರವ್ ಯಾತ್ರೆ’. ತೀರಾ ಇತ್ತೀಚೆಗೆ ಗಮನಿಸುವುದಾದರೇ, ೨೦೧೭ರಲ್ಲಿ ‘ಪ್ರಜಾಸಂಕಲ್ಪ ಯಾತ್ರೆ’ಯ ಹೆಸರಿನಲ್ಲಿ ಜನನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಯಾತ್ರೆ ತಂದೆ ರಾಜಶೇಖರ್ ರೆಡ್ಡಿ ೨೦೦೩ರಲ್ಲಿ ಕೈಗೊಂಡಿದ್ದ  ‘ಪ್ರಜಾ ಪ್ರಸ್ತಾನಂ ಯಾತ್ರೆ’ಗೂ ದೊಡ್ಡದಾದ ಯಾತ್ರೆಯಾಗಿತ್ತು. ತೆಲಂಗಾಣ ರಾಜ್ಯ ರಚನೆಯ ವಿರೋಧಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನೆಡೆದ ‘ತೆಲುಗು ಜಾತಿ ಆತ್ಮಗೌರವ ಯಾತ್ರೆ’, ಎನ್‌ಟಿಆರ್ ನೇತೃತ್ವದ ‘ಚೈತನ್ಯ ರಥಯಾತ್ರೆ’,  ಇನ್ನು, ಕರ್ನಾಟಕದಲ್ಲಿ ಕಾವೇರಿ ನದಿ ನೀರಿಗಾಗಿ ದೇವೆಗೌಡ ನೇತೃತ್ವದಲ್ಲಿ ನಡೆದ ಪಾದಯಾತ್ರೆ, ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ, ೨೦೧೩ರ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಒಡೆದು ಕಾಂಗ್ರೆಸ್ ಅಧಿಕಾರಕ್ಕೆ ಏರಿತ್ತು, ಹೀಗೆ ಅಧಿಕಾರಕ್ಕೆ ಕಾಂಗ್ರೆಸ್ ಏರುವ ಹಾಗೆ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರು ಟು ಬಳ್ಳಾರಿಯವರೆಗೆ ನಡೆದ ‘ಬಳ್ಳಾರಿ ಪಾದಯಾತ್ರೆ’, ಕಳೆದ ವರ್ಷ (೨೦೨೧) ಡಿ.ಕೆ ಶಿವಕುಮಾರ್ ನೇತೃತದಲ್ಲಿ ನಡೆದ ‘ಮೇಕೆದಾಟು ಪಾದಯಾತ್ರೆ’, ಇತ್ಯಾದಿ. ಹೀಗೆ ಉಲ್ಲೇಖಿಸುವುದಾದರೇ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ಉಲ್ಲೇಖಿಸಿದ ಎಲ್ಲಾ ಪಾದಯಾತ್ರೆಗಳು ರಾಜಕೀಯವಾಗಿ ದೊಡ್ಡ ಪರಿವರ್ತನೆಯನ್ನೇ ತಂದವುಗಳು ಎನ್ನುವುದು ವಿಶೇಷ. ಈ ದೇಶದ ರಾಜಕಾರಣದಲ್ಲಿ ಪಾದಯಾತ್ರೆ ಮಹತ್ವಪೂರ್ಣ ಬದಲಾವಣೆಯನ್ನು ಮಾಡಿವೆ. ಪಾದಯಾತ್ರೆ ಮಾಡಿದ ಪಕ್ಷಗಳಿಗೆ ಚುನಾವಣೆಯಲ್ಲಿ ಲಾಭವನ್ನೂ ತಂದುಕೊಟ್ಟಿವೆ. 

‘ಭಾರತ್ ಜೋಡೋ’ ತುರ್ತಿದೆ : ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ (ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ) ದೇಶದಾದ್ಯಂತ ಸುದ್ದಿಯಲ್ಲಿದೆ. ಇದು ಈ ಕಾಲಮಾನದ ರಾಜಕಾರಣ. ಈ ಪಾದಯಾತ್ರೆ ಆರಂಭವಾದಾಗಿನಿಂದ ಕಾಂಗ್ರೆಸ್‌ನ ನಿರೀಕ್ಷೆಗೂ ಮೀರಿ ಜನ ಬೆಂಬಲ ದೊರಕುತ್ತಿರುವುದು ಕಾಂಗ್ರೆಸ್ ಪಾಲಿಗೆ ಮಹತ್ವಪೂರ್ಣವೂ ಹೌದು. ಆದರೇ, ಕೇರಳದಲ್ಲಿ ದೊರಕಿದ ಜನ ಬೆಂಬಲವನ್ನೇ ಆಧರಿಸಿ, ದೇಶದ ಜನ ಆಡಳಿತ ಪಕ್ಷದ ಬಗ್ಗೆ ಬೇಸತ್ತು ಸಂಪೂರ್ಣವಾಗಿ ಬದಲಾಗಿದ್ದಾರೆ ಎಂದು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ಭಾರತದಲ್ಲಿ ಸೃಷ್ಟಿಯಾದ ಧಾರ್ಮಿಕ ಬರ್ಕುಡಿ, ರಾಜಕೀಯ ಮತ್ತು ಧಾರ್ಮಿಕ ಸಂಘರ್ಷದ ಸಂದರ್ಭದಲ್ಲಿ ಇಂತದ್ದೊಂದು ‘ಜೋಡೋ’ ಯಾತ್ರೆ ನಿಜಕ್ಕೂ ಬೇಕಿದೆ. ಸದ್ಯದ ದೇಶದ ಸ್ಥಿತಿಯಲ್ಲಿ ಈ ಭಾರತ್ ಜೋಡೋ ಯಾತ್ರೆ ನಿಜಕ್ಕೂ ಯಾರ ನೇತೃತ್ವದಲ್ಲಿ ಆಗಿದಿದ್ದರೂ ಅದು ಸ್ವಾಗತಾರ್ಹ. ಸದ್ಯ, ರಾಹುಲ್ ಗಾಂಧಿ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್‌ನ ಒಂದು ಹೊಸ ಆವೃತ್ತಿಗೆ ಇಂತಹದ್ದೊಂದು ಯಾತ್ರೆಯೋ, ಯೋಜನೆಯೋ ತುರ್ತು ಅಗತ್ಯವಿತ್ತು. ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗೊ ಒಡೆದು ಚೂರಾಗಿರುವ ದೇಶದಲ್ಲಿ ಮತ್ತೆ ಅದನ್ನು ಜೋಡಿಸುವ ಕೆಲಸ ಅಷ್ಟೇನೂ ಸುಲಭದಲ್ಲ. ಒಡೆಯುವ ಕೆಲಸ ಸುಲಭ, ಕಟ್ಟುವ ಕೆಲಸ ಸುಲಭವಲ್ಲ. 

ರಾಹುಲ್ ಅವರ ಘನ ಉದ್ದೇಶ ಚುನಾವಣೆ ಮಾತ್ರವಲ್ಲದೇ, ದೇಶ ಕಟ್ಟುವುದೇ ಆಗಿದ್ದರೇ ಇದನ್ನು ಇಡೀ ದೇಶದ ನಾಗರಿಕರು ಸ್ವಾಗತಿಸಲೇ ಬೇಕು. ಒಬ್ಬ ರಾಜಕೀಯ ನಾಯಕ ಬಹಳ ಪ್ರಮುಖವಾಗಿ ಮಾಡಲೇಬೇಕಾಗಿರುವುದು ದೇಶವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು. ಒಬ್ಬ ದೇಶದ ಪ್ರಧಾನಿ ಮಾಡಬೇಕಾದ ಕೆಲಸ ಇದು. ರಾಹುಲ್ ಗಾಂಧಿ ಈಗ ಇಡೀ ದೇಶವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕರಾಗಿ ಒಳಗಿನಿಂದ ಬೆಳವಣಿಗೆ ಕಂಡುಕೊಳ್ಳುತ್ತಾರೆ. ಈವರೆಗೆ ರಾಹುಲ್ ಗಾಂಧಿಗೆ ಈ ಪಾದಯಾತ್ರೆಯ ಮೂಲಕ ದೊರಕುತ್ತಿರುವ ಜನ ಬೆಂಬಲವನ್ನು ಗಮನಿಸುವುದಾದರೇ, ರಾಹುಲ್ ಗಾಂಧಿ ಒಬ್ಬ ರಾಜಕೀಯ ನಾಯಕನಿಂದ ಜನ ನಾಯಕನಾಗಿ ಪರಿವರ್ತನೆಯಾಗುತ್ತಿದ್ದಾರೆ ಎಂದನ್ನಿಸುತ್ತಿದೆ. ಇದು ಕಾಂಗ್ರೆಸ್‌ಗೂ ಹಾಗೂ ರಾಹುಲ್ ಗಾಂಧಿಗೂ ಜನರಲ್ಲಿ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಒಂದು ಉತ್ತಮವಾದ ಅವಕಾಶ. ಅದನ್ನು ಈ ಯಾತ್ರೆಯ ಐದು ತಿಂಗಳ ಅವಧಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳುತ್ತದೆ ಎನ್ನುವುದು ಕುತೂಹಲ. 

ಮಕಾಡೆ ಮಲಗಿದ್ದ ಕಾಂಗ್ರೆಸ್‌ನನ್ನು ಬಡಿದೆಬ್ಬಿಸುವುದಕ್ಕೆ ಇಂತದ್ದೊಂದು ಮಾರ್ಚ್ ಅಥವಾ ನಡಿಗೆ ಒಬ್ಬ ಸಮರ್ಥ ನಾಯಕನಿಂದ ತುರ್ತಾಗಿ ಬೇಕಿತ್ತು. ಅದರ ಆರಂಭವಾಗಿದೆ. ಒಂದೆಡೆ ದೇಶವನ್ನು ಕಟ್ಟುವ ಪ್ರಯತ್ನದಲ್ಲಿ ರಾಹುಲ್ ಗಾಂಧಿ ಇದ್ದರೇ, ಕಾಂಗ್ರೆಸ್‌ನನ್ನು ಒಡೆಯುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಒಂದನ್ನು ಒಡೆದು ಉದಯಿಸುವ ಶಕ್ತಿ ಜನತಂತ್ರದಲ್ಲಿ ಹೆಚ್ಚು ಕಾಲ ಜನರನ್ನು ಓಲೈಸಿಕೊಂಡಿರುವುದಕ್ಕೆ ಸಾದ್ಯವಿಲ್ಲ ಎನ್ನುವುದು ಸತ್ಯ. 

ಒಟ್ಟಿನಲ್ಲಿ, ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಉದ್ದೇಶದ ಜೊತೆಗೆ ಆರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವಸಾಹತುಶಾಹಿ ಧೋರಣೆಯ ಸರ್ಕಾರದ ವಿರುದ್ಧ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಿ. ದೇಶದ ಪ್ರಜ್ಞಾವಂತ ಜನರ ನಿರೀಕ್ಷೆಯನ್ನು ಪೂರೈಸುವಲ್ಲಿ ಈ ಪಾದಯಾತ್ರೆ ಕೆಲಸ ಮಾಡಲಿ. ರಾಜಕೀಯದಿಂದ ಹೊರಗೆ ಈ ‘ಜೋಡೋ’ ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್ ವಕ್ವಾಡಿ      


Thursday, September 15, 2022

ರಾಹುಲ್ ಅಸಮರ್ಥರಲ್ಲ, ಈ ಕಾಲದ ನತದೃಷ್ಟ ನಾಯಕ..!

 

ರಾಗಾ ವೈಚಾರಿಕ ಚಿಂತನೆಗೆ ದೇಶ ಒಲಿಯಲಿದೆಯೇ ? | ರಾಜಕೀಯದಲ್ಲಿ ರಾಹುಲ್ ಸೋತಿದ್ದೇಕೆ..? 

ರಾಜಕೀಯ ಪಡಸಾಲೆಯ ಆಗು-ಹೋಗುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವುಳ್ಳವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಈಗ ಅಸಮರ್ಥ ನಾಯಕ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಸಮರ್ಥರೇ ಹೌದು, ಆದರೇ ಅವರು ಒಬ್ಬ ಈ ಕಾಲದ ರಾಜಕೀಯದ ನತದೃಷ್ಟ ನಾಯಕ. ಅವರು ಈಗಿನ ರಾಜಕೀಯ ವ್ಯವಸ್ಥೆಗೆ ಸಲ್ಲದ ನಾಯಕ ಅಂತೂ ಅಲ್ಲವೇ ಅಲ್ಲ. ಆದರೇ, ಒಂದು ರಾಜಕೀಯ ಶಕ್ತಿ ರಾಹುಲ್ ಗಾಂಧಿಯವರನ್ನು ಈ ಸಮಾಜ ‘ಪಪ್ಪು’, ‘ಅಸಮರ್ಥ’ ಎಂಬಿತ್ಯಾದಿಯಾಗಿ ಗುರುತಿಸುವ ಹಾಗೆ ಮಾಡಿರುವುದು ರಾಹುಲ್ ಗಾಂಧಿಯವರ ದುರ್ವಿಧಿ. ಅದು ಈ ಕಾಲದ ದುರ್ವಿಧಿಯೂ ಹೌದು. ಸತ್ತ ಮೇಲೆ ದೇವರ ಪೀಠ ಹಾಕಿ ಕೂರಿಸಿ ಪೂಜಿಸುವ ಭಾರತವಿದು. ಇದೇ ರಾಹುಲ್ ಗಾಂಧಿ ಅವರನ್ನು ಇಡೀ ದೇಶ ಅರೆಹುಚ್ಚನ ಹಾಗೆ ಕಾಣುವಂತೆ ಮಾಡುವಲ್ಲಿ ಒಂದು ರಾಜಕೀಯ ಶಕ್ತಿಯ ಜೊತೆಗೆ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ, ಈ ದೇಶದ ಶ್ರೀಮಂತ ಕುಟುಂಬವನ್ನು ಮಾತ್ರ ಪೊರೆಯುವ ಒಬ್ಬ ನಾಯಕನನ್ನು ಪೂಜೆ ಮಾಡುವ ಅವಿವೇಕಿತನ ಈ ದೇಶದಲ್ಲಿದೆ ಎಂದಾದರೇ ಅದರಷ್ಟು ಬಡತನ ಈ ದೇಶಕ್ಕೆ ಮತ್ತೊಂದಿಲ್ಲ. 

ಪ್ರಧಾನಿ ಮೋದಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎಂಬ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ತಾಕತ್ತು ಯಾರಿಗಾದರೂ ಇದೆ ಈ ದೇಶದಲ್ಲಿ ಎಂದಾದರೇ ಅದು ಈಗಿನ ರಾಜಕೀಯ ಸ್ಥಿತಿಯಲ್ಲಿ ರಾಹುಲ್ ಗಾಂಧಿಗೆ ಮಾತ್ರ. ಕಾಂಗ್ರೆಸ್ ಕುಟುಂಬ ರಾಜಕಾರಣದ ಮಸಿಯಿಂದ ತನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿಕೊಂಡಿರಬಹುದು, ಅಥವಾ ಅದರ ವಿರುದ್ಧವಿರುವ ರಾಜಕೀಯ ಶಕ್ತಿ ಈ ವಿಷಯದಲ್ಲಿ ಧಕ್ಕೆ ಉಂಟು ಮಾಡಿರಬಹುದು. ಅದು ಬೇರೆಯದ್ದೇ ವಿಚಾರ. ಆದರೇ, ರಾಹುಲ್ ಗಾಂಧಿ ಅಂತಹ ನಿಖರವಾದ ವೈಚಾರಿಕ ಒಲವು ಉಳ್ಳ ಒಬ್ಬ ನಾಯಕ ಈ ದೇಶಕ್ಕೆ ಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಹುಲ್ ಗಾಂಧಿ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು, ಪಕ್ಷದ ಒಳಗೆಯೇ ವಿಶ್ವಾಸ ಕಳೆದುಕೊಂಡಿರಬಹುದು, ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷವನ್ನು ಮುನ್ನೆಡೆಸುವಲ್ಲಿ ಎಡವಿರಬಹುದು, ಹಾಗೆಂದ ಮಾತ್ರಕ್ಕೆ ರಾಹುಲ್‌ಗೆ ಈ ದೇಶದ ಸ್ವಾಸ್ಥ್ಯದ ಬಗ್ಗೆ ಕನಸು ಇಲ್ಲವೆಂದಲ್ಲ, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇಲ್ಲವೆಂದಲ್ಲ. ಆದರೇ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಸಮರ್ಥ ಬೆಂಬಲ ಅವರಿಗಿಲ್ಲ. 

೨೦೧೪ ರಲ್ಲಿ ದೇಶದಾದ್ಯಂತ ಮುನ್ನೆಲೆಗೆ ಬಂದ ಕಾಂಗ್ರೆಸ್ ವಿರೋಧಿ ಅಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕೆ ಉದುರಿತು. ಗುಜರಾತ್‌ನ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ, ಇದೇ ‘ದೇಶದ ಪರಮೋಚ್ಛ ಸೋ ಕಾಲ್ಡ್ ಅಭಿವೃದ್ಧಿ’ ಎಂದು ಬಿಂಬಿಸುವುದರೊಂದಿಗೆ ‘ಅಚ್ಛೆ ದಿನ್ ಆನೆ ವಾಲಾ ಹೇ’ ಎಂಬ ಹಸಿ ಹಸಿ ಸುಳ್ಳು ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಇಡೀ ದೇಶದ ಜನರಿಗೆ ಎರಡೇ ವರ್ಷಗಳಲ್ಲಿ ಭ್ರಮ ನಿರಸನಗೊಳಿಸಿದರು. ದೇಶದ ಜನರು ಭ್ರಮ ನಿರಸನಕ್ಕೆ ಒಳಗಾಗದಂತೆ ಬಹು ಚರ್ಚಿತ ಮಣ್ಣಂಗಟ್ಟಿ ‘ಗುಜರಾತ್ ಮಾದರಿ’ ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು, ಅದಕ್ಕೆ ಆಡಳಿತ ಪಕ್ಷದ ಕೃಪಾಪೋಷಿತ ಕೆಲವು ಮಾಧ್ಯಮಗಳು ಸಾಥ್ ನೀಡಿದವು. ಹಾಗೆ ನೋಡುವುದಕ್ಕೆ ಹೋದರೇ ಗುಜರಾತ್‌ನಲ್ಲಿ ಕೈಗಾರಿಕಾ ಪ್ರಗತಿ ೧೯೯೫ರಿಂದಲೇ ಪ್ರಗತಿಯಲ್ಲಿತ್ತು. ಇನ್ನು, ಗುಜರಾತ್‌ನಲ್ಲಿ ಮೋದಿ ಅಧಿಕಾರವಧಿಯಲ್ಲಿ, ಕೈಗಾರಿಕೋದ್ಯಮಗಳಿಗೆ ಒಂದಿಷ್ಟು ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಬಣ್ಣ ಹಚ್ಚಲಾಗಿದೆ ಹೊರತಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆಯೇ ಉಳಿದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಮಾಧ್ಯಮಗಳ ಕ್ಯಾಮರಾಗಳಿಗೆ ಅಲ್ಲಿನ ಹುಳುಕುಗಳು ಕಾಣಿಸಲೇ ಇಲ್ಲ. ‘ಸಿಟಿ ಅಭಿವೃದ್ಧಿಯನ್ನೇ’ ಇಡೀ ಗುಜರಾತ್‌ನ ಅಭಿವೃದ್ಧಿ ಎಂದು ಬಿಂಬಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಸದ್ಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದೇ ಮೋದಿ ನೇತೃತ್ವದ ಸರ್ಕಾರಾವಧಿಯಲ್ಲಿ ಈ ವರ್ಷ ಜಗತ್ತಿನ ಒಟ್ಟು ೧೯೧ ದೇಶಗಳ ಪೈಕಿ ಭಾರತ ೧೩೨ನೇ ಸ್ಥಾನದಲ್ಲಿದೆ, ಎನ್ನುವಲ್ಲಿಗೆ ಎಲ್ಲವನ್ನೂ ಇಲ್ಲಿಯೇ ಅಳೆಯಬಹುದಾಗಿದೆ. ಮೋದಿ ಒಬ್ಬ ಜಾಣ ನಡೆಯ ರಾಜಕಾರಣಿ, ತಾನು ಮಾಡಿದ ಸಣ್ಣ ಸಣ್ಣ ಬಣ್ಣ ಹಚ್ಚುವ ಕೆಲಸವನ್ನೂ ಇಡೀ ದೇಶಕ್ಕೆ ಗೊತ್ತಾಗುವ ಹಾಗೆ ವೈಭವೀಕರಿಸಿಕೊಂಡ ನಾಯಕ. ರಾಹುಲ್ ಈ ವಿಚಾರದಲ್ಲಿ ನಿಜಕ್ಕೂ ಹಿಂದೆ ಉಳಿದರು. ಇನ್ನು, ಮೋದಿಗಿದ್ದ ಒಲವು ಜನರಲ್ಲಿ ಮೊದಲಿನಂತೆಯೇ ಈಗಲೂ ಇದೆಯೇ ಎಂದರೇ ಖಂಡಿತ ಇಲ್ಲ. ರಾಹುಲ್ ಪರವಾಗಿ ದೇಶದ ಜನರ ಒಲವು ಇದೆಯೇ ಕೇಳಿದರೇ, ಸದ್ಯಕ್ಕಂತೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೇ, ದೇಶದ ಜನರ ಮನಸ್ಥಿತಿ ನಿಧಾನ ಗತಿಯಲ್ಲಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 

ಇನ್ನು, ರಾಹುಲ್ ಗಾಂಧಿ ರಾಜಕಾರಣದಲ್ಲಿ ಸೋತಿದ್ದು ಈ ದೇಶದ ಯುವಕರನ್ನು ಕಳೆದುಕೊಂಡಿದ್ದರಿಂದಲೇ ಹೊರತು ಮತ್ಯಾವುದರಿಂದಲೂ ಅಲ್ಲ. ೨೦೧೪ಕ್ಕಿಂತಲೂ ಹಿಂದೆ ರಾಹುಲ್ ಗಾಂಧಿಯ ಜೊತೆಗಿದ್ದ ಈ ದೇಶದ ಬಹುದೊಡ್ಡ ಆಸ್ತಿ ಯುವ ಸಮುದಾಯವನ್ನೇ ಬಿಜೆಪಿ ರಾಜಕೀಯಕ್ಕೋಸ್ಕರ ಟಾರ್ಗೇಟ್ ಮಾಡಿಕೊಂಡಿತ್ತು. ಅದು ರಾಹುಲ್ ಗಾಂಧಿಗೆ ಗೊತ್ತೇ ಆಗಿಲ್ಲ. ವೈಚಾರಿಕ ನೆಲೆಯಲ್ಲಿ ಇಡೀ ದೇಶದ ಯುವ ಸಮುದಾಯವನ್ನು ಸೆಳೆದುಕೊಂಡಿದ್ದ ರಾಹುಲ್ ಗಾಂಧಿಗೆ, ಕೇವಲ ಒಂದೇ ಒಂದು ಧಾರ್ಮಿಕ ವಿಚಾರದ ಮೂಲಕ ಏಕಾಏಕಿಯಾಗಿ ಬಿಜೆಪಿ ತನ್ನತ್ತ ಧಿಡೀರ್ ಎಂದು ಯುವ ಸಮುದಾಯವನ್ನು ಸೆಳೆದುಕೊಳ್ಳುತ್ತದೆ ಎಂಬುವುದು ಊಹೆಗೂ ಸಿಕ್ಕಿರಲಿಲ್ಲ. ಇಡೀ ದೇಶದ ಯುವ ಸಮುದಾಯ ಉದ್ಯೋಗ, ಭವಿಷ್ಯ, ಸಮಗ್ರತೆಗಿಂತಲೂ ಮಿಗಿಲಾಗಿ ಧಾರ್ಮಿಕ ವಿಚಾರವೇ ಹೆಚ್ಚು ಎಂದು ಹೇಳುವಷ್ಟರ ಮಟ್ಟಿಗೆ ಬಿಜೆಪಿ ಈ ದೇಶದ ಯುವ ಸಮುದಾಯವನ್ನು ಮೈಂಡ್ ವಾಷ್ ಮಾಡಿ ಬಿಟ್ಟಿತು. ಟೀಕೆ ಮಾಡುವುದಕ್ಕೆ ಬೇರೆ ಯಾವುದೂ ಇಲ್ಲದೇ ಬಿಜೆಪಿ ರಾಹುಲ್ ವ್ಯಕ್ತಿತ್ವವನ್ನು, ಧರಿಸುವ ಟೀ ಶರ್ಟ್ನ ಬಗ್ಗೆಯೇ ಟೀಕೆ ಮಾಡಿ ಯುವ ಸಮುದಾಯಕ್ಕೆ ಕಂಪ್ಯೂಟಿಂಗ್ ಮಾಡಿದ ಕಾರಣದಿಂದಾಗಿ, ತಮ್ಮ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಂತಿದ್ದ ರಾಹುಲ್ ಗಾಂಧಿ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಯುವ ಸಮುದಾಯವನ್ನು ಬಿಜೆಪಿ ಬಳಸಿಕೊಂಡಿತ್ತು. ಯುವ ಸಮುದಾಯವನ್ನು ಇಡೀ ದೇಶದಾದ್ಯಂತ ಕಾಡುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಯುವ ಸಮುದಾಯ ಈ ಧಾರ್ಮಿಕ ವಿಚಾರಕ್ಕೆ ಬಲಿಯಾಗಿ ಇರುವಂತೆ ಬಿಜೆಪಿ ಮಾಡಿದೆ. 

ಕಾಂಗ್ರೆಸ್ ಅಧಿಕಾರಕ್ಕೆ ಅಸಮರ್ಥವಿರಬಹುದು, ಆದರೇ, ರಾಹುಲ್ ಗಾಂಧಿ ಅಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ಬಗ್ಗೆ ಈ ದೇಶದಲ್ಲಿ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಇಲ್ಲ ಯಾಕೆಂದರೇ, ಕಾಂಗ್ರೆಸ್‌ನಲ್ಲಿಲ್ಲದ ಸಿದ್ಧಾಂತದ ಸ್ಪಷ್ಟತೆ. ಜನತಂತ್ರದ ಕೊರಳು ಹಿಸುಕುವುದಕ್ಕೆ ಮುಂದಾಗುತ್ತಿರುವ ರಾಜಕೀಯ ಶಕ್ತಿಯೊಂದರ ವಿರುದ್ಧ ಸೆಟೆದು ನಿಲ್ಲುವ, ಮತ್ತು ಅದನ್ನು ತಪ್ಪಿಸುವ ಇಚ್ಛೆ ರಾಹುಲ್ ಗಾಂಧಿಗೆ ಇದೆ. ಈ ಎಂಟು ಹತ್ತು ವರ್ಷಗಳಿಂದೀಚೆಗೆ ಬದಲಾಗಬಾರದ ರೀತಿಯಲ್ಲಿ ಬದಲಾದ ರಾಜಕೀಯದ ಬಗ್ಗೆ ಆಳವಾಗಿ ರಾಹುಲ್ ತಿಳಿದುಕೊಂಡಿದ್ದಾರೆ ಎನ್ನುವುದು ಸತ್ಯ. ಅವರ ಇತ್ತೀಚೆಗಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಅರಿವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯ ರಾಜಕೀಯ ಪಡಸಾಲೆಯಲ್ಲಿ ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಯಾವುದೇ ರೀತಿಯಲ್ಲಿ ಟೀಕೆ ಮಾಡುವಂತಹ ವಿಷಯ ಇಲ್ಲವೇ ಇಲ್ಲ. ಇದು ಸತ್ಯ ಕೂಡ. ಈ ಮನಸ್ಥಿತಿವೊಂದರಲ್ಲೇ ಬಿಜೆಪಿ ಇನ್ನೂ ಕೆಲ ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸುತ್ತದೆ ಎಂಬ ಭ್ರಮೆಯಲ್ಲಿ ಇದ್ದರೇ, ಅದರಷ್ಟು ಶತಮೂರ್ಖತನ ಮತ್ತೊಂದಿಲ್ಲ. ಇನ್ನು, ರಾಹುಲ್‌ರ ಚಿಂತನೆಯಿಂದ ಈ ದೇಶ ಏಕಾಏಕಿಯಾಗಿ ಊಹಿಸಲಾರದಷ್ಟರ ಮಟ್ಟಿಗೆ ಬದಲಾಗಿ, ಮಹತ್ತರವಾದ ಎತ್ತರಕ್ಕೆ ಸಮಗ್ರತೆಯ ಚಿಂತನೆಯಲ್ಲಿ ಮುನ್ನಡೆಯಲಿದೆಯೇ ಎಂದು ಕೇಳಿದರೇ, ಅದು ಕೂಡ ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ರಾಹುಲ್ ಅವರಲ್ಲಿ ಇರುವ ಉದ್ದೇಶವನ್ನು ತಮ್ಮ ಪಕ್ಷ ಹಾಗೂ ಈ ದೇಶದ ಜನರಿಗೆ ತಲುಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. 

ಒಟ್ಟಿನಲ್ಲಿ, ತಂದೆಯಂತೆಯೇ ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳ ನಡುವೆ ನಿಂತು ಈ ದೇಶದ ಭವಿಷ್ಯವನ್ನು ಕಾಣುವುದಕ್ಕೆ ಬಯಸುತ್ತಿರುವ ರಾಹುಲ್ ಗಾಂಧಿ ಅವರ ನಾಳೆಗಳು ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್ ವಕ್ವಾಡಿ