ಬಿಎಸ್‌ವೈ ಮತ್ತೆ ಮೋಸ ಹೋಗ್ತಾರೆ | ಸಿದ್ದು ‘ಇಂಟ್ರೆಸ್ಟಿಂಗ್ ಸಬ್ಜೆಕ್ಟ್’ ಯಾಕೆ ಗೊತ್ತಾ ?
ಯಾತ್ರೆ ಸದ್ಯದ ಕರ್ನಾಟಕದ ರಾಜಕಾರಣ. ಒಂದು ಸಾತ್ವಿಕ ಹೋರಾಟದ ಯಾತ್ರೆಯಾದರೇ, ಇನ್ನೊಂದೆಡೆ ಆ ಪಕ್ಷದ ಹುಟ್ಟುಗುಣ ಎಂದೇ ಹೇಳಲಾಗುವ ಅಬ್ಬರ, ಗರ್ಜನೆ, ಟೀಕೆಯ ರಾಜಕಾರಣ. ಈ ನಡುವೆ ಮೋಸ ಹೋಗುತ್ತಿರುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಬಿಜೆಪಿ ಮಾಡುತ್ತಿರುವ ಮೋಸದ ಬಗ್ಗೆ ಯಡಿಯೂರಪ್ಪರಿಗೆ ಗೊತ್ತಿಲ್ಲದೇ ಏನಿಲ್ಲ. ಹೋರಾಟದ ಒಂದು ದೊಡ್ಡ ಹಿನ್ನೆಲೆಯಿಂದ ಬಂದ ಬಿಎಸ್‌ವೈ ನೇರಾನೇರವಾಗಿ ಖಡಕ್ ಆಗಿಯೇ ಎಲ್ಲದಕ್ಕೂ ಪ್ರತಿಕ್ರಿಯಿಸುವವರು. ಅದು ಹೈಕಮಾಂಡ್‌ಗೂ ಕೂಡ. ಒಂದು ರೀತಿಯಲ್ಲಿ ರೆಬಲ್ ಲೀಡರ್. ೨೦೧೧ರ ಸಂದರ್ಭದಲ್ಲಿ ಬಿಜೆಪಿಯೊಂದಿನ ವೈಮನಸ್ಸಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷ ತೊರೆದು ತನ್ನದೇ ರಾಜಕೀಯ ಪ್ರಭಾವದಿಂದ ಹೊಸದೊಂದು ರಾಜಕೀಯ ಪಕ್ಷ ಕೆಜೆಪಿಯನ್ನು ಸ್ಥಾಪಿಸಿ, ಶಿಕಾಪುರದಿಂದ ಕೆಜೆಪಿ ಅಭ್ಯರ್ಥಿಯಾಗಿಯೆ ಚುನಾವಣೆಗೆ ನಿಂತು ಗೆದ್ದವರು, ಆ ಸಂದರ್ಭದಲ್ಲಿ ಕೆಜೆಪಿ ಕೇವಲ ಎಂಟು ಕ್ಷೇತ್ರಗಳನ್ನು ಗೆದ್ದಿದ್ದಾದರೂ, ಯಡಿಯೂರಪ್ಪ ಬಿಜೆಪಿ ತೊರೆದಿದ್ದು ಬಿಜೆಪಿಗೆ ದೊಡ್ಡ ನಷ್ಟವೇ ಆಗಿತ್ತು. ಇದು ಸಿದ್ದು ಮುಖ್ಯಮಂತ್ರಿಯಾಗುವುದಕ್ಕೂ ಸುಲಭ ದಾರಿ ಹಾಕಿಕೊಟ್ಟಿತ್ತು. ಮತ್ತೆ ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾದದ್ದು, ಬಹುಮತವಿಲ್ಲದೇ ಏಕ್ ದಿನ್ ಕಾ ಮುಖ್ಯಮಂತ್ರಿಯಾಗಿದ್ದು ಎಲ್ಲವೂ ದೊಡ್ಡ ಕಥೆ. ಅಂದರೇ, ಯಡಿಯೂರಪ್ಪರ ಹೋಲ್ಡ್ ಅಷ್ಟೊಂದಿದೆ ಅಂತರ್ಥ. ತಮಗೆ ಪದೆ ಪದೆ ಪಕ್ಷದಿಂದ ಮೋಸವಾಗುತ್ತಿದ್ದರೂ ಸುಮ್ಮನಿದ್ದ ಯಡಿಯೂರಪ್ಪರ ಉದ್ದೇಶ ಏನು ಎಂಬುವುದೇ ಸ್ಪಷ್ಟವಾಗುತ್ತಿಲ್ಲ.
ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದ ನಂತರ ಯಡಿಯೂರಪ್ಪ ನಡೆದುಕೊಂಡ ರೀತಿ ಈ ರಾಜ್ಯ ಕಂಡಿದೆ. ಅದು ದೇಶಕ್ಕೂ ಗೊತ್ತಿದೆ. ಯಡಿಯೂರಪ್ಪ ಒಬ್ಬರು ಈ ದೇಶ ಗುರುತಿಸುವಷ್ಟರ ಮಟ್ಟಿಗಿನ ಮಾಸ್ ಲೀಡರ್ ಅಲ್ಲದೇ ಇದ್ದರೂ, ರಾಜ್ಯದ ಮಟ್ಟಿಗೆ ತಮ್ಮದೇ ಆದ ಛಾಪು ಇಟ್ಟುಕೊಂಡವರು, ಸಂಘಟನಾ ಶಕ್ತಿ, ಸಮುದಾಯದ ಬೆಂಬಲ, ತಮ್ಮದೇ ಆದ ಬಲವಾದ ರಾಜಕೀಯ ಆಪ್ತ ಬಳಗ ಇಟ್ಟುಕೊಂಡು ಕರ್ನಾಟಕ ಬಿಜೆಪಿ ಪಾಲಿಗೆ ಒಂದು ರೀತಿಯಲ್ಲಿ ಹೈಕಮಾಂಡ್ ಇದ್ದಂತೆಯೇ ಇರುವವರು. ಯಡಿಯೂರಪ್ಪ ಅವರ ಪ್ರಭಾವವನ್ನು ಬಿಜೆಪಿ ಅಕ್ಷರಶಃ ಬಳಸಿಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದು ಬಿಜೆಪಿಯಂತಹ ರಾಜಕೀಯ ಪಕ್ಷದ ಜಾಣ್ಮೆಯೂ ಹೌದು. ಹಾಗೆ ನೋಡುವುದಕ್ಕೆ ಹೋದರೇ ಇಂತಹ ಮನಸ್ಥಿತಿ ಕಾಂಗ್ರೆಸ್ ನಂತಹ ಹಿರಿಯ ರಾಜಕೀಯ ಪಕ್ಷದಲ್ಲಿ ಇಲ್ಲ.
ಯಡಿಯೂರಪ್ಪ ಅವರ ಹುಟ್ಟು ಈ ರಾಜ್ಯದ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ಸಮುದಾಯವೇ ಎಂದು ಕರೆಯಲ್ಪಡುವ ಪ್ರಭಾವಿ ಲಿಂಗಾಯತ ಸಮುದಾಯ. ಸಮಾಜದ ಮೇಲ್ಪಂಕ್ತಿಯ ಸಮುದಾಯದಲ್ಲಿ ಹುಟ್ಟಿದವರಾಗಿದ್ದರಿಂದ ಅವರ ಹುಟ್ಟು ಒಂದು ಹೊರಲಾಗದ ಹೊರೆ ಎಂಬಂತೆ ಇರಲಿಲ್ಲವಾದರೂ, ಯಡಿಯೂರಪ್ಪ ರಾಜಕೀಯ, ಸಾಮಾಜಿಕ ಹೋರಾಟದಲ್ಲಿ ‘ಸೈಕಲ್ ಹೊಡೆದೇ’ ಮೇಲೆ ಬಂದವರು. ಸೈಕಲ್ ಹಿಡಿದು ತಮ್ಮ ಬೆಂಬಲಿಗರೊಂದಿಗೆ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ವಿಧಾನ ಸಭೆಯೊರೆಗೆ ತಂದು ನಿಲ್ಲಿಸುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಯಡಿಯೂರಪ್ಪ ಅವರ ಚಾರ್ಮಿಂಗ್ ವ್ಯಕ್ತಿತ್ವವನ್ನು ಕಂಡು ಶಿಕಾರಿಪುರದ ವಿಧಾನ ಸಭೆಗೆ ಚುನಾವಣಾ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇ ಒಂದು ರಾಜ್ಯ ಬಿಜೆಪಿ ಪಾಲಿಗೆ ದಕ್ಕಿದ ಪರ್ವ ಕಾಲ. ಕಾಂಗ್ರೆಸ್‌ನಿಂದ ಸತತವಾಗಿ ಗೆದ್ದು ಬೀಗಿತ್ತಿದ್ದ ಮಾಜಿ ಸಚಿವ ಯಂಕಟಪ್ಪ ಅವರ ಎದುರು ಶಿಕಾರಿಪುರದಲ್ಲಿ ‘ಯಡಿಯೂರಪ್ಪ ಎದುರು ಯಾರೇ ನಿಂತರೂ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ’ ಎಂಬಂತೆ ಬೆಳೆದು ನಿಂತರು. ಅಂದಿನಿಂದ ಬಿಜೆಪಿಯ ದೆಸೆ ಕರ್ನಾಟಕದಲ್ಲಿ ಬದಲಾಯಿತು. ಹೇಳ ಹೆಸರಿಲ್ಲದ ಬಿಜೆಪಿಯನ್ನು ಕರ್ನಾಟಕದಲ್ಲಿ ಗುರುತಿಸುವ ಹಾಗೆ ಮಾಡಿದ್ದೇ ಯಡಿಯೂರಪ್ಪ ಎಂದರೇ ಅತಿಶಯೋಕ್ತಿಯಲ್ಲ.
ಲಿಂಗಾಯತ ಮಠಗಳು, ಸ್ವಾಮಿಗಳು ಎಂದೇ ಸದಾ ಅದರದ್ದೇ ಧ್ಯಾನದಲ್ಲಿದ್ದ ಯಡಿಯೂರಪ್ಪ, ಲಿಂಗಾಯತ ಸಮುದಾಯದ ಪ್ರಬಲ, ಪ್ರಭಾವಿ ನಾಯಕರಾಗಿ ಬೆಳೆದರು. ಇಡೀ ಲಿಂಗಾಯತ ಸಮುದಾಯದ ಮತಗಳು ಬಿಜೆಪಿಯತ್ತ ವಾಲುವತ್ತ ಮಾಡಿದ್ದೇ ಯಡಿಯೂರಪ್ಪ. ಲಿಂಗಾಯತ ಸಮುದಾಯವೇ ‘ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶದ ಮಟ್ಟಿಗೆ ನಿರ್ಣಾಯಕ ಸಮುದಾಯ’ ಎಂಬಷ್ಟರ ಮಟ್ಟಿಗೆ ಬೆಳೆಸಿದ್ದು, ಮಾಡಿದ್ದು ಯಡಿಯೂರಪ್ಪ. ಅವರಿಗೆ ಸರಿಸಮಾನರಾಗಿ ನಿಲ್ಲುವವರು ಲಿಂಗಾಯತ ಸಮುದಾಯದಲ್ಲಿ ಈವರೆಗೆ ಯಾರೂ ಇಲ್ಲ. ಆ ಮಟ್ಟಿಗೆ ಯಡಿಯೂರಪ್ಪ ಅವರನ್ನು ಮೆಚ್ಚಲೇ ಬೇಕು. ಬಿಜೆಪಿ ಉಸಿರಾಡುವ ಹಾಗೆ ಆಗುವಲ್ಲಿ ಯಡಿಯೂರಪ್ಪ ಅವರ ಬೆವರು ಖಂಡಿತ ಇದೆ. ಅವರ ರಾಜಕೀಯ ಚಿಂತನೆ, ಅನುಭವ ಮಹತ್ವದ್ದು. ಆದರೇ, ಯಡಿಯೂರಪ್ಪ ಅವರ ಇತ್ತೀಚೆಗಿನ ರಾಜಕೀಯ ಠೀವಿ ಸಂಪೂರ್ಣವಾಗಿ ಬದಲಾಗಿದೆ. ಅದು ಬಲವಂತ ಬದಲಾವಣೆ ಎಂದೇ ಕಾಣಿಸುತ್ತಿದೆ. ಬಿಜೆಪಿಯ ಪರಮೋಚ್ಛ ಅಧಿಕಾರವಿರುವ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ವಿವಿಧ ಚುನಾವಣೆಗಳ ಟಿಕೇಟ್ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವ ಸಿಕ್ಕಿರುವುದು ಮತ್ತು ಮೋದಿ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಟಾರ್ಗೇಟ್ ನೀಡಿರುವುದೇ ಇದಕ್ಕೆಲ್ಲ ಕಾರಣವೆಂದೇ ಕಾಣಿಸುತ್ತಿದೆ. ಇದರೊಂದಿಗೆ ಮಗನ ಭವಿಷ್ಯ ರೂಪಿಸುವ ಒಂದು ಜವಾಬ್ಧಾರಿಯೂ ಇದೆ. ಅಭಿವೃದ್ಧಿ ಇಲ್ಲದೇ ಇರುವಾಗ ಯಡಿಯೂರಪ್ಪ ಅವರಿಗೂ ಉಳಿದ ಬಿಜೆಪಿ ಹರುಕು ಬಾಯಿ ಸೋ ಕಾಲ್ಡ್ ನಾಯಕರ ಬುದ್ಧಿಯೇ ಬಂದೊದಗಿದೆ ಎಂದೆನ್ನಿಸುತ್ತಿದೆ. ಯಡಿಯೂರಪ್ಪ ಕೂಡ ಈಗ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿ ವಾಗ್ಪçಹಾರ ನಡೆಸುತ್ತಿರುವುದು ಬಿಜೆಪಿಯ ಬಡತನವನ್ನು ತೋರಿಸುತ್ತದೆ. ಪಾಪ ಇವೆಲ್ಲಾ ನೋಡಿ ಬೇಸರವಾಗಿಯೋ ಏನೋ ಸಿದ್ದರಾಮಯ್ಯನವರು “ಸಿದ್ದರಾಮಯ್ಯ ಅವರ ಹೆಸರಿಲ್ಲದೇ ಐದು ನಿಮಿಷ ಭಾಷಣ ಮಾಡಿ” ಎಂದು ಹೇಳಿರುವುದು. ಬಿಜೆಪಿ ಕಾಂಗ್ರೆಸ್ ವಿರುದ್ಧ ಚುನಾವಣಾ ಹೋರಾಟಕ್ಕೆ ಇಳಿಯುವ ಬದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಚುನಾವಣೆ ಎದುರಿಸುತ್ತಿರುವಂತೆ ವರ್ತಿಸುತ್ತಿರುವುದು ಸಿದ್ದರಾಮಯ್ಯ ಅವರಿಗೆ ಲಾಭ ತಂದುಕೊಡಲಿದೆಯೇ ಹೊರತಾಗಿ ತಮಗಲ್ಲ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಯಲ್ಲಿ ಇಲ್ಲದಿರುವುದು ಕರ್ನಾಟಕ ಬಿಜೆಪಿ ಎದುರಿಸುತ್ತಿರುವ ಬಡತನ.
ಹಾಗೆ ನೋಡಿದರೇ ಸಿದ್ದರಾಮಯ್ಯ ಅವರನ್ನು ದೇಶವೇ ಮಾತನಾಡುವ ಹಾಗೆ ಮಾಡಿ, ಮಾಸ್ ಲೀಡರ್ ಎಂಬಂತೆ ಮಾಡಿದ್ದೇ ಬಿಜೆಪಿ. ೨೦೧೮ರ ಚುನಾವಣೆಯಲ್ಲಿ ಸಿದ್ದಾರಾಮಯ್ಯ ಅವರನ್ನು ತೆಗಳುವ ಬರದಲ್ಲಿ ಸಿದ್ದರಾಮಯ್ಯ ಅವರು ರಾಷ್ಟçಮಟ್ಟದ ನಾಯಕನಂತೆ ಗುರುತಿಸಿಕೊಂಡಿದ್ದು ಬಿಜೆಪಿಗೆ ಗೊತ್ತೇ ಆಗಿಲ್ಲ. ಆ ಚುನಾವಣೆ ಸಿದ್ದರಾಮಯ್ಯ ವರ್ಸಸ್ ಮೋದಿ ಎಂಬಂತ್ತಾಗಿತ್ತು. ಯಡಿಯೂರಪ್ಪ ಸೋತರು. ಆಮೇಲಿನ ‘ವಲಸೆ ಕೃಪಾಪೋಷಿತ ಸರ್ಕಾರದ ಅಧಿಕಾರ’ ಎಲ್ಲವೂ ರಾಜಕೀಯದ ದೊಡ್ಡ ನಾಟಕ. ಈಗ ಮತ್ತೆ ಸಿದ್ದರಾಮಯ್ಯ ಬೇಡ ಎನ್ನುತ್ತಿದ್ದರೂ ಕೂಡ ಬಿಜೆಪಿ ಸಿದ್ದರಾಮಯ್ಯ ಅವರನ್ನು ಹೀರೋ ಮಾಡುವುದಕ್ಕೆ ಹೊರಟಿರುವುದು, ಆ ಕೆಲಸದಲ್ಲಿ ಯಡಿಯೂರಪ್ಪರಂತಹ ನಾಯಕ ಮತ್ತೆ ಮೋಸ ಹೋಗುತ್ತಿರುವುದು ರಾಜಕೀಯದ ದುರಂತ.
ಕಳೆದ 4-5 ವರ್ಷಗಳಿಂದ ಬಿಜೆಪಿ ಮಾಡಿದ್ದೇನು ಕೇಳಿದರೇ, ಗಂಟಲು ಬಲವುಳ್ಳ ಸಮಾಜದ ಜನ ಸಮೂಹ ಸಿದ್ದರಾಮಯ್ಯ ಎಂಬ ಅಪಾರ ರಾಜಕೀಯ ಅನುಭವುಳ್ಳ ವಿರೋಧ ಪಕ್ಷದ ನಾಯಕನ ವಿರುದ್ಧ ನಿಂದೆಯ ಬೆಂಕಿ ಮಳೆ ಸುರಿಸುವುದಕ್ಕೆ ಬೇಕಾದ ಎಲ್ಲಾ ಮಾಧ್ಯಮಗಳಿಗೆ ಬಿಜೆಪಿ ಕೃಪಾ ಪೋಷಣೆ ಮಾಡಿದ್ದಷ್ಟೇ. ಜನತಾ ಪಕ್ಷ, ಜನತಾದಳದಿಂದ ಕಾಂಗ್ರೆಸ್‌ಗೆ ಬಂದು ರಾಜಕೀಯ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇ ಈ ವ್ಯಕ್ತಿಯ ಮಹಾ ಅಪರಾಧ ಎಂಬಷ್ಟರ ಮಟ್ಟಿಗೆ ಬಿಜೆಪಿ ಅಪವಾದ ಮಾಡಿತ್ತು. ಬೇರೆ ಏನೂ ಅಪಾವಾದ ಮಾಡುವುದಕ್ಕೆ ದಾರಿ ಇಲ್ಲದೇ ಇರುವಾಗ ಸಿದ್ದರಾಮಯ್ಯ ಹಾಕುವ ವಾಚ್, ಕನ್ನಡಕಗಳ ಮೇಲೆಯೂ ಬಾಯಿ ಬಲವುಳ್ಳ ಬಿಜೆಪಿ ಪ್ರಶ್ನೆ ಎತ್ತುವುದಕ್ಕೆ ಮುಂದಾಗಿದ್ದು ಬಿಜೆಪಿಯ ಕೀಳು ಮಟ್ಟದ ರಾಜಕೀಯ. ಪತ್ರಿಕಾ, ಮಾಧ್ಯಮ ರಂಗ, ಸಮಾಜಿಕ ಮಾಧ್ಯಮಗಳು ಸಿದ್ದರಾಮಯ್ಯ ವಿರುದ್ಧ ಹೊರಿಸಿದ ದೂಷಣೆಯ ನಡುವೆಯೂ ಆ ವ್ಯಕ್ತಿ ಇಂದೂ ಮತ್ತೆ ಪುಟಿದು ನಿಲ್ಲುವ ರಾಜಕೀಯ ಪ್ರಭಾವ ಬೆಳೆಸಿಕೊಂಡಿದ್ದಾರೆ. ಇದೇ ಒಂದು ಕಾರಣದಿಂದಾಗಿ ಸಿದ್ದರಾಮಯ್ಯ ಈ ಕಾಲದ ರಾಜಕೀಯದ ಇಂಟ್ರೆಸ್ಟಿಂಗ್ ಸಬ್ಜೆಕ್ಟ್.
ಬಿಜೆಪಿ ಯಡಿಯೂರಪ್ಪರ ರಾಜಕೀಯ ಅನುಭವ ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಬಿಜೆಪಿಗೆ ಯಡಿಯೂರಪ್ಪ ಬೇಕಾಗಿರುವುದು ಲಿಂಗಾಯತ ಮತಗಳಿಗಾಗಿ ಅಷ್ಟೇ. ಮತ್ತೆ ಬಿಜೆಪಿಯಿಂದ ಬಿಎಸ್‌ವೈ ಮೋಸ ಹೋಗುತ್ತಿರುವುದು ರಾಜಕೀಯ ವಲಯವೂ ಇಷ್ಟ ಪಡುವುದಿಲ್ಲ. ಕರ್ನಾಟಕ ಬಿಜೆಪಿ ರಾಜಕಾರಣಿಗಳ ಪೈಕಿಯಲ್ಲಿ ಯಡಿಯೂರಪ್ಪರವರಷ್ಟು ರಾಜಕೀಯ ಸಾಮರ್ಥ್ಯ ಇರುವ ಹಲವರು ಇರಲಾರರು. ಆದರೇ, ಹೈಕಮಾಂಡ್ ಯಡಿಯೂರಪ್ಪರನ್ನು ಆಡಳಿತ ಸಮರ್ಥನಾಗುವ ಹಾಗೆ ದುಡಿಸಿಕೊಂಡಿಲ್ಲ. ಬರಿ ಚುನಾವಣೆಗೆ ಬೇಕಾಗಿ ಅಷ್ಟೇ ದುಡಿಸಿಕೊಂಡಿತ್ತು. ಅದು ಕೂಡ ಅತ್ಯಂತ ಕೀಳಾಗಿ ಎನ್ನುವುದು ಇಲ್ಲಿ ಗಮನಾರ್ಹ. ಬಹುಷಃ ಇಂದಿನ ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರಿಗೆ ಇರುವಷ್ಟು ಆಡಳಿತ ಸಾಮರ್ಥ್ಯ ಹಲವರಿಗೆ ಇಲ್ಲ. ಹಾಗಾಗಿಯೇ ಸಿದ್ದು ಬಿಜೆಪಿಯ ಟಾರ್ಗೇಟ್. ಬಿಜೆಪಿ ಯಡಿಯೂರಪ್ಪರಿಂದ ಸಿದ್ದರಾಮಯ್ಯರನ್ನು ಅಲುಗಾಡಿಸುವ ತಂತ್ರಗಾರಿಕೆಗೆ ಬಳಸಿಕೊಳ್ಳುತ್ತಿದೆ ಅಷ್ಟೇ.
ಒಂದು ಆಡಳಿತ ಪಕ್ಷ ವಿರೋಧ ಪಕ್ಷಕ್ಕಿಂತಲೂ ಹೆಚ್ಚಾಗಿ ಒಬ್ಬ ಪ್ರಭಾವಿ ವಿರೋಧ ಪಕ್ಷದ ನಾಯಕನ ವಿರುದ್ಧ ನಡೆಸಿದ ಸತತ ಅಪವಾದಗಳಲ್ಲಿ ಬೇರೆ ಯಾರೇ ಆಗಿದ್ದರೂ ಮೂಲೆ ಗುಂಪಾಗುತ್ತಿದ್ದರು. ಆದರೇ, ಸಿದ್ದು ಮತ್ತೆ ಕಾಂಗ್ರೆಸ್‌ನನ್ನು ಗೆಲ್ಲಿಸುವ ಹಠ ಹಿಡಿದಿದ್ದಾರೆ. ಕಾಂಗ್ರೆಸ್‌ನಲ್ಲಿಯೇ ಸಿದ್ದು ಜನಪ್ರೀಯತೆ ನೋಡಿ ಹೊಟ್ಟೆ ಉರಿದುಕೊಳ್ಳುವವರ ದೊಡ್ಡ ಹಿಂಡಿದೆ. ಬಿಜೆಪಿಗೂ ಸಿದ್ದು ಜನಪ್ರಿಯತೆಯ ಬಗ್ಗೆ ಆತಂಕವಿದೆ. ಅದಕ್ಕೆ ಮತ್ತೆ ಮತ್ತೆ ಸಿದ್ದು ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಸಿದ್ದರಾಮಯ್ಯ ಸೋಲಬಹುದು, ಬಿಜೆಪಿ ಗೆಲ್ಲಬಹುದು. ಅಥವಾ ಎಲ್ಲವೂ ಅದಲು ಬದಲಾಗಬಹುದು. ಸಿದ್ದು ಹೀರೋ ಆಗ್ತಾರೆ, ಬಿಎಸ್‌ವೈ ಮೋಸ ಹೋಗ್ತಾರೆ. ಉಳಿದ ವಿಮರ್ಶೆ ಮಾಡಿಕೊಳ್ಳಿ.
-ಶ್ರೀರಾಜ್ ವಕ್ವಾಡಿ

No comments:
Post a Comment