ವಿಶ್ವಾಸ ಕಳೆದುಕೊಂಡ ‘ರಾಗಾ’ | ಮತ್ತೆ ಮೇಲೆದ್ದ ‘ನಾಯಕತ್ವ’ದ ಕೂಗು
ಆಂತರಿಕ ವೈಷಮ್ಯ ರಾಜಕೀಯದಲ್ಲಿ ಒಂದು ರೀತಿ ‘ಇಂಪ್ರಿಂಟ್’ ಇದ್ದ ಹಾಗೆ. ರಾಜಕೀಯದಲ್ಲಿ ಯಾರೂ ಸನ್ಯಾಸತ್ವ ತೆಗೆದುಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ ಬಿಡಿ. ಇದು ಆಂತರಿಕ ವೈಷಮ್ಯ ಅಲ್ಲ ಎಂದು ಸಾಬೀತು ಮಾಡುವುದಕ್ಕೆ ರಾಜಕೀಯದಲ್ಲಿ ಸಾಧ್ಯವಿದ್ದರೂ, ಪ್ರತಿಷ್ಟೆಯ ಕಾರಣದಿಂದಾಗಿ ಈ ಎಲ್ಲಾ ವಿಚಾರಗಳು ಬದಿಗೆ ಸರಿದು ಹೋಗುತ್ತವೆ ಎನ್ನುವುದಷ್ಟೇ ವಾಸ್ತವ ಸತ್ಯ. “ಆಂತರಿಕ ಸುಧಾರಣೆ” ಮಾತುಗಳಂತೂ ಪಕ್ಷದ ಸಭೆಗಳಿಗೆ ಮಾತ್ರ ಸೀಮಿತವಾದಂತಿದೆ.
ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆಯನ್ನು ಸ್ವಲ್ಪ ತೇಲ್ನೋಟದಲ್ಲಿ ನೋಡುವುದಕ್ಕೆ ಪ್ರಯತ್ನಿಸೋಣ, ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ದೇಶದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ರಾಷ್ಟ್ರೀಯತವಾದಿ ಚಳುವಳಿಯ ಮುಖೇನ ಆರಂಭಗೊಂಡ ಪಕ್ಷ, ಈಗ ‘ಪಾಲಿಟಿಕಲ್ ಸೆಕ್ಯುಲರಿಸಂ’ ಜಪ ಮಾಡುತ್ತಾ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಂತನ್ನಿಸುತ್ತಿದೆ. ಕಾಂಗ್ರೆಸ್‌ನಂತಹ ದೊಡ್ಡ ರಾಜಕೀಯ ಪಕ್ಷ್ಕ ತನ್ನ ಅಜೆಂಡಾದ ಸ್ಪಷ್ಟ ರೂಪವನ್ನೇ ಮರೆತಂತಿದೆ. ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಸಂಕಲ್ಪದೊಂದಿಗೆ ರಾಜಕೀಯ ಪ್ರವೇಶ ಮಾಡಿದ ಕಾಂಗ್ರೆಸ್‌ಗೆ ಮುಳುವಾಗಿರುವುದೇ ‘ನಾಯಕತ್ವ’.
ಚುನಾವಣೆಗಳಲ್ಲಿ ಕಾಂಗ್ರೆಸ್ ಅತ್ಯಂತ ದುರ್ಬಲ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿದರೇ, ಭವಿಷ್ಯ ಇನ್ನೇನು ಎಂಬ ಪ್ರಶ್ನೆ ಸಾಮಾನ್ಯವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಸದ್ಯ, ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ನಂತರದ ಸ್ಥಾನ ಪಡೆದಿರುವ ಕಾಂಗ್ರೆಸ್‌ಗ್ಯಾಕೆ ಇಂತಹ ಶೋಚನೀಯ ಸ್ಥಿತಿ ಬಂದೊದಗಿದೆ..? ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಪರಮಾನುಭವ ಹೊಂದಿರುವ ಕಾಂಗ್ರೆಸ್ ನಿಜಕ್ಕೂ ಎಡವಿದ್ದೆಲ್ಲಿ..?
ಇಂದಿರಾಗಾಂಧಿ ಕಾಲದ ನಂತರ ಸೃಷ್ಟಿಯಾದ ರಾಜಕೀಯ ವಾತಾವರಣ ಗೊತ್ತೇ ಇದೆ. ಇಂದಿರಾಗಾಂಧಿ ಮಗ ರಾಜೀವ್ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಕೂರಿಸಿದಾಗ ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ರಾಜೀವ್ ಗಾಂಧಿ ಬಗ್ಗೆ ‘ಕಾರ್ಯಕ್ಕೆ ಬಾರದ ಪ್ರಧಾನಿ’ ಎಂಬ ಅಭಿಪ್ರಾಯ ಮೂಡಿತ್ತು. ಈಗ ಮತ್ತೆ ಅದೇ ರೀತಿಯ ವಾತಾವರಣ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಅದೇ ಇಂದಿರಾಗಾಂಧಿ ಅವರ ಮೊಮ್ಮಗ, ರಾಜೀವ್ ಗಾಂಧಿ ಅವರ ಮಗ ರಾಹುಲ್ ಗಾಂಧಿ ಅವರ ಬಗ್ಗೆಯೂ ಈಗ ಕೆಟ್ಟ ಅಭಿಪ್ರಾಯ ಪಕ್ಕದೊಳಗೆಯೇ ಸೃಷ್ಟಿಯಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ರಾಜಕೀಯದಲ್ಲಿ ಒಂದು ಹೊಸ ಭರವಸೆಯ ಅಲೆಯನ್ನು ಸೃಷ್ಟಿ ಮಾಡಿದ್ದ ಸನ್ ಆಫ್ ರಾಜೀವ್ ಗಾಂಧಿ ವಿರುದ್ಧ ಈಗ ಪಕ್ಷದ ಒಳಗೇ ಹುಟ್ಟಿರುವ ವಿರೋಧಿ ಅಲೆಗೆ ಮುಖ್ಯ ಕಾರಣವೆಂದರೇ, ಅದು ಒಂದೇ ಒಂದು ‘ಕುಟುಂಬ ರಾಜಕಾರಣ’.
ರಾಜಕೀಯ ಅಂದರೇ, ಕೇವಲ ಅಧಿಕಾರ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ. ಅಧಿಕಾರ ಹಿಡಿದ ಮೇಲೆ ಅದನ್ನು ಸೂಕ್ತ ನಾಯಕತ್ವದಡಿಯಲ್ಲಿ ಮುನ್ನಡೆಸಿಕೊಂಡು ಹೋಗುವುದು ಕೂಡ ಹೌದು. ಕಾಂಗ್ರೆಸ್‌ಗೆ ಅತ್ಯಂತ ಮುಳುವಾಗಿ ಪರಿಣಮಿಸಿದ್ದು ನಾಯಕತ್ವ ಮತ್ತು ಕುಟುಂಬ ರಾಜಕಾರಣ.
ಕಾಂಗ್ರೆಸ್‌ಗೆ ಸದ್ಯಕ್ಕೆ ಸೋನಿಯಾ ಗಾಂಧಿ ಪರಮೋಚ್ಛ ನಾಯಕಿಯಾದರೂ ಅವರ ಬದಲಾಗಿ ಪಕ್ಷದ ಹೈಕಮಾಂಡ್‌ನಂತೆ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಗಾಂಧಿಗೆ ಈ ದೇಶದ ಸ್ವಾಸ್ಥ್ಯದ ಬಗ್ಗೆ ಕನಸು ಇದ್ದಿರಬಹುದು, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇದ್ದರಿಬಹುದು. ಆದರೇ, ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಅವರಿಗಿದೆಯೇ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ಪ್ರಶ್ನೆ.
ಕಳೆದ ಬಾರಿ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ನಡೆದಾಗ ಕೂಡ ಜಿ೨೩ ಪಡೆ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿತ್ತು. ಅಲ್ಲಿಂದ ರಾಹುಲ್ ಗಾಂಧಿ ಮೇಲೆ ಕಾಂಗೈ ಪಕ್ಷದ ಹಿರಿಯ ನಾಯಕರಲ್ಲಿದ್ದ ಭಿನ್ನಮತ ದೊಡ್ಡದಾಗುತ್ತಾ ಸಾಗಿತ್ತು. ೨೦೨೧ರ ಆಗಸ್ಟ್ನ ಎರಡನೇ ವಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜಿ೨೩ ಪಡೆಯ ಮುಖ್ಯಸ್ಥರಲ್ಲೋರ್ವರಾದ ಕಪಿಲ್ ಸಿಬಲ್ ಕರೆದಿದ್ದ ಔತಣಕೂಟಕ್ಕೆ ಗಾಂಧಿ ಕುಟುಂಬಕ್ಕೆ ಆಹ್ವಾನ ಇದ್ದಿರಲಿಲ್ಲ. ಆ ಖಾಸಗಿ ಔತಣಕೂಟದಲ್ಲಿಯೂ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೂಡ ಚರ್ಚೆಯಾಗಿತ್ತು. ಗಾಂಧಿ ಕುಟುಂಬದ ಹೊರತಾಗಿ ದೇಶದ ಪ್ರಮುಖ ಪ್ರಾದೇಶಿಕ ಪಕ್ಷದ ಪ್ರಮುಖ ನಾಯಕರು ಆ ಔತಣಕ್ಕೂ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಕಪಿಲ್ ಔತಣಕೂಟದಲ್ಲಿ ಪಾಲ್ಪಡೆದಿದ್ದ ಇತರೆ ಪಕ್ಷದ ನಾಯಕರ ಹಾಗೂ ಜಿ೨೩ ನಾಯಕರ ಅಭಿಪ್ರಾಯವೂ ಒಂದೇ ಆಗಿತ್ತು. ಈಗ ಮತ್ತೆ ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಬಳಿಕ ಕಪಿಲ್ ಸಿಬಲ್ ‘ಸಮರ್ಥ ನಾಯಕತ್ವ’ ಬೇಕೆಂಬ ಕೂಗೆತ್ತಿದ್ದಾರೆ. ಜಿ೨೩ ಬಂಡಾಯ ನಾಯಕರು ಮತ್ತೆ ಗುಲಾಮ್ ನಬಿ ಅಜಾದ್ ಮನೆಯಲ್ಲಿ ಸಭೆ ಸೇರಿ ಪಕ್ಷದ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಜಿ೨೩ ಪಡೆಯ ಬಗ್ಗೆಯೂ ಕೂಡ ರಾಜಕೀಯ ವಲಯದಲ್ಲಿ ಒಂದು ಅಭಿಪ್ರಾಯ ಸೃಷ್ಟಿಯಾಗಿದೆ. ರೆಬಲ್ ನಾಯಕರು ತಮ್ಮ ಪಕ್ಷವನ್ನೇ ವಿಭಜಿಸುವುದಕ್ಕೆ ಹೊರಟಿದ್ದಾರೆಂಬ ಮಾತು ಕೂಡ ಕೇಳಿಬರುತ್ತಿದೆ. ಆದರೇ, ಕಾಂಗ್ರೆಸ್ ಬಂಡಾಯ ಪಡೆ ಪಕ್ಷ ವಿಭಜಿಸುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಸೋಲಿನ ನಂತರ ನಡೆದ CWC ಸಭೆಯಲ್ಲಿ ಗಾಂಧಿ ಕುಟುಂಬ ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಮಾತು ಕೇಳಿ ಬಂದಿದೆ. ಆದರೇ, ಸಾಂಸ್ಥಿಕ ಚುನಾವಣೆವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿರಲು ಅವರ ಆಪ್ತ ಬಳಗ ಮನವಿ ಮಾಡಿಕೊಂಡಿದ್ದಲ್ಲದೇ, ಪಕ್ಷದ ಎಲ್ಲಾ ಜವಾಬ್ದಾರಿಯಿಂದ ದೂರ ಸರಿಯುವ ಪ್ರಸ್ತಾಪ ಮುಂದಿಟ್ಟರೂ ಕೂಡ ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಪಟ್ಟ ನೀಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಈಗ ಆಡಳಿತ ಪಕ್ಷಕ್ಕಿಂತಲೂ ಪ್ರಬಲವಾಗಿ ಇರಬೇಕಾಗಿತ್ತು. ಆಡಳಿತ ಪಕ್ಷದ ಅವ್ಯವಸ್ಥೆಯನ್ನು ವಿರೋಧ ಮಾಡುವುದು ಮಾತ್ರ ವಿರೋಧ ಪಕ್ಷದ ಕೆಲಸವಲ್ಲ. ಜನಾಭಿಮತ ಪಡೆಯುವ ಕೆಲಸವೂ ಮಾಡಬೇಕು. ಆದರೇ, ದುರಾದೃಷ್ಟವಷಾತ್ ಕಾಂಗ್ರೆಸ್‌ಗೆ ಸದ್ಯಕ್ಕೆ ಜನಮತ ತಂದುಕೊಡುವ ಸಾಮಾಜಿಕ ನ್ಯಾಯ ಸಂಕಲ್ಪದ ದೃಢತೆಯುಳ್ಳ ನಾಯಕತ್ವದ ಕೊರತೆಯೇ ದೊಡ್ಡದಾಗಿ ಕಾಣಿಸುತ್ತಿದೆ. ತುರ್ತಾಗಿ ಕೆಲವು ಕಾಂಗ್ರೆಸ್ ಹಿರಿಯ ನಾಯಕರ ‘ಕುಟುಂಬ ನಿಷ್ಠೆ’ ಧೋರಣೆಯೂ ಬದಲಾಗಬೇಕಿದೆ.
ಇನ್ನು, ೨೦೧೪ಕ್ಕೂ ಮೊದಲು ಇಡೀ ದೇಶದಾದ್ಯಂತ ರಾಹುಲ್ ಗಾಂಧಿ ಅವರ ಹಿಂದೆ ದೊಡ್ಡ ಯುವ ಸಮೂಹವಿತ್ತು. ಯುವ ರಾಜಕೀಯ ನಾಯಕನೊಬ್ಬನ ಮೇಲೆ ಇಡೀ ದೇಶದ ಯುವ ಪಡೆ ಹೊಸ ಭರವಸೆಯನ್ನು ಇಟ್ಟುಕೊಂಡಿತ್ತು. ರಾಹುಲ್ ಗಾಂಧಿ ದೇಶದಲ್ಲಿ ಯುವ ಚಿಂತನೆಯ ರಾಜಕೀಯದ ಅಲೆಯನ್ನು ಹರಿಸುವ ಭರವಸೆಯನ್ನೂ ಮೂಡಿಸಿದ್ದರು. ದೇಶದ ಹಲವು ರಾಜ್ಯಗಳಲ್ಲಿ ಹೊಸ ಚಿಂತನೆಯ ಮಳೆ ಸುರಿಸಬಲ್ಲ ಯುವ ನಾಯಕರ ದೊಡ್ಡ ಸಮೂಹವೇ ರಾಹುಲ್ ಆಪ್ತ ಬಳಗದಲ್ಲಿತ್ತು. ಆದರೇ, ಆ ಸಮೂಹವನ್ನು ಉಳಿಸಿಕೊಳ್ಳುವುದಕ್ಕೆ ರಾಗಾ ವಿಫಲರಾದರೋ ಅಥವಾ ಆ ಯುವ ಪಡೆ ಯಾವುದೋ ಹೊಸ ಚಿಂತನೆಯ ಸೆಳೆತಕ್ಕೆ ಒಳಗಾಗಿ ಬಣ್ಣ ಬದಲಾಯಿಸಿಕೊಂಡರೋ ಗೊತ್ತಿಲ್ಲ. ಜ್ಯೋತಿರಾದಿತ್ಯ ಸಿಂದಿಯಾ ಅಂತಹ ಪ್ರತಿಭಾವಂತ, ಚೈತನ್ಯಶೀಲ ಯುವ ನಾಯಕರು ಪಕ್ಷಾಂತರ ಮಾಡಿ ಹೋದರು. ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ದೊಡ್ಡ ಭರವಸೆಯ ಅಲೆಯ ನಡುವೆ ರಾಹುಲ್ ಹಾಗೂ ಕಾಂಗ್ರೆಸ್ ಅಜೆಂಡಾ ವರ್ಕೌಟ್ ಆಗಿಲ್ಲ.
ಹಾಗಾದರೇ, ರಾಹುಲ್ ಗಾಂಧಿ ಕಾಂಗ್ರೆಸ್‌ನಂತಹ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ಹೆಗಲು ನೀಡಬೇಕಾದರೇ, ಮತ್ತೆ ಹಿಂದಿನಂತೆಯೇ ಆಗಬೇಕು. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು, ಜವಾಬ್ದಾರಿಯಿಂದ ದೂರ ಸರಿಯುತ್ತೇನೆ ಎಂದು ಹೇಳುವ ಬದಲಾಗಿ ಎಲ್ಲಾ ಚುನಾವಣೆಯನ್ನು ಗೆದ್ದು ತೋರಿಸುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಪಕ್ಷದೊಳಗೆ ಹಿರಿಯ ಕಿರಿಯ ನಾಯಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಈಗಾಗಲೇ ದೇಶದಾದ್ಯಂತ ಮತ ತಂದು ಕೊಡುವ ಭರವಸೆಯ ಮುಖಗಳನ್ನು ಕಳೆದುಕೊಂಡಿದೆ. ಉಳಿದವರಿಗಾದರೂ ಸೂಕ್ತ ಜವಾಬ್ದಾರಿ ನೀಡಬೇಕಿದೆ. ರಾಜಕೀಯ ವರ್ಚಸ್ಸಿದ್ದರೂ, ರಾಜಕೀಯದ ಗಟ್ಟಿ ಅನುಭವಲ್ಲಿದ ಪ್ರಿಯಾಂಕ ಗಾಂಧಿ ಅವರಿಗೆ ಪಕ್ಷದ ಉಸ್ತುವಾರಿಯಂತಹ ದೊಡ್ಡ ಪಟ್ಟ ನೀಡುವ ಬದಲಾಗಿ, ಮಹಿಳಾ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ನೀಡಿದರೇ, ಪ್ರಿಯಾಂಕ ಅವರ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಮಂತ್ರಕ್ಕೆ ಮತ್ತಷ್ಟು ಶಕ್ತಿ ಹೆಚ್ಚಬಹುದು. ಮಾತ್ರವಲ್ಲದೇ, ಪಕ್ಷದಲ್ಲಿ ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ.
ಬಹಳ ಪ್ರಮುಖವಾಗಿ ಕಾಂಗ್ರೆಸ್‌ಗೆ ತುರ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯವಾಗಿ ತೃತೀಯ ರಂಗದಲ್ಲಿ ಅಂತಹದ್ದೇ, ವರ್ಚಸ್ಸಿರುವ ರಾಜಕೀಯ ಮುಖವನ್ನು ತರುವುದು. ಅದು ರಾಹುಲ್ ಗಾಂಧಿಯೇ ಆದರೂ, ಆಮುಖವಾಗಿ ಬೆಳೆದು ತೋರಿಸಬೇಕಿದೆ. ಆದರೇ, ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಹ ರಾಜಕೀಯ ವರ್ಚಸ್ಸುಳ್ಳ ಮುಖ ಎಲ್ಲಿಯೂ ಕಾಣಿಸುತ್ತಿಲ್ಲ. ಇದಲ್ಲವಾದರೇ, ರಾಜಕೀಯಕ್ಕೆ ಗಾಂಧಿ ಕುಟುಂಬ ರಾಹುಲ್ ಗಾಂಧಿ ಹೇಳುವ ಹಾಗೆಯೇ ‘ಟಾಟಾ ಬೈ ಬೈ’ ಎಂದು ಹೇಳಬೇಕೆ..? ಆ ನಿರ್ಧಾರಕ್ಕೆ ಗಾಂಧಿ ಕುಟುಂಬ ತಯಾರಿದೆಯೇ..?
ಮತ್ತೆ ಚುನಾವಣೆ ಬರುತ್ತಿದೆ. ಈಗಾಗಲೇ ಬಿಜೆಪಿ ರಾಜಕೀಯ ತಂತ್ರ ಹೆಣೆಯುವುದಕ್ಕೆ ಆರಂಭಿಸಿದೆ. ಆದರೇ, ಕಾಂಗ್ರೆಸ್ ಮಾತ್ರ ಇನ್ನೂ ಆಂತರಿಕ ಭಿನ್ನಾಭಿಪ್ರಾಯದಲ್ಲೇ ಬ್ಯುಸಿಯಾಗಿದೆ. ಅದೇನೇ ಇರಲಿ, ಮೋದಿ ಅಸಮರ್ಥ ನಾಯಕ ಎಂದು ಪದೇ ಪದೇ ಹೇಳುವ ರಾಹುಲ್ ಗಾಂಧಿ, ಮೊದಲು ಪಕ್ಷದೊಳಗೆ ಕೇಳಿಬರುತ್ತಿರುವ ‘ಅಸಮರ್ಥ’ ಭಿನ್ನಾಭಿಪ್ರಾಯ ಧ್ವನಿಗೆ ತಾನು ಅಸಮರ್ಥ ಅಲ್ಲ ಎಂದು ಸಾಬೀತುಪಡಿಸಬೇಕಿದೆ.
-ಶ್ರೀರಾಜ್ ವಕ್ವಾಡಿ
