Friday, March 20, 2020

ತ್ರಿಕೋನ ಪ್ರೇಮಕಥೆ “ದಿಯಾ”ಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್..!


ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಸೀನ್ಸ್, ಲವ್ ಹೆಚ್ಚಾದಾಗೆಲ್ಲಾ ಬೇಕಾದಷ್ಟು ಮೆಲೋಡಿ ಸಾಂಗ್ಸ್, ಪ್ರೀತಿಸಿದ ಹುಡುಗಿಗಾಗಿ ಹೊಡೆದಾಟ, ಬಡಿದಾಟಗಳೇ ತುಂಬಿರುವ ಮಾಮೂಲಿ ಲವ್ ಫಿಲ್ಮ್  ಇದಲ್ಲ. ಅವೆಲ್ಲದರ ಮೇರೆ ಮೀರಿದ ಪ್ರೀತಿ, ಬಾಂಧವ್ಯ, ವಾತ್ಸಲ್ಯ, ಸಂಬಂಧಕ್ಕೆ ಹಿಡಿದ ಕೈಗನ್ನಡಿ ‘ದಿಯಾ’.
ವಯೋಸಹಜವಾಗಿ ಕಥಾನಾಯಕಿ ‘ದಿಯಾ’ಗೂ ಇಲ್ಲಿ ಪ್ರೀತಿಯಾಗುತ್ತದೆ. ಕಾಲೇಜು ದಿನದ ಸಹಜ ಪ್ರೀತಿಯದು. ಆಕೆ ಕಾಲೇಜಿನಲ್ಲಿ ಒಬ್ಬ ಹುಡುಗನ್ನು ನೋಡುತ್ತಾಳೆ, ಅವನ ಟ್ಯಾಲೆಂಟ್ ಆಕೆಗೆ ಹತ್ತಿರವಾಗ್ತದೆ, ಅವನ ಮೇಲೆ ಗೊತ್ತಿಲ್ಲದ ಪ್ರೇಮಾಂಕುರ, ಇವೆಲ್ಲವೂ ಸಹಜ ಬಿಡಿ. ವಿಶೇಷ ಮತ್ತು ಅಚ್ಚರಿ ಚಿತ್ರದುದ್ದಕ್ಕೂ ಕಾಣುವುದು ಏನೆಂದರೇ, ಇನ್ನೇನು ಎಲ್ಲವೂ ಸಿಕ್ಕಿಯೇ ಬಿಡ್ತು, ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲೇ ತಿರುವು ಪಡೆಯುವ ರೀತಿ ಮತ್ತು ಆ ತಿರುವು ಚಿತ್ರದಲ್ಲಿ ಗೆದ್ದ ಪರಿ. ಬಯಸಿದ ಪ್ರೀತಿ ಕಳೆದುಹೋಗುತ್ತದೆ, ನೋವಿನಲ್ಲಿ ಬೆಂದಿದ್ದ ದಿಯಾಗೆ ಮತ್ತೊಬ್ಬನ ಸ್ನೇಹವಾಗುತ್ತದೆ. ಆ ಸ್ನೇಹ ಅರಿವಿಲ್ಲದೇ ಪ್ರೀತಿಯಾಗಿ ಬದಲಾಗುತ್ತದೆ. ಅಲ್ಲೊಂದು ಆತ್ಮೀಯತೆ, ಸಂಬಂಧ, ವಾತ್ಸಲ್ಯ ಹುಟ್ಟುತ್ತದೆ. ಮತ್ತೆ ತಿರುವು. ಆಮೇಲೆ ಏನೆಂಬುವುದೇ ‘ದಿಯಾ’ದ ಸಸ್ಪೆನ್ಸ್.
ಆ ಪ್ರತಿ ತಿರುವು ದಿಯಾಳಿಗೆ ನಿಡುಸುಯ್ಯುವಿಕೆ. ಆ ತಿರುವನ್ನು ದಾಟುವಲ್ಲಿ ದಿಯಾ ಪಡುವ ಸಂಕಟ, ನೋವು, ಪರದಾಟ, ತೊಳಲಾಟ, ಸಣ್ಣ ಧೈರ್ಯದೊಂದಿಗಿನ ಗೊಂದಲ,  ಎಲ್ಲವೂ ದಿಯಾಳನ್ನು ಬೆಚ್ಚಿಬೀಳಿಸುತ್ತದೆ.


ಚಿತ್ರದಲ್ಲಿ ನಿರ್ದೇಶಕ ಅಶೋಕ್, ಅಲ್ಲಲ್ಲಿ ಇಟ್ಟಿರುವ ಅನಿರೀಕ್ಷಿತ ತಿರುವುಗಳೇ ಪ್ರೇಕ್ಷಕನನ್ನು ಕೊನೆಯೊರಗೂ ಹಿಡಿದಿಟ್ಟಕೊಳ್ಳುವಂತೆ ಮಾಡುತ್ತವೆ. ಈ ನಡುವೆ  ಎರಡೆರಡು ಪ್ರೇಮ ಕಥೆ, ಅಲ್ಲಲ್ಲಿ ಕಾಣಸಿಗುವ ಭಾವನಾತ್ಮಕ ದೃಶ್ಯಗಳು ಹಾಗೂ ಅಮ್ಮ-ಮಗನ ಸೆಂಟಿಮೆಂಟ್ ಅಲ್ಲಲ್ಲಿ ಚಿತ್ರ ನಿಧಾನವಾಗುತ್ತಿದೆ ಎನ್ನುವುದನ್ನು ಪ್ರೇಕ್ಷಕನ ತಲೆಯಿಂದ ಓಡಿಸುವಂತೆ ಮಾಡುತ್ತದೆ. ವಾವ್ಹ್..! ಎನ್ನಿಸುವ ಅಜನೀಶ್ ಅವರ ಹಿನ್ನೆಲೆ ಸಂಗೀತ, ವಿಶಾಲ್ ಮತ್ತು ಸೌರಭ್‌ರ ಸಿನೆಮಾಟೋಗ್ರಾಫಿಗೆ ಮೆಚ್ಚಲೇಬೇಕು.
ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿರುವ ಬೆಚ್ಚಿ ಬೀಳಿಸುವ ದೃಶ್ಯ ಕಂಬನಿ ಜಾರುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕೊನೆಗೆ, ಅಚ್ಚರಿ ಮತ್ತು ಪವಾಡಗಳಿಂದಲೇ ಜೀವನ ಎಂದು ಹೇಳಲ್ಹೊರಟ ಕಥೆ, ಪ್ರೇಕ್ಷಕರ ಮನ ಕದ್ದಿದ್ದಂತೂ ಸತ್ಯ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಖುಷಿ(ದಿಯಾ), ಪ್ರಥ್ವಿ ಅಂಬರ್(ಆದಿ), ದೀಕ್ಷಿತ್ ಶೆಟ್ಟಿ(ರೋಹಿತ್) ಪಾತ್ರಗಳಿಗೆ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್(ಅಮ್ಮ) ಹಾಗೂ ಅರವಿಂದ್ ರಾವ್ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ.


‘ದಿಯಾ’ ನೋಡಿದ ಅದೆಷ್ಟು ಮಂದಿ ತಮ್ಮನ್ನು ತಾವು ಆ ಕಥೆಯ ದಿಯಾಳೊಂದಿಗೆ, ರೋಹಿತ್‌ನೊಂದಿಗೆ, ಆದಿಯೊಂದಿಗೆ ಹೋಲಿಸಿಕೊಂಡರೋ ಗೊತ್ತಿಲ್ಲ. ಒಟ್ಟಿನಲ್ಲಿ ಚಿತ್ರ ನೋಡಿದ ಕೆಲವೊಂದಿಷ್ಟು ಹುಡುಗಿಯರು ತಮ್ಮೊಳಗಿನ ಸ್ವಲ್ಪ ದಿಯಾಳ ಸಂಕಟದ ಮಧ್ಯೆ, ಹುಡುಗರು ತಮ್ಮೊಳಗಿನ ಸ್ವಲ್ಪ ಆದಿ, ರೋಹಿತ್‌ರ ಬದುಕಿನ ನಡುವೆ ತಮ್ಮನ್ನು ಗುರುತಿಸಿಕೊಳ್ಳುತ್ತಲೇ, ಕಣ್ಗಳ ಹನಿಗಳನ್ನುದುರಿಸುತ್ತಲೇ ಚಿತ್ರವನ್ನು ಇಷ್ಟಪಟ್ಟರು ಎನ್ನುವುದಕ್ಕೆ ಚಿತ್ರದ ಕುರಿತಾಗಿ ಕೇಳಿಬರುತ್ತಿರುವ ಮಾತುಗಳೇ ಸಾಕ್ಷಿ.
-ಶ್ರೀರಾಜ್ ವಕ್ವಾಡಿ


Thursday, March 19, 2020

"ನಾನು ಬರೆಯುವುದು ಮನುಷ್ಯನ ಬದುಕನ್ನು" – ವೈದೇಹಿ


ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಶೈಲಿಯಲ್ಲಿ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರೆನ್ನಿಸಿಕೊಂಡವರು ಇವರು. ವೈದೇಹಿ ಎಂಬ ಕಾವ್ಯನಾಮದಿಂದಲೇ ಸಾಹಿತ್ಯಲೋಕದಲ್ಲಿ ಹೆಸರಾದವರು. ಕುಂದಾಪುರ ಮೂಲದ ವೈದೇಹಿಯವರ ಬರಹಗಳು ಸಾಹಿತ್ಯ ವಲಯದಲ್ಲಿ, ಸಾಮಾಜಿಕ ವಲಯದಲ್ಲಿ ಪ್ರಭಾವಿಸಿದ ಪರಿ ವಿಭಿನ್ನ. ಸಾಹಿತ್ಯದ  ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವುದು ಇವರ ಹೆಚ್ಚುಗಾರಿಕೆ. ಕಥೆ, ಕಾವ್ಯ, ಕಾದಂಬರಿ, ಜೀವನ ಕಥನ, ಅನುವಾದ, ಮಕ್ಕಳ ನಾಟಕ, ಪ್ರಬಂಧಗಳು, ಸಂಪಾದಿತ ಕೃತಿ..ಹೀಗೆ ಹತ್ತು ಹಲವು. ವೈದೇಹಿಯವರ ಅನೇಕ ಕಥೆಗಳು ಇಂಗ್ಲೀಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ಇವರ ಕಥೆಗಳನ್ನಾಧರಿಸಿ 'ಗುಲಾಬಿ ಟಾಕೀಸ್', 'ಅಮ್ಮಚ್ಚಿಯೆಂಬ ನೆನಪು' ಎಂಬ ಎರಡು ಸಿನೆಮಾಗಳು ತೆರೆಕಂಡಿವೆ. ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೊಳಗೊಂಡು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವವೂ ಲಭಿಸಿವೆ ಎನ್ನುವುದು ವಿಶೇಷ. ನಾಡು ಕಂಡ ಅಗ್ರಮಾನ್ಯ ಲೇಖಕಿ ವೈದೇಹಿಯವರ ಅಂತರಾಳ ತೆರೆದಿಡುವ ಪ್ರಯತ್ನ ಈ ಸಂದರ್ಶದಿಂದ ನಿಮಗಾಗಿ..


ವಸಂತಿ ಜಾನಕಿಯಾಗಿ, ಜಾನಕಿ ವೈದೇಹಿಯಾಗಿ ಬದಲಾಗಿದ್ದು ಹೇಗೆ..?
ವಸಂತಿ ಅಮ್ಮನಿಂದ, ಜಾನಕಿ ಅಪ್ಪನಿಂದ, ವೈದೇಹಿಯಾಗಿದ್ದು ಸುಧಾ ಪತ್ರಿಕೆಯವರಿಂದ. ‘ವೈದೇಹಿ’ ನನಗೆ ಇಷ್ಟವಾಯ್ತು. ಹೀಗೆ ಈಗ ವೈದೇಹಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇರುವೆ.

ನಿಮ್ಮ ಬಹುತೇಕ ಎಲ್ಲಾ ಸಾಹಿತ್ಯ ಕೃತಿಗಳಲ್ಲಿ ಕುಂದಾಪುರ ಕನ್ನಡ ಭಾಷೆಯೊಂದಿಗೆ ಕುಂದಾಪುರದ ಸ್ಥಿತಿಗತಿಯನ್ನೂ ತೋರ್ಪಡಿಸಿದ್ದೀರಿ. ಅಲ್ಲಿಯೇ ನೀವು ವಿಶೇಷವಾಗಿ ಕಾಣುವುದು...
ಹೌದು, ನನ್ನ ಸಾಹಿತ್ಯದಲ್ಲಿ  ನಾನು ಕಂಡ ಬದುಕಿನ ವಿವಿಧ ಮಗ್ಗುಲುಗಳನ್ನು ನಾನು ಬೆಳೆದು ಬಂದ ನೆಲದ ಭಾಷೆಯಲ್ಲಿ (ಗಮನಿಸಿ: ಅದು ಅಗತ್ಯ ಕಂಡಲ್ಲಿ ಮಾತ್ರ) ಹೇಳಲು ಯತ್ನಿಸಿದ್ದೇನೆ. ಭಾಷೆ ಒಂದು ಕೃತಿರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ನಿಜ. ಆದರೆ ಕೇವಲ ಭಾಷೆ ಬಳಸಿದ್ದರಿಂದ ಮಾತ್ರ ಅಲ್ಲ, ಅಲ್ಲಿರುವ ಕಥಾವಸ್ತು ಏನು ಮತ್ತು ಅದು ಆ ಭಾಷೆಯ  ಮೂಲಕ  ಹೇಗೆ ಅಭಿವ್ಯಕ್ತಿಗೊಂಡಿದೆ ಎನ್ನುವುದು ಮುಖ್ಯ.

ಒಬ್ಬ ಬರಹಗಾರ/ಬರಹಗಾರ್ತಿಯರನ್ನು ಸಾಹಿತ್ಯದಲ್ಲಿ ಗುರುತಿಸುವಲ್ಲಿ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ..?
ಪ್ರಕಾರಗಳು ಒಬ್ಬ ಬರಹಗಾರನ ಬರಹದ ಆಕೃತಿಗಳು. ನನ್ನ ಪ್ರಕಾರ ಎಲ್ಲವೂ ಬರಹವೇ. ಮೂಲತಃ ನಾನೊಬ್ಬ ಕಥೆಗಾರ್ತಿ ಎನುವುದಕ್ಕಿಂತ, ಬರಹಗಾರ್ತಿ. ನಾನು ಬರೆದಿದ್ದರಲ್ಲಿ ಕೆಲವು ಕಥೆಗಳಾಗುತ್ತವೆ, ಕೆಲವು ಪ್ರಬಂಧಗಳಾಗುತ್ತವೆ, ಕಾವ್ಯಗಳಾಗುತ್ತವೆ. ನಾನು ಏನು ಹೇಳಲು ಹೊರಡುವೆನೋ ಅದರ ಆಕೃತಿಯನ್ನು ಅದೇ ನಿರ್ಧರಿಸುತ್ತದೆ ಎಂಬುದು ನನ್ನ ಅನುಭವ.

ನೀವು ಹೆಣ್ಣಿನ ನೋವು, ಸಂಕಟಗಳನ್ನೇ ಹೆಚ್ಚಾಗಿ ನಿಮ್ಮ ಕೃತಿಗಳಲ್ಲಿ ಬರೆದಿದ್ದೀರಿ. ಬರೆದಾದ ಮೇಲೆ ವಾಸ್ತವದಲ್ಲಿ ಇಷ್ಟೆಲ್ಲಾ ಉಂಟಾ ಅಂತ ನಿಮಗೆ ಅನ್ನಿಸಿದ್ದಿದೆಯಾ..?
ಅಯ್ಯೋ... ಅದರ ಎಷ್ಟೋ ಪಟ್ಟು ಹೆಚ್ಚಿಗೆ ಇವೆ. ಹೆಣ್ಣಿನ ಪಾತ್ರದ ಮೂಲಕ ಬದುಕಿನ ಬಗ್ಗೆ ಬರೆದರೆ ಯಾಕೆ ಹೆಣ್ಣಿನ ಬಗ್ಗೆಯೇ ಬರೆಯುತ್ತೀರಿ ಅಂತ ಕೇಳ್ತೀರಿ. ನಗೆ ಬರುತ್ತದೆ.  ಲೇಖಕರು ಬರೆಯುವ ಅದೆಷ್ಟೋ ಕೃತಿಗಳು ಗಂಡಸರ ಬಗ್ಗೆಯೇ ಇವೆ. ಯಾರೂ ಕೂಡ ಗಂಡಸರಿಗೆ ಹೀಗೆ ಪ್ರಶ್ನೆ ಮಾಡುವುದಿಲ್ಲ. ವಾಸ್ತವವಾಗಿ ನಾನು ಬರೆಯುವುದು ಮನುಷ್ಯನ ಬದುಕನ್ನು, ಹೆಣ್ಣಿನ ಬದುಕನ್ನಲ್ಲ. ನಮ್ಮ ಅನುಭವಗಳನ್ನ ನಾವು ಬರೆಯುತ್ತೇವೆ. ನನ್ನ ಬದುಕಿನ ಮುಖ್ಯ ಕೇಂದ್ರದಲ್ಲಿರುವುದು ಮನುಷ್ಯಲೋಕದಲ್ಲೇ ಬೆಸೆದು ಹೋಗಿರುವ ಸ್ತ್ರೀ ಲೋಕ. ನಾನು ಕಂಡಿದ್ದು ಒಟ್ಟು ಬದುಕಿನಲ್ಲಿ ಒಳಗೊಂಡಿರುವ ಸ್ತ್ರೀಯರ ನೋವು ಸಂಕಟವನ್ನು. ನನ್ನ ಅನುಭವಕ್ಕೆ ತೀರಾ ಹೊರತಾದ ಪ್ರಪಂಚವನ್ನು ನಾನು ಹೇಗೆ ಬರೆಯುವುದಕ್ಕೆ ಸಾಧ್ಯ..? ಬರೀ ಕಲ್ಪನೆ ಮಾತ್ರದಿಂದ ಅಲ್ಲ, ವಾಸ್ತವಕ್ಕೆ ಕಲ್ಪನೆ ಸೇರಿಸಿದಾಗ ಅದು ಕಲಾಕೃತಿಯಾಗುತ್ತದೆ. ನಾನು ಬರೆದ, ಕಥೆಗಳು ಇಂದು ನನಗೇ ಗೊತ್ತಿಲ್ಲದ ಹಾಗೆ ದಾಖಲು ಮಾಡುತ್ತಿರುವುದು ನಾನು ಕಂಡ, ಅನುಭವಿಸಿದ ಮತ್ತು ಗ್ರಹಿಸಿದ ಹೆಣ್ಣಿನ ಜೀವನ ಗತಿಯನ್ನು ಅಂತ ಒಮ್ಮೊಮ್ಮೆ ಅನಿಸುತ್ತದೆ.

ಹೆಣ್ಣಿಗೆ ಧ್ವನಿಯಾಗಿ ಬರೆಯುವುದು ನಿಮಗೆ ಸುಲಭವಾಯ್ತಾ..?
ಹೋ! ‘ನಿಮ್ಮ ಸ್ವರದಲ್ಲಿ ಮಾತಾಡುವುದು ನಿಮಗೆ ಸುಲಭವಾಯ್ತಾ?’ ಅಂತ ಕೇಳಿದ ಹಾಗಿದು..! (ನಗೆ) ಎಲ್ಲರಿಗೂ ಅವರವರ ಧ್ವನಿ ಸಹಜ. ಇನ್ನೊಬ್ಬರ ಧ್ವನಿಯಲ್ಲಿ ನಾವು ಹೇಗೆ ಮಾತಾಡಲು ಸಾಧ್ಯ? ಪರಮ ಕಷ್ಟ ಅದು.

ನಿಮ್ಮ ಕಥೆಗಳನ್ನಾಧಾರವಾಗಿಟ್ಟುಕೊಂಡು ‘ಗುಲಾಬಿ ಟಾಕೀಸ್’, ‘ಅಮ್ಮಚ್ಚಿಯೆಂಬ ನೆನಪು’ ಎರಡು ಸಿನೆಮಾಗಳಾಗಿವೆ.. 
ಹ್ಞೂ, ಹೌದು. ನನ್ನ ಕಥೆಗಳನ್ನಿಟ್ಟುಕೊಂಡು ಸಿನೆಮಾ ಭಾಷೆಗೆ ತಕ್ಕಂತೆ ಅದರಲ್ಲಿರುವ ತಾತ್ವಿಕತೆಯನ್ನು ಬದಲಿಸದೆ ನಿರ್ದೇಶಕರುಗಳಾದ ಗಿರೀಶ್ ಕಾಸರವಳ್ಳಿ, ಚಂಪಾ ಶೆಟ್ಟಿಯವರು ಸಿನೆಮಾ ಮಾಡಿದ್ದಾರೆ, ಹಾಗಾಗಿ, ಸಿನೆಮಾಗಳಾಗಿಯೂ ಅವು ಜನರಿಗೆ ಹತ್ತಿರವಾದವು. ನನಗದು ಸಂತೋಷ.

ನೀವು ಅನುವಾದ ಸಾಹಿತ್ಯದಲ್ಲೂ ತೊಡಗಿಸಿಕೊಂಡವರು. ಮೂಲ ಕೃತಿಗೆ ಧಕ್ಕೆಯಾಗದೇ ಕೃತಿಯನ್ನು ಅನುವಾದಿಸುವ ಜವಾಬ್ದಾರಿ ಅನುವಾದಕರಿಗಿರುತ್ತದೆ. ಅನುವಾದಕ/ಅನುವಾದಕಿ ಎಷ್ಟು ಎಚ್ಚರಿಕೆಯ ಸೂಕ್ಷ್ಮ ಮನಸ್ಸಿನಿಂದಿರಬೇಕು..?
ಆ ಇಡೀ ಕೃತಿ ಏನು ಹೇಳುವುದಕ್ಕೆ ಹೊರಟಿದೆ ಎನ್ನುವುದನ್ನು ಅನುವಾದಕರಾದವರು ಮೊದಲು ನೋಡಿಕೊಳ್ಳಬೇಕು. ಆಮೇಲೆ ಅನುವಾದಿಸಬೇಕಾದ ಭಾಷೆಯಲ್ಲಿ ಹೇಗೆ ನಿರೂಪಿಸಲು ಸಾಧ್ಯ ಎನ್ನುವುದು ನೋಡಬೇಕು. ಅದು ಭಾವಾಂತರ ಅಲ್ಲ. ಮೂಲ ಲೇಖಕ/ಲೇಖಕಿ ಹೇಳುವುದನ್ನು ನಾವು ಅನುವಾದ ಮಾಡುತ್ತಿರುವ ಭಾಷೆಯಲ್ಲಿ ಹೇಗೆ ಹೇಳುತ್ತೇವೆ, ಹೇಗೆ ಸಂವಹನಕ್ಕೆ ಧಕ್ಕೆ ಆಗದಂತೆ ಹೇಳಬೇಕು ಎಂಬ ಚಿಂತನೆ ಮುಖ್ಯ. ಒಟ್ಟಿನಲ್ಲಿ ಅನುವಾದ ಮಾಡಬೇಕಾದ ಕೃತಿಯ ಜೀವಧ್ವನಿ ಅನುವಾದ ಮಾಡುವ ಭಾಷೆಯಲ್ಲಿ ಸ್ವಲ್ಪವೂ ಕುಂದದಂತೆ ಸೃಷ್ಟಿಸುವುದು ಅನುವಾದಕನ ಸವಾಲು. 

ಕಾವ್ಯಕ್ಕೆ ಬಹಳ ದೊಡ್ಡ ತಾಕತ್ತಿದೆ. ಒಂದು ವಸ್ತುವನ್ನು ಸಂಕ್ಷಿಪ್ತವಾಗಿ ಕವಿ/ಕವಯತ್ರಿ ಹೇಳಬೇಕಾಗುತ್ತದೆ. ಓದುಗನಿಗೆ ಅರ್ಥವಾಗದೇ ಕಾವ್ಯ ಸೋಲುವುದು ಎಷ್ಟೋ ಸಂದರ್ಭಗಳಲ್ಲಿವೆ... ಕಾವ್ಯ ಹೇಗಿರಬೇಕು..?
ಕಾವ್ಯ ಎಲ್ಲರಿಗೂ ಸುಲಭದಲ್ಲಿ ತಲುಪುವಂತಹ ಮಾಧ್ಯಮವೇ ಅಲ್ಲ. ಕಾವ್ಯವನ್ನು ಓದುವವರಿಗೆ ಸೂಕ್ಷ್ಮ ಮನಸ್ಸೂ ಬೇಕು. ವಿಶೇಷ ಆಸಕ್ತಿಯೂ ಬೇಕು. ಕಾವ್ಯ ಒಂದು ಓದಿಗೆ ಓದುಗರಿಗೆ ತಲುಪುತ್ತದೆ ಎಂಬ ಭರವಸೆಯೂ ಇಲ್ಲ. ಕಾವ್ಯಮಾರ್ಗ ಎಂದರೆ ರೂಪಕದ ಮಾರ್ಗ. ಕವಿ ಕಾವ್ಯದ ಒಂದಲ್ಲ ಒಂದು ಸಾಲಿನಲ್ಲಿ ಓದುಗನಿಗೆ ಪ್ರವೇಶ ಕೊಟ್ಟಿರುತ್ತಾನೆ. ಆತ ಏನು ಹೇಳುವುದಕ್ಕೆ ಹೊರಟಿದ್ದಾನೆ ಎಂದು ಅರಿಯುವ ಶ್ರದ್ಧೆ ಇದ್ದಾಗ ಕವಿತೆಯೊಂದು ತೆರೆದುಕೊಳ್ಳುತ್ತದೆ. ನನಗೇನೋ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಕಾವ್ಯ ಪ್ರಕಾರವೇ ಅಂತಿಮವೆಂದು ಕಾಣುವುದು. ಭಾವ ಮತ್ತು ಭಾಷೆಗಳು ಲಯದಿಂದ ಕೂಡಿ ರೂಪಕದ ಮೂಲಕ ಸೃಷ್ಟಿಯಾದಾಗ ಅದರ ಚೆಲುವು ಬೇರೆಯೇ.

ಸ್ತ್ರೀ ಸಾಹಿತ್ಯ, ಪುರುಷ ಸಾಹಿತ್ಯ ಅಂತ ವಿಭಾಗಗಳಿವೆಯಾ..?
ಇಲ್ಲ. ಸಾಹಿತ್ಯದಲ್ಲಿ ಸ್ತ್ರೀ, ಪುರುಷ ಅಂತ ವಿಭಾಗಗಳಿಲ್ಲ. ಅದೆಲ್ಲ ಅಧ್ಯಯನಕ್ಕಾಗಿ ಮಾಡಿಕೊಂಡ ವಿಭಾಗಗಳು ಅಷ್ಟೆ. ಸ್ತ್ರೀ ಮತ್ತು ಪುರುಷ ಬರೆದ ಸಾಹಿತ್ಯದಲ್ಲಿ ಸ್ತ್ರೀ ವಿಶಿಷ್ಟ ಸಂವೇದನೆ ಮತ್ತು ಪುರುಷ ವಿಶಿಷ್ಟ ಸಂವೇದನೆ ಇರಬಹುದು. ಇರಬೇಕು. ಅದು ಸಹಜ.

ನಿಮ್ಮ ಸಾಹಿತ್ಯ ಕೃತಿಗಳಿಂದ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಿದೆ ಅಂತ ಅನ್ನಿಸುತ್ತಿದೆಯಾ..?
ಬದಲಾಗಿದೆ ಅಂತ ಹೇಳುವುದಿಲ್ಲ. ಪ್ರಭಾವ ಬೀರಿರಲೂಬಹುದು. ಇದನ್ನೆಲ್ಲ ಖಂಡಿತವಾಗಿ ತೀರ್ಪಿನಂತೆ ಹೇಳಲು ಸಾಧ್ಯವಿಲ್ಲ. ಸಾಹಿತ್ಯ ಕೃತಿಗಳಿಂದ ದೀರ್ಘಕಾಲೀನ ಪರಿಣಾಮ ಸಾಧ್ಯ ಎಂಬ ನಂಬಿಕೆ ಮಾತ್ರ ಇದೆ.

ಇಂದಿಗೂ ‘ಹೆಣ್ಣು’ ಎರಡನೇ ದರ್ಜೆಯವಳು ಅಂತ ಅನ್ನಿಸುತ್ತಿದೆಯಾ..?
ಖಂಡಿತ. ಹಾಗೆ ಅನಿಸುವುದು ನಮಗಲ್ಲ. ಪುರುಷವರ್ಗಕ್ಕೆ. ಇವತ್ತಿಗೂ ಕೆಡುಗಣ್ಣಿನ ಗಂಡಿಗೆ ಒಬ್ಬ ಹೆಣ್ಣೆಂದರೆ ಹೆಣ್ಣೂ ಅಲ್ಲ, ಬರೀ ಅವಳ ಅಂಗಾಂಗ. ಇಂದಿಗೂ ಪ್ರಪಂಚ ಹೆಣ್ಣಿಗೂ ಒಂದು ಜೀವ ಅಂತ ನೋಡಿಲ್ಲ. ಎಲ್ಲೋ ಕೆಲಮಂದಿ ಮಹಿಳೆಯರು ವಿದ್ಯೆ, ಸ್ಥಾನ ಮಾನ ಗಳಿಸಿರಬಹುದು. ಆದರೆ ಇಂದಿಗೂ ಲಕ್ಷ ಲಕ್ಷ ಮಂದಿ ಮಹಿಳೆಯರು ದಿನ ನಿತ್ಯದ ಕಡು ಕಷ್ಟದ ಜೀವನದಲ್ಲಿದ್ದಾರೆ. ಅಲ್ಲಿನ ದೌರ್ಜನ್ಯ, ಹಿಂಸೆ ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೆಂಗಸರೂ ಪ್ರಜೆಗಳೇ ಎಂಬುದನ್ನೇ ಗ್ರಹಿಸದ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರ ನಮ್ಮದು. ಎಲ್ಲವನ್ನೂ ನಿಭಾಯಿಸುವ ಗುಣವಿರುವುದರಿಂದ ಹೆಣ್ಣು ಉಳಿದಿದ್ದಾಳೆ. ಮಾತ್ರವಲ್ಲ ಹೆಣ್ಣಿರುವ ಕಾರಣಕ್ಕೇ ಪ್ರಪಂಚವೂ ಉಳಿದಿದೆ.

ಪ್ರಶಸ್ತಿಗಳು ಒಬ್ಬ ಬರಹಗಾರ/ಬರಹಗಾರ್ತಿಯ ಮುಂದಿನ ಕೃತಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ..?
ಪ್ರಶಸ್ತಿ ಸಾರ್ವಜನಿಕವಾಗಿ ಒಬ್ಬರನ್ನು ಗುರುತಿಸುವ ಗೌರವಿಸುವ ಮಾರ್ಗ, ಅಷ್ಟೆ. ಸಮುದಾಯ ನಮ್ಮ ಕೆಲಸವನ್ನು ಮೆಚ್ಚುಗೆಯನ್ನು ಸೂಸುವ ಕ್ರಮವದು.   ಜವಾಬ್ದಾರಿಯಿಂದಲೇ ಬರೆಯುವ ಬರಹಗಾರರಿಗೆ ಪ್ರಶಸ್ತಿ ಬಂದ ಮೇಲೆಯೇ ಜವಾಬ್ದಾರಿ ಹೆಚ್ಚಾಗಬೇಕೆಂದೇನಿಲ್ಲ. ನಿಜ, ಅದು ಸಂತೋಷ ಕೊಡಬಹುದು, ಆದರೆ ಅದರಲ್ಲಿ ಕೊಚ್ಚಿಹೋಗುವ ಪ್ರಮೇಯವೇ ಇಲ್ಲ.

ಸಾಹಿತ್ಯಕ್ಕೆ ಹೊಸದಾಗಿ ಪ್ರವೇಶ ಮಾಡುವವರಿಗೆ ನಿಮ್ಮ ಕಿವಿಮಾತು..?
ಏನಿಲ್ಲ. ಬರೆಯುವ ಆಸಕ್ತಿಯಿದ್ದಲ್ಲಿ ತುರ್ತಿದ್ದಲ್ಲಿ ಬರೆದು ಬಿಡುತ್ತಾರೆ. ಬರೆಯಬೇಕು. ನಾವು ‘ಹಾಗಲ್ಲ, ಹೀಗೆ’ ಎಂದು, ಕೇಳಿದಲ್ಲಿ ತಿಳಿಹೇಳಬಹುದು, ಅಷ್ಟೇ.
-ಶ್ರೀರಾಜ್ ವಕ್ವಾಡಿ    

Monday, March 16, 2020

Sacrifice



Everything is the direct 
Result of the sacrifice...! 
There is no life
Without sacrifice...! 
When you sacrifice 
'Love' to your own 'Heart',
You will not lose anything...! 
"Sacrifice is also Love to live"
Life is all about sacrifice,
When you sacrifice something 
for something only you can be happy..!
-ಕಾವ್ಯ ಬೈರಾಗಿ
(Shreeraj Vakwady)


Don't expect fame, within a short period of Time. It will not gives you LIFE.
If you want to survive in your field..You must be ready to spread over the soil on your body...!
-ಕಾವ್ಯ ಬೈರಾಗಿ
(Shreeraj Vakwady)





Saturday, March 14, 2020

'ಕೋವಿಡ್-19' ಭೂತ..!


ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಾರಕ ವೈರಸ್ ಕೋವಿಡ್-19. ಬಲಿಯಾದವರ ಸಂಖ್ಯೆ, ಸೋಂಕಿಗೊಳಗಾದವರ ಸಂಖ್ಯೆ ಗಮನಿಸಿದರೆ ಎದೆ ನಡುಗುವುದು ಖಚಿತ. ನಿತ್ಯ ಸಾವಿಗೆ, ಸೋಂಕಿಗೀಡಾಗುತ್ತಿರುವವರ ಸಂಖ್ಯೆ ಮೇಲ್ಮುಖಗೊಳ್ಳುತ್ತಿದೆ. ವಿಶ್ವವ್ಯಾಪಿ ಪಸರಿಸಿದ ಈ ವೈರಸ್ ಕಲ್ಲೆದೆಯನ್ನೂ ಧಂಗಾಗಿಸಿದೆ. ಈಗಿರುವ ವರದಿಯ ಪ್ರಕಾರ ಭಾರತವನ್ನು ಸೇರಿ ಬರೋಬ್ಬರಿ 150ಕ್ಕೂ ಹೆಚ್ಚು ದೇಶಗಳಿಗೆ ಸೋಂಕು ಹರಡಿದೆ. ರಾಜ್ಯದಲ್ಲಿ ಕೋವಿಡ್ ಎಮರ್ಜೆನ್ಸಿಯನ್ನೂ ಹೇರಲಾಯಿತು. ಬರೋಬ್ಬರಿ ಒಂದು ವಾರ ಸಾರ್ವಜನಿಕ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಶಾಲಾ ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ಘೋಷಿಸಲಾಯಿತು. ಮಾತ್ರವಲ್ಲದೇ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೇ ಸ್ಥಿತಿ ಕಂಡು ಬಂತು. ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಯ್ತು. ಇನ್ನು, ಆರ್ಥಿಕ ವಿಚಾರಗಳಿಗಾದ ನಷ್ಟ ಅಷ್ಟಿಷ್ಟಲ್ಲ..!
ಕೊವಿಡ್-19 ಕೇವಲ ಜೀವಹಾನಿ ಮಾಡುತ್ತಿರುವುದು ಮಾತ್ರವಲ್ಲದೇ, ಜಾಗತಿಕ ವಾಣಿಜ್ಯ- ಆರ್ಥಿಕ ಪರಿಸ್ಥಿತಿಯ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಕುಕ್ಕುಟೋದ್ಯಮ, ಆಟೋಮೊಬೈಲ್ ಸೇರಿದಂತೆ ಹಲವಾರು ಉದ್ಯಮಗಳ ಬುಡ ಅಲ್ಲಾಡಿಸಿದೆ. ಇಷ್ಟೆಲ್ಲಾ ಭಿತಿ ಹುಟ್ಟಿಸುತ್ತಿರುವ ಕೋವಿಡ್-19 ವೈರಸ್‌ಗೆ ಮೊನ್ನೆ ಮೊನ್ನೆಯಷ್ಟೇ ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ಚರದ ವೈರಸ್‌ನ್ನು ತೂಗುಹಾಕಲಾಗುತ್ತಿರುವುದು ಮತ್ತಷ್ಟು ಭಯದ ವಾತಾವರಣ ಸೃಷ್ಟಿಸಿದೆ.
ಇನ್ನು, ಕೋವಿಡ್-19ಯಿಂದ ತಪ್ಪಿಸಿಕೊಳ್ಳಲು ಇಡೀ ವಿಶ್ವಕ್ಕೆ ವಿಶ್ವವೇ ಹರಸಾಹಸ ಪಡುತ್ತಿದೆ.  ಎದುರಿಗಿರುವವರೊಂದಿಗೆ ಮಾತನಾಡುವುದಕ್ಕೂ ಜನ ಹಿಂಜರಿಯುತ್ತಿದ್ದಾರೆ ಎನ್ನುವುದು ಕೊವೀಡ್-19 ತಂದಿಟ್ಟ ಭೀತಿ. ಭಾರತದಲ್ಲಿಯೂ ಈಗಾಗಲೇ ಹಲವು ಮಂದಿಗಳಲ್ಲಿ ವೈರಸ್ ಕಂಡುಬಂದಿದ್ದು ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ.  ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯುಎಚ್ಒ) ಕೋವಿಡ್ ವೈರಾಣು ತಡೆಗೆ ಈಗಾಗಲೇ ಎಚ್ಚರಿಕೆ, ಸಲಹೆ ನೀಡಿದೆ.


ವಿಶ್ವವೇ ಡೆಡ್ಲಿ ಕೋವಿಡ್ ವೈರಸ್‌ನಿಂದ ಪಾರಾಗಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಸಿಮ್‌ಗಳ ಮೊಬೈಲ್ ಕರೆಗಳಲ್ಲಿಯೂ ಕೂಡ ಸ್ವಯಂಚಾಲಿತ ಕಾಲರ್ ಟ್ಯೂನ್ಗಳ ಮೂಲಕ ಕೋವಿಡ್ ಹರಡದಂತೆ ಎಚ್ಚರಿಕೆ ಹೇಳಲಾಗುತ್ತಿದೆ. ನಾನಾ ಬಗೆಯ ಎಚ್ಚರಿಕಾ ಕ್ರಮಗಳನ್ನು ದೇಶದೆಲ್ಲೆಡೆ ಮಾಡಲಾಗುತ್ತಿದೆ. ಈ ನಡುವೆ, ಭಿತಿ ನಿವಾರಣೆಗೆ ಜಗತ್ತಿಗೆ ಭಾರತ ‘ಕರಾಂಜಲಿ’ಯ ಪಾಠ ಕಲಿಸಿಕೊಡುತ್ತಿರುವುದನ್ನು ಇಡೀ ಜಗತ್ತು ಸ್ವೀಕರಿಸಿಕೊಳ್ಳುತ್ತಿದೆ, ಒಪ್ಪಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತಹ್ಯಾನು ಕೋವಿಡ್-19 ದೂರ ಮಾಡುವುದಕ್ಕೆ ಭಾರತದ ಸಂಸ್ಕೃತಿ ನಮಸ್ಕಾರ ಮಾಡುವುದು ಒಳಿತು ಎಂದಿದ್ದರು. ಈಗ ದೇಶದ ಪ್ರಧಾನಿ ನರೇಂದ್ರ ಮೋದಿಯೂ ಕೂಡ ಕೋವಿಡ್-19 ಬಗ್ಗೆ ದೇಶದ ಜನತೆಗೆ ಎಚ್ಚರಿಕೆ ಹೇಳಿದ್ದಾರೆ.  ಸೋಂಕು ಹರಡದಂತೆ ಹ್ಯಾಂಡ್‌ಶೇಕ್ ಬದಲಾಗಿ ಕರ ಜೋಡಿಸಿ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವುದು ದೇಶದಾದ್ಯಂತ, ಜಗತ್ತಿನಾದ್ಯಂತ ಭೀತಿ ಪಡುತ್ತಿರುವ ಈ ಸಂದರ್ಭದಲ್ಲಿ ತುಂಬು ಭರವಸೆ ಮೂಡಿಸಿದೆ. ಈಗಾಗಲೇ ದೇಶದ ‘ಯೋಗ’ ವಿಶ್ವದ ಮೂಲೆ ಮೂಲೆಗಳಿಗೆ ತಲುಪಿದೆ. ಈಗ ‘ನಮಸ್ಕಾರ’ದ ಸರದಿ. ಜಗತ್ತಿನೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್-19 ಗೆ ಭಾರತದ ‘ನಮಸ್ಕಾರ’ ಜೀವ ಸಂಜೀವಿನಿಯಾಗುತ್ತಿದೆ ಎನ್ನುವುದು ಅಚ್ಚರಿಯೂ, ಹೆಮ್ಮೆಯೂ ಹೌದು. ಇದೆಲ್ಲದರ ನಡುವೆ ಕ್ಷಣ ಕ್ಷಣಕ್ಕೂ ಮತ್ತಷ್ಟು ಭೀತಿ ಹೆಚ್ಚಿಸುತ್ತಿರುವ ವೈರಸ್ಗೆ ವಿಶ್ವವೇ ತಲ್ಲಣಗೊಂಡಿದ್ದಂತೂ ಸತ್ಯ. ದಿನೇ ದಿನೇ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಕೊವಿಡ್-19ನಿಂದಾಗಿ ಇನ್ನೇನೆಲ್ಲಾ ಆಗಬೇಕೋ, ಮಾನವನ ಬದುಕಿಗೆ ಇನ್ನೆಷ್ಟು ಮಾರಕವಾಗಲಿಕ್ಕಿದೆಯೋ ಗೊತ್ತಿಲ್ಲ..!
-ಶ್ರೀರಾಜ್ ವಕ್ವಾಡಿ 

Sunday, March 8, 2020

ಅಕ್ಷಯ ಶಿಲ್ಪ..!



'ಅವಳು'
ಕಾವ್ಯದೊಲುಮೆಯ 
ಸಾಲುಗಳ ಭರ್ತಿ 
ಸಂತಸಗಳ ಭಾವ,
ಎದೆಯೂರಿನ ಬೆಳಕಿನ 
ಮೇರೆ ಮೀರಿದ
ಹೊನ್ನರೂಪ..!


ಅವಳೆಂದರೇ,
ಬರಿಯ ಬಸಿರಲ್ಲ..!
ಅವಳೆಂದರೇ,
ಬರಿಯ ಉಸಿರಲ್ಲ..!
ಅವಳೆಂದರೇ, 
ದಿವ್ಯಾನುಸಂಚಯ 
ಅವಳೆಂದರೇ, 
ಭವ್ಯಾನುಸಂದಾಯ..! 
ಅವಳೆಂದರೇ 
ಅಕ್ಷಯ ಶಿಲ್ಪ..!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)





Friday, March 6, 2020

ನಾಯಕನ ಪಾತ್ರಕ್ಕೂ ಸೈ, ಪ್ರತಿನಾಯಕನ ಪಾತ್ರಕ್ಕೂ ಜೈ 'ಯಕ್ಷ ತಾರಾ ಶಶಾಂಕ'


ಸರ್ವಾಂಗ ಸುಂದರ ಕಲೆಗೆ ಮತ್ತೊಂದು ಹೆಸರೇ ಯಕ್ಷಗಾನ. ಹುಟ್ಟಿನಿಂದಲೇ ಯಕ್ಷರಂಗದ ಸ್ಪರ್ಶ ಹೊಂದಿದ ಶಶಾಂಕ್ ಪಟೇಲ್,  ಯಕ್ಷಗಾನಕ್ಕೆ ಬಹು ಭರವಸೆಯ ಸ್ವತ್ತು ಎನ್ನುವುದರಲ್ಲಿ ಏನೂ ಅತಿಶಯೋಕ್ತಿಯಿಲ್ಲ. ಬಡಾಬಡಗು ತಿಟ್ಟಿನ ಶಾಸ್ತ್ರೀಯ ಹೆಜ್ಜೆಗಾರಿಕೆ ಮತ್ತು ಸುಂದರ ಅಭಿವ್ಯಕ್ತಿ ಹೊಂದಿರುವ  ಪಟೇಲರಿಗೆ ಕರ್ನಾಟಕ ಬಯಲಾಟ ಅಕಾಡೆಮಿ 'ಉದಯೋನ್ಮುಖ ಯಕ್ಷಗಾನ ಯುವ ಪ್ರತಿಭೆ' ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಒಳಗೊಂಡು 'ಯಕ್ಷ ತಾರಾ ಶಶಾಂಕ' ಎಂಬಿತ್ಯಾದಿ ಸನ್ಮಾನ,  ಗೌರವ ದೊರಕಿರುವುದು ಹೆಮ್ಮೆ. ಯಕ್ಷಗಾನದ ತಿಟ್ಟು ದ್ವಯಗಳಿಗೂ ಮೇರು ಕಲಾವಿದರನ್ನು ಕೊಟ್ಟ ಮಲೆನಾಡು, ಪಟೇಲರ ಹುಟ್ಟೂರಾದರೇ, ಕಾರ್ಯಕ್ಷೇತ್ರ ಉಡುಪಿ. ವೃತ್ತಿಪರ ಆಂಗ್ಲ ಭಾಷಾ ಉಪನ್ಯಾಸಕರಾಗಿ, ಪ್ರವೃತ್ತಿಪರ ಯಕ್ಷಗಾನ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಶಶಾಂಕ್ ಪಟೇಲರ ಕಿರು ಸಂದರ್ಶನ ನಿಮಗಾಗಿ...



ನಿಮ್ಮೊಂದಿಗೆ ಯಕ್ಷಗಾನ ಸೇರಿಕೊಂಡಿದ್ದು ಹೇಗೆ...? ಸ್ಫೂರ್ತಿ ..?
ಬಾಲ್ಯದಿಂದಲೂ ಮನೆಯ ವಾತಾವರಣದಿಂದ ಯಕ್ಷಗಾನ ಉಸಿರಂತೆ ಬೆರೆತಿತು. ನಮ್ಮ ಮನೆಯ 'ಸಾಕೇತ ಕಲಾವಿದರು' ಯಕ್ಷಗಾನ ತಂಡ ನನಗೆ ಸ್ಫೂರ್ತಿ.

ಹಲವು ಮೇಳಗಳ, ಮೇರು ಕಲಾವಿದರ ಸಂಸರ್ಗ ನಿಮಗಿದೆ ...ಅದರ ಅನುಭವ ಹೇಗಿದೆ...?
ಯಕ್ಷಗಾನ ಹೆಜ್ಜೆ ಕಲಿತು ನಾನು ನಮ್ಮ ಸಾಕೇತ ತಂಡದಿಂದ ಹೊರಗೆ ಪಾತ್ರ ವಹಿಸುವುದಕ್ಕೆ ಆರಂಭಿಸಿದ್ದು 2011ರಲ್ಲಿ. ಬೇರೆ ಬೇರೆ  ಮೇಳಗಳ ಅನೇಕ ಹಿರಿ, ಕಿರಿಯ ಕಲಾವಿದರ ಒಡನಾಟದಿಂದ ನಾನು ಕಲಿತದ್ದು ಅನೇಕ.ನನಗೆ ಮಾರ್ಗದರ್ಶನವಿತ್ತ, ಈಯುತ್ತಿರುವ ಎಷ್ಟೋ ಕಲಾವಿದರನ್ನು ಇಂದಿಗೂ, ಎಂದಿಗೂ ಸ್ಮರಿಸುತ್ತೇನೆ.

ನೀವು ಯಕ್ಷಗಾನದಲ್ಲಿ ಬಹುಶಃ ಸ್ತ್ರೀ ವೇಷವನ್ನು ಹೊರತಾಗಿ ಬಹುತೇಕ ಎಲ್ಲಾ ವೇಷಗಳಿಗೆ ಪಾತ್ರರಾದವರು. ಒಬ್ಬ ಕಲಾವಿದ ಎಲ್ಲಾ ರೀತಿಯ ಪಾತ್ರಗಳಿಗೆ ತೊಡಗಿಕೊಳ್ಳುವುದಕ್ಕೆ ಹೇಗೆ ಸಾಧ್ಯ..?
ನಿರ್ವಹಿಸದಿರುವ ಪಾತ್ರಗಳೇ ಹೆಚ್ಚಿದ್ದರೂ ದೇವರ ಕೃಪೆಯಿಂದ ಅನೇಕ ಪಾತ್ರಗಳನ್ನು ನಿರ್ವಹಿಸುವ ಭಾಗ್ಯ ನನ್ನದಾಗಿದೆ. ಪಾತ್ರದಿಂದ ಪಾತ್ರಕ್ಕೆ ಬಹಳ ವ್ಯತ್ಯಾಸ ಇರುತ್ತದೆ.ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ಒಬ್ಬ ಕಲಾವಿದನಿಗೆ ಸವಾಲಿನ ಕೆಲಸವೇ ಹೌದು. ಸುಧನ್ವಾರ್ಜುನದ ಅರ್ಜುನ, ಸುಧನ್ವ, ಶರಸೇತುವಿನ ಅರ್ಜುನ, ಹನುಮಂತ, ಕಾರ್ತವೀರ್ಯಾರ್ಜುನದ  ರಾವಣ, ಕಾರ್ತವೀರ್ಯ, ಕೃಷ್ಣಾರ್ಜುನದ ಅರ್ಜುನ, ಕೃಷ್ಣ, ಗದಾಯುದ್ಧದ ಭೀಮ, ಕೌರವ ಇತ್ಯಾದಿ. ಹೀಗೆ ಒಂದೇ ಪ್ರಸಂಖದ ನಾಯಕ, ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿ ಅದರ ಸವಾಲನ್ನು ಎದುರಿಸಿದ್ದೇನೆ.


ಯಕ್ಷಗಾನದಲ್ಲಿ ಶಾಸ್ತ್ರೀಯತೆಯ ಪ್ರಶ್ನೆ ನಿಮ್ಮನ್ನು ಹೇಗೆ ಕಾಡುತ್ತದೆ...?
ಪಾತ್ರ ಪೋಷಣೆಯಲ್ಲಿ, ಕುಣಿತದಲ್ಲಿ, ಅಭಿನಯದಲ್ಲಿ ಮಾತುಗಾರಿಕೆಯಲ್ಲಿ,ವೇಷಭೂಷಣದಲ್ಲಿ, ರಂಗಚಲನೆಯಲ್ಲಿ ಶಾಸ್ತ್ರೀಯತೆ ಬಹಳ ಮುಖ್ಯ. ರಂಗದಲ್ಲಿ ನನಗೆ ಸಾಧ್ಯವಾದಷ್ಟು ಪಾತ್ರದ ಚೌಕಟ್ಟಿನಲ್ಲೇ ವ್ಯವಹರಿಸುತ್ತೇನೆ. ಅದು ಎಲ್ಲೋ ಒಮ್ಮೊಮ್ಮೆ ತಪ್ಪಿದಾಗ ತಪ್ಪು ಎನಿಸುತ್ತದೆ.

ಹಿಮ್ಮೆಳದೊಂದಿಗೆ ಮುಮ್ಮೇಳಕ್ಕೆ ಸಾಮರಸ್ಯ ಎಷ್ಟು ಮುಖ್ಯ..?
ಹಿಮ್ಮೇಳ ಮುಮ್ಮೇಳಕ್ಕೆ ಸಾಮರಸ್ಯ ಇದ್ದರೆ ಮಾತ್ರ ಅದು ಚಂದ ಆಗುತ್ತದೆ. ಇಲ್ಲದಿದ್ದರೆ ಅಭಾಸ ಎನಿಸುತ್ತದೆ.

ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುವಾಗ ಸವಾಲುಗಳೇನು...?
ಮೇಳಗಳಲ್ಲಿ ನಿತ್ಯ ಅವರದೇ ಆದ ಸೆಟ್ಟಿಂಗ್ ಇರುತ್ತದೆ.(ಪೌರಾಣಿಕ ಆಖ್ಯಾನಗಳಿಗೂ). ಅದಕ್ಕೆ ಅತಿಥಿ ಎನಿಸಿಕೊಂಡು ಒಂದೊಂದು ದಿನ ಹೋಗಿ ವೇಷ ಮಾಡುವುದು ದೊಡ್ಡ ಸವಾಲು.

ಕಲಾವಿದ ನೋಡುಗರ ನಿರೀಕ್ಷೆಗಳಿಗೆ ಎದುರಾಗುವುದಕ್ಕೆ ಹೇಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು..?
ಯಾವುದೋ ಒಂದು ನಿರೀಕ್ಷೆ ಇರಿಸಿ ನಮ್ಮನ್ನು ವೇಷಕ್ಕೆ ಕರೆಸಿಕೊಂಡಾಗ, ಏಕಾಏಕಿ ಯಾವ ತಯಾರಿಯೂ ಇಲ್ಲದೇ ಹೋಗಿ ವೇಷ ಮಾಡುವುದು ಒಂದುರೀತಿಯ ಉದ್ಧಟತನವೇ. ಹಾಗಾಗಿ ಯಾವುದೇ ಪಾತ್ರ ನಿರ್ವಹಿಸುವಾಗ ಪೂರ್ವತಯಾರಿ ಅತಿ ಮುಖ್ಯ.

 ಹಲವಾರು ಸಂಘ, ಸಂಸ್ಥೆಗಳು ನಿಮ್ಮನ್ನು ಗುರುತಿಸಿ ಗೌರವಿಸಿದೆ ಆ ಬಗ್ಗೆ ಹೇಳುವುದಾದರೆ...
ಗೌರವ ಎನ್ನುವುದಕ್ಕಿಂತ,ಕಲಾವಿದನಾಗಿ ಗುರುರುತಿಸಲ್ಪಟ್ಟಿದ್ದೇನೆ,ಅದರಿಂದ ನನ್ನ ಗೌರವ ಇಮ್ಮಡಿಯಾಗಿದೆ. ಹಾಗಂತ ಏನೂ ಕೃಷಿ ಇಲ್ಲದೇ ಯಕ್ಷಗಾನಕ್ಕೆ ಬಂದವನಲ್ಲ ನಾನು ಎನ್ನುವ ವಿಶ್ವಾಸ ನನ್ನಲ್ಲಿದೆ.

ವೃತ್ತಿಯಲ್ಲಿ ನೀವು ಆಂಗ್ಲ ಭಾಷೆಯ ಉಪನ್ಯಾಸಕರು. ಪ್ರವೃತ್ತಿಯಲ್ಲಿ ಕಲಾವಿದರು. ವೃತ್ತಿ, ಪ್ರವೃತ್ತಿಗಳ ಸವಾಲುಗಳನ್ನು ಹೇಗೆ ನಿಭಾಯಿಸುತ್ತೀರಿ..?
ಅದು ಒಂದು ರೀತಿ ನನ್ನ ರುಟೀನ್ ಆಗಿಬಿಟ್ಟಿದೆ.ಅದರಿಂದ ತೊಂದರೆ ಮಾಡಿಕೊಳ್ಳದಿರುವುದೇ ನನ್ನ ಪ್ರಯತ್ನ.ವೃತ್ತಿ ಪ್ರವೃತ್ತಿ ಎರಡೂ ಕೂಡ ನನ್ನ ಜೀವನದಲ್ಲಿ ಪ್ರಮುಖವಾದದ್ದು. ಹಾಗಾಗಿ ಎರಡನ್ನೂ ಬಹಳ ಪ್ರೀತಿಸುತ್ತೇನೆ. ಮತ್ತೆ, ವೃತ್ತಿಯಿಂದ ಪ್ರವೃತ್ತಿಗೆ, ಪ್ರವೃತ್ತಿಯಿಂದ ವೃತ್ತಿಗೆ ಒಂದಕ್ಕೊಂದು ಬಹಳ ಸಹಕಾರಿ ನನ್ನ ಪಾಲಿಗೆ.

ಒಟ್ಟಾರೆಯಾಗಿ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯ..?
ಇಂದು ಮನೆಮನೆಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ. ಇದು ಯಕ್ಷಗಾನದ ದೃಷ್ಟಿಯಿಂದ ಸಂತೋಷದ ಬೆಳವಣಿಗೆ.ಆದರೆ ಪ್ರತಿಯೊಬ್ಬ ಕಲಾವಿದನಾಗಲು ಬಯಸುವವ ಅದರ ಮೂಲಭೂತ ಕಲಿಕೆಗಳನ್ನ(basic essence) ಇಟ್ಟುಕೊಂಡು ಅಭ್ಯಸಿಸಿದರೆ ಅದು ಯಕ್ಷಗಾನಕ್ಕೂ, ಸಮಾಜಕ್ಕೂ ಹಾಗೂ ಮುಂದಿನ ಪೀಳಿಗೆಯವರಿಗೂ ಆರೋಗ್ಯಕರವಾಗಿರುತ್ತದೆ. ಹಾಗೇ ಯಕ್ಷಗಾನ ಕಲೆ ದೇಶವ್ಯಾಪಿಯಾಗಬೇಕು ಎಂಬುದು ನನ್ನ ಆಶಯ.
- ಶ್ರೀರಾಜ್ ವಕ್ವಾಡಿ

    

Thursday, March 5, 2020

‘ನೇಣು’ ಇನ್ನೂ ತಯಾರಾಗಿಲ್ಲ..!


ಗಲ್ಲು ಶಿಕ್ಷೆ ಜಾರಿಗೊಳಿಸಲು ಇಷ್ಟೊಂದು ವಿಳಂಬ ಮಾಡುತ್ತಿರುವುದಾದರೂ ಯಾಕೆ..? ರೇಪಿಸ್ಟ್ ಗಳ ಪರವಾಗಿಯೇ ಕೋರ್ಟ್ ನಿಲ್ಲುತ್ತಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲೂ ಹುಟ್ಟುತ್ತಿವೆ ಅಂತಾದರೇ, ಅದಕ್ಕೆ ಆಶ್ಚರ್ಯವೇನಿಲ್ಲ..!. ೨೦೧೨ರ ಡಿಸೆಂಬರ್ ೨೬ರಂದು ನಡೆದ ಅಮಾನುಷ ‘ನಿರ್ಭಯಾ’ ಪ್ರಕರಣವನ್ನು ಮತ್ತೆ ವಿವರಿಸುವ ಅಗತ್ಯವಿಲ್ಲ. ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದ ಘಟನೆಯದು. ಘಟನೆ ನಡೆದು ಬರೋಬ್ಬರಿ ೮ ವರ್ಷಗಳು ಕಳೆದು ಹೋದರೂ ತಪ್ಪಿತಸ್ಥರಿಗೆ ಇನ್ನೂ ಗಲ್ಲು ಶಿಕ್ಷೆ ನೀಡುವುದಕ್ಕೆ ಕೋರ್ಟ್ ಹಿಂದೇಟು ಹಾಕುವುದರ ಮೂಲಕ ಕ್ರಿಮಿನಲ್‌ಗಳ ಪರವಾಗಿ ನಿಲ್ಲುತ್ತಿದೆ ಎಂಬಂತೆ ಕಾಣುತ್ತಿದೆ. ದೆಹಲಿಯ ನಿರ್ಭಯಾ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಕೀಚಕರ ಮರಣ ದಂಡನೆ ಮೂರನೇ ಭಾರಿ ಮುಂದಕ್ಕೆ ದೂಡಲಾಗಿದೆ. ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ ೬ ಗಂಟೆಗೆ ನೇಣಿಗೆ ಕೊರಳೊಡ್ಡಬೇಕಿದ್ದ ನಾಲ್ವರ ಪೈಕಿಯಲ್ಲೊಬ್ಬ ಪವನ್ ಗುಪ್ತ, ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಸೋಮವಾರ ವಜಾ ಗೊಳಿಸಿತು, ಇದರ ಹಿಂದಿಗೆ ಆತ ರಾಷ್ಟ್ರಪತಿಗೆ ಕ್ಷಮದಾನ ಪತ್ರ ಸಲ್ಲಿಸಿದ ಕಾರಣವಾಗಿ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಮುಂದಿನ ಆದೇಶದವರೆಗೆ ಮತ್ತೆ ಮುಂದೂಡಿದೆ.
ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಇಷ್ಟೊಂದು ಹಿಂದಡಿಯಿಡುತ್ತಿರುವುದು ಕಾನೂನಿನ ಅದ್ಯಾವ ಸಾಫ್ಟ್ ಕಾರ್ನರ್  ಧೋರಣೆಯೋ ಗೊತ್ತಿಲ್ಲ. ನಾಯಿ, ನರಿಗಳಿಗೆ ಹಾಕಬೇಕಾದ ಕೀಚಕರ ಅಂಗಾಗಳನ್ನು.. ಅಲ್ಲೊಬ್ಬ, ಮೈಕಲ್ ಎಫ್. ಸಲ್ಡಾನ್ಹಾ ಎನ್ನುವ ನಿವೃತ್ತ ನ್ಯಾಯಮೂರ್ತಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ‘ಗಲ್ಲು ಶಿಕ್ಷೆಯಾದರೇ’ ಅವರ ದೇಹಗಳ ಅಂಗಾಂಗವನ್ನು ದಾನ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತಾನೆ.. ಎಂತಾದರೆ ಅಪಹಾಸ್ಯ ಅಲ್ಲದೇ ಮತ್ತೇನು..?
ಕಳೆದ ನವೆಂಬರ್ ೨೭ರಂದು ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಅತ್ಯಾಚಾರಕ್ಕೊಳಗಾದ ಯುವತಿಯ ಮೃತದೇಹ ಪತ್ತೆಯಾದ ಸ್ಥಳಕ್ಕೆ ತನಿಖೆಗೆ ಕೊಂಡೊಯ್ದಾಗ, ನಾಲ್ವರೂ ಕೂಡ ಪೋಲಿಸರ ವಿರುದ್ಧ ದಾಳಿ ನಡೆಸಿ, ಪರಾರಿಯಾಗಲು ಮುಂದಾದರು ಎಂಬ ಕಾರಣಕ್ಕೆ ವಿಶ್ವನಾಥ್ ಸಜ್ಜನರ್ ಮತ್ತವರ ಪೋಲಿಸ್ ತಂಡ ಎನ್‌ಕೌಂಟರ್ ನಡೆಸಿದ್ದನ್ನು ಇಡೀ ದೇಶಕ್ಕೆ ದೇಶವೇ ಹರ್ಷ ವ್ಯಕ್ತಪಡಿಸಿತು. ಅದಾದ ಬಳಿಕ, ಎಷ್ಟೋ ಸೋ ಕಾಲ್ಡ್ ಚಿಂತಕರು ಬೊಬ್ಬೆ ಹಾಕಿ ವಿರೋಧಿಸಿದರು. ಪರ, ವಿರೋಧ ಚರ್ಚೆಗಳಾದವು. ಮತ್ತೆ ನಿರ್ಭಯಾ ಪ್ರಕರಣ ಇದರೊಂದಿಗೆ ತೂಗು ಹಾಕಿಕೊಂಡಿತು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯನ್ನು ಕೊನೆಗೂ ಘೋಷಿಸಲಾಯ್ತು, ಕೋರ್ಟ್ ಗಲ್ಲಿಗೆ ದಿನಾಂಕ ನಿಗಧಿ ಮಾಡಿತಾದರೂ, ಮುಂದೂಡುವಿಕೆಯಲ್ಲೇ ಕಾಲ ಕಳೆಯಿತು. ಹೈದರಾಬಾದ್‌ನ ದಿಶಾ(ಹೆಸರು ಬದಲಾಯಿಸಲಾಗಿದೆ) ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿದಾಗ ತಪ್ಪು ಎಂದು ಬೊಬ್ಬೆಹಾಕಿದವರು, ಇಂದು ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನಿಗಧಿಸಿದ ಗಲ್ಲು ಶಿಕ್ಷೆಯನ್ನು ಪದೇ ಪದೇ ಮುಂದೂಡುತ್ತಿರುವಾಗ ಎಲ್ಲಿ ಕಾಣೆಯಾಗಿದ್ದಾರೆ..? ಅತ್ಯಂತ ಅಮಾನವೀಯವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲಿಗೇರಿಸಲು ಇಷ್ಟೊಂದು ವಿಳಂಬವೇಕೆ..? ನೇಣಿಗೆ ಹಗ್ಗ ತಯಾರಿಸುತ್ತಿದ್ದಾರಾ..? ಆಕ್ರೋಶಭರಿತ ಪ್ರಶ್ನೆಗಳು ಮುಗಿದ ಮೇಲೆ ಉಳಿದ ಪ್ರಶ್ನೆ... ಗಲ್ಲು ಶಿಕ್ಷೆ ವಿಧಿಸಿದ ಮೇಲೆ ಅಪರಾಧಿಗಳಿಂದ ಕ್ಷಮಾದಾನ ಪತ್ರ ಸ್ವೀಕರಿಸುವುದು ಯಾವ ಸೀಮೆಯ ದೊಣ್ಣೆ ನಾಯಕನ ಕಾನೂನು..? 
-ಶ್ರೀರಾಜ್ ವಕ್ವಾಡಿ

Wednesday, March 4, 2020

‘ಸಿಎಎ’ ಆರದ ಬೆಂಕಿ..!



ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರುದ್ಧ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಆರಂಭದಿಂದಲೇ ಪೌರತ್ವ ಮಸೂದೆಯ ಕಾಯ್ದೆ ಜಾರಿ ವಿರೋಧಿಸಿ ರಾಷ್ಟ್ರಾದ್ಯಂತ ಕಿಚ್ಚು ಜೋರಾಗಿಯೇ ಇತ್ತು. ಸಾವು ನೋವಿಗೂ ಜನ ಹಿಂದಡಿಯಿಡಲಿಲ್ಲ. ರಾಷ್ಟ್ರದೆಲ್ಲೆಡೆ ಪರಿಸ್ಥಿತಿ ತೀರಾ ಹದಗೆಟ್ಟಿತ್ತು, ನಿಷೆದಾಜ್ಞೆಯನ್ನೂ ಉಲ್ಲಂಘಿಸಿಯೂ ದೇಶದೆಲ್ಲೆಡೆ ಹೋರಾಟಗಾರರು ಪ್ರತಿಭಟಿಸಿದರು. ರಾಜ್ಯದಲ್ಲಂತೂ ನಿಷೇಧಾಜ್ಞೆಯನ್ನು ಹೈಕೋರ್ಟ್ ಕಾನೂನು ಬಾಹಿರ ಎಂದು ಹೇಳುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಿತು ಎಂದರೆ ತಪ್ಪಿಲ್ಲ.
ರಾಷ್ಟ್ರದ ರಾಜಧಾನಿ ದೆಹಲಿ, ಪೌರತ್ವ ಮಸೂದೆ ಕಾಯ್ದೆಯ ಬೆಂಕಿಯಲ್ಲಿಯೇ ಇಂದಿಗೂ ಉರಿಯುತ್ತಿದೆ. ಜೆಎನ್‌ಯು, ಜಾಮಿಯಾ, ಶಾಹಿನ್ ಬಾಗ್‌ಗಳಲ್ಲಿ ನಡೆದ ಪ್ರತಿಭಟನೆ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿ, ಮಹತ್ತರ ಹೋರಾಟಕ್ಕೆ ಪ್ರೈಮ್ ಎಕ್ಸಾಂಪಲ್ ಆಗಿದ್ದು ಸುಳ್ಳಲ್ಲ. ಸರ್ಕಾರ ಧರ್ಮವನ್ನು ಈ ಮಸೂದೆಗೆ ತೂಗುಹಾಕಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಹಾಗಾಗಿಯೇ, ದೇಶದೆಲ್ಲೆಡೆ ಧರ್ಮ, ಜಾತಿಗಳನ್ನು ಲೆಕ್ಕಿಸದೆ ಸಾರ್ವಜನಿಕ ಸ್ವಾತಂತ್ರ್ಯಕ್ಕಾಗಿ ಒಂದಾಗಿ ಹೋರಾಟಕ್ಕಿಳಿದದ್ದು ಬಲು ಅಚ್ಚರಿಯೇ ಸರಿ. ರಾಮ್‌ಭಕ್ತ ಗೋಪಾಲ್, ಅಮೂಲ್ಯ ಲಿಯೋನಾ, ಆರ್ದ್ರಾ ಒಳಗೊಂಡು ಮೊನ್ನೆ ಮೊನ್ನೆಯಷ್ಟೇ ದೆಹಲಿಯ ಜಾಫ್ರಾಬಾದ್‌ನ ಹಾಗೂ ಮೌಜ್‌ಪುರಗಳಲ್ಲಿ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ನಡುವೆ ದೇಶಿ ನಿರ್ಮಿತ ಪಿಸ್ತೂಲಿನಿಂದ ಗಾಳಿಯಲ್ಲಿ ಎಂಟು ಗುಂಡು ಹಾರಿಸಿ, ಪೋಲಿಸ್ ಪೇದೆಗೆ ಪಿಸ್ತೂಲ್ ತೋರಿಸಿ ಹೆದರಿಸಿದ್ದ ಸಿಎಎ ಬೆಂಬಲಿಗ ಶಾರೂಕ್ ಪ್ರತಿಭಟನೆಯ ತಿರುವನ್ನೇ ಬದಲಾಯಿಸಿ ದೇಶದುದ್ದಕ್ಕೂ ಚರ್ಚೆಗೆ ಕಾರಣರಾದರು.
ದೆಹಲಿಯಲ್ಲಿಯಂತೂ ಈಗ ಹೋರಾಟ ಸಂಪೂರ್ಣವಾಗಿ ಹಿಂಸಾಚಾರಕ್ಕೆ ತಿರುಗಿಬಿಟ್ಟಿತು. ಅದೆಷ್ಟೋ ಮಂದಿ ಗಾಯಾಳುಗಳಾದರು, ಪೋಲಿಸ್ ಪೇದೆಯೋರ್ವರನ್ನು ಸೇರಿ ಹಲವರು ಸಾವು, ನೋವುಗಳನನ್ನು ಕಂಡರು. ಅದೆಷ್ಟೋ ವಾಹನಗಳು, ಮನೆಗಳು ಬೆಂಕಿಗಾಹುತಿಯಾದವು.
ಬಹಳ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ಯಾರು ಸಿಎಎ ಬೆಂಬಲಿಸಿಕೊಂಡು ಹೋರಾಟಕ್ಕೆ ಇಳಿದಿದ್ದರೋ, ಅವರೆಲ್ಲರ ಕೈಯಲ್ಲಿಯೂ ಮಾರಕಾಸ್ತ್ರಗಳಿದ್ದದ್ದು. ಮಾತ್ರವಲ್ಲದೇ, ಬರ್ಬರ ಹತ್ಯೆ ಕೂಡ ಮಾಡಿದ್ದೂ ಸಾಕ್ಷಿಗಳಿವೆ. ಸಾಮಾಜಿಕ ವಲಯದಲ್ಲಿ ಇದು ವ್ಯವಸ್ಥಿತ ಸಂಚು ಎಂದು ಕೂಡ ಕೇಳಿಬಂದದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು.
ದೇಶದಲ್ಲಿ ಎಲ್ಲೆಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಈವರೆಗೆ ನಡೆದಿದೆಯೋ, ಅಲ್ಲೆಲ್ಲಾ ಕಡೆಗಳಲ್ಲಿಯೂ ಧರ್ಮ ದಳ್ಳುರಿ, ಕೋಮು ಗಲಭೆಯನ್ನಾಗಿ ದೇಶದ ಎಲ್ಲಾ ದೃಶ್ಯ ಮಾದ್ಯಮಗಳು, ಪತ್ರಕಾ ಮಾದ್ಯಮಗಳು ಪ್ರತಿಬಿಂಬಿಸಿದ್ದು ದುರಂತವೇ ಸರಿ.
ಒಟ್ಟಿನಲ್ಲಿ, ಇನ್ನಾದರೂ ಸಾರ್ವಜನಿಕರ ಹಿತಾಸಕ್ತಿ ಗಮನಿಸಿ, ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಸರ್ವಸ್ವತಂತ್ರ ಎಂದುಕೊಳ್ಳದೇ, ಸಂವಿಧಾನವನ್ನು ಮೀರದೇ ದೇಶಕ್ಕಾಗಿ, ದೇಶದ ಪ್ರಗತಿಗಾಗಿ ಸರ್ವರೂ ಮುಂದಾಗಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ, ದೇಶದಲ್ಲಿ ಸಿಎಎ ಕಾರಣದಿಂದಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದರೂ ಆಶ್ಚರ್ಯವೇನಿಲ್ಲ.   
-ಶ್ರೀರಾಜ್ ವಕ್ವಾಡಿ