ವಯೋಸಹಜವಾಗಿ ಕಥಾನಾಯಕಿ ‘ದಿಯಾ’ಗೂ ಇಲ್ಲಿ ಪ್ರೀತಿಯಾಗುತ್ತದೆ. ಕಾಲೇಜು ದಿನದ ಸಹಜ ಪ್ರೀತಿಯದು. ಆಕೆ ಕಾಲೇಜಿನಲ್ಲಿ ಒಬ್ಬ ಹುಡುಗನ್ನು ನೋಡುತ್ತಾಳೆ, ಅವನ ಟ್ಯಾಲೆಂಟ್ ಆಕೆಗೆ ಹತ್ತಿರವಾಗ್ತದೆ, ಅವನ ಮೇಲೆ ಗೊತ್ತಿಲ್ಲದ ಪ್ರೇಮಾಂಕುರ, ಇವೆಲ್ಲವೂ ಸಹಜ ಬಿಡಿ. ವಿಶೇಷ ಮತ್ತು ಅಚ್ಚರಿ ಚಿತ್ರದುದ್ದಕ್ಕೂ ಕಾಣುವುದು ಏನೆಂದರೇ, ಇನ್ನೇನು ಎಲ್ಲವೂ ಸಿಕ್ಕಿಯೇ ಬಿಡ್ತು, ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲೇ ತಿರುವು ಪಡೆಯುವ ರೀತಿ ಮತ್ತು ಆ ತಿರುವು ಚಿತ್ರದಲ್ಲಿ ಗೆದ್ದ ಪರಿ. ಬಯಸಿದ ಪ್ರೀತಿ ಕಳೆದುಹೋಗುತ್ತದೆ, ನೋವಿನಲ್ಲಿ ಬೆಂದಿದ್ದ ದಿಯಾಗೆ ಮತ್ತೊಬ್ಬನ ಸ್ನೇಹವಾಗುತ್ತದೆ. ಆ ಸ್ನೇಹ ಅರಿವಿಲ್ಲದೇ ಪ್ರೀತಿಯಾಗಿ ಬದಲಾಗುತ್ತದೆ. ಅಲ್ಲೊಂದು ಆತ್ಮೀಯತೆ, ಸಂಬಂಧ, ವಾತ್ಸಲ್ಯ ಹುಟ್ಟುತ್ತದೆ. ಮತ್ತೆ ತಿರುವು. ಆಮೇಲೆ ಏನೆಂಬುವುದೇ ‘ದಿಯಾ’ದ ಸಸ್ಪೆನ್ಸ್.
ಆ ಪ್ರತಿ ತಿರುವು ದಿಯಾಳಿಗೆ ನಿಡುಸುಯ್ಯುವಿಕೆ. ಆ ತಿರುವನ್ನು ದಾಟುವಲ್ಲಿ ದಿಯಾ ಪಡುವ ಸಂಕಟ, ನೋವು, ಪರದಾಟ, ತೊಳಲಾಟ, ಸಣ್ಣ ಧೈರ್ಯದೊಂದಿಗಿನ ಗೊಂದಲ, ಎಲ್ಲವೂ ದಿಯಾಳನ್ನು ಬೆಚ್ಚಿಬೀಳಿಸುತ್ತದೆ.
ಚಿತ್ರದಲ್ಲಿ ನಿರ್ದೇಶಕ ಅಶೋಕ್, ಅಲ್ಲಲ್ಲಿ ಇಟ್ಟಿರುವ ಅನಿರೀಕ್ಷಿತ ತಿರುವುಗಳೇ ಪ್ರೇಕ್ಷಕನನ್ನು ಕೊನೆಯೊರಗೂ ಹಿಡಿದಿಟ್ಟಕೊಳ್ಳುವಂತೆ ಮಾಡುತ್ತವೆ. ಈ ನಡುವೆ ಎರಡೆರಡು ಪ್ರೇಮ ಕಥೆ, ಅಲ್ಲಲ್ಲಿ ಕಾಣಸಿಗುವ ಭಾವನಾತ್ಮಕ ದೃಶ್ಯಗಳು ಹಾಗೂ ಅಮ್ಮ-ಮಗನ ಸೆಂಟಿಮೆಂಟ್ ಅಲ್ಲಲ್ಲಿ ಚಿತ್ರ ನಿಧಾನವಾಗುತ್ತಿದೆ ಎನ್ನುವುದನ್ನು ಪ್ರೇಕ್ಷಕನ ತಲೆಯಿಂದ ಓಡಿಸುವಂತೆ ಮಾಡುತ್ತದೆ. ವಾವ್ಹ್..! ಎನ್ನಿಸುವ ಅಜನೀಶ್ ಅವರ ಹಿನ್ನೆಲೆ ಸಂಗೀತ, ವಿಶಾಲ್ ಮತ್ತು ಸೌರಭ್‌ರ ಸಿನೆಮಾಟೋಗ್ರಾಫಿಗೆ ಮೆಚ್ಚಲೇಬೇಕು.
ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿರುವ ಬೆಚ್ಚಿ ಬೀಳಿಸುವ ದೃಶ್ಯ ಕಂಬನಿ ಜಾರುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕೊನೆಗೆ, ಅಚ್ಚರಿ ಮತ್ತು ಪವಾಡಗಳಿಂದಲೇ ಜೀವನ ಎಂದು ಹೇಳಲ್ಹೊರಟ ಕಥೆ, ಪ್ರೇಕ್ಷಕರ ಮನ ಕದ್ದಿದ್ದಂತೂ ಸತ್ಯ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಖುಷಿ(ದಿಯಾ), ಪ್ರಥ್ವಿ ಅಂಬರ್(ಆದಿ), ದೀಕ್ಷಿತ್ ಶೆಟ್ಟಿ(ರೋಹಿತ್) ಪಾತ್ರಗಳಿಗೆ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್(ಅಮ್ಮ) ಹಾಗೂ ಅರವಿಂದ್ ರಾವ್ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ.
-ಶ್ರೀರಾಜ್ ವಕ್ವಾಡಿ



No comments:
Post a Comment