Thursday, December 7, 2023

ʼಇಂಡಿಯಾʼ ಮೈತ್ರಿಯ ಕಣ್ಣು ತೆರೆಸುವಂತೆ ಮಾಡಿದ ಹಿಂದಿ ಭಾಷಿಕರ ರಾಜ್ಯಗಳು !

(ಸಾಂಧರ್ಭಿಕ ಚಿತ್ರ)

ಪ್ರಚಾರ ಆರಂಭಕ್ಕೂ ಮುನ್ನವೇ ಗೆಲುವಿನ ನಗೆ ಬೀರಿದ ರಾಜ್ಯದಲ್ಲೂ ಸೋತ ಕಾಂಗ್ರೆಸ್‌

ಲೋಕಸಭಾ ಚುನಾವಣೆಗೆ ಸೆಮಿಫೈನಲ್‌ ವಿಧಾನಸಭಾ ಚುನಾವಣೆ ಎಂದೇ ಹೇಳಲಾಗಿದ್ದ ಪಂಚರಾಜ್ಯ ಚುನಾವಣೆಗಳಲ್ಲಿ ಮೂರು ಹಿಂದಿ  ಭಾಷಿಕರ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಚುನಾವಣೆಯ ಫಲಿತಾಂಶಗಳು ಎಲ್ಲಾ ರಾಜಕೀಯ ಚಿಂತಕರು, ವಿಶ್ಲೇಷಕರು ಮತ್ತು ಪತ್ರಕರ್ತರು ತಮ್ಮ ಚುನಾವಣೆಯ ಬಗ್ಗೆ ಅವರ ತಿಳುವಳಿಕೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಎರಡು ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ರಾಜಕೀಯ ವಿಶ್ಲೇಷಣೆಗಳಾಗಿದ್ದವು, ಆದರೇ ಚುನಾವಣೆಯ ಫಲಿತಾಂಶ ಎಲ್ಲವನ್ನು ಅದಲು ಬದಲಾಗಿಸಿದೆ. 

ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಮತ್ತು ರಾಜಸ್ಥಾನದಲ್ಲಿ ನೆಕ್‌ ಟು ನೆಕ್‌ ಚುನಾವಣಾ ಸಮರವಿರಲಿದೆ ಎಂದು ಭವಿಷ್ಯ ಹೇಳಲಾಗಿತ್ತು. ವಾಸ್ತವವಾಗಿ, ಒಂಬತ್ತು ಎಕ್ಸಿಟ್ ಪೋಲ್‌ಗಳಲ್ಲಿ ಐದು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಖಚಿತವಾದ ಗೆಲುವು ಮತ್ತು ನಾಲ್ಕು ಕಾಂಗ್ರೆಸ್‌ಗೆ ಅನುಕೂಲಕರ ಗೆಲುವು ಸಿಗಲಿದೆ ಎಂದು ಹೇಳಲಾಗಿತ್ತು. ಛತ್ತೀಸ್‌ಗಢಕ್ಕೆ ಸಂಬಂಧಿಸಿದಂತೆ, ಬಹುತೇಕ ಎಲ್ಲಾ ಸಮೀಕ್ಷೆಗಳು ಭೂಪೇಶ್ ಬಘೇಲ್ ನೇತೃತ್ವದಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳಿದ್ದವು. ಕಾಂಗ್ರೆಸ್‌ ಸೋಲುತ್ತದೆ ಎಂದು ಯಾವ ಸಮೀಕ್ಷೆಯೂ ಊಹಿಸಿರಲಿಲ್ಲ. ಛತ್ತೀಸ್‌ಗಢದಲ್ಲಿ ಮ್ಯಾಜಿಕ್‌ ನಂಬರ್‌ 46 ಇದ್ದಿದ್ದಾದರೂ ಕಾಂಗ್ರೆಸ್‌ಗೆ ಹತ್ತಿರಕ್ಕೂ ಸುಳಿಯುವುದಕ್ಕೆ ಆಗಿಲ್ಲ 35 ಕ್ಷೇತ್ರಗಳಲ್ಲಿ ಗೆಲ್ಲುವುದರ ಮೂಲಕ ತೃಪ್ತಿ ಪಟ್ಟುಕೊಂಡಿತು.  ಇನ್ನು, ಬಹು ನಿರೀಕ್ಷಿತ ರಾಜಸ್ಥಾನ, ಕೆಲವು ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸಲಿದೆ ಎಂದರೆ, ಇನ್ನು ಕೆಲವು ಸಮೀಕ್ಷೆಗಳು ಕಾಂಗ್ರೆಸ್ನಲ್ಲಿ ಆಂತರಿಕ ವೈಷಮ್ಯವಿದ್ದರೂ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸುಲಭ ಗೆಲುವು ಸಾಧಿಸುತ್ತದೆ ಎಂಬ ಚರ್ಚೆ ಸುಳ್ಳಾಯಿತು ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಕಾಂಗ್ರೆಸ್‌ನನ್ನು ಮಣಿಸಲಿದೆ ಎಂಬ  ಅಭಿಪ್ರಾಯ ಸತ್ಯವಾಯಿತು.

ಮಧ್ಯಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯವು ರಾಜ್ಯದಲ್ಲಿ ಪಕ್ಷಕ್ಕೆ 230 ರಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರಗಳು ಗೆಲ್ಲಲಿದೆಯೆಂಬ ಭವಿಷ್ಯ ನುಡಿದ ಮೂರು ಎಕ್ಸಿಟ್ ಪೋಲ್‌ಗಳ ಹೊರತುಪಡಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಕರ್ನಾಟಕದ ವಿಧಾನಸಭಾ ಚುನಾವಣೆಯಂತೆಯೇ ನಡೆಯುತ್ತದೆ. ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳು, ಮದ್ಯಪ್ರದೇಶದಲ್ಲಿ ಆರು ಕ್ಷೇತ್ರಗಳು ಹೆಚ್ಚು ಅಷ್ಟೇ. ಮ್ಯಾಜಿಕ್‌ ನಂಬರ್‌ ಕೂಡ ಹಾಗೆ, ರಾಜ್ಯಕ್ಕಿಂತ ಅಲ್ಲಿ ಮೂರು ಹೆಚ್ಚು ಅಷ್ಟೇ. ಕರ್ನಾಟಕ ಚುನಾವಣೆಯಲ್ಲಿ ಯಾವ ಸ್ಟ್ರ್ಯಾಟೆಜಿ ಪಾಲಿಸಿ ಸೋತಿತ್ತೋ, ಅದನ್ನೇ ಮಧ್ಯಪ್ರದೇಶದಲ್ಲಿ ಪ್ರಯೋಗಿಸಿ ಬಿಜೆಪಿ ಗೆದ್ದಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ತನ್ನ ಫ್ರಂಟ್‌ಲೈನ್‌ ಲೀಡರ್‌ ಎಂದು ಬಿಂಬಿಸುವುದರಲ್ಲಿ ಬಿಜೆಪಿ ಹೈಕಮಾಂಡ್‌ ದೂರ ಸರಿದಿತ್ತಾದರೂ, ಕೊನೆಗೆ ಅವರನ್ನೇ ಮುಂದೆ ಇಟ್ಟಿತು. ಬಹಳ ಪ್ರಮುಖವಾಗಿ, ಪ್ರಚಾರ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಗೆಲುವಿನ ನಗೆ ಬೀರಿದ ರಾಜ್ಯವಿದು. ಬಿಜೆಪಿಯು ಸೋಲುವಂತಿದೆ ಮತ್ತು ರಾಜ್ಯದಲ್ಲಿ ಅವರ ಏಕೈಕ ನಾಯಕ  ಶಿವರಾಜ್ ಸಿಂಗ್ ಚೌಹಾಣ್ ಅವರು ಸ್ಪರ್ಧಿಸುತ್ತಾರೆಯೇ ಎಂದು ಖಚಿತವಾಗಿರಲಿಲ್ಲ. ಅವರನ್ನು ಕೇಂದ್ರಕ್ಕೆ ತೆಗೆದುಕೊಳ್ಳಬಹುದು ಮತ್ತು ಮಧ್ಯಪ್ರದೇಶದಲ್ಲಿ ಹೊಸ ನಾಯಕತ್ವ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಊಹಾಪೋಹವಿತ್ತು. ಆದರೇ, ಅದು ಯಾವುದೂ ಆಗಲಿಲ್ಲ. ಮಧ್ಯಪ್ರದೇಶದಲ್ಲಿ ಎಲ್ಲಾ ರಾಜಕೀಯ ಊಹಾಪೂಹಗಳನ್ನು ಮೀರಿ ಫಲಿತಾಂಶ ಬಂತು. ಮಧ್ಯಪ್ರದೇಶದಲ್ಲಿನ ಬಿಜೆಪಿಯ ಐತಿಹಾಸಿಕ ಗೆಲುವಿನ ಶ್ರೇಯಸ್ಸು ಈಗ ಅದೇ ದುರ್ಬಲ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಲ್ಲುತ್ತದೆ.

ಗುಜರಾತ್‌ನಲ್ಲಿ ಭರ್ಜರಿ ಗೆಲುವಿನ ನಂತರ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧದ ಅಲೆ ಇದ್ದಿದ್ದರೂ ಬಿಜೆಪಿ  ಐತಿಹಾಸಿಕ ಗೆಲುವು ಸಾಧಿಸಿತು. ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಆಮ್ ಆದ್ಮಿ ಪಕ್ಷದ(ಎಎಪಿ) ಸ್ಪರ್ಧೆಯನ್ನು ದೂಷಿಸಬಹುದು, ಅಲ್ಲಿ ಆಪ್ ಬಿಜೆಪಿ ವಿರೋಧಿ ಮತಗಳನ್ನು ನಿರ್ದಯವಾಗಿ ವಿಭಜಿಸಿ ತನ್ನಡೆಗೆ ಸೆಳೆದುಕೊಂಡಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಂತಹ ಯಾವುದೇ ಕಾರಣವಿರಲಿಲ್ಲ. 18 ವರ್ಷಗಳ ಅಧಿಕಾರದ ನಂತರವೂ ಬಿಜೆಪಿ ಎರಡು ಅಥವಾ ಮೂರು ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಸಾಧಿಸಲು ಸಾಧ್ಯವಾದರೆ, ಅದು ಪವಾಡವಲ್ಲ ಆದರೇ, 2013ರ ಫಲಿತಾಂಶವನ್ನು ಈ ಫಲಿತಾಂಶದಲ್ಲಿ ನಾವು ಗಮನಿಸಬಹುದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 114 ಸ್ಥಾನಗಳನ್ನು ಗೆದ್ದು ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಹೊರಹೊಮ್ಮಿತ್ತು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಮಲ್‌ ನಾಥ್‌ ಮುಖ್ಯಮಂತ್ರಿಯಾಗಿದ್ದರು. ಆದರೆ ಕಾಂಗ್ರೆಸ್‌ 2018ರ ಡಿಸೆಂಬರ್‌ 17ರಿಂದ 2020ರ ಮಾರ್ಚ್‌ 23ರವರೆಗೆ ಮಾತ್ರ ಅಧಿಕಾರದಲ್ಲಿತ್ತು. ಅದಕ್ಕೆ ಕಾರಣ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದು  ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಶಿವರಾಜ್‌ ಸಿಂಗ್‌ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವಂತಾಗಿತ್ತು. 2023ರಲ್ಲಿ ಈಗ ಮತ್ತೆ ಹತ್ತು ವರ್ಷಗಳ ಹಿಂದಿನ ಫಲಿತಾಂಶ ಬಿಜೆಪಿಗೆ ಒಲಿದಿದೆ.(ಎರಡು ಕ್ಷೇತ್ರ ಕಡಿಮೆ, 2013ರಲ್ಲಿ ಬಿಜೆಪಿ 165 ಕ್ಷೇತ್ರಗಳನ್ನು ಗೆದ್ದಿತ್ತು)

ಇನ್ನು, ಛತ್ತೀಸ್‌ಗಢದಿಂದ ಕಾಂಗ್ರೆಸ್‌ಗೆ ದೊಡ್ಡ ಆಘಾತ ಅನುಭವಿಸಿತು. ಇಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದ್ದಿತ್ತು. ಸ್ಪರ್ಧೆಯಿಲ್ಲ ಮತ್ತು ಕಾಂಗ್ರೆಸ್ ಗೆಲುವು ಖಚಿತ ಎನ್ನಲಾಗಿತ್ತು. ಛತ್ತೀಸ್‌ಗಢದ ಮಾದರಿಯ ಆಡಳಿತ ಮತ್ತು ರಾಜಕೀಯವನ್ನು ಇತರ ರಾಜ್ಯಗಳಲ್ಲಿಯೂ ಪುನರಾವರ್ತಿಸಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿತ್ತು. ಆದರೇ, ನಂಬಿಕೆಯು ಬಹಳ ದುರ್ಬಲ ಅಡಿಪಾಯವನ್ನು ಹೊಂದಿದೆ ಎಂದು ಫಲಿತಾಂಶಗಳು ತೋರಿಸುತ್ತವೆ.

ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಉತ್ತಮ ಸರ್ಕಾರ ನಡೆಸಿದ್ದು, ಮುಖ್ಯಮಂತ್ರಿ ವಿರುದ್ಧ ಯಾವುದೇ ಅಸಮಾಧಾನ ಅಷ್ಟಾಗಿ ಇಲ್ಲ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೇ, ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ತುಸು ಸಂಶಯವಿದ್ದಿತ್ತು ಎನ್ನುವುದು ಸತ್ಯ. ರಾಜಕೀಯ ವಲಯದ ನಿರೀಕ್ಷೆಯಂತೆ ಕಾಂಗ್ರೆಸ್‌ ಸೋತಿದೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ರಾಜಸ್ಥಾನ ಕೇವಲ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್ ನಡುವಿನ ವೈಷಮ್ಯಗಳಲ್ಲೇ ಮುಳುಗಿತ್ತು, ಮಾದ್ಯಮಗಳಿಗೂ ಈ ವಿಚಾರ ಗ್ರಾಸವಾಗಿತ್ತು. ರಾಜಸ್ಥಾನದ ಕಾಂಗ್ರೆಸ್ ನಾಯಕತ್ವಕ್ಕೆ ಹೇಗೆ ಪರಿಹಾರ ಒದಗಿಸಬೇಕೆಂಬ ಮಾರ್ಗವೂ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಯೂ ಇರಲಿಲ್ಲ.

ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲಷ್ಟೇ ಗೆಲ್ಹೋಟ್ ಮತ್ತು ಪೈಲೆಟ್‌ ನಡುವಿನ ವೈಷಮ್ಯಕ್ಕೆ ಪ್ಯಾಚ್-ಅಪ್ ಮಾಡಲಾಯಿತು. ಆದರೆ ಅದು ತುಂಬಾ ತಡವಾಗಿತ್ತು. ರಾಜಸ್ಥಾನ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸುವ ಇತಿಹಾಸವನ್ನು ಹೊಂದಿರುವುದರಿಂದ ಇಲ್ಲಿ ಕಾಂಗ್ರೆಸ್ ನಷ್ಟಕ್ಕೆ ಅನುಭವಿಸಿರುವುದಕ್ಕೆ ಗೆಹ್ಲೋಟ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ವೈಯಕ್ತಿಕ ಪ್ರಭಾವ ಪಕ್ಷದ ಅವಕಾಶಗಳನ್ನು ಹಾಳುಮಾಡುತ್ತದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್‌ ಇಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಹಿಂದಿ ಮಾತನಾಡುವ ರಾಜ್ಯಗಳ ಸೋಲು ಹೃದಯ ವಿದ್ರಾವಕವಾಗಿದ್ದರೆ, ತೆಲಂಗಾಣದಿಂದ ಕಾಂಗ್ರೆಸ್ ತುಸು ಸಾಂತ್ವನ ಪಡೆಯಿತು. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷ ಝಡ್‌ಪಿಎಂ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಕಾಂಗ್ರೆಸ್‌ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಸಂಪೂರ್ಣ ಪ್ರಾಬಲ್ಯ ಕಳೆದುಕೊಂಡಿದೆ ಎನ್ನುವುದಕ್ಕೆ ಖಂಡಿತ ಸಾಧ್ಯವಿಲ್ಲ. ಓಟ್‌ ಶೇರ್‌ ನಲ್ಲಿ ಬಿಜೆಪಿಗೆ ಉತ್ತಮವಾದ ಫೈಟನ್ನೇ ನೀಡಿದೆ. ರಾಜ್ಯವಾರು ಓಟ್‌ ಶೇರ್‌ ಗಮನಿಸುವುದಾದರೇ, ರಾಜಸ್ಥಾನದಲ್ಲಿ ಶೇ 41.69ರಷ್ಟು ಬಿಜೆಪಿ ಪಡೆದುಕೊಂಡರೇ, ಕಾಂಗ್ರೆಸ್‌ ಶೇ.39.53ರಷ್ಟು ಪಡೆದುಕೊಂಡಿದೆ. ಛತ್ತೀಸ್‌ಗಢದಲ್ಲಿ ಶೇ.46.27ರಷ್ಟು ಬಿಜೆಪಿ, ಶೇ.42.23ರಷ್ಟು ಕಾಂಗ್ರೆಸ್‌ ಪಡೆದುಕೊಂಡಿದೆ, ಮಧ್ಯಪ್ರದೇಶದಲ್ಲಿ ಶೇ.48.55ರಷ್ಟು ಬಿಜೆಪಿ, ಕಾಂಗ್ರೆಸ್‌ ಶೇ.40.40ರಷ್ಟು ಓಟ್‌ ಪಡೆದುಕೊಂಡಿದೆ. ತೆಲಂಗಾಣದಲ್ಲಿ ಶೇ.39.40ರಷ್ಟು ಕಾಂಗ್ರೆಸ್‌ ಪಡೆದುಕೊಂಡರೇ, ಬಿಜೆಪಿ ಶೇ.13.90ರಷ್ಟು ಪಡೆದುಕೊಂಡಿದೆ. ಇನ್ನು, ಮಿಜೋರಾಂನಲ್ಲಿ ಶೇ.20.82ರಷ್ಟು ಕಾಂಗ್ರೆಸ್‌, ಶೇ. 5.06ರಷ್ಟು ಪಡೆದುಕೊಂಡಿದೆ. ಒಟ್ಟು ಗೆದ್ದ ಕ್ಷೇತ್ರಗಳ ಸಂಖ್ಯೆ ಹೆಚ್ಚು ಕಡಿಮೆಯಿರಬಹುದು, ಆದರೇ, ಓಟ್‌ ಶೇರ್‌ ಬಹಳವೇನು ವ್ಯತ್ಯಾಸ ಕಾಣಿಸುತ್ತಿಲ್ಲ.

ಕಾಂಗ್ರೆಸ್‌ ಕಲಿಯಬೇಕಾದ ವಿಷಯಗಳು :

1. ಉತ್ತರ ಭಾರತದಲ್ಲಿ ಬಿಜೆಪಿ ಅತ್ಯಂತ ಪ್ರಬಲವಾದ ಪಕ್ಷವೆಂದು ಸಾಬೀತಾಯ್ತು, ಆದರೆ ಅದರ ಸಂಘಟನಾ ಶಕ್ತಿಯು ಅಸಂಬದ್ಧವಾಗಿದೆ. ಹಿಂದೆ ಜವಾಹರಲಾಲ್ ನೆಹರು-ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ಸಿನಂತೆಯೇ ಈಗ ಬಿಜೆಪಿ ಹಿಂದುತ್ವದ ಬೆಂಬಲ ಮತ್ತು ಮೋದಿ ವರ್ಚಸ್ಸಿನ ನೇತೃತ್ವದ ಬಿಜೆಪಿ ಉತ್ತರದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿದೆ.

2. ಬಿಜೆಪಿಯ ಓಟವನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ಕಾಂಗ್ರೆಸ್‌ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಗೆಲ್ಲುವ ಅವಕಾಶವಿದ್ದರೂ, ಎರಡೂ ರಾಜ್ಯಗಳನ್ನು ಕಳೆದುಕೊಂಡಿತ್ತು. ನರೇಂದ್ರ ಮೋದಿ ವರ್ಚಸ್ಸಿನ ಎದುರು ಏನೇ ತಂತ್ರಗಾರಿಕೆ ನಡೆಸಿದರೂ ವಿಫಲವಾಗುತ್ತಿರುವುದರ ಬಗ್ಗೆ ಕಾಂಗ್ರೆಸ್‌ ಇನ್ನೂ ಹೆಣಗಾಡುತ್ತಿದೆ.

3. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆ ಕೆಲಸ ಮಾಡಿವೆ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಏಕೆ ಕೆಲಸ ಮಾಡಲಿಲ್ಲ ? ಎನ್ನುವ ಬಗ್ಗೆ ಕಾಂಗ್ರೆಸ್‌ ಅವಲೋಕನ ಮಾಡಿಕೊಳ್ಳಬೇಕಿದೆ. ನಾಯಕತ್ವ ಇಲ್ಲಿ ವಿಶ್ವಾಸ ಉಳಿಸಿಕೊಳ್ಳದೇ ಇರುವುದೇ ಇಲ್ಲಿ ಕಾಂಗ್ರೆಸ್‌ಗೆ ಮುಳುವಾಯ್ತು.

4. ತಮ್ಮನ್ನು ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ನಾಯಕರು ಮತದಾರರಲ್ಲಿ ನಂಬಿಕೆ ಗಳಿಸಲು ಸಾಧ್ಯವಾಗಿಲ್ಲ. ಹೆಚ್ಚೆಂದರೆ ಆ ತಂತ್ರ ಮುಸ್ಲಿಂ ಪರ ಪಕ್ಷ ಎಂಬ ಗ್ರಹಿಕೆಯನ್ನು ಹೋಗಲಾಡಿಸಲು ಕಾಂಗ್ರೆಸ್ ಗೆ ನೆರವಾಗುತ್ತದೆ ಅಷ್ಟೆ. ಬಿಜೆಪಿಯ ಅಸ್ತ್ರದ ಬಳಕೆ ಕಾಂಗ್ರೆಸ್‌ಗೆ ಪ್ರಯೋಜನಕ್ಕೆ ಬರುವುದಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕಿದೆ.

5. ಒಡೆದ ಮನೆಯಾಗಿ ಉಳಿದರೆ ಚುನಾವಣೆ ಗೆಲ್ಲುವುದನ್ನು ಮರೆಯಬೇಕು ಎಂಬುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ, ಪಕ್ಷದ ಹಿರಿಯ ನಾಯಕರು ಕಿರಿಯರಿಗೆ ಅವಕಾಶ ಕಲ್ಪಿಸಲು ನಿರಾಕರಿಸಿದರು. ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್, ಭೂಪೇಶ್ ಬಾಘೇಲ್-ಟಿಎಸ್ ಸಿಂಗ್ ದೇವ್ ಮತ್ತು ಕಮಲ್ ನಾಥ್-ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ವೈಮಸ್ಸು ಸಾರ್ವಜನಿಕ ವಲಯದಿಂದ ಅಳಿಸಿ ಹೋಗಿಲ್ಲ.

ಒಟ್ಟಿನಲ್ಲಿ, ಈ ಚುನಾವಣೆ ʼಇಂಡಿಯಾʼ ಮೈತ್ರಿಯ ಕಣ್ಣು ತೆರೆಸುವಂತಿದೆ. ಒಗ್ಗಟ್ಟಿಲ್ಲದಿದ್ದರೆ ಮತ್ತು ಒಗ್ಗಟ್ಟಿನಿಂದ ಯಾವುದೇ ಪರ್ಯಾಯ ದೃಷ್ಟಿಕೋನದ ಬಗ್ಗೆ ಗಮನ ಹರಿಸದಿದ್ದರೇ, 2024ಲೋಕಸಭಾ ಚುನಾವಣೆಯನ್ನು ಮರೆತುಬಿಡುವುದು ಲೇಸು ಅಂತನ್ನಿಸ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ತುಂಬಾ ಶಕ್ತಿಶಾಲಿಯಾಗಿದೆ, ಒಗ್ಗಟ್ಟಾಗಿದೆ ಎನ್ನುವುದನ್ನು ಕಾಂಗ್ರೆಸ್‌, ʼಇಂಡಿಯಾʼ ಮೈತ್ರಿ ಅಲ್ಲಗಳೆಯುವಂತಿಲ್ಲ. ʼಇಂಡಿಯಾʼ ತನ್ನ ಚೌಕಟ್ಟನ್ನು ಮೀರಿ ಯೋಚಿಸದಿದ್ದಲ್ಲಿ ಹೀನಾಯ ಸೋಲು ಅನುಭವಿಸುವುದು ಖಚಿತ.

-ಶ್ರೀರಾಜ್‌ ವಕ್ವಾಡಿ

 

 

 

Thursday, November 30, 2023

‌ʼಗೋ ಬ್ಯಾಕ್‌ ಲಕ್ಷ್ಮೀ ಹೆಬ್ಬಾಳ್ಕರ್‌ʼ : ಉಸ್ತುವಾರಿ ಮೇಲೆ ಸ್ವಪಕ್ಷೀಯರ ಮುನಿಸು

ಉಸ್ತುವಾರಿ ಬದಲಾವಣೆಗೆ ಕಾರ್ಯಕರ್ತರ ಆಗ್ರಹ | ಜಿಲ್ಲೆಯಲ್ಲಿ ಹೆಬ್ಬಾಳ್ಕರ್‌ ಸಹೋದರನ ನೆರಳು ?

ಆಡಳಿತಾತ್ಮಕವಾದ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಹುದ್ದೆಯು ದೇಶದ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳಲ್ಲಿ ಇದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಕಾರ್ಯಗತಗೊಳಿಸುವ ದೃಷ್ಟಿಯಿಂದ ಹಾಗೂ ಜಿಲ್ಲೆಯೊಂದನ್ನು ಅಭಿವೃದ್ಧಿ ಮುಖವಾಗಿ ಕೊಂಡೊಯ್ಯುವ ದೃಷ್ಟಿಯಿಂದ ಹುಟ್ಟಿಕೊಂಡ ಹುದ್ದೆ ʼಉಸ್ತುವಾರಿʼ. ಒಂದು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡ ಸಚಿವರು ಆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಮಾತ್ರವಲ್ಲದೇ, ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬೇಕು. ಒಂದು ಅರ್ಥದಲ್ಲಿ ಉಸ್ತುವಾರಿ ಸ್ಥಳಿಯಾಡಳಿತ ಹಾಗೂ ರಾಜ್ಯ ಸರ್ಕಾರದ ಕಾರ್ಯಕೊಂಡಿ ಆಗಿ ಜವಾಬ್ದಾರಿ ನಿರ್ವಹಿಸಬೇಕು. ಸಾಮಾನ್ಯವಾಗಿ ಆಯಾಯ ಜಿಲ್ಲೆಯಿಂದ ಆರಿಸಿ ಬಂದ ಸಚಿವರನ್ನೇ ಉಸ್ತುವಾರಿಯನ್ನಾಗಿ ಮಾಡುವ ಕಲ್ಪನೆಯಿಂದ ಈ ಹುದ್ದೆ ಹುಟ್ಟಿಕೊಂಡಿದ್ದು, ಯಾಕೆಂದರೇ, ಸ್ಥಳಿಯಾಡಳಿತದಲ್ಲಿ, ರಾಜ್ಯ ಸರ್ಕಾರದ ಯೋಜನೆಗಳನ್ನು ಸುಗಮವಾಗಿ ಅನುಷ್ಠಾನಗೊಳಿಸಬಹುದು ಎಂಬ ಕಲ್ಪನೆಯದು. ಒಮ್ಮೊಮ್ಮೆ ಆ ಜಿಲ್ಲೆಯಿಂದ ಯಾವುದೇ ಸಚಿವರು ಇಲ್ಲದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿರುವ ಬೇರೆಯವರನ್ನು ಅಲ್ಲಿಗೆ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಗುತ್ತದೆ. ಯಾರೇ ಉಸ್ತುವಾರಿ ಸಚಿವರಾದರೂ ಅವರಿಗೆ ಜಿಲ್ಲೆಯ ಮೇಲೆ ಪೂರ್ಣ ಜವಾಬ್ದಾರಿ ಇದೆ.

ಉಡುಪಿ ಜಿಲ್ಲೆಯಲ್ಲಿ ಸದ್ಯ, ʼಉಸ್ತುವಾರಿʼ ಬಗ್ಗೆ ಸ್ವತಃ ಆಡಳಿತಾರೂಢ ಪಕ್ಷದ ಕಾರ್ಯಕರ್ತರೇ ಅಸಮಾಧಾನಗೊಂಡಿರುವುದು ಆಶ್ಚರ್ಯಕರ. ಜಿಲ್ಲೆಯ ಹಾಗೂ ಪಕ್ಷದ ಜವಾಬ್ದಾರಿ ಇಲ್ಲ ಎಂಬಂತ ವರ್ತಿಸುತ್ತಿದದ್ದಾರೆ, ತಮ್ಮ ಪಕ್ಷದ ಕಾರ್ಯಕರ್ತರನ್ನೇ ಉಸ್ತುವಾರಿ ಸಚಿವರು ನಿರ್ಲಿಕ್ಷಿಸಿದ್ದಾರೆ ಎಂಬ ಆರೋಪಗಳು ಜಿಲ್ಲೆಯ ಕಾಂಗ್ರೆಸ್‌ ಪಾಳಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಯ ಕಾಂಗ್ರೆಸ್‌ ಬ್ಲಾಕ್‌ಗಳ ಕಾರ್ಯಕತರನ್ನು ಸಂಪೂರ್ಣ ನಿರ್ಲಕ್ಷ್ಯ ಮನೋಧೋರಣೆಯಲ್ಲಿ ವರ್ತಿಸುವುದಷ್ಟೇ ಅಲ್ಲದೇ ತಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನದ ಮಾತು ಈಗ ಕೇಳಿ ಬರುತ್ತಿದೆ. ಇನ್ನು, ಉಸ್ತುವಾರಿಯಾಗಿ ನೇಮಕಗೊಂಡ ಆರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಜಿಲ್ಲೆಯಲ್ಲಿ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಗೆದ್ದು ಬಂದಿಲ್ಲ ಎಂಬ ವಿಚಾರಕ್ಕೆ ಮುನಿಸಿಕೊಂಡು ಇಲ್ಲಿನ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದರು. 

ಉಸ್ತುವಾರಿ ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೆ, ಇಡೀ ಜಿಲ್ಲೆಯಲ್ಲಿ ತಮ್ಮ ಆಡಳಿತ ವರ್ಚಸ್ಸು ಮತ್ತು ಆಡಳಿತ ಸರ್ಕಾರದ ಪ್ರಭಾವವನ್ನು ಜಿಲ್ಲೆಯಲ್ಲಿ ಬೀರಬಹುದು. ಪಕ್ಷವನ್ನು ಸದೃಢವಾಗಿ ಕಟ್ಟಬಹುದು. ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರ ಪಕ್ಷದ ಪಾಲಿನಲ್ಲಿಲ್ಲ ಎಂದು ಹೇಳಿ ತಕರಾರು ಮಾಡುವ ಹೆಬ್ಬಾಳ್ಕರ್ ಇಲ್ಲಿ ಪಕ್ಷ ಸಂಘಟನೆ ಮಾಡಬಹುದಲ್ಲವೇ ? ಅವರಿಗೆ ಆ ಆಸಕ್ತಿ ಇಲ್ಲ, ಎಲ್ಲಿ ಲಾಭಿ ಮಾಡುವುದಕ್ಕೆ ಸಾಧ್ಯವಿದೆ..? ಎಲ್ಲಿ ಯಾವ ಅಧಿಕಾರಿಗಳನ್ನು ವರ್ಗ ಮಾಡಿದರೇ ಎಷ್ಟು ʼಪರ್ಸಂಟೇಜ್‌ʼ ದೊರಕುತ್ತದೆ ? ಎಂಬುವುದೇ ಅವರಿಗೆ ಯೋಚನೆಯಾಗಿದೆ ಎನ್ನುವುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮಾತು. ಹೌದು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬಿಜೆಪಿ ಪರವಾದ ನಿಲುವು ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಿಸಿದೆ ಎನ್ನಲಾಗುತ್ತಿದೆ. ಶೋಕಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಅಪಸ್ವರವೂ ಕೇಳಿ ಬರುತ್ತಿದೆ. ಮಾತ್ರವಲ್ಲದೇ, ಇಲ್ಲಿನ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ʼಗೋ ಬ್ಯಾಕ್‌ ಲಕ್ಷ್ಮೀ ಹೆಬ್ಬಾಳ್ಕರ್‌ʼ ಅಭಿಯಾನವೂ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ರಾಜಕೀಯ ಚರ್ಚಗೆ ಕಾರಣವಾಗಿದೆ.

ಉಸ್ತುವಾರಿ ಸಚಿವರಿಗೆ ಇಡೀ ಜಿಲ್ಲೆಯ ಪರಿಚಯವಿರಬೇಕು. ಕೇವಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರೇ ಪ್ರಯೋಜನವಿಲ್ಲ. ಜನರ ಸಮಸ್ಯೆಗಳನ್ನು ಆಲಿಸಬೇಕು, ಮುಖ್ಯವಾಗಿ ಪಕ್ಷ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯೂ ಮಾಡಬೇಕು. ಹಾಗಾದಲ್ಲಿ ಉಸ್ತುವಾರಿ ಮಾಡುವ ಬಹುತೇಕ ಕೆಲಸವನ್ನು ಒಂದು ಹಂತದವರೆಗೆ ಕಾರ್ಯಕರ್ತರೇ ಮಾಡಿ ಮುಗಿಸುತ್ತಾರೆ. ಅನುಷ್ಠಾನಕ್ಕೆ ಬೇಕಾಗಿ ಸರ್ಕಾರದ ಮಟ್ಟದಲ್ಲಿ ಉಸ್ತುವಾರಿ ಕೆಲಸ ಮಾಡಿದರೇ ಸಾಕು. ಲಕ್ಷ್ಮೀ ಹೆಬ್ಬಳ್ಕರ್ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದೇ ಇಲ್ಲ ಎಂಬ ಬಲವಾದ ಆರೋಪ ಇಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಶಾಸಕರ ಭ್ರಷ್ಟಾಚಾರದಲ್ಲಿ ಉಸ್ತುವಾರಿ ಸಚಿವರ ನೇರ ಶಾಮೀಲು ಇದೆ ಎಂಬ ಮಾತುಗಳು ಕೂಡ  ಜಿಲ್ಲಾ ಕಾಂಗ್ರೆಸ್‌ ಪಾಳಯವನ್ನು ಅಸಮಾಧಾನದಲ್ಲಿರಿಸಿದೆ ಎಂದು ಜಿಲ್ಲಾ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿರುವ ವಿಷಯ.

ಜಿಲ್ಲೆಯಲ್ಲಿ ಹೆಬ್ಬಾಳ್ಕರ್‌ ತಮ್ಮನ ನೆರಳು :

ಉಡುಪಿ ಜಿಲ್ಲೆಗೂ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲದಿದ್ದರೂ ಚನ್ನರಾಜ್‌ ಹಟ್ಟಿಹೊಳಿ ಜಿಲ್ಲೆಯಲ್ಲಿ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್‌ ಇಲ್ಲಿ ಉಸ್ತುವಾರಿ ಸಚಿವೆ ಎಂಬ ಕಾರಣಕ್ಕೆ ಅವರ ಜವಾಬ್ದಾರಿಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರಂತೆ. ಪ್ರಮುಖವಾಗಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನ ನಕಲಿ ಪರಶುರಾಮ ಪ್ರತಿಮೆಯ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಶಾಸಕ ಸುನೀಲ್‌ ಕುಮಾರ್‌ ನಡುವಿನ ರಾಜಕೀಯ ಒಳ ಒಪ್ಪಂದದಲ್ಲಿ ಮಧ್ಯಸ್ಥಿಕೆ ನಡೆಸಿದ್ದೇ ವಿಧಾನ ಪರಿಷತ್‌ ಸದಸ್ಯ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ್‌ ಹಟ್ಟಿಹೊಳಿ ಎಂಬ ಆರೋಪದ ಮಾತು ಕಾಂಗ್ರೇಸ್‌ ವಲಯದಿಂದಲೇ ಕೇಳಿ ಬರುತ್ತಿದೆ. ಪರಶುರಾಮ ಥೀಂ ಪಾರ್ಕ್‌, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವೆ ಮೌನ ವಹಿಸಿರುವ ಬಗ್ಗೆಯೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನವಿದೆ. ನೂತನ ಜಿಲ್ಲಾ ವೈದ್ಯಾಧಿಕಾರಿಗಳ ಪೋಸ್ಟಿಂಗ್‌ನಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್‌ ರಾಜಕೀಯ ಪ್ರಭಾವವಿದೆಯಂತೆ. ಹಾಗೂ ಹೊಸ ಸರ್ಕಾರ ಬಂದ ಮೇಲೆ ಕೆಲವು ಅಧಿಕಾರಿಗಳ ವರ್ಗಾವಣೆಯಲ್ಲೂ ಉಸ್ತುವಾರಿ ಸಚಿವರು ತೊಡಗಿಕೊಂಡಿದ್ದಾರಂತೆ. ಹಾಗಾಗಿ ಅವರಿಗೆ ಜಿಲ್ಲೆಯ ಪ್ರಗತಿ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಸಣ್ಣ ಹೊಣೆಗಾರಿಕೆ ಈವರೆಗೆ ತೋರಿಸಿಲ್ಲ, ಇನ್ನು, ಯಾವುದೇ ಅಧಿಕಾರಿಗಳು ಜಿಲ್ಲೆಯಲ್ಲೇ ಉಳಿದುಕೊಳ್ಳಬೇಕಾದರೂ, ಇಲ್ಲಿಂದ ಬೇರೆ ಕಡೆ ವರ್ಗ ಆಗಬೇಕಾದರೂ ಹೆಬ್ಬಾಳ್ಕರ್‌ ಮಾತೇ ಅಂತಿಮವಂತೆ. ಇವೆಲ್ಲಾ ಜಿಲ್ಲೆಯ ಕಾಂಗ್ರೆಸ್‌ ವಲಯದಿದಂದಲೇ ಹೊರಬಂದ ಅಪಸ್ವರಗಳು. ಹಿಂದೊಮ್ಮೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಇಲಾಖೆಯ ಕೆಲಸಗಳಲ್ಲಿ ಹಟ್ಟಿಹೊಳಿ ಮೂಗು ತೂರಿಸುತ್ತಿರುವ ಆರೋಪ ಕೇಳಿ ಬಂದಿದ್ದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ತೀರ್ವ ಅಸಮಾಧಾನ ವ್ಯಕ್ತ ಪಡಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಒಂದೆಡೆ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಯ ಭರವಸೆ ಕೊಟ್ಟು ರಾಜ್ಯದ ಅಧಿಕಾರ ಹಿಡಿದಿದೆ. ಇನ್ನೊಂದೆಡೆ ಈ ರೀತಿಯ ನಡೆ ಕಾಂಗ್ರೆಸ್ ಭರವಸೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ʼಉಸ್ತುವಾರಿʼ ಇದೊಂದು ಸಾಂವಿಧಾನಿಕ ಹುದ್ದೆಯಲ್ಲದಿದ್ದರೂ ಇದು ಹುಟ್ಟಿಕೊಳ್ಳುವಾಗ ಉಪ ಮುಖ್ಯಮಂತ್ರಿ ರೀತಿಯ ಮಹತ್ವ ಹಾಗೂ ಸ್ಥಾನಮಾನ ಇರಬೇಕು ಎಂಬ ಕಲ್ಪನೆಯಲ್ಲಿ ಆರಂಭಿಸಿದ ಹುದ್ದೆ.  ಆಡಳಿತಾತ್ಮಕವಾಗಿ ಜಿಲ್ಲಾ ಮಟ್ಟದ ಸಮಸ್ಯೆಯನ್ನು ಮುಖ್ಯಮಂತ್ರಿಗೆ ಹಾಗೂ ಸಚಿವ ಸಂಪುಟದ ಗಮನಕ್ಕೆ ತಂದು ಪರಿಹಾರ ಒದಗಿಸುವ ಸಲುವಾಗಿ ಇದು ಸಹಕಾರಿ ಆಗುತ್ತದೆ ಎಂಬ ಉದ್ದೇಶವಾಗಿತ್ತು. ಇಂತಹ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಮತ್ತೊಂದು ಆರೋಪ. ಜಿಲ್ಲಾ ಉಸ್ತುವಾರಿಗಳಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ದೃಷ್ಟಿಕೋನ ಇದ್ದ ಹಾಗೆ ಯಾವ ಲಕ್ಷಣವೂ ಕಾಣುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳ ಪ್ರೋಟೋಕಾಲ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ಯಾವುದೇ ವಿಷಯವನ್ನು ಜವಾಬ್ದಾರಿಯಿಂದ ಕೈಗೆತ್ತಿಕೊಳ್ಳುತ್ತಿಲ್ಲ ಎಂಬ ಸ್ವಪಕ್ಷೀಯ ಆರೋಪ ಬಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನೆಬ್ಬಿಸಿದೆ. ಇನ್ನು, ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸುನಿಲ್‌ ಕುಮಾರ್‌ ಅವರನ್ನು ಹೆಬ್ಬಾಳ್ಕರ್‌ ವಹಿಸಿಕೊಂಡು ಮಾತನಾಡಿರುವುದು, ಸುನೀಲ್‌ ಕುಮಾರ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೂ, ಸರ್ಕಾರದ ಅಧಿಕಾರಿ ವಿರುದ್ಧ ಮಾತನಾಡಿದರೂ ಸರ್ಕಾರ ಹಾಗೂ ಅಧಿಕಾರಿಯ ಸಮರ್ಥನೆಗೆ ಮುಂದಾಗದೇ ಮೌನವಹಿಸಿರುವುದರ ಬಗ್ಗೆಯೂ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಬಾರಿ ಅಸಮಾಧಾನವಿದೆ.

ಕಾರ್ಯಕರ್ತರ ಅಸಮಾಧಾನ ಸಿಎಂ ಬಳಿಗೆ :

ರಾಜ್ಯ ಸರ್ಕಾರದ ರಚನೆಯಾಗಿ ಕೆಲವೇ ಕೆಲವು ತಿಂಗಳಾಗಿದ್ದಷ್ಟೆ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡೇ ಇಲ್ಲ ಎಂಬ ಮಾತು ಜಿಲ್ಲಾ  ಕಾಂಗ್ರೆಸ್‌ ಪಾಳಯದಿಂದ ಕೇಳಿ ಬರುತ್ತಿದೆ. ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಅಸಮಧಾನ ತಿಳಿಸುವುದಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಡಿಕೆಶಿ ನಡೆಯನ್ನು ಒಪ್ಪುವವರು ತೀರಾ ಕಡಿಮೆ. ಲಕ್ಷ್ಮೀ ಹೆಬ್ಬಾಳ್ಕರ್‌ ಡಿಕೆಶಿ ಆಪ್ತ ಬಳಗದಲ್ಲಿದ್ದಾರೆ. ಹೆಬ್ಬಾಳ್ಕರ್‌ ಡಿಕೆಶಿ ಬಣದಲ್ಲಿರುವುದರಿಂದ ಸಿದ್ದರಾಮಯ್ಯ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ್‌ಗೂ ಅಷ್ಟಕ್ಕಷ್ಟೆ. ಇನ್ನು, ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ, ಬಿಜೆಪಿ ಶಾಸಕರ ಬಗ್ಗೆ ಮೃದು ಧೋರಣೆ, ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಬಿಜೆಪಿ ನಾಯಕರು ತೊಡಗಿರುವ ಭ್ರಷ್ಟಾಚಾರದ ತನಿಖೆಯ ಬಗ್ಗೆ ದಿವ್ಯ ಮೌನದ ನಡೆ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಹುಟ್ಟಿದೆ. ಜಿಲ್ಲಾ ಉಸ್ತುವಾರಿ ಬದಲಾವಣೆ ಆಗಬೇಕು ಎಂಬ ಕೂಗು ಕೂಡ ಕಾಂಗ್ರೆಸ್‌ನಲ್ಲಿಯೇ ಕೇಳಿ ಬರುತ್ತಿದೆ. ಉಡುಪಿಯ ಹಿರಿಯ ಕಾಂಗ್ರೆಸ್‌ ನಾಯಕನೋರ್ವರನ್ನು ಎಂಎಲ್‌ಸಿ ಮಾಡಿ ಇಲ್ಲಿನ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂಬ ಒತ್ತಾಯವಿದೆ. ಅಲ್ಲದಿದ್ದಲ್ಲಿ ಕೊನೆಯಪಕ್ಷ ಮಂಜುನಾಥ ಭಂಡಾರಿ ಅವರನ್ನಾದರೂ ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಿಸಿ ಎಂಬ ಜಿಲ್ಲಾ ಕಾಂಗ್ರೆಸ್‌ನ ಧ್ವನಿ ಈಗ ಮುನ್ನೆಲೆಗೆ ಬರುತ್ತಿದೆ.

ಒಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಲ್ಲೇ ಹುಟ್ಟಿಕೊಂಡಿರುವ ಅಸಮಧಾನವನ್ನು ರಾಜ್ಯ ಸರ್ಕಾರ ಹೇಗೆ ಶಮನ ಮಾಡುತ್ತದೆ ? ಮತ್ತು ಮುನಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

-ಶ್ರೀರಾಜ್‌ ವಕ್ವಾಡಿ

Sunday, November 26, 2023

ತಾಳ್ಮೆಯ ಹಣತೆ 'ಸ್ವಾತಿ ಮುತ್ತಿನ ಮಳೆ ಹನಿಯೇ'

 



ಬದುಕು ಪ್ರೀತಿಯನ್ನು ಧ್ಯಾನಿಸುವುದಕ್ಕೆ ಇರುವುದು. ಜೀವನ ಭಾವನೆಗಳನ್ನು ಉಸಿರಾಡುವುದಕ್ಕೆ ಇರುವುದು. ಮನಸ್ಸು ಎಂದಿಗೂ ಬಯಸುವುದು 'ಪ್ರೇರಣಾ'ಪೂರ್ವಕವಾದ 'ಆಸರೆ'ಯನ್ನಷ್ಟೆ. ಹಿತವಾದ ಮಾತು, ಪ್ರೀತಿ, ಕಾಳಜಿ ಒಂದು ಮನಸ್ಸನ್ನು ಎಷ್ಟು ಸಾಂತ್ವನಿಸುತ್ತವೆ ಅಲ್ವಾ ? ನೋವಿನಲ್ಲಿದ್ದ ಜೀವಕ್ಕೊಂದು ಧ್ವನಿ ಸಿಕ್ಕಾಗ ಮಾತ್ರ ಅದು ಲವಲವಿಕೆಯಿಂದ ಉಳಿಯುವುದಕ್ಕೆ, ಬೆಳೆಯುವುದಕ್ಕೆ ಸಾಧ್ಯ. ಒಂದು ಸಂಬಂಧ ಹಿತವಾದ ಪ್ರೀತಿಯಲ್ಲಿನ ಗಾಢತೆಯನ್ನು ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಾರವೇ ಸಿನೆಮಾದ ಕಥಾವಸ್ತು. 

ಉರಿಯುವ ಜ್ವಾಲೆ ತನ್ನೊಳಗಿಟ್ಟುಕೊಂಡಿದ್ದರೂ ತಾಳ್ಮೆಯ ಹಣತೆಯಾಗಿಯೇ ಕಥಾ ನಾಯಕಿ ಪ್ರೇರಣಾ(ಸಿರಿ ರವಿಕುಮಾರ್) ಬೆಳಗುತ್ತಾಳೆ, ಬದುಕಿನ ಅಂತ್ಯದ ಹೊಸ್ತಿಲಲ್ಲಿದ್ದರೂ ಆಶಾಭಾವನೆಯಲ್ಲಿ ಈ ಕ್ಷಣವನ್ನು ಕಥಾನಾಯಕ ಅನಿಕೇತ್ (ರಾಜ್ ಬಿ.ಶೆಟ್ಟಿ) ಕಳೆಯುತ್ತಾನೆ. ಸುಡುವ ಹಣತೆಯಾಗಿ, ನಂದಿ ಬಟ್ಟಲು ಹೂವಾಗಿ ಪ್ರೇರಣಾ, ಅನಿಕೇತ್ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಇಡೀ ಸಿನೆಮಾ ಕಾವ್ಯವೇ ಆಗಿ ಹೆಣೆದುಕೊಂಡಿದೆ. ಕಣ್ಣಿಗೆ ಹಿತವುಣಿಸುವ ಸಿನೆಮಾಟಾಗ್ರಫಿ, ಕ್ಷಣಕ್ಷಣಕ್ಕೂ ಬದುಕನ್ನು ದರ್ಶಿಸುವ ಸಂಭಾಷಣೆ, ಎಲ್ಲಾ ನಟ, ನಟಿಯರ ಸಹಜ ಮನೋಜ್ಞ ನಟನೆ ಶ್ಲಾಘನೀಯ. 

ಖಾಲಿ ಖಾಲಿ ಥಿಯೇಟರ್ ನೋಡುವಾಗ ಕನ್ನಡ ಸಿನಿಮಾ ವೀಕ್ಷಕರ ಸದಭಿರುಚಿ ಬಗ್ಗೆ ನಿಜಕ್ಕೂ ದುಃಖವಾಯ್ತು. 

ಇನ್ನು, ರಾಜ್ ಬಿ. ಶೆಟ್ಟಿಯವರ 'ಟೋಬಿ' ಸಿನೆಮಾ ನೋಡಿ ಹಿಗ್ಗಾಮುಗ್ಗಾ ಬೈದಿದ್ದೆ. ಆದರೆ, ಈ ಸಿನೆಮಾ ತುಂಬಾ ಆಪ್ತವಾಗಿ ನನ್ನನ್ನು ಆವರಿಸಿಕೊಂಡಿದೆ. ಒಂದು ಒಳ್ಳೆಯ ಸಿನೆಮಾ ನೋಡಿದ ಖುಷಿಯಾಗಿದೆ.‌ ಸಿನೆಮಾ ಕನಿಷ್ಠ ಒಂದೆರಡು ಪುಸ್ತಕದ ಓದು ಕೊಡಬೇಕು 'ಸ್ವಾತಿ ಮುತ್ತಿನ ಮಳೆ ಹನಿಯೇ' ಆ ಕೆಲಸ ಮಾಡಿದೆ. 

#ಕಾವ್ಯಬೈರಾಗಿ

(ಶ್ರೀರಾಜ್ ವಕ್ವಾಡಿ) 

Thursday, November 23, 2023

‌ ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತೆ ಬಿಜೆಪಿ ಹೈಕಮಾಂಡ್‌ ಸ್ಥಿತಿ ?

 


ವಂಶಾಡಳಿತ ರಾಜಕೀಯಕ್ಕೆ ಮಣಿದ ಬಿಜೆಪಿ | ಮತ್ತೆ ಗೆದ್ದ ಯಡಿಯೂರಪ್ಪ !

ಬಿಜೆಪಿಯು ಪೂರ್ಣ ಬ್ರಾಹ್ಮಣರ ಕೈಯಲ್ಲಿದೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಜಾತಿ ಲೆಕ್ಕಚಾರವನ್ನು ಸರಿದೂಗಿಸಿ ನಾಯಕತ್ವವನ್ನು ನೀಡಲಾಗಿದೆ ಎಂಬಂತೆ ಕಾಣಿಸುತ್ತಿದೆ. ೨೦೨೧ರ ನವೆಂಬರ್‌ ಸಂದರ್ಭಲ್ಲೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರ ಬಾರಿ ಸದ್ದು  ಮಾಡಿತ್ತು. ಆದರೇ, ಯಾವುದೇ ʼಬದಲಾವಣೆ ಇಲ್ಲವೇ ಇಲ್ಲʼ  ಎಂಬ ವಿಚಾರವನ್ನೇ ಬಿಜೆಪಿ ಪಠಿಸುತ್ತಾ ಬಂದಿತ್ತು. ಆಮೇಲೆ ಏನೂ ಆಗಿಲ್ಲವೆಂಬಂತೆ ಆ ವಿಚಾರವನ್ನು ಮುಂದಕ್ಕೆ ತಳ್ಳಿ, ರಾಜ್ಯಾಧ್ಯಕ್ಷರ ಸ್ಥಾನದ ಅವಧಿ ಮುಗಿದ ಮೇಲೂ ಬದಲಾವಣೆಗೆ ಹೈಕಮಾಂಡ್‌ ಮನಸ್ಸು ಮಾಡಿರಲಿಲ್ಲ. ಇಡೀ ರಾಜ್ಯ ರಾಜಕಾರಣದ ಕುತೂಹಕ್ಕೆ ಭ್ರಮನಿರಸನ ಮೂಡಿಸಿತ್ತು. ಈ ನಡುವೆ ಬಿಜೆಪಿಯಲ್ಲಾದ ಕೆಲವು ದೊಡ್ಡ ಮಟ್ಟದ ಬದಲಾವಣೆ ರಾಷ್ಟ್ರ ರಾಜಕಾರಣದಲ್ಲಿಯೂ ಸುದ್ದಿ ಆಯಿತು. ಅದೇನೇ ಇರಲಿ ಬಿಡಿ, ಸದ್ಯ, ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ(ಬಿ.ವೈ ವಿಜಯೇಂದ್ರ), ಪ್ರತಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ(ಆರ್‌ ಅಶೋಕ್‌) ನೀಡಿದ್ದಾಗಿದೆ. ಈಗ ವಿಧಾನಪರಿಷತ್‌ ವಿಪಕ್ಷ ನಾಯಕನ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ (ಕೋಟಾ ಶ್ರೀನಿವಾಸ ಪೂಜಾರಿ) ನೀಡುವ ಸಾಧ್ಯತೆ ಇದ್ದು, ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯದಲ್ಲಿ ಬಿಜೆಪಿ ಜಾತಿ ಲೆಕ್ಕಚಾರವನ್ನು ಸೂಕ್ಷ್ಮವಾಗಿ ಅಳೆದು ತೂಗಿ, ಚುನಾವಣೆಯಲ್ಲಿ ಲಾಭ ಆಗುವ ದೃಷ್ಟಿಯಲ್ಲಿ ಈ ತಂತ್ರ ಹೆಣೆಯಿತೇ ಎಂಬ ಚರ್ಚೆ ರಾಜಕೀಯದಲ್ಲಿ ಶುರುವಾಗಿದೆ.   

ಸದಾ ಜಾತಿ ರಾಜಕೀಯ ಮಾಡಿಕೊಂಡು ಬಂದ ಬಿಜೆಪಿ ಹೀಗೆ ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಜಾತಿ, ಧರ್ಮ ರಾಜಕಾರಣ ಒಂದು ರೀತಿಯಲ್ಲಿ ಬಿಜೆಪಿಯ ಪರಂಪರೆಯೂ ಹೌದು.  ಬಿಜೆಪಿ ಚುನಾವಣೆಗಳನ್ನು ಜಾತಿ ಹಾಗೂ ಧರ್ಮ ಆಧಾರವಾಗಿ ಕಾಣುತ್ತಾ ಬಂದಿರುವ ಕಾರಣಕ್ಕೆ ಈ ಬೆಳವಣಿಗೆ ಬಿಜೆಪಿಯ ವಿಷಯದಲ್ಲಿ ಹೊಸತೇನಲ್ಲ. ಆದರೇ, ಯಾವ ಪಕ್ಷ ಕುಟುಂಬ ರಾಜಕಾರಣವನ್ನು, ವಂಶಾಡಳಿತವನ್ನು ಈವರೆಗೆ ದೂಷಿಸುತ್ತಾ ಬಂದಿತ್ತೋ, ಅದೇ ಪಕ್ಷ ರಾಜ್ಯದಲ್ಲಿ ವಂಶಾಡಳಿತ ರಾಜಕೀಯಕ್ಕೆ ಮಣೆ ಹಾಕಿರುವುದು ನಿಜಕ್ಕೂ ಆಶ್ಚರ್ಯಕರ ವಿಷಯ. ಒಂದೆಡೆ ಅಪ್ಪ ಮಕ್ಕಳ ರಾಜಕೀಯ ಪಕ್ಷವನ್ನು(ಜೆಡಿಎಸ್) ಬಿಜೆಪಿ ತನ್ನ ಎನ್‌ಡಿಎ ಮೈತ್ರಿ ಕೂಟದೊಳಗೆ  ಸೇರಿಸಿಕೊಂಡಿದ್ದು. ಮತ್ತೊಂದೆಡೆ ಬಿ.ಎಸ್‌ ಯಡಿಯೂರಪ್ಪ ಅವರ ಮಗ ಬಿ. ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು. ಬಿಜೆಪಿಯ ಸ್ಥಿತಿ ʼಹೇಳುವುದು ವೇದ, ಹಾಕುವುದು ಗಾಳʼ ಎಂಬಂತಾಗಿದ್ದಷ್ಟೇ ಅಲ್ಲದೇ ʼಬೇಲಿಯೇ ಎದ್ದು ಹೊಲ ಮೇಯ್ದಂತೆʼ ಆಗಿದೆ.

ಬಿ.ಎಸ್‌.ವೈ ಸಿಎಂ ಸ್ಥಾನ ಬದಲಾವಣೆಗೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಮಾತನಾಡಿದ್ದಾರೆ ಎಂಬ ಆಡಿಯೋ ಮತ್ತು ಅಂದಿನ ಹಾನಗಲ್‌ ಚುನಾವಣೆಗೂ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಒಂದು ಹಂತದಲ್ಲಿ ಲಿಂಕ್‌ ಆಗಿತ್ತು. ನಳೀನ್‌ ಕುಮಾರ್‌ ಕಟೀಲ್‌ ಮೇಲೆ ಯಡಿಯೂರಪ್ಪ ಅವರ ಬಣದಿಂದಲೇ ಆರೋಪ ಕೇಳಿ ಬಂದಿತ್ತು. (ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲಿನ ರಾಜಕೀಯ ಬೆಳವಣಿಗೆ) ಅಧಿಕಾರದಿಂದ ಹೊರಗಿದ್ದರೂ ಯಡಿಯೂರಪ್ಪ ತಮ್ಮ ರಾಜಕೀಯ ಪ್ರಭಾವ ಬೀರಿದ್ದರು. ಇದು ಆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದ ಬಸವರಾಜ ಬೊಮ್ಮಾಯಿ ಅವರನ್ನು ತ್ರಿಶಂಕು ಸ್ಥಿತಿಯಲ್ಲಿರಿಸಿತ್ತು. ಯಡಿಯೂರಪ್ಪ ಅವರ ಋಣ ಬೊಮ್ಮಾಯಿಗೆ ಇದ್ದಿದ್ದರಿಂದ ಯಡಿಯೂರಪ್ಪ ಅವರ ವಿರುದ್ಧವೂ ಮಾತನಾಡುವ ಹಾಗಿರಲಿಲ್ಲ, ಇತ್ತ ರಾಜ್ಯಾಧ್ಯಕ್ಷರ ವಿರುದ್ಧವೂ ಮಾತಾಡುವ ಹಾಗಿರಲಿಲ್ಲ. ಅಂದಿನ ಬಿಜೆಪಿಯ ಎಲ್ಲಾ ಮೈನಸ್‌ ಪಾಯಿಂಟ್‌ಗಳನ್ನು ವಿಜಯೇಂದ್ರ ತಮ್ಮ ಕಡೆಗೆ ಲಾಭ ಆಗುವ ಹಾಗೆ ಮಾಡಿಕೊಂಡಿದ್ದರು.

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ನಡೆದ ಕೆಲವು ರಾಜಕೀಯ ಬೆಳವಣಿಗೆಯನ್ನು ಗಮನಿಸಿ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಮಾತನಾಡಿದ್ದಾರೆ ಎನ್ನುವ ಆಡಿಯೋ  ರಾಜ್ಯ ಬಿಜೆಪಿಯ ವರ್ಚಸ್ಸಿಗೆ ದೊಡ್ಡ ಮಟ್ಟದಲ್ಲೇ ಧಕ್ಕೆ ತಂದಿತ್ತು. ರಾಜ್ಯ ಬಿಜೆಪಿಯಲ್ಲಿನ ಇಂತಹ ಕೆಲವು ಸಮಸ್ಯೆಗಳನ್ನು ಮೃದುವಾಗಿಯೇ ಬಗೆಹರಿಸಿ ಮುಖ್ಯಮಂತ್ರಿ ಬದಲಾವಣೆ ಮಾಡುವಂತಹ ಅನಿವಾರ್ಯತೆಯನ್ನೂ ತಂದೊಡ್ಡಿತು. ಈ ವಿಚಾರದಲ್ಲಿ ನಳೀನ್‌ ಕುಮಾರ್‌ ಕಟೀಲ್‌ ಮೇಲೆ ಹೈಕಮಾಂಡ್‌ಗೆ ಅಸಮಾಧಾನ ಮೂಡಿತ್ತು.  ಅಂದೇ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಆಪತ್ತು ತಂದೊಡ್ಡುತ್ತದೆ ಎಂದು ಹೇಳಲಾಗಿತ್ತು. ಆದರೇ, ಅಂತದ್ದೇನು ಆಗಿರಲಿಲ್ಲ. ಅವರ ಅವಧಿ ಪೂರ್ಣವಾದ ಬಳಿಕವೂ ಹೈಕಮಾಂಡ್‌ ಅಧ್ಯಕ್ಷ ಸ್ಥಾನಕ್ಕೆ  ಬದಲಿ ನಾಯಕನ ನೇಮಕ ಮಾಡಿರಲಿಲ್ಲ. ಹೈಕಮಾಂಡ್‌ಗೆ ರಾಜ್ಯ ಘಟಕದ ನಾಯಕನ ಸ್ಥಾನವನ್ನು ಒಬ್ಬ ವೈಬ್ರೆಂಟ್‌ ನಾಯಕನಿಗೆ ನೀಡುವ ಯೋಜನೆ ಇತ್ತು. ಮಾತ್ರವಲ್ಲದೇ, ಲಿಂಗಾಯತ ಸಮುದಾಯವನ್ನು ಬಿಟ್ಟು ಮುಂದುವರೆಯುವಂತೆಯೂ ಇರಲಿಲ್ಲ.  ಬಿ.ಎಸ್‌.ವೈ ಅಂತಹ ಸಮುದಾಯ ನಾಯಕನನ್ನು ನಿರ್ಲಕ್ಷಿಸಿ ಚುನಾವಣೆಯಲ್ಲಿ ಮುಂದುವರಿಯುವುದಕ್ಕೂ ಸಾಧ್ಯವಿಲ್ಲ ಎಂಬುವುದು ಹೈಕಮಾಂಡ್‌ಗೆ ಗೊತ್ತಿತ್ತು. ಹಿಂದೊಮ್ಮೆ ಬಿ.ಎಸ್‌.ವೈ ಪಕ್ಷ ತೊರೆದು ತಮ್ಮದೇ ಒಂದು ಪಕ್ಷವನ್ನು(ಕೆಜೆಪಿ) ಕಟ್ಟಿದ್ದು, ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲುವುದಕ್ಕೆ ಬಿ.ಎಸ್‌ವೈ ಪ್ರಮುಖ ಕಾರಣವಾಗಿದ್ದು ಬಿಜೆಪಿ ಮರೆತಿರಲಿಲ್ಲ. ಹಾಗಾಗಿ ಬಿ.ಎಸ್‌.ವೈ ಅವರನ್ನು ಸಮಾಧಾನ ಮಾಡಲೇ ಬೇಕಿತ್ತು. ಬಿ.ಎಸ್‌.ವೈ ಕರ್ನಾಟಕವನ್ನು ಬಿಟ್ಟರೇ ಕರ್ನಾಟಕದ ಆಚೆಗೆ ತಮ್ಮ ವ್ಯಕ್ತಿತ್ವವನ್ನು ಬಹಳ ದೊಡ್ಡ ಮಟ್ಟದಲ್ಲೇನೂ ಹಿಗ್ಗಿಸಿಕೊಂಡವರಲ್ಲ. ಆದರೂ, ಬಿ.ಎಸ್‌.ವೈಗೆ ಬಿಜೆಪ ಹೈಕಮಾಂಡ್‌ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ವಿವಿಧ ಚುನಾವಣೆಗಳ ಟಿಕೇಟ್‌ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವ ಸ್ಥಾನವನ್ನು ನೀಡಿ ಸಮಾಧಾನ ಪಡಿಸುವ ಯತ್ನ ಮಾಡಿತ್ತು.

ಯಡಿಯೂರಪ್ಪ ಅವರಿಗೆ ಇದು ಹೈಕಮಾಂಡ್‌ನ ಸಮಾಧಾನ ಪಡಿಸುವ ಯತ್ನ ಎನ್ನುವುದು ಗೊತ್ತೇ ಇತ್ತು. ರಾಜ್ಯದಲ್ಲಿ ಒಂದು ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಒಂದು ಅಧಿಕಾರ ಬೇಕು ಎನ್ನುವ ಕಾರಣದಿಂದ ʼಹ್ಹುʼ ಎಂದು ಒಪ್ಪಿಕೊಂಡಿದ್ದರು. ತನ್ನ ಮಗ ವಿಜಯೇಂದ್ರ ಅವರನ್ನು ಒಂದು ಸಸೂತ್ರವಾದ ದಡ ಮುಟ್ಟಿಸುವ ದೊಡ್ಡ ಜವಾಬ್ದಾರಿಯನ್ನು ಯಡಿಯೂರಪ್ಪ ಮರೆತಿರಲಿಲ್ಲ. ಮಗನಿಗಾಗಿ ತನ್ನ ವಿಧಾನಸಭಾ ಕ್ಷೇತ್ರವನ್ನೇ ಬಿಟ್ಟುಕೊಟ್ಟರು. ಶಿಕಾರಿಪುರದಲ್ಲಿ ವಿಜಯೇಂದ್ರ ಅವರಿಗೆ ಸೀಟು ನೀಡದ ಹೊರತು ಬೇರೆ ಯಾರಿಗೂ ನೀಡುವಂತಹ ಪರಿಸ್ಥಿತಿ ಪಕ್ಷದ ಮುಂದಿರಲಿಲ್ಲ. ತಾನೇ ಹೋರಾಟ ಮಾಡಿ ರಾಜ್ಯದಲ್ಲಿ ತನ್ನ ಸಮುದಾಯದ ಬೆಂಬಲದೊಂದಿಗೆ ಸೈಕಲ್‌ ಸವಾರಿ ಮಾಡಿ ಅಂದಿನ ಹೈಕಮಾಂಡ್‌ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಟ್ಟಿದ ಪಕ್ಷದ  ರಾಜ್ಯಾಧ್ಯಕ್ಷ ಸ್ಥಾನವು ತಮ್ಮ ಮಗನನ್ನು ಹೊರತಾಗಿ ಬೇರೆ ಅವರಿಗೆ ಅಷ್ಟು ಸುಲಭವಾಗಿ ದಕ್ಕಬಾರದು ಎಂಬ ಅವರ ಹಠ ಅಂತಿಮವಾಗಿ ಜಯ ಕಂಡಿದೆ. ಯಡಿಯೂರಪ್ಪ ಇರುವ ಕಾಲದವರೆಗೆ ಕರ್ನಾಟಕದಲ್ಲಿ ಮೋದಿ ಅಥವಾ ರಾಷ್ಟ್ರೀಯ ನಾಯಕರನ್ನೇ ನೆಚ್ಚಿಕೊಳ್ಳುವ ಪರಿಪಾಠ ಅಷ್ಟು ಸುಲಭವಾಗಿ ಫಲ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಪಾಠ ಹೈಕಮಾಂಡ್‌ಗೀಗ ಮನವರಿಕೆಯಾಗಿದೆ.  

ಬಿ. ಎಲ್‌. ಸಂತೋಷ್‌ ಅವರ ನೇತೃತ್ವದಲ್ಲಿ ಪಕ್ಷವು ಸಂಪೂರ್ಣವಾಗಿ ವಿಫಲವಾದ ನಂತರ, ಲೋಕಸಭಾ ಚುನಾವಣೆಗೆ ಮುನ್ನಾ ಕಳೆದುಹೋದ  ತನ್ನ ಸ್ಥಾನವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಯಡಿಯೂರಪ್ಪನವರ ಒತ್ತಡಕ್ಕೆ ಮಣಿಯದೇ ಹೈಕಮಾಂಡ್‌ಗೆ ಅನ್ಯ ಮಾರ್ಗ ಕಾಣಿಸಲಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ವೈ ಅವರನ್ನು ಕೆಳಗಿಸಿದ್ದು, ಹೈಕಮಾಂಡ್‌ಗೆ ಒಂದು ಥರದಲ್ಲಿ ʼಕೋಲು ಕೊಟ್ಟು ಪೆಟ್ಟು ತಿಂದ ಹಾಗಾಯ್ತುʼ. ಬಿ.ಎಸ್‌.ವೈ ಹೇಳಿದಕ್ಕೆಲ್ಲಾ ಅಸ್ತು ಎನ್ನದಿರಲು ಬೇರೆ ದಾರಿ ಇರಲೇ ಇಲ್ಲ.

ಕಳೆದ ವಿಧಾನಸಭಾ ಚುನಾವಣೆಯನ್ನು ಗಮನಿಸಿ, ಮೋದಿ ಹಾಗೂ ಶಾ ರಾಜ್ಯದಲ್ಲಿಯೇ ಮೊಕ್ಕಾಂ ಹೂಡಿದ್ದರೂ ಬಿಜೆಪಿ ಕಾಂಗ್ರೆಸ್‌ ಎದುರು ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಯಡಿಯೂರಪ್ಪ ಅವರನ್ನು ಹೈಕಮಾಂಡ್‌ ನಿಲಕ್ಷಿಸಿದ್ದೂ ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿತ್ತು ಎನ್ನುವುದು ತಡವಾಗಿ ಹೈಕಮಾಂಡ್‌ಗೆ ತಿಳಿಯಿತು. ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗಲೂ ತಮ್ಮ ಪ್ರಭಾವವನ್ನು ಯಡಿಯೂರಪ್ಪ ತೋರಿಸಿದ್ದರು. ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯ ಎಂದು ಪರಿಗಣಿಸಲ್ಪಡುವ ಲಿಂಗಾಯತ ಸಮುದಾಯದಿಂದ ಹೈಕಮಾಂಡ್‌ಗೆ ʼಬೆದರಿಕೆʼ ಹಾಕಿಸಿದರು.  ಮಾತ್ರವಲ್ಲದೇ, ತನ್ನ ಮಗನಿಗೆ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ  ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ನೀಡದಿದ್ದರೇ ಪರಿಣಾಮ ಪ್ರತಿಕೂಲವಾಗಿರುವುದಿಲ್ಲ ಎಂದು ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿ ಬಿಜೆಪಿಗೆ ರಾಜೀನಾಮೆ ನೀಡಿದ್ದು, ʼಬಿಜೆಪಿ ಲಿಂಗಾಯತ ವಿರೋಧಿʼ ಎಂಬ ಆರೋಪಕ್ಕೆ ಇನ್ನಷ್ಟು ಬಲ ಬಂತು. ಲೋಕಸಭೆಗೂ ಮುನ್ನಾ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರು ಪಕ್ಷಾಂತರವಾಗಲಿದ್ದಾರೆ, ಅದರಲ್ಲೂ ಹೆಚ್ಚಿನವರು ಯಡಿಯೂರಪ್ಪ ಬಣದವರೇ ಇದ್ದಾರೆ ಎಂಬ ಮಾಹಿತಿ ಹೈಕಮಾಂಡ್‌ಗೆ ದೊರಕಿರುವುದೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ನೇಮಕ ಮಾಡುವಲ್ಲಿ ಪ್ರಧಾನ ಕಾರ್ಯ ಮಾಡಿದೆ ಎಂಬ ರಾಜಕೀಯ ಚರ್ಚೆ ಎದ್ದಿದೆ.

ವಿಜಯೇಂದ್ರ ಮೊದಲಿನಿಂದಲೂ ಅಪ್ಪನ ಹೆಸರಿನಲ್ಲಿ ರಾಜಕಾರಣ ಮಾಡಿದವರು. ಮಾಧ್ಯಮಗಳ ವರದಿಗಾರರನ್ನು ತಾನು ಹೋದಲ್ಲೆಲ್ಲಾ ತನ್ನ ಹಿಂದೆ ಇರಿಸಿಕೊಂಡು ಪ್ರಚಾರ ಬಯಸಿ ರಾಜಕಾರಣಕ್ಕೆ ಇಳಿದವರು. ಯಡಿಯೂರಪ್ಪ ಸಿಎಂ ಆಗಿದ್ದಾಗ ʼಶೇಡ್‌ ಸಿಎಂʼ ಅಥವಾ ʼಸೂಪರ್‌ ಸಿಎಂʼ ಆಗಿ ವಿಜಯೇಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಹಣೆಪಟ್ಟಿಯನ್ನೂ ಪಡೆದವರು. ಅಧಿಕಾರದ ಆಸೆಗೆ ಬಿದ್ದವರು. ಹೈಕಮಾಂಡ್ ಲಿಂಗಾಯತ ಸಮುದಾಯವನ್ನು ಉಳಿಸಿಕೊಳ್ಳುವುದಕ್ಕೆ ವಿಜಯೇಂದ್ರ ಅವರಿಗೆ ಮಣೆ ಹಾಕಿದೆ.  

ಇನ್ನು, ದಕ್ಷಿಣ ಭಾರತದಲ್ಲಿ ಒಂದಾದರೂ ರಾಜ್ಯದಲ್ಲಿ  ಅಧಿಕಾರ ಹಿಡಿಯಬೇಕು ಎಂಬ  ಬಿಜೆಪಿಯ ಆಸೆ ಭಗ್ನಗೊಂಡಿದೆ. ೨೦೨೩ರ  ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿದ ಮೇಲೆ ನಾಯಕತ್ವ ತಯಾರಿ ಮಾಡಿಕೊಳ್ಳಬಹುದು ಎಂಬ ಲೆಕ್ಕಚಾರದಲ್ಲಿದ್ದ ಬಿಜೆಪಿಗೆ ನಿರಾಸೆಯಾಯಿತು. ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೂ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ನೂತನ ಸಾರಥ್ಯ ಸಿಕ್ಕಿದೆ. ರಾಜಕೀಯವಾಗಿ, ಪಕ್ಷ ಸಂಘಟನೆಯಲ್ಲಿ ಅಷ್ಟು ಅನುಭವ ವಿಜಯೇಂದ್ರಗೆ ಇಲ್ಲ. ಸೀಮಿತ ಗೆರೆಯ ಆಚೆಗೆ ವಿಜಯೇಂದ್ರ ಇನ್ನೂ ಹೆಚ್ಚಾಗಿ ಗುರುತಿಸಿಕೊಳ್ಳುವ ತುರ್ತಿದೆ. ಅಸಮಾಧಾನದಿಂದಿರುವ ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಕಾರ್ಯಕರ್ತರನ್ನು ಒಲಿಸಿಕೊಳ್ಳುವ ಅಗತ್ಯವಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೇ ವಿಜಯೇಂದ್ರ ಅವರಿಗಿರುವ ʼಇನ್ಫ್ಲವೆನ್ಸ್‌ʼ ಪಟ್ಟವನ್ನು ಕಳೆದುಕೊಳ್ಳಬಹುದು. ʼನಾಯಕತ್ವʼದ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಜಾಸ್ತಿಯೇ ಇದೆ. ವಿಜಯೇಂದ್ರ ಅಸಮಾಧಾನದ ಹೊಗೆ ಹೋಗಲಾಡಿಸುವ ಕೆಲಸ ಮಾಡದಿದ್ದರೇ ಅವರಿಗೂ ನಷ್ಟ, ಪಕ್ಷಕ್ಕೂ ನಷ್ಟ.

-ಶ್ರೀರಾಜ್‌ ವಕ್ವಾಡಿ    

Wednesday, November 15, 2023

ಬಿಹಾರ ಜಾತಿ ಗಣತಿ ರಾಷ್ಟ್ರ ಮಟ್ಟದ ಚರ್ಚೆಯನ್ನೆಬ್ಬಿಸಿದ್ದೇಕೆ ?

 

ಚುನಾವಣಾ ನಿರ್ಣಾಯಕ ಸಮುದಾಯವೆಂದು ಪರಿಗಣಿಸುವ ಲೆಕ್ಕಚಾರವನ್ನೇ ಬದಲಾಯಿಸಿದ ಕರ್ನಾಟಕ ಜಾತಿ ಗಣತಿ

ಜಾತಿ ಸಮೀಕ್ಷೆಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದದ ಮಧ್ಯೆ ಬಿಹಾರದಲ್ಲಿ ಜಾತಿ ಗಣತಿಯನ್ನು ಅಲ್ಲಿನ ಸರ್ಕಾರ ಪ್ರಕಟ ಮಾಡಿದೆ. ಬಿಹಾರದ 215 ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳ ಆರ್ಥಿಕ ಪರಿಸ್ಥಿತಿಯನ್ನು ವಿವರಿಸುವ ಸಂಪೂರ್ಣ ವರದಿ ಹಾಗೂ ಬಿಹಾರ ಸರ್ಕಾರದ ಜಾತಿ ಆಧಾರಿತ ಗಣತಿಯನ್ನು ಬಹಿರಂಗಗೊಳಿಸಿದೆ. ಸಾಮಾನ್ಯ ವರ್ಗದ ಶೇ. 25ರಷ್ಟು ಕುಟುಂಬಗಳು ಕೂಡ ಬಡತನದಿಂದ ಬಳಲುತ್ತಿವೆ ಎಂದು ಜಾತಿ ಗಣತಿ ವರದಿ ಹೇಳಿರುವುದು ಈಗ ರಾಷ್ಟ್ರ ರಾಜಕಾರಣದಲ್ಲಿರುವ ಚರ್ಚೆ.  

ಸ್ವಾತಂತ್ರ್ಯ ನಂತರ ಸರ್ಕಾರಗಳು ಬಿಹಾರವನ್ನು ಒಂದು ಹಂತದಲ್ಲಿ ಉದ್ದೇಶಪೂರ್ವಕವಾಗಿಯೇ ಬಿಹಾರವನ್ನು ಹಿಂದಕ್ಕೆ ಹಾಕಿಬಿಟ್ಟರು. ಅದಕ್ಕೂ ಬಲವಾದ ಕಾರಣವಿದೆ. ಬಿಹಾರ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ಜಾತಿ ಸಮೀಕ್ಷೆಯ ವಿವರವಾದ ವರದಿಯ ಪ್ರಕಾರ, ಬಿಹಾರದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಶೇ. 34ರಷ್ಟು ಕುಟುಂಬಗಳು ಬಡತನದಲ್ಲಿವೆ, ತಿಂಗಳಿಗೆ 6,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯದಲ್ಲಿ ಜೀವನ ಸಾಗಿಸುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.42 ಕುಟುಂಬಗಳು ಬಡತನದಲ್ಲಿವೆ. ವರದಿಯು ಮೇಲ್ಜಾತಿಗಳಲ್ಲಿಯೂ ಗಣನೀಯ ಬಡತನದ ಮಟ್ಟ ಇರುವುದನ್ನು ತೋರಿಸುತ್ತದೆ. ಶೇ. 25ಕ್ಕಿಂತ ಹೆಚ್ಚು ಮೇಲ್ಜಾತಿಯವರೂ ಬಡತನ ರೇಖೆಯಲ್ಲಿ ಇದ್ದಾರೆ. ಬಿಹಾರದ ಅತಿ ದೊಡ್ಡ ಭೂಮಾಲೀಕ ಜಾತಿಯೆಂದು ಹೇಳಲಾಗುವ ಭೂಮಿಹಾರ್‌ ಜಾತಿಯಲ್ಲಿ (ಶೇ. 27.58)ಬಡತನದ ಪ್ರಮಾಣವು ಆಶ್ಚರ್ಯಕರವೆಂಬಂತೆ ಹೆಚ್ಚಿದೆ.

1990ರಲ್ಲಿ, ಬಿಹಾರವು ದೇಶದಲ್ಲೇ ಅತ್ಯಂತ ಕಡಿಮೆ ಸಾಕ್ಷರತೆ ಪ್ರಮಾಣವನ್ನು ಹೊಂದಿರುವ ಬಡ ಮತ್ತು ಅತ್ಯಂತ ಹಿಂದುಳಿದ ರಾಜ್ಯ ಎಂದು ಗುರುತಿಸಿಕೊಂಡಿತ್ತು. 2023ಸಂದರ್ಭದಲ್ಲಿಯೂ ಇದೇ ಸ್ಥಿತಿಯನ್ನು ಬಿಹಾರ ಕಾಯ್ದುಕೊಂಡಿದೆ. ಈ ವರ್ಷದ ನೀತಿ ಆಯೋಗಬಹು ಆಯಾಮದ ಬಡತನ ಸೂಚ್ಯಂಕದ (ಮಲ್ಟಿಡೈಮೆನ್ಶನಲ್‌ ಪೋವರ್ಟಿ ಇಂಡೆಕ್ಸ್‌) ವರದಿಯಲ್ಲಿ, ಬಿಹಾರವು ಬಡತನ ರೇಖೆಯಲ್ಲಿಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ.

"ಜಮೀನ್ದಾರಿ ವ್ಯವಸ್ಥೆ ಮತ್ತು ಹಣಕಾಸಿನ ಸಮಾನತೆಯಂತಹ ಐತಿಹಾಸಿಕ ಪರಂಪರೆಗಳು ಬಿಹಾರದ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರಿವೆ ಮತ್ತು ಬಿಹಾರದಲ್ಲಿ ಅಭಿವೃದ್ಧಿಯಾಗದಿರುವಿಕೆಗೆ ಕಾರಣವಾಗಿದೆ. ಕಡಿಮೆ ಮಾನವ ಬಂಡವಾಳ ಮತ್ತು ಶಿಕ್ಷಣ ಮತ್ತು ಆರೋಗ್ಯದ ಕೊರತೆಯು ಕಡಿಮೆ ಆದಾಯಕ್ಕೆ ಕಾರಣವಾಗಿದೆ. 1990ರ ದಶಕದಲ್ಲಿ ಆರ್ಥಿಕ ಉದಾರೀಕರಣದ ಪ್ರಯೋಜನಗಳು ಪ್ರಾಥಮಿಕವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ" ಎಂದು ಪಾಟ್ನಾದ ಏಷ್ಯನ್ ಡೆವಲಪ್‌ಮೆಂಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಕಾರ್ಯದರ್ಶಿ ಅಶ್ಮಿತಾ ಗುಪ್ತಾ ಹೇಳುತ್ತಾರೆ. "ಹೀಗಾಗಿಯೇ, ಬಿಹಾರವು ಕಡಿಮೆ ಬೆಳವಣಿಗೆ ಮತ್ತು ಹೆಚ್ಚಿನ ಬಡತನದಲ್ಲಿ ಸಿಲುಕಿರುವ ಭಾರತದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿದೆ. ಯಾವುದೇ ಹೊಸ ಮಾಹಿತಿ ಇಲ್ಲ (ಸಮೀಕ್ಷೆಯಲ್ಲಿ) ಯಾವುದೇ ರಾಜ್ಯಗಳ ಶ್ರೇಯಾಂಕವು ಬಿಹಾರವು ಅತ್ಯಂತ ಕೆಳಮಟ್ಟದಲ್ಲಿದೆ," ಎಂದು ಅವರು ಪ್ರತಿಪಾದಿಸುತ್ತಾರೆ.

ಸಮೀಕ್ಷೆಯು ಬಿಹಾರದ ಆರ್ಥಿಕತೆಯು ಒಂದು ದಶಕದಿಂದ ಸರಾಸರಿ 10 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಸ್ಥಿರವಾಗಿ ಬೆಳೆಯುತ್ತಿದೆ ಎಂದು ಸೂಚಿಸುತ್ತದೆ, ಆದರೆ ಅಲ್ಲಿನ ನಾಗರಿಕರು ಬಡತನದಲ್ಲಿ ಮುಳುಗಿದ್ದಾರೆ. ಹಾಗಾದರೆ ಎಲ್ಲ ಬೆಳವಣಿಗೆ ಮತ್ತು ಆರ್ಥಿಕ ಸಮೃದ್ಧಿ ಎಲ್ಲಿ ಹೋಯಿತು? ಸಮೀಕ್ಷೆಯ ಮತ್ತೊಂದು ಪ್ರಮುಖ ಅಂಶವೆಂದರೆ ಬಿಹಾರದಿಂದ 50ಲಕ್ಷಕ್ಕೂ ಹೆಚ್ಚು ಜನರು ಜೀವನೋಪಾಯಕ್ಕಾಗಿ ಅಥವಾ ಉತ್ತಮ ಶಿಕ್ಷಣದ ಅವಕಾಶಗಳಿಗಾಗಿ ಪರ ರಾಜ್ಯಗಳಿಗೆ ವಲಸೆ ಹೋಗಿ ಇರುತ್ತಾರೆ. ಬಿಹಾರದಲ್ಲಿ ಕೃಷಿಯೇತರ ಉದ್ಯೋಗಾವಕಾಶಗಳ ಕೊರತೆಯು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ಇತರ ರಾಜ್ಯಗಳಲ್ಲಿ ಅಲ್ಪಾವಧಿ, ಸಾಂದರ್ಭಿಕ ಮತ್ತು ಅನಿಶ್ಚಿತ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಪರ ರಾಜ್ಯಗಳಿಗೆ ವಲಸೆ ಹೋಗಿ ವಾಸವಿರುವ ಬಿಹಾರ ಅಸುರಕ್ಷಿತ ಪರಿಸ್ಥಿತಿಗಳಲ್ಲಿ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.  

ಬಹಳ ಪ್ರಮುಖಾಂಶವೇನೆಂದರೇ, ಜಾತಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಕೇವಲ 22.67 ಪ್ರತಿಶತದಷ್ಟು ಜನರು 5ನೇ ತರಗತಿಯವರೆಗಷ್ಟೆ ಶಿಕ್ಷಣ ಪಡೆದಿದ್ದಾರೆ. ಶೇ. 5.76 ರಷ್ಟು ಪರಿಶಿಷ್ಟ ಜಾತಿಯವರು ಮಾತ್ರ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯವೂ ಸಹ ಬಿಹಾರವು ಭಾರತದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಪ್ರಮಾಣವನ್ನು ಹೊಂದಿದೆ ಎಂದು ಎತ್ತಿ ತೋರಿಸಿದೆ. ( 61.8 ಶೇಕಡಾ) 2023 ರಲ್ಲಿ ಲೋಕಸಭೆಯಲ್ಲಿ ಹಂಚಿಕೊಂಡ ಡೇಟಾದ ಪ್ರಕಾರ ಕೇವಲ ಶೇ. 61.8 ಜನರು ಮಾತ್ರ ಸಾಕ್ಷರತೆಯನ್ನು ಹೊಂದಿದ್ದಾರೆ.

ಇನ್ನು, ಬಿಹಾರದ ಶಿಕ್ಷಣವು ಹದಗೆಟ್ಟಿದೆ. ಕಳೆದ 30 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣ ಹದಗೆಟ್ಟಿದೆ. ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಕರ ನೇಮಕಾತಿ, ಪ್ರತಿಭೆ ಮತ್ತು ಗುಣಮಟ್ಟಕ್ಕೆ ಧಕ್ಕೆ ತರುವ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳಲ್ಲಿ ನಕಲಿ ಪದವಿ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸುತ್ತಿವೆ. ಬಿಹಾರದ ಆರ್ಥಿಕ ಸಮೀಕ್ಷೆಯ ಇತ್ತೀಚಿನ ವರದಿಯ ಪ್ರಕಾರ, ಶಿಕ್ಷಣದ ಎಲ್ಲಾ ಹಂತಗಳನ್ನು ವ್ಯಾಪಿಸಿರುವ ಈ ಮೇಲಿನ ಪ್ರಮುಖ ಸಮಸ್ಯೆಗಳೇ ಮುಖ್ಯ ಕಾರಣವಾಗಿವೆ ಎಂದು ಹೇಳಲಾಗಿದೆ.

ರಾಜಕೀಯ ಚರ್ಚೆ :

ಬಿಹಾರ ರಾಜಕೀಯದಲ್ಲಿ ಒಬಿಸಿ ಸಮುದಾಯದವೇ ಪ್ರಧಾನ ಪಾತ್ರ ವಹಿಸುತ್ತಾರೆ. ಹೀಗಾಗಿ ಮುಖ್ಯಮಂತ್ರಿ ನಿತೀಶ್‌, ಈ ವಿಚಾರದಲ್ಲಿ ಅತ್ಯಂತ ನಾಜೂಕಾಗಿ, ಸೂಕ್ಷ್ಮ ದಾಳ ಉರುಳಿಸಿದ್ದಾರೆ. 2025ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಇದು ಪ್ರಧಾನವಾಗಿ ಪರಿಣಮಿಸುತ್ತದೆ ಎಂಬ ದೃಷ್ಟಿಯಲ್ಲಿ ರಾಜಕೀಯ ಮಹತ್ವ ಕೊಟ್ಟು ಸಮೀಕ್ಷೆ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.  ಮಾತ್ರವಲ್ಲದೇ, ಬಿಹಾರದಲ್ಲಿ ಒಬಿಸಿ ಜನಸಂಖ್ಯೆ ಹೆಚ್ಚಾಗಿರಬಹುದು. ಆದರೆ, ಈ ಸಮೀಕ್ಷೆಯಲ್ಲಿ ಹಲವು ಸಮುದಾಯಗಳ ಆರ್ಥಿಕ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತಾ ಹೇಳಿದೆ. ಹೀಗಾಗಿ, ಕೇವಲ ಜಾತಿಯ ಪ್ರಾಬಲ್ಯತೆ ಆಧಾರದ ಮೇಲೆ ಮೀಸಲಾತಿ ಕೊಡಬೇಕೇ? ಅಥವಾ ಆಯಾ ಸಮುದಾಯಗಳ ಆರ್ಥಿಕ ಸ್ಥಿತಿಗತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕೇ ಎನ್ನುವ ಪ್ರಶ್ನೆ ಮೇಲೆದ್ದಿದೆ.

ಬಿಹಾರ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಒಬಿಸಿ ಸಮುದಾಯವೇ ಬಹುಸಂಖ್ಯಾತರು ಎನ್ನುವ ಮಹತ್ವದ ಮಾಹಿತಿ ಹೊರಬಿದ್ದಿದ್ದೇ ದೇಶಾದ್ಯಂತ ಜಾತಿ ಗಣತಿ ಮಾಡಬೇಕೇ? ಬೇಡವೇ ಎಂಬ ಚರ್ಚೆಗಳೂ ಶುರುವಾಗಿವೆ. ಜೊತೆಯಲ್ಲಿಯೇ ಜಾತಿ ಗಣತಿ ಮಾಡುವುದರಿಂದ ಲಾಭ ನಷ್ಟವೇನು ? ಎಂಬ ಪ್ರಶ್ನೆಯೂ ಇದೆ. ಇನ್ನು ಕರ್ನಾಟಕದಲ್ಲಿ ಈಗಾಗಲೇ ಮಾಡಲಾಗಿದ್ದ ಜಾತಿ ಗಣತಿ ವರದಿಯನ್ನು ಇನ್ನೂ ಏಕೆ ಬಿಡುಗಡೆ ಮಾಡಿಲ್ಲ ಎಂಬ ಆಗ್ರಹವೂ ಕೇಳಿ ಬಂದಿದೆ.

ಕರ್ನಾಟಕದ ಜಾತಿಗಣತಿ ಏನ್‌ ವಿಷ್ಯ ? :

ಆ ಲೆಕ್ಕದಲ್ಲಿ ನೋಡುವುದಾದರೇ, ಕರ್ನಾಟಕದಲ್ಲಿ ಬಿಹಾರಕ್ಕೂ ಮೊದಲೇ ಜಾತಿ ಗಣತಿ ನಡೆದಿತ್ತು. ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ,  2015ರಲ್ಲಿ ಜಾತಿ ಗಣತಿಯನ್ನು ಮಾಡಿಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಗಣತಿ ನಡೆಸಿತ್ತು. ಆದರೇ, ಆಯೋಗ ತನ್ನ ವರದಿಯನ್ನ ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಿಲ್ಲ.

ರಾಜಕೀಯ ಮೂಲಗಳ ಪ್ರಕಾರ, ಈ ವರದಿಯನ್ನು ರಾಜಕೀಯ ಕಾರಣಕ್ಕಾಗಿ ಗೌಪ್ಯವಾಗಿರಿಸಲಾಗಿದೆ ಎನ್ನುವ ಆರೋಪಗಳಿವೆ. ಚುನಾವಣೆಯ ಸಂದರ್ಭದಲ್ಲಿ ಈ ಜಾತಿ ಗಣತಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಯತ್ನ ಮಾಡುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ ಎಂಬ ಊಹಾಪೋಹಗಳಿವೆ. 2016ರಲ್ಲಿಯೇ ಕರ್ನಾಟಕದ ಜಾತಿ ಗಣತಿ ವರದಿ ಮಾಧ್ಯಮಗಳಿಗೆ ಸೋರಿಕೆ ಆಗಿತ್ತು. ಈ ಪ್ರಕಾರ ರಾಜ್ಯದಲ್ಲಿ ಯಾವ ಸಮುದಾಯವನ್ನು ಈವರೆಗೆ ಬಹುಸಂಖ್ಯಾತರು ಎಂದು ಪರಿಗಣಿಸಲಾಗಿತ್ತೋ ಆ ಸಮುದಾಯ ಬಹುಸಂಖ್ಯಾತರಲ್ಲ ಎನ್ನುವ ಮಾಹಿತಿ ಹೊರಬಿದ್ದಿತ್ತು ಎನ್ನಲಾಗಿತ್ತು. ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದವರನ್ನು ನಿರ್ಣಾಯಕ ಸಮುದಾಯ ಎಂದು ಪರಿಗಣಿಸುವ ಒಂದು ರಾಜಕೀಯ ಲೆಕ್ಕಾಚಾರವಿದೆ. ಆ ಲೆಕ್ಕಾಚಾರವನ್ನೇ ಈ ಕರ್ನಾಟಕದ ಜಾತಿಗಣತಿ ತಲೆ ಕೆಳಗಾಗಿಸಿತ್ತು. ಅಹಿಂದ ಸಮುದಾಯದ ಬಲ ರಾಜ್ಯದಲ್ಲಿ ಹೆಚ್ಚಾಗಿದೆ ಎನ್ನುವ ವಿಚಾರವನ್ನು ಅಂದು ಕಾಂಗ್ರೆಸ್‌ ಸರ್ಕಾರ ರಾಜಕೀಯಕ್ಕೆ ಪರೋಕ್ಷವಾಗಿ ಬಳಸಿಕೊಳ್ಳುವ ಯತ್ನವನ್ನೂ ಮಾಡಿತ್ತು. ಇದೇ ಕಾರಣಕ್ಕೆ ಬಲಾಢ್ಯ ಸಮುದಾಯಗಳು ಜಾತಿ ಗಣತಿ ವರದಿ ಬಿಡುಗಡೆಗೆ ಅಡ್ಡಗಾಲು ಹಾಕಿವೆ ಎನ್ನುವ ಆರೋಪಲೂ ರಾಜಕೀಯ ಕ್ಷೇತ್ರದಲ್ಲಿವೆ.

ಕರ್ನಾಟಕದ ಜಾತಿ ಗಣತಿ  :

2015 ರಲ್ಲಿ 162 ಕೋಟಿ ವೆಚ್ಚದಲ್ಲಿ ಸುದೀರ್ಘವಾದ ಜಾತಿ ಸಮೀಕ್ಷೆ ಮಾಡಲು ಯೋಜಿಸಲಾಗಿತ್ತು. ಇದು 1931 ರಿಂದ ಯಾವುದೇ ಭಾರತೀಯ ರಾಜ್ಯವು ಈ ರೀತಿಯ ಮೊದಲ ಪ್ರಯತ್ನವೆಮದು ಹೇಳಲಾಗಿತ್ತು. ಕರ್ನಾಟಕದಲ್ಲಿ 16 ಮಿಲಿಯನ್ ಮನೆಗಳ ಸಮೀಕ್ಷೆಯ ಬೃಹತ್ ಕಾರ್ಯ ಆದೇಶ 2014 ರಲ್ಲಿ ಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಂಡಿತು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಎಲ್‌ಇ) ಗೆ ಈ ಸಂಗ್ರಹಿಸಿದ ಅಂಕಿಅಂಶವನ್ನು ಡಿಜಿಟಲೀಕರಣ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

2018ರಲ್ಲಿ ಸಮೀಕ್ಷೆಯ ಕೆಲವು ಸಂಶೋಧನೆಗಳು ಸೋರಿಕೆಯಾದವು. ಆ ಪ್ರಕಾರ ಪರಿಶಿಷ್ಟ ಜಾತಿಗಳು ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 19.5 ರಷ್ಟಿದ್ದು, ಅವರನ್ನು ಅತಿ ದೊಡ್ಡ ಸಮುದಾಯವೆಂದು ಹೇಳಲಾಗಿತ್ತು. ಮುಸ್ಲಿಮರು ನಂತರದ ಸ್ಥಾನದಲ್ಲಿದ್ದು, ಜನಸಂಖ್ಯೆಯ ಶೇ. 16 ರಷ್ಟಿದ್ದಾರೆ, ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ ಶೇ. 14 ಮತ್ತು ಶೇ. 11ರಷ್ಟು ಜನಸಂಖ್ಯೆ ಹೊಂದಿದ್ದಾರೆ ಎಂದು ತಿಳಿದು ಬಂದಿತ್ತು.

ಇತರೆ ಹಿಂದುಳಿದ ವರ್ಗಗಳಲ್ಲಿ (ಒಬಿಸಿ), ಕುರುಬ ಸಮುದಾಯ ಮಾತ್ರ ರಾಜ್ಯದ ಜನಸಂಖ್ಯೆಯ ಶೇ. 7 ರಷ್ಟಿದೆ. ಒಟ್ಟಾರೆಯಾಗಿ, ಒಬಿಸಿಗಳು ಕರ್ನಾಟಕದ ಜನಸಂಖ್ಯೆಯ ಶೇ. 20 ರಷ್ಟಿದ್ದಾರೆ. ಎಸ್‌ಸಿಗಳು, ಎಸ್‌ಟಿಗಳು, ಮುಸ್ಲಿಮರು ಮತ್ತು ಕುರುಬರನ್ನು ಒಟ್ಟಾಗಿ ಪರಿಗಣಿಸಿದಾಗ ಅವರ ಒಟ್ಟು ಜನಸಂಖ್ಯೆಯ ಶೇ. 47.5 ರಷ್ಟಿದ್ದಾರೆ ಎಂದು ಹೇಳಲಾಗಿತ್ತು.

ಒಟ್ಟಿನಲ್ಲಿ, ಬಿಜೆಪಿಯು ಜಾತಿ ಗಣತಿಗೆ ವಿರೋಧವನ್ನು ವ್ಯಕ್ತಪಡಿಸಿದೆ, 2024 ರ ಚುನಾವಣೆಗೆ ಮುನ್ನಡೆಯುವ ಅವರ ಹಿಂದುತ್ವ ಪ್ರಚಾರಕ್ಕೆ ಇದೊಂದು ಸವಾಲಾಗಿ ಪರಿಣಮಿಸಬಹುದು ಎಂಬ ಕಳವಳದಿಂದಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಜಾತ್ಯಾತೀತ ಭಾರತ ಎಂದು ಹೇಳುತ್ತಿದ್ದ ಎಡ ಪಕ್ಷಗಳೇ ಈಗ ಜಾತಿ ಗಣತಿಗೆ ಪಟ್ಟು ಬಿದ್ದಿರುವುದು ವಿಪರ್ಯಾಸ.

-ಶ್ರೀರಾಜ್‌ ವಕ್ವಾಡಿ

Thursday, November 9, 2023

ದೇಶದ ಪ್ರಗತಿ 70 ಗಂಟೆಗಳ ಕೆಲಸದಲ್ಲಿಲ್ಲ…

 

ಅವಧಿಯೆ ಮುಖ್ಯವಾದರೇ, ಅವಧಿಗೆ ಸರಿಯಾದ ಸಂಬಳವೂ ಮುಖ್ಯ !

ಯುವಕರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂಬ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಈಗ ಸಾಮಾಜಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆಗೆ ಹೋಲಿಸಿದರೇ, ದೇಶದ ಉತ್ಪಾದಕತೆ ಪ್ರಮಾಣ ಕಡಿಮೆ ಇದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ದೇಶದ ಯುವಕರು ಪ್ರತಿವಾರ   70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಮೂರ್ತಿ ಅವರ ಹೇಳಿಕೆಗೆ ಬೆಂಬಲ ಮತ್ತು ಟೀಕೆಗಳು ವ್ಯಕ್ತವಾಗಿವೆ. ಈ ಬೆಂಬಲ ಮತ್ತು ಟೀಕೆಗಳು ವ್ಯಕ್ತವಾಗಿರುವುದು ನಾರಾಯಣ ಮೂರ್ತಿ ಹೇಳಿರುವ ಕಾರಣಕ್ಕೆ ವ್ಯಕ್ತವಾಗಿದೆಯೇ ಅಥವಾ ಬೇರೆಯ ಕಾರಣಕ್ಕೇ ಎನ್ನುವ ಚರ್ಚೆ ಅಥವಾ ವಾದ ಇಲ್ಲಿ ಅಗತ್ಯವಿಲ್ಲ. ಆದರೇ, ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಸುವುದಕ್ಕೆ ಬೇಕಾಗಿ ಇಲ್ಲಿನ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆ ? ಅಥವಾ ಅದಕ್ಕೆ ಸರ್ಕಾರದಿಂದ ಏನನ್ನು ಮಾಡುವುದಕ್ಕೂ ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿ ಎಂಬಂತೆ ಮೂಡುತ್ತದೆ. ಭಾರತವನ್ನು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಕರೆಯಲಾಗುತ್ತಿದೆ. ಈವರೆಗೆ ದೇಶವನ್ನು ಆಳಿದ ಯಾವುದೇ ಸರ್ಕಾರಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಭಾರತವನ್ನು ಸೇರಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ವಿಷಾದನೀಯ. ಈಗ ಮೂರ್ತಿ ಅವರು ಹೇಳಿದಂತೆ ಇಲ್ಲಿನ ಯುವ ಜನಾಂಗ ದುಡಿಮೆಯ ಅವಧಿಯನ್ನು ಹೆಚ್ಚಿಸಿದರೇ ಇದ್ದಕ್ಕಿದ್ಧಂತೆ ದೇಶ ಆರ್ಥಿಕ ಅಭಿವೃದ್ಧಿ ಹೊಂದಿದ ದೇಶ ಎಂದು ಬದಲಾಗುತ್ತದೆಯೇ ?

ಚೀನಾದಂತಹ ದೇಶಗಳೊಂದಿಗೆ ಅಭಿವೃದ್ಧಿ ಹಾಗೂ ಆರ್ಥಿಕತೆಯೊಂದಿಗೆ ಸ್ಪರ್ಧಿಸಲು, ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಮಾಡಿದಂತೆ ದೇಶದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಮೂರ್ತಿ ಹೇಳಿದ್ದರು. ಕೆಲಸ ಮಾತ್ರವಲ್ಲ ವೈಯಕ್ತಿಕ ಜೀವನ ಸಮತೋಲನದ ಪ್ರಾಮುಖ್ಯತೆಯ ಬಗ್ಗೆ ಜನರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆಗಳು ಬಂದವು. ಮೂರ್ತಿಯವರ ಕಲ್ಪನೆಯನ್ನು ಜೆ ಎಸ್‌ ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಓಲಾ ಸಿಇಒ ಭವಿಶ್ ಅಗರ್‌ ವಾಲ್‌ ರಂತಹ ಪ್ರಮುಖ ವ್ಯಕ್ತಿಗಳು ಬೆಂಬಲಿಸಿದರು. ಮಾರಿಕೊ ಗ್ರೂಪ್‌ ನ ಅಧ್ಯಕ್ಷ ಹರ್ಷ್ ಮಾರಿವಾಲಾ, "ಇದು ಗಡಿಯಾರದ ಗಂಟೆಗಳ ಬಗ್ಗೆ ಅಲ್ಲ. ಅದು ಆ ಗಂಟೆಗಳಿಗೆ ಒಬ್ಬರು ತರುವ ಗುಣಮಟ್ಟದ ಕೆಲಸಗಳ ಮೇಲೆ ಇದನ್ನು ಪರಿಗಣಿಸಬೇಕಾಗುತ್ತದೆ ಎಂದರು. 

ಭಾರತವು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ಎಸ್‌ ಅಂಡ್‌ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ ನ ಇತ್ತೀಚಿನ ಒಂದು ಕಮೆಂಟ್‌ ನ ಪ್ರಕಾರ 2030 ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಮೀರಿಸಲಿದೆ ಎಂದು ಹೇಳಿದೆ. ಪ್ರಸ್ತುತ, ಅಂದರೇ 2023-24ರ ಭಾರತವು ತನ್ನ ಆರ್ಥಿಕತೆಯಲ್ಲಿ 3.7 ಟ್ರಿಲಿಯನ್‌ ನೊಂದಿಗೆ ಐದನೇ ಸ್ಥಾನದಲ್ಲಿದೆ. "3.5 ಟ್ರಿಲಿಯನ್‌ ಇದ್ದ 2022 ರ ಜಿಡಿಪಿ ಮೌಲ್ಯ, 2030 ರ ವೇಳೆಗೆ 7.3 ಟ್ರಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಆರ್ಥಿಕ ವಿಸ್ತರಣೆಯ ಈ ಕ್ಷಿಪ್ರ ಗತಿಯು 2030ರ ವೇಳೆಗೆ ಜಪಾನಿನ ಜಿಡಿಪಿಯನ್ನು ಭಾರತ  ಮೀರುತ್ತದೆ ಎಂದು ಹೇಳಲಾಗಿದೆ. ಎಸ್‌ ಅಂಡ್‌ ಪಿ ವರದಿ ಹೇಳುವ ಪ್ರಕಾರ, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಇದು ಭಾರತವನ್ನು ಎರಡನೇ ಅತಿದೊಡ್ಡ ಆರ್ಥಿಕತೆ ಪ್ರಗತಿ ಹೊಂದಿದ ದೇಶವನ್ನಾಗಿ ಮಾಡುತ್ತದೆ ಎಂಬ ಒಂದು ಲೆಕ್ಕಚಾರವಿದೆ. 

ಯುನೈಟೆಡ್‌ ಸ್ಟೇಟ್ ಪ್ರಸ್ತುತ 25.5 ಟ್ರಿಲಿಯನ್ ಜಿಡಿಪಿ ದರದೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿದೆ. ಇದು ವಿಶ್ವದ ಜಿಡಿಪಿಯ ಕಾಲು ಭಾಗ. ಚೀನಾವು ಸುಮಾರು 18 ಟ್ರಿಲಿಯನ್ ಜಿಡಿಪಿಯೊಂದಿಗೆ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ. ಇದು ವಿಶ್ವದ ಜಿಡಿಪಿಯ ಸುಮಾರು 17.9 ಪ್ರತಿಶತವಾಗಿದೆ. 4.2 ಟ್ರಿಲಿಯನ್ ಜಿಡಿಪಿಯೊಂದಿಗೆ ಜಪಾನ್ ಮೂರನೇ ಸ್ಥಾನದಲ್ಲಿದೆ, 4 ಟ್ರಿಲಿಯನ್ ಜಿಡಿಪಿಯೊಂದಿಗೆ ಜರ್ಮನಿ ನಂತರದ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2023-24ರ ಆರ್ಥಿಕ ವರ್ಷದಲ್ಲಿ ಭಾರತವು 5.9 ಪ್ರತಿಶತದಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ, ಜಾಗತಿಕ ಆರ್ಥಿಕ ಬೆಳವಣಿಗೆಯು ಶೇಕಡಾ 2.8ರ ವಿರುದ್ಧ ಮತ್ತು ಮುಂದಿನ ಐದು ವರ್ಷಗಳಲ್ಲಿ ಸರಾಸರಿ ಶೇಕಡಾ 6.1 ರ ದರವನ್ನು ನಿರೀಕ್ಷಿಸಲಾಗಿದೆ.

ಈ ಮೇಲೆ ಹೇಳಿರುವುದು ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಒಂದು ಹಂತದ ತಾಂತ್ರಿಕ ಸಂಕೀರ್ಣ ಅಂಶ ಎಂದಿಟ್ಟುಕೊಳ್ಳೋಣ ಬಿಡಿ. ಅದನ್ನು ಹೊರತಾಗಿ ಚಿಂತಿಸುವುದಾದರೇ, ಇಲ್ಲಿ ಒಂದು ಪ್ರಶ್ನೆ ಇದೆ, ಮೂರ್ತಿಯವರ "ವಾರಕ್ಕೆ 70-ಗಂಟೆಗಳ ಕೆಲಸ"ದ ಬಗ್ಗೆ ಪ್ರಸ್ತಾಪ ಮಾಡದೇ ಇದ್ದಿದ್ದರೇ, ನಾವು ಉತ್ಪಾದಕತೆಯ ಬಗ್ಗೆ ಅವರು ಎತ್ತಿದ ಸಮಸ್ಯೆಯನ್ನು ಚರ್ಚಿಸುತ್ತಿದ್ದೇವಾ ?

ಆ ಹೇಳಿಕೆಕೊಟ್ಟ ಸಂದರ್ಶನದಲ್ಲಿ, ಮೂರ್ತಿ ಅವರು ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಸ್ವಯಂಪ್ರೇರಣೆಯಿಂದ ಆ ನಿಟ್ಟಿನಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ದೇಶದ ಯುವಕರನ್ನು ಕೇಳಿಕೊಂಡಿದ್ದರು. ಅದನ್ನು ಜಾರಿಗೊಳಿಸಬೇಕು ಎಂದು ಅವರು ಎಲ್ಲಿಯೂ ಹೇಳಿಲ್ಲ, ಅದು ಯಶಸ್ಸಿಗೆ ಬೇಕಾಗಿ ಸಲಹೆಯಷ್ಟೇ ಆಗಿತ್ತು. ಆದರೇ, ಅದು ಇಲ್ಲಿ ತಪ್ಪಾಗಿ ಅರ್ಥ ಪಡೆಯಿತು. ಅದಕ್ಕೂ ಕಾರಣವಿದೆ. ಮೂರ್ತಿ ಅವರ ಹೇಳಿಕೆಯನ್ನು ಹಲವು ಉದ್ಯಮಪತಿಗಳು ಬೆಂಬಲಿಸಿದ್ದರು. ಇನ್ನೂ ಬೆಂಬಲಿಸುತ್ತಿದ್ದಾರೆ ಕೂಡ.  ಆದರೇ, ಇದು ದುಡಿಯುವ ವರ್ಗಕ್ಕೆ ಆತಂಕ ಹುಟ್ಟಿಸಿದೆ.

ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೆ ತಂದ ಕಾರ್ಮಿಕ ಸಂಹಿತೆಯ ಪ್ರಕಾರ ವಾರವೊಂದರಲ್ಲಿ ಒಬ್ಬ ಉದ್ಯೋಗಿ ದುಡಿಯುವ ಅವಧಿ 48 ಗಂಟೆಗಳನ್ನು ಮೀರಬಾರದು ಎಂದು ಹೇಳಿದೆ. ದಿನವೊಂದಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವುದಾದರೇ ವಾರಕ್ಕೆ ನಾಲ್ಕು ದಿನ, ದಿನವೊಂದಕ್ಕೆ 9.6 ಗಂಟೆಯಷ್ಟು ಕೆಲಸ ಮಾಡುವುದಾದರೇ ವಾರಕ್ಕೆ ಐದು ದಿನ ಕೆಲಸ, ದಿನಕ್ಕೆ ಎಂಟು ಗಂಟೆ ಕೆಲಸ ಮಾಡುವುದಾದರೇ, ವಾರಕ್ಕೆ ಆರು ದಿನ ಕೆಲಸ ಮಾಡಬಹುದು ಎಂದು ಕಾರ್ಮಿಕ ಸಂಹಿತೆ ಹೇಳುತ್ತದೆ. ಓವರ್‌ ಟೈಮ್‌ ಪಾವತಿ ಇಲ್ಲದ ಅವಧಿ ಮೀರಿದ ದುಡಿಮೆ ಶಿಕ್ಷಾರ್ಹ ಅಪರಾಧ. ಅಂದರೆ ಕಾರ್ಮಿಕ ಸಂಹಿತೆಯ ಪ್ರಕಾರ ಓವರ್‌ ಟೈಮ್‌ ಪಾವತಿ ಇಲ್ಲದ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚಿನ ಸಮಯದ ದುಡಿಮೆ ದಂಡಾರ್ಹ. ವಾರಕ್ಕೆ 70 ಗಂಟೆ ದುಡಿಯಬೇಕೆಂದರೇ ದಿನವೊಂದಕ್ಕೆ 14 ಗಂಟೆಗಳಂತೆ ದುಡಿಯಬೇಕು(ವಾರಕ್ಕೆ 5 ದಿನಗಳಂತೆ) . ಕಾರ್ಮಿಕ ಸಂಹಿತೆಯ ಪ್ರಕಾರ ಓವರ್‌ ಟೈಮ್‌ ಪಾವತಿ ಇದ್ದರೂ ದಿನವೊಂದಕ್ಕೆ ಗರಿಷ್ಠ 12 ಗಂಟೆಗಳ ಕೆಲಸ ಮಾಡಿಸಿಕೊಳ್ಳಬಹುದು. ಅದಕ್ಕಿಂತ ಮೀರಬಾರದು ಎಂಬುವುದಿದೆ. ಹಾಗಾದರೇ, ಮೂರ್ತಿಯವರದ್ದು ಯಾವ ಲೆಕ್ಕಚಾರ ?

ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಇಂದಿಗೂ ಲಕ್ಷಾಂತರ ಮಂದಿ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರು, ಸಣ್ಣ ಸಣ್ಣ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಪೊಲೀಸರು, ವೈದ್ಯರು, ರಾಜಕಾರಣಿಗಳು, ಪತ್ರಕರ್ತರು ಸಹ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ.  ದೇಶ ಪ್ರಗತಿ ಹೊಂದುವುದಕ್ಕೆ ಬೇಕಾಗಿ ಯುವಕರು ವಾರದಲ್ಲಿ  70 ಗಂಟೆಗಳ ಕಾಲ ದುಡಿಯಬೇಕು ಎಂಬ ಸಲಹೆಯನ್ನು ದೇಶದ ಹಲವು ಉದ್ಯಮಿಗಳು ಬೆಂಬಲಿಸಿದ್ದಾರೆ. ಆದರೇ, ದುಡಿಯುವ ವರ್ಗವು ಇದು ದುಡಿಯು ವರ್ಗದ ಮೇಲೆ ಉದ್ಯಮಪತಿಗಳ ಶೋಷಣೆ ಎಂದು ಹೇಳುತ್ತಿದೆ. ವರ್ಕರ್ಸ್‌ ವೆಲ್‌ಫೇರ್‌ ಆಕ್ಟ್‌ ಪ್ರಕಾರ ಒಂದು ವಾರದಲ್ಲಿ 70 ಗಂಟೆಗಳ ಕಾಲ ದುಡಿಯುವುದು ಕಾನೂನುಬಾಹೀರ ಎಂದು ಪರಿಗಣಿಸಲಾಗುತ್ತದೆ. ಆದರೇ, ಇಂದಿಗೂ ಸಂಘಟಿತ ಹಾಗೂ ಅಸಂಘಟಿತ ವಲಯ ಅವಧಿಗೂ ಮೀರಿ ಕಾರ್ಯನಿರ್ವಹಿಸುತ್ತಿದೆ. ವಾರದಲ್ಲಿ 70 ಗಂಟೆ ದುಡಿದರೇ ಒಬ್ಬ ಉದ್ಯೋಗಿಯ ಮಾನಸಿಕ ಆರೋಗ್ಯದ ಸ್ಥಿತಿ ಹೇಗಾಗಬಹುದು ? ಆತನ ಕೌಟುಂಬಿಕ ಜೀವನ ಏನಾಗಬಹುದು?

ನಾರಾಯಣ ಮೂರ್ತಿ ಅವರ ವೈಯಕ್ತಿಕ ಅಭಿಪ್ರಾಯ ಹೇಳಿಕೊಂಡಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೇ, ಇಲ್ಲಿ ಆರೋಗ್ಯ ಮುಖ್ಯ, ಕುಟುಂಬ ಮುಖ್ಯ, ವೃತ್ತಿ ಮುಖ್ಯ ಮತ್ತು ಮನಸ್ಸಿನ ಶಾಂತಿಯೂ ಮುಖ್ಯ. ಯಾವ ಆದ್ಯತೆಯ ಅನುಕ್ರಮಣಿಕೆಯಲ್ಲಿ ಯಾವುದು ಪ್ರಮುಖ ಎಂಬುದನ್ನು ಜನರು ತಿಳಿದುಕೊಳ್ಳಬೇಕಾಗಿರುವುದು ಇಲ್ಲಿನ ಈ ಕ್ಷಣದ ತುರ್ತು. ಹಣದ ಅನಿವಾರ್ಯಕ್ಕೆ ದುಡಿಯುವವರು ಅದೆಷ್ಟೋ ಮಂದಿ ಇದ್ದಾರೆ, ಆದರೇ ಅದು ಅವರ ವೈಯಕ್ತಿಕ ಬದುಕಿಗೆ, ಆರೋಗ್ಯಕ್ಕೆ, ಕೌಟುಂಬಿಕ ಜೀವನಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಸತ್ಯ. ಎಷ್ಟೋ ಕಂಪೆನಿಗಳಲ್ಲಿ ದುಡಿಯುವ ಅವಧಿಗೆ ಸಮನಾದ ಪ್ರಮಾಣಾನುಗುಣವಾದ ವೇತನವೇ ಇಲ್ಲ.  40 ಗಂಟೆಗಳ ಸಂಬಳದಲ್ಲಿ 70 ಗಂಟೆಗಳ ಕೆಲಸವನ್ನು ಕೇಳುವುದು ಎಷ್ಟು ಸಮಂಜಸ ? ಅದು ಯಾವುದೇ ಕಾರಣಕ್ಕೂ ನ್ಯಾಯೋಚಿತವಲ್ಲ. 

ಇವತ್ತಿನ ಶ್ರಮ ನಾಳೆಯ ಪ್ರಗತಿಗೆ ಸಹಾಯ ಮಾಡುತ್ತದೆ ಎನ್ನುವುದೆಲ್ಲಾ ಹಳೆಯ ಮಾತು. ಹಾಗಲ್ಲದಿದ್ದರೂ, ಉದ್ಯಮ ಕ್ಷೇತ್ರದಲ್ಲಿ ಅದು ಸತ್ಯಕ್ಕೆ ಹತ್ತಿರದ ಮಾತಲ್ಲ. ಉದ್ಯಮ ಕ್ಷೇತ್ರ ಮತ್ತು ಆರ್ಥಿಕ ಅಭಿವೃದ್ಧಿ ಬಯಸುವುದು ಕೌಶಲ್ಯಗಳನ್ನಷ್ಟೆ ಹೊರತು ಶ್ರಮವನ್ನಲ್ಲ. ಪ್ರಗತಿಗೆ ಕೌಶಲ್ಯಗಳು ಪ್ರಮುಖವಾಗುತ್ತದೆ. ವಾರಕ್ಕೆ ಯುವಕರು 70 ಗಂಟೆ ದುಡಿದರಷ್ಟೇ ದೇಶ ಪ್ರಗತಿ ಹೊಂದಲು ಸಾಧ್ಯ ಎಂಬ ಅರ್ಥದಲ್ಲಿ ನಾರಾಯಣ ಮೂರ್ತಿಯವರು ಹೇಳಿದ್ದಾದರೇ, ಅದರಲ್ಲಿ ಅರ್ಥವೇ ಇಲ್ಲ. ದೇಶದ ಪ್ರಗತಿ 70 ಗಂಟೆಗಳ ಕೆಲಸದಲ್ಲಿಲ್ಲ. ಯುವಕರ ಕೌಶಲ್ಯಗಳಲ್ಲಿದೆ. ಉದ್ಯಮ ಕ್ಷೇತ್ರ ಯುವಕರ ಕೌಶಲಗಳನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಬಳಸಿಕೊಂಡಿದೆ ಎನ್ನುವ ಪ್ರಶ್ನೆವೊಂದು ಕೂಡ ಇಲ್ಲಿ ಮುನ್ನೆಲೆಗೆ ಬರುತ್ತದೆ. ದುಡಿಮೆ ಗಂಟೆಗಳ ಲೆಕ್ಕದಲ್ಲಿ ಆಗಬಾರದು. ಕೌಶಲ್ಯಗಳಿಂದ ಕೂಡಿರಬೇಕು. ಆಗ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಕೆಲಸ ಏಕಮುಖವೂ ಅಲ್ಲ. ಅವಧಿಯೂ ಮುಖ್ಯವಾದರೇ, ಅವಧಿಗೆ ಸರಿಯಾದ ಸಂಬಳವೂ ಮುಖ್ಯ.

-ಶ್ರೀರಾಜ್‌ ವಕ್ವಾಡಿ