ಬದುಕು ಪ್ರೀತಿಯನ್ನು ಧ್ಯಾನಿಸುವುದಕ್ಕೆ ಇರುವುದು. ಜೀವನ ಭಾವನೆಗಳನ್ನು ಉಸಿರಾಡುವುದಕ್ಕೆ ಇರುವುದು. ಮನಸ್ಸು ಎಂದಿಗೂ ಬಯಸುವುದು 'ಪ್ರೇರಣಾ'ಪೂರ್ವಕವಾದ 'ಆಸರೆ'ಯನ್ನಷ್ಟೆ. ಹಿತವಾದ ಮಾತು, ಪ್ರೀತಿ, ಕಾಳಜಿ ಒಂದು ಮನಸ್ಸನ್ನು ಎಷ್ಟು ಸಾಂತ್ವನಿಸುತ್ತವೆ ಅಲ್ವಾ ? ನೋವಿನಲ್ಲಿದ್ದ ಜೀವಕ್ಕೊಂದು ಧ್ವನಿ ಸಿಕ್ಕಾಗ ಮಾತ್ರ ಅದು ಲವಲವಿಕೆಯಿಂದ ಉಳಿಯುವುದಕ್ಕೆ, ಬೆಳೆಯುವುದಕ್ಕೆ ಸಾಧ್ಯ. ಒಂದು ಸಂಬಂಧ ಹಿತವಾದ ಪ್ರೀತಿಯಲ್ಲಿನ ಗಾಢತೆಯನ್ನು ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಾರವೇ ಸಿನೆಮಾದ ಕಥಾವಸ್ತು.
ಉರಿಯುವ ಜ್ವಾಲೆ ತನ್ನೊಳಗಿಟ್ಟುಕೊಂಡಿದ್ದರೂ ತಾಳ್ಮೆಯ ಹಣತೆಯಾಗಿಯೇ ಕಥಾ ನಾಯಕಿ ಪ್ರೇರಣಾ(ಸಿರಿ ರವಿಕುಮಾರ್) ಬೆಳಗುತ್ತಾಳೆ, ಬದುಕಿನ ಅಂತ್ಯದ ಹೊಸ್ತಿಲಲ್ಲಿದ್ದರೂ ಆಶಾಭಾವನೆಯಲ್ಲಿ ಈ ಕ್ಷಣವನ್ನು ಕಥಾನಾಯಕ ಅನಿಕೇತ್ (ರಾಜ್ ಬಿ.ಶೆಟ್ಟಿ) ಕಳೆಯುತ್ತಾನೆ. ಸುಡುವ ಹಣತೆಯಾಗಿ, ನಂದಿ ಬಟ್ಟಲು ಹೂವಾಗಿ ಪ್ರೇರಣಾ, ಅನಿಕೇತ್ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಇಡೀ ಸಿನೆಮಾ ಕಾವ್ಯವೇ ಆಗಿ ಹೆಣೆದುಕೊಂಡಿದೆ. ಕಣ್ಣಿಗೆ ಹಿತವುಣಿಸುವ ಸಿನೆಮಾಟಾಗ್ರಫಿ, ಕ್ಷಣಕ್ಷಣಕ್ಕೂ ಬದುಕನ್ನು ದರ್ಶಿಸುವ ಸಂಭಾಷಣೆ, ಎಲ್ಲಾ ನಟ, ನಟಿಯರ ಸಹಜ ಮನೋಜ್ಞ ನಟನೆ ಶ್ಲಾಘನೀಯ.
ಖಾಲಿ ಖಾಲಿ ಥಿಯೇಟರ್ ನೋಡುವಾಗ ಕನ್ನಡ ಸಿನಿಮಾ ವೀಕ್ಷಕರ ಸದಭಿರುಚಿ ಬಗ್ಗೆ ನಿಜಕ್ಕೂ ದುಃಖವಾಯ್ತು.
ಇನ್ನು, ರಾಜ್ ಬಿ. ಶೆಟ್ಟಿಯವರ 'ಟೋಬಿ' ಸಿನೆಮಾ ನೋಡಿ ಹಿಗ್ಗಾಮುಗ್ಗಾ ಬೈದಿದ್ದೆ. ಆದರೆ, ಈ ಸಿನೆಮಾ ತುಂಬಾ ಆಪ್ತವಾಗಿ ನನ್ನನ್ನು ಆವರಿಸಿಕೊಂಡಿದೆ. ಒಂದು ಒಳ್ಳೆಯ ಸಿನೆಮಾ ನೋಡಿದ ಖುಷಿಯಾಗಿದೆ. ಸಿನೆಮಾ ಕನಿಷ್ಠ ಒಂದೆರಡು ಪುಸ್ತಕದ ಓದು ಕೊಡಬೇಕು 'ಸ್ವಾತಿ ಮುತ್ತಿನ ಮಳೆ ಹನಿಯೇ' ಆ ಕೆಲಸ ಮಾಡಿದೆ.
#ಕಾವ್ಯಬೈರಾಗಿ
(ಶ್ರೀರಾಜ್ ವಕ್ವಾಡಿ)


No comments:
Post a Comment