Thursday, April 27, 2023

"ಆಯಾ ರಾಮ್ ಗಯಾ ರಾಮ್" ಪಾಲಿಟಿಕ್ಸ್‌

( ಸಾಂದರ್ಭಿಕ ಚಿತ್ರ )

ಚುನಾವಣಾ ಕಣದಲ್ಲಿ ʼಲಿಂಗಾಯತ ಸಮುದಾಯ ನಾಯಕʼನ ಪ್ರಭಾವ .!

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ್ದು ದೊಡ್ಡ ಪಾತ್ರ. ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಮುಂದುವರಿದರೇ, ಫಲಿತಾಂಶವೇ ಅದಲು ಬದಲಾಗುತ್ತದೆ ಎಂಬಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿದೆ.  ಒಟ್ಟು ಸುಮಾರು ೧೭ ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯ ರಾಜ್ಯದ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಈ ಸಮುದಾಯ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಲಿಂಗಾಯತ ಸಮುದಾಯಗಳ ಪಾತ್ರ ಮಹತ್ವದ್ದು. ಬಹಳ ಪ್ರಮುಖವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಈ ಸಮುದಾಯದ ಕೊಡುಗೆ ದೊಡ್ಡದಿದೆ. ಈ ಭಾರಿ ಚುನಾವಣೆಗೆ ಬರೋಬ್ಬರಿ ೬೮ ಮಂದಿ ಲಿಂಗಾಯತ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೇ, ಇತ್ತ ಕಾಂಗ್ರೆಸ್‌ ೫೧ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಲಿಂಗಾಯತ ಸಮುದಾಯ ರಾಜಕೀಯದಲ್ಲಿ ಉಳಿಸಿಕೊಂಡಿರುವ ಪ್ರಭಾವಕ್ಕೆ ಸಾಕ್ಷಿ. 

ಆದರೇ, ಈ ಬಾರಿಯ ರಾಜಕೀಯದ ವಾತಾವರಣ ತುಸು ಬದಲಾದ ಹಾಗೆ ಕಾಣಿಸುತ್ತಿದೆ.  ಕರ್ನಾಟಕದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡಿದ್ದು, ಹಿರಿಯ ಕೆಲವು ಪ್ರಮುಖ ನಾಯಕರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡದಿರುವ ಕಾರಣದಿಂದಾಗಿ ಬಂಡಾಯವನ್ನು ಎದುರಿಸುತ್ತಿದೆ. ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೀಸಲಾತಿ ಸೇರಿ ಹಲವು ತಂತ್ರಗಳನ್ನು ಹೂಡಿದ್ದರು ಕೂಡ ಅದು ಸಮಧಾನದ ಪರಿಹಾರ ಎಂಬುವುದು ಆ ಸಮುದಾಯಕ್ಕೆ ಮನದಟ್ಟಾದಂತಿದೆ. ಲಿಂಗಾಯತ ಸಮುದಾಯಕಕ್ಕೆ ಸೇರಿದ ಹಿರಿಯ ಪ್ರ,ಮುಖ ನಾಯಕರುಗಳ ರಾಜೀನಾಮೆ ಹಾಗೂ ಪಕ್ಷಾಂತರ ಪರ್ವ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ ಬಿಜೆಪಿ ಎದುರಿಸಿದ ವಿರೋಧದ ಅಲೆಯನ್ನು ಈ ರಾಜ್ಯ ಕಂಡಿದೆ. ಈಗ ಅದರ ಮತ್ತೊಂದು ಹಂತ. ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ಮುಖಂಡರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಟಿಕೇಟ್‌ ಸಿಗದೇ ಇರುವ ಕಾರಣದಿಂದಾಗಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಸೇರಿಕೊಂಡು ಟಿಕೇಟ್‌ ಗಿಟ್ಟಿಸಿಕೊಂಡಿದ್ದಾರೆ. ಆಡಳಿತ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಉಭಯ ಲಿಂಗಾಯತ ನಾಯಕರ ಈ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಈ ನಾಯಕರು ಈಗ ನೆಲೆ ಬದಲಾಯಿಸಿಕೊಂಡಿದ್ದು, ಚುನಾವಣಾ ಕಣದ ಕುತೂಹಲವನ್ನು ಹೆಚ್ಚಿಸಿದೆ. 

ಆರ್‌ ಎಸ್‌ ಎಸ್‌ ನೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದ ಈ ಉಭಯ ಹಿರಿಯ ನಾಯಕರು ಪಕ್ಷ ತೊರೆದು, ಕಾಂಗ್ರೆಸ್‌ ಸಿದ್ಧಾಂತಕ್ಕೆ ಒಪ್ಪಿ ಬಿಜೆಪಿ ತೊರೆದಿದ್ದು ಇದು ಬಿಜೆಪಿಗೆ ಒಂದು ರೀತಿಯಲ್ಲಿ ಮುಜುಗರ ಉಂಟುಮಾಡಿದೆ. ಆಡಳಿತ ವಿರೋಧಿ, ಭ್ರಷ್ಟಾಚಾರ ಆರೋಪಗಳ ಜೊತೆಜೊತೆಗೆ ಈ ಸಲ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉತ್ಸಾಹದಿಂದ ಇರುವ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಿರುವ ಬಿಜೆಪಿಗೆ ಈ ವಿಚಾರ ಮತ್ತೊಂದು ಸವಾಲಾಗಿದೆ.  ಜಗದೀಶ್ ಶೆಟ್ಟರ್‌, ಲಕ್ಷ್ಮಣ್‌ ಸವದಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಬಂದಿದ್ದಾರೆ ಎಂದ ಮಾತ್ರಕ್ಕೆ ಅವರ ಬೆಂಬಲಿಗರೆಲ್ಲಾ ಈ ಕಡೆ ಸಂಪೂರ್ಣವಾಗಿ ಮುಖ ಮಾಡುತ್ತಾರೆ ಎಂಬುವುದಕ್ಕೆ ಸಾಧ್ಯವಿಲ್ಲ.  ವ್ಯತ್ಯಾಸ ತರುವುದಂತೂ ನಿಶ್ಚಿತವಾಗಿದೆ. ಇನ್ನು, “ಇಬ್ಬರೂ ಬಿಜೆಪಿಯ ಪ್ರಭಾವಿ ನಾಯಕರುಗಳ ಸಾಲಿನಲ್ಲಿದ್ದಿದ್ರು, ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರ ಹಾಗೆ ಒಬ್ಬ ಸಮುದಾಯದ ನಾಯಕರಾಗಿ ಬೆಳೆಯದಿದ್ದರೂ ಇಬ್ಬರೂ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದವರು” ಎನ್ನುವುದು ಇಲ್ಲಿ ಮುಖ್ಯ. 

ಈ ಸಮುದಾಯ  ಬಿಜೆಪಿಯನ್ನು ಚುನಾವಣೆಯಲ್ಲಿ ಹೆಚ್ಚು ಪೊರೆಯುತ್ತಾ ಬಂದಿದೆ.  ಲಿಂಗಾಯತ ಸಮುದಾಯ  ಕರ್ನಾಟಕಕ್ಕೆ ಎಂಟು ಮುಖ್ಯಮಂತ್ರಿಗಳನ್ನು ಕೊಟ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ೨೦೧೮ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೫೨ ವಿಜೇತ ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸಾಮಾನ್ಯವಾಗಿ ತನ್ನ ಚುನಾವಣಾ ಟಿಕೆಟ್‌ ಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಲಿಂಗಾಯತರಿಗೆ ಮೀಸಲಿಡುತ್ತದೆ.

ರಾಜ್ಯದ ೨೨೪ ಸ್ಥಾನಗಳಲ್ಲಿ ಮುಖ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಸುಮಾರು ೭೦ ಕ್ಷೇತ್ರಗಳಲ್ಲಿ ಈ ಸಮುದಾಯವು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ೨೦೦೮ ಮತ್ತು ೨೦೧೮ ರಲ್ಲಿ ಬಿಜೆಪಿ ಈ ಭಾಗಗಳಲ್ಲಿ ಶೇಕಡಾ ೪೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ೨೦೧೩ರಲ್ಲಿ  ಬಿ. ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮವಾಗಿ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಗೆ ಹಂಚಿ ಹೋಯಿತು ಎನ್ನುವುದು ಇಲ್ಲಿ ಪ್ರಮುಖಾಂಶ. ಇನ್ನು, ಪಕ್ಷ ತೊರೆದ ನಾಯಕರು ಸಮುದಾಯದ ನಾಯಕರಲ್ಲ ಎಂದು ಬಿಜೆಪಿ ಹೇಳುತ್ತಿದ್ದರೆ, ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ "ಅವಮಾನ" ಎಂದು ಬಿಂಬಿಸಿ ಲಾಭ ಬಾಚುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಭವಿಷ್ಯಕ್ಕೆ ಎಷ್ಟು ಪರಿಣಾಮ ಬೀರಲಿದೆ ಎಂಬುವುದು ಕುತೂಹಲ. ಇನ್ನು, ಕಾಂಗ್ರೆಸ್‌ ಗೆ ಇದೇ ಅಸ್ತ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಉಲ್ಟಾ ಹೊಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. 

ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ. ಜುಲೈ ೨೦೨೧ ರಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಆದರೆ ಅವರಿಗೆ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಲ್ಲಿ ಅವಕಾಶ ನೀಡಲಾಯಿತು. ಬಸವರಾಜ ಬೊಮ್ಮಾಯಿ ಅವರನ್ನು ಲಿಂಗಾಯತ ಸಮುದಾಯದ ಅವರ ಉತ್ತರಾಧಿಕಾರಿ ಎಂಬಂತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೇ, ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು ಬಿಜೆಪಿಯರಿಗೇ ಅಸಮಾಧಾನವಿದೆ. 

ಯಡಿಯೂರಪ್ಪ ಮತ್ತು ಬಿಜೆಪಿ ಬಹಳ ವಿಚಿತ್ರವಾದ ಮತ್ತು ದುರ್ಬಲವಾದ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಯಡಿಯೂರಪ್ಪ ಅವರು ತಮ್ಮ ಮಗನನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಾಗ, ವಂಶ ರಾಜಕೀಯವನ್ನು ಧಿಕ್ಕರಿಸುವ ಪಕ್ಷದಲ್ಲಿ ಅವರ ವಿನಂತಿಗಳನ್ನು ನಿರ್ಲಕ್ಷಿಸಲಾಯಿತು. ಪುತ್ರ ವಿಜಯೇಂದ್ರಗೆ ಅವರು  ಶಿಕಾರಿಪುರವನ್ನು ಬಿಟ್ಟುಕೊಟ್ಟರು. ಇನ್ನು, ಈ ವಿಷಯದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆ ಮಾಜಿ ಮುಖ್ಯಮಂತ್ರಿಗಳ  ಒಳಜಗಳ ಗುಟ್ಟಾಗಿ ಉಳಿದಿಲ್ಲ ಎನ್ನುವುದಿಲ್ಲಿ ಮುಖ್ಯ. 

೧೯೯೦ರಲ್ಲಿ ಲಿಂಗಾಯತ ಸಮುದಾಯದ ನಾಯಕರಾಗಿದ್ದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಅವರು ಅಮಾನುಷವಾಗಿ ವಜಾ ಮಾಡಿದ್ದರು ಎಂಬ ವಿಚಾರ ಕಾಂಗ್ರೆಸ್‌ ಮೇಲೆ ಲಿಂಗಾಯತರ ವಿಶ್ವಾಸ ಕಡಿಮೆಯಾಯಿತು. ಈಗ ಲಿಂಗಾಯತರ ವಿಶ್ವಾಸವನ್ನು ಮರಳಿ ಪಡೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೮ರ ಚುನಾವಣೆಗೆ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಘೋಷಿಸಿದ್ದರು, ಆದರೆ ಅದು ಹಿನ್ನಡೆಯಾಯಿತು. ಈ ಬಾರಿ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ, ಈಗ ಇಬ್ಬರು ಬಿಜೆಪಿ ಮಾಜಿ ಲಿಂಗಾಯತ ನಾಯಕರ ಕಾಂಗ್ರೆಸ್ ಪ್ರವೇಶದಿಂದಾಗಿ ಲಿಂಗಾಯತರ ವಿಚಾರದಲ್ಲಿ ಕಾಂಗ್ರೆಸ್‌ ಹೊಸ ಹುರುಪಿನಲ್ಲಿದೆ.

ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಖಂಡಿತವಾಗಿಯೂ ರಾಜ್ಯಾದ್ಯಂತ ಪ್ರಭಾವ ಬೀರದಿದ್ದರೂ, ಅವರ ನಿರ್ಗಮನವು ಅವರ ತವರು ಕ್ಷೇತ್ರಗಳಾದ ಹುಬ್ಬಳ್ಳಿ-ಧಾರವಾಡ (ಧಾರವಾಡ) ಮತ್ತು ಅಥಣಿ (ಬೆಳಗಾವಿ) ಮತ್ತು ಸುತ್ತಮುತ್ತಲಿನ ಎಂಟರಿಂದ ಹತ್ತು ಸ್ಥಾನಗಳಲ್ಲಿ ಖಂಡಿತವಾಗಿಯೂ ಪರಿಣಾಮ ಬೀರಬಹುದು ಎಂಬ ರಾಜಕೀಯ ವಲಯದ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ. 

ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡದಿಂದ ಆರು ಬಾರಿ ಶಾಸಕರಾಗಿದ್ದರೆ, ಸವದಿ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದಾರೆ, ಆದರೂ ಅವರು ೨೦೧೮ ರಲ್ಲಿ ಚುನಾವಣೆಯಲ್ಲಿ ಸೋತಿದ್ದರು. ಪಕ್ಷಾಂತರಗೊಂಡ ಮೇಲೆ ಬಿಜೆಪಿ ಬೆಂಬಲಿಗರು ಈ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ದತ್ತಾಂಶವು ೨೦೧೬ ಮತ್ತು ೨೦೨೦ ರ ನಡುವೆ ಪಕ್ಷಾಂತರಗೊಂಡ ೪೩೩ ಶಾಸಕರು ಮತ್ತು ಸಂಸದರಲ್ಲಿ ೫೨ ಪ್ರತಿಶತದಷ್ಟು ಮಂದಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಹೇಳುತ್ತದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ "ಆಯಾ ರಾಮ್ ಗಯಾ ರಾಮ್" ರಾಜಕೀಯ ಜೋರಾಗಿ ನಡೆದಿದೆ. ಇಂತಹ ಪಕ್ಷಾಂತರಗೊಂಡವರಿಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ? ಅವರು ಅವಕಾಶವಾದಿಗಳೇ ? ಸೈದ್ಧಾಂತಿಕ ನಿಲುವು ? ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

ಶೆಟ್ಟರ್ ಮತ್ತು ಸವದಿ ಅವರನ್ನು ಕೈಬಿಡಲು ಬಿಜೆಪಿ ಕೊಟ್ಟ ಕಾರಣ, ಹೊಸ ಮುಖಗಳಿಗೆ ಅವಕಾಶ ನೀಡುವುದು. ಆದಾಗ್ಯೂ, ಇಲ್ಲಿ ಒಂದು ವಿರೋಧಾಭಾಸವಿದೆ. ʼಹಳೆಯ ಯುದ್ಧ ಕುದುರೆʼ ಯಡಿಯೂರಪ್ಪ ಇನ್ನೂ ಬಬಿಜೆಪಿಯ ಪ್ರಚಾರದ ಮುಖವಾಗಿಯೇ ಉಳಿದುಕೊಂಡಿದ್ದಾರೆ. ಕಾರಣ ಯಡಿಯೂರಪ್ಪ ಲಿಂಗಾಯತ ʼಸಮುದಾಯದ ನಾಯಕʼ. ಆದರೇ, ಸ್ಪರ್ಧಾ ಕಣದಲ್ಲಿ ಅವರಿಲ್ಲ.  ಶೆಟ್ಟರ್‌, ಸವದಿ ಕಾಂಗ್ರೆಸ್‌ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಲಿಂಗಾಯತರ ಮತಗಳು ಯಾವ ಕಡೆಗೆ ಹೋಗುತ್ತವೆ ? ಮೇ ೧೩ರವರೆಗೆ ಕಾದು ನೋಡೋಣ. ಏನಂತೀರಿ ? 

-ಶ್ರೀರಾಜ್‌ ವಕ್ವಾಡಿ


Wednesday, April 19, 2023

ಒಕ್ಕಲಿಗ ಸಾಂಪ್ರದಾಯಿಕ ಮತಗಳನ್ನು ವಿಭಜಿಸಲಿದೆಯೆ ʼಉರಿನಂಜುʼ ?


ಹಳೆಮೈಸೂರಿಗಾಗಿ ತ್ರಿಪಕ್ಷಗಳ ಹೋರಾಟ । ಭಾವನಾತ್ಮಕ ಅಸ್ತ್ರಕ್ಕಿಲ್ಲಿ ಫಲ ?

ಒಂದು ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಒಳಪಡುತ್ತಿದ್ದ ಹಳೆ ಮೈಸೂರು ಭಾಗವು ಈಗ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ರಾಜಕೀಯ ಕಣಗಳಲ್ಲಿ ಒಂದಾಗಿದೆ. ರಾಜ್ಯ ಶಾಸಕಾಂಗದ ಅರ್ಧದಷ್ಟು ಶಾಸಕರನ್ನು ಹೊಂದಿರುವ ಈ ಭಾಗವು ಒಂದು ಹಂತದಲ್ಲಿ ನಿರ್ಣಾಯಕ ರಾಜಕೀಯ ಕಣವಾಗಿಯೂ ಬದಲಾಗಿದೆ. ಸಾಂಪ್ರದಾಯಿಕವಾಗಿ ಇದು ಕಾಂಗ್ರೆಸ್‌ ಹಾಗೂ ಜನತಾದಳದ ಭದ್ರ ಕೋಟೆಯಾಗಿತ್ತು. 

ಕಳೆದ ಎರಡು ದಶಕಗಳಿಂದ ಬಿಜೆಪಿ ಈ ಭಾಗಗಳ ಮೇಲೆ ಹೆಚ್ಚು ಗಮನಹರಿಸಿಕೊಂಡಿದ್ದು, ಬಿಜೆಪಿಯೂ ಕೂಡ ಈ ಭಾಗದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಚುನಾವಣೆಯಲ್ಲಿ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದಾಗ ಬಿಜೆಪಿಗೆ ಈ ಭಾಗದಲ್ಲಿ ನುಸುಳುವುದಕ್ಕೆ ಅಪಾರವಾದ ಅವಕಾಶವನ್ನು ಮಾಡಿಕೊಟ್ಟಿತು. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆ ಅಂಟಿಕೊಂಡಿದ್ದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೇ, ಬಿಜೆಪಿ ಉಳಿದೆಡೆ ಮಹತ್ತರವಾದ ಸಾಧನೆಯನ್ನೇ  ಮಾಡಿದೆ ಎಂದು ಹೇಳಬಹುದಾಗಿದೆ.  

ಪ್ರಬಲವಾದ ಒಕ್ಕಲಿಗ ಜಾತಿಯ ಮತಗಳು, ಹಿಂದುಳಿದ ಜಾತಿಗಳು, ದಲಿತ ಮತಗಳು ಇಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಈ ಜಾತಿಗಳ ಪ್ರಾಬಲ್ಯವಿಲ್ಲದೇ ಯಾವುದೇ ಚುನಾವಣಾ ಲೆಕ್ಕಾಚಾರ ಪೂರ್ಣಗೊಳ್ಳುವುದಿಲ್ಲ ಎಂಬ ವಿಚಾರ ಕರ್ನಾಟಕ ರಾಜ್ಯ ರಾಜಕಾರಣದ ಬಿಡಾರದಲ್ಲಿ ಸಾಮಾನ್ಯವಾದದ್ದು. ಇನ್ನು, ಪ್ರತಿ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕವನ್ನು ಕೇಂದ್ರೀಕರಿಸಿಕೊಂಡು ತಂತ್ರ ಹೂಡುತ್ತಿದ್ದ ಬಿಜೆಪಿ ಈ ಬಾರಿ ಹಳೆ ಮೈಸೂರುನತ್ತೆ ಹೆಚ್ಚು ಫೋಕಸ್‌ ಮಾಡಿದೆ ಅಂತನ್ನಿಸುತ್ತಿದೆ. 

ಇತ್ತೀಚಿಗಿನ ವರ್ಷಗಳಲ್ಲಿ ಈ ಭಾಗದ ಒಕ್ಕಲಿಗ ಮತಗಳು ಕಾಂಗ್ರೆಸ್, ಜೆಡಿಎಸ್‌ ಅಷ್ಟೇ ಅಲ್ಲದೇ, ಈಗ ಬಿಜೆಪಿಯಲ್ಲಿಯೂ ಹಂಚಿಹೋಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಬಿಜೆಪಿ ಕಡೆಗೂ ಮತ ವಿಭಜನೆಯಾಗಿ ಹೋಗುತ್ತಿರುವುದರಿಂದ ಇಲ್ಲಿ ಸಾಂಪ್ರದಾಯಿಕವಾಗಿ ಪಾರುಪತ್ಯ ಉಳಿಸಿಕೊಂಡು ಬಂದಿರುವ ಕಾಂಗ್ರೆಸ್‌, ಜೆಡಿಎಸ್‌ ಗೆ ಒಂದಿಷ್ಟು ರಾಜಕೀಯ ಹೊಡೆತವನ್ನು ನೀಡಿದೆ.  ಇನ್ನು, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳ ವಿಭಜನೆಯಿಂದಾಗಿ ಬಿಜೆಪಿ ಇಲ್ಲಿ ಅಸಾಧಾರಣ ಸಾಧನೆ ಮಾಡಿತ್ತು ಎನ್ನುವುದು ಉಲ್ಲೇಖಿಸಬಹುದಾದ ವಿಷಯ. 

ಬಹುಮತ ಸಾಧಿಸುವುದಕ್ಕೆ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದರಿಂದ ನಿರ್ಣಾಯಕ ಫಲಿತಾಂಶವನ್ನು ನಿರೀಕ್ಷಿಸಬಹುದೆಂದು ಆಡಳಿತ ಪಕ್ಷ ಇಲ್ಲಿ ಅರಿತುಕೊಂಡಿದೆ. ಇದಕ್ಕೆ ಪೂರಕವೆಂಬಂತೆ ತನ್ನ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರುಗಳನ್ನು ಈ ಭಾಗಗಳಲ್ಲಿ ಪ್ರಚಾರದ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಬೆಂಗಳೂರು, ಮಂಡ್ಯ, ತುಮಕೂರು, ಮಂಡ್ಯ ಮತ್ತು ಹಾಸನದ ಮೇಲೆ ಪಕ್ಷ ಸೂಕ್ಷ್ಮ ಕಣ್ಣಿಟ್ಟಿರುವುದನ್ನು ಈ ಹಿನ್ನಲೆಯಲ್ಲಿ ನೋಡಬೇಕಿದೆ. 

ಎಲ್ಲರಿಗೂ ಗೊತ್ತಿರುವ ಹಾಗೆ ಜೆಡಿಎಸ್‌ ಪ್ರಸ್ತುತತೆಗೆ ಬರುವುದಕ್ಕೆ ಮೂಲ ಕಾರಣವೇ ಒಕ್ಕಲಿಗ ಮತಗಳು. ಜೆಡಿಎಸ್‌ ನಾಯಕತ್ವವೂ ಕೂಡ ಈ ಸಮುದಾಯದ ಹಿನ್ನಲೆಯಿಂದಲೇ ಬಂದಿದ್ದಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದೆ. ಪಕ್ಷದಲ್ಲಿದ್ದ ಆಂತರಿಕ ಸಮಸ್ಯೆಗಳ ಹೊರತಾಗಿಯೂ ಜೆಡಿಎಸ್‌ ಈ ಭಾಗದಲ್ಲಿ ಪ್ರಭಾವವನ್ನು ಹೊಂದಿದೆ. ಆದರೇ, ಕಾಂಗ್ರೆಸ್‌ ನೊಂದಿಗೆ ೨೦೧೯ರಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದಾಗ ಭಾರಿ ಹಿನ್ನಡೆ ಅನುಭವಿಸಿತ್ತು. ಸ್ವತಃ ಜೆಡಿಎಸ್‌ ನ ಹೈ ಕಮಾಂಡರ್‌ ಎಸ್‌ ಡಿ ದೇವೇಗೌಡ್ರು ಒಕ್ಕಲಿಗ ಭದ್ರಕೋಟೆ ಎಂದು ಪರಿಗಣಿಸಲ್ಪಡುವ ತುಮಕೂರು ಕ್ಷೇತ್ರವನ್ನು ಕಳೆದುಕೊಂಡರು. ಈಗ ವಿಧಾನ ಸಭಾ ಚುನಾವಣೆ ಬರುತ್ತಿದೆ ಮತ್ತು ಬರುವ ವರ್ಷ ಲೋಕಸಭಾ ಚುನಾವಣೆ, ಈ ಹೊತ್ತಿನಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಪುನಶ್ಚೇತನಗೊಳಿಸಿಕೊಳ್ಳುವ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಿದೆ. 

ಇತ್ತ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವುದಕ್ಕೆ ಕಾಂಗ್ರೆಸ್‌ ಸರ್ವ ಪ್ರಯತ್ನ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಡಿ. ಕೆ ಶಿವಕುಮಾರ್‌ ಪ್ರಬಲ ಸಮುದಾಯದ ಮತಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದಕ್ಕೆ ಭಾವನಾತ್ಮಕವಾಗಿ ಪ್ರಚಾರ ಸಭೆಗಳಲ್ಲಿ ಮಾತಾಡಿದ್ದನ್ನು, ಅಕ್ಷರಶಃ ಅಂಗಲಾಚಿ ಮತ ಬೇಡಿದಂತೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿದ್ದನ್ನು ಈ ರಾಜ್ಯ ಕಂಡಿದೆ. ಬಿಜೆಪಿಯೊಂದಿಗಿನ ನೇರ ಸ್ಪರ್ಧೆಯಲ್ಲಿ ಪಕ್ಷವು ಪ್ರಜ್ಞಾಪೂರ್ವಕವಾಗಿ ತನ್ನ ಉನ್ನತ ನಾಯಕತ್ವದ ಸ್ಪೆಕ್ಟ್ರಮ್‌ ನಲ್ಲಿ ಒಕ್ಕಲಿಗ ಮುಖವನ್ನೇ ಮುಂದೆ ತಂದಿದೆ. ಕಾಂಗ್ರೆಸ್‌ ಗೆ ಡಿ. ಕೆ ಶಿವಕುಮಾರ್‌ ತಂದು ಕೊಡುವ ಒಕ್ಕಲಿಗ ಮತಗಳು ಅವರ ಮತ್ತು ಕಾಂಗ್ರೆಸ್‌ ನ ಭವಿಷ್ಯಕ್ಕೆ ನಿರ್ಣಾಯಕವಾಗಿರಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇತ್ತ ಬಿಜೆಪಿ ಒಬಿಸಿ ಕೋಟಾದಡಿಯಲ್ಲಿ ಮುಸ್ಲೀಮರಿಗಿದ್ದ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಮತ್ತು ಅವರನ್ನು ಬೇರೆ ಪೂಲ್‌ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್‌ ನ ನಿರ್ಧಾರವು ತನ್ನ ರಾಜಕೀಯ ಅಜೆಂಡಾದ ನಿರೂಪಣೆಯನ್ನು ಸೃಷ್ಟಿಸುವ ನಿರ್ಣಾಯಕ ಪ್ರಯತ್ನ ಮಾಡಿದ್ದು, ಇದೇ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದೇ ಆಗಿದೆ. ಮುಸ್ಲೀಮರಿಗಿದ್ದ ಶೇಕಡಾ ೪ರಷ್ಟು ಮೀಸಲಾತಿಯನ್ನು ತೆಗೆದು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯವೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡಾ ಎರಡರಂತೆ ಹಂಚಿಕೆ ಮಾಡಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಅಧಿಕಾರದಿಂದ ಕ್ಲೆವರ್‌ ಗೇಮ್‌ ಆಡಿದೆ.  

೧೯೭೦ರ ದಶಕದಲ್ಲಿ ಡಿ, ದೇವರಾಜ್‌ ಅರಸ್‌ ಅವರು ರಾಜಕೀಯದಲ್ಲಿ ಮುಂಪಂಕ್ತಿಗೆ ಬಂದಾಗಿನಿಂದ ರಾಜ್ಯದಲ್ಲಿ ಧ್ವನಿಯಿಲ್ಲದ ಹಿಂದುಳಿದ ವರ್ಗದವರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಸ್ಥಾನಮಾನ ನೀಡಬೇಕು ಎಂಬ ಕೂಗು ಹೆಚ್ಚಿತು. ಅದಕ್ಕೆ ಮಹತ್ತರವಾದ ಕೊಡುಗೆ ನೀಡಿದವರು ದೇವರಾಜ್‌ ಅರಸ್.‌ ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ದೊರಕಿಸುವ ಸಲುವಾಗಿ ಅರಸು ಮಾಡಿದ ಸೇವೆ ಅಮೋಘ. ಇಡೀ ದೇಶದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯ ದೇವರಾಜ ಅರಸು ಅವರದ್ದು. ಅಂದಿನಿಂದ ರಾಜಕೀಯದಲ್ಲಿ ಹಿಂದುಳಿದ ವರ್ಗಕ್ಕೆ ಸ್ಥಾನಮಾನ ಸಿಗುತ್ತಿದೆ. ಮುಂದೆ ರಾಜಕೀಯದಲ್ಲಿ ಇದೇ ವಿಷಯ ರಾಜಕೀಯ ಸಿದ್ಧಾಂತವಾಗಿ ಬದಲಾಗಿದೆ ಕೂಡ. ೨೦೧೩ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ʼಅಹಿಂದʼ ಚಳುವಳಿ (ಹಿಂದುಳಿದ ವರ್ಗಗಳ ಮತ್ತು ದಲಿತರ ಒಕ್ಕೂಟ) ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಪ್ರಧಾನ ಪಾತ್ರ ವಹಿಸಿತ್ತು. ೨೦೧೮ರಲ್ಲಿ ಸಿದ್ದರಾಮಯ್ಯರವರನ್ನು ʼಅಹಿಂದ ನಾಯಕʼ ಎಂದೆಲ್ಲಾ ಬಿಂಬಿಸುವುದಕ್ಕೆ ಪಕ್ಷ ಪ್ರಯತ್ನ ಪಟ್ಟಿತ್ತಾದರೂ, ಇದೇ ರಾಜಕೀಯ ಅಸ್ತ್ರದ ಮೂಲಕ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಹುರುಪಿನಲ್ಲಿತ್ತಾದರೂ ಕಾಂಗ್ರೆಸ್‌ ಗೆ ʼಅಹಿಂದʼ ವರ್ಕೌಟ್‌ ಆಗಿಲ್ಲ. 

ಈಗ ಬಿಜೆಪಿ ಈ ಅಸ್ತ್ರವನ್ನು ಹಿಡಿದುಕೊಂಡಿದೆ. ಹಲವು ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನ ವಿರುದ್ಧವಾಗಿ ಆಕ್ರಮಣಕಾರಿಯಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಮೀಸಲಾತಿ ವಿಸ್ತರಿಸುವುದು ಮತ್ತು ಪಕ್ಷದ ಅತಿ ದೊಡ್ಡ ರಾಜಕೀಯ ಅಜೆಂಡಾದೊಂದಿಗೆ ಈ ವಿಷಯವನ್ನು ನಿರೂಪಿಸಿ, ಹಿಂದುಳಿದ ವರ್ಗ, ದಲಿತರಿಗೆ ಬಿಜೆಪಿ ಕೊಟ್ಟಷ್ಟು ಸ್ಥಾನಮಾನ ಬೇರೆ ಯಾವ ಪಕ್ಷವೂ ನೀಡಿಲ್ಲ ಎಂಬಂತೆ ಸ್ವಯಂ ಪ್ರಶಂಸೆ ತೆಗೆದುಕೊಳ್ಳುತ್ತಿದೆ. ಬಿಜೆಪಿ ಲಿಂಗಾಯತರಲ್ಲಿ ಸಾಂಪ್ರದಾಯಿಕವಾಗಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಈ ಮೀಸಲಾತಿ ವಿಸ್ತರಿಸಿದ್ದೇನೋ ಆಯ್ತು, ಇದು ಚುನಾವಣೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎನ್ನುವುದು ಬಹಳ ಮುಖ್ಯ. ಬಿಜೆಪಿಯ ಈ ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವು ಸಂಭಾವ್ಯ ಸವಾಲುಗಳನ್ನು ಬಹುಷಃ ಎದರುಸಿಬೇಕಾದೀತು ಎಂದು ಕಾಣಿಸುತ್ತಿದೆ. ಈ ಸಂಖ್ಯೆ ಲೆಕ್ಕಾಚಾರದಲ್ಲಿಯೇ ಈ ನಿರ್ಣಾಯಕ ಸಮುದಾಯಗಳ ಒಂದು ಭಾಗವನ್ನು ಗೆಲ್ಲುವುದೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ಪರಮ ಗುರಿಯಾಗಿದೆ.

ಭಾವನಾತ್ಮಕವಾಗಿ ಜನರನ್ನು ಹಿಡಿದಿಟುಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಹೂಡುವಲ್ಲಿ ಬಿಜೆಪಿ ಎತ್ತಿದ ಕೈ. ಈಗಾಗಲೇ ಮೈಸೂರು ट्ट ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ ಪ್ರೆಸ್‌ ರೈಲಿಗೆ ʼಒಡೆಯರ್‌ʼ ಎಂದು ಮರುನಾಮಕರಣ,  ಮೈಸೂರು ट्ट ತಾಳಗುಪ್ಪ ರೈಲಿಗೆ ರಾಷ್ಟ್ರಕವಿ ಕುವೆಂಪು ಹೆಸರನ್ನು ಮರು ನಾಮಕರಣ ಮಾಡಿದೆ. ಇತ್ತ, ಶ್ರೀರಂಗಪಟ್ಟಣದಲ್ಲಿ ಹನುಮಾನ್‌ ದೇವಸ್ಥಾನವನ್ನು ಧ್ವಂಸಗೊಳಿಸಿ ಟಿಪ್ಪು ಸುಲ್ತಾನ್‌ ಮಸೀದಿ ಕಟ್ಟಿದ್ದ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆಯು ಮತ್ತೆ ಅದೇ ಸ್ಥಳದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದೆ, ಇನ್ನೊಂದೆಡೆ ರಾಮನಗರದ ರಾಮ ದೇವರ ಬೆಟ್ಟದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ, ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ೫೦೦ ಕೋಟಿ ಅನುದಾನ ಘೋಷಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಒಕ್ಕಲಿಗ ಮೀಸಲು, ಬಿಜೆಪಿ ಸೃಷ್ಟಿಯ ʼಉರಿನಂಜುʼ (ಟಿಪ್ಪುವನ್ನು ಕೊಂದ್ದದ್ದು ಉರಿಗೌಡ, ನಂಜೇಗೌಡ ವಿಷಯವನ್ನು ಸೃಷ್ಟಿಸಿ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ) ಹೀಗೆ ಒಂದೇ ಎರಡೇ..? ಭಾವನಾತ್ಮಕವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಒಕ್ಕಲಿಗರ ಮತ ಸೆಳೆಯುವುದಕ್ಕೆ ಇಷ್ಟೆಲ್ಲಾ ರಣತಂತ್ರ ಹೂಡಿದೆ. ಇಷ್ಟೆಲ್ಲಾ ಆಗಿಯೂ ಒಕ್ಕಲಿಗ ಮತಗಳು ಯಾವ ಕಡೆ ವಾಲುತ್ತದೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಒಕ್ಕಲಿಗರ ಒಲವು ಬಿಜೆಪಿಗೋ ಅಥವಾ ಸಾಂಪ್ರದಾಯಿಕವಾಗಿ ಬಂದಂತೆ ಮತ್ತೆ ಜೆಡಿಎಸ್‌, ಕಾಂಗ್ರೆಸ್‌ ಗೆ ಹಂಚಿ ಹೋಗಲಿದೆಯೋ ಎಂಬುವುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ   


  


Thursday, April 13, 2023

ನಕ್ಸಲ್ ಗ್ಯಾಂಗ್ ಕಟ್ಟಿದ 'ರೈಲುಭೂತ' ಕಥೆ !

ಕ್ರಾಂತಿಕಾರಿ ಸಿದ್ಧಾಂತಗಳನ್ನು ನಂಬುವ ನಕ್ಸಲಿಸಂ, ಅದು ನೆಲೆನಿಂತ ಕಡೆಗಳಲ್ಲಿ ನಂಬಿಕೆಗಳನ್ನು ದುರುಪಯೋಗ ಮಾಡಿಕೊಂಡಿರುವ ವಿಚಾರ ಹೋಸತೇನಲ್ಲ. ಕೋವಿ, ಕತ್ತಿ ರಕ್ತಪಾತಗಳಲ್ಲಿಯೇ ಹೆಚ್ಚು ನಂಬಿಕೆ ಇಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು, ಅನ್ಯಾಯಗಳನ್ನೇ ಉಸಿರಾಡುತ್ತಿರುವ ನಕ್ಸಲ್ ಗ್ಯಾಂಗ್ ಗಳು ನಡೆಸಿದ ಉಪಟಳವನ್ನು ಈ ದೇಶ, ನಾಡು ಕಂಡಿದೆ. ಸಮಾಜದ್ರೋಹಿ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟಿದೆಯಾದರೂ ಅಲ್ಲಲ್ಲಿ ಇನ್ನೂ ತಲೆ ಎತ್ತಿಕೊಂಡೇ ಇವೆ ಎನ್ನುವುದು ಈ ವ್ಯವಸ್ಥೆಯ ದುರಂತಗಳಲ್ಲಿ ಒಂದು. 

ತಮ್ಮ ಹಿತಾಸಕ್ತಿಗಳಿಗಾಗಿ ರಕ್ತಪಾತ ನಡೆಸುವುದಕ್ಕೂ ತಯಾರಿರುವ ಧೋರಣೆ ಹೊಂದಿರುವ ಹೀನ ದರಿದ್ರ ಮನಸ್ಥಿತಿಯ ನಕ್ಸಲಿಸಂ ಈ ನಾಗರಿಕ ಸಮಾಜಕ್ಕೆ ಮಾರಕ ಶಕ್ತಿಯಿದ್ದಂತೆ. ಉಗ್ರಗಾಮಿತ್ವದ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದದ್ದು ಈ ವ್ಯವಸ್ಥೆಯ ಒಳಗೆಯೇ ಇದ್ದವರು ಎನ್ನುವುದು ಮತ್ತೊಂದು ವಿಷಾದನೀಯ ಸಂಗತಿ. 

ಕಾನೂನಿನ ವಿರುದ್ಧ ವಿಚ್ಚಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಒಂದು ಸಮಾಜದ್ರೋಹಿ ನಕ್ಸಲ್ ಗ್ಯಾಂಗ್ ಹೂಡುವ ಸಮಾಜದ್ರೋಹಿ ಕೆಲಸವನ್ನು ಬಟಾಬಯಲುಗೊಳಿಸುವ ರೋಚಕ ಕಥೆಯಾಧಾರಿತ ನಾಟಕ 'ರೈಲುಭೂತ'( ಮೂಲ : ಅರ್ನಾಲ್ಡ್ ರಿಡ್ಲೆ, ಕನ್ನಡ ರೂಪಾಂತರ : ಡಾ. ಪಾರ್ವತಿ ಜಿ‌. ಐತಾಳ್ ). 

ಇತ್ತೀಚೆಗೆ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ನಾಟಕೋತ್ಸವದಲ್ಲಿ ಅಮೋಘ (ರಿ.) ಹಿರಿಯಡಕ ತಂಡ ಈ ನಾಟಕವನ್ನು ಅಮೋಘವಾಗಿಯೇ ಪ್ರಸ್ತುತ ಪಡಿಸಿದೆ ಎನ್ನುವುದು ಅತಿಶಯೋಕ್ತಿಯಲ್ಲ. 'ಬದುಕೊಂದು ಭಾವನೆಗಳ ಬಂಡಿ' ಎಂಬ ಶೀರ್ಷಿಕೆ ಗೀತೆಯೊಂದಿಗೆ, ನಿಸ್ತೇಜ ಸಣ್ಣ ಹಳ್ಳಿಯೊಂದರ ನಿರ್ಜನ ರೈಲ್ವೆ ಸ್ಟೇಷನ್ ನ  ರೈಲು ಬರುವ ಸಮಯದ ಅನೌನ್ಸ್ ಮೆಂಟ್ ನೊಂದಿಗೆ ತೆರೆದುಕೊಳ್ಳುವ ನಾಟಕ, ಆರಂಭದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.  

ಬೇರೆ ಬೇರೆ ಹಿನ್ನಲೆಯುಳ್ಳ ಐದಾರು ಪ್ರಯಾಣಿಕರು ಈ ನಿರ್ಜನ ಪಾಳುಬಿದ್ದ ರೈಲ್ವೆ ಸ್ಟೇಷನ್ ನಲ್ಲಿ ಕಳೆಯುವ ಒಂದು ರಾತ್ರಿಯಲ್ಲಿ ಎದುರಿಸುವ ಭಯಾನಕ ರೈಲುಭೂತ ಕಥೆ ಹಾಗೂ ಸ್ಮಗ್ಲಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಕ್ಸಲ್ ಗ್ಯಾಂಗ್ ಮಾಡುವ ಕುತಂತ್ರದಿಂದಾಗಿ ಸೃಷ್ಟಿಯಾಗುವ ಅಹಿತಕರ ಘಟನೆಗಳು ಎದುರಿಸುತ್ತಾ ಅಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರಾಗುತ್ತಾರೆ. ಒಂದೆಡೆ ಮದುವೆಯಾಗಿ ಹೊಸತರಲ್ಲಿರುವ ಜೋಡಿ, ಇನ್ನೊಂದೆಡೆ ಮದುವೆಯಾಗಿ ವಿಚ್ಛೇದನದೊರೆಗೂ ಹೋಗಿ ಮತ್ತೆ ಒಂದಾಗುವ ಜೋಡಿ, ಈ ನಕ್ಸಲ್ ಗ್ಯಾಂಗ್ ನ ಬೆನ್ನು ಹತ್ತಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹಾಸ್ಯಪ್ರಜ್ಞೆಯುಳ್ಳವನಂತೆ ನಟಿಸುವ ಸಿಐಡಿ, ಹಾಸ್ಯಕ್ಕೆ ಬೇಕಾಗಿ ಡೊಳ್ಳು ಹೊಟ್ಟೆಯ ಮತ್ತೊಂದು ಪಾತ್ರ, ಸ್ಟೇಷನ್ ಮಾಸ್ಟರ್ ನಡುವೆ ಈ ಗ್ಯಾಂಗ್ ಹೆಣೆಯುವ ಕುತಂತ್ರದ ಸುತ್ತ ಒಂದು ರೀತಿಯಲ್ಲಿ ಪತ್ತೇದಾರಿಯಂತೆ ಸಾಗುವ ನಾಟಕದ ವಸ್ತು ಗಂಭೀರತೆಯಿಂದ ಕೂಡಿದ್ದರೂ ಆರಂಭದಿಂದ ಕೊನೆಯವರಗೂ ಹಾಸ್ಯದ ಜೊತೆಜೊತೆಗೆ ಸಾಗುತ್ತದೆ. 

ಕಥೆಗೆ ಬೇಕಾದ ರಂಗಸಜ್ಜಿಕೆ, ಬೆಳಕು, ಸಂಗೀತ ಎಲ್ಲವೂ ನಿಜಕ್ಕೂ ವೀಕ್ಷಕನೊಬ್ಬನ ಮನ ತಟ್ಟುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿಯವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ. ಕಥೆಯಲ್ಲಿ ಪಾಲ್ಪಡೆದ ಎಲ್ಲಾ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ನಾಟಕದ ಮೂಲ ಕಥೆ ನೂರಾರು ವರ್ಷಗಳ ಹಿಂದಿನದ್ದಾದರೂ ಇಂದಿಗೂ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ ಎನ್ನುವುದು ನಾಟಕದ ಹೆಚ್ಚುಗಾರಿಕೆ. ಮೂಲವನ್ನು ರೂಪಾಂತರಿಸಿ ಇನ್ನೊಂದು ಭಾಷಗೆ ತರುವುದು ಸುಲಭದ ಕೆಲಸವಲ್ಲ. ಹಿರಿಯ ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕನ್ನಡ ರಂಗಭೂಮಿಗೆ ನೀಡಿದ ಉತ್ತಮ ಕೊಡುಗೆಗಳಲ್ಲಿ 'ರೈಲುಭೂತ' ನಾಟಕವೂ ಒಂದು. ಕಥೆಯನ್ನು ರಂಗಕ್ಕೆ ತರುವುದು ಕೂಡ ಸುಲಭವಿಲ್ಲ, ರಂಗದಲ್ಲಿ ಎಲ್ಲೂ ಭ್ರಮನಿರಸನ ಮೂಡಿಸದೆ ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕರು ಮತ್ತು ಇಡೀ ಅಮೋಘ ತಂಡ ಯಶಸ್ವಿಯಾಗಿದೆ. ರಂಗಾಸಕ್ತರನ್ನು ಇನ್ನಷ್ಟು ಈ ನಾಟಕ ತಲುಪುವಂತಾಗಲಿ. 

-ಕಾವ್ಯ ಬೈರಾಗಿ

#ShreerajVakwady 


ಚಿತ್ರಗಳು : ಛಾಯಾ ಕುಂದಾಪುರ 


ಡಿಯರ್‌ ಮಾಮಾ ಪರ ಸುದೀಪ್‌ ಮತ ಬೇಟೆ !

ರಾಜ್ಯದಲ್ಲಿ ಮತಗಳಾಗಿ ಪರಿವರ್ತಿತವಾದ ಸಿನೆಮಾ ವರ್ಚಸ್ಸುಗಳು... 


ಚುನಾವಣೆಯ ಸಂದರ್ಭದಲ್ಲಿ ಸ್ಟಾರ್‌ ಪ್ರಚಾರಕರನ್ನು ತಮ್ಮ ಪಕ್ಷಕ್ಕೆ ರಾಯಭಾರಿಯಂತೆ ಖರೀದಿಸುವುದು ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತೀರಾತಿಸಹಜ. ರಾಜ್ಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗ ಅವರ ಪ್ರೀತಿಯ ಮಾಮ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದು ಈಗ  ವಿವಾದಕ್ಕೆ ಕಾರಣವಾಗಿದೆ. ಸಿನೆಮಾ ನಟರ ರಾಜಕೀಯ ಪ್ರವೇಶ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ತಮ್ಮ ಸಿನೇಮಾ ರಂಗದಲ್ಲಿನ ವರ್ಚಸ್ಸಿನಿಂದ ರಾಜಕೀಯಕ್ಕೆ ಪ್ರವೇಶಿಸಿದವರು ಹಲವರಿದ್ದಾರೆ.    

ಆಂಧ್ರಪ್ರದೇಶದಲ್ಲಿ ಎನ್ ಟಿ ಆರ್ ರಾಜಕೀಯದಲ್ಲಿ ಸೃಷ್ಟಿಸಿದ ಹವಾದ ಬಗ್ಗೆ ಇಡೀ ದೇಶ ಮಾತನಾಡುತ್ತದೆ. ತಮಿಳುನಾಡಿನಲ್ಲಿ ಎಂಜಿಆರ್ ಮತ್ತು ಅಮ್ಮಾ ಜಯಲಲಿತಾ ಮಾಡಿದ ರಾಜಕೀಯ ಮೋಡಿಯದ್ದು ದೊಡ್ಡ ಇತಿಹಾಸ. ಜಯಲಲಿತಾ ಬಗ್ಗೆ ಇವತ್ತಿಗೂ ತಮೀಳರಲ್ಲಿ ಒಂದು ಕೃತಜ್ಞತಾ ಭಾವವಿದೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈ ಪವರ್‌ ಹೌಸ್ ಸ್ಟಾರ್‌ ಗಳು ಬಾಕ್ಸ್ ಆಫೀಸ್‌ ನಲ್ಲಿ ಆ ಕಾಲದಲ್ಲಿ ಧೂಳ್‌ ಎಬ್ಬಿಸಿದ್ದರು. ಸಿನೆಮಾ ತೆರೆಯಲ್ಲಿ ಜನಮನ ಗೆದ್ದಿದ್ದ ಇಬ್ಬರೂ ರಾಜಕೀಯದಲ್ಲಿಯೂ  ದೊಡ್ಡ ಯಶಸ್ಸು ಪಡೆದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಹತ್ತರವಾದ ಪಾತ್ರ ಪಡೆದು ಅಜರಾಮರಾದರು.  ಸಿನೆಮಾ ಕ್ಷೇತ್ರದ ವರ್ಚಸ್ಸಿನ ಮೂಲಕವೇ ರಾಜಕೀಯ ಪ್ರವೇಶ ಕಂಡಿದ್ದ ಅವರು ಸಿನೆಮಾ ಕ್ಷೇತ್ರದಲ್ಲಿ ತಮಗಿದ್ದ ಅಭಿಮಾನವನ್ನು ರಾಜಕೀಯದಲ್ಲಿ ಮತಗಳಾಗಿ, ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದರು. ತಮ್ಮದೇ ಆದ ಸಿನೆಮಾ ವರ್ಚಸ್ಸಿನ ಮೂಲಕ ರಾಜಕೀಯದಲ್ಲಿ ಮೈಲೇಜ್‌ ಪಡೆದುಕೊಂಡರು. 

ರಾಜಕೀಯದಲ್ಲಿ ಇದೊಂದು ತಾರ್ಕಿಕ ಹೆಜ್ಜೆ ಎಂದು ಕಾಣಿಸುತ್ತದೆ. ಚಿತ್ರರಂಗದ ಶ್ರೇಷ್ಠ ಮಾನ್ಯರ ಹೆಸರುಗಳು ಮತ್ತು ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸುವುದು ರಾಜಕೀಯದ ತಂತ್ರಗಳಲ್ಲಿ ಒಂದಾಗಿ ಬಿಟ್ಟಿದೆ. ಈ ದೇಶ ಸಿನೆಮಾ ನಟ ನಟಿಯರ ಮೇಲೆ ಯಾವ ರೀತಿಯ ಹುಚ್ಚು ಅಭಿಮಾನ ಹೊಂದಿದೆ ಎಂದರೇ, ಅಭಿಮಾನದ ಪರಾಕಾಷ್ಠೆಯಲ್ಲಿ ಇಲ್ಲಿ ಸಿನೆಮಾ ತಾರೆಯರಿಗೆ (ಖುಷ್ಬು) ದೇವಸ್ಥಾನ ಕಟ್ಟಿದ ಉದಾಹರಣೆಯೂ ಇದೆ.

ಕರ್ನಾಟಕದಲ್ಲಿ, ಸಿನಿಮಾ ತಾರೆಯರು ಮತ್ತು ರಾಜಕೀಯದ ನಡುವಿನ ಸಂಪರ್ಕವು ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ ಎಂದು ತೋರುತ್ತದೆ. ಈ ದಕ್ಷಿಣ ರಾಜ್ಯದಲ್ಲಿ ಸಿನೇಮಾ ತಾರೆಯರ ಮೇಲೆ ಇರುವ ಆರಾಧನೆಯು ಕಡಿಮೆಯೇನಲ್ಲ. ಅಭಿಮಾನಿಗಳ ಸಂಘಗಳು ಮತ್ತು ದೈತ್ಯ ಕಟೌಟ್‌ ಗಳು ಮತ್ತು ಅವರ ಸ್ಟ್ಯಾಚ್ಯೂಗಳು, ಈಗೀಗ ಅಂತೂ ಸೋಶಿಯಲ್‌ ಮೀಡಿಯಾಗಳಲ್ಲಿ ಸೋ ಕಾಲ್ಡ್‌ ʼಫ್ಯಾನ್ಸ್‌ ಕ್ಲಬ್‌ʼ ಇತ್ಯಾದಿ ಇತ್ಯಾದಿಗಳು ಹುಚ್ಚು ಅಭಿಮಾನದ ಗುರುತುಗಳು. ಆದರೆ ಇವೆಲ್ಲವೂ ನಡೆಯುವುದು ಸಿನೇಮಾ ಕಾರಣಕ್ಕಾಗಿಯೇ ಹೊರತು, ಅವರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಅಲ್ಲ. 

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್, ಮೇರು ನಟ ಡಾ. ರಾಜ್‌ ಕುಮಾರ್. ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರು. ಡಾ. ರಾಜ್‌ ಪಕ್ಷಾತೀತವಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಸಿನೇಮಾ ಕ್ಷೇತ್ರದ ಜೊತೆಜೊತೆಗೆ ರಾಜ್‌ ಕನ್ನಡದ ನಾಡು ನುಡಿ, ಜಲಕ್ಕಾಗಿ ಕೆಲಸ ಮಾಡಿದ್ದರು. ಕನ್ನಡದ ಉಳಿವು ಮತ್ತು ಬಳಕೆಯ ಆಶಯದ ಬಗ್ಗೆ ತಮ್ಮ ನಿಲುವಿನಲ್ಲಿ ಅವರಲ್ಲಿ ಸ್ಪಷ್ಟತೆ ಇತ್ತು. ಮತ್ತು ನೆರೆಯ ರಾಜ್ಯಗಳೊಂದಿಗೆ ಕಾವೇರಿ ನೀರು ಹಂಚಿಕೆಯ ವಿಷಯ ಬಂದಾಗ ಕರ್ನಾಟಕದ ಹಿತಾಸಕ್ತಿಗೆ ಪರವಾಗಿ ದುಡಿದ್ದರು. ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟವಾಗಲಿ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲುವುದಾಗಲಿ, ಯಾವುದೇ ರಾಜಕೀಯ ನಾಯಕರಿಗೆ ಪರೋಕ್ಷವಾಗಲಿ ಅಥವಾ ಪ್ರತ್ಯಕ್ಷವಾಗಲಿ ಬೆಂಬಲ ಸೂಚಿಸುವುದಾಗಲಿ, ಚುನಾವಣಾ ಪ್ರಚಾರಗಳಲ್ಲಿ ಎಂದೂ ಭಾಗಿಯಾದವರಲ್ಲ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ರಾಜಕೀಯಕ್ಕೆ ಪ್ರವೇಶಿಸಿದ್ದರೇ ರಾಜ್ಯದ ಯಾವುದೇ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದರೂ, ಯಾವುದೇ ಪಕ್ಷದಿಂದಲೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಗೆಲ್ಲಬಹುದಿತ್ತು. ಇನ್ನು, ಅವರ ಮೂವರು ಪುತ್ರರು ಕೂಡ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಹಿರಿಯ ಮಗ ಶಿವ ರಾಜ್‌ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ವಿವಾಹವಾದರು. ರಾಜ್‌ ಕುಟುಂಬಕ್ಕೆ ಶಿವ ರಾಜ್‌ ಕುಮಾರ್‌ ವಿವಾಹದಿಂದಾಗಿ, ರಾಜಕೀಯದ ಸ್ಪರ್ಶ ಹೊಂದಿತ್ತಾದರೂ, ಡಾ. ರಾಜ್‌ ಆಗಲಿ, ಅವರ ಮಕ್ಕಳಾಗಲಿ ರಾಜಕೀಯ ಪ್ರವೇಶವನ್ನು ಬಯಸಲಿಲ್ಲ ಎನ್ನುವುದು ಗಮನಾರ್ಹ ವಿಚಾರ. 

ಕನ್ನಡದ ಮತ್ತೊಬ್ಬ ಸೂಪರ್‌ ಸ್ಟಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರಾದರೂ, ಅವರು ಕೂಡ ರಾಜಕೀಯ ಮತ್ತು ರಾಜಕೀಯ ಪಕ್ಷಗಳಿಂದ ದೂರವಿದ್ದರು.

ಕರ್ನಾಟಕದ ಇತರ ನಟರು ರಾಜ್ಯದಲ್ಲಿ ರಾಜಕೀಯ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಖಂಡಿತವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಹಾಗೆ ಅವರ ಉದ್ಯಮದ ಸಹೋದ್ಯೋಗಿಗಳ ಪ್ರಭಾವದಿಂದ ಅಲ್ಲ.

ಇತ್ತೀಚೆಗಷ್ಟೆ ರಾಜಕೀಯದ ನೀರಲ್ಲಿ ಮುಳುಗಿರುವ ಸ್ಟಾರ್  ನಟ ಕಿಚ್ಚ ಸುದೀಪ್, ಇಂದು ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬಿಜೆಪಿ ಪ್ರಚಾರಕ್ಕೆ ಅವರ ಬೆಂಬಲದ ಘೋಷಣೆ ಹಲವು ಮೂಲಗಳಿಂದ ಬಂದಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಅಂತಿಮವಾಗಿ ಅವರೇ ಖುದ್ದಾಗಿ ಅವರ ಪ್ರೀತಿಯ ಮಾಮಾ ಬೊಮ್ಮಾಯಿ ಅವರು ಹೇಳಿದೆಡೆ ಪ್ರಚಾರ ಮಾಡುವುದಾಗಿ ಘೋಷಿಸಿದರು. ಅವರ ಮೇಲಿನ ಅಭಿಮಾನಕ್ಕಾಗಿ ಹೊರತು ಹಣಕ್ಕಾಗಿ ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದರು. ಐಟಿ ದಾಳಿಗೆ ಹೆದರಿ ಸುದೀಪ್‌ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂಬ ಚರ್ಚೆಯೂ ರಾಜಕೀಯದಲ್ಲಿ ಸೃಷ್ಟಿಯಾಯಿತು (೨೦೧೯ರ ಜನವರಿಯಲ್ಲಿ ಸುದೀಪ್‌ ಮನೆ ಮೇಲೆ ಐಟಿ ದಾಳಿ ನಡೆಸಿತ್ತು). ಇನ್ನು, ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನು ಸುದೀಪ್‌ ಭೇಟಿ ಮಾಡಿದಾಗ ಸುದೀಪ್‌ ಈ ಬಾರಿ ಕಾಂಗ್ರೆಸ್‌ ಪರ ಪ್ರಚಾರ ಮಾಡಬಹುದೇನೋ ಎಂಬ ಚರ್ಚೆಯಾಗಿತ್ತು. ಮಾತ್ರವಲ್ಲದೇ, ಸುದೀಪ್‌ ೨೦೧೮ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು, ಅಂದು ಕೂಡ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ಗೌರವಕ್ಕಾಗಿ ಪ್ರಚಾರ ಮಾಡಲು ಒಪ್ಪಿದ್ದೇನೆ, ಹಣಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದರು ಸುದೀಪ್.    

ಸುದೀಪ್ ಎಷ್ಟೇ ಪ್ರೀತಿ, ಗೌರವ, ಅಭಿಮಾನದಿಂದಷ್ಟೇ ಪ್ರಚಾರ ಮಾಡುತ್ತಿದ್ದೇನೆ ಅಂದರೂ ಅದರ ಹಿಂದೆ ಬೇರೆ ವಿಷಯವೇ ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದಂತೂ ಸತ್ಯ, ಸುದೀಪ್‌ ಪೂರ್ಣ ಮನಸ್ಸಿನಿಂದ ಯಾವ ಪಕ್ಷವನ್ನು ಒಪ್ಪಿದಂತೆ ಕಾಣಿಸುತ್ತಿಲ್ಲ. 

೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಜಿಏಫ್ ಖ್ಯಾತಿಯ ಯಶ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡಿದರು. ಅಭ್ಯರ್ಥಿಯೇ ಮುಖ್ಯ, ಪಕ್ಷವಲ್ಲ ಎಂದು 'ರಾಕಿಂಗ್ ಸ್ಟಾರ್' ಹೇಳಿದ್ದರು. ಇದು ಮತ್ತೊಂದು ಥರದಲ್ಲಿ ಚರ್ಚೆಯಾಗಿತ್ತು.  

ನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು. ೨೦೧೯ ರಲ್ಲಿ ಚುನಾಯಿತರಾದಾಗ, ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ ನಿಂದ ಪಕ್ಷ ಸೇರ್ಪಡೆಗೆ ಪ್ರಯತ್ನಗಳು ಅಂದು ನಡೆದಿತ್ತಾದರೂ ಸುಮಲತಾ ಒಪ್ಪಿರಲಿಲ್ಲ. ಅದೇನೇ ಇದ್ದರೂ, ಅವರ ಪತಿ, 'ರೆಬೆಲ್ ಸ್ಟಾರ್' ಅಂಬರೀಶ್, ಬಹುಶಃ ಕನ್ನಡ ಚಲನಚಿತ್ರ ತಾರೆಯರಲ್ಲಿ ಮಹತ್ವದ ರಾಜಕೀಯ ವೃತ್ತಿಜೀವನವನ್ನು ಹೊಂದಿರುವ ದೊಡ್ಡ ಹೆಸರು. ಅಂಬರೀಶ್ ಅವರು ಕಾಂಗ್ರೆಸ್ ಮತ್ತು ಜನತಾದಳದೊಂದಿಗೆ ರಾಜಕೀಯದಲ್ಲಿದ್ದು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು ಮತ್ತು ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ (೨೦೧೩) ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು. 

ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಅನಂತ್ ನಾಗ್ ಅವರು ರಾಜ್ಯದಲ್ಲಿ ಜೆ.ಎಚ್.ಪಟೇಲ್ ಅವರ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೇ, ಈಗ ಅನಂತ ನಾಗ್‌ ರಾಜಕೀಯದ ಸಿದ್ಧಾಂತ ಬದಲಾಯಿಸಿಕೊಂಡಿದ್ದು, ನೇರನೇರವಾಗಿ ತಾವು ಮೋದಿ ಮತ್ತು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿಕೊಳ್ಳುತ್ತಾರೆ. 

ಇತ್ತೀಚೆಗಿನ ವರ್ಷಗಳಲ್ಲಿ, ಹಲವು ಇತರ ನಟರು ವಿವಿಧ ಹಂತದ ಯಶಸ್ಸಿನೊಂದಿಗೆ ರಾಜ್ಯದಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದಾರೆ - 'ಮುಖ್ಯಮಂತ್ರಿ' ಚಂದ್ರು, ಉಮಾಶ್ರೀ ಮತ್ತು ಕುಮಾರ್ ಬಂಗಾರಪ್ಪ (ಎಸ್ ಬಂಗಾರಪ್ಪ ಅವರ ಪುತ್ರ), ನಿಖಿಲ್ ಕುಮಾರ್‌ ಸ್ವಾಮಿ ( ಅವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದರು - ಸುಮಲತಾ ವಿರುದ್ಧ ಸೋತರು) ಮಂಡ್ಯದ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ), ಉಪೇಂದ್ರ ( ಅವರು ರಾಜಕೀಯ ಎಂದು ಹೇಳಿಕೊಳ್ಳುವುದಕ್ಕೆ ತಯಾರಿಲ್ಲದಿದ್ದರೂ ಒಂದು ರೀತಿಯಲ್ಲಿ ಅವರದ್ದು ʼಪ್ರಜಾಕೀಯʼದ ಮೂಲಕ ರಾಜಕೀಯ ಪ್ರವೇಶವೇ ಹೌದು ಅಂತಂದುಕೊಳ್ಳಬಹುದು)  ಹಾಗೂ ಇನ್ನಿತರ ಪ್ರಮುಖರನ್ನು ಕಾಣಬಹುದು.     

ಒಟ್ಟಾರೆಯಾಗಿ, ಚಲನಚಿತ್ರ ತಾರೆಯರು ರಾಜಕೀಯ ಪ್ರವೇಶಿಸಿದಾಗ ಒಂದಿಷ್ಟು ಕುತೂಹಲ ರಾಜಕೀಯವಾಗಿ ಸೃಷ್ಟಿಯಾಗುವುದು ಸಹಜ. ಸುದೀಪ್‌ ಈ ಚುನಾವಣೆಯಲ್ಲಿ ಸುದ್ದಿಯಲ್ಲಿದ್ದಾರೆ. ಸುದೀಪ್‌ ರಿಂದ ಏನು ರಾಜಕೀಯವಾಗಿ ಬದಲಾಗಬಹುದು..? ಬಿಜೆಪಿಗೆ ಲಾಭವೇ ನಷ್ಟವೇ..? ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ


Thursday, April 6, 2023

ಮತ ಧ್ರುವೀಕರಣಕ್ಕೆ ಮೀಸಲಾತಿ ವಿಷ್ಯ

ಮ್ಯಾಜಿಕ್ ಫಿಗರ್ ಸಾಧಿಸಲು ಪಕ್ಷಾಂತರ ಮಾಡುವವರಿಗೆ ಫುಲ್ ಡಿಮ್ಯಾಂಡ್‌.! 

ರಾಜ್ಯ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಇಟ್ಟಾಗಿದೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ರಾಜಕೀಯ ಪಕ್ಷಗಳು ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಬಹುತೇಕ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ. ಈಗಾಗಲೇ ಹಠಾತ್ತನೆ ಬಣ್ಣ ಬದಲಾಯಿಸಿಕೊಂಡು, ನೆಲೆ ಬದಲಾಯಿಸಿಕೊಂಡು ತಮ್ಮೆಡೆಗೆ ಬಂದ ಪ್ರಭಾವಿ ನಾಯಕರುಗಳನ್ನು ಎಲ್ಲಾ ಪಕ್ಷಗಳು ಸ್ವಾಗತಿಸುತ್ತಿವೆ. ಇದು ಎಲ್ಲಾ ರಾಜ್ಯಗಳ, ಎಲ್ಲಾ ಚುನಾವಣೆಗಳಲ್ಲಿ ಸಹಜವೇ ಆಗಿದ್ದರೂ, ಕರ್ನಾಟಕದ ವಿಚಾರದಲ್ಲಿ ಮಾತ್ರ ಹೆಚ್ಚು ಗಮನಾರ್ಹ ವಿಚಾರವಾಗಿದೆ. 

ಪಕ್ಷಾಂತರದ ವಿಷ್ಯ :  ಈ ಪಕ್ಷಾಂತರ ಮಾಡುವವರಲ್ಲಿಯೂ ಎರಡು ಮೂರು ವಿಧಗಳಿವೆ. ಪಕ್ಷ ತಮಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ನಿರಾಕರಿಸಬಹುದು ಎಂಬ ಕಾರಣಕ್ಕೆ, ಇನ್ನೊಂದು ಪಕ್ಷದಿಂದ ಟಿಕೆಟ್‌ ನೀಡುವ ಭರವಸೆ ಕೊಟ್ಟ ಕಾರಣಕ್ಕೆ ಪಕ್ಷಾಂತರ ಮಾಡುವವರು, ಪಕ್ಷದೊಳಗಿನ ಬಣಗಳ ಪೈಪೋಟಿಯಿಂದ ಬೇಸತ್ತುಅಥವಾ ರಾಜ್ಯ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದ ಪರಿಣಾಮದಿಂದಾಗಿ ಪಕ್ಷ ಬದಲಿಸುವ ನಿರ್ಧಾರಕ್ಕೆ ಬರುವುದು, ಮೂರನೇಯದು, ಪಕ್ಷದ ಬೆಳವಣಿಗೆ ಹಿತವೆನ್ನಿಸದೇ ಇರುವಾಗ ಪಕ್ಷ ತೊರೆಯುವ ನಿರ್ಧಾರಕ್ಕೂ ಬರಬಹುದು. ಇವೆಲ್ಲವೂ ಕೂಡ ವೈಯಕ್ತಿಕ ಲಾಭದ ಉದ್ದೇಶವೇ ಆಗಿರಲಿದೆ ಎನ್ನುವುದು ಮುಖ್ಯಾಂಶ. ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದಾಗ ಮತ್ತು ಅತೃಪ್ತ ಟಿಕೆಟ್‌ ಆಕಾಂಕ್ಷಿಗಳು ಬೇರೆ ಯಾವುದಾದರೂ ಪಕ್ಷದೊಂದಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸುವುದಕ್ಕಾಗಿ ಪಕ್ಷಾಂತರ ಮಾಡುವ ಮತ್ತೊಂದು ಅಂಶವೂ ಕೂಡ ಇದೆ. ಇದು ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. 

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಆದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಪ್ರಮುಖ ಸಾಕ್ಷಿಗಳಲ್ಲೊಂದು. ೨೦೧೮ರಲ್ಲಿ ಅತಿ ಹೆಚ್ಚು ಸ್ಥಾನಗಳನ್ನು(೧೦೪) ಗಳಿಸಿದ ಪಕ್ಷವೆಂದು ಬಿಜೆಪಿ ಹೊರಹೊಮ್ಮಿದರೂ ಕೂಡ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯಿಂದ ಬಿಜೆಪಿ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಆದರೇ ೨೦೧೯ರಲ್ಲಿ ಆದ ರಾಜಕೀಯ ಹೈಡ್ರಾಮ, ಪ್ರಮುಖ ನಾಯಕರ ರಾಜೀನಾಮೆ ಪರ್ವ, ಪಕ್ಷಾಂತರ, ನಾಯಕರ ಅನರ್ಹತೆಯ ಹೈಡ್ರಾಮ, ಉಪ ಚುನಾವಣೆಗಳು ರಾಜ್ಯ ರಾಜಕಾರಣದ ಒಂದು ನೋಟವನ್ನೇ ಬದಲಾಯಿಸಿ ಬಿಟ್ಟಿತು. ಬಹುಮತ ಗಳಿಸಲು ಸಾಧ್ಯವಾಗದ ಬಿಜೆಪಿ ಕಾಂಗ್ರೆಸ್, ಜೆಡಿಎಸ್‌ ಸರ್ಕಾರದಲ್ಲಿ ಬೇಸತ್ತ ಬಂಡಾಯಗಾರರ ಬೆಂಬಲದೊಂದಿಗೆ ಅಧಿಕಾಕ್ಕೇರಿತು. ರಾಜ್ಯ ರಾಜಕಾರಣದಲ್ಲಿ ಇದು ಇತ್ತೀಚೆಗಂತೂ ತೀರಾ ಸಾಮಾನ್ಯದಂತಾಗಿ ಬಿಟ್ಟಿದೆ. ರಾಜ್ಯ ಕ್ಯಾಬಿನೆಟ್‌ ನ ಮೂರನೇ ಒಂದು ಭಾಗದಷ್ಟು ಜನ ಮೊದಲು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭ್ಯರ್ಥಿಗಳಾಗಿ ಆಯ್ಕೆಯಾದ ನಾಯಕರನ್ನು ಒಳಗೊಂಡಿತ್ತು. ನಂತರ ಅವರು ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಅಧಿಕಾರಕ್ಕೇರಿದರು. 

ಆಶ್ಚರ್ಯಕರವಾದ ವಿಷಯವೇನೆಂದರೇ, ಜನತಾದಳದಿಂದ ಪಕ್ಷಾಂತರವಾಗಿ ಕಾಂಗ್ರೆಸ್‌ ಗೆ ಸೇರಿಕೊಂಡ ಸಿದ್ದರಾಮಯ್ಯ ಕಾಂಗ್ರೆಸ್‌ ನ ಅಧಿಕಾರಾವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದರು, ಮತ್ತು ಬಿಜೆಪಿಗೆ ಸೇರಿಕೊಂಡ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ರಾಜೀನಾಮೆಯ ಫಲದಿಂದಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಕ್ಷಾಂತರವಾಗಿ ಬಂದವರು ಮುಖ್ಯಮಂತ್ರಿ ಸ್ಥಾನವನ್ನೂ ಏರಿದ ಉದಾಹರಣೆ ಈ ರಾಜ್ಯದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ. 

ಇನ್ನೂ ಕೆಲವು ಡೇಟಾ ಪಾಯಿಂಟ್‌ ಗಳು ಹೇಳುವ ಪ್ರಕಾರ, ಕರ್ನಾಟಕ ವಿಧಾನ ಸಭೆಯ ಪ್ರತಿ ಆರು ಶಾಸಕರಲ್ಲಿ ಒಬ್ಬರು ತಮ್ಮ ಚುನಾವಣಾ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷದ ಟಿಕೆಟ್‌ ಗಳಲ್ಲಿ ಚುನಾಯಿತರಾಗಿದ್ದಾರೆ. ಪ್ರಸ್ತುತ ಬಿಜೆಪಿ ಶಾಸಕರಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು (೧೧೯ ರಲ್ಲಿ ೨೮) ಹಿಂದೆ ಬೇರೆ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹತ್ತು ಪ್ರತಿಶತ ಕಾಂಗ್ರೆಸ್ ಶಾಸಕರು (೭೫ ರಲ್ಲಿ ೭) ಈ ಹಿಂದೆ ಬೇರೆ ರಾಜಕೀಯ ಪಕ್ಷದಿಂದ ಶಾಸಕರಾಗಿದ್ದರು. ಈ ಬೆಳವಣಿಗೆಗಳು ರಾಜಕೀಯ ಪಕ್ಷಗಳು ತೀವ್ರವಾಗಿ ಬಣ ಹೊಂದಿವೆ ಎಂಬ ಅಂಶಕ್ಕೆ ಸಂಬಂಧಿಸಿವೆ ಮತ್ತು ಪ್ರತಿಯೊಬ್ಬ ನಾಯಕನ ನಿರ್ಗಮನವು ಅವರ ಬೆಂಬಲಿಗರ ವಲಸೆಯನ್ನು ಸಹ ಪ್ರಚೋದಿಸುತ್ತದೆ.

೨೦೦೪ ರ ರಾಜ್ಯ ವಿಧಾನ ಸಭಾ ಚುನಾವಣೆಯ ಈಚೆಗಿನ ರಾಜಕೀಯ ಬೆಳವಣಿಗೆಗಳು ಏನೆಲ್ಲಾ ಆಗಿವೆ ಎನ್ನುವುದು ಗೊತ್ತಿರುವ ವಿಷಯ. ಇದೇ ಪಕ್ಷಾಂತರದ ಕಾರಣದಿಂದಾಗಿಯೇ ಯಾವ ಪಕ್ಷವೂ ಬಹುಮತವಿಲ್ಲದೇ ರಾಜಕೀಯದಲ್ಲಿ ಅತಂತ್ರ ಸ್ಥೀತಿ ಸೃಷ್ಟಿಯಾದದ್ದಿದೆ ಮತ್ತು ಕೆಲವು ರಾಜಕೀಯ ಪಕ್ಷಗಳ ಆಂತರಿಕ ಬಿರುಕಿನ ಕಾರಣದಿಂದಾಗಿ, ಪ್ರಭಾವಿ ನಾಯಕರು ಪಕ್ಷ ತೊರೆದು ಹೋದ ಫಲವಾಗಿ ಒಂದು ಪಕ್ಷಕ್ಕೆ ಪೂರ್ಣ ಬಹುಮತ(೨೦೧೩-ಕಾಂಗ್ರೆಸ್) ತಂದುಕೊಟ್ಟ ಉದಾಹರಣೆಯೂ ಇದೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಈ ʼಪಕ್ಷಾಂತರದ ವಿಷ್ಯʼ ಹೆಚ್ಚು ಕುತೂಹಲಕಾರಿಯಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಗಮನಕ್ಕೆ ಅರ್ಹವಾದ ಮತ್ತೊಂದು ವಾದವಿದೆ.  ೨೦೧೯ರಲ್ಲಿ ಉಪಚುನಾವಣೆಗಳು ನಡೆದ ಕ್ಷೇತ್ರಗಳ ಮತದಾರರು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಸ್ಥಿರತೆಯನ್ನು ನೋಡಿದ್ದಾರೆ ಮತ್ತು ಉಳಿದ ಅವಧಿಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಸ್ಪಷ್ಟ ಗೆಲುವನ್ನು ಬಯಸಿರಬಹುದು. ಆದರೂ ರಾಜಕೀಯ ಸ್ಥಿರತೆ ಕೇವಲ ಆಡಳಿತ ಪಕ್ಷದ ಉಳಿವಿಗಾಗಿ ಅಲ್ಲ. ಅದರ ಆಂತರಿಕ ವಿರೋಧಾಭಾಸಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತದೆ ಎಂಬುದರ ಬಗ್ಗೆಯೂ ಆಗಿದೆ ಎನ್ನುವುದು ಇಲ್ಲಿ ಪ್ರಮುಖ ಅಂಶ.  

ಒಂದು ಉದಾಹರಣೆಯೊಂದಿಗೆ ವಿವರಿಸುವುದಾದರೇ, ಅವಿಭಕ್ತ ಕುಟುಂಬದಲ್ಲಿ ಹೊಸ ಸೊಸೆ ಮನೆಗೆ ಬಂದರೆ ಎಲ್ಲರ ಗಮನ ಆಕೆ ಸಹಜವಾಗಿ ಸೆಳೆಯುತ್ತಾಳೆ. ಅದು ಆ ಸಂದರ್ಭದ ವಾಸ್ತವತೆ ಕೂಡ. ಈಗಾಗಲೇ ಮನೆಯಲ್ಲಿ ಇರುವ ಸೊಸೆಯಂದಿರ ಕೊಡುಗೆಯನ್ನು ಮರೆಯುವ ಪ್ರವೃತ್ತಿಗೂ ಇದು ಕಾರಣವಾಗಬಹುದು. ಈ ʼಪಕ್ಷಾಂತರದ ವಿಷ್ಯʼ ನೂ ಹೀಗೆಯೇ. ಹೊಸಬರು ಬಂದಾಗ ಮೊದಲಿನಿಂದ ಇದ್ದವರು ಮೂಲೆಗೆ ಸರಿಯುವ ಸಾಧ್ಯತೆ ಹೆಚ್ಚಿದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಭರವಸೆ ಕೊಟ್ಟು ಸೆಳೆದುಕೊಂಡವರಿಗೆ ಪ್ರಾಶಸ್ಯ ನೀಡಲೇ ಬೇಕಾಗಿರುವ ಕಾರಣದಿಂದ ಮೂಲದಿಂದಲೂ ಇದ್ದವರು ಮುನಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದೇ ವಿಷಯ ಪಕ್ಷವನ್ನು ಒಡೆದು ಹಾಕುವಲ್ಲಿಯೂ ಕೆಲಸ ಮಾಡಿದ್ದಿದೆ, ಆಂತರಿಕ ಸ್ವಾಸ್ಥ್ಯ ಕಳೆಯುವಲ್ಲಿ ಕೆಲಸ ಮಾಡಿದ್ದಿದೆ. ದಾರಿಯುದ್ದಕ್ಕೂ ಮಾಡಬೇಕಾದ ಹೊಂದಾಣಿಕೆಗಳನ್ನು ಲೆಕ್ಕಿಸದೆ,  ಸರಳ ಬಹುಮತದ ಮ್ಯಾಜಿಕ್ ಫಿಗರ್ ಸಾಧಿಸಲು ಮಾಡಬೇಕಾದ ತಯಾರಿಯಲ್ಲಿ ಎಲ್ಲಾ ಪಕ್ಷಗಳು ಇದರೆಡೆಗೆ ಒಲವು ತೋರಿಸುವುದು ರಾಜಕಾರಣದಲ್ಲಿ ಸಹಜ ವಿಷಯ. 

ಮೀಸಲಾತಿ ವಿಷ್ಯ : ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗಿದ್ದ ಶೇಕಡಾ ನಾಲ್ಕು ಮೀಸಲಾತಿಯನ್ನು ತೆಗೆದುಹಾಕಿ ಮತ್ತು ಅವರನ್ನು ಬೇರೆ ಪೂಲ್‌ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್ ನ ನಿರ್ಧಾರವು ತನ್ನ ಜಾತಿಗಣಿತದ ಮೇಲೆ ಹಿಂದುತ್ವದ ನಿರೂಪಣೆಯನ್ನು ರಚಿಸುವುದು ಬಿಜೆಪಿಯ ನಿರ್ಣಾಯಕ ಪ್ರಯತ್ನವೆನ್ನುವುದರಲ್ಲಿ ಅನುಮಾನವೇ ಇಲ್ಲ. ಮತ ಧ್ರುವೀಕರಣವು ಕರ್ನಾಟಕಕ್ಕೆ ಹೊಸ ವಿಷಯವಲ್ಲ. ಚುನಾವಣೆಯ ಸಂಧರ್ಭಗಳಲ್ಲಿ ಇಲ್ಲಿ ಧಾರ್ಮಿಕ ವಿಚಾರಗಳು, ಜಾತಿ ವಿಚಾರಗಳು ಮತ ಧ್ರಮೀಕರಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈಗೀಗ ಅಂತೂ ಕೋಮು ನಿರೂಪಣೆಯು ಅತ್ಯಂತ ಸರಳ, ವಿರಳವಾದ ಚುನಾವಣೆಯ ವಿಷಯವಾಗಿ ಬಿಟ್ಟಿದೆ.  ಈ ಮೀಸಲಾತಿ ವಿಷಯವನ್ನು ಕರ್ನಾಟಕದಲ್ಲಿ ಹಿಂದುತ್ವದ ನಿರೂಪಣೆಯಾಗಿ ಪ್ರಾರಂಭಿಸಲು ಬಿಜೆಪಿ  ನಿರ್ಧಾರವನ್ನು ತೆಗೆದುಕೊಂಡಿದೆಯೇ ? ಹಾಗಿದ್ದಲ್ಲಿ, ಯಾಕೆ?

ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಒಬಿಸಿ ಒಕ್ಕಲಿಗ ಜಾತಿ. ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕೃತವಾಗಿರುವ ಎರಡನೇ ಅತಿ ದೊಡ್ಡ ಜನಸಂಖ್ಯೆಯಿರುವ ಸಮುದಾಯ. ಕಳೆದ ಎರಡು ದಶಕಗಳಲ್ಲಿ ಗೌಡ ಕುಟುಂಬ ನೇತೃತ್ವದ ಜೆಡಿಎಸ್ ದೃಢವಾಗಿ ಬಲವರ್ಧನೆಗೊಂಡಿದೆ. ಎರಡನೆಯದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಪ್ರತಿಯಾಗಿ ನಿರ್ಮಿಸಲಾದ ʼಅಹಿಂದʼ ಎಂಬ ಎಲ್ಲಾ ಮತದಾರ ಗುಂಪುಗಳ ಸಮಯ ಪರೀಕ್ಷಿತ ಸಾಮಾಜಿಕ ಒಕ್ಕೂಟ ಬೆಳೆದು ನಿಂತಿದೆ. ಬಿಜೆಪಿಯ ಲಿಂಗಾಯತ ಹಿಡಿತ ಅಥವಾ ಹಳೆಯ ರಾಜಕೀಯ ಅಸ್ತ್ರ ದುರ್ಬಲವಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ನಿರಂತರವಾಗಿ ಅಟ್ಟಕ್ಕೇರಿಸುವ ಪ್ರಯತ್ನದಲ್ಲಿದ್ದಾರೆ. ಅದೇ ಸಮಯದಲ್ಲಿ, ಮೀಸಲಾತಿಯಂತಹ ವಿಷಯ ತನ್ನ ಹಳೆಯ ರಾಜಕೀಯ ಅಸ್ತ್ರವನ್ನು ಬಲಗೊಳ್ಳಿಸಿಕೊಳ್ಳುವ ವಿಚಾರವೇ ಆಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದು ಒಂದು ರೀತಿಯಲ್ಲಿ ಹಳೆಯ ಅಡಿಪಾಯದ ಮೇಲೆ ಹೊಸ ನಿರೂಪಣೆಯಂತಾಗಿದೆ. ಇಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಏನೆಂದರೇ, ಮುಸ್ಲೀಮರ ಮೀಸಲಾತಿ ತೆಗೆದು ಲಿಂಗಾಯತ, ಒಕ್ಕಲಿಗರ ಪಾಲಿಗೆ ಕೊಟ್ಟು ಮೂಗಿಗೆ ತುಪ್ಪಾ ಸುರಿಸುವ ಕೆಲಸ ಮಾಡಿತೇ..? 

ಮುಸ್ಲಿಮರಿಗಿದ್ದ ಶೇಕಡ ೪ರಷ್ಟು ಮೀಸಲಾತಿಯನ್ನು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯಗಳೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಮತ್ತು ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡ ಎರಡರಂತೆ ಹಂಚಿಕೆ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಹಾಗಾಗಿ, ಈ ನಿರ್ಧಾರವು ರಾಜಕೀಯವಾಗಿ ಮೂರು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದು ಹಿಂದುತ್ವದ ನಿರೂಪಣೆಯನ್ನು ಸೃಷ್ಟಿಸುವುದು, ಎರಡನೇಯದು ಪಕ್ಷದ ಸಾಂಪ್ರದಾಯಿಕ ವೀರಶೈವ ಲಿಂಗಾಯತ ಮತಗಳನ್ನು ಸಮಾಧಾನಪಡಿಸಿಟ್ಟುಕೊಳ್ಳುವುದು, ಮೂರನೇಯದು ಮತ್ತು ಕೊನೆಯದು ಹಳೇ ಮೈಸೂರು ಭಾಗಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಹೋಗುವ ಒಕ್ಕಲಿಗ ಮತಗಳನ್ನು ಒಡೆಯುವುದಾಗಿದೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.

ಈ ಮೀಸಲಾತಿ ಹಂಚಿಕೆಯ ಕಾರಣದಿಂದಾಗಿ ಪರಿಣಾಮಕಾರಿಯಾಗಿ ಮತಗಳು ಬಿಜೆಪಿಯತ್ತ ಸಂಪೂರ್ಣವಾಗಿ ವಾಲುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಇದು ʼಸಮಧಾನದ ಪರಿಹಾರʼ ಎನ್ನುವುದು ಏರಡೂ ಸಮುದಾಯಗಳಿಗೂ ಗೊತ್ತಿದೆ. ಇತ್ತ ಈ ಮೀಸಲಾತಿ ವಿಷಯ ಬಿಜೆಪಿಗೆ ವರದಾನವಾಗಲಿದೆ ಎಂಬ ಚರ್ಚೆಯನ್ನೂ ಅಲ್ಲಗಳೆಯುವಂತಿಲ್ಲ. ಕಾದು ನೋಡೋಣ. 

-ಶ್ರೀರಾಜ್‌ ವಕ್ವಾಡಿ  


Thursday, March 30, 2023

ರಾಹುಲ್‌ ಗಾಂಧಿ : ಅಸಮರ್ಥ ಟು ಸಮರ್ಥ

ರಾಗಾ ಶಕ್ತ ದಾರಿಗೆ ಬಿಜೆಪಿಯದ್ದು ಮಹತ್ತರ ಪಾತ್ರ..!

ಕೇಂದ್ರದಲ್ಲಿ ಸರ್ಕಾರ ಬದಲಾಗಬೇಕು ಎಂಬ ದೊಡ್ಡ ಕೂಗು ಸರ್ಕಾರದ ಹಲವು ಜನವಿರೋಧಿ ನಡೆಯ ಕಾರಣಗಳಿಂದ ಎದ್ದಿದೆ. ಇತ್ತ, ಬದಲಾವಣೆಯಾಗುವುದಾದರೆ ಪರ್ಯಾಯ ನಾಯಕತ್ವ ಯಾರದ್ದು ಎಂಬ ವಿಷಯದಲ್ಲಿ ಒಮ್ಮತ ಮೂಡದೆ ಸಂಭವನೀಯ ರಾಜಕೀಯ ಉದಯೋನ್ಮುಖ ಶಕ್ತಿ ಮೊಳಕೆಯಲ್ಲೇ ಅಪೌಷ್ಠಿಕತೆಯಿಂದ ಸೊರಗಿ ನಿಂತಂತಿದೆ. ೨೦೨೪ರ ಲೋಕಸಭಾ ಚುನಾವಣೆ ಕಳೆದ ಲೋಕಸಭಾ ಚುನಾವಣೆಯಂತಿಲ್ಲ. ಹಲವು ಜನ ಸ್ನೇಹಿ ಅಲ್ಲದ  ರಾಜಕೀಯ ಬೆಳವಣಿಗಳ ಕಾರಣದಿಂದಾಗಿ ಸಾರ್ವಜನಿಕ ವಲಯವೂ ಕೂಡ ಬೇಸತ್ತಿದೆ. ಆದರೂ,  ಬಿಜೆಪಿ ಎಂದಿನಂತೆ ಕೆಲವು ವರ್ಷಗಳಿಂದ ದೇಶದಾದ್ಯಂತ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದ್ದರೇ, ಇತ್ತ ದೇಶದ ದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅನೇಕ ಏಳು ಬೀಳುಗಳನ್ನು ಕಳೆದ ಕೆಲವು ವರ್ಷಗಳಿಂದ ಕಾಣುತ್ತಿದೆ. ಕಾಂಗ್ರೆಸ್‌ ನ ಆಂತರಿಕ ಸಮಸ್ಯೆಗಳು ಬಯಲಾಗಿದ್ದು ಈ ದೇಶ ಕಂಡಿದೆ. ʼಗಾಂಧಿ ಕುಟುಂಬʼದ ಪಕ್ಷವೆಂಬ ಒಂದು ಹಣೆಪಟ್ಟಿ ರಾಜಕೀಐವಾಗಿ ಕಾಂಗ್ರೆಸ್‌ ನನ್ನು ಬಹಳವಾಗಿ ಕಾಡಿದೆ. ಮೋದಿ ವಿರುದ್ಧದ ಚುನಾವಣಾ ಹೋರಾಟಕ್ಕೆ ಕಾಂಗ್ರೆಸ್‌ ಸತತವಾಗಿ ದೇಶದಾದ್ಯಂತ ಶ್ರಮಿಸುತ್ತಿದ್ದರೂ, ಎಲ್ಲಿಯೂ ಅಷ್ಟಾಗಿ ಫಲಿಸುತ್ತಿಲ್ಲ. ಸೈದ್ಧಾಂತಿಕ ಸಮಾನತೆಯಿರುವ ಪಕ್ಷಗಳೊಂದಿಗಿನ ಮೈತ್ರಿಯೂ ಕಾಂಗ್ರೆಸ್‌ ಗೆ ಕೂಡಿ ಬರುತ್ತಿಲ್ಲ. ಕೆಲವು ಸುತ್ತಿನ ಮಾತುಕತೆಗಳು ಈಗಾಗಲೇ ಪಕ್ಷ ಮಟ್ಟದಲ್ಲಿ ಆಗಿದ್ದರೂ ವೈಯಕ್ತಿಕ ಪ್ರತಿಷ್ಠೆ, ಸೈದ್ಧಾಂತಿಕ ವಿಚಾರಗಳು ಮೈತ್ರಿಗೆ ತಡೆಯೊಡ್ಡುತ್ತಿವೆ. ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ಉದ್ದೇಶ ಮೋದಿ ಸರ್ಕಾರವನ್ನು ಕೆಳಗಿಳಿಸುವುದೇ ಆಗಿದ್ದರೂ, ಒಂದು ಸೂಕ್ತವಾದ ನೇತೃತ್ವ ಇಲ್ಲದಾಗಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.  

ಮೈತ್ರಿ ಸುಲಭವಿಲ್ಲ, ಕಾಂಗ್ರೆಸ್‌ ಮನಸ್ಸು ಮಾಡ್ಬೇಕಿತ್ತು ! :  ೧೯೭೭ರ ಒಗ್ಗಟ್ಟು ಈಗ ರಾಜಕೀಯ ಪಕ್ಷಗಳಲ್ಲಿ  ಕಂಡು ಬರುತ್ತಿಲ್ಲ. ಇಂದಿರಾ ಗಾಂಧಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬ ದೃಷ್ಟಿಯಿಂದ ಅಂದು ಕೆಲವೇ ಕೆಲವು ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಮೈತ್ರಿ ಸಾಧಿಸಿ ಜನತಾ ಪಕ್ಷ ಸ್ಥಾಪಿಸಿದ್ದನ್ನು ಈ ದೇಶದ ರಾಜಕೀಯ ಇತಿಹಾಸ ಕಂಡಿದೆ.  ಮೋದಿ ಮತ್ತು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಂದು ಪ್ರತಿಪಕ್ಷಗಳು ಎದುರಿಸುತ್ತಿರುವ ಏಕೈಕ ಸವಾಲು ಏನೆಂದರೇ, ಎಲ್ಲಾ ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರ ಅಧಿಕಾರದ ಡಿಮ್ಯಾಂಡ್. ವಿರೋಧ ಪಕ್ಷಗಳಲ್ಲೇ ದೊಡ್ಡದಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ಗೂ ಕೂಡ ಇದು ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶವನ್ನು ಆಳಿದ ಪಕ್ಷವಾಗಿ ಕಾಂಗ್ರೆಸ್‌ ತನ್ನ ದೌರ್ಬಲ್ಯವನ್ನು ಅರಿತುಕೊಂಡಂತೆ ಕಾಣಿಸುತ್ತಿದೆ. ಕಾಂಗ್ರೆಸ್‌ ಒಂದು ದೇಶದ ದೊಡ್ಡ ವಿರೋಧ ಪಕ್ಷವಾಗಿ ಪ್ರಬಲವಾಗಿ ಬೆಳೆಯಲಿಲ್ಲ ಎಂಬುವುದು ಈ ದೇಶದ ರಾಜಕೀಯದ ದುರಂತಗಳಲ್ಲಿ ಒಂದು. ಕಾಂಗ್ರೆಸ್‌ ಗೆ ದೇಶದಲ್ಲಿ ಹೆಚ್ಚು ಆಡಳಿತ ಮಾಡಿ ಗೊತ್ತಿದೆ ಹೊರತು ವಿರೋಧ ಪಕ್ಷದಲ್ಲಿ ಕೂತು ಆಡಳಿತವನ್ನು ವಿರೋಧಿಸಿದ ಅನುಭವ ಕಡಿಮೆ ಇದೆ. ಹಾಗಾಗಿ ಇದು ಕೂಡ ಕಾಂಗ್ರೆಸ್‌ ನ ಒಂದು ದೌರ್ಬಲ್ಯ. ಹಿಂದೆ ಈ ದೇಶದ ರಾಜಕೀಯದಲ್ಲಿ ಇದ್ದ ಕಾಂಗ್ರೆಸ್‌ ವಿರೋಧಿ ವಾದದಂತೆ ಈಗ ಬಿಜೆಪಿ ವಿರೋಧಿ ವಾದ ಪ್ರಬಲವಾಗಿ ಪ್ರತಿಪಕ್ಷಗಳಲ್ಲಿ ಇಲ್ಲದಿರುವುದು  ಕೂಡ ಪ್ರತಿಪಕ್ಷಗಳ ಮೈತ್ರಿಗೆ ಅಡ್ಡಿಯಾಗುತ್ತಿರುವ ವಿಷಯಗಳಲ್ಲಿ ಒಂದು. 

೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಕಾಂಗ್ರೆಸ್ ನ ಚಿಂತನೆಯ ಪ್ರಕ್ರಿಯೆಯಲ್ಲಿ ರಾಜಕೀಯ ಸ್ಪಷ್ಟತೆ ಇರಲಿಲ್ಲ. ವಿರೋಧ ಪಕ್ಷ ಒಡೆದ ಮನೆಯಾಗಿತ್ತು. ಪ್ರತಿಯೊಂದು ಆಡಳಿತ ವಿರೋಧ ಪಕ್ಷಗಳ ಪರಮ ಗುರಿ ಒಂದೇ ಆಗಿದಿದ್ದರೂ ಯುದ್ಧಕ್ಕೆ ಹೊರಟ ಸೈನಿಕರಿಗೆ ಸಮರ್ಥ ಸಾಮ್ರಾಟನ ಕೊರತೆ ಇತ್ತೆಂಬಂತಾಗಿತ್ತು. ಅಂದು ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷಗಿರಿ ರಾಹುಲ್‌ ಗಾಂಧಿ ಅವರಲ್ಲಿತ್ತು. ಅಂದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ವಿಧಾನಸಭೆ ಚುನಾವಣೆ ಗೆದ್ದಿದ್ದ ಕಾಂಗ್ರೆಸ್‌ ಗೆ ಮೋದಿ ವಿರುದ್ಧ ಬಲ ಬಂದಂತಾಗಿತ್ತು. ಮೂರು ರಾಜ್ಯಗಳಲ್ಲಿ ಗೆದ್ದ ಕಾರಣಕ್ಕೆ ಮೋದಿಗೆ  ಏಕಮಾತ್ರ ಕಾಂಗ್ರೆಸ್‌ ಪಕ್ಷ ಮಾತ್ರ ಕಠಿಣ ಹೋರಾಟ ನೀಡಬಲ್ಲದು ಎಂದು ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತ ಪಡಿಸಿದ್ದರು. ಆದರೇ, ಅದು ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಳ್ಳಾಯಿತು. 

ಮಮತಾ ಬ್ಯಾನರ್ಜಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಯಸಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಅರವಿಂದ್ ಕೇಜ್ರಿವಾಲ್ ಜೊತೆಗೆ ನಿತೀಶ್ ಕುಮಾರ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದರು. ನಾಯಕತ್ವವು ಯಾವುದೇ ವಿಷಯವಲ್ಲ ಅವರಿಗೆ ಅರ್ಥವಾಗುವಂತೆ ಮಾಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ನ ಜವಾಬ್ದಾರಿಯಾಗಿತ್ತು. ಆದರೇ, ಕಾಂಗ್ರೆಸ್‌ ಅದಕ್ಕೆ ಮುಂದಾಗಿರಲಿಲ್ಲ. ಈಗ ಪರಿಸ್ಥಿತಿ ಬೇರೆಯೇ ಇದೆ. 

ರಾಹುಲ್‌ ಗಾಂಧಿ : ಅಸಮರ್ಥ ಟು ಸಮರ್ಥ :  ಇತರೆ ವಿರೋಧ ಪಕ್ಷಗಳಲ್ಲದೇ, ಅಂದು ಕಾಂಗ್ರೆಸ್‌ ಕೂಡ ಬಣಗಳಾಗಿ ಒಡೆದು ಹೋಗಿತ್ತು. ಕಾಂಗ್ರೆಸ್‌ ನ ಹಿರಿತಲೆಗಳಿಗೆ ರಾಹುಲ್‌ ನೇತೃತ್ವದ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇರಲಿಲ್ಲ. ರಾಹುಲ್‌ ನಾಯಕತ್ವದ ಕೌಶಲ್ಯದಲ್ಲಿಯೂ ನಂಬಿಕೆ ಇರಲಿಲ್ಲ. ಅಂತಿಮವಾಗಿ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ರಾಜೀನಾಮೆ ನೀಡಿದರು. 

ರಾಹುಲ್‌ ಅಸಮರ್ಥರು ಎಂದು ಬಿಂಬಿಸುವಲ್ಲಿ  ಬಿಜೆಪಿ, ಮೋದಿ ಸರ್ಕಾರದ ಜೊತೆಗೆ ಕಾಂಗ್ರೆಸ್‌ ನಾಯಕರ ಪಾಲೂ ಇದೆ ಎನ್ನುವುದು ಗಮನಾರ್ಹ. ರಾಹುಲ್‌ ಗೆ ಅಕ್ಷರಶಃ ಸ್ವಪಕ್ಷೀಯರೇ ಮುಳುವಾಗಿ ಪರಿಣಮಿಸಿದರು. ಆದರೇ, ರಾಹುಲ್‌ ಗಾಂಧಿ ಈಗ ಮೊದಲಿನ ರಾಹುಲ್‌ ಗಾಂಧಿಯಾಗಿ ಉಳಿದಿಲ್ಲ. ರಾಜಕೀಯವಾಗಿ ತಮ್ಮ ವರ್ಚಸ್ಸನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಂಡಿದ್ದಾರೆ. ಇದು ರಾಹುಲ್‌ ಅಧ್ಯಕ್ಷ ಸ್ಥಾನದಿಂದ ಹೊರಗುಳಿದು ಪಕ್ಷವನ್ನು ಕಟ್ಟಿದಕ್ಕೆ ಉದಾಹರಣೆ. ಯಾರು ಅಸಮರ್ಥರು ಎಂದು ರಾಹುಲ್‌ ಗಾಂಧಿಯವರನ್ನು ಕರೆದಿದ್ದರೋ ಅವರೇ ಇಂದು ಸಮರ್ಥರು ಎಂದು ಹೇಳುವಷ್ಟರ ಮಟ್ಟಿಗೆ ರಾಜಕೀಯವಾಗಿ ಬೆಳೆದು ತೋರಿಸಿದ್ದಾರೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಂತಹ ಮಹತ್ವಾಕಾಂಕ್ಷೆಯ ಸಾರ್ವಜನಿಕ ಸಂಪರ್ಕ ಯಾತ್ರೆಗೆ ಕೈ ಹಾಕಿದಾಗ ಇಡಿ ದೇಶ ರಾಹುಲ್‌ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸಿತು, ಕೆಲವರು ಈ ಕಲ್ಪನೆಯನ್ನು ಲೇವಡಿ ಮಾಡಿದರು. ರಾಹುಲ್‌ ಯಾತ್ರೆಯನ್ನು ಅತ್ಯಂತ ದೊಡ್ಡ ಮಟ್ಟದ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ (ಇದು ಚುನಾವಣೆಗೆ ಎಷ್ಟು ಪ್ರಭಾವಿಸಲಿದೆ ಎನ್ನುವುದು ಎರಡನೇ ಹಂತದ ಚರ್ಚೆ) ಪೂರೈಸಿದಾಗ ಯಾರು ನಿರ್ಲಕ್ಷಿಸಿದ್ದರೋ ಅವರು ಬೆರಗಾದರು. 

ಭಾರತ್‌ ಜೋಡೋ ಯಾತ್ರೆ ಕತ್ತಲೆ ಆವರಿಸಿಕೊಂಡಿದ್ದ ಕಾಂಗ್ರೆಸ್‌ ಗೆ ಬೆಳಕಿನ ಕಿರಣವಾಗಿ ಪರಿಣಮಿಸಿತು. ಯಾತ್ರೆಯ ಉದ್ದಕ್ಕೂ ರಾಹುಲ್‌ ಗೆ ದೊರೆತ ಜನ ಬೆಂಬಲದಿಂದಾಗಿ ಟೀಕಾಕಾರರು ಆಘಾತಕ್ಕೊಳಗಾದರು, ಸಹಜವಾಗಿ ಒಂದು ರಾಜಕೀಯ ಪಕ್ಷ ಯಾತ್ರೆಗಾಗಿ ರೋಬೋ ಆಡಿಯನ್ಸ್‌ ನನ್ನು  ಸೃಷ್ಟಿ ಮಾಡಿರಬಹುದು / ನಿರ್ವಹಿಸಿರಬಹುದು, ಆದರೇ, ಯಾತ್ರೆ ಸಾಗಿದಲ್ಲೆಲ್ಲಾ ದೊರೆತ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಕ್ಷದ ನಿರ್ವಹಣೆಯ ಫಲವಾಗಿರುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಹುಲ್‌ ರನ್ನು ನೋಡುವುದಕ್ಕೆ, ಬೆಂಬಲಿಸುವುದಕ್ಕೆ ಜನ ಸ್ವಪ್ರೇರಣೆಯಿಂದ ಬಂದರು. ಇದು ರಾಹುಲ್‌ ರಾಜಕೀಯದಲ್ಲಿ ವೃದ್ಧಿಸಿಕೊಂಡ ವರ್ಚಸ್ಸಿಗೆ ಸಾಕ್ಷಿ. 

ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಾಗಿ ಈ ಮೂಲಕ ಹೊರಹೊಮ್ಮಿದ್ದಾರೆ. ರಾಜಕೀಯದಲ್ಲಿನ ಕಠಿಣ ಪರಿಶ್ರಮದಿಂದಾಗಿ ಸ್ವತಃ ಅವರು ಇದನ್ನು ಗಳಿಸಿಕೊಂಡಿದ್ದಾರೆ. ರಾಹುಲ್ ಅವರ ಹೊಸ ಇಮೇಜ್ ಅನ್ನು ಮಣ್ಣುಪಾಲು ಮಾಡುವ ಹತಾಶೆಯಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಅವರನ್ನು ದೇಶವಿರೋಧಿ ಎಂದು ಬಣ್ಣಿಸಲು ಹೊರಟಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿದೆ. ಯಾತ್ರೆಯು ಅನೇಕ ವಿರೋಧ ಪಕ್ಷದ ನಾಯಕರಿಗೆ ಎದೆಯುರಿ ಹೆಚ್ಚಿಸಿದೆ. ಸಂಸತ್ತಿನಲ್ಲಿ ಬಹುಷಃ ರಾಹುಲ್‌ ಗಾಂಧಿ ಆಡಳಿತ ಪಕ್ಷವನ್ನು ಪ್ರಶ್ನೆ ಮಾಡಿದಷ್ಟು ಯಾರೂ ಪ್ರಶ್ನೆ ಮಾಡಿರಲಿಕ್ಕಿಲ್ಲ, ರಾಹುಲ್‌ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಅವರ ಮೈಕ್‌ ಆಫ್‌ ಮಾಡಿದ್ದನ್ನೂ ಈ ದೇಶ ಕಂಡಿದೆ. ವ್ಯವಸ್ಥೆಯ ತಪ್ಪುಗಳಾದಾಗ ಅದನ್ನು ಪ್ರಶ್ನಿಸುವವರನ್ನು ತಡೆದಿದ್ದು, ಕಾನೂನುನನ್ನು ಅಧಿಕಾರಕ್ಕೆ ಬೇಕಾಗಿ ಬಳಸಿಕೊಂಡಿದ್ದು ಈ ದೇಶದ ಜನರಿಗೆ ಗೊತ್ತಿಲ್ಲ ಎಂದಲ್ಲ. ಇದರ ಭಾಗವಾಗಿಯೇ ʼಮೋದಿʼ ಮಾನನಷ್ಟ ಮೊಕದ್ದಮೆಯಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗಿದೆ ಎಂಬ ಚರ್ಚೆ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಚುನಾವಣೆಯ ಹೊತ್ತಿನಲ್ಲಿ ಅಧಿಕಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ, ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ವಿರೋಧಾಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೆ ನೋಡುವುದಾದರೇ, ಇಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಎಂದು ಕರೆಸಿಕೊಂಡು ದ್ವೇಷ ಭಾಷಣ ಮಾಡಿದವರು, ಗಲಭೆಗಳಿಗೆ ಕರೆಕೊಟ್ಟವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಷ್ಟೇಕೆ, ಈ ದೇಶದಲ್ಲಿ ʼಗಾಂಧಿʼ ಎನ್ನುವ ಪದಕ್ಕೆ/ ಸರ್ನೇಮ್‌ ಗೆ ಎಷ್ಟು ಅಪಮಾನ ಮಾಡಿಲ್ಲ ?, ರಾಜೀವ್‌ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದಾಗ, ʼಗಲೀ ಗಲೀ ಮೇ ಶೋರ್‌ ಹೈ, ರಾಜೀವ್‌ ಗಾಂಧಿ ಚೋರ್‌ ಹೈʼ  ಎಂಬುವುದು ಬಿಜೆಪಿಯವರ ಪ್ರಮುಖ ರಾಜಕೀಯ ದ್ವೇಷಪೂರಿತ ಘೋಷಣೆಗಳಲ್ಲಿ ಒಂದಾಗಿತ್ತು. ಸದ್ಯ ಜನಪ್ರತಿನಿಧಿ ಕಾಯ್ದೆ ೧೯೫೧ರ ಪ್ರಕಾರ ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹಗೊಂಡಿದ್ದಾರೆ. ಮುಂದಿನ ಎಂಟು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ, ಲೋಕಸಭೆ ಸಚಿವಾಲಯ ಅನರ್ಹವೆಂದು ಅಧಿಸೂಚನೆ ಹೊರಡಿಸಿದೆ. ಮೇಲ್ಮನವಿ ಸಲ್ಲಿಕೆಗೂ ಮುನ್ನವೇ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ. ಇದು ದೇಶದ ರಾಜಕೀಯ ಇತಿಹಾಸದ ದೊಡ್ಡ ದುರಂತಗಳಲ್ಲಿ ಒಂದು. ಒಂದಂತೂ ಸತ್ಯ, ಮತ್ತೆ ಮತ್ತೆ ರಾಹುಲ್‌ ಓಟಕ್ಕೆ ತಡೆಯೊಡ್ಡಿ ಸಮರ್ಥರು ಎಂದು ಸ್ವತಃ ಬಿಜೆಪಿಯೇ ಸಾಬೀತು ಪಡಿಸುತ್ತಿದೆ. ಕಾಂಗ್ರೆಸ್‌ ಮತ್ತೆ ಪುಟಿದೇಳುವುದಕ್ಕೆ ಪರ್ವ ಕಾಲ, ರಾಹುಲ್‌ ಇನ್ನಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್‌ ಈ ವಿಚಾರವನ್ನು ಹೇಗೆ ಬಳಸಿಕೊಳ್ಳಲಿದೆ, ಕಾನೂನು ಮತ್ತು ರಾಜಕೀಯವಾಗಿ ಹೇಗೆ ಹೋರಾಡಲಿದೆ ಎನ್ನುವುದರ ಮೇಲೆ ಎಲ್ಲಾ ಫಲಿತಾಂಶವೂ ಅಡಗಿದೆ. 

-ಶ್ರೀರಾಜ್‌ ವಕ್ವಾಡಿ 


Thursday, March 23, 2023

2023 : ಲೋಕಲ್‌ ವರ್ಸಸ್‌ ನ್ಯಾಷನಲ್‌ ಫೈಟ್‌



(ಸಾಂದರ್ಭಿಕ ಚಿತ್ರ) 

ಬಿಜೆಪಿಗೆ ಅನಿವಾರ್ಯ । ಕಾಂಗ್ರೆಸ್‌ ಗೆದ್ದರೇ, 'ಜೋಡೋ'ಗೆ ಜೈಕಾರ ..!

ಮೂರು ಈಶಾನ್ಯ ರಾಜ್ಯಗಳ ವಿಧಾನ ಸಭಾ ಚುನಾವಣೆಯ ನಂತರ ಈಗ ಎಲ್ಲರ ಚಿತ್ತ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆದ/ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ದೇಶ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ೫.೦೪ ರಷ್ಟಿರುವ ಕರ್ನಾಟಕವು ಲೋಕಸಭೆಗೆ ೨೮ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಅತಿ ಹೆಚ್ಚು ಲೋಕಸಭಾ ಸಂಸದರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ಏಳನೇ ಸ್ಥಾನದಲ್ಲಿರುವುದರಿಂದ  [(ಉತ್ತರ ಪ್ರದೇಶ (೮೦), ಮಹಾರಾಷ್ಟ್ರ (೪೮), ಪಶ್ಚಿಮ ಬಂಗಾಳ (೪೨), ಬಿಹಾರ (೪೦), ತಮಿಳು ನಾಡು (೩೯), ಮಧ್ಯ ಪ್ರದೇಶ (೨೯)] ಕೇಂದ್ರ ಸರ್ಕಾರಕ್ಕೆ ರಾಜ್ಯದ ವಿಧಾನ ಸಭಾ ಚುನಾವಣೆಯು ಅತ್ಯಂತ ಮುಖ್ಯವೂ ಕೂಡ ಹೌದು. 

ಒಂದೆಡೆ ವಿವಿಧ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ವಿರೋಧ ಪಕ್ಷಗಳ ವಿರುದ್ಧ ಮಾತನಾಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಚುನಾವಣೆಯ ಹಾದಿಯಲ್ಲಿ ರಾಜ್ಯ ಬಿಜೆಪಿ ಸಂಪೂರ್ಣವಾಗಿ ಕೇಂದ್ರ ನಾಯಕರ ಮೊರೆ ಹೋದಂತೆ ಕಾಣುತ್ತಿದೆ. ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಇನ್ನೂ ತನ್ನ ರಾಷ್ಟ್ರೀಯ ನಾಯಕತ್ವವನ್ನು ವ್ಯಾಪಕವಾಗಿ ಟ್ಯಾಪ್ ಮಾಡಿದಂತೆ ಕಾಣುತ್ತಿಲ್ಲ. ಯಶಸ್ವಿ ಭಾರತ್ ಜೋಡೋ ಯಾತ್ರೆಯ ಹೊರತಾಗಿಯೂ, ರಾಹುಲ್ ಗಾಂಧಿ, ಒಂದೆರಡು ಪತ್ರಿಕಾ ಗೋಷ್ಠಿಗಳನ್ನು ಮಾಡಿದ್ದನ್ನು ಹೊರತಾಗಿ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿಲ್ಲ, ಚುನಾವಣೆಯ ಬಗ್ಗೆಯೂ ಮಾತನಾಡಿಲ್ಲ. ಪ್ರಿಯಾಂಕ ಗಾಂಧಿ ಬಂದು ಕಾಂಗ್ರೆಸ್‌ ನ ಈ ಬಾರಿಯ ಗ್ಯಾರಂಟಿಗಳಲ್ಲಿ ಒಂದಾದ ʼಗೃಹಲಕ್ಷ್ಮಿʼಯನ್ನು ಘೋಷಿಸಿಇ ಹೋಗಿದ್ದು ಬಿಟ್ಟರೇ, ರಾಷ್ಟ್ರ ನಾಯಕರ ಸಾರ್ವಜನಿಕ ಸಭೆ ಕಾಂಗ್ರೆಸ್‌ ನಿಂದ ಆಗಿಲ್ಲ. ಈಗ ರಾಹುಲ್‌ ಗಾಂಧಿ, ಖರ್ಗೆ ಅಲ್ಲೋ ಇಲ್ಲೋ ಎಲ್ಲೋ ಎಂಬಂತೆ ನಿಧಾನಕ್ಕೆ ರಾಜ್ಯಕ್ಕೆ ಚುನಾವಣಾ ಉದ್ದೇಶದಿಂದ ಕಾಲಿಟ್ಟಿದ್ದು, ಯಾವ ರೀತಿಯಲ್ಲಿ ಇವರು ರಾಜ್ಯದ ಜನರನ್ನು ಪ್ರಭಾವಿಸಲಿದ್ದಾರೆ ನೋಡಬೇಕು. ಮತ್ತೊಂದೆಡೆ ಜೆಡಿಎಸ್‌ ಎಂದಿನಂತೆ ತನ್ನ ಬಲ ಇರುವ ಕಡೆಯಲ್ಲಿ ಮಾತ್ರ ಚುನಾವಣಾ ಪ್ರಚಾರದ ಬಿರುಸಿನಲ್ಲಿದೆ. ಹೈಕಮಾಂಡ್‌ ಕೂಡ ಜೆಡಿಎಸ್‌ ಗೆ ಇಲ್ಲೇ ಇದೆ. ಹಿರಿಗೌಡರು ದೈಹಿಕವಾಗಿ ಸುಸ್ತಾಗಿದ್ದಾರೆ. ಕಿರಿಗೌಡ್ರು ದಂಪತಿಗಳು, ಮಗ ನಿಖಿಲ್ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಒಕ್ಕಲಿಗ ಮತ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಇನ್ನು, ಜೆಡಿಎಸ್‌ ನಲ್ಲಿ ಈ ಬಾರಿ ಒಂದಿಷ್ಟು ಆಂತರಿಕ ಒಡಕುಗಳು ಕಾಣಿಸಿಕೊಂಡಂತಿರುವುದು ರಾಜಕೀಯದ ಕುತೂಹಲಕ್ಕೆ ಕಾರಣವಾಗಿದೆ. 

ಇನ್ನು, ಬಿಜೆಪಿ ಮೇಲೆ ಮತದಾರರ ಒಲವು ಕಡಿಮೆಯಾಗಿದೆ. ರಾಜ್ಯ  ಬಿಜೆಪಿಯ ಕೆಲವು ನಾಯಕರ ಹರಕು ಬಾಯಿ, ಗಲಾಟೆ ಎಬ್ಬಿಸುವ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ.   ರಾಜ್ಯ  ಬಿಜೆಪಿಯ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಬೇಸರವಿದ್ದರೂ ತೋರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ರಾಜ್ಯದ ಕೆಲವು ನಾಯಕರ ಅಸಮಾಧಾನ, ಅಲ್ಲಲ್ಲಿ ರಾಜೀನಾಮೆ ಎಲ್ಲವೂ ಬಿಜೆಪಿಗೆ ಒಳಗೊಳಗೆ ಹತಾಶೆ ಮೂಡಿಸಿದೆ. ಇನ್ನು, ರಾಜ್ಯದಲ್ಲಿ ಬಿಜೆಪಿ ಎಂದಿಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಥವಾ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದೆ. ಈ ಪ್ರವೃತ್ತಿಯನ್ನು ಮುರಿಯಬೇಕಾದರೆ ಒಕ್ಕಲಿಗ ಮತ ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿಯಾಗಿ ಹೆಜ್ಜೆ ಊರಬೇಕಿದೆ. ಒಕ್ಕಲಿಗ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಸೆಳೆಯುವ ಮೂಲಕ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆಯಾದರೂ.  ಎಸ್‌ ಎಂ ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಗೆ ಹಿತ ಕಾಣುತ್ತಿಲ್ಲ. ಇತ್ತೀಚೆಗೆ ಸುಮಲತಾ ಅಂಬರೀಶ್‌ ಬಿಜೆಪಿಗೆ ಬೆಂಬಲ ಸೂಚಿಸಿದರಾದರೂ ಮಂಡ್ಯದಲ್ಲಿ ಬಿಜೆಪಿಗೆ ಧೈರ್ಯ ಮೂಡಿದಂತೆ ಕಾಣಿಸುತ್ತಿಲ್ಲ.  ಮಂಡ್ಯದ ಜವಾಬ್ದಾರಿ ಹೊರುವುದಕ್ಕೆ ಯಾವ ರಾಜ್ಯ ಬಿಜೆಪಿ ನಾಯಕರು ಮನಸ್ಸು ಮಾಡುತ್ತಿಲ್ಲ ಎನ್ನುವುದು ಮತ್ತೊಂದು ತಲೆಬಿಸಿ. 

ಪದೇ ಪದೇ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮೋದಿ, ಶಾ ಪ್ರತಿ ಕ್ಷೇತ್ರದಲ್ಲಿಯೂ ಹೊಸ ಮುಖಗಳನ್ನು ಗುರುತಿಸುವತ್ತ ಚಿತ್ತ ಹರಿಸಿದಂತೆ ಕಾಣುತ್ತಿದೆ. ಗುಜರಾತ್‌ ಚುನಾವಣೆಗಾಗಿ ಹೆಣೆದ ತಂತ್ರವನ್ನು ಇಲ್ಲಿ ಬಿಜೆಪಿ ಪ್ರಯೋಗಿಸಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.  ರಾಜ್ಯದಲ್ಲಿ ಹೊಸ ಮುಖಗಳನ್ನು, ಕೆಲಸ ಮಾಡುವ, ಹೊಸ ಚಾರ್ಮ್‌ ಇರುವ ನಾಯಕರನ್ನು ಗುರುತಿಸಿ ರಾಜ್ಯ ನಾಯಕರ ಅಡಿಯಲ್ಲಿ ತಂದು ಮುಂದಿನ ಚುನಾವಣೆಗೆ ಬಳಸಿಕೊಳ್ಳಬಹುದೆಂಬ ಉದ್ದೇಶ ಮೋದಿ, ಶಾ ಅವರದ್ದು ಎಂಬ ಚರ್ಚೆ ರಾಜಕೀಯದಲ್ಲಿ ನಡೆಯುತ್ತಿದೆ. ಗುಜರಾತ್‌ ಗೂ ಕರ್ನಾಟಕ ರಾಜಕೀಯಕ್ಕೂ ಹಲವು ವ್ಯತ್ಯಾಸಗಳಿವೆ. ಇಂದಿಗಲ್ಲದಿದ್ದರೂ ಮುಂದೆ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಸಣ್ಣದೊಂದು ದೃಷ್ಟಿ ಹಾಯಿಸಿದಂತಿದೆ. ರಾಜ್ಯದಲ್ಲಿ ಮೋದಿ, ಶಾ ಹೆಣೆಯುತ್ತಿರುವ ಈ ತಂತ್ರವು ಹೊಸದೇನಲ್ಲ. ಇಂದಿರಾಗಾಂಧಿಯವರು ಅಧಿಕಾರದ ಉತ್ತುಂಗದಲ್ಲಿದ್ದಾಗ ಯಾರನ್ನು ಬೇಕಾದರೂ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಬಹುದಾಗಿತ್ತು ಎಂಬ ರಾಜಕೀಯ ವಾತಾವರಣ ಇದ್ದಾಗ ಈ ತಂತ್ರವನ್ನು ಮೊದಲು ಕಾಂಗ್ರೆಸ್‌ ಕಾರ್ಯರೂಪಕ್ಕೆ ತಂದು ಪ್ರಯೋಗಿಸಿ ಯಶಸ್ಸು ಕಂಡಿತ್ತು. ಆದರೇ, ರಾಜೀವ್ ಗಾಂಧಿ ರಾಜ್ಯ ನಾಯಕತ್ವವನ್ನು ಬೈಪಾಸ್ ಮಾಡದೆ, ಅವಮಾನಿಸುವ ಮೂಲಕ ಈ ಪ್ರಕ್ರಿಯಗೆ ಒಂದು ಹಂತದಲ್ಲಿ ಉಲ್ಟಾ ನಡೆದುಕೊಂಡರು. ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ರಾಜೀವ್ ಗಾಂಧಿ ಮಾಡಿದ್ದರೆನ್ನಲಾದ ಅವಮಾನದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್‌ ಸ್ಥಳೀಯವಾಗಿ ನಾಯಕರನ್ನು ಅಷ್ಟಾಗಿ ಬೆಳೆಸಲೇ ಇಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಈಗ ಕಾಂಗ್ರೆಸ್‌ ಈ ಹಿಂದೆ ಎಲ್ಲಿ ಎಡವಿತ್ತೋ ಅಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಮತ್ತು ಸ್ಥಳೀಯ ನಾಯಕರನ್ನು ಗುರುತಿಸಿ ಯಶಸ್ವಿಯಾಗುತ್ತಿದೆ. 

ರಾಜ್ಯದ ಜನತೆ ಎಂದೂ ಒಂದೇ ಪಕ್ಷವನ್ನು ಮತ್ತೆ ಮತ್ತೆ ಅಧಿಕಾರಕ್ಕಾಗಿ ಆರಿಸಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಅತಂತ್ರವೇ ಹೆಚ್ಚು. ಇನ್ನು, ಬಿಜೆಪಿ ಇದುವರೆಗೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಅಧಿಕಾರ ಮಾಡಿದ್ದಿದ್ದರೇ ಅದು ಆಪರೇಷನ್‌ ಕಮಲದ ಪರಿಣಾಮದಿಂದಾಗಿ, ಇಲ್ಲವೇ ಮೈತ್ರಿಯಿಂದಾಗಿ. ಸದ್ಯ ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇ ಬೇಕು ಎಂಬ ಪಣ ತೊಟ್ಟಿದೆ ಬಿಜೆಪಿ. ಇತ್ತ ಕಾಂಗ್ರೆಸ್‌ ಹೈಕಮಾಂಡ್‌ ಗೆ ಹೊಸ ನೇತೃತ್ವ ಸಿಕ್ಕಿದೆ. ಎಐಸಿಸಿ ಅಧ್ಯಕ್ಷತೆ ಕರ್ನಾಟದ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿದ್ದು, ಖರ್ಗೆ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಹೇಗಾದರೂ ಮಾಡಿ ತರಲೇ ಬೇಕು ಎಂಬ ಒತ್ತಡವೂ ಕೂಡ ಇದೆ. ಹಾಗಾಗಿಯೇ ಸೀಟ್‌ ಹಂಚಿಕೆಯಲ್ಲಿ ಖರ್ಗೆ ಅಳೆದು ತೂಗಿದ್ದಾರೆ. ರಾಜ್ಯದಲ್ಲಿ ಇಂದಿಗೂ ಇರುವ ಮೋದಿ ಹವಾದ ಎದುರು ಖರ್ಗೆ ಯಾವ ರೀತಿಯ ರಣತಂತ್ರಕ್ಕೆ ರಾಜ್ಯ ನಾಯಕರಿಗೆ ನಿರ್ದೇಶಿಸಿದ್ದಾರೆ/ನಿರ್ದೇಶಿಸಲಿದ್ದಾರೆ ಎನ್ನುವುದು ಕುತೂಹಲ. ಇನ್ನೇನು ಕೆಲ ದಿನಗಳಲ್ಲಿ ಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್‌ ಗೆದ್ದರೇ, ನಿಸ್ಸಂಶಯವಾಗಿ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಜೈಕಾರ ಸಮರ್ಪತಗೊಳ್ಳುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆ ಮಲ್ಲಿಕಾರ್ಜುನ್‌ ಖರ್ಗೆ ತಲೆಗೆ ಕಟ್ಟುವುದರಲ್ಲಿ ಅನುಮಾನವೇ ಇಲ್ಲ. ಇದು ಸ್ವತಃ ಖರ್ಗೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಆ ಅಸಹಾಯಕತೆಗೆ ಖರ್ಗೆ ಮುಖಾಮುಖಿಯಾಗಲೇ ಬೇಕಿದೆ. ಇತ್ತ ಜೆಡಿಎಸ್‌ ಅಂತೂ ಸ್ವಂತವಾಗಿ ಅಧಿಕಾರಕ್ಕೆ ಬರುವುದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಅತಂತ್ರವಾದರೇ, ಮತ್ತೆ ಕುಮಾರಸ್ವಾಮಿಯವರಿಗೆ ಮತ್ತೊಂದು ಅವಕಾಶ ಸಿಗಬಹುದು ಹೊರತು ಮತ್ತೇನೂ ಜೆಡಿಎಸ್‌ ನಿಂದ ಆಗುವುದಕ್ಕೆ ಸಾಧ್ಯವಿಲ್ಲ. ಆದರೇ, ಜೆಡಿಎಸ್‌ ಪ್ರಾಬಲ್ಯವಿರುವ ಕಡೆ ಒಂದೆರಡು ಸೀಟ್‌ ಜಾಸ್ತಿ ಬರಬಹುದೇನೋ ಅಷ್ಟೇ.  ಇದನ್ನೂ ಮೀರಿ ಆಶ್ಚರ್ಯಕರ ಬೆಳವಣಿಗೆ ಈ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಆಗುತ್ತದೆ ಎನ್ನುವುದು ದೂರದ ಮಾತು. 

ಇನ್ನು, ಬಿಜೆಪಿ ಕಳೆದ ವಿಧಾನ ಸಭಾ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್‌ ಮೋದಿ ಎಂಬಂತೆ ಬಿಂಬಿಸಿ ಕಣಕ್ಕಿಳಿದಿತ್ತು. ಈ ಬಾರಿಯ ಚುನಾವಣೆಯನ್ನು ಮೋದಿ ವರ್ಸಸ್‌ ರಾಹುಲ್‌ ಗಾಂಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿದೆ. ಇತ್ತ ಕಾಂಗ್ರೆಸ್‌ ಪದೇ ಪದೇ ಮೋದಿ, ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಚುನಾವಣೆಯನ್ನು ಲೋಕಲ್‌ ವರ್ಸಸ್‌ ನ್ಯಾಷನಲ್‌ ಎಲೆಕ್ಷನ್‌ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಈ ಎರಡೂ ಬದಿಗಳ ರಾಜಕೀಯ ತಂತ್ರಗಾರಿಕೆಗಳ ನಡುವೆ ಪ್ರಸ್ತುತ ಚುನಾವಣಾ ಕಣದಲ್ಲಿ ಯಾವ ನಿರೂಪಣೆ ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ.

-ಶ್ರೀರಾಜ್‌ ವಕ್ವಾಡಿ  


Thursday, March 16, 2023

ಆಡಳಿತ ಪಕ್ಷ ಸೇರಿ ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ.!

ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾದ ʼಆಪರೇಷನ್‌ ಕಮಲʼ .!

ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಕಣ ರಾಜಕಾರಣಕ್ಕೆ ತಯಾರಿಯಲ್ಲಿವೆ. ಕೇಂದ್ರದ ಆಡಳಿತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಸಹಜವಾಗಿ ಚುನಾವಣಾ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರುವ ಏಕೈಕ ರಾಜ್ಯವಾಗಿರುವುದರಿಂದ ಕೂಡ ರಾಜ್ಯ ವಿಧಾನ ಸಭಾ ಚುನಾವಣೆ, ಕೇಂದ್ರ ಬಿಜೆಪಿ ಪಾಲಿಗೆ ಇದು ಮಹತ್ತರವಾದದ್ದು ಎನ್ನುವುದು ಇಲ್ಲಿ ಗಮನಾರ್ಹ. 

ರಾಜ್ಯದ ಕಳೆದ ನಾಲ್ಕು ದಶಕಗಳ ರಾಜಕೀಯ ಇತಿಹಾಸವನ್ನು ಗಮನಿಸುವುದಾದರೇ, ರಾಜ್ಯದ ಮತದಾರ ಒಂದೇ ಪಕ್ಷವನ್ನು ಪದೇ ಪದೇ ಆಯ್ಕೆ ಮಾಡಿದ ಉದಾಹರಣೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿಲ್ಲ ಮತ್ತು ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲ. ಇಲ್ಲಿನ ಮತದಾರ ಸತತವಾಗಿ ಒಂದೇ ಪಕ್ಷಕ್ಕೆ ಬಹುಮತವನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಯಾವ ಪಕ್ಷದ ಭದ್ರ ಕೋಟೆಯೂ ಅಲ್ಲ. ಹಾಗಾಗಿ ಲೋಕಸಭೆ ಚುನಾವಣೆಯೂ ಸಮೀಪದಲ್ಲಿರುವುದರಿಂದ ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೂ ಹಾಗೂ ರಾಜ್ಯದ ಆಡಳಿತ ಪಕ್ಷ ಬಿಜೆಪಿಗೂ ಈ ವಿಧಾನ ಸಭಾ ಚುನಾವಣೆ ಒಂದು ಹಂತದಲ್ಲಿ ನಿರ್ಣಾಯಕ ಚುನಾವಣೆಯಾಗಿರಲಿದೆ. 

ನಿಸ್ಸಂಶಯವಾಗಿ ಆಡಳಿತ ಪಕ್ಷ ಬಿಜೆಪಿ ರಾಜ್ಯವನ್ನು ಉಳಿಸಿಕೊಳ್ಳುವ ಸತತ ಪ್ರಯತ್ನದಲ್ಲಿದೆ. ಇನ್ನೊಂದೆಡೆ ಭ್ರಷ್ಟಾಚಾರ, ಹಗರಣ, ದುರಾಡಳಿತ, ಲೈಂಗಿಕ ಹಗರಣ, ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿ ವಿಚಾರಗಳಿಂದ ಆಡಳಿತ ಪಕ್ಷದ ಮೇಲೆ ಜನರಲ್ಲಿನ ವಿಶ್ವಾಸ ಕಡಿಮೆಯಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಲಾಭವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹುರುಪಿನಲ್ಲಿವೆ. ಆಡಳಿತ ಪಕ್ಷ ಹೇಗಾದರೂ ಮಾಡಿ ಬಹುಮತದೊಂದಿಗೆ ಈ ಬಾರಿಯ ಚುನಾವಣೆಯಲ್ಲಾದರೂ ಅಧಿಕಾರಕ್ಕೇರಬೇಕೆಂಬ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿವೆ.  

ಅಷ್ಟಾಗಿಯೂ, ಬಹಳ ಪ್ರಮುಖ ವಿಚಾರವೇನೆಂದರೇ, ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಉದಾಹರಣೆಯೇ ಇಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೂ ಇದು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೇ, ಅದು ಆಪರೇಷನ್‌ ಕಮಲದ ಮೂಲಕವೇ ಎನ್ನುವುದು ಕೂಡ ಉಲ್ಲೇಖಾರ್ಹ. ವಾಸ್ತವವಾಗಿ ʼಆಪರೇಷನ್‌ ಕಮಲʼ ಈಗ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾದಲ್ಲಿ ಎಲ್ಲಾ ಕಡೆಗಳಲ್ಲಿ ಅದರ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾಗಿದೆ. ಈ ತಂತ್ರ ಮೊದಲು ಪ್ರಯೋಗವಾಗಿದ್ದೇ ಕರ್ನಾಟಕದಲ್ಲಿ ಇಲ್ಲಿ ಉಲ್ಲೇಖೀಸಲೇ ಬೇಕಾದ ವಿಷಯ. 

ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆಯನ್ನು ಅನುಭವಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ೧೯೮೦-೮೩ ರ ಅವಧಿಯ ಗುಂಡೂರಾವ್‌  ನೇತೃತ್ವಕದ ಕಾಂಗ್ರೆಸ್‌ ಸರ್ಕಾರ ಒಂದಿಷ್ಟು ಆಡಳಿತ ವಿರೋಧವನ್ನು ಅನುಭವಿಸಿದ್ದನ್ನು ಹೊರತಾಗಿ ಇಷ್ಟರ ಮಟ್ಟಿಗೆ ಆಡಳಿತ ವಿರೋಧಿ ಅಲೆಯನ್ನು ಅನುಭವಿಸಿದ್ದು ಇದೇ ಸರ್ಕಾರ. ೨೦೧೯ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ರಚಿಸಲಾಯಿತು. ಸರಿ ಸುಮಾರು ಮೂರುವರೆ ವರ್ಷಗಳಿಂದ ಈ ರಾಜ್ಯದ ಜನ ಈ ಸರ್ಕಾರವನ್ನು ಗಮನಿಸಿದ್ದಾರೆ. “ಏನ್‌ ಮಾಡಿದ್ರು ಜನ ಒಪ್ಕೊಳ್ತಾರೆ” ಎಂಬ ವಾತಾವರಣ ಈಗ ಬದಲಾಗಿದೆ. ಅತಿರೇಖದ ಭ್ರಷ್ಟಾಚಾರ, ವ್ಯಾಪಕವಾದ ದ್ವೇಷ ಪ್ರಚಾರ, ಕೋಮು ಹಿಂಸಾಚಾರ, ಕಾನೂನು ಅಮರ್ಥತೆ, ದರ್ಬಲ ಆಡಳಿತ, ಹಗರಣ ಎಲ್ಲವೂ ಆಡಳಿತ ಪಕ್ಷದ ಟ್ರೇಡ್‌ ಮಾರ್ಕ್‌ ಎಂಬಂತಾಗಿರುವುದು ಸತ್ಯ. 

ಹಗರಣಗಳ ಆಡಳತ ಆಡಳಿತ ನಡೆಸಿದ ಸರ್ಕಾರ : ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಗಳಿಸಿದ ಹೊಸ ಹೆಸರು ೪೦% ಸರ್ಕಾರ. ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಗುತ್ತಿಗೆಗಳಲ್ಲಿ, ಕಾರ್ಪೋರೇಟ್‌ ಸ್ನೇಹಿ ಇತ್ಯಾದಿಗಳಲ್ಲಿ ಈ ಸರ್ಕಾರದ ಅವಧಿಯಲ್ಲಿ ತುಸು ಹೆಚ್ಚೇ ಇತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಬಹಿರಂಗವಾಗಿಯೇ ಬಿಜೆಪಿ ಸರ್ಕಾರವನ್ನು ೪೦% ಸರ್ಕಾರ ಎಂದು ಕರೆದಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಮಾತ್ರವಲ್ಲದೇ ಇನ್ಫೋಸಿಸ್‌ ನ ಮಾಜಿ ಸಿಎಫ್‌ಓ ಮೋಹನ್‌ ದಾಸ್‌ ಪೈ ಈ ಸರ್ಕಾರವನ್ನು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಸಾರ್ವಜನಿಕವಾಗಿ ಹೇಳಿರುವುದನ್ನು ಕೂಡ ಈ ರಾಜ್ಯದ ಜನ ಕಂಡಿದ್ದಾರೆ. ಈ ಅವಧಿಯಲ್ಲಿ ನಡೆದ ಸರಣಿ ಭ್ರಷ್ಟಾಚಾರ ಪ್ರಕರಣಗಳು ಬಿಜೆಪಿ ಸರ್ಕಾರಕ್ಕೆ ೪೦% ಸರ್ಕಾರವೆಂಬ ಹಣೆಪಟ್ಟಿ ತಂದುಕೊಟ್ಟಿದೆ.  

ಪಿ ಎಸ್ ಐ (ಪೊಲೀಸ್ ಸಬ್ ಇನ್ಸ್‌ ಪೆಕ್ಟರ್) ಅಪ ಮಾರ್ಗದ ನೇಮಕಾತಿ ಪ್ರಕರಣ ಈ ಸರ್ಕಾರದ ದೊಡ್ಡ ಭ್ರಷ್ಟಾಚಾರಗಳಲ್ಲೊಂದು. ಇದು ಕರ್ನಾಟಕ ಪೊಲೀಸ್ ನೇಮಕಾತಿ ಸೆಲ್ ಕಳೆದ ವರ್ಷ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ೫೪೫  ಸಬ್ ಇನ್ಸ್‌ ಪೆಕ್ಟರ್‌ ಗಳ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸುತ್ತಿದೆ. ಹಗರಣದ ಮಾಸ್ಟರ್ ಮೈಂಡ್ ಆಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ  ಅವರನ್ನು ಬಂಧಿಸಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಲಂಚ ನೀಡಿದ ಅಭ್ಯರ್ಥಿಗಳ ಓ ಎಂ ಆರ್ ಶೀಟ್‌ ಗಳಲ್ಲಿ ಸರಿಯಾದ ಉತ್ತರಗಳನ್ನು ಈ ಪ್ರಕರಣಗಳಲ್ಲಿ ಶಾಮೀಲಾದವರು ಬರೆಯುವುದನ್ನು ಕೂಡ  ಈ ಪ್ರಕರಣ ಒಳಗೊಂಡಿತ್ತು ಎಂಬುವುದು ಇಲ್ಲಿ ಉಲ್ಲೇಖಾರ್ಹ. ಇದುವರೆಗೆ ಒಟ್ಟು ಬಂಧಿತರ ಸಂಖ್ಯೆ ೧೦೦ ದಾಟಿದೆ (ಪೊಲೀಸ್ ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು). ಎಷ್ಟರ ಮಟ್ಟಿಗೆ ಎಂದರೇ, ಒಂದು ನೇಮಕಾತಿಗೆ ಬರೋಬ್ಬರಿ ೮೫ ಲಕ್ಷದವರೆಗೆ ಲಂಚ ಸ್ವೀಕರಿಸಿದ್ದು ಈ ರಾಜ್ಯದ ಮುಂದೆ ಬಟಾಬಯಲಾಯಿತು.  ರಾಜಕೀಯದ ಕೃಪಾಶೀರ್ವಾದ ಅಥವಾ ಸಹಕಾರವಿಲ್ಲದೆ ಇಂತಹ ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ಯಾವುದೇ ತನಿಖೆ ನಡೆದಿಲ್ಲ. ಹಗರಣಗಳ ಸರಣಿ - ಬಿಟ್‌ಕಾಯಿನ್ ಹಗರಣ, ಕೋವಿಡ್ ಹಗರಣ, ಮಾರ್ಕ್ಸ್ ಕಾರ್ಡ್ ಹಗರಣ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣೆಗಳ ಸಂಘ (ಆರ್‌ ಯು ಪಿ ಎಸ್‌ ಎ = ರೂಪ್ಸಾ), ಬಿಡಿಎ ಹಗರಣ ಮತ್ತು ಶಿಕ್ಷಣ ಇಲಾಖೆಯಲ್ಲಿನ ಹಗರಣವನ್ನು ಬಹಿರಂಗಗೊಂಡಿವೆ. ಇತ್ತೀಚೆಗಿನ  ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನ ಮಗ ಲಂಚ ಸ್ವೀಕಾರ ಮಾಡಿದ್ದು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದು ಈಗ ಲೋಕಾಯುಕ್ತ ವಿಚಾರಣೆಯಲ್ಲಿದೆ. ಇಷ್ಟೆಲ್ಲಾ ಆಗಿಯೂ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಳಳುವುದರ ಜೊತೆಗೆ ವಿರೋಧ ಪಕ್ಷದ ಬಗ್ಗೆ ಸುಳ್ಳು ಹಬ್ಬಿಸುವುದನ್ನು ಬಿಟ್ಟಿಲ್ಲ. ಇನ್ನೂ ಜನ ಮೂರ್ಖರೇ ಎಂಬ ಭ್ರಮೆಯಲ್ಲಿಯೇ ಸರ್ಕಾರ ಇದ್ದರೇ, ಅದಕ್ಕಿಂತ ದೊಡ್ಡ ಹಾಸ್ಯ ಪ್ರಸಂಗ ಮತ್ತೊಂದಿರಲಿಕ್ಕಿಲ್ಲ. ಒಟ್ಟಿನಲ್ಲಿ ಹೊಸ ಹಗರಣವಿಲ್ಲದೆ ಸರಿಯಾಗಿ ಒಂದು ವಾರವನ್ನೂ ಈ ಸರ್ಕಾರ ಕಳೆದಿಲ್ಲ.

ಜನರು ಮೂರ್ಖರು ಎಂದುಕೊಳ್ಳುವುದೇ ದೊಡ್ಡ ಮೂರ್ಖತನ :  ಕರ್ನಾಟಕ ಬಿಜೆಪಿ ಮೋದಿ ಹವಾದಲ್ಲಿಯೇ ಈ ಭಾರಿಯ ಚುನಾವಣೆಯನ್ನೂ ಕೂಡ ಗೆದ್ದು ಬಿಡಬಹುದು ಎಂಬ ಭ್ರಮೆಯಲ್ಲಿಯೇ ಇರಬೇಕು. ಅದಕ್ಕಾಗಿಯೇ ಎಂದೂ ಇಲ್ಲದಂತೆ ಪದೇ ಪದೇ ಮೋದಿಯನ್ನು ಚುನಾವಣೆಯ ಈ ಹೊಸ್ತಿಲಲ್ಲಿ ಕರೆಸುತ್ತಿರುವುದು. ಒಂದಿಷ್ಟು ರೋಬೋ ಆಡಿಯನ್ಸ್‌ ಗಳನ್ನು ಸೇರಿಸಬಹುದು, ಮೋದಿ ಬಂದ ಕಾರು ಮುಚ್ಚಿ ಹೋಗುವಷ್ಟು ಹೂ ಚೆಲ್ಲಿ ಸ್ವಾಗತಿಸಬಹುದು, ಮೋದಿ ಇಲ್ಲಿ ಬಂದು ಕನ್ನಡದಲ್ಲಿ ಮಾತಾಡಬಹುದು, ಮೋದಿ ಬಂದ ಕಾರನ್ನು ಹೂವಿನಿಂದ ಮುಚ್ಚುವಷ್ಟರ ಮಟ್ಟಿಗೆ ಹೂಮಳೆ ಸುರಿಸಿದ್ದನ್ನು ವಿಶುವಲ್‌ ಎಫೆಕ್ಟ್‌, ಬ್ಯಾಗ್‌ ಗ್ರೌಂಡ್‌ ಎಫೆಕ್ಟ್‌ ಮೂಲಕ ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಬೂಸ್ಟ್‌ ಮಾಡಿ ಮನಬಂದಂತೆ ಹಬ್ಬಿಸಬಹುದು ಆದರೇ, ಜನರನ್ನು ಗೆಲ್ಲುವುದಕ್ಕೆ ಜನಸ್ನೇಹಿ ಕಾರ್ಯಗಳಿಲ್ಲದೇ ಇವು ಯಾವುದೂ ಕೂಡ ಕೆಲಸ ಮಾಡುವುದಿಲ್ಲ. ಸೋಶಿಯಲ್‌ ಮೀಡಿಯಾಗಳ ಮೂಲಕ ಈ ಹಿಂದೆ ಜನರ ತಲೆಗೆ ಸುಳ್ಳನ್ನು ಕಂಪ್ಯೂಟ್‌ ಮಾಡಿದರೇ ಆಯ್ತು ಒಂದು ಚುನಾವಣೆಯನ್ನೇ ಗೆಲ್ಲಬಹುದು ಅಂದುಕೊಂಡರೇ ಅದಕ್ಕಿಂತ ದೊಡ್ಡ ದಡ್ಡತನವಿಲ್ಲ. ಇದನ್ನು ಹೊರತಾಗಿ ಹೊಸ ನಾಟಕೀಯ ತಂತ್ರಗಳನ್ನು ರೂಪಿಸದ ಹೊರತು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಕೆಲವು ಮಾಧ್ಯಮಗಳು ಎಷ್ಟೋ ಚುನಾವಣೆಗಳಲ್ಲಿ ಒಂದು ರಾಜಕೀಯ ಪಕ್ಷವನ್ನು ಸೋಲಿಸುವಲ್ಲಿ, ಇನ್ನೊಂದು ಪಕ್ಷವನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಿದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಗಳನ್ನು ಹಬ್ಬಿಸುವುದರ ಮುಖೇನ ಸತ್ಯವನ್ನು ಸುಳ್ಳಾಗಿ ಮತ್ತು ಸುಳ್ಳನ್ನು ಸತ್ಯವನ್ನಾಗಿ ಮಾಡಬಹುದು ಎಂಬ ಕನಸಲ್ಲಿಯೇ ರಾಜಕೀಯ ಮಾಡುತ್ತಿದ್ದರೇ, ಅದು ನನಸಾಗುವುದಕ್ಕೆ ಸಾಧ್ಯವಿಲ್ಲ. ಜನರು ಬುದ್ಧಿವಂತರು, ಜನ ಈ ರಾಜಕೀಯದಿಂದ ಬೇಸತ್ತಿದ್ದಾರೆ. ಈ ಚುನಾವಣೆಯ ಗೆಲುವು ಅಷ್ಟು ಸುಲಭವಿಲ್ಲ. ಜನರಿಗೆ ಹೊಸತನ ಬೇಕಿದೆ. ಈ ಗಲಾಟೆ ಗದ್ದಲ ದೊಂಬಿ ರಾಜಕಾರಣದಿಂದ ಜನ ಸುಸ್ತಾಗಿದ್ದಾರೆ ಎನ್ನುವುದಂತೂ ಸತ್ಯ. ಇನ್ನು ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ ಎನ್ನುವುದು ಸ್ಪಷ್ಟ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ. ಏನೆಲ್ಲಾ ಆಗುತ್ತದೆ ಎಂದು  ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ