Wednesday, May 25, 2022

ಜನಾಂಗೀಯ ದ್ವೇಷದ ಕರಿನೆರಳು ಬಿತ್ತಿದ ರಾಜಪಕ್ಸೆ


 ಹೈಪರ್ ರಾಷ್ಟ್ರೀಯವಾದಿ ರಾಜಪಕ್ಸೆ, ಅಲ್ಪಸಂಖ್ಯಾತ ತಮಿಳರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಿದ್ದ..!

ಸರ್ವಾಧಿಕಾರದ ಕರಿನೆರಳನ್ನು ಒಪ್ಪುವ ದೇಶ ಅಧಪತನಗೊಳ್ಳುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಕಂಡು ಸೊರಗಿದ ಶ್ರೀಲಂಕಾವೇ ಸಾಕ್ಷಿ. ಸುಮಾರು ಐದು ದಶಕಗಳ ನಂತರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಗೋಡೆಗೆ ಹಚ್ಚಿದ ಹೊಸ ಬಣ್ಣವನ್ನೇ ಅಭಿವೃದ್ಧಿ ಎಂದು ನಂಬಿದ ಜನ ಬೀದಿ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣವೇ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ ಎಂದೇ ಹೇಳಲಾಗುತ್ತಿದೆ. ಶ್ರೀಲಂಕಾ ದೇಶಕಂಡ ಅತ್ಯಂತ ಕೆಟ್ಟ ಪ್ರಧಾನಮಂತ್ರಿ ಎಂಬ ಪಟ್ಟಕ್ಕೆ ರಾಜಪಕ್ಸೆ ಸೇರ್ಪಡೆಗೊಂಡಿದ್ದಾರೆ. 

ಪ್ರಚಾರದ ಹುಚ್ಚಿನಿಂದಲೇ ಪ್ರಧಾನಮಂತ್ರಿ ಸ್ಥಾನಕ್ಕೇರಿದ ಮಹಿಂದಾ ರಾಜಪಕ್ಸೆ ಆರಂಭದಿಂದಾದಿಯಾಗಿ ತಳೆದಿದ್ದು ಸರ್ವಾಧಿಕಾರ ಧೋರಣೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ದೇಶದ ಜನರಿಗೆ ಸುಳ್ಳು ಭರವಸೆ ನೀಡುತ್ತಲೇ ಅಭಿವೃದ್ಧಿ ಹೆಸರಿನಲ್ಲಿ ನಂಬಿಸಿದ. ಶ್ರೀಲಂಕಾ ದೇಶ ಇಂದು ಅತ್ಯಂತ ಕೆಟ್ಟ ಸ್ಥಿತಿಗೆ ಬರುವುದಕ್ಕೆ ನೇರಾನೇರ ಕಾರಣವೇ ರಾಜಪಕ್ಸೆ. ಹೈಪರ್ ಶ್ರೀಲಂಕಾ ರಾಷ್ಟ್ರೀಯವಾದಿ ಹೆಸರಿನಲ್ಲಿ ಆಡಳಿತ ನಡೆಸಿದ ಮಹಿಂದಾ ಮಾಡಿದ್ದು ಜನರನ್ನು ಉದ್ರಿಕ್ತಗೊಳಿಸಿದ್ದು ಅಷ್ಟೇ. ಹೌದು ಸರ್ವಾಧಿಕಾರ, ಜನಾಂಗೀಯವಾದ, ಭಾಷಾವಾದ, ಕೋಮುವಾದದ ವಿಚಾರವಾಗಿ ಶ್ರೀಲಂಕಾ ಇಡೀ ಜಗತ್ತಿಗೆ ದೊಡ್ಡ ಪಾಠವನ್ನೇ ನೀಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ರಾಷ್ಟ್ರೀಯವಾದ ಬೇರೆ, ಆಕ್ರಮಣಕಾರಿ ರಾಷ್ಟ್ರೀಯವಾದ ಬೇರೆ. ಶ್ರೀಲಂಕಾದಲ್ಲಿ ತನಗೆ ಪರ್ಯಾಯವೇ ಇಲ್ಲ ಎಂಬ ಭ್ರಮೆಯಲ್ಲಿಯೇ ಆಡಳಿತ ನಡೆಸಿದ ರಾಜಪಕ್ಸೆ ತನ್ನ ಮಾತುಗಳಲ್ಲಿ, ಧರ್ಮ, ಜನಾಂಗ, ಭಾಷೆಯ ವಾದದ ಮಾತನಾಡಿ ಜನರನ್ನು ಭ್ರಮೆಯಲ್ಲಿಯೇ ತೇಲಿಸಿ ದೇಶದ ಅಷ್ಟೂ ಆರ್ಥಿಕ ವ್ಯವಸ್ಥೆಯೇ ತನ್ನ ಕುಟುಂಬದ ಕೈಯಡಿಗೆ ಬರುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದ ಎಂದರೇ ಆಶ್ಚರ್ಯಪಡಬೇಕಾಗಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಹಿಂದಾ ನಡೆಸಿದ್ದು ಸರ್ವಾಧಿಕಾರ. ಶ್ರೀಲಂಕಾದಲ್ಲಿನ ಸಿಂಹಳಿಯರ ಓಲೈಕೆಗಾಗಿ ತಮಿಳು ಅಲ್ಪಸಂಖ್ಯಾತರನ್ನು ಹೊರಗೋಡಿಸುವ ಭರವಸೆ ಹುಟ್ಟಿಸಿ, ಜನಾಂಗೀಯ ದ್ವೇಷ ಹುಟ್ಟಿಸಿ ಅಧಿಕಾರವನ್ನು ಕೇಂದ್ರೀಕರಿಸಿಕೊಂಡು ದೇಶದ ಜನರನ್ನು ಮಹಿಂದಾ ನಯವಂಚನೆಗೆ ಸಿಲುಕಿಸಿದ್ದು ಅಲ್ಲಿನ ಜನರಿಗೆ ಗೊತ್ತೆಯಾಗಲಿಲ್ಲ. ಮಹಿಂದಾ ಹೂಡಿದ ವ್ಯವಸ್ಥಿತ ಹುನ್ನಾರಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮಿಳರ ವಿರುದ್ಧ ಆಕ್ರಮಣಕಾರಿ ವಾತಾವರಣ ಸೃಷ್ಟಿಯಾಗುವ ಹಾಗೆ ಮಾಡಿದ್ದೇ ಇದೇ ರಾಜಪಕ್ಸೆ. ಸಿಂಹಳಿಯ ಬುದ್ದಿಸಂ ಅನ್ನು ಮೇಲೆತ್ತಿ ಕಟ್ಟುವುದರಿಂದಲೇ ಜೀವನ ಪರ್ಯಂತ ಅಧಿಕಾರದಲ್ಲಿ ಇರಬಹುದು ಎಂದು ಕನಸು ಕಂಡ ಮಹಿಂದಾ ಅಲ್ಲಿನ ಜನರೇ ತನ್ನ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಊಹಿಸಿಕೊಂಡಿರಲಿಕ್ಕಿಲ್ಲ. 

ಹೇಳಿಕೇಳಿ ವಸಾಹುತುಶಾಹಿ ಯುಗದಲ್ಲಿ ಊಳಿಗಮಾನ್ಯ ಹುದ್ದೆಗಳನ್ನು ಹೊಂದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ರಾಜಪಕ್ಸೆ, ತನ್ನ ಆಡಳಿತದಲ್ಲಿಯೂ ವಸಾಹುತುಶಾಹಿ ಧೋರಣೆಯನ್ನು ತರುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನರು ತಮ್ಮ ಒಳಿತಿಗಾಗಿಯೇ ಮಾಡುತ್ತಿರುವುದೆಂದು ನಂಬಿ ಮೋಸ ಹೋದರು. ನಿರಂತರ ಬೆಲೆ ಏರಿಕೆ, ಹಣದುಬ್ಬರವಾಗುತ್ತಿದ್ದಾಗಲು ಅಲ್ಲಿನ ಬಹುಸಂಖ್ಯಾತ ಸಿಂಹಳಿಯರು ಇದು ದೇಶದ ಒಳಿತಿಗಾಗಿಯೇ ಆಗುತ್ತಿದೆ ಎಂದು ಕುರುಡಾಗಿ ನಂಬಿದರು. ಯಾಕೆಂದರೇ, ಅಲ್ಲಿನ ಮಹಿಂದಾ ರಾಜಪಕ್ಸೆ ಸರ್ಕಾರ ಜನಾಂಗೀಯ ಆಧಾರಿತವಾಗಿ ರಾಷ್ಟ್ರೀಯವಾದದ ಚಿಂತನೆಯನ್ನು ಅಲ್ಲಿನ ಜನರ ತಲೆಯೊಳಗೆ ಬಲವಂತವಾಗಿ ತುರುಕಿಸಿತ್ತು. ಮತ್ತದರ ಚೆಂದ ಕಾಣುವುದಕ್ಕೆ ಆರಂಭ ಮಾಡಿತ್ತು. ದೇಶದಲ್ಲಿ ಜಿಡಿಪಿ ಸರ್ವನಾಶವಾಗುತ್ತಿರುವಾಗಲೂ ರಾಜಪಕ್ಸೆ ಸರ್ಕಾರ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೇ ಸುಳ್ಳು ಹೇಳಿ ನಂಬಿಸಿತು. ದೇಶದ ಪ್ರತಿಶತ ಬಹುತೇಕ ಎಪ್ಪತ್ತರಷ್ಟು ಆರ್ಥಿಕ ವ್ಯವಸ್ಥೆಯನ್ನೇ ತನ್ನ ಕುಟುಂಬದ ಪಾದದಡಿಯಲ್ಲಿರುವಂತೆ ಮಾಡಿಕೊಂಡ ರಾಜಪಕ್ಸೆಗೆ ದೇಶ ಸರ್ವನಾಶವಾಗುವವರೆಗೂ ಅಲ್ಲಿನ ಒಬ್ಬನಿಗೂ ಸರ್ವಾಧಿಕಾರದ ರೋಗವಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಹ ಕ್ರಿಮಿನಲ್ ಮೈಂಡ್ ಬಳಸಿದ್ದ ಎನ್ನುವುದಿದರರ್ಥ. ದೇಶಕ್ಕೆ ವಿಶ್ವಬ್ಯಾಂಕ್‌ನಿಂದ ಸಾಲದ ಹೊರೆ ಹೊರೆಸಿದ, ಪ್ರಧಾನ ಮಂತ್ರಿ ಗದ್ದುಗೆಗೆ ನೆತ್ತರ ಕಲೆಗಳನ್ನು ಅಂಟಿಸಿದ. ಇಡೀ ಶ್ರೀಲಂಕಾವನ್ನೇ ಅಷ್ಟು ಸುಲಭವಾಗಿ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವಷ್ಟರ ಮಟ್ಟಿಗೆ ಪಾತಾಳಕ್ಕೆ ತಳ್ಳಿದ. ಇನ್ನು, ಮಹಿಂದಾ ರಾಜಪಕ್ಸೆಯ ಕೋಮುವಾದವನ್ನು, ಸರ್ಕಾರವನ್ನು ಪ್ರಶ್ನಿಸಿದವರು ಶ್ರೀಲಂಕಾದಲ್ಲಿ ಬೀದಿ ಹೆಣಗಳಾದರು. ಸತ್ಯ ಹೇಳಲು ಪ್ರಯತ್ನಿಸಿದ ಅಲ್ಲಿನ ಮಾಧ್ಯಮಗಳ ಹಾಗೂ ಪತ್ರಕರ್ತರ ಧ್ವನಿ ಅಡಗಿಸಲಾಯಿತು. 

ಏನಿದರ ಹಿಂದಿನ ಕಥೆ : ೧೯೫೬ರಲ್ಲಿ ಶ್ರೀಲಂಕಾ ಕೋಮುವಾದಿ ಸರ್ಕಾರ ಸಿಂಹಳವನ್ನು ಶ್ರೀಲಂಕಾದ ಅಧಿಕೃತ ಭಾಷೆ ಎಂದು ಘೋಷಿಸಿದ್ದೇ ಅಲ್ಲಿ ಜನಾಂಗೀಯ ದ್ವೇಷಕ್ಕೆ ನಾಂದಿಯಾಯಿತು. ಸಿಂಹಳಿಯರು ತಮಿಳರನ್ನು ಅತ್ಯಂತ ಕೀಳಾಗಿ ನೋಡುವುದಕ್ಕೆ ಆರಂಭಿಸಿದರು. ಜನಾಂಗೀಯ ದ್ವೇಷವೊಂದೇ ಕಾರಣಕ್ಕಾಗಿ ನೂರಾರು ತಮಿಳರನ್ನು ಬೀದಿ ಬೀದಿಗಳಲ್ಲಿ ಧಾರುಣವಾಗಿ ಕೊಂದರು. ಆರ್ಥಿಕ ಹಾಗೂ ಶಿಕ್ಷಣದಿಂದ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರನ್ನು ವಂಚಿತರಾಗುವಂತೆ ಕಂಡುಕೊಂಡರು. ಇಲ್ಲಿಂದ ಆಚೆಗೆ ಶ್ರೀಲಂಕಾ ಈ ಜನಾಂಗೀಯ ದ್ವೇಷದಲ್ಲಿ ಕಂಡಿದ್ದು ರಕ್ತ ಚರಿತ್ರೆ. ಸುಮಾರು ೧೯೫೮ರಿಂದಲೇ ಶ್ರೀಲಂಕಾದಲ್ಲಿ ಇದ್ದ ತಮಿಳರ ವಿರುದ್ಧದ ವಾತಾವರಣಕ್ಕೆ ಈ ರಾಜಪಕ್ಸೆ ಎಂಬ ಕೋಮುವಾದಿ ೨೦೦೮ರಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರ ಮೇಲೆ ಯುದ್ಧ ಸಾರಿಯೇ ಬಿಟ್ಟ. ಇದು ರಾಜಪಕ್ಸೆ ಹೂಡಿದ ಮತ್ತೊಂದು ವ್ಯವಸ್ಥಿತ ಜನಾಂಗೀಯ ಹತ್ಯೆ. ರಾಜಪಕ್ಸೆಯ ನೀಡಿದ ಆದೇಶದ ಮೇರೆಗೆ ಸಿಂಹಳಿಯ ಸೈನಿಕರು ತಮಿಳು ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ನಗ್ನಗೊಳಿಸಿ ಅತ್ಯಾಚಾರವೆಸಗಿದರು. ಕಂಡಕಂಡಲ್ಲಿ ತಮಿಳರನ್ನು ಗುಂಡಿಕ್ಕಿ ಕೊಂದರು. ಇಡೀ ಶ್ರೀಲಂಕಾವೇ ತಮಿಳರ ರಕ್ತದೋಕುಳಿಯಲ್ಲಿ ಮುಳುಗಿತ್ತು. ಶ್ರೀಲಂಕಾದಲ್ಲಿ ತಮಿಳರನ್ನು ನಿರ್ನಾಮ ಮಾಡುವುದೇ ರಾಜಪಕ್ಸೆಯ ಉದ್ದೇಶ ಎನ್ನುವುದು ಇಲ್ಲಿಯೇ ಸ್ಪಷ್ಟವಾಗಿತ್ತು. ಈ ಜನಾಂಗೀಯ ದ್ವೇಷ ಹುಟ್ಟಿಸುವ ಬದಲಾಗಿ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿ ದೇಶದ ಸುಧಾರಣೆಯತ್ತ ಚಿಂತಿಸಿದ್ದಿದ್ದರೇ, ಇವತ್ತು ಶ್ರೀಲಂಕಾಗೆ ಈ ಸ್ಥಿತಿ ಬರುತ್ತಿರಲಿಲ್ಲ. ಕೋಮುವಾದಿಯೊಬ್ಬನಿಂದ ಸಮಾನತೆಯನ್ನು ನಿರೀಕ್ಷಿಸುವುದಕ್ಕೆ ಹೇಗೆ ಸಾಧ್ಯವಿದೆ ಹೇಳಿ. ಶ್ರೀಲಂಕಾ ರಾಷ್ಟ್ರೀಯವಾದಿ ಸಿಂಹಳಿ ಬುದ್ಧಿಷ್ಟರಿಗೆ ಮಾತ್ರ ಸೇರಿದ್ದು ಎಂದು ತನ್ನ ಆಡಳಿತದುದ್ದಕ್ಕೂ ಹೇಳುತ್ತಲೇ ಇದ್ದ ರಾಜಪಕ್ಸೆಗೆ ಅಪಾರವಾದ ಜನಬಲ ದೊರಕಿತು. ರಾಜಕೀಯ ಆಟಕ್ಕೆ ಬೇಕಾಗಿ ಸಿಂಹಳಿ ಬುದ್ಧಿಷ್ಟರ ಮನವೋಲೈಕೆಯ ಉದ್ದೇಶದಿಂದ ಲಂಕೆಯಲ್ಲಿದ್ದ ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಿ ಬೌದ್ಧ ಸ್ತೂಪಗಳನ್ನು ಕಟ್ಟಿಸಿ ಮೆರೆದ. ತನಗೆ ಬೇಕಾದ ಹಾಗೆ ಸರ್ಕಾರದ ನೀತಿ ನಿಯಮಗಳನ್ನು, ಕಾನೂನುಗಳನ್ನು ರೂಪಿಸಿಕೊಂಡ. ತನ್ನ ನ್ಯೂನ್ಯತೆಗಳನ್ನ ಬರೆಯುವ ಪತ್ರಕರ್ತರ ಅಡ್ರೆಸ್ ಇಲ್ಲದ ಹಾಗೆ ಮಾಡಿದ. ಅವ್ಯಾಹತವಾಗಿ ಜನಾಂಗೀಯ ದ್ವೇಷ ಅತಿರಂಜಕತೆಯಲ್ಲಿಯೇ ಇರುವ ಹಾಗೆ ನೋಡಿಕೊಂಡ. ಇನ್ನು, ತಾನಿರುವವರಗೆ ತನ್ನ ಪರವಾಗಿ ಸಿಂಹಳಿಯ ಬುದ್ದಿಷ್ಟರು ಜೊತೆಗಿರುತ್ತಾರೆ ಎಂಬ ಭ್ರಮೆ ಆತನಲ್ಲಿ ಹೆಚ್ಚಾಗ ತೊಡಗಿತು. ತಾನು ಏನೇ ಹೇಳಿದರು ಒಪ್ಪುತ್ತಾರೆಂದು ಸಂವಿಧಾನವನ್ನೇ ಬದಲಾಯಿಸಿದ. ಪ್ರಚಾರದ ಹುಚ್ಚಿನಲ್ಲಿ ತೇಲಿದ. ದೇಶದ ಆಮದುಗಳನ್ನು ಲೂಟಿ ಹೊಡೆದ. ತನ್ನ ಸರ್ಕಾರದಲ್ಲಿ ತನ್ನ ಕುಟುಂಬದ ನಾಲ್ಕು ತಲೆಮಾರಿನವರನ್ನು ಸೇರಿಸಿಕೊಳ್ಳುವಷ್ಟರಮಟ್ಟಿಗೆ ಮುಂದುವರಿದ ಎಂದರೇ ಶ್ರೀಲಂಕಾ ಜನರು ಮೋಸ ಹೋಗಿದ್ದಲ್ಲದೇ ಮತ್ತೇನು..? 

ರಾಷ್ಟ್ರೀಯವಾದ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕಂತೆ ಕಂತೆ ಸುಳ್ಳು ಬೊಗಳಿ ಅಧಿಕಾರಕ್ಕೆ ಬಂದ ರಾಜಪಕ್ಸೆ ಪ್ರೇರೇಪಿಸಿದ್ದು ಎಂತದ್ದು ಎನ್ನುವುದು ‘ನೋ ಫೈರ್ ಜ್ಹೋನ್’ ಸಾಕ್ಷö್ಯ ಚಿತ್ರ ಗಮನಿಸಿದರೇ ತಿಳಿಯುವುದಕ್ಕೆ ಸಾಧ್ಯ. ಶ್ರೀಲಂಕಾ ಎಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿದೆ ಎಂದರೇ ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗದಷ್ಟು. ಆರ್ಥಿಕ ಭೀಕರತೆಯನ್ನು ಅನುಭವಿಸುತ್ತಿರುವ ಶ್ರೀಲಂಕಾದ ಜನ ಇಂದು ಹೊತ್ತಿನ ಆಹಾರಕ್ಕೆ ಪರದಾಡುತ್ತಿದ್ದಾರೆ. ಉದ್ಯೋಗಕ್ಕೆ ಒದ್ದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಊಹಿಸಿಕೊಳ್ಳಲಾರದಷ್ಟರಮಟ್ಟಿಗಿನ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದೂರದೃಷ್ಟಿಯಿಲ್ಲದ ಸರ್ಕಾರ ಮಾಡಿದ ವಿದೇಶಿ ಸಾಲದಿಂದ ಶ್ರೀಲಂಕಾದ ಜನ ಬೀದಿಗೆ ಬಿದ್ದಿದ್ದಾರೆ. ಶ್ರೀಲಂಕಾದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಲ್ಲಿನ ಜನರನ್ನು ಮೃಗೀಯ ಧೋರಣೆಯಿಂದ ಉಸಿರು ನಿಲ್ಲಿಸಲಾಗಿದೆ. ಶ್ರೀಲಂಕಾದ ರಾಜಕೀಯದಲ್ಲಿ ತಮಿಳರ ರಕ್ತದ ವಾಸನೆಯಿದೆ. ರಾಜಪಕ್ಸೆ ಕುಟುಂಬದ ಕೋಮು ಅಫೀಮು ಅಂಟಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ರಾಷ್ಟ್ರೀಯವಾದ, ಜನಾಂಗೀಯವಾದ, ಧರ್ಮಾಧಾರಿತ ನಿಲುವು, ಕೋಮುವಾದ, ಬಹುಪಕ್ಷಪಾತ ಯಾವುದೂ ಕೆಲಸ ಮಾಡುವುದಿಲ್ಲವೆಂದು ತಿಳಿದು ನರಿ ಬುದ್ಧಿಯಿಂದ ರಾಜಪಕ್ಸೆ ಎಲ್ಲೋ ಅಡಗಿ ಕುಳಿತ. ಸದ್ಯ, ರನೆಲ್ ವಿಕ್ರಮಸಿಂಘೆ ದೇಶದ ಹೊಣೆ ಹೊತ್ತಿದ್ದು, ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅತೀವ ಕುತೂಹಲವಿದೆ. 

ಕೋಮುವಾದಿ, ಸರ್ವಾಧಿಕಾರಿ ಧೋರಣೆಯುಳ್ಳ ಒಬ್ಬನ ದೂರದೃಷ್ಟಿಯಿಲ್ಲದ, ಅಶಿಸ್ತಿನ ಆಡಳಿತದಲ್ಲಿ ಶ್ರೀಲಂಕಾ ಎಂಬ ಒಂದು ದೇಶ ಈ ಸ್ಥಿತಿಗೆ ತಲುಪಿದೆ ಎಂದರೇ ಇದು ಭಾರತಕ್ಕೂ ಸೇರಿ ಇಡೀ ಜಗತ್ತಿಗೆ ಒಂದು ಪಾಠ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಸರ್ವಾಧಿಕಾರ ಧೋರಣೆ ಕಂಡ ಎಲ್ಲಾ ದೇಶಗಳು ಅನುಭವಿಸಿದ್ದು ಇದೇ ಎನ್ನುವುದು ಇಲ್ಲಿ ಗಮನಾರ್ಹ. ದ್ವೀಪ ರಾಷ್ಟçದಲ್ಲಿ ಎದ್ದ ಸಾರ್ವಜನಿಕರ ಕೋಪವಂತೂ ಸದ್ಯಕಂತೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿದವನ ವಿರುದ್ಧ ಲಂಕೆಯ ಜನರ ಕೋಪ ತಾರಕಕ್ಕೇರಿದೆ. ಇನ್ನು, ಲಂಕೆಯ ಮುಂದಿನ ಕೆಲವು ತಿಂಗಳು ಅತ್ಯಂತ ಭೀಕರವಾಗಿರಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಈ ನಡುವೆ ಹೇಗೆ ಲಂಕೆ ಈ ಸ್ಥಿತಿಯಿಂದ ಹೊರಬರಲಿದೆ ಎಂಬುವುದೇ ಸದ್ಯದ ಅಚ್ಚರಿ.     

-ಶ್ರೀರಾಜ್ ವಕ್ವಾಡಿ             


Thursday, May 19, 2022

ದೇಶದ್ರೋಹ ಕಾಯ್ದೆ ದುರ್ಬಳಕೆಗೆ ಫುಲ್ ಸ್ಟಾಪ್..!

ದೇಶ ಬೇರೆ, ಸರ್ಕಾರ ಬೇರೆ | ಸೆಕ್ಶನ್ 124ಎ ಏನು ಹೇಳುತ್ತದೆ..?

ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾರಿಯಾಗಿದ್ದ ‘ದೇಶದ್ರೋಹ ಕಾಯ್ದೆ’ಗೆ ಇತ್ತೀಚೆಗೆ ತಡೆ ನೀಡಿರುವುದು, ದೇಶದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದೇಶ ಬೇರೆ, ಸರ್ಕಾರ ಬೇರೆ. ಸರ್ಕಾರ ದೇಶ ಆಗುವುದಕ್ಕೆ ಸಾಧ್ಯವಿಲ್ಲ. ಸರ್ಕಾರವನ್ನು ಪ್ರಶ್ನಿಸುವುದು ದೇಶದ್ರೋಹವಾಗುವುದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡುವುದಕ್ಕೆ ಪ್ರಯತ್ನಿಸಿದರೇ, ಹಿಂಸೆ ಮತ್ತು ಕಾನೂನುಬಾಹಿರ ಮಾರ್ಗ ಬಳಸಿದರೇ, ಸರ್ಕಾರದ ವಿರುದ್ಧ ಅಸಮಾಧಾನವನ್ನು ಹಿಂಸಾತ್ಮಕವಾಗಿ ಅಥವಾ ಅತಿರಂಜಕಗೊಳಿಸಿ ಪ್ರಚೋದಿಸುವ ಯತ್ನ ಮಾಡಿದರೇ ಮಾತ್ರ ಅದನ್ನು ದೇಶದ್ರೋಹ ಎಂದು ಪರಿಗಣಿಸುವುದಕ್ಕೆ ಸಾಧ್ಯ. ಸದ್ಯ, ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ವಾತಾವರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ಕಾಯ್ದೆಯನ್ನು ಆಡಳಿತ ಸರ್ಕಾರಗಳು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಹಾಗೂ ಮತ್ತಿತರರು ಸುಪ್ರೀಂಇಂದಿರಾಗಾಂಧಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಚರ್ಚೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಮತ್ತು ನ್ಯಾಯಪೀಠ ದೇಶದಾದ್ಯಂತ ಬಾಕಿಯಿರುವ ಎಲ್ಲಾ ದೇಶದ್ರೋಹ ಕೇಸು, ಮೇಲ್ಮನವಿ ಹಾಗೂ ವಿಚಾರಣೆಗಳಿಗೆ ತಡೆ ನೀಡಿದ್ದಲ್ಲದೇ, ಹೊಸದಾಗಿ ದೇಶದ್ರೋಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 

ದೇಶದ್ರೋಹ ಕಾಯ್ದೆ ಬ್ರಿಟೀಷ್ ಕಾಲದಲ್ಲಿ ಜಾರಿಗೆ ತಂದದ್ದಾದರೂ, ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ನಿಸ್ಸಂಶಯವಾಗಿ ದುರ್ಬಳಕೆ ಮಾಡಿಕೊಂಡಿವೆ. ಹಾಗಾಗಿ ಈ ಕಾಯ್ದೆಯ ಬಗ್ಗೆ ಟೀಕೆ ಟಿಪ್ಪಣಿಗಳು ಹಲವು ದಶಕಗಳಿಂದಲೇ ಕೇಳಿಬರುತ್ತಲಿದ್ದು, ಸದ್ಯ ಈ ಕಾಯ್ದೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಹಿಂಸ್ಮಾತ್ಮಕ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವುದು ಮಾತ್ರವಲ್ಲದೇ, ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಯತ್ನಿಸುವುದನ್ನು ಮಾತ್ರ ದೇಶದ್ರೋಹವೆಂದು ಕಾಯ್ದೆ ವಾಖ್ಯಾನಿಸಿದೆ ಆದರೇ, ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದವರ ಮಣಿಸಲು ಬಳಸಿಕೊಂಡಿವೆ ಎನ್ನುವುದು ವಾಸ್ತವ ಸತ್ಯ. 

ಸೆಕ್ಶನ್ 124ಎ ಏನು ಹೇಳುತ್ತದೆ..?  : ಸೆಕ್ಶನ್ 124ಎ ಹೇಳುವ ಪ್ರಕಾರ, ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರದ ವಿರುದ್ಧ ಯಾರು ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು, ಸರ್ಕಾರದ ವಿರುದ್ಧವಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ, ಸಂಕೇತ ಅಥವಾ ಚಿಹ್ನೆಗಳ ಮೂಲಕ ಅತರಂಜಕಗೊಳಿಸಿ ಒತ್ತಾಯಪೂರ್ವಕವಾಗಿ ಅಸಮಾಧಾನ ಮೂಡಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ. ಉತ್ತೇಜನೆ ಅಥವಾ ಅಸಮಾಧಾನವನ್ನು ಪ್ರಚೋದಿಸಲು ಯಾವುದೇ ರೀತಿಯಲ್ಲಿ ಪ್ರಯತ್ನಿಸದೇ, ಕಾನೂನುಬದ್ಧವಾಗಿ ಸರ್ಕಾರದ ಬಗ್ಗೆ ವ್ಯಕ್ತಪಡಿಸುವ ಅಸಾಮಾಧಾನಗಳು ದೇಶದ್ರೋಹ ಎಂದು ಪರಿಗಣಿಸಲಾಗುವುದಿಲ್ಲ. 

ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶದ್ರೋಹ ಕಾಯ್ದೆ ಹಲವಾರು ವಿಮರ್ಶೆ, ಟೀಕೆಗೆ ಒಳಗಾಯಿತು. ೧೯೫೧ರಲ್ಲಿ ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಈ ಕಾಯ್ದೆಯನ್ನು ತೆಗೆದು ಹಾಕುವ ವಿಚಾರ ಪ್ರಸ್ತಾಪಿಸಿದರಾರೂ, ಏನೂ ಆಗಿರಲಿಲ್ಲ. ಇನ್ನು. ೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಬದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೧೨೪ಎ ಅನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಿತ್ತು, ಆದರೇ, ೨೦೦೪-೨೦೧೪ರ ತನಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಅಧಿಕಾರದಲ್ಲಿದ್ದಾಗ ಈ ಸಂಬಂಧ ಯಾವುದೇ ವಿಚಾರ ಹೊರತೆಗೆಯಲೇ ಇಲ್ಲ. ಪ್ರಜಾಪ್ರಭುತ್ವದಂತಹ ರಾಷ್ಟ್ರದ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಈ ಕಾಯ್ದೆ ಅಡ್ಡಿಮಾಡುತ್ತದೆ ಎಂದು ಒಂದೆಡೆ ವಾದವಾದರೇ, ದೇಶದ ಸಮಗ್ರತೆ ಹಾಗೂ ಭದ್ರತೆಯ ವಿಚಾರ ಬಂದಾಗ ಇಂತಹ ಕಾಯ್ದೆ ಅಗತ್ಯ ಎಂಬವರ ವಾದ ಮತ್ತೊಂದೆಡೆ. ಈವೆರಡು ಅಭಿಪ್ರಾಯಗಳ ಸಮತೋಲನ ಕಾಪಾಡುವ ಕೆಲಸ ಸದ್ಯಕ್ಕೆ ಸುಪ್ರೀಂ ಕೋರ್ಟ್ ಮಾಡಿದೆ ಎನ್ನುವುದು ಇಲ್ಲಿ ಗಮನಾರ್ಹ. 

ಬಹಳ ಪ್ರಮುಖವಾಗಿ, ದೇಶದಾದ್ಯಂತ ಮೋದಿ ಸರ್ಕಾರ ತರಲು ಹೊರಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ನಡೆದ ಪ್ರತಿಭಟನೆಯ ವರದಿ ಮಾಡಿದ ಹಿರಿಯ ಪತ್ರಕರ್ತರ ವಿರುದ್ಧವೂ ಈ ದೇಶದ್ರೋಹ ಕಾಯ್ದೆಯನ್ನು ಬಿಜೆಪಿ ಸರ್ಕಾರ ಬಳಸಿಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಈ ವಿಚಾರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಲವಾಗಿ ಖಂಡಿಸಿತ್ತು. ಸಮಾಜದ ಮುಖವಾಣಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ವಿರುದ್ಧವೇ ಈ ಕಾಯ್ದೆಯನ್ನು ಈ ದೇಶದ ಆಡಳಿತ ಪಕ್ಷ ಬಳಿಸಿಕೊಂಡಿದೆ ಎಂದಾದರೇ, ಸಾಮಾನ್ಯರ ಗತಿ ಏನು..? ಹಾಗಾಗಿಯೇ, ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಐಡಬ್ಲ್ಯೂಪಿಸಿ (ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್) ಈ ಕಾಯ್ದೆಯನ್ನು “ಕಠಿಣ ಕಾಯ್ದೆ” ಎಂದು ಕರೆದಿದ್ದಲ್ಲದೇ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.  

ವಿದ್ಯಾರ್ಥಿಗಳನ್ನು ಒಳಗೊಂಡು ವಿಮರ್ಶಕರು, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಪೊಲೀಸರು, ರಾಜಕೀಯ ನಾಯಕರು, ವಕೀಲರು, ಪತ್ರಕರ್ತರು ಮುಂತಾದವರು ದೇಶದ್ರೋಹ ಕಾಯ್ದೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಾತ್ರವಲ್ಲದೇ ಕಾಯ್ದೆಯನ್ನು ರದ್ದು ಮಾಡಿಸಬೇಕು ಅಥವಾ ತಿದ್ದುಪಡಿಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಒಳಗೊಂಡ ನ್ಯಾಯಪೀಠ ಕೂಡ ಸರ್ಕಾರವನ್ನು ಮರುಪರಿಶೀಲಿಸುವಂತೆ ಕೇಳಿ ಸದ್ಯ ತಡೆಹಿಡಿದು ವಿಚಾರಣೆಯನ್ನು ಜುಲೈ ೩ನೇ ವಾರಕ್ಕೆ ಮುಂದೂಡಿದೆ. ಹಾಗಾದರೇ, ಒಂದು ವೇಳೆ ದೇಶದ್ರೋಹ ಕಾಯ್ದೆ ಭಾರತದಲ್ಲಿ ರದ್ದಾದರೇ, ಅದಕ್ಕೆ ಸರಿಹೊಂದುವ ಬೇರೆ ಯಾವುದೇ ಕಾಯ್ದೆಗಳಿಲ್ಲವೇ..? ಖಂಡಿತ ಇವೆ. ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಸೇರಿ ಮುಂತಾದ ಕಾಯೆಗಳು ಇವೆ ಎನ್ನುವುದು ಗಮನಾರ್ಹ. 

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆ : ಈ ಕಾಯ್ದೆಯು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ತಡೆಗಟ್ಟುವ ಕಾನೂನಾಗಿದೆ. ಸಮಗ್ರತೆ ಹಾಗೂ ಸಾರ್ವಭೌಮತೆಗೆ ವಿರುದ್ಧವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ೨೦೧೯ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಯ (ಯುಎಪಿಎ ೨೦೧೯) ಕಾನೂನಿಗೆ ವಿರುದ್ಧ/ವಾದ ನಡೆದುಕೊಳ್ಳುವವರನ್ನು/ಚಟುವಟಿಕೆಗಳನ್ನು ಭಯೋತ್ಪಾದಕರೆಂದು/ಭಯೋತ್ಪಾದಕ ಚಟುವಟಿಕೆಗಳೆಂದು ಪರಿಗಣಿಸಬಹುದಾಗಿದೆ. ಯುಎಪಿಎ ಕಾಯ್ದೆಯನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ ಎಂದು ಕೂಡ ಕರೆಯಲಾಗುತ್ತದೆ. 

ಇನ್ನು, ಯುಎಪಿಎ ಕಾಯ್ದೆಯ ಪ್ರಕಾರ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡ, ಅಥವಾ ಭಯೋತ್ಪಾದನೆಗಾಗಿ ತಯಾರಿ, ಭಯೋತ್ಪಾದನೆಯನ್ನು ಉತ್ತೇಜಿಸುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಕ್ಕೆ ಈ ಕಾಯ್ದೆಗೆ ಅಧಿಕಾರ ಇದೆ.  

ರಾಷ್ಟ್ರೀಯ ಭದ್ರತಾ ಕಾಯ್ದೆ : ೧೯೮೦ರಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಸುಮಾರು ೧೮ ಸೆಕ್ಶನ್‌ಗಳುಳ್ಳ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ, ವಿದೇಶಗಳೊಂದಿಗಿನ ಭಾರತದ ಸಂಬಂಧಗಳ ನಿರ್ವಹಣೆಯ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.  

ಹೌದು, ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅನೇಕ ಕಾಯ್ದೆಗಳಿವೆ. ಅಂತಹುದರಲ್ಲಿ ಮಹಾತ್ಮಗಾಂಧಿ ಅವರಂತಹ ಸ್ವಾತಂತ್ರದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಅಥವಾ ಸತ್ಯವನ್ನು ಅಡಗಿಸಲು ಬ್ರಿಟೀಷ್ ಸರ್ಕಾರ ಬಳಸಿಕೊಂಡ ದೇಶದ್ರೋಹದಂತಹ ಕಾಯ್ದೆಯನ್ನೇಕೆ ಈ ದೇಶದ ಸರ್ಕಾರ ರದ್ದುಗೊಳಿಸುತ್ತಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇಲ್ಲಿನ ನಾಗರಿಕರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಕಾರ್ಯಚಟುವಟಿಕೆಗಳನ್ನು, ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹವೆಂದು ಸರ್ಕಾರದ ಪರವಾದ ಸಂಘಟನೆಗಳು, ಪರವಾದಿಗಳು ಬಿಂಬಿಸುವಂತಹ ಭಯೋತ್ಪಾದಕ ವಾತಾವರಣ ಸೃಷ್ಟಿಗೆ ಪರೋಕ್ಷವಾಗಿ ಸರ್ಕಾರಗಳೇ ಕಾರಣವಾದವು. ಸತ್ಯವನ್ನು ಅಡಗಿಸುವ ಪ್ರಯತ್ನವನ್ನು ಈ ಕಾಯ್ದೆಯನ್ನು ಬಳಸಿಕೊಂಡು ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂವಿಧಾನ ಈ ದೇಶದ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ತನ್ನ ಪರವಾದ ಸಂಘಟನೆಗಳ ವಿರುದ್ಧ ಎಂದೂ ಯಾವ ಸರ್ಕಾರವೂ ಸರ್ಕಾರ ದೇಶದ್ರೋಹದ ಪ್ರಕರಣಗಳನ್ನು ದಾಖಲು ಮಾಡಿಲ್ಲ. ತನ್ನ ಆಡಳಿತದ ವೈಫಲ್ಯವನ್ನು ಪ್ರಶ್ನಿಸಿದವರ ಮೇಲೆ, ವರದಿ ಮಾಡಿದವರ ಮೇಲೆ ದೇಶದ್ರೋಹದಂತಹ ಕಾಯ್ದೆಯನ್ನು ಬಳಸಿಕೊಂಡು ಜಾಮೀನುರಹಿತ ಅಪರಾಧವೆಂದು ಘೊಷಿಸಿದವು. ತನಗೆ ಲಾಭ ತಂದುಕೊಡುವ ಸೆನ್ಸೇಷನಲೈಸ್ಡ್ ಧರ್ಮ ರಾಜಕೀಯ ಸಂಘರ್ಷಗಳು, ಘಟನೆಗಳು ಸರ್ಕಾರಗಳಿಗೆ ಎಂದೂ ದೇಶದ್ರೋಹವೆಂದು ಕಾಣಿಸಲೇ ಇಲ್ಲ. ಅವುಗಳ ಚೆಂದ ಕಾಣುತ್ತಲೇ ತನ್ನ ಆಡಳಿತ ಮುಂದುವರಿಸಿದ್ದು ಈ ದೇಶದ ದುರಂತವೇ ಸರಿ. 

ಒಟ್ಟಿನಲ್ಲಿ, ಈ ದೇಶದಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ದೇಶದ ನಾಗರಿಕರಿಗೆ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಸಮಗ್ರತೆಯ ಸಮತೋಲನಕ್ಕೆ ಧ್ವನಿ ಸೇರಿಸುವುದರ ಮೂಲಕ ಸುಪ್ರೀಂ ಕೋರ್ಟ್ ದೇಶದ್ರೋಹ ಕಾಯ್ದೆಗಳಿಗೆ ಸದ್ಯ ತಡೆ ಹಿಡಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ  


Thursday, May 12, 2022

ವಿವಾದ ಸೃಷ್ಟಿಸಿದ್ದ ‘ಪೌರತ್ವ’ ಮತ್ತೆ ಮುನ್ನೆಲೆಗೆ..!

(ಸಾಂದರ್ಭಿಕ ಚಿತ್ರ)

ಸಿಎಎ ವಿವಾದಕ್ಕೆ ಕಾರಣವೇನು..? | ‘ಪೌರತ್ವ’ ಮತ್ತೆ ಬಿಜೆಪಿಯ ೨೦೨೪ರ ಪ್ರಣಾಳಿಕೆಗೆ..?

ಕಳೆದ ಎರಡು ಮೂರು ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಈಗ ಮತ್ತೆ ಸದ್ದು ಮಾಡುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಿಎಎ ಕಾಯ್ದೆಯ ವಿಚಾರ ಮತ್ತೆ ಮೇಲೆತ್ತಿದ್ದು, ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. 

ಮುಸ್ಲೀಮರನ್ನು ಉದ್ದೇಶಪೂರ್ವಕವಾಗಿ ಧರ್ಮಾಧಾರಿತವಾಗಿ ಈ ದೇಶದಲ್ಲಿ ನಿರ್ಲಕ್ಷ್ಯಕ್ಕೆ  ಒಳಪಡಿಸುವ ಅಥವಾ ಹೊರಹಾಕುವ ಬಿಜೆಪಿಯ ಪೂರ್ವಯೋಜಿತ ಷಡ್ಯಂತ್ರವಿದು ಎಂದು ಈ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಈ ತಿದ್ದುಪಡಿ ಕಾಯ್ದೆ, ಕೋವಿಡ್‌ನ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಸಿಎಎ ಜೊತೆಗೆ ಎನ್ ಆರ್ ಸಿ ಯೋಜನೆಯನ್ನೂ ಕೂಡ ಧರ್ಮಾಧಾರಿತವಾಗಿ ತಂದು ಧಾರ್ಮಿಕ ತಾರತಮ್ಯ ಮಾಡುವ ಸಂಚು ಎನ್ನುವುದು ಈ ಕಾಯ್ದೆಯ ವಿರುದ್ಧ ನಿಂತವರ ವಾದವಾಗಿತ್ತು. ಆದರೇ, ಸರ್ಕಾರ ಹಾಗೂ ಕಾಯ್ದೆಯ ಪರವಾಗಿ ನಿಂತವರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡೇ ಬಂದಿದ್ದು, ಮೂರು ಮುಸ್ಲೀಂ ಬಹುಸಂಖ್ಯಾತ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ತುಳಿತಕ್ಕೆ ಒಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗಷ್ಟೇ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ) ಭಾರತೀಯ ಪೌರತ್ವ ನೀಡಲಾಗುತ್ತದೆ. ಅಕ್ರಮವಾಗಿ ವಲಸೆ ಬಂದಿರುವ ಮುಸ್ಲೀಮರಿಗಷ್ಟೇ ಸಮಸ್ಯೆ ಆಗುತ್ತದೆ. ಭಾರತೀಯ ಮೂಲ ಮುಸ್ಲೀಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಇಂದಿಗೂ ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಈ ಕಾಯ್ದೆಯ ತಿದ್ದುಪಡಿಯ ವಿಚಾರ ಮುನ್ನೆಲೆಗೆ ಬಂದಾಗ ಇಡೀ ದೇಶದಾದ್ಯಂತ ಕಾಯ್ದೆಯ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದವು, ಕೆಲವಡೆದೆ ಅದು ಧಾರ್ಮಿಕ ಹೊಯ್ದಾಟಕ್ಕೂ ಕಾರಣವಾಯಿತು. ಮಾತ್ರವಲ್ಲದೇ ಈ ಹೊಯ್ದಾಟವನ್ನು ಕೆಲವರು ‘ದೇಶವನ್ನು ರಕ್ಷಿಸುವ ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎಂದು ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಸುವ ಕೆಲಸವನ್ನೂ ಮಾಡಿದರು. ಇನ್ನು, ಈ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರವಂತೂ ತನಗೆ ಸಂಬಂಧವೇ ಇಲ್ಲ ಎಂಬ ಧೋರಣೆ ತೋರಿಸಿ ಬಾಯಿ ಮುಚ್ಚಿ ಚೆಂದ ಕಂಡಿದ್ದು ಬಿಟ್ಟರೇ, ತಿಳಿ ಹೇಳುವ ಕೆಲಸವನ್ನೂ ಮಾಡದೇ ಇರುವುದು ದುರಂತವೇ ಸರಿ. 

ಅಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ ೩೭೦ ರದ್ದು, ಅಯೋಧ್ಯೆ ರಾಮ ಮಂದಿರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳು ಜನ ಪರವೋ, ವಿರೋಧವೋ ಗೊತ್ತಿಲ್ಲ ಆದರೇ, ಬಿಜೆಪಿ ಸರ್ಕಾರದ ಚುನಾವಣಾ ಅಜೆಂಡಾ ಆಗಿ ಬಳಸಿಕೊಳ್ಳುತ್ತಿರುವುದಂತೂ ಸತ್ಯ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರ್ಕಾರ ತನಗೆ ಲಾಭವಾಗುವುದನ್ನೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದು ರಾಜಕೀಯದಲ್ಲಿ ಸಾಮಾನ್ಯ. ಈವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಅದನ್ನೇ ಮಾಡಿದ್ದು, ಅದರಿಂದ ಮೋದಿ ಸರ್ಕಾರ ಹೊರತಾಗಿಲ್ಲ. ಇನ್ನು, ವಿಚಾರಗಳನ್ನು ಅತಿರಂಜಕಗೊಳಿಸಿ ಚೆಂದ ಕಾಣುವುದನ್ನು ಈಗಿನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ವಿಶೇಷವಾಗಿ ಹೇಳಿಕೊಡಬೇಕೆಂದಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಅದಕ್ಕೆ ಬೇಕಾದ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದಿರುವುದೇ ಬಿಜೆಪಿಯಲ್ಲಿನ ದೊಡ್ಡ ಸಮಸ್ಯೆ. ಅದಕ್ಕಾಗಿ ಬಿಜೆಪಿ ಯಾವುದೇ ವಿಷಯ ಮುನ್ನೆಲೆಗೆ ತಂದಾಗ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ೨೦೧೯ರ ವಿಷಯದಲ್ಲಿ ಇದೇ ಆಗಿದ್ದು. 

ಎಲ್ಲಿ ವಿವಾದಕ್ಕೆ ಕಾರಣವಾಗಿದ್ದು..? : ಭಾರತಕ್ಕೆ ವಾಮ ಮಾರ್ಗದ ಮೂಲಕ ಅಥವಾ ಅಕ್ರಮವಾಗಿ ವಲಸೆ ಬಂದವರಿಗೆ ಈ ದೇಶದಲ್ಲಿ ಪೌರತ್ವ ನೀಡುವುದಕ್ಕೆ ಪೌರತ್ವ ಕಾಯ್ದೆ ೧೯೫೫ ಹಾಗೂ ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆಗಳು ನಿರ್ಬಂಧಗಳನ್ನು ಹಾಕಿವೆ. ಆದರೇ, ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿAದ ಅಕ್ರಮವಾಗಿ ವಲಸೆ ಬಂದ ಮುಸ್ಲೀಮರನ್ನು ಹೊರತುಪಡಿಸಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ ಧರ್ಮಗಳ ಅಲ್ಪಸಂಖ್ಯಾತರು ೬ ವರ್ಷ ವಾಸವಿದ್ದರೇ ಪೌರತ್ವ ನೀಡುವ ವಿಚಾರವನ್ನು ಪ್ರಸ್ತಾಪಿಸಿರುವುದೇ ದೇಶದಲ್ಲಿ ಇದನ್ನು ಧಾರ್ಮಿಕ ತಾರತಮ್ಯ ಎಂದು ಬಿಂಬಿಸಿ ದೊಡ್ಡ ಮಟ್ಟದ ಹೋರಾಟ, ಪ್ರತಿಭಟನೆಗಳು ನಡೆಯುವುದಕ್ಕೆ ಕಾರಣ ಎನ್ನುವುದು ಸ್ಪಷ್ಟ.   

ನೆರೆ ರಾಷ್ಟçಗಳಿಂದ ಧಾರ್ಮಿಕವಾಗಿ ಶೋಷಣೆಗೆ ಒಳಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ ಅಲ್ಪಸಂಖ್ಯಾತರಿಗಷ್ಟೇ ಪೌರತ್ವ ನೀಡುವುದಾಗಿ, ಹಾಗೂ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ಮುಸ್ಲೀಮರು ಆ ದೇಶದಲ್ಲಿ ಅಲ್ಪಸಂಖ್ಯಾತರಲ್ಲ ಎಂದು ಮೋದಿ ಸರ್ಕಾರ ವಾದಿಸುತ್ತಿರುವುದು ಪ್ರಗತಿಪರ ಚಿಂತಕರನ್ನು ಕೆರಳಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಮೋದಿ ವಿರೋಧಿಗಳನ್ನು ಈ ತಿದ್ದುಪಡಿ ಕೆರಳಿಸಿದ್ದು ಯಾಕೆ..?  : ೧೯೫೫ರಲ್ಲಿ ಜವಹರಲಾಲ್ ನೆಹರು ಈ ದೇಶದ ಪ್ರಧಾನಿಯಾಗಿದ್ದಾಗ, ಈ ದೇಶದಿಂದ ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಇತರೆ ನೆರೆ ರಾಷ್ಟçಗಳಿಗೆ ಗುಳೆ ಹೋಗಿ, ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದ ಭಾರತ ದೇಶದ ಮೂಲವಾಸಿಗರಿಗೆ ಮತ್ತೆ ಈ ನೆಲದಲ್ಲಿ ನೆಲೆ ಕಲ್ಪಿಸುವ ಉದ್ದೇಶದಿಂದ ಮತ್ತು ಈ ದೇಶದ ಪೌರತ್ವ ನೀಡುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ (ನೆಹರು ನೇತೃತ್ವದ ಸರ್ಕಾರ) ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ತಂದಿತ್ತು. ಸುಮಾರು ಆರು ದಶಕಗಳಿಂದ ಈ ದೇಶದಲ್ಲಿ ಇದೇ ಕಾಯ್ದೆ ಜಾರಿಯಲ್ಲಿತ್ತು. ನೆಹರು ಸರ್ಕಾರ ಜಾರಿಗೆ ತಂದ ಈ ಕಾಯ್ದೆಯ ಅನ್ವಯ ನೆರೆಹೊರೆ ರಾಷ್ಟçಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಅಕ್ರಮವಾಗಿ ಈ ದೇಶದಲ್ಲಿ ಸುಮಾರು ೧೨ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನೆಲೆ ನಿಂತ ಸಿಖ್, ಹಿಂದೂ, ಕ್ರೆöÊಸ್ತ, ಪಾರ್ಸಿ, ಬೌದ್ಧ, ಜೈನ ಹಾಗೂ ಮುಸ್ಲೀಂ ಅಥವಾ ಯಹೂದಿಗಳು ಕಾನೂನು ಅನುಸಾರವಾಗಿ ಸೂಕ್ತ ದಾಖಲೆಗಳಿದ್ದರೇ ಭಾರತ ದೇಶದ ಪೌರತ್ವ ನೀಡಲಾಗುತ್ತಿತ್ತು. ಮಾತ್ರವಲ್ಲದೇ, ೧೯೫೫ರಲ್ಲಿ ಜಾರಿಗೆ ಬಂದ ಈ ಕಾಯ್ದೆ ಹೇಳುವ ಪ್ರಕಾರ, ವಿದೇಶಿ ಪ್ರಜೆಯೊಬ್ಬ ಭಾರತ ದೇಶದಲ್ಲಿದ್ದು, ದೇಶದ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿರುವುದರೊಂದಿಗೆ ಹಲವು ಕಾನೂನುಬದ್ಧ ಷರತ್ತುಗಳಿಗೆ ಬದ್ಧರಾಗಿದ್ದರೇ ಈ ದೇಶದ ಪೌರತ್ವ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನೂ ಕೂಡ ನೀಡಿತ್ತು. ಮತ್ತು ಅರ್ಜಿ ಸಲ್ಲಿಸುವ ಹಿಂದಿನ ೧೪ ವರ್ಷಗಳಲ್ಲಿ ಸುಮಾರು ಹನ್ನೊಂದು ವರ್ಷಗಳ ಕಾಲ ಈ ದೇಶದಲ್ಲಿ ವಾಸವಿರುವುದನ್ನು ಆ ವಿದೇಶಿ ಪ್ರಜೆ ದೃಢಪಡಿಸಭೇಕಾಗಿರುವುದು ಅನಿವಾರ್ಯವಾಗಿತ್ತು. ಆದರೇ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ತಿದ್ದುಪಡಿಯಲ್ಲಿ ಕೆಲವು ಬದಲಾವಣೆ ಮಾಡಿರುವುದು ಮತ್ತು ಅಕ್ರಮವಾಗಿ ವಲಸೆ ಬಂದ ಮುಸ್ಲೀಮರಿಗೆ ಪೌರತ್ವ ನೀಡುವ ವಿಷಯವನ್ನು ತೆಗೆದು ಹಾಕಿರುವುದು ಚರ್ಚೆಗೆ ಕಾರಣವಾಗಿತ್ತು. 

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ೨೦೧೪ರಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದ ಅಧಿಕಾರ ಹಿಡಿದ ಎರಡು ವರ್ಷಗಳ ನಂತರ ಅಂದರೇ, ೨೦೧೬ರ ಜುಲೈ ೧೯ ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡನೆ ಮಾಡಿತ್ತು, ಮಾತ್ರವಲ್ಲದೇ ಅದೇ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಇನ್ನು, ಸಂಸದೀಯ ಸಮಿತಿ ೨೦೧೯ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿತ್ತು. ಮತ್ತು ಲೋಕಸಭೆಯಲ್ಲಿಯೂ ಕೂಡ ಮಸೂದೆ ಮಂಡನೆಯಾಗಿ ಪಾಸ್ ಆಗಿತ್ತು. ಆದರೇ, ರಾಜ್ಯ ಸಭೆಯಲ್ಲಿ ಮಂಡನೆಯಾಗಿರಲಿಲ್ಲ. ಸರ್ಕಾರದ ಅವಧಿ ಮುಗಿದ ಕಾರಣದಿಂದಾಗಿ ಮಸೂದೆಯೂ ರದ್ದಾಗಿತ್ತು. ೨೦೧೯ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದ ಅಧಿಕಾರ ಹಿಡಿದ ಮೇಲೆ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಆದರೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ. ತದನಂತರ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮಸೂದೆ ಒಂದು ರೀತಿಯಲ್ಲಿ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾಯ್ದೆಯ ವಿಚಾರವನ್ನು ಮೇಲಕ್ಕೆತ್ತಿದ್ದು, ೨೦೨೪ರ ಲೋಕಸಭಾ ಚುನಾವಣಾ ಪೂರ್ವವಾಗಿ ಜಾರಿಗೆ ತರುವ ಎಲ್ಲಾ ಲಕ್ಷಣಗಳು ಕಾಣಿಸತ್ತಿವೆ. 

ಇನ್ನು, ಈಗಾಗಲೇ ಈ ಕಾಯ್ದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೂರು ಬಾರಿ ಹಾಗೂ ಬಿಜೆಪಿ ಸರ್ಕಾರ ಇದ್ದಾಗ ಎರಡು ಬಾರಿ ಸೇರಿ ಒಟ್ಟು ಐದು ಬಾರಿ ತಿದ್ದುಪಡಿಯಾಗಿದ್ದು, ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳು ಇದನ್ನು ‘ಭಾರತದಂತಹ ಜಾತ್ಯಾತೀತ ರಾಷ್ಟçದಲ್ಲಿ ಧರ್ಮಾಧಾರಿತ ರಾಜಕೀಯ ಮಾಡುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಸಂವಿಧಾನ ಕೊಡಮಾಡಿರುವ ೧೪ನೇ ವಿಧಿ ಅಥವಾ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶದ ಪೌರತ್ವ ನೀಡುವುದು ಈ ದೇಶದ ಕಾನೂನಿಗೆ ವಿರುದ್ಧವಾದದ್ದು’ ಎಂದು ಬಲವಾಗಿ ವಿರೋಧಿಸುತ್ತಿರುವುದರ ನಡುವೆಯೂ ಮೋದಿ ನೇತೃತ್ವದ ಸರ್ಕಾರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ. ಆದರೇ, ರಾಜ್ಯಸಭೆಯಲ್ಲಿ ಇಷ್ಟೆಲ್ಲಾ ಬಾರಿ ವಿರೋಧದ ನಡುವೆಯೂ ಪಾಸ್ ಆಗಲಿದೆಯೇ ಎಂಬ ಪ್ರಶ್ನೆಯೊಂದು ಈ ತನ್ಮಧ್ಯೆ ಎದ್ದಿದೆ. 

-ಶ್ರೀರಾಜ್ ವಕ್ವಾಡಿ 


Thursday, May 5, 2022

ರಾಜ್ಯದಲ್ಲಿ ಪುನರ್ಜನ್ಮಕ್ಕೆ ಕಾಂಗ್ರೆಸ್ ಸರ್ವಪ್ರಯತ್ನ

ರಾಜ್ಯ ಕಾಂಗ್ರೆಸ್‌ಗೆ ಸುರ್ಜೇವಾಲ, ಕನ್ನುಗೋಲು ಸ್ಟ್ರ್ಯಾಟಜಿ | ಕಾಂಗ್ರೆಸ್ ‘150’ ಪರಮ ಗುರಿ

ಸತತ ಎರಡು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಈಗ ಕರ್ನಾಟಕ ಚುನಾವಣೆಯತ್ತ ಗಮನ ಹರಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ಎಲ್ಲಾ ರಾಜಕೀಯ ಸವಾಲುಗಳನ್ನು ಮೆಟ್ಟಿ ನಿಲ್ಲಲು ಕಾರ್ಯೋನ್ಮುಖವಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ೧೫೦ ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲೇ ಬೇಕು ಎಂದು ಹೇಳಿದ್ದರು, ಸಾಮೂಹಿಕವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಹೋರಾಟ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ ರಾಹುಲ್ ಗಾಂಧಿ ಈಗ ರಾಜ್ಯದಲ್ಲಿ ಚುನಾವಣಾ ತಂತ್ರ ಹೂಡುವುದಕ್ಕೆ ರಾಜಕೀಯ ತಂತ್ರಜ್ಞ ಸುನೀಲ್ ಕನ್ನುಗೋಲು ಅವರನ್ನು ಕೂಡ ಕಳುಹಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಈ ಬಾರಿ ಬಹಳ ಸೀರಿಯಸ್ ಆಗಿ ತೆಗೆದುಕೊಂಡ ಹಾಗೆ ಕಾಣಿಸುತ್ತಿದೆ. 

ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಅತ್ಯಂತ ಪ್ರಬಲವಾದ ಪಕ್ಷ ಹಾಗೂ ಅನುಭವಿಗಳುಳ್ಳ ಕರ್ನಾಟಕದಲ್ಲಿ ಈ ಚುನಾವಣೆಯನ್ನು ಗೆದ್ದು ತೋರಿಸುವ ಕನಸು ಕಾಂಗ್ರೆಸ್ ಕಾಣುತ್ತಿದೆ. ಆಡಳಿತ ಪಕ್ಷ ಬಿಜೆಪಿಯ ಹಿಂದುತ್ವದ ಅಲೆ ಎದುರು ಕಾಂಗ್ರೆಸ್‌ನ ‘ಪಾಲಿಟಿಕಲ್ ಸೆಕ್ಯುಲರಿಸಂ’  ಹೇಗೆ ಕಾರ್ಯಕ್ಕೆ ಬರುತ್ತದೆ ಎನ್ನುವುದು ಸದ್ಯದ ಕುತೂಹಲ. 

ಸರಣಿ ಸಭೆ ಮಾಡಿ ಸಾಮೂಹಿಕ ನಾಯಕತ್ವದಡಿ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಸೂಚನೆ ನೀಡಿದ್ದರೂ ಅವರೀರ್ವರ ನಡುವೆ ವೈಮಸ್ಸು ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಗೊತ್ತಿರುವ ವಿಷಯ. ಉಭಯ ನಾಯಕರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತ ಹೆಚ್ಚು ಸ್ವಪ್ರತಿಷ್ಠೆಯೇ ಹೆಚ್ಚು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಉಭಯ ನಾಯಕರೇ ಕಾಂಗ್ರೆಸ್ ಹೈಕಮಾಂಡ್‌ಗೆ ಉಭಯ ಸಂಕಟವಾಗಿದೆ. ಡಿಕೆಶಿ ಅಂತಹ ರಾಜಕೀಯ ರೆಬಲ್ ವರ್ಚಸ್ಸು ಇರುವ ನಾಯಕನನ್ನೂ ಬಿಡುವ ಹಾಗಿಲ್ಲ, ಅತ್ತ ಸಿದ್ದರಾಮಯ್ಯನಂತಹ ಅತ್ಯಂತ ಅನುಭವಿ ರಾಜಕೀಯ ನಾಯಕನನ್ನೂ ದೂರ ಇಡುವ ಹಾಗಿಲ್ಲ. ಸದ್ಯಕ್ಕೆ ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಬೇಕಾಗಿರುವುದು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನು ಚುನಾವಣಾ ಮುಗಿಯುವವರೆಗೆ ಕಾಯ್ದಿರಿಸಿಕೊಳ್ಳುವುದು ಬಹಳ ಮುಖ್ಯ. ಕಾಂಗ್ರೆಸ್‌ನನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವುದಕ್ಕೆ ಪಕ್ಷ ಬಲವರ್ದನೆಗೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹಳೆ ಮೈಸೂರು ಹಾಗೂ ಬಯಲು ಸೀಮೆ ಜಿಲ್ಲೆಗಳ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಗುರಿಯಾಗಿಸಿಕೊಂಡು ಗೆಲ್ಲುವ ಕುದುರೆಯನ್ನು ಆಪರೇಷನ್ ಹಸ್ತ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಬಿಜೆಪಿ ಕೂಡ ಹಳೆ ಮೈಸೂರು ಭಾಗದಲ್ಲಿ ತನ್ನನ್ನು ತಾನು ಗಟ್ಟಿಗೊಳಿಸಿಕೊಳ್ಳುವ ಸರ್ವ ಪ್ರಯತ್ನದಲ್ಲಿದೆ. ರೆಸಾರ್ಟ್ ರಾಜಕಾರಣ ಹಾಗೂ ಆಪರೇಷನ್ ಸಕ್ಸಸ್ ಮಾಡುವುದರಲ್ಲಿ ಡಿಕೆಶಿ ಎತ್ತಿದ ಕೈ. ಅದು ಸ್ವತಃ ಬಿಜೆಪಿ ಹಾಗೂ ಜೆಡಿಎಸ್‌ಗೂ ಕೂಡ ಗೊತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಹೊಂದಿಕೊಳ್ಳಬಲ್ಲ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದ್ದಾರೆ. ಒಕ್ಕಲಿಗ ಮತ ಬ್ಯಾಂಕ್ ಬಗ್ಗೆ ಡಿಕೆಶಿ ಗಮನಾರ್ಹ ನಡೆಯಲ್ಲಿದ್ದು ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲೂ ಸರ್ವಪ್ರಯತ್ನದಲ್ಲಿದ್ದಾರೆ. ಅಹಿಂದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದರೇ, ಇತ್ತ ಹಿಂದುಳಿದ ವರ್ಗದ ನಾಯಕರಾಗಿ ಡಾ. ಜಿ ಪರಮೇಶ್ವರ್ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರಿಗೂ ಏನೂ ಕೊರತೆ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ಎದುರು ಕಾಂಗ್ರೆಸ್‌ಗೆ ಒಂದು ಪ್ರಬಲ ಒಕ್ಕಲಿಗ ನಾಯಕತ್ವ ಬೇಕು. ಒಂದಿಷ್ಟು ವಿವಾದಗಳಿಂದ ಒಕ್ಕಲಿಗ ಸಮುದಾಯದಲ್ಲಿ ತಮಗಿದ್ದ ವರ್ಚಸ್ಸನ್ನು ಕಳೆದುಕೊಂಡಿದ್ದ ಡಿಕೆಶಿ ಈಗ ಮತ್ತೆ ಒಕ್ಕಲಿಗರ ಪ್ರಬಲ ನಾಯಕರಾಗಿ ಗುರುತಿಸಿಕೊಳ್ಳುವುದು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಮತ ಬ್ಯಾಂಕ್ ಸೆಳೆಯುವುದು ಪರಮ ಗುರಿಯಾಗಿಸಿಕೊಂಡಿದ್ದಾರೆ. ಇನ್ನು, ಕಳೆದ ಹಲವು ವರ್ಷಗಳಿಂದ ಕುರುಬರ ಹಾಗೂ ಅಹಿಂದ ನಾಯಕರಾಗಿ ಸಿದ್ದರಾಮಯ್ಯರಿಗೆ ಸರಿಸಮನಾಗಿ ಗುರುತಿಸಿಕೊಂಡವರು ರಾಜ್ಯದಲ್ಲಿ ಯಾವ ಪಕ್ಷದ ನಾಯಕರೂ ಇಲ್ಲ. ಹಾಗಾಗಿ ಸದ್ಯದ ಕಾಂಗ್ರೆಸ್‌ನ ಸಾಮೂಹಿಕ ನೇತೃತ್ವ ಸಮಾಧಾನದ ಪರಿಹಾರವಾದರೂ ಮುಂದೆ ಚುನಾವಣೆ ಹತ್ತಿರಕ್ಕೆ ಬಂದಾಗ ನೇತೃತ್ವ ಈ ಈರ್ವರಲ್ಲಿ ಯಾರಿಗೆ ಕೊಟ್ಟರೂ ಮತಗಳು ಚೆಲ್ಲಾಪಿಲ್ಲಿಯಾಗಿ ಹೋಗುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಹಾಗಾಗಿ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಹೈಕಮಾಂಡ್ ನೇತೃತ್ವ ಕೊಟ್ಟರೇ, ಕಾಂಗ್ರೆಸ್‌ಗೆ ಲಾಭವೂ ಉಂಟು, ನಷ್ಟವೂ ಉಂಟು. ಈಗ ಲಾಭ ಯಾರಿಂದ ಹೆಚ್ಚಾಗುತ್ತದೆ ಎನ್ನುವುದನ್ನು ಅರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಬಹಳ ಮುಖ್ಯ. 

ಡಿಕೆಶಿ ಕಾಂಗ್ರೆಸ್‌ಗೆ ಆಪತ್ಕಾಲದಲ್ಲಿ ಆದವರು. ೨೦೧೮ರ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದವರು ಡಿಕೆಶಿ. ೨೦೦೧ರ ಕಾಂಗ್ರೆಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ವಹಿಸಿದ್ದರು. ೨೦೧೭ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ಪಕ್ಷಾಂತರ ಮಾಡಲು ಪ್ರಯತ್ನಿಸಿದ ಸುಮಾರು ೪೦೪೨ ಮಂದಿ ಶಾಶಕರನ್ನು ತಮ್ಮ ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್ಗೆ ಸ್ಥಳಾಂತರಿಸಿ ತಮ್ಮ ಪಕ್ಷದ ಹೈಕಮಾಂಡ್‌ಗೆ ಸಹಾಯ ಹಸ್ತ ಚಾಚಿದ್ದರು. ತರಯವಾಯ ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದರು ಈ ಎಲ್ಲಾ ಋಣ ಕಾಂಗ್ರೆಸ್ ಹೈಕಮಾಂಡ್‌ಗೆ ಇದೆ. ಇನ್ನು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ದೊಡ್ಡ ಪ್ರಮಾಣದ ವಿರೋಧದ ನಡುವೆಯೂ ಅವಕಾಶ ಕೊಟ್ಟಿರುವ ಋಣ ಖರ್ಗೆಗೆ ಇದೆ. ಹೈಕಮಾಂಡ್‌ಗೆ ಕರ್ನಾಟಕದ ವಿಚಾರದದಲ್ಲಿ ಖರ್ಗೆ ಮಾತು ಫೈನಲ್ ಎಂಬ ಹಾಗಿದೆ. ಸಿದ್ದು ಪರ ಖರ್ಗೆ ಋಣಕ್ಕಾಗಿಯಾದರೂ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೋನಿಯಾ ಅಭಯವಿದ್ದರೂ ಡಿಕೆಶಿಗೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನ ನೀಡುವುದು ಬೇಡ ಎಂದು ರಾಹುಲ್ ಟೀಮ್ ಹೇಳುವ ಸಾಧ್ಯತೆ ಹೆಚ್ಚೇ ಇದೆ. ಇವೆಲ್ಲವನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎನ್ನುವುದು ಯಕ್ಷ ಪ್ರಶ್ನೆ. 

ಇತ್ತ ಕಳೆದ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿ ಸುಮಾರು ೫,೨೪೦ ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ ಹಗರಣದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದು ಇಡೀ ದೇಶವನ್ನೇ ಕರ್ನಾಟಕದತ್ತ ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಈ ಬಾರಿ ಚುನಾವಣೆಯ ಉದ್ದೇಶದಿಂದ ರಾಜ್ಯದಲ್ಲೇ ಠಿಕಾಣಿ ಹೂಡಿ ಚುನಾವಣಾ ರಣತಂತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಪರವಾಗಿ ರಣತಂತ್ರ ಮಾಡುವುದಕ್ಕಾಗಿ ಚುನಾವಣಾ ತಂತ್ರಜ್ಞ ಸುನೀಲ್ ಕನ್ನುಗೋಲು ತಂಡವನ್ನು ಕಳುಹಿಸಿದ್ದು, ಈಗಾಗಲೇ ಸುನೀಲ್ ತಂಡ ಕಾಂಗ್ರೆಸ್ ಪರ ಕೆಲಸ ಆರಂಭಿಸಿದೆ. 

ಬಿಟ್ ಕಾಯಿನ್ ಹಗರಣ, ೪೦% ಕಮಿಷನ್, ಕೋವಿಡ್ ಅವ್ಯವಸ್ಥೆ, ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಾಗೂ ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಇತ್ಯಾದಿ ಹಗರಣ, ಭ್ರಷ್ಟಾಚಾರ, ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆಗೆ ಮುಂದಿಟ್ಟುಕೊಂಡು ರಾಜ್ಯದಲ್ಲಿ ಪುನರ್ಜನ್ಮಕ್ಕೆ ಪ್ಲ್ಯಾನ್  ಮಾಡುತ್ತಿದೆ. ಆದರೂ, ಈ ಹಗರಣ, ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಳ್ಳುವುದರೊಂದಿಗೆ ರಾಜ್ಯದಲ್ಲಿ ದೊಡ್ಡ ಸಮುದಾಯವನ್ನು ತಲುಪಬಲ್ಲ ಹೊಸ ರೂಪಾಂತರಿ ಕಾಂಗ್ರಸ್ ಪಕ್ಷ ಕಟ್ಟುವ ಕೆಲಸ ಆಗಬೇಕಾಗಿದೆ. ಮಾತ್ರವಲ್ಲದೇ, ಪಕ್ಷದ ಸಿದ್ಧಾಂತವನ್ನು ಸ್ಪಷ್ಟಪಡಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸಮರ್ಥಿಸಿಕೊಳ್ಳುವ ವ್ಯವಸ್ಥೆ ರಚಿಸಿಕೊಳ್ಳುವುದು ಹಾಗೂ ಹಿಂದುತ್ವ, ಭ್ರಷ್ಟಾಚಾರದ ವಿರುದ್ಧ ಪ್ರಬಲವಾಗಿ ನಿಲ್ಲಬೇಕಾದ ಅನಿವಾರ್ಯ ಕಾಂಗ್ರೆಸ್‌ಗೆ ತುರ್ತಿದೆ. 

ಈ ಎಲ್ಲದಕ್ಕಿಂತಲೂ ಹೆಚ್ಚು ಕಾಂಗ್ರೆಸ್ ಅಗತ್ಯವಾಗಿ ಜನ ಸಮೂಹದೊಂದಿಗೆ ಸಂಪರ್ಕ ಸಾಧಿಸಿಕೊಳ್ಳಬೇಕಾಗಿದೆ. ತನ್ನ ಸೆಕ್ಯುಲರಿಸಂ ಧೋರಣೆಯ ನಿಜ ಉದ್ದೇಶವನ್ನು ಕಾಂಗ್ರೆಸ್ ತೋರಿಸಿಕೊಡಬೇಕಾಗಿದೆ. ಕಾಂಗ್ರೆಸ್ ಅಂದ್ರೆ ಮುಸ್ಲೀಂ ಸಮುದಾಯದ ಮುಖವಾಣಿ ಎಂಬಂತಹ ಅಭಿಪ್ರಾಯ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ, ಅದರಿಂದ ಶೀಘ್ರಮುಖವಾಗಿ ಹೊರಬಂದು ಕಾಂಗ್ರೆಸ್ ಸಮಾಜದ ಮುಖವಾಣಿ ಎಂಬುವುದನ್ನು ತೋರಿಸಿಕೊಡುವಲ್ಲಿ ಕಾರ್ಯೋನ್ಮುಖವಾಗಬೇಕಿದೆ. ೨೦೧೮ರ ವಿಧಾನಸಭಾ ಚುನಾವಣೆ ಅಕ್ಷರಶಃ ಸಿದ್ದರಾಮಯ್ಯ ವರ್ಸಸ್ ಮೋದಿ ಎಂಬ ಹಾಗಾಗಿತ್ತು. ಆದರೇ, ಈ ಬಾರಿ ಮೋದಿ ವರ್ಸಸ್ ಕಾಂಗ್ರೆಸ್ ಎಂಬಂತೆ ಚುನಾವಣೆ ನಡೆಯಬಾರದು. ಹೈಕಮಾಂಡ್‌ನಿಂದ ಕಳುಹಿಸಿದ ರಾಜಕೀಯ ತಂತ್ರಜ್ಞ ಸುನೀಲ್ ಕೂಡ ಈಗ ಇದನ್ನೇ ಹೇಳುತ್ತಿರುವುದು ಎನ್ನುವುದು ಇಲ್ಲಿ ಗಮನಾರ್ಹ.

ಒಟ್ಟಿನಲ್ಲಿ, ಕಾಂಗ್ರೆಸ್ ಸೈದ್ಧಾಂತಿಕ ಸ್ಪಷ್ಟತೆಯನ್ನು ಮೊದಲು ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನನ್ನು ಅಧಿಕಾರಕ್ಕೆ ತರುವ ಬಯಕೆ ಅನುಭವಿ, ಪ್ರಭಾವಿ ನಾಯಕರುಗಳ ಮನಸ್ಸಲ್ಲಿ ಇರುವುದು ನಿಜವೇ ಆಗಿದ್ದರೇ, ತಮ್ಮ ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಪ್ರಬುದ್ಧ ನಡೆಯಿಂದ ಚುನಾವಣೆಯನ್ನು ಎದುರಿಸಬೇಕಾಗಿರುವುದು ಸದ್ಯಕ್ಕೆ ಕಾಂಗ್ರೆಸ್‌ಗೆ ಅಗತ್ಯವಿದೆ ಎಂಬುವುದು ಸ್ಪಷ್ಟ. 

-ಶ್ರೀರಾಜ್ ವಕ್ವಾಡಿ  

   


Wednesday, April 27, 2022

ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ವ್ಯೂಹ ರಚನಾಕಾರ

 


“ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡಲಸಾಧ್ಯ”: ಕಿಶೋರ್  | ಕಾಂಗ್ರೆಸ್ ಸೇರಲು ಪಿಕೆ ನಕಾರ  

ಸಮರ್ಥ ನಾಯಕತ್ವದ ಕೊರತೆಯಲ್ಲಿ ದೇಶದಾದ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ‘೨೦೨೪’ರ ತಲೆಬಿಸಿ ಹೆಚ್ಚಾಗಿದೆ. ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಟ್ಟ ಪಕ್ಷ ಎಂದು ತನ್ನನ್ನ ತಾನು ಕರೆಸಿಕೊಳ್ಳುವ ಕಾಂಗ್ರೆಸ್‌ಗೆ ಈಗ ರಾಜಕೀಯ ವಲಯದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಗೊತ್ತಾದ ಹಾಗೆ ಕಾಣಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಯಾರೂ ಊಹಿಸಲಾರದಷ್ಟು ದೊಡ್ಡ ಮಟ್ಟಿಗೆ ರಾಜಕೀಯದ ಅಲೆ ಸೃಷ್ಟಿ ಮಾಡಿದ ಬಿಜೆಪಿ ವಿರುದ್ಧ ಚುನಾವಣೆಯನ್ನು ಎದುರಿಸುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಮೈನಡುಕ ಆರಂಭವಾಗಿದೆ ಎನ್ನುವುದಂತೂ ಸ್ಪಷ್ಟ. ಸದ್ಯ ಚುನಾವಣಾ ರೂಪುರೇಷೆ ಮಾಡುವ ಭರಾಟೆಯಲ್ಲಿರುವ ಪಕ್ಷ ಚುನಾವಣಾ ವ್ಯೂಹ ರಚನಾಕಾರ ಪ್ರಶಾಂತ್ ಕಿಶೋರ್(ಪಿಕೆ) ಅವರ ತಂತ್ರಗಳೊಂದಿಗೆ ಕಣಕ್ಕಿಳಿಯುವ ಸರ್ವ ಪ್ರಯತ್ನ ಮಾಡಿದೆಯಾದರೂ ಸದ್ಯ ಅದು ವಿಫಲವಾದಂತಾಗಿದೆ.

ಹೌದು, ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದಿಗಿಂತಲೂ ದೊಡ್ಡ ಸವಾಲಿದೆ. ಈ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿರುವುದು ಕಾಂಗ್ರೆಸ್‌ಗೆ ಅನಿವಾರ್ಯ. ಪಕ್ಷದ ಎಲ್ಲಾ ಸ್ತರಗಳಲ್ಲೂ ಒಗ್ಗಟ್ಟು ಇರಬೇಕಾಗಿದೆ. ಒಂದೆಡೆ ಎಂತದ್ದೇ ಮಾಡಿದರೂ ಬಂಡಾಯ ಏಳುವ ಜಿ೨೩ ಹಿರಿಯ ನಾಯಕರ ಅತೃಪ್ತ ಧ್ವನಿಯಾದರೇ, ಇನ್ನೊಂದೆಡೆ ಅನುಭವದ ಕೊರತೆ ಇರುವ ಕಾಂಗ್ರೆಸ್ ಯುವ ಪಡೆ ಕಾಲಿಟ್ಟಲ್ಲೆಲ್ಲಾ ವೈಫಲ್ಯವನ್ನು ಎದುರಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನಂತಹ ದೊಡ್ಡ ಪಕ್ಷಕ್ಕೆ ಸದ್ಯ ನಾಯಕತ್ವವೇ ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಈ ಸ್ಥಿತಿ ಹೀಗೆ ಮುಂದುವರಿದರೇ, ಪ್ರಜಾಪ್ರಭುತ್ವದ ದೇಶದಲ್ಲಿ ಒಂದು ಸಮರ್ಥ ವಿರೋಧ ಪಕ್ಷವೇ ಇಲ್ಲದಂತಾಗಿ ಸರ್ವಾಧಿಕಾರಕ್ಕೆ ಈ ದೇಶ ತುತ್ತಾಗಲಿದೆಯೇ ಎಂಬ ಆತಂತ ಮೊಳಕೆ ಒಡೆಯುತ್ತಿದೆ. 

ಈ ದೇಶಕ್ಕೆ ಪ್ರಬಲವಾದ ‘ವಿರೋಧ ಪಕ್ಷದ ಪುನರುತ್ಥಾನ’ದ ತುರ್ತಿದೆ. ಅದು ಭಾರತದಂತಹ ದೇಶದ ಸಾಮಾಜಿಕ ವ್ಯವಸ್ಥೆಗೂ ಅತ್ಯವಶ್ಯಕವಾಗಿದೆ. ಹೌದು, ಈ ದೇಶವನ್ನು ಕೆಲವು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಈಗ ನಿಜಕ್ಕೂ ಅತಂತ್ರ ಸ್ಥಿತಿಯಿಂದ ಫಿನಿಕ್ಸ್ ಹಕ್ಕಿಯಂತೆ ಪುಟಿದೇಳುವ ಅಗತ್ಯತೆ ಇದೆ. ತನ್ನ ರಾಜಕೀಯ ಅಜೆಂಡಾದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳದಿದ್ದರೇ, ಕಾಂಗ್ರೆಸ್‌ಗೆ ಈ ಬದಲಾದ ರಾಜಕೀಯ ವಲಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದೇ ಕಾಣಿಸುತ್ತಿದೆ. ಇದು ಸ್ವತಃ ಕಾಂಗ್ರೆಸ್‌ಗೂ ಕೂಡ ಗೊತ್ತಿದೆ. ಮುಂದಿನ ಲೋಕಸಭೆಯನ್ನು ಕಾಂಗ್ರೆಸ್ ಈಗ ಟಾರ್ಗೇಟ್ ಇಟ್ಟುಕೊಂಡಿದ್ದು, ಹೇಗೆ ಚುನಾವಣಾ ಕಣವನ್ನು ಎದುರಿಸಲಿದೆ ಎನ್ನುವುದೇ ಸದ್ಯದ ಕುತೂಹಲ. 

ರಾಜಕೀಯ ಅಂದುಕೊಂಡಷ್ಟು ಸುಲಭದಲ್ಲ. ಸೋಲು, ಗೆಲುವು, ಟೀಕೆ ಇಲ್ಲಿ ಸಾಮಾನ್ಯ. ಬಹುತೇಕ ಎಲ್ಲಾ ಕಡೆಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅಗತ್ಯವಾಗಿ ಈಗ ಜೀವ ತುಂಬುವ ಶಕ್ತಿ ಬೇಕಾಗಿದೆ. ಆ ಜೀವ ತುಂಬುವ ಶಕ್ತಿ ಪಕ್ಷದ ಚುನಾವಣಾ ರಚನಾಕಾರರ ಮೇಲಿರುತ್ತದೆ. ಕಾಂಗ್ರೆಸ್ ಪಾಳಯದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರದ್ದು. ಬಹುತೇಕ ಕಾಂಗ್ರೆಸ್ ಅಂಗಳಕ್ಕೆ ಪ್ರಶಾಂತ್ ಈಗಾಗಲೇ ಕಾಲಿಟ್ಟಾಗಿದೆ ಎಂಬಷ್ಟರಲ್ಲಿಯೇ ಅದು ಹುಸಿಯಾಗಿದೆ. ಕಳೆದ ವರ್ಷದ ಜುಲೈನಲ್ಲೇ ಪಿಕೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಬಗ್ಗೆ ಗೌಪ್ಯ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದ್ದಲ್ಲದೇ, ಕಾಂಗ್ರೆಸ್ ಸೈದ್ಧಾಂತಿಕ ನಿಲುವುಗಳಿಗೆ ಪಿಕೆ ಒಪ್ಪುತ್ತಾರೆಯೇ ಎಂಬ ಚರ್ಚೆ ಕಾಂಗ್ರೆಸ್ ಪ್ರಮುಖ ನಾಯಕರ ವಲಯದಲ್ಲಿ ನಡೆದಿತ್ತು. ಇನ್ನು ಕೆಲವು ಕಾಂಗ್ರೆಸ್‌ನ ಹಿರಿಯ ನಾಯಕರಂತೂ ಪಿಕೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೇ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಾಧ್ಯ ಎಂದು ಹೇಳಿದ್ದರು. ಆದರೇ, ತೃತೀಯ – ಚತುರ್ಥ ರಂಗದಿಂದ ಬಿಜೆಪಿಯನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಿಕೆ ಅವರ ಇತ್ತೀಚಿನ ನಡೆಗಳು ರಾಜಕೀಯ ವಲಯದಲ್ಲಿ ಇಂಟ್ರೆಸ್ಟಿಂಗ್ ಮೂಡಿಸಿತ್ತು. ಆದರೇ, ಸದ್ಯ ಕಾಂಗ್ರೆಸ್ ಆಹ್ವಾನವನ್ನು ಪಿಕೆ ನಿರಾಕರಿಸಿದ್ದಾರೆ.   

೨೦೦೪ ರಿಂದ ೨೦೧೪ರವರೆಗಿನ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಅದ್ಭುತವೆನ್ನಿಸುವ ಹಾಗೆ ಬರೋಬ್ಬರಿ ೨೮೨ ಸ್ಥಾನಗಳನ್ನು ಗಿಟ್ಟಿಸಿಕೊಂಡು ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗ ಹೆಚ್ಚಾಗಿ ಕೇಳಿ ಬಂದಿದ್ದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೆಸರು. ಆದರೇ, ಆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಪಿಕೆ ಬಿಹಾರ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ಸೇರಿ ಇನ್ನು ಕೆಲವು ಕಡೆಗಳಲ್ಲಿ ತಮ್ಮ ಬ್ರ್ಯಾಂಡ್ ಹೆಚ್ಚಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಹಾಗಾಗಿ ಪಿಕೆ ಇದ್ದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಮಾತೂ ಕೂಡ ಇದೆ. ಪ್ರಧಾನಿ ನರೇಂದ್ರ ಮೋದಿ ೨೦೧೨ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಆದಾಗ ಪಿಕೆ ಜೊತೆಗಿದ್ದರು, ಅದಾದ ಬಳಿಕ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಿಕೆ ಬಿಜೆಪಿಯೊಂದಿಗೆ ಚುನಾವಣಾ ರಣತಂತ್ರ ಹೂಡಿದ್ದರು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿದರು. ಬಿಜೆಪಿ ಕಂಡ ಈ ಅಭೂತಪೂರ್ವ ಯಶಸ್ಸಿನ ಹಿಂದೆ ಪಿಕೆ ಸೃಷ್ಟಿಸಿದ ವ್ಯೂಹ ಇದೆ ಎನ್ನುವುದು ಇಲ್ಲಿ ಗಮನಾರ್ಹ. ಅದಾದ ಬಳಿಕ ೨೦೧೫ರಲ್ಲಿ ಬಿಹಾರದಲ್ಲಿ ನಿತಿಶ್ ಕುಮಾರ್, ೨೦೧೭ರಲ್ಲಿ ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ೨೦೧೮ರಲ್ಲಿ ತೆಲಂಗಾಣದಲ್ಲಿ ಕೆಸಿಆರ್, ೨೦೨೦ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ೨೦೨೧ರ ಪಂಚ ರಾಜ್ಯ ಚುನಾವಣೆಯಲ್ಲಿಯೇ ಹೈವೋಲ್ಟೇಜ್ ರಾಜ್ಯ ಎಂದು ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ದೀದಿ ಯಾನೆ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ ಕೆ. ಸ್ಟ್ಯಾಲಿನ್ ಗೆಲುವಿನ ಹಿಂದೆ ಈ ಎಲ್ಲಾ ರಾಜಕೀಯ ನಾಯಕರ ರಾಜಕೀಯ ವರ್ಚಸ್ಸು ಆಯಾಯ ರಾಜ್ಯದಲ್ಲಿದ್ದರೂ ಚುನಾವಣೆಯಲ್ಲಿ ಪಿಕೆ ಸೃಷ್ಟಿಸಿದ ವ್ಯೂಹ ಇಲ್ಲಿ ವರ್ಕೌಟ್ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. 

ಇನ್ನು, ಕಾಂಗ್ರೆಸ್ ಪಕ್ಷದೊಂದಿಗೆ ಪಿಕೆ ಹೂಡಿದ ಎಲ್ಲಾ ತಂತ್ರಗಾರಿಕೆ ಸಕ್ಸಸ್ ಕಂಡಿದೆ ಎನ್ನುವುದಕ್ಕೆ ಖಂಡಿತ ಸಾಧ್ಯವಿಲ್ಲ. ಉತ್ತರಪ್ರದೇಶದಲ್ಲಿ ೨೦೧೭ರಲ್ಲಿ ಸೃಷ್ಟಿಸಿದ ಮೈತ್ರಿ ಸೂತ್ರ ಕಾಂಗ್ರೆಸ್‌ಗೆ ಯಶಸ್ಸು ಕೊಟ್ಟಿರಲಿಲ್ಲ. ೨೦೧೯ರಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಹಾಗೂ ಇತರೆ ತೃತೀಯ ರಂಗದ ಪಕ್ಷಗಳು ಒಗ್ಗೂಡಿ ಆದ ‘ಮಹಾಘಟಬಂಧನ್’ ಕೂಡ ಇದೇ ಪಿಕೆ ಸೃಷ್ಟಿಸಿದ ರಣತಂತ್ರ. ಆದರೇ, ಈ ಘಟಬಂಧನ ಕಾಂಗ್ರೆಸ್‌ಗಂತೂ ದೊಡ್ಡ ಮಟ್ಟದಲ್ಲಿ ಮುಜುಗರ ತಂದುಕೊಟ್ಟಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಪಿಕೆ ನಿರ್ದೇಶನದ ‘ಮಹಾಘಟಬಂಧನ್’ ಸೂತ್ರ ಈ ದೇಶದಲ್ಲಿ ಮೋದಿ ಅಲೆಯ ಮುಂದೆ ಏನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. 

೨೦೧೩-೨೦೧೪ರ ಸಂದರ್ಭದಲ್ಲಿ ಮನಬಂದಂತೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದ ಪಿಕೆ ಒಂದೊಮ್ಮೆ ದಿಢೀರ್ ಅಂತನೇ ಕಾಂಗ್ರೆಸ್ ಬಗ್ಗೆ ಒಲವು ತೋರಿಸಿದ್ದರು, ಮತ್ತೆ ಈಗ ಸ್ವತಃ ಸೋನಿಯಾ ಗಾಂಧಿ ಆಹ್ವಾನವನ್ನು ನಿರಾಕರಿಸಿದ್ದು ನೋಡಿದರೇ, ಆಶ್ಚರ್ಯವೆನ್ನಿಸುತ್ತಿದೆ. ಆದಾಗ್ಯೂ, ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರಿಗೆ ಪಿಕೆ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಒಂದೊಮ್ಮೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣಾ ತಂತ್ರ ಹೂಡುವುದು ಕಷ್ಟಕರ, ಕಾಂಗ್ರೆಸ್‌ನೊಂದಿಗೆ ಸೇರಿ ಕೆಲಸ ಮಾಡಿ ತನ್ನ ಇಂಡಿಯನ್ ಪಾಲಿಟಿಕಲ್ ಆಕ್ಶನ್ ಕಮಿಟಿ ಕೆಟ್ಟ ಅನುಭವ ಪಡೆದಿದೆ. “ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ” ಅಂತಹ ವಾತಾವರಣದಲ್ಲಿ ನಾನು ಇನ್ನು ಮುಂದೆ ಕೆಲಸ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ಪಿಕೆ ಅವರ ರಣತಂತ್ರ ಬಯಸುತ್ತಿದೆಯಾದರೂ ಪಿಕೆ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಲು ಒಲವು ತೋರಿಸುತ್ತಿಲ್ಲ. 

ಕಾಂಗ್ರೆಸ್‌ನ ಅನುಭವಿ ಹಿರಿಯರೆಲ್ಲಾ ಒಂದು ಗುಂಪು ಮಾಡಿಕೊಂಡು ಪಕ್ಷದ ನಾಯಕತ್ವದ ಬಗ್ಗೆ ಕಟು ಟೀಕೆ ಮಾಡುತ್ತಿರುವಾಗ ಪಿಕೆ ಹೇಳುವ ಪಕ್ಷದೊಳಗಿನ ಸಂಘಟನಾತ್ಮಕ ಬದಲಾವಣೆ ಹೇಗೆ ಆಗುವುದಕ್ಕೆ ಸಾದ್ಯವಿದೆಯೇ ಎಂಬ ಪ್ರಶ್ನೆಯೆದ್ದಿತ್ತು. ಮತ್ತೊಂದು ವಿಷಯವೇನೆಂದರೇ, ಒಳಗಿಂದೊಳಗೆ ಪಿಕೆಗೂ ಕಾಂಗ್ರೆಸ್‌ನ ನಾಯಕತ್ವದ ಬಗ್ಗೆಯೇ ಅಸಮಾಧಾನವಿದೆ. ಇನ್ನು, ಈಗ ಪಿಕೆ ಬಹಿರಂಗವಾಗಿಯೇ ಪಕ್ಷಕ್ಕೆ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿ ಬೇಕಿದೆ ಎಂದು ಆಂತರಿಕ ಅತೃಪ್ತಿಯನ್ನು ಹೊರಹಾಕಿದ್ದಾರೆ.   

ಒಟ್ಟಿನಲ್ಲಿ, ಕಳೆದ ಕೆಲವು ವರ್ಷಗಳಿಂದ ಬಹುತೇಕ ಎಲ್ಲಾ ಚುನಾನವಣೆಗಳಲ್ಲಿ ಸೋಲುತ್ತಾ ಬಂದಿರುವ ಕಾಂಗ್ರೆಸ್‌ನನ್ನು ಪಿಕೆ ಹಾಗೂ ಅವರ ಟೀಮ್‌ಗೆ ಪುಟಿದೇಳಿಸುವುದಕ್ಕೆ ಸಾಧ್ಯವಿದೆಯೇ..? “೨೦೨೪ರ ಚುನಾವಣಾ ಫಲಿತಾಂಶವನ್ನು ಯಾವುದೇ ರಾಜ್ಯದ ಚುನಾವಣಾ ಫಲಿತಾಂಶದಿಂದ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ, ಇದು ಸಾಹೇಬರಿಗೂ ಗೊತ್ತು” ಎಂದು ಪರೋಕ್ಷವಾಗಿ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಟ್ವೀಟರ್ ಮೂಲಕ ಪ್ರಧಾನಿ ಮೋದಿಯವರ ಕಾಲೆಳೆದ ಪಿಕೆ, ಕಾಂಗ್ರೆಸ್ ಪರವಾಗಿ ಹಾಗೂ ಬಿಜೆಪಿ ವಿರುದ್ಧವಾಗಿ ಅದೆಂತಹ ರಣತಂತ್ರ ಹೂಡಲಿದ್ದಾರೆ..? ಎನ್ನುವ ಪ್ರಶ್ನೆಗಳೆಲ್ಲಾ ಸುಳ್ಳಾಗಿದ್ದು, ಸದ್ಯ ಕಾಂಗ್ರೆಸ್ ‘೨೦೨೪’ನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆ ಮೂಡಿದೆ.  

-ಶ್ರೀರಾಜ್ ವಕ್ವಾಡಿ  

Real Journalism is no more in Newsroom : Rajaram Tallur

 

Tone of the Present Journalism 

Mangalore, April 27. 2022 : Indian medias are getting worse day by day and lost the ethics and quality of real Journalism, said Mr. Rajaram Tallur, Senior Journalist on Wednesday. 

He was during the webinar session on 'Tone of the Present Journalism' organized by Institute of Social Sciences and humanities of Srinivas University. 

In his Session he stressed that, "Real Journalism is no more in Newsroom." Journalists and politicians have become ensnared in a symbiotic web of lies that misleads the public.

Much of what appears in the press as business news is corporate propaganda. Journalism shouldn't work like this. Journalism should work for weaker section of the society. He added. 

And Speaking about HR policy, which occupied the hold of Journalism, The Word 'HR' is ruling Journalism now. Journalism is not a bussiness. It is a noble profession. Journalism should work for society, not for HR or Investors. 

Dr. Laveena D'mello, Dean of the Institute of Social sciences and Humanities presided over the webinar, Asst. professor And Coordinator of the webinar Shreeraj S. Acharya Introduced the webinar and welcomed the guest. Session was Hosted by Student Sowparnika KV, Vote of thanks was offered by Arathi N Aji. 

Dr. Pradeep MD, Asst. Professors Sushmitha Kotian, Joyson Prenkey Cardosa and Students of the BA Journalism And Mass Communication were present in the session.

Report : Shreeraj Vakwady 

Journalism is a medium to change the World : Nizam Ansari.


 Challenges of web Journalism

Mangalore, April 20,2022 : Journalists in the digital age must operate in a world where the news cycle moves faster, said Nisam Ansari, Editor of True Hunt Kannada. He was during the Webinar session on Challenges of Web Journalism Organized by Institute of Social sciences and Humanities of Srinivas University. 

In his session he said that, Lack of objectivity, lack of decency, and invasion of privacy are common in online media practice. "Desire to break news and lack of professional training were the key factors encouraging unethical practices in online media"

"The digital era has also ushered in a new kind of journalism in which ordinary citizens play a greater role in the process of newsmaking, with the rise of citizen journalism being possible through the Internet" he added. 

Speaking about Upcoming journalists, He said, Journalism is a medium to change the world. journalist should use it properly. Journalism should be like mirror reflection of the society.  

In the session, Associate Professor Dr. Vidya N, Asst Prof. Sushmitha S. Kotian, Research Scholars Sara Zeena Almeida, Indu Nair and Students of BA Journalism were present in the session. 

Session was co ordinated by Asst. Professor. Shreeraj S. Acharya, an the session was hosted by Student George Johnson, Vote of thanks was offered by Vidhya Sree.

Report : Shreeraj Vakwady 

Thursday, April 21, 2022

ಬಿಜೆಪಿ ಮತ್ತು ಕಮಿಷನ್ ಪ್ರಸಂಗ


(ಸಾಂದರ್ಭಿಕ ಚಿತ್ರ)

ಬಿಜೆಪಿಗೆ ಕಂಟಕವಾಗಲಿದೆಯೇ ‘ಕಮಿಷನ್’..? | ಕಮಿಷನ್ ಸುಳಿಯಲ್ಲಿ ಪ್ರಮುಖ ಸಚಿವರು..!?


ಈ ದೇಶ ೧೯೪೦ರ ದಶಕದಿಂದ ಇಲ್ಲಿಯ ತನಕ ದೊಡ್ಡ ದೊಡ್ಡ ಹಗರಣಗಳ ಪಟ್ಟಿಯನ್ನೇ ಕಂಡಿದೆ. ರಾಜಕೀಯ, ಹಣಕಾಸು ಹಾಗೂ ಕಾರ್ಪೋರೇಟ್ ಹಗರಣಗಳನ್ನೊಳಗೊಂಡು ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಬೀತಾಗಿರುವ ಹಗರಣಗಳ ಪಟ್ಟಿ ನೋಡಿದರೆಯೇ ಸಾಕು ಆಶ್ಚರ್ಯವಾಗುತ್ತದೆ. ಇನ್ನು, ರಾಜಕೀಯ ಕುಳಗಳು ಹಗರಣದಲ್ಲಿ ಲಾಬಿ ಮಾಡಿ ನುಂಗಿ ತೇಗಿದ್ದು ಎಷ್ಟಿರಬಹುದು ನೀವೇ ಯೋಚಿಸಿ. ಹೌದು, ಭ್ರಷ್ಟಾಚಾರ, ಅರಾಜಕತೆ, ಅನಕ್ಷರತೆ, ಅದಕ್ಷತೆ, ರಾಜಕೀಯ ಬಿಕ್ಕಟ್ಟು, ಆರ್ಥಿಕ ಅಸ್ಥಿರತೆ ಹೀಗೆ ಹತ್ತು ಹಲವಾರು ವಿಷಯಗಳು ಈ ದೇಶದ ಅತ್ಯಂತ ಕೆಟ್ಟ ಸಂಗತಿಗಳು. 

ಅಧಿಕಾರಶಾಹಿ ಧೋರಣೆಯ ಫಲವಾಗಿ ಈ ದೇಶ ಈವರೆಗೆ ಕಂಡಿದ್ದು ಕಳಪೆ ಆಡಳಿತವನ್ನೇ ಹೊರತು ಮತ್ತೇನಲ್ಲ. ರಾಜಕೀಯದಲ್ಲಿ ಏನನ್ನು ಬೇಕಾದರೂ ಮಾಡಬಹುದು, ಮಾಡುವುದಕ್ಕೆ ಸಾಧ್ಯವಿದೆ ಎಂದು ತಿಳಿದ ಬಲಿಷ್ಠ ರಾಜಕೀಯ ನಾಯಕರು ಈ ದೇಶದ ಜನರನ್ನು ನಯವಂಚನೆಗೆ ಸಿಲುಕಿಸಿ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ದೇಶವನ್ನು ಹಲವು ದಶಕಗಳಿಂದ ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಹಗರಣಗಳು ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎನ್ನುವುದು ಸತ್ಯ. ಮೋಸ್ಟ್ ಕರಪ್ಟಡ್ ಕಂಟ್ರೀಸ್ ಪಟ್ಟಿಯಲ್ಲಿ ನಮ್ಮ ಭಾರತ ಸದ್ಯಕ್ಕೆ ೪೦ನೇ ಸ್ಥಾನದಲ್ಲಿದೆ. ಇದಕ್ಕೆ ನಾವು ನೀವು ಆರಿಸಿ ಅಧಿಕಾರದಲ್ಲಿ ಕೂರಿಸಿದ ಸೋ ಕಾಲ್ಡ್ ರಾಜಕಾರಣಿಗಳ ಹಗಲಿರುಳು ಪರಿಶ್ರಮ ಇದೆ. 

ಭ್ರಷ್ಟಾಚಾರದಲ್ಲಿ ಲಾಬಿ, ಪರ‍್ಸಂಟೇಜ್, ಕಮಿಷನ್ ಆಧಾರದಲ್ಲಿ ರಾಜಕೀಯ ಕುರ್ಚಿಯಲ್ಲಿ ಕುಳಿತ ಕುಳಗಳಿಗೆ ಪಾಲು ತಲುಪುತ್ತಿರುವುದು ಈ ದೇಶ ಹಲವು ದಶಕಗಳಿಂದ ಕಂಡುಕೊಂಡು ಬಂದ ಒಂದು ವಿಕೃತ ಸಂಪ್ರದಾಯ. ದೇಶದಲ್ಲಿ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದರೂ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥರಿಗೆ ಶಿಕ್ಷೆ ಆದದ್ದು ಅರ್ಧದಷ್ಟು ಮಾತ್ರ. ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿಸಿದವು. ಎಷ್ಟರ ಮಟ್ಟಿಗೆ ಈ ದೇಶದಲ್ಲಿ ಭ್ರಷ್ಟಾಚಾರ ಎತ್ತರಕ್ಕೆ ತಲುಪಿದೆ ಎಂದರೇ, ನ್ಯಾಯವನ್ನು ಖರೀದಿಸುವಷ್ಟು. ಅದಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆ ಅಧಿಕಾರಿ ವಲಯದಲ್ಲಿ ಸೃಷ್ಟಿಯಾಗಿದೆ. ಸುದ್ದಿ ಹರದಡಂತೆ ಮಾಡುವುದಕ್ಕೆ ನ್ಯಾಯಾಲಯ ಸ್ಟೇ ನೀಡುತ್ತದೆ. ಅಧಿಕಾರಿಯೊಬ್ಬನ ಅಂಗೈಯೊಳಗೆ ಸುಳ್ಳನ್ನು ಸತ್ಯ ಮಾಡುವ, ಸತ್ಯವನ್ನು ಸುಳ್ಳು ಮಾಡುವ ತಾಖತ್ತು ಇರುವಾಗ ಈ ಭ್ರಷ್ಟಾಚಾರದ ಪ್ರಯೋಜನ ಇಲ್ಲದ ನಿರ್ಮೂಲನೆಯ ಮಾತು ಯಾವುದಕ್ಕೆ..?

ಸದ್ಯ, ರಾಜ್ಯದಲ್ಲಿ ಲೋಕಾಯುಕ್ತ ‘ಹಲ್ಲಿಲ್ಲದ ಹಾವು’ ಆಗಿದೆ. ಸರ್ಕಾರವೂ ಕೂಡ ಲೋಕಾಯುಕ್ತರ ನೇಮಕಕ್ಕೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಸ್ವತಃ ಕಾನೂನು ಇಲಾಖೆ ಹೇಳುತ್ತದೆ. ಬಹಳ ಮುಖ್ಯವಾಗಿ ರಾಜ್ಯದಲ್ಲಿ ಬಲಿಷ್ಠ ಹಾಗೂ ನಿಷ್ಪಕ್ಷಪಾತ ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟ.

ರಾಜ್ಯದ ಬಿಜೆಪಿ ಸರ್ಕಾರದ ಆಡಳಿತವನ್ನು ಈಗ ಬಲವಾಗಿ ಕಾಡುತ್ತಿರುವ ವಿಷಯವೆಂದರೇ, ಕಮಿಷನ್ ಭ್ರಷ್ಟಾಚಾರ. ಹೌದು ಹಿಜಾಬ್, ಹಿಂದೂ ದೇವಸ್ಥಾನಗಳ ಹಬ್ಬಗಳಲ್ಲಿ ಮುಸ್ಲೀಂ ಅಂಗಡಿ ನಿಷೇಧ, ಹಲಾಲ್ ಕಟ್ ವಿವಾದಗಳ ಬಳಿಕ ಈಗ ಸಚಿವ ಕೆ. ಎಸ್ ಈಶ್ವರಪ್ಪ ರಾಜೀನಾಮೆ ನಿಜಕ್ಕೂ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳುಗಳಿಂದ ‘40% ಕಮಿಷನ್’ ವಿಚಾರವನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದ್ದ ವಿರೋಧ ಪಕ್ಷ ಕಾಂಗ್ರೆಸ್ ಅಂತಿಮವಾಗಿಯೂ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪರಿಂದ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದ್ದು, ಪ್ರಕರಣ ಒಂದು ವೇಳೆ ಸಾಬೀತಾದರೇ, ಈಶ್ವರಪ್ಪ ೧೦ ವರ್ಷ ಜೈಲೂಟ ತಿನ್ನಬೇಕಾಗುವುದರಲ್ಲಿ ಸಂಶಯವೇ ಇಲ್ಲ. ನ್ಯಾಯ, ಕಾಯ್ದೆ ಆಳುವವರ ಕೈಯೊಳಗಿದೆ. ಸಾಮಾಜಿಕ ಅನ್ಯಾಯ ಈ ದೇಶ ಈವರೆಗೆ ಕಂಡುಕೊಂಡು ಬಂದ ವಿಕೃತ ಸಂಸ್ಕೃತಿ.  

ಸದಾ ವಿರೋಧ ಪಕ್ಷಗಳ ವಿರುದ್ಧವಾಗಿ ತಮ್ಮ ಹರಕು ಬಾಯಿಯಿಂದ ಟೀಕಾ ಪ್ರಹಾರ ಮಾಡುತ್ತಿದ್ದ, ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಸ್ವತಃ ಈಶ್ವರಪ್ಪರಿಗೆ ಈ ಸ್ಥಿತಿ ಬರಬಾರದಿತ್ತು. ಸ್ವತಃ ಮೃತ ಗುತ್ತಿಗೆದಾರ ಸಂತೋಷ್ ಪಾಟಿಲ್ ಹಿಂದೆ ನೇರಾನೇರವಾಗಿ ಮಾಡಿದ ಆರೋಪಗಳು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆಯಿಂದ ನರಳುತ್ತಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿ ೧೫ ದಿನಗಳೊಳಗೆ ಪರಿಹಾರ ಒದಗಿಸದಿದ್ದರೇ ಐದಾರು ಸಚಿವರು ಹಾಗೂ ೨೫ಕ್ಕೂ ಹೆಚ್ಚು ಶಾಸಕರ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಯಲಿಗೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರಕ್ಕೆ ನೇರವಾಗಿ ಕಠೋರ ಎಚ್ಚರಿಕೆ ನೀಡಿದೆಯಾದರೂ ಇದು ಷಡ್ಯಂತ್ರ, ರಾಜಕೀಯ ವೈಷಮ್ಯ ಎಂದು ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. 

ಆರ್‌ಎಸ್‌ಎಸ್ ನಿಂದ ಬಂದ ಈಶ್ವರಪ್ಪ, ರಾಜಕೀಯ ಪ್ರವೇಶ ಮಾಡಿದಾಗಲಿಂದಲೂ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದ ನಾಯಕ. ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಅದೇ ಛಾಳಿ ಮುಂದುವರಿಸಿದ್ದರು. ರಾಜಕೀಯದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕು ಎಂಬ ಕಾರಣದಿಂದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವುದನ್ನು ಸಹಿಸಿಕೊಳ್ಳುವುದಕ್ಕಾಗದೇ ಹಾಗೂ ಬಿಜೆಪಿಗೆ ತಾನೇನೆಂಬುವುದನ್ನು ತೋರಿಸಿಕೊಡುವುದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಕುರುಬರ ಬೃಹತ್ ಸಮಾವೇಶ ಮಾಡಿದ ನಾಯಕನಿಗೆ ಈಗ ತೀವ್ರ ಮುಖಭಂಗವಾಗಿದೆ. ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಸೃಷ್ಟಿಯಾದಾಗ ಈಶ್ವರಪ್ಪ ಇದೇ ಬ್ರಿಗೇಡ್‌ನನ್ನು ಮುಂದೆ ಬಿಟ್ಟುಕೊಂಡಿದ್ದರು, ಒಂದೊಮ್ಮೆ ನಾನಿನ್ನು ಬ್ರಿಗೆಡ್ ಕಡೆ ತಲೆ ಹಾಕುವುದಿಲ್ಲ ಎಂದೂ ಕೂಡ ಇದೇ ಹರಕು ಬಾಯಿ ಹೇಳಿತ್ತು. ಆದರೇ, ಈಗ ಅದೇ ಬೇಕಾಗಿದೆ ಎಂದು ಕಾಣಿಸುತ್ತಿದೆ. 

ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಇರುವ ಭಿನ್ನಾಭಿಪ್ರಾಯ ಗೊತ್ತಿರುವ ವಿಚಾರ. ಬಿಎಸ್‌ವೈ ಮುಖ್ಯಮಂತ್ರಿ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದಾಗ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಅವರನ್ನು ಸೂಚಿಸಿದಾಗ ಇದೇ ಈಶ್ವರಪ್ಪ ಪರೋಕ್ಷವಾಗಿ ಭಿನ್ನ ಮಾತಾಡಿದ್ದರು. ಯಡಿಯೂರಪ್ಪ ಹೇಳಿ ಕೇಳಿ ರೆಬಲ್ ನಾಯಕ. ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಕೊಡಿಸಿದ ನಾಯಕ. ಪಕ್ಷದ ಆಳ ಅಗಲ ಗೊತ್ತಿರುವ ರಾಜಕಾರಣಿ. ಯಾರಿಗೂ ಹೆದರುವವರಲ್ಲ. ಒಂದೊಮ್ಮೆ ಬಿಎಸ್‌ವೈ ವ್ಯಂಗ್ಯವಾಗಿ ಬ್ರಿಗೇಡ್ ಕೆಲಸ ಮಾಡಿಕೊಂಡಿರಲಿ ಎಂದು ಈಶ್ವರಪ್ಪಗೆ ಹೇಳಿದ್ದರು. ಹಿಂದೊಮ್ಮೆ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪರಿಗೆ ಟಿಕೆಟ್ ನೀಡಬಾರದು, ಅವರಿಗೆ ಟಿಕೇಟ್ ನಿಡಿದರೆ ಠೇವಣಿಯೂ ದೊರಕುವುದಿಲ್ಲ ಎಂದು ಕೆಲ ಬಿಎಸ್‌ವೈ ಬೆಂಬಲಿಗರು ಟೀಕೆ ಮಾಡಿದ್ದರು. ತಮಗೆ ಟಿಕೇಟ್ ತಪ್ಪಿಸಲು ಯತ್ನಿಸಿದ ಬಿಎಸ್‌ವೈ ವಿರುದ್ಧ ಬಹಿರಂಗವಾಗಿ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಳಿಕ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಬಣ ರಾಜಕಾರಣ ತೀವ್ರಗೊಂಡಿತ್ತು. ರಾಜ್ಯ ಕಮಲ ಪಾಳಯದಲ್ಲಿ ಭಿನ್ನಮತದ ಹೊಗೆಯಾಡುವಂತೆ ಮಾಡಿತ್ತು. ಈ ಎಲ್ಲಾ ವೈಷಮ್ಯಗಳು ಮುಗಿದು ಹೋದ ಕಥೆ ಎಂದುಕೊಂಡರೇ ಅದು ತಪ್ಪು. ಖಂಡಿತ ಇದೆ. ಈಶ್ವರಪ್ಪ ರಾಜೀನಾಮೆಗೂ ಬಿಎಸ್‌ವೈಗೂ ಏನು ಸಂಬಂಧ ಇದೆ ಎನ್ನಿಸಬಹುದು. ಆದರೇ, ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಂದ ಈಶ್ವರಪ್ಪ ವಿರುದ್ಧ ಬಿಎಸ್‌ವೈಗೆ ಇನ್ನೂ ಕೋಪ ಇದೆ. ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಈಶ್ವರಪ್ಪ ಬಿಎಸ್‌ವೈ ವಿರುದ್ಧ ಮಾತಾಡಿದವರು ಈ ಎಲ್ಲಾ ಹಗೆ ಇನ್ನೂ ಇದೆ. ಇದೇ ಕಾರಣದಿಂದಾಗಿ ರಾಜಕೀಯ ವಲಯದಲ್ಲಿ ಈಶ್ವರಪ್ಪ ರಾಜೀನಾಮೆಗೆ ಬಿಎಸ್‌ವೈ ಕೂಡ ಪರೋಕ್ಷವಾಗಿ ಒತ್ತಡ ಹೇರಿದ್ದರು ಎನ್ನುವ ಮಾತು ಕೇಳಿ ಬರುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.  

ಇನ್ನು, ಗೋಮಾತೆಯನ್ನೇ ತನ್ನ ರಾಜಕೀಯದ ಅಜೆಂಡಾದೊಳಗೆ ಸೇರಿಸಿಕೊಂಡ ಬಿಜೆಪಿ ಪಕ್ಷದಲ್ಲಿ ಗೋಶಾಲೆಗಳ ಮೇವಿನ ಹಣ ಬಿಡುಗಡೆಗೂ 4೦% ಕಮಿಷನ್ ಪಡೆಯಲಾಗುತ್ತದೆ ಎಂಬ ಬಲವಾದ ಆರೋಪ ಕೇಳಿಬಂದಿದ್ದು, ಮೇವು ಸರಬರಾಜುದಾರರಿಂದ ಅಧಿಕಾರಿಗಳು ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂಬ ಆರೋಪದ ಪತ್ರ ಪ್ರಧಾನಿಗೆ ಸಲ್ಲಿಕೆಯಾಗಿದೆ. ಇನ್ನು, ಮಠಗಳಿಗೆ ನೀಡುವ ಅನುಧಾನಗಳಿಂದಲೂ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪದ ವರದಿಯೊಂದು ಆಗಿತ್ತು. ಈ ಪ್ರಕರಣ ಸಚಿವ ಪ್ರಭು ಚೌಹಾಣ್, ಆರ್ ಅಶೋಕ್, ಡಾ. ಸುಧಾಕರ್ ಸೇರಿ ಹಲವರ ಪಾಲಿಗೆ ಕಂಟಕವಾಗಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ. 

ಹಿಂದೊಮ್ಮೆ ನಡೆದಿತ್ತು ಮೇವು ಹಗರಣ :  ಬಿಹಾರದಲ್ಲಿ ನಡೆದಿದ್ದ ೯೫೦ ಕೋಟಿ ಮೊತ್ತದ ಮೇವು ಹಗರಣದಲ್ಲಿ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಅಕ್ರಮವಾಗಿ ಹಣವನ್ನು ಪಡೆದುಕೊಳ್ಳಲಾಗಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡ ಈ ಪ್ರಮುಖ ಆರೋಪಿಯಾಗಿದ್ದರು. ಇದೇ ಮೇವು ಹಗರಣದ ದುಮ್ಕಾ, ದಿಯೋಘರ್, ಚೈಬಾಸ ಖಜಾನೆಗಳಿಂದ ಹಣ ಪಡೆದುಕೊಂಡ ನಾಲ್ಕು ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ ೧೪ ವರ್ಷಗಳ ಕಾಲ ಜೈಲು ಶಿಕ್ಷೆಯಾಗಿತ್ತು, ಇತ್ತೀಚೆಗೆ ಇದೇ ಹಗರಣದ ಐದನೇ ಪ್ರಕರಣ ಡೋರಂಡ ಹಗರಣದಲ್ಲಿಯೂ ಲಾಲೂ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಮೇವು ಹಗರಣದ ಹಾಗೆ ಕರ್ನಾಟಕದಲ್ಲಿಯೂ ಆಗಬಹುದೇ ಎಂಬ ಚರ್ಚೆ ಎದ್ದಿದೆ. 

ಒಟ್ಟಿನಲ್ಲಿ, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ‘ಕಮಿಷನ್’ ದೊಡ್ಡ ಕಂಟಕದಂತೆ ಭಾಸವಾಗುತ್ತಿದೆ. ಸದ್ಯ, ಈ ಕಮಿಷನ್ ವಿಚಾರವನ್ನು ಕಾಂಗ್ರೆಸ್ ಚುನಾವಣಾ ಬ್ರಹ್ಮಾಸ್ತ್ರವಾಗಿ ಇಟ್ಟುಕೊಂಡಿದ್ದು, ಹೇಗೆ ಪ್ರಯೋಗ ಮಾಡುತ್ತದೆ ಹಾಗೂ ಬಿಜೆಪಿ ಇದರಿಂದ ಹೇಗೆ ಪಾರಾಗುತ್ತದೆ ಎನ್ನುವುದು ಸದ್ಯದ ಕುತೂಹಲ. 

-ಶ್ರೀರಾಜ್ ವಕ್ವಾಡಿ