Thursday, July 4, 2024

ಸಾರ್ವಜನಿಕ ಚಿಂತನೆಯೊಂದಿಗೆ ಬದುಕಬೇಕಾದ ಮಾಧ್ಯಮಗಳ ಅಪಾಯಕಾರಿ ಸ್ಥಿತಿ !

 

ಸತ್ಯ, ಸುಳ್ಳು, ಹೆಸರಿಲ್ಲದ ಪತ್ರಕರ್ತ ಮತ್ತು ಸಾಮಾಜಿಕ ಜವಾಬ್ದಾರಿ  

ಪ್ರತಿ ವರ್ಷ ಜುಲೈ 1 ರಂದು ಕನ್ನಡ ಪತ್ರಿಕಾ ದಿನಾಚರಣೆ. ಈ ವರ್ಷವೂ ಆ ದಿನ ಆಗಿ ಹೋಗಿದೆ. ಪತ್ರಕರ್ತರೆಲ್ಲಾ ಪರಸ್ಪರ ಶುಭಾಶಯ ಕೋರುವುದು, ವಾಟ್ಸ್ಯಾಪ್‌ ಸ್ಟೇಟಸ್‌ ಇಡುವುದು. ಹೆಚ್ಚೆಂದರೇ ಒಂದು ಸಭಾ ಕಾರ್ಯಕ್ರಮ ಮಾಡಿ ಹಿರಿಯ ಪತ್ರಕರ್ತರೊಬ್ಬರಿಗೆ ಶಾಲು-ಹಾರ ಹಾಕಿ, ಒಂದು ಹರಿವಾಣ ತುಂಬಾ ಹಣ್ಣುಗಳನ್ನು ಹಾಕಿ ಸನ್ಮಾನದ ಹೆಸರಿನಲ್ಲಿ ಕೊಟ್ಟುಬಿಟ್ಟರೇ ವರ್ಷದ ಪತ್ರಿಕಾ ದಿನಾಚರಣೆ ಮುಗಿಯಿತು.

ಪತ್ರಿಕೋದ್ಯಮ ಹಿಂದೆ ಇದ್ದ ಹಾಗೆ ಉಳಿದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾರ್ವಜನಿಕ ಸೇವೆ, ಜವಾಬ್ದಾರಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಪತ್ರಿಕೋದ್ಯಮ ಇಂದು ವ್ಯಾಪಾರವಾಗಿ ಬದಲಾಗಿದೆ. ಪತ್ರಿಕೋದ್ಯಮ ಪತ್ರಕರ್ತನೋರ್ವನ ಪಾಲಿಗೆ ಅದು ನಿಜಕ್ಕೂ ಪಾಕಶಾಲೆ. ಇಲ್ಲಿ, ರುಚಿ ಸವಿಯುವಷ್ಟು ಪುರಸೊತ್ತಿಲ್ಲದೆ ಮಾಡಿದ್ದನ್ನು ಬಳಸಿಬಿಡುವ ತುರ್ತು ಜವಾಬ್ದಾರಿ. ಚುರುಕು, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು. ಪತ್ರಿಕೋದ್ಯಮ ಈಗ ಮೊದಲಿನಂತಿಲ್ಲ ಕಾಲಕ್ಕೆ ಅನುಸಾರವಾಗಿ ಅದು ಬದಲಾಗುತ್ತಾ ಬಂತು‌. ಅದು ಎಲ್ಲಿಯ ತನಕ ಬಂತು ಅಂದರೇ, ಒಬ್ಬ ಹೂಡಿಕೆದಾರ ಒಂದು ಸಿದ್ದಾಂತವನ್ನು ಖರೀದಿಸಿ ಅದರಡಿಯಲ್ಲಿ ಹೆಚ್.ಆರ್(ಹ್ಯೂಮನ್‌ ರಿಸೋರ್ಸ್) ಪ್ರಕ್ರಿಯೆಗಳ ಮೂಲಕ ತಮಗೊಪ್ಪುವ ಪತ್ರಕರ್ತರನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಯವರೆಗೆ.

ಒಳಗೆ ಸೇರಿದ ಮೇಲೆ ಅಲ್ಲಿನ ಮೇಲಾಟಗಳು, ರಾಜಕೀಯ ಒತ್ತಡ, ಸತ್ಯವನ್ನು ಹಿಚುಕಿ ಸುಳ್ಳನ್ನು ವೈಭವೀಕರಿಸುವ ಈಗಿನ ಕೆಲವು ಮಾಧ್ಯಮಗಳ ಧೋರಣೆಯನ್ನು ಸಹಿಸಿಕೊಳ್ಳಲಾಗದೇ 'ಸಾಕಪ್ಪ, ಈ ಪತ್ರಿಕೋದ್ಯಮ ವೃತ್ತಿ ಸಹವಾಸವೇ ಸಾಕು' ಅಂತ  ಹೊರಗೆ ಬಂದ ಪರ್ತಕರ್ತರ ಪಟ್ಟಿ ದೊಡ್ಡದಿದೆ‌. ಆ ಪಟ್ಟಿಯಲ್ಲಿ ಆಪ್ತ ಬಳಗದಲ್ಲಿರುವವರೆ ಹಲವರಿದ್ದಾರೆ.  

ಹೌದು, ನನ್ನ ಗೆಳೆಯನೊಬ್ಬ ಮೂರು ವರ್ಷಗಳ ಹಿಂದೆ ಒಂದು ಖಾಸಗಿ ಸುದ್ದಿ ಮಾಧ್ಯಮಕ್ಕೆ ವರದಿಗಾರನಾಗಿ ಸೇರ್ಪಡೆಗೊಂಡಿದ್ದ. ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ. ಮತ್ತವನ ಪ್ರತಿಭೆಯನ್ನು ಆ ಸಂಸ್ಥೆ ಚೆನ್ನಾಗಿಯೇ ದುಡಿಸಿಕೊಂಡಿತ್ತು. ಅದು ಅವನಿಗೆ ದೊಡ್ಡ ಅನುಭವವನ್ನೇ ಕೊಟ್ಟಿತು ಬಿಡಿ. ಸೇರಿದ ಕೆಲವೇ ಕೆಲವು ತಿಂಗಳಲ್ಲಿ 'ಇಲ್ಲಿ ಜೀವನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಕೆಲಸದ ಒತ್ತಡ, ಪತ್ರಿಕೋದ್ಯಮ ಸಾಕೆನ್ನಿಸಿದೆ‌. ಹೊರಗೆ ಬರಲು ನಿರ್ಧರಿಸಿದ್ದೇನೆ, ಇನ್ಮೇಲೆ ಪತ್ರಿಕೋದ್ಯಮವನ್ನು ಪ್ರವೃತ್ತಿಯಾಗಿ ಸ್ವೀಕರಿಸುತ್ತೇನೆ' ಅಂತಂದ. ಮಾಧ್ಯಮ ಲೋಕದಲ್ಲಿ ಈಗಷ್ಟೇ ಹಸಿ ಹೆಜ್ಜೆಗಳನ್ನು ಇಡಲಾರಂಭಿಸಿದವ ಹೀಗೆ ಹೇಳ್ತಿದ್ದಾನಲ್ಲಾ ಅಂತ ಆಶ್ಚರ್ಯ ಆಯ್ತು.  ಮತ್ತವನ ಆ ಕ್ಷಣದ ಧೈರ್ಯ ಇಷ್ಟ ಆಯ್ತು. ಕೆಲದಿನಗಳ ನಂತರ ತಾನು ಹೇಳಿದಂತೆಯೇ ಪ್ರವೃತ್ತಿಗಾಗಿ ಸ್ವತಂತ್ರ ಪತ್ರಿಕೋದ್ಯಮವನ್ನು ಆರಂಭಿಸಿದ್ದ. ಪತ್ರಿಕೋದ್ಯಮದಲ್ಲಿ ಸತ್ಯ ಶೋಧಿಸುವ ಕೆಲಸ ನಿರಂತರವಾಗಲಿ. ಯಾವುದೇ ಸಂಘಟನೆ, ಪಕ್ಷ, ಸಿದ್ದಾಂತಕ್ಕೆ ಬಲಿಯಾಗದೇ ಬೆಳೆಯಲಿ‌. ಮತ್ತೆ ವೃತ್ತಿ ಪತ್ರಿಕೋದ್ಯಮದತ್ತ ಅದು ಕರೆತರಲಿ ಎಂದು ಆಶಿಸಿದ್ದೆ. ಹಾಗೆಯೇ ಆಗಿದೆ. ಎಲ್ಲಿಂದ ಹೊರಬಂದಿದ್ದಾನೋ ಅಲ್ಲಿಗೆ ಮರಳಿ ಸೇರ್ಪಡೆಗೊಂಡಿದ್ದಾನೆ. ಅಂದರೇ ಆತನ ಅಗತ್ಯ ಆ ಮಾಧ್ಯಮಕ್ಕೂ ಇತ್ತು ಎಂದು ಅರ್ಥೈಸಿಕೊಳ್ಳಬಹುದೇನೋ.

ದುಡಿಯುವ, ಪ್ರಶ್ನೆ ಮಾಡುವ, ಸಾರ್ವಜನಿಕವಾಗಿ ಚಿಂತಿಸುವ ಭರವಸೆಗಳನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ ಹೆಚ್ಚಿನ ಮಾಧ್ಯಮಗಳಿಗೆ ಬಂದಿದೆ. ಸಾರ್ವಜನಿಕ ಚಿಂತನೆಯೊಂದಿಗೆ ಬದುಕುತ್ತಾ ಪತ್ರಿಕೋದ್ಯಮದಲ್ಲಿ ತೊಡಗುವುದಕ್ಕೆ ಮುಂದಾಗುವವನ ಪ್ರಸ್ತುತಿ ಯಾವ ಅನುಭವಿ ಪತ್ರಕರ್ತನಿಗೂ ಕಡಿಮೆ ಇರುವುದಿಲ್ಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಯಾವುದೇ ನಿಲುವುಗಳಿಗೆ ಬಲಿಯಾಗದೇ ಒಳ್ಳೆಯ ಪರ್ತಕರ್ತನಾಗಬೇಕೆಂಬ ಕನಸು ಕನಸಾಗಿಯೇ ಸಾಯಿಸಿಕೊಂಡು ಬದುಕುತ್ತಿರುವ ಯುವ ಪತ್ರಕರ್ತರು ಸಾಕಷ್ಟು ಮಂದಿ ಇದ್ದಾರೆ. ಹಿರಿಯ ಪತ್ರಕರ್ತರ ಸಾಲೂ ದೊಡ್ಡದಿದೆ. ಹೂಡಿಕೆದಾರನೋರ್ವನ ʼಅಡಿಯಾಳು ಮಾಧ್ಯಮʼಗಳ ಕಾರಣದಿಂದ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆಂದು ಹೇಳುವುದಕ್ಕಾಗದೇ ಬದುಕನ್ನು ನಿಭಾಯಿಸುವುದಕ್ಕೋಸ್ಕರ ದುಡಿಯುತ್ತಿದ್ದಾರೆ.

ಜುಲೈ 1 ಕನ್ನಡ ಪತ್ರಿಕೋದ್ಯಮ ದಿನಾಚರಣೆ. ಹೀಗೆ ಆಯಾಯ ಭಾಷೆಗಳಲ್ಲಿ ಒಂದೊಂದು ದಿನ ಆಚರಣೆಗೆ ನಿಗದಿಯಾಗಿರಬಹುದು. ಪತ್ರಿಕಾ ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಪತ್ರಿಕಾ ದಿನ… ಹೀಗೆ ಇಂತಹ ದಿನಗಳು, ಆಚರಣೆಗಳು ಎಷ್ಟು ಬಂದರೇನು, ಆ ಆಚರಣೆಯ ಮೂಲ ಉದ್ದೇಶ ಮತ್ತು ಅದರಿಂದ ತಿಳಿಯಬೇಕಾದ ಮೂಲ ಆದರ್ಶವನ್ನು ಮೂಲೆಗೆ ಸರಿಸಿ ಪತ್ರಿಕೋದ್ಯಮ ನಡೆಯುತ್ತಿರುವಾಗ ? ಹೀಗೆಲ್ಲಾ ಬರಿದೇ ಆಚರಣೆ ಕಾಣುವ ದಿನಗಳು ನಿರರ್ಥಕ ಎಂದೇ ಕಾಣಿಸುತ್ತವೆ.

ಪತ್ರಕರ್ತ ಮಾಧ್ಯಮದಲ್ಲಿ ಸರಿಯಾದದ್ದನ್ನು, ನಿಖರವಾದದ್ದನ್ನು ನಿಷ್ಠುರವಾಗಿಯೇ ಹೇಳುವ ಸ್ವತಂತ್ರನಾಗಿರಬೇಕು ಎಂಬ ಮಾತಿದೆ. ಹಾಗೆಂದ ಮಾತ್ರಕ್ಕೆ ಪತ್ರಕರ್ತ ಸರ್ವಸ್ವತಂತ್ರನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಆತನಿಗೂ ಒಂದು ಚೌಕಟ್ಟಿದೆ. ಆ ವ್ಯಾಪ್ತಿಯೊಳಗೆ ಆತ ಸಾರ್ವಜನಿಕವಾಗಿ ಜವಾಬ್ದಾರನಾಗಿರಬೇಕಾಗುತ್ತದೆ. ಈ ಸಹಜ ಚೌಕಟ್ಟನ್ನು ಮೀರಿ ಸೃಷ್ಟಿಸಿರುವ ʼಹೂಡಿಕೆ ಮೂಲದ ನಿಯಮಗಳುʼ ಇಂದು ಪತ್ರಿಕೋದ್ಯಮ ಅಸಹಜವಾಗಿ ನಡೆಯುವಂತಹ ವಾತಾವರಣವನ್ನು ಸೃಷ್ಟಿ ಮಾಡಿವೆ ಎಂದರೇ ತಪ್ಪಿಲ್ಲ. ಪತ್ರಿಕೋದ್ಯಮ ಇಂದು ಒಂದು ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸುವುದಕ್ಕೆ ಸಾಧ್ಯವಾಗದೇ ಇರುವುದಕ್ಕೆ ಮೂಲ ಕಾರಣವೇ ʼಹೂಡಿಕೆಯ ನಿಯಂತ್ರಣ ಹೇರಿಕೆʼ.

ಇನ್ನು, ಪತ್ರಿಕೋದ್ಯಮದ ಪ್ರಧಾನ ಮೂಲ ಜಾಹೀರಾತು. ಇವುಗಳಲ್ಲಿ ಸರ್ಕಾರಿ ಜಾಹೀರಾತುಗಳು ಹೆಚ್ಚು. ಇನ್ನು, ಪ್ರಭಾವಿಗಳು, ಉಳ್ಳವರು ಹಾಗೂ ಸರ್ಕಾರೇತರ ಸಂಸ್ಥೆಗಳು ಕೂಡ ಪ್ರಚಾರಕ್ಕಾಗಿ ಹೆಚ್ಚಾಗಿ ಮಾಧ್ಯಮಗಳನ್ನೇ ಅವಲಂಭಿಸಿವೆ. ಹಾಗಾಗಿ ಮಾಧ್ಯಮಗಳಿಗೆ ಜಾಹೀರಾತುಗಳನ್ನು ನೀಡುವ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ತಮಗೆ ಸಂಬಂಧಿಸಿದ ಸುದ್ದಿಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿವೆ. ತಮಗೆ ಅನೂಕಲಕರವಲ್ಲದ ಸುದ್ದಿಗಳಿಗಾಗಿ ಜಾಹೀರಾತುಗಳನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಹೀರಾತುಗಳನ್ನು ನಿಲ್ಲಿಸಬಹುದು. ʼಉಪಕಾರ ಸ್ಮರಣೆʼಯ ದೃಷ್ಟಿಯಲ್ಲಿ ಮಾಧ್ಯಮಗಳು ಜಾಹೀರಾತು ನೀಡುವವರಿಗೆ ಅನೂಕಲಕರವಾಗಿ ಇರವ ಹಾಗೆ ಸುದ್ದಿಗಳನ್ನು ಬಿತ್ತರಿಸುವ ಅನಿವಾರ್ಯತೆಯಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂದರೇ ಜಾಹೀರಾತಿನ ಮೂಲಕ ಮಾಧ್ಯಮಗಳನ್ನು ಅಥವಾ ಪತ್ರಿಕೋದ್ಯಮವನ್ನು ʼಕೊಳ್ಳುವ ಸಂಸ್ಕೃತಿʼ ಬಂದಿದೆ. ಈ ಮೂಲಕ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಮೇಲೆ, ಪತ್ರಕರ್ತರ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಬಹಳ ಸುಲಭ. ಪತ್ರಿಕೋದ್ಯಮದಲ್ಲಿ ಕಾಲಾಂತರದಲ್ಲಿ ಒಂದು ರೀತಿಯ ಸಂಪ್ರದಾಯದಂತೆಯೇ ಆಗಿ ಹೋದ ಈ ʼಕೊಳ್ಳುವ ಪದ್ಧತಿʼ ಮಾಧ್ಯಮಗಳಲ್ಲಿ ದುಡಿಯುವವರ ಹೊಟ್ಟೆ ತುಂಬಿಸಬಹುದು, ಮಾಧ್ಯಮಗಳನ್ನು ಯಾವುದೇ ಆರ್ಥಿಕ ಬಿಕ್ಕಟ್ಟಿಲ್ಲದೇ ಮುನ್ನಡೆಸಬಹುದು ಆದರೇ, ಇದು ಸತ್ಯವನ್ನು ಸುಳ್ಳಾಗಿಸುವ ಅಕ್ರಮ ದಾರಿ ಆಗಿರುವುದರಿಂದ ಇದು ಸಮಾಜಕ್ಕೆ ಹೆಚ್ಚು ಅಪಾಯಕಾರಿಯೇ ಆಗಿದೆ.

ಲಕ್ಷ, ಕೋಟಿ ಲೆಕ್ಕಗಳಲ್ಲಿ ಬರುವ ಒಂದು ಜಾಹೀರಾತುಗಳಿಗೆ ಅಸಂಖ್ಯ ಸುಳ್ಳುಗಳನ್ನು ಮಾಧ್ಯಮದ ಮೂಲಕ ಮುಚ್ಚುವ ಸುಲಭ ಮಾರ್ಗ ದಕ್ಕಿ ಬಿಟ್ಟಿದೆ. ಈ ಮೂಲಕ ಸುದ್ದಿ ಮಾಧ್ಯಮಗಳನ್ನು ಮೇಲೆ ಜಾಹೀರಾತು ನೀಡುವ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಹಿಡಿತ ಸಾಧಿಸಿವೆ. ಮಾಧ್ಯಮ ಸಂಸ್ಥೆ ಈ ಜಾಹೀರಾತಿನ ಕಾರಣಕ್ಕಾಗಿ ಹೇರುವ  ನಿರ್ಬಂಧಗಳನ್ನು ಅಲ್ಲಿ ದುಡಿಯುವ ಹೆಸರಿಲ್ಲದ ಪತ್ರಕರ್ತ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ನಿಜಕ್ಕೂ ಇಂತಹ ವಾತಾವರಣದಲ್ಲಿ ಸಂಕಟ ಅನುಭವಿಸುತ್ತಿರುವವರು ಸತ್ಯವನ್ನು ಹೇಳಲು ಬಯಸುವ, ತಪ್ಪನ್ನು ಮುಲಾಜಿಲ್ಲದೇ ಪ್ರಶ್ನಿಸಲು ಬಯಸುವ ಹೆಸರಿಲ್ಲದ ಪತ್ರಕರ್ತರು.

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ವರದಿ ಇತ್ತೀಚೆಗಷ್ಟೇ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಒಳಪಡಿಸಿದ 180 ದೇಶಗಳ ಪೈಕಿ 135 ದೇಶಗಳಲ್ಲಿ ಮಾಧ್ಯಮಗಳನ್ನು ಸರ್ಕಾರಗಳು ಅಥವಾ ಉದ್ಯಮ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದು ವರದಿ ಹೇಳಿದೆ. ಇವುಗಳಲ್ಲಿ 36 ದೇಶಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದೂ ಹೇಳಿದ್ದು, ಆ ಪೈಕಿ ಭಾರತವೂ ಒಂದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಾಧ್ಯಮಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುವುದನ್ನು ಇನ್ನೂ ಹೆಚ್ಚು ನಿಖರವಾಗಿ ಹೇಳುವುದಾದರೇ, ಸಮಾಜ ಅಪಾಯದಲ್ಲಿದೆ.       

 -ಶ್ರೀರಾಜ್‌ ವಕ್ವಾಡಿ  

  

Thursday, June 27, 2024

ನೀಟ್‌ ಅಕ್ರಮ ಬಯಲಿಗೆಳೆದ ʼಪರೀಕ್ಷಾ ಮಾಫಿಯಾʼ ! | ದೇಶದಲ್ಲಿ ಹಳಿತಪ್ಪಿದ ಪರೀಕ್ಷಾ ವ್ಯವಸ್ಥೆ

 ಪರೀಕ್ಷಾ ಅಕ್ರಮಗಳನ್ನು ಒಬ್ಬರು ಇಬ್ಬರಿಂದ ನಡೆಸುವುದಕ್ಕೆ ಸಾಧ್ಯವೇ ? ಇದಕ್ಕೆ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇರಬಹುದು. ಪರೀಕ್ಷೆಗಳ ಮೂಲ ಉದ್ದೇಶವನ್ನೇ ಬದಿಗೆ ಸರಿಸುವಂತೆ ಮಾಡುವ ಈ ʼಪರೀಕ್ಷಾ ಮಾಫಿಯಾʼ ದೇಶದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಈ ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಿಗೆಳೆದಿವೆ. 

ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳ ಅಸಲಿತನ ಈಗ ಬಯಲಾಗಿದೆ. ರಾಜಾರೋಷವಾಗಿ ಇಂತಹ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದು ತೀರಾ ಸಾಮಾನ್ಯ ಎಂಬಂತಾಗಿದೆ. ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಂದ ಹಾಗೂ 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಆಗಿರುವ ಕಾರಣಕ್ಕೆ ಮತ್ತೆ ಈ ವಿಚಾರ ಮೇಲೆ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಹೀಗೆ ದೇಶದಾದ್ಯಂತ 45ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಎಂಬ ವರದಿ ಕೂಡ ಇದೆ. ಈ ಸ್ಪರ್ಧಾತ್ಮಕ/ಅರ್ಹತಾ ಹಾಗೂ ನೇಮಕಾತಿ ಪರೀಕ್ಷೆಗಳು ಅಂತಂದರೆ ಸಾಕು, ʼಅಲ್ಲೆಲ್ಲಾ ಪ್ರಭಾವ ನಡೆಯುತ್ತದೆ, ರಾಜಕೀಯ ನಡೆಯುತ್ತದೆʼ ಎಂದು ಸಾಮಾನ್ಯರ ಬಾಯಿಯಲ್ಲಿ ಬರುವ ಮಾತುಗಳೇನು ಹುಸಿಯಾಗಿ ಉಳಿದಿಲ್ಲ. ಅದು ಆ ಮಾತಿನಷ್ಟೇ ಸತ್ಯವೂ ಕೂಡ.

ಇಂತಹ ಪರೀಕ್ಷೆಗಳಲ್ಲಿ ರಾಜಾರೋಷವಾಗಿ ನಡೆಯುವ ಭ್ರಷ್ಟಾಚಾರ, ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕೆ ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರವಾಗಲಿ, ಇಲಾಖೆಗಳಾಗಲಿ, ಆಯೋಗವಾಗಲಿ ಮುತುವರ್ಜಿ ವಹಿಸದೇ ಇರುವುದು ದುರಂತವೇ ಸರಿ. ಇದೊಂಥರ ʼಬೇಲಿಯೇ ಎದ್ದು ಹೊಲ ಮೇಯ್ದಂತೆʼ. ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರ, ಇಲಾಖೆಗಳು, ಆಯೋಗದಲ್ಲೇ ಈ ಅಕ್ರಮಗಳನ್ನು ನಡೆಸುವವರ ದಂಡೇ ಇದೆ ಎಂದರೆ ತಪ್ಪಿಲ್ಲವೇನೋ. ಹೀಗೆ ಈ ಥರದ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ಅದನ್ನು ತಡೆಗಟ್ಟುವ ಸಲುವಾಗಿ ರೂಪಿಸುವ ನಿಯಮಾವಳಿಗಳು ಎರಡರಿಂದಲೂ ಆಗುವ ಸಮಸ್ಯೆಗಳನ್ನು ಅನುಭವಿಸುವವರು ಮಾತ್ರ ಅಭ್ಯರ್ಥಿಗಳು.

ನಾನು ಮಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಿಸರ್ಚ್‌ ಪ್ರೊಸೆಸರ್‌ ಒಬ್ಬರು ʼನೆಟ್‌ ಎಕ್ಸಾಂ ಪಾಸ್‌ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಲಕ್ಷ ಕೊಟ್ಟು, ಎಕ್ಸಾಂಗೆ ಅಟೆಂಡ್ ಮಾಡಿದರಷ್ಟೇ ಸಾಕುʼ ಅಂತಂದ್ರು. ʼಏನ್‌ ತಮಾಷೆ ಮಾಡ್ತಿದ್ದೀರಾ ಸರ್‌ ಎಂದು ಪ್ರಶ್ನೆ ಹಾಕಿದ್ದೆ. ʼಏನ್‌ ರೀ ಮಾತಾಡ್ತೀರಾ? ಇಂತವೆಲ್ಲಾ ಭಯಭೀತಿ ಇಲ್ಲದೆ ನೆಡಿತವೆ… ನೀವೂ ಅವರು ಕೇಳುವಷ್ಟು ಹಣ ರೆಡಿ ಮಾಡ್ಕೊಂಡ್ರೆ ಆಯ್ತುʼ ಅಂತಂದ್ರು. ಆ ಸಂದರ್ಭದಲ್ಲಿ ನನಗೆ ಆಶ್ಚರ್ಯ ಆಗಿತ್ತು. ಅದಾಗಲೇ ಎರಡು ಬಾರಿ ನೆಟ್‌ ಎಕ್ಸಾಂ ಬರೆದು ವಿಫಲನಾಗಿದ್ದೆ. ಮೂರನೇ ಬಾರಿಗೆ ನೆಟ್‌ ಎಕ್ಸಾಂ ಗೆ ತಯಾರಿಯಲ್ಲಿದ್ದೆ. ಎರಡನೇ ನೆಟ್‌ ಎಕ್ಸಾಂ ನಲ್ಲಿ ಮೂರ್ನಾಲ್ಕು ಅಂಕಗಳಿಂದ ಅನುತ್ತೀರ್ಣಗೊಂಡಿದ್ದೆ. ಇನ್ನು, ಮೀಸಲಾತಿ ಹಾಗೂ ಅವರಿಗಿದ್ದ ಕನಿಷ್ಠ ಅರ್ಹತಾ ಅಂಕಗಳ ಬಗ್ಗೆ ಸಹಜವಾಗಿ ಅಸಮಾಧಾನವಿದ್ದಿತ್ತು. ಹಿಂದುಳಿದ ವರ್ಗದವರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಈ ನಿಯಮ ಜಾರಿಗೆ ತರಲಾಗಿತ್ತಾದರೂ, ಎಲ್ಲಾ ವರ್ಗದವರಿಗೆ ಸಮಾನ ಅರ್ಹತಾ ಅಂಕಗಳ ನಿರ್ದಿಷ್ಟತೆಯಲ್ಲಿ ಉತ್ತೀರ್ಣಗೊಳಿಸುವ ಹಾಗೆ ಇಲ್ಲದಿರುವುದರ ಬಗ್ಗೆ ಒಂದಿಷ್ಟು ಕೊಪ, ಸಿಟ್ಟು ಎಲ್ಲರಿಗೂ ಇದ್ದ ಹಾಗೆ ನನ್ನಲ್ಲೂ ಇದ್ದಿತ್ತು. ಅರ್ಹತೆಯ ಮಾನದಂಡವೇನೆನ್ನುವ ಪ್ರಶ್ನೆ ಬಹಳ ಕಾಡಿತ್ತು. ಈ ನಡುವೆ ಇಂತಹದ್ದೊಂದು ವಿಚಾರ ಇದೆ ಎನ್ನುವುದು ಮತ್ತಷ್ಟು ಇಂತಹ ಪರೀಕ್ಷೆಗಳ ಬಗ್ಗೆ ಅಪನಂಬಿಕೆ ಮೂಡಿಸಿತ್ತು ಎಂದರೇ ತಪ್ಪಿಲ್ಲ. ಅಷ್ಟಾಗಿಯೂ ಪ್ರಯತ್ನದ ಹಾದಿಯಲ್ಲೇ ಇದ್ದೇವೆ ಎನ್ನುವುದೇ ಸಮಾಧಾನ.

ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ನೀಡುವ ಅವಕಾಶ, ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಈ ಪರೀಕ್ಷೆಗಳ ಪೂರ್ಣ ಪ್ರಕ್ರಿಯೆಯಲ್ಲಿ ನಡೆಯುವ ತರಹೇವಾರಿ ಅಕ್ರಮಗಳಿಗೆ ಮೂಲ ಕಾರಣ ಆಯಾ ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಗಳೇ ವಿನಃ ಅಭ್ಯರ್ಥಿಗಳಲ್ಲ. ಇದನ್ನು ನಡೆಸುವುದಕ್ಕೆ ಒಬ್ಬರು ಇಬ್ಬರಿಂದ ಸಾಧ್ಯವೇ ? ಇದಕ್ಕೆ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇರಬಹುದು.  

ಇಂತಹ ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಇಚ್ಚಾಶಕ್ತಿ ಸರ್ಕಾರಕ್ಕೆ ಅಸಲಿಗೂ ಇರುವುದು ಹೌದಾದರೇ, ಅಭ್ಯರ್ಥಿಗಳಿಗೆ ಸಮಸ್ಯೆಯಾಗದೇ ಇರುವ ರೀತಿಯಲ್ಲಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲಿ. ಕೇಂದ್ರ ಮಟ್ಟದಲ್ಲಿ ಇಷ್ಟರ ಮಟ್ಟಿಗೆ ಅಕ್ರಮಗಳು, ಪ್ರಶ್ನೆ ಪತ್ರಿಕೆಗಳ ಸೋರಿಕೆಗಳೆಲ್ಲಾ ಆಗುತ್ತವೆ ಎಂದರೇ ಪರೀಕ್ಷಾ ಪ್ರಾಧಿಕಾರ, ಇಲಾಖೆಗಳ ನೇರ ಪಾಲುದಾರಿಕೆ ಇಲ್ಲದೇ ಇರುವುದಕ್ಕೆ ಸಾಧ್ಯವೆ ? ಅಷ್ಟಕ್ಕೂ  ಇಂತಹ ಪರೀಕ್ಷಾ ಅಕ್ರಮಗಳ ಹಾದಿ ಮತ್ಯಾರಿಗೆ ತಿಳಿದಿರುತ್ತದೆ ? ಪಟ್ಟಭದ್ರ ಹಿತಾಸಕ್ತರಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಲ್ಲಿ ಕಡಿವಾಣ ಹಾಕುವುದಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ, ತನಿಖೆಗೆ ಒಪ್ಪಿಸಿದ್ದೇವೆ ಎನ್ನುವುದರಲ್ಲೇ ಅಧಿಕ ಲಾಭ ಇದೆ. ಪರೀಕ್ಷಾ ಪತ್ರಿಕೆ ಸೋರಿಕೆ, ಅಕ್ರಮಗಳಲ್ಲದೇ ಅವನ್ನು ತಡೆಯುವ ಉದ್ದೇಶದಿಂದ ಪಾಲಿಸುವ ಕ್ರಮಗಳಿಂದಲೂ ಬಲಿಪಶುಗಳಾಗುವುದು ಪರೀಕ್ಷಾರ್ಥಿಗಳೆ.

ಪರೀಕ್ಷೆಗಳಲ್ಲಿ ನಡೆದಿದೆ ಎಂದು ಹೇಳುವ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಶಂಕೆಯ ಹಿನ್ನೆಲೆಯಲ್ಲಿ ಅನುಸರಿಸುವ ರದ್ದು ಕ್ರಮ ಹಾಗೂ ಕೆಲವು ದಿನಗಳ ಬಳಿಕ ನಡೆಯುವ ಮರು ಪರೀಕ್ಷೆಗಳಿಂದ ಅಭ್ಯರ್ಥಿಗಳನ್ನು ಇನ್ನಷ್ಟು ಹತಾಶರನ್ನಾಗಿಸುತ್ತದೆ ಅಷ್ಟೇ ಹೊರತಾಗಿ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ, ಪ್ರಾಧಿಕಾರ ಅಥವಾ ಇಲಾಖೆಯ ಮೇಲೆ ವಿಶ್ವಾಸಾರ್ಹತೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಲಾರವು.

ಈಗ ಏಕಾಏಕಿ ಇಂತಹ ಪರೀಕ್ಷೆಗಳ ಅಕ್ರಮಗಳ ಸರಣಿಗಳೆ ಬಯಲಾಗತೊಡಗಿವೆ. ನೀಟ್‌, ನೆಟ್‌ ಅಥವಾ ಇನ್ಯಾವುದೋ ಸ್ಮರ್ಧಾತ್ಮಕವೋ, ಅರ್ಹತಾ ಪರೀಕ್ಷೆಯೋ ಅಥವಾ ನೇಮಕಾತಿ ಪರೀಕ್ಷೆಯೋ ಅರ್ಹ ಹಾಗೂ ಪ್ರತಿಭಾವಂತರಿಗೆ ಅವಕಾಶ ದಕ್ಕಬೇಕು ಎಂಬ ಕಾರಣದಿಂದ ಪಾರದರ್ಶಕವಾಗಿ ನಡೆಯುತ್ತಾ ಬಂದಿವೆ. ಆದರೂ ಇಂತಹ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ಇಂತಹ ಪರೀಕ್ಷೆಗಳ ಮೂಲ ಉದ್ದೇಶಗಳನ್ನೇ ಮೂಲೆಗೆ ಸರಿಸುವಂತೆ ʼಅಕ್ರಮಗಳುʼ ಮಾಡಿವೆ. ಪರೀಕ್ಷೆ ನಡೆಸುವ ಸಂಸ್ಥೆಗಳ ಅಧಿಕಾರಿಗಳು, ರಾಜಕೀಯ ನಾಯಕರು, ಪ್ರಭಾವಿಗಳು ಇಂತಹ ಅಡ್ಡ ದಾರಿಯಲ್ಲಿ ಲಾಭಕ್ಕಾಗಿ ಕಾಯುವುದು ವಿಪರ್ಯಾಸ.

ಹೌದು, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಕೇಂದ್ರ ಶಿಕ್ಷಣ ಇಲಾಖೆ ರದ್ದು ಮಾಡಿತ್ತು. 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. 2024ರ ಸಿಎಸ್‌ಐಆರ್-ನೆಟ್-ಜೆಆರ್‌ಎಫ್‌ ಪರೀಕ್ಷೆಯನ್ನೂ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. ಹೀಗೆ ಸಾಲು ಸಾಲು ಪರೀಕ್ಷೆಗಳ ಅಕ್ರಮಗಳು ಬೆಳಕಿಗೆ ಬರುತ್ತಿದ್ದಂತೆ ಈ ಪರೀಕ್ಷೆಗಳ ಸಾಚಾತನ ಬಯಲಾಗತೊಡಗಿತು. ಇದು ರಾಜಕೀಯ ಟೀಕೆಗೂ, ಚರ್ಚೆಗೂ ಕಾರಣವಾಯಿತು. 

ಮಹತ್ವಕಾಂಕ್ಷೆಯಿಂದಲೇ ಇಂತಹ ಪರೀಕ್ಷೆಗಳನ್ನು ಎಷ್ಟೋ ಅಭ್ಯರ್ಥಿಗಳು ಎದುರಿಸುತ್ತಾರೆ. ಹಾಗಿರುವಾಗ ಇಂತಹದ್ದೊಂದು ಪರೀಕ್ಷೆ ನಡೆಸುವಲ್ಲಿ ದೊಡ್ಡ ಮಟ್ಟದ ಸಾಂಸ್ಥಿಕ ವೈಫಲ್ಯವಾದರೇ ಹೇಗೆ ? ದೇಶದಲ್ಲಿ ಇಂತಹ ಪರೀಕ್ಷೆಗಳ ಪತ್ರಿಕಾ ಸೋರಿಕೆಯ ಮಾಫೀಯಾದ ಜಾಲ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಈ ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಿಗೆಳೆದಿವೆ. ಹಾಗಾದರೇ ದೇಶದಲ್ಲಿನ ಪರೀಕ್ಷಾ ವ್ಯವಸ್ಥೆ ಹಳಿ ತಪ್ಪುವುದಕ್ಕೆ ರಾಜಕೀಯ ನಾಯಕರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಫೀಯಾದ ನಡುವೆ ಇರುವ ನಿಗೂಢ ವ್ಯವಹಾರ ಕಾರಣವೆ ಎಂಬ ಪ್ರಶ್ನೆಯನ್ನು ಮುಂದಿರಿಸಿದೆ.

ಪರೀಕ್ಷಾ ಪತ್ರಿಕಾ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಮಾಫೀಯಾವನ್ನು ನಿಯಂತ್ರಿಸಲು ಸಂಸತ್ತು ಕಠೀಣ ಕಾನೂನು ಜಾರಿಗೆ ತಂದಿತ್ತು. ಕಾನೂನಿನ ಪ್ರಕಾರ ಇಂತಹ ಅಕ್ರಮಗಳಲ್ಲಿ ಪಾಲು ಪಡೆದವರಿಗೆ ಗರಿಷ್ಠ ಹತ್ತು ವರ್ಷಗಳ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸಲಾಗುತ್ತದೆ. ಇನ್ನು, ಪರೀಕ್ಷೆಯ ವಿಚಾರದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಇದೆ  ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ.

-ಶ್ರೀರಾಜ್‌ ವಕ್ವಾಡಿ   

Wednesday, June 19, 2024

ಉದಾತ್ತ ಮಾದರಿಯಾಗುವುದು ಸುಲಭವೇ…

ಸ್ಥಾನಮಾನವುಳ್ಳವರು ಅಲ್ಪಮಾನವರಾಗುವ ದುರಿತ ಕಾಲ

"ಬುದ್ಧ ಹೇಳುವಂತೆ, ದುರಾಸೆಯ ನಿರರ್ಥಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಪ್ಪುಗಳ ಹಿಂದೆ ಮನಸ್ಸಿನ ಕೈವಾಡವಿರುತ್ತದೆ ಎಂಬ ಬುದ್ಧನ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮನಸ್ಸು ಆಗಾಗ ಮೊಗೆಮೊಗೆದು ಕೊಡುವ ದುರಾಸೆಗಳಿಗೆ ಬಲಿಯಾಗುವುದರಿಂದಲೇ ಸ್ಥಾನಮಾನವುಳ್ಳವರು ಅಲ್ಪಮಾನವರಾಗುತ್ತಾರೆ." 

ಸಾಮಾಜಿಕ ಬದುಕಿನ ಜೊತೆಗೆ ಅಥವಾ ಸಾಮಾಜಿಕ ಜೀವನಕ್ಕೆ ಹತ್ತಿರವಾಗಿದ್ದು ತಮ್ಮ ವೃತ್ತಿ ಜೀವನ ನಡೆಸುತ್ತಿರುವವರು ಈ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು. ಬಹಳ ವಿಶೇಷವಾಗಿ ಹೀಗೆ ಬದುಕುತ್ತಿರುವವರಲ್ಲಿ ತಮ್ಮನ್ನು ಅನುಸರಿಸುವವರು ಹಲವಾರು ಮಂದಿ ಇದ್ದಾರೆ ಎನ್ನುವ ಸ್ವಯ ಇರಬೇಕು. ಹೆಸರು, ಅಧಿಕಾರ, ದುಡ್ಡು ತಲೆಗೇರಿದಾಗ ಮನುಷ್ಯನ ವರ್ತನೆ ಬದಲಾವಣೆ ಆಗುವುದು ಸಹಜವೇ ಸರಿ. ಆದರೇ, ತನ್ನ ಕಾಲ, ಸ್ಥಿತಿ, ಸಂಬಂಧಗಳ ಅರಿವು ಬಹಳ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ತನಗಿರುವ ಸ್ಥಾನಮಾನಗಳು, ಅಧಿಕಾರ, ಹೆಸರು, ದುಡ್ಡಿನಿಂದ ಸೃಷಿಯಾದ ಗೌರವಗಳಿಗಾದರೂ ವಿಧೇಯರಾಗಿ ಬದುಕಬೇಕು. ಒಬ್ಬ ಸಾಮಾನ್ಯ ವ್ಯಕ್ತಿಯ ʼಇರುವಿಕೆʼಯೇ ಬಹಳಷ್ಟು ಮಾತನಾಡುತ್ತದೆ. ಇನ್ನು, ದೊಡ್ಡ ದೊಡ್ಡ ಸ್ಥಾನಮಾನಗಳಲ್ಲಿರುವವರ ʼಇರುವಿಕೆʼಯಲ್ಲಿ ವ್ಯತ್ಯಾಸಗಳಾದರೆ ಕೇಳಬೇಕೆ ?  

ಇರುವಿಕೆಯಲ್ಲಿ ಸ್ವಯಂ ಪ್ರಜ್ಞೆ ಇಲ್ಲದವನು ಸಮಾಜ ಕಂಟಕನಾಗಿ ಬದಲಾಗುತ್ತಾನೆ. ಪ್ರತಿಯೊಬ್ಬನಿಗೂ ತನ್ನ ಹಿನ್ನೆಲೆ, ಈಗಿರುವ ಹುದ್ದೆ, ಸ್ಥಾನಮಾನ ಗೌರವಗಳ ಅರಿವು ಇರಬೇಕು. ತಮ್ಮಿಂದ ಆದವುಗಳಿಗೆ ಎಲ್ಲದಕ್ಕೂ ಸಮಾಜಾಯಿಷಿ ಕೊಡುವುದಕ್ಕೂ ಒಂದು ಮಿತಿ ಇದೆ. ಒಪ್ಪಿತ ಎನ್ನುವುದಕ್ಕೂ ಒಂದು ಮಿತಿ ಇದೆ. ಅದನ್ನು ದಾಟಿದ ಕ್ರಿಯೆಯನ್ನು ಸಹಿಸಿಕೊಳ್ಳುವ ಅಥವಾ ಒಪ್ಪಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿಲ್ಲ. ಒಪ್ಪಿಕೊಳ್ಳುವ ಮತ್ತು ಸಹಿಸಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿದೆ ಎಂದರೇ ಅದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದೇ ಅರ್ಥೈಸಿಕೊಳ್ಳಬೇಕು.

ಸಾಮಾನ್ಯ ಅಸಮಾನ್ಯನಾಗುವುದಕ್ಕೂ, ಸಾಮಾನ್ಯರಲ್ಲಿ ಸಾಮಾನ್ಯನಾಗಿಯೇ ಬದುಕುವುದಕ್ಕೂ ವ್ಯತ್ಯಾಸವಿದೆ. ಅಸಮಾನ್ಯನಾಗುವ ಕ್ರಿಯೆಯಲ್ಲಿ ʼಅಹಂʼ ಅಮಲಾಗಿ ಬದಲಾಗಬಹುದು. ಸಾಮಾನ್ಯರೊಳಗೆ ಸಾಮಾನ್ಯರಾಗಿಯೇ ಇರುವ ಕ್ರಿಯೆಯಲ್ಲಿ ʼನಾಟಕೀಯʼವೂ ಮನಸ್ಸು, ಮೈಗೆ ಪರಾಕಾಯ ಪ್ರವೇಶ ಪಡೆದುಕೊಳ್ಳಬಹುದು. ತೊಡಗಿಕೊಳ್ಳುವವನಿಗೆ ಈ ಎರಡೂ ಕ್ರಿಯೆಯಲ್ಲಿ ಸಾಮಾನ್ಯವಾಗಿ ಆಗುವ ಬದಲಾವಣೆಗಳ ಬಗ್ಗೆ ನಿಗಾ ಇರಬೇಕು. ಅಹಂ ಮತ್ತು ನಾಟಕೀಯ ವರ್ತನೆಯನ್ನು ಮೀರಿ ಬೆಳೆಯುವವ ನಿಜಕ್ಕೂ ಈ ಸಮಾಜಕ್ಕೆ ಅತ್ಯಾಪ್ತನಾಗಿ ಬೆಳೆಯುತ್ತಾನೆ, ಉಳಿಯುತ್ತಾನೆ.

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಸಂಸದೀಯ ಮಂಡಳಿ ಸಮಿತಿಯ ಸದಸ್ಯರೂ ಆಗಿರುವ ಹಿರಿಯ ರಾಜಕಾರಣಿ ಬಿ.ಎಸ್‌ ಯಡಿಯೂರಪ್ಪ ಅವರ ಮೇಲಿರುವ ಪೋಕ್ಸೋ ಪ್ರಕರಣ ಹಾಗೂ ಚಿತ್ರನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮೇಲಿರುವ ಕೊಲೆ ಆರೋಪಗಳನ್ನು ನಾವು ತುಸು ಚಿಂತನೆ ಮಾಡಬೇಕಿದೆ. ಹೌದು, ಸಮಾಜದಲ್ಲಿ ಅಗ್ರ ಸ್ಥಾನಮಾನಗಳನ್ನು ಹೊಂದಿರುವ ಪ್ರಜ್ವಲ್‌ ರೇವಣ್ಣ, ಬಿ.ಎಸ್‌. ಯಡಿಯೂರಪ್ಪ ಹಾಗೂ ನಟ ದರ್ಶನ್‌ ಬಗೆಗೆ ನಾವು ಯೋಚಿಸಬೇಕಿದೆ. ಚಿಂತಿಸಬೇಕಿದೆ. ರಾಜಕೀಯ, ಸಿನೆಮಾ, ಸರ್ಕಾರಿ ಹುದ್ದೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಜೀವನ ನಡೆಸುತ್ತಿರುವವರದ್ದು ಕತ್ತಿ ಅಲಗಿನ ಮೇಲಿನ ನಡಿಗೆ. ಸದಾ ಜಾಗೃತರಾಗಿಯೇ ಬದುಕಬೇಕು. ಮಾದರಿಯಾಗಿಯೂ ಬದುಕಬೇಕು. ಅದು ಅನಿವಾರ್ಯವೂ ಕೂಡ.

ಗಮನಿಸಿ, ತನ್ನ ಕಾಮ ತೃಷೆ ತೀರಿಸಿಕೊಳ್ಳುವ ಸಲುವಾಗಿ ನೂರಾರು ಹೆಣ್ಣು ಮಕ್ಕಳನ್ನು ಬರೀ ಅಂಗಾಂಗ ಎಂಬಂತೆ ಬಳಸಿಕೊಂಡು, ಆ ಹೆಣ್ಣು ಮಕ್ಕಳಿಗೆ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಗಳನ್ನು ಸಾವಿರಾರು ವೀಡಿಯೋಗಳನ್ನಾಗಿ ಮಾಡಿಟ್ಟುಕೊಳ್ಳುವ ಮನಸ್ಥಿತಿಗೆ ತಲುಪುವವರೆಗೆ ಹಾಸನ ಪೆನ್‌ಡ್ರೈವ್‌ ಪ್ರಕರಣದ ಆರೋಪಿಗೆ ಸ್ವಯ ಇರಲಿಲ್ಲವೇ ? ತಾನೊಬ್ಬ ರಾಜಕಾರಣಿ, ಒಂದು ಲೋಕಸಭಾ ಕ್ಷೇತ್ರದ ಸಂಸದ, ತಾನಿರುವ ಹುದ್ದೆಗೆ ಒಂದು ಗೌರವವಿದೆ, ಹೀಗೆಲ್ಲಾ ತಾನು ನಡೆದುಕೊಳ್ಳಬಾರದು ಎನ್ನುವ ಪ್ರಾಥಮಿಕ ಪ್ರಜ್ಞೆ ಇದ್ದಿದ್ದರೇ ಬಹುಷಃ ಹೀಗೆಲ್ಲಾ ಆಗುತ್ತಿರಲಿಲ್ಲವೇನೋ. ಯುವ ನಾಯಕ ಎಂದು ಆತನನ್ನು ಸ್ಪರ್ಧೆಯ ಕಣಕ್ಕಿಳಿಸಿದ ಪಕ್ಷ ಹಾಗೂ ಹಿರಿಯ ನಾಯಕರ ಮಾತಿಗೆ ಈಗ ಎಲ್ಲಿದೆ ಬೆಲೆ ? ತನ್ನನ್ನು ಈ ಹಿಂದೆ ಆರಿಸಿದ ಮತದಾರರಿಗೆ ನೀಡಿದ ಸುರಕ್ಷತೆ ?

ಗಾಳಿಯಿಲ್ಲದೇ ಹೊಗೆಯಾಡುವುದಿಲ್ಲ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇಲೆ ಸಂಕಷ್ಟ ಎದುರಿಸುತ್ತಿರುವ ಆರೋಪಿ ತನ್ನ ವಯಸ್ಸು, ತಾನು ಅನುಭವಿಸಿದ ಹುದ್ದೆ, ಸ್ಥಾನಮಾನಗಳ ಬಗ್ಗೆ ಅರಿವು ಇದ್ದಿದ್ದರೇ, ಇಂತಹ ಕೆಲಸಕ್ಕೆ ಮುಂದಾಗುತ್ತಿದ್ದರೇ ಎನ್ನುವ ಪ್ರಶ್ನೆಯೂ ಸಹಜವಾಗಿ ಮುಂದಿನ ಸಾಲಿನಲ್ಲೇ ನಿಲ್ಲುತ್ತದೆ. ಪ್ರಭಾವಿ ರಾಜಕಾರಣಿ ಎನ್ನುವ ಕಾರಣಕ್ಕೆ ಇಂತಹದ್ದೊಂದು ಘಟನೆ ಆಗಿದ್ದು ನಿಜವಾದರೇ ಈ ಸಮಾಜ ಅದನ್ನು ಒಪ್ಪುವುದಕ್ಕೆ ಸಾಧ್ಯವಿದೆಯೇ ? ಆರೋಪಗಳಿಂದ ಹೊರಬರಲು ಸಮರ್ಥಿಸಿಕೊಳ್ಳುವುದು ಸಾಮಾನ್ಯ. ಆ ಪ್ರತಿವಾದ ಸಮರ್ಥನೆ ಸ್ವಾತಂತ್ರ್ಯವೂ ಹೌದು. ಆದರೂ ಆ ಸ್ವಾತಂತ್ರ್ಯ ಎಲ್ಲಿಯವರೆಗೆ ? ಅದಕ್ಕೂ ಒಂದು ಮಿತಿ ಇದೆ. ಈ ಪ್ರಕರಣದ ವಿಚಾರಣೆ ಆದ ಬಳಿಕ ಸತ್ಯ ಸಂಗತಿ ಹೊರಬರಬಹುದು.

ತಮ್ಮ ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಮತ್ತು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಮ್ಮದೇ ಅಭಿಮಾನಿ ಎಂದು ಹೇಳಲಾಗುತ್ತಿರುವ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದು ರಾಜಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನ ಅಗ್ರಮಾನ್ಯ ನಟ ಹಾಗೂ ಆತನ ಪ್ರಿಯತಮೆ, ಸಹಚರರು ಬಂಧನಕ್ಕೊಳಾಗಿದ್ದಾರೆ. ಇಂತಹದ್ದೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ತುಸು ಯೋಚಿಸಿದ್ದರೇ ? ಪತ್ನಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನ, ಶ್ರೀರಂಗಪಟ್ಟಣದಲ್ಲಿ ಅಭಿಮಾನಿಯ ಮೇಲೆ ಹಲ್ಲೆ, ಮಾಧ್ಯಮಗಳನ್ನು ಅಶ್ಲೀಲವಾಗಿ ನಿಂಧಿಸಿ ಒಂದು ವರ್ಷ ನಿಷೇಧ, ಪುನೀತ್‌ ರಾಜ್‌ಕುಮಾರ್‌ ವಿರುದ್ಧ ವಿವಾದಾತ್ಮಕ ಮಾತು, ವನ್ಯ ಜೀವಿಗಳನ್ನು ಸಾಕಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿ, ಮೈಸೂರು ಹೋಟೇಲ್‌ನಲ್ಲಿ ಕಾರ್ಮಿಕನ ಮೇಲೆ ಹಲ್ಲೆ, ನಿರ್ಮಾಪಕನೋರ್ವನಿಗೆ ಬಹಿರಂಗ ಸಭೆಯೊಂದರಲ್ಲಿ ನಿಂದನೆ ಮತ್ತು ವಿವಾದ, ಚಿತ್ರೀಕರಣದ ಸಂದರ್ಭದಲ್ಲಿ ಸಹನಟನ ಮೇಲೆ ಹಲ್ಲೆ, ಸರ್ಕಾರ ನಟನ ಮನೆಯಲ್ಲಿದ್ದ ಹುಲಿ ಉಗುರು ವಶ ಪಡಿಸಿಕೊಂಡಂತಹ ಸಾಲು ಸಾಲು ಅವಾಂತರಗಳು ಆದ ಬಳಿಕವೂ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ತಾನು ನಡೆದುಕೊಂಡು ಬಂದ ದಾರಿ, ಕುಟುಂಬದ ಹಿನ್ನೆಲೆ, ಚಿತ್ರರಂಗದ ಅನುಭವ, ಸ್ಥಾನಮಾನ, ಫ್ಯಾನ್‌ ಫಾಲೋವರ್ಸ್‌, ತಾನೊಬ್ಬ ಅನುಭವಿ ನಟನಾಗಿದ್ದುಕೊಂಡು ಈ ಸಮಾಜಕ್ಕೆ ಮಾದರಿಯಾಗಿ ಇರಬೇಕು ಎನ್ನುವ ವಿಚಾರಗಳನ್ನೆಲ್ಲಾ ಒಮ್ಮೆ ಯೋಚಿಸಿ ಮನಸ್ಸಿನ ಮಾತು ಕೇಳಿದ್ದರೇ,  ಈಗ ಹೊತ್ತಿರುವ ಆರೋಪಗಳಿಗೆ ಹೊಂದುವ ಕೃತ್ಯಗಳ ಬಗ್ಗೆ ಯೋಚನೆಯನ್ನು ಮಾಡುವುಕ್ಕೂ ಸಮಯ ದೊರಕುತ್ತಿರಲಿಲ್ಲ.

ಹೌದು, ಸ್ವಾಸ್ಥ್ಯಕ್ಕೆ ಪ್ರತಿಬಂಧಕರೂಪವಾಗಿ ಆರು ಶತ್ರುಗಳಂತೆ ಇರುವ ಭಾವನೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ತನ್ನೊಳಗೆ ತನಗೇ ಅರಿವಿಲ್ಲದೆ ಮನುಷ್ಯ ಇರಿಸಿಕೊಂಡಿದ್ದಾನೆ. ಅವುಗಳಲ್ಲಿ ಯಾವುದನ್ನು ಎಲ್ಲಿ ಸಾಧಿಸಿಕೊಳ್ಳಬೇಕು ಎನ್ನುವುದು ಆಯಾಯ ವ್ಯಕ್ತಿತ್ವಕ್ಕೆ ಅವಲಂಭಿಸಿರುವ ವಿಷಯ. ಇವುಗಳೊಂದಿಗೆ ಹೇಗೆ ಬದುಕುತ್ತೇವೆ ಎನ್ನುವುದೇ ಮುಖ್ಯ. 

ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ನಮ್ಮ ಮನಸ್ಸು ಇರುತ್ತದೆ. ಕೆಲವೊಮ್ಮೆ ಚಂಚಲ ಮನಸ್ಸು ನಮ್ಮನ್ನು ಕೆಟ್ಟ ದಾರಿಯತ್ತ ಕೊಂಡೊಯ್ಯಬಹುದು. ಹಾಗಾಗಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಮುಖ್ಯ. ಬುದ್ಧ ಹೇಳುವಂತೆ, ದುರಾಸೆಯ ನಿರರ್ಥಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಪ್ಪುಗಳ ಹಿಂದೆ ಮನಸ್ಸಿನ ಕೈವಾಡವಿರುತ್ತದೆ ಎಂಬ ಬುದ್ಧನ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮನಸ್ಸು ಆಗಾಗ ಮೊಗೆಮೊಗೆದು ಕೊಡುವ ದುರಾಸೆಗಳಿಗೆ ಬಲಿಯಾಗುವುದರಿಂದಲೇ ಸ್ಥಾನಮಾನವುಳ್ಳವರು ಅಲ್ಪಮಾನವರಾಗುತ್ತಾರೆ. 

ವ್ಯಕ್ತಿಯಾಗಿ ಬದುಕುವುದು ಬಹಳ ಸುಲಭ. ಆದರೆ, ಮಾದರಿ ವ್ಯಕ್ತಿಯಾಗಿ, ಅನುಕರಣೀಯ ವ್ಯಕ್ತಿತ್ವದವರಾಗಿ ಬದುಕುವುದು ಕಷ್ಟ. ಉದಾತ್ತ ಆದರ್ಶಗಳ ಅಳವಡಿಕೆಯ ಇರುವಿಕೆಯಿಂದಲಷ್ಟೇ ಮಾದರಿಯಾಗಿ ಬದುಕಬಹುದು. ʼಅಹಂ ಲೋಕʼ ಮುಂದಾದರೆ, ಆ ಹಮ್ಮುಬಿಮ್ಮಿನಿಂದಲೇ ಎಲ್ಲವನ್ನೂ ಜಯಿಸಿಕೊಳ್ಳಬಹುದೆಂಬ ಭ್ರಮೆ ಆವರಿಸಿಕೊಂಡರೇ ಮನುಷ್ಯ ಮನುಷ್ಯನಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ದುರಂತವೆಂದರೇ, ಬಹುತೇಕರು ಇಲ್ಲಿ ಮನುಷ್ಯರಾಗುವ ಪ್ರಾಥಮಿಕ ಪ್ರಯತ್ನವನ್ನೇ ಮಾಡುತ್ತಿಲ್ಲ.

-ಶ್ರೀರಾಜ್‌ ವಕ್ವಾಡಿ      

 

Sunday, June 16, 2024

ಕೆಳ ಮಧ್ಯಮ ವರ್ಗದ ಬದುಕಿನ ಕಥೆ 'ಕೋಟಿ'


ಜೀವನ ಕೊಡುವ ಅನಗತ್ಯ ನೋವುಗಳನ್ನು ಸಹಿಸಿಕೊಳ್ಳುವ ಎದೆಗಾರಿಕೆ ಬಹುಷಃ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹುಡುಗರಿಗಷ್ಟೇ ಇರುತ್ತದೆನೋ  ಅಂತ ಮತ್ತೆ ಮತ್ತೆ ಅನ್ನಿಸಿದ್ದು ಪರಮೇಶ್ವರ ಗುಂಡ್ಕಲ್  ರಚಿಸಿ ನಿರ್ದೇಶಿಸಿದ, ಡಾಲಿ ಧನಂಜಯ್ ಅಭಿನಯದ 'ಕೋಟಿ' ಸಿನೆಮಾದಿಂದ. 

ಹೆಜ್ಜೆ ಇಟ್ಟಲ್ಲೆಲ್ಲಾ ಅಪ್ರಾಮಾಣಿಕತೆಯೇ ಕಾಣುತ್ತಿರುವುದರ ನಡುವೆ ಪ್ರಾಮಾಣಿಕತೆಯಿಂದಲೇ ಬದುಕು ರೂಪಿಸಿಕೊಳ್ಳಲು ಪ್ರಯತ್ನಿಸುವ ಹುಡುಗನೊಬ್ಬ ಎದುರಾಗುವ ಇರುಳ ದಾರಿಯ ಕಷ್ಟ ವ್ಯೂಹಗಳ ನಡುವೆಯೂ ರಾಜಿ ಮಾಡಿಕೊಳ್ಳದೇ ಬದುಕನ್ನು ಗೆಲ್ಲಿಸಿಕೊಳ್ಳುವ ಭರವಸೆಯಲ್ಲೇ ದಿನದೂಡುವ ಕಥೆಯುಳ್ಳ ಸಿನೆಮಾವಿದು. 

ತನ್ನದಲ್ಲದ ತಪ್ಪನ್ನು ಹೊತ್ತುಕೊಂಡು ನಡೆಯುವಂತಹ, ಇಕ್ಕಟ್ಟಿಗೆ ಸಿಲುಕಿದರೂ ಪ್ರಾಮಾಣಿಕತೆಯಿಂದಲೇ ಪ್ರತಿಕ್ರಿಯಿಸುವವರೆಗೆ ಕಾಯುವ ತಾಳ್ಮೆ, ಮನಸ್ಥಿತಿ ಈ ಕಾಲದಲ್ಲಿದೆಯೇ ಎನ್ನುವ ಪ್ರಶ್ನೆಯನ್ನು ಸಿನೆಮಾ ಮುಂದಿರಿಸಿದರೂ ಪ್ರತಿ ಕ್ಷಣದ ಪ್ರಯತ್ನದ ಹೋರಾಟದ ಬದುಕಿನ ಕಥೆ ಇಷ್ಟವಾಗುತ್ತದೆ. 

ಬಹುಷಃ ನಮ್ಮಂತಹ ಕೆಳ ಮಧ್ಯಮ ವರ್ಗದವರು ಕಂಡ, ಅನುಭವಿಸಿದ ಕಾರ್ಗತ್ತಲ ದಾರಿಯನ್ನು ಪರಮೇಶ್ವರ್ ಬಹಳ ಚೆನ್ನಾಗಿ ಆಪ್ತವೆನ್ನಿಸುವ ಹಾಗೆ ಕಟ್ಟಿಕೊಟ್ಟಿದ್ದಾರೆ. 

ಸಿನೆಮಾ ಎಲ್ಲಿಯೂ ಚಿತ್ತವಿಕ್ಷೇಪಗೊಳಿಸುವುದಿಲ್ಲ. ಹಾಡುಗಳು, ಸಂಭಾಷಣೆಗಳು, ಪ್ರತಿ ಸನ್ನಿವೇಶಗಳು ತೀರಾ ಹಿಡಿಸುತ್ತವೆ. 

ಸಿನೆಮಾ ಚೆನ್ನಾಗಿದೆ. ನೋಡಿ.

-ಶ್ರೀರಾಜ್ ವಕ್ವಾಡಿ

Wednesday, June 12, 2024

ಬಿಎಸ್‌ವೈ ʼರಾಜಕೀಯ ಶಕೆʼಗೆ ಬಿಜೆಪಿ ಅಂತ್ಯ ಚುಕ್ಕಿ !

ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಹೊಸ ನಾಯಕನಿಗೆ ಬಿಜೆಪಿ ಹುಡುಕಾಟ ?

 ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 293 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಂಪುಟದಲ್ಲಿ 81 ಜನರ ಸೇರ್ಪಡೆಗೆ ಅವಕಾಶಗಳಿದ್ದರೂ ಪ್ರಾಥಮಿಕ ಹಂತದಲ್ಲಿ 24 ರಾಜ್ಯಗಳ 72 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನಮ್ಮದೇ ಪಕ್ಷದ ಸರ್ಕಾರ ಎನ್ನುವ ʼಅಹಂʼ ತೊರೆದು ಸರ್ಕಾರ ರಚಿಸಬೇಕಿರುವ ಕಾರಣದಿಂದ ಬಿಜೆಪಿ ಮೈತ್ರಿ ಸಮಾಧಾನ, ರಾಜ್ಯವಾರು, ಜಾತಿವಾರು, ಮುಂಬರುವ ವಿಧಾನಸಭಾ ಚುನಾವಣೆಗಳು, ಹೀಗೆ ಬೇರೆ ಬೇರೆ ಲೆಕ್ಕಚಾರಗಳ ಆಧಾರದ ಮೇಲೆ ಸರ್ಕಾರ ರಚನೆ ಮಾಡಿದೆ. ʼಮೋದಿ ಗ್ಯಾರಂಟಿʼ ದೇಶ ಕಲ್ಯಾಣದ ಆದರ್ಶ ಹೊತ್ತ ಮಾದರಿ ಎನ್ನುವ ಯಾವುದೇ ಮಾನ್ಯತೆ ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದೊರಕಲಿಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರವೂ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಿಲ್ಲ. ಬಿಜೆಪಿ ಈ ಎರಡೂ ವಿಷಯಗಳನ್ನು ʼಚುನಾವಣೆ ಗೆಲ್ಲಿಸುವ ಸಿದ್ಧ ಮಾದರಿʼ ಎಂದು ಬಿಂಬಿಸಿದ್ದು ಈ ಕಾಲದ ರಾಜಕೀಯಕ್ಕೆ ಹಿಡಿದ ಕನ್ನಡಿ.

ಎನ್‌ಡಿಎ ಸಂಪುಟದಲ್ಲಿ ರಾಜ್ಯಕ್ಕೆ 5 ಸ್ಥಾನ, ಬಿಎಸ್‌ವೈ ಸೈಡ್‌ಲೈನ್‌ :

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಜಾತಿ ಹಾಗೂ ಮೈತ್ರಿ ಲೆಕ್ಕಚಾರದ ಆಧಾರದಲ್ಲಿ ಮಂತ್ರಿಗಿರಿ ದೊರಕಿದೆ. ರಾಜ್ಯದಲ್ಲಿ ಬ್ರಾಹ್ಮಣ ಕೋಟಾದಲ್ಲಿ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಪ್ರಹ್ಲಾದ್‌ ಜೋಶಿ, ಲಿಂಗಾಯತ ಕೋಟಾದ  ಅಡಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ. ಸೋಮಣ್ಣ, ಒಕ್ಕಲಿಗ ಕೋಟಾದ ಅಡಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಮೈತ್ರಿ ಧರ್ಮಕ್ಕಾಗಿ ಮಂಡ್ಯದ ಸಂಸದ ಹೆಚ್. ಡಿ ಕುಮಾರಸ್ವಾಮಿ(ಒಕ್ಕಲಿಗ) ಹಾಗೂ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಮಂತ್ರಿಗಿರಿ ಸಿಕ್ಕಿದೆ.

ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಿಂದ ಬಿ. ಎಸ್‌. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಬಸವರಾಜ್‌ ಬೊಮ್ಮಯಿ, ಗೋವಿಂದ ಕಾರಜೋಳ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಿಎಸ್‌ವೈ ಪುತ್ರ ಬಿ. ವೈ. ರಾಘವೇಂದ್ರ ಅವರಿಗೆ ಸಂಪುಟದಲ್ಲಿ ಮಂತ್ರಿಗಿರಿ ಸಿಗುವುದು ಬಹುತೇಕ ನಿಶ್ಚಿತ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಆದರೇ, ಯಡಿಯೂರಪ್ಪ ಅವರ ಮಾತು ಬಿಜೆಪಿ ಹೈಕಮಾಂಡ್‌ನಲ್ಲಿ ಈಗ ಗೌಣವಾದಂತೆ ಕಂಡಿದ್ದಷ್ಟಲ್ಲದೇ, ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಹೊಸ ನಾಯಕನ ಹುಡುಕಾಟಕ್ಕೆ ಮುಂದಾಗಿದೆ ಎಂಬಂತೆ ಕಾಣಿಸುತ್ತಿದೆ.

ಏನೇ ಆಗಲಿ, ಕರ್ನಾಟಕದ ಬಿಜೆಪಿ ಪಾಲಿಗೆ ಯಡಿಯೂರಪ್ಪ ಅವರ ರಾಜಕೀಯ ಪ್ರವೇಶ ಮಹತ್ವದ್ದು. ರಾಜ್ಯದ ಮಟ್ಟಿಗಿನ ರಾಜಕೀಯದ ಆಳ-ಅಗಲ ಯಡಿಯೂರಪ್ಪ ಅವರಿಗೆ ಕರತಲಾಮಲಕ. ಶಿಕಾರಿಪುರದಂತಹ ಪ್ರದೇಶದಲ್ಲಿಯೂ ಹಠಹಿಡಿದು ಸಂಘಟನೆ ಬೆಳೆಸಿದ ಬಿಎಸ್‌ವೈ ಪಾತ್ರ ಸಂಘ ಪರಿವಾರದ ಗಮನ ಸೆಳೆದಿತ್ತು. ಹಂತಹಂತವಾಗಿ ಬೆಳೆಯುತ್ತಾ ಬಂದ ಯಡಿಯೂರಪ್ಪ ಬಿಜೆಪಿಯಲ್ಲಿ ರಾಜ್ಯ ಮಟ್ಟದ ಪ್ರಭಾವಿ ನಾಯಕ ಎನ್ನಿಸಿಕೊಂಡರು. 2006ರ ಫೆ.3 ರನ್ನು ನಾವು ನೆನಪಿಸಿಕೊಳ್ಳಬೇಕು. ಅಂದು ರಾಜ್ಯದಲ್ಲಿ ನಡೆದ ರಾಜಕೀಯ ಕ್ರಾಂತಿ ದೇಶವೇ ಕರ್ನಾಟಕದತ್ತ ನೋಡುವ ಹಾಗೆ ಮಾಡಿತ್ತು. ಅಲ್ಲಿಯ ತನಕ ಹೋರಾಟದ ಹಿನ್ನೆಲೆಯಲ್ಲಿ ಯಡಿಯೂರಪ್ಪರನ್ನು ನೋಡಿದ ಬಿಜೆಪಿ, ಹೊಸದೊಂದು ಎತ್ತರದಲ್ಲಿ ಯಡಿಯೂರಪ್ಪ ಅವರನ್ನು ಇರಿಸಲು ಆರಂಭಿಸಿತ್ತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್‌ವೈ ಅವರನ್ನು ಬಿಜೆಪಿ ಅಟ್ಟಕ್ಕೇರಿಸಿತ್ತು.

2012ರಲ್ಲಿ ಭ್ರಷ್ಟಾಚಾರ ಆರೋಪದಿಂದ ನೊಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾಕ್ಕೆ ಬಂತು. ತಮ್ಮ ಅನುಪಸ್ಥಿತಿಯೇ ಬಿಜೆಪಿ ಸೋಲಿಗೆ ಕಾರಣ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದರು. ಕೆಜೆಪಿ ಬಿಜೆಪಿಯೊಂದಿಗೆ ವಿಲೀನ, ಮತ್ತೆ ಬಿಜೆಪಿಗೆ ಯಡಿಯೂರಪ್ಪ ಸಾರಥ್ಯ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಗೆ ಬೇಕಾಗಿ ಹೈಕಮಾಂಡ್‌ ಬಿಎಸ್‌ವೈ ಅವರನ್ನು ಚೆನ್ನಾಗಿಯೇ ದುಡಿಸಿಕೊಂಡಿತ್ತು. 2018ರಲ್ಲಿ ಬಿಜೆಪಿ ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಹೊರಬಂದಿದ್ದರೂ ಸರ್ಕಾರ ರಚಿಸುವುದಕ್ಕೆ ಆಗದೇ ಹಿಂದುಳಿದು ಕೇವಲ ಒಂದೇ ವರ್ಷದಲ್ಲಿ ʼಆಪರೇಷನ್‌ ಕಮಲʼ ಮಾಡಿ ಮತ್ತೆ ಮುಖ್ಯಮಂತ್ರಿಯಾಗಿ ಬಿಎಸ್‌ವೈ ಅಧಿಕಾರ ಹಿಡಿದರು. ಸರಿಯಾಗಿ ಎರಡು ವರ್ಷಗಳ ಬಳಿಕ 2021 ಜುಲೈ 26ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್‌ವೈ ಅಧಿಕಾರಕ್ಕೆ ರಾಜೀನಾಮೆ ನೀಡಿದರು. ʼಬಿಎಸ್‌ವೈ 75ʼ ಕಾರಣ ನೀಡಿ, ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಯಡಿಯೂರಪ್ಪ ಲಿಂಗಾಯತ ಸ್ವಾಮಿಗಳ ಬೆಂಬಲದಿಂದ ತಾನೊಬ್ಬ ಲಿಂಗಾಯತ ಸಮುದಾಯದ ನಾಯಕ, ತನ್ನನ್ನು ನಿರಾಕರಿಸಿದರೇ, ಬಿಜೆಪಿಗೆ ಉಳಿಗಾಲವಿಲ್ಲ ಎಂಬ ಖಡಕ್‌ ಸಂದೇಶವನ್ನು ಹೈಕಮಾಂಡ್‌ಗೆ ತಿಳಿಸುವ ಪ್ರಯತ್ನ ಮಾಡಿದರು. ಹೈಕಮಾಂಡ್‌ಗೆ ಯಡಿಯೂರಪ್ಪ ಅವರ ಸಾಮರ್ಥ್ಯ ಅರಿವಾಯಿತು. ಬಿಎಸ್‌ವೈ ಶಿಫಾರಸ್ಸಿನ ಮೇಲೆಯೇ ಲಿಂಗಾಯತ ಸಮುದಾಯದ ಬಸವರಾಜ್‌ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು, ಬಿಎಸ್‌ವೈ ಅವರನ್ನು ಸಮಾಧಾನ ಪಡಿಸಲು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಂಡಿತು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ವೈ ಶಿಫಾರಸ್ಸಿನ ಮೇಲೆಯೇ ಅಭ್ಯರ್ಥಿಗಳಿಗೆ ಹೈಕಮಾಂಡ್ ಮಣೆ ಹಾಕಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡರೂ ವಿಧಾನಸಭಾ ಪ್ರತಿಪಕ್ಷದ ನಾಯಕ, ವಿಧಾನ ಪರಿಷತ್‌  ಪ್ರತಿಪಕ್ಷದ ನಾಯಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಬಿಎಸ್‌ವೈ ಶಿಫಾರಸ್ಸಿಗೆ ಹೈಕಮಾಂಡ್‌ ಅಸ್ತು ಎಂದಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಬಿಎಸ್‌ವೈ ಮಾತಿಗೆ ಮಾನ್ಯತೆ ದೊರಕಿತು. ಲೋಕಸಭಾ ಚುನಾವಣಾ ಪೂರ್ವದಲ್ಲೇ ಜೆಡಿಎಸ್‌ ಜೊತೆಗೆ ಬಿಜೆಪಿ ಮೈತ್ರಿಮಾಡಿಕೊಂಡರೂ ಏನೂ ಫಲಕೊಡಲಿಲ್ಲ. ಮೈತ್ರಿಯ ಕಾರಣದಿಂದ ಬಿಜೆಪಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂಬ ಬಿಜೆಪಿಯ ವಿಶ್ವಾಸ ಹುಸಿಯಾಯಿತು. ಲಿಂಗಾಯತ ಸಮುದಾಯದ ಮತ ಪ್ರಾಬಲ್ಯ ಹೆಚ್ಚಿರುವ ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ನಿರೀಕ್ಷೆಯ ಮತ ತಂದುಕೊಡದೆ ಇರುವುದು ಹಾಗೂ ಕಲ್ಯಾಣ ಕರ್ನಾಟಕದ ಐದಕ್ಕೆ ಐದೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿರುವುದು ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಸೂಚನೆಯೇ ಎನ್ನುವ ಪ್ರಶ್ನೆ ಮುಂದಿರಿಸಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ನಡುವೆಯೂ ಬಿಜೆಪಿ 17 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಆ ಶ್ರೇಯ ತಮ್ಮದು ಎಂಬ ಸಂದೇಶ ರವಾನಿಸುವುದಕ್ಕೆ ಪ್ರಯತ್ನಿಸಿದ ಬಿಎಸ್‌ವೈ ಹಾಗೂ ವಿಜಯೇಂದ್ರ ಅವರಿಗೆ ಕೇಂದ್ರದ ಮಂತ್ರಿಗಿರಿ ಆಯ್ಕೆ ಮುಖಭಂಗ ಉಂಟುಮಾಡಿದೆ. ಮಂತ್ರಿಗಿರಿ ನೀಡುವ ವಿಚಾರದಲ್ಲಿ ಬಿಎಸ್‌ವೈ ಮಾತನ್ನು ಗಣನೆಗೂ ತೆಗೆದುಕೊಳ್ಳದೆ, ಬಿಎಸ್‌ವೈಗೆ ಬಿಜೆಪಿ ಉಪಕಾರ ಸ್ಮರಣೆ ತೀರಿಸಿ ಆಗಿದೆ ಎಂಬ ಧೋರಣೆಯಲ್ಲಿ ಹಿರಿಯ ಪ್ರಭಾವಿ ಲಿಂಗಾಯತ ನಾಯಕ ವಿ. ಸೋಮಣ್ಣ ಅವರಿಗೆ ಮಂತ್ರಿಗಿರಿ ನೀಡಿದ್ದು ಬಿಎಸ್‌ವೈ ವಿರೋಧ ಬಣಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು, ಯಡಿಯೂರಪ್ಪರ ರಾಜಕೀಯ ಶಕೆಗೆ ಅಂತ್ಯ ಚುಕ್ಕಿ ಇಡುವುದಕ್ಕೆ ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದಂತಿದೆ.

-ಶ್ರೀರಾಜ್‌ ವಕ್ವಾಡಿ  

Wednesday, June 5, 2024

ದಬ್ಬಾಳಿಕೆ ರಾಜಕಾರಣವನ್ನು ತಿರಸ್ಕರಿಸಿದ ಪ್ರಜಾಪ್ರಭುತ್ವ !

ರಾಜ್ಯದಲ್ಲಿ ಫಲಿಸದ ಜೆಡಿಎಸ್‌ ಜೊತೆಗಿನ ಮೈತ್ರಿ | ಸಿದ್ದರಾಮಯ್ಯ ಕುರ್ಚಿ ಭದ್ರ 

ಶ್ರೀರಾಮ ಮಂದಿರ, ಭಾರತೀಯ ಮುಸ್ಲೀಮರ ಬಗ್ಗೆ ದ್ವೇಷದ ಭಾಷಣಗಳು ಯಾವುವೂ ಬಿಜೆಪಿಗೆ  400 ಕ್ಷೇತ್ರಗಳನ್ನು ತಂದುಕೊಡಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಸರ್ವಾಧಿಕಾರಿ ಧೋರಣೆಯ ಸರ್ಕಾರದ ಹುಟ್ಟಡಗಿಸಿದೆ. ಶ್ರೀರಾಮನ ನಾಡು ಉತ್ತರ ಪ್ರದೇಶದ ಫಲಿತಾಂಶ ಬಿಜೆಪಿ ದೇಶದಲ್ಲಿ ವಿಶ್ವಾಸ ಕಳೆದುಕೊಂಡಿದೆ ಎನ್ನುವುದನ್ನು ತಿಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ  ದೇಶದ ಜನರು  ದಬ್ಬಾಳಿಕೆಯ ರಾಜಕಾರಣವನ್ನು ಒಪ್ಪುವುದಿಲ್ಲ ಎಂದು ಪಾಠ ಕಲಿಸಿದಂತಿದೆ. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 400 ಕ್ಷೇತ್ರಗಳನ್ನು ಹಾಗೂ ಎನ್‌ಡಿಎ ಮೈತ್ರಿಕೂಟ ೪೦೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತದೆ ಎಂದು ಹೇಳಿದ್ದ ಮೋದಿಗೆ ತೀವ್ರ ಮುಖಭಂಗವಾಗಿದೆ. ಮೋದಿ ಸ್ವತಃ ಈ ಬಾರಿ ವಾರಣಾಸಿಯಲ್ಲಿ ಕೇವಲ  1,52,513 ಮತಗಳ ಅಂತರದಲ್ಲಿ ಗೆದ್ದಿರುವುದು ಹಾಗೂ ಬಿಜೆಪಿ ಭದ್ರಕೋಟೆ ಎಂದು ಗುರುತಿಸಿಕೊಂಡಿರುವ ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ ಕೇವಲ 33 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ವ್ಯಕ್ತಿ ಆರಾಧನೆ, ಧರ್ಮ ರಾಜಕಾರಣವನ್ನು ಸುದೀರ್ಘ ಕಾಲದವರೆಗೆ ದೇಶದ ಜನ ಒಪ್ಪುವುದಿಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ.

ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಹಲವು ಹಾಲಿ ಸಂಸದರಿಗೆ ಕೋಕ್‌ ಕೊಟ್ಟು ಯುವ ನಾಯಕರನ್ನು ಕಣಕ್ಕಿಳಿಸಿ ಬಿಜೆಪಿ ಮಾಡಿದ ತಂತ್ರಗಾರಿಕೆ ʼಮ್ಯಾಜಿಕ್‌ ನಂಬರ್‌ʼ ದಾಟಲು ಸಹಕಾರಿಯಾಗಿಲ್ಲ. ಮೋದಿ, ಅಮಿತ್‌ ಶಾ ಜೋಡಿ ʼವಿಕಸಿತ ಭಾರತʼ ಕಲ್ಪನೆಯ ಜೊತೆಗೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯ ಶ್ರೀರಾಮ ಮಂದಿರದಂತಹ ಯಾವುದೇ ರಾಜಕೀಯ ತಂತ್ರಗಾರಿಕೆ ಬಿಜೆಪಿಗೆ ಲಾಭ ತಂದುಕೊಟ್ಟಿಲ್ಲ. ಲೋಕಸಭಾ ಚುನಾವಣೆಗೂ ಮುನ್ನಾ ʼಇಂಡಿಯಾʼ ಮೈತ್ರಿಕೂಟದ ಭಾಗವಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಎನ್‌ಡಿಎಗೆ ಎಳೆದುಕೊಂಡಿದ್ದು, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಗೆ ಸೇರಿದ್ದರಿಂದ ತುಸು ಮಾನ  ಉಳಿಯಿತು. ಒಂದು ಹಂತದಲ್ಲಿ ಬಿಜೆಪಿ ಸೋತು ಗೆದ್ದಿತು, ಕಾಂಗ್ರೆಸ್‌ ಗೆದ್ದು ಸೋತಿದೆ. ಆದರೇ, ಬಿಜೆಪಿಯ ʼಕಾಂಗ್ರೆಸ್‌ ಮುಕ್ತ ಭಾರತʼದ ಕನಸು ಅಕ್ಷರಶಃ ಸುಳ್ಳಾಗಿದೆ.   

ಶ್ರೀರಾಮ ಮಂದಿರದ ಹೆಸರಿನಲ್ಲಿ ಸಾರ್ವಕಾಲಿಕ ಸಾಧನೆ ಮಾಡುತ್ತೇವೆಂದು ಚುನಾವಣೆ ಎದುರಿಸಿದ ಬಿಜೆಪಿಗೆ ತೀವ್ರ ಮುಖಭಂಗವಾಗಿರುವುದಂತೂ ಸತ್ಯ. ಉತ್ತರ ಪ್ರದೇಶದಲ್ಲೇ ದಲಿತ, ಯಾದವ, ಹಿಂದುಳಿದ ವರ್ಗ ಹಾಗೂ ಮುಸ್ಲೀಂ ಮತಗಳ ಕ್ರೋಢಿಕರಣದಿಂದ ʼಇಂಡಿಯಾʼ ಮೈತ್ರಿಕೂಟಕ್ಕೆ ಹೆಚ್ಚಿನ ಕ್ಷೇತ್ರಗಳು ಒಲಿದಿವೆ. ಅಯೋಧ್ಯೆ ಇರುವ ಫೈಜಾಬಾದ್‌ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಬಾರಿ ಅಂತರದಿಂದ ಸೋಲು ಕಂಡಿದ್ದು ಬಿಜೆಪಿಗರ ಬಾಯಿ ಮುಚ್ಚಿಸಿದೆ. ಇನ್ನು, ಕೇಂದ್ರದ ಅಧಿಕಾರ ಹಿಡಿಯುವುದಕ್ಕೆ ಸಹಕಾರಿ ಆಗುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳಲ್ಲೇ ದೊಡ್ಡ ಮಟ್ಟದ ಹಿನ್ನೆಡೆ ಆಗಿರುವುದು ದೇಶದಾದ್ಯಂತ ಬಿಜೆಪಿ ತನ್ನ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಹಿಡಿದ ಕನ್ನಡಿ.

ರಾಜ್ಯದಲ್ಲಿ ಫಲಿಸದ ಜೆಡಿಎಸ್‌ ಜೊತೆಗಿನ ಮೈತ್ರಿ :

ಹಿರಿಗೌಡರ ಜೆಡಿಎಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಇಲ್ಲಿನ ಬಿಜೆಪಿಯವರಿಗೆ ಇಷ್ಟವಿಲ್ಲದೇ ಇದ್ದರೂ, ಹೈಕಮಾಂಡ್‌ ಮಾತಿಗೆ ತಲೆಬಾಗಲೇಬೇಕಾಯ್ತು. ಚುನಾವಣಾ ಪ್ರಚಾರಗಳಲ್ಲಿ ಜೆಡಿಎಸ್‌ ಮೈತ್ರಿಯ ಕಾರಣದಿಂದ ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಯ್ತು. ರಾಜ್ಯದಲ್ಲಿ ಬಿಜೆಪಿಯ ಅತಿಯಾದ ಆತ್ಮ ವಿಶ್ವಾಸವೇ ಮುಳುವಾಯಿತು.

ಇನ್ನು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ತಲಾ ಒಂದೊಂದು ಕ್ಷೇತ್ರಗಳನ್ನಷ್ಟೇ ಗೆಲ್ಲುವಲ್ಲಿ ಸಾಧ್ಯವಾಗಿತ್ತು. ಆಗಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌ ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಕಾಂಗ್ರೆಸ್‌ ದೇಶದಾದ್ಯಂತ ದುರಿತ ಕಾಲ ಅನುಭವಿಸುತ್ತಿದ್ದ ಸಂದರ್ಭವದು. ಮೋದಿ ಶುಕ್ರ ದೆಸೆಯನ್ನು ಅನುಭವಿಸುತ್ತಿದ್ದ ಕಾಲ. ರಾಜ್ಯದಲ್ಲಿಯೂ ಮೋದಿ ಹವಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಪಡೆದುಕೊಂಡಿತ್ತು. ಮುಂದೆ ಕೆಲವು ತಿಂಗಳಲ್ಲಿ ಬಿ.ಎಸ್‌. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಒಡೆಯುವಲ್ಲಿ ಯಶಸ್ವಿಯಾದರು. ಮುಂದಿನದ್ದು ರಾಜಕೀಯ ಇತಿಹಾಸ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಕಾಂಗ್ರೆಸ್‌, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದರೂ, ಜನ ಉಪಕಾರ ಸ್ಮರಣೆ ಲೋಕಸಭಾ ಚುನಾವಣೆಯಲ್ಲಿ ತೋರಿಲ್ಲ. ಹಾಗೆ ನೋಡುವುದಾದರೇ, 2014ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಂತಹ ಯಾವ ಯೋಜನೆಗಳಿಲ್ಲದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಗ್ಯಾರಂಟಿ ಯೋಜನೆಗಳು ಇದ್ದರೂ ಕೂಡ ಕಾಂಗ್ರೆಸ್‌ ನಿರೀಕ್ಷೆಯಷ್ಟು ಕ್ಷೇತ್ರಗಳು ಲಭಿಸಿಲ್ಲ. ಗ್ಯಾರಂಟಿ ಯೋಜನೆಗಳು ವಿಫಲವೇ ? ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ಕನಿಷ್ಠ ಡಬಲ್‌ ಡಿಜಿಟ್ ಮೀರುವ ಕಾಂಗ್ರೆಸ್‌ ನಿರೀಕ್ಷೆಗಳಿಗೆ ಗ್ಯಾರಂಟಿ ಯೋಜನೆಗಳು ಫಲ ನೀಡದೆ ಇರುವುದು, ಕಾಂಗ್ರೆಸ್‌ ತನ್ನನ್ನು ತಾನು ಪರಾಮರ್ಶಿಸಿಕೊಳ್ಳುವಂತೆ ಮಾಡಿದೆ.

ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಭದ್ರ :

ಲೋಕಸಭಾ ಚುನಾವಣೆಯ ಬಳಿಕ ಸಿಎಂ ಬದಲಾವಣೆಯ ವಿಚಾರ ಕೆಲವು ವಾರಗಳ ಹಿಂದೆ ಮುನ್ನೆಲೆಗೆ ಬಂದಿತ್ತು, ಡಿಕೆಶಿ ಸಿಎಂ ಹುದ್ದೆಗೇರುವ ಹುಮ್ಮಸ್ಸಿನಲ್ಲಿದ್ದಿದ್ದರು. ಆದರೇ, ಈಗ ಆ ವಿಚಾರ ಗೌಣವಾದಂತೆ ಕಾಣಿಸುತ್ತಿದೆ. ಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಸಿಎಂ ಮತ್ತು ಡಿಸಿಎಂ ಅವರ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿ ಅವರ ರಾಜಕೀಯ ವರ್ಚಸ್ಸು ಕೆಲಸಕ್ಕೆ ಬಾರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್‌ ಹೀನಾಯ ಸೋಲನುಭವಿಸಿದ್ದು, ತೀವ್ರ ಮುಖಭಂಗವಾಗಿದೆ. ಡಿಕೆ ಸುರೇಶ್‌ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸಂಸದರೇ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಆದರೇ, ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಡಾ. ಸಿಎನ್‌ ಮಂಜುನಾಥ್‌ ಅವರ ಎದರು ಸೋತಿದ್ದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ನೋವಾಗಿದೆ.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣ, ತವರು ಜಿಲ್ಲೆ ಮೈಸೂರಿನ ಸೋಲು ಮುಖಭಂಗವಾದರೂ, ತಮ್ಮ ವರುಣಾ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಚಾಮರಾಜನಗರದ ಗೆಲುವು ಸಿಎಂ ಗೆ ತುಸು ಸಮಧಾನ ತಂದಿದೆ. ಕರಾವಳಿಯ ಎಲ್ಲಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ʼಕಾಂಗ್ರೆಸ್‌ ಗ್ಯಾರಂಟಿʼ ಬೇಡ, ʼಮೋದಿ ಗ್ಯಾರಂಟಿʼ ಸಾಕು ಎಂಬಂತಿದೆ.

ಹಳೆ ಮೈಸೂರು ಪ್ರಾಂತ್ಯದ ಚಾಮರಾಜನಗರ, ಹಾಸನ, ಮಧ್ಯ ಕರ್ನಾಟಕದ ದಾವಣಗೆರೆ, ಮುಂಬೈ ಕರ್ನಾಟಕದ ಚಿಕ್ಕೋಡಿ, ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರುಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳ ಗೆಲುವು ತುಸು ಸಮಾಧಾನ ತರಿಸಿದೆ ಎಂಬಂತೆ ಕಾಣಿಸುತ್ತಿದೆ. ಈ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಪ್ರಭಾವ ಹೆಚ್ಚಿದ್ದರೂ, ಅಂಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರಗಳ ಗೆಲುವಿನ ಶ್ರೇಯವನ್ನು ಪಡೆದುಕೊಳ್ಳಬಹುದು. ʼಅಹಿಂದʼ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ತನ್ನ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿದೆ ಎಂದು ಹೈಕಮಾಂಡ್‌ ಮುಂದಿಟ್ಟು ತಮ್ಮ ಕುರ್ಚಿಯನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು. ಲೋಕಸಭಾ ಚುನಾವಣೆಯಿಂದ ಡಿಕೆಶಿ ಪ್ರೊಫೈಲ್‌ ವೃದ್ಧಿಸಿದಂತೆ ಕಾಣಿಸುತ್ತಿಲ್ಲ. ಹಾಗಾಗಿ ಡಿಕೆಶಿ ಸಿಎಂ ಕನಸು ಸದ್ಯಕ್ಕಂತೂ ನನಸಾಗುವುದು ಕಷ್ಟ.

-ಶ್ರೀರಾಜ್‌ ವಕ್ವಾಡಿ