ಜೀವನ ಕೊಡುವ ಅನಗತ್ಯ ನೋವುಗಳನ್ನು ಸಹಿಸಿಕೊಳ್ಳುವ ಎದೆಗಾರಿಕೆ ಬಹುಷಃ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹುಡುಗರಿಗಷ್ಟೇ ಇರುತ್ತದೆನೋ ಅಂತ ಮತ್ತೆ ಮತ್ತೆ ಅನ್ನಿಸಿದ್ದು ಪರಮೇಶ್ವರ ಗುಂಡ್ಕಲ್ ರಚಿಸಿ ನಿರ್ದೇಶಿಸಿದ, ಡಾಲಿ ಧನಂಜಯ್ ಅಭಿನಯದ 'ಕೋಟಿ' ಸಿನೆಮಾದಿಂದ.
ಹೆಜ್ಜೆ ಇಟ್ಟಲ್ಲೆಲ್ಲಾ ಅಪ್ರಾಮಾಣಿಕತೆಯೇ ಕಾಣುತ್ತಿರುವುದರ ನಡುವೆ ಪ್ರಾಮಾಣಿಕತೆಯಿಂದಲೇ ಬದುಕು ರೂಪಿಸಿಕೊಳ್ಳಲು ಪ್ರಯತ್ನಿಸುವ ಹುಡುಗನೊಬ್ಬ ಎದುರಾಗುವ ಇರುಳ ದಾರಿಯ ಕಷ್ಟ ವ್ಯೂಹಗಳ ನಡುವೆಯೂ ರಾಜಿ ಮಾಡಿಕೊಳ್ಳದೇ ಬದುಕನ್ನು ಗೆಲ್ಲಿಸಿಕೊಳ್ಳುವ ಭರವಸೆಯಲ್ಲೇ ದಿನದೂಡುವ ಕಥೆಯುಳ್ಳ ಸಿನೆಮಾವಿದು.
ತನ್ನದಲ್ಲದ ತಪ್ಪನ್ನು ಹೊತ್ತುಕೊಂಡು ನಡೆಯುವಂತಹ, ಇಕ್ಕಟ್ಟಿಗೆ ಸಿಲುಕಿದರೂ ಪ್ರಾಮಾಣಿಕತೆಯಿಂದಲೇ ಪ್ರತಿಕ್ರಿಯಿಸುವವರೆಗೆ ಕಾಯುವ ತಾಳ್ಮೆ, ಮನಸ್ಥಿತಿ ಈ ಕಾಲದಲ್ಲಿದೆಯೇ ಎನ್ನುವ ಪ್ರಶ್ನೆಯನ್ನು ಸಿನೆಮಾ ಮುಂದಿರಿಸಿದರೂ ಪ್ರತಿ ಕ್ಷಣದ ಪ್ರಯತ್ನದ ಹೋರಾಟದ ಬದುಕಿನ ಕಥೆ ಇಷ್ಟವಾಗುತ್ತದೆ.
ಬಹುಷಃ ನಮ್ಮಂತಹ ಕೆಳ ಮಧ್ಯಮ ವರ್ಗದವರು ಕಂಡ, ಅನುಭವಿಸಿದ ಕಾರ್ಗತ್ತಲ ದಾರಿಯನ್ನು ಪರಮೇಶ್ವರ್ ಬಹಳ ಚೆನ್ನಾಗಿ ಆಪ್ತವೆನ್ನಿಸುವ ಹಾಗೆ ಕಟ್ಟಿಕೊಟ್ಟಿದ್ದಾರೆ.
ಸಿನೆಮಾ ಎಲ್ಲಿಯೂ ಚಿತ್ತವಿಕ್ಷೇಪಗೊಳಿಸುವುದಿಲ್ಲ. ಹಾಡುಗಳು, ಸಂಭಾಷಣೆಗಳು, ಪ್ರತಿ ಸನ್ನಿವೇಶಗಳು ತೀರಾ ಹಿಡಿಸುತ್ತವೆ.
ಸಿನೆಮಾ ಚೆನ್ನಾಗಿದೆ. ನೋಡಿ.
-ಶ್ರೀರಾಜ್ ವಕ್ವಾಡಿ

No comments:
Post a Comment