ಗೆಲ್ಲುವ ಕುದುರೆಗ್ಯಾಕಿಲ್ಲಿ ಆತಂಕ ? | ಮೋದಿ ಜನಪ್ರಿಯತೆ ಮತ್ತು ಸವಾಲುಗಳು
ಲೋಕಸಭಾ ಚುನಾವಣೆಯ ಬಿಸಿ ಜೋರಾಗಿದೆ. ರಾಜಕೀಯ,
ಸೈದ್ಧಾಂತಿಕ ನಿಲುವುಗಳು, ರಾಜಕೀಯ ಪ್ರೇರಿತ ಚರ್ಚೆಗಳು ಚುನಾವಣೆಯ ಸಂದರ್ಭದಲ್ಲಿ ವೇಗ ಪಡೆದುಕೊಳ್ಳುವುದು
ತೀರಾತಿಸಹಜ. ʼಇಂಡಿಯಾʼ ಮೈತ್ರಿಕೂಟ ಅನಿಶ್ಚಿತತೆಯಲ್ಲಿದೆ ಎನ್ನುವುದರ ನಡುವೆ ʼಮತ್ತೆ ದೊಡ್ಡ ಆಘಾತʼ
ಎನ್ನಿಸಿಕೊಂಡ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂಬಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆಗೆ
ನಿರ್ಣಾಯಕ ರಾಜ್ಯ ಎಂದೇ ಕರೆಯಲ್ಪಡುವ ಉತ್ತರಪ್ರದೇಶದಲ್ಲಿ ʼಇಂಡಿಯಾʼ ಮೈತ್ರಿಕೂಟ ವಿನಾಶದ ಹಾದಿಯಲ್ಲಿದೆ
ಎಂಬ ಭವಿಷ್ಯ ನುಡಿದವರಿಗೆ ಅಲ್ಲಾದ ʼಇಂಡಿಯಾʼ ಮೈತ್ರಿಕೂಟದ ರಾಜಕೀಯ ಬೆಳವಣಿಗೆ ತೀವ್ರ
ನಿರಾಶೆಯನ್ನುಂಟು ಮಾಡಿರಬಹುದು.
ಹೌದು, ಕಾಂಗ್ರೆಸ್
ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಸುಮಾರಷ್ಟು ಗೊಂದಲಗಳನ್ನು ಮೀರಿ ಸೀಟು ಹಂಚಿಕೆಯ ತಾರ್ಕಿಕ ಅಂತ್ಯಕ್ಕೆ ಬಂದಿವೆ. ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ
ಸ್ಪರ್ಧಿಸಲಿದೆ ಮತ್ತು ಉಳಿದವುಗಳನ್ನು ಎಸ್‌ಪಿ ಮತ್ತು ಮೈತ್ರಿಕೂಟದ
ಇತರೆ ಸಣ್ಣ ಪಕ್ಷಗಳು ಎದುರಿಸಲಿವೆ. ಮಧ್ಯಪ್ರದೇಶದಲ್ಲಿ ಎಸ್‌ಪಿಗೆ ಇನ್ನೂ ಒಂದು
ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್
ನಿರ್ಧರಿಸಿದೆ, ಇದು ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ನಂತರ ಕಾಂಗ್ರೆಸ್ ತುರ್ತಾಗಿ ಕಲಿಯಲೇ ಬೇಕಾದ ಪಾಠವನ್ನು
ಕಲಿಯುವ ಹಾದಿಯಲ್ಲಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಯುಪಿ ಏಕೆ ಒಂದು ಪ್ರಮುಖ
ರಾಜ್ಯ ?
ಕೇಂದ್ರದಲ್ಲಿ ಆಡಳಿತ
ನಡೆಸುವ ಗುರಿ ಹೊಂದಿರುವ ಯಾವುದೇ ಪಕ್ಷಕ್ಕೆ ಉತ್ತರಪ್ರದೇಶ ನಿರ್ಣಾಯಕ ರಾಜ್ಯವಾಗಿದೆ. 2014ರಲ್ಲಿ, ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದಾಗ,
ಅವರು ಗುಜರಾತ್‌ನ ವಡೋದರಾ ಜೊತೆಗೆ ವಾರಣಾಸಿಯಿಂದ ಸ್ಪರ್ಧಿಸಲು
ನಿರ್ಧರಿಸಿದರು. ಎರಡೂ ಕ್ಷೇತ್ರಗಳನ್ನು
ಗೆದ್ದ ನಂತರ, ಅವರು ವಾರಣಾಸಿಯನ್ನು ಆಯ್ಕೆ ಮಾಡಿದರು ಮತ್ತು ವಡೋದರವನ್ನು ಬಿಟ್ಟುಕೊಟ್ಟರು. ಉತ್ತರ
ಪ್ರದೇಶದಲ್ಲಿ ಗಣನೀಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲದೆ, ಪ್ರಧಾನಿಯಾಗುವ ತಮ್ಮ ಜೀವಿತಾವಧಿಯ ಗುರಿಯನ್ನು ಈಡೇರಿಸುವುದು
ಅಸಾಧ್ಯವೆಂದು ಮೋದಿ ತಿಳಿದಿದ್ದರು. ನಂತರ ಬಿಜೆಪಿ ಉತ್ತರ ಪ್ರದೇಶದ ಚುನಾವಣೆಯ ಮೇಲ್ವಿಚಾರಣೆಗೆ
ಅಮಿತ್ ಶಾ ಅವರನ್ನು ನೇಮಿಸಿದ್ದು ಕಾಕತಾಳೀಯವೇನಲ್ಲ.
ಪಕ್ಷವು 80 ಲೋಕಸಭಾ ಕ್ಷೇತ್ರಗಳಲ್ಲಿ 71 ಕ್ಷೇತ್ರಗಳನ್ನು ಗೆದ್ದುಕೊಂಡಿತು ಮತ್ತು ಅದರ ಮಿತ್ರ
ಪಕ್ಷವಾದ ಅಪ್ನಾ ದಳವು ಎರಡು ಕ್ಷೇತ್ರಗಳನ್ನು ಪಡೆದುಕೊಂಡಿತು. ಕೇವಲ
ಎರಡು ವರ್ಷಗಳ ಹಿಂದೆ, 2012ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ಶೇ.15 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೋದಿ-ಶಾ ಜೋಡಿಯು
ಎಸ್‌ಪಿ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಕ್ಷಗಳಿಗೆ
ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೂರು ಮತ್ತು
ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿತ್ತು
ಎನ್ನುವುದಿಲ್ಲಿ ಉಲ್ಲೇಖಾರ್ಹ.
ಒಂದನೇ ಲೋಕಸಭಾ (೧೯೫1-೫೨) ಚುನಾವಣೆಯಲ್ಲಿ
೮೬ ಲೋಕಸಭಾ ಕ್ಷೇತ್ರಗಳಲ್ಲಿ ೮೧ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು. ೧೯೫೭ರ ಚುನಾವಣೆಯಲ್ಲಿ
೭೨, ೧೯೬೨ರ ಲೋಕಸಭಾ ಚುನಾವಣೆಯಲ್ಲಿ ೬೨, ೧೯೬೭ ರಲ್ಲಿ ೪೮, ೧೯೭೧ರಲ್ಲಿ ೭೩ ಲೋಕಸಭಾ ಕ್ಷೇತ್ರಗಳನ್ನು
ಪಡೆದುಕೊಂಡಿತ್ತು ಕಾಂಗ್ರೆಸ್, ೧೯೭೭ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷಾ ೮೫ಕ್ಕೆ ೮೫ ಲೋಕಸಭಾ
ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು ಎನ್ನುವುದು ಉಲ್ಲೇಖಾರ್ಹ. ಆ ಬಳಿಕ ೧೯೮೦ರ ಲೋಕಸಭಾ ಚುನಾವಣೆಯಲ್ಲಿ ಚೇತರಿಸಿಕೊಂಡ ಕಾಂಗ್ರೆಸ್
೫೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ೧೯೮೪ರಲ್ಲಿ ೮೩, ೧೯೮೯ರಲ್ಲಿ ಕಾಂಗ್ರೆಸ್ ಕೇವಲ ೧೫ ಕ್ಷೇತ್ರಗಳಿಗೆ
ತೃಪ್ತಿ ಪಟ್ಟುಕೊಂಡಿತ್ತು, ಬಿಜೆಪಿಯ ಉಗಮ, ಎಂಟು ಕ್ಷೇತ್ರಗಳನ್ನು ಪಡೆದುಕೊಂಡಿತ್ತು, ಜೆಡಿ ಬರೋಬ್ಬರಿ
೫೪ ಕ್ಷೇತ್ರಗಳನ್ನು ಗೆದ್ದಿತ್ತು. ಇಲ್ಲಿಂದ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಳ್ಳಲಾರಂಭಿಸಿತ್ತು.
೧೯೯೧ರಲ್ಲಿ ೮೫ ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ೫ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ
ತೃಪ್ತಿಪಟ್ಟುಕೊಂಡಿತು. ಬಿಜೆಪಿ ೫೧ ಕ್ಷೇತ್ರಗಳ ಗೆಲುವಿನೊಂದಿಗೆ ಎತ್ತರಕ್ಕೆ ಜಿಗಿದಿತ್ತು. ೧೯೯೬ರಲ್ಲಿ
ಕಾಂಗ್ರೆಸ್ ೫, ಬಿಜೆಪಿ ೫೨, ೧೯೯೮ರಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ, ಬಿಜೆಪಿ ೫೯ ಕ್ಷೇತ್ರಗಳಲ್ಲಿ
ಗೆಲುವು, ೧೯೯೯ರಲ್ಲಿ ಕಾಂಗ್ರೆಸ್ ೧೦, ಬಿಜೆಪಿ ೨೯, ಎಸ್ಪಿ ೩೫, ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್
೯, ಬಿಜೆಪಿ ೧೦ ಹಾಗೂ ಎಸ್ಪಿ ೩೫, ಬಿಎಸ್‌ಪಿ ೧೯ ಕ್ಷೇತ್ರಗಳಲ್ಲಿ ಗೆಲುವು, ೨೦೦೯ರ ಲೋಕಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ೨೨, ಬಿಜೆಪಿ ೧೦, ಎಸ್ಪಿ ೨೨, ಬಿಎಸ್‌ಪಿ ೨೦ ಕ್ಷೇತ್ರಗಳಲ್ಲಿ, ೨೦೧೪ರಲ್ಲಿ ಮೋದಿ ಹವಾ,
ಹಿಂದುತ್ವದ ಪರಾಕಾಷ್ಠೆ, ಬಿಜೆಪಿ ೮೦ ಲೋಕಸಭಾ ಕ್ಷೇತ್ರಗಳ ಪೈಕಿ ೭೧ ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡು
ಮಹಾಜಯ ಸಾಧಿಸಿತ್ತು. ಕಾಂಗ್ರೆಸ್ ೨ ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡರೆ, ಎಸ್ಪಿ ೫, ಎಡಿಎಸ್
೨ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೬೨ ಕ್ಷೇತ್ರಗಳಲ್ಲಿ ಬಿಜೆಪಿ,
ಕಾಂಗ್ರೆಸ್ ೧, ಬಿಎಸ್‌ಪಿ ೧೦, ಎಸ್‌ಪಿ ೫, ಎಡಿಎಸ್ ೨ ಕ್ಷೇತ್ರಗಳಲ್ಲಿ ನಗು ಬೀರಿದ್ದವು. ಉತ್ತರ
ಪ್ರದೇಶದ ಬಿಜೆಪಿಯ ಭದ್ರಕೋಟೆಯಾಗಿ ಬದಲಾಯಿತು.
ಕ್ಷೀಣಿಸುತ್ತಿರುವ ಬಿಎಸ್‌ಪಿ
2022 ರ
ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಪ್ರಭಾವಶಾಲಿ ಶೇ. 32ಮತಗಳನ್ನು ಗಳಿಸಿತು, ಅದರ ಅತ್ಯುತ್ತಮ ಸಾಧನೆಯನ್ನು ನಿರಾಕರಿಸುವಂತಿಲ್ಲ. ಅಖಿಲೇಶ್ ಯಾದವ್
ಜಾತಿ ಆಧಾರಿತ ಸಣ್ಣ ರಾಜಕೀಯ ಪಕ್ಷಗಳೊಂದಿಗೆ ಒಕ್ಕೂಟವನ್ನು ರಚಿಸಲು ಪ್ರಯತ್ನಿಸಿದ್ದರು,
ಆದರೂ ಚುನಾವಣೆಯ ನಂತರ ಆ ಒಕ್ಕೂಟವು ಉಳಿಯಲಿಲ್ಲ.
ಬಿಎಸ್‌ಪಿ ಮುಖ್ಯಸ್ಥೆ
ಮಾಯಾವತಿ ಕೆಲವು ನಿಗೂಢ ಕಾರಣಗಳಿಂದಾಗಿ 2024ರ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸುವ ಮೂಡ್‌ನಲ್ಲಿಲ್ಲ ಎಂದು ಕಾಣಿಸುತ್ತಿದೆ. ಅವರ
ಪಕ್ಷದ ಮತಗಳ ಪ್ರಮಾಣ ತೀವ್ರವಾಗಿ ಕುಸಿದಿದೆ. ಆದಾಗ್ಯೂ, ಬಿಎಸ್‌ಪಿ
ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ʼಇಂಡಿಯಾʼ
ಮೈತ್ರಿಕೂಟದಲ್ಲಿ ಮಾಯಾವತಿ ಇಲ್ಲದಿರುವುದು ಬಿಜೆಪಿಗೆ ಅನುಕೂಲವಾಗಿದೆ.
ಆದರೂ, ಈ ಬಾರಿ ಎಸ್‌ಪಿ-ಕಾಂಗ್ರೆಸ್ ಮೈತ್ರಿ ಬಿಜೆಪಿಯ ಬಲಕ್ಕೆ ಸರಿಸಮವಲ್ಲ ಎಂದು ತೀರ್ಮಾನಿಸುವುದು ತಪ್ಪು. ಬಿಜೆಪಿ ಕೂಡ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ.
ಬಿಜೆಪಿಯ ಜಾಣ ನಡೆ :
ʼಇಂಡಿಯಾʼ ಮೈತ್ರಿಕೂಟದಿಂದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವನ್ನು ದೂರವಿಡುವ ಬಿಜೆಪಿಯ ಪ್ರಯತ್ನವು ಇದನ್ನು ಒತ್ತಿಹೇಳುತ್ತದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆಯ ಹೊರತಾಗಿಯೂ, ರಾಜ್ಯದಲ್ಲಿ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳ ಕಾರ್ಯಕ್ಷಮತೆಯನ್ನು ಪುನರಾವರ್ತಿಸುವುದು
ಕಷ್ಟ ಎಂದು ಬಿಜೆಪಿಗೆ ಅರಿವಿದೆ.
ಜನವರಿಯಲ್ಲಾದ ರಾಮಮಂದಿರ ಲೋಕಾರ್ಪಣೆಯ
ಸಂಭ್ರಮ ಇಳಿಮುಖವಾದಂತಿದೆ.
ಮಂದಿರದ ಬಗೆಗಿನ ಉನ್ಮಾದ ಮತದಾನದ ವಿಚಾರದಲ್ಲಿ ಪ್ರತಿಫಲಿಸುವುದಿಲ್ಲ ಎಂಬುದನ್ನು
ಬಿಜೆಪಿ ತಿಳಿದಿದೆ. ಮಂದಿರ ನಿರ್ಮಾಣಕ್ಕಾಗಿ ಜನರು ಬಿಜೆಪಿಗೆ ಕೃತಜ್ಞತೆಯ ರೂಪದಲ್ಲಿ ಮತದಾನ ಮಾಡಬಹುದು ಅಷ್ಟೆ.
ಮಾಜಿ ಪ್ರಧಾನಿ ಚೌಧರಿ
ಚರಣ್ ಸಿಂಗ್ ಅವರಿಗೆ ಮೋದಿ
ಸರ್ಕಾರ ʼಭಾರತ ರತ್ನʼ ಘೋಷಿಸಿದೆ. ಸಿಂಗ್
ಅವರು ಜಾಟ್ ಸಮುದಾಯದಲ್ಲಿ ಭಾರಿ ಅನುಯಾಯಿಗಳನ್ನು ಹೊಂದಿರುವ ರೈತ ನಾಯಕರಾಗಿದ್ದರು. ʼಇಂಡಿಯಾʼ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ನಾಯಕ ಹಾಗೂ ಚೌಧರಿ ಚರಣ್
ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ಅವರು ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜತೆ ಕೈ ಜೋಡಿಸಿದ ಬೆನ್ನಲ್ಲೇ,
ಈ ಆಯ್ಕೆ ಪ್ರಕಟಿಸಲಾಗಿದೆ. ಚರಣ್ ಸಿಂಗ್ ಅವರಿಗೆ ಭಾರತ ರತ್ನ ಗೌರವ ನೀಡಬೇಕು
ಎಂದು ಆರ್‌ಎಲ್‌ಡಿ ಈ ಹಿಂದೆಯೇ ಕೇಂದ್ರವನ್ನು ಒತ್ತಾಯಿಸಿತ್ತು. ಅದೀಗ ಈಡೇರಿರುವುದು,
ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳ ಮೈತ್ರಿಯ ಪ್ರತಿಫಲವೇ ಸರಿ. ಇನ್ನು, ಜಯಂತ್
ಚೌಧರಿ ಮತ್ತು ಅಖಿಲೇಶ್ ಯಾದವ್ ಉತ್ತಮ ಸಂಬಂಧ ಹೊಂದಿದ್ದರು. ಅವರ ಸಂಬಂಧವನ್ನು ಎಂದಿಗೂ ಯಾರಿಂದಲೂ
ಬೇರ್ಪಡಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗಿತ್ತು. ಆರ್‌ಎಲ್‌ಡಿ ಪಶ್ಚಿಮ ಉತ್ತರ ಪ್ರದೇಶದಲ್ಲಿ
ಪ್ರಬಲವಾಗಿತ್ತು.
ವಿಶೇಷವಾಗಿ ಜಾಟ್ ಸಮುದಾಯದ
ಮತಗಳ ಪ್ರಾಬಲ್ಯದ ಪ್ರದೇಶಗಳಲ್ಲಿ, ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಈ ಮತಗಳು ಆರ್‌ಎಲ್‌ಡಿ ಪರವಾಗಿಯೇ
ಬರುತ್ತಿದ್ದವು. ಆದರೇ, ಜಯಂತ್ ಚೌಧರಿ ಈಗ ಬಿಜೆಪಿಯೊಂದಿಗೆ
ಕೈ ಜೋಡಿಸಿದ್ದಾರೆ. ಇದೇ ಕಾರಣದಿಂದಾಗಿ ಮುಂಬರುವ ಚುನಾವಣೆಯಲ್ಲಿ ಆರ್‌ಎಲ್‌ಡಿ, ಬಿಜೆಪಿ ಈ ಭಾಗದಲ್ಲಿ ತೀವ್ರ ಪ್ರತಿರೋಧವನ್ನು
ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ನ ಮೈತ್ರಿಯು ಲೋಕಸಭಾ ಚುನಾವಣೆಯ ವಿಚಾರದಲ್ಲಿ ಕುತೂಹಲ
ಸೃಷ್ಟಿಸಿದೆ.
ರೈತರ ಪ್ರತಿಭಟನೆಗಳು :
ರೈತರು ಮತ್ತೆ ಹೋರಾಟಕ್ಕೆ
ಇಳಿದಿದ್ದಾರೆ. ರೈತ
ಹೋರಾಟವು ಈ ಪ್ರದೇಶದಲ್ಲಿ ಭಾರಿ ಪರಿಣಾಮ ಬೀರಿದೆ. ರೈತರ
ಪ್ರತಿಭಟನೆಯ ಪರಿಣಾಮದಿಂದಾಗಿ ಮೋದಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕಾಯಿತು. ಆದರೆ ರೈತರ
ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೆಳೆಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನು
ಖಾತರಿ ನೀಡಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಸರ್ಕಾರ ಗೌರವಿಸಬೇಕು ಎಂದು ಅವರು
ಒತ್ತಾಯಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ, ಮೋದಿ ಸರ್ಕಾರವು ಈ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿತ್ತು,
ಆದರೆ 35ಕ್ಕೂ ಹೆಚ್ಚು ಸಭೆಗಳು ಕಳೆದರೂ ಯಾವುದೇ ಅಂತಿಮ ನಿರ್ಧಾರವನ್ನು
ತೆಗೆದುಕೊಂಡಿಲ್ಲ.ಇದು
ಬಿಜೆಪಿಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಮೋದಿ ಜನಪ್ರಿಯತೆ ಮತ್ತು ಸವಾಲುಗಳು :
ಮೋದಿ ದೇಶದ ಅತ್ಯಂತ
ಜನಪ್ರಿಯ ನಾಯಕ. ಹಿಂದುತ್ವದ ಐಕಾನ್ ಎಂಬ ಅವರ ಚಿತ್ರಣ ಅಖಂಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ದೇಶವನ್ನು ಸದೃಢ
ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಪ್ರಧಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಆದಾಗ್ಯೂ, ಯಾವುದೇ ಸರ್ಕಾರದ ವಿರುದ್ಧ 10 ವರ್ಷಗಳ ಆಡಳಿತ ವಿರೋಧ ಸಣ್ಣ ವಿಷಯವಲ್ಲ. ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಹಣದುಬ್ಬರ ಹೆಚ್ಚುತ್ತಿದೆ. ದೇಶದ ಮೇಲಿನ ಸಾಲದ ಹೊರೆ ನಿರಂತರ ಹೆಚ್ಚಳವಾಗುತ್ತಿದೆ.
ದೇಶದ ಸಾಲ ಈ ವರ್ಷ ೧೮೩.೬೭ ಲಕ್ಷ ಕೋಟಿಗೆ ಏರುವ ಸಾಧ್ಯತೆ ಇದೆ ಎನ್ನುವ ಒಂದು ವರದಿ ನಿಜಕ್ಕೂ ಆತಂಕ
ಮೂಡಿಸುತ್ತದೆ. ಉತ್ತರಪ್ರದೇಶ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಈ ವಿಚಾರ ಆತಂಕಕಾರಿಯಾಗಿ ಕಾಡುತ್ತಿದೆ.
ರಾಮ ಮಂದಿರದ ಉನ್ಮಾದ ಈ ಎಲ್ಲಾ ಸಮಸ್ಯೆಗಳನ್ನು ಮರೆ ಮಾಚುವಷ್ಟು ಶಕ್ತವಾಗಿಲ್ಲ ಎನ್ನುವ ಅರಿವು ಬಿಜೆಪಿಗಿದೆ.
ಅದಕ್ಕಾಗಿಯೇ ʼಮೋದಿ ಗ್ಯಾರಂಟಿʼಯಂತಹ ಕಸರತ್ತನ್ನು ಬಿಜೆಪಿ ಮಾಡುತ್ತಿದೆ. ಗೆಲ್ಲುವ ಕುದುರೆಯೇ ಆಗಿದ್ದರೂ,
ಹಿನ್ನಡೆಯ ಆತಂಕವೂ ಇದೆ. ಉಳಿದದ್ದು ನಿಮ್ಮ ಯೋಚನೆ ಮೀಸಲಿಟ್ಟಿದ್ದು.
-ಶ್ರೀರಾಜ್ ವಕ್ವಾಡಿ



