ಕೂಡಿ ಬರದ ಮೈತ್ರಿ ಮತ್ತು ಕಾಂಗ್ರೆಸ್ ಪಾಲಿನ ರಾಜಕಾರಣದ ವಿಷಘಳಿಗೆ !
ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಕಾಂಗ್ರೆಸ್‌ನ ಧೋರಣೆ ʼಬೇರು ಗಟ್ಟಿಯಾಗಿರದಿರುವಾಗ
ರೆಂಬೆ ಕೊಂಬೆಗಳು ಗಟ್ಟಿಯಾಗಿ ಬೆಳೆಯಬೇಕು ಎಂಬ ಹುಂಬತನʼದಂತಿದೆ ಎಂಬಂತೆ ಕಾಣಿಸುತ್ತಿದೆ. ಕಾಂಗ್ರೆಸ್
ನೇತೃತ್ವದಲ್ಲಿ ಹುಟ್ಟಿಕೊಂಡ ವಿರೋಧ ಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಈಗ ಆಂತರಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಯಾವುದೇ ಕಾರಣಕ್ಕೂ ಬಿರುಕು ಮೂಡಬಾರದು ಎಂದು
ಶಪತ ಮಾಡಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಈಗ ಅಪ್ಪ ಅಮ್ಮ ಇಲ್ಲದಂತಾಗಿದೆ.
ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ
ಬಂಗಾಳದಲ್ಲಿ "ಏಕ್ಲಾ ಚಲೋ ರೆ" ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಸ್ಪರ್ಧಿಸುವುದಾಗಿ
ಹೇಳಿದ್ದಾರೆ. ಮೈತ್ರಿಯಿಂದ ದೂರವಿದ್ದಂತೆ ಕಾಣಿಸುತ್ತಿದ್ದರೂ, ಇಲ್ಲ ಮೈತ್ರಿಯನ್ನು
ಮುರಿದುಕೊಂಡಿಲ್ಲ ಎಂದೇ ಕಾಂಗ್ರೆಸ್ ಹಿರಿತಲೆಗಳು ಹೇಳುತ್ತಿವೆ.
ಎಎಪಿ ಕೂಡ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿದೆ,
ಕಾಂಗ್ರೆಸ್‌ನೊಂದಿಗೆ ತಿಂಗಳುಗಳ ಅನಿರ್ದಿಷ್ಠಾವಧಿ ಮಾತುಕತೆಯನ್ನು ಕೊನೆಗೊಳಿಸಿ ಆಪ್
ಈ ನಿರ್ಧಾರಕ್ಕೆ ಬಂದಿದೆ. ನಿತೀಶ್ ಕುಮಾರ್, ʼಇಂಡಿಯಾʼ ಮೈತ್ರಿಕೂಟದ ಪ್ರಬಲ ನಾಯಕರಾಗಿ ಕಾಣಿಸಿಕೊಂಡಿದ್ದರು. ಮತ್ತೆ ಎನ್‌ಡಿಎ
ತೆಕ್ಕೆಗೆ ಮರಳಿದ್ದಾರೆ. ಶಿವಸೇನೆ (ಯುಬಿಟಿ) ಕೂಡ ಮಹಾರಾಷ್ಟ್ರದಲ್ಲಿ 23 ಕ್ಷೇತ್ರಗಳಿಗೆ ಬೇಡಿಕೆಯಿಡುತ್ತಿದೆ. ಪ್ರಾದೇಶಿಕ ಪ್ರಬಲ ಪಕ್ಷಗಳನ್ನು ವಿಶ್ವಾಸ ಗಳಿಸಿಕೊಳ್ಳುವಲ್ಲಿ
ವಿಫಲಗೊಂಡಿವೆ ಎನ್ನುವುದಕ್ಕೆ ಇವೇ ಕೆಲವಂಶಗಳು ಸಾಕು. ಏತನ್ಮಧ್ಯೆ, ಕಾಂಗ್ರೆಸ್
ಮತ್ತು ಸಮಾಜವಾದಿ ಪಕ್ಷದ ನಡುವಿನ ಮಾತುಕತೆಯು ಉತ್ತರ ಪ್ರದೇಶದಲ್ಲಿ ಕೆಲವು ರೀತಿಯ ತಡೆಯನ್ನು ಸೃಷ್ಟಿ
ಮಾಡಿದೆ. ಕಾಂಗ್ರೆಸ್
20 ಕ್ಷೇತ್ರಗಳಿಗೆ ಬೇಡಿಕೆ ಇಡುತ್ತಿದ್ದರೇ,
ಅಖಿಲೇಶ್ ಯಾದವ್ 11 ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ.
ʼಇಂಡಿಯಾʼ ಮೈತ್ರಿಕೂಟದ ಇಂತಹ ಕೆಲವು ಗೊಂದಲಗಳು ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು
ಮಹಾರಾಷ್ಟ್ರದ ಫಲಿತಾಂಶದ ಮೇಲೆ ದಟ್ಟವಾಗಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಈ
ರಾಜ್ಯಗಳು ಒಟ್ಟಾರೆಯಾಗಿ 223 ಕ್ಷೇತ್ರಗಳನ್ನು ಹೊಂದಿವೆ,
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು (122) ಗೆದ್ದಿದೆ, ಇವು ಲೋಕಸಭೆಯ ಬಲದ ಶೇ. 41
ರಷ್ಟಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಏನೇ ಆಗಲಿ ಈ ಬಾರಿ
ಸೋಲಿಸಬೇಕು ಎಂಬ ಸಂಕಲ್ಪದೊಂದಿಗೆ ಸೃಷ್ಟಿಯಾದ ಮೈತ್ರಿಕೂಟ ತನಗೆ ಹೆಚ್ಚು ಕ್ಷೇತ್ರಗಳು ಎಲ್ಲಿ ಸಿಗುವ
ಸಂಭಾವ್ಯತೆ ಇದೆಯೋ ಅಲ್ಲೇ ಈ ರೀತಿಯ ಗೊಂದಲ ಸೃಷ್ಟಿ ಮಾಡಿಕೊಂಡಿರುವುದು ನೋಡಿದರೇ, ಈ ರಾಜ್ಯಗಳಲ್ಲಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಕ್ಷೇತ್ರಗಳಿಗಿಂತ ಹೆಚ್ಚು ಬಿಜೆಪಿ ಗಳಿಸಬಹುದು ಅಂತನ್ನಿಸುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ 42 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಆರಂಭದಲ್ಲಿ ಒಪ್ಪಿದ ಟಿಎಂಸಿ ಈಗ ಎಲ್ಲಾ 42 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. 2019 ರಲ್ಲಿ
ಕಾಂಗ್ರೆಸ್ ಮತ್ತು ಟಿಎಂಸಿ ಮೈತ್ರಿ ಮಾಡಿಕೊಂಡಿದ್ದರೆ, ಟಿಎಂಸಿ 22 ಕ್ಷೇತ್ರಗಳಿಗಿಂತ 6
ಹೆಚ್ಚು ಕ್ಷೇತ್ರಗಳನ್ನು ಗಳಿಸಬಹುದಿತ್ತು. ನಿರೀಕ್ಷೆಯಂತೆ ಏನೂ ಆಗಿಲ್ಲ. ಪ.
ಬಂಗಾಳದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ವಾರಗಟ್ಟಲೇ ಅಲ್ಲೇ ಚುನಾವಣಾ ಪ್ರಚಾರ
ಮಾಡಿದರೂ ದೀದಿ ಅಭೂತಪೂರ್ವಾಗಿ ಗೆದ್ದರು, ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು
ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿ, 77 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು.
ಕಾಂಗ್ರೆಸ್ ತನ್ನಲ್ಲಿದ್ದ 44 ವಿಧಾನಸಭಾ ಕ್ಷೇತ್ರಗಳನ್ನೂ ಕಳೆದುಕೊಂಡಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ
ದೀದಿ ಹಾಗೂ ಬಿಜೆಪಿ ಪರವಾಗಿ ಬಂದ ಮತಗಳು ಕಾಂಗ್ರೆಸ್‌ನ ವಿರುದ್ಧವಾಗಿ ಬಂದ ಮತಗಳು ಎನ್ನುವುದು ಇಲ್ಲಿ
ಉಲ್ಲೇಖಾರ್ಹ. ದೀದಿ ಈಗ ಪ್ರಸ್ತಾಪಿಸುತ್ತಿರುವ ವಿಷಯ ಇದೆ ಆಗಿದೆ. ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳುವುದಕ್ಕೆ
ತಯಾರಿಲ್ಲ.
ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬ ಮಾತುಗಳಿತ್ತು. ಆದರೇ, ಪಂಜಾಬ್
ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಪ್ ಕಾಂಗ್ರೆಸ್
ಅನ್ನು ಸೋಲಿಸಿತು. ಆಪ್ ಅಂದು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡಿದ್ದರೆ,
ಕಾಂಗ್ರೆಸ್ ವಿರುದ್ಧದ ಮತಗಳು ಅಕಾಲಿದಳ ಅಥವಾ ಬಿಜೆಪಿ ಕಡೆಗೆ ವಾಲುತ್ತಿತ್ತು. ಆಪ್ ಪಂಜಾಬ್‌ನಲ್ಲಿ
ಈಗ ತನ್ನದೇ ಆದ ಒಂದು ಹೆಜ್ಜೆಗುರುತನ್ನು ಹಾಕಿಕೊಂಡಿದೆ. ಕಾಂಗ್ರೆಸ್ ಒಲವು ಇಲ್ಲಿ ಹೆಚ್ಚಿಲ್ಲ.
ಹಾಗಾಗಿ ಆಪ್ ಇಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯಲು ಮುಂದಾಗಿರುವುದು ಆಶ್ಚರ್ಯವೇನಲ್ಲ.
ಬಿಹಾರದಲ್ಲಿ ನಿತೀಶ್ ಕುಮಾರ್ ಆರ್‌ಜೆಡಿ-ಎಡ-ಕಾಂಗ್ರೆಸ್
ಮೈತ್ರಿಯನ್ನು ಕೈಬಿಟ್ಟು ಮತ್ತೆ ಎನ್‌ಡಿಎ ಸೇರಿದ್ದಾರೆ. ಈ ಬೆಳವಣಿಗೆ ಬಿಹಾರದಲ್ಲಿ
ಎನ್‌ಡಿಎ ಕ್ಷೇತ್ರಗಳನ್ನು ಬಲಪಡಿಸುತ್ತದೆ, ಎನ್‌ಡಿಎ ಮೈತ್ರಿ 2019ರ ಲೋಕಸಭಾ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ
39 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಗ್ರ ಸ್ಥಾನಕ್ಕೆ ಏರಿತ್ತು. ನಿತೀಶ್
ಇಲ್ಲದಿದ್ದರೆ, ಜೆಡಿಯು, ಆರ್‌ಜೆಡಿ, ಐಎನ್‌ಸಿ ಮತ್ತು
ಎಡಪಕ್ಷಗಳನ್ನು ಒಳಗೊಂಡಿರುವ ಸಂಯೋಜಿತ ವಿರೋಧದ ಮುಖಾಂತರ ಇಲ್ಲಿ ಎನ್‌ಡಿಎ
ಸಂಖ್ಯಾಬಲ ಕ್ಷೀಣಿಸುತ್ತಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ʼಇಂಡಿಯಾʼ ಮೈತ್ರಿಕೂಟ ನಿತೀಶ್ ಕುಮಾರ್ ಅವರನ್ನು ಉಳಿಸಿಕೊಳ್ಳಬೇಕಿತ್ತು. ನಿತೀಶ್ ಕುಮಾರ್ ಪಕ್ಷಾಂತರ
ಮಾಡುವ ಹೊತ್ತಿಗೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಇದ್ದರೆ, ಮಲ್ಲಿಕಾರ್ಜುನ್ ಖರ್ಗೆ ಹೋಮ್ ಟೌನ್
ಅಲ್ಲಿದ್ದರು. ನಿತೀಶ್ ಕುಮಾರ್ ಅವರನ್ನು ತಡೆಯುವ ಯಾವ ಸಾಧ್ಯತೆಗಳು ದೆಹಲಿಯ ರಾಜಕೀಯ ವಲಯದಲ್ಲಿರಲಿಲ್ಲ.
ಇನ್ನು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ
ಸ್ಪರ್ಧಿಸಿದ್ದು, ಎನ್‌ಸಿಪಿ
19 ಕ್ಷೇತ್ರಗಳಲ್ಲಿ
ಸ್ಪರ್ಧಿಸಿದ್ದು, 4 ಕ್ಷೇತ್ರಗಳನ್ನು ಸಣ್ಣ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಆದರೆ, ಉದ್ಧವ್ ಠಾಕ್ರೆಯ ಶಿವಸೇನೆ ಬಣದ ಬೇಡಿಕೆ
ಇಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಶಿವಸೇನೆಯ 18 ಸಂಸದರ
ಪೈಕಿ 13 ಮಂದಿ
ಈಗ ಏಕನಾಥ್ ಶಿಂಧೆ ಬಣದಲ್ಲಿದ್ದಾರೆ. ಇದರ ಹೊರತಾಗಿಯೂ, ಉದ್ಧವ್ ಬಣ 23 ಕ್ಷೇತ್ರಗಳ ಬೇಡಿಕೆ
ಇಟ್ಟಿದೆ.
ಯುಪಿಯಲ್ಲಿ ಎಸ್‌ಪಿ 7
ಸೀಟುಗಳನ್ನು ಆರ್‌ಎಲ್‌ಡಿಗೆ ಹಂಚಿಕೆ ಮಾಡಿದ್ದರೆ,
ಕಾಂಗ್ರೆಸ್ 20
ಸೀಟುಗಳಿಗೆ ಬೇಡಿಕೆ ಇಟ್ಟಿದೆ. 2014ರಲ್ಲಿ
ಎಲ್ಲ ವಿರೋಧ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 2 ಕ್ಷೇತ್ರಗಳನ್ನು ಗೆದ್ದು ತೃಪ್ತಿಪಟ್ಟುಕೊಂಡಿತ್ತು
ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಸದ್ಯ ಆರ್‌ಎಲ್‌ಡಿ ಕೂಡ ʼಇಂಡಿಯಾʼ ಮೈತ್ರಿ ತೊರೆದು ಎನ್‌ಡಿಎ ಮೈತ್ರಿಗೆ ಸೇರ್ಪಡೆಗೊಳ್ಳುವ
ಸಾದ್ಯತೆ ಇದೆ ಎಂಬ ಮಾತುಗಳಿವೆ. ಆರ್‌ಎಲ್‌ಡಿ ಕೂಡ ಮೈತ್ರಿ ತೊರೆದರೇ ಮತ್ತೆ ಸಂಕಷ್ಟ.
ಮುಂಬರುವ 2024 ರ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು 26 ವಿರೋಧ
ಪಕ್ಷಗಳು ಒಗ್ಗೂಡಿ ʼಇಂಡಿಯಾ ʼ ಮೈತ್ರಿಕೂಟ ರಚನೆಯಾಗಿತ್ತು.
ಯುಪಿಎಯನ್ನು ಐ.ಎನ್.ಡಿ.ಐ.ಎ ಎಂದು ಮರುನಾಮಕರಣ ಮಾಡಲಾಯಿತು. ಜುಲೈನಲ್ಲಿ ವಿರೋಧ ಪಕ್ಷಗಳ
ಸಭೆಯಲ್ಲಿ ಯುಪಿಎ ಮೂಲತಃ ಆರ್‌ಜೆಡಿ, ಡಿಎಂಕೆ,
ಜೆಎಂಎಂ, ಎನ್‌ಸಿಪಿ ಹಾಗೂ ಐಯುಎಂಎಲ್ ಪಕ್ಷಗಳು ಸೇರಿ ಇತರ ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು
ಒಳಗೊಂಡಿತ್ತು. ಸದ್ಯ, ಜೆಡಿಯು, ಶಿವಸೇನೆ (ಉದ್ಧವ್ ಬಣ),
ಟಿಎಂಸಿ, ಎಸ್‌ಪಿ
ಮತ್ತು ಎಎಪಿ ಹಾಗೂ ಇತರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ಸೇರ್ಪಡೆಯೊಂದಿಗೆ ತನ್ನ ಬಲವನ್ನು ವೃದ್ಧಿಸಿಕೊಂಡಿತು, ತನ್ನ ನೆಲೆ
ಮತ್ತು ವ್ಯಾಪ್ತಿಯನ್ನು ವಿಸ್ತರಿಸಿತು.
ಆರಂಭದಲ್ಲಿ,
ʼಇಂಡಿಯಾʼ ಮೈತ್ರಿ ವಿರೋಧ ಪಕ್ಷಗಳಲ್ಲಿ ಆಶಾವಾದವನ್ನು ಹುಟ್ಟುಹಾಕಿತು, ಅನೇಕ ರಾಜಕೀಯ ವಿಶ್ಲೇಷಕರು ಮತ್ತು ತಜ್ಞರು ಮುಂಬರುವ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಬಲ ಸವಾಲು ಎಸೆಯಬಹುದು ಎಂದು ಭವಿಷ್ಯ ನುಡಿದಿದ್ದರು. ಮೈತ್ರಿಯು ಮಾಧ್ಯಮಗಳ ಗಮನವನ್ನು ಸೆಳೆದಿತ್ತು. ದೊಡ್ಡ ಮಟ್ಟದಲ್ಲೇ ಎನ್‌ಡಿಎ ಸರ್ಕಾರಕ್ಕೆ ಸವಾಲೆಸೆಯಬಹುದೆಂಬ
ಚರ್ಚೆ ಎದ್ದಿತ್ತು.
ಇನ್ನು, ಇತ್ತೀಚೆಗೆ ನಡೆದ
ಐದು ರಾಜ್ಯಗಳ ಚುನಾವಣೆಗಳ ಪೈಕಿ ಮೂರು ರಾಜ್ಯಗಳನ್ನು ಗೆಲ್ಲಬಹುದು
ಎಂದು ಹೇಳಲಾಗಿತ್ತು. ಅಲ್ಲಿಯೂ ಒಂದಿಷ್ಟು ಗೊಂದಲ. ಈ ಚುನಾವಣೆಗಳಲ್ಲಿ ಮೈತ್ರಿಯಾಗಿ ಸ್ಪರ್ಧಿಸದೇ
ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿ ರಾಜ್ಯ ಚುನಾವಣೆಗಳತ್ತ ಹೆಚ್ಚು ಗಮನ ನೀಡಿದ್ದು, ʼಇಂಡಿಯಾʼ
ಮೈತ್ರಿಯಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸ ಕಡಿಮೆ ಆಗುವುದಕ್ಕೆ ಕಾರಣವಾಯ್ತು. ಚುನಾವಣಾ ಫಲಿತಾಂಶ ಬಂದಾಗ, ಐದು ರಾಜ್ಯಗಳ ಪೈಕಿ ತೆಲಂಗಾಣದಲ್ಲಷ್ಟೇ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಫಲವಾಯ್ತು. ಅಷ್ಟೊತ್ತಿಗಾಗಲೇ
ಮಿತ್ರಪಕ್ಷಗಳು ಕಾಂಗ್ರೆಸ್‌ನ ಧೋರಣೆಯಿಂದ ಅತೃಪ್ತಿಯನ್ನು ಹೆಚ್ಚಿಸಿಕೊಂಡು ಭಿನ್ನಾಭಿಪ್ರಾಯದ
ಬೀಜಗಳನ್ನು ಬಿತ್ತತೊಡಗಿದವು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 422 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಟಿಎಂಸಿ ಸೇರಿದಂತೆ
ಪ್ರಾದೇಶಿಕ ಶಕ್ತಿಗಳು 300 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನನ್ನು ವಿನಂತಿಸಿದ್ದವು, ಅಂದರೆ ಪರೋಕ್ಷವಾಗಿ ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಬಾರದು ಎಂದು ಅವು
ಬಯಸಿದ್ದವು. ಈಗ ಬಂಗಾಳ ಮತ್ತು ಪಂಜಾಬ್ ನಲ್ಲಿ ಸೀಟು ಹಂಚಿಕೆ
ಬಗೆಹರಿಯದೇ ಇರುವ ಕಾರಣ, ಎಲ್ಲರ ಕಣ್ಣುಗಳು ಈಗ ಯುಪಿ
ಮೇಲೆ ನೆಟ್ಟಿದೆ. ಒಂದು ವೇಳೆ ಅಲ್ಲಿಯೂ ಮೈತ್ರಿ ಕಾರ್ಯರೂಪಕ್ಕೆ
ಬರದಿದ್ದರೆ ʼಇಂಡಿಯಾʼ
ಮೈತ್ರಿಕೂಟ ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳ್ಳಬಹುದೇನೋ. ರಾಮ ಮಂದಿರದ ಉನ್ಮಾದದ
ನಡುವೆಯೂ ಕಾಂಗ್ರೆಸ್ ನ ದುಸ್ಥಿತಿಯ ಕಾಲದಲ್ಲಿಯೂ ಇಲ್ಲಿ 20 ಕ್ಷೇತ್ರಗಳ ಬೇಡಿಕೆ ಮೈತ್ರಿಯ ಮುಂದಿಟ್ಟಿರುವುದು ಆಶ್ಚರ್ಯವೇ ಸರಿ.
ಒಂದು ವೇಳೆ ʼಇಂಡಿಯಾʼ ಮೈತ್ರಿಕೂಟ ಮುರಿದು ಹೋದರೇ, ಮತ್ತೆ ಹಳೆಯ ʼಯುಪಿಎʼಯೇ
ಗತಿ. ಯುಪಿಎ 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರ,
ಜಾರ್ಖಂಡ್, ಮಹಾರಾಷ್ಟ್ರ, ಕೇರಳ ಮತ್ತು
ತಮಿಳುನಾಡು ರಾಜ್ಯಗಳಲ್ಲಿ ಜಾರಿಯಲ್ಲಿತ್ತು,
ಆ ರಾಜ್ಯಗಳಲ್ಲಿ ಒಟ್ಟು ಕೇವಲ 161 ಕ್ಷೇತ್ರಗಳು. ಲೋಕಸಭೆಯ ಬಲದ ಶೇ. 30ರಷ್ಟು ಕ್ಷೇತ್ರಗಳನ್ನಷ್ಟೇ ಹೊಂದಿವೆ. ಅಂದರೇ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಸ್ಥಿತಿ ಎಲ್ಲಿಯವರೆಗೆ ಹೋಗಿ
ತಲುಪಬಹುದೆಂದು ನೀವೇ ಊಹಿಸಿಕೊಳ್ಳಿ.
ರಾಮಮಂದಿರದ ಲೋಕಾರ್ಪಣೆಯ ನಂತರ ದೇಶದಲ್ಲಿ ಹೆಚ್ಚಿದ ಒಂದು
ರೀತಿಯ ಭಾವನಾತ್ಮಕ ಕಂಪನ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಮಹತ್ವದ ಲಾಭವನ್ನು ತಂದುಕೊಡಲಿದೆ ಎನ್ನುವುದು ನಿಶ್ಚಿತ. ʼಇಂಡಿಯಾʼ ಮೈತ್ರಿಕೂಟ ಪ್ರಸ್ತುತ ಸಂಪೂರ್ಣ ಅಸ್ತವ್ಯಸ್ತವಾಗಿರುವಂತಿದೆ. ರಾಹುಲ್ ಗಾಂಧಿ ಸೂಕ್ತವಲ್ಲದ
ಕಾಲದಲ್ಲಿ ಯಾತ್ರೆಯಲ್ಲಿದ್ದಾರೆ. ರಾಹುಲ್ ನಡತೆ ಕಾಂಗ್ರೆಸ್ ನಡತೆಯೇ ? ಅಥವಾ ಮೈತ್ರಿಕೂಟದ ನಡತೆ
ಆಗಲಿಕ್ಕೆ ಸಾಧ್ಯವೇ ? ರಾಹುಲ್ ಒಬ್ಬ ಪ್ರಬುದ್ಧ ನಾಯಕನಾಗಿ ಬದಲಾಗಿದ್ದನ್ನು ಒಪ್ಪುವವರು, ʼಕಾಂಗ್ರೆಸ್‌ನ
ನಾಯಕʼನನ್ನಾಗಿ ಒಪ್ಪುವುದಕ್ಕೆ ಸಾಧ್ಯವೇ ? ಮೈತ್ರಿ ಆಗಿ ಬರುತ್ತಿಲ್ಲ. ಇದೊಂದು ಕಾಂಗ್ರೆಸ್‌ಗೆ ವಿಷಘಳಿಗೆಯೇ
ಸರಿ. ಮತ್ತೆ ಮತ್ತೆ ಯಾಕೋ ನನಗೆ ರಾಹುಲ್ ನತದೃಷ್ಟ ನಾಯಕ ಅಂತನ್ನಿಸುತ್ತಿದ್ದಾರೆ. ಉಳಿದದ್ದು ನಿಮ್ಮ
ಯೋಚನೆಗೆ ಮೀಸಲಿಟ್ಟಿದ್ದು.
-ಶ್ರೀರಾಜ್ ವಕ್ವಾಡಿ

No comments:
Post a Comment