Thursday, February 22, 2024

ಕಾಂಗ್ರೆಸ್ ಒಳಗಿನ ಕಳವಳ ಪ್ರಜಾಪ್ರಭುತ್ವಕ್ಕೆ ಆಘಾತ !

 

ಉಳಿದೆಲ್ಲಾ ಸೈದ್ಧಾಂತಿಕ ನಿಲುವನ್ನು ಮಕಾಡೆ ಮಲಗಿಸಿದ ಬಿಜೆಪಿಯ ಕಾರ್ಯತಂತ್ರ ?

ಈ ದೇಶದಲ್ಲಿ ಒಂದು ಸುದೀರ್ಘವಾದ ಇತಿಹಾಸವನ್ನು ಕಂಡ ಕಾಂಗ್ರೆಸ್‌ ಪಕ್ಷದೊಳಗಿನ ಕಳವಳ ಈ ದೇಶದ ಭವಿಷ್ಯಕ್ಕೆ ಭಾರಿ ದೊಡ್ಡ ಆಘಾತವನ್ನು ಉಂಟು ಮಾಡಲಿದೆ ಎಂದನ್ನಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಎದುರು ಕಾಂಗ್ರೆಸ್‌ ಈ ಮಟ್ಟಿಗೆ ದುರಿತ ಕಾಲ ಎದುರಿಸುತ್ತಿರುವುದು ದುರಂತವೇ ಸರಿ. ಈ ಸಂದರ್ಭದಲ್ಲಿ ರಾಜಕೀಯ ತಲ್ಲಣಗಳು, ಕಾಂಗ್ರೆಸ್‌ ನಿಧಾನವಾಗಿ ನಿರ್ನಾಮವಾಗುವ ಹಂತಕ್ಕೆ ತಲುಪುತ್ತಿರುವುದನ್ನು ನೋಡಿದರೇ, ಇದು ಒಂದು ಹಂತದಲ್ಲಿ ʼಅಸಂಖ್ಯ ಪ್ರಶ್ನೆಗಳೆʼ ಸತ್ತು ಮಲಗಿದಂತೆಯೇ ಸರಿ ಎಂದರೇ ತಪ್ಪಿಲ್ಲ.  

ಸರ್ವಾಧಿಕಾರವನ್ನು ಕೊನೆಗಾಣಿಸಬೇಕು, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು ಎಂಬ ಸದುದ್ದೇಶದಿಂದ ಬಿಜೆಪಿಯೇತರ ಪಕ್ಷಗಳು ಯುದ್ಧ ಸಾರುವ ರೀತಿಯಲ್ಲಿ ರಚನೆಯಾದ ʼಇಂಡಿಯಾʼ ಮೈತ್ರಿಕೂಟ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಸಮರವನ್ನೇ ಸಾರುತ್ತದೆ ಎಂಬ ರಾಜಕೀಯ ವಿಶ್ಲೇಷಣೆ ಈ ದೇಶದ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿತ್ತು. ಸಂವಿಧಾನದ ನಿಜವಾದ ಚೇತನವನ್ನು ಮರಳಿ ತರುತ್ತೇವೆ ಎಂಬ ಸಂಕಲ್ಪದೊಂದಿಗೆ ಒಗ್ಗೂಡಿದ ಪಕ್ಷಗಳು ವಿಶ್ವಾಸವನ್ನು ಕಳೆದುಕೊಂಡು ಅನಿಶ್ಚಿತತೆಯಲ್ಲಿ ಮುಳುಗಿರುವುದು ಈ ದೇಶದ ಸುದೀರ್ಘ ರಾಜಕೀಯ ಇತಿಹಾಸದ ಬಹುದೊಡ್ಡ ದುರಂತಗಳಲ್ಲೊಂದು.

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಯ ಹ್ಯಾಟ್ರಿಕ್‌ ಗೆಲುವನ್ನು ತಡೆದು ನಿಲ್ಲಿಸಬೇಕು ಎಂಬ ಮಹತ್ತರ ಸಂಕಲ್ಪ ಹೊತ್ತುಕೊಂಡಿದ್ದ ಕಾಂಗ್ರೆಸ್‌, ೧೯೭೭ರಲ್ಲಿ ಜನತಾ ಒಕ್ಕೂಟ  ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗುವುದನ್ನು ಖಚಿತ ಪಡಿಸಿಕೊಂಡಂತೆ, ಈಗ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ನಿರ್ನಾಮ ಆಗುವಂತೆ ಕಾಂಗ್ರೆಸ್‌  ಕಂಡುಕೊಳ್ಳಬೇಕಿತ್ತು. ಅಂದರೇ, ಆ ಮಟ್ಟಿಗೆ ಕಾಂಗ್ರೆಸ್‌ ಕಾರ್ಯ ನಿರ್ವಹಿಸಬೇಕಿತ್ತು. ಆದರೇ ಕಾಂಗ್ರೆಸ್‌ನ ದುರದೃಷ್ಠಕರ ಸಂಗತಿಯೆಂದರೇ, ಈ ಮೇಲೆ ಉಲ್ಲೇಖಿಸಿದ ಹಿಮಾಚಲ ಪ್ರದೇಶವೊಂದನ್ನು ಬಿಟ್ಟು ಉಳಿದೆಲ್ಲಾ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಅಂತಿಮ ಹಂತದಲ್ಲಿ ಈಗ ನ್ಯಾಯ್‌ ಯಾತ್ರೆಯ ಮೂಲಕ ಮರಳಿ ಇಲ್ಲೆಲ್ಲಾ ಚೇತರಿಸಿಕೊಳ್ಳುತ್ತೇವೆ ಎಂದರೇ ಅದು ಸಾಧ್ಯವಾಗುವ ಮಾತು ಅಂತ ಅನ್ನಿಸುತ್ತಿದೆಯೇ ? ಖಚಿತವಾಗಿ ಕಷ್ಟವೇ ಎಂದು ಹೇಳಬಹುದಾಗಿದೆ. ಹಿಂದಿ ಮಾತನಾಡುವ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಿದ್ದರೇ, ಕಾಂಗ್ರೆಸ್‌ ಮೈತ್ರಿಕೂಟದ ಸಹಾಯದಿಂದ ಈ ಲೋಕಸಭೆಯನ್ನು ಬಹಳ ಅನಾಯಾಸವಾಗಿ ಗೆಲ್ಲಬಹುದಿತ್ತೇನೋ, ಆದರೇ, ಈಗ ಕಾಂಗ್ರೆಸ್‌ ಮುಂದೆ ಆ ಅವಕಾಶಗಳಿಲ್ಲ. ಮೈತ್ರಿಕೂಟದ ಪ್ರಮುಖ ಪ್ರಾದೇಶಿಕ ಪಕ್ಷಗಳೇ ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಿರುವುದರಿಂದ ʼಇಂಡಿಯಾʼ ಮೈತ್ರಿಕೂಟವನ್ನು ಮುನ್ನಡೆಸುವ ಅರ್ಹತೆಯನ್ನೇ ಕಾಂಗ್ರೆಸ್‌ ಕಳೆದುಕೊಂಡಂತೆಯೇ ? ಪ್ರಶ್ನೆ ಮುಂದಿದೆ.

ನಿಶ್ಚಿತವಾಗಿ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಗೆಲ್ಲುವ ಎಲ್ಲಾ ಅನುಕೂಲಕರ ಸ್ಥಿತಿಯನ್ನು ಸೃಷ್ಠಿಸಿಕೊಂಡಿದೆ. ಬಿಜೆಪಿಯನ್ನು ಕಳೆದ ಕೆಲವು ದಶಕಗಳಿಂದ ಪೊರೆಯುತ್ತಲೇ ಬಂದ ಶ್ರೀರಾಮ ಮಂದಿರ ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಬಹಳ ದೊಡ್ಡ ಗೆಲುವನ್ನು ತಂದುಕೊಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಲೋಕಸಭಾ ಕ್ಷೇತ್ರಗಳಲ್ಲಿ ಈ ಚುನಾವಣೆಯಲ್ಲಿ ಗೆಲ್ಲುವ ಆಶಾಭಾವನೆಯಲ್ಲಿ ಬಿಜೆಪಿ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ʼಮಿಷನ್‌ ೪೦೦ʼ ಗುರಿಯ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ಸವಾಲೆಸೆದಿದ್ದರು. ಹಿಂದುತ್ವ ಹಾಗೂ ರಾಮ ಮಂದಿರದ ಸುತ್ತ ಸೃಷ್ಟಿಸಿದ ಒಂದು ರಾಜಕೀಯ ಪ್ರೇರಿತವಾದ ಉನ್ಮಾದ ಬಿಜೆಪಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪರವಾದ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಆದರೇ ಎಲ್ಲರ ಊಹೆಯನ್ನು ಮೀರಿ ಬಿಜೆಪಿ ಇವತ್ತು ಬೆಳೆದು ನಿಂತಿದೆ. ಕಾಂಗ್ರೆಸ್‌ ನಂತಹ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂಬ ಸಂಕಲ್ಪದೊಂದಿಗೆ ಅಡಿಯಿಟ್ಟ ಬಿಜೆಪಿ  ಆ ಸಂಕಲ್ಪವನ್ನು ಈಡೇರಿಸುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿಯ ʼನ್ಯಾಷನ್ಯಾಲಿಟಿಯʼ ಹೆಸರಿನ ಹಿಂದುತ್ವವಾದ ಉಳಿದೆಲ್ಲಾ ಸೈದ್ಧಾಂತಿಕ ನಿಲುವನ್ನು ಮಕಾಡೆ ಮಲಗುವಂತೆ ಮಾಡಿರುವುದು ಆಶ್ಚರ್ಯವೇ ಸರಿ.

ಇದು ಕಾಂಗ್ರೆಸ್‌ ಸೇರಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಬಹುಶಃ ಕಾಂಗ್ರೆಸ್‌ ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಇಲ್ಲಿನ ಜನರು ಮರೆಯದೇ ಇರಬಹುದು. ಕಾಂಗ್ರೆಸ್‌ನ ಜನಪರ ಯೋಜನೆಗಳನ್ನು ಜನರು ಸದಾ ಸ್ಮರಿಸಿಕೊಳ್ಳಬಹುದು. ಜನರಿಗೆ ಬದುಕು ನೀಡಿದ ಕಾಂಗ್ರೆಸ್‌ನ ಆಡಳಿತವನ್ನು ಜನ ನಿರಂತರ ಸ್ಮರಿಸಿಕೊಳ್ಳಬಹುದು. ಆದರೇ, ಅವೆಲ್ಲಾ ಒಂದು ʼರಾಮ ಮಂದಿರʼದ ನಿರ್ಮಾಣದಿಂದ ಮರೆಯಾಗಿ ಹೋಗುತ್ತವೆ ಎಂದು ಸ್ವತಃ ಕಾಂಗ್ರೆಸ್‌ ಊಹಿಸಿರಲಿಕ್ಕಿಲ್ಲ. ಕಾಂಗ್ರೆಸ್‌ ಎಂದೂ ರಾಜಕೀಯದಲ್ಲಿ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎಂಬ ತತ್ವವನ್ನು ಪಾಲಿಸಿಲ್ಲ. ಆದರೇ, ಬಿಜೆಪಿ ಆ ತತ್ವವನ್ನು ಯಶಸ್ವಿಯಾಗಿ ಬಳಸಿಕೊಂಡಿತು. ಕಾಂಗ್ರೆಸ್‌ ಎಲ್ಲವನ್ನೂ ಕಳೆದುಕೊಂಡ ಮೇಲೆ  ಜೋಡೋ, ನ್ಯಾಯ ಅಂತ ಬೀದಿಗಿಳಿದು ಪ್ರಶ್ನೆ ಮಾಡುತ್ತಿದೆ. ಕಾಂಗ್ರೆಸ್‌ ಯಾವ ಸಮಯಕ್ಕೆ ಯಾವುದನ್ನು ಮಾಡಬೇಕೋ ಅದನ್ನು ಮಾಡದೇ ಕಾಲ ಕಳೆಯಿತು. ಬಿಜೆಪಿ ಲೋಕಸಭೆ ಚುನಾವಣೆಗೆ ಸರಿಯಾಗಿಯೇ ರಾಮ ಮಂದಿರ ನಿಲ್ಲಿಸಿ ದೇಶದ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಸೆಳೆದುಕೊಂಡಿತ್ತು. ರಾಮ ಮಂದಿರದ ನಿರ್ಮಾಣದ ಕೂಗಿಗೆ ರಾಮ ಮಂದಿರವೂ ತಲೆ ಎತ್ತಿ ನಿಂತಿತು, ಲೋಕಸಭೆಗೆ ರಾಮಮಂದಿರವೇ ಬೆನ್ನೆಲುಬು ಆಯಿತು. ಈ ಚುನಾವಣೆಗಂತೂ ಬೇರೆ ಯಾವ ದೊಡ್ಡ ಹತ್ತರ ಭರವಸೆಯನ್ನೇನೂ ನೀಡುವ ಅಗತ್ಯವೇನಿಲ್ಲ. ಈ ರಾಮ ಮಂದಿರ ಒಂದೇ ಸಾಕು. ಯಾವ ಸಂದರ್ಭದಲ್ಲಿ ಬೀದಿಗಿಳಿದು ಜನರನ್ನು ಸೆಳೆದುಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ಎರಡನೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕಿತ್ತೋ ಅವೆಲ್ಲವನ್ನು ಮಾಡದೇ ಇರುವುದರಿಂದಲೇ ಕಾಂಗ್ರೆಸ್‌  ಈ ಸ್ಥಿತಿಯನ್ನು ಎದುರುಗಾಣುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಮತ್ತು ಕೇವಲ 52 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದು ಕೂಡ ಕೆಲವು ರಾಜ್ಯಗಳಲ್ಲಿ ಮೈತ್ರಿಯ ಭಾಗವಾಗಿತ್ತು. ಬಿಹಾರದಲ್ಲಿ ಆರ್‌ಜೆಡಿ, ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿ ಜನತಾ ದಳ (ಜಾತ್ಯತೀತ), ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ತಮಿಳುನಾಡಿನ ಡಿಎಂಕೆ. ಅದರಂತೆ, ಬಿಹಾರದ 40 ಕ್ಷೇತ್ರಗಳಲ್ಲಿ ಒಂಬತ್ತು, ಜಾರ್ಖಂಡ್‌ನ 14 ಕ್ಷೇತ್ರಗಳಲ್ಲಿ ಏಳು, ಕರ್ನಾಟಕದ 28 ಕ್ಷೇತ್ರಗಳಲ್ಲಿ 21, ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ 25 ಮತ್ತು ತಮಿಳುನಾಡಿನ 39 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿತ್ತು. ಬರೋಬ್ಬರಿ 437 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರತೀಯ ಜನತಾ ಪಕ್ಷವು ಶೇ. 37.36 ಮತಗಳನ್ನು ಪಡೆದುಕೊಂಡಿತು, ಇದು 1989 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಅತ್ಯಧಿಕ ಮತ ಪಡೆದುಕೊಂಡ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು. ಮತ್ತು 303 ಕ್ಷೇತ್ರಗಳನ್ನು ಗೆದ್ದು, ಅದರ ಗಣನೀಯ ಬಹುಮತವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಜೊತೆಗೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಒಟ್ಟಾರೆಯಾಗಿ 353 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿ ಶೇ. 37.76 ಮತಗಳನ್ನು ಗಳಿಸಿದರೆ, ಒಟ್ಟಾರೆಯಾಗಿ ಎನ್‌ಡಿಎ ಮೈತ್ರಿ ಮತವು 603.7 ಮಿಲಿಯನ್ ಮತಗಳಲ್ಲಿ ಶೇ. 45 ರಷ್ಟು ಮತಗಳನ್ನು ಗಳಿಸಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 52 ಕ್ಷೇತ್ರಗಳನ್ನು ಗೆದ್ದುಕೊಂಡಿತು, ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಬೇಕಾದ  ಶೇ.10 ಕ್ಷೇತ್ರಗಳನ್ನು ಪಡೆಯಲು ವಿಫಲವಾಯಿತು . ಒಟ್ಟಾರೆಯಾಗಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) 91 ಕ್ಷೇತ್ರಗಳನ್ನು ಪಡೆದುಕೊಳ್ಳುವುವಲ್ಲಿ ಸಫಲವಾಯಿತು. ಇತರ ಪಕ್ಷಗಳು 98 ಸ್ಥಾನಗಳನ್ನು ಗೆದ್ದವು. ಇನ್ನು, ಕಾಂಗ್ರೆಸ್‌ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ತನ್ನ ವಶದಲ್ಲಿದ್ದ ೧೬೨ ಕ್ಷೇತ್ರಗಳನ್ನು ಕಳೆದುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿಂದಲೇ ಕಾಂಗ್ರೆಸ್‌ ಪಾಲಿನ ದುರಿತ ಕಾಲಕ್ಕೆ ನಾಂದಿ ಸಿಕ್ಕ ಚುನಾವಣೆ ಎಂದರೇ ತಪ್ಪಿಲ್ಲ.

ಇನ್ನು, ಆರ್‌ಎಸ್‌ಎಸ್‌ ಮೂಲದಿಂದ ಹುಟ್ಟಿಕೊಳ್ಳುವ ಬಿಜೆಪಿಗೆ ಅನುಕೂಲವಾಗುವ ಎಲ್ಲಾ ಕಾರ್ಯತಂತ್ರಗಳಿಗೆ ಪ್ರತಿಯಾಗಿ ಒಂದು ಕಾರ್ಯತಂತ್ರಗಳನ್ನು ಹೆಣೆಯುವುದಕ್ಕೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಈವರೆಗೆ ಗೋಚರಕ್ಕೆ ಬಂದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ಎಲ್ಲಾ ಕಾರ್ಯತಂತ್ರಗಳು ಕೂಡ ಸೋತು ತಿರುಮಂತ್ರವಾಗುವಂತೆ ಬಿಜೆಪಿ ನೋಡಿಕೊಳ್ಳುತ್ತಿರುವುದು ವಿಪರ್ಯಾಸ, ಮತ್ತದು ಬಿಜೆಪಿಯ ಚಾಣಾಕ್ಷತನವೂ ಹೌದು. ಆಡಳಿತವನ್ನು ಪ್ರಶ್ನಿಸುವ ಎಲ್ಲವನ್ನೂ ಗೌಣವನ್ನಾಗಿಸುವ ವ್ಯವಸ್ಥೆ ಇಲ್ಲಿ ಭದ್ರವಾಗಿ ಸ್ಥಾಪಿಸಲ್ಪಡಲಾಗಿದೆ. ಭಾವನಾತ್ಮಕ ವಿಷಯಗಳನ್ನೇ ಮುಂದುಡುತ್ತಿರುವ ಬಿಜೆಪಿಗೆ ಪ್ರತಿತಂತ್ರವಾಗಿ ಸಕಾರಾತ್ಮಕ ಚಿಂತನೆಗಳನ್ನು ಮುಂಪಂಕ್ತಿಗೆ ತರುವಂತಹ ಕೆಲಸ ಕಾಂಗ್ರೆಸ್‌ನಿಂದ ಆಗಬೇಕಿದೆ. ಹಿರಿತಲೆಗಳನ್ನು ಸಮಾಧಾನ ಪಡಿಸುವುದರಲ್ಲೇ ಕಾಲ ಕಳೆದ ಕಾಂಗ್ರೆಸ್‌ನ ಧೋರಣೆಯಿಂದ ನೊಂದು ಎಷ್ಟೋ ಯುವ ನಾಯಕರು ಪಕ್ಷಾಂತರ ಮಾಡಿರುವ ಪಟ್ಟಿ ದೊಡ್ಡದಿದೆ. ಇನ್ನಾದರೂ ಕಾಂಗ್ರೆಸ್‌ ಹೊಸ ಧ್ವನಿಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮನಸ್ಸು ಮಾಡದೇ ಇದ್ದರೇ, ಭವಿಷ್ಯ ಹಸನಾಗಿರುವುದಂತೂ ಕಷ್ಟಸಾಧ್ಯ ಎಂದೇ ದಟ್ಟವಾಗಿ ಕಾಣಿಸುತ್ತಿದೆ.

ಈ ನಡುವೆ ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಪ್ರಭಾವಿ ನಾಯಕರು 'ದೇಶಕ್ಕಾಗಿ' ಎಂಬ ಕಾರಣಕೊಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಅಂಗಳವನ್ನು ಸೇರಿಕೊಂಡಿದ್ದಾರೆ. ಸದಾ ಕಾಂಗ್ರೆಸ್ ನನ್ನು ಭ್ರಷ್ಟ ಪಕ್ಷ, ಕುಟುಂಬ ರಾಜಕಾರಣದ ಪಕ್ಷ ಅಂತೆಲ್ಲಾ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿದ್ದ ಬಿಜೆಪಿ, ಈಗ ಒಮ್ಮಿಂದೊಮ್ಮೆಲೆ ಕಾಂಗ್ರೆಸ್ ತೊರೆದು ತನ್ನೆಡೆಗೆ ಬಂದವರನ್ನು 'ಅಪ್ಪಟ ಚಿನ್ನ' ಅನ್ನುತ್ತಿರುವ ಧೋರಣೆ ಎಂತದ್ದು ಎನ್ನುವುದೇ ಅರ್ಥವಾಗುತ್ತಿಲ್ಲ. ಬಿಜೆಪಿ ಎಲ್ಲಿ ಲಾಭ ಇದೆಯೋ ಅದನ್ನು ಸೆಳೆಯುವ ರಾಜಕಾರಣವನ್ನು ತನ್ನ ಹುಟ್ಟಿನಿಂದ ಮಾಡಿಕೊಂಡು ಬಂದಿದೆ ಎನ್ನುವುದಕ್ಕೊಂದು ಇದು ಸಣ್ಣ ಉದಾಹರಣೆ ಅಷ್ಟೆ. ಅವುಗಳ ಸಾಲಿನಲ್ಲಿ ರಾಮ ಮಂದಿರ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟ್ಯಾಚ್ಯೂ, 'ಭಾರತ ರತ್ನ'ವೂ ಸೇರಿವೆ ಎನ್ನುವುದು ಇಲ್ಲಿ ಗಮನಾರ್ಹ.  ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟಕ್ಕಂತೂ ಒಕ್ಕೂಟದ ಜತೆ ನಿರಂತರ ಸಂಪರ್ಕ ಹಾಗೂ ನಿಗಾ ವಹಿಸಲು ತಂಡ ರಚನೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಉಳಿದದ್ದು ನೀವೇ ಯೋಚನೆ ಮಾಡಿ.

-ಶ್ರೀರಾಜ್‌ ವಕ್ವಾಡಿ  

 

No comments:

Post a Comment