ರಾಜ್ಯದಲ್ಲಿ ಮತಗಳಾಗಿ ಪರಿವರ್ತಿತವಾದ ಸಿನೆಮಾ ವರ್ಚಸ್ಸುಗಳು...
ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರನ್ನು ತಮ್ಮ ಪಕ್ಷಕ್ಕೆ ರಾಯಭಾರಿಯಂತೆ ಖರೀದಿಸುವುದು ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತೀರಾತಿಸಹಜ. ರಾಜ್ಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಅವರ ಪ್ರೀತಿಯ ಮಾಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಸಿನೆಮಾ ನಟರ ರಾಜಕೀಯ ಪ್ರವೇಶ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ತಮ್ಮ ಸಿನೇಮಾ ರಂಗದಲ್ಲಿನ ವರ್ಚಸ್ಸಿನಿಂದ ರಾಜಕೀಯಕ್ಕೆ ಪ್ರವೇಶಿಸಿದವರು ಹಲವರಿದ್ದಾರೆ.
ಆಂಧ್ರಪ್ರದೇಶದಲ್ಲಿ ಎನ್ ಟಿ ಆರ್ ರಾಜಕೀಯದಲ್ಲಿ ಸೃಷ್ಟಿಸಿದ ಹವಾದ ಬಗ್ಗೆ ಇಡೀ ದೇಶ ಮಾತನಾಡುತ್ತದೆ. ತಮಿಳುನಾಡಿನಲ್ಲಿ ಎಂಜಿಆರ್ ಮತ್ತು ಅಮ್ಮಾ ಜಯಲಲಿತಾ ಮಾಡಿದ ರಾಜಕೀಯ ಮೋಡಿಯದ್ದು ದೊಡ್ಡ ಇತಿಹಾಸ. ಜಯಲಲಿತಾ ಬಗ್ಗೆ ಇವತ್ತಿಗೂ ತಮೀಳರಲ್ಲಿ ಒಂದು ಕೃತಜ್ಞತಾ ಭಾವವಿದೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈ ಪವರ್ ಹೌಸ್ ಸ್ಟಾರ್ ಗಳು ಬಾಕ್ಸ್ ಆಫೀಸ್ ನಲ್ಲಿ ಆ ಕಾಲದಲ್ಲಿ ಧೂಳ್ ಎಬ್ಬಿಸಿದ್ದರು. ಸಿನೆಮಾ ತೆರೆಯಲ್ಲಿ ಜನಮನ ಗೆದ್ದಿದ್ದ ಇಬ್ಬರೂ ರಾಜಕೀಯದಲ್ಲಿಯೂ ದೊಡ್ಡ ಯಶಸ್ಸು ಪಡೆದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಹತ್ತರವಾದ ಪಾತ್ರ ಪಡೆದು ಅಜರಾಮರಾದರು. ಸಿನೆಮಾ ಕ್ಷೇತ್ರದ ವರ್ಚಸ್ಸಿನ ಮೂಲಕವೇ ರಾಜಕೀಯ ಪ್ರವೇಶ ಕಂಡಿದ್ದ ಅವರು ಸಿನೆಮಾ ಕ್ಷೇತ್ರದಲ್ಲಿ ತಮಗಿದ್ದ ಅಭಿಮಾನವನ್ನು ರಾಜಕೀಯದಲ್ಲಿ ಮತಗಳಾಗಿ, ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದರು. ತಮ್ಮದೇ ಆದ ಸಿನೆಮಾ ವರ್ಚಸ್ಸಿನ ಮೂಲಕ ರಾಜಕೀಯದಲ್ಲಿ ಮೈಲೇಜ್ ಪಡೆದುಕೊಂಡರು.
ರಾಜಕೀಯದಲ್ಲಿ ಇದೊಂದು ತಾರ್ಕಿಕ ಹೆಜ್ಜೆ ಎಂದು ಕಾಣಿಸುತ್ತದೆ. ಚಿತ್ರರಂಗದ ಶ್ರೇಷ್ಠ ಮಾನ್ಯರ ಹೆಸರುಗಳು ಮತ್ತು ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸುವುದು ರಾಜಕೀಯದ ತಂತ್ರಗಳಲ್ಲಿ ಒಂದಾಗಿ ಬಿಟ್ಟಿದೆ. ಈ ದೇಶ ಸಿನೆಮಾ ನಟ ನಟಿಯರ ಮೇಲೆ ಯಾವ ರೀತಿಯ ಹುಚ್ಚು ಅಭಿಮಾನ ಹೊಂದಿದೆ ಎಂದರೇ, ಅಭಿಮಾನದ ಪರಾಕಾಷ್ಠೆಯಲ್ಲಿ ಇಲ್ಲಿ ಸಿನೆಮಾ ತಾರೆಯರಿಗೆ (ಖುಷ್ಬು) ದೇವಸ್ಥಾನ ಕಟ್ಟಿದ ಉದಾಹರಣೆಯೂ ಇದೆ.
ಕರ್ನಾಟಕದಲ್ಲಿ, ಸಿನಿಮಾ ತಾರೆಯರು ಮತ್ತು ರಾಜಕೀಯದ ನಡುವಿನ ಸಂಪರ್ಕವು ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ ಎಂದು ತೋರುತ್ತದೆ. ಈ ದಕ್ಷಿಣ ರಾಜ್ಯದಲ್ಲಿ ಸಿನೇಮಾ ತಾರೆಯರ ಮೇಲೆ ಇರುವ ಆರಾಧನೆಯು ಕಡಿಮೆಯೇನಲ್ಲ. ಅಭಿಮಾನಿಗಳ ಸಂಘಗಳು ಮತ್ತು ದೈತ್ಯ ಕಟೌಟ್ ಗಳು ಮತ್ತು ಅವರ ಸ್ಟ್ಯಾಚ್ಯೂಗಳು, ಈಗೀಗ ಅಂತೂ ಸೋಶಿಯಲ್ ಮೀಡಿಯಾಗಳಲ್ಲಿ ಸೋ ಕಾಲ್ಡ್ ʼಫ್ಯಾನ್ಸ್ ಕ್ಲಬ್ʼ ಇತ್ಯಾದಿ ಇತ್ಯಾದಿಗಳು ಹುಚ್ಚು ಅಭಿಮಾನದ ಗುರುತುಗಳು. ಆದರೆ ಇವೆಲ್ಲವೂ ನಡೆಯುವುದು ಸಿನೇಮಾ ಕಾರಣಕ್ಕಾಗಿಯೇ ಹೊರತು, ಅವರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಅಲ್ಲ.
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್, ಮೇರು ನಟ ಡಾ. ರಾಜ್ ಕುಮಾರ್. ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರು. ಡಾ. ರಾಜ್ ಪಕ್ಷಾತೀತವಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಸಿನೇಮಾ ಕ್ಷೇತ್ರದ ಜೊತೆಜೊತೆಗೆ ರಾಜ್ ಕನ್ನಡದ ನಾಡು ನುಡಿ, ಜಲಕ್ಕಾಗಿ ಕೆಲಸ ಮಾಡಿದ್ದರು. ಕನ್ನಡದ ಉಳಿವು ಮತ್ತು ಬಳಕೆಯ ಆಶಯದ ಬಗ್ಗೆ ತಮ್ಮ ನಿಲುವಿನಲ್ಲಿ ಅವರಲ್ಲಿ ಸ್ಪಷ್ಟತೆ ಇತ್ತು. ಮತ್ತು ನೆರೆಯ ರಾಜ್ಯಗಳೊಂದಿಗೆ ಕಾವೇರಿ ನೀರು ಹಂಚಿಕೆಯ ವಿಷಯ ಬಂದಾಗ ಕರ್ನಾಟಕದ ಹಿತಾಸಕ್ತಿಗೆ ಪರವಾಗಿ ದುಡಿದ್ದರು. ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟವಾಗಲಿ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲುವುದಾಗಲಿ, ಯಾವುದೇ ರಾಜಕೀಯ ನಾಯಕರಿಗೆ ಪರೋಕ್ಷವಾಗಲಿ ಅಥವಾ ಪ್ರತ್ಯಕ್ಷವಾಗಲಿ ಬೆಂಬಲ ಸೂಚಿಸುವುದಾಗಲಿ, ಚುನಾವಣಾ ಪ್ರಚಾರಗಳಲ್ಲಿ ಎಂದೂ ಭಾಗಿಯಾದವರಲ್ಲ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ರಾಜಕೀಯಕ್ಕೆ ಪ್ರವೇಶಿಸಿದ್ದರೇ ರಾಜ್ಯದ ಯಾವುದೇ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದರೂ, ಯಾವುದೇ ಪಕ್ಷದಿಂದಲೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಗೆಲ್ಲಬಹುದಿತ್ತು. ಇನ್ನು, ಅವರ ಮೂವರು ಪುತ್ರರು ಕೂಡ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಹಿರಿಯ ಮಗ ಶಿವ ರಾಜ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ವಿವಾಹವಾದರು. ರಾಜ್ ಕುಟುಂಬಕ್ಕೆ ಶಿವ ರಾಜ್ ಕುಮಾರ್ ವಿವಾಹದಿಂದಾಗಿ, ರಾಜಕೀಯದ ಸ್ಪರ್ಶ ಹೊಂದಿತ್ತಾದರೂ, ಡಾ. ರಾಜ್ ಆಗಲಿ, ಅವರ ಮಕ್ಕಳಾಗಲಿ ರಾಜಕೀಯ ಪ್ರವೇಶವನ್ನು ಬಯಸಲಿಲ್ಲ ಎನ್ನುವುದು ಗಮನಾರ್ಹ ವಿಚಾರ.
ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರಾದರೂ, ಅವರು ಕೂಡ ರಾಜಕೀಯ ಮತ್ತು ರಾಜಕೀಯ ಪಕ್ಷಗಳಿಂದ ದೂರವಿದ್ದರು.
ಕರ್ನಾಟಕದ ಇತರ ನಟರು ರಾಜ್ಯದಲ್ಲಿ ರಾಜಕೀಯ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಖಂಡಿತವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಹಾಗೆ ಅವರ ಉದ್ಯಮದ ಸಹೋದ್ಯೋಗಿಗಳ ಪ್ರಭಾವದಿಂದ ಅಲ್ಲ.
ಇತ್ತೀಚೆಗಷ್ಟೆ ರಾಜಕೀಯದ ನೀರಲ್ಲಿ ಮುಳುಗಿರುವ ಸ್ಟಾರ್ ನಟ ಕಿಚ್ಚ ಸುದೀಪ್, ಇಂದು ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬಿಜೆಪಿ ಪ್ರಚಾರಕ್ಕೆ ಅವರ ಬೆಂಬಲದ ಘೋಷಣೆ ಹಲವು ಮೂಲಗಳಿಂದ ಬಂದಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಅಂತಿಮವಾಗಿ ಅವರೇ ಖುದ್ದಾಗಿ ಅವರ ಪ್ರೀತಿಯ ಮಾಮಾ ಬೊಮ್ಮಾಯಿ ಅವರು ಹೇಳಿದೆಡೆ ಪ್ರಚಾರ ಮಾಡುವುದಾಗಿ ಘೋಷಿಸಿದರು. ಅವರ ಮೇಲಿನ ಅಭಿಮಾನಕ್ಕಾಗಿ ಹೊರತು ಹಣಕ್ಕಾಗಿ ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದರು. ಐಟಿ ದಾಳಿಗೆ ಹೆದರಿ ಸುದೀಪ್ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂಬ ಚರ್ಚೆಯೂ ರಾಜಕೀಯದಲ್ಲಿ ಸೃಷ್ಟಿಯಾಯಿತು (೨೦೧೯ರ ಜನವರಿಯಲ್ಲಿ ಸುದೀಪ್ ಮನೆ ಮೇಲೆ ಐಟಿ ದಾಳಿ ನಡೆಸಿತ್ತು). ಇನ್ನು, ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸುದೀಪ್ ಭೇಟಿ ಮಾಡಿದಾಗ ಸುದೀಪ್ ಈ ಬಾರಿ ಕಾಂಗ್ರೆಸ್ ಪರ ಪ್ರಚಾರ ಮಾಡಬಹುದೇನೋ ಎಂಬ ಚರ್ಚೆಯಾಗಿತ್ತು. ಮಾತ್ರವಲ್ಲದೇ, ಸುದೀಪ್ ೨೦೧೮ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು, ಅಂದು ಕೂಡ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ಗೌರವಕ್ಕಾಗಿ ಪ್ರಚಾರ ಮಾಡಲು ಒಪ್ಪಿದ್ದೇನೆ, ಹಣಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದರು ಸುದೀಪ್.
ಸುದೀಪ್ ಎಷ್ಟೇ ಪ್ರೀತಿ, ಗೌರವ, ಅಭಿಮಾನದಿಂದಷ್ಟೇ ಪ್ರಚಾರ ಮಾಡುತ್ತಿದ್ದೇನೆ ಅಂದರೂ ಅದರ ಹಿಂದೆ ಬೇರೆ ವಿಷಯವೇ ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದಂತೂ ಸತ್ಯ, ಸುದೀಪ್ ಪೂರ್ಣ ಮನಸ್ಸಿನಿಂದ ಯಾವ ಪಕ್ಷವನ್ನು ಒಪ್ಪಿದಂತೆ ಕಾಣಿಸುತ್ತಿಲ್ಲ.
೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಜಿಏಫ್ ಖ್ಯಾತಿಯ ಯಶ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡಿದರು. ಅಭ್ಯರ್ಥಿಯೇ ಮುಖ್ಯ, ಪಕ್ಷವಲ್ಲ ಎಂದು 'ರಾಕಿಂಗ್ ಸ್ಟಾರ್' ಹೇಳಿದ್ದರು. ಇದು ಮತ್ತೊಂದು ಥರದಲ್ಲಿ ಚರ್ಚೆಯಾಗಿತ್ತು.
ನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು. ೨೦೧೯ ರಲ್ಲಿ ಚುನಾಯಿತರಾದಾಗ, ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ನಿಂದ ಪಕ್ಷ ಸೇರ್ಪಡೆಗೆ ಪ್ರಯತ್ನಗಳು ಅಂದು ನಡೆದಿತ್ತಾದರೂ ಸುಮಲತಾ ಒಪ್ಪಿರಲಿಲ್ಲ. ಅದೇನೇ ಇದ್ದರೂ, ಅವರ ಪತಿ, 'ರೆಬೆಲ್ ಸ್ಟಾರ್' ಅಂಬರೀಶ್, ಬಹುಶಃ ಕನ್ನಡ ಚಲನಚಿತ್ರ ತಾರೆಯರಲ್ಲಿ ಮಹತ್ವದ ರಾಜಕೀಯ ವೃತ್ತಿಜೀವನವನ್ನು ಹೊಂದಿರುವ ದೊಡ್ಡ ಹೆಸರು. ಅಂಬರೀಶ್ ಅವರು ಕಾಂಗ್ರೆಸ್ ಮತ್ತು ಜನತಾದಳದೊಂದಿಗೆ ರಾಜಕೀಯದಲ್ಲಿದ್ದು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು ಮತ್ತು ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ (೨೦೧೩) ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು.
ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಅನಂತ್ ನಾಗ್ ಅವರು ರಾಜ್ಯದಲ್ಲಿ ಜೆ.ಎಚ್.ಪಟೇಲ್ ಅವರ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೇ, ಈಗ ಅನಂತ ನಾಗ್ ರಾಜಕೀಯದ ಸಿದ್ಧಾಂತ ಬದಲಾಯಿಸಿಕೊಂಡಿದ್ದು, ನೇರನೇರವಾಗಿ ತಾವು ಮೋದಿ ಮತ್ತು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿಕೊಳ್ಳುತ್ತಾರೆ.
ಇತ್ತೀಚೆಗಿನ ವರ್ಷಗಳಲ್ಲಿ, ಹಲವು ಇತರ ನಟರು ವಿವಿಧ ಹಂತದ ಯಶಸ್ಸಿನೊಂದಿಗೆ ರಾಜ್ಯದಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದಾರೆ - 'ಮುಖ್ಯಮಂತ್ರಿ' ಚಂದ್ರು, ಉಮಾಶ್ರೀ ಮತ್ತು ಕುಮಾರ್ ಬಂಗಾರಪ್ಪ (ಎಸ್ ಬಂಗಾರಪ್ಪ ಅವರ ಪುತ್ರ), ನಿಖಿಲ್ ಕುಮಾರ್ ಸ್ವಾಮಿ ( ಅವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದರು - ಸುಮಲತಾ ವಿರುದ್ಧ ಸೋತರು) ಮಂಡ್ಯದ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ), ಉಪೇಂದ್ರ ( ಅವರು ರಾಜಕೀಯ ಎಂದು ಹೇಳಿಕೊಳ್ಳುವುದಕ್ಕೆ ತಯಾರಿಲ್ಲದಿದ್ದರೂ ಒಂದು ರೀತಿಯಲ್ಲಿ ಅವರದ್ದು ʼಪ್ರಜಾಕೀಯʼದ ಮೂಲಕ ರಾಜಕೀಯ ಪ್ರವೇಶವೇ ಹೌದು ಅಂತಂದುಕೊಳ್ಳಬಹುದು) ಹಾಗೂ ಇನ್ನಿತರ ಪ್ರಮುಖರನ್ನು ಕಾಣಬಹುದು.
ಒಟ್ಟಾರೆಯಾಗಿ, ಚಲನಚಿತ್ರ ತಾರೆಯರು ರಾಜಕೀಯ ಪ್ರವೇಶಿಸಿದಾಗ ಒಂದಿಷ್ಟು ಕುತೂಹಲ ರಾಜಕೀಯವಾಗಿ ಸೃಷ್ಟಿಯಾಗುವುದು ಸಹಜ. ಸುದೀಪ್ ಈ ಚುನಾವಣೆಯಲ್ಲಿ ಸುದ್ದಿಯಲ್ಲಿದ್ದಾರೆ. ಸುದೀಪ್ ರಿಂದ ಏನು ರಾಜಕೀಯವಾಗಿ ಬದಲಾಗಬಹುದು..? ಬಿಜೆಪಿಗೆ ಲಾಭವೇ ನಷ್ಟವೇ..? ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ







