Thursday, August 18, 2022

ಲೋಕಾಯುಕ್ತಕ್ಕೆ ಪವರ್ : ಅಧಿಕಾರಿಗಳ ‘ಕ್ರಮಬಾಹೀರ’ ಬಟ್ಟಬಯಲು.?

ಸರ್ವಪಕ್ಷದ ನಾಯಕರು ಲೋಕಾಯುಕ್ತದ ಬಲ ಕುಂದುವುದನ್ನೇ ಕಾದು ಕುಳಿತಿದ್ದರು..!

2016ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ದಾಖಲಿಸಲು ಹಾಗೂ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಹೊಂದಿದ್ದ ಅಧಿಕಾರವನ್ನು ಹಿಂಪಡೆದು ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಈ ತೀರ್ಪಿನಿಂದ ಎಸಿಬಿ ಪೂರ್ಣ ಪ್ರಮಾಣದಲ್ಲಿ ರದ್ದಾಗಿದೆ. ಈ ತೀರ್ಪು ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. 

ರಾಜಕಾರಣಿಗಳ ಸಿಂಹಸ್ವಪ್ನದಂತಿದ್ದ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೇರ್ಪಡಿಸಿ ಸರ್ಕಾರದ ಅಧೀನಕ್ಕೆ ತೆಗೆದುಕೊಂಡಿದೆ ಎಂಬ ಆರೋಪವೂ ಇದೆ. ೨೦೧೫ರಲ್ಲಿ ಮುಖ್ಯ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು, ಮಾತ್ರವಲ್ಲದೇ ಈ ಪ್ರಕರಣದಲ್ಲಿ ಅವರ ಮಗ ಜೈಲು ಪಾಲಾಗಿದ್ದರು. ಬಹುತೇಕ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ತನಿಖಾ ಸಂಸ್ಥೆಯನ್ನು ರಚಿಸಿಕೊಂಡಿದ್ದವು ಎಂಬ ಕಾರಣಕೊಟ್ಟು ಸಿದ್ದರಾಮಯ್ಯ ಸರ್ಕಾರ, ಜನ ಪ್ರತಿನಿಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಳಕಿಗೆ ಬಂದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವೊಂದನ್ನು ತನ್ನ ಅಧೀನಕ್ಕೊಳಪಡುವ ಹಾಗೆ ರಚಿಸಿತ್ತು. ಇದಕ್ಕೂ ಮುಂಚೆ ಈ ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯ ಒಂದು ಮುಖ್ಯ ಅಂಗವಾಗಿತ್ತು. ಆಡಳಿತ ಸುಧಾರಣೆ ಇಲಾಖೆಯ ಅಧೀನಕ್ಕೆ ಒಳಪಡುವ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಒಟ್ಟಿನಲ್ಲಿ, ಈಗ ಲೋಕಾಯುಕ್ತ ತನ್ನ ಹಳೆ ಖದರ್ ಪಡೆಯುವಂತಾಗಬೇಕು ಎಂಬ ಹೈಕೋರ್ಟ್ ನೀಡಿದ ಆದೇಶದಿಂದಾಗಿ ಕೆಲವು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ರದ್ದು - ಮರುಜೀವ ಕಂಡ ಲೋಕಾಯುಕ್ತ : ಲೋಕಾಯುಕ್ತ ರದ್ದು – ಮರು ಜೀವ ಕಂಡಿದ್ದು ಇದೇ ಮೊದಲಲ್ಲ. ಇದ್ದೂ ಇಲ್ಲದಂತೆ ಕೂಡ ಆಗಿದ್ದಿದೆ. ನಾಗರಿಕರ ಕುಂದುಕೊರತೆಗಳಿಗೆ ಪರಿಹಾರ ನೀಡುವುದಕ್ಕೆ ಸಲುವಾಗಿ ೧೯೬೬ರಲ್ಲಿ ಆಡಳಿತ ಸುಧಾರಣಾ ಆಯೋಗದ ವರದಿಯು ಫೆಡರಲ್ ಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ದೇವರಾಜ್ ಅರಸ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಆರ್ಡಿನೆನ್ಸ್ ಆಕ್ಟ್ ೧೯೭೯ನನ್ನು ಮೊಟ್ಟಮೊದಲ ಬಾರಿಗೆ ಚಲಾಯಿಸಿದರು ಮತ್ತು ರಾಜ್ಯಕ್ಕೆ ಮೊದಲ ಲೋಕಾಯುಕ್ತರನ್ನು ನೇಮಕ ಮಾಡಿಕೊಳ್ಳಲಾಯಿತು. ದೇವರಾಜ್ ಅರಸ್ ಅವರ ನಿಧನದ ನಂತರ ಆರ್. ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಇದೇ ಸಂಸ್ಥೆಯನ್ನು ರದ್ದುಗೊಳಿಸಲಾಯಿತು ಎನ್ನುವುದು ಇಲ್ಲಿ ಗಮನಾರ್ಹ. ತರುವಾಯ ರಾಮಕೃಷ್ಣ ಹೆಗ್ಡೆ ಅವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಧಾನಸಭೆಯಲ್ಲಿ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ಮಸೂದೆಯನ್ನು ೧೯೮೩ರ ಚುನಾವಣಾ ಪ್ರಣಾಳಿಕೆಯ ಅನ್ವಯ ಪರಿಚಯಿಸಿದ ನಂತರ ಈ ಸಂಸ್ಥೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಮೂಲಕ ರಾಜ್ಯದಲ್ಲಿ ಮರುಜೀವ ತುಂಬಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಒಮ್ಮೊಮ್ಮೆ ಜೀವನ್ಮೃತ ಸ್ಥಿತಿಯಲ್ಲಿಯೂ ಈ ಸಂಸ್ಥೆ ಕಾರ್ಯ ನಿರ್ವಹಿಸಿದ ಉದಾಹರಣೆಯೂ ಇದೆ. ೨೦೧೫ರಲ್ಲಿ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಸಂಸ್ಥೆಯ ಬಲ ಕುಂದಿಸಿ ಪ್ರತ್ಯೇಕ ಎಸಿಬಿಯನ್ನು ರಚಿಸಿ ತನ್ನ ಅಧೀನದಲ್ಲಿ ಇರುವ ಹಾಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಇನ್ನು, ಅಧಿಕಾರಕ್ಕೆ ಬಂದರೇ ಎಸಿಬಿಯನ್ನು ರದ್ದುಗೊಳಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಯಲ್ಲಿ ಬಿಜೆಪಿ ಹೇಳಿಕೊಂಡಿತ್ತು, ಅದಕ್ಕೆ ಪೂರಕವೆಂಬಂತೆ ಈಗ ಹೈಕೋರ್ಟ್ ತೀರ್ಪು ನೀಡಿದೆ. ಅಂತೆಯೇ ಬಿಜೆಪಿ ಸರ್ಕಾರ ರಾಜಕೀಯ ಲಾಭ ಹಾಗೂ ಮುಂದೆ ಎದುರಾಗಬಲ್ಲ ಎಲ್ಲಾ ಅನಾಹುತಗಳನ್ನು ಅಳೆದು ತೂಗಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆಯೇ, ಲೋಕಾಯುಕ್ತಕ್ಕೆ ಮತ್ತೆ ಮೊದಲಿನ ಬಲ ನೀಡುವಂತೆ ಹೈಕೋರ್ಟ್ ಆದೇಶಿಸಿದಂತೆಯೇ ನಡೆದುಕೊಳ್ಳುವುದಾಗಿ ಹೇಳಿರುವುದು ಗಮನಾರ್ಹ.   

ಖದರ್ ವೆಂಕಟಾಚಲ ಬೇಟೆಗೆ ಬೆದರಿದ ರಾಜಕಾರಣ : ೨೦೦೧ ರಿಂದ ೨೦೦೬ರವರೆಗೆ ಕರ್ನಾಟಕದ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ ಕೆಲವೇ ಕೆಲವು ಲೋಕಾಯುಕ್ತರಲ್ಲಿ ಒಬ್ಬರು. ಕರ್ಣಾಟಕದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಖಾಸಗಿ, ಅರೆಖಾಸಗಿ ಕಚೇರಿಗಳು, ಸರ್ಕಾರಕ್ಕೆ ಒಳಪಡುವ ಎಲ್ಲಾ ಇಲಾಖೆಗಳ ಮೇಲೆ ದಾಳಿ ಮಾಡಿ ಭ್ರಷ್ಟಾಚಾರದ ಕರಾಳ ಮುಖವನ್ನು ಬಟ್ಟಬಯಲಾಗಿಸಿದರು. ಅಧಿಕಾರದ ಮದದಲ್ಲಿ ಆಸ್ತಿಬಾಕ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ರಾಜ್ಯ ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿದ್ದ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು, ಅವ್ಯವಹಾರವನ್ನು ತೆರೆದಿಟ್ಟರು. ಲೋಕಾಯುಕ್ತ ಸಂಸ್ಥೆಯ ಪವರ್‌ನನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೆಂಕಟಾಚಲ ಅವರ ನಿವೃತ್ತಿಯ ಬಳಿಕ ಅವರ ಸಾಮಾಜಿಕ ಕಾಳಜಿ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ ನೋಡಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನೇತೃತ್ವದ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿಕೊಂಡಿತ್ತು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದಲ್ಲಿ ದೇಶದ ಪ್ರಧಾನಿಯನ್ನೂ ಕೂಡ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸುವಂತಹ ಬ್ರಿಟನ್‌ನಲ್ಲಿರುವ ಭ್ರಷ್ಟಾಚಾರ ತಡೆ ಕಾನೂನು ನಮ್ಮ ದೇಶದಲ್ಲಿಯೂ ಬರಬೇಕು ಎಂಬ ಅಭಿಪ್ರಾಯವನ್ನು ವೆಂಕಟಾಚಲ ಹೊಂದಿದ್ದರು. ಕಾರ್ಯಾಂಗದಲ್ಲಿನ ಲಂಚಬಾಕತನದ ಕರಾಳ ಮುಖಕ್ಕೆ ಬಿಗ್ ಶಾಕ್ ನೀಡಿದ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲವರ ಕಾರ್ಯವೈಖರಿಗೆ ಲೋಕಾಯುಕ್ತರಾಗಿ ನೇಮಿಸಿಕೊಂಡಿದ್ದ ಅಂದಿನ ಸರ್ಕಾರದ ಕೆಲವು ಸಚಿವರು ಹಾಗೂ ಇಡೀ ರಾಜಕೀಯ ವಲಯವೂ ಕೂಡ ಬೆದರಿತ್ತು ಎನ್ನುವುದು ಇಲ್ಲಿ ಮುಖ್ಯಾಂಶ.

ಸಂತೋಷ್ ಹೆಗ್ಡೆ ಎಂಬ ರಾಜಕಾರಣಿಗಳ ಪಾಲಿನ ದುಸ್ವಪ್ನ :  ರಾಜಕಾರಣಿಗಳ ಕನಸಿನಲ್ಲಿಯೂ ಲೋಕಾಯುಕ್ತಾ ಕಾಣುವ ಹಾಗೆ ಮಾಡಿದ ನಾಡು ಕಂಡ ಉತ್ತಮ ಲೋಕಾಯುಕ್ತರೆಂದರೇ ಅದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ವೆಂಕಟಾಚಲ ಅವರ ಲೋಕಾಯುಕ್ತ ಅಧಿಕಾರವಧಿಯ ಬಳಿಕ ಕರ್ನಾಟಕ ಲೋಕಾಯುಕ್ತರಾಗಿ ನೇಮಕಗೊಂಡವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಹೆಗ್ಡೆ, ಭ್ರಷ್ಟರ ಹುಟ್ಟಡಗಿಸಿ ಇಡೀ ದೇಶಕ್ಕೆ ಲೋಕಾಯುಕ್ತದ ಖದರ್, ಪವರ್ ಏನು ಎಂಬುವುದನ್ನು ಮತ್ತೆ ಪರಿಚಯಿಸಿಕೊಟ್ಟರು. ಬಳ್ಳಾರಿ ಗಣಿಗಳಲ್ಲಿ ಕಂಡು ಬಂದ ಕ್ರಮಬಾಹೀರ ಚಟುವಟಿಕೆಗಳನ್ನು ಹೆಗ್ಡೆ ಬಟ್ಟಬಯಲುಗೊಳಿಸಿ, ಗಣಿ ದೊರೆಗಳ ಅಟ್ಟಹಾಸದ ಹುಟ್ಟಡಗಿಸಿದರು. ಓಬಳಾಪುರಂ ಮೈನಿಂಗ್ ಕಂಪೆನಿಯ ಸ್ವಾಮ್ಯತ್ವದಲ್ಲಿರುವ ಹಾಗೂ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಮಾಲೀಕತ್ವದ ಗಣಿಗಳೂ ಕೂಡ ಇವುಗಳಲ್ಲಿ ಸೇರಿದ್ದವು ಎನ್ನುವುದು ಇಲ್ಲಿ ಗಮನಾರ್ಹ.

ಬಳ್ಳಾರಿಯ ಕಬ್ಬಿಣ ಹಾಗೂ ಅದಿರಿನ ಗಣಿಗಾರಿಕೆಯಲ್ಲಿ ನಡೆಯುತ್ತಿದ್ದ ನಿಯಮ ಬಾಹೀರ ಚಟುವಟಿಕೆಗಳು, ಭ್ರಷ್ಟಾಚಾರಗಳನ್ನು ವರದಿ (೧೬೦. ೮೫ ಶತಕೋಟಿ ವಂಚನೆ ಪ್ರಕರಣ) ಮೂಲಕ ಹೆಗ್ಡೆ ಬಹಿರಂಗಗೊಳಿಸಿದರು. ಗಣಿಗಾರಿಕೆಗೆ ಅವಕಾಶ ನೀಡಿದ್ದ ಭೌಗೋಳಿಕ ಪ್ರದೇಶದಲ್ಲಿನ ಉಲ್ಲಂಘನೆ, ಅರಣ್ಯ ಪ್ರದೇಶದ ಒತ್ತುವರಿ, ರಾಜ್ಯ ಗಣಿಗಾರಿಕೆಯ ರಾಯಧನಗಳು ತುಲನಾತ್ಮಕವಾಗಿ ತೀರಾ ಅಲ್ಪ ಪ್ರಮಾಣದಲ್ಲಿ ಪಾವತಿಯಾಗಿರುವುದು ಹಾಗೂ ಸರ್ಕಾರದ ಗಣಿಗಾರಿಕಾ ಅಸ್ತಿತ್ವದಲ್ಲಿನ ಅವ್ಯವಸ್ಥೆಗಳೆಲ್ಲವೂ ಹೆಗ್ಡೆ ಸೃಷ್ಟಿಸಿದ ವರದಿಗೆ ಸಾಕ್ಷಿಗಳಾಗಿ ದೊರೆತವು. ಗಣಿದೊರೆಗಳಿಗೆ  ಜೈಲೂಟ ಉಣ್ಣಿಸಿದರು. ಇನ್ನು, ಅವ್ಯಾಹತವಾಗಿ ನಡೆದ ಪ್ರತಿಭಟನೆ, ಸಾರ್ವಜನಿಕ ವಲಯದ ಒತ್ತಡದ ತರುವಾಯ ೩೫ ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕಬ್ಬಿನದ ಅದಿರಿನ ಒಳಗೊಂಡಿರುವ, ಬೇಲಿಕೇರಿ ಬಂದರಿನಲ್ಲಿ ನಡೆದ ಕಾನೂನು ಬಾಹೀರ ಕಬ್ಬಿಣ – ಅದಿರಿನ ರಫ್ತು ವ್ಯವಹಾರವನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್ ಯಡಿಯೂರಪ್ಪ ಒಪ್ಪಿಕೊಂಡರು. ಈ ಪ್ರಕರಣವು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಹುದ್ದೆಗೆ ರಾಜೀನಾಮೆ ನೀಡುವಂತಾಗಿ ಜೈಲಿಗೆ ಕಳುಹಿಸಿತ್ತು. 

ಇನ್ನು, ಕೈಗಾರಿಕಾ ಯೋಜನೆಗಳಿಗೆ ಸಂಬAಧಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ೧೦೭ ಕೋಟಿ ಮೌಲ್ಯದ ವಂಚನೆಯನ್ನು ಹೆಗ್ಡೆ ಬಯಲುಗೊಳಿಸಿದ್ದರು. ಹೀಗೆ ಲಂಚಬಾಕ, ಅಧಿಕಾರ ದಾಹಿ ಜನ ಪ್ರತಿನಧಿಗಳ ವಿರುದ್ಧ ಸರಣಿ ಕೇಸುಗಳನ್ನು ದಾಖಲಿಸಿ ಸೇವೆಯಿಂದ ಅಮಾನತು ಮಾಡುವಂತೆ ಶಿಪಾರಸ್ಸು ಮಾಡುವುದರ ಮೂಲಕ ಅಧಿಕಾರಿಳು ಹಾಗೂ ರಾಜಕಾರಣಿಗಳ ಪಾಲಿಗೆ ಹೆಗ್ಡೆ ದುಸ್ವಪ್ನದಂತಾಗಿದ್ದಂತೂ ಸತ್ಯ. 

ಲೋಕಾಯುಕ್ತ ಬಲ ಕುಂದುವುದನ್ನೇ ಕಾದಿದ್ದ ಸರ್ವಪಕ್ಷದ ನಾಯಕರು :  ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಮೇಲೆಯೇ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪದಿಂದಾಗಿ ವಿಶೇಷ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸುವ ಬೆಳವಣಿಗೆ ನಡೆಯಿತು. ತನಿಖೆಯಲ್ಲಿ ಅಂದು ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಪುತ್ರ ಅಶ್ವಿನ್ ಲೋಕಾಯುಕ್ತ ಹೆಸರಿನಲ್ಲಿ ಲಂಚ ಕೇಳಿದ ವಿಚಾರ ಬಯಲಾಯಿತು. ನಂತರ ಸಿದ್ದರಾಮಯ್ಯ ಸರ್ಕಾರ ಪರೋಕ್ಷವಾಗಿ ಲೋಕಾಯುಕ್ತದಿಮದ ಎಸಿಬಿಯನ್ನು ಬೇರ್ಪಡಿಸಿ ಲೋಕಾಯುಕ್ತದ ಬಲ ಕುಂದಿಸುವ ಹಾಗೆ ಮಾಡಿತ್ತು. ಅದು ಲೋಕಾಯುಕ್ತ ಇದ್ದರೂ ಇಲ್ಲದ ಹಾಗಿನ ಸ್ಥಿತಿಗೆ ತಂದಿಟ್ಟಿತ್ತು. ಇದು ರಾಜಕಾರಣಿಗಳ ಪಾಲಿಗೆ ಸಿಹಿ ಸುದ್ದಿಯಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದಿಂದಾಗಿ ಹಲವಾರು ಅಧಿಕಾರಿಗಳು, ರಾಜಕಾರಣಿಗಳು ಜೈಲು ವಾಸ ಕಾಣುವಂತಾಗಿದೆ. ಹಲವು ಘಟಾನುಘಟಿ ನಾಯಕರ ವಿರುದ್ಧ ದೂರು ಕೂಡ ದಾಖಲಾಗಿದ್ದವು. ಎಸಿಬಿ ರಚನೆಯಿಂದಾಗಿ ಲೋಕಾಯುಕ್ತ ತನ್ನ ಬಲಕಳೆದುಕೊಂಡಿತ್ತು. ದೂರುಗಳು ವಿಚಾರಣೆಯಾಗದೇ ಹಾಗೆ ಉಳಿದಿದ್ದವು. ಈಗ ಮತ್ತೆ ಲೋಕಾಯುಕ್ತಕ್ಕೆ ಬಲಬರುವಂತಾಗಿದ್ದು, ಘಟಾನುಘಟಿಗಳ ಎದೆಯಲ್ಲಿ ಕಂಪನ ಆರಂಭವಾಗಿದೆ. 

-ಶ್ರೀರಾಜ್ ವಕ್ವಾಡಿ      

Wednesday, August 10, 2022

ಒಡವೆ ಇದ್ದರೂ ಬಡತನದ ಚಿಂತೆಯಲ್ಲಿ ಬಿಜೆಪಿ..!?


(Photo : Internet)

‘ಬಿಜೆಪಿ ಕಥೆ ಮುಗಿತು’ ಶಾಮನೂರು ಭವಿಷ್ಯಕ್ಕೆ ಒತ್ತು ನೀಡಿ ದಾವಣಗೆರೆಯಲ್ಲಿ ಕಾಂಗ್ರೆಸ್ ಹೈಡ್ರಾಮ..!

ಕೆಲವು ಮಾಧ್ಯಮಗಳು ಹಾಗೂ ಆಡಳಿತ ಪಕ್ಷ ಸೃಷ್ಟಿಮಾಡಿದ ದೊಡ್ಡ ಮಟ್ಟದ ‘ಕಾಂಗ್ರೆಸ್ ಆಂತರಿಕ ರಾಜಕೀಯ’, ‘ಒಡೆದು ಇಬ್ಭಾಗವಾದ ಕಾಂಗ್ರೆಸ್’, ‘ಟಗರು ವರ್ಸಸ್ ಬಂಡೆ’ ಎಂಬಿತ್ಯಾದಿ ವಿರೋಧಾಭಿಪ್ರಾಯ, ವಿವಾದಗಳ ನಡುವೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇಯ ವರ್ಷದ ಹುಟ್ಟಹಬ್ಬದ ಅಮೃತಮಹೋತ್ಸವದ ಹೆಸರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಶೋ ಆಫ್’  ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಆಡಳಿತ ಪಕ್ಷ ಬಿಜೆಪಿಯಲ್ಲಿ ತುಸು ಆತಂಕ ಸೃಷ್ಟಿ ಮಾಡಿದೆ. ಈ ನಡುವೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಹೆಸರಿನಲ್ಲಿ ಕಾಂಗ್ರೆಸ್ ಅಧಿಕೃತ ಚುನಾವಣಾ ಕ್ಯಾಂಪೇನ್‌ಗೆ ಚಾಲನೆ ನೀಡಿದೆ ಎಂಬಂತೆಯೇ ಆಗಿದೆ. 

ಹೌದು, ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಮೃತಮಹೋತ್ಸವಕ್ಕೆ ಯಾವುದೇ ಇತರೆ ಪಕ್ಷಗಳ ನಾಯಕರಿಗೆ ಆಹ್ವಾನವಿರಲಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ೭೫ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡು ತಮ್ಮ ಆಪ್ತ ಬಳಗದ ರಾಜಕೀಯ ನಾಯಕರನ್ನು ಬಿಎಸ್‌ವೈ ಆಹ್ವಾನಿಸಿದ್ದರು. ಆ ಸಂಭ್ರಮದಲ್ಲಿ ಸಿದ್ದು, ಬಿಎಸ್‌ವೈ ರಾಜಕೀಯ ಮರೆತು ಪರಸ್ಪರ ಗುಣಗಾನ ಮಾಡಿಕೊಂಡಿದ್ದರು. ಆದರೇ, ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಯಾವುದೇ ಇತರೆ ಪಕ್ಷದ ನಾಯಕರಿಗೆ ಆಹ್ವಾನವೇ ಇದ್ದಿರಲಿಲ್ಲ. ಅಷ್ಟಕ್ಕೂ ಈ ಸಿದ್ದು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದು ಗುಣಗಾನಕ್ಕಿಂತ ಆಡಳಿತ ಪಕ್ಷವನ್ನು ಹಿಗ್ಗಾಮುಗ್ಗಾ ದೂಷಿಸುತ್ತಾ ‘ಭ್ರಷ್ಟ, ಕೋಮುವಾದಿ ಪಕ್ಷ ಬಿಜೆಪಿಯನ್ನು ಕಿತ್ತೊಗೆಯುವ ಸಂಕಲ್ಪ’ ಎಂಬ ಮಾತೇ ಹೆಚ್ಚು ಕೇಳಿಸಿದ್ದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ. ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನ ಒಂದು ಬೃಹತ್ ಜನ ಸಮಾವೇಶ ಮಾಡಿಕೊಳ್ಳುವುದರ ಮೂಲಕ ಜನಾಭಿಪ್ರಾಯ ಪಡೆದುಕೊಳ್ಳುವ ತುರ್ತಿತ್ತು, ಕಳೆದ ಮೂರು ವರ್ಷಗಳಲ್ಲಿನ ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ವಿರೋಧಾಭಿಪ್ರಾಯವನ್ನು ಹುಟ್ಟಿಸುವ ಅಗತ್ಯ ಕಾಂಗ್ರೆಸ್‌ಗಿತ್ತು. ಅಲ್ಲಿಗೆ, ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳದ ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬವೂ ಬಂದಿತ್ತು/ಸಿಕ್ಕಿತ್ತು. ಹೇಳಿಕೇಳಿ ಸಿದ್ದರಾಮಯ್ಯ ರಾಜ್ಯದಲ್ಲಿ ಯಶಸ್ವಿ ಐದು ವರ್ಷಗಳನ್ನು ಪೂರೈಸಿದ ಮಾಜಿ ಮುಖ್ಯಮಂತ್ರಿ, ರಾಜ್ಯದ ಹಿರಿಯ ರಾಜಕಾರಣಿಗಳಲ್ಲೊಬ್ಬರು, ಕಾಂಗ್ರೆಸ್ ಪಕ್ಷದ ಪ್ರಭಾವಿ ಅಹಿಂದ ನಾಯಕ. ಇದೇ ‘ಪರ್ವ ಕಾಲ’ ಎಂದು ಕಾಂಗ್ರೆಸ್ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ನೆಪದಲ್ಲಿ ಚುನಾವಣಾ ಕ್ಯಾಂಪೇನ್‌ಗೆ ಚಾಲನೆ ನೀಡಿದೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಡಿ.ಕೆ ಶಿವಕುಮಾರ್ ಸೇರಿ ಕೆಲವು ಕಾಂಗ್ರೆಸ್ ನಾಯಕರು, ಕಾರ್ಯಕ್ರಮಕ್ಕೂ ಮುಂಚೆ ಮಾಧ್ಯಮಗಳ ಮುಂದೆ ಇದೊಂದು ‘ಪಕ್ಷದ ಕಾರ್ಯಕ್ರಮ’ ಎಂದೇ ಹೇಳಿಕೆ ನೀಡಿದ್ದರು. 

ಒಡವೆ ಇದ್ದರೂ ಬಿಜೆಪಿಗೆ ಬಡತನದ ಆತಂಕ..? : ಸಿದ್ದರಾಮಯ್ಯ ಅಮೃತಮಹೋತ್ಸವದ ಯಶಸ್ವಿ ಕಾರ್ಯಕ್ರಮ ಆಡಳಿತ ಪಕ್ಷಕ್ಕೆ ಆತಂಕ ಸೃಷ್ಟಿಸಿದೆ. ಅಧಿಕಾರ ಹಿಡಿದಾಗಲಿಂದ ಒಂದಿಲ್ಲೊಂದು ಆರೋಪಗಳಿಗೆ, ವಿರೋಧಗಳಿಗೆ ಕೊರಳು ಕೊಡುತ್ತಿರುವ ಆಡಳಿತ ಪಕ್ಷ ಬಿಜೆಪಿ, ತನ್ನ ರಾಜಕೀಯ ಅಲೆಯ ವರ್ಚಸ್ಸಿಗೆ ಮುಸುಕಾಗಿರುವ ಕಳಂಕಗಳನ್ನು ಸರಿಪಡಿಸಿಕೊಳ್ಳಲೆತ್ನಿಸುತ್ತಿರುವಾಗಲೇ ಸಿದ್ದರಾಮಯ್ಯ ಅಮೃತಮಹೋತ್ಸವದ ಯಶಸ್ಸು, ಬಿಜೆಪಿಯಲ್ಲಿ ಭವಿಷ್ಯದ ಪ್ರಶ್ನೆ ಎಬ್ಬಿಸಿರುವುದು ಅಕ್ಷರಶಃ ‘ಒಡವೆ ಇದ್ದರೂ ಬಡವ’ ಎಂಬ ಸ್ಥಿತಿಯಂತಾಗಿದೆ. ಸಿದ್ದು ಅಮೃತಮಹೋತ್ಸವ ಇನ್ನೇನು ಮುಗಿಯತ್ತಿದೆ ಎನ್ನುವಾಗಲೇ ದೆಹಲಿಯಿಂದ ರಾಜ್ಯದತ್ತ ಅಧಿಕೃತ ಕಾರ್ಯಕ್ರಮದ ನಿಮಿತ್ತ ಹೊರಟ ಅಮಿತ್ ಶಾ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿ ಪಕ್ಷದ ಪ್ರಮುಖ ನಾಯಕರನ್ನು ಕರೆಸಿ ಸರ್ಕಾರದ ವರ್ಚಸ್ಸು ಕುಂಟಿತಗೊಂಡಿರುವುದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕಾರವನ್ನು ಅಪರಿಮಿತವಾಗಿ ತೆಗಳಿ ತೆಗಳಿ ಅಧಿಕಾರ ಹಿಡಿದ ಬಿಜೆಪಿಗೆ, ಮಾಜಿ ಮಾಸ್ ಮುಖ್ಯಮಂತ್ರಿಯೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ ಜನಸ್ತೋಮ ನೋಡಿ ಬುಡ ಅಲುಗಾಡಿದಂತಾಗಿದೆ ಎಂಬುವುದಂತೂ ಸತ್ಯ. ಅಮಿತ್ ಶಾ ಕರೆದ ಖಾಸಗಿ ಸಭೆಯಲ್ಲಿ ಶಾ ಸೇರಿ, ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಪ್ರತಿಪಕ್ಷಗಳ ಸಂಘಟನಾ ವೇಗಕ್ಕೆ ಸರಿಯಾಗಿ ಬಿಜೆಪಿ ಸರ್ಕಾರ ನಿರೀಕ್ಷಿತ ಹೆಜ್ಜೆಯಿಡುವಲ್ಲಿ ಕುಂಟಿತಗೊಳ್ಳುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿರುವುದರಿಂದಲೇ, ಬಿಜೆಪಿಗೆ ಎದೆ ನಡುಗಿರುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದಾಗಿದೆ. ಊಹಿಸಿಕೊಳ್ಳಲಾಗದ ಹಿಂದೂ ಕಾರ್ಯಕರ್ತರ ದೊಡ್ಡ ಮಟ್ಟದ ವಿರೋಧ, ೪೦% ಕಮಿಷನ್ ಭ್ರಷ್ಟಾಚಾರ, ಪಿಎಸ್‌ಐ ನೇಮಕಾತಿ ಅಕ್ರಮ ಇತ್ಯಾದಿ ಆರೋಪಗಳ ನಡುವೆ ರಾಜ್ಯದ ಜನರಲ್ಲಿನ ವಿಶ್ವಾಸ ಕಳೆದುಕೊಂಡಿರುವ ಆಡಳಿತ ಪಕ್ಷ, ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಸಲುವಾಗಿ ತರಹೇವಾರಿ ರಾಜಕೀಯ ಲೆಕ್ಕಾಚಾರ ಮಾಡುವುದರ ಜೊತೆಜೊತೆಗೆ ಹಿಂದುಳಿದ ವರ್ಗಗಳ ಮತ ಸೆಳೆಯುವ ಪ್ರಯತ್ನಕ್ಕೆ ವ್ಯೂಹ ಸೃಷ್ಟಿಸುತ್ತಿರುವಾಗಲೇ ‘ಸಮಸ್ತ ಹಿಂದುಳಿದ ವರ್ಗಗಳ ನಾಯಕ’ ಎಂದೇ ಬಿಂಬಿತವಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿಕೊಂಡು ಬಂದ ಜನವರ್ಗದ ಬಗ್ಗೆ ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಿರುವುದಂತೂ ಸತ್ಯ. 

ಅನಾಯಾಸ ತುತ್ತಾಗಿ ಒಲಿದಿತ್ತು ಕಾಂಗ್ರೆಸ್ ಆಂತರಿಕ ರಾಜಕೀಯ :  ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿ ಎಂಬ ಕಾಂಗ್ರೆಸ್ ಹೈಕಮಾಂಡ್‌ನ ಖಡಕ್ ಸೂಚನೆ ಇರುವಾಗಲೂ ‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿತ್ತು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಾನೂ ಕೂಡ ಸಿಎಂ ಹುದ್ದೆಗೆ ದಾವೆದಾರ ಎಂಬುವುದನ್ನು ಬಹಿರಂಗ ಪಡಿಸಿದ್ದು, ಆಡಳಿತ ಪಕ್ಷಕ್ಕೆ ಒಂದು ಅನಾಯಾಸ ತುತ್ತಾಗಿ ಒಲಿದಿತ್ತು. ಕಾಂಗ್ರೆಸ್‌ನಲ್ಲಿ ಒಂದಿಷ್ಟು ಒಳ ರಾಜಕೀಯ ಇದ್ದರೂ ಕೂಡ ಅದು ಹೈಕಮಾಂಡ್ ಸೂಚನೆಯಾದ ಮೇಲೆ ಸ್ವಲ್ಪ ತಣ್ಣಗಾಗಿತ್ತು. ಆದರೇ, ಬಿಜೆಪಿ ಪದೇ ಪದೇ ‘ಬಣ ರಾಜಕೀಯ’ದ ಕೂಗನ್ನು ಎಬ್ಬಿಸುತ್ತಾ ಜನರಲ್ಲಿ ಕಾಂಗ್ರೆಸ್ ಬಗ್ಗೆ ಎಬ್ಬಿಸಿದ್ದ ವಿರೋಧ ಅಲೆಯನ್ನು ಸಿದ್ದರಾಮಯ್ಯ ಅಮೃತಮಹೋತ್ಸವದಲ್ಲಿ ‘ಬಿಜೆಪಿ ಆರೋಪ ಸುಳ್ಳು’ ಎಂಬ ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಣ್ಣಿಗೆ ಇದು ನಾಟಕದಂತೆಯೇ ಕಂಡರೂ, ‘ಇಲ್ಲ ನಮ್ಮಲ್ಲಿ ಅಂತಹ ಯಾವುದೇ ಆಂತರಿಕ ವೈಮಸ್ಸು ಇಲ್ಲವೇ ಇಲ್ಲ’ ಎಂಬುವುದನ್ನು ಜನತೆಗೆ ತೋರಿಸಿಕೊಡುವ ಪ್ರಯತ್ನದಲ್ಲಿ ‘ರಾಹುಲ್ ಗಾಂಧಿ ನಿರ್ದೇಶನ’ವೂ ಕೂಡ ಇಲ್ಲಿ ಯಶಸ್ವಿಯಾಗಿದೆ. ಇನ್ನು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ಆಯ್ಕೆ ಮಾಡಿದರೇ, ಚಿಂತೆ ಏನೂ ಇಲ್ಲ. ಅಬ್ಬಬ್ಬ ಎಂದರೇ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇನ್ನೊಂದು ಐದು ವರ್ಷಗಳಿರಬಹುದು, ತನಗಿನ್ನು ಕಾಲಾವಕಾಶವಿದೆ, ಮುಂದೆ ನೋಡಿದರೇ ಆಯ್ತು, ಆದರೇ, ಆ ಹಾದಿಯ ಸುಗಮಕ್ಕೆ ಇಂದೇ ನೀಲಿ ನಕ್ಷೆ ಹಾಕಿಕೊಳ್ಳುವುದು ಒಳ್ಳೆಯದು” ಎಂಬ ನಿರ್ಧಾರಕ್ಕೆ ಡಿಕೆಶಿ ಬಂದಿರಬಹುದು, ಹಾಗಾಗಿಯೇ ಸಿದ್ದರಾಮಯ್ಯ ಅಮೃತಮಹೋತ್ಸವದ ಮುನ್ನಾ ದಿನ ವರಿಷ್ಠ ರಾಹುಲ್ ಗಾಂಧಿ ನಿರ್ದೇಶಿಸಿದಂತೆ ಡಿಕೆಶಿ ನಡೆದುಕೊಂಡರೇ ಎಂಬ ಪ್ರಶ್ನೆಯೂ ಕೂಡ ಮೂಡುತ್ತಿದೆ. ಕಾರ್ಯಕ್ರಮದಲ್ಲಿದ್ದವರೆಲ್ಲಾ ‘ರೋಬೋ ಪಬ್ಲಿಕ್’ ಆದರೂ ಕೂಡ ಕಾರ್ಯಕ್ರಮದಲ್ಲಿ ‘ಸಿದ್ದರಾಮಯ್ಯ’ ಎಂದು ಹೆಸರು ಕೇಳಿಸಿದಾಗೆಲ್ಲಾ ಜನರು ಹುಚ್ಚೆದ್ದು ಕುಣಿದು, ಕೇಕೆ ಹಾಕಿದ್ದನ್ನು ನೋಡಿ ಕೂಡ ಡಿಕೆಶಿಗೆ ಈ ಸಾರ್ತಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡವೆಂದುಕೊಂಡಿರಬಹುದು ಎಂದೇ ಕಾಣಿಸುತ್ತಿದೆ. ಹಾಗಾಗಿಯೇ ಡಿಕೆಶಿ, ಸಿದ್ದರಾಮಯ್ಯ ಮುಂದಾಳತ್ವ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ ಎಂದು ಹೇಳಿರುವುದಾಗಿ ಎಂದೆನ್ನಿಸುತ್ತಿದೆ. ಒಟ್ಟಿನಲ್ಲಿ, ಮೇಲ್ನೋಟಕ್ಕೆ ಹೈಕಮಾಂಡ್‌ನ ‘ಭಿನ್ನವಾಗಿ ನಡೆದುಕೊಂಡವರು ಎಷ್ಟೇ ದೊಡ್ಡವರಾಗಿದ್ದರೂ ಕಠಿಣ ಕ್ರಮ’ದ ಸೂಚನೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯಾಗಿ ಪರಿಣಮಿಸಿರುವುದು ಸತ್ಯ.    

ನಿಜವಾಗಲಿದೆಯೇ ಶಾಮನೂರು ಭವಿಷ್ಯ..? : ಕಳೆದ ಪಂಚರಾಜ್ಯ ಚುನಾವಣೆಗಳಲ್ಲಿನ ಹೀನಾಯ ಸೋಲಿನ ರುಚಿ ಕಂಡ ಕಾಂಗ್ರೆಸ್, ಮುಂಬರುವ ವರ್ಷದ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಬಗ್ಗೆ ಹಿಂದೆಂದೂ ಮಾಡಿರದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್ ಹೂಡುತ್ತಿರುವ ರಾಜಕೀಯ ಲೆಕ್ಕಾಚಾರದ ಬಗ್ಗೆ, ನಿರಂತರವಾಗಿ ತನ್ನ ನ್ಯೂನ್ಯತೆಗಳನ್ನು ಕಡ್ಡಿ ಮುರಿದಂತೆ ವಿರೋಧಿಸುತ್ತಿರುವುದರಿಂದಾಗಿ ಬಿಜೆಪಿಗೆ ಸಣ್ಣ ಪುಕ್ಕಲತನ ಶುರುವಾಗಿದೆ. ಇನ್ನು, ತನ್ನ ಹಡಗನ್ನು ಅಷ್ಟು ಸುಲಭವಾಗಿ ಮುಳುಗಿಹೋಗುವುದಕ್ಕೆ ಬಿಡಬಾರದು ಎಂಬ ಎಚ್ಚರದ ಮನಸ್ಥಿತಿಯೂ ತಡವಾಗಿಯಾದರೂ ಕಾಂಗ್ರೆಸ್‌ಗೀಗ ಬಂದಿದೆ. ಹಾಗಾಗಿ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ಕ್ಕೆ ಮೊರೆ ಹೋಗಿರುವ ಕಾಂಗ್ರೆಸ್, ಕ್ಷೇತ್ರವಾರು, ಜಾತಿವಾರು, ಜಿಲ್ಲವಾರು ಲೆಕ್ಕಾಚಾರದತ್ತ ಗಮನಹರಿಸದಂತೆ ಕಾಣಿಸುತ್ತಿದೆ. ಕರ್ನಾಟಕ ರಾಜ್ಯದ ಮಧ್ಯ ಭಾಗದ ಪ್ರಮುಖ ಜಿಲ್ಲೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತಮಹೋತ್ಸವದ ಹಿಂದೆ ಕಾಂಗ್ರೆಸ್ ದೊಡ್ಡ ರಣತಂತ್ರವನ್ನೇ ಸೃಷ್ಟಿಸಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನ ಹರಿದಾಡುತ್ತಿದೆ. ಲಿಂಗಾಯತ ಸಮುದಾಯದ ಪ್ರಭಾವಿ ಭಾಗವಾಗಿರುವ ದಾವಣಗೆರೆಯಲ್ಲಿಯೇ ಕಾಂಗ್ರೆಸ್ ಈ ಅಮೃತಮಹೋತ್ಸವ ಆಯೋಜಿಸಲು ಉದ್ದೇಶವೇನು..? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದಾಗ ಇಡೀ ಲಿಂಗಾಯತ ಸಮುದಾಯ ಬಿಜೆಪಿ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವುದು ಗೊತ್ತಿರುವ ವಿಷಯ. ಈ ಸಂಬAಧಿಸಿ ಹಿಂದೊಮ್ಮೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ‘ಇಡೀ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಪರವಾಗಿದೆ, ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ ಬಿಜೆಪಿ ಕಥೆ ಮುಗಿತು’ ಎಂದು ಬಿಎಸ್‌ವೈ ಪರ ವಯಿಸಿಕೊಂಡು ಮಾತನಾಡಿದ್ದರು. ಶಾಮನುರು ಭವಿಷ್ಯಕ್ಕೆ ಒತ್ತು ನೀಡಿ, ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕಾಗಿ ಮುನಿಸಿಕೊಂಡ ಲಿಂಗಾಯತ ಸಮುದಾಯದ ಮತ ಸೆಳೆಯುವುದಕ್ಕಾಗಿಯೇ ದಾವಣಗೆರೆಯಲ್ಲಿ ಕಾಂಗ್ರೆಸ್ ಅಮೃತಮಹೋತ್ಸವದ ‘ಹೈಡ್ರಾಮ’ ಮಾಡಿದೆಯೇ ಎಂಬ ಆಶ್ಚರ್ಯಚಕಿತ ಪ್ರಶ್ನೆ ಎದ್ದಿದೆ. ಇನ್ನು, ರಾಹುಲ್ ಗಾಂಧಿ ಲಿಂಗಧಾರಣೆ, ವೇದಿಕೆ ಮೇಲೆ ಕಾಂಗ್ರೆಸ್ ನಾಯಕರ ಭಕ್ತಿ ಭಂಡಾರಿ ಬಸವಣ್ಣರ ಜಪ ಎಲ್ಲವೂ ಕೂಡ ಇದರದ್ದೇ ಭಾಗ ಅಂತನ್ನಿಸುತ್ತಿದೆ.      

-ಶ್ರೀರಾಜ್ ವಕ್ವಾಡಿ 


ಮಜಬೂತು‌

 



ನೀನು ಎತ್ತರವ ಮೀರಿದವಳು 

ಬಹುಶಃ ನಿನಗಷ್ಟೇ ಗೊತ್ತು 

ನಿನ್ನ ಕಣ್ಣು ಕಂಡ ಕೊನೆ ದೃಶ್ಯ 


ಎಷ್ಟೊಂದು ಮಜಬೂತು ನೀನು ಮತ್ತು ನಿನ್ನೊಲವು 

ನೀನಿನ್ನು ಮರೆತಿರಲಿಕ್ಕಿಲ್ಲ 

ನಿನ್ನ ಕಣ್ಣಲ್ಲಿ ನಕ್ಕ ನಿನ್ನದೇ ನೇಹ.


ನೆನಪಿದೆಯಾ ನಿನಗೆ 

ನೀನು ಸದಾ ಗುನುಗಿಸುವ ಹಾಡು..? 

ಅದೇ ರಾಗ ಸುರಿಯುತ್ತಿದೆ ಶ್ರಾವಣದ ಮಳೆ. 


ನಿನ್ನ ಆಪ್ತತೆಗೆ ರಚ್ಚೆ ಹಿಡಿದ ಕನಸಿಗೆ ಬಣ್ಣವಿಲ್ಲ ಎಂಬ 

ವಿಷಾದ ನಿನಗಷ್ಟೇ ತಿಳಿದಿರಲಿ.

ಅದಕ್ಕಷ್ಟೇ ನಗುತ್ತೇನೆ. 

 

ನಗುವಿಗೆ ರಾಯಭಾರಿ ನೀನೇ ಆಗಿದ್ದೆ

ಎನ್ನುವುದನ್ನಿನ್ನೂ ಮರೆತಿಲ್ಲ. 

#ಕಾವ್ಯಬೈರಾಗಿ 

#ShreerajVakwady

Thursday, August 4, 2022

‘ಕೋಮು ಹತ್ಯೆ’ಯಿಂದ ‘ಪಾಲಿಟಿಕಲ್ ಮೈಲೇಜ್’ !?

(ಸಾಂದರ್ಭಿಕ ಚಿತ್ರ)

ಕಾಂಗ್ರೆಸ್‌ಗೆ ಪ್ಲಸ್, ಕನ್ನುಗೋಲು ಮಾಸ್ಟರ್ ಸ್ಟ್ರ್ಯಾಟಜಿ ? | ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡ ಬಿಜೆಪಿ !

‘ಕೋಮು ಹತ್ಯೆ’ ರಾಜಕೀಯ ಪಕ್ಷಗಳಿಗೆ ‘ಪಾಲಿಟಿಕಲ್ ಮೈಲೇಜ್’  ತಂದುಕೊಡುತ್ತಲೇ ಇದ್ದು, ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅಮಾಯಕರು ನೋವು ಅನುಭವಿಸುವಂತೆ ಆಗಿದೆ ಎನ್ನುವುದಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಹಾಗೂ ಆ ನಂತರ ಆದ ಘಟನೆಗಳೇ ಸಾಕ್ಷಿ. ತನ್ನ ಪರವಾಗಿಯೇ ಇದ್ದ ರಾಜಕೀಯ ಪಕ್ಷ ಬಿಜೆಪಿಯ ವಿರುದ್ಧವಾಗಿ ಪ್ರವೀಣ್ ಕೊಲೆ ಸಂಬಂಧ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿರುವುದು ಈಗ ಆಡಳಿತ ಪಕ್ಷ ಬಿಜೆಪಿಗೆ ತೀವ್ರ ಮುಖಭಂಗವಾದಂತಾಗಿದೆ. ಬಿಜೆಪಿಗೆ ಪರ್ಯಾಯವಾಗಿ ಒಂದು ಪ್ರಖರ ಹಿಂದುತ್ವದ ಅಜೆಂಡಾವಿರುವ ರಾಜಕೀಯ ಪಕ್ಷವೊಂದು ಈ ರಾಜ್ಯಕ್ಕೆ ಅಗತ್ಯವಿದೆ ಎಂಬ ಕೂಗು ಹಿಂದೂ ಸಂಘಟನೆಗಳಲ್ಲಿ ಎದ್ದಿರುವುದು ಬಿಜೆಪಿಗೂ ಆತಂಕ ಸೃಷ್ಟಿಸಿದೆ. ಯಾವ ಭರವಸೆಯನ್ನು ಕೊಟ್ಟು ಅಧಿಕಾರಕ್ಕೇರಿತ್ತೋ ಆ ಭರವಸೆಯ ಮಾತನ್ನೇ ಮರೆತು ನಡೆದಿದ್ದಕ್ಕೆ ಬಿಜೆಪಿ ಅನುಭವಿಸಿದ ತಕ್ಕ ಪಾಠವಿದು. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಾವು ಎರಡಂಕಿ ದಾಟಿದ್ದರೂ ಕೂಡ ಈ ಮಟ್ಟಿಗೆ ಆಕ್ರೋಶ ವ್ಯಕ್ತಪಡಿಸಿರದ ಹಿಂದೂ ಸಂಘಟನೆಗಳು, ತನ್ನ ಪರವಾಗಿಯೇ ಇದ್ದ ಬಿಜೆಪಿ ಸರ್ಕಾರ ಮಾತು ಉಳಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಬಂಡಾಯವೆದ್ದ ಪರಿ ನೋಡಿದರೇ, ಬಿಜೆಪಿಯ ಭವಿಷ್ಯದ ಕನಸೆಲ್ಲವೂ ಬದಲಾಗಿ ಹೋಗುತ್ತವೆ ಎಂದೇ ಅನ್ನಿಸುತ್ತಿದೆ. 

ಅಗೈನ್ ಐಂಡ್ ಅಗೈನ್ ಐಂಡ್ ಅಗೈನ್... ಹೂ ಈಸ್ ಸೇಫ್..? ದುಷ್ಕರ್ಮಿಗಳಿಗೆ ದಕ್ಷಿಣ ಕನ್ನಡವೇ ಯಾಕೆ ಟಾರ್ಗೇಟ್..? ಅಮಾಯಕ ಯುವಕರೇ ಕೋಮು ಸಂಘರ್ಷಗಳಿಗೆ ಬಲಿಪಶುವಾಗುತ್ತಿರುವುದಾದರೂ ಯಾಕೆ..? ಹತ್ತು ದಿನಗಳ ಅಂತರದಲ್ಲಿ ಮೂರು ಯುವಕರ ಬರ್ಬರ ಹತ್ಯೆಯನ್ನು ಕಂಡು ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜಕ್ಕೂ ಎಲ್ಲಿಲ್ಲದ ಭಯದ ವಾತಾವರಣ ಸೃಷ್ಟಿಯಾಗಿದೆ. ಸ್ವಲ್ಪ ಹೊತ್ತಿನ ಹಿಂದಷ್ಟೇ ಸಿಕ್ಕಿ ನಕ್ಕವ ಹೆಣವಾಗಿ ಸುದ್ದಿಯಾಗುತ್ತಿರುವುದು ನೋಡಿದರೇ ರಾಜ್ಯದಲ್ಲಿ ಕಾನೂನಿನ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಎಲ್ಲದಕ್ಕೂ ಕಾನೂನಿನ ವೈಫಲ್ಯವೇ ಕಾರಣ. 

ಸರ್ಕಾರ ಇಂತಹ ಘಟನೆಗಳಿಗೆ ಸಂಬಂಧಿಸಿದ ಹಾಗೆ ಯಾವುದೇ ತನಿಖೆಯನ್ನು ಬೇಕಾದರೂ ಮಾಡಲಿ, ಕಾನೂನು ಬಾಹೀರವಾಗಿ ಕೆಲಸ ಮಾಡುತ್ತಿರುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಮಾತಾಡಲಿ, ಆಕ್ರೋಶವೆದ್ದ ಜನರನ್ನು ಸಮಾಧಾನ ಮಾಡುವುದಕ್ಕೆ ಸಲುವಾಗಿ ಏನನ್ನೇ ಬೇಕಾದರೂ ಮಾಡಲಿ, ಮೊದಲು ರಾಜ್ಯದಲ್ಲಿ ಕಾನೂನಿನ ಸುವ್ಯವಸ್ಥೆ ಕಾಪಾಡಬೇಕು, ಕೊಲೆಯಾದವ ಯಾವುದೇ ಧರ್ಮಕ್ಕೋ, ಜಾತಿಗೆ ಸೇರಿದವನಾಗಿರಲಿ, ಅಂತಿಮವಾಗಿ ಕೊಲೆಯಾದವ ಒಬ್ಬ ಅಮಾಯಕ ಮನುಷ್ಯ. ಕೊಂದ ದುಷ್ಕರ್ಮಿಗಳಿಗೆ ಶಿಕ್ಷೆ ಒದಗಿಸಲಿ, ಶಾಂತಿಯ ವಾತಾವರಣ ಸೃಷ್ಟಿಯಾಗಲಿ ಎನ್ನುವುದೇ ಇಲ್ಲಿನ ಪರಮ ಆಶಯ.

ಈ ದೇಶದ ಸಂಸ್ಕೃತಿ ಹಾಗೂ ಪರಂಪರೆಗೆ ನಾಲ್ಕು ಸಾವಿರ ವರ್ಷಗಳ ದೊಡ್ಡ ಇತಿಹಾವಿದೆ. ಈ ನೆಲದ ಜನರಲ್ಲಿ ಆಧ್ಯಾತ್ಮಿಕತೆ ಆಳವಾಗಿ ಬೇರು ಬಿಟ್ಟಿದೆ. ಆ ಹಿನ್ನೆಲೆಯಲ್ಲಿಯೇ ಈ ದೇಶ ನಡೆದುಕೊಂಡು ಬಂದಿದೆ. ಇಡೀ ಪ್ರಪಂಚದಲ್ಲಿ ವಿವಿಧ ಸಂಸ್ಕೃತಿ, ಆಚರಣೆಗಳಿಗೆ ಸ್ವಾತಂತ್ರ್ಯಾವಕಾಶಕೊಟ್ಟ ದೇಶವೊಂದಿದ್ದರೇ ಅದು ಈ ಭಾರತ. ಅದಕ್ಕೆ ಗೌರವಿಸುವುದು ಈ ನೆಲದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಆಧ್ಯಾತ್ಮಿಕತೆ, ಸಂಸ್ಕೃತಿ, ಪರಂಪರೆಯ ಜೊತೆಜೊತೆಗೆ ಸೇರಿಕೊಂಡ ಜಾತಿ, ಧರ್ಮಗಳ ವಿಚಾರದಲ್ಲಿ ಮುಂದೆ ಬಂದಂತೆ ಸಂಘರ್ಷಗಳದ್ದೂ ದೊಡ್ಡ ಇತಿಹಾಸವಿದೆ. ಸಾವಿರಾರು ಕೊಲೆಗಳಾಗಿವೆ. ಮತೀಯ ದ್ವೇಷಗಳ ಕೆನ್ನಾಲಿಗೆಗಳು ಈ ದೇಶದ ಶಾಂತಿಯನ್ನು ಕದಡಿವೆ. ಸಂವಿಧಾನವನ್ನೇ ನಂಬಿ ಬಂದ ದೇಶದಲ್ಲಿ ನ್ಯಾಯ ಎಲ್ಲರಿಗೂ ದೊರೆತಿಲ್ಲ ಎನ್ನುವುದೇ ದೊಡ್ಡ ದುರಂತ. ಸ್ವಾತಂತ್ರ್ಯ ನಂತರದಲ್ಲಿ ಗಮನಿಸುವುದಾದರೇ ಅನ್ಯಾಯಕ್ಕೆ ಶಿಕ್ಷೆಯಾಗಿರುವುದು ತೀರಾತಿವಿರಳ. ಶಿಕ್ಷೆಯಾಗಿರುವುದು ಒಂದು ವರ್ಗದ ಜನರಿಗೆ ಮಾತ್ರ. ಹಣ, ಅಧಿಕಾರದ ಬಲ ಇರುವವರಿಗೆ ಶಿಕ್ಷೆಯ ಮಾತೇ ಇಲ್ಲ. ನಮ್ಮ ಕಾನೂನು ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎನ್ನುವುದನ್ನು ನೇರವಾಗಿ ಹೇಳುವುದಕ್ಕೂ ಅಸಹ್ಯವೆನ್ನಿಸುತ್ತಿದೆ. ಇಂದಿಗೂ ಈ ದೇಶದಲ್ಲಿ ಇತ್ಯರ್ಥ ಕಾಣದ ಪ್ರಕರಣಗಳು ನೂರಾರಿವೆ. ಸರ್ಕಾರಗಳು ಕಾನೂನಿನ ವ್ಯವಸ್ಥೆಯಲ್ಲಿನ ಸುಧಾರಣೆಯ ಬಗ್ಗೆ ನಿರಾಸಕ್ತಿ ವಯಿಸಿವೆ. ಇಂದಿಗೆ ಅಗತ್ಯವಾಗಿ ಕಾನೂನಿನ ವ್ಯವಸ್ಥೆಯಲ್ಲಿನ ದೋಷ ಮತ್ತು ನ್ಯೂನ್ಯತೆಗಳನ್ನು ಸರಿಪಡಿಸಿ ವೇಗ ನೀಡಬೇಕಿದೆ. ಕಾನೂನಿನಲ್ಲಿರುವ ದೋಷಗಳನ್ನು ಸರಿಪಡಿಸಿದಾಗ ಮಾತ್ರ ಆದರ್ಶ ಸಮಾಜದ ನಿರ್ಮಾಣ ಮಾಡುವುದಕ್ಕೆ ಸಾಧ್ಯ. ಎಲ್ಲಿಯವರೆಗೆ ಕಾನೂನು ಸಾಮಾಜಿಕ ಸ್ವಾಸ್ಥ್ಯ ವನ್ನು ಉಳಿಸುವುದಕ್ಕೆ ವಿಫಲವಾಗುತ್ತದೋ ಅಲ್ಲಿಯವರಗೆ ಈ ಸಮಾಜ ಪ್ರವೀಣನಂತಹ, ಹರ್ಷನಂತಹ ಮಸೂದನಂತಹ, ಫಾಜೀಲ್‌ನಂತಹ ನೂರಾರು ಅಮಾಯಕ ಯುವಕರ ಕೊಲೆಗಳನ್ನು, ಮತೀಯ ಬರ್ಕುಡಿ ಸಂಘರ್ಷಗಳನ್ನು ಕಾಣಲೇಬೇಕು. 

ವಿಶ್ವಾಸ ಕಳೆದುಕೊಂಡಿತೇ ಬಿಜೆಪಿ : ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಬಳಿಕ ಹಿಂದೂ ಸಂಘಟನೆಗಳು ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ. ಸಾಂತ್ವಾನ ಹೇಳಲು ಬಂದ ತಾವೇ ಬೆಂಬಲಿಸದ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಪ್ರಮುಖ ಬಿಜೆಪಿ ನಾಯಕರಿಗೆ ಸಂಘಟಕರು ಗೇರಾವ್, ಛೀಮಾರಿ ಹಾಕಿದರು. ತಮ್ಮ ಪಕ್ಷದ ಕಾರ್ಯಕರ್ತರಿಗೇ ರಕ್ಷಣೆ ನೀಡುವುದಕ್ಕಾಗದೇ ಬಿಜೆಪಿ ಮುಖಭಂಗ ಅನುಭವಿಸಿತು. ‘ಬಿಜೆಪಿಯಿಂದ ಹಿಂದುತ್ವವಲ್ಲ, ಹಿಂದುತ್ವದಿಂದ ಬಿಜೆಪಿ’ ಎಂಬ ಕೂಗು ಸಂಘಟಕರಿಂದ ಬಂದಿದ್ದು, ಬಿಜೆಪಿಗರಿಗೆ ನಿಜಕ್ಕೂ ಆತಂಕ ಮೂಡಿಸಿತು. ನೂರಾರು ಯುವ ನಾಯಕರ ರಾಜೀನಾಮೆ ಪರ್ವ ಬಿಜೆಪಿ ಪಕ್ಷ ಸಂಘಟನೆಯ ಭವಿಷ್ಯದ ಪ್ರಶ್ನೆ ಎಬ್ಬಿಸಿತು. ಹೌದು, ಖಂಡಿತ ಬಿಜೆಪಿ ತನ್ನನ್ನ ಬೆಂಬಲಿಸಿದ ಸಂಘಟಕರಿಂದಲೇ ವಿಶ್ವಾಸ ಕಳೆದುಕೊಂಡಿದೆ. ಇದು ಬಿಜೆಪಿಯ ಭವಿಷ್ಯದ ರಾಜಕೀಯಕ್ಕೆ ಮುಳುವಾಗಲಿದೆಯೇ ಎಂಬ ಚರ್ಚೆಯೂ ಕೂಡ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಹಿಂದೂ ಕಾರ್ಯಕರ್ತರ ‘ವೋಟ್ ಫಾರ್ ನೋಟಾ’ ಅಭಿಯಾನವೂ ಸಾಮಾಜಿಕ ಜಾಲತಾಣಗಳಾದ್ಯಂತ ಸಂಚಲನ ಮೂಡಿಸಿದೆ. ಹಿಂದೂ ಸಂಘಟಕರ ಮತಗಳು ಬಿಜೆಪಿಯಿಂದ ಪೂರ್ಣ ಪ್ರಮಾಣದಲ್ಲಿ ವಿಮುಖವಾಗುತ್ತದೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲವಾದರೂ, ಒಂದಿಷ್ಟು ಪರಿಣಾಮವಂತೂ ಖಂಡಿತ ಆಗಿಯೇ ಆಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಉತ್ತರವೇನು..? : ಸಿದ್ದರಾಮಯ್ಯ ಸರ್ಕಾರದಲ್ಲಿ ಆದ ಹಿಂದೂ ಕಾರ್ಯಕರ್ತರ ಕೊಲೆಯನ್ನೇ ತಮ್ಮ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ಅವ್ಯಾಹತವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸಿ ಸಾರ್ವಜನಿಕರಲ್ಲಿ ಒಂದಿಷ್ಟು ಕೆಟ್ಟ ಅಭಿಪ್ರಾಯಗಳನ್ನು ಫೀಡ್ ಮಾಡಿ, ಕಂಪ್ಯೂಟಿಂಗ್ ಮಾಡಿ ಪಾಲಿಟಿಕಲ್ ಮೈಲೇಜ್ ವೃದ್ಧಿಸಿಕೊಂಡಿತ್ತು. ಅವೆಲ್ಲವೂ ಈಗ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ. ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ‘ಬಿಜೆಪಿ ಅಲೀಗ್ಡ್ ಹಿಡನ್ ಮರ್ಡರ್ಸ್, ದಿ ರಿಯಲ್ ಟ್ರುತ್ (ಬಿಜೆಪಿ ಹೇಳಿದ ಮತ್ತು ಹೇಳದೇ ಮರೆಮಾಚಿದ ಸಾವುಗಳ ಹಿಂದಿನ ನಗ್ನ ಸತ್ಯ) ಎಂಬ ಪುಸ್ತಕದಲ್ಲಿ ೨೦೧೩-೨೦೧೭ರವರೆಗೆ ೨೩ ಕೋಮು ಹತ್ಯೆಗಳಾಗಿದ್ದು, ಅವುಗಳಲ್ಲಿ ೧೨ ಹಿಂದೂಗಳ ಹತ್ಯೆಗಳಲ್ಲಿ ೮ ಪ್ರಕರಣಗಳಲ್ಲಿ ಪಿಎಫ್‌ಐ/ಎಸ್‌ಡಿಪಿಐ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ, ಒಂದು ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆರೋಪಿಯಾಗಿದ್ದಾನೆ, ಈ ಪೈಕಿ ೯೯ ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ. ಉಳಿದಂತೆ ೧೧ ಮುಸ್ಲೀಂ ಹತ್ಯೆಗಳ ಪೈಕಿ ೮ ಪ್ರಕರಣಗಳಲ್ಲಿ ಬಜರಂಗದಳ, ತಲಾ ಒಂದು ಪ್ರಕರಣದಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ, ಹಿಂದೂ ಪರಿಷತ್‌ನ ಕಾರ್ಯಕರ್ತರು ಆರೋಪಿಗಳಾಗಿದ್ದರು. ೧೧೫ ಆರೋಪಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದ್ದಲ್ಲದೇ, ಹೊನ್ನಾವರದ ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಸಿಬಿಐಗೆ, ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದೆ, ವೈಯಕ್ತಿಕ ಕಾರಣಗಳಿಂದ ಹತ್ತು ಹತ್ಯೆಗಳಾಗಿದ್ದು ೬೧ ವ್ಯಕ್ತಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಕಟಿಸಿ ತಿರುಗೇಟು ನಿಡಿದೆ. ಇತ್ತೀಚೆಗೆ ಸಿದ್ದರಾಮಯ್ಯ ಕೂಡ ಇದೇ ವಿಷಯವನ್ನು ಬಿಜೆಪಿ ವಿರುದ್ಧ ಟ್ವೀಟಾಸ್ತ್ರ ಬಿಟ್ಟಿದ್ದರು. ಏನೇ ಇರಲಿ, ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲ ಕಳೆದ ಉಭಯ ಪಕ್ಷಗಳು ಕಾನೂನು ಸುವ್ಯವಸ್ಥೆ ಕಾಪಾಡದೇ ಈ ಅಮಾಯಕರ ಹತ್ಯೆಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದಂತೂ ಸತ್ಯ. 

ಕಾಂಗ್ರೆಸ್‌ಗಿದು ಪ್ಲಸ್ | ಕನ್ನುಗೋಲು ಮಾಸ್ಟರ್ ಸ್ಟ್ರ್ಯಾಟಜಿ ? : ಖಂಡಿತವಾಗಿ ಕಾಂಗ್ರೆಸ್ ಈ ಪ್ರಕರಣಗಳನ್ನು ತನ್ನ ರಾಜಕೀಯ ಮೈಲೇಜ್‌ಗಾಗಿ ಬಳಸಿಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳ ಬಗ್ಗೆ ಸಣ್ಣ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ಅಂದು ಬಿಜೆಪಿ ಆಡಿದ್ದ ಧ್ವನಿಯಲ್ಲಿ ಮಾತನಾಡುತ್ತಿದೆ. ಈ ಬಾರಿಯಂತೂ ಕಾಂಗ್ರೆಸ್ ಪರ ಸ್ಟ್ರ್ಯಾಟಜಿ ಮಾಸ್ಟರ್ ಪ್ಲ್ಯಾನ್ ಮಾಡುವುದಕ್ಕೆ ಚುನಾವಣಾ ತಂತ್ರಜ್ಞ ಸುನೀಲ್ ಕನ್ನುಗೋಲು ಇದ್ದಾರೆ. ಈಗಾಗಲೇ ಒಂದಿಷ್ಟು ರನತಂತ್ರ ಹೂಡಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವಂತೂ ಕಾಂಗ್ರೆಸ್‌ಗೆ ಅನಾಯಾಸವಾಗಿ ಗ್ರಾಸವಾಗಿ ಸಿಕ್ಕಂತಾಗಿದೆ. ಇಂತಹ ಕೋಮು ಹತ್ಯೆ, ಸಂಘರ್ಷಗಳನ್ನು, ಕಾನೂನು ಅವ್ಯವಸ್ಥೆಯಂತಹ ವಿಚಾರಗಳನ್ನೇ ಚುನಾವಣಾ ಸಾಧನಗಳಾಗಿ ಬಳಸಿಕೊಂಡು ಸಾರ್ವಜನಿಕರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಂಪ್ಯೂಟಿಂಗ್ ಮಾಡಿ ತೀವ್ರವಾಗಿ ಅಸಮಾಧಾನ ಮೂಡಿಸುವುದರ ಬಗ್ಗೆ ಕಾರ್ಯೋನ್ಮುಖವಾಗುವುದರತ್ತ ಕನ್ನುಗೋಲು ಕಾಂಗ್ರೆಸ್‌ಗೆ ಗೈಡ್‌ಲೈನ್ಸ್ ರೂಪಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಹೇಗೆ ಕಾಂಗ್ರೆಸ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ವಿರೋಧಾಭಿಪ್ರಾಯವನ್ನು ಫೀಡ್ ಮಾಡಿ ತನ್ನ ಪರವಾದ ‘ರೋಬೋ ಪಬ್ಲಿಕ್’ನನ್ನು ಸೃಷ್ಟಿ ಮಾಡಿಕೊಂಡಿತ್ತೋ, ಹಾಗೆಯೇ ಕಾಂಗ್ರೆಸ್ ಈಗ ಅದೇ ಪ್ರಯತ್ನದಲ್ಲಿ ಮುಂದಾಗುತ್ತಿದೆ. ಈ ಪ್ಲ್ಯಾನ್ ವರ್ಕೌಟ್ ಆದರೇ, ಕಾಂಗ್ರೆಸ್‌ಗೆ ಲಾಭವಾಗುವುದಂತೂ ಪಕ್ಕಾ ಎಂದೇ ಹೇಳಲಾಗುತ್ತಿದೆ. 

-ಶ್ರೀರಾಜ್ ವಕ್ವಾಡಿ      

           


Thursday, July 28, 2022

ನನ್ನ ನೀನು ಗೆಲ್ಲಲಾರೆ...

(ಸಾಂದರ್ಭಿಕ ಚಿತ್ರ)

ಹೈಕಮಾಂಡ್‌ಗೆ ಬಿಎಸ್‌ವೈ ಪರೋಕ್ಷ ಸೂಚನೆ | ಹಳೆ ಮೈಸೂರಿಗೆ ಬಿಜೆಪಿಯ ಹೊಸ ಸಾರಥ್ಯ..? 

ಕಳೆದೊಂದು ವರ್ಷಗಳಿಂದ ರಾಜ್ಯದಲ್ಲಿ ಆದ ವಿವಾದಗಳನ್ನೇ ಚುನಾವಣೆಯ ಸಾಮಾಗ್ರಿಗಳಾಗಿ ಬಳಸಿಕೊಳ್ಳುವ ಭರದಲ್ಲಿ ಮುಗುಂ ಆಗಿ ಈವರೆಗೆ ತೊಡಗಿಕೊಂಡಿದ್ದ ಬಿಜೆಪಿ ಈಗ ದಿಢೀರ್ ಅಂತನೇ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಭಾವಿ ಕ್ಷೇತ್ರ ಹಳೆ ಮೈಸೂರು ಭಾಗದಲ್ಲಿ ಮತದಾರರನ್ನು ಸೆಳೆಯುವುದರ ಬಗ್ಗೆ ಕಸರತ್ತು ಮಾಡಲಾರಂಭಿಸಿದೆ. 

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿಲ್ಲ ಎಂಬ ಅರಿವು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿದೆ. ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲವಾಗಿದೆ. ಕಳೆದ ಬಾರಿ ಯಡಿಯೂರಪ್ಪ ಇಲ್ಲದೆಯೂ ನಾನು ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಿಕೊಡುತ್ತೇನೆ ಎಂದು ಮುಂದೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕುಮಾರ್, ಖಾಲಿ ಕೈಯಲ್ಲಿ ವಾಪಾಸ್ ಹೋಗಬೇಕಾಯಿತು. ಈಗ ಮತ್ತೆ ರಾಜ್ಯ ಬಿಜೆಪಿ ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಕ್ಕೆ ತಯಾರಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಬಲ ನಾಯಕರನ್ನು ತನ್ನತ್ತ ಸೆಳೆದು ಆ ಭಾಗದಲ್ಲಿ ತನ್ನ ಅಡಿಪಾಯವನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. 

ನಾಯಕತ್ವ ಬದಲಾವಣೆ ಹಾಗೂ ಹೊಸ ಮುಖಗಳ ಪರಿಚಯದಲ್ಲಿ ಸದಾ ಗೆಲ್ಲುವ ಕುದುರೆ ಎಂದೇ ಹೇಳಲಾಗುವ ಬಿಜೆಪಿ ಈ ಭಾಗದಲ್ಲಿಯೂ ಅದೇ ಕಸರತ್ತಿಗೆ ಮುಂದಾಗಿರುವುದು ಇಲ್ಲಿ ಗಮನಾರ್ಹ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ಹನ್ನೊಂದು ಸ್ಥಾನದಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನು ಗಳಿಸುವುದು ಈಗ ಬಿಜೆಪಿಗೆ ಇರುವ ಪರಮ ಗುರಿ. ಹಳೆ ಮೈಸೂರು ಭಾಗದಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ನಾಯಕರು ಅವರವರ ಕ್ಷೇತ್ರಕಷ್ಟೇ ಸೀಮಿತರಾಗಿದ್ದಾರೆ ಹೊರತು ಅಷ್ಟೇನೂ ಪ್ರಭಾವಿ ವರ್ಚಸ್ಸು ಅವರಿಗೆ ದೊರೆತಿಲ್ಲ. ಹಾಗಾಗಿ ಈ ಬಾರಿ ಹಳೆ ಮೈಸೂರು ಭಾಗದ ಅಷ್ಟೂ ವಿಧಾನ ಸಭಾ ಕ್ಷೇತ್ರಗಳತ್ತ ಆಡಳಿತ ಪಕ್ಷ ಕಣ್ಣಿಟ್ಟಿದೆ. ಇನ್ನು, ಹಾಸನ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಂಡಿದ್ದು ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ. ಇತ್ತ, ಜೆಡಿಎಸ್ ೨೦೧೮ರ ಚುನಾವಣೆಯಲ್ಲಿ ಬಿಜೆಪಿ ತೆಕ್ಕೆಗೆ ಜಾರಿದ್ದ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಭವಾನಿ ರೇವಣ್ಣ ಅವರನ್ನು ಅಖಾಡಕ್ಕೆ ಇಳಿಸುವ ಪ್ರಯತ್ನದಲ್ಲಿದೆ ಎಂದೇ ಹೇಳಲಾಗುತ್ತಿದೆ. ಹಾಸನ ಕ್ಷೇತ್ರದಲ್ಲಿ ತನ್ನ ಪತಿ ರೇವಣ್ಣ ಹಾಗೂ ಮಾವ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರ ರಾಜಕೀಯ ವರ್ಚಸ್ಸಿನ ಜೊತೆಗೆ ಒಂದಿಷ್ಟು ಕಾರ್ಯಕರ್ತರ ವಿಶ್ವಾಸವನ್ನು ಭವಾನಿ ರೇವಣ್ಣ ಗಳಿಸಿಕೊಂಡಿದ್ದಾರೆ. ಹಾಗಾಗಿ ಈ ಭಾರಿ ‘ಭವಾನಿ ಅಕ್ಕ’ ಚುನಾವಣೆ ಅಖಾಡಕ್ಕೆ ಇಳಿದರೇ, ಈ ಸಲ ಕಪ್ ನಮ್ದೇ’ ಅಂತಿದ್ದಾರೆ ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು. ಹಾಗಾಗಿ ಕಳೆದ ಬಾರಿ ತನಗೆ ಒಲಿದ ಹಾಸನ ವಿಧಾನ ಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ.  

ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಕ್ಷೇತ್ರದ ಜನರಲ್ಲಿ ಉಳಿದಿಲ್ಲ. ಅದು ಸ್ವತಃ ಪ್ರೀತಂ ಗೌಡ ಅವರಿಗೂ ಗೊತ್ತಿದೆ. ಅಷ್ಟಾಗಿಯೂ ಜೆಡಿಎಸ್‌ನಿಂದ ಯಾರೇ ಸ್ಪರ್ಧೆಗೆ ಇಳಿದರೂ ಗೆಲುವು ತಮ್ಮದೇ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿರುವುದು ಹೈಕಮಾಂಡ್ ಕೂಡ ಈ ಭಾಗದಲ್ಲಿ ಹೆಚ್ಚು ಗಮನ ನೀಡುವುದಕ್ಕೆ ಸೂಚನೆ ನೀಡಿರುವುದರಿಂದಲೇ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. 

ಯಡಿಯೂರಪ್ಪಗೆ ಹೈಕಮಾಂಡ್ ಸಮಾಧಾನದ ಸಂದೇಶ : ಬಿ. ಎಲ್. ಸಂತೋಷ್ ಕುಮಾರ್ ಅವರ ಹಳೆ ಮೈಸೂರು ರಾಜಕೀಯ ಲೆಕ್ಕಾಚಾರ ಸೋಲು ಕಂಡ ಬೆನ್ನಿಗೆ ಅಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯಲು ಮುನಿಸಿಕೊಂಡ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಹೊರಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ತುಮುಕೂರಿನ ಶಿರಾ ಹಾಗೂ ಕೆ. ಆರ್ ಪೇಟೆಯಲ್ಲಿ ಕಮಲ ಅರಳಿಸಿದ ಹಾಗೆ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿ ವಿಜಯೇಂದ್ರ ಸಕ್ಸಸ್ ಕಾಣುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಮಗನ ಭವಿಷ್ಯಕ್ಕಾಗಿ ಕಳೆದ ಒಂದೆರಡು ವರ್ಷಗಳಿಂದ ಅವ್ಯಾಹತವಾಗಿ ಪ್ರಯತ್ನಿಸುತ್ತಿದ್ದರೂ, ಹೈಕಮಾಂಡ್ ಎದುರು ಅಂಗಲಾಚಿದರೂ ಯಾವುದೂ ವರ್ಕೌಟ್ ಆಗಿರಲಿಲ್ಲ. ಈಗ ಯಡಿಯೂರಪ್ಪ‌ ಅವರಿಗೆ ಸಮಾಧಾನ ತರುವ ವಿಚಾರವನ್ನು ಹೈಕಮಾಂಡ್ ನೀಡಿದೆಯೇ ಎಂಬ ಕುತೂಹಲಕರವಾರ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಗನಿಗೆ ಪಕ್ಷದ ರಾಜ್ಯಧ್ಯಾಕ್ಷ ಸ್ಥಾನ ಕೈತಪ್ಪಿದಾದಿಯಾಗಿ ಸತತವಾಗಿ ಮಗನಿಗೆ ಹೇಗಾದರು ಮಾಡಿ ಪಕ್ಷದಲ್ಲಿ ಭದ್ರ ಬುನಾದಿ ಹಾಕಿಕೊಡಬೇಕು ಎಂಬ ನಿಟ್ಟಿನಲ್ಲಿ ಸಾಹಸಪಟ್ಟಿದ್ದೇ ಎಲ್ಲೋ ಒಂದು ಕಡೆಯಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿಯೇ ವಿರೋಧ ಬಣ ಸೃಷ್ಟಿಯಾಗುವುದಕ್ಕೆ ನಾಂದಿ ಆಯಿತು. ಆದರೇ, ಮಗನ ರಾಜಕೀಯ ಭವಿಷ್ಯದ ಉದ್ದೇಶದಿಂದಲೇ ಬಿಜೆಪಿಗೆ ದಲಿತ ನಾಯಕ ಎನ್. ಮಹೇಶ್ ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳುವಲ್ಲಿ ಬಿಎಸ್‌ವೈ ಪ್ರಯತ್ನ ಪಟ್ಟಿದ್ದರು, ಆ ಭಾಗದ ಅನೇಕ ತಳಮಟ್ಟದ ಎರಡನೇ ಪಂಕ್ತಿಯ ನಾಯಕರನ್ನು ತಯಾರಿಸುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದರು. ಆದರೇ, ಮಗನಿಗಾಗಿ ಹಾಕಿಕೊಟ್ಟ ನೀಲಿ ನಕ್ಷೆ ವರ್ಕೌಟ್ ಆಗಿಲ್ಲ ಎಂಬ ಕೊರಗಿತ್ತು. ಅದು ಈಗ ಫಲಿಸುವಂತೆ ಕಾಣಿಸುತ್ತಿದೆ. 

ಬಿಜೆಪಿಗೆ ಬಲ ನೀಡಲಿದ್ದಾರೆಯೇ ಎನ್. ಮಹೇಶ್..? : ಯಡಿಯೂರಪ್ಪ ಪುತ್ರ ಚಾಮರಾಜನಗರ ಜಿಲ್ಲೆಯಾದ್ಯಂತ, ಅದರಲ್ಲೂ ಕೊಳ್ಳೆಗಾಲ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಸುತ್ತಾಡಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರಲ್ಲಿ ಸಚಿವರಾಗಿದ್ದ ಬಿಎಸ್‌ಪಿ ಮೂಲದ ಎನ್ ಮಹೇಶ್, ಮೈತ್ರಿ ಸರ್ಕಾರ ಮುರಿದಾಗ ಬಿಜೆಪಿಗೆ ಬೆಂಬಲ ನೀಡಿದ್ದರು. ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಬಿಎಸ್‌ಪಿ ವರಿಷ್ಠೆ ಮಾಯಾವತಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆ ಲಾಭ ಪಡೆದುಕೊಂಡ ಬಿಎಸ್‌ವೈ ಮಹೇಶ್ ಅವರನ್ನು ಬಿಜೆಪಿಗೆ ಸೇರುವಂತೆ ಮನವೊಲಿಸಿದರು. ಕೊಳ್ಳೆಗಾಲ ಭಾಗದಲ್ಲಿ ಪ್ರಭಾವಿ ದಲಿತ ನಾಯಕರಾಗಿರುವ ಮಹೇಶ್ ಜನಪ್ರಿಯ ನಾಯಕ, ಅಪಾರ ಸಂಘಟನಾ ಶಕ್ತಿಯ ಬಲವುಳ್ಳ ಮಹೇಶ್ ಅವರನ್ನು ಪಕ್ಷದೊಳಗೆ ತೆಗೆದುಕೊಳ್ಳುವುದರಲ್ಲಿ ಕೊನೆಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು. ಅಂದು ಯಡಿಯೂರಪ್ಪ ಮಾಡಿದ ಪ್ರಯತ್ನ ಈಗ ಮಗನಿಗೆ ಹಳೆ ಮೈಸೂರಿನ ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟರೇ ಫಲವಾಗಲಿದೆ ಎನ್ನುವುದಂತೂ ಸತ್ಯ. 

ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ : ಪದೆ ಪದೆ ಅಂದುಕೊಂಡಿದ್ದೆಲ್ಲಾ ಕೈ ತಪ್ಪಿದ ಕಾರಣದಿಂದಾಗಿ ಯಡಿಯೂರಪ್ಪ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವುದಂತೂ ಸತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿರುವಾಗಲೇ ಯಡಿಯೂರಪ್ಪ ಲಂಡನ್ ಪ್ರವಾಸಕ್ಕೆ ತೆರಳಿರುವುದು ಯಡಿಯೂರಪ್ಪರ ಸಿಟ್ಟು ಇನ್ನೂ ಬೂದಿ ಮುಚ್ಚಿದ ಕೆಂಡ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನವೂ ಸಿಗಲಿಲ್ಲ, ಸರ್ಕಾರದ ಸಂಪುಟದಲ್ಲಿಯೂ ಸ್ಥಾನ ಸಿಗಲಿಲ್ಲ, ಪರಿಷತ್ ಸೀಟ್ ಕೂಡ ಕೈ ತಪ್ಪಿ ಹೋಯಿತು. ಈಗಲಾದರೂ ತನ್ನ ಡಿಮ್ಯಾಂಡ್‌ಗೆ ಬೆಲೆ ಕೊಡಲೇಬೇಕು ಎಂದು ಬೊಮ್ಮಾಯಿ ಮೂಲಕ ಸೂಚನೆ ನೀಡಿದ್ದರು. ಇದು ಹೈಕಮಾಂಡ್‌ಗೂ ಕೂಡ ತಲೆ ಬಿಸಿಯಾದಂತಾಗಿದ್ದು, ಚುನಾವಣೆ ಬರುತ್ತಿರುವ ಕಾರಣದಿಂದಾಗಿ ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಲೇಬೇಕಿದೆ. ಹಾಗಾಗಿಯೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಮಾನವನ್ನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಗಲಿಗೆ ಹೊರಿಸುವ ಮತ್ತು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ತಂತ್ರಗಾರಿಕೆ ಹೆಣೆಯುವ ಜವಾಬ್ದಾರಿ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆಯಲ್ಲಿದೆ ಎಂದೇ ಹೇಳಲಾಗುತ್ತಿದೆ. ಇದು ಕೂಡ ಯಡಿಯೂರಪ್ಪ ಅವರಿಗೆ ವಿಶ್ವಾಸವಿಲ್ಲ ಎಂದೇ ಕಾಣಿಸುತ್ತಿದೆ. ಹಾಗಾಗಿ ಹೈಕಮಾಂಡ್‌ಗೆ ತನ್ನ ಪ್ರಭಾವ ಏನೆಂಬುವುದು ಮತ್ತೆ ಮತ್ತೆ ಸಾಬೀತು ಮಾಡುವಲ್ಲಿ ಯಡಿಯೂರಪ್ಪ ಪ್ರಯತ್ನ ಪಡುತ್ತಿದ್ದಾರೆ. ಈಗ ಯಡಿಯೂರಪ್ಪ ತಮ್ಮ ಮಗನಿಗಾಗಿ ತಮ್ಮ ವಿಧಾನ ಸಭಾ ಕ್ಷೇತ್ರವನ್ನೇ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ್ದು, ಯಡಿಯೂರಪ್ಪ ಅವರ ಮುಂದಿನ ನಡೆ ಏನೆಂಬುವುದರ ಬಗ್ಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. 

ಒಂದೆಡೆ ಹಳೆ ಮೈಸೂರು ಭಾಗದಲ್ಲಿ ಶೂನ್ಯದಲ್ಲಿದ್ದ ಬಿಜೆಪಿ ಒಂದೊಂದೆ ಕ್ಷೇತ್ರಗಳಲ್ಲಿ ತನ್ನ ಪಾರುಪತ್ಯ ಸಾಧಿಸಲು ಬಿಜೆಪಿ ಕಸರತ್ತು ನಡೆಸುತ್ತಿದ್ದರೇ, ಇತ್ತ ಯಡಿಯೂರಪ್ಪ ಒಂದೊAದೇ ದಾಳ ಉರುಳಿಸುತ್ತಿದ್ದಾರೆ. ಹೈಕಮಾಂಡ್ ಈ ಎರಡೂ ವಿಷಯಗಳನ್ನು ಮುಂದಿಟ್ಟುಕೊಂಡು ಮುಂದೆ ನಡೆಯಬೇಕಿದೆ. ಶಿಕಾರಿಪುರದಲ್ಲಿ ಮಾತ್ರವಲ್ಲದೇ, ಬೂಕನಕೆರೆಯಲ್ಲಿಯೂ ಯಡಿಯೂರಪ್ಪ ಅವರ ಪ್ರಭಾವವಿದೆ. ಪರೋಕ್ಷವಾಗಿ ಅಷ್ಟು ಸುಲಭದಲ್ಲಿ ಹೈಕಮಾಂಡ್‌ಗೆ ‘ನನ್ನ ನೀನು ಗೆಲ್ಲಲಾರೆ’ ಎಂದು ಸೂಚನೆ ನೀಡುತ್ತಿರುವುದಂತೂ ಸತ್ಯ. ಹಾಗಾಗಿ ಇನ್ನೇನೇ ಮಾಡುವುದೇ ಇರಲಿ ಯಡಿಯೂರಪ್ಪ ಅವರನ್ನು ಪರಿಗಣಿಸಿಯೇ ಮುನ್ನಡೆಯಬೇಕಾಗಿರುವುದು ಬಿಜೆಪಿ ಹೈಕಮಾಂಡ್‌ಗೆ ಅನಿವಾರ್ಯವಿದೆ.  

-ಶ್ರೀರಾಜ್ ವಕ್ವಾಡಿ      


Thursday, July 21, 2022

ಅಧಿಕಾರಕ್ಕೆ ಹೊಸ ನೇತೃತ್ವವೋ... ಸಾಮೂಹಿಕ ನಾಯಕತ್ವವೋ..!

ಹಿಂದುಳಿದ ವರ್ಗಗಳ ಓಲೈಕೆಗೆ ಬಿಜೆಪಿ ಪ್ಲ್ಯಾನ್ | ಸಿದ್ದರಾಮಯ್ಯ ಮತ್ತೆ ರಾಜ್ಯ ಕಾಂಗ್ರೆಸ್‌ನ ಕಮಾಂಡರ್.?

ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚುನಾವಣಾ ಚಕ್ರವ್ಯೂಹ ರಚನೆಯಲ್ಲಿ ತೊಡಗಿಕೊಂಡಿವೆ. ಈ ಬಾರಿ ರಾಜ್ಯದ ವಿಧಾನಸಭಾ ಚುನಾವಣೆ ಹಲವು ಆಯಾಮಗಳಿಂದ ಕುತೂಹಲಕ್ಕೆ ನಾಂದಿ ಹಾಡಿದ್ದು, ಉಭಯ ರಾಷ್ಟ್ರೀಯ ಪಕ್ಷಗಳ ರಣತಂತ್ರದತ್ತ ಚಿತ್ತ ಹರಿಸುವಂತೆ ಮಾಡಿದೆ. ಆಡಳಿತ ಪಕ್ಷದಲ್ಲಿನ ಹೊಸ ನೇತೃತ್ವ ಒಂದೆಡೆಯಾದರೇ, ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ತಯಾರಾಗುತ್ತಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ತವರು ಕ್ಷೇತ್ರಗಳಲ್ಲದೇ, ಹೊರ ಭಾಗದಲ್ಲಿಯೂ ರಾಜಕೀಯ ಬಲೆ ಬೀಸಲೆತ್ನಿಸುತ್ತಿದೆ. 

ರಾಜ್ಯ ಬಿಜೆಪಿಯ ನಿರ್ವಿವಾದ ನಾಯಕ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ರಾಜ್ಯ ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ಮತಗಳ ಬಗ್ಗೆ ಒಂದು ಸಣ್ಣ ಆತಂಕ ಇದೆ. ಜೆಡಿಎಸ್‌ನ ಸುಪ್ರೀಂ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತಹ ಪ್ರಭಾವಿ ಪ್ರಾದೇಶಿಕ ಹಾಗೂ ಸಮುದಾಯದ ನಾಯಕರ ಎದುರು ಬಿಜೆಪಿಗೆ ದೊಡ್ಡ ಸವಾಲಾಗಿ ಎದುರಾಗಿರುವುದು ಸದ್ಯಕ್ಕೆ ಈ ಈರ್ವರಿಗೆ ಸರಿಸಮಾನವಾಗಿ ಪರ್ಯಾಯ ಪ್ರಾದೇಶಿಕ ನಾಯಕರನ್ನು ತಯಾರಿಸುವುದೇ ಆಗಿದೆ. ಸದ್ಯ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ವೀರಶೈವ ಲಿಂಗಾಯತ ಸಮುದಾಯವನ್ನೇ ಪ್ರತಿನಿಧಿಸುತ್ತಿದ್ದರೂ ಕೂಡ ಬೊಮ್ಮಾಯಿ ಒಬ್ಬ ಪ್ರಬಲ ಪ್ರಾದೇಶಿಕ ನಾಯಕನಾಗಿಯಾಗಿಯೋ ಅಥವಾ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಾಗಿಯೋ ಗುರುತಿಸಿಕೊಂಡಿಲ್ಲ. ಬೊಮ್ಮಾಯಿ ಏನಿದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಕೃಪಾಕಟಾಕ್ಷದ ಕೂಸು ಅಷ್ಟೇ. ಯಡಿಯೂಪ್ಪರಷ್ಟು ರೆಬಲ್ ಕೂಡ ಬೊಮ್ಮಾಯಿ ಅಲ್ಲ. ಇನ್ನು, ಯಡಿಯೂರಪ್ಪ ಅವರೇ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಿರುವ ಕಾರಣದಿಂದಾಗಿ ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಕ್ಕಿಳಿಸುವ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪರ ಆಯ್ಕೆಗೆ ಹೈಕಮಾಂಡ್ ಒತ್ತು ನೀಡಿದ್ದರ ಹಿಂದೆ ಜಾತಿ ಲೆಕ್ಕಾಚಾರ ಕೂಡ ಇದೆ. ಹೇಳಹೆಸರಿಲ್ಲದ ಬಿಜೆಪಿಯನ್ನು ತನ್ನ ಹೋರಾಟ, ಜನ ಸಂಘಟನೆಯ ಪ್ರಾಬಲ್ಯದ ಮೂಲಕವೇ ರಾಜ್ಯದಲ್ಲಿ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಮಾತ್ರವಲ್ಲದೇ, ರಾಜ್ಯದ ಜನಗಣತಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುವ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಹೇಗೆ ಚುನಾವಣೆಯಲ್ಲಿ ನಿರ್ಣಾಯಕವೋ ಹಾಗೆಯೇ, ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯ ಬಿಜೆಪಿಯಲ್ಲಿ ಸದ್ಯಕ್ಕೆ ಯಡಿಯೂರಪ್ಪರ ನಡೆಯೇ ಒಂದು ಹಂತದಲ್ಲಿ ನಿರ್ಣಾಯಕ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. 

2017 ರ ಜಾತಿ ಸಮೀಕರಣದ ಲೆಕ್ಕಾಚಾರ :  ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ ಗಣತಿ ಸಮೀಕ್ಷಾ ವರದಿಯ ಪ್ರಕಾರ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ೧.೦೮ ಕೋಟಿ, ಪರಿಶಿಷ್ಟ ಪಂಗಡದ ೪೦.೪೫ ಲಕ್ಷ, ಮುಸ್ಲೀಮರು ೭೦ ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು ೪೫ ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು ೮೧೬ ಇತರೆ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದ್ದು, ಒಟ್ಟು ೧೩೫೧ ಜಾತಿಗಳನ್ನು ಸಮೀಕ್ಷೆಯಡಿಯಲ್ಲಿ ಪರಿಗಣಿಸಲಾಗಿತ್ತು, ಹೊಸದಾಗಿ ಸುಮಾರು ೧೯೨ ಜಾತಿಗಳನ್ನು ದಾಖಲಿಸಲಾಗಿತ್ತು. ಈ ಜಾತಿ ಗಣತಿಯ ಬಗ್ಗೆ ಕಳೆದ ವರ್ಷವೂ (೨೦೨೧) ವಿಭಿನ್ನ ನಿಲುವು ಇದ್ದಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗರ ಸಮುದಾಯಗಳಿಗಿಂತ ಹಿಂದುಳಿದ ವರ್ಗಗಳ ಜನ ಸಂಖ್ಯೆ ಹೆಚ್ಚೆಂದು ತೋರಿಸುವ ಪ್ರಯತ್ನವನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದರಿಂದಾಗಿ ರಾಜ್ಯದ ಪ್ರಬಲ ಸಮುದಾಯಗಳ ಸಿಟ್ಟಿಗೆ ಗುರಿಯಾಗಬೇಕಾದ ಸನ್ನಿವೇಷವೂ ಸೃಷ್ಟಿಯಾಗಿತ್ತು. ಮಾತ್ರವಲ್ಲದೇ ಇನ್ನೂ, ಈ ಸಮೀಕ್ಷೆಯ ಬಗ್ಗೆ ರಾಜ್ಯದ ಪ್ರಮುಖ ಮೂರೂ ಪಕ್ಷಗಳಿಗೂ ಆತಂಕವಿದೆ ಎನ್ನುವುದು ಕೂಡ ಸತ್ಯ.   

ಹಿಂದುಳಿದ ವರ್ಗಗಳ ಓಲೈಕೆಗೆ ಬಿಜೆಪಿ ಕಸರತ್ತು : ಚುನಾವಣಾ ಕಣಕ್ಕೆ ಸಿದ್ಧವಾಗುತ್ತಿರುವ ಬಿಜೆಪಿ ಈ ಬಾರಿ ಹಿಂದುಳಿದ ವರ್ಗಗಳ ಮತ ಓಲೈಕೆಗೆ ಹೆಚ್ಚಿನ ಕಸರತ್ತು ಮಾಡಲಾರಂಭಿಸಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟ ರಚನೆಯಲ್ಲಿಯೂ ಬಿಜೆಪಿ ಈ ಬಾರಿ ಹಿಂದುಳಿದ ನಾಯಕರಿಗೆ ಹೆಚ್ಚು ಒತ್ತು ನೀಡಿದ್ದು, ಇಲ್ಲಿ ಗಮನಾರ್ಹ. ವಿಧಾನ ಸಭಾ ಚುನಾವಣೆಯಲ್ಲಿ ಜಾತಿ ಅಂಶವು ಕೂಡ ನಿರ್ಣಾಯಕವಾಗಿರುವುದರಿಂದ ಎಷ್ಟೇ ಜಾತ್ಯಾತೀತ ಎಂದು ಕೂಗಿದರೂ ‘ಜಾತಿ’ ಬಿಟ್ಟು ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಸಂಪುಟದಲ್ಲಿನ ಬಿ. ಶ್ರೀರಾಮುಲು ಎಸ್‌ಟಿ ಸಮುದಾಯದ ನಾಯಕ ಹಾಗೂ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಎಸ್‌ಸಿ ಸಮುದಾಯವನ್ನು ಪ್ರತಿನಿಧಿಸುವ ನಾಯಕರಾಗಿದ್ದಾರೆ. ಇನ್ನು, ಉಳಿದಂತೆ ದಲಿತ ಸಮುದಾಯದ ಪ್ರಭಾವಿ ನಾಯಕರೆನ್ನಿಸಿಕೊಂಡ ಗೋವಿಂದ ಕಾರಜೋಳ ಸೇರಿ ಒಬಿಸಿ, ಎಸ್‌ಸಿ ಎಸ್‌ಟಿ ಸಮುದಾಯದ ಒಟ್ಟು ೧೧ ಖಾತೆಗಳಿಗೆ ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಮಣೆ ಹಾಕಿದ್ದು, ಇವೆಲ್ಲಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತ ಓಲೈಕೆಯ ಮಾಸ್ಟರ್ ಪ್ಲಾö್ಯನ್ ಎಂಬುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಕಮಿಷನ್ ಪ್ರಕರಣದ ಕಾರಣದಿಂದಾಗಿ ಈಶ್ವರಪ್ಪ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಕುರುಬ ಸಮುದಾಯದ ಮತಗಳು ವಿಮುಖವಾಗುವ ಆತಂಕದಲ್ಲಿದ್ದು, ಹಿಂದುಳಿದ ವರ್ಗಗಳ ಮತಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಳೆದ ಬಾರಿ ಕುರುಬ ಸಮುದಾಯದ ಮುಖಂಡರು ಆಕ್ರೋಶಗೊಂಡಿದ್ದರೂ ಕೂಡ ಮತ್ತೆ ಈ ಬಾರಿ ಕುರುಬ ಸಮುದಾಯದ ಕಮಾಂಡರ್ ಆಗಿ ಸಿದ್ದರಾಮಯ್ಯ ಹೊರಹೊಮ್ಮುವ ಹೆಚ್ಚು ಸಾಧ್ಯತೆಗಳಿದ್ದು, ಕುರುಬ ಸಮುದಾಯದ ಮತಗಳ ಬಗ್ಗೆಯೂ ಬಿಜೆಪಿಗೆ ಚಿಂತೆ ಹೆಚ್ಚಾಗಿದೆ. ಈಶ್ವರಪ್ಪ ಅಧಿಕಾರವಿಲ್ಲದೇ ಇದ್ದಾರೆ, ಸಿದ್ದರಾಮಯ್ಯ ಅಧಿಕಾರ ಇದ್ದರೂ, ಇಲ್ಲದಿದ್ದರೂ ಅವರ ರಾಜಕೀಯ ವರ್ಚಸ್ಸು ಎಂದೂ ಕಡಿಮೆ ಆಗಲಿಲ್ಲ. ಹಾಗಾಗಿ ಸುಲಭವಾಗಿ ಈ ಬಾರಿ ಕುರುಬ ಸಮುದಾಯದ ಪೂರ್ಣ ಮತಗಳು ಕಾಂಗ್ರೆಸ್‌ಗೆ ಒಲಿಯುತ್ತದೆ ಎಂದೇ ಹೇಳಲಾಗುತ್ತಿದೆ. ಇನ್ನು, ಇಡೀ ರಾಜ್ಯದ ಒಟ್ಟು ಹಿಂದುಳಿದ ವರ್ಗಗಳ ಸಮುದಾಯದ ನಾಯಕ ಎಂಬಂತೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಸಿದ್ದರಾಮಯ್ಯ ಗುರುತಿಸಿಕೊಂಡಿರುವುದು ಕೂಡ ಬಿಜೆಪಿಗೆ ಆತಂಕವಿದೆ. ಹಾಗಾಗಿ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದ  ನಾಯಕರನ್ನು, ಅದರಲ್ಲೂ ಯುವ ನಾಯಕರನ್ನು ಮುಂಪಕ್ತಿಗೆ ತಂದು ರಾಜಕೀಯ ಜಾತಿ ಲೆಕ್ಕಚಾರ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇಂಧನ ಸಚಿವ ಸುನೀಲ್ ಕುಮಾರ್ ಅವರನ್ನು ಯುವ ನಾಯಕನನ್ನಾಗಿ ಬಿಂಬಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಸುನಿಲ್ ಕುಮಾರ್ ಸಂಘದ ಹಿನ್ನೆಲೆಯಿಂದ ರಾಜಕೀಯ ಪ್ರವೇಶ ಮಾಡಿದ ನಾಯಕ, ಯುವ ಸಮುದಾಯವನ್ನು ಸೆಳೆಯುವಲ್ಲಿ ಸುನೀಲ್ ಕುಮಾರ್ ಯಶಸ್ವಿಯಾದರೂ, ಹಿಂದುಳಿದ ಸಮುದಾಯಗಳ ಮತ ಸೆಳೆಯುವಲ್ಲಿ ಸುನೀಲ್ ಯಶಸ್ವಿಯಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.  

ಇನ್ನು, ಬಿಜೆಪಿ ಸರ್ಕಾರ ಸಂಪುಟ ರಚನೆಯ ಸಂದರ್ಭದಲ್ಲಿ ಜಾತಿ ಲೆಕ್ಕಚಾರದ ಆಧಾರದಲ್ಲಿ ಕ್ರಮವಾಗಿ ಒಬಿಸಿ ೭, ಎಸ್‌ಸಿ ೩, ಎಸ್‌ಟಿ ೧ ಹಾಗೂ ಲಿಂಗಾಯತ ಸಮುದಾಯಕ್ಕೆ ೮ ಸ್ಥಾನಗಳನ್ನು ನೀಡಿದೆ. ಸಂಪುಟದಲ್ಲಿ ಸ್ಥಾನಮಾನಗಳನ್ನು ಗಮನಿಸುವುದಾದರೇ, ಲಿಂಗಾಯತ ಸಮುದಾಯಕ್ಕೆ ಬಹುಪಾಲನ್ನು ನೀಡಲಾಗಿದೆ. ‘ಲಿಂಗಾಯತ ಸಮುದಾಯದ ನಾಯಕ’ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಇಡೀ ಲಿಂಗಾಯತ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿತ್ತು, ಯಡಿಯೂರಪ್ಪ ತಮ್ಮ ಸಮುದಾಯದ ಸ್ವಾಮೀಜಿಗಳೊಂದಿಗೆ ಹೈಕಮಾಂಡ್‌ಗೆ ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಪ್ರಯತ್ನ ಮಾಡಿದರು. ‘ಯಡಿಯೂರಪ್ಪ ಅಂದುಕೊಂಡಷ್ಟು ಸುಲಭವಿಲ್ಲ’ ಎಂಬ ಅರಿವಾಗಿ, ಹೈಕಮಾಂಡ್ ಕೂಡ ಪರೋಕ್ಷವಾಗಿ ಯಡಿಯೂರಪ್ಪರ ಮಾತಿಗೆ ಅಸ್ತು ಎನ್ನಬೇಕಾಯಿತು. ಸಂಪುಟದಲ್ಲಿಯೂ ಲಿಂಗಾಯತ ಸಮುದಾಯಕ್ಕೆ ಹೈಕಮಾಂಡ್ ಸೂಚನೆಯಂತೆಯೇ ಬಹುಪಾಲನ್ನು ನೀಡುವ ಮೂಲಕ ಮುನಿಸಿಕೊಂಡ ಸಮುದಾಯವನ್ನು ಸಮಾಧಾನ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಕೊಂಚ ಮಟ್ಟಿಗೆ ಯಶಸ್ವಿಯಾಯಿತು. ಇನ್ನುಳಿದದ್ದು ಸರ್ಕಾರ ರಚನೆಯಲ್ಲಿ ಪ್ರಾತಿನಿಧ್ಯ ದೊರೆಯದ ಸಮುದಾಯಗಳು ಹಾಗೂ ಜಿಲ್ಲೆಗಳು. ಈ ಬಗ್ಗೆ ಬಿಜೆಪಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲವೆಂದಾದರೂ, ಚುನಾವಣೆ ಅಂತ ಬಂದಾಗ ಎಲ್ಲವೂ ಎಲ್ಲಾ ಪಕ್ಷಗಳಿಗೂ ಮುಖ್ಯ. ಈ ವಿಷಯದಲ್ಲಿ ಬಿಜೆಪಿ ಕೂಡ ಹೊರತಾಗಿಲ್ಲ. ಸದ್ಯ ಆ ಬಗ್ಗೆ ಗಮನ ನೀಡುವ ಅಗತ್ಯವಿದ್ದು, ಆರ್‌ಎಸ್‌ಎಸ್ ಈಗಾಗಲೇ ಆಯಾಯ ಭಾಗಗಳ ತನ್ನ ಜನಪ್ರತಿನಿಧಿಗಳ ಒಟ್ಟಾರೆ ಆಡಳಿತ ಹಾಗೂ ರಾಜಕೀಯ ವೈಖರಿಗಳನ್ನು ಗುರುತಿಸಿ, ಯಾವುದೇ ಕಾರಣಕ್ಕೂ ರಾಜಕೀಯ ವರ್ಚಸ್ಸು ದುರ್ಬಲಗೊಳ್ಳದ ಹಾಗೆ ಎಚ್ಚರಿಕೆ ವಹಿಸುವಂತೆ ಬಿಜೆಪಿಗೆ ನಿರ್ದೇಶಿಸಿದೆ.  

ಒಟ್ಟಿನಲ್ಲಿ, ೨೦೨೩ಕ್ಕೆ ಬಿಜೆಪಿಯ ಹೊಸ ನೇತೃತ್ವ ಒಂದೆಡೆಯಾದರೇ, ಇನ್ನೊಂದೆಡೆ ಕಾಂಗ್ರೆಸ್‌ನ ಸೋ ಕಾಲ್ಡ್ ಸಾಮೂಹಿಕ ನಾಯಕತ್ವ. ಬೊಮ್ಮಾಯಿ ಸೌಮ್ಯ ಧೋರಣೆ ಬಿಜೆಪಿಗೆ ಮತ್ತೆ ಅಧಿಕಾರ ತಂದುಕೊಡುತ್ತದೆಯೊ ಅಥವಾ ರಾಜ್ಯ ಕಾಂಗ್ರೆಸ್‌ಗೆ ಮತ್ತೆ ಸಿದ್ದರಾಮಯ್ಯ ಕಮಾಂಡರ್ ಆಗಿ ಹೊರಹೊಮ್ಮಲಿದ್ದಾರೆಯೋ ಎನ್ನುವುದು ಈಗಿನ ರಾಜಕೀಯ ವಲಯದ ಚರ್ಚೆ. ಇನ್ನು, ಚುನಾವಣಾ ಅಖಾಡದಲ್ಲಿ ಗೆಲುವಿಗೆ ಆಡಳಿತ ಪಕ್ಷ ಬಿಜೆಪಿ ಸೇರಿ ಪ್ರತಿಪಕ್ಷಗಳು ಕೂಡ ಚುನಾವಣಾ ರಣತಂತ್ರ ಹೂಡುತ್ತಿದ್ದು, ಸಾಮಾಜಿಕ ವಲಯದಲ್ಲಿ ಕಳೆದೊಂದು ವರ್ಷದಿಂದ ವ್ಯಾಪಕ ವಿವಾದಗಳಿಗೆ ಕಾರಣವಾದ ಚರ್ಚೆಗಳಿಗೆ ಸಂಬಂಧಪಟ್ಟ ವಿಷಯಗಳೇ ಚುನಾವಣೆಯ ಅಜೆಂಡಾ, ಪ್ರಚಾರ ಸಾಮಾಗ್ರಿಗಳಾಗುತ್ತಿದ್ದು, ಹೇಗೆ ಪಕ್ಷಗಳು ಅವುಗಳನ್ನು ಬಳಸಿಕೊಳ್ಳಲಿವೆ ಎನ್ನುವುದು ಸದ್ಯಕ್ಕಿರುವ ಅಚ್ಚರಿ.

-ಶ್ರೀರಾಜ್ ವಕ್ವಾಡಿ  

 


Thursday, July 14, 2022

ಕಾಂಗ್ರೆಸ್ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’

ಜಾತಿ ಲೆಕ್ಕಚಾರದತ್ತ ಕಾಂಗ್ರೆಸ್ ಎಚ್ಚರದ ಕಣ್ಣು | ಕಾಂಗ್ರೆಸ್ ಮುಸ್ಲೀಂ ಮತಗಳು ವಿಮುಖ..?! 

ಕರ್ನಾಟಕದ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಭಾರತೀಯ ಕಾಂಗ್ರೆಸ್ ಪಕ್ಷ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿ ಬರುವ ನಿರೀಕ್ಷೆಯೊಂದಿಗೆ ಸರ್ವಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ದಲಿತ, ಮುಸ್ಲಿಂ, ಹಾಗೂ ಇತರೆ ಪ್ರಭಾವಿ ಜಾತಿಗಳ ಬಗ್ಗೆ ಈ ಬಾರಿ ಹೆಚ್ಚು ಎಚ್ಚರಿಕೆ ವಹಿಸಿದಂತೆ ಕಾಣಿಸುತ್ತಿದೆ. ಕಳೆದ ಚುನಾವಣೆಯಷ್ಟು ಸುಲಭಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್‌ಗೂ ಕೂಡ ತಿಳಿದಂತಿದೆ. ಅತ್ಯಂತ ಪ್ರಭಾವಿ ನಾಯಕರ ಪಡೆಯನ್ನೇ ಹೊಂದಿರುವ ಕರ್ನಾಟಕ ಕಾಂಗ್ರೆಸ್ ಈವರೆಗೆ ರಾಜಕೀಯ ತಂತ್ರಗಾರಿಕೆಯಲ್ಲಿ ಸೋಲನುಭವಿಸಿತ್ತು. ಅದು ೨೦೧೮ರ ಚುನಾವಣೆಯಲ್ಲಿ ಎದ್ದು ಕಾಣಿಸುತ್ತಿತ್ತು. ಸಿದ್ದರಾಮಯ್ಯ ೨೦೧೮ರಲ್ಲಿ ರಾಷ್ಟ್ರೀಯ ನಾಯಕ ಎಂಬಷ್ಟರ ಮಟ್ಟಿಗೆ ಗುರುತಿಸಿಕೊಂಡು, ಆ ಚುನಾವಣೆ ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ಆಗಿರದೇ, ಸಿದ್ದರಾಮಯ್ಯ ವರ್ಸಸ್ ಮೋದಿ ಆಗಿದ್ದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ದೇಶದಾದ್ಯಂತ ಇದ್ದ ದೊಡ್ಡ ಮೋದಿ ರಾಜಕೀಯದ ಅಲೆ ಎದುರೂ ಕೂಡ ಕಾಂಗ್ರೆಸ್ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ೮೦ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಹಾಗೆ ನೋಡಿದರೇ, ೨೦೧೩ರ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ಕಡೆ ವಾಲಿದ್ದ ಮತಗಳು ಮತ್ತೆ ಮರಳಿ ೨೦೧೮ರಲ್ಲಿ ಬಿಜೆಪಿಯತ್ತ ತಿರುಗಿದವು. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬಿಜೆಪಿಗೆ ಹೋಲಿಸಿದರೇ ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮೇಲೆ ದೊಡ್ಡ ಆರೋಪವಿಲ್ಲದಿದ್ದರೂ, ಮೋದಿ ಅಲೆ ಕಾಂಗ್ರೆಸ್ ಮತಗಳನ್ನೂ ‘ಮ್ಯಾಜಿಕ್’ ಎಂಬಂತೆ ಬಿಜೆಪಿ ಸೆಳೆದುಕೊಂಡಿತ್ತು. ಪೂರ್ಣ ಬಹುಮತ ಪಡೆಯುವುದಕ್ಕೆ ಸಾದ್ಯವಾಗಿಲ್ಲವಾದರೂ ೨೦೧೩ರಲ್ಲಿ ೪೦ ಕ್ಷೇತ್ರಗಳಿಗೆ ತೃಪ್ತಿ ಪಡೆದುಕೊಂಡಿದ್ದ ಬಿಜೆಪಿ, ೨೦೧೮ರಲ್ಲಿ ೬೪ ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುವುದರೊಂದಿಗೆ ಒಟ್ಟು ೧೦೪ ಕ್ಷೇತ್ರಗಳನ್ನು ಪಡೆದುಕೊಂಡಿತ್ತು. ಆಮೇಲೆ ಏಕ್ ದಿನ್ ಕಾ ಸಿಎಂ ಯಡಿಯೂರಪ್ಪ, ವಿಶ್ವಾಸಮತಕ್ಕೆ ಸೂಚನೆ, ಯಡಿಯೂರಪ್ಪ ರಾಜೀನಾಮೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ, ಕುಮಾರ ಸ್ವಾಮಿ ಸಿಎಂ, ಅತೃಪ್ತ ಶಾಸಕರ ಭಿನ್ನಮತ, ಶಾಸಕರ ಬಂಡಾಯ, ಅತೃಪ್ತ ಶಾಸಕರ ರಾಜೀನಾಮೆ ಪರ್ವ, ಅನರ್ಹತೆಯ ಅಸ್ತ್ರ, ಸುಪ್ರೀಂ ಕೋರ್ಟ್, ಕೆಲವೇ ತಿಂಗಳಲ್ಲಿ ಮೈತ್ರಿ ಲಗಾಡಿ, ಉಪ ಚುನಾವಣೆ, ಬಿಜೆಪಿಗೆ ಬಹುಪಾಲು, ಯಡಿಯೂರಪ್ಪ ಮತ್ತೆ ರಾಜ್ಯದ ಸಿಎಂ, ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರ ಸಹಾಯದಿಂದ ಬಿಜೆಪಿ ಸರ್ಕಾರ ರಚನೆ, ಎರಡು ವರ್ಷಗಳಲ್ಲಿ ಯಡಿಯೂರಪ್ಪ ಪದಚ್ಯುತಿ, ಬೊಮ್ಮಾಯಿ ಸಿಎಂ ಇತ್ಯಾದಿಗಳೆಲ್ಲವೂ ದೊಡ್ಡ ಕಥೆ. 

ಇವೆಲ್ಲವೂ ಕಾಂಗ್ರೆಸ್‌ಗೆ ಒಂದು ದೊಡ್ಡ ಪಾಠವನ್ನೇ ಕೊಟ್ಟಿದೆ. ಜಾತಿ ಲೆಕ್ಕಾಚಾರದಲ್ಲಿ ಸೋಲು, ಮೋದಿ ರಾಜಕೀಯ ಅಲೆ ಎದುರಿಗೆ ಸರಿಸಮನಾದ ತಂತ್ರಗಾರಿಕೆಯ ಕೊರತೆ, ೨೦೧೩ರಲ್ಲಿ ತನ್ನದಾಗಿದ್ದ ಕ್ಷೇತ್ರಗಳಲ್ಲಿ ಮತದಾರರ ಅವಿಶ್ವಾಸ, ಮುಸ್ಲೀಂ ಮತಗಳ ವಿಂಗಡಣೆ, ಪಕ್ಷ ಸಂಘಟನೆ ಹಾಗೂ ಪ್ರಭಾವಿ ಸಮುದಾಯಗಳ ಓಲೈಕೆಯಲ್ಲಿ ವಿಫಲ ಎಲ್ಲವೂ ಕಾಂಗ್ರೆಸ್‌ಗೆ ೨೦೧೮ರಲ್ಲಿ ದೊಡ್ಡ ಮರ್ಮಾಘಾತವನ್ನೇ ನೀಡಿತು. ಈ ಬಾರಿಯಂತೂ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ವಿಧಾನ ಸಭೆಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ನಂತರ ಕಾಂಗ್ರೆಸ್ ಪಾಲಿಗೆ ದಕ್ಷಿಣ ಭಾರತದ ಏಕೈಕ ಭರವಸೆಯ ರಾಜ್ಯ ಕರ್ನಾಟಕದಲ್ಲಿ ಒಂದಿಷ್ಟು ರಾಜಕೀಯ ತಂತ್ರಗಾರಿಕೆಯತ್ತ ಕಾಂಗ್ರೆಸ್ ಗಮನ ಹರಿಸುತ್ತಿದೆ.    

ಇನ್ನು, ಅತೃಪ್ತ ಬಿಜೆಪಿ ಶಾಸಕರಲ್ಲಿನ ಯಡಿಯೂರಪ್ಪರ ಮೇಲಿನ ಪ್ರತ್ಯಕ್ಷ, ಪರೋಕ್ಷ ‘ಸೂಪರ್ ಸಿಎಂ’ ಆರೋಪದ ಕಾರಣದಿಂದಾಗಿಯಾದರೂ, ವಯಸ್ಸಿನ ನೆಪ ಹೇಳಿ ಬಿಜೆಪಿ ಹೈಕಮಾಂಡ್, ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಹುಟ್ಟು ಹೋರಾಟಗಾರ ಬಿ. ಎಸ್. ಯಡಿಯೂರಪ್ಪ ಅವರನ್ನು ನಿರ್ಧ್ಯಾಕ್ಷಿಣ್ಯವಾಗಿ ಸಿಎಂ ಸ್ಥಾನದಿಂದ ಕೆಳಗಿಸಿತು, ಕಾಂಗ್ರೆಸ್‌ನಿಂದ ಬಿಜೆಪಿಗೆ ಜಂಪ್ ಆಗಿದ್ದ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟರು, ಲೂಸ್ ಟಾಕ್‌ಗೆ ಹಾಗೂ ಹರಕು ಬಾಯಿ ಎಂದೇ ಖ್ಯಾತನಾಮರಾಗಿದ್ದ ಈಶ್ವರಪ್ಪ, ಯಡಿಯೂರಪ್ಪ ರಾಜೀನಾಮೆ, ಬೊಮ್ಮಾಯಿ ಸಿಎಂ ಆದ ಬಳಿಕ ಕೆಲವೇ ತಿಂಗಳಲ್ಲಿ ರಾಷ್ಟ್ರೀಯವಾದಿ ನಾಯಕನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ ಒಂದು ವರ್ಷವಾಗುವ ಮುನ್ನವೇ 40% ಕಮಿಷನ್ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟು ಹೊರನಡೆದರು. ಉಳಿದಂತೆ ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಪ್ರಕರಣ ಇವೆಲ್ಲವೂ ಕಾಂಗ್ರೆಸ್‌ಗೆ ಒಂದು ಹಂತದಲ್ಲಿ ವರದಾನವಾಗಿ ಪರಿಣಮಿಸಿದರೂ ಕಾಂಗ್ರೆಸ್ ಈ ಎಲ್ಲಾ ವಿಷಯಗಳನ್ನು ಈವರೆಗೆ ರಾಜಕೀಯವಾಗಿ ಅಷ್ಟಾಗಿ ಬಳಸಿಕೊಂಡಿಲ್ಲ. ಬಹುಷ, ಈ ಎಲ್ಲಾ ವಿಷಯಗಳು ಬಿಜೆಪಿಗೆ ಸಿಕ್ಕಿದ್ದಿದ್ದರೇ, ಇಷ್ಟೊತ್ತಿಗಾಗಲೇ ಕಾಂಗ್ರೆಸ್‌ನ ಹೆಸರು ಇಲ್ಲದ ಹಾಗೆ ಮಾಡುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. 

ಲಿಂಗಾಯತ – ಒಕ್ಕಲಿಗರ ಬಗ್ಗೆ ಕಾಂಗ್ರೆಸ್ ಗಮನ : ಬಹಳ ಪ್ರಮುಖವಾಗಿ ರಾಜ್ಯದ ರಾಜಕಾರಣವನ್ನು ನಿರ್ಧರಿಸುವುದು ಅಂತಾದರೇ, ಅವು ಒಕ್ಕಲಿಗ ಹಾಗೂ ಲಿಂಗಾಯತ-ವೀರಶೈವ ಎಂಬ ಎರಡು ಪ್ರಭಾವಿ ಸಮುದಾಯಗಳು. ಒಕ್ಕಲಿಗ ಸಮುದಾಯದಿಂದ ಡಿ.ಕೆ ಶಿವಕುಮಾರ್ ಪ್ರಮುಖ ನಾಯಕರಿದ್ದರೂ ಕೂಡ, ಅದು ಹೆಚ್ಚು ಪ್ರಮಾಣದಲ್ಲಿ ಸ್ಥಾನ ತಂದುಕೊಡುವಷ್ಟರ ಮಟ್ಟಿಗೆ ಇಲ್ಲ. ಹೇಳಿಕೇಳಿ ಡಿಕೆಶಿಗೆ ಸಮುದಾಯದ ಹಿತ ಕಾಪಾಡುವ ಶಕ್ತಿ ಇಲ್ಲ. ಶಿವಕುಮಾರ್ ಅವರ ಮಾತು ಪಕ್ಷದವರೇ ಕೇಳುವುದಿಲ್ಲವೆಂಬ ಮಾತು ಕೂಡ ಇದೆ. ಇನ್ನು, ಒಕ್ಕಲಿಗ ಬಲವಿರುವ ಹಳೆ ಮೈಸೂರು ಭಾಗದ ಮೇಲೆ ಕಾಂಗ್ರೆಸ್ ಈಗ ಕಣ್ಣಿಟ್ಟಿದ್ದು, ಆ ಭಾಗದಲ್ಲಿ ಜೆಡಿಎಸ್ ಮೇಲೆ ಒಲವಿದ್ದ ಒಕ್ಕಲಿಗರ ಮತ ದುರ್ಬಲಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ, ಹಾಗಾಗಿ ಬಿಜೆಪಿಯತ್ತ ಒಕ್ಕಲಿಗರ ಚಿತ್ತ ಹರಿಯದಂತೆ ಕಾಂಗ್ರೆಸ್ ನೋಡಿಕೊಳ್ಳಬೇಕಾಗಿದೆ. ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರನ್ನು ತನ್ನೊಳಗೆ ಸೇರಿಸಿಕೊಳ್ಳುವ ಪ್ರಯತ್ನವೂ ಕಾಂಗ್ರೆಸ್ ಮಾಡಿತ್ತು, ಆದರೇ, ಹಳೆ ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್, ಜೆಡಿಎಸ್ ಕೈಗಳು ಕಮಲ ಹಿಡಿದವು. ದಕ್ಷಿಣ ಕರ್ನಾಟಕದ ಭಾಗದಲ್ಲಿ ಬೀಸಲಾರಂಭಿಸಿದ ಬಿಜೆಪಿ ಗಾಳಿಯನ್ನು ತಡೆಹಿಡಿಯಬೇಕಾಗಿರುವುದು ಕಾಂಗ್ರೆಸ್‌ಗೆ ತುರ್ತಿದೆ. ಇನ್ನು, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಅಂತ ಗುರುತಿಸಿಕೊಂಡವರು ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಒಕ್ಕಲಿಗ ಸಮುದಾಯದಲ್ಲಿ ದೇವೆಗೌಡ ಹೇಗೆ ಪರಮೋಚ್ಛ ನಾಯಕರೋ ಹಾಗೆಯೇ ಲಿಂಗಾಯತ ಸಮುದಾಯದಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರಮೋಚ್ಛ ನಾಯಕ ಎಂದು ಗುರುತಿಸಿಕೊಂಡವರು. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದಿಂದ ರಾಜಕೀಯಕ್ಕೆ ಬಂದ ರಾಜಕಾರಣಿಗಳು ಹಲವಾರು ಮಂದಿ ಇದ್ದರೂ ಕೂಡ, ಅವರ‍್ಯಾರೂ ಕೂಡ ಯಡಿಯೂರಪ್ಪರ ಹಾಗೆ ‘ಲಿಂಗಾಯತ ಸಮುದಾಯದ ನಾಯಕ’ ಎಂದು ಗುರುತಿಸಿಕೊಂಡವರಲ್ಲ. ಹಾಗಾಗಿ ಕಾಂಗ್ರೆಸ್ ಸದ್ಯ ಯಡಿಯೂರಪ್ಪರ ಮುಂದಿನ ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರನ್ನು ತೊರೆದು ಮುಂದೆ ಹೋದರೇ, ಲಿಂಗಾಯತ ಮತಗಳು ವಿಮುಖವಾಗಬಹುದು ಎಂಬುವುದು ಕಾಂಗ್ರೆಸ್ ರಾಜಕೀಯ ಹಾಗೂ ಜಾತಿ ಲೆಕ್ಕಾಚಾರ. 

ಎಸ್‌ಡಿಪಿಐ, ದಲಿತ ಸಮುದಾಯಗಳ ಬಗ್ಗೆ ಎಚ್ಚರದ ಕಣ್ಣು : ರಾಜ್ಯ ಹಾಗೂ ದೇಶದಾದ್ಯಂತ ನಡೆದ ಒಂದಿಷ್ಟು ವಿವಾದಾತ್ಮಕ ಘಟನೆಗಳಿಗೆ (ಹಿಜಾಬ್ ಸೇರಿ) ಕಾಂಗ್ರೆಸ್ ಅಷ್ಟಾಗಿ ಮುಸ್ಲೀಂ ಪರವಾಗಿ ನಿಂತಿಲ್ಲ ಎಂಬ ಅಸಮಾಧಾನ ಮುಸ್ಲೀಂ ಸಮುದಾಯದಲ್ಲಿ ಸೃಷ್ಟಿಯಾಗಿದೆ. ಈ ಲಾಭವನ್ನು ಪಡೆದುಕೊಳ್ಳುವುದಕ್ಕೆ ಎಸ್‌ಡಿಪಿಐ ಮುಂದಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ಗೂ ಆತಂಕವಿದೆ. ರಾಜ್ಯದ ಕರಾವಳಿ ಕರ್ನಾಟಕವನ್ನು ಒಳಗೊಂಡು ಕೆಲವು ಮುಸ್ಲೀಂ ಕೇಂದ್ರಿತ ಭಾಗಗಳಲ್ಲಿ ಎಸ್‌ಡಿಪಿ ಸೇರಿ ಇತರೆ ಮುಸ್ಲೀಂ ಲೀಗ್‌ಗಳು ಕಾಂಗ್ರೆಸ್ ಪರವಿದ್ದ ಮುಸ್ಲೀಂ ಮತಗಳನ್ನು ಓಲೈಸುವ ನಿಟ್ಟಿನಲ್ಲಿ ಕಾರ್ಯತಂತ್ರಕ್ಕೆ ಮುಂದಾಗಿವೆ. ಹಾಗಾಗದಿರುವ ಹಾಗೆ ಮುಸ್ಲೀಂ ಮತ ಕೇಂದ್ರಿತ ಭಾಗಗಳ ಅಭ್ಯರ್ಥಿಗಳನ್ನು ಚೆನ್ನಾಗಿ ನಡೆಸಿಕೊಂಡು ಮುಸ್ಲೀಂ ಮತಗಳು ಕಾಂಗ್ರೆಸ್‌ನಿಂದ ಜಾರದ ಹಾಗೆ ನೋಡಿಕೊಳ್ಳುವುದು ಈಗ ಕಾಂಗ್ರೆಸ್‌ಗೆ ಅನಿವಾರ್ಯ. ಇನ್ನು, ದಲಿತರ ವಿಚಾರದಲ್ಲಿಯೂ ಕಾಂಗ್ರೆಸ್ ತನ್ನ ವಿಶ್ವಾಸ ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ದಲಿತ ಸಮುದಾಯದ ಕೆಲ ಜಾತಿಗಳು ತೋರಿಸುತ್ತಿರುವ ಒಲವೇ ಸಾಕ್ಷಿ. ಹಾಗಾಗಿ, ಕಾಂಗ್ರೆಸ್‌ಗೆ ಈಗ ದಲಿತರ ಪರ ಕಾಂಗ್ರೆಸ್ ಇದೆ ಎಂದು ತೋರಿಸಿಕೊಡುವ ತುರ್ತಿದೆ. ‘ದಲಿತ ಮುಖ್ಯಮಂತ್ರಿ’ ಕೂಗು ಕಳೆದ ವಿಧಾನ ಸಭಾ ಚುನಾವಣೆಯಿಂದಲೂ ಕೇಳಿ ಬರುತ್ತಲಿದ್ದು, ದಲಿತರ ಓಲೈಕೆಗೆ ಚುನಾವಣಾ ಪೂರ್ವವಾಗಿ ಕಾಂಗ್ರೆಸ್ ಏನು ಮಾಡಲಿದೆ ಎನ್ನುವುದರ ಮೇಲೆ ಕೂತೂಹಲವಿದೆ. 

ಕಾಂಗ್ರೆಸ್‌ಗೆ ಪಕ್ಷ ಸಂಘಟನೆಯ ಕೊರತೆ : ಕಾಂಗ್ರೆಸ್ ಕಳೆದ ಕೆಲವು ವರ್ಷಗಳಿಂದ ಎದುರಿಸುತ್ತಿರುವುದು ಪ್ರಬಲ ಪಕ್ಷ ಸಂಘಟನೆಯ ಕೊರತೆ. ಪ್ರಭಾವಿ ನಾಯಕರುಗಳೆಲ್ಲಾ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಸಮಾವೇಷ, ಅದು-ಇದು ಅಂತ ಮಾಡಿ ಒಂದಿಷ್ಟು ‘ರೋಬೋ ಆಡಿಯನ್ಸ್’ಗಳನ್ನು ಕರೆಸಿ ಜೈಕಾರ ಹಾಕಿಸಿಕೊಂಡು ಬಂದವರಿಗೆ ಭರ್ಜರಿ ಊಟ ಹಾಕಿ ಕಳಿಸಿದರು. ಊಟ ಮಾಡಿ ಹೋದವರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿ ಕಂಡವರಿಲ್ಲ. ಅವೆಲ್ಲದಕ್ಕಿಂತ ಮುಖ್ಯವಾಗಿ ತನ್ನ ಸ್ಪಷ್ಟ ಸಿದ್ಧಾಂತ ಯಾವುದು ಎನ್ನುವುದೇ ಕಾಂಗ್ರೆಸ್‌ಗೆ ಗೊತ್ತಿಲ್ಲ. ವಿದ್ಯಾರ್ಥಿ ಸಂಘಟನೆಗಳನ್ನು, ಮುಸ್ಲೀಂ ಲೀಗ್‌ಗಳನ್ನು ಬೆಂಬಲಿಸಿದ ಹಾಗೆ ಮಾಡಿದೆಯಾದರೂ ಅವು ಈಗ ಎಲ್ಲಿವೆ ಎನ್ನುವುದೇ ಗೊತ್ತಿಲ್ಲ. ‘ಆನ್‌ಲೈನ್ ಮೆಂಬರ್‌ಶಿಪ್’ ಲೆಕ್ಕದಲ್ಲೇ ಗೆಲುವಿನ ಕನಸು ಕಾಣುವ ಕಾಂಗ್ರೆಸ್, ಆರ್‌ಎಸ್‌ಎಸ್‌ನಂತಹ ಏಕ ಸಿದ್ಧಾಂತದ ಪ್ರಬಲ ಸಂಘಟನೆಯನ್ನು ಕಟ್ಟಿ ಬೆಳೆಸುವುದರಲ್ಲಿ ಒಂದಿನಿತೂ ಯೋಚನೆಯೂ ಮಾಡಿಲ್ಲ. ಪಕ್ಷದ ಸಿದ್ಧಾಂತವನ್ನು ಎತ್ತಿ ಸಾರುವ ಒಂದು ಪ್ರಬಲ ಸಂಘಟನೆಯನ್ನು ಸ್ಥಳೀಯ ಮಟ್ಟದಲ್ಲಿ ಕಟ್ಟಿ ಬೆಳೆಸುವುದಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಆಗದಿರುವುದು ದೊಡ್ಡ ದುರಂತವೇ ಸರಿ.     

ಒಟ್ಟಿನಲ್ಲಿ, ಬದಲಾದ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಇನ್ನೂ ‘ಮಹಾಸ್ವಾತಂತ್ರಂತ್ರ್ಯ ನಡಿಗೆ’,  ‘ಭಾರತ್ ಜೋಡೋ ಯಾತ್ರೆ’ ಅಂತಹ ಅದೇ ಹಳೆಯ ದಾರಿಯಲ್ಲೇ ನಡೆಯುತ್ತಾ ಕಾಂಗ್ರೆಸ್ ಗೆಲುವಿನ ಕನಸು ಕಾಣುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆ ಮಾಡಬೇಕು ಎಂಬ ಕಾಂಗ್ರೆಸ್‌ನ ಅವಸರದ ಧೋರಣೆ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎಂಬಂತಾಗಿರುವುದಂತೂ ಪದಶಃ ಸತ್ಯ. 

-ಶ್ರೀರಾಜ್ ವಕ್ವಾಡಿ 


  


Thursday, July 7, 2022

ಉದ್ಧವ್ ಪರಾಜಯ, ಶಿಂಧೆ ‘ಮಹಾ’ಜಯ..!

ಬಿಜೆಪಿ ನಿರ್ದೇಶನ, ಅಘಾಡಿ ಪತನ, ಮರಾಠ ಸೂತ್ರ - ಶಿಂಧೆ ಪಾತ್ರ...! 

ಮಹಾ ವಿಕಾಸ್ ಅಘಾಡಿ ಮುರಿದ ಮೇಲೆ ಬೀದಿ ರಾಜಕಾರಣದ ಕಿಂಗ್ ಎಂದೇ ಖ್ಯಾತನಾಮರಾದ, ಉದ್ಧವ್ ಠಾಕ್ರೆ ಪಡೆ ಎದುರು ಬಂಡೆದ್ದ ಏಕನಾಥ್ ಶಿಂಧೆ ಶಿವಸೇನೆಯ ಶಾಸಕಾಂಗ ನಾಯಕ ಮಾನ್ಯತೆ ಪಡೆಯುವುದರೊಂದಿಗೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜಕೀಯವ ವಲಯ ಊಹಿಸಿಯೇ ಇರಲಿಲ್ಲ. ‘ಸೂಪರ್ ಸಿಎಂ, ಮೈತ್ರಿ ಮೇಲಿನ ಅಸಮಾಧಾನ, ಅತೃಪ್ತರ ಬಂಡಾಯ, ಅನರ್ಹತೆಯ ಅಸ್ತ್ರ, ಸುಪ್ರೀಂ ಕೋರ್ಟ್ ಆದೇಶ, ಉದ್ಧವ್ ಪರಾಜಯ, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾಂದಿ, ಶಿಂಧೆ ಮುಖ್ಯಮಂತ್ರಿ, ಫಡ್ನವಿಸ್ ಉಪಮುಖ್ಯಮಂತ್ರಿ, ಮರಾಠ ಲೆಕ್ಕಾಚಾರ’ ಎಲ್ಲವೂ ದಿಢೀರ್ ಅಂತಾಗಿ ಮಹಾ ಅಚ್ಚರಿ ಸೃಷ್ಟಿಯಾಯಿತು.  

ಈ ಹಿಂದೆ ಬಿಜೆಪಿ ದೊಡ್ಡ ಜಾತಿ ಲೆಕ್ಕಾಚಾರವನ್ನೇ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮರಾಠರ ಶ್ರೇಷ್ಠ ಬಲಿದಾನದ ಇತಹಾಸ ಸಾರುವ ಮಹಾರಾಷ್ಟ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಆದ ಶೇಕಡಾ ೬೧ರಷ್ಟು ಮತದಾನದಲ್ಲಿ ಶೇಕಡಾ ೨೭.೫೯ ರಷ್ಟು (೧,೪೯,೧೨,೧೩೯),  ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು ಆದ ಶೇಕಡಾ ೬೧.೪ ರಷ್ಟು ಮತದಾನದಲ್ಲಿ ಶೇಕಡಾ ೨೫.೭೫ ರಷ್ಟು (೧೪,೧೯೯,೩೭೫) ಮತಗಳನ್ನು ಎನ್‌ಡಿಎ ಮೈತ್ರಿ ಸರ್ಕಾರ ಪಡೆದುಕೊಂಡಿತ್ತು. ಮಹಾರಾಷ್ಟ್ರದ ಮರಾಠ ಒಲವಿನ ಪ್ರಾಂತೀಯ ಸಿದ್ದಾಂತದ ಎದುರು ಬಿಜೆಪಿಯ ರಾಷ್ಟ್ರೀಯವಾದ ಹಾಗೂ ಹಿಂದುತ್ವವಷ್ಟೇ ಕೆಲಸ ಮಾಡುವುದಿಲ್ಲ ಎನ್ನುವುದು ಸ್ವತಃ ಬಿಜೆಪಿಗೂ ಗೊತ್ತಿದೆ. ಪ್ರಾಂತೀಯ ಮರಾಠ ಪ್ರಭಾವದ ಹೈಪರ್ ಹಿಂದುತ್ವದ ಗಾಳಿ ಮಹಾರಾಷ್ಟ್ರದಲ್ಲಿ ಅಡಿಗಡಿಗೂ ಇದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮಹಾರಾಷ್ಟ್ರದ ವಿಚಾರಕ್ಕೆ ಬಂದರೇ, ಹಿಂದೆ ಮುಂದೆ ನೋಡುವುದು ಈ ‘ಮರಾಠ’ ವಿಚಾರಕ್ಕೆ ಅಷ್ಟೇ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಏಕಾಂಗಿಯಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಉದಾಹರಣೆ ಮಹಾರಾಷ್ಟ್ರದಲ್ಲಿ ಇಲ್ಲ. ಬಿಜೆಪಿಗೆ ಮಹಾರಾಷ್ಟçದಲ್ಲಿ ಪ್ರಾಂತೀಯ ಪಕ್ಷವನ್ನು ಆಧರಿಸಿಕೊಳ್ಳಲೇ ಬೇಕು. ಕ್ರಮಾನುಸಾರವಾಗಿ ಒಟ್ಟು ೪೮ ಲೋಕಸಭಾ ಕ್ಷೇತ್ರಗಳಲ್ಲಿ ೨೦೦೪ರ ಚುನಾವಣೆಯಲ್ಲಿ ೧೩ ಕ್ಷೇತ್ರಗಳು, ೨೦೦೯ರಲ್ಲಿ ೯ ಕ್ಷೇತ್ರಗಳು, ೨೦೧೪ರಲ್ಲಿ ೨೩ ಕ್ಷೇತ್ರಗಳು ಹಾಗೂ ಮತ್ತೆ ೨೦೧೯ರಲ್ಲಿ ೨೩ ಕ್ಷೇತ್ರಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಈ ಹಿಂದಕ್ಕೆ ಹೋದರೇ, ಬಿಜೆಪಿಯ ಹೆಸರು ಅಲ್ಲಲ್ಲಿ ಕೇಳುತ್ತಿತ್ತಷ್ಟೇ ಹೊರತು ಮತ್ತೇನಿರಲಿಲ್ಲ. ಸ್ವಲ್ಪ ಜೀವ ಬಂದಿದ್ದಿದ್ದರೇ ಅದು ೨೦೧೪ರ ನಂತರವಷ್ಟೇ. ಈಗ ಬಿಜೆಪಿಗೆ ಇರುವುದು ೨೦೨೪ರ ಗುರಿ. ಬಿಜೆಪಿಗೆ ಎಲ್ಲಾ ಆಯಾಮದಲ್ಲಿಯೂ ಮಹಾರಾಷ್ಟ್ರ ಬಹಳ ಮುಖ್ಯ. ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಂಡಿದೆ. ಹಿಂದುತ್ವದ ಕ್ಷಾತ್ರ ಧ್ವನಿ ಇರುವ ಹಾಗೂ ಮರಾಠ ದೊರೆ ಶಿವಾಜಿಯ ನೆಲ, ದೇಶದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಮಹಾರಾಷ್ಟ್ರವನ್ನು ಬಿಟ್ಟುಕೊಡುವುದಕ್ಕೆ ಬಿಜೆಪಿಗೆ ಸುತಾರಾಂ ಇಷ್ಟವಿಲ್ಲ. ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತವಿಲ್ಲದಿದ್ದರೂ ೧೦೫ ಕ್ಷೇತ್ರಗಳಲ್ಲಿ ಜಯಸಾಧಿಸಿದರೂ ಶಿವಸೇನೆಯೊಂದಿಗಿನ ಆಂತರಿಕ ಮೈತ್ರಿ ಭಿನ್ನಮತದ ಕಾರಣದಿಂದಾಗಿ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಾಯ್ತು. ಕೇವಲ ಎರಡುವರೆ ವರ್ಷಗಳಲ್ಲಿ ಅಘಾಡಿ ಮೈತ್ರಿಯ ಲಗಾಡಿ ತೆಗೆಯುವುದರಲ್ಲಿ ಬಿಜೆಪಿ ಪರೋಕ್ಷವಾಗಿ ಯಶಸ್ವಿಯಾಯಿತು. ಈಗ ಬಿಜೆಪಿಗೆ ಮುಂದಿರುವುದು ೨೦೨೪ರ ಲೋಕಸಭಾ ಚುನಾವಣೆ ಹಾಗೂ ವಿಧಾನ ಸಭಾ ಚುನಾವಣೆ. ಉದ್ಧವ್ ಮುನಿಸಿಕೊಂಡಿದ್ದಾರೆ, ಉದ್ಧವ್ ಬದಲಿಗೆ ಅಷ್ಟೇ ಪ್ರಭಾವಿಯೊಬ್ಬ ಬಿಜೆಪಿಗೆ ಬೇಕಿದ್ದ ಕಾರಣ ಈ ಬಂಡಾಯ ಎಬ್ಬಿಸಿದ್ದು, ಎನ್ನುವುದು ತಿಳಿದಿರುವ ವಿಷಯ. ಮರಾಠರ ಓಲೈಕೆ ಮಾಡಿಕೊಳ್ಳದೇ ಮಹಾರಾಷ್ಟ್ರದಲ್ಲಿ ಏನನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಸತ್ಯ ಬಿಜೆಪಿಗೆ ಗೊತ್ತಿದೆ. ಹಾಗಾಗಿ ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ನೀಡುವುದರ ಮುಖೇನ ಬಿಜೆಪಿ ಚಾಣಾಕ್ಷತನ ಮೆರೆದಿದೆ. 

ಹಿಂದುತ್ವ ಹಾಗೂ ಮರಾಠಿಗರ ಅಸ್ಮಿತೆಗಾಗಿ ತನ್ನ ಉದಯದ ಆರಂಭದಾದಿಯಾಗಿ ಹೋರಾಟ ಮಾಡುತ್ತಾ ಬಂದ ಶಿವಸೇನೆಯ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವಿಸ್‌ಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೇ ಏನೂ ವರ್ಕೌಟ್ ಆಗುವುದಿಲ್ಲ ಎಂಬ ಕಾರಣದಿಂದಾಗಿ ಬಿಜೆಪಿ ಮರಾಠ ನಾಯಕ ಶಿಂಧೆ ಅವರ ಮೂಲಕ ಮರಾಠರ ಮತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. 

ಶೇಕಡಾ ೩೧ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮರಾಠ ಸಮುದಾಯದ ಮತಗಳು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹಳ ಮುಖ್ಯ. ಬಿಜೆಪಿಗೆ ಸದ್ಯಕ್ಕೆ ಬೇಕಿರುವುದು ಸಿದ್ಧಾಂತಕ್ಕಿಂತ ಮಿಗಿಲಾಗಿ ಮತ ತಂದುಕೊಡುವ ಮುಖ. ಏಕನಾಥ್ ಶಿಂಧೆಯನ್ನೂ ಒಳಗೊಂಡು ಶಿವಸೇನೆಯಿಂದ ಹೊರಬಂದ ಶಾಸಕರು ಬಿಜೆಪಿಗೆ ಠಾಕ್ರೆ ಹೆಸರಿಲ್ಲದೇ ಹೇಗೆ ಮತ ತಂದುಕೊಡುತ್ತಾರೆ ಎನ್ನುವುದು ಸದ್ಯದ ಕುತೂಹಲ. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಸಿದ್ಧಾಂತಕ್ಕಿಂತ ಹೆಚ್ಚಾಗಿ, ಪ್ರಾಂತೀಯ ಸಿದ್ಧಾಂತವೇ ಅಂದರೇ, ಮರಾಠ ಹೋರಾಟಗಳಿಗೆ ಧ್ವನಿಯಾಗುವ ನಾಯಕರನ್ನು ಬೆಂಬಲಿಸುವ ಮತದಾರರೇ ಹೆಚ್ಚಿರುವುದೇ ಕಾರಣ. ಬಿಜೆಪಿಗೆ ಸೇರಿದವರೆಲ್ಲಾ ಶಿವಸೇನೆಯ, ಮರಾಠ ಸಮುದಾಯದ ಪ್ರಭಾವಿಗಳಲ್ಲ ಎನ್ನುವುದು ಕೂಡ ಗಮನಾರ್ಹ. ಇನ್ನು, ೧೦೬ ಶಾಶಕರನ್ನು ಹೊಂದಿರುವ ದೊಡ್ಡ ಪಕ್ಷದ ಹೊರತಾಗಿಯೂ ತನ್ನೊಂದಿಗಿನ ಎರಡಂಕಿಯ ಶಾಸಕರ ಬೆಂಬಲದಿಂದ ಬಿಜೆಪಿಯೊಂದಿಗೆ ಕೈ ಜೋಡಿಸಿದ ಶಿಂಧೆ ಬಳಗವನ್ನು ಮುಂದೆ ಬಿಜೆಪಿ ಹೇಗೆ ನೋಡಿಕೊಳ್ಳುತ್ತದೆ ಎನ್ನುವುದರಲ್ಲಿ ಬಹಳ ಕುತೂಹಲವಿದೆ. ಇಲ್ಲಿ ಗಮನಿಸಲೇಬೇಕಾದ ವಿಷಯವೇನೆಂದರೇ, ಬಿಜೆಪಿಗೆ ಶಿವಸೇನೆಯನ್ನು ಮುಗ್ಗರಿಸುವುದಕ್ಕಿಂತ ಮಿಗಿಲಾಗಿ ಉದ್ಧವ್ ಠಾಕ್ರೆಗೆ ಬುದ್ಧಿ ಕಲಿಸುವುದು ಪರಮ ಗುರಿಯಾಗಿತ್ತು, ಹಾಗಾಗಿಯೇ ಕಳೆದ ಎರಡು ವರ್ಷಗಳಿಂದ ಅತ್ಯಂತ ಸೂಕ್ಷ್ಮ ಲೆಕ್ಕಾಚಾರ ಮಾಡಿ, ಕಳೆದ ಬಾರಿ ಮುಖ್ಯಮಂತ್ರಿ ಹುದ್ದೆಗೆ ಕರ್ಚಿಫ್ ಹಾಕಿ ಕುಳಿತಿದ್ದ ಶಿಂಧೆ ಅವರನ್ನು ಛೂ ಬಿಟ್ಟು ಬಂಡೆಬ್ಬಿಸಿ ಸರ್ಕಾರ ಉರುಳಿಸಿದೆ ಎನ್ನುವುದು ಬಹಳ ಸ್ಪಷ್ಟ.

ಚುನಾವಣೆಗೆ ಶಿಂಧೆ ಬಳಗ ಮೂಲೆ ಗುಂಪು..? : ಬಿಜೆಪಿಗೆ ಮಹಾರಾಷ್ಟçದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಹಕರಿಸಿದ ಶಿಂಧೆ ಬಳಗ ಚುಣಾವಣೆಗೆ ಬಂದಾಗ ಬಿಜೆಪಿಯಲ್ಲಿ ಮೂಲೆ ಗುಂಪಾಗಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ. ಸರ್ಕಾರ ರಚನೆಯಲ್ಲಿ ಮೋದಿ, ಶಾ ಜೋಡಿ, ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಬಳಸಿಕೊಂಡು ಶಿಂಧೆಯಿಂದ ಉದ್ಧವ್ ವಿರುದ್ಧ ಬಂಡೆಬ್ಬಿಸಿದ ನಂತರ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಫಡ್ನವಿಸ್ ಪ್ರೇರಣೆ ಎಂದು ಹೇಳಿ ಫಡ್ನವಿಸ್‌ಗೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರಲ್ಲೇ ಎಲ್ಲಾ ಜಾಣ ನಡೆ ಅಡಗಿದೆ. ಇನ್ನು, ಒಟ್ಟು ೨೮೮ ಕ್ಷೇತ್ರಗಳಲ್ಲಿ ಈಗಾಗಲೇ ಗೆದ್ದಿರುವ ೧೦೬ ಶಾಸಕರು ಬಿಜೆಪಿಯೊಂದಿಗೆ ಇದ್ದಾರೆ. ಉಳಿದ ಕ್ಷೇತ್ರಗಳಿಗೂ ಬಿಜೆಪಿಯೊಂದಿಗೆ ಕೆಲವು ವರ್ಷಗಳಿಂದ ದುಡಿಯುತ್ತಾ ಬಂದಿರುವ ಅಭ್ಯರ್ಥಿಗಳೂ ಕೂಡ ಇದ್ದಾರೆ. ಇನ್ನು, ಶಿಂಧೆ ಬಳಗ. ಈಗ ಬಿಜೆಪಿ ತಲೆ ಮೇಲೆ ಇರುವುದು ಎಲ್ಲರನ್ನೂ ಸಮಾಧಾನ ಮಾಡುವ ದೊಡ್ಡ ಹೊಣೆಗಾರಿಕೆ. ಒಂದು ವೇಳೆ, ಮತ್ತೊಮ್ಮೆ ಅಧಿಕಾರಕ್ಕೆ ಬರುವವರೆಗೆ ಶಿಂಧೆ ಬಳಗವನ್ನು ಬಳಸಿಕೊಂಡರೂ, ಸರ್ಕಾರ ರಚನೆಯಲ್ಲಿ ಶಿಂಧೆ ಬಳಗವನ್ನು ಬಿಜೆಪಿ ಮೂಲೆ ಗುಂಪು ಮಾಡಿದರೇ, ಶಿಂಧೆಯನ್ನು ನಂಬಿಕೊಂಡು ಬಂದ ಶಾಸಕರು ಅರ್ಧ ದಾರಿಯಲ್ಲಿ ಬಡತನ ಎದುರಿಸುವುದಂತೂ ಸತ್ಯ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಚಾಣಾಕ್ಷ ಬ್ರಾಹ್ಮಣ ಸಮುದಾಯದ ಫಡ್ನವಿಸ್ ಅವರನ್ನು ಬಿಜೆಪಿ ಹೈಕಮಾಂಡ್ ನಿರ್ಧಾಕ್ಷಿಣ್ಯವಾಗಿ, ಒತ್ತಡ ಹೇರಿ ಉಪಮುಖ್ಯಮಂತ್ರಿಯಾಗಿ ಮಾಡಿ ಟ್ರೀಟ್ ಮಾಡಿದ್ದು ಗೊತ್ತೇ ಇಲ್ವೇ..? ಮುಖ್ಯಮಂತ್ರಿಯಾಗಿದ್ದವರನ್ನೇ ಸೈಡ್ ಲೈನ್ ಮಾಡಿರುವ ಬಿಜೆಪಿ, ಈ ಹೆಸರಿಲ್ಲದ ಶಿಂಧೆ ಬಳಗದ ಶಾಸಕರನ್ನು ಹೇಗೆ ಟ್ರೀಟ್ ಮಾಡಬಹುದು..? ಅಧಿಕಾರ, ರಾಜಕೀಯ ಅಂತ ಬಂದಾಗ ಏನನ್ನು ಕೂಡ ಮಾಡುವುದಕ್ಕೆ ಮೋದಿ, ಶಾ ಜೋಡಿ ಹಿಂದೆ ಮುಂದೆ ನೋಡಲ್ಲ ಎನ್ನುವುದನ್ನು ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ.  

ಬಂಡಾಯಕ್ಕೆ ಬಿಜೆಪಿ ಫಂಡ್ : ಒಡೆದು ಆಳುವುದರಲ್ಲಿ ಬಿಜೆಪಿಯನ್ನು ಮೀರಿಸುವುದಕ್ಕೆ ಯಾವ ಪಕ್ಷಕ್ಕೂ ಸಾದ್ಯವಿಲ್ಲ. ಅಷ್ಟು ರಾಜಕೀಯ ತಂತ್ರಗಾರಿಕೆ ಬಿಜೆಪಿಗಿದೆ ಎನ್ನುವುದು ಇದರ ಅರ್ಥ. ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಬಿಜೆಪಿ ಹೈಕಮಾಂಡ್, ಶಿವಸೇನೆಯ ಅತೃಪ್ತ ಶಿಂಧೆಯೊಂದಿಗೆ ಸಂಪರ್ಕದಲ್ಲಿತ್ತು. ನಾವು ಎಲ್ಲಾ ಮಾಡುತ್ತೇವೆ ನೀವು ಬಂಡಾಯ ಎದ್ದರಷ್ಟೇ ಸಾಕು. ನಿಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತೇವೆ ಎಂಬ ಭರವಸೆಯನ್ನೂ ಬಿಜೆಪಿ ನೀಡಿತ್ತು. ಅದಕ್ಕೆ ಶಿಂಧೆ ಒಂದಿಷ್ಟು ಷರತ್ತನ್ನೂ ವಿಧಿಸಿದ್ದರು. ಅದಕ್ಕೆ ಬಿಜೆಪಿ ‘ಅಸ್ತು’ ಅಂದಿತ್ತು. ಅದರಲ್ಲಿ ಠಾಕ್ರೆ ಹೊರತಾಗಿಯೂ ಮರಾಠ ಮತ ಸೆಳೆಯುವ ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದಿತ್ತು. ಬಂಡಾಯ ಎದ್ದ ಒಂದೆರಡು ದಿನಗಳಲ್ಲಿ ಸ್ವತಃ ಶಿಂಧೆ ರಾಷ್ಟ್ರೀಯ ಪಕ್ಷವೊಂದು ಸಂಪರ್ಕದಲ್ಲಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು, ಮತ್ತೆ ಆ ಮಾತನ್ನು ವಾಪಾಸ್ ಕೂಡ ತೆಗೆದುಕೊಂಡಿದ್ದರು, ಕೆಲವೇ ದಿನಗಳಲ್ಲಿ ಚಿತ್ರಣವೇ ಬದಲಾಗಿತ್ತು. ಇವೆಲ್ಲಾ ಬಂಡಾಯ ಪಡೆಗೆ ಬಿಜೆಪಿ ಹೈಕಮಾಂಡ್ ಮಾಡಿದ ನಿರ್ದೇಶನವೆಂದೇ ಹೇಳಲಾಗುತ್ತಿದೆ. ಶಿಂಧೆ ಬಳಗ ಕ್ಯಾಂಪ್ ಮಾಡಿದ್ದ ಗುಹಾವಟಿಯ ಐಷಾರಾಮಿ ಹೋಟೇಲ್ ಬುಕ್ ಮಾಡಿದ್ದು ಕೂಡ ಬಿಜೆಪಿ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗುತ್ತಿದೆ. ಕೇವಲ ಎಂಟು ದಿನಗಳ ಶಿಂಧೆ ಬಳಗದ ಕ್ಯಾಂಪ್‌ಗೆ ಬರೋಬ್ಬರಿ ೭೦ಲಕ್ಷ ಖರ್ಚಾಗಿತ್ತು ಎಂಬ ವರದಿಯೂ ಕೂಡ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. 

ಒಟ್ಟಿನಲ್ಲಿ, ಮರಾಠ ಸೂತ್ರ ಹೆಣೆದು, ಶಿಂಧೆಯನ್ನು ಪಾತ್ರಧಾರಿಯನ್ನಾಗಿ ಇಟ್ಟುಕೊಂಡು ಮಹಾರಾಷ್ಟçದಲ್ಲಿ ಅಘಾಡಿ ಉರುಳಿಸುವ ನಿರ್ದೇಶನದಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಮುಂದೆ ಶಿಂಧೆ ಆಡಳಿತ ಹೇಗಿರುತ್ತದೆ..? ಫಡ್ನವಿಸ್ ನಡೆ ಹೇಗಿರುತ್ತದೆ..? ಮರಾಠರ ಒಲವು ಎತ್ತ ಕಡೆ..? ಉದ್ಧವ್ ಮುಂದಿನ ಪ್ಲ್ಯಾನ್ ಏನು..? ಮಹಾ ವಿಕಾಸ್ ಅಘಾಡಿ ಉಳಿಯಲಿದೆಯೇ..? ಎಂಬುವುದರ ಮೇಲೆ ಕುತೂಹಲ ಹೆಚ್ಚಿದೆ. 

-ಶ್ರೀರಾಜ್ ವಕ್ವಾಡಿ