ಹಿಂದುಳಿದ ವರ್ಗಗಳ ಓಲೈಕೆಗೆ ಬಿಜೆಪಿ ಪ್ಲ್ಯಾನ್ | ಸಿದ್ದರಾಮಯ್ಯ ಮತ್ತೆ ರಾಜ್ಯ ಕಾಂಗ್ರೆಸ್‌ನ ಕಮಾಂಡರ್.?
ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚುನಾವಣಾ ಚಕ್ರವ್ಯೂಹ ರಚನೆಯಲ್ಲಿ ತೊಡಗಿಕೊಂಡಿವೆ. ಈ ಬಾರಿ ರಾಜ್ಯದ ವಿಧಾನಸಭಾ ಚುನಾವಣೆ ಹಲವು ಆಯಾಮಗಳಿಂದ ಕುತೂಹಲಕ್ಕೆ ನಾಂದಿ ಹಾಡಿದ್ದು, ಉಭಯ ರಾಷ್ಟ್ರೀಯ ಪಕ್ಷಗಳ ರಣತಂತ್ರದತ್ತ ಚಿತ್ತ ಹರಿಸುವಂತೆ ಮಾಡಿದೆ. ಆಡಳಿತ ಪಕ್ಷದಲ್ಲಿನ ಹೊಸ ನೇತೃತ್ವ ಒಂದೆಡೆಯಾದರೇ, ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ತಯಾರಾಗುತ್ತಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ತವರು ಕ್ಷೇತ್ರಗಳಲ್ಲದೇ, ಹೊರ ಭಾಗದಲ್ಲಿಯೂ ರಾಜಕೀಯ ಬಲೆ ಬೀಸಲೆತ್ನಿಸುತ್ತಿದೆ.
ರಾಜ್ಯ ಬಿಜೆಪಿಯ ನಿರ್ವಿವಾದ ನಾಯಕ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ರಾಜ್ಯ ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ಮತಗಳ ಬಗ್ಗೆ ಒಂದು ಸಣ್ಣ ಆತಂಕ ಇದೆ. ಜೆಡಿಎಸ್‌ನ ಸುಪ್ರೀಂ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತಹ ಪ್ರಭಾವಿ ಪ್ರಾದೇಶಿಕ ಹಾಗೂ ಸಮುದಾಯದ ನಾಯಕರ ಎದುರು ಬಿಜೆಪಿಗೆ ದೊಡ್ಡ ಸವಾಲಾಗಿ ಎದುರಾಗಿರುವುದು ಸದ್ಯಕ್ಕೆ ಈ ಈರ್ವರಿಗೆ ಸರಿಸಮಾನವಾಗಿ ಪರ್ಯಾಯ ಪ್ರಾದೇಶಿಕ ನಾಯಕರನ್ನು ತಯಾರಿಸುವುದೇ ಆಗಿದೆ. ಸದ್ಯ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ವೀರಶೈವ ಲಿಂಗಾಯತ ಸಮುದಾಯವನ್ನೇ ಪ್ರತಿನಿಧಿಸುತ್ತಿದ್ದರೂ ಕೂಡ ಬೊಮ್ಮಾಯಿ ಒಬ್ಬ ಪ್ರಬಲ ಪ್ರಾದೇಶಿಕ ನಾಯಕನಾಗಿಯಾಗಿಯೋ ಅಥವಾ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಾಗಿಯೋ ಗುರುತಿಸಿಕೊಂಡಿಲ್ಲ. ಬೊಮ್ಮಾಯಿ ಏನಿದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಕೃಪಾಕಟಾಕ್ಷದ ಕೂಸು ಅಷ್ಟೇ. ಯಡಿಯೂಪ್ಪರಷ್ಟು ರೆಬಲ್ ಕೂಡ ಬೊಮ್ಮಾಯಿ ಅಲ್ಲ. ಇನ್ನು, ಯಡಿಯೂರಪ್ಪ ಅವರೇ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಿರುವ ಕಾರಣದಿಂದಾಗಿ ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಕ್ಕಿಳಿಸುವ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪರ ಆಯ್ಕೆಗೆ ಹೈಕಮಾಂಡ್ ಒತ್ತು ನೀಡಿದ್ದರ ಹಿಂದೆ ಜಾತಿ ಲೆಕ್ಕಾಚಾರ ಕೂಡ ಇದೆ. ಹೇಳಹೆಸರಿಲ್ಲದ ಬಿಜೆಪಿಯನ್ನು ತನ್ನ ಹೋರಾಟ, ಜನ ಸಂಘಟನೆಯ ಪ್ರಾಬಲ್ಯದ ಮೂಲಕವೇ ರಾಜ್ಯದಲ್ಲಿ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಮಾತ್ರವಲ್ಲದೇ, ರಾಜ್ಯದ ಜನಗಣತಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುವ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಹೇಗೆ ಚುನಾವಣೆಯಲ್ಲಿ ನಿರ್ಣಾಯಕವೋ ಹಾಗೆಯೇ, ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯ ಬಿಜೆಪಿಯಲ್ಲಿ ಸದ್ಯಕ್ಕೆ ಯಡಿಯೂರಪ್ಪರ ನಡೆಯೇ ಒಂದು ಹಂತದಲ್ಲಿ ನಿರ್ಣಾಯಕ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
2017 ರ ಜಾತಿ ಸಮೀಕರಣದ ಲೆಕ್ಕಾಚಾರ : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ ಗಣತಿ ಸಮೀಕ್ಷಾ ವರದಿಯ ಪ್ರಕಾರ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ೧.೦೮ ಕೋಟಿ, ಪರಿಶಿಷ್ಟ ಪಂಗಡದ ೪೦.೪೫ ಲಕ್ಷ, ಮುಸ್ಲೀಮರು ೭೦ ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು ೪೫ ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು ೮೧೬ ಇತರೆ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದ್ದು, ಒಟ್ಟು ೧೩೫೧ ಜಾತಿಗಳನ್ನು ಸಮೀಕ್ಷೆಯಡಿಯಲ್ಲಿ ಪರಿಗಣಿಸಲಾಗಿತ್ತು, ಹೊಸದಾಗಿ ಸುಮಾರು ೧೯೨ ಜಾತಿಗಳನ್ನು ದಾಖಲಿಸಲಾಗಿತ್ತು. ಈ ಜಾತಿ ಗಣತಿಯ ಬಗ್ಗೆ ಕಳೆದ ವರ್ಷವೂ (೨೦೨೧) ವಿಭಿನ್ನ ನಿಲುವು ಇದ್ದಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗರ ಸಮುದಾಯಗಳಿಗಿಂತ ಹಿಂದುಳಿದ ವರ್ಗಗಳ ಜನ ಸಂಖ್ಯೆ ಹೆಚ್ಚೆಂದು ತೋರಿಸುವ ಪ್ರಯತ್ನವನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದರಿಂದಾಗಿ ರಾಜ್ಯದ ಪ್ರಬಲ ಸಮುದಾಯಗಳ ಸಿಟ್ಟಿಗೆ ಗುರಿಯಾಗಬೇಕಾದ ಸನ್ನಿವೇಷವೂ ಸೃಷ್ಟಿಯಾಗಿತ್ತು. ಮಾತ್ರವಲ್ಲದೇ ಇನ್ನೂ, ಈ ಸಮೀಕ್ಷೆಯ ಬಗ್ಗೆ ರಾಜ್ಯದ ಪ್ರಮುಖ ಮೂರೂ ಪಕ್ಷಗಳಿಗೂ ಆತಂಕವಿದೆ ಎನ್ನುವುದು ಕೂಡ ಸತ್ಯ.
ಹಿಂದುಳಿದ ವರ್ಗಗಳ ಓಲೈಕೆಗೆ ಬಿಜೆಪಿ ಕಸರತ್ತು : ಚುನಾವಣಾ ಕಣಕ್ಕೆ ಸಿದ್ಧವಾಗುತ್ತಿರುವ ಬಿಜೆಪಿ ಈ ಬಾರಿ ಹಿಂದುಳಿದ ವರ್ಗಗಳ ಮತ ಓಲೈಕೆಗೆ ಹೆಚ್ಚಿನ ಕಸರತ್ತು ಮಾಡಲಾರಂಭಿಸಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟ ರಚನೆಯಲ್ಲಿಯೂ ಬಿಜೆಪಿ ಈ ಬಾರಿ ಹಿಂದುಳಿದ ನಾಯಕರಿಗೆ ಹೆಚ್ಚು ಒತ್ತು ನೀಡಿದ್ದು, ಇಲ್ಲಿ ಗಮನಾರ್ಹ. ವಿಧಾನ ಸಭಾ ಚುನಾವಣೆಯಲ್ಲಿ ಜಾತಿ ಅಂಶವು ಕೂಡ ನಿರ್ಣಾಯಕವಾಗಿರುವುದರಿಂದ ಎಷ್ಟೇ ಜಾತ್ಯಾತೀತ ಎಂದು ಕೂಗಿದರೂ ‘ಜಾತಿ’ ಬಿಟ್ಟು ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಸಂಪುಟದಲ್ಲಿನ ಬಿ. ಶ್ರೀರಾಮುಲು ಎಸ್‌ಟಿ ಸಮುದಾಯದ ನಾಯಕ ಹಾಗೂ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಎಸ್‌ಸಿ ಸಮುದಾಯವನ್ನು ಪ್ರತಿನಿಧಿಸುವ ನಾಯಕರಾಗಿದ್ದಾರೆ. ಇನ್ನು, ಉಳಿದಂತೆ ದಲಿತ ಸಮುದಾಯದ ಪ್ರಭಾವಿ ನಾಯಕರೆನ್ನಿಸಿಕೊಂಡ ಗೋವಿಂದ ಕಾರಜೋಳ ಸೇರಿ ಒಬಿಸಿ, ಎಸ್‌ಸಿ ಎಸ್‌ಟಿ ಸಮುದಾಯದ ಒಟ್ಟು ೧೧ ಖಾತೆಗಳಿಗೆ ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಮಣೆ ಹಾಕಿದ್ದು, ಇವೆಲ್ಲಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತ ಓಲೈಕೆಯ ಮಾಸ್ಟರ್ ಪ್ಲಾö್ಯನ್ ಎಂಬುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಕಮಿಷನ್ ಪ್ರಕರಣದ ಕಾರಣದಿಂದಾಗಿ ಈಶ್ವರಪ್ಪ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಕುರುಬ ಸಮುದಾಯದ ಮತಗಳು ವಿಮುಖವಾಗುವ ಆತಂಕದಲ್ಲಿದ್ದು, ಹಿಂದುಳಿದ ವರ್ಗಗಳ ಮತಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಳೆದ ಬಾರಿ ಕುರುಬ ಸಮುದಾಯದ ಮುಖಂಡರು ಆಕ್ರೋಶಗೊಂಡಿದ್ದರೂ ಕೂಡ ಮತ್ತೆ ಈ ಬಾರಿ ಕುರುಬ ಸಮುದಾಯದ ಕಮಾಂಡರ್ ಆಗಿ ಸಿದ್ದರಾಮಯ್ಯ ಹೊರಹೊಮ್ಮುವ ಹೆಚ್ಚು ಸಾಧ್ಯತೆಗಳಿದ್ದು, ಕುರುಬ ಸಮುದಾಯದ ಮತಗಳ ಬಗ್ಗೆಯೂ ಬಿಜೆಪಿಗೆ ಚಿಂತೆ ಹೆಚ್ಚಾಗಿದೆ. ಈಶ್ವರಪ್ಪ ಅಧಿಕಾರವಿಲ್ಲದೇ ಇದ್ದಾರೆ, ಸಿದ್ದರಾಮಯ್ಯ ಅಧಿಕಾರ ಇದ್ದರೂ, ಇಲ್ಲದಿದ್ದರೂ ಅವರ ರಾಜಕೀಯ ವರ್ಚಸ್ಸು ಎಂದೂ ಕಡಿಮೆ ಆಗಲಿಲ್ಲ. ಹಾಗಾಗಿ ಸುಲಭವಾಗಿ ಈ ಬಾರಿ ಕುರುಬ ಸಮುದಾಯದ ಪೂರ್ಣ ಮತಗಳು ಕಾಂಗ್ರೆಸ್‌ಗೆ ಒಲಿಯುತ್ತದೆ ಎಂದೇ ಹೇಳಲಾಗುತ್ತಿದೆ. ಇನ್ನು, ಇಡೀ ರಾಜ್ಯದ ಒಟ್ಟು ಹಿಂದುಳಿದ ವರ್ಗಗಳ ಸಮುದಾಯದ ನಾಯಕ ಎಂಬಂತೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಸಿದ್ದರಾಮಯ್ಯ ಗುರುತಿಸಿಕೊಂಡಿರುವುದು ಕೂಡ ಬಿಜೆಪಿಗೆ ಆತಂಕವಿದೆ. ಹಾಗಾಗಿ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದ ನಾಯಕರನ್ನು, ಅದರಲ್ಲೂ ಯುವ ನಾಯಕರನ್ನು ಮುಂಪಕ್ತಿಗೆ ತಂದು ರಾಜಕೀಯ ಜಾತಿ ಲೆಕ್ಕಚಾರ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇಂಧನ ಸಚಿವ ಸುನೀಲ್ ಕುಮಾರ್ ಅವರನ್ನು ಯುವ ನಾಯಕನನ್ನಾಗಿ ಬಿಂಬಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಸುನಿಲ್ ಕುಮಾರ್ ಸಂಘದ ಹಿನ್ನೆಲೆಯಿಂದ ರಾಜಕೀಯ ಪ್ರವೇಶ ಮಾಡಿದ ನಾಯಕ, ಯುವ ಸಮುದಾಯವನ್ನು ಸೆಳೆಯುವಲ್ಲಿ ಸುನೀಲ್ ಕುಮಾರ್ ಯಶಸ್ವಿಯಾದರೂ, ಹಿಂದುಳಿದ ಸಮುದಾಯಗಳ ಮತ ಸೆಳೆಯುವಲ್ಲಿ ಸುನೀಲ್ ಯಶಸ್ವಿಯಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.
ಇನ್ನು, ಬಿಜೆಪಿ ಸರ್ಕಾರ ಸಂಪುಟ ರಚನೆಯ ಸಂದರ್ಭದಲ್ಲಿ ಜಾತಿ ಲೆಕ್ಕಚಾರದ ಆಧಾರದಲ್ಲಿ ಕ್ರಮವಾಗಿ ಒಬಿಸಿ ೭, ಎಸ್‌ಸಿ ೩, ಎಸ್‌ಟಿ ೧ ಹಾಗೂ ಲಿಂಗಾಯತ ಸಮುದಾಯಕ್ಕೆ ೮ ಸ್ಥಾನಗಳನ್ನು ನೀಡಿದೆ. ಸಂಪುಟದಲ್ಲಿ ಸ್ಥಾನಮಾನಗಳನ್ನು ಗಮನಿಸುವುದಾದರೇ, ಲಿಂಗಾಯತ ಸಮುದಾಯಕ್ಕೆ ಬಹುಪಾಲನ್ನು ನೀಡಲಾಗಿದೆ. ‘ಲಿಂಗಾಯತ ಸಮುದಾಯದ ನಾಯಕ’ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಇಡೀ ಲಿಂಗಾಯತ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿತ್ತು, ಯಡಿಯೂರಪ್ಪ ತಮ್ಮ ಸಮುದಾಯದ ಸ್ವಾಮೀಜಿಗಳೊಂದಿಗೆ ಹೈಕಮಾಂಡ್‌ಗೆ ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಪ್ರಯತ್ನ ಮಾಡಿದರು. ‘ಯಡಿಯೂರಪ್ಪ ಅಂದುಕೊಂಡಷ್ಟು ಸುಲಭವಿಲ್ಲ’ ಎಂಬ ಅರಿವಾಗಿ, ಹೈಕಮಾಂಡ್ ಕೂಡ ಪರೋಕ್ಷವಾಗಿ ಯಡಿಯೂರಪ್ಪರ ಮಾತಿಗೆ ಅಸ್ತು ಎನ್ನಬೇಕಾಯಿತು. ಸಂಪುಟದಲ್ಲಿಯೂ ಲಿಂಗಾಯತ ಸಮುದಾಯಕ್ಕೆ ಹೈಕಮಾಂಡ್ ಸೂಚನೆಯಂತೆಯೇ ಬಹುಪಾಲನ್ನು ನೀಡುವ ಮೂಲಕ ಮುನಿಸಿಕೊಂಡ ಸಮುದಾಯವನ್ನು ಸಮಾಧಾನ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಕೊಂಚ ಮಟ್ಟಿಗೆ ಯಶಸ್ವಿಯಾಯಿತು. ಇನ್ನುಳಿದದ್ದು ಸರ್ಕಾರ ರಚನೆಯಲ್ಲಿ ಪ್ರಾತಿನಿಧ್ಯ ದೊರೆಯದ ಸಮುದಾಯಗಳು ಹಾಗೂ ಜಿಲ್ಲೆಗಳು. ಈ ಬಗ್ಗೆ ಬಿಜೆಪಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲವೆಂದಾದರೂ, ಚುನಾವಣೆ ಅಂತ ಬಂದಾಗ ಎಲ್ಲವೂ ಎಲ್ಲಾ ಪಕ್ಷಗಳಿಗೂ ಮುಖ್ಯ. ಈ ವಿಷಯದಲ್ಲಿ ಬಿಜೆಪಿ ಕೂಡ ಹೊರತಾಗಿಲ್ಲ. ಸದ್ಯ ಆ ಬಗ್ಗೆ ಗಮನ ನೀಡುವ ಅಗತ್ಯವಿದ್ದು, ಆರ್‌ಎಸ್‌ಎಸ್ ಈಗಾಗಲೇ ಆಯಾಯ ಭಾಗಗಳ ತನ್ನ ಜನಪ್ರತಿನಿಧಿಗಳ ಒಟ್ಟಾರೆ ಆಡಳಿತ ಹಾಗೂ ರಾಜಕೀಯ ವೈಖರಿಗಳನ್ನು ಗುರುತಿಸಿ, ಯಾವುದೇ ಕಾರಣಕ್ಕೂ ರಾಜಕೀಯ ವರ್ಚಸ್ಸು ದುರ್ಬಲಗೊಳ್ಳದ ಹಾಗೆ ಎಚ್ಚರಿಕೆ ವಹಿಸುವಂತೆ ಬಿಜೆಪಿಗೆ ನಿರ್ದೇಶಿಸಿದೆ.
ಒಟ್ಟಿನಲ್ಲಿ, ೨೦೨೩ಕ್ಕೆ ಬಿಜೆಪಿಯ ಹೊಸ ನೇತೃತ್ವ ಒಂದೆಡೆಯಾದರೇ, ಇನ್ನೊಂದೆಡೆ ಕಾಂಗ್ರೆಸ್‌ನ ಸೋ ಕಾಲ್ಡ್ ಸಾಮೂಹಿಕ ನಾಯಕತ್ವ. ಬೊಮ್ಮಾಯಿ ಸೌಮ್ಯ ಧೋರಣೆ ಬಿಜೆಪಿಗೆ ಮತ್ತೆ ಅಧಿಕಾರ ತಂದುಕೊಡುತ್ತದೆಯೊ ಅಥವಾ ರಾಜ್ಯ ಕಾಂಗ್ರೆಸ್‌ಗೆ ಮತ್ತೆ ಸಿದ್ದರಾಮಯ್ಯ ಕಮಾಂಡರ್ ಆಗಿ ಹೊರಹೊಮ್ಮಲಿದ್ದಾರೆಯೋ ಎನ್ನುವುದು ಈಗಿನ ರಾಜಕೀಯ ವಲಯದ ಚರ್ಚೆ. ಇನ್ನು, ಚುನಾವಣಾ ಅಖಾಡದಲ್ಲಿ ಗೆಲುವಿಗೆ ಆಡಳಿತ ಪಕ್ಷ ಬಿಜೆಪಿ ಸೇರಿ ಪ್ರತಿಪಕ್ಷಗಳು ಕೂಡ ಚುನಾವಣಾ ರಣತಂತ್ರ ಹೂಡುತ್ತಿದ್ದು, ಸಾಮಾಜಿಕ ವಲಯದಲ್ಲಿ ಕಳೆದೊಂದು ವರ್ಷದಿಂದ ವ್ಯಾಪಕ ವಿವಾದಗಳಿಗೆ ಕಾರಣವಾದ ಚರ್ಚೆಗಳಿಗೆ ಸಂಬಂಧಪಟ್ಟ ವಿಷಯಗಳೇ ಚುನಾವಣೆಯ ಅಜೆಂಡಾ, ಪ್ರಚಾರ ಸಾಮಾಗ್ರಿಗಳಾಗುತ್ತಿದ್ದು, ಹೇಗೆ ಪಕ್ಷಗಳು ಅವುಗಳನ್ನು ಬಳಸಿಕೊಳ್ಳಲಿವೆ ಎನ್ನುವುದು ಸದ್ಯಕ್ಕಿರುವ ಅಚ್ಚರಿ.
-ಶ್ರೀರಾಜ್ ವಕ್ವಾಡಿ

No comments:
Post a Comment