Friday, May 22, 2020

ನಿಮ್ಮನ್ನು ನೀವು ಗೆದ್ದರೆ ಸಾಕು..!



ಹಾಗೆಲ್ಲಾ ಸುಮ್ಮನೆ ಅದು ಕಣ್ಣಿಡುವುದಿಲ್ಲ. ಇಟ್ಟರೇ ಉರಿಗಣ್ಣನ್ನೇ ಇಟ್ಟು ಬಿಡುತ್ತದೆ. ಅದರ ಆಕ್ರಮಣವೇ ಹಾಗೆ. ಹೇಳದೆ ಕೇಳದೆ ದಾಳಿ ಮಾಡಿ ಬಿಡುತ್ತದೆ. ಮೈಮೇಲೆ ಎಗರಿ ಬಿಡುತ್ತದೆ. ಹಿಂಡಿ ಹಿಪ್ಪೆ ಮಾಡುತ್ತದೆ. ನಿಮ್ಮ ಕಣ್ಣ ಮೇಲೆ ನೀರಾಡಿಸಿ ಬಿಡುತ್ತದೆ. ಅಂಟು ಕಳೆದ ಮೇಲೆ ತುಟಿ ಅಗಲಿಸುತ್ತೀರಿ. ಹಾರುತ್ತೀರಿ, ಕುಣಿದು ಕುಪ್ಪಳಿಸುತ್ತೀರಿ, ‘ಓಹ್ಹೋ’ ಎಂದು ಹೋಗಾಡುತ್ತೀರಿ, ಕೊನೆಗೆ ಒಳಗೊಳಗೆ ಬಿಕ್ಕುತ್ತೀರಿ.

ಇಷ್ಟೆ ಅಲ್ವೇ..?

ಇದುವರೆಗೆ ಸಂಕಲನಗೊಂಡವುಗಳೆಲ್ಲಾ ಬರೀ ವಿಷಾದ ಗೀತೆಗಳಿರಬಹುದು. ಆ ಗೀತೆಗೆ ಕೊರಳೊಡ್ಡಿದ ವಿಷಯ, ವಸ್ತುಗಳೆಲ್ಲಾ ಇತಿಹಾಸದ ಕಾಲಘಟ್ಟದ ಬದುಕಿನಲ್ಲಿ ಪಾತ್ರವಾದವನದ್ದಲ್ಲ.

ಪಾತ್ರವನ್ನು ಅರಿತುಕೊಳ್ಳುವ ವೇಗ ಎಷ್ಟು ನಿಧಾನದ್ದು, ಎಷ್ಟು ಆಳದ್ದು, ಎಷ್ಟು ಕ್ಲಿಷ್ಟದ್ದು, ಎಲ್ಲವೂ ಆದ ಮೇಲೆ ಅದು ಅನಿವಾರ್ಯ ಮತ್ತು ಅಗತ್ಯದ್ದು. ಉಳಿಯುವುದೊಳಗೆ ಪಕ್ವವಾಗುವುದಕ್ಕೆ. ಅದು ಮೊದಲ್ಗೊಂಡು ಉದ್ದಕ್ಕೆ ಬೆಳೆಯುವುದಕ್ಕೆ ಆರಂಭವಾದಾಗ ಕಾವ್ಯವೆಂದೋ, ಕಥೆಯೆಂದೋ, ಕಾದಂಬರಿಯೆಂದೋ, ಪ್ರಬಂಧವೆಂದೋ ಗುರುತಿಸಿಕೊಂಡು ವಿಮರ್ಶೆಗೊಳಪಡುತ್ತದೆ.

ಪ್ರತಿ ತಿರುವಿನಲ್ಲಿ ಆರ್ತಕ್ಕೋ, ವಿಷಾದಕ್ಕೋ, ವಿನೋದಕ್ಕೋ, ಸಂತಸಕ್ಕೋ ಪ್ರೀತಿಯಿಂದ ಒತ್ತಾಯಿಸುತ್ತದೆ. ಯಾವುದಾದರೊಮದರ ಪಾಲನ್ನು ನಾವು ಪಡೆಯಲೇ ಬೇಕು. ಅದು ಅನಿವಾರ್ಯ ಕೂಡ. ಆಮೇಲೆ ಈ ಭೂಮಿಯ ಚರಿತ್ರೆಗೆ ಒಳಪಡಬೇಕು. ಹೆಸರು ಪಡೆದುಕೊಂಡವರು ಆತ್ಮ ಚರಿತ್ರೆಗಳಲ್ಲಿ ತಮ್ಮನ್ನೇ ತಾವು ಹೊಗಳಿಕೊಳ್ಳುವಂತೆ ಆಗದಿದ್ದರೂ ಏನಾದರೂ ಆಗಿಯೇ ಆಗುತ್ತೇವೆ. ಒಂದು ವ್ಯವಸ್ಥೆಯ ಒಳ್ಳೆಯ ಅಥವಾ ಕೆಟ್ಟ ಸಂಪ್ರದಾಯಗಳಿಗೆ ತಲೆಯಾನಿಸಿಕೊಂಡೇ ಬದುಕುವಾಗ ಅದು ದಿಟ್ಟಿಸುತ್ತದೆ. ಉರಿಗಣ್ಣಿನಿಂದಲೇ ಪರೀಕ್ಷಿಸುತ್ತದೆ.

ಕಾಲವೆಂದರೇ, ಬದಲಾಗದೇ ಇರುವ ಜಡ ಅಲ್ಲ. ಅದಕ್ಕೆ ಅಂದಿನಿಂದ ಈಗಿನವೊರೆಗೆ ಬಹಳ ವಿಶೇಷವಾದ ವಿಶಾಲವಾದ ವಿಸ್ತಾರವಾದ ಕಣ್ಣುಗಳಿಲ್ಲ. ಸಾಮಾನ್ಯ ಅದು. ಅದಕ್ಕಿಂದ ಪ್ರಖರವಾದ ಕಣ್ಣುಗಳು ನಿಮಗಿವೆ. ಸುಡುವುದಕ್ಕಲ್ಲ. ಬೆಳಗನ್ನು ಕಾಣುವುದಕ್ಕೆ.   ನೀವು ಬದುಕಿನಲ್ಲಿ ಗೆಲ್ಲಬೇಕಾದರೇ, ಕಾಲವನ್ನು ಸೋಲಿಸಬೇಕಂತಿಲ್ಲ. ನಿಮ್ಮನ್ನು ಗೆದ್ದರೆ ಸಾಕು.
-ಶ್ರೀರಾಜ್ ವಕ್ವಾಡಿ 

Thursday, May 21, 2020

ಅದಕ್ಕೆ ಕೊನೆ ಹಾಡಿ..! ಪದ್ಯವಾಗುವ ಶಕ್ತಿಯಿದೆ ನಿಮ್ಮಲ್ಲಿ..!



ಬಹುಶಃ ಅದು ಕೊನೆಯಾಗಲೇ ಬೇಕು..!

ಕರಗಿಸಿದ ಕತ್ತಲೆಗೆ ಎದುರಾಗಿ ನಿಂತು ಹೊಡೆಯುವ ಧೈರ್ಯ ತಂದುಕೊಳ್ಳುವ ಭೀಮ ಗಾತ್ರದ ಶಕ್ತಿ ನಿಮ್ಮ ಒಳಗೆಲ್ಲೋ ಇದೆ. ಈಗ ನೀವದನ್ನು ಹೊರಗೆ ಕರೆಯಲೇ ಬೇಕು. ನಿಮಗೆ ನಾಳೆಗಳನ್ನು ಅತ್ಯಂತ ಸಂಭ್ರಮದಿಂದ ಕಾಣುವಂತಹ ಎಲ್ಲಾ ಸಾಮರ್ಥ್ಯವೂ ಇದೆ.

ಯಾಕೆ..? ಅನುಮಾನನಾ..?

ನಿಮ್ಮ ನಿಧಾನದಲ್ಲಿ ವೇಗವಿದೆ, ನಿಮ್ಮ ಮೌನದಲ್ಲಿ ಹರ್ಷವಿದೆ, ನಿಮ್ಮ ದುಃಖದಲ್ಲಿ ಸುಖವಿದೆ. ನಿಮಗೆ ಹತ್ತಿರದಲ್ಲೇ ಒಂದು ತಿರುವಿದೆ. ಅಲ್ಲಿ ತಿರುಗಬೇಕಷ್ಟೇ. ನಿರ್ಧಾರಗಳು ಕುಸಿಯದಿರಲಿ. ಸಮಸ್ತ ಭಾವ ಇಷ್ಟಕಾವ್ಯ ನಿಮ್ಮ ಎದೆ ತೆಕ್ಕೆಯಲ್ಲೇ ಇದೆ. ಅವುಗಳಿಗೆ ನಿಮ್ಮದೇ ಯಜಮಾನಿಕೆ.

‘ಭಾವುಕತೆಯ ತೀವ್ರತೆ’ ನಿಮಗೆ ಗೊತ್ತಿಲ್ಲ ಸ್ವಾಮಿ’ ಎಂದು ನೀವು ಹೇಳಬಹುದು. ಆದರೇ, ನಿಮ್ಮ ಬದುಕಿನಲ್ಲಿ ಆ ಅನುಭವವನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ತೀರ್ಮಾನ ಮಾಡಬೇಕಾದದವರು ನೀವೇ. ಮತ್ಯಾರೂ ಅದನ್ನು ಮಾಡಲಾರರು. ನಿಮ್ಮ ಮನಸ್ಸಿಗೆ, ನಿಮ್ಮ ಒಳಮನಸ್ಸಿನ ಕ್ರಿಯೆಗೆ ಕಾಯುವಷ್ಟು ತಾಳ್ಮೆ ಇಲ್ಲ. ನೀವೇನೂ ನಿರ್ಣಯ ಕೈಗೊಂಡಿಲ್ಲವೆಂದರೇ, ನಿಮ್ಮನ್ನು ಅದು ಕೊರೆಯಲಾರಂಭಿಸುತ್ತದೆ. ನಿಮ್ಮ ಮನಸ್ಸು, ನಿಮ್ಮ ಮೌನದ ತೀವ್ರವಾದ ವಿಸ್ತಾರವನ್ನು ಕಂಡು ನಿಮ್ಮನ್ನು ಕೊಲ್ಲುವುದಕ್ಕೆ ಕತ್ತಿ, ಚೂರಿ, ತಲ್ವಾರು, ಪಿಸ್ತೂಲು ಹಿಡಿದುಕೊಂಡು ತಯಾರಾಗುತ್ತದೆ. ಹಾಗಾಗಿ, ಮೌನ ಎಲ್ಲದಕ್ಕೂ ಉತ್ತರವಲ್ಲ. ಲವಲವಿಕೆ ನಿಮ್ಮನ್ನು ನೀವು ಊಹಿಸಿಕೊಳ್ಳಲಾರದಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಏನು ಅಚ್ಚರಿ ಇಲ್ಲ.

ಕೊನೆ ಹಾಡಬೇಕಾಗಿರುವುದು ನಿಮ್ಮೊಳಗಿನ ನೈತ್ಯಾತ್ಮಿಕ ಹೊಲಸುಗಳಿಗೆ.

ಅವಿತಿದೆ ನಿಮ್ಮ ಎದೆಯಾಳದಲ್ಲಿ ಜಗ ಗೆಲ್ಲುವ ಶಕ್ತಿ. ನಿಮಗೆ ಖಂಡಿತ ಗೊತ್ತಿಲ್ಲ, ನೀವೀಗ ಏನಿದ್ದೀರಿ ಅದಲ್ಲ ನೀವು. ನೀವೆಂದರೇ, ಧನಾತ್ಮಕತೆಯ ತೊಟ್ಟಿಲು ತೂಗುವ ಕೈಗಳು.

ನಕ್ಷತ್ರ ನಗುವಿನ ಸಾರೂಪ್ಯ ನಿಮ್ಮಲ್ಲೇ ಇದೆ. ನೀವು ನೀವಾದ ಮೇಲೆ ಖಂಡಿತ ಅದು ಮಿನುಗುತ್ತದೆ. ಬದುಕೆಂದರೇ, ಏನೇನೋ ಅಲ್ಲ. ಪದ್ಯವಾಗುವ ಅವಕಾಶ.
-ಶ್ರೀರಾಜ್ ವಕ್ವಾಡಿ 


Wednesday, May 20, 2020

ಭಯಾನಕ ಸದ್ದಿಗೆ ‘ಸುದ್ದಿ ವಾಹಿನಿಗಳು ಗಡಗಡ..!’



ಇವತ್ತು ಏನೂ ಬರೆಯಬಾರದೆಂದು ಕೂತಿದ್ದೆ. ಏನೂ ವಿಷಯವಿಲ್ಲದೇ ಬರೆದರೆ ಒತ್ತಾಯದಿಂದ ವಾಕರಿಕೆ ಮಾಡಿದಂತಾಗುತ್ತದೆ ಎಂದು ಇವತ್ತೊಂದಿನ ಆರಾಮವಾಗಿರೋಣ ಅಂತಿದ್ದೆ.

ಅಷ್ಟೊತ್ತಿಗಾಗಲೇ ‘ಧಡಾರ್..!’ ಎಂಬ ಸದ್ದು ಕೇಳಿದ ವರದಿ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ  ಹರಿದಾಡುತ್ತಿತ್ತು. ಬೆಂಗಳೂರಿನ ಹತ್ತೂರಿಗೆ ಅದು ಕೇಳಿಸಿತಂತೆ, ಅಲ್ಯಾರೋ ಪಾಪದವರ ಮನೆಯ ಗೋಡೆ ಬಿರುಕು ಬಿಟ್ಟಿತ್ತಂತೆ, ಅಲ್ಲೊಬ್ಬರಿಗೆ ಮೂರು ಮೂರು ಭಾರಿ ಶಬ್ದ ಕೇಳಿಸಿತ್ತಂತೆ, ಮತ್ತೊಬ್ಬರಿಗೆ ಎರಡು ಸೆಂಕೆಂಡ್‌ಗಳಷ್ಟು ಸದ್ದು ಕೇಳಿಸಿತ್ತಂತೆ, ಮತ್ತೊಬ್ಬರು ಬಾಂಬ್ ಸ್ಫೋಟದಂತೆ ಕೇಳಿಸಿತು ಅಂದ್ರು, ಮೇಲಿಂದ ಮಹಡಿ ಮೇಲೆ ದೊಡ್ಡ ಬಂಡೆಯೊಂದು ಬಿದ್ದಂತಾಯಿತು ಅಂದ್ರು ಇನ್ನೊಬ್ರು. ಭೂಕಂಪವಂತೆ, ಈ ಅಂತೆ ಕಂತೆಗಳಲ್ಲಿ ಕನ್ನಡ ಸುದ್ದಿ ವಾಹಿನಿಗಳ ಪರದೆಗಳೆಲ್ಲಾ ‘ಗಡಗಡ’ ಅಲ್ಲಾಡುವುದಕ್ಕೆ ಆರಂಭವಾಗಿತ್ತು.

ಅಬ್ಬಬ್ಬಾ...! ಭೂಕಂಪ ಸೃಷ್ಟಿ ಮಾಡಿ ಬಿಡುವ ತಾಕತ್ತು ಕನ್ನಡ ಸುದ್ದಿ ವಾಹಿನಿಗಳಿಗೆ ಒಲಿದಿದ್ದು ಯಾವಾಗ ಅಂತ ಗೊತ್ತಾಗಲಿಲ್ಲ. ವಿಂಗ್ ಕಮಾಂಡರ್ ಸುದರ್ಶನ್ ಎನ್ನುವವರು ಸುಖೋಯ್ ಯುದ್ಧ ವಿಮಾನ 1230 ಕಿಲೋ ಮೀಟರ್ ವೇಗ ರೀಚ್ ಮಾಡಿ ಈ ಸೌಂಡ್ ಆಗಿದೆ ಅಂತ ಹೇಳಿದರು. ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ  ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ,  ರಿಕ್ಟರ್ ಮಾಪಕದಲ್ಲಿ ಭೂಕಂಪವಾಗಿದ್ದು ದಾಖಲಾಗಿಲ್ಲ. ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ ಮೇಲೂ  “ಎಲ್ಲಿಂದ ಬಂತು ಗೊತ್ತಿಲ್ಲ, ಹೇಗೆ ಬಂತು ಗೊತ್ತಿಲ್ಲ, ಯಾಕೆ ಬಂತು ಅಂತ ಗೊತ್ತಿಲ್ಲ ಪಕ್ಕದಲ್ಲೇ ಆಗಿರುವಂತೆ ಸೌಂಡ್ ಕೇಳಿಸಿದಂತೆ. ‘ಭಯಾನಕ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರು..!’, ಕೊರೋನಾ ಭಯದಲ್ಲಿ ಡೋಲಾಯಮಾನವಾಗಿದ್ದ ಬೆಂಗಳೂರು ಈ  ನಿಗೂಢ ಸ್ಫೋಟದ ಸದ್ದಿಗೆ ಗಡಗಡ ನಡುಗುತ್ತಿದೆ” ಹಾಗೆ ಹೀಗೆ ಅಂತೆಲ್ಲಾ ಸುದ್ದಿ ವಾಹಿನಿಗಳ ನಿರೂಪಕರೊಬ್ಬಬ್ಬರು ಒಂದೊಂದು ರೀತಿಯಲ್ಲಿ ಬೊಬ್ಬೆ ಹಾಕುತ್ತಿದ್ದರು. ಸಾಲದಕ್ಕೆ ಪಬ್ಲಿಕ್ ಫೋನ್ ಇನ್ ಕಾಲ್ ತಗೊಂಡು, ಕಾಲ್ ಮಾಡಿದವರಲ್ಲಿ ಅದು ಹೇಗೆ ಸೌಂಡ್ ಆಯ್ತು..? ಸಿಡಿಲು ಬಡಿದಂತಾಯ್ತಾ..? ಧಮ್ ಅಂತಾ..? ಭೂಮಿ ನಡುಗಿದಂಗಾಯ್ತಾ..? ಹಿಂದೆ ಏನಾದ್ರು ಈ ಥರದ ಶಬ್ದ ಕೇಳಿಸಿಕೊಂಡಿದ್ದೀರಾ ..? ಸಿಲಿಂಡರ್ ಸ್ಫೋಟವಾಗುತ್ತಲಾ..ಅಂತ ಸ್ಫೋಟನಾ ಇದು..? ಅಬ್ಬಾ.. ಪುಂಖಾನುಪುಂಖ ತಲೆಬುಡವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೊರೋನಾ ಕೊರೋನಾ ಅಂತ ಹೇಳುತ್ತಿದ್ದ ಸುದ್ದಿ ವಾಹಿನಿಗಳಿಗೆ ಒಂದು ಹೊಸ ಸುದ್ದಿ ಸಿಕ್ಕಿಬಿಟ್ಟಿದ್ದೇ ತಡ, ಎಲ್ಲೂ ಇಲ್ಲದ ಎಕ್ಸ್ಕ್ಸೂಸೀವ್ ಮಾಹಿತಿ ನಮ್ಮಲ್ಲಿದೆ, ನಮ್ಮಲ್ಲೇ ಮೊದಲು ಅಂತ ಆ ‘ಸೌಂಡನ್ನು’ ಓಡಿಸಿದ್ದೇ ಓಡಿಸಿದ್ದು. ಆ ಸ್ಫೋಟಕ್ಕಿಂತ ತೀವ್ರತೆ ಇವರ ಧ್ವನಿ ಏರಿಳಿತಳದಲ್ಲೇ ಇತ್ತು ಎನ್ನುವುದು ಅಪ್ಪಟ ಸತ್ಯ. ಅದು ಯಾವುದೇ ವಿಷಯವಾಗಲಿ, ಸಾಮಾಜಿಕ ವಲಯದಲ್ಲಿ ಆ ವಿಷಯ ತಣ್ಣಗಾದರೂ ಸುದ್ದಿ ವಾಹಿನಿಗಳ ಪರದೆ ಮೇಲೆ ಧಗಧಗ ಉರಿಯುತ್ತಿರುತ್ತದೆ. ಇದು ವಿಷಾದವೋ, ವಿನೋದವೋ ಗೊತ್ತಿಲ್ಲ.

‘ತಬ್ಲಿಘಿ ವೈರಸ್’, ‘ಜಮಾತ್ ವೈರಸ್’ ಎಂದು ಬೊಬ್ಬೆ ಹಾಕಿದ ಕನ್ನಡ ಸುದ್ದಿ ವಾಹಿನಿಗಳು ಸದ್ಯ, “ಕೊರೋನಾ ವೈರಸ್ಸಿನಿಂದಲೇ ಸದ್ದು ಉಂಟಾಗಿರಬಹುದಾ..?” ಎಂದು ಕೇಳಿ “ಕೊರೋನಾ ಸೌಂಡು..!” ಅಂತ ಹೇಳಲಿಲ್ಲ ಎನ್ನುವುದೇ ಸಮಾಧಾನಕರ ವಿಷಯ.  ನಮ್ಮ ಕನ್ನಡ ಸುದ್ದಿ ವಾಹಿನಿಗಳಿಗೆ ‘ಇರುವೆ ಹೋದರೇ, ಆನೆ ಹೋಯಿತು’ ಎನ್ನುವ ಬುದ್ಧಿ ಅದು ಯಾಕೋ ಗೊತ್ತಿಲ್ಲ. ಅದರಿಂದ ಲಾಭ ಏನಂತ ಕೂಡ ಗೊತ್ತಿಲ್ಲ. ಆ ಛಾಳಿ ಮಾತ್ರ ಬಿಡುವುದಿಲ್ಲ. ಭಾರತದಲ್ಲಿ ಜನರ ಮಾನಸಿಕ ಒತ್ತಡವನ್ನು ಹೆಚ್ಚಿಸುವುದಕ್ಕೆ ಏನಾದರೂ ಅವಾರ್ಡ್ಗಳನ್ನು ಕೊಡುವುದಿದ್ದರೇ, ಅಲ್ಲಿ ಕನ್ನಡದ ಸುದ್ದಿ ವಾಹಿನಿಗಳು ಮತ್ತು ಸುದ್ದಿ ವಾಚಕರು, ವಿಶ್ಲೇಷಕರು ನಾಮಿನೇಟ್ ಆಗುತ್ತಾರೆ ಎನ್ನುವುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಸಂತೆಗೆ ಹೋದರೇ, ‘ಹತ್ತು ರೂಪಾಯಿಗೆ ಎರಡು, ಹತ್ತು ರೂಪಾಯಿಗೆ ಎರಡು’ ಅಂತ ಕೂಗಾಡಿ ವ್ಯಾಪಾರ ಮಾಡುವ ಮಾರುಕಟ್ಟೆ ವ್ಯಾಪಾರಿಯಂತೆ ವರ್ತಿಸುವಂತಹ ಸ್ಥಿತಿ ಕನ್ನಡ ಸುದ್ದಿ ನಿರೂಪಕರಿಗೆ ಬಂತಲ್ಲಾ ಎನ್ನುವುದು ವಿಷಾದನಿಯ ಸಂಗತಿ. ಸುದ್ದಿ ವಾಹಿನಿಯವರು ಹೇಳುವ ಆ ‘ಭಯಾನಕ ಸ್ಫೋಟದ ಧ್ವನಿ’ ಅದೆಷ್ಟು ಜನರು ಕೇಳಿ ಬೆಚ್ಚಿ ಬಿದ್ದಿದ್ದಾರೋ ಗೊತ್ತಿಲ್ಲ. ಆದರೇ, ಇವರ ವಿಶ್ಲೇಷಣೆಯ ಸ್ಪಿರಿಟ್ ನೋಡಿಯಂತೂ ಬೆದರಿದ್ದಂತೂ ಸತ್ಯ.

ಪತ್ರಿಕೋದ್ಯಮದ ಜವಾಬ್ದಾರಿಯೇನು..? ಪತ್ರಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನೇ ಮರೆತಂತಿದೆ. ಇದು ಮಾಧ್ಯಮಪತಿಗಳ ಒತ್ತಡವೋ, ಟಿಆರ್‌ಪಿ ಸ್ಪರ್ಧೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಎಷ್ಟೋ ಜನ ಇಂತಹ ಕೆಲವು ಪಿಶಾಚಿ ಧ್ವನಿಗಳಿಂದಾಗಿ ಕೆಲವರು ಸುದ್ದಿ ವಾಹಿನಿಗಳನ್ನು ನೋಡುವುದನ್ನೇ ಬಿಟ್ಟಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದ್ದಲ್ಲ.
-ಶ್ರೀರಾಜ್ ವಕ್ವಾಡಿ.

Tuesday, May 19, 2020

ತೀರದ ‘ತೀರ ತಲುಪದ ಬದುಕು..!’



ಈ ಬಗ್ಗೆ ಮತ್ತೆ ಮತ್ತೆ ಯಾಕೆ ಬರೆಯುತ್ತೇನೆ ಅಂತ ಗೊತ್ತಾಗ್ತಿಲ್ಲ ನನಗೆ. ಬರೆದಷ್ಟು ಹೆಚ್ಚು ಹೆಚ್ಚು ಬರೆಯಬೇಕು ಅನ್ಸುತ್ತೆ. ಇನ್ನೂ ತೀರ ತಲುಪದ ಬದುಕಿನ ಕಥೆ ಕೇಳುವವರು ಯಾರೂ ಇಲ್ಲ.

ಈ ಭಾರತ ಸಮಬಾಳ್ವೆಯ ಭವ್ಯ ಭಾರತವಾಗಿ ನಿಲ್ಲಲಿ. ಉದ್ಯೋಗಪತಿಗಳಿಗೆ ರೆಡ್ ಕಾರ್ಪೇಟ್ ಹಾಸುವ ಧೋರಣೆಗೆ ಇಂದೇ ಕೊನೆ ಹಾಡುವಂತಾಗಲಿ. ಮೈಕ್ ಮುಂದೆ ಬೃಹನ್ನಾಟಕದ ಸಂಭಾಷಣೆ ಬಿಗಿಯುವ ದೇಶದ ಪ್ರಾಮುಖ್ಯ ಮಂತ್ರಿಗಳಿಗೆ ಇನ್ನಾದರೂ ಬುದ್ಧಿ ಬರಲಿ. ಉತ್ತರದಿಂದ ದಕ್ಷಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಇನ್ನೂ ಅದೆಷ್ಟೋ ಪಾದಗಳು ಹೆಜ್ಜೆ ಹಾಕುತ್ತಿವೆ. ದೇಶ ಇಂತಹ ಹತಭಾಗ್ಯದಿಂದ ಮುಕ್ತವಾಗಿ ಬೆಳೆಯಲಿ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಧನೋರಾ ಗ್ರಾಮದಲ್ಲಿ ಪುಣೆಯಿಂದ ಸುಮಾರು 250 ಕಿಲೋ ಮೀಟರ್‌ಗಳಷ್ಟು ದೂರ ನಡೆದು ಬಂದಿದ್ದ ಕಬ್ಬು ಕಟಾವು ಮಾಡುವ ಕಾರ್ಮಿಕನೊಬ್ಬನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿತು.  4-5 ದಿನಗಳ ಹಿಂದೆ ತಾಯಿಯೊಬ್ಬಳು ತನ್ನ ಮುಖಕ್ಕೆ ಸೆರಗು ಮುಚ್ಚಿಕೊಂಡು ತನ್ನ ಮಗುವನ್ನು ತಳ್ಳು ಬ್ಯಾಗಿನ ಮೇಲೆ ಮಲಗಿಸಿಕೊಂಡು ಪಂಜಾಬ್‌ನಿಂದ ಝಾನ್ಸಿಗೆ ಕಾಲ್ನಡಿಗೆ ಹೋಗುತ್ತಿರುವ ದೃಶ್ಯ ಕಂಡು ಬಂತು. ಕೊಪ್ಪಳದಲ್ಲಿ ಹತ್ತಾರು ಮಧ್ಯಪ್ರದೇಶದ ಕೂಲಿ ಕಾರ್ಮಿಕರು ತಮ್ಮ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತುಕೊಂಡು ನಮಗೆ ಹೊಟ್ಟೆಗ ತುತ್ತಿಲ್ಲ, ಮಾಡಲು ಕೆಲಸವಿಲ್ಲ ಹೇಗಾದರೂ ಮಾಡಿ ನಮ್ಮನ್ನು ಊರಿಗೆ ತಲುಪಿಸುವಂತೆ ಮಾಡಿ ಅಂತ ತಮ್ಮ ಅಳಲನ್ನು ಹೇಳಿಕೊಂಡದ್ದು ವರದಿಯಾಯಿತು. ಗುಜರಾತ್ ನಲ್ಲಿ ಲಾರಿ ಏರಿ ಹೊರಟಿದ್ದ ಕಾರ್ಮಿಕರನ್ನು ಇಳಿಸಿ ಪೋಲಿಸರು ಅಮಾನುಷವಾಗಿ ಹಲ್ಲೆ ಮಾಡುವ ವೀಡಿಯೋವೊಂದು ವೈರಲ್ ಆಯ್ತು. ಗುಜರಾತ್‌ನಲ್ಲಿನ ಸೂರತ್‌ನ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರಿಬ್ಬರು ಯಾಕೂಬ್ ಮತ್ತು ಅಮೃತ್ ಜೊತೆಯಾಗಿ ತಮ್ಮ ಊರು ಉತ್ತರಪ್ರದೇಶಕ್ಕೆ ಹೋಗುವ ದಾರಿ ಮಧ್ಯದಲ್ಲಿ ಯಾಕೂಬ್, ಜ್ವರ, ವಾಂತಿ ಎಂದು ಬಳಲುತ್ತಿರುವ ತನ್ನ ಸ್ನೇಹಿತ ಅಮೃತ್‌ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಹಾಯಕ್ಕಾಗಿ ಬೇಡುತ್ತಿರುವ ಕರಳು ಹಿಚುಕುವ ಸನ್ನಿವೇಶ ದೇಶವ್ಯಾಪಿ ಸುದ್ದಿ ಮಾಡಿತು. ಮೊನ್ನೆ ಮೊನ್ನೆಯಷ್ಟೇ, ಲೂದಿಯಾದಿಂದ 1300 ಕಿಲೋಮೀಟರ್ ದೂರದ ಮಧ್ಯಪ್ರದೇಶಕ್ಕೆ  ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ ಕುಟುಂಬವೊಂದರ ಬಾಲಕ ಗಾಯಗೊಂಡ ಕಾರಣದಿಂದ ಇಬ್ಬರು ಸ್ಟ್ರೆಚರ್‌ನಲ್ಲಿ ಹೊತ್ತು ಸಾಗಿದ ಹೃದಯ ವಿದ್ರಾವಕ ದೃಶ್ಯವೊಂದನ್ನು ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿ ವರದಿ ಮಾಡಿತು. ಉತ್ತರ ಪ್ರದೇಶದಲ್ಲಿ 23 ವಲಸೆ ಕಾರ್ಮಿಕರು ಟ್ರಕ್ ಅಪಘಾತದಲ್ಲಿ ಮರಣ ಹೊಂದಿದರು. ಉತ್ತರ ಪ್ರದೇಶದಿಂದ 500 ಕಿಲೋಮೀಟರ್ ದೂರದ ಛತ್ತೀಸ್‌ಘಡಕ್ಕೆ ತನ್ನ ಮಗುವಿನೊಂದಿಗೆ ಲಕ್ಷ್ಮೀ ಸಾಹು ಎಂಬ ಮಧ್ಯ ವಯಸ್ಸಿನ ಮಹಿಳೆ ಸೈಕಲ್ ಸವಾರಿ ಹೊಗುತ್ತಾಳೆ. ಔರಂಗಬಾದ್‌ನಲ್ಲಿ ರೈಲು ಹಳಿಗಳ ಮೇಲೆ ಮಲಗಿದ್ದ ಹದಿನಾಲ್ಕು ಮಂದಿ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲ್ ಹರಿದು ಮೃತರಾದ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಷಯ.

ಹೀಗೆ ಒಂದೇ ಎರಡೇ..? ವಲಸೆ ಕಾರ್ಮಿಕರ ಬವಣೆ ಹೇಳತೀರದು. ಇರಲು ಜಾಗವಿಲ್ಲ, ದುಡಿಮೆಯಿಲ್ಲ, ಹೊಟ್ಟೆಗೆ ತುತ್ತಿಲ್ಲ. ವಲಸೆ ಕಾರ್ಮಿಕರ ಗೋಳು ಕೇಳುವವರು ಯಾರಿಲ್ಲ. ಇನ್ನೂ ಸಾವಿರ ಸಾವಿರ ಮಂದಿ ರಸ್ತೆಯ ಮಧ್ಯೆದಲ್ಲಿ ದಾರಿ ಸವೆಸುತ್ತಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ, ಇಂತವರ ಬದುಕು ನೋಡಿದರೆ ಹೃದಯ ನಿಂತ ಹೋಗುತ್ತದೆ ಅಂತ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರಿಗೆ 5 ಕೆ.ಜಿ ಧಾನ್ಯ ಮತ್ತು 1 ಕೆ.ಜಿ ಬೇಳೆ ಕೋಡುತ್ತೇವೆ ಅಂತ ಹೇಳಿದ್ದು ಬಿಟ್ಟರೇ ಮತ್ತೇನೂ ಇಲ್ಲ.

ಒಣ ಹೊಟ್ಟೆಯನ್ನು ತಿವಿದು ಬಗೆದು ನೋಡುವಷ್ಟು ಕಾಲ ಕ್ರೂರಿಯಾಗಬಾರದಿತ್ತು. ಇದು ಭ್ರಮೆ ಹುಟ್ಟಿಸುತ್ತಿರುವ ರಾಜಕೀಯ ನಾಯಕರ ಕೊರಳಿಗೆ ಹಾಕಿದ ಶವಮಾಲೆ ಅಲ್ಲದೇ ಮತ್ತೇನು..? ಜನರು ಉದ್ಯಮಪತಿಗಳಿಗೆ, ಖಾಸಗೀಕರಣಕ್ಕೆ ಮಣೆ ಹಾಕುವ ಸರ್ಕಾರದ ಯೋಜನೆಗಳನ್ನು ವೈಭವೀಕರಿಸುತ್ತಾರೆ. ಬಡತನ, ಹಸಿವೆಯಲ್ಲಿ ಸಾಯುವ ಜನರ ಬಗ್ಗೆ ಏನೂ ಮಾತಾಡುವುದಿಲ್ಲ. ಭಾರತ ಯಾಕೆ ವಾಸ್ತವವನ್ನು ಗೋಡೆ ಕಟ್ಟಿ ಮುಚ್ಚಿ ಹಾಕುತ್ತದೆ..? ಆಡಳಿತ ವರ್ಗಕ್ಕೆ ಸತ್ಯಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಯಾಕೆ ಸಾಧ್ಯವಿಲ್ಲ..? ವಾಸ್ತವ ಅಂದರೇ, ಗೋಡೆಗೆ ಅಂಟಿರುವ ಬಣ್ಣ ಮಾತ್ರನಾ..?

ಅವರೆಲ್ಲರೂ ರಾತ್ರಿ ಹಗಲೆನ್ನದೆ ನಡೆಯುತ್ತಿದ್ದಾರೆ. ಇಲ್ಲಿ ಹಸಿದವರ ಬದುಕು ಎಂದಿಗೂ ನಿಕೃಷ್ಟವೇ ಇರಬೇಕು..! ಇದನ್ನು ‘ಇದು ನನ್ನ ಭಾರತ’ ಎಂದು ಹೇಳಿಕೊಳ್ಳುವ ನನಗೊಲಿದ ದೌರ್ಭಾಗ್ಯ ಎಂದು ಹೇಳದೇ ಮತ್ತೇನನ್ನು ಹೇಳಬೇಕು..?!


-ಶ್ರೀರಾಜ್ ವಕ್ವಾಡಿ 
 

Monday, May 18, 2020

ರಕ್ತ ಅಚ್ಚೆಬ್ಬಿಸಿದೆ | ನಾನು ಹೇಳಲೇ ಬೇಕು.. ‘ಇದು ನನ್ನ ಭಾರತ..!’



ಇದು ಬಹಳ ದೂರ ಕಾಡುತ್ತೆ.

ಹೋಗಹೋಗತ್ತಿದ್ದಂತೆ, ಅಲ್ಲಲ್ಲೇ ಬಾಡಿ ಉದುರಿದ ಜೀವಗಳ ದೃಶ್ಯ, ಇನ್ನಷ್ಟು ದೂರ ಖಂಡಿತ ಕಾಡುತ್ತದೆ. ಮೇಲ್ಸ್ತರದ ಸೂಟು ಬೂಟು ಬದುಕಿನ ಆಚೆ ದೇಶಿ ಸಂಕಥನಗಳು ಇನ್ನೂ ಬರಿಗಾಲಲ್ಲೇ ದಾರಿ ಸವೆಸುತ್ತಿವೆ ಎನ್ನುವುದು ದೊಡ್ಡ ದುರಂತ.

ಇದು ನನ್ನ ಭಾರತ..!

ಇದು ದೇಶದ ಕಾರ್ಮಿಕ ವರ್ಗ, ಒಂದೊಂದೆ ಹೆಣೆದು ಆಡಳಿತ ವರ್ಗದ ಕೊರಳಿಗೆ ಹಾಕಿದ ದುಃಖದ ಸರಮಾಲೆ. ಹಸಿವು ಮತ್ತು ಬಡತನ ಎಷ್ಟೊಂದು ಕ್ರೂರಿ..?! ಒಣ ಹೊಟ್ಟೆ ಬಗೆದು ನೋಡಿ ಗಹಗಹಿಸಿ ನಗುವಷ್ಟು ರಾಕ್ಷಸ ಪ್ರವೃತ್ತಿ ಅದರದ್ದು.

ಪತ್ರಿಕಾ ಗೋಷ್ಠಿಯಲ್ಲಿ ಹತ್ತಾರು ಮಾರಾಟವಾದ ಕ್ಯಾಮೆರಾ, ಪತ್ರಕರ್ತರ ಮುಂದೆ ಇಷ್ಟಿಷ್ಟು ಕೋಟಿ (ಎಂಟು ಕೋಟಿ) ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಲೆಕ್ಕ ಕೊಡ್ತಾರೆ ಅಷ್ಟೇ. ಕಾರ್ಪೋರೇಟ್ ವಲಯದ ಚೇತರಿಕೆಗೆ ಕೋಟಿ ಕೋಟಿ ಘೋಷಿಸುವಾಗ, ದೇಶದ ಜನರಿಗೆ ಏನೇನೋ ಹೇಳಿ ಭ್ರಮೆ ಹುಟ್ಟಿಸುವಾಗ ಅದನ್ನೇ ವಾಸ್ತವ ಅಂದುಕೊಂಡು ಜನ ಪಾಯಸ ಮಾಡಿ ತಿಂದು 'ಭಾರತ ಪ್ರಗತಿ ಕಾಣುತ್ತಿದೆ' ಅಂತ ವಾಟ್ಸ್ಯಾಪ್, ಫೆಸ್ಬುಕ್ ಇನ್ನಾವುದೋ ಇದ್ದಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರ್ಷ ವ್ಯಕ್ತ ಪಡಿಸುತ್ತಾರೆ. ಆದರೇ, ಬದುಕು ನಿರ್ಬಲವಾಗಿ ಗುಳೆ ಹೊರಟವರು ಮೂಟೆ ತಲೆ ಮೇಲೆ ಹೊತ್ತು ಸಾಗುತ್ತಾ ದಾರಿಯಲ್ಲೆಲ್ಲೋ ಅಸ್ವಸ್ಥರಾಗಿ ಬಿದ್ದು ಸಾಯುವಾಗ... ನಮಗೆ ಭಾರತದ ಬಗ್ಗೆ ಏನೂ ಅನ್ನಿಸುವುದಿಲ್ಲ...!

ನಿಜಾಂಶ, ವಾಸ್ತವಾಂಶ ಖಂಡಿತ ಯಾರಿಗೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಪಾಪ, ಸಿಮೆಂಟ್ ಮೆತ್ತಿಕೊಂಡು ದುಡಿವ ವರ್ಗವದು. ಊರು ತಲುಪಲು ಇನ್ನೂ ದಾರಿ ಮೇಲೆಯೇ ಇದ್ದಾರೆ. ಒಡೆದ ಪಾದಗಳಿಂದ ಸುರಿದ ರಕ್ತ ರಸ್ತೆಯುದ್ದಕ್ಕೂ ಅಚ್ಚೆಬ್ಬಿಸಿದೆ.

ಇದು ಇನ್ನೊಂದಿಷ್ಟು ಕಾಲ ಉಳಿಯುತ್ತದೆ. ಅಧಿಕಾರದ ನಿರ್ಲಕ್ಷ್ಯ ಧೋರಣೆಗೆ ಖಂಡಿತ ಬಲವಾದ ಚಾಟಿ  ಬೀಸುತ್ತದೆ.

ಗೊತ್ತಿಲ್ಲ, ತಲೆ ತಗ್ಗಿಸುತ್ತಾ ‘ಇದು ನನ್ನ ಭಾರತ’ ಅಂತ ಹೇಳಲೇ ಬೇಕಿದೆ.
-ಶ್ರೀರಾಜ್ ವಕ್ವಾಡಿ 

Sunday, May 17, 2020

ಇಲ್ಲಿ ಎಲ್ಲವೂ ಬಾಡಿಗೆ | ದುಃಖ, ಕರಗದ ಕಲ್ಲಲ್ಲ..!




‘ಹೇಳದಾಚೆಗಿನ ಭಾವಗಳಿಗೆ ಸಂಜೆಗತ್ತಲು ಬಹಳ ಆಪ್ತ ಸರ್ ನನಗೆ’ ಅಂತ ಪರಿಚಯದ ಒಬ್ಬ ಹುಡುಗಿ ಹೇಳಿದ್ಲು. ಆಕೆಯ ಧ್ವನಿ ಎಂದಿನಂತಿರಲಿಲ್ಲ.

ಯಾಕೆ..? ಅಂತ ಕೇಳ್ದೆ.

ಆಕೆ ಹೇಳ್ತಾಳೆ..

‘ತೀರದ ನೆನಪುಗಳಿವೆ, ಹೇಳಲಾಗದವುಗಳಿದ್ದಾವೆ, ಹೇಳಿದಷ್ಟು ಉಳಿದು ಬಿಡುವವೂ ಇದ್ದಾವೆ ಸರ್’ ‘ಪ್ರತಿ ಸಂಜೆ ದೇವಸ್ಥಾನದ ಕೆರೆದಂಡೆಯ ಬಳಿಗೆ ಹೋಗ್ತೇನೆ, ಒಂದಿಷ್ಟು ಹೊತ್ತು ಒಳಗೊಳಗೆ ಬಿಕ್ಕಿ ಬಿಕ್ಕಿ ಅಳುತ್ತೇನೆ, ಒಮ್ಮೆ ನೆಗೆದು ಹಾರಿ ಬಿಡುವ ಅಂತ ಅನ್ನಿಸುತ್ತೆ. ಮನಸ್ಸು ಹಿಂದ್ಹೆಜ್ಜೆ ಇಡುತ್ತದೆ’. ಈಗ ಅವಳ ಸ್ವರ ಇಳಿದಿತ್ತು. ಆರ್ತಕ್ಕೆ ತಿರುಗಿತ್ತು. ಅದೇನೋ ಅವಳನ್ನು ಬಲವಾಗಿ ಕೊರಗುತ್ತಿರುವುದು ಕಾಣುತ್ತಿತ್ತು.

‘ಮನಸ್ಸು ಹಿಂದ್ಹೆಜ್ಜೆ’ ಇಡುತ್ತಿದೆ ಅಂತಾದರೇ, ನಿನಗೆ ಮುಂದೆಲ್ಲೋ ಮಹತ್ತರವಾದದ್ದಿದೆ ಅಂತರ್ಥ. ನೀನು ನಿನ್ನಲ್ಲಿಯೇ ನಿನ್ನ ಬಗ್ಗೆ ನಿನಗೇ ಹೆಮ್ಮೆ ಅನ್ನಿಸುವಷ್ಟು ಮಾತಾಡು. ನಿನ್ನಲ್ಲಿ ಹೇಳಲಾಗದವುಗಳಿದ್ದಾವೆ ಎನ್ನುವುದು ಅಪ್ಪಟ ಸುಳ್ಳು. ನೀನದನ್ನು ಇನ್ನೊಬ್ಬರೊಂದಿಗೆ ಹೇಳಿಕೊಳ್ಳಬೇಕೆಂದೇನಿಲ್ಲ. ನೀನು ನಿನ್ನಲ್ಲಿಯೇ ಹೇಳಿಕೊಂಡು ಅದಕ್ಕೆ ಬೇಕಾದ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿದೆ. ನಿನ್ನೊಳಗೆ ಅಳತೆ ಮಾಡಿ ಹೇಳಲಾರದಷ್ಟು ದೊಡ್ಡದಾದ ಶಕ್ತಿಯೊಂದಿದೆ.

ಡೌಟ್ ಇದೆಯಾ..?

ಒಮ್ಮೆ ನಿನ್ನನ್ನು ನೀನೇ ಕೇಳಿಕೋ..

ಈ ಹಿಂದೆ ಆದವುಗಳೆಲ್ಲಾ ಬಹುಶಃ ನಿನ್ನದಲ್ಲ. ಮುಂದಿವೆ ಬೆಟ್ಟದಷ್ಟಿವೆ ನೋಡು ಅವುಗಳೆಲ್ಲಾ ನಿನ್ನವು. ಹೋಗು ಬಾಚಿಕೋ, ಅಪ್ಪಿಕೋ.. ಎಸ್, ನಿನ್ನೆ ಎಂಬುವುದೇ ಇಲ್ಲ.

‘ಭಾವನೆಗಳು ಅಳ್ಸುತ್ತ್ವೆ.'

ಒಂದಿಷ್ಟು ಮಾತಾಡು. ದುಃಖ, ಕರಗದ ಕಲ್ಲಲ್ಲ.

ನಿನಗೂ ದುಃಖ, ಸಂಕಟ ಎಲ್ಲವೂ ಬರಬಹುದು. ಆದರೇ, ಅವುಗಳ್ಯಾವುದೂ ನಿನ್ನ ಸ್ವಂತದ್ದಲ್ಲ. ಭೂಮಿ, ನಿನ್ನ ಬಾಡಿಗೆ ಮನೆ. ಅಳು, ದುಃಖ, ಸಂತೋಷ, ಹರ್ಷ ಎಲ್ಲವೂ ನಿನ್ನ ಜೀವಿತಾವಧಿಗೆ ಕಟ್ಟುವ ಬಾಡಿಗೆ..!

‘ನಾನು ನನ್ನೊಂದಿಗೆ ಮಾತಾಡಬಲ್ಲೆ, ಅದರಿಂದ ಏನೋ ಸಮಾಧಾನಳಾಗಬಲ್ಲೆ, ಬರುವುದೆಲ್ಲವನ್ನೂ ಸ್ವೀಕರಿಸಬಲ್ಲೆ. ಆದರೇ, ಹಾಗೆಯೇ ಉಳಿಯುವ ಕಣ್ಣ ಹನಿಯ ಅಂಟು...?!’

ಆಕೆ ಕೇಳಿದ್ಲು.

ಈಗಷ್ಟೇ ನೀನು ಹೇಳಿದ್ದೆಲ್ಲಾ ನೀನು ಮೊದಲು ಮಾಡು. ಬದುಕೆಂದರೇ, ಆಗದೇ ಹೋಗುವ ಪರಿವರ್ತನೆಯಲ್ಲ. ನಾನು ಉತ್ತರಿಸಿದೆ.

ಹೊಸತು ಈಗಲೇ ಆರಂಭ. ನೀನದರ ಸಾರಥಿ. ನೀನಂದರೇ, ದೈವ ಶಕ್ತಿ.

ನಿಮ್ಮ ಬದುಕಿನ ಕೀಲಿಕೈ ನಿಮ್ಮಲ್ಲೇ ಇದೆ. ತೆರೆದು ನೋಡಿ. ವಿಸ್ಮಯ ನಿಮ್ಮ ಮುಂದಿದೆ.
-ಶ್ರೀರಾಜ್ ವಕ್ವಾಡಿ
 

Saturday, May 16, 2020

ವಾವ್ಹ್ ಅಂತೀರಿ.. | ಇಲ್ಲಿ ಎಲ್ಲವೂ ರೋಚಕ..!




ಇಲ್ಲಿ ಎಲ್ಲವೂ ರೋಚಕ ಮತ್ತು ಇಂಟ್ರೆಸ್ಟಿಂಗ್..!

ಹಾಗಂತ ನಾನು ಸ್ಪೆಷಲ್ ಆಗಿ ಹೇಳ್ಬೇಕಂತಿಲ್ಲ. ನಿಮಗೆ ಗೊತ್ತಿದೆ. ಬದುಕನ್ನು ಇಷ್ಟಿಷ್ಟೇ ನೋಡಿ ಸ್ವೀಕರಿಸಿದ ಮಹತ್ತರವಾದ ಅನುಭವ ನಿಮ್ಮ ಜೊತೆಗಿದೆ. ತೆರದುಕೊಳ್ಳುವಾಗ ಕೆಲವೊಂದಿಷ್ಟು ಒಮ್ಮೊಮ್ಮೆ ಒಡೆದು ಚೂರು ಚೂರಾಗಿ ಹೋಗುತ್ತವೆ. ಕೆಲವೊಮ್ಮೆ ಬಿಚ್ಚಿಕೊಳ್ಳುವುದೇ ಇಲ್ಲ. ಇನ್ನೊಮ್ಮೊಮ್ಮೆ ಆರಂಭವೇ ಅಂತ್ಯವಾಗುತ್ತದೆ.

ಅದಕ್ಕೆ ಹೇಳಿದ್ದು, ಇಲ್ಲಿ ಎಲ್ಲವೂ ರೋಚಕ ಅಂತ.

ನಿರೀಕ್ಷಿಸುವುದು ಮತ್ತು ಬಂದವುಗಳನ್ನು ಒಪ್ಪಿಕೊಳ್ಳುವುದು ಕಷ್ಟ ಅನ್ನಿಸಿದರೂ ಸಹ್ಯ.
ಸಮಾಧಾನವಾಗಿ ಅವುಗಳು ಒತ್ತಾಯಿಸುತ್ತವೆ. ನಾವು ದಕ್ಷತೆಯಲ್ಲಿ ಒಳಗೊಳ್ಳುತ್ತೇವೆ.

ಆಮೇಲಿನದ್ದೆಲ್ಲಾ ಇಂಟ್ರೆಸ್ಟಿಂಗ್ ಅಥವಾ ಅನ್‌ಇಂಟ್ರೆಸ್ಟಿಂಗ್.

ಬದುಕು, ನಮಗೆ ಕಾಣದ್ದನ್ನು ಮಾತ್ರ ಮುಂದಿಡುತ್ತದೆ. ನಾವು ಕಂಡದ್ದನ್ನೂ, ಕಾಣದೇ ಇರುವುದನ್ನೂ ಅನುಭವಿಸುತ್ತೇವೆ. ‘ಕಾಣುವುದರೊಳಗೆ ಕಾಣದೇ ಇರುವುದು, ಒಮ್ಮೆ ಕಂಡು ಮತ್ತೊಮ್ಮೆ ಕಾಣುವಷ್ಟರೊಳಗಾಗಿ ಕಾಣೆಯಾಗುವುದು’ ಎಲ್ಲಾ ಇಲ್ಲಿ ನಡೆದು ಹೋಗುವ, ಆಗಿಸಿಕೊಳ್ಳುವ, ತಂತಾನೆ ಮುಗಿದು ಹೋಗುವ ಭಾಗ.

ಭೋರ್ಗರೆಯುವ ಸಮುದ್ರದಲ್ಲಿ ಒಮ್ಮೊಮ್ಮೆ ಸಣ್ಣ ಅಲೆಗಳು ಕಿನಾರೆಗೆ ಪಪ್ಪಿ ಕೊಟ್ಟು ಹೋದರೇ, ಮತ್ತೊಮ್ಮೊಮ್ಮೆ ದೊಡ್ಡ ಅಲೆಗಳು ಬಡಿದು ಹೋಗುತ್ತವೆ.

ಬದುಕೆಂದರೇ, ಬಲಿಯಾಗುವ ಮತ್ತು ಪಾಲ್ಪಡೆಯುವ ಪಾತ್ರ.

ಏರಿಳಿತಗಳ ಪ್ರತಿ ಕಿರು ಮೌನದ ನಂತರ, ನೀವು ಎದುರು ಬಂದು ಮಾತಾಡಲಾರಂಭಿಸುತ್ತೀರಿ, ಖಾಲಿ ಹಾಳೆ ಹಿಡಿದು ನಿಮ್ಮ ಮೂರನೇ ಕಣ್ಣಿಗೆ ಕಂಡದ್ದನ್ನು ಚಿತ್ರಿಸುತ್ತೀರಿ. ವಾವ್ಹ್ ಅಂತೀರಿ.

ಯಾಕೆ ಗೊತ್ತಾ..? ಅಲ್ಲೊಂದು ಹುಣ್ಣಿಮೆ ಹೊಳೆಯುತ್ತಿರುತ್ತದೆ.

‘ನಡೀರಿ ಮುಂದಕ್ಕೆ.. ಕಲ್ಲು-ಮುಳ್ಳುಗಳು ಬದುಕಲ್ಲಿರದೇ, ನೈಸ್ ರೋಡ್ನಲ್ಲಿರುತ್ತದೇನ್ರೀ..?’ ಅಂತ ಗಟ್ಟಿ ಸ್ವರ ಮಾಡಿ ಧೈರ್ಯ ತುಂಬುವವರು ಬೇಕಷ್ಟೇ.
-ಶ್ರೀರಾಜ್ ವಕ್ವಾಡಿ

Friday, May 15, 2020

ನೀವು ಖಂಡಿತ ಹೇಳುತ್ತೀರಿ..!? | ಕಂಗ್ರಾಜುಲೇಶನ್..!



ಈಗ ಮೊದಲಿನಂತಿಲ್ಲ. ಬಿಕ್ಕಿಗೆ ಚುಕ್ಕಿ ದೊರಕಿದೆ. ಆರ್ತ ಕೊನೆ ತಲುಪಿದೆ. ಮನಸ್ಸು ಮತ್ತೆ ಚಿಗುರು ಬಿಚ್ಚಲಾರಂಭಿಸುತ್ತಿದೆ. ಮೌನದ ಕಣ್ಕಟ್ಟುಗಳು ಉದುರಿ ಹೋಗಿ ಮಾತಾಡುವ ಶಕ್ತಿ ಈಗ ಬಂದಿದೆ.
ಮೋಡಗಳಿಂದ ಭರ್ತಿಯಾದ ಆಕಾಶದಿಂದ ಗುಡುಗು, ಮಿಂಚು, ಮಳೆ ಹನಿಯುವುದನ್ನು ನಿರೀಕ್ಷಿಸದೇ ಮತ್ತೇನು ನಿರೀಕ್ಷಿಸುತ್ತೀರಿ..?

ಬದುಕಿನಲ್ಲಿಯೂ ಹಾಗೆ.

ಇಲ್ಲಿ... ಸುಖ, ಸಂತೋಷ, ದುಃಖ, ದುಮ್ಮಾನ, ಸಂಕಟ ಮತ್ತು ಕೊನೆಗೊಂದು ನೆಮ್ಮದಿ ಬಿಟ್ಟರೇ, ಮಹತ್ತರವಾದದ್ದೇನು ಬಯಸುವುದಕ್ಕೆ ಸಾಧ್ಯ..? ಹೇಳಿ ಕೇಳಿ ಇದು ಬದುಕು ಅಷ್ಟೇ. ಅದಕ್ಕಿಂತ ಮಿಗಿಲಾದುದ್ದೇನಲ್ಲ. ಇಲ್ಲಿ ಇವುಗಳನ್ನೆಲ್ಲಾ ನಿರೀಕ್ಷಿಸದಿದ್ದರೂ ಬಂದಾಗ ಸ್ವೀಕರಿಸಿ ಅನುಭವಿಸಲೇ ಬೇಕು.

ಬದುಕೆನ್ನುವುದು ಈ ಸುಖ, ದುಃಖಗಳನ್ನು ಸೇರಿಸಿಕೊಂಡು ಹುಟ್ಟಿಕೊಳ್ಳುವ ವೃತ್ತಾಂತ ಅಷ್ಟೇ. ಅದರಿಂದ ದೊಡ್ಡ ಚರಿತ್ರೆ ನಿರ್ಮಿಸುವುದಕ್ಕೇನೂ ಆಗುವುದಿಲ್ಲ. ಒಂದು ವೇಳೆ ‘ಚರಿತ್ರೆ’ ಅಂತಹದ್ದೊಂದು ಸಾಹಸ ಮಾಡುವುದಕ್ಕೆ ಸಾಧ್ಯವಿದ್ದರೇ, ಅದು ನಿನ್ನಿಂದ ಮಾತ್ರ. ಬದುಕಿನಿಂದ ಖಂಡಿತ ಸಾಧ್ಯವಿಲ್ಲ. ಬದುಕು ನಿನ್ನ ಜೀವಿತಾವಧಿ. ಬದುಕು ನೀನಲ್ಲ. ನೀನು ಬದುಕಲ್ಲ.

ಅತ್ಯಂತ ಪ್ರೀತಿಯಿಂದ ಒಂದು ಥ್ಯಾಂಕ್ಸ್ ಹೇಳಿ.

ಯಾರಿಗೆ..?

‘ನಿಮ್ಮ ಬದುಕಿಗೆ’

ಯಾಕೆ..?

‘ನೀವು ನಡೆವ ದಾರಿಯುದ್ದಕ್ಕೂ ಬೇಕು ಎಂದಾಗ ಬೇಕಾದದ್ದನ್ನು ಕೊಡದೇ ಕಾಡಿಸಿದ್ದಕ್ಕೆ, ಕೇಳದೇ ಇದ್ದರೂ ಬೇಡವಾದದ್ದನ್ನು ಕೊಟ್ಟು ಸಂತೈಸಿದ್ದಕ್ಕೆ.’

ಒಮ್ಮೆ ಆಲೋಚನೆ ಮಾಡು. ಎಲ್ಲವೂ ಮುಗಿದ ಮೇಲೆ ‘ನೀವೀಗ ಎಷ್ಟೋ ನಿರಾಳರಾಗಿದ್ದಿರಿ..!’ ಎಸ್,  ಮತ್ತು ನೀವೀಗ ಹೇಳ್ತೀರಿ, ನಾನೀಗ ‘ಬದಲಾಗಿದ್ದೇನೆ’ ಎಂದು.

‘ಕಂಗ್ರಾಜುಲೇಶನ್’

‘ನೀವು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದೀರಿ ಎಂದು ಸಂತೋಷವಾಯ್ತು.’ ಈ ಬದಲಾವಣೆ ನಿಮ್ಮಿಂದಲೇ ಆಗಬೇಕಿತ್ತು, ಆಗುತ್ತಿದೆ. ಈ ಹಿಂದೆ ಎಷ್ಟು ದುಃಖಿಸಿವೆ ಅನ್ನುವುದಕ್ಕಿಂತ, ಮುಂದೆ ಎಷ್ಟು ಸುಖಿಸಲಿಕ್ಕಿವೆ ಅನ್ನುವುದು ಮುಖ್ಯ. ನಾಳೆಗಳಿಗೆ, ಕೈ ಕುಲುಕುವ ಮುನ್ನ, ಒಂದು ಅರ್ಥಪೂರ್ಣ ಸಂಕಲ್ಪ ಕೈಗೊಳ್ಳಿ. ಆ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ. ವಹಿಸಿಕೊಳ್ಳಿ.

ಆಗ ನೀವು ಖಂಡಿತ ಹೇಳುತ್ತೀರಿ.

ಏನು ಗೊತ್ತಾ..?

‘ನನ್ನ ಬದುಕು ನನ್ನನ್ನು ಏನು ಮಾಡಬೇಕಂದುಕೊಂಡಿತ್ತೋ, ಅದಕ್ಕಿಂತ ಉತ್ತಮವಾಗಿದ್ದೇನೆ’ ಎಂದು.

ಇಲ್ಲಿ... ಬದುಕೆಂದರೇ, ಆಗಬೇಕಾದ ಬದಲಾವಣೆ. ಪ್ರೀತಿಯೆಂದರೇ, ಕಳೆದುಕೊಳ್ಳಬೇಕಾದದ್ದನ್ನು ಕಳೆದುಕೊಂಡು, ಉಳಿದ ಭಾವನೆಗಳೊಂದಿಗೆ ಮಾತಾಡಿ ಗೆದ್ದು ನಿಲ್ಲುವ ಶಕ್ತಿ.
-ಶ್ರೀರಾಜ್ ವಕ್ವಾಡಿ