ದೇಶದ ಶೋಷಿತ, ನಿರುದ್ಯೋಗಿ ಮತ್ತು ಹತಾಶ ಯುವ ಸಮೂಹದ ಧ್ವನಿಯಾಗಿ ಮುನ್ನೆಲೆಗೆ ಬಂದಿರುವ ಕಾರ್ಕೋಚ್ ಜನತಾ ಪಾರ್ಟಿ ನೀಟ್ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಆಯೋಜಿಸಿದ್ದ ‘ಸಂಸತ್ ಚಲೋ’ ಪ್ರತಿಭಟನೆಯನ್ನು ದೆಹಲಿ ಪೊಲೀಸರು ನಿಷೇಧಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.
ರಾಜಧಾನಿಯಲ್ಲಿ ದಿಢೀರನೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163 ಜಾರಿಗೊಳಿಸುವ ಮೂಲಕ ಸರ್ಕಾರವು ಜನಸಾಮಾನ್ಯರ ಸಾಂವಿಧಾನಿಕ ಪ್ರತಿಭಟನಾ ಹಕ್ಕನ್ನು ದಮನ ಮಾಡಲು ಯತ್ನಿಸಿದೆ. ಪ್ರತಿಭಟನೆ ನಿರತ ಸಿಜೆಪಿ ಕಾರ್ಯಕರ್ತರ ಮೇಲೆ ಅಶ್ರುವಾಯು ಪ್ರಯೋಗಿಸಿದೆ. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಜೆಪಿ ಮುಖ್ಯಸ್ಥ ಅಭಿಜಿತ್ ಧಿಪ್ಕೆ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಛಲ ಬಿಡದೇ ಸಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಂವಿಧಾನ ದೇಶದ ನಾಗರಿಕರಿಗೆ ಶಾಂತಿಯುತವಾಗಿ ಒಟ್ಟುಗೂಡಲು ಮತ್ತು ಪ್ರತಿಭಟಿಸಲು ಹಕ್ಕು ನೀಡಿದೆ. ಆದರೆ, ಪ್ರಸಕ್ತ ಆಡಳಿತ ವ್ಯವಸ್ಥೆಯು ತನ್ನ ವೈಫಲ್ಯಗಳನ್ನು ಪ್ರಶ್ನಿಸುವ ಯುವಕರ ಧ್ವನಿಯನ್ನು ಹತ್ತಿಕ್ಕಲು ದೆಹಲಿ ಪೊಲೀಸರನ್ನು ತನ್ನ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಸಾರ್ವಜನಿಕ ಸುವ್ಯವಸ್ಥೆಯ ನೆಪವೊಡ್ಡಿ ಸೆಕ್ಷನ್ 163ನ್ನು ಅಸ್ತ್ರವಾಗಿ ಬಳಸಿದ್ದು, ಅಶ್ರುವಾಯು ಪ್ರಯೋಗಿಸಿದ್ದು, ಪ್ರಭುತ್ವ ಸರ್ಕಾರದ ಲಾಠಿ ಬೀಸಿದ್ದು, ಪ್ರಜಾಪ್ರಭುತ್ವ ವಿರೋಧಿ ಮತ್ತು ದಮನಕಾರಿ ನೀತಿಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಪ್ರಭುತ್ವ ಸರ್ಕಾರ ಯುವ ಸಮೂಹದ ಆಕ್ರೋಶಕ್ಕೆ ಬೆದರಿದ್ದು ಅಕ್ಷರಶಃ ಕಾಣಿಸುತ್ತಿದೆ. ಶಿಕ್ಷಣ ಇಲಾಖೆಯ ಹಗರಣಗಳು, ನೀಟ್ ಪರೀಕ್ಷೆಯ ಅಕ್ರಮಗಳು ಹಾಗೂ ದೇಶವನ್ನು ಕಾಡುತ್ತಿರುವ ತೀವ್ರ ನಿರುದ್ಯೋಗ ಸಮಸ್ಯೆಯ ವಿರುದ್ಧ ಯುವಕರು ಸಂಘಟಿತರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಜಂತರ್ ಮಂತರ್, ಸಂಸತ್ತಿನವರೆಗೆ ಬೆಳೆದಿದೆ. ಈ ಜನಾಂದೋಲನ ಕಾರ್ಪೊರೇಟ್ ಪರ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಸಂಸತ್ತಿನ ಒಳಗೆ ತನಗೆ ಬೇಕಾದ ಶಾಸನಗಳನ್ನು ಅಂಗೀಕರಿಸಿಕೊಳ್ಳುವ ಆಡಳಿತ ಪಕ್ಷಕ್ಕೆ, ಹೊರಗಿನ ಯುವ ಶಕ್ತಿಯ ಬೃಹತ್ ಪ್ರತಿರೋಧವನ್ನು ಎದುರಿಸುವ ತಾಕತ್ತಿಲ್ಲ ಎಂಬುದನ್ನು ಕೇಂದ್ರದ ಈ ಎಲ್ಲಾ ದಮನಕಾರಿ ನೀತಿಗಳನ್ನು ಸಾಬೀತುಪಡಿಸಿದೆ. ಇತ್ತೀಚೆಗಷ್ಟೇ ಜಾರಿಗೆ ತರಲಾದ ಹೊಸ ಕಾನೂನುಗಳು (BNSS) ಸಾರ್ವಜನಿಕರ ಹಿತರಕ್ಷಣೆಗಿಂತ ಹೆಚ್ಚಾಗಿ, ಸರ್ಕಾರದ ವಿರುದ್ಧದ ಪ್ರತಿರೋಧಗಳನ್ನು ಹತ್ತಿಕ್ಕಲು ಹೇಗೆ ಬಳಕೆಯಾಗಬಹುದು ಎಂಬ ಎಡಪಂಥೀಯರ ಮತ್ತು ನಾಗರಿಕ ಸಮಾಜದ ಆತಂಕ ನಿಜವಾಗುತ್ತಿದೆ. ಆಡಳಿತಶಾಹಿಯ ಇಂತಹ ದಮನಕಾರಿ ತಂತ್ರಗಳು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ತಡೆಯಬಹುದೇ ಹೊರತು, ಹಸಿವು ಮತ್ತು ನಿರುದ್ಯೋಗದ ವಿರುದ್ಧ ಭುಗಿಲೆದ್ದಿರುವ ಆಕ್ರೋಶದ ಕಿಡಿಯನ್ನು ನಂದಿಸಲು ಸಾಧ್ಯವಿಲ್ಲ.
ಒಟ್ಟಿನಲ್ಲಿ, ಕಾರ್ಕೋಚ್ ಜನತಾ ಪಾರ್ಟಿಯ ‘ಸಂಸತ್ ಚಲೋ’ಗೆ ಹೇರಲಾದ ಧಮನಕಾರಿ ನೀತಿಗಳು ಕೇವಲ ಒಂದು ಸಂಘಟನೆಯ ಮೇಲಿನ ನಿರ್ಬಂಧವಲ್ಲ; ಇದು ಈ ದೇಶದ ಪ್ರಜಾಪ್ರಭುತ್ವ, ಸಮಾಜವಾದಿ ಆಶಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸಾಂಸ್ಥಿಕ ದಾಳಿಯಾಗಿದೆ. ಪ್ರಭುತ್ವದ ಇಂತಹ ಸರ್ವಾಧಿಕಾರಿ ನಡೆಗಳು ಜನಾಂದೋಲನಗಳನ್ನು ಮತ್ತಷ್ಟು ತೀವ್ರಗೊಳಿಸಲಿವೆಯೇ ಹೊರತು ದೃತಿಗೆಡಿಸುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ.
-ಶ್ರೀರಾಜ್ ವಕ್ವಾಡಿ
No comments:
Post a Comment