ಸೌಜನ್ಯ ಕೇಸ್ ಸಿಬಿಐ ಮರುತನಿಖೆಯಲ್ಲಿನ ಲೋಪಗಳ ಬಗ್ಗೆ ಸಪ್ರೀಂ ಕೋರ್ಟ್ ತರಾಟೆಗೆ ತೆಗದುಕೊಂಡಿದೆ. ಮುಂದಿನ ಕ್ರಮಗಳಿಗೆ ನಿರ್ದೇಶಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಆ ಪ್ರಕ್ರಿಯೆಗಳೆಲ್ಲಾ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶದಿಂದ ಇನ್ನಾದರೂ ಸೌಜನ್ಯ ಕೇಸ್ ಗೆ ನ್ಯಾಯ ದೊರಕುವ ನಿರೀಕ್ಷೆ ಇದೆ. ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಸತತ ಯತ್ನ ಮಾಡಲಾಗಿದೆ. ನೈಜ ಅತ್ಯಾಚಾರಿಗಳನ್ನು, ಕೊಲೆಗಾರರನ್ನು ಸೇಫ್ ಮಾಡುವುದಕ್ಕೆ ಸತತ ಪ್ರಯತ್ನವನ್ನು ಮಾಡಲಾಗಿದೆ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ. ಸರ್ಕಾರದ ನಿರ್ಲಕ್ಷ್ಯ, ತನಿಖೆಯ ವಿಳಂಬ ಸೌಜನ್ಯಗಳಿಗೆ ಇನ್ನೂ ನ್ಯಾಯ ಕೊಡಿಸದೆ ಸತಾಯಿಸುತ್ತಿದೆ.
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕುಮಾರಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ದೇಶದ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ದಶಕಕ್ಕೂ ಹೆಚ್ಚು ಕಾಲ ಕಳೆದರೂ ನೈಜ ಅಪರಾಧಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದಿರುವುದು ಮತ್ತು ಪ್ರಕರಣದ ತನಿಖೆಯಲ್ಲಿ ನಡೆದ ತಾರತಮ್ಯಗಳು, ನಮ್ಮ ರಾಜ್ಯ ಸರ್ಕಾರಗಳು ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿವೆ.
ಪ್ರಕರಣ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ನಡೆಸಿದ ತನಿಖೆ ಅತ್ಯಂತ ಕಳಪೆ ಮತ್ತು ನಿರ್ಲಕ್ಷ್ಯದಿಂದ ಕೂಡಿದ್ದಾಗಿತ್ತು ಎಂಬುದು ಮೊದಲಿನಿಂದಲೂ ಬಂದ ಗಂಭೀರ ಆರೋಪ. ಘಟನಾ ಸ್ಥಳದ ಮಹಜರು, ವೈದ್ಯಾಧಿಕಾರಿಗಳ ಅವೈಜ್ಞಾನಿಕ ವರದಿ ಮತ್ತು ಪ್ರಾಥಮಿಕ ಸಾಕ್ಷ್ಯ ಸಂಗ್ರಹಣೆಯಲ್ಲಿ ಗಂಭೀರ ಲೋಪಗಳು ಎದ್ದು ಕಾಣುತ್ತಿದ್ದವು. ಆಮಾಯಕ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಬಂಧಿಸಿ, ಆತನನ್ನೇ ಪ್ರಮುಖ ಆರೋಪಿಯನ್ನಾಗಿ ಬಿಂಬಿಸಲು ಪೊಲೀಸರು ಅವಸರ ಪಟ್ಟರು. ಇದು ನೈಜ ಆರೋಪಿಗಳನ್ನು ರಕ್ಷಿಸಲು ನಡೆದ ವ್ಯವಸ್ಥಿತ ಸಂಚು ಎಂಬ ಸಂಶಯವನ್ನು ತನಿಖೆಯ ಆರಂಭದಲ್ಲೇ ಹುಟ್ಟುಹಾಕಿತು. ಬಳಿಕ ಆತನ ಖುಲಾಸೆಯೂ ಆಯ್ತು. ಮತ್ತೆ ಆ ಖುಲಾಸೆಯ ವಿರುದ್ಧ ಸಿಬಿಐ ಮೇಲ್ಮನವಿ. ಕಾನೂನು, ತನಿಖಾ ಸಂಸ್ಥೆ, ಪೊಲೀಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳ ನಿರ್ಲಕ್ಷ್ಯ, ಪ್ರಭಾವಿಗಳ ಹಿತಾಸಕ್ತಿ ಕಾಯುವುದಕ್ಕೆ ಸರ್ವ ಪ್ರಯತ್ನವೂ ನಡೆದಿವೆ. ಅಧಿಕಾರ, ಪ್ರಭಾವಗಳು ಮತ್ತು ಸತ್ಯವನ್ನು ಹೂತುಹಾಕುವ ಪ್ರಯತ್ನ ಮಾಡಿವೆ. ಈ ಪ್ರಕರಣವು ಕೇವಲ ಒಂದು ಅಪರಾಧ ಘಟನೆಯಲ್ಲ; ಬದಲಿಗೆ 'ಅಧಿಕಾರ-ಸಾಮಾಜಿಕ ಪ್ರಭಾವ-ಬಂಡವಾಳ' ಸೇರಿ ಸಂತ್ರಸ್ತ ಕುಟುಂಬದ ಮೇಲಿನ ದೌರ್ಜನ್ಯವನ್ನು ಹೇಗೆ ಮುಚ್ಚಿಹಾಕಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಕರಣದಲ್ಲಿ ಪ್ರಭಾವಿ ಕುಟುಂಬಗಳ ಅಥವಾ ವ್ಯಕ್ತಿಗಳ ಹೆಸರುಗಳು ಕೇಳಿಬಂದಾಗಲೆಲ್ಲಾ ತನಿಖೆಯ ದಿಕ್ಕು ತಪ್ಪಿಸುವ ಕೆಲಸಗಳು ನಡೆದವು. ಮಾಧ್ಯಮಗಳಲ್ಲಿ ಅವರ ಹೆಸರುಗಳನ್ನು ಉಲ್ಲೇಖಿಸದಂತೆ ಸ್ಟೇ ಆರ್ಡರ್ ತರಲಾಯಿತು. ಅಪರಾಧಿ ಅಲ್ಲದೇ ಇದ್ದಲ್ಲಿ ಸ್ಟೇ ಆರ್ಡರ್ ತರುವ ಅಗತ್ಯ ಏನಿತ್ತು !? ರಾಜ್ಯ ಸರ್ಕಾರಗಳು ತನಿಖಾ ಸಂಸ್ಥೆಗಳ ಮೇಲೆ ಬಿದ್ದ ರಾಜಕೀಯ ಮತ್ತು ಸಾಮಾಜಿಕ ಒತ್ತಡಗಳು ನೈಜ ತನಿಖೆಗೆ ದೊಡ್ಡ ತಡೆಯಾದವು. ಸಿಬಿಐ ತನಿಖೆಯ ವೈಫಲ್ಯ ಮತ್ತು ಮರುತನಿಖೆಯ ಅಗತ್ಯತೆ ಸಿಬಿಐ (CBI) ನಂತಹ ಅತ್ಯುನ್ನತ ತನಿಖಾ ಸಂಸ್ಥೆಯೂ ಸಹ ಸಂತೋಷ್ ರಾವ್ ಮೇಲೆ ಹೊರಿಸಿದ ಆರೋಪಗಳನ್ನು ಕೋರ್ಟ್‌ನಲ್ಲಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿ ಹೊರಡಿಸಿದ ತೀರ್ಪು, ಸಂಸ್ಥೆಯ ತನಿಖಾ ವೈಫಲ್ಯವನ್ನು ಎತ್ತಿ ತೋರಿಸಿತು. ಕೇವಲ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಿದ ಸಿಬಿಐ, ನೈಜ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಾಲಯದ ತೀರ್ಪಿನ ಸಾರಾಂಶವೇ ಸ್ಪಷ್ಟಪಡಿಸಿತು. ಮರುತನಿಖೆಗೆ ಒತ್ತಾಯಿಸುತ್ತಿರುವುದು ನ್ಯಾಯದ ಕೊನೆಯ ಆಶಾದೀಪವಾಗಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಅಥವಾ ನೈಜ ಆರೋಪಿಗಳ ಪತ್ತೆಗೆ ಸ್ಪಷ್ಟ ನಿರ್ದೇಶನ ನೀಡಿದರೆ, ಅದು ಕೇವಲ ಸೌಜನ್ಯ ಕುಟುಂಬಕ್ಕೆ ಸಿಗುವ ನ್ಯಾಯವಲ್ಲ; ಬದಲಿಗೆ ತನಿಖಾ ಸಂಸ್ಥೆಗಳು ಪ್ರಭಾವಿಗಳ ಕೈಗೊಂಬೆಯಾಗದಂತೆ ತಡೆಯಲು ನೀಡುವ ಮಹತ್ವದ ಸಂದೇಶವಾಗುತ್ತದೆ. ಹಳೆಯ ಸಾಕ್ಷ್ಯಗಳು ನಾಶವಾಗಿದ್ದರೂ, ಪ್ರಕರಣದ ಕಡತಗಳಲ್ಲಿರುವ ವಿಧಿವಿಜ್ಞಾನ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಹೊಸ ದೃಷ್ಟಿಕೋನದಲ್ಲಿ ತನಿಖೆ ನಡೆಸಬೇಕಿದೆ. ತನಿಖೆಯನ್ನು ಹಾದಿತಪ್ಪಿಸಿದ ತನಿಖಾಧಿಕಾರಿಗಳ ಮೇಲೆಯೂ ಕಾನೂನು ಕ್ರಮ ಜರುಗಿಸುವುದು ಅತ್ಯಗತ್ಯ.
"ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆ". ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ವರ್ಷಾನುಗಟ್ಟಲೆ ವಿಳಂಬವಾಗಿದೆ. ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಶಂಕಿತ ಪಾತ್ರವನ್ನು ಜನಪರ ಹಾಗೂ ಸೌಜನ್ಯ ಪರ ಹೋರಾಟಗಾರರ ಚಳವಳಿಗಳು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿವೆ. ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದಿಂದಲಾದರೂ ಈ ಪ್ರಕರಣದಲ್ಲಿ 'ಯಾರು ಕೊಂದವರು?' ಎಂಬ ಸತ್ಯ ಹೊರಬಂದು, ಸಂತ್ರಸ್ತ ಕುಟುಂಬಕ್ಕೆ ಮತ್ತು ನಾಡಿನ ಸಾಕ್ಷಿಪ್ರಜ್ಞೆಗೆ ನ್ಯಾಯ ಸಿಗಬೇಕಿದೆ. ಇದು ಪ್ರಜಾಪ್ರಭುತ್ವ ಮತ್ತು ಕಾನೂನಿನ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಇರುವ ಕೊನೆಯ ಅವಕಾಶ.
-ಶ್ರೀರಾಜ್ ವಕ್ವಾಡಿ
No comments:
Post a Comment