ವಿದ್ಯಾರ್ಥಿ ಚಳವಳಿಯ ಮೇಲೆ ಪೋಲಿಸ್ ದೌರ್ಜ̧ನ್ಯ , ಪ್ರಜಾಪ್ರಭುತ್ವದ ಕಂಠಹಿಚುಕುವ ಕೇಂದ್ರ ಸರ್ಕಾರದ ಧೋರಣೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತಲುಪಿರುವ ಆತಂಕಕಾರಿ ಸ್ಥಿತಿಗೆ ಕೈಗನ್ನಡಿಯಾಗಿವೆ. 'ಕಾಕ್ರೋಚ್ ಜನತಾ ಪಾರ್ಟಿ' ಹಮ್ಮಿಕೊಂಡಿದ್ದ 'ಸಂಸತ್ ಚಲೋ' ಪ್ರತಿಭಟನೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವು ಕೇವಲ ಒಂದು ಲಘು ಲಾಠಿಪ್ರಹಾರವಲ್ಲ, ಬದಲಿಗೆ ಯುವಜನರ ನ್ಯಾಯಯುತ ಹಕ್ಕುಗಳ ಮೇಲಾದ ನೇರ ದಾಳಿ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಶಿಕ್ಷಣ ಕ್ಷೇತ್ರದಲ್ಲಿನ ಗಂಭೀರ ಲೋಪಗಳು ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಾ, ಸಂಸತ್ ಚಲೋ ನಡೆಸಿದ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕಿದ್ದ ಕೇಂದ್ರ ಸರ್ಕಾರ, ಅವರ ಧ್ವನಿಯನ್ನು ಅಡಗಿಸಲು ಪೋಲಿಸ್ ಬಲವನ್ನು ಬಳಸಿಕೊಂಡಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಮಾರ್ಪಡಿಸುವಲ್ಲಿ ಪೋಲಿಸ್ ವ್ಯವಸ್ಥೆಯು ವಹಿಸಿದ ಪಾತ್ರ ಸಂಶಯಾಸ್ಪದ ಹಾಗೂ ಖಂಡನೀಯ.
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಂಸತ್ತಿನಿಂದ ಪ್ರಧಾನಿ ನಿವಾಸದವರೆಗೆ ನಡೆದ ಪಾದಯಾತ್ರೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಹೊಸ ಮೆರುಗು ನೀಡಿದೆ. ಆದರೆ, ಪ್ರಧಾನಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳುತ್ತಿದ್ದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿರುವುದು ಕೇಂದ್ರದ ಅಧಿಕಾರಶಾಹಿ ದಬ್ಬಾಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿದ್ಯಾರ್ಥಿಗಳು ಮತ್ತು ಸಂಸದರ ಮೇಲೆ ದೌರ್ಜನ್ಯವನ್ನು ಖಂಡಿಸಿ, ಕಪ್ಪು ಬಟ್ಟೆ ಧರಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಇಡೀ ದೇಶದಾದ್ಯಂತ ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. "ಶಾಂತಿಯುತವಾಗಿ ತಮ್ಮ ಹಕ್ಕುಗಳನ್ನು ಕೇಳುವ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಅದು ಸರ್ವಾಧಿಕಾರದ ಧೋರಣೆ."
ಮೌನಕ್ಕೆ ಶರಣಾದ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು ಪ್ರತಿಭಟನಾಕಾರರು. ವಿದ್ಯಾರ್ಥಿಗಳು ಹತ್ತಾರು ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ಮೌನಕ್ಕೆ ಶರಣಾಗಿದೆ. ಎನ್‌ಡಿಎ ಸಂಸದೀಯ ಪಕ್ಷದ ಮಂಗಲ್ ಮಿಲನ್ ಸಭೆಯಲ್ಲಿ ಮಾತನಾಡಿದ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ರಾಷ್ಟ್ರೀಯ ಜವಾಬ್ದಾರಿ, ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು. ಆದರೆ, ಮೋದಿ ಹೀಗೆ ಹೇಳಬೇಕಿರುವುದು ಯಾರ ಮುಂದೆ ? ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳ ಮುಂದಾ ಅಥವಾ ತಮ್ಮ ಪಕ್ಷ ಮತ್ತು ಮೈತ್ರಿ ಪಕ್ಷಗಳ ನಾಯಕರ ಮುಂದಾ? ಈ ಪ್ರಶ್ನೆಗೆ ಉತ್ತರವೇ ಇಲ್ಲ.
ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಲ್ಲಿ ಸರ್ಕಾರ ಸಂವಾದಕ್ಕೆ ಮುಂದಾಗದಿರುವುದು ಅದರ ಹೊಣೆಗೇಡಿತನವನ್ನು ಎತ್ತಿಹಿಡಿಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ವೈಫಲ್ಯಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ ರಾಜೀನಾಮೆ ನೀಡಬೇಕೆಂಬ ವಿದ್ಯಾರ್ಥಿಗಳ ಪಟ್ಟು ನ್ಯಾಯಯುತವಲ್ಲ ಎನ್ನುವುದನ್ನು ಹೇಗೆ ಸಾಧ್ಯವಿದೆ?
'ನೀಟ್' (NEET) ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಗೊಂದಲ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪದೇ ಪದೇ ಪರೀಕ್ಷೆ ರದ್ದುಗೊಳಿಸುವುದು ಯುವಕರ ಭವಿಷ್ಯದ ಜೊತೆಗಿನ ಚೆಲ್ಲಾಟವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸಾಲ ಮಾಡಿ ಶಿಕ್ಷಣ ಪಡೆಯುತ್ತಿರುವಾಗ, ಉದ್ಭವಿಸಿರುವ ಸಮಸ್ಯೆಗಳಿಗೆ ಶಿಕ್ಷಣ ಸಚಿವರು ಅಥವಾ ಪ್ರಧಾನಿಯವರು ನೇರ ಸಂವಾದಕ್ಕೆ ಬಾರದಿರುವುದು ಕಾರ್ಯಾಂಗದ ಹೊಣೆಗೇಡಿತನವನ್ನು ಎತ್ತಿಹಿಡಿಯುತ್ತದೆ. ಶಾಂತಿಯುತವಾಗಿ ಮಾರ್ಚ್ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸ್ ಬಲಪ್ರಯೋಗ ಮಾಡುವುದು, ವೇದಿಕೆ-ಟೆಂಟ್‌ಗಳನ್ನು ತೆರವುಗೊಳಿಸುವುದು ಪ್ರತಿಭಟನೆಯನ್ನು ಹತೋಟಿಗೆ ತರುವ ಮಾರ್ಗವಲ್ಲ; ಬದಲಿಗೆ ಅದು ಯುವಕರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿಯುತ್ತದೆ. ಒಟ್ಟಿನಲ್ಲಿ, ವಿದ್ಯಾರ್ಥಿ ಚಳವಳಿಗಳು ಇತಿಹಾಸದುದ್ದಕ್ಕೂ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡಿವೆ. ಇಂದು ತಮ್ಮ ಭವಿಷ್ಯಕ್ಕಾಗಿ ರಸ್ತೆಗಿಳಿದಿರುವ ಯುವಜನರನ್ನು ಪೋಲಿಸ್ ಬಲದಿಂದ ಹತೋಟಿಗೆ ತರಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ದಬ್ಬಾಳಿಕೆಯನ್ನು ನಿಲ್ಲಿಸಿ, ವಿದ್ಯಾರ್ಥಿ ಒಕ್ಕೂಟಗಳ ಜೊತೆ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಈಡೇರಿಸಬೇಕಿದೆ. ಇಲ್ಲದಿದ್ದರೆ ಈ ವಿದ್ಯಾರ್ಥಿಗಳ ಆಕ್ರೋಶ ದೇಶವ್ಯಾಪಿ ಸಾರ್ವಜನಿಕ ಚಳವಳಿಯಾಗಿ ರೂಪಾಂತರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
-ಶ್ರೀರಾಜ್ ವಕ್ವಾಡಿ
No comments:
Post a Comment