ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಬಳಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ ನಿಂದ ಪ್ರಧಾನಿ ನಿವಾಸದವರೆಗೆ ನಡೆದ ಪ್ರತಿಭಟನೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ನಿಂತ ಒಬ್ಬ ಲೋಕಸಭೆಯ ಪ್ರತಿಪಕ್ಷದ ನಾಯಕನ ವಿರುದ್ಧ ಸೋನಮ್ ವಾಂಗ್ಚುಕ್ ಅವರಂತಹ ಹೋರಾಟಗಾರರ ಪತ್ನಿ ಹೀಗೆ ಹೇಳಿ ಏನನ್ನು ಸಾಧಿಸಿದರು ? ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿ ಪೇಪರ್ ಲೀಕ್ ಆದಾಗಲಿಂದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಸದನದ ಒಳಗೂ, ಸದನದ ಹೊರಗೂ ದ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಪ್ರಜ್ಞಾಪೂರ್ವಕವಾಗಿ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟಕ್ಕೆ ನೈತಿಕವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೇ, ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟವನ್ನು ರಾಹುಲ್ ಗಾಂಧಿ ಕಾಂಗ್ರೆಸ್ ನ ಹೋರಾಟ ಎನ್ನುವ ಹಾಗೆ ಹೈಜಾಕ್ ಮಾಡಿಲ್ಲ. ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವವರೆಗೆ ಸಂಸತ್ತಿನ ಚರ್ಚೆಗೆ ಭಾಗವಹಿಸಲ್ಲ ಅಂದಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿಯನ್ನು ವಿದ್ಯಾರ್ಥಿಗಳು ಮೆಚ್ಚಲೇ ಬೇಕಲ್ವಾ !? ತಪ್ಪು ಮಾಡಿದಾಗ ತಪ್ಪು ಎಂದು ಹೇಳುವ ಹಾಗೆ, ಸರಿಯಾಗಿ ನಡೆದಾಗ ಸರಿ ಎಂದು ಹೇಳುವ ಧೈರ್ಯವೂ ತೋರಿಸಬೇಕಲ್ವಾ!?
ಇತ್ತೀಚೆಗೆ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ನೀಡಿದ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿರುವ ಚರ್ಚೆಗಳ ಬಗ್ಗೆ ಮಾತಾಡಲೇ ಬೇಕಿದೆ. ಸೋನಮ್ ಅವರ ಹೋರಾಟಕ್ಕೆ ಗೀತಾಂಜಲಿ ಅವರು ಅಕ್ಷರಶಃ ಬೆಂಬಕಕ್ಕೆ ನಿಂತಿದ್ದಾರೆ. ಅದಕ್ಕೆ ನಾವು ಮೆಚ್ಚಲೇಬೇಕು. ಆದರೆ, ವಿದ್ಯಾರ್ಥಿಗಳ ಪರ ನಿಂತ ರಾಹುಲ್ ಗಾಂಧಿಗೆ ಹೇಳಿದ ಮಾತು ಈ ಸಂದರ್ಭಕ್ಕೆ ಸರಿ ಇಲ್ಲ ಅಂತನೇ ಅನ್ನಿಸ್ತಿದೆ. ಪ್ರತಿಭಟನೆಯನ್ನು ರಾಜಕೀಯಗೊಳಿಸಿದ್ದು ರಾಹುಲ್ ಗಾಂಧಿಯವರಾ ? ಅಥವಾ ಗೀತಾಂಜಲಿಯವರಾ!? ಸಹಜವಾಗಿ ಈವೊಂದು ಪ್ರಶ್ನೆ ಉದ್ಭವಿಸುತ್ತಿದೆ.
ಜನಪರ ಹೋರಾಟಗಳ ಹೈಜಾಕ್ ಮತ್ತು ವಿದ್ಯಾರ್ಥಿ ಚಳವಳಿಯ ನೈಜ ಧ್ವನಿಯ ಬಗ್ಗೆ ಗಮನಿಸೋಣ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನ್ಯಾಯಕ್ಕಾಗಿ ನಡೆಯುವ ಸುದೀರ್ಘ ಹೋರಾಟಗಳನ್ನು ಕೇವಲ ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದು ಮತ್ತು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲ ನೀಡುವ ನಾಯಕರನ್ನು ಸಂಶಯದಿಂದ ನೋಡುವುದು ಇತ್ತೀಚಿನ ಸಾರ್ವಜನಿಕ ಚರ್ಚೆಗಳ ದುರಂತ. ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ರಾಹುಲ್ ಬಗ್ಗೆ ನೀಡಿರುವ ಹೇಳಿಕೆ ಇದೇ ಸಾಲಿಗೆ ಸೇರುತ್ತದೆ.
ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್ ಸದಾ ಧ್ವನಿ ಎತ್ತುತ್ತಲೇ ಬಂದಿದ್ದಾರೆ.
ಪ್ರತಿಪಕ್ಷ ನಾಯಕನ ಜವಾಬ್ದಾರಿ:
ನೀಟ್ (NEET) ಸೇರಿದಂತೆ ದೇಶಾದ್ಯಂತ ನಡೆದ ಸಾಲು ಸಾಲು ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದಾಗ, ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ವಹಿಸಿದ ಪಾತ್ರ ಮಹತ್ವದ್ದು.
ಸಂಸತ್ತಿನ ಒಳಗೂ ಮತ್ತು ಹೊರಗೂ ನಿರಂತರ ಹೋರಾಟ ರಾಹುಲ್ ಮಾಡಿದ್ದಾರೆ. ಪೇಪರ್ ಲೀಕ್ ಹಗರಣ ಬಯಲಿಗೆ ಬಂದ ತಕ್ಷಣದಿಂದಲೂ ಸಂಸತ್ತಿನ ಅಧಿವೇಶನದಲ್ಲಿ ಮತ್ತು ಬೀದಿಗಿಳಿದು ವಿದ್ಯಾರ್ಥಿಗಳ ಧ್ವನಿಯಾಗಿ ರಾಹುಲ್ ಗಾಂಧಿ ನಿಂತಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುವುದು ಅಥವಾ ಈ ವ್ಯವಸ್ಥಿತ ಹಗರಣದ ಹೊಣೆಗಾರಿಕೆಯನ್ನು ಸರ್ಕಾರದ ಮೇಲೆ ಹೊರಿಸುವುದು ಪ್ರತಿಪಕ್ಷ ನಾಯಕನ ಪ್ರಜಾಸತ್ತಾತ್ಮಕ ಕರ್ತವ್ಯ. ಅದನ್ನು ಬಹಳ ಗಟ್ಟಿಯಾಗಿಯೇ ರಾಹುಲ್ ಮಾಡಿದ್ದಾರೆ.
ಇದು ವಿದ್ಯಾರ್ಥಿಗಳ 'ಹೋರಾಟದ ಹೈಜಾಕ್' ಅಲ್ಲ, 'ನೈತಿಕ ಬೆಂಬಲ'.ಸಾಮಾಜಿಕ ಅಥವಾ ವಿದ್ಯಾರ್ಥಿ ಹೋರಾಟಗಳು ನಡೆದಾಗ ಅವುಗಳಿಗೆ ಬಲ ತುಂಬುವುದು ರಾಜಕೀಯ ನಾಯಕರ ಹೊಣೆ. ರಾಹುಲ್ ಗಾಂಧಿ ಅವರು ಈ ಹೋರಾಟವನ್ನು ತಮ್ಮ ಪಕ್ಷದ ಹೋರಾಟವೆಂದು ಪ್ರತಿಪಾದಿಸದೆ, ಸ್ವತಂತ್ರ ವಿದ್ಯಾರ್ಥಿ ಒಕ್ಕೂಟಗಳು ಮತ್ತು ಹೋರಾಟಗಾರರ ನೈತಿಕ ಬಲವಾಗಿ ನಿಂತಿದ್ದಾರೆ.
ಯಾವುದೇ ನಾಗರಿಕ ಹೋರಾಟಕ್ಕೆ ಸಂಸದೀಯ ಬಲ ಸಿಕ್ಕಾಗ ಮಾತ್ರ ಸರ್ಕಾರಗಳು ಮಣಿಯುತ್ತವೆ.
ವಿದ್ಯಾರ್ಥಿಗಳ ಪರ ಧ್ವನಿ ಎತ್ತುವುದನ್ನು "ರಾಜಕೀಯ ಲಾಭ" ಎಂದು ಕರೆಯುವುದು, ಆ ಹೋರಾಟದ ನೈಜ ಉದ್ದೇಶವನ್ನು ದುರ್ಬಲಗೊಳಿಸುವ ಪ್ರಯತ್ನವಷ್ಟೇ.
ಇನ್ನು, ಗೀತಾಂಜಲಿ ಆಂಗ್ಮೋ ಹೇಳಿಕೆಯ ಹಿನ್ನೆಲೆ ಮತ್ತು ವಿರೋಧಾಭಾಸವನ್ನು ಗಮನಿಸೋಣ, ಈ ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂಬ ಗೀತಾಂಜಲಿ ಆಂಗ್ಮೋ ಅವರ ಆತಂಕ ಒಂದು ಕಡೆಯಾದರೆ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿಂತ ನಾಯಕರ ವಿರುದ್ಧ ಆಕ್ಷೇಪ ಎತ್ತುವುದು ಹೋರಾಟದ ಆಶಯಕ್ಕೇ ವಿರುದ್ಧವಾಗಿದೆ.
ತಪ್ಪು ಮಾಡಿದಾಗ ಸರ್ಕಾರವನ್ನು ಪ್ರಶ್ನಿಸುವುದು ಎಷ್ಟು ಮುಖ್ಯವೋ, ಸರಿಯಾದ ಹಾದಿಯಲ್ಲಿ ವಿದ್ಯಾರ್ಥಿಗಳ ಪರ ನಿಲ್ಲುವ ನಾಯಕರನ್ನು ಹಾಗೂ ಅವರ ಪ್ರಜಾಸತ್ತಾತ್ಮಕ ನಿಲುವನ್ನು ಗುರುತಿಸುವುದೂ ಅಷ್ಟೇ ಅಗತ್ಯ.
ವಿದ್ಯಾರ್ಥಿ ಚಳವಳಿಗಳು ಮತ್ತು ನಾಗರಿಕ ಹೋರಾಟಗಳು ಪ್ರಜಾಪ್ರಭುತ್ವದ ಜೀವನಾಡಿ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಹೋರಾಟಗಳನ್ನು ಮತ್ತು ಆ ಹೋರಾಟಗಳಿಗೆ ದೊರೆಯುವ ರಾಜಕೀಯ ಬೆಂಬಲವನ್ನು ನೋಡುವ ದೃಷ್ಟಿಕೋನದಲ್ಲೇ ರಾಜಕೀಯ ಧ್ರುವೀಕರಣ ಕಾಣಿಸುತ್ತಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಇದು ಕೇವಲ ಶೈಕ್ಷಣಿಕ ಸಮಸ್ಯೆಯಲ್ಲ, ವ್ಯವಸ್ಥೆಯ ಕುಸಿತ
ಪೇಪರ್ ಲೀಕ್ ಎಂಬುದು ಕೇವಲ ಯಾವುದೋ ಒಂದು ಪರೀಕ್ಷೆಯ ಲೋಪವಲ್ಲ, ಅದು ಇಡೀ ದೇಶದ ಯುವಜನತೆಯ ಭವಿಷ್ಯದ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ಮತ್ತು ಆಡಳಿತಾತ್ಮಕ ದಾಳಿ.
ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮತ್ತು ಕೇಂದ್ರೀಕರಣಗೊಳಿಸಿದ ಪರಿಣಾಮವಾಗಿ, ಪರೀಕ್ಷಾ ಮಂಡಳಿಗಳು ಮತ್ತು ಖಾಸಗಿ ಏಜೆನ್ಸಿಗಳು ಯುವಕರ ಕನಸುಗಳ ಮೇಲೆ ವ್ಯಾಪಾರ ಮಾಡುತ್ತಿವೆ.
ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತಿದಾಗ, ಅದು ಬರೀ ಸರ್ಕಾರದ ವಿರುದ್ಧದ ರಾಜಕೀಯ ಹೇಳಿಕೆಯಾಗಿರಲಿಲ್ಲ; ಬದಲಿಗೆ ಸಾಂಸ್ಥಿಕ ವೈಫಲ್ಯವನ್ನು ಬಟಬಯಲು ಮಾಡುವ ಪ್ರಯತ್ನವಾಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಗೀತಾಂಜಲಿ ಆಂಗ್ಮೋ ಅವರ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದಿದ್ದರೂ, ಅದನ್ನು ಬಳಸಿಕೊಳ್ಳಲಾಗುತ್ತಿರುವ ರೀತಿ ಕಳವಳಕಾರಿ. ನಾಗರಿಕ ಹೋರಾಟಗಳು ತಟಸ್ಥವಾಗಿರಬೇಕು ಎಂಬುದು ಸರಿ. ಆದರೆ ರಾಜಕೀಯ ನಾಯಕರು ಅದಕ್ಕೆ ಬೆಂಬಲ ನೀಡಿದ ತಕ್ಷಣ ಅದನ್ನು "ರಾಜಕೀಯ ದುರುದ್ದೇಶ" ಎಂದು ಬಣ್ಣಿಸುವುದು, ಭವಿಷ್ಯದಲ್ಲಿ ಯಾವುದೇ ರಾಜಕೀಯ ನಾಯಕ ಜನಪರ ಹೋರಾಟಕ್ಕೆ ಬರಬಾರದು ಎಂಬಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿಯುವುದು ಹಾಗೂ ಹೊಣೆಗಾರಿಕೆ ನಿಗದಿಪಡಿಸುವವರೆಗೆ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂಬ ನೈತಿಕ ಪಟ್ಟು ಪ್ರಜಾಸತ್ತಾತ್ಮಕ ಪ್ರತಿಭಟನೆಯ ಅತ್ಯುನ್ನತ ರೂಪ. ಸರ್ಕಾರ ತಪ್ಪು ಮಾಡಿದಾಗ ಮೌನ ವಹಿಸುವ ಸಮಾಜ, ಪ್ರತಿಪಕ್ಷಗಳು ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ಅವರ "ಉದ್ದೇಶ"ವನ್ನು ಪ್ರಶ್ನಿಸುವುದು ರಾಜಕೀಯ ಪ್ರಬುದ್ಧತೆಯ ಲಕ್ಷಣವಲ್ಲ. ಸರಿ ಇದ್ದಾಗ 'ಸರಿ' ಎಂದು ಒಪ್ಪಿಕೊಳ್ಳುವ ಉದಾರತೆ ಇಂದಿನ ಅತ್ಯಗತ್ಯ.
-ಶ್ರೀರಾಜ್ ವಕ್ವಾಡಿ
No comments:
Post a Comment